16 November 2017

ಗೋವಿಂದಾಯ ನಮಃ

[ನನ್ನ ಹಿರಿಯ ಸೋದರಮಾವ - ಎ.ಪಿ. ತಿಮ್ಮಪ್ಪಯ್ಯ ತೀರಿಹೋದಂದು, ಗೋವಿಂದ (ಈಚೆಗೆ ತೀರಿಹೋದ ಎರಡನೆಯ ಸೋದರ ಮಾವ - ಹಾಡು ಮುಗಿಸಿದ ಗೋವಿಂದ) ಎಂದಿನ ತುಂಟ ನಗುವಿನೊಡನೆ "ಮುಂದಿನ ಸರದಿ ನನ್ನದು" ಎಂದದ್ದು ಮಾರ್ಮಿಕವಾಗಿತ್ತು! ನನ್ನ ತಿಳುವಳಿಕೆಯಂತೆ, ಆಗಲೇ (ಎರಡು ವರ್ಷದ ಹಿಂದೆ) ಗೋವಿಂದನ ಧ್ವನಿ ಸ್ಪಷ್ಟವಾಗಿ ತಿಳಿಯದ ಕಾರಣಕ್ಕೆ ಕುಸಿದಾಗಿತ್ತು. ಅದು ಮುಂದೆ ಬಿಗಡಾಯಿಸಿದ್ದು, ಉಸಿರಾಟಕ್ಕೂ ವ್ಯಾಪಿಸಿದ್ದು, ಮತ್ತೆ ಗುರುತಕ್ಕೆ ಸಿಕ್ಕಿ (ಅರ್ಬುದ) ಶಸ್ತ್ರಚಿಕಿತ್ಸೆಗೆ ಒಳಪಟ್ಟದ್ದು, ಗೋವಿಂದನನ್ನು ಅಕ್ಷರಶಃ ಮೂಕನನ್ನಾಗಿಸಿದ್ದು, ಕೊನೆಗೆ ಇಲ್ಲವಾಗುವಂತೆ ಮಾಡಿದ್ದೆಲ್ಲ ಈಗ ಕೇವಲ ಶೋಕ ಚರಿತ್ರೆ. ಗೋವಿಂದನ ಆತ್ಮೀಯ ಬಳಗ ದೊಡ್ಡದು. ಅವರಲ್ಲಿ ಹೇಳಿ ಮುಗಿಯದಷ್ಟು, ಅಕ್ಷರಕ್ಕಿಳಿಸಲಾಗದಂಥ ವೈವಿಧ್ಯಮಯ ಗೋವಿಂದ ಒಡನಾಟಗಳು ಚಿರನೆನಪಾಗಿ ಉಳಿದೇ ಇರುತ್ತವೆ. ಮಗ ರಾಧಾಕೃಷ್ಣ ಪಿತೃಸ್ಮರಣೆಯನ್ನು - ಚೇತನದ ಚೇತನ, ಅಪ್ಪ ಇನ್ನಿಲ್ಲ ಎಂದು ಬರೆದದ್ದನ್ನೂ ನೀವೀಗಾಗಲೇ ಓದಿರಬಹುದು. ಈಚೆಗೆ, ಅಂದರೆ ಗೋವಿಂದ ದೇಹತ್ಯಾಗದ ಹದಿಮೂರನೇ ದಿನದ ಕಲಾಪದ ಕೊನೆಗೆ, ಚೇತನ ಮನೆಯ ಸಣ್ಣ ಆತ್ಮೀಯರ ಕೂಟದಲ್ಲಿ ಮತ್ತೆ ಮೂರು ಮಂದಿ - ಅಣ್ಣನ ಮಗಳು ನಳಿನಿ, ತಮ್ಮ ಗೌರೀ ಶಂಕರ, ಮತ್ತು ಭಾವ (ಮಾಲತಿಯ ತಮ್ಮ) ಸುಬ್ರಾಯ, ಬಾಯ್ದೆರೆ ಸ್ಮರಿಸಿಕೊಂಡರು. ಅವರಲ್ಲಿ ನಳಿನಿ ಮತ್ತು ಗೌರೀಶಂಕರ ತಮ್ಮ ಮಾತುಗಳನ್ನು ಬರೆದೇ ಕೊಟ್ಟದ್ದನ್ನು ಈಗ ಎರಡು ಕಂತುಗಳಲ್ಲಿ ಪ್ರಕಟಿಸುತ್ತಿದ್ದೇನೆ, ನಿಮ್ಮ ಭಾವಕೋಶಕ್ಕೆ ಸೇರಿಸಿಕೊಳ್ಳಿ. ಈ ವಾರ ಮೊದಲನೇದು....]


ಅಳಿಯದ ಅಪ್ಪಚ್ಚಿ
- ನಳಿನಿ ಮಾಯ್ಲಂಕೋಡಿ

ಮರಿಕೆ ಸೋದರರಲ್ಲಿ ನನ್ನಪ್ಪ - ಎ.ಪಿ. ತಿಮ್ಮಪ್ಪಯ್ಯ, ದೊಡ್ಡವರು. ಸಹಜವಾಗಿ ಮರಿಕೆ ಬಯಲಿನ ವಿಸ್ತಾರ ಜಮೀನಿನ ಮೂಲ ಮನೆಯಲ್ಲಿ ನಮ್ಮ ಕುಟುಂಬವೂ ಅಜ್ಜ ಸಕಾಲಕ್ಕೆ ಸರ್ವಸಮ್ಮತವಾಗಿ ಮಾಡಿಕೊಟ್ಟ ಪಾಲಿನಲ್ಲಿ, ಉಳಿದ ಮೂವರು ಚಿಕ್ಕಪ್ಪಂದಿರ ಕುಟುಂಬವೂ ಸ್ವತಂತ್ರ ಮನೆ ಕಟ್ಟಿಕೊಂಡು, ಪ್ರಧಾನವಾಗಿ ಕೃಷಿ ಚೆನ್ನಾಗಿಯೇ ನಡೆಸಿಕೊಂಡಿದ್ದಾರೆ. ನಾಲ್ಕೂ ಮನೆಗಳಿಗೆ ಸಾರ್ವಜನಿಕ ರಸ್ತೆಯಿಂದ ಸ್ವತಂತ್ರ ರಸ್ತೆ ಸಂಪರ್ಕವಿದ್ದರೂ ಒಳಗಿಂದೊಳಗೆ ಕೂಡುಕುಟುಂಬದ ಪ್ರೀತಿಯಂತೇ ಅಸಂಖ್ಯ ಸಂಪರ್ಕ ಜಾಡುಗಳು ಉಳಿಸಿಕೊಂಡೇ ಇದ್ದವು. ಹಾಗಾಗಿ ನನ್ನ ಬಾಲ್ಯವನ್ನು ನೆನಪಿಸಿಕೊಂಡಾಗೆಲ್ಲ ಬರುವ ಬಹುಮುಖ್ಯ ನೆನಪು – ಸಂಜೆಯಾದೊಡನೆ ನಮ್ಮ ತೋಟ ಹಾಯ್ದು, ದನದ ಕೊಟ್ಟಿಗೆ ಕಳೆದು, ಮೊದಲು ರಾಮನಾಥಪ್ಪಚ್ಚಿಯ (ಕೊನೆಯವರು) ತೋಟದಂಚು ಮೆಟ್ಟಿ, ಕೊನೆಯಲ್ಲಿ ಗೋವಿಂದಪ್ಪಚ್ಚಿಯ (ಸೋದರರಲ್ಲಿ ಎರಡನೆಯವರು)  ತೋಟದ ಅಡ್ಡಕ್ಕೆ ಓಡಿಯೇ ಮನೆ - ‘ಚೇತನ’, ಸೇರಿಕೊಳ್ಳುತ್ತಿದ್ದೆ. (ನಮ್ಮ ಎ.ಪಿ. ಕುಟುಂಬ, ಕೊಡಗು ಮೂಲದ್ದಾಗಿ ಮನೆ ಮಾತು ಕನ್ನಡ. ಆದರೆ ಇಲ್ಲಿನ ವೈವಾಹಿಕ ಸಂಬಂಧಗಳು ಬಹುತೇಕ ದಕ ಮೂಲದವೇ ಆದ್ದರಿಂದ ಎಷ್ಟೋ ಸಂಬಂಧವಾಚಕಗಳು, ನುಡಿಗಳು ಹವ್ಯಕದವು ಸಹಜವಾಗಿ ಸೇರಿಕೊಂಡಿವೆ. ಹಾಗೆ - ಅಪ್ಪಚ್ಚಿ, ಅಂದರೆ ಚಿಕ್ಕಪ್ಪ.) ಕೆಲವೊಮ್ಮೆ ಅಮ್ಮ ಗೊಣಗುವುದಿತ್ತು “ನಿನ್ನ ಹೊಕ್ಕುಳು ಬಳ್ಳಿ ಅಲ್ಲೇ ಹೂತಿದೆ". ಈ ಚಿಕ್ಕಪ್ಪ ಎ ಪಿ ಗೋವಿಂದ ಭಟ್ , ಮಕ್ಕಳೆಲ್ಲರ ಪ್ರೀತಿಯ ಗೋವಿಂದಪ್ಪಚ್ಚಿ ಮನೆ ನನಗೆ
ಇನ್ನೊಂದು ತವರು ಮನೆಯೇ. ಮದುವೆಯಾಗಿ ತವರನ್ನು ಬಿಡುವವರೆಗೆ ಅಲ್ಲಿಗೆ ‘ಸಂಜೆಯ ಭೇಟಿ’ ತಪ್ಪಿದ್ದಿಲ್ಲ ಎನ್ನಬಹುದು. ಚಡ್ಡಿ ದೋಸ್ತ್ ರಾಧಣ್ಣ (ಎ.ಪಿ. ರಾಧಾಕೃಷ್ಣ), ಗೆಳತಿ ತಂಗಿ ಲಲಿತಾ ಜೊತೆ ಆಟ - ಹರಟೆ, ಚಿಕ್ಕಮ್ಮನ (ಎ.ಪಿ. ಮಾಲತಿ) ಮಮತೆಯ ಊಟ, ಗೋವಿಂದಪ್ಪಚ್ಚಿಯ ರಮ್ಯ ಮಾತು-ಕತೆ. ಆಗೊಮ್ಮೆ ಈಗೊಮ್ಮೆ ರಾತ್ರೆ ಅಲ್ಲೇ ಉಳಿಯುವುದು ವಿಶೇಷ ಆಕರ್ಷಣೆ.

"ಅಮಾವಾಸ್ಯೆಯ ಕತ್ತಲಲ್ಲಿ ಕಾಡಿನಲ್ಲಿ ಹಾದಿ ತಪ್ಪಿ ಭಯಗೊಂಡವನಿಗೆ ದಾರಿ ತೋರುವ ಅಪರಿಚಿತ. ದೂರದಲ್ಲಿ ಬೆಳಗುವ ಮನೆ ಕಂಡು, ಮದುವೆಯ ಮನೆ ಬಂತೆಂದೇ ಮಂದಹಾಸ ಬೀರುವಷ್ಟರಲ್ಲಿ (ಕಂಪನ ಕಂಠದ ಉಲಿತ) ‘ಮಸಣದ ಮನೆ’ ಎಂದು ಹಿಂದೆ ಯಾರೋ ಹೇಳಿದ್ದೂ ಸಣ್ಣಕ್ಕೆ ನಕ್ಕದ್ದೂ ಕೇಳಿತು. ತಿರುಗಿ ನೋಡಿದರೆ ಯಾರೂ ಇಲ್ಲ. ಮುಂದೆ ಸಾಗಿ ನಿರ್ಜನವಾದ ಆ ಮನೆಯ ಒಳಹೊಕ್ಕರೆ ಕೇಳಿ ಬರುತ್ತದೆ ‘ಒಡಂ.....ಭರಣೆ...” ನಮಗೆಲ್ಲ (ಮಕ್ಕಳು) ಹೊಟ್ಟೆಯೊಳಗಿಂದ ಎದ್ದು ಬರುತ್ತಿತ್ತು ಭಯ ತರಂಗ, ಜತೆಗೇ ರೋಮನಿಮಿರಿಸುವ ಕುತೂಹಲ! ಇದು ನಮ್ಮ ಚಿಕ್ಕಪ್ಪ ಹೇಳುವ ಭೂತದ ಕತೆಯ ಒಂದು ಮಾದರಿ.

ವಿಶಾಲವಾದ ಕೋಣೆಯಲ್ಲಿ ಒತ್ತೊತ್ತಾಗಿ ಹಾಸಿಗೆ ಹಾಕಿ, ಮಕ್ಕಳ ಮಧ್ಯೆ ಮಲಗುತ್ತಿದ್ದರು ಗೋವಿಂದಪ್ಪಚ್ಚಿ. ಅವರ ತಲೆ ಬಾಚಿ, ಕೈ ಕಾಲು ಒತ್ತಿ, ಕೆರೆದು ಸೇವೆ ಶುರುವಾದರೆ ಕತೆ ಶುರು. ಕತೆಯಲ್ಲಿ ಮೈಮರೆತು, ಭೂತಕ್ಕೆ ಬೆಚ್ಚಿ, ನಮ್ಮ ಸೇವೆ ನಿಂತರೆ ಭೂತವೂ ಮೌನ! ಕುತೂಹಲವನ್ನೂ ಭಯವನ್ನೂ ಮೆಟ್ಟಿ ನಿದ್ದೆ ನಮ್ಮೆಲ್ಲರನ್ನು ತಟ್ಟುವವರೆಗೂ ಮುಂದುವರಿಯುತ್ತಿತ್ತು ಕತೆ. ನಾವು ‘ಒಡಂ ...ಭರಣೆ’ ಕತೆಯ ಕೊನೆ ಕೇಳಿದ್ದೇ ಇಲ್ಲ!! ಆ ಕತೆಗಳು ನೀಡಿದ ರೋಚಕತೆ ಇನ್ನಾವ ಪತ್ತೇದಾರಿ ಕತೆಯಲ್ಲಿ, horror ಫಿಲಂಗಳಲ್ಲಾಗಲೀ ಇಲ್ಲ. ನಮ್ಮ ಲೆಕ್ಕದಲ್ಲಿ ‘ಒಡಂ...ಭರಣೆ’ಗೆ ಸಮಭಾವದ ಪದ, ಕತೆ ಹುಟ್ಟಲೇ ಇಲ್ಲ.

ಮಕ್ಕಳ ಜೊತೆ ಹಾಸ್ಯ ಕೀಟಲೆ ಮಾಡಿ ಅವರ ಆಟಪಾಟಗಳಲ್ಲಿ ಆಸಕ್ತಿ ತೋರಿ ಗೋವಿಂದಪ್ಪಚ್ಚಿ ನಮಗೆ ಆಪ್ತರು. ಅವರ ಮನೆಯಲ್ಲಿ ನಮಗೆ ಸ್ವಾತಂತ್ರ್ಯ ಜಾಸ್ತಿ. ಅಲ್ಲಿನ ಕ್ಷೀರದೂತ (= ಪುತ್ತೂರು ಪೇಟೆಗೆ ಹಾಲು ಸಾಗಿಸಲು ಇದ್ದ) ಸೈಕಲ್ ಲಗಾಡಿ ತೆಗೆದೇ ನಾನು ಸೈಕಲ್ ಕಲಿತದ್ದು. ನಮ್ಮ ಲಗೋರಿ ಆಟದ ಗದ್ದಲದಲ್ಲಿ, ಕೆಸರು ಚೆಂಡು ಬಿಳಿ ಸುಣ್ಣದ ಗೋಡೆಗೆ ಮೊಹರು ಹೊಡೆದರೂ ಆಗೀಗ ಕಿಟಿಕಿ ಗಾಜು ಒಡೆದರೂ, ಜೇನು ಪೆಟ್ಟಿಗೆಗೆ ಕಡ್ಡಿ ತೂರಿ ಹುಳ ಹಾರಿಸಿದರೂ ಅಡುಗಾಟದ ತರಾತುರಿಯಲ್ಲಿ ಅಟ್ಟದ ಸಾಮಾನು ದಡಬಡಿಸಿದರೂ ಚಿಕ್ಕಪ್ಪ ಕೋಪಗೊಂಡುದಿಲ್ಲ, ಚಿಕ್ಕಮ್ಮ ಬೇಸರಿಸಿದ್ದೂ ಇಲ್ಲ. ನಮಗೇನಾದರೂ ಅಲ್ಪ ಸ್ವಲ್ಪ ಅಪರಾಧಿಭಾವ ಮೂಡಿದರೆ ಗೋವಿಂದಪ್ಪಚ್ಚಿ “ಮುಸುಡು ಮಲ್ಲಿಗೆ ಮಾಡಿಬಿಡುತ್ತೇನೆ“ ಅಂತಂದು ನಗಿಸಿಬಿಡುತ್ತಿದ್ದ.

ತೋಟ, ಹಟ್ಟಿ, ತರಕಾರಿ, ಅಕ್ಕಿ ಗಿರಣಿ (ಅನ್ನಬ್ರಹ್ಮ?) – ಎಲ್ಲಾ ಕೆಲಸಗಳ ಜೊತೆ ಸಾಹಿತ್ಯ, ಸಂಗೀತ, ರಾಜಕೀಯ, ಆಧ್ಯಾತ್ಮ ಎಷ್ಟೊಂದು ವಿಷಯಗಳಲ್ಲಿ ಆಸಕ್ತಿ, ಅಧ್ಯಯನ, ವಿಮರ್ಶೆ. ಬಂಧುಗಳು ಸೇರಿದಾಗ ನಡೆಯುತ್ತಿದ್ದ ಚರ್ಚೆಗಳಲ್ಲಂತೂ ಅಪ್ಪಚ್ಚಿಯ ಉತ್ಸಾಹ ಮೇರೆ ಮೀರುತ್ತಿತ್ತು. ಆದರೆ ಹಾಗೇ ಚರ್ಚೆ ಗಂಭೀರ ಆದಾಗ ಗೋವಿಂದಪ್ಪಚ್ಚಿಯ ಚಟಾಕಿ ಎಲ್ಲರನ್ನೂ ನಗುವಂತೆ ಮಾಡುತ್ತಿತ್ತು.

ಯಕ್ಷಗಾನದ ಹಾಡು ಹಾಡಿ, ತಾಳತಟ್ಟಿ ನಮ್ಮನ್ನು ಕುಣಿಸಿದ ಗೋವಿಂದಪ್ಪಚ್ಚಿ ತಾನೂ ಕುಣಿದು ನಮ್ಮನ್ನು ರಂಜಿಸಿದ್ದಿದೆ. “ದೈವಾಂಶವೊಂದು ಸಂಟ್ಯಾರಿನ ವರಗೋವಿಂದ ಭಟ್ಟನ ಮಗಳಾಗಿ ಜನಿಸಿದೆ” ಎಂಬಂತೆ ಅವರು ರಚಿಸಿದ ಆಶುಕಾವ್ಯ ಅಥವಾ ಯಕ್ಷಗಾನ ಪ್ರಸಂಗ “ಮುಕುಡುಂಬ ಪುರಾಣ” ಬಂಧುಗಳನ್ನೆಲ್ಲಾ ನಗೆಗಡಲಲ್ಲಿ ತೇಲಿಸಿದೆ. ಆದರೆ ಅದರಿಂದ ಹಗುರ ಗೇಲಿಗೊಳಗಾಗುತ್ತಿದ್ದ ಲಲಿತ ಒಮ್ಮೆ ‘ಸೇಲೆ’ಯ ಅಳುವಿನ ನಾಟಕ ಮಾಡಿದರೂ ಪೋಕರಿ ಏನೂ ಕಡಿಮೆಯಾದ್ದು ನಾನು ಕಾಣಲಿಲ್ಲ. ಇಲ್ಲದಿದ್ದರೂ ಯಕ್ಷಗಾನ ಗೋವಿಂದಪ್ಪಚ್ಚಿಯ ಬಹುಪ್ರೀತಿಯ ಕಲಾಮಾಧ್ಯಮಗಳಲ್ಲಿ ಒಂದು. ಕೊನೆಗಾಲದ ನೋವಿನ ದಿನಗಳಲ್ಲೂ ರಾಧಣ್ಣ ಪೆನ್ ಡ್ರೈವಿನಿಂದ ಟೀವಿಯಲ್ಲಿ ಯಕ್ಷಗಾನ ಹಾಕಿಕೊಟ್ಟರೆ ಚಿಕ್ಕಪ್ಪ ಆಸಕ್ತಿಯಿಂದ ನೋಡುತ್ತಿದ್ದರು. ಅದರಲ್ಲೂ ಮ್ಮೆ  ಉತ್ಸಾಹ ಹೆಚ್ಚಿ ಹಗುರಕ್ಕೆ ನಾಲ್ಕು ನಾಟ್ಯ ನಡೆ ಹಾಕಿದ ವಿಡಿಯೋ ತುಣುಕನ್ನು ರಾಧಣ್ಣ (ವಾಟ್ಸಾಪಿನಲ್ಲಿ) ಳಿಸಿದ್ದನ್ನು ಮರೆಯಲಾರೆ.
  
ಚಿಕ್ಕಮ್ಮನ ಬರವಣಿಗೆಗೆ ಪ್ರೋತ್ಸಾಹ ಕೊಟ್ಟು, ಪುಸ್ತಕಗಳ ಮೊದಲ ಓದುಗನಾಗಿ, ಕೊನೆಯಲ್ಲಿ ಪ್ರಶಸ್ತಿಗಳ ಬಗ್ಗೆ ಅಪಾರ ಹೆಮ್ಮೆ ಪಡುತ್ತಿದ್ದರು ಚಿಕ್ಕಪ್ಪ! ಆಕೆಗೆ ಪ್ರಶಸ್ತಿ ಬಂದರೆ, ಸನ್ಮಾನವಾದರೆ ನಮಗೆಲ್ಲಾ ಮೊದಲು ಹೇಳುವವರು ಅವರೇ! ಒಮ್ಮೆ ಚಿಕ್ಕಮ್ಮ ಮುಖ್ಯ ಅತಿಥಿಯಾಗಿದ್ದ ಸಭೆಯಲ್ಲಿ ಚಿಕ್ಕಪ್ಪನ್ನೂ ವೇದಿಕೆಗೆ ಕರೆದಾಗ, "ನಾನು ಸೂಜಿಯೊಡನೆ ಬಂದ ನೂಲು” ಅಂತ ಅಭಿಮಾನದಿಂದ ಹೇಳಿದ್ದರು. ಚಿಕ್ಕಪ್ಪನ ಕೊನೆಯ ದಿನಗಳಲ್ಲಿ ಅವರ ಆರೈಕೆಯನ್ನು ಚಿಕ್ಕಮ್ಮ ಪ್ರಧಾನವಾಗಿ, ಮನೆಯವರೆಲ್ಲ ಬಹಳ ಮುತುವರ್ಜಿಯಿಂದಲೇ ನಡೆಸುತ್ತಿದ್ದರು. (ವೃತ್ತಿಪರ ಗೃಹ-ದಾದಿಯರ ಸೇವೆ ಬಳಸಿದ್ದೇ ಇಲ್ಲ ಎನ್ನುವಷ್ಟು ಕಡಿಮೆ) ಆದರೂ ಕೊನೆಯವರೆಗೆ ತನ್ನ ಕಾಯಿಲೆ, ಶುಶ್ರೂಶೆಯ ನೆಪದಲ್ಲಿ ಮುಖ್ಯವಾಗಿ ಚಿಕ್ಕಮ್ಮ ಮತ್ತು ಮನೆಯವರ್ಯಾರೂ ಯಾವುದೇ ಸಾಹಿತ್ಯಕ ಸಾಮಾಜಿಕ ಕಲಾಪಗಳಿಂದ ದೂರವುಳಿಯದಂತೆ ಕಾಳಜಿವಹಿಸುತ್ತಿದ್ದ ಚಿಕ್ಕಪ್ಪನ ಔದಾರ್ಯ ಅಸಾಮಾನ್ಯ.

"ಅಣ್ಣ ತಮ್ಮಂದಿರು ಮರಿಕೆಯವರ ಹಾಗೆ ಇರಬೇಕು" ಅನ್ನುವಷ್ಟು ನನ್ನಪ್ಪ ಮತ್ತು ಮೂವರು ಚಿಕ್ಕಪ್ಪಂದಿರು ಪರಸ್ಪರ ಮಾತು, ಸ್ನೇಹ, ಸಹಕಾರಗಳಲ್ಲಿ ಅಖಂಡವಾಗಿದ್ದರು. ನನ್ನ ಅಪ್ಪನಿಗೆ ತಮ್ಮಂದಿರ ಮನೆಗೆ ಹೋಗಿ  ಮಾತಾಡಿ  ಬಾರದಿದ್ದರೆ ಸಮಾಧಾನವಿಲ್ಲ. ತಮ್ಮಂದಿರೂ ಅಷ್ಟೇ. ಅಪ್ಪನಿಗೆ ತೋಟ ದಾಟಿ ಹೋಗಲಾಗದಿದ್ದ ಕೊನೆ ದಿನಗಳಲ್ಲಿ ಗೋವಿಂದಪ್ಪಚ್ಚಿ, ರಾಮನಾಥಪ್ಪಚ್ಚಿ ಜೊತೆಗೂಡಿ ದಿನವೂ ಅಣ್ಣನ ಭೇಟಿಗೆ, ಅಣ್ಣ ತೀರಿಕೊಂಡ ಬಳಿಕ ಅತ್ತಿಗೆಯ ಭೇಟಿಗೆ ಹೋಗುತ್ತಿದ್ದುದು ಅಪರೂಪದ ಭ್ರಾತೃಸ್ನೇಹವೇ ಸರಿ! (ಶಂಕರಪ್ಪಚ್ಚಿ ಮಂಗಳೂರಿನಲ್ಲಿದ್ದುದರಿಂದಷ್ಟೇ ಭೇಟಿಗಳಲ್ಲಿ ವಿರಳರಾಗುತ್ತಿದ್ದರು)
[ಶವ ದಹನದ ಸರಳ ವ್ಯವಸ್ಥೆ]
ಮೊಮ್ಮಕ್ಕಳ ಮೇಲೂ  ಗೋವಿಂದಜ್ಜನ ಮೋಡಿ ಇತ್ತು. ಅನುಷ (ಹಿರಿಯ ಮೊಮ್ಮಗಳು) ಹುಟ್ಟಿದ ಕಾಲದಲ್ಲಿ ಸುದ್ದಿ ಮಾಧ್ಯಮಗಳಲ್ಲಿ ವಿಶ್ವಸುಂದರಿ ಹೆಸರಿನಲ್ಲಿ ಸುಶ್ಮಿತಾನೋ ಐಶ್ವರ್ಯನೋ ಪ್ರಚಾರದಲ್ಲಿದ್ದರು. ಆದರೆ ಈ ಅಜ್ಜ ಮಾತ್ರ "ನಮ್ಮ ಮನೆಯಲ್ಲಿದ್ದಾಳೆ ವಿಶ್ವಸುಂದರಿ" ಎಂದು ಸಂಭ್ರಮಿಸಿದ್ದು ನೆನಪಾಗುತ್ತದೆ. (ಇಂದು ಲಲಿತಳ ಮಗ - ಅಪೂರ್ವ, ದೊಡ್ಡವನಾದ ಮೇಲೂ ಗೋವಿಂದಪ್ಪಚ್ಚಿಗೆ ಮಗಳು ಲಲಿತ - ಪುಟ್ಟಿಕೂಸೇ!) ಅದಿರಲಿ, ತೆಂಗಿನತೋಟದಲ್ಲಿ ಇಳಿದು ಬಂದ ದೇವರು ನೀಡಿದ ಕೋಲು – ತನ್ನೆದುರು ನಿಂತ ಮಕ್ಕಳು ಏನು ಪೋಕರಿ ಮಾಡುತ್ತಿದ್ದಾರೆ ಅಂತ ಅಜ್ಜನಿಗೆ ತಿಳಿಸುತ್ತಿತ್ತು. ಮಕ್ಕಳ ಹಸ್ತರೇಖೆ ನೋಡಿದರೆ ಅವರ ಸ್ವಭಾವ, ಅವರು ಏನು ಉದ್ಯೋಗಮಾಡಬಲ್ಲರು  ಎಲ್ಲಾ ಗೊತ್ತಾಗುತ್ತಿತ್ತು. ಗೋವಿಂದಜ್ಜ ಮೂಗಿನ ಮೇಲೆ ಬೆರಳಿಟ್ಟು ಮಕ್ಕಳ ಮುಖ ನೋಡಿದರೆ ಆ ಮಕ್ಕಳ ಸ್ನೇಹಿತರು ಯಾರು, ಟೀಚರ್ ಯಾರು ಎಲ್ಲಾ ತಿಳಿಯುತ್ತಿತ್ತು! ಹಾಗೆ ಮಕ್ಕಳಾಟದ ಮಾತು ಮೀರಿಯೂ ಗೋವಿಂದಪ್ಪಚ್ಚಿಗೆ ಫಲಜ್ಯೋತಿಷ್ಯದಲ್ಲಿ ಅದಮ್ಯ ಕುತೂಹಲ, ಅರೆಬರೆ ಓದು, ಚೂರುಪಾರು ನಂಬಿಕೆ ಇತ್ತು. ಆದರೆ ಗಟ್ಟಿ ಧ್ವನಿಯ ನಾರಾಯಣ ಮಾವ (ಜಿಟಿನಾ) ಮತ್ತೆ ಸ್ವತ ಮಗ - ರಾಧಣ್ಣನೇ ‘ವೈಜ್ಞಾನಿಕ ಮನೋಧರ್ಮ’ ಎಂದು ಘಟ್ಟಿಸಿದ್ದಕ್ಕೋ ಏನೋ ಹೆಚ್ಚು ಮುಂದುವರಿಯಲಿಲ್ಲ.

ಇಷ್ಟೊಂದು ಜೀವನೋತ್ಸಾಹದ ಗೋವಿಂದಪ್ಪಚ್ಚಿ ಎಲ್ಲರ ಪ್ರೀತಿಯ ಚಿಕ್ಕಪ್ಪ, ಮಾವ, ಜ್ಜ, ಭಾವ, ಅಣ್ಣ, ಗೆಳೆಯ ಹಲವರಿಗೆ ಸ್ನೇಹಿತರೂ ಆಗಿದ್ದರು. ಸದಾ ಮುಗುಳ್ನಗುವಿನ ಗೋವಿಂದಪ್ಪಚ್ಚಿಗೆ  ಕಷ್ಟಗಳು, ಖಾಯಿಲೆಗಳು, ನೋವುಗಳು ಬಂದುದು ನಮಗೆ ಹೆಚ್ಚು ಗೊತ್ತಾಗಲೇ ಇಲ್ಲ. ಅವನ್ನೆಲ್ಲ ಹಾಸ್ಯದ ಧಾಟಿಯಲ್ಲಿ ಹೇಳಿ ಹಗುರವಾಗಿಸುತ್ತಿದ್ದರು. ಗಂಟಲಲ್ಲಿ ಅರ್ಬುದವಾಗಿ ಶಸ್ತ್ರ ಚಿಕೆತ್ಸೆಯಾಗಿ ಮಾತು ನಿಂತ ಮೇಲೂ ಗೋವಿಂದಪ್ಪಚ್ಚಿ ಬರೆದು ತೋರಿ, ಕಣ್ಣಲ್ಲಿ, ತುಟಿಯಲ್ಲಿ ಭಾವ ಸೂಸಿ ತನ್ನ
ಉಪಸ್ಥಿತಿಯನ್ನು ಚೈತನ್ಯದಾಯಕವಾಗಿಡುತ್ತಿದ್ದರು. ಅವರನ್ನು ಕಂಡಾಗಲೆಲ್ಲಾ ನಾನು ಅವರ ತಲೆಕೂದಲಲ್ಲಿ ಬೆರಳಾಡಿಸುತ್ತಿದ್ದೆ. [ನಾನೂ (-ಅಶೋಕವರ್ಧನ) ಗೋವಿಂದನನ್ನು ಕಂಡಾಗೆಲ್ಲ ಒಮ್ಮೆ ಹೀಗೆ ಭುಜ, ತೋಳು ಒತ್ತಿ ಮಸಾಜ್ ಮಾಡಿದರೂ...]  ಆಗ ಕಾಣುತ್ತಿದ್ದ ಅವರ ಮಂದಹಾಸದ ಮುಖ, ನನ್ನ ಮನದಲ್ಲಿ ಮುದ್ರೆಯೊತ್ತಿದ ಅತಿಪ್ರೀತಿಯ ಚಿತ್ರ. ನನ್ನ ಗೋವಿಂದಪ್ಪಚ್ಚಿಯ ಸಂಗದಲ್ಲಿದ್ದ ಎಲ್ಲರ ಮನದಲ್ಲೂ ಇಂತಾ ಮುಗುಳ್ನಗೆಯ ಚಿತ್ರ ಅಚ್ಚಾಗಿರುತ್ತದೆ. ಆದ್ದರಿಂದಲೇ ಅಳಿಯದ ಚೇತನಪ್ಪಚ್ಚಿ.


(ಈ ಸರಣಿಯ ಎರಡನೇ ಭಾಗ - ಮುಂದಿನವಾರ, ಎ.ಪಿ. ಗೌರೀಶಂಕರ ಬರೆಯುತ್ತಾರೆ)

2 comments:

  1. This is very nice, I dont have kannada font here at office, One day I will also write Allaka, bellaka, thimmakka!! :-)

    ReplyDelete
  2. ನಳಿನಿ ನನ್ನ ಭಾವ ಗೋವಿಂದ ಇವರ ಬಗ್ಗೆ ಸುಂದರವಾಗಿ ಲೇಖನ ಬರೆದಿದ್ದಾಳೆ. ಅದನ್ನು ಓದುವ ಸಂದರ್ಭ ಒದಗಿಸಿದ್ದಕ್ಕೆ ಧನ್ಯವಾದಗಳು. ಲೇಖನದ ಎರಡನೆ ಕಂತಿಗಾಗಿ ಕಾತರದಿಂದ ಕಾಯುತ್ತಿರುವೆ.

    ReplyDelete