16 March 2020

ಜಲಪಾತ ಸಾಮ್ರಾಜ್ಞಿ, ವಲ್ಲರೀ ಸೇತುಬಂಧ......

ಮೇಘಾಲಯದ ಗಿರಿಕೊಳ್ಳಗಳಲ್ಲಿ - ೩ 

ಲಿಕಾಯ್ ಹಾರಿಕೊಂಡ ಕೊಳ್ಳ ಇನ್ನೂ ಭೋರಿಟ್ಟು ಅಳುತ್ತಿದೆ! ಝರಿಯ ಧಾರಾ ಮೊತ್ತದಲ್ಲಿ, ರೋದನದ ತೀವ್ರತೆಯಲ್ಲಿ ಏರಿಳಿತವಿರಬಹುದು. ಹಾಗೆಂದು ಭರಿಸಿ ಸಮಾಧಾನಿಸುವ ಸುವಿಸ್ತಾರ ಹಸಿರು ಕಣಿವೆಯ ಔದಾರ್ಯ, ಮನ ಮಿಡಿದು ಎಲ್ಲೆಲ್ಲಿಂದಲೂ ಕಾಣ ಬರುವವರ ಸಂದಣಿ ಎಂದೂ ಕಡಿಮೆಯಾದದ್ದಿಲ್ಲ. ಮೂರನೇ ದಿನದ ಚಾರಣದ ಪ್ರಥಮ ಕಲಾಪವಾಗಿ, ಸೊಹ್ರಾದಿಂದ ಎರಡು ಕಂತುಗಳಲ್ಲಿ ವ್ಯಾನೇರಿ ಬಂದಿದ್ದ ನಾವೂ ಪ್ರಪಾತದ ಅಂಚಿನ ಕಟ್ಟೆಗಳಿಗೆ ಜೋತು ಬಿದ್ದು ಲಿಕಾಯ್ ವ್ಯಥೆಗೂ ಪ್ರಾಕೃತಿಕ ಸೌಂದರ್ಯಕ್ಕೂ ಹನಿಗಣ್ಣರಾದೆವು. 


ಮೇಘಾಲಯದ ಮುಖ್ಯ ಸಮುದಾಯವಾದ ಖಾಸೀ - ಸ್ತ್ರೀಪ್ರಧಾನ ಕುಟುಂಬ ವ್ಯವಸ್ಥೆಯದು. ಐತಿಹಾಸಿಕ ಕಾಲದಲ್ಲೆಲ್ಲೋ ಒಬ್ಬ ಯುವ ವಿಧವೆ (- ಲಿಕಾಯ್. ಖಾಸೀಯಲ್ಲಿ ಸ್ತ್ರೀಸೂಚಕ ಪೂರ್ವಪದ - ಕಾ ಹಾಗಾಗಿ ಕಾಲಿಕಾಯ್), ಪುಟ್ಟ ಮಗುವಿನ ತಾಯಿ, ಪುನರ್ವಿವಾಹ ಮಾಡಿಕೊಂಡಳು. ಆದರೆ ದಿನ ಹೋದಂತೆ ಕಾಲಿಕಾಯಿಯ ಮಗುವಿನ ಪ್ರೀತಿ ಮತ್ತು ದುಡಿಮೆಯ ಛಾತಿ ಗಂಡನಿಗೆ ಸಹ್ಯವಾಗಲಿಲ್ಲ. ಆತ ಈಕೆಯ ಅರಿವಿಗೆ ಬಾರದಂತೆ, ಅವಳದೇ ಮಗುವನ್ನು ಕೊಚ್ಚಿ, ಹಂದಿ ಮಾಂಸದೊಡನೆ
ಅಟ್ಟು, ಉಣಬಡಿಸಿದ. ಅರಿವಿಲ್ಲದೇ ತಿಂದು ತೇಗಿದ ಕಾಲಿಕಾಯಿಗೆ ಸತ್ಯ ತಿಳಿದಾಗ, ಶೋಕ ತೀವ್ರತೆಯಲ್ಲಿ ಈ ಕೊಳ್ಳಕ್ಕೆ (ನೋಹ್=) ಹಾರಿಕೊಂಡಳು. ಹಾಗಾಗಿ ಈ ಜಲಪಾತ - ‘ನೋಹ್ ಕಾಲಿಕಾಯ್’ಎಂದೇ ಪ್ರಸಿದ್ಧವಾಗಿದೆ. ಭಾರತದೊಳಗೆ ಔನ್ನತ್ಯಾಧಾರಿತ ಜಲಪಾತಗಳ ಪಟ್ಟಿ ತೆರೆದರೆ, ಮೊದಲೆರಡು ಸ್ಥಾನಗಳಲ್ಲಿ ಮಹಾರಾಷ್ಟ್ರ, ಒಡಿಸ್ಸಾಗಳು ಬರುತ್ತವೆ. ಆದರೆ ಆ ಅಬ್ಬಿಗಳು ಒಂದೆರಡು ಮಜಲುಗಳಲ್ಲಷ್ಟೇ ತಳ ಗುದ್ದುವ ಸಾಮರ್ಥ್ಯದವು. ಏಕಧಾರೆಯಲ್ಲಿ ತಳ ಮುಟ್ಟುವವುಗಳಲ್ಲಿ ೧೧೧೫ ಅಡಿ
ಎತ್ತರದ ನೋಹ್ ಕಾಲಿಕಾಯ್ ಭಾರತದಲ್ಲೇ ಅಗ್ರಣಿ. (ನಮ್ಮ ಜೋಗ್ ೮೩೦ ಅಡಿಗಳಿಂದ ದ್ವಿತೀಯ ಸ್ಥಾನದಲ್ಲಿ ನಿಂತಿದೆ.) 

ಮೇಘಾಲಯದಲ್ಲಿ "ಒಂದು ದೇಶ ಒಂದು ಭಾಷೆ" (ಅದು ಹಿಂದಿ!) ಇಂದಿಗೂ ಗೊತ್ತೇ ಇಲ್ಲ! ಸ್ವಂತ ಭಾಷೆ ಬಿಟ್ಟರೆ, ಕ್ರಿಶ್ಚಿಯನ್ ಮತಾಂತರದೊಡನೆ ಸಿಕ್ಕ ಉಡುಗೊರೆಯಾಗಿ ಹರಕು ಮುರುಕು ಇಂಗ್ಲಿಷ್ (ನಮ್ಮಲ್ಲಿನ ಬಟ್ಲರ್ ಇಂಗ್ಲಿಷಿನಂತೆ), ಪ್ರವಾಸೀ ಒತ್ತಡದಲ್ಲಿ ಹೆಕ್ಕಿಕೊಂಡ ಇನ್ನೂ ಕಡಿಮೆ ಹಿಂದಿಯಲ್ಲಿ ಸುಧಾರಿಸುತ್ತಾರೆ. ಸೊಹ್ರಾ ಶಿಬಿರದಲ್ಲಿ ಮಾರ್ಗದರ್ಶಿಗಳು, ಮರುದಿನದ ಕಲಾಪದ ಕುರಿತು ಒಂದು
ವಿವರಣಾತ್ಮಕ ನಕ್ಷೆ ಬಿಡಿಸಿ, ಎರಡು ಆಯ್ಕೆಗಳನ್ನು (ಒಂದು ದೀರ್ಘ ಮತ್ತು ಕಠಿಣ, ಇನ್ನೊಂದು ಸ್ವಲ್ಪ ಕಡಿಮೆಯದ್ದು) ವಿವರಿಸುವವರಿದ್ದರು. ಆದರೆ ನಮ್ಮ ಗ್ರಹಚಾರಕ್ಕೆ, ಶಿಬಿರದ ಮೊದಲ ಸಭೆಯಲ್ಲಿ ಸಂಘಟಕರು ಕೊಟ್ಟ ನಾಮಕಾವಸ್ಥೆಯ ನಾಯಕಿ - ‘ಹರಕುಬಾಯಿ ಮರಾಠೀ ಮಹಿಳೆ’, ಸಂದರ್ಭವನ್ನು ಅರ್ಥ ಮಾಡಿಕೊಳ್ಳದೆ, ಇತರರಿಗೆ ವಿವರಿಸುವ ಉತ್ಸಾಹ ತೋರಿದಳು. ಮಾರ್ಗದರ್ಶಿಗಳು ಭಾಷಾ ಕೀಳರಿಮೆಯಲ್ಲಿ ಹಿಂಜರಿದರು. ಉಳಿದದ್ದು ಗೊಂದಲ ಮಾತ್ರ. ಬೆಳಿಗ್ಗೆ ಆಯ್ಕೆಗಳ ಕುರಿತು ತಲೆ ಕೆಡಿಸಿಕೊಳ್ಳದೆ
ಎಲ್ಲರೂ ಎರಡು ಕಂತುಗಳಲ್ಲಿ ವ್ಯಾನ್ ಏರಿ ಬಂದದ್ದು ನೋಹ ಕಾಲಿಕಾಯ್ ವೀಕ್ಷಣಾ ಕಟ್ಟೆಗೆ. 

ವೀಕ್ಷಣಾ ಕಟ್ಟೆಯ ಬಳಿ ಪ್ರವಾಸಿಗಳ ಚಿಲ್ಲರೆ ಸೌಲಭ್ಯಗಳಿಗಾಗಿ ಸ್ವಲ್ಪ ಕಟ್ಟಡಗಳು ರೂಪುಗೊಂಡಿವೆ. ನೋಹ್ ಕಾಲಿಕಾಯ್ ಜಲಧಾರೆಯ ತಳ ಅಂದರೆ ನಾನ್ಗ್ರಿಯಟ್ ಗ್ರಾಮ. ಅದು ಅಸಂಖ್ಯ ಕೊರಕಲು, ಬಂಡೆ, ಝರಿ ಜಲಪಾತಗಳ ವಲಯ. ಕಣಿವೆಯ ಜನ ತಮ್ಮ ಅಗತ್ಯಗಳನ್ನು ನೊಹ್ ಕಾಲಿಕಾಯಿಯ ನೇರ ತಳದವರೆಗೆ ವಿಸ್ತರಿಸಿಲ್ಲ. ಸ್ವಲ್ಪ ಮೊದಲು ಸಿಗುವ ಸಣ್ಣ ಒಂದು ಜಲಪಾತಕ್ಕೆ ಸವಕಲು ಜಾಡನ್ನು ಮಿತಿಗೊಳಿಸಿದ್ದಾರೆ.
ಅವರು ಬಿಸಿಲಿನ ದಿನಗಳಲ್ಲಿ ಅಲ್ಲಿ ಸಹಜವಾಗಿ ಕಂಡ ಮೋಹಕ ಕಾಮನಬಿಲ್ಲೇ ಇಂದು ಅಬ್ಬಿಗೆ ಹೆಸರೂ ಪ್ರವಾಸೀ ಆಕರ್ಷಣೆಯನ್ನೂ ಕೊಟ್ಟಿದೆ; ರೇನ್ಬೋ ಫಾಲ್ ಅರ್ಥಾತ್ ಸಪ್ತರಂಗೀ ಅಬ್ಬಿ! ಹಿಂದೆಲ್ಲ ಸಾಮಾನ್ಯರು, ನೋಹ ಕಾಲಿಕಾಯ್ ವೀಕ್ಷಣಾ ಕಟ್ಟೆಯಿಂದ ತುಸು ಕೆಳಗಿನ ಊರು - ತಿರ್ನಾಕ್ಕೆ ಶ್ರೇಣಿಯ ಎತ್ತರದಲ್ಲೇ
ಹೋಗಿ, ನಾನ್ಗ್ರಿಟ್ ಕಣಿವೆಗಿಳಿಯುತ್ತಿದ್ದರು. ಬಳಸು ಜಾಡಿನಲ್ಲಿ ನಾನ್ಗ್ರಿಟ್ ಕಣಿವೆಯ ಇತರ ವಿಶೇಷಗಳೊಡನೆ ಸಪ್ತರಂಗೀ ಅಬ್ಬಿಯವರೆಗೂ ನಡೆದು ನೋಡುತ್ತಿದ್ದರಂತೆ. 

ಈಚಿನ ದಿನಗಳಲ್ಲಿ ವೀಕ್ಷಣಾ ಕಟ್ಟೆಯಿಂದ ನೇರ ಸಪ್ತರಂಗೀ ಅಬ್ಬಿಯವರೆಗೆ ಇಳಿಯುವ ಕಚ್ಚಾ ಜಾಡನ್ನೂ ಹಳ್ಳಿಗರು ರೂಪಿಸಿದ್ದಾರೆ. ಇದರಲ್ಲಿ ಸುಮಾರು ಒಂದೂವರೆ ಸಾವಿರ ಅಡಿಗಳ ಔನ್ನತ್ಯವನ್ನು, (ನೇರ ಎತ್ತರ) ತೀವ್ರ ಇಳಿಜಾರಿನಲ್ಲಿ, ಸುಮಾರು ಮೂರು-ನಾಲ್ಕು ಗಂಟೆಗಳ ಅವಧಿಯಲ್ಲಿ ಪೂರೈಸಬೇಕಿತ್ತು. ತಂಡದಲ್ಲಿ ಅನೇಕರು, ಹಿಂದಿನ ದಿನದ
ಗೊಂದಲದಿಂದ ಬೇರೆ ಗತಿಯಿಲ್ಲ ಎನ್ನುವ ಭ್ರಮೆಯೊಡನೆ ಬಂದಂತಿತ್ತು. ಅವರು ಕ್ರೆಂಪುರಿ ಗುಹೆ ಮತ್ತು ಡೈಂತ್ಲೆನ್ ಅಬ್ಬಿಯ ಬುಡಕ್ಕಿಳಿದ ಅನುಭವದ ಬಲದಲ್ಲಿ ಪಾತಾಳದ ದಾರಿ ಹಿಡಿದರು. ಹೀಗೆ ಇಳಿಯುವಲ್ಲಿ ನಮ್ಮ, ಅಂದರೆ ಕರ್ನಾಟಕದ ಆರು ಮಂದಿಯಲ್ಲಿ ಒಂದು ಕೊರತೆಯಿತ್ತು - ಸಾವಿತ್ರಿ. ಗಣಪತಿ ಭಟ್ಟರೇನೋ ಯಲ್ಲಾಪುರದ ಕಣಿವೆ ಬೆಟ್ಟಗಳಲ್ಲಿ ಆಡಿನಂತೆ ಬಾಲ್ಯ ಕಳೆದವರು. ಕ್ರೆಂಪುರಿ ಗುಹೆ ಇಳಿಯುವಲ್ಲೇ ಅವರ ನಡೆ ಕಡಿವಾಣ ಕಚ್ಚದ ಕುದುರೆಯದಿತ್ತು! ಆದರೆ ಸಾವಿತ್ರಿ - ಸದ್ಯ ಡೆಂಗ್ಯು
ಮುಕ್ತರಾಗಿ ಚೇತರಿಸಿಕೊಂಡವರು. ದೈಹಿಕ ದೃಢತೆ (ಗಂಟು ನೋವು ಇನ್ನೂ ಇತ್ತು) ಪೂರ್ಣ ಬಂದಿರಲಿಲ್ಲ. ಸಾಲದ್ದಕ್ಕೆ ಮಾನಸಿಕವಾಗಿಯೂ ಅಳುಕು ಜಾಸ್ತಿ. ಸಹಜವಾಗಿ ಹಿಂದಿನ ರಾತ್ರಿಯೇ ವಿವರಣೆ ಅರ್ಥ ಮಾಡಿಕೊಂಡು, ಅಲ್ಪ ಸಂಖ್ಯಾತರ ಗುಂಪು ಸೇರಿಕೊಂಡಿದ್ದರು. ವೀಕ್ಷಣಾ ಕಟ್ಟೆಯಿಂದ ಪ್ರತ್ಯೇಕ ವಾಹನವೊಂದು ಅವರನ್ನೆಲ್ಲ ತಿರ್ನಾ ಮುಟ್ಟಿಸಿತ್ತು. ಅನಂತರ ತಿಳಿದು ಬಂದಂತೆ, ಸಾವಿತ್ರಿ ಆ ಬದಿಯಿಂದಲೇ ಇತರ ವಿಶೇಷಗಳೊಡನೆ ಸಪ್ತರಂಗೀ ಅಬ್ಬಿಯನ್ನೂ ಮುಗಿಸಿ, ನಮ್ಮೆಲ್ಲರಿಗೂ ಮುನ್ನ ವಾಪಾಸೂ ಆಗಿದ್ದರು! 

ಸವಕಲು ಜಾಡು ಬೆಟ್ಟದ ಏಣೊಂದನ್ನು ಗಟ್ಟಿಯಾಗಿ ನೆಚ್ಚಿತ್ತು. ಆದರೂ ಇಳುಕಲಿನ ಕಾಠಿಣ್ಯವೇನೂ ಕಡಿಮೆ ಇರಲಿಲ್ಲ. ಎಲ್ಲೋ ಕೆಳ ಹಂತದಲ್ಲಿ ಒಂದು ಕಾಂಕ್ರೀಟ್ ಕಾಲುಸಂಕವನ್ನುಳಿದು, ಉದ್ದಕ್ಕೂ ಯಾವುದೇ ಸುಸಜ್ಜಿತ ಮೆಟ್ಟಿಲು, ಕೈತಾಂಗುಗಳು ಇರಲಿಲ್ಲ. ಮೂಲವಾಸಿಗಳು, ವನೋತ್ಪತ್ತಿ ಸಂಗ್ರಹದ ತಮ್ಮ ಅನುಕೂಲಕ್ಕೆ ಮಾಡಿಕೊಂಡ ಜಾನಪದ ಜಾಣ್ಮೆಗಳಷ್ಟೇ
ನಮ್ಮ ಅನುಕೂಲಕ್ಕೆ ಒದಗಿದವು. ಜಾಡಿನಲ್ಲಿ ಅಲುಗಾಡುವ ಕಾಡುಕಲ್ಲುಗಳನ್ನು ಕೀಲು ಕೊಟ್ಟು ಗಟ್ಟಿ ಮಾಡಿದ್ದರು. ಜಾರುಮಣ್ಣಿದ್ದಲ್ಲಿ ಅಕ್ಕಪಕ್ಕಗಳಲ್ಲಿ ಗೂಟ ಬಡಿದು ಅಡ್ಡಕ್ಕೆ ಕಂಬಗಳನ್ನು ಹುಗಿದಿದ್ದರು. ಕೊರಕಲು, ತೊರೆ ದಂಡೆಗಳಿಗೆ ಕಾಡುಕಲ್ಲು ಜಡಿದು ಜಾಡು ಸ್ಪಷ್ಟಮಾಡಿದ್ದರು, ಕವಿದು ಬರುವ ಪೊದರು ಬಳ್ಳಿಗಳನ್ನು ಸವರಿ ಗಟ್ಟಿ ಗಿಡ, ಕೊಂಬೆಗಳನ್ನಷ್ಟೇ ಉಳಿಸಿ ಆಧಾರಕ್ಕೊದಗುವಂತೆ ನೋಡಿಕೊಂಡಿದ್ದರು...... 

ಲೆಕ್ಕಕ್ಕೆ ನಮ್ಮದು ಸುಮಾರು ಐವತ್ತು ಮಂದಿಯ ಒಂದೇ ತಂಡ. ಆದರೆ ನಿಜದಲ್ಲಿ ಐವತ್ತೂ ಭಿನ್ನ ದೈಹಿಕ ಗಾತ್ರ,
ಪಾರಿಸರಿಕ ಪ್ರೇರಣೆ ಮತ್ತು ಮನೋಭಾವಗಳ ವ್ಯಕ್ತಿಗಳು. ಅವರ ಚುರುಕು, ನಿಧಾನ, ಭಯ, ಭಂಡತನಾದಿಗಳು ಅಷ್ಟೇ ವೈವಿಧ್ಯಮಯವಾದ್ದರಿಂದ ಚಾರಣದ ಲಯ ಸಾಮಾನ್ಯ ಅಂದಾಜುಗಳಿಗೆ ನಿಲುಕುವುದು ಕಷ್ಟ. ಮೊದಮೊದಲು ಪೂರ್ವಪರಿಚಿತರ ಗುಂಪುಗಳು, ಸಮಾನಾಸಕ್ತರ ಸಣ್ಣ ಬಳಗಗಳು ವಿಧೇಯ ಸಾಲು ಹಿಡಿದಿದ್ದವು. ಧಾರಾಳ ಮಾತು, ಹಾಸ್ಯ ವಿನಿಮಯಗಳೆಲ್ಲ ಹೊತ್ತು ಹೋದಂತೆ, ಬಳಲಿಕೆಯೊಡನೆ ಹೊಳಪು ಕಳೆದುಕೊಳ್ಳುತ್ತವೆ. ಮತ್ತೆ ದಿನವಿಡೀ ಸರಣಿ ಕಲಾಪಗಳ ಜೋಡಣೆಯಲ್ಲಿ ಜನ
ಚದುರುವುದು, ಮರುಗುಂಪುಗಳು ರೂಪುಗೊಳ್ಳುವುದು ಇದ್ದದ್ದೇ. ಇದಕ್ಕೆ ಸಣ್ಣದಾಗಿ ನಮ್ಮ ಐದು ಮಂದಿಯನ್ನೇ ನೋಡಿ. ಮೊದಲೇ ಹೇಳಿದಂತೆ ಗಣಪತಿ ಭಟ್ ಸ್ವತಂತ್ರ. ಸ್ವಲ್ಪ ದೂರ ನಮ್ಮ ಹಿಂದೆ ಮುಂದೆ ಇದ್ದು, ಅನಂತರ ಸಿಕ್ಕಿದ್ದು ಅಬ್ಬಿಯ ಬುಡದಲ್ಲೇ. ನನ್ನ ನಿಲುವು ಆರಡಿಗೆ ಸಮೀಪ, ದೇವಕಿಯದು ಐದಡಿಯನ್ನು ಸ್ವಲ್ಪವೇ ಮೀರಿದ್ದು. ಇದರಿಂದ ನಮ್ಮೊಳಗಿನ ಹೆಜ್ಜೆಗಾರಿಕೆ ಅಜಗಜಾಂತರ. ಮತ್ತೆ ಮಾನಸಿಕ ಸ್ಥಿತಿಯಲ್ಲೂ ದೇವಕಿ ಅಳುಕಿನವಳು, ಗಂಡನೋ ‘ಖ್ಯಾತ ಪರ್ವತಾರೋಹಿ’ ಎಂಬ ಭಂಡ! ನಾನು ಅವಳ ಕಷ್ಟಕ್ಕೆ
ಒದಗುವಂತೆ ನಿಧಾನಕ್ಕೇ ಅನುಸರಿಸುತ್ತೇನೆ ಎಂದು ಕೊಂಡದ್ದು ಎಷ್ಟೋ ಬಾರಿ ನನಗೇ ಸಮಸ್ಯೆಯಾಗುತ್ತಿತ್ತು. ನಡಿಗೆಯ ಬೀಸನ್ನು ಅನಾವಶ್ಯಕ ತಡೆತಡೆದು ಮೀನಖಂಡಗಳು ನೋಯುವಾಗ, ಇಲ್ಲೆಂದಲ್ಲ, ಈ ಪ್ರವಾಸದಲ್ಲಿ ಹಲವು ಕಡೆ, ಹಿಂದಿಕ್ಕಿ ನಡೆದಿದ್ದೇನೆ. ಅಂದ ಮಾತ್ರಕ್ಕೆ ಆಕೆ ಒಂಟಿಯಾಗೇನೂ ಉಳಿಯುತ್ತಿರಲಿಲ್ಲ. ಮುಖ್ಯವಾಗಿ ರುಕ್ಮಿಣಿ, ಭಾರೀ ಕಾಳಜಿಯಿಂದ ಜತೆ ತಪ್ಪದಂತೆ ನೋಡಿಕೊಳ್ಳುತ್ತಿದ್ದಳು. ನನ್ನ ಯಾವ ‘ಹಮ್ಮು’ಗಳಿಲ್ಲದ ಅನಂತನೂ ಜತೆಗೊಡುತ್ತಿದ್ದ. ಅಲ್ಲದಿದ್ದರೂ
ಒಟ್ಟಾರೆ ಐವತ್ತರ ಲೆಕ್ಕದಲ್ಲಿ, ಸದಾ ದೇವಕಿಯ ಮುಂದಿದ್ದ ಮಂದಿಗಿಂತ ಹಿಂದುಳಿಯುತ್ತಿದ್ದವರೇ ಹೆಚ್ಚು! 

ಸುಮಾರು ಮೂರು ಗಂಟೆಗಳವಧಿಯಲ್ಲಿ ನಾವು ಕಣಿವೆಯಾಳ ಮುಟ್ಟಿದ್ದೆವು. ಮುನ್ಸೂಚನೆಯಂತೇ ಅಲ್ಲೊಂದು ಕವಲು ಜಾಡಿತ್ತು. ನಮ್ಮ ಮಾರ್ಗದರ್ಶಿಗಳು, ಮುಖ್ಯವಾಗಿ ತಂಡದ ಎರಡು ಕೊನೆಗಳನ್ನು (ಸದಸ್ಯರನ್ನೇ ಲಕ್ಷ್ಯವಾಗಿಟ್ಟುಕೊಂಡು) ಬಹಳ ಎಚ್ಚರಿಕೆಯಿಂದ ಕಾಯ್ದುಕೊಳ್ಳುತ್ತಿದ್ದರು. ಸಂಶಯಾಸ್ಪದ ಕವಲುಗಳಲ್ಲಿ ಮುಂದಿನವ ಸಣ್ಣದಾದ ಸ್ಪಷ್ಟ ಮಾರ್ಗಸೂಚಕ ಫಲಕವನ್ನು (YHAI - This way ->) ಎಲ್ಲರಿಗೆ ತೋರುವಂತ ಜಾಗದಲ್ಲಿ ಇಟ್ಟುಹೋಗುತ್ತಿದ್ದ. (ಕೊನೆಯಾತ ಅದನ್ನು ಮರೆಯದೆ ಸಂಗ್ರಹಿಸಿಕೊಂಡು, ಕಸ ನಿವಾರಿಸುತ್ತಿದ್ದ!) ಹಾಗೇ ಇಲ್ಲಿದ್ದ ಬೋರ್ಡು ಬಲಕ್ಕೆ ‘ರೇನ್ ಬೋ ಅಬ್ಬಿ’, ಎಡಕ್ಕೆ ‘ಹಿಂದಿರುಗುವ ದಾರಿ’ ಎಂದು ಸೂಚಿಸಿತು. ಇಷ್ಟರಲ್ಲಿ ಸ್ವಸಾಮರ್ಥ್ಯದ ಅರಿವು ಮೂಡಿದ್ದವರಿಗೆ, ಅದೊಂದು ನಿರ್ಣಾಯಕ ಹಂತ. ರೇನ್ ಬೋಕ್ಕೆ ಹೋಗುವುದೆಂದರೆ ಹೊಳೆ ಪಾತ್ರೆಯಲ್ಲಿ ಸುಮಾರು ಒಂದೂವರೆ ಗಂಟೆಯ ಎದುರು ನಡೆ ಮತ್ತಷ್ಟೇ
ಅವಧಿಯ ವಾಪಾಸು. ಈ ಮೂರು ಗಂಟೆಯ ಶ್ರಮಸಾಧನೆಯನ್ನು ಕೆಲವರು ಬಿಟ್ಟಿರಬಹುದು. ನಾವಂತೂ "ಬಂದದ್ದೆಲ್ಲ ಬರಲೀ
ಸಪ್ತರಂಗಿ ಇರಲೀ" ಎಂದು ಘೋಷಣೆ ಹಾಕಿ, ಬಲದ ಜಾಡು ಅನುಸರಿಸಿದೆವು. 

ಸರಳವಾಗಿ ಹೊಳೆ ಹರಿವಿನ ಎದುರು ನಡಿಗೆ ಎಂದೇನೋ ಹೇಳಬಹುದು. ಆದರೆ ನಿಜದಲ್ಲಿ ಯಾವುದೇ ಬೆಟ್ಟ, ಕೊರಕಲುಗಳಲ್ಲಿ ಹರಿವ ಹೊಳೆ ಪಾತ್ರೆಯಲ್ಲಿ, ಹಾಗೆ ಸಾರ್ವಕಾಲಿಕವಾಗಿ ಹೋಗುವುದು ಅಸಾಧ್ಯವೇ ಸರಿ.
ಸಹಜವಾಗಿ ಇಲ್ಲಿ ಹಳ್ಳಿಗರು, ಹೊಳೆಯಿಂದ ತುಸು ಅಂತರ ಕಾಯ್ದುಕೊಳ್ಳುತ್ತ ಎಡ ದಂಡೆಯ ಬೆಟ್ಟದ ಮೈಯಲ್ಲೇ ಗಟ್ಟಿ ಜಾಡು ರೂಢಿಸಿಕೊಂಡಿದ್ದರು. ಬೆಳಗ್ಗಿನಿಂದ ಸುಮಾರು ಮೂರು ಗಂಟೆಯ ಉದ್ದಕ್ಕೆ ನಾವು ಕೇವಲ ಇಳಿದಾರಿ ನೋಡಿದ್ದೆವು. ಆದರೀಗ ಬೆಟ್ಟದ ಪ್ರತಿ ಏಣೂ ಹೊಳೆ ಪಾತ್ರೆಯನ್ನು ಮುಟ್ಟುವುದರಿಂದ ಅನಿವಾರ್ಯವಾಗಿ ತೀವ್ರ ಏರಿಳುಕಲಿನ ಸರಣಿಯೇ ಕಾಡಿತು. ಇತ್ತ ತಿರ್ನಾ ಬದಿಯಿಂದಲೂ (ಹೋಲಿಕೆಯಲ್ಲಿ ಸುಲಭ ಜಾಡು!) ಕಣಿವೆಗೆ ಇಳಿದ ಪ್ರವಾಸಿಗಳು ಹೀಗೇ ರೇನ್ಬೋ ನೋಡಲು ಬರುವುದರಿಂದ, ಸರಕಾರ ಇಲ್ಲಿ ಕಾಂಕ್ರೀಟ್ ಮೆಟ್ಟಿಲು, ದೃಢ ಕೈತಾಂಗು, ಕಾಲು ಸೇತುವೆಗಳ ಕಾಮಗಾರಿಗೆ ಇಳಿದಂತಿದೆ. ಏನಿದ್ದರೂ ಬಿಟ್ಟರೂ ನಮ್ಮ ಕಾಲು, ನಮ್ಮ ದಮ್ಮು ಎಂದುಕೊಂಡು ಜಲಪಾತ ಮುಟ್ಟುವಾಗ ಮಧ್ಯಾಹ್ನವೇ ಆಗಿತ್ತು. 

ಈ ಜಾಡು ತೊಡಗುವಲ್ಲೊಂದು, ಆ ಕೊನೆಯಲ್ಲೊಂದು ಸಣ್ಣಪುಟ್ಟ ತಿನಿಸು
ತೀರ್ಥದ ಮಾರಾಟ ಜೋಪಡಿಗಳೂ ಇವೆ. ಅದರಲ್ಲಿ ಮೊದಲು ಸಿಕ್ಕ ಗೂಡನ್ನು ಓರ್ವ ಹುಡುಗ ಏಕಾಂಗಿಯಾಗಿ ನಡೆಸಿದ್ದ. ಆತ ನನ್ನ ಚಾ ಬೇಡಿಕೆ ಈಡೇರಿಕೆಗೆಂದು ಅಡುಗೆ ಕಟ್ಟೆಗೆ
ಹೋದಾಗ, ಅದುವರೆಗೆ ಆತ ಓದುತ್ತಿದ್ದ ಪುಸ್ತಕವನ್ನು ಕೈಗೆತ್ತಿಕೊಂಡೆ - ಇಂಗ್ಲಿಷ್ ಮಾಧ್ಯಮದ ಹನ್ನೆರಡನೇ ತರಗತಿಯ ಇತಿಹಾಸ ಪಾಠಗಳು! ಹುಡುಗ ಶಾಲಾ ಬಿಡುವಿನಲ್ಲಿ ಸ್ವೋದ್ಯೋಗಿಯಾಗಿದ್ದ! 

ದಾರಿಯ ಅನುಭವಕ್ಕೆ ಮತ್ತು ಪಶ್ಚಾತ್ತಾಪದಲ್ಲಿ "ಅದೊಂದು ಅಬ್ಬಿ ಬಾಕಿಯಾಯ್ತು" ಎಂದು ಬೇಯದಂತೆ ರೇನ್ ಬೋ ನೋಡಬಹುದು. ಇಲ್ಲವಾದಲ್ಲಿ ಮೂವತ್ತು - ನಲ್ವತ್ತಡಿ ಎತ್ತರದ ಈ ಅಬ್ಬಿಗೆ ಹಿಂದಿನ ದಿನದ ಹೊಳೆಯ ಯಾವ ಚಂದವೂ ಇಲ್ಲ. ನೀರು ಕಡಿಮೆಯಾದ ಈ ದಿನಗಳಲ್ಲಿ
ಜಲಧಾರೆ, ತಳದಲ್ಲಿ ಸ್ಥಿತವಾದ ದೊಡ್ಡ ಬಂಡೆಗೂ ತುಸು ಹಿಂದೆಯೇ ಬೀಳುತ್ತಿತ್ತು. ಬಹುಶಃ ಅದು ನೇರ ಬಂಡೆಗೇ ಬಡಿಯುವ ದಿನಗಳಲ್ಲಿ, ಸೀರ್ಪನಿಗಳ ಹಾರಾಟ ಹೆಚ್ಚಿದ್ದು, ಬಿಸಿಲು ಬೀಳುವಾಗ ಕಾಮನ ಬಿಲ್ಲುಗಳ ಸುಗ್ಗಿಯಾಗುವುದಿರಬಹುದು. ನಾವು ಆ ಕಲ್ಪನೆಯ ಚಂದವನ್ನೂ ಮನದುಂಬಿಕೊಂಡು, ಹೊಟ್ಟೆಗೆ ಬುತ್ತಿಯೂಟವನ್ನು ತುಂಬಿಕೊಂಡು, ಚುರುಕಾಗಿ ವಾಪಾಸು ಹೊರಟೆವು. ಹೋಗುವಾಗ ಇಳಿದವನ್ನೆಲ್ಲ ಈಗ ಹತ್ತುವ ಸಂಕಟ. ಹಾಗೇ ಹತ್ತಿದ ಕಾಠಿಣ್ಯಕ್ಕೆಲ್ಲ ಇಳುಕಲಿನ
ಸಮಾಧಾನ ಸಿಕ್ಕಿದ್ದರಿಂದ ಮತ್ತೆ ಸುಮಾರು ಒಂದೂವರೆ ಗಂಟೆಯಲ್ಲಿ ಕೈಕಂಬಕ್ಕೆ ಮರಳಿದ್ದೆವು. ಮುಂದೆ ಐದೇ ಮಿನಿಟಿನಲ್ಲಿ ನಮ್ಮ ಮೊದಲ ವಿಶೇಷ - ಜೀವಂತ ಬೇರ ಸೇತುವಿನ (ಲಿವಿಂಗ್ ರೂಟ್ ಬ್ರಿಜ್) ದರ್ಶನವಾಯ್ತು. 

ಅತ್ಯಾಧುನಿಕವಾದ ಮಂಗಗಳೂರು ನರಕದಲ್ಲಿ ("ಜನನೀ ಜನ್ಮಭೂಮಿಶ್ಚ..." ಎನ್ನುವ ಉಗ್ರಗಾಮಿಗಳಿದ್ದರೆ, ಹೀಗೆ ತಿದ್ದಿಕೊಳ್ಳಿ - ಮಂಗಳೂರು ನಗರ) ಕುಳಿತು, ಹತ್ತು ವರ್ಷವಾದರೂ ಸಂಪೂರ್ಣವಾಗದ ಪಂಪ್ವೆಲ್ ಮೇಲ್ಸೇತು, ಮೊಳಿಕೆಯೇ ಒಡೆಯದ ನಂತೂರು ‘ಪರಿಹಾರ’ಗಳ ಬಗ್ಗೆ
ರಾಷ್ಟ್ರದ ಪ್ರಧಾನಿಯನ್ನೇ ಆವಾಹಿಸುವ ಮಟ್ಟದ ಚಿಂತನೆ ನಡೆಸಿದ್ದಿತ್ತು. ಆಗೆಲ್ಲ ಅಲ್ಲೊಮ್ಮೆ ಇಲ್ಲೊಮ್ಮೆ ಬೇರ ಸೇತುವಿನ ಕತೆ, ಜತೆಗೊಂದು ದೊಡ್ಡ ಗೋಜಲಿನ ಚಿತ್ರ ಪತ್ರಿಕೆಗಳಲ್ಲಿ ಕಾಣುವುದೂ ಇತ್ತು. ಪ್ರವಾಸಿಗಳನ್ನು ಸೆಳೆಯಲು ಏನೋ ಆಟ (ಆವುಟ, ಗಿಮ್ಮಿಕ್ಕು) ಎಂದೇ ಎಣಿಸುತ್ತಿದ್ದೆ. ಹಾಗೇ ಮೊದಲು ಸಿಕ್ಕ ‘ಬೇರ ಸೇತು’ವನ್ನಷ್ಟೇ ಕಂಡಿದ್ದರೂ ಅಭಿಪ್ರಾಯ ವಿಶೇಷ ಉತ್ತಮಗೊಳ್ಳುತ್ತಿರಲಿಲ್ಲವೇನೋ. ಯಾಕೆಂದರೆ ಇದಕ್ಕೆ ಅಲ್ಲಲ್ಲಿ ಕಬ್ಬಿಣದ ಸರಳು, ಸರಿಗೆಗಳ ಹೆಚ್ಚುವರಿ ರಕ್ಷಾಬಂಧವನ್ನು ಕೊಟ್ಟಿದ್ದರು. ಸಾಲದ್ದಕ್ಕೆ, ಅಲ್ಲಿದ್ದ
ಹೊಳೆಯ ಮಹಾಪಾತ್ರೆಗಿದು ತುಂಬ ಸಣ್ಣವೇ ಆಗಿತ್ತು. ಇದು ಬಿಟ್ಟಲ್ಲಿಂದ ಹೊಳೆಯ ಆಚೆ ದಂಡೆ ಮುಟ್ಟಿಸಲು ಪ್ರತ್ಯೇಕ ಉಕ್ಕಿನ ತೂಗು ಸೇತುವೆಯೂ ಇತ್ತು. ಆದರೆ ಮುಂದುವರಿದಂತೆ (ಮೇಘಾಲಯದ ನಕ್ಷೆ ನೋಡಿದರೆ ಮತ್ತಷ್ಟು) ಇನ್ನಷ್ಟು ಬೇರಸೇತುಗಳು, ಒಂದೇ ತೊರೆಗೆ ಎರಡು ಸ್ತರಗಳಲ್ಲಿ ಬೇರ ಸೇತು ಎಲ್ಲ ಕಂಡಾಗ, ತಿಳಿದಾಗ ಪರಮಾಶ್ಚರ್ಯವೇ ಆಗಿದೆ. ತಂತ್ರಜ್ಞಾನದ ಇಂದಿನ ಉನ್ನತಿಯಲ್ಲಿ, ಶಕ್ತಿವಂತರು ಮನಸ್ಸು ಮಾಡಿದ್ದಕ್ಕೆ, ನಮ್ಮದೇ ಬಿಸಿಲೆ ಘಾಟಿನ ಮೂರು ಮಹಾ ಪ್ರವಾಹಪೀಡಿತ ನೆಲವನ್ನು
ಒಂದೆರಡು ತಿಂಗಳಲ್ಲೇ ದೃಢವಾಗಿ ಮರುಸ್ಥಾಪಿಸಿದ್ದು ಕಂಡಿದ್ದೇನೆ. ಅದಕ್ಕೆ ವ್ಯತಿರಿಕ್ತವಾಗಿ ಮೊದಲೇ ಹೇಳಿದ ಮಂಗಳೂರ ಹೆದ್ದಾರಿ ಕತೆಯೂ ಇದೆ. ಅಂಥ ಯಾವ ಅವಸರಕ್ಕೂ ಒಗ್ಗದ, ನಿಧಾನವೂ ಸಾಲದ ಸ್ಥಿತಿ ಮೇಘಾಲಯದ ಜೀವಂತ ಬೇರಸೇತುಗಳ ಕತೆ. ಹುಚ್ಚು ಹರಿವಿನ ಹೊಳೆಯ ದಂಡೆಯ ಬಂಡೆಗುಂಡುಗಳ ಒಟ್ಟಣೆಯ ಎಡೆಯಲ್ಲಿ ಬೇರಿಳಿಸಿ ಭದ್ರ ನೆಲೆ, ಪೋಷಣೆಗಳನ್ನು ನೆಚ್ಚಿದ ಮರವನ್ನು ಆಯ್ದುಕೊಳ್ಳಬೇಕು. ಅದಿಲ್ಲವಾದರೆ ನೆಟ್ಟು ಬೆಳೆಸಿಕೊಳ್ಳಬೇಕು. ಮತ್ತವುಗಳ ಕೆಲವು ಬೇರುಗಳನ್ನಷ್ಟೇ
ಜೀವ ಕಳೆಯದಂತೆ ಆಸರೆ ಕೊಟ್ಟು, ಇನ್ನೊಂದು ದಂಡೆ ಮುಟ್ಟುವುದನ್ನು ಕಾಯಬೇಕು. ಅಲ್ಲಿ ಇಂಥದ್ದೇ ಇನ್ನೊಂದರ ಬೇರ ಜಾಲಕ್ಕೆ ಗಂಟು ಹಾಕಿ, ಆ ನೆಲದ ವಜ್ರಬಂಧ ಸಾಧಿಸಬೇಕು. ಇದಕ್ಕೆ ಹಳ್ಳಿಗರು ಪಟ್ಟ ಶ್ರಮ, ತಾಳ್ಮೆ (ತಪಸ್ಸು ಎನ್ನಿ) ನನ್ನ ಅಂತಃಪಟಲದಲ್ಲಿ ಅನಾವರಣಗೊಂಡಾಗ, ಗಿಮ್ಮಿಕ್ಕು ಎಂದೆಣಿಸಿದ ನನ್ನ ಸಣ್ಣತನಕ್ಕೆ ನಾಚಿಕೆಯಾಯ್ತು. ವರ್ಷದ ಆರು ತಿಂಗಳು ಮಳೆ, ಹೆಜ್ಜೆಗೊಂದು ಕೊರಕಲು, ಅದರ ತುಂಬ ರಭಸದ ನೀರು ಎದುರಿಸುವವರ ಜೀವನದ ಭಾಗವಾಗಿ ರೂಪುಗೊಂಡಿವೆ ಈ
ಬೇರಸೇತುಗಳು. 

ಇಂದು ಜೀವಂತ ಬೇರಸೇತನ್ನು ಪೂರ್ಣ ಪರಿಭಾವಿಸಲೂ ಆಗದ ಮಂದಿ ಬಂದು, ಏನೇನೋ ಮಂಗಾಟ ನಡೆಸಿ ಹೋಗುವುದೂ ಇದೆ. ಹಾಗಾಗಿ ಎನ್ನುವಂತೆ, ಅಲ್ಲೆಲ್ಲ ಈಗ ಸೇತುವಿನ ಎರಡು ಮಗ್ಗುಲುಗಳಲ್ಲಿ ಎಚ್ಚರಿಕೆಯ ಬೋರ್ಡುಗಳನ್ನು ಹಾಕಿದ್ದಾರೆ - ಒಮ್ಮೆಗೆ ಐದಕ್ಕಿಂತ ಹೆಚ್ಚು ಜನ ಸೇತುವಿನ ಮೇಲೆ ಓಡಾಡಬೇಡಿ, ಬೇರ ಹಂದರವನ್ನು ಜೋಕಾಲಿಯಂತೆ ಜಗ್ಗಾಡಬೇಡಿ......ಇತ್ಯಾದಿ. ಒಂದೆಡೆ ಬರಹವನ್ನು ಓದಿಕೊಳ್ಳದ ನವರಾಕ್ಷಸರು (ಸಾಕ್ಷರರು),
ಫೋಟೋ ಸೆಶನ್ನಿನ ಭರದಲ್ಲಿ ಮಿತಿಮೀರಿ ಸೇತುವೆಯ ಮೇಲೆ ತುಂಬಿಕೊಳ್ಳುವಾಗ ಹಳ್ಳಿಗನೊಬ್ಬ ಬಿಗಿಲೂದಿ ಇಳಿಸಬೇಕಾಯ್ತು. 

ಇಂದು ನಾನ್ಗ್ರಿಯಟ್ ಕಣಿವೆಯೂ ಸೇರಿದಂತೆ ಎಲ್ಲೆಡೆ ಸರಕಾರದ ವತಿಯಿಂದ ಉಕ್ಕಿನ ತೂಗು ಸೇತುವೆಗಳು, ಕಾಂಕ್ರೀಟ್ ಸೇತುವೆಗಳೂ ಬರುತ್ತಿವೆ. ಬೇರ ಸೇತು, ಪ್ರಾಕೃತಿಕ ಸೌಂದರ್ಯ ಮತ್ತು ರೌದ್ರ, ದುರ್ಗಮ ನೆಲೆಯ ವಾಸಗಳೆಲ್ಲ ಪ್ರವಾಸೋದ್ದಿಮೆಯ ಅರ್ಥಾತ್ ಹಣಗಳಿಕೆಯ ‘ಮಾಲು’ ಎಂಬ ಜಾಗೃತಿ ಹಳ್ಳಿಗರಲ್ಲೂ ಮೂಡಿದೆ. ಒಂದೆಡೆ ಒಂದು ಬೇರಸೇತುವಿಗೆ ಐದಡಿ ಎತ್ತರದಲ್ಲಿ ಇನ್ನೊಂದೇ ಬೇರಸೇತುವಿನ (ಡಬ್ಬಲ್ ಡೆಕ್ಕರ್ ರೂಟ್ ಬ್ರಿಜ್ಜೆಂದೇ ಪ್ರಸಿದ್ಧ) ರಚನೆ ಇದೆ. ಅದರ ಕೆಳಗಿನ ತೊರೆಯ ಪಾತ್ರೆ, ಪರಿಸರವಂತೂ ವಿಹಾರಿಗಳ ಅನುಕೂಲಕ್ಕೆನ್ನುವಂತೆ ವನ್ಯ ರೂಕ್ಷತೆಯನ್ನೇ ಕಳೆದುಕೊಂಡಿದೆ! ಅಲ್ಲೇ ಆಚೆ ಪ್ರತಿ ಮನೆಯೂ ಎಂಬಂತೆ ಹೋಂಸ್ಟೇ ಬೋರ್ಡುಗಳು ಕಣ್ತುಂಬುತ್ತವೆ. ಕೆಲವಂತೂ (ಕಾನೂನಿನ ಇಕ್ಕುಳ
ತಪ್ಪಿಸಲೋ ಎನ್ನುವಂತೆ) ‘ನಾವು ಅಧಿಕೃತ ಪಟ್ಟಿಯಲ್ಲಿಲ್ಲ’ ಎಂದು ಬೋರ್ಡಿನಲ್ಲೇ ಷರಾ ಹಾಕಿಬಿಟ್ಟಿದ್ದಾರೆ. ಅಲ್ಪ ಕಾಲದ ಈ ವೇಗದ ಬದಲಾವಣೆಗಳು ಅಲ್ಲಿನ ಸಾಮಾಜಿಕ ಬದುಕನ್ನು ಎಷ್ಟು ಕ್ರೂರವಾಗಿ ಪ್ರಭಾವಿಸುತ್ತಿರಬಹುದು ಎಂದು ನನಗಂತು ತೀವ್ರ ವಿಷಾದವೇ ಆಯ್ತು. ಅವರ ಹಳೆಗಾಲದ ಕಷ್ಟ, ಭವಿಷ್ಯದ ಭಯಗಳನ್ನು ಎಲ್ಲ ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಲು ನಾವು ಶಕ್ತರಲ್ಲ. ಸವಲತ್ತುಗಳ ಲೆಕ್ಕದಲ್ಲಿ ನಮ್ಮ ಮುಂದುವರಿದ(?) ಸ್ಥಿತಿ, ಇಂಥಲ್ಲೆಲ್ಲ ನನ್ನಲ್ಲಿ ಅಪರಾಧೀಪ್ರಜ್ಞೆಯನ್ನೇ ಉಂಟು ಮಾಡುತ್ತದೆ. ಹಾಗಾಗಿ
ಯಾರಲ್ಲೂ ವಿಶೇಷ ವಿಚಾರಣೆ, ಸಂವಾದ ನಡೆಸದೇ ಸಾಧ್ಯವಾದಷ್ಟನ್ನೇ ನೋಡುತ್ತ, ಆದಷ್ಟು ಚಿತ್ರಗಳನ್ನು ತೆಗೆಯುತ್ತ ದಾರಿ ಸವೆಸಿದೆವು. 

ಮೊದಲ ಬೇರಸೇತುವಿನಿಂದ ಮುಂದೆ ನಾವು ಬಹುತೇಕ ಸಮತಟ್ಟಾದ ಜಾಡಿನಲ್ಲೇ ನಡೆದಿದ್ದೆವು. ಕಾಡು, ಅಡಿಕೆ, ಒಳ್ಳೇಮೆಣಸು, ಬಾಳೆ, ಹಲಸು ಮುಂತಾದ ಕೃಷಿಭೂಮಿಗಳನ್ನು ಹಾಯುತ್ತ ಆರಾಮವಾಗಿಯೇ ನಡೆದೆವು. ಪುಟ್ಟ ಮೈದಾನದಲ್ಲಿ ಕಾಲ್ಚೆಂಡಾಟದ ಹುಡುಗರು, ಊರ ಸ್ಮಶಾನ (ಗಮನಿಸಿ - ಮೇಘಾಲಯದಲ್ಲಿ ೭೫%
ಕ್ರಿಶ್ಚಿಯನ್ನರು), ಸಿಕ್ಕ ಒಂದೆರಡು ಪುಟ್ಟ
ಅಂಗಡಿಯಲ್ಲೂ ವಹಿವಾಟು ನಡೆಸುತ್ತಿದ್ದ ಮಹಿಳೆಯರು (ಮರೆಯಬೇಡಿ - ಅಲ್ಲಿನದು ಮಹಿಳಾ ಪ್ರಧಾನ ಕುಟುಂಬ ವ್ಯವಸ್ಥೆ), ನಾಲ್ಕು ಇಂಗ್ಲಿಷಾದರೂ ಅರ್ಥವಾದೀತು, ಹಿಂದಿ ಅಲ್ಲ (ಹಿಂದಿ ಹೇರಿಕೆ ದ.ಭಾರತದ ಸಮಸ್ಯೆಯಷ್ಟೇ ಅಲ್ಲ), ಒಂದು ಯುದ್ಧಸ್ಮರಣೆಯ ಭವನ, ಕಸ ಸುಡುವ ಸಣ್ಣ ಗೂಡೊಲೆಗಳು..... ಎಂದು ಇತ್ಯಾದಿ ಹೊಸ ಪಾಠ, ವಿರಳ ಉದಾಹರಣೆಗಳನ್ನು ಹೆಕ್ಕಿಕೊಳ್ಳುತ್ತ ನಡೆದೆವು. ಒಂದೆಡೆ ವಿಸ್ತಾರ ಹೊಳೆಯೊಂದರ ದೊಡ್ಡ ಉಕ್ಕಿನ ತೂಗು ಸೇತು ಕಡಿದು ಬಿದ್ದೇ ಕೆಲ ಕಾಲ ಕಳೆದಂತಿತ್ತು. ಭವ್ಯ ಭಾರತ
ಸಂಪ್ರದಾಯದಂತೆ ಅಲ್ಲೂ ಸರಕಾರೀ ಕೃಪೆ ಹೊಸತನ್ನು ಒದಗಿಸಲು ಪ್ರಾಥಮಿಕ ತಯಾರಿಯನ್ನೂ ಮಾಡಿಲ್ಲ. ಅಥವಾ ಹೊಸ ಉಕ್ಕಿನ ಸೇತುವೆಗಾಗಿ ಸಾರ್ವಜನಿಕ ಹೆಸರಿನಲ್ಲಿ ಬೀಜಾರೋಪಣ ಮಾಡಿ ‘ಗೊಬ್ಬರ’ತಿನ್ನುತ್ತಿದ್ದಾರೋ ಗೊತ್ತಿಲ್ಲ!! 

ದಿನದ ಕೊನೆಯ ಸಾಹಸವಾಗಿ, ನಾವೈವರು ಬಹಳವಾಗಿ ಕೇಳಿದ್ದ ಮೂರೂವರೆ ಸಾವಿರ ಮೆಟ್ಟಿಲ ಸರಣಿಯ ಬುಡ ಮುಟ್ಟುವಾಗ ಸಂಜೆಯಾಗಿತ್ತು. ಗಣಪತಿ ಭಟ್ ಎಕ್ಸ್ಪ್ರೆಸ್ಸಿಗೆ ನಮ್ಮ ಕಟ್ಟೆಪೂಜೆಗಳು ಸಹನೆಯಾಗಲಿಲ್ಲವೋ ಸಾವಿತ್ರಿಯವರನ್ನು ಕಾಣುವ ಆತುರ ಮೂಡಿತೋ ಗೊತ್ತಿಲ್ಲ! ಅಲ್ಲಿ ನಮ್ಮಿಂದ ಮುಂದೆ ಹೋದವರನ್ನು ನಾವು ಮತ್ತೆ ಕಂಡದ್ದು ಕತ್ತಲಾದ ಮೇಲೆ ಶಿಬಿರದಲ್ಲೇ, ಸಾವಿತ್ರಿಯವರ ಜತೆಯಲ್ಲೇ. ನಾವು ನಾಲ್ವರು ತುಸು ಹಿಂದುಮುಂದಾದರೂ ಕಣ್ಣಳತೆಯೊಳಗಿರುವಂತೇ ಮೆಟ್ಟಿಲುಗಳ ಏರೋಣವೆಂಬ ಕಾಠಿಣ್ಯಕ್ಕಿಂತಲೂ ಇಳಿಯೆಣಿಕೆಯೆಂಬ
ಸಂತೋಷಕ್ಕೆ ತೊಡಗಿದೆವು. 

ಮೆಟ್ಟಿಲು, ಕೈತಾಂಗುಗಳೇನೋ ಗಟ್ಟಿಯಾಗಿಯೇ ಇದ್ದವು. ಒಟ್ಟು ತಂಡದ ಸದಸ್ಯರು ನಮ್ಮಿಂದ ಮುಂದಿದ್ದಷ್ಟೇ ಹಿಂದೂ ಇದ್ದಿರಬೇಕು. ಸಾಲದೆಂಬಂತೆ ಕೆಲವು ಅನ್ಯ ಪ್ರವಾಸಿಗಳೂ ಬೆಟ್ಟದ ವಿವಿಧ ಎತ್ತರಗಳಲ್ಲಿ ಮನೆ, ಕೃಷಿ ಇದ್ದ ಮಂದಿಗಳೂ ಆಗೊಮ್ಮೆ ಈಗೊಮ್ಮೆ ಸಿಕ್ಕುವುದೂ ಇತ್ತು. ಕತ್ತಲಾವರಿಸಿದರೂ ಆತಂಕಗಳೇನೂ ಇಲ್ಲದ ಪರಿಸರ ಎಂಬ ಭರವಸೆಯೂ ಶಿಲ್ಲಾಂಗ್ ಬಿಡುವಾಗಲೇ ಸಂಘಟಕರಿಂದ ಸಿಕ್ಕಿತ್ತು. ಸಾಲದ್ದಕ್ಕೆ ನಿತ್ಯದ ಕಲಾಪಗಳನ್ನು ಕತ್ತಲೆಗೆ ಮುನ್ನ
(ಸಂಜೆ ನಾಲ್ಕೂವರೆ ಗಂಟೆ) ಮುಗಿಸಲೇಬೇಕು, ಶಿಬಿರತಾಣ ಸೇರಲೇಬೇಕು ಎಂಬ ನಿಯಮವನ್ನೂ ತಿರ್ನಾ ಮಟ್ಟಿಗೆ ರಾತ್ರಿ ಎಂಟು ಗಂಟೆಯವರೆಗೆ ವಿಸ್ತರಿಸಿಯೂ ಕೊಟ್ಟಿದ್ದರು. ಹಾಗಾಗಿ ನಾವು ನಿಶ್ಚಿಂತೆಯಿಂದ, ಉಸುರಿಗೊಂದು ಹೆಜ್ಜೆಯಂತೆ ಪೇರಿಸುತ್ತ ಏರಿದೆವು. ಮೊಣಕಾಲಿಗೆ ಕೈ, ಊರೆಗೋಲು, ಕೈತಾಂಗಿನ ಕೊಳವೆಗೆ ಜೋತುಬಿದ್ದೂ ಏರಾಟ ನಡೆದಿತ್ತು. ಮೆಟ್ಟಿಲ ಎಣಿಕೆಗೆ ತೊಡಗಿದ್ದೇನೋ ಸರಿ, ನಡುವೆ ಒಂದೆರಡು ಕಡೆ ಸಣ್ಣದಾಗಿ ಇಳಿ ಮೆಟ್ಟಿಲುಗಳು ಬಂದಾಗ ತೊಡಕು ಮೂಡಿತು! ಅವನ್ನು ಮೂರೂವರೆ ಸಾವಿರದಿಂದ ಕಳೆಯುವುದೇ ಕೂಡುವುದೇ? ತಕರಾರನ್ನು ದೊಡ್ಡ ಕಂಪೆನಿಗಳದ್ದೇ ಮಹಮಹಾ ಲೆಕ್ಕಜಿಡುಕುಗಳನ್ನು ಬಿಡಿಸುವ (ಚಾರ್ಟರ್ಡ್ ಅಕೌಂಟೆಂಟ್) ಅನಂತನ ತಲೆಗೆ ಹಾಕಿ ನಿರುಮ್ಮಳರಾದೆವು. ಅವನಾದರೋ ಕ್ರೆಡಿಟ್ಟು, ಡೆಬಿಟ್ಟುಗಳ ಗೋಠಾಳೆಯನ್ನು ಮೈಸೂರಿಗೇ ಬಿಟ್ಟು ಬಂದವ. ಒಮ್ಮೆ ಶಿಬಿರ ತಲಪಿದರೆ ಸಾಕು, ಪುಸ್ತಕ ಮುಚ್ಚಿ, ದಿಂಬಾಗಿಸಿಕೊಳ್ಳುವ
ಅಂದಾಜಿನಲ್ಲಿದ್ದ!

ಒಣ ಸೌದೆಯ ಕಟ್ಟು ಹೊತ್ತೊಬ್ಬ ಮುದುಕಿ ಹಗುರಕ್ಕೇ ಇಳಿಯುತ್ತ ಎದುರಾದಾಗ "ಹತ್ತುವುದರಲ್ಲಿ ಸೋತಾಳು" ಎಂದು ತೃಪ್ತಿಪಟ್ಟುಕೊಂಡೆವು. ಯಾವುದೋ ಹಾಡು ಗುನುಗುತ್ತಾ ಬೆನ್ನಲ್ಲೊಂದು ಕೂಸು ಹೊತ್ತ ತರುಣಿ, ಏರುನಡೆಯಲ್ಲೂ ತೇಲಿದಂತೆ ಹೋದಾಗ "ಎಷ್ಟಿದ್ದರೂ ಸ್ಥಳೀಯಳೇ" ಎಂದು ಸಂತೈಸಿಕೊಂಡೆವು. ಮದುವೆಯ ಪ್ರಥಮ ವಾರ್ಷಿಕೋತ್ಸವದ ವಿಹಾರಕ್ಕೆ ಬಂದಿದ್ದ ಉತ್ತರಪ್ರದೇಶದ ದಂಪತಿ ಮಾತ್ರ ನಾಲ್ಕು ಮೆಟ್ಟಿಲಿಗೊಮ್ಮೆ
"ಉಸ್ಸಪ್ಪಾ, ಅಯ್ಯಮ್ಮಾ..." ಎಂದು ಕುಳಿತು ಎದ್ದು ನಡೆಯುವಾಗ "ಮತ್ತೆ ಬೇಕಿತ್ತಾ" ಅಂದುಕೊಂಡೆವು. ಅವರೆದುರು ನಮ್ಮ ಸಾಧನೆಯ ಗರ್ವದಲ್ಲಿ ಎರಡು ಮೆಟ್ಟಿಲು ಹೆಚ್ಚೇ ಏರಿದ್ದೆವು. ಎಲ್ಲೋ ಒಂದು ಗೂಡಂಗಡಿಯ ಮುಳ್ಳುಸೌತೆ ದಾಸ್ತಾನು ಖಾಲೀ ಮಾಡಿದೆವು. ಮುಂದೊಂದು ಮನೆಯಂಗಳದ ಮಳಿಗೆಯ ಹೆಣ್ಣು, ನಾವು ಆಕೆಯಲ್ಲಿದ್ದ ಅನಾನಸಿನ ಕ್ರಯ ಮಾಡಿದಾಗ "ದಿನವಿಡೀ ವ್ಯಾಪಾರವೇ ಇಲ್ಲ" ಎಂದು ಸಣ್ಣದಾಗಿ ಗೊಣಗಿಕೊಂಡಳು. ನಾವು ಅಲ್ಲೂ ಹೊಟ್ಟೆಗಟ್ಟಿ ಮಾಡಿದೆವು. ಇಂಥ ಕುಂಟು ನೆಪಗಳ ಲೆಕ್ಕಕ್ಕೇನೂ ರಿಯಾಯ್ತಿ ಕೊಡದೆ ಸೂರ್ಯ ಎಂದೋ ಮುಳುಗಿದ್ದ. ಗಾಢಾಂಧಕಾರ ಮುಸುಕಿದರೂ ನಾವು ಟಾರ್ಚ್ ಬೆಳಗಿಕೊಳ್ಳುತ್ತ, ಆರೂವರೆಯ ಸುಮಾರಿಗೆ ಶಿಬಿರ ತಾಣ - ತಿರ್ನಾ ಎಂಬ ಪುಟ್ಟ ಪೇಟೆ
ಸೇರಿದೆವು. 

ತಿರ್ನಾ - ದೊಡ್ಡ ಇತಿಹಾಸದ ಮತ್ತು ಈ ವಲಯದ ಮುಖ್ಯ ಪೇಟೆ. ನಾನ್ಗ್ರಿಯಟ್ ವಲಯದ ಅಷ್ಟೂ ಮಂದಿ ಮತ್ತು ಅವರ ಹೊರಲೋಕದ ಯಾವುದೇ ವಹಿವಾಟಿಗೆ (ವೃತ್ತಿ, ವಿದ್ಯಾ, ಆರೋಗ್ಯ....) ಏಕೈಕ ಸಂಪರ್ಕ ತಾಣ. ನಿಜ ತಿರ್ನಾ ಇದಲ್ಲ, ಮೂಲ ತಿರ್ನಾ ಹಿಂದೆ ಇಲ್ಲೇ ಎಲ್ಲೋ ಇತ್ತು ಎನ್ನುತ್ತದೆ, ಇಂದಿನ ತಾಲೂಕು ಕಚೇರಿಯ ಶಿಲಾಶಾಸನ. ಮೂಲ ತಿರ್ನಾ, ೧೮೯೭ರ ಭಾರೀ ಭೂಕುಸಿತದಲ್ಲಿ ಪೂರ್ಣ ಅಳಿಸಿಯೇ ಹೋಗಿತ್ತು. ಆದರೆ ಅಂದು ಬದುಕುಳಿದವರು ‘ತಿರ್ನಾ’ ನಾಮಾವಶೇಷವಾಗದಂತೆ, ಇಂದಿನ ನೆಲದಲ್ಲಿ
ಊರನ್ನು ಮತ್ತೆ ಕಟ್ಟಿದರಂತೆ. ಈ ‘ದ್ವಿಜ’ತ್ವದ ನೂರನೇ ವರ್ಷದ ನೆನಪನ್ನು
ಅಮರವಾಗಿಸಿದ ಆ ಶಿಲಾಲೇಖ. (ಚಿತ್ರ ನೋಡಿ). ಇಂದು ಪರ್ವತಶ್ರೇಣಿಯ ಉನ್ನತಸ್ತರದ ಇಗರ್ಜಿಯಿಂದ ತೊಡಗಿ, ಶಾಲೆ, ವಸತಿ, ಮಳಿಗೆ ಎಂಬುವೆಲ್ಲ ಸಣ್ಣ ದಾರಿ, ಗಲ್ಲಿ, ಮೆಟ್ಟಿಲ ಓಣಿಗಳ ಜಾಲದಲ್ಲಿ ಕಿಕ್ಕಿರಿದು, ಊರು ಮೈದುಂಬಿದೆ. 

ಇಗರ್ಜಿ ಶಾಲೆಯೊಂದರ ಹಾಳು ಸುರಿವ ಎರಡು ಕೋಣೆಗಳನ್ನು ನಮ್ಮ ತಂಡದ ಗಂಡಸರಿಗೆ ಎಂದಿನ ಮಲಗುಚೀಲದೊಡನೆ ಮೀಸಲಿರಿಸಿದ್ದರು. ಆದರೆ ಕಕ್ಕೂಸಿನ ಪುರಾಣ? ಮತ್ತೆ ಗೋಳೇ! ಶಾಲಾ ವಠಾರದ ದೂರದ ಅಂಚಿನಲ್ಲಿ, ಹಾಳು ಬಿದ್ದ ಇನ್ಯಾವುದೋ ಕಟ್ಟಡದ ಒಂದನೇ
ಮಾಳಿಗೆಯಲ್ಲಿ ಬಾಗಿಲ ಚಿಲಕ, ನೀರು, ದೀಪವಿಲ್ಲದ ಎರಡು ಕೂಪ. ಬೇಕಿದ್ದರೆ, ಅಂಗಳದ ಕಾಂಕ್ರೀಟ್ ಟ್ಯಾಂಕಿನಲ್ಲಿ ದಾಸ್ತಾನಿದ್ದರೆ (ಹೌದು, ನಾನು ಬೆಳಗ್ಗೆ ಮುಖ ತೊಳೆಯಲು ಹೋಗುವಾಗ ಅದರಲ್ಲಿ ನೀರೇ ಇರಲಿಲ್ಲ. ಮತ್ತೆ ತಡವಾಗಿ ತುಂಬಿದರು), ಅಲ್ಲೇ ಬಿದ್ದುಕೊಂಡಿದ್ದ ಹಳೇ ಹರಕು ಪ್ಲ್ಯಾಸ್ಟಿಕ್ ಆಯಿಲ್ ಕ್ಯಾನಿನಲ್ಲಿ (ಪುಣ್ಯಕ್ಕೆ ಬಳಸಿ ಬಳಸಿ ಒಳಗೆ ಶುಚಿಯಾಗಿತ್ತು) ನೀರು ಹಿಡಿದುಕೊಂಡು ಹೋಗಬಹುದು ಎನ್ನುವುದು ವ್ಯವಸ್ಥೆಯೋ ಅವಸ್ಥೆಯೋ ನೀವೇ ಹೇಳಿ. ಅಂದು ನಮ್ಮ ಅದೃಷ್ಟಕ್ಕೆ ಟ್ಯಾಂಕಿನ ಪಕ್ಕದಲ್ಲೇ ದೂತನೊಬ್ಬ ಮೂರು ಕಲ್ಲು ಒಡ್ಡಿ, ಬೆಂಕಿ ಹಾಕಿ, ಮೇಲೊಂದು ದೊಡ್ಡ ಚರಿಗೆ ಹೇರಿ, ಒಂದೆರಡು ಗಂಟೆಯ ಮಟ್ಟಿಗೆ ಸಂಜೆ ಹಾಗೂ ಮರು ಬೆಳಗ್ಗೆ ಸ್ನಾನಕ್ಕೆ ಬಿಸಿನೀರು ಒದಗಿಸಿದ. ನಾನಂತೂ ಮೊದಲ ಮೆಟ್ಟಿನಲ್ಲೇ ಸಿಕ್ಕಿದ ಮುಕ್ಕಾಲು ಬಕೆಟ್ ನೀರನ್ನು ಕಕ್ಕೂಸಿನ ಕತ್ತಲ ಕೂಪಕ್ಕೇ ಒಯ್ದು, ಟಾರ್ಚನ್ನು ತಲೆ ತಾಗುವಂತಿದ್ದ ಪಕಾಸಿನ ಸಂದಿನಲ್ಲಿ ಸಿಕ್ಕಿಸಿ,
ಸ್ನಾನವೆಂಬ ದಿವ್ಯದಲ್ಲಿ, ಮೂರು ದಿನದ ಮೈ ಕೊಳೆ ತೊಳೆಯುತ್ತ, ಗಂಗೆಯಿಂದ ಕಾವೇರಿಯವರೆಗಿನ ತೀರ್ಥಗಳನ್ನು (ವರ್ತಮಾನದ ರೂಪದಲ್ಲಲ್ಲ) ಸ್ಮರಿಸಿಕೊಂಡೆ. ಮಹಿಳೆಯರಿಗೆ ಯಾವುದೋ ಹೋಂ ಸ್ಟೇಯಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು. ಅಲ್ಲಿ ಬಿಸಿನೀರ ಬಕೆಟ್ಟಿಗೆ ಐವತ್ತು ರೂಪಾಯಿ ಶುಲ್ಕ ಬೇರೆ ಇತ್ತಂತೆ. 

ಎಲ್ಲರೂ ಊಟ ತಿಂಡಿಗೆ ಪೇಟೆ ನಡುವಿನ ಧಾಬಾಕ್ಕೆ ಬರಬೇಕಿತ್ತು. ಲೆಕ್ಕಕ್ಕೆ ಆ ದಾರಿ ಊರಿನ ಏಕೈಕ ಮುಖ್ಯರಸ್ತೆ. ಆದರೂ ವಾಹನ ಸಂಚಾರ ತುಂಬಾ ವಿರಳ. ಹಾಗಾಗಿ ನಾವು
ಧಾಬಾದ ಪುಟ್ಟ ಕೋಣೆ ಮೀರಿ ಎದುರಿನ ಸಪುರ ಜಗುಲಿ, ದಾರಿಯ ಉದ್ದಗಲಕ್ಕೆ, ಇನ್ನೊಂದು ಬದಿಯ ಹಾಳುಬಿದ್ದ ಬಸ್ ಚಪ್ಪರದಲ್ಲೆಲ್ಲ ಹರಡಿಕೊಂಡು ಆಹಾರ ಸೇವಿಸಿದ್ದು, ಊರ ನಾಯಿ ಬೆಕ್ಕು ಪಾಲು ಕೇಳಿದ್ದು, ಒಮ್ಮೆಗೇ ಪ್ರವಾಸಿಗಳ ದಂಡು ಕಂಡು ಬೀದಿ ವ್ಯಾಪಾರಿಯೊಬ್ಬ ಧಾಬಾದ ಎದುರೇ ತನ್ನ ಅಂಗಡಿ ಬಿಚ್ಚಿದ್ದು....... ಒಂದು ಥರಾ ಮೋಜಾಗಿತ್ತು. (ಒಂದು ಶಾಣ್ಯಾ ಮುದ್ದಿನಸೊಕ್ಕು (ಬೆಕ್ಕು), ಮ್ಯೂಜಿಕಲ್ ಚೇರ್ ಹಿಡಿದಿದ್ದ ನಮ್ಮೊಬ್ಬ ಗೆಳೆಯ ತಿಂಡಿ ತಿಂದು ಮುಗಿಸುವುದರೊಳಗೆ, ಪಾದ ಸೇವೆಯಿಂದ ತೊಡಗಿ,
ಕಂಕುಳಡಿಯಲ್ಲಿ ನುಸಿದು ಆತನ
ಮಡಿಲು ಬಿಸಿ ಮಾಡಿ, ಕೊನೆಯಲ್ಲಿ ಕತ್ತಿಗೇ ಹತ್ತಿ ಸವಾರಿ ಮಾಡಿತ್ತು! - ನಂಬಿಕೆ ಬರದಿದ್ದರೆ ಚಿತ್ರ ನೋಡಿ!) 

ಮೊದಲ ದಿನ ನಮ್ಮನ್ನು ಓಡಾಡಿಸಿದ್ದ ಕುಣಿಪೆ ಬಸ್ಸಿನ ಸೋದರ ಬಸ್ಸೊಂದು ನಮ್ಮನ್ನು ಕೊನೆಯ ದಿನದ ಓಡಾಟಕ್ಕೆ ಒಯ್ಯಲು ಸಕಾಲಕ್ಕೆ ಬರಲಿಲ್ಲ. ಹಾಗಾಗಿ ನಾವು ಕೆಲವರು ಸ್ವಲ್ಪ ಹೆಚ್ಚೇ ಊರು ಸುತ್ತಿದೆವು. ಮುಖ್ಯ ದಾರಿಯಲ್ಲೆ ಕಿಮೀ ನಡೆದು, ಕೂಡುದಾರಿಗಳ ವಿವರ, ಕಣಿವೆಯ ಇನ್ನೊಂದೇ ಮುಖವನ್ನೆಲ್ಲ ನೋಡಿದ್ದಾಯ್ತು. ವಾಪಾಸು ಬಂದು ಗಲ್ಲಿಗಳೊಳಗಿನ ನಮ್ಮ ಓಡಾಟವನ್ನು ಕೆಲವು ನಾಯಿಗಳು
ಗಂಭೀರವಾಗಿ ಪರಿಗಣಿಸಿದ್ದನ್ನು, ನಾವು ಬಹಳ ಎಚ್ಚರದೊಡನೆ ಡೋಂಟ್ ಕೇರ್ ಮಾಡಿ ಬಚಾವಾದೆವು. ಅದೇ ಚಳಿನಿವಾರಣೆಗೋ ಹೆಚ್ಚಿನ ಬೆಳಕಿಗೋ ಮನೆಯ ಎದುರು ಮೆಟ್ಟಿಲ ಅಂಚಿನಲ್ಲಿ ಬಿಸಿಲಿಗೆ ಕುಳಿತು ಓದಿಕೊಳ್ಳುತ್ತಿದ್ದ ಶಾಲಾಬಾಲಕಿ ನಮ್ಮಂತಹ ಘನ ವ್ಯಕ್ತಿಗಳು ಎದುರು ದಾರಿಯಲ್ಲಿ ಓಡಾಡಿದಾಗಲೂ ಏಕಾಗ್ರತೆ ಕಡಿದುಕೊಳ್ಳದಿದ್ದದ್ದು ಗರ್ವದಗುಳ್ಳೇ ಒಡೆಯಿತು. ಆದರೆ ಸೌದೆ ಹೆಕ್ಕುವ ಅಮ್ಮನನ್ನು ಹಿಂಬಾಲಿಸಿ ಅಂಗಳಕ್ಕಿಳಿದಿದ್ದ ಪುಟ್ಟಿ, ಅಟ್ಟೆಗಾಲಿಟ್ಟು ಒಳಸೇರಲಾಗದಿದ್ದಾಗ, ನಮ್ಮ ವಿರುದ್ಧ
ಸಾಕಷ್ಟು ದೊಡ್ಡದಾಗಿಯೇ ಅವಿಶ್ವಾಸ ಧ್ವನಿ ತೆಗೆದಳು. ನಾವು ಹೆದರಿ ಓಡಲೇಬೇಕಾಯ್ತು. ತುಂಡು ಪ್ಲ್ಯಾಸ್ಟಿಕ್ ಪೈಪನ್ನೇ ಹೂಲಾಬಳೆ ತಿರುಗಿಸುವ ಪ್ರಯೋಗ ಮಾಡಿಕೊಂಡಿದ್ದ ಹುಡುಗನಿಗೆ ನಮ್ಮ ವೀಕ್ಷಣೆ ಹೆಚ್ಚಿನ ಕುಮ್ಮಕ್ಕು ನೀಡಿತು. 

ಪ್ರಾಕೃತಿಕವಾಗಿಯೇ ಝರಿ, ತೊರೆಗಳು ಧಾರಾಳವಿರುವ ಇಂಥವರಿಗೆಲ್ಲ ಸರಕಾರೀ ನಲ್ಲಿನೀರ ವ್ಯವಸ್ಥೆ ಬಿಸಿಲ ದಿನಗಳಿಗಿಂತಲೂ ಮಳೆಗಾಲಕ್ಕೆ ಹೆಚ್ಚು ಆವಶ್ಯಕವಂತೆ! ಕಾರಣ ಇಷ್ಟೇ - ಆರು ತಿಂಗಳ ಉದ್ದದ ಮಳೆಗಾಲದಲ್ಲಿ ಪ್ರಾಕೃತಿಕ ಜಲಮೂಲಗಳೆಲ್ಲ ಕಲಂಕಿತವಿರುತ್ತವೆ. ಹಿಂದೆ ಸೊಹ್ರಾದಲ್ಲಿ ನಾವುಳಿದ ಇಗರ್ಜಿ ಶಾಲೆಯಲ್ಲದೆ ರಾಮಕೃಷ್ಣ ಮಿಶನ್ನಿನವರ ಶಾಲೆ ಇರುವುದನ್ನೂ ಗುರುತಿಸಿದ್ದೆವು. ಅವರ ಶಾಲಾ ಬಸ್ ತನ್ನ ಕ್ಯಾಚ್ಮೆಂಟ್ ವಲಯದಲ್ಲಿ (ವಿದ್ಯಾರ್ಥಿ ಸಂಗ್ರಹದ ಊರು) ತಿರ್ನಾವನ್ನೂ ಸೇರಿಸಿಕೊಂಡಿರುವುದನ್ನು
ಸಾರುವಂತೆ ಮೊದಲು ಅವರ ಬಸ್ ಬಂತು. ಹಿಂದೆಯೇ ನಮ್ಮ ಜಿಂಗಚಿಕ್ಕ ಜಿಂಗಚಿಕ್ಕ ಬಸ್ ಕೂಡಾ ಬಂತು. ಹಾಗಾಗಿ ಇನ್ನುಳಿದ ಚಿತ್ರಗಳಿಗೆ ಕತೆ ನೀವೇ ಕಲ್ಪಿಸಿಕೊಳ್ಳಿ! 

ಔದ್ಯಮಿಕ ಸುಳಿಯಲ್ಲಿ ಸುಣ್ಣದ ಗುಹಾಜಾಲ..... 

ಮೇಘಾಲಯದಲ್ಲಿ ಸುಣ್ಣದ ಕಲ್ಲುಗಳ ನಿಕ್ಷೇಪ ಧಾರಾಳವೇ ಇದೆ. ಕ್ರೆಂಪುರಿಯ ಮರಳುಗಲ್ಲಿನ ಗುಹೆಗಳಂತೆ ಈ ಸುಣ್ಣದ ಕಲ್ಲ ಹಾಸಿನಲ್ಲೂ ಗುಹಾಜಾಲಗಳಿವೆ ಮತ್ತು ಹೆಚ್ಚು ಪ್ರೇಕ್ಷಣಾ
ಮೌಲ್ಯದವೇ ಇವೆ. ನಮ್ಮ ಅಧಿಕೃತ ಕೊನೆಯ ದಿನದ ಚಾರಣವಾದರೂ ಅಂಥ ಮೂರು ಸುಣ್ಣದ ಕಲ್ಲಿನ ಗುಹೆಗಳಿಗೇ ಮೀಸಲಿತ್ತು. ಸುಣ್ಣದ ಕಲ್ಲಿನ ದೊಡ್ಡ ಔದ್ಯಮಿಕ ಬಳಕೆದಾರರು ಸಿಮೆಂಟ್ ಕಾರ್ಖಾನೆಗಳು. ಅಂಥಾ ಒಂದು ಕಾರ್ಖಾನೆ - ಮೌಮ್ಲುಹ್ ಚೆರ್ರಾದ್ದು. ಅದು ಮೌಸಿನ್ರಮ್ ಕಾಯ್ದಿರಿಸಿದ ಅರಣ್ಯದ್ದೇ ಒಂದು ತುಣುಕಿನಲ್ಲಿ ವಿನಾಯ್ತಿ ಪಡೆದು ನೆಲೆಸಿತ್ತು. ಅದರ ಹಿತ್ತಿಲಿನಲ್ಲೇ, ದಟ್ಟಾರಣ್ಯದ ಅಂಚಿನಲ್ಲೇ ಎಂಬಂತೆ ತೊಡಗುವ ಒಂದು ಗುಹಾಜಾಲ ನಮ್ಮ ಮೊದಲ ಲಕ್ಷ್ಯ. ತಿರ್ನಾದಿಂದ ಕೆಲವು ಹಿಮ್ಮುರಿ ತಿರುವುಗಳ ಘಟ್ಟದಾರಿ
ಕಳೆದು, ಮೌಮ್ಲುಹ್ ಚೆರ್ರಾದ ಸಿಮೆಂಟ್ ಕಾರ್ಖಾನೆ ಎದುರೇ ಬಸ್ಸಿಳಿದೆವು. 

ಗುಹೆ ಹಿಂದಿನಿಂದಲೂ ವಿಶ್ವ ಪ್ರವಾಸೀ ಪಟ್ಟಿಗಳಲ್ಲೇನೋ ಇದೆ. ಬಹುಶಃ ಅದೇ ಸಿಮೆಂಟ್ ಕಾರ್ಖಾನೆಯ ಕಣ್ಣ ಕಿಸರಿಗೂ ಕಾರಣವಿರಬಹುದು. ಕಾರಣ ಸರಳ - ಕಾರ್ಖಾನೆಯ ಪಾರಿಸರಿಕ ವಿರೋಧೀ ಕೆಲಸಗಳು ಹೆಚ್ಚೆಚ್ಚು ಪರಿಸರಪ್ರೇಮಿಗಳ ಗಮನ ಸೆಳೆಯುವಂತಾಗುತ್ತದೆ! ಹೀಗಾಗಿ ದಾರಿ ಬದಿಯಲ್ಲಿ ಬೋರ್ಡು ಇಲ್ಲ. ಇರುವ ಸವಕಲು ಜಾಡೂ ಕಾಣದಂತೆ ದಾರಿ ಬದಿಯಲ್ಲೇ ಒಂದಷ್ಟು ಕಚ್ಚಾ ಕಲ್ಲು
ಮಣ್ಣು ರಾಶಿ ಹಾಕಿದ್ದಾರೆ. ಕಾರ್ಖಾನೆಯ ಪಾಗಾರದಿಂದ ಹೊರಗೆ, ವಿಸ್ತಾರ ಹಾಸುಗಲ್ಲಿನ ಪಾತ್ರೆಯಲ್ಲಿ ತೊರೆಯೊಂದು ಕಾಡಿನತ್ತ ಹರಿಯುತ್ತದೆ. ಅದರಲ್ಲೀ ಕಾಲದಲ್ಲಿ ನೀರ ಹರಿವು ವಿರಳವಿದ್ದು, ಸುತ್ತ ಹುಲ್ಲು ಹಬ್ಬಿದೆ. ಅದನ್ನು ಸೀಳಿಕೊಂಡು ಸಾಗುವ ಸವಕಲು ಜಾಡು ನಮ್ಮೂರ ಮುಳಿ ಹುಲ್ಲಿನ ಪದವನ್ನೇ (ಗುಡ್ಡದ ಸಪಾಟು ನೆತ್ತಿ) ನೆನಪಿಸಿತು. ಅಲ್ಲಿ ಸಣ್ಣದಾಗಿ ಮಡುಗಟ್ಟಿಕೊಂಡು, ಕಲಕಲಿಸಿಕೊಂಡು ಇದ್ದ ನೀರು ಅದುವರೆಗೆ ನಾವು ಕಂಡ ಮೇಘಾಲಯದ ವೈಶಿಷ್ಟ್ಯಕ್ಕನುಗುಣವಾಗಿ ಸ್ಫಟಿಕ ನಿರ್ಮಲವೇ ಇತ್ತು. ಆದರೆ
ಅದಕ್ಕೆ ಕಾರ್ಖಾನೆಯ ಹಿತ್ತಿಲಿನಲ್ಲಿ ಬಿಳಿ ಬಣ್ಣದ, ಕೆನೆಕೆನೆಯಾದ ನೀರು ಸಂಗಮಿಸಿತ್ತು. ಈಗ ತಿಳಿಯಿತಲ್ಲ, ಜನ ಹೆಚ್ಚು ಓಡಾಡುವುದಕ್ಕೆ ಕಾರ್ಖಾನೆಗಿರುವ ಅಸಹನೆ? ಅಂತರ್ಜಾಲಾಟದಲ್ಲೂ ಮೌಮ್ಲುಹ್ ಸಿಮೆಂಟ್ ಕಾರ್ಖಾನೆಯ ಇತಿಹಾಸ ಪರಿಸರಪ್ರೇಮದ್ದಲ್ಲ ಎಂದೇ ಅರಿವಾಗುತ್ತದೆ! 

ದಾರಿಯಿಂದ ಐದಾರು ಮಿನಿಟಿನ ನಡಿಗೆಯಲ್ಲೇ ಗುಹಾಬಾಯಿ ಕಾಣಿಸಿತು. ಬಾಯಿ ದೊಡ್ಡದು ಮತ್ತು ಸ್ವಲ್ಪ ಹರಕುಬಾಯಿಯೂ ಹೌದು. ಅದು ನೆಲ ಮಟ್ಟದಿಂದ ತುಸು ಎತ್ತರಲ್ಲಿದ್ದುದರಿಂದ ಬಿದಿರಿನ ಏಣಿ ವ್ಯವಸ್ಥೆ ಮಾಡಿದ್ದರು.
ಅದನ್ನೇರಿದರೂ ತೋರಿಕೆಯ ದೊಡ್ಡಬಾಯಿ, ಮೊದಲಿಗೆ ತಗ್ಗಿ ತೆವಳುವ ವಿನಯವನ್ನೇ ಕೇಳಿತ್ತು. ಮತ್ತೆಲ್ಲ ವಿಸ್ತಾರವೇ ಇತ್ತು. ಗುಹೆ ಹೊರನೋಟಕ್ಕೆ ಹವಳದ ಬಂಡೆಯಂತೆ ಪೊಳ್ಳು ಹರಕುಗಳದ್ದೇ ಇದ್ದರೂ ಒಳಮೈ ಮತ್ತು ನೆಲದಲ್ಲಿ ಚದುರಿ ಬಿದ್ದ ಬಂಡೆಗುಂಡುಗಳೆಲ್ಲ ಸಾಕಷ್ಟು ಸವಕಳಿಗೀಡಾಗಿ ನಯವೂ ದೂಳುರಹಿತವೂ ಇದ್ದವು. ಮೇಲೆ, ಗೋಡೆಗಳಲ್ಲಿ ತೊಂಗಲುಗಳ ರಚನೆಯೂ ಸಾಕಷ್ಟಿತ್ತು. ಆದರೆ ಆ ಎಲ್ಲ ವಿವರಗಳನ್ನೂ ಮೀರಿ, ಮಾರ್ಗದರ್ಶಿಗಳು ನಮಗೆ ತಿರ್ನಾದಲ್ಲೇ ಕೊಟ್ಟಿದ್ದ ಸೂಚನೆಯ ಕುರಿತೇ ನಮ್ಮ ನಿಗಾ
ಹೆಚ್ಚು ಇತ್ತು. "ಎಲ್ಲ ಮೊಣಕಾಲ ಮಟ್ಟದ ಉಡುಪಿದ್ದರೆ ಧರಿಸಿ. ಬೂಟೂ ಕಳಚಬೇಕಾದೀತು, ಅವಶ್ಯವಿದ್ದರೆ ಚಪ್ಪಲಿಯನ್ನೂ ಇಟ್ಟುಕೊಳ್ಳಿ." ನಾನು ಮುಕ್ಕಾಲು ಚಡ್ಡಿ ಹಾಕಿ, ಬರಿಗಾಲಿನಲ್ಲೇ ಸಜ್ಜಾಗಿದ್ದೆ. ಹತ್ತು ಹೆಜ್ಜೆ ಹೋಗುವುದರೊಳಗೆ, ಹಗುರದ ಇಳಿಜಾರಿನಲ್ಲಿ ನೀರ ಕೊಳಕ್ಕೇ ಕಾಲಿರಿಸಿದೆ. ಮಂಜಿನಂಥ ನೀರಿನಲ್ಲಿ ಎರಡೋ ಮೂರೋ ಹೆಜ್ಜೆ ಮುಂದುವರಿದಿದ್ದೆ. ಮೊದಲಿಗೆ ಕಾಲುಗಳು ಅಸಂಖ್ಯ ಸೂಜಿಗಳ ಇರಿತದ ಅನುಭವ ಕೊಟ್ಟಿತು. ನೀರ ಆ ಕಡುಶೀತವನ್ನು ಹೇಗೋ ಸುಧಾರಿಸಿಕೊಂಡೇನು ಎಂದುಕೊಳ್ಳುತ್ತಿದ್ದಂತೆ ಕಾಲು
ಮರಗಟ್ಟಿದಂತೆ, ಮೀನಖಂಡಗಳು ಸೆಟೆದುಕೊಳ್ಳುವಂತೆ ಅನ್ನಿಸತೊಡಗಿತು. ಮತ್ತೆ ಧೈರ್ಯ ಬರಲಿಲ್ಲ, ಚುರುಕಾಗಿಯೇ ಹಿಂದೆ ಸರಿದುಬಿಟ್ಟೆ. ತಂಡದಲ್ಲಿ ತೀರಾ ಕೆಲವರಷ್ಟೇ ಮಾರ್ಗದರ್ಶಿಗಳನ್ನು ಹಿಂಬಾಲಿಸಿ, ಮತ್ತೆ ಹತ್ತಿಪ್ಪತ್ತು ಮೀಟರ್ ಅಂತರದಲ್ಲೇ ಗುಹೆಯ ಕೊನೆ ಕಂಡು ಮರಳಿದರು. 

ಮೌಮ್ಲುಹ್ ಗುಹೆಯೊಳಗಿನ ನೀರ ಜಾಡುಗಳಲ್ಲದೆ, ಒಣ ಕವಲುಗಳ ಜಾಲವೂ ಸೇರಿ ಒಟ್ಟು ಸುಮಾರು ಏಳು ಕಿಮೀ ಉದ್ದವನ್ನೇ ಪೂರ್ವಶೋಧಕರು ಅಳೆದಿದ್ದಾರೆ. ನನ್ನ ಅಸಾಮರ್ಥ್ಯದ ನೆಲೆಯಲ್ಲಿ ಅದನ್ನು ಹೆಚ್ಚು ಸವಿಯಲು
ಸಾಧ್ಯವಾಗಲಿಲ್ಲ. ಆದರೆ ಪ್ರಕೃತಿಯ ವಿಸ್ಮಯ, ಸೌಂದರ್ಯ ಮತ್ತು ರಚನಾ ಅನನ್ಯತೆಯಲ್ಲಿ ಇದಕ್ಕೆ ಮಹತ್ವದ ಸ್ಥಾನ ಇದ್ದೇ ಇದೆ ಎಂಬುದನ್ನಷ್ಟೇ ಸದ್ಯ ಹೇಳಬಲ್ಲೆ. ನಾವು ಮತ್ತೆ ಬಸ್ಸೇರಿ, ಇನ್ನೊಂದೇ ಜನಪ್ರಿಯ ಗುಹಾಜಾಲದತ್ತ ಪಯಣಿಸಿದೆವು. 

ಮೌಸ್ಮಾಯ್ ಗುಹಾಜಾಲ ಜನಪ್ರಿಯವೂ ಹೌದು, ಸರಕಾರೀ ಅಭಿವೃದ್ಧಿಯ ಹುಚ್ಚಿನಲ್ಲಿ ಹೆಚ್ಚು ಬಳಲಿರುವ ಕೇಂದ್ರವೂ ಹೌದು. ಅಲ್ಲಿ ಎಕ್ರೆಗಟ್ಟಳೆ ಜಾಗವನ್ನು ಮಟ್ಟ ಮಾಡಿ, ಯದ್ವಾ ತದ್ವಾ ಡಾಮರ್, ಕಾಂಕ್ರೀಟ್, ಕಟ್ಟೆ, ಇಂಟರ್ಲಾಕ್, ಸುಣ್ಣ ಬಣ್ಣ ಹೇರಿ ವಾಹನ ತಂಗುದಾಣ, ಸ್ವಾಗತ ಕಚೇರಿ, ವ್ಯಾಪಾರೀ ಮಳಿಗೆಗಳು, ಉದ್ಯಾನ, ಮಕ್ಕಳ ವಿಹಾರ ಎಂದೇನೇನೋ ಗುಹಾಮುಖದಲ್ಲೇ ಹೇರಿಬಿಟ್ಟಿದ್ದಾರೆ. ಅಲ್ಲಿನ ಸುಣ್ಣದ ಗುಹೆಯುದ್ದಕ್ಕೂ ವಿಶೇಷ ವಿದ್ಯುತ್ ದೀಪಗಳ ವ್ಯವಸ್ಥೆ ಕೊಟ್ಟಿದ್ದಾರೆ. ದೀಪ ನಮಗೆ ಗುಹಾಂತರಾಳವನ್ನು ತೋರಿಸುವುದು ಸರಿ, ಆದರೆ ಆ ಪರಿಸರಕ್ಕೆಷ್ಟು
ಸ್ನೇಹೀ ಎನ್ನುವ ಬಗ್ಗೆ ನನಗೆ ಸಂದೇಹವಿದೆ. ಒಳಗೆ ನಿರಪಾಯವಾಗಿ ಸಾರ್ವಜನಿಕ ಓಡಾಟದ ಸ್ಥಳವನ್ನಷ್ಟು ನಿಗದಿಗೊಳಿಸಿ, ನಡೆಮಡಿಯನ್ನೂ ಬಿಗಿಗೊಳಿಸಿದ್ದಾರೆ. ಗುಹೆ ಸ್ವಭಾವತಃ ತೆರೆದುಕೊಂಡ ಇನ್ನೊಂದೇ ಬಾಯಿಯನ್ನು ಬಳಸಿ, ಒಳಗೆ ವೀಕ್ಷಕರಿಗೆ ಏಕ ಮುಖ ಸಂಚಾರವನ್ನೇ ಕೊಟ್ಟದ್ದು ಅನುಕೂಲವೇ ಆಯ್ತು. ಪ್ರಧಾನ ಗುಹಾ (ಪ್ರಾಕೃತಿಕ) ಸಂಕೀರ್ಣದ ಒತ್ತಿಗೇ ಇನ್ನೊಂದು ಗುಡ್ಡೆಯಲ್ಲಿ ಇನ್ನೊಂದೇ ಗುಹಾಜಾಲವನ್ನೂ ಈಚೆಗೆ ಅಭಿವೃದ್ಧಿಯ ಸೀರೆ ಸುತ್ತಿ, ಪ್ರತ್ಯೇಕ ಪ್ರವೇಶಧನವಿಟ್ಟು ಲೋಕಾರ್ಪಣ
ಮಾಡಿದ್ದಾರೆ. ಅದನ್ನೂ ನಾವು ಅನುಭವಿಸಿದೆವು. ಈ ವಿಭಾಗದಲ್ಲಿ ಒಂದೆಡೆ ಗುಹಾ ಚಪ್ಪರ ಹೊಸದಾಗಿ ಜರಿದದ್ದೂ ಮೇಲಿನ ಮರಗಳ ಬೇರ ಜಾಲ ಗುಹೆಯೊಳಗೆ ವನಸಿರಿಯ ಬಿಚ್ಚಿ ಇಳಿಬಿಟ್ಟ ಮುಡಿಸಿರಿಯಂತೇ ನೋಡಸಿಕ್ಕಿತ್ತು. ಆದರೆ ಇಲ್ಲಂತೂ ಪಾರಿಸರಿಕ ಸ್ಥಿತಿಯನ್ನೇ ಕೆಡಿಸುವಂತೆ ವಯರು ಎಳೆದು, ಹಗಲೆಲ್ಲ ಪ್ರಖರ ಬೆಳಕಿನ ಹಬ್ಬವನ್ನೇ ನಡೆಸಿದ್ದಾರೆ. 

ಗುಹೆಗಳ ಹಿತ್ತಲಿನಿಂದ ಹೊರ ಬಂದಲ್ಲೂ ಚೊಕ್ಕ ಕಾಂಕ್ರೀಟ್ ಮೆಟ್ಟಿಲುಗಳು, ಪುಟ್ಟಪಥ, ಸುತ್ತಣ ಕುರುಚಲು ಕಡ್ಡಿ ಕಸವನ್ನು ಕಳೆದು ಘನ ಮರಗಳನ್ನಷ್ಟೇ ಉಳಿಸಿ, ಕೆಲವಕ್ಕೆ ಕಟ್ಟೆಯನ್ನೂ ಕಟ್ಟಿ, ಎಲ್ಲಕ್ಕೂ ಸೊಂಟ ಮಟ್ಟಕ್ಕೆ ಸುಣ್ಣ ಬಳಿದು, ನೆಲ ಹಸನುಗೊಳಿಸಿದ್ದೆಲ್ಲ ನೋಡುವಾಗ ಇವರ ತಿಳುವಳಿಕೆಯ ಸಾಮರ್ಥ್ಯದ ಕುರಿತೇ ಸಂಶಯ ಬರುತ್ತದೆ. ಇವೆಲ್ಲವುಗಳ ಮೊತ್ತದಲ್ಲಿ ನಾವು ಶತಶತಮಾನಗಳ ವಿಕಾಸದಲ್ಲಿ ಮೂಡಿದ ಪ್ರಾಕೃತಿಕ ಸತ್ಯಗಳನ್ನು ದೊಡ್ಡ
ಮಾನವ ದುರಂತದೊಡನೇ ಕಳೆದುಕೊಂಡರೆ ಏನೂ ಆಶ್ಚರ್ಯವಿಲ್ಲ.
(ಬರಲಿರುವ ಬ್ರೇಕಿಂಗ್ ನ್ಯೂಸ್ (ಬಾರ್ಕಿಂಗ್ ನೋಯ್ಸ್!) - "ಮೊಸ್ಮಾಯಿಯಲ್ಲಿ ಭೀಕರ ಭೂ ಕುಸಿತ, ಗುಹೆಗಳಲ್ಲೂ ಇದ್ದ ನೂರಾರು ಪ್ರವಾಸಿಗಳ ಕಣ್ಮರೆ!") 

ಅಭಿವೃದ್ಧಿಪ್ರಣೀತ ಮೌಸ್ಮಾಯ್ ಉದ್ಯಾನವನದ ನೆರಳಿನಲ್ಲಿ, ಆಗಷ್ಟೇ ಕಾರಿನಲ್ಲಿ ಬಂದಿದ್ದ ಬಿಸಿಯೂಟ ನಮ್ಮನ್ನು ತಣಿಸಿತು. ನಮ್ಮ ತಂಡದ್ದೇ ಕೆಲವು ಯುವಕರು ಮಕ್ಕಳ ಪಾರ್ಕಿನಲ್ಲಿ ದಾಂಧಲೆ ನಡೆಸಿದ್ದರು. ಅಲ್ಲವಾದರೆ (ಚಿತ್ರ ನೋಡಿ) ಆಚೀಚೆ ಒಂದೆರಡು ಪುಟ್ಟ ಮಕ್ಕಳು ಕೂತು ಆಡಬೇಕಾದ ಆಟಿಕೆಯಲ್ಲಿ
ಆರೇಳು ಮಂದಿ ಡುಮ್ಮಡುಮ್ಮಿಯರೇ? ನಾವು ಊಟ ಮಾಡಿದ ವಠಾರ ಮಿತಿಯಿಂದ ತುಸು ಕೆಳಗೆ ನೈಜ ತೊರೆಯೊಂದಿತ್ತು. ಅದರ ಪಾತ್ರೆಯಲ್ಲಾಗಲೇ ಅಲ್ಲಿನ ಮಳಿಗೆಗಳ (ಗುಪ್ತಗಾಮಿನಿಯಾಗಿ ಶೌಚಾಲಯಗಳದ್ದೂ?) ಉದಾರ ಕೊಡುಗೆಗಳು ತುಂಬಿ, ಕೊಳೆತು ಕಪ್ಪಾಗಿಹೋಗಿತ್ತು. ಬಿಸಿಲಿಗೆ ಗಾರೆದ್ದ ವಿಸ್ತಾರ ಡಾಮರ್ ಹಾಸಿನ ತಂಗುದಾಣದ ನೆಲ ನಮ್ಮನ್ನು ಬೇಗ ಮುಂದಿನ ತಾಣಕ್ಕೋಡಿ ಓಡಿ ಎಂದೇ ಒತ್ತಾಯಿಸಿತು. 

ದಿನದ ಹಾಗೂ ಶಿಬಿರದ ಕೊನೆಯ ಸಂದರ್ಶನ ತಾಣ ಅರ್ವಾಹ್ ಗುಹಾಜಾಲ. ಇದು ಕ್ರೆಂಪುರಿಯಂತೆ ಭಾರೀ ಪರ್ವತಭಿತ್ತಿಯಲ್ಲೇ ತನ್ನನ್ನು ಪ್ರಕಟಿಸಿಕೊಂಡಿದೆ. ಆದರೆ ಸಾಕಷ್ಟು ಹಿಂದೆಯೇ ಜನ ಗುರುತಿಸಿದ್ದಕ್ಕೋ ಏನೋ ಮೌಸ್ಮಾಯ್ ಅಂತೆಯೇ ಅಭಿವೃದ್ಧಿ ಯಂತ್ರದ ಅಪಾರ ಹೊಡೆತವನ್ನು ಉಣ್ಣುತ್ತಲೇ ಇದೆ. ರಸ್ತೆ ಕೊನೆಗೊಂಡಲ್ಲಿಂದ ಸುಮಾರು ಇನ್ನೂರು ಮೀಟರ್ ಉದ್ದದ ಗುಹಾ ಬಾಯಿಯವರೆಗೂ ಬೆಟ್ಟದ ಬದಿಯಲ್ಲಿ ದೃಢವಾದ (ಅಂದರೆ ಬೆಟ್ಟಕ್ಕೆ ಖಾಯಂ ಆದ ಜಖಂ ಉಂಟು ಮಾಡುವ)

ಕಾಂಕ್ರೀಟ್ ಬಾಲ್ಕನಿಪಥವನ್ನೇ ಮಾಡಿಬಿಟ್ಟಿದ್ದಾರೆ. ಅಷ್ಟು ಸಾಲದೆಂಬಂತೆ ಒಂದೆರಡು ಹೆಚ್ಚುವರಿ ಅಲಂಕಾರಿಕ ಸೇತುವೆಗಳು, ಅನಾವಶ್ಯಕ ಗೊಡೆ, ಸ್ವಲ್ಪ ಕೆಳ ಹಂತದ ಒಂದು ಬಂಡೆಯೊಂದರ ನೆತ್ತಿಗೂ ಬಳುಕಿದ ಅಲೆಯಂತಾ ಸಿಮೆಂಟ್ ನೀರಕೊಳ (ನಿರ್ವಹಣೆ ಇಲ್ಲದೆ ಒಳಗೆ ಕಸ ತುಂಬಿಕೊಂಡಿದೆ), ಪುಟ್ಟಪಥ, ಕಾಂಕ್ವುಡ್ ಬೇಲಿ ಮುಂತಾದವನ್ನು ಹೇರುತ್ತಲೇ ಹೋಗಿದ್ದಾರೆ. ಆಗಲೇ ಎರಡು ಕಡೆ ದೊಡ್ಡ ಭೂಕುಸಿತಗಳಾಗಿ ಇಲ್ಲಿನ ಎಷ್ಟೋ ರಚನೆಗಳನ್ನು ಬೆಟ್ಟ ಕೊಡಹಿಕೊಂಡಿರುವುದು ಯಾರಿಗೂ ಕಾಣುತ್ತದೆ.
ಅಭಿವೃದ್ಧಿಯ ನೆಪದ ಹಣಪಿಪಾಸುಗಳಿಗೆ ಇದನ್ನು ಅರ್ಥ ಮಾಡಿಸುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವುದು ಯಾರು?? 

ಅರ್ವಾಹ್ ಗುಹೆಯ ಒಳಗಿನ ತೊಂಗಲು ರಚನೆಗಳು ತುಂಬ ಚೆನ್ನಾಗಿವೆ. ಸಾಲದ್ದಕ್ಕೆ ಖಂಡಾಂತರ ಚಲನೆಯ ಕಾಲದಲ್ಲಿ ಕಡಲ ದ್ವೀಪಸ್ಥಿತಿಯಲ್ಲಿದ್ದ ಮೇಘಾಲಯದ ಇತಿಹಾಸವನ್ನೂ ಇದು ಸಾರುತ್ತದೆ. ಅಸಂಖ್ಯ ಕಡಲ ಜೀವಿಗಳ ಪಳೆಯುಳಿಕೆಗಳೂ ಗುಹಾಭಿತ್ತಿಗಳಲ್ಲಿ ಎದ್ದು ತೋರುತ್ತವೆ. ಅಡ್ಡಾ ತಿಡ್ಡ ವಯರುಗಳು, ಬೆಳಕಿನ ನಿರ್ವಹಣೆಯ ಅರಿವಿಲ್ಲದ ಅಡ್ಡ ಕಸಬಿಗಳು ದೀಪ ಹಾಕಿದ್ದರ ಕುರಿತು ನಾನು ಹೊಸದಾಗಿ ಹೇಳುವುದೇನೂ ಇಲ್ಲ, ಚಿತ್ರ ನೋಡಿ ನೀವೇ ಕಂಡುಕೊಳ್ಳಿ. ‘ಎಲ್ಲವನ್ನೂ ಎಲ್ಲರಿಗೂ ಮುಟ್ಟಿಸುವ’ ಹುಚ್ಚು ಹೆಚ್ಚಿದ್ದಕ್ಕೇ ಈ ಪ್ರಾಕೃತಿಕ ದೇಗುಲ ಇಂದು ಸಂತೆಕಟ್ಟೆಯಾಗಿದೆ. ಅದಕ್ಕೆ ಪಳೆಯುಳಿಕೆಯ ಮಹತ್ವ ತಿಳಿಯದ ಮೂಢರು, ಪಕ್ಕದಲ್ಲೇ ತಮ್ಮ ಹೆಸರನ್ನು ಕೆತ್ತಿರುವುದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? 


ಬಸ್ಸೇರಿ ಕತ್ತಲೆಗೂ ಮುನ್ನ ಶಿಲ್ಲಾಂಗಿನ ಯೂಥ್ ಹಾಸ್ಟೆಲ್ಸ್ ಭವನಕ್ಕೆ ಮರಳಿದೆವು. ಚಾ ಮುಗಿಸಿದ್ದೇ ಔಪಚಾರಿಕವಾಗಿ ಸಭೆ ಸೇರಿ, ಎಲ್ಲರಿಗೂ ಭಾಗವಹಿಸಿದ್ದರ ಪ್ರಮಾಣಪತ್ರವನ್ನು ವಿತರಿಸುವುದರೊಡನೆ, ವಾಚಾಳಿಗಳಿಗೆ ನಾಲ್ಕು ಮಾತಿಗೂ ಅವಕಾಶ ಕೊಟ್ಟರು. "ಚೆನ್ನಾಗಿತ್ತು, ತುಂಬ ಚೆನ್ನಾಗಿತ್ತು, ತುಂಬಾನೇ ಚೆನ್ನಾಗಿತ್ತು...." ಹೀಗೇ ಸಾಗಿದ್ದ ಅರ್ಥಹೀನ ವಿಶೇಷಣಗಳನ್ನು ಹೊಸೆಯುವವರಿಗೆ ಕಿವಿಮಾತು: ಮನಮಂಥನವಾಗದೇ ಮಾತಿನ ನವನೀತ ಮೂಡುವುದಿಲ್ಲ. ನಾವಾರು ಮಂದಿಯಂತೂ ಒಂದು ಮಾತೂ ಆಡದೆ
ಔಪಚಾರಿಕ ಕಲಾಪವನ್ನು ಗೌರವಿಸಿದೆವು. 

(ಮುಂದುವರಿಯಲಿದೆ)

3 comments:

 1. ಉದಯಕುಮಾರ್ ಹಬ್ಬು FBಯಲ್ಲಿ ಬರೆಯುತ್ತಾರೆ:
  ನಾನೂ ಈಶಾನ್ಯ ಗಡಿ ರಾಜ್ಯಗಳಾದ ಆಸಾಮ್ ಮೇಘಾಲಯ ಮತ್ತು ಅರುಣಾಚಲ ರಾಜ್ಯಗಳಿಗೆ ಪ್ರವಾಸಗೈದಿದ್ದೆ.ನೀವು ಹೇಳಿದ ಜಲಪಾತದ ಕುರಿತು ಮತ್ತು ಖಾಸಿ ಜನಾಂಗದ ಜಾನಪದ ಕತೆಗಳ ಕುರಿತು ಒಂದು ಪುಸ್ತಕ ಬರೆದಿದ್ದೇನೆ ಆಗ. ಬೋಡೋ ಚಳವಳಿ ಇತ್ತು.....

  ReplyDelete
 2. ಹೇಮಮಾಲಾ FBಯಲ್ಲಿ ಬರೆಯುತ್ತಾರೆ:
  ಮೇಘಾಲಯಕ್ಕೊಂದು ವೀಕ್ಷಣಾ ಯಾತ್ರೆಯ ಎಲ್ಲಾ ಕಂತುಗಳನ್ನೂ ಓದಿದೆ.. ಬಹಳ ಸೊಗಸಾಗಿ ಓದಿಸಿಕೊಂಡು ಹೋಯಿತು. ಇದೇ ಚಾರಣಕ್ಕೆ ನಾವು ಕೆಲವರು ನವೆಂಬರ್ 2019 ರಲ್ಲಿ ಹೋಗಿದ್ದೆವು. ನೆನಪುಗಳು ಮರುಕಳಿಸಿದುವು. ಧನ್ಯವಾದಗಳು 🙏

  ಆಗ ಜಲಪಾತಗಳಲ್ಲಿ ಸ್ವಲ್ಪ ಹೆಚ್ಚು ನೀರಿತ್ತು. ನಮಗೆ ಒಂದು ದಿನ ಚಿರಾಪುಂಜಿಯ ಆಸುಪಾಸಿನಲ್ಲಿ , ಮಳೆಯಲ್ಲಿಯೇ 20 ಕಿ.ಮೀ ಹೆಚ್ಚು ನಡೆಯಬೇಕಾಗಿ ಬಂತು. ಹಾಗಾಗಿ ಸೋಲ್ ಕಿತ್ತು ಹೋದ ಶೂಗಳನ್ನು ಟೈರ್ನಾ ಹಳ್ಳಿಯ ಹೋಮ್ ಸ್ಟೇಯ ಕಸದ ಬುಟ್ಟಿಗೆ ಸೇರಿಸಿದ್ದಾಯಿತು.

  ReplyDelete
 3. whatsappನಲ್ಲಿ ಶಿವಾನಂದ ಭಾವಿಕಟ್ಟಿಯವರು ಬರೆಯುತ್ತಾರೆ: ಸಾಹಿತಿಯೇ ಚಾರಣ ಮಾದಿದ್ದಾ... ಅಥವಾ ಚಾರಣಿಗನನ್ನು ಮೇಘಾಲಯದ ಸೌಂದರ್ಯ ಸಾಹಿತಿಯನ್ನಾಗಿಸಿತಾ!!... ಎಂದು ಸಂಶಯ ಬರಿಸುವಷ್ಟು ಲೇಖನ ಸೊಗಸಾಗಿದೆ. ಮತ್ತೊಮ್ಮೆ ಮೇಘಾಲಯಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು (ನಮ್ಮದು ಫೆ.೮ರಂದು ಹೊರಟ ತಂಡವಾದರೆ ಇವರದು ಪೆ.೧೧ನೇ ತಾರೀಕಿನಂದು ಹೊರಟ ಚಾರಣ ತಂಡದಲ್ಲಿದ್ದರಂತೆ!!)

  ReplyDelete