06 July 2018

ಮೊರಿಜಿರಿ ಮತ್ತು ಹಯಾಚಿನ್ ಟಕೆ ಕಗುರ

ಶನಿವಾರ (೭-೭-೧೮) ಸಂಜೆ ನಾಲ್ಕಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ‘ಮೊರಿಜಿರಿ ಸಮ್ಮಾನ’ 


ಹಯಾಚಿನ್ ಟಕೆ ಕಗುರ - ಜಪಾನೀ ಆರಾಧನಾ ನೃತ್ಯ, ಇದರ ಒಂದು ತಂಡ (ಸುಮಾರು ಹದಿನೈದು ಮಂದಿ), ಈ ವಲಯದಲ್ಲಿ ಸುಮಾರು ಮೂರು ವರ್ಷಗಳ ಹಿಂದೆ, ಅದೇ ಪ್ರಥಮವಾಗಿ ನಮ್ಮ ವಲಯದಲ್ಲಿ ತಿರುಗಾಟ ನಡೆಸಲು ಏಕೈಕ ಕಾರಣ ಜಪಾನೀ ಪ್ರೊ| ಸುಮಿಯೋ ಮೊರಿಜಿರಿ.
ಸುಮಾರು ಎರಡೂವರೆ ದಶಕಗಳ ಹಿಂದೆ ಕೇರಳದ ಜನಪದ ಕಲೆಗಳ ಅಧ್ಯಯನಕ್ಕೆಂದು ಭಾರತಕ್ಕೆ ಬಂದಿದ್ದರಂತೆ ಈ ವಾಮನಮೂರ್ತಿ ಮೂರ್ತಿ. ಆದರೆ ಅವರೊಳಗಿನ ತ್ರಿವಿಕ್ರಮ ನಮ್ಮ ವಲಯದ ಯಕ್ಷಗಾನ, ಭೂತಾರಾಧನೆಗಳತ್ತ ಹೆಜ್ಜೆಗಳನ್ನಿಟ್ಟದ್ದು, ಇಲ್ಲಿನ ಯಕ್ಷಗಾನ ತಂಡವನ್ನು ಜಪಾನಿಗೆ ಕರೆಸಿಕೊಂಡದ್ದು, ಅಲ್ಲಿನ ಅಸಂಖ್ಯ ವಿದ್ಯಾರ್ಥಿಗಳನ್ನು ಇಂದಿಗೂ ಪ್ರೇರಿಸುತ್ತಿರುವುದು, ಆ ಕುರಿತು ಜಪಾನೀ ಭಾಷೆಯಲ್ಲಿ ಉದ್ಗ್ರಂಥಗಳಿಗೆ ಕಾರಣರಾದದ್ದು, ವೈಯಕ್ತಿಕವಾಗಿ ನನ್ನ ಅಂಗಡಿಯ ಪುಸ್ತಕಗಳಿಗೆ ದೊಡ್ಡ

 
ಗಿರಾಕಿಯೂ ಆಗಿದ್ದದ್ದು ಹೇಳುತ್ತಾ ಹೋದರೆ ಮುಗಿಯದ ಕಥೆ ಮತ್ತು ನನ್ನ ತಿಳುವಳಿಕೆಯ ಕೊರತೆಯಷ್ಟೇ ಬಿತ್ತರವಾದೀತು. ಅವರ ಯಕ್ಷಗಾನ ಅಧ್ಯಯನದ ಚಟುವಟಿಕೆಗಳಿಗೆ ಬಹಳ ದೊಡ್ಡದಾಗಿ ಒದಗಿದ ಸಂಸ್ಥೆ ಕೋಟೆಕಾರಿನ ಕಲಾಗಂಗೋತ್ರಿ, ಮತ್ತು ವ್ಯಕ್ತಿ ಕೆ. ಸದಾಶಿವ (ಮಾಸ್ಟ್ರು) ಎನ್ನುವುದು ಅತಿಶಯೋಕ್ತಿಯಲ್ಲ. ಅದರ ಪರೋಕ್ಷ ಋಣ ಸಂದಾಯಿಸುವಂತೆ ಮೊರಿಜಿರಿಯವರು ಈಚೆಗೆ ಕಲಾಗಂಗೋತ್ರಿಯ ತಾರಸಿಗೊಂದು ಪುಟ್ಟ ಸಭಾಭವನವನ್ನೇ ದಾನವಾಗಿತ್ತರು. ರಾಮಚಂದ್ರ ಉಚ್ಚಿಲ,
ಅಮೃತ ಸೋಮೇಶ್ವರಾದಿ ವಿದ್ವಾಂಸರು ನಿರ್ಮಮವಾಗಿ ಕಟ್ಟಿ, ಪೋಷಿಸಿದ ಕಲಾಗಂಗೋತ್ರಿಯ ಪರಂಪರೆಗೆ ಚೂರೂ ಕೊರತೆ ಬಾರದಂತೆ ಈಚಿನ ಹಲವು ವರ್ಷಗಳ ಜೀವನಾಡಿಯೇ ಆಗಿರುವ ಸದಾಶಿವ ಮಾಸ್ಟರರಿಗಾದರೂ ಇದು ಅಪ್ಯಾಯಮಾನವಾದ ಸಮ್ಮಾನವೇ. ಇದಕ್ಕೊಂದು ಸಣ್ಣ ಪ್ರತಿಕ್ರಿಯೆಯಂತೆ ಕಲಾಗಂಗೋತ್ರಿ ಇದೇ ಶನಿವಾರ (೭-೭-೧೮) ಸಂಜೆ ನಾಲ್ಕಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ‘ಮೊರಿಜಿರಿ ಸಮ್ಮಾನ’ ಹಮ್ಮಿಕೊಂಡಿದೆ. ಆ ನೆಪದಲ್ಲಿ ೨೦೧೪ರ ಕಗುರಾ ಕಲಾಪದ
ಕುರಿತು ನಾನು ಸಣ್ಣದಾಗಿ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದ ಬರಹ, ಚಿತ್ರಗಳನ್ನು ಇಲ್ಲಿ ಮತ್ತೆ ಹಂಚಿಕೊಳ್ಳುತ್ತಿದ್ದೇನೆ.
ಸುಮಿಯೋ ಮೊರಿಜಿರಿಯವರ ತಂಡ ೧೮-೧೧-೧೪ರ ಬೆಳಗ್ಗೆ ನಿಟ್ಟೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು ಒಂದೂವರೆ ಗಂಟೆಯ ಪ್ರದರ್ಶನ ಕೊಟ್ಟಿತು. ಅಂದೇ ಸಂಜೆ ಧರ್ಮಸ್ಥಳದಲ್ಲೂ ಮತ್ತೊಂದೆರಡು ದಿನಗಳಲ್ಲಿ ಮೂಡಬಿದ್ರೆಯೂ ಸೇರಿ ಕೆಲವು ಸ್ಥಳಗಳಲ್ಲೂ
ಪ್ರದರ್ಶನಗಳಿದ್ದವು; ಕ್ಷಮಿಸಿ, ವಿವರ ನನ್ನಲ್ಲಿಲ್ಲ. ಮೊರಿಜಿರಿಯವರು ಮಂಗಳೂರು ವಿಶ್ವವಿದ್ಯಾನಿಲಯದ ದೀರ್ಘ ಕಾಲೀನ ಸಂದರ್ಶನ ಪ್ರಾಧ್ಯಾಪಕರೂ ಹೌದು. ಇಲ್ಲಿನ ಯಕ್ಷಗಾನ, ಭೂತನೃತ್ಯವೇ ಮೊದಲಾದ ಜನಪದ ನೃತ್ಯಪ್ರಕಾರಗಳನ್ನು ಸಮಾನ ಜಪಾನೀ ಕಲೆಗಳಿಗೆ ಅನ್ವಯಿಸಿದ ಅಧ್ಯಯನ ಇವರ ಮುಖ್ಯ ಆಸಕ್ತಿ. ಕಗುರ ಪ್ರಧಾನವಾಗಿ ಆರಾಧನಾ ಕಲೆ. ಹಯಾಚಿನ್ ಎಂಬ ಪರ್ವತ ದೇವತೆಯನ್ನು ಕಪ್ಪು ಸಿಂಹದ ರೂಪದ
ಮೂರ್ತಿಯಲ್ಲಿ ಆರೋಪಿಸಿಕೊಂಡು ನೃತ್ಯಾರಾಧನೆ ನಡೆಸುವುದು ಇದರ ಕ್ರಮ.
ನಮ್ಮ ಯಕ್ಷಗಾನದ ತೀರಾ ತೆಳು ಸಾಮ್ಯ – ಬಹುಶಃ ಜಗತ್ತಿನ ಯಾವುದೇ ಜನಪದ ಕಲಾಪಗಳಲ್ಲೂ ಕಾಣಬಹುದಾದಂತೆ ಕಗುರಾದಲ್ಲೂ ಗುರುತಿಸಬಹುದು ಅಷ್ಟೆ. ಉದಾಹರಣೆಗೆ – ತೆರೆಮರೆಯ ಕುಣಿತ, ಮೇಳದ ದೇವರು ಇತ್ಯಾದಿ. ಉಳಿದಂತೆ ಇದರಲ್ಲಿ ವಾಚಿಕ, ಮುಖವರ್ಣಿಕೆ,
ಆಭರಣಗಳು ಇಲ್ಲ. ಭಾರೀ ಹೆಜ್ಜೆಗಾರಿಕೆ (ಕಾಲ್ಗೆಜ್ಜೆಯೂ ಇಲ್ಲ) ಅಥವಾ ಆಂಗಿಕವೂ ಹೇಳುವಂತದ್ದಿಲ್ಲ. 
ಮೊರಿಜಿರಿಯವರು ಹೇಳಿದಂತೆ, ಇರುವ ಸುಮಾರು ಎಪ್ಪತ್ತು ವಿಧದ ಕಲಾಪಗಳಲ್ಲಿ (ಪ್ರಸಂಗ ಅಥವಾ ಕಥೆ ಇದ್ದಂತಿಲ್ಲ) ಐದನ್ನಷ್ಟೇ ಇಲ್ಲಿ ಪ್ರದರ್ಶಿಸಿದ್ದರು. ಅವುಗಳಲ್ಲಿ ಒಂದು, ಎರಡು, ನಾಲ್ಕು ಜನ ಭಾಗವಹಿಸಿದ ಪ್ರಕಾರಗಳಿದ್ದವು. ಕೊನೆಯ ನೈವೇದ್ಯ ಕೊಟ್ಟಂಥ ಭಾಗವನ್ನುಳಿದು ಎಲ್ಲೂ
ಪಾತ್ರಿಗಳು ಪರಸ್ಪರ ಸಂಪರ್ಕ, ಸವಾಲು ಜವಾಬಿನಂಥ ಚಟುವಟಿಕೆಗಳನ್ನು ಪ್ರದರ್ಶಿಸಲಿಲ್ಲ. 
ಮುಖವಾಡ ಇವರ ತೊಡವುಗಳಲ್ಲಿ ಮುಖ್ಯ ಪಾತ್ರವನ್ನು ವಹಿಸುವುದರಿಂದಲೋ ಏನೋ ಅದಿಲ್ಲದ ಭಾಗಗಳಲ್ಲೂ ಮುಖ ಭಾವ ಗಾಂಭೀರ್ಯವನ್ನು ಮಾತ್ರ ಪ್ರದರ್ಶಿಸುತ್ತದೆ. ಹೆಚ್ಚು ಕಡಿಮೆ ಉದ್ದಕ್ಕೂ ಅಶರೀರ ಕೊಳಲುಗಾನ, ಕೆಲವೊಮ್ಮೆ ಮಂತ್ರದಂತೆ (ಏನೋ ಸಾಹಿತ್ಯ ಸಹಿತ)
ಆಲಾಪವೂ ಬರುತ್ತಿತ್ತು. ಉಳಿದಂತೆ ಒಂದು ಪಕ್ಕದಲ್ಲಿ ಕುಳಿತ ಢೋಲು, ಎರಡು ಚಕ್ರತಾಳಗಳು ಎಲ್ಲ ಕಲಾಪಗಳ ಲಯ ನಿರ್ಧರಿಸುತ್ತವೆ. ಮುಖವರ್ಣಿಕೆ, ಆಭರಣಗಳು ನಾಸ್ತಿ. 
ಈ ಆರಾಧನಾ ಕಲೆ ಉನ್ನತ ಬೆಟ್ಟಗಾಡಿನ (ಸುಮಾರು ಎರಡು ಸಾವಿರ ಮೀಟರ್), ಕೃಷಿ ಹಾಗೂ ಗ್ರಾಮೀಣ ವೃತ್ತಿಪರರ ಉತ್ಪನ್ನ. ಹಾಗಾಗಿ ಪರೋಕ್ಷವಾಗಿ ಇದು ಪ್ರಕೃತಿಯಾರಾಧನೆಯೂ ಆಗಿದೆ ಮತ್ತು ಭಾರತೀಯ
ಸಂದರ್ಭದಲ್ಲಿ ಶ್ರೀಕೃಷ್ಣನ ಗೋವರ್ಧನಗಿರಿಯ ಆರಾಧನೆಗೆ ಸಾಮ್ಯವನ್ನೂ ಸಾಧಿಸುತ್ತದೆ. 
ಕಗುರಕ್ಕೆ ಕನಿಷ್ಠ ಎಂಟ್ನೂರು ವರ್ಷಗಳ ಇತಿಹಾಸವಿದೆಯಂತೆ. ಅಲ್ಲಿನ ಹವಾಮಾನದ ಪ್ರಭಾವದಿಂದಲೋ (ಚಳಿ) ಏನೋ ಭಾರೀ ಬಟ್ಟೆಯ ಹೊರೆ ಅದರಲ್ಲೂ ಹೆಚ್ಚಾಗಿ ವಿಪರೀತ ಸಡಿಲವಾದ ತೊಡುಗೆಗಳೇ ಇರುವುದರಿಂದ ದೈಹಿಕ ವಿನ್ಯಾಸಗಳೂ (ವಿಶೇಷ ಇದ್ದಂತಿಲ್ಲ)
ನಮಗೆ ಅಗ್ರಾಹ್ಯವಾಗುತ್ತವೆ. 
ವಿಭಿನ್ನ ಮುಖವಾಡಗಳು, ಪ್ರಧಾನವಾಗಿ ಕೋಳಿಯ ಬಿಂಬವೇ ಇರುವ ಶಿರೋಭೂಷಣ, ಬೀಸಣಿಗೆ, ಬಿಲ್ಲು, ಕತ್ತಿ, ಪುಟ್ಟ ಮಂತ್ರದಂಡದಂಥ ಕೋಲು ಇತ್ಯಾದಿ ಒಂದರಿಂದೊಂದಕ್ಕೆ ಬದಲುತ್ತ ಒಮ್ಮೆಗೆ ಅವಶ್ಯ ಯಾರ ಕುತೂಹಲವನ್ನೂ ಅವಶ್ಯ ಕೆರಳಿಸುವಂತಿದೆ ಹಯಾಚಿನ್ ಕಗುರ.

No comments:

Post a Comment