22 November 2018

ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ


ಭಾಗ ೧. ದುರ್ಗದ ವಿಜಯ, ಅಬ್ಬಿಯ ಸೋಲು 


[೧೯೮೦ರಲ್ಲಿ ದಕ ಜಿಲ್ಲೆಯೊಳಗೆ ನಡೆಸಿದ ಪರ್ವತಾರೋಹಣ ಸಪ್ತಾಹದ ಮುಂದುವರಿಕೆಯಂತೆ, ಮತ್ತೊಮ್ಮೆ ಸಾರ್ವಜನಿಕ ಪ್ರಚಾರ ನಡೆಸಿ, ಸಂಘಟಿಸಿದ ಕಲಾಪ - ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ. ಹಿಂದೆ ಈ ಜಾಲತಾಣದಲ್ಲಿ ಏಳು ಭಾಗಗಳಲ್ಲಿ ಪರ್ವತಾರೋಹಣ ಸಪ್ತಾಹ ಮಾಲಿಕೆಯ ಧಾರಾವಾಹಿಯಾಗಿಸಿದ ಕೊನೆಯಲ್ಲಿ ಹೇಳಿಕೊಂಡಂತೆ ಇದು ಎಂಟನೆಯ ಭಾಗವಾಗಬೇಕಿತ್ತು. ವಿಳಂಬವಾದರೂ ಈಗ ಅದನ್ನು ಬಲ್ಲಾಳರಾಯನ ದುರ್ಗ ವಲಯದ ನನ್ನ ಹಲವು ಅನುಭವಗಳ ಸ್ವತಂತ್ರ
ಮಾಲಿಕೆಯನ್ನಾಗಿಸುತ್ತಿದ್ದೇನೆ.] 

ಪುತ್ತೂರಿನಲ್ಲಿ ವಕೀಲರಾಗಿದ್ದ ನನಗೆ ಹಿತೈಷಿಯೂ ಹಿರಿಯ ಮಿತ್ರರೂ ಆಗಿದ್ದ ಬಂದಾರ್ ಶ್ರೀಪತಿರಾಯರು ನನ್ನ ಓದುಗರಿಗೆ ಅಪರಿಚಿತರೇನಲ್ಲ. (ಮರೆತಿದ್ದರೆ ಇಲ್ಲಿ ನೋಡಿ: ಅಸಾಧ್ಯ ಅಮೆದಿಕ್ಕೆಲ್) ಅವರೊಂದು ದಿನ (೧೯೭೮-೭೯ರ ಸುಮಾರಿಗೆ) ನನ್ನಂಗಡಿಗೆ ತುಸು ಕುಂಟುತ್ತ ಬಂದರು. ವಿಚಾರಿಸಿದೆ. ಅವರ ಭೂಪಟ ಓದುತ್ತ ನೈಜ ಚಿತ್ರಗಳನ್ನು ಮನೋಪಟಲದ ಮೇಲೆ ಸಾಕ್ಷಾತ್ಕರಿಸಿಕೊಂಡದ್ದರ ಹೊಸದೇ ಕತೆ ಬಂತು. 

ಪಶ್ಚಿಮ ಘಟ್ಟಸಾಲಿನ ‘ಮೈದಾನ ಶಿಖರ’ - ಬಲ್ಲಾಳ ರಾಯನ ದುರ್ಗ. ಕುದುರೆಮುಖ ಶಿಖರ ಕಳೆದ ಪಶ್ಚಿಮ ಘಟ್ಟ ಸ್ವಲ್ಪ ಪಶ್ಚಿಮ-ಪೂರ್ವವಾಗಿ ಹರಿದ ಕೊನೆಯೇ ಹಿರಿಮರುದುಪ್ಪೆ (ನೋಡಿ: ಕಾಡಿದ ಹಿರಿಮರುದುಪ್ಪೆ). ಶ್ರೇಣಿ ಅಲ್ಲಿಂದ ತೊಡಗಿದಂತೆ, ದಿಡುಪೆಯ ಕೊಳ್ಳವನ್ನು ಕೇಂದ್ರದಲ್ಲಿಟ್ಟು, ಉತ್ತರಕ್ಕೆ ನುಗ್ಗಿ ದಕ್ಷಿಣಕ್ಕೆ ತಿರುಗಿ ಬರುತ್ತ ಒಂದು ಲಾಳಾಕೃತಿಯನ್ನೇ ರಚಿಸಿದೆ. ಅತ್ತಣ ಹಿರಿಮರುದುಪ್ಪೆಗೆ, ಇತ್ತ
(ಪೂರ್ವದ) ಸಮಭುಜದಂತೆ ನಿಂತ ಶಿಖರ ಬಲ್ಲಾಳರಾಯನ ದುರ್ಗ. ಲಾಳಾಕೃತಿಯ ಈ ಪೂರ್ವ ಕಾಲು ಮತ್ತೂ ತುಸು ಮುಂದುವರಿದು ಬಂಡಾಜೆ ಅಬ್ಬಿಯ ಸಮೀಪದಲ್ಲಿ ತಿರುವು ತೆಗೆದುಕೊಂಡು ಮುಂದುವರಿಯುತ್ತದೆ. ದುರ್ಗದಿಂದ ಅಬ್ಬಿಗಿರುವ ಸುಮಾರು ನಾಲ್ಕೈದು ಕಿಮೀ ಉದ್ದ ಹಾಗೂ ಒಂದೆರಡು ಕಿಮೀ ಅಗಲದ ನೆಲ ಮನುಷ್ಯನಿಗೆ ದುರ್ಗಮವಾಗಿ ಕಾಣಬಹುದು. (ಡ್ರೋನ್, ಉಪಗ್ರಹಾಧಾರಿತ ಚಿತ್ರಗಳ ಕಲ್ಪನೆ ಇಲ್ಲದ ಕಾಲವದು.) ಆದರೆ ಶ್ರೀಪತಿರಾಯರು ನಕ್ಷಾಪ್ರಾವೀಣ್ಯದ ತನ್ನ ಬಗೆಗಣ್ಣನ್ನು ತುಸು ಎತ್ತರದಲ್ಲಿ ಅರಳಿಸಿ, ಅದನ್ನು ಮೈದಾನ ಶಿಖರ ಎಂದೇ ಘೋಷಿಸಿದ್ದರು. (ಇದು ಮಂಗಳೂರು ಸನಿಹದಲ್ಲಿದ್ದಿದ್ದರೆ, ಇಂದಿನ ಯಂತ್ರಜ್ಞಾನದ ಸೊಕ್ಕಿನಲ್ಲಿ ಮೆರೆವ ಬಜ್ಪೆ ಪದವನ್ನು ಮರೆತು, ಇಲ್ಲೇ ವಿಮಾನನಿಲ್ದಾಣ ಮಾಡಿರುತ್ತಿದ್ದರು) ಅವಕಾಶ ಸಿಕ್ಕರೆ ಒಮ್ಮೆ ದಿಡುಪೆಯ ಆಳದಲ್ಲಿ ನಿಂತು, ಆ ಮಹಾ ಲಾಳಾಕೃತಿಯ ಗೋಡೆಯನ್ನು ನಿಜಗಣ್ಣಲ್ಲೂ ತುಂಬಿಕೊಳ್ಳಬೇಕೆಂದು ರಾಯರು ಆಶಿಸಿದ್ದರು. 

"ಅಂದು (೧೯೭೯ರಲ್ಲಿ) ಶರತ್ (ನಮ್ಮ ಸಮಾನ ಗೆಳೆಯ, ವಿವರಕ್ಕೆ ನೋಡಿ:
ಉರಗೋದ್ಯಾನ - ಕುದುರೆಯ ಬಾಯಿಯಿಂದ), ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಹೀರೋಹೊಂಡಾ-೧೦೦ ಕೊಂಡು, ನೆರಿಯದತ್ತ ಹೊರಟವನು ಸಿಕ್ಕಿ, ಬರ್ತೀರಾ ಎಂದ. ನನಗದು ಸೀತೆ ಕಂಡ ಬಂಗಾರ ಜಿಂಕೆಯೇ ಆಯ್ತು. ನನ್ನ ಮೊಪೆಡ್ಡಿನಲ್ಲಿ (೫೦ ಸಿಸಿಯ ಹೀರೋ ಪುಕ್ಕೋ ಲೂನಾವೋ ಇರಬೇಕು) ನಾನು ಸಾಕಷ್ಟು ಸಾಹಸ ಮಾಡಿದವನೇ. ಈ ಹೊಸ್ತನ್ನು ಅನುಭವಿಸುವ ಉಮೇದಿನಲ್ಲಿ...," ಕಚ್ಚೆಪಂಚೆ ಸಾವರಿಸಿ, ಶರತ್ ಬೆನ್ನಿಗಂಟಿದರು. ಮೊದಲೇ ಬೈಕಿನ ಮಿಂಚುವ ಕೆಂಪಿಗೆ, ಸರಳ ನೋಟಕ್ಕೆ ರಾಯರು ಮಾರುಹೋಗಿದ್ದರು. ಮತ್ತದು ಒಮ್ಮೆಗೆ ಗಳಿಸಿದ ವೇಗಕ್ಕೆ, ನಿರಾಯಾಸದ ಓಟಕ್ಕೆ, ಎಂಥಾ ಅಡ್ಡಿಗಳೆದುರಿನ ನಿರ್ವಹಣೆಯ ಖಾಚಿತ್ಯಕ್ಕೆ ಮರುಳೇ ಆದರು. ಪುತ್ತೂರು, ಬೆಳ್ತಂಗಡಿ, ಉಜಿರೆಗಳು ಕಳೆದು ಕಡಿರುದ್ಯಾವರ ಸಮೀಪಿಸುತ್ತಿದ್ದಂತೆ, ತನ್ನ ಬಲ್ಲಾಳರಾಯನ ದುರ್ಗದ ದಿಡುಪೆ-ದರ್ಶನ ಬಯಕೆಯನ್ನು ಹೇಳಿಕೊಂಡರು. ಶರತ್ತಾದರೂ ಕಾಡು,
ಬೆಟ್ಟದ ಹುಚ್ಚಿನವನೇ. "ನೋಡಿಯೇ ಬಿಡುವಾ" ಎಂದು ದಿಡುಪೆ ದಾರಿಗೆ ತಿರುಗಿಸಿದ. ಅದು ಕಚ್ಚಾ ಮಾರ್ಗವಾದರೂ ನಿರ್ಜನ, ನೇರ, ಸಮತಟ್ಟಾಗಿದ್ದದ್ದು ಕಾಣುತ್ತಿದ್ದಂತೆ ರಾಯರಿಗದನ್ನು ಸ್ವತಂತ್ರವಾಗಿ ಸವಾರಿ ಮಾಡುವ ಚಪಲ ಚಿಗುರಿತು. ಅವರ ಅಭಿಮಾನಿಯೇ ಆದ ಶರತ್ ಸಂತೋಷದಲ್ಲೇ ಒಂದೆಡೆ ಬೈಕ್ ಇಳಿದು, ಅವರಿಗೆ ಕೊಟ್ಟು
ಚಂದ ನೋಡುತ್ತ ನಿಂತ. ರಾಯರಿಗೆ ತನ್ನ (ಮೊಪೆಡ್) ಇಂಜಿನ್ ಚಾಲು ಆದ ಮೇಲೂ ಕಾಲಿನಲ್ಲಿ ಸ್ವಲ್ಪ ನೂಕುಬಲ ಕೊಟ್ಟೇ ಗೊತ್ತಿತ್ತು. ಆದರೆ ಇದರ (೧೦೦ ಸಿಸಿ) ಚಿಮ್ಮುಬಲದಲ್ಲಿ ಒಮ್ಮೆ ತಡಬಡಾಯಿಸಿದರೂ ಹಾವಾಡುತ್ತ ಮುಂದುವರಿದರು. ಕುಗ್ರಾಮದತ್ತ ಸಾರಿದ್ದ ಆ ಕಚ್ಚಾರಸ್ತೆಯಲ್ಲೆಲ್ಲೋ ಲಾರಿ ಜಗ್ಗಿಸಿ ಉಂಟಾಗಿದ್ದ ತಗ್ಗಿನ ಓಣಿಗಿಳಿದ ಚಕ್ರ, ಮೇಲೇರುವಲ್ಲಿ ಜಾರಿದ ಮೇಲೆ ಕೇಳಬೇಕೇ ".....ನೆಲದ ಮೇಲೆ ದೊರೆ!" ಮುಂದೆಂದೋ ಶರತ್ ಸಿಕ್ಕಾಗ ಹೇಳಿದ್ದ "ಅಜ್ಜಿ ಪುಣ್ಯ ಮಾರಾಯ್ರೇ ಅಜ್ಜೇರಿಗೆ ಹಲವು ತರಚಲು ಗಾಯವಾದರೂ ಕಾಲು ಮುರಿಯಲಿಲ್ಲ!" 

ಹಾಗೆ ಶ್ರೀಪತಿರಾಯರಿಂದ ನನ್ನ ಪರಿಚಯಕ್ಕೆ ಬಂದ ಶಿಖರವನ್ನು, ನಾವು ಕೇವಲ ದೂರದಿಂದ ನೋಡುವುದಲ್ಲ, ಸಾಧನಾಸಿದ್ಧಿಗೇ ಇಳಿಸಿಕೊಳ್ಳಲು ಸಂಕಲ್ಪಿಸಿದೆವು. ಎಲ್ಲೆಲ್ಲಿನದೋ ಅನುಬಂಧದಲ್ಲಿ
ಕ್ಯಾಮರಾ ಹೊತ್ತ ಯಜ್ಞ, ಸಾಲಿಗ್ರಾಮದ ವ್ಯಾಪಾರಿ ಮಂಜುನಾಥ ಉಪಾಧ್ಯ, ವಿದ್ಯಾರ್ಥಿ ಸೋದರರಾದ ಸಮೀರ ಮತ್ತು ಶೌರಿರಾವ್ (ಈತ ಇಂದು ನಮ್ಮೊಡನಿಲ್ಲ), ಕಾರ್ಪೊರೇಶನ್ ಬ್ಯಾಂಕರ್ ಮುಕುಂದ ಚಿಪ್ಲೂಣಕರ್, ಗೊಬ್ಬರ ಕಂಪನಿ ಪ್ರತಿನಿಧಿ ಕಿರಣ್ ಕುಲಕರ್ಣಿಗಳ ತಂಡ ಕಟ್ಟಿದೆ. ಅದೊಂದು (೨೫-೧-೮೦) ಶುಕ್ರವಾರ ರಾತ್ರಿ ಬಸ್ಸಿನಲ್ಲಿ ಬೆಳ್ತಂಗಡಿಗೆ. ಅಲ್ಲಿಂದ ಬಾಡಿಗೆ ಕಾರು ಮಾಡಿ ಕಿಲ್ಲೂರು ಹೊಳೆ ದಂಡೆಗೆ. ನಮಗೆ ಕಾರು ನಿಗದಿಪಡಿಸಿಕೊಟ್ಟಿದ್ದ ಆ ಊರ ಗೆಳೆಯ, ಕೂಡಬೆಟ್ಟಿನ
ವೆಂಕಟ ಸುಬ್ಬರಾಯರ ಮಗ - ರಾಮಕೃಷ್ಣರಾಯರು, ಇಲ್ಲೊಬ್ಬ ದೂತನನ್ನೂ ನಿಲ್ಲಿಸಿದ್ದರು. ಅಪರಾತ್ರಿಯಲ್ಲಿ ಅವರ ಕೃಷಿಮನೆ ಸೇರಿದಾಗ ಸ್ವಾಗತ ಬಯಸಲು ಸ್ವತಃ ಮನೆಯ ಯಜಮಾನರೂ ನಿಂತಿದ್ದದ್ದು ನಮಗೆ ಸಮ್ಮಾನವೇ ಆಯ್ತು. ಮರು ಬೆಳಿಗ್ಗೆಗೆ ನಾವು ಬ್ರೆಡ್ ಒಯ್ದಿದ್ದೆವು. ಆದರೆ ವೆಂಕಟಸುಬ್ಬರಾಯರ ಔದಾರ್ಯ ಬಿಡಲಿಲ್ಲ. ನಾವೇಳುವ ಮೊದಲೇ ಮನೆಯವರು ಸಿದ್ಧರಾಗಿ, ಉಪಾಹಾರ ಕೊಟ್ಟೇ ನಮ್ಮ ಪೂರ್ವ ನಿಶ್ಚಿತ ಸಮಯ - ಆರು ಗಂಟೆಗೆ ತಡವಾಗದಂತೆ ವಿದಾಯ ಹೇಳಿದರು. 

ಹಳ್ಳಿಯ ಕಾಲ್ದಾರಿಗಳಿಗಷ್ಟೇ ರಾಮಕೃಷ್ಣ ರಾಯರ ಸೂಚನೆಗಳನ್ನು ನೆಚ್ಚಿ, ಉಳಿದಂತೆ ನನ್ನ ಎನ್ಸಿಸಿ ದಿನಗಳ ‘ನಕ್ಷೆಯಿಂದ ಭೂಮಿಗೆ’ (ಮ್ಯಾಪ್ ಟು ಗ್ರೌಂಡ್) ಜ್ಞಾನವನ್ನು ಒರೆಗೆ ಹಚ್ಚುವ ಅಂದಾಜು ಮಾಡಿದ್ದೆ. ಶ್ರೇಣಿಯ ಪೂರ್ವಮೈಯಲ್ಲೆಲ್ಲೋ ಆ ಪ್ರಾಕೃತಿಕ ಮಹಾಗೋಡೆ, ನೇರ ತಪ್ಪಲಿನಿಂದ ತೊಡಗಿದಂತೆ ಮೇಲೆ ದುರ್ಗದ ಹಿತ್ತಲಿನವರೆಗೆ, ಓರೆಯಲ್ಲಿ ಒಂದು ಸಂದು ಬಿಟ್ಟದ್ದು ಭೂಪಟದಲ್ಲಿ ಕಾಣುತ್ತಿತ್ತು. ಐತಿಹಾಸಿಕ ಕಾಲದಲ್ಲಿ ಅದರಲ್ಲೇ ಊರಿಂದೂರಿಗೆ ಹೋಗುವವರು, ಕುದುರೆ ಏರಿದ ಭಟರೂ ಸಾಗುತ್ತಿದ್ದರಂತೆ. ಅದನ್ನು ಈಗಲೂ ಜಾನುವಾರು ಮೇಯಿಸುವವರು, ವನೋತ್ಪತ್ತಿ ಸಂಗ್ರಾಹಕರು ಬಳಸುವುದರಿಂದ ಸವಕಲು ಜಾಡಿಗೆ ಕೊರತೆಯಾಗದು ಎಂದೂ ಕೇಳಿದ್ದೆ. ಹಳ್ಳಿ ಜಾಡು ಬಿಟ್ಟು ಬೆಟ್ಟದ ತಪ್ಪಲಿನತ್ತ ನಡೆದಿದ್ದ ನಮಗೆ ಬೆಳಕು ಹರಿಯುತ್ತಿದ್ದಂತೆ ಆಗೀಗ ಕಾಡಿನ ಮುಚ್ಚಿಗೆ ಹರಿದಲ್ಲಿ ಪ್ರಾಕೃತಿಕ ಗೋಡೆ ಏನೋ ಕಾಣಿಸುತ್ತಿತ್ತು. ಆದರೆ ಸ್ಪಷ್ಟ ಜಾಡು, ಮಹಾಸೀಳು ಗುರುತಿಸುವಲ್ಲಿ ಪೂರ್ಣ ಯಶಸ್ಸು ಸಿಕ್ಕಲಿಲ್ಲ. ಚಾರ್ಮಾಡಿಯ ರಸ್ತೆ ಮತ್ತು ಸಂಚಾರ ಸೌಕರ್ಯಗಳು ಇಲ್ಲಿನ ಜಾಡನ್ನು ಪೂರ್ಣ ಅಲಕ್ಷ್ಯಕ್ಕೊಳಪಡಿಸಿದೆ. ಶ್ರೇಣಿಯ ಪೂರ್ವಗೋಡೆಮೈ ಬಂದಾಗ, ತುಸು ಉತ್ತರ ಮುಖಿಗಳಾದಂತೆ ನೇರ ಏರುತ್ತ ಹೋದೆವು. ಗಟ್ಟಿ ಹುಲ್ಲ ಬುಡಗಳು, ವಿರಳ ಕುರುಚಲು ಪೊದರುಗಳು, ವನ್ಯ ಜಾನುವಾರುಗಳು (ಕಾಟಿ, ಕಡವೆ ಇತ್ಯಾದಿ) ಓಡಾಡಿದ ಜಾಡುಗಳು ನಮಗೆ ದೃಢ ಹೆಜ್ಜೆ ಒದಗಿಸುವುದರೊಡನೆ, ಮುಂದುವರಿಯಲು ಹುಂಬ ಧೈರ್ಯ ತುಂಬುತ್ತಲೇ ಇದ್ದವು. ಇಲ್ಲಿ ನಾವು ‘ಒಬ್ಬನನ್ನೊಬ್ಬ ಹಿಂಬಾಲಿಸಿದ್ದು’ ಎನ್ನುವುದಕ್ಕಿಂತ ‘ಒಬ್ಬನಿಂದ ಇನ್ನೊಬ್ಬ ಸುಮಾರು ಭುಜದ ಎತ್ತರದಲ್ಲಿ’ ಎನ್ನುವಂತೆ ಹತ್ತುತ್ತಿದ್ದೆವು. ಏರುವ ಶ್ರಮಕ್ಕೆ ಬಿಸಿಲಿನ ಝಳ ಸೇರಿಕೊಂಡಿತ್ತು. ನೀರ ಸೆಲೆ, ಧಾರೆ ಎಲ್ಲೂ ಸಿಗಲಿಲ್ಲ. ಮುಂದಾಲೋಚನೆಯಲ್ಲಿ ನಾವು ಹೊತ್ತೊಯ್ದ ನೀರನ್ನು ಬಹಳ ಎಚ್ಚರದಲ್ಲಿ ಬಳಸತೊಡಗಿದ್ದೆವು. ಗಂಟೆಗಟ್ಟಳೆ ಪ್ರಯತ್ನದ ಮೇಲೂ ಮಧ್ಯಾಹ್ನದ ಬುತ್ತಿಯೂಟದ ಸಮಯಕ್ಕೂ ಎಲ್ಲ ಒಟ್ಟು ಕುಳಿತುಕೊಳ್ಳುವಷ್ಟು ಮಟ್ಟ ನೆಲ ಸಿಗಲೇ ಇಲ್ಲ. ಎಲ್ಲರು ಇದ್ದಲ್ಲೇ ಒಂದೊಂದು ಗಟ್ಟಿ ಹುಲ್ಲಬುಡಗಳನ್ನು ನೆಚ್ಚಿ ಕುಳಿತು ಬುತ್ತಿ ಮುಗಿಸಿ, ಹೆಚ್ಚು ವಿಶ್ರಮಿಸದೆ, ಏರಿಕೆ ಮುಂದುವರಿಸಿದ್ದೆವು. 

ಸುಮಾರು ಮೂವತ್ತೊಂಬತ್ತು ವರ್ಷಗಳ ಹಿಂದಿನ ಆ ಕರಕಷ್ಟವನ್ನು, ಸುಮಾರು ಹನ್ನೆರಡು ಗಂಟೆಗಳ ಸಾಹಸವನ್ನು ಇಂದು ಪೂರ್ಣ ವಿವರಗಳಲ್ಲಿ ನಾನು ನೆನಪಿಸಿಕೊಳ್ಳಲಾರೆ. ಅಪರಾಹ್ನದಲ್ಲಿ ಬೆಟ್ಟದ ಮೈ ಸೂರ್ಯನ ಹೊಡೆತವನ್ನು ಬೇಗ ಮರೆಮಾಡಿತ್ತು. ಆದರೆ ಏರಲು ಬಾಕಿಯುಳಿದ ಎತ್ತರವನ್ನು ನಮಗೆ ಅಂದಾಜಿಸುವುದು ಆಗಲಿಲ್ಲ. ಹಾಗೆಂದು ರಾತ್ರಿಯನ್ನು ಅದೇ ಮೈಯಲ್ಲಿ ಕಳೆಯುವಂತಾಗುವುದು ಯಾರಿಗೂ ಬೇಕಿರಲಿಲ್ಲ. ಸಹಜವಾಗಿ ನಮ್ಮಲ್ಲಿ ಚುರುಕಿನವರು ಆಗೀಗ ಕೂಗಿನ ಸಂಪರ್ಕ ಉಳಿಸಿಕೊಂಡು, ಮುಂದಾದರು. ತೀರಾ ಬಳಲಿದ ಯಜ್ಞರನ್ನು ಪ್ರೋತ್ಸಾಹಿಸುತ್ತ ನಾನು ಹಿಂದುಳಿದೆ. ಹೇಗೋ ಸೂರ್ಯ ಕಂತುವ ವೇಳೆಗೆ, ಅತಿಬಳಲಿಕೆಯೊಡನೆ, ತಂಡ ಸ್ಪಷ್ಟವಾಗಿ ಶ್ರೇಣಿಯ ನೆತ್ತಿಯನ್ನು ಮೆಟ್ಟಿತ್ತು. ಐತಿಹಾಸಿಕ ಜಾಡನುಸರಿಸಿದ್ದರೆ, ಶಿಖರ ನಮ್ಮಿಂದ ದಕ್ಷಿಣಕ್ಕೆ ಕಾಣಿಸಬೇಕಿತ್ತು. ಈಗ ಅದು, ಅಂದರೆ ಕೋಟೆಯ ಅವಶೇಷಗಳನ್ನು ಹೊತ್ತ ಸಣ್ಣ ದಿಬ್ಬ - ಉತ್ತರಕ್ಕೆ ನೂರಿನ್ನೂರು ಮೀಟರ್ ಅಂತರದಲ್ಲಿ, ಸಂಜೆಗೆಂಪಿನಲ್ಲಿ ಮಿಂದು ನಿಂದಿತ್ತು! 

ಸಂಜೆಗಾಳಿಯಲ್ಲಿ ನಿರಂತರ ಅಲೆಯಾಟ ನಡೆಸುತ್ತಿದ್ದ ಆಳೆತ್ತರದ ಹುಲ್ಲಿನ ಕಡಲು. ನಮ್ಮ ಕೆಲವು ‘ಮುಂದಾಳುಗಳು’ ಅದನ್ನಾಗಲೇ ಈಸಿ, ಕೋಟೆಯ ಮೋಟುಗೋಡೆಗಳ ಮೇಲೆ ನಮ್ಮ ವಿಜಯ ಪತಾಕೆಗಳೇ ಆಗಿದ್ದರು. ರಮ್ಯ ಚಿತ್ರಗಳೆಲ್ಲ ಸೋಮಾರಿ ಕುಳಿತವರಿಗೆ ಸರಿ. ಆದರೆ ಅದುವರೆಗೆ ಎರಡೆರಡು ದೀರ್ಘ ಉಸಿರಿಗೆ, ಒಂದೊಂದೇ ಭಾರದ ಹೆಜ್ಜೆ ಇಟ್ಟು, ವಿರಳ ಹುಲ್ಲಿನ ಗುತ್ತಿಗಳೇ ಪರಮ ಗತಿ ಎಂಬಂತೆ ಜಗ್ಗುತ್ತ ಮೇಲೇರಿದವರಿಗೆ, ಇಲ್ಲಿ ಸಮನೆಲದೊಡನೆ ಹೊಸದೇ ಸಮಸ್ಯೆ ಶುರುವಾಗಿತ್ತು. ದಟ್ಟ ಹುಲ್ಲನ್ನು ಬಗೆದು, ಮುರಿದು, ಹೆಜ್ಜೆ ಖಚಿತ ಪಡಿಸಿಕೊಳ್ಳುತ್ತ ಸಾಗಬೇಕು. ದಿಕ್ಕು ನಿಚ್ಚಳವಿದ್ದುದರಿಂದ, ಅದುವರೆಗೆ ಪರಸ್ಪರ ಸಹಾಯಕ್ಕೊದಗುತ್ತ ನಿಧಾನಿಗಳಾಗಿದ್ದವರೆಲ್ಲ ಅವರವರ ಸಹಜ ನಡೆಗೆ ಮರಳಿದ್ದೆವು. ಸ್ವತಂತ್ರವಾಗಿ ಜಾಡು ಮೂಡಿಸಿಕೊಳ್ಳುತ್ತ, ಕೋಟೆಯೆಡೆಗೆ ಪಾದ ಬೆಳೆಸಿದ್ದೆವು. ಹಾಗೇ ಯಜ್ಞ - ಭುಜದಲ್ಲಿ ಹಿಂದೆಳೆವ ಹೊರೆ, ಕತ್ತಿನಲ್ಲಿ ಮುಂದೆ ಜಗ್ಗುವ ಕ್ಯಾಮರಾ, ಈ ಬಗಲಲ್ಲಿ ಓಲಾಡುವ ಕಿರು ಸಂಚಿ, ಇನ್ನೊಂದರಲ್ಲಿ ನೀರಂಡೆ, ಎಲ್ಲ ಸಂಭಾಳಿಸಿಕೊಂಡು, ದುರ್ಬಲವಾಗಿ ದಾರಿ ಬಿಡಿಸಿಕೊಳ್ಳುತ್ತ, ತೊನೆದಾಡುತ್ತ ಮುಂದುವರಿದಿದ್ದರು. ಒಮ್ಮೆಲೇ ದಿಬ್ಬದ ಮೇಲಿನ ಸಮೀರ ಬೊಬ್ಬೆ ಕೇಳಿತು "ಯಜ್ಞಾ, ಕಾಟಿ ಕಾಟೀ". ಯಜ್ಞರಲ್ಲಿ ಕುರಿತು ನೋಡುವ, ರಕ್ಷಣೆಗೋಡುವ ಚೈತನ್ಯ ಉಳಿದಿರಲಿಲ್ಲ. ಆದರೆ ಚಿತ್ರಗ್ರಾಹಿಯ ಪ್ರಜ್ಞೆ ಅಳಿದಿರಲಿಲ್ಲ. ಗಕ್ಕನೆ ನಿಂತು, ಕ್ಯಾಮರಾ ಎತ್ತಿ, ಹತ್ತಡಿ ಮುಂದೆ, ಗೇಟ್ ಬಳಿ ನಿಂತು ರೈಲೋಟ ಕಂಡಂತೆ, ಅಡ್ಡಕ್ಕೋಡಿದ ಕಾಟಿಗೊಂದು ಕ್ಲಿಕ್ ಮಾಡಿಯೇಬಿಟ್ಟರು. ಅಂದು ನಮಗೆ ಕಾಟಿ ಮುಖಾಮುಖಿಯಲ್ಲಿ, ಯಜ್ಞರ ಜೀವ ಉಳಿದ ಅದೃಷ್ಟವಷ್ಟೇ ಕಂಡಿತ್ತು. ಆದರೆ ಇಂದು, ಆ ಕಾಟಿ, ಸಾಮಾನ್ಯವಾಗಿ ಎಲ್ಲ ವನ್ಯಜೀವಿಗಳಂತೆ, ಮನುಷ್ಯನಿಂದ ದೂರಕ್ಕೋಡುವುದನ್ನಷ್ಟೇ ಬಯಸಿತ್ತು ಎಂದು ತಿಳಿದಿದೆ. ಜತೆಗೇ ಕ್ಯಾಮರಾದಲ್ಲಿ ದೌಡಾಯಿಸುವ ಕಾಟಿಯ ಮಿಂಚು ಸಿಕ್ಕ ಅದೃಷ್ಟವನ್ನೂ ಹೊಗಳಬಹುದು! 

ಕೋಟೆ ದಿಬ್ಬದ ಮೇಲೆ ಎಲ್ಲ ಸೇರುವಾಗ, ಮುಸ್ಸಂಜೆಯ ಮಸುಕೂ ಕತ್ತಲೆಗೆ ಜಾರುವ ಹಂತದಲ್ಲಿತ್ತು. ಭೂಪಟದಲ್ಲಿ ಮೊದಲೇ ಕೋಟೆಯ ಇನ್ನೊಂದು ಮಗ್ಗುಲಿನಲ್ಲಿ, ಸುಮಾರು ನೂರಿನ್ನೂರು ಮೀಟರಾಚೆ, ದಟ್ಟ ಮರಗಳಿದ್ದ ಪುಟ್ಟ ಕಣಿವೆ ಗುರುತಿಸಿಕೊಂಡಿದ್ದೆವು. ಅದರ ಮಡಿಲಿನಲ್ಲೇ ನಮೂದು ಪಡೆದಿದ್ದ ಪುಟ್ಟ ತೊರೆ ನಮ್ಮ ಆಶಾದೀಪ. ಚೀಲದೊಳಗಿನ ಟಾರ್ಚ್ ತೆಗೆದು, ಹುಲ್ಲು ಕಲ್ಲುಗಳ ನಡುವೆ ಎಚ್ಚರದ ತೂರಾಟ ನಡೆಸುತ್ತ ಹೋದೆವು. ನಿರೀಕ್ಷೆ ಹುಸಿಯಾಗಲಿಲ್ಲ. ಗೊಸರಿನಲ್ಲಿ ಜಿನುಗಿ, ತುಸು ಈಚೆ ಸಣ್ಣದಾಗಿ ಮಡುಗಟ್ಟಿ, ಮತ್ತೂ ಕೆಳಗೆ ಕಲಕಲಿಸುತ್ತಿದ್ದ ತೊರೆಯಿತ್ತು. ಆ ಕಾಲದಲ್ಲಿ ಬೇಸಗೆಯ ಏರು ದಿನಗಳಲ್ಲಿ (ಮಾರ್ಚ್ - ಮೇ) ಹಳ್ಳಿಗರು ತಮ್ಮ ಕರಾವಿಗಿಲ್ಲದ ಜಾನುವಾರುಗಳನ್ನೆಲ್ಲ ಕೆಲವೇ ದನಗಾಹಿಗಳ ಜತೆಗೆ ಒಟ್ಟೈಸಿ, ಇಂಥ ಬೆಟ್ಟಗಳಿಗೆ ಅಟ್ಟುವುದಿತ್ತು. ಗೋಪಾಲರು ಹಗಲೆಲ್ಲ ಮಂದೆ ಮೇಯಿಸಿ, ಕತ್ತಲಿಗೆ ಇಂಥ ನೀರತಾಣಗಳಲ್ಲಿ ಒಟ್ಟಾಗುತ್ತಿದ್ದರು. ಹುಲಿ ಚಿರತೆಗಳ ಅಪಾಯ ನಿವಾರಣೆಗೆ ಸುತ್ತ ಮುಳ್ಳುಪೊದರುಗಳ ಒಟ್ಟಣೆ ಹಾಕಿ, ನಡುವೆ ತುಸು ನೆಲ ಹಸನು ಮಾಡಿಕೊಂಡು ಬಿಡಾರ ಹೂಡುತ್ತಿದ್ದರು. (ಇಂದು - ೨೦೧೮, ಈ ವಲಯ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಶಿಸ್ತಿಗೊಳಪಟ್ಟು ಮೇಯಿಸುವಿಕೆ, ಮನುಷ್ಯ ವಾಸ್ತವ್ಯ ನಿಷೇಧವಿದೆ). ನಾವು ಕತ್ತಲಲ್ಲಿ ತುಸು ಪರಡಿದರೂ ಹಿಂದೆಂದೋ ಗೋವಳಿಗರು ಮಾಡಿದ ತಟ್ಟು ಸಿಕ್ಕಿ, ಸುಲಭದಲ್ಲಿ ಶಿಬಿರ ಹೂಡಿದೆವು. ಸುತ್ತ ಬೇಲಿಯ ಅವಶೇಷವೇನೂ ಇರಲಿಲ್ಲವಾದರೂ ಹಸನಾದ ನೆಲ, ಧಾರಾಳ ನೀರು, ಎಷ್ಟೂ ಸೌದೆ ನಮ್ಮ ವಾಸವನ್ನು ಸುಖಕರ ಮಾಡಿತ್ತು. ಅದಕ್ಕೂ ಮಿಕ್ಕ ವಿವರಗಳು - ಊಟ, ತಿಂಡಿ, ನಿದ್ರೆ, ಪಹರೆ ಇತ್ಯಾದಿ ಇಂದು ನನ್ನ ಯಾವ ನೆನಪಿನಲ್ಲೂ ಉಳಿದಿಲ್ಲ. 

ಮರು ಬೆಳಿಗ್ಗೆ ಕೋಟೆಗೆ ಮತ್ತೊಮ್ಮೆ ‘ಲಗ್ಗೆ ಹಾಕಿ’ ಹಿಂದಿನ ದಿನ ಅವಸರದಲ್ಲಿ ಕಾಣದ ವಿವರಗಳೇನಾದರೂ ಇದೆಯೇ ಎಂದು ಅರಸಿದೆವು. ಸುಮಾರು ಐವತ್ತು ಅಡಿ ಉದ್ದಗಲದ (ಚೌಕ), ಮೂರು ನಾಲ್ಕಡಿ ಎತ್ತರಕ್ಕೆ ಕೆತ್ತಿದ ಕರಿಕಲ್ಲು ಕಟ್ಟಿದ ಪೌಳಿಯಿದ್ದಂತಿತ್ತು. ಒಂದು ಮೂಲೆಯಲ್ಲೆಲ್ಲೋ ಹತ್ತಿಪ್ಪತ್ತಡಿ ಉದ್ದದ, ಸುಮಾರು ಎಂಟಿಂಚು ವ್ಯಾಸದ ಉಕ್ಕಿನ ಕಂಬವೊಂದೂ ಅಡ್ಡ ಮಲಗಿತ್ತು. ಉಳಿದಂತೆ ಆವರಣದ ಒಳಗೂ ಹೊರಗೂ ದಟ್ಟ ಹುಲ್ಲಿನದೇ ಸಾಮ್ರಾಜ್ಯ. ಹಿಂದೆಯೇ ಹೇಳಿದಂತೆ ಕೋಟೆಯ ಉತ್ತರಕ್ಕೆ ಸುಮಾರು ಒಂದು ಕಿಮೀ ಅಂತರದಲ್ಲಿ, ನಕ್ಷೆ ಸೂಚಿಸಿದ ನಿಜ ಕಾಲ್ದಾರಿಯ ಪ್ರವೇಶವನ್ನೂ ಕಣ್ಣಂದಾಜಿನಲ್ಲೇ ಸ್ಪಷ್ಟವಾಗಿ ಗುರುತಿಸಿಕೊಂಡದ್ದೂ ಆಯ್ತು. 

ಹನ್ನೆರಡನೇ ಶತಮಾನದಲ್ಲಿ ಈ ವಲಯದಲ್ಲಿ ಆಳಿದ ವೀರ ಬಲ್ಲಾಳ, ಇನ್ನೂ ಮುಖ್ಯವಾಗಿ ಆತನ ಹೆಂಡತಿಯ ಸಾಧನೆಯಂತೆ ಈ ಗಿರಿದುರ್ಗ. ಟಿಪ್ಪೂ ಸುಲ್ತಾನನ ಇತಿಹಾಸವೂ ಇದರಲ್ಲಿ ಹಾಸುಹೊಕ್ಕಾಗಿದೆ. ಆದರೆ ಅವೆಲ್ಲವನ್ನೂ ಜೀರ್ಣಿಸಿಕೊಂಡು, ಇಂದು ಮತ್ತೆ ವಿಜೃಂಭಿಸಿರುವುದು ಪ್ರಕೃತಿ. ನಾವು ಶಿಖರದಿಂದ ಮರಳಲು ಬೇರೊಂದೇ ಯೋಜನೆ ಹಾಕಿಕೊಂಡಿದ್ದೆವು. ಆ ಪ್ರಕಾರ ಶಿಖರವಲಯದ ದಕ್ಷಿಣ ಅಂಚಿನ ಬಂಡಾಜೆ ಅಬ್ಬಿ ನೋಡಬೇಕು. ಅನಂತರ ಅದರ ಒತ್ತಿನಲ್ಲಿ ಇದೆಯೆಂದು ಕೇಳಿದ್ದ ಸವಕಲು ಜಾಡು ಹಿಡಿದು, ತಪ್ಪಲಿನ ವಳಂಬ್ರಕ್ಕಿಳಿದು ಚಾರಣ ಮುಗಿಸಬೇಕು. ಇಷ್ಟನ್ನು ಕತ್ತಲಾಗುವ ಮುನ್ನ ಪೂರೈಸಿದರೆ ಮತ್ತೆ ಅಪರಾತ್ರಿಯಾದರೂ ಸರಿ, ಮಂಗಳೂರಿಗೆ ಏನಾದರೂ ವಾಹನ ಸಿಕ್ಕೀತೆಂಬ ವಿಶ್ವಾಸದಲ್ಲೇ ಕೋಟೆಬಿಟ್ಟೆವು. 

ನಕ್ಷಾ ಓದಿನಂತಾದರೆ, ಬಂಡಾಜೆ ಅಬ್ಬಿಗೆ ನಾವು ತುಸು ಒಳಮೈಯ್ಯ ಹುಲ್ಲರಾಶಿಯ ನಡುವೆ ಜಾಡು ಮೂಡಿಸಬೇಕಿತ್ತು. ಅಲ್ಲಿದ್ದಿರಬಹುದಾದ ಹಳೆಯ ಜಾಡಿನ ಅರಿವು ನಮಗಿರಲಿಲ್ಲ. ಹಿಂದಿನ ದಿನದ ಬಳಲಿಕೆಯೂ ಇದ್ದುದರಿಂದ ಹೊಸದಾಗಿ ಜಾಡು ಮೂಡಿಸುವ ಕೆಲಸ ವಿಪರೀತದ್ದು ಎಂದೇ ಅನ್ನಿಸಿತು. ಬದಲು ಪ್ರಪಾತದಂಚಿನ ಶಿಖರವಲಯ ಅನುಸರಿಸಿದೆವು. ಅಲ್ಲಿ ಹುಲ್ಲು ವಿರಳ ಮತ್ತು ತೀರಾ ತೆಳು. ಮಳೆಗಾಲದಲ್ಲಿ ಕರಾವಳಿಯತ್ತಣಿಂದ ಹುಚ್ಚೇರಿ ಬರುವ ಗಾಳಿ ಮಳೆಗಳ ತೀವ್ರತೆಯಲ್ಲಿ ಅದು ಬಹುತೇಕ ಪುಡಿಕಲ್ಲುಗಳನ್ನೇ ಬಿಗಿಯಾಗಿ ಗಿಡಿದಂಥ ನೆಲ. ಸಾಲದ್ದಕ್ಕೆ ನಮಗೆ ದಿಡುಪೆ, ಬೆಳ್ತಂಗಡಿ ವಲಯದ ಕೊಳ್ಳದ ದೃಶ್ಯ ಸೂರೆಗೊಳ್ಳುವ ದಿವ್ಯ ಅವಕಾಶ. ಸಾಕಷ್ಟು ಚುರುಕಾಗಿಯೇ ನಾವು ದಕ್ಷಿಣ ಕೊನೆ ತಲಪಿದೆವು. ಇನ್ನು ಶ್ರೇಣಿಯೊಡನೆ ಪೂರ್ವಕ್ಕೆ ತಿರುಗಿ ಸಾಗುವುದೆಂದಾಗ ಕಾಣಿಸಿತು ಹೊಸ ಸಮಸ್ಯೆ. 

ನಕ್ಷೆಯಲ್ಲಿ ಕೋಟೆಯ ಆಸುಪಾಸಿನಲ್ಲೇ ಉದ್ಭವಿಸಿ, ನಮ್ಮ ಎಡಕ್ಕೆ ಅನತಿ ದೂರದಲ್ಲಿ ಹರಿದು ಬಂದಿತ್ತೊಂದು ಪುಟ್ಟ ತೊರೆ. ಅದು ಬಹುಶಃ ಮಳೆಗಾಲದಲ್ಲಿ ‘ಮೈದಾನ ಶಿಖರ’ದ ಬಹ್ವಂಶ ನೀರಿಗೆ ಪಾತ್ರೆಯಾಗುವುದಕ್ಕಿರಬೇಕು, ಈ ಕೊನೆಯಲ್ಲಿ ಭಾರೀ ಕೊರಕಲನ್ನೇ ಸೃಷ್ಟಿಸಿ, ಬಂಡಾಜೆ ಅಬ್ಬಿಯದೇ ಕೊಳ್ಳಕ್ಕೆ ಹಾರಿತ್ತು. ಕೊರಕಲಿನಲ್ಲಿ ಭಾರೀ ಮರಗಿಡಬಳ್ಳಿಗಳ ಬಿಗಿ ಹೆಣಿಗೆಯಷ್ಟೇ ಕಾಣಿಸಿತು. ಆಳ, ನೀರಿನ ಮೊತ್ತದ ಅಂದಾಜು ಸಿಗಲಿಲ್ಲ. ಕಡಿದಾದ ಕೊರಕಲಿನ ಅನೂಹ್ಯ ಆಳಕ್ಕೆ, ಹಸಿರ ಬಿಗಿಕೋಟೆ ಹರಿದು , ಇಳಿದು, ತಳ ಮುಟ್ಟಿ, ಮತ್ತಷ್ಟೇ ಕಷ್ಟದಲ್ಲಿ ಎದುರು ದಂಡೆಯನ್ನೇರುವ ತಾಕತ್ತೂ ಸಮಯವೂ ನಮ್ಮಲ್ಲಿ ಉಳಿದಿರಲಿಲ್ಲ. ಬಂಡಾಜೆ ಅಬ್ಬಿಯ ಯೋಚನೆ ಬಿಟ್ಟು, ನೇರ ಇಳಿಯೋಣವೆಂದರೆ ಅದೂ ಭಯ ಹುಟ್ಟಿಸುವಂತೇ ಇತ್ತು. ಇವೆಲ್ಲಕ್ಕೆ ಸೇರಿದಂತೆ ಸುಮಾರು ಅದೇ ವೇಳೆಗೆ ಎಲ್ಲೋ ತಪ್ಪಡಿಯಿಟ್ಟು ನಾನು ಕಣಕಾಲು ಉಳುಕಿಸಿಕೊಂಡೆ. ಹಾಗಾಗಿ ಹೊಸದಾರಿ ಹುಡುಕುವ ಪ್ರಯತ್ನವನ್ನು ಕೈಬಿಟ್ಟೆವು. 

ಬಂದಂತೆ ಪ್ರಪಾತದಂಚಿನಲ್ಲೇ ಮೊದಲು ಕೋಟೆಯಂಚಿಗೆ ಮರಳಿದೆವು. ಮತ್ತೆ ಬೆಳಿಗ್ಗೆ ದೂರದಿಂದಲೇ ಗುರುತಿಸಿದ್ದ ಇಳಿ ಜಾಡಿನವರೆಗೂ ಮುಂದುವರಿದೆವು. ಆ ಕೊರಕಲಿನ ಜಾಡು ಕಾಲನ ಪರೀಕ್ಷೆಯಲ್ಲಿ ಸವಕಳಿ, ಸಣ್ಣ ಪುಟ್ಟ ಕುಸಿತ, ಹುಲ್ಲು ಗಿಡ ಬೆಳೆದು, ಬೆಂಕಿಬಿದ್ದು, ನಡೆವವರ ಸಣ್ಣಪುಟ್ಟ ಅನಾಚಾರಗಳನ್ನು ಸಹಿಸಿದ್ದಿರಬೇಕು. ಆದರೂ ಹಿಂದಿನ ದಿನ ಹತ್ತಿ ಬಂದ ಜಾಡಿಗೆ ಹೋಲಿಸಿಕೊಂಡು ಬಹಳ ಸುಲಭವಾಗಿ, ಸಂತೋಷದಿಂದ ಇಳಿದಿಳಿದು ದಿಡುಪೆ ಬಳಿ ಎಲ್ಲೋ ಹಳ್ಳಿದಾರಿ ಮುಟ್ಟಿದ್ದೆವು. ಆ ಕಾಲದಲ್ಲೇ ನಮ್ಮೀ ಅವಿಭಜಿತ ದಕ ಜಿಲ್ಲೆಯೊಳಗೆ, ಬಾಡಿಗೆ ಕಾರಿನವರು ನಿರ್ದಿಷ್ಟ ದಾರಿಗಳಲ್ಲಿ (ಇಂದಿನ ಓಲಾ ಕಾರುಗಳಲ್ಲಿ ಕೇಳಿಬರುವಂತೆ) ಕಾರ್ ಶೇರಿಂಗ್ ನಡೆಸುತ್ತಿದ್ದರು. ಎಲ್ಲೂ ಹತ್ತಿ ಎಲ್ಲೂ ಇಳಿದು, ಪಯಣಿಸಿದ ಅಂತರಕ್ಕೆ ಮಾತ್ರ ಚಾಲಕ ಹೇಳಿದ ಚಿಲ್ಲರೆ ಕಾಸು ಕೊಟ್ಟರಾಯ್ತು. ದರ ಬಸ್ಸಿನದ್ದಕ್ಕಿಂತ ತುಸು ಹೆಚ್ಚು. ಇವುಗಳಲ್ಲಿ ಪುತ್ತೂರು, ಮಂಗಳೂರು, ಉಡುಪಿಯಂಥ ಮುಖ್ಯ ಊರುಗಳ ನಡುವೆ ಪ್ರಯಾಣಿಕ ಸಂಖ್ಯೆ, ಬಹುತೇಕ ಐದು ಆರನ್ನು ಮೀರುತ್ತಿರಲಿಲ್ಲ. ಆದರೆ ಗ್ರಾಮಾಂತರ ದಾರಿಗಳಲ್ಲಿ ಮಾತ್ರ ಈ ಕಾರುಗಳೊಳಗಿನ ಜನಸಂಖ್ಯೆ ಅಮಿತ! ಹಿಂದೆ ಇಲ್ಲೇ ಸಮೀಪದ ಕಿಲ್ಲೂರಿನಿಂದ ಬೆಳ್ತಂಗಡಿಗೆ ಕಾರು ಹಿಡಿದಾಗ ".... ನಾವೆಂಟು ಜನ ನಮ್ಮದೇ ಹೊಗೆ, ಮೂರುದಿನಗಳ ಕೊಳೆಯೊಡನೆ ಇತರ ಹದಿನಾಲ್ಕು ಹಳ್ಳಿಗರ ಬೆವರು, ಜಿಡ್ಡು, ಹೆಂಡವೇ ಮೊದಲಾದ ವಿವಿಧ ಪರಿಮಳಗಳೊಡನೆ ಕಾರಿನೊಳಗೆ ಬೆಸೆದುಕೊಂಡ ಚಂದ ವಿವರಿಸುವಲ್ಲಿ ನನ್ನ ಪದಗಳು ಸೋಲುತ್ತವೆ....." (ನೋಡಿ: ಹಿರಿಮದುದುಪ್ಪೆಯೆಂದು ಕಾಡುಪಾಲಾದವರು) ಹಾಗೇ ಈ ಬಾರಿಯೂ ಸಿಕ್ಕ ಕಾರೊಂದರಲ್ಲಿ ನಾವೇಳು ಸೇರಿ ಬೆಳ್ತಂಗಡಿ ಮತ್ತೆ ಸಿಕ್ಕ ಬಸ್ಸಿನಲ್ಲಿ ಮಂಗಳೂರೇನೂ ಸಮಸ್ಯೆಯಾಗಲಿಲ್ಲ. ಆದರೆ ದುರ್ಗದ ಮೇಲೆ ಸಾಧಿಸಿದ ವಿಜಯಕ್ಕಿಂತ, ಅಬ್ಬಿಯ ಇಳುಕಲಿನಲ್ಲಿ ಅನುಭವಿಸಿದ ಸೋಲು, ಮುಂದಿನ ಶೋಧಕ್ಕೆ ಪ್ರೇರಕವಾಗಿ ನನ್ನೊಳಗೇ ಬಲಗೊಳ್ಳುತ್ತಿತ್ತು. 

(ಮುಂದುವರಿಯಲಿದೆ)

7 comments:

 1. ಇನ್ನೊಮ್ಮೆ ಹೋಗಿ ಬರುವ.

  ReplyDelete
 2. Replies
  1. ಮುಂದಿನ ಕಂತುಗಳಲ್ಲಿ ಅದಕ್ಕೂ ಅವಕಾಶ ಮಾಡಿಕೊಳ್ಳಬಹುದು, ನೋಡಿ :-)

   Delete
 3. ಓದುವಾಗಲೇ ಅಲ್ಲಿದ್ದ ಅಪಾಯ ಕಣ್ಣೇದುರಿಗೆ ಬಂದಂತಾಯಿತು. ಸಾಹಸದ ಹಳೆನೆನಪು ರುಚಿ ಚಾಸ್ತಿ. ಯಜ್ಞ ರ ಸಮಯಪ್ರಜ್ಞೆ ಅಲ್ಲೂ ಮೆರೆದಿತ್ತಲ್ಲವೇ.

  ReplyDelete
 4. ತುಂಬ ದಿನಗಳ ನಂತರ ಆರೋಹಣದ ಬಗ್ಗೆ ಓದುತ್ತಿದ್ದೇನೆ.. ಬೇಗ ಮುಗಿಸಬೇಡಿ.. ನೆನಪು ಮಾಡಿ ನಿಧಾನಕ್ಕೆ ಊಊದ್ದಕೆ ಬರೆಯಿರಿ ��

  ReplyDelete
 5. ಐದು ರೂಪಾಯಿ ಖರ್ಚಿನಲ್ಲಿ ಚಾರಣ....ಆಸಕ್ತಿದಾಯಕ ಓದಿಗೆ ವಂದನೆಗಳು

  ReplyDelete
 6. ಪುನಃ ಪುನಃ ಓದಲು ಖುಶಿಯಾಗ್ತಿದೆ.ನಮಸ್ಕಾರಗಳು.

  ReplyDelete