19 June 2017

ನಾಳೆ ಇನ್ನೂ ಇದೆ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ೪೨

ಇನ್ನು ಹೇಳುವುದು ಹೆಚ್ಚೇನೂ ಉಳಿದಿಲ್ಲ. ನಾನು ಆರಂಭಿಸಿದ ಕಥನ ಕೊನೆ ಮುಟ್ಟುತ್ತಾ ಬಂದಿದೆ. ನನ್ನ ಕಥನದ ಮುಖ್ಯ ಉದ್ದೇಶವಿದ್ದುದು, ಬಾಳಿನಲ್ಲಿ ನಾನು ಕಂಡು, ಕೇಳಿದ ಸ್ಮರಣೀಯ ಹಿರಿಯರ ಬಗ್ಗೆ, ಪ್ರೀತಿಪಾತ್ರರ ಬಗ್ಗೆ ತಿಳಿಸಬೇಕೆಂದು ಅನಿಸಿದ್ದನ್ನು ಓದುಗರೊಡನೆ ಹಂಚಿಕೊಳ್ಳುವುದು. ಆಗಾಗ ನನ್ನನ್ನು ಕಾಡಿದ, ಕಾಡುತ್ತಿರುವ ವಿಷಯಗಳ ಬಗ್ಗೆ ತೋಡಿಕೊಳ್ಳುವುದು. ಓದಿ ಪಟ್ಟ ಸಂತೋಷವನ್ನು, ಕಂಡು ಅನುಭವಿಸಿದ ಆನಂದವನ್ನು ಓದುಗರಿಗೆ ದಾಟಿಸುವುದು. ಕಳೆದು ಹೋದ ಹಳೆಯ ದಿನಗಳನ್ನು, ಕಳೆದುಕೊಂಡ ಅನನ್ಯ ಮೌಲ್ಯಗಳನ್ನು ಸ್ಮರಿಸುವುದು.

ಜೀವನಶ್ರದ್ಧೆಗೊಂದು ಭಾಷ್ಯವಾದ ನಮ್ಮಮ್ಮ
ಈಗ ತೊಂಬತ್ತಾರರ ಹರೆಯಕ್ಕೆ ಕಾಲಿರಿಸಿದ್ದಾರೆ. ಅಹರ್ನಿಶಿ ಜೀವನದುದ್ದಕ್ಕೂ ದುಡಿದ ಪರಿಣಾಮವಾಗಿ ಈಗವರ ತೊಡೆಸಂದಿನ ಎಲುಬುಗಳು ಸವೆದು ಹೋಗಿದ್ದು, ನಡೆಯಲು ವಾಕರ್ ಉಪಯೋಗಿಸುತ್ತಿದ್ದಾರೆ. ಒಂದೇ ಊನ ಬಿಟ್ಟರೆ, ಮತ್ತೆಲ್ಲದರಲ್ಲಿ, ಮಾತು, ನೆನಪಿನ ಶಕ್ತಿ ಎಲ್ಲದರಲ್ಲೂ ಸ್ವಸ್ಥರಿದ್ದಾರೆ. ಶಿಸ್ತಿಗೆ ಹೆಸರಾದ ನಮ್ಮಮ್ಮನನ್ನು ಶಿವರಾಮ ಕಾರಂತರೂ ನೆನಪಿಸಿಕೊಂಡ ಬಗ್ಗೆ ಹಿಂದೆಯೇ ಹೇಳಿದ್ದೇನೆ. ಶಿಸ್ತು, ಗದರಿಕೆ ನಮಗೆ ಅಂಕೆಯೇ ಆಗಿತ್ತು. ತಂದೆಯವರ ಮೌನ, ಗಾಂಭೀರ್  ನಮ್ಮನ್ನು ಇನ್ನೂ ಹೆಚ್ಚಿನ ಅಂಕೆಯಲ್ಲಿ ಇರಿಸಿತ್ತು.

ಶೈಶವದಲ್ಲೇ ತಂದೆಯನ್ನು ಕಳಕೊಂಡು, ಬಾಲ್ಯದಲ್ಲಿ ತಾಯನ್ನು ಕಳಕೊಂಡು, ದೊಡ್ಡಪ್ಪ, ಅತ್ತೆಯಂದಿರ ಆಶ್ರಯದಲ್ಲಿ ಬೆಳೆದ ನಮ್ಮಮ್ಮನದು ನೇರ, ನೆಟ್ಟನೆ ನಿಲುವು; ಬೆನ್ನು ಬಾಗಿದ್ದ ತನ್ನ ನಾದಿನಿ, ನಮ್ಮ ಶಾರದತ್ತೆಗೆ, ಸದಾ
ಬೆನ್ನು ನೆಟ್ಟಗೆ ಮಾಡು, ನೆಟ್ಟಗೆ ಮಾಡು,” ಎನ್ನುತ್ತಿದ್ದ ಅಮ್ಮ, ಈಗ ನನ್ನನ್ನು ಎಚ್ಚರಿಸುತ್ತಿರುತ್ತಾರೆ. ಅಮ್ಮನದು ಒಳ್ಳೆಯ ವಿಕ್ಟೋರಿಯನ್ ಇಂಗ್ಲಿಷ್. ಈಗಿನ ಕಡ್ಡಾಯ ವಿರಾಮದ ದಿನಗಳಿಗೆ ಮುನ್ನ, ಅವರೆಂದೂ ಕುಳಿತು ಓದಿದುದನ್ನು ನಾನು ಕಂಡಿಲ್ಲ. ತಂದೆಯವರ ಆಸ್ಥಮಾ ಕಾಯಿಲೆಯಿಂದಾಗಿ ಕೊನೆವರೆಗೂ ಬಿಡುವಿರದ ದುಡಿಮೆ ಅವರದಾಗಿತ್ತು. ಅಮ್ಮ ಇಡೀ ದಿನ ದುಡಿಯುತ್ತಿರುತ್ತಾರಲ್ಲಾ? ಸ್ವಲ್ಪ ಹೊತ್ತು ಸುಮ್ಮನೆ ಓದುತ್ತಾ ಕುಳಿತುಕೊಳ್ಳುವ ಮನಸು ಅವರಿಗಾಗುವುದಿಲ್ಲವೇ ಎಂದು ನಾನು ಅಂದುಕೊಳ್ಳುವುದಿತ್ತು. ಅಡಿಗೆ ಮನೆಯಲ್ಲಿ ಅಮ್ಮನ ಪಾತ್ರೆಗಳು ಲಕ ಲಕ ಹೊಳೆಯುತ್ತಿದ್ದುವು. ಸ್ಟೋರ್ ರೂಮ್ನಲ್ಲಿ ಡಬ್ಬ, ಪಾತ್ರೆಗಳು ಓರಣವಾಗಿ
ಜೋಡಿಸಲ್ಪಟ್ಟಿರುತ್ತಿದ್ದುವು. ಒಗೆದ ಬಟ್ಟೆಗಳು ಬೆಳ್ಳನೆ ಮಡಿಯಾಗಿ ಅಚ್ಚುಕಟ್ಟಾಗಿ ಇಸ್ತ್ರಿ ಮಾಡಿಟ್ಟಂತೆ ಕಪಾಟಿನಲ್ಲಿ ಜೋಡಿಸಲ್ಪಡುತ್ತಿದ್ದುವುಪಾತ್ರೆಗಳಿರಲಿ, ಮಕ್ಕಳಿರಲಿ, ಮನೆಯ ನಾಯಿಗಳಿರಲಿ, ಎಲ್ಲವನ್ನೂ ಅವರು ತಿಕ್ಕಿ ತಿಕ್ಕಿ ತೊಳೆವ ರೀತಿ ಒಂದೇ. ಅಷ್ಟು ಅಚ್ಚುಕಟ್ಟು! ಎಲ್ಲ ಕೆಲಸದ ನಡುವೆ ಶಾಲೆಯಲ್ಲಿ ಶಿಸ್ತಿನ ಮೂರ್ತಿಯಾದ ಸಫಲ ಶಿಕ್ಷಕಿ.

ನಾನು ಅಮ್ಮನಿಗೆ ಹೆದರಿಕೊಳ್ಳುತ್ತಿದ್ದುದೇ ಹೆಚ್ಚು. ಬಾಲ್ಯದಲ್ಲಿ ಒಂದು ರಾತ್ರಿ, ನಾನು ನನ್ನ ಹ್ಯಾಂಡ್ಲ್ನಿಂದ ಅತ್ಯಂತ ಚಂದದಿಂದ ಚಿತ್ತಿಲ್ಲದೆ ಕಾಪಿ ಬರೆದು, ಹೆಮ್ಮೆಯಿಂದ ಅಮ್ಮನಿಗೆ ತೋರಿದ್ದೆ. ದುಡಿದು ದಣಿದಿದ್ದ ಅಮ್ಮ, ನಾನು ಪರ್ಸ್ನಿಂದ ತನ್ನ ಪೈಲಟ್ ಪೆನ್ ತೆಗೆದು ಅದರಿಂದ ಬರೆದುದೆಂದೆಣಿಸಿ ಜರೆದು ಶಿಕ್ಷಿಸಿದ್ದರು. ನನ್ನ ಎಳೆ ಮನಸ್ಸಿಗೆ
ತುಂಬ ನೋವಾಗಿತ್ತು. ಬಾಲ್ಯದಲ್ಲಾದ ಇಂತಹ ಗಾಯಗಳು ಮಾಯುವುದಿಲ್ಲ; ಬರೆಯಾಗಿ ಉಳಿದು ಕೊಳ್ಳುತ್ತವೆ. ಅದೇ ಅಮ್ಮ, ನಾವ್ಯಾರಾದರೂ ಅಸೌಖ್ಯಕ್ಕೊಳಗಾದರೆ, ಆಗ ಸಂಪೂರ್ಣ ನಮ್ಮ ಲಾಲನೆ, ಪಾಲನೆ ಕೈಗೊಳ್ಳುವ ಪ್ರೀತಿಯ ಅಮ್ಮನಾಗುತ್ತಿದ್ದರು.

ಅಮ್ಮನ ಪಾದದಲ್ಲಿ ಉಂಗುರಬೆರಳು ಹಾಗೂ ನಡುಬೆರಳು ಒಂದಕ್ಕೊಂದು ಅಂಟಿಕೊಂಡಿದ್ದುದರಿಂದ ಕಾಲುಂಗುರವಿರಲಿಲ್ಲ. ನಾವು ಮಕ್ಕಳ್ಯಾರೂ ಬಗ್ಗೆ ಕೇಳಿದ್ದಿರಲಿಲ್ಲ. ಆದರೆ ಮೊಮ್ಮಕ್ಕಳಿಗೆ ಕೌತುಕವಾಗಿ ಕಣ್ಣರಳಿಸಿಕೊಂಡು, “ಅಮ್ಮಮ್ಮ, ಇದೇನು, ಯಾಕೆ,” ಎಂದು ಕೇಳಿದರೆ, ಅಮ್ಮ, ಅದು ತಾನು ಸಣ್ಣಂದಿನಲ್ಲಿ ಅಂಟಿಸಿ ಬಿಟ್ಟದ್ದೆಂದು ಅನ್ನುತ್ತಿದ್ದರು! ಮದರಾಸಿನ ವೈ.ಎಮ್.ಸಿ.ಎ.
ಕಾಲೇಜ್ನಲ್ಲಿ ಅಮ್ಮ ಫಿಸಿಕಲ್ ಟ್ರೇನಿಂಗ್ ಮಾಡುತ್ತಿದ್ದಾಗ ಅವರ ಪ್ರಿನ್ಸಿಪಾಲ್, ಆಂಗ್ಲ ಮಹಿಳೆ ಮಿಸೆಸ್ ಬಕ್, ಅದನ್ನು ಸರ್ಜರಿಯಿಂದ ಬೇರ್ಪಡಿಸಬೇಕೆಂದು ಹೊರಟಿದ್ದರು. ಕೋರೆಹಲ್ಲಾಗಿ ಮೂಡಿದ್ದ ಹಲ್ಲೊಂದನ್ನು ಜರ್ಮನ್ ಡೆಂಟಿಸ್ಟ್ ಒಬ್ಬರ ಬಳಿಗೊಯ್ದು ಕಿತ್ತು ಹಾಕಿಸಿದ್ದರು

ಬೆಸೆಂಟ್ ಶಾಲೆಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ದಿನಾಚರಣೆಗಳಲ್ಲಿ, ಸ್ಕೂಲ್ ಡೇ, ವಸಂತೋತ್ಸವಗಳಲ್ಲಿ, ಸ್ಪೋರ್ಟ್ಸ್ಗಳಲ್ಲಿ ಅಮ್ಮನ ಶಿಸ್ತು ಎದ್ದು ಕಾಣುತ್ತಿತ್ತು. ಆಟ
ಟೀಚರ ಶಿಸ್ತೇ ತಮ್ಮನ್ನು ಬೆಳೆಸಿತೆನ್ನುತ್ತಾ, ಈಗಲೂ ಹಳೆ ವಿದ್ಯಾರ್ಥಿನಿಯರು ಅಮ್ಮನನ್ನು ಕಾಣಲು ಬರುವುದಿದೆ.

ಸೂರ್ಯನ ಮೊದಲ ಕಿರಣದೊಂದಿಗೇ ಈಗಲೂ ಅಮ್ಮನಿಗೆ ಬೆಳಗಾಗುತ್ತದೆ. ತುಂಡು ಸೀರೆಯಲ್ಲಿ ಮಲಗುವ ಅಮ್ಮ, ಬೆಳಗ್ಗೆದ್ದು ಒಪ್ಪವಾಗಿ ಸೀರೆಯುಟ್ಟು ಹೊರ ಬರುತ್ತಾರೆ. ಬ್ರೇಕ್ಫಾಸ್ಟ್ ಟೇಬ್ಲ್ನಲ್ಲಿ ಅಣ್ಣನೆದುರು ಕುಳಿತು ಗಂಟೆ ಹೊತ್ತು ವೃತ್ತಪತ್ರ ಓದುತ್ತಿರುವ ಅಮ್ಮ, ಪ್ರಿನ್ಸಿಪಾಲ್ನೆದುರು ಕುಳಿತ ಸ್ಟ್ಯೂಡೆಂಟ್ನಂತೆ ಕಂಡು ನಮಗೆ ನಗು ಬರುವುದಿದೆ. ಅಂಗಳಕ್ಕಿಳಿಯಲಾಗದೆ ಅಮ್ಮನ ಹೂತೋಟವೆಲ್ಲ ನಷ್ಟವಾಗಿದೆ. ಅರ್ಧಾಂಶ ಹೂತೋಟವನ್ನು ಹೆದ್ದಾರಿಯ ಚತುಷ್ಪಥ ಕಬಳಿಸಿದ್ದರೆ, ಉಳಿದುದರಲ್ಲಿ ಅಮ್ಮನ ಅಳಿಯುತ್ತಿರುವ ಹೂಗಿಡಗಳ ನಡುವೆ  ಅಣ್ಣನ ಬಾಳೆ,
ಅನನಾಸು, ಪಪ್ಪಾಯ, ಇತರ ಹಣ್ಣುಗಳ ಗಿಡಗಳು, ಸೋರೆ, ಹರಿವೆ, ಬದನೆ, ಬಸಳೆ, ತಗಟೆ ಸೊಪ್ಪಿನಂತಹ ತರಕಾರಿ ಗಿಡಗಳು ಮೊಳೆತು ತಲೆಯೆತ್ತಿವೆ. ಕ್ರಿಕೆಟ್ ಮ್ಯಾಚ್, ಸ್ಪೋರ್ಟ್ಸ್ಗಳ ಟೆಲಿಕಾಸ್ಟ್ ಆಗುತ್ತಿದ್ದರೆ, ದಿನವಿಡೀ ಟಿ.ವಿಯೆದುರು ಕುಳಿತು ನೋಡುವ ನಮ್ಮಮ್ಮ, ನಿಜವಾದ ಆಟ ಟೀಚರ್! ಎಲ್ಲೂ ಹೋಗುವ ಆಶೆ ತನಗಿಲ್ಲವೆನ್ನುವ ಅಮ್ಮ, ನಮ್ಮನ್ನೂ ಮುಸ್ಸಂಜೆಯೊಳಗೆ ಮನೆ ಸೇರಿಕೊಳ್ಳಬೇಕೆಂದು ಆದೇಶಿಸುತ್ತಾರೆ. ಎಂಟು ತಿಂಗಳ ಬಸುರಿನಲ್ಲಿ ಊರಿಗೆ ಬರುವ ದಾರಿಯಲ್ಲಿ ಐಸ್ಕ್ರೀಮ್ ತಿನ್ನಲು ಹೋದುದರಿಂದ ರೈಲು ತಪ್ಪಿ ಹೋಗಿ, ಮಂಗಳೂರಿಂದ ಉಚ್ಚಿಲಕ್ಕೆ ನಡೆದುಕೊಂಡೇ ಹೊರಟು, ನೇತ್ರಾವತಿ ರೈಲು ಸಂಕವನ್ನೂ ದಾಟಿ, ನಟ್ಟಿರುಳಿನಲ್ಲಿ ಉಚ್ಚಿಲದ ಅತ್ತೆಮನೆ ಸೇರಿದವರು ಯಾರೆಂದು
ಅಪರೂಪಕ್ಕೊಮ್ಮೆ ನಾವು ಛೇಡಿಸುವುದಿದೆ.

ನಮ್ಮಣ್ಣನ ಮಗ ಅನಿರುದ್ಧ, ತನ್ನ ಇಪ್ಪತ್ತೆಂಟನೇ ವಯಸ್ಸಿನಲ್ಲಿ ದೂರದ ಕತಾರ್ನಲ್ಲಿ ಹೃದಯಾಘಾತದಿಂದ ನಮ್ಮನ್ನಗಲಿದ. ನಾಲ್ಕು ದಿನಗಳ ಬಳಿಕ ತಾಯ್ನಾಡಿಗೆ ಕಳುಹಲ್ಪಟ್ಟು ಮನೆ ಸೇರಿ ಹಾಲ್ನಲ್ಲಿ ಪವಡಿಸಿದ ನಮ್ಮ ಅಭಿ, ಆಡಿ ಬಂದು ನಿಶ್ಚಿಂತೆಯಿಂದ ಮಲಗಿದ ಮಗುವಿನಂತೆ ಕಾಣಿಸುತ್ತಿದ್ದ. ಅಂದು ನಮ್ಮಲ್ಲಿಗೆ ಬಂದು ಅವನನ್ನು ನೋಡಿ ಹೋದವರು ಸಾವಿರಾರು ಜನ! ದಿನಗಳಲ್ಲಿನ ನಮ್ಮಣ್ಣನ ಮುಖವನ್ನು ಎಂದೂ ಮರೆವಂತಿಲ್ಲ. ಅವನ ಕಣ್ಗಳಿಗೆ ಆಗ ಏನೂ ಕಾಣಿಸುತ್ತಿರಲಿಲ್ಲ. ಸದಾ ಸಮಾಜಸೇವೆಯಲ್ಲಿ ತೊಡಗಿದ್ದು ನೂರಾರು ಜನರನ್ನು ಸಕಾಲದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ದೊರಕುವಂತೆ ಮಾಡಿದ್ದ ಅಣ್ಣ! ಆರೋಗ್ಯ, ಆಪತ್ತು ಸಂಬಂಧ ಕಷ್ಟಕಾಲದಲ್ಲಿ ಜನರು ನೆನಸಿ ಕೊಳ್ಳುವ ಅಣ್ಣ! ಎಂಜಿನಿಯರಿಂಗ್, ಎಂ.ಬಿ.. ಮುಗಿಸಿ, ಒಳ್ಳೆಯ ಅವಕಾಶವನ್ನರಸಿ ದೂರದೂರಿಗೆ ಹೋಗಿದ್ದ ಮುದ್ದಿನ ಮಗ! ಗೌಜಿ, ಗಲಾಟೆ, ಹಸಿವು, ಪ್ರೀತಿ ಎಲ್ಲದರಲ್ಲೂ ಬಿರುಗಾಳಿಯಂತಿದ್ದ, ಅಂತೆಯೇ ಹೊರಟುಹೋದ ನಮ್ಮ ಅಭಿ! ಸೋಮೇಶ್ವರದ ಕಡಲಲ್ಲಿ ಮಗನಿಗೆ ತರ್ಪಣ ಬಿಟ್ಟ ಅಣ್ಣನ ಚಿತ್ರ ಈಗಲೂ ಹೃದಯ ಹಿಂಡುತ್ತದೆ.

ಸ್ವಾಮಿ ದಯಾನಂದ ಸರಸ್ವತಿ ಶಾಲೆಯನ್ನು ನಡೆಸುತ್ತಾ, ಫಾ|ಮುಲ್ಲರ್ಸ್ ಸಂಸ್ಥೆಯಲ್ಲಿ, ಪಿಲಿಕುಳದ ಚಟುವಟಿಕೆಗಳಲ್ಲಿ ವ್ಯಸ್ತನಾಗಿದ್ದು, ರೆಡ್ಕ್ರಾಸ್ ಸಂಸ್ಥೆಯಲ್ಲಿ, ಮಹಾತ್ಮಾ ಗಾಂಧಿ ಪೀಸ್ ಫೌಂಡೇಶನ್ನಲ್ಲಿ ಚಟುವಟಿಕೆಯಿಂದಿದ್ದು, ದಕ್ಷಿಣ ಕನ್ನಡ ಸ್ಕೌಟ್ ಕಮಿಶನರ್ ಆಗಿದ್ದು, ಎಮಿನೆಂಟ್ ಅಲೋಶಿಯನ್ ಅವಾರ್ಡ್ ಪಡೆದ ನಮ್ಮಣ್ಣನಿಗೆ ಸಮಾಜಸೇವಾ ಕ್ಷೇತ್ರದಲ್ಲಿ ಇಂದು ಡಾಕ್ಟರೇಟ್ ಪ್ರದಾನಿಸಲ್ಪಡುತ್ತಿದೆ. ನನ್ನ ಆತ್ಮಕಥನವನ್ನು ಆರಂಭಿಸುವಲ್ಲಿ ಅಣ್ಣನ ಒತ್ತಾಸೆಯೂ ಇದೆ. ಸಮಾಜಕ್ಕೆ ದಾರಿದೀಪವಾಗಿ ಬಾಳಿದ ನಮ್ಮ ಹಿರಿಯರ ಬಗ್ಗೆ ಇತರರಿಗೆ ತಿಳಿಯುವಂತಾಗಲು, ಹಾಗೂ ಕಳೆದುಹೋದ ನಮ್ಮ ಬಾಲ್ಯದ ಸುಂದರ ದಿನಗಳ ಚಿತ್ರವನ್ನು ಶಾಶ್ವತವಾಗಿಡಲು ಕಾದಂಬರಿ ಒಂದನ್ನು ರೂಪಿಸುವಂತೆ ಅಣ್ಣ ಸೂಚಿಸಿದ್ದ. ಆದರೆ ನಾನು ಕಾದಂಬರಿ ಹೆಣೆವಲ್ಲಿ ಸೋತು, ಆತ್ಮಕಥನವಾಗೇ ರೂಪಿಸಿದೆ. ಅದೀಗ ಕೊನೆ ಮುಟ್ಟುತ್ತಾ ಬಂದಿದೆ.
         
ಸಾಹಿತಿಶ್ರೇಷ್ಠ ಕೆ.ಟಿ.ಗಟ್ಟಿ ಅವರೊಂದಿಗಿನ ಸ್ನೇಹಾನುಬಂಧ ನನ್ನನ್ನು ಸರ್ವರೀತಿಯಲ್ಲೂ ಬೆಳೆಸಿದೆ. ಶುದ್ಧಾಂತಃಕರಣದಿಂದ,
ವಿಚಾರದೀಪ್ತಿಯಿಂದ, ಮಾನವೀಯತೆಯ ಪರುಷಸ್ಪರ್ಶದಿಂದ ಅಂತರಂಗವನ್ನು ಉದ್ದೀಪಿಸಿದೆ. ಗಟ್ಟಿಯವರು, ಪತ್ನಿ ಯಶೋದಾ, ಮಕ್ಕಳು ಚಿತ್ಪ್ರಭಾ, ಸತ್ಯಜಿತ್ ಮತ್ತು ಪ್ರಿಯಾ ಸದಾ ನನ್ನ ಮನವನ್ನರಳಿಸುವ ಪ್ರಿಯ ಕುಟುಂಬ. ನಮ್ಮ ಮನೆಯಲ್ಲಿ ಮಾತೆಂಬುದು ಬಹಳ ಕಡಿಮೆ! ಹೀಗಾಗಿ, ಕುಟುಂಬ - ಪತಿ, ಪತ್ನಿ, ಮಕ್ಕಳೆಲ್ಲ ಒಂದಾಗಿ ನಡೆಸುವ ಮಾತುಕತೆ, ಚಿಂತನೆ ನನಗೆ ಕೌತುಕವೆನಿಸುತ್ತಿತ್ತು. ಮನೆಯಲ್ಲಿ ದೇವರು, ಧರ್ಮ, ಹಬ್ಬ, ಹರಿದಿನಗಳ ಬದಲಿಗೆ ಸರಳ ಸೌಜನ್ಯದ ತಾಯಿ ಹಾಗೂ ದೊಡ್ಡಮ್ಮನ ಅಕ್ಕರೆಯ ಆರೈಕೆಯಲ್ಲಿ, ತಂದೆಯ ಚಿಂತನೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಮಕ್ಕಳು! ಬದುಕು ಎಂದರೆ ಬರಹವೇ ಆಗಿರುವ ಗಟ್ಟಿಯವರ ಅಗಾಧ ಸಾಹಿತ್ಯಕೃಷಿ, ಅವರ ಚಿಂತನಶೀಲ ಮನಸ್ಸಿನ ಪ್ರತಿಕೃತಿ. ಕೃಷಿ ಅಬಾಧಿತವಾಗಿ ನಡೆವಂತೆ ನೋಡಿಕೊಂಡವರು, ಪತ್ನಿ ಯಶೋದಾಶಿಕ್ಷಣ ತಜ್ಞರಾದ ಗಟ್ಟಿಯವರು ಮಕ್ಕಳಿಗಾಗಿ ರಚಿಸಿದ ಶೈಕ್ಷಣಿಕ ಸಾಹಿತ್ಯವೂ ಅಮೂಲ್ಯ. ಬಾಲ್ಯದಿಂದಲೇ ತೊಡಗಿಸಿಕೊಂಡ ಸ್ವಇಚ್ಛೆಯ ಸತತ ಓದಿನಿಂದಲೇ ಅಪಾರ ಜ್ಞಾನಭಂಡಾರವನ್ನು ಗಳಿಸಿದ ಗಟ್ಟಿಯವರು ತಾವೇ ಒಂದು ವಿಶ್ವವಿದ್ಯಾಲಯ. ಉಜಿರೆಯ ತಮ್ಮ ವನಶ್ರೀಯಲ್ಲಿ ಹಿತ್ತಿಲ ತೋಟದ ನಡುವೆ ಬದುಕು ಕಟ್ಟಿಕೊಂಡು, ತೋಟ ಹಾಗೂ ಸಾಹಿತ್ಯಕೃಷಿಗಳೆರಡನ್ನೂ ಸಾಗಿಸಿದವರು, ಗಟ್ಟಿಯವರು. ಆದರೀಗ ಇಳಿವಯದ ಅಶಕ್ತತೆಯ ಕಾರಣ, ಪ್ರಕೃತಿಯ ಮಡಿಲನ್ನು ತೊರೆದು, ವೈದ್ಯಕೀಯ ಸೌಲಭ್ಯದ ನಮ್ಮ ಮಂಗಳೂರಿಗೆ ವಾಸ್ತವ್ಯ ಬದಲಿಸಿದವರು. ಅವರ ಸಂಪರ್ಕವಾದುದು ನನ್ನ ಬದುಕಿನ ಭಾಗ್ಯ!

ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದ ಜೊತೆಗೂಡಿ ಯೂನಿವರ್ಸಿಟಿ, ಕರ್ನಾಟಕ ಸಂಘ, ಮೈಸೂರು ಅಸೋಸಿಯೇಶನ್ ಮುಂತಾದೆಡೆ ನಡೆದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ  ಡಾ| ಜಿ.ಎಸ್. ಶಿವರುದ್ರಪ್ಪ, ಡಾ| ಎಸ್. ಎಲ್.ಭೈರಪ್ಪ, ಡಾ| ಹಂ..ನಾ ದಂಪತಿ, ಪ್ರೊ| ಕಾಳೇಗೌಡ ನಾಗವಾರ, ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ, ವೈದೇಹಿ, ಡಾ| ವಿವೇಕ ರೈ, ಬೋಳುವಾರು ಮಹಮದ್ ಕುಂಞ, ಡಾ| ರಹಮತ್ ತರೀಕೆರೆ, ರಾಜೇಶ್ವರಿ ತೇಜಸ್ವಿ, ಡಾ| ಹನೂರು ಕೃಷ್ಣಮೂರ್ತಿ, ವಸುಧೇಂದ್ರರಾದಿಯಾಗಿ ಹಲವು ಸಾಹಿತಿಗಳ, ವಿದ್ವಾಂಸರ ಪರಿಚಯ ಲಾಭವಾಗಿದೆ. ಸಾಹಿತ್ಯ ಪ್ರೀತಿ ಸತತ ವರ್ಧಿಸಿದೆ
       
ನನ್ನ ಮಕ್ಕಳಷ್ಟೇ ನನಗೆ ಪ್ರಿಯನಾದವನು, ತಮ್ಮ ಮುರಲಿ. ತುಂಬ ಬುದ್ಧಿವಂತ! ತುಂಟ! ಅಪರಂಜಿಯಂಥಾ ಹೃದಯವನ್ನು ತುಂಟತನದ ಮುಸುಕಿನಲ್ಲಿ ಮರೆ ಮಾಡುವವನು! ಡಿಕ್ಷನರಿ ಓದುವುದು ಅವನ ಪ್ರಿಯ ಹವ್ಯಾಸವಾಗಿತ್ತು. ಹೆಸರಿಗೆ ತಕ್ಕಂತೆ ಕೊಳಲು ವಾದನ ಕಲಿಯುತ್ತಿದ್ದವನು ಅನಾರೋಗ್ಯದ ಕಾರಣ ಅದನ್ನು ತೊರೆಯಬೇಕಾಯ್ತು. ಕೇಳಿದವರಿಗೆ ಕೇಳಿದುದನ್ನು ಕೊಟ್ಟೇಬಿಡುವ ಕರ್ಣನಂಥವನು! ಕೊಟ್ಟು ಬರಿಗೈಯಾಗುವವನು! ಅನ್ಯಾಯ, ಅಸಮಾನತೆಯನ್ನು ಸದಾ ಖಂಡಿಸಿ ಎದುರಿಸಿದವನು! ಎಲ್ಲರಿಗೂ ಪ್ರಿಯನಾದವನು! ಹಲವು ವರ್ಷಗಳಿಂದ ದೃಷ್ಟಿಗೆ ದೂರವಾಗಿ ಮಗಳು ಮುದ್ದು ಶುಭಾ ಹಾಗೂ ಪತ್ನಿ ನಿತ್ಯಳೊಡನೆ ದೂರದೇಶದಲ್ಲಿ ಇರುವವನು. ತನ್ನ ಇಂಗ್ಲಿಷ್ ಪಠ್ಯದ `ದ ವಾಲಿಯೆಂಟ್’ ಪಾಠದ "ದ ವಾಲಿಯೆಂಟ್ ನೆವರ್ ಡೈಸ್, ಬಟ್ ವನ್ಸ್" ಎಂಬ ವಾಕ್ಯ ಅವನಿಗೆ ಅದೆಷ್ಟು ಪ್ರಿಯ! ನನ್ನ ಬಾಬ! ಆದರೂ ಅವನ ಬಗ್ಗೆ ಬರೆಯಲು ನನಗೆ ಸಾಧ್ಯವಾಗಲಿಲ್ಲ. ಹೃದಯದಲ್ಲಿ ಬರೆದುದೆಲ್ಲವನ್ನೂ ಅಕ್ಷರಕ್ಕಿಳಿಸುವುದು ಸಾಧ್ಯವೂ ಅಲ್ಲ; ಸಾಧುವೂ ಅಲ್ಲ.        
 ಫೋಟೋ -

ತಂಗಿ ಮಂಜುಳಾಳ ಮನೆ ಬೆಳಗಿದ ಮುದ್ದು ಮೊಮ್ಮಕ್ಕಳು ಆರಿಯಾ, ಆರವ್ ಕೂಡಾ ನನ್ನ ಜೀವ! ತುಳಸಿ, ಬೇವು, ತಿಮರೆ, ಅಮೃತಬಳ್ಳಿ, ನುಗ್ಗೆಸೊಪ್ಪು, ಆಲವೀರಾ, ನೆಲ್ಲಿಕಾಯಿ ಎಂದು ಗಿಡಮೂಲಿಕೆ ಸೇವನೆಯಲ್ಲಿ, ಆರೋಗ್ಯ, ಸೌಂದರ್ಯ ರಕ್ಷೆಯಲ್ಲಿ ಆಸಕ್ತಳಾದ ಮಂಜುಳಾ, ಮಕ್ಕಳ ಆರೈಕೆಗೂ ಅವನ್ನು ಉಪಯೋಗಿಸುತ್ತಿರುತ್ತಾಳೆ. ಅತ್ಯಂತ ಪ್ರಿಯರೂ, ಅಸಾಧ್ಯ ತುಂಟರೂ ಆಗಿರುವ ಮುದ್ದು ಅವಳಿ ಮಕ್ಕಳು! ದೊಡ್ಡಮ್ಮಾ, ಎಂದು ಅವರು ನನ್ನನ್ನು ಕರೆಯುವಾಗ ನನ್ನ ಹೃದಯ ಹಿಗ್ಗಿ ಹೂವಾಗುತ್ತದೆ. ಇನ್ನು, ಅಲ್ಲಿ ಮಂಗಳೂರಲ್ಲಿ ಬೆಳೆಯುತ್ತಿರುವ, ಅಮ್ಮ ನನಗೆ ಸಿಗುವುದೇ ಇಲ್ಲ, ಎಂದು ಕೊರಗುವ ನನ್ನ ಮುದ್ದು ಮೊಮ್ಮಗಳು ಶ್ರುತಾ!

        ಫೋಟೋ - ಆರಿಯಾ, ಆರವ್, ಶ್ರುತಾನಮ್ಮೂರ ಉಚ್ಚಿಲ ಶಾಲೆಯ ಪುನರ್ನವೀಕರಣದ ಯೋಜನೆಯಲ್ಲೀಗ ತೊಡಗಿ ಕೊಂಡಿರುವ ನನಗೆ, ಶತಮಾನ ಸಮೀಪಿಸುತ್ತಿರುವ ಶಾಲಾ ಕಟ್ಟಡದ ದುರುಸ್ತಿ ಯಶಸ್ವಿಯಾಗಿ ನಡೆದು, ಅಲ್ಲಿ ಪುನಃ ಶಾಲೆ ತೆರೆದುಕೊಳ್ಳುವುದನ್ನು ಕಾಣುವ ಹಂಬಲ. ನಮ್ಮೂರಿಗೆ, ಸಮಾಜಕ್ಕೆ ವಿದ್ಯೆಯ ಬೆಳಕು ನೀಡಿದ ಶಾಲಾ ಕಟ್ಟಡವನ್ನು ನಾಡ ಪಾರಂಪರಿಕ ನಿಧಿಯಾಗಿ ಕಾಪಿಟ್ಟುಕೊಳ್ಳಬೇಕೆಂಬುದೇ ಧ್ಯೇಯ. ಸಾಹಿತ್ಯ ಸಾಧನೆಯೊಡನೆ ಯೋಜನೆಯ ಸಾಫಲ್ಯವೂ ನನ್ನ ಜೀವದುಸಿರುನಾವು ಆಡಿ ಬೆಳೆದ ವಾತ್ಸಲ್ಯದಾಗರ ನಮ್ಮ ಗುಡ್ಡೆಮನೆ ಹಾಗೂ ಹಿತ್ತಿಲ ಸಂರಕ್ಷೆಯೂ ಅಣ್ಣ ಮತ್ತು ನನ್ನ, ಹಾಗೂ ನಾವು ಗುಡ್ಡೆಮನೆ ಮಕ್ಕಳೆಲ್ಲರ ಮನೀಷೆ.


ಮಹಿಳಾ ಪ್ರಜ್ಞೆಯ ವಿಚಾರವಾದಿ ಲೇಖಕಿ ಬಿ.ಎಂ.ರೋಹಿಣಿ ಅವರ ಪರಿಚಯದಿಂದ ನಾನು ಪಡೆದುಕೊಂಡುದು ಬಹಳ. "ದಕ್ಷಿಣ ಕನ್ನಡದ ಮಾಸ್ತಿಕಲ್ಲುಗಳು ಮತ್ತು ವೀರಗಲ್ಲುಗಳು" ಎಂಬ ತಮ್ಮ ಸಂಶೋಧನಾ ಕೃತಿಗೆ ಅವರು ಬರೆದ ಪ್ರಸ್ತಾವನೆಯೇ ಅವರ ವಿಚಾರ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದಲ್ಲಿ ಹಾಗೂ ಇತರ ಹತ್ತು ಹಲವು ಸಾಹಿತ್ಯಿಕ ಸಮಾವೇಶಗಳಲ್ಲಿ ಅವರ ವ್ಯಾಪಕ ಓದಿನ ಹಾಗೂ ಕರ್ತೃತ್ವ ಶಕ್ತಿಯ ಪರಿಚಯ ನನಗಾಗಿದೆ. ಅವರ "ದೀಪದಡಿಯ ಕತ್ತಲೆ" ತೆರೆದಿಟ್ಟ ಜೀವನಾನುಭವದ ಮಹತ್ತನ್ನು ನಾವೆಲ್ಲರೂ ಬಲ್ಲೆವು. ಅಬ್ಬಕ್ಕ ಪ್ರಶಸ್ತಿಯಿಂದ ಹಾಗೂ ಕರಾವಳಿ ಲೇಖಕಿಯರ ಸಂಘದ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಅವರು ಗೌರವಿಸಲ್ಪಟ್ಟಾಗ ಅಲ್ಲಿ ಹಾಜರಿದ್ದ ಸಂತಸ ನನ್ನದು.
         
ಗೆಳತಿ ಶಶಿಕಲಾ ಬಾಯಾರು ಅವರಲ್ಲಿಗೆ ರೋಹಿಣಿ ಜೊತೆ ಭೇಟಿ ನನಗಿತ್ತ ಸಂತಸ
ಅಪಾರ. ಬಾಯಾರಿನ ಅವರ ಆ ಪ್ರಕೃತಿಯ ಮಡಿಲ ಸುಂದರ ತೋಟದ ಮನೆಗಿತ್ತ ಭೇಟಿ, ನಮ್ಮ ಪತ್ರಸಖ್ಯವನ್ನು ಇನ್ನೂ ಹಿರಿದಾಗಿಸಿತು. ಅವರ ಅಡಿಕೆ, ಕೊಕೋ ತೋಟ, ಬೆಟ್ಟದ ತೊರೆ, ಗುಂಪೆ, ಮನೆಯ ಸುತ್ತಣ ಹಣ್ಣಿನ ಮರಗಳು, ಮನೆಯ ಸವಿಸ್ನೇಹದ ಸರಳ ಜೀವಗಳು, ಅಲ್ಲಿ ಶಶಿಕಲಾರ ಕಲಾವಂತಿಕೆಯ ಸಾಕ್ಷ್ಯಚಿತ್ರಗಳು, ಮನೆಯ ಪುಟ್ಟ ಮಕ್ಕಳಲ್ಲೂ ಚಿಗುರೊಡೆದ ಪ್ರತಿಭೆ, ತಮ್ಮ ಕೃಷ್ಣರಾಜನ ಕೊಳಲು ತಯಾರಿಕಾ ಕೇಂದ್ರ ಎಲ್ಲವೂ ಮನಕ್ಕಿತ್ತ ಸಂತಸ ಅಪಾರ. ಅವರ ಆದರಾತಿಥ್ಯವನ್ನು ಸವಿದು, ಆ ಸುತ್ತಣ ಗುಡ್ಡ, ತೋಟದ, ಮನೆ, ಮಕ್ಕಳ, ಶಶಿಕಲಾರ ಅದ್ಭುತ ಕಲಾನೈಪುಣ್ಯದ ಕಸೂತಿ ಚಿತ್ರಗಳ ಫೋಟೋಗಳನ್ನು ತೆಗೆದು ಕೊಂಡು, ಅವರಿತ್ತ ಪ್ರೀತಿಯ ಕಾಣಿಕೆಗಳೊಡನೆ ಬೀಳ್ಕೊಟ್ಟು ಬಂದಿದ್ದೆವು. ಆದರೆ ಆ ಚಿತ್ರಗಳು ನನ್ನ ಗಣಕದಿಂದ ಅದೇನೋ ಅಚಾತುರ್ಯದಿಂದ ಮಾಯವಾಗಿ ಹೋದುದು ನನಗಾದ ದೊಡ್ಡ ನಷ್ಟ. ಆ ನಷ್ಟವನ್ನು ತುಂಬಿಕೊಳ್ಳಲು ಪುನಃ ಬಾಯಾರಿನ ದಾರಿ ಹಿಡಿಯಲು ನಾನು ಕಾದಿದ್ದೇನೆ. ಕರಾವಳಿ ಲೇಖಕಿಯರ ಸಂಘ ನಡೆಸಿದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಶಶಿಕಲಾರ ಕಸೂತಿ ಚಿತ್ರಕಲೆಯ ಪ್ರದರ್ಶನ ಹಾಗೂ ಅವರ ಬಹುಮೂಲ್ಯ " ಪತ್ರಾರ್ಜಿತ" ಪುಸ್ತಕ ಬಿಡುಗಡೆ ನಡೆದಾಗ ಪುನಃ ಅವರ ಒಡನಿರುವ ಅವಕಾಶ ಪ್ರಾಪ್ತವಾಯ್ತು. ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿದ ಪ್ರಿಯ ರೋಹಿಣಿ ಅವರನ್ನು ಸಮ್ಮಾನಿಸಿ, ಸಂಘ ಕೃತಾರ್ಥವಾಯ್ತು. ಯಾವುದೇ ಪದವಿರಹಿತರಾಗಿ ಇಷ್ಟು ವರ್ಷಗಳೂ ಸಂಘದ ಬೆನ್ನೆಲುಬಾಗಿ ನಿಂತು ದುಡಿದ, ಕರ್ತೃತ್ವಶೀಲ ಚೇತನ, ಬಿ.ಎಂ.ರೋಹಿಣಿ ಅವರು.
        
ಊರಲ್ಲಿ ನಮ್ಮ ನೆರೆಯಲ್ಲಿದ್ದ ಸದ್ಗೃಹಸ್ಥ ಲತೀಫ್ ಬಗ್ಗೆ ಹೇಳದೆ ಮುಗಿಸುವುದೆಂತು? ಐದಾರು ವರ್ಷಗಳ ಹಿಂದೆ ಸೌದಿಯಿಂದ ಮರಳಿ, ಊರಲ್ಲಿ ನಮ್ಮ ಪಕ್ಕದಲ್ಲಿ ಮನೆ, ಅಂಗಡಿ ಮಾಡಿ ನೆಲೆನಿಂತ ಲತೀಫ್ ಮೊದಲು ನನ್ನ ಕಣ್ಗಳಿಗೆ ಬಿದ್ದುದು, ರಸ್ತೆ ಪಕ್ಕದ ಮರದ ಗೆಲ್ಲು ಕಡಿಸುತ್ತಿದ್ದಾಗ. ಪ್ಯಾಂಟ್ ಶರ್ಟ್ ತೊಟ್ಟಿದ್ದ ಸಣ್ಣಪ್ರಾಯದ ಯುವಕ. ಮರ ಯಾಕೆ ಕಡಿಸುತ್ತಿದ್ದೀರಿ? ಪರ್ಮಿಶನ್ ತೆಗೆದು ಕೊಂಡಿದ್ದೀರಾ? ಎಂದು ನಾನು ಗದರಿದ್ದೆ. ಕ್ಷಮಿಸಿ, ಲಾರಿ ಬರುವಷ್ಟು ಮಾತ್ರ ಗೆಲ್ಲು ಕಡಿಸುತ್ತಿದ್ದೇವೆ; ಪರ್ಮಿಶನ್ ತೆಗೆದು ಕೊಂಡಿದ್ದೇವೆ, ಎಂದು ನಕ್ಕಿದ್ದ, ಲತೀಫ್. ತನ್ನದೇ ಉಸ್ತುವಾರಿಯಲ್ಲಿ ಚೆಲುವಾದ ಮನೆ, ಮೂರು ಅಂಗಡಿ ಕಟ್ಟಿ ನೆಲೆ ನಿಂತ ಲತೀಫ್ ಕುಟುಂಬ. ಪತ್ನಿ ನಸೀಮಾ. ಮೂವರು ಮಕ್ಕಳು. ತೆಂಗು, ಬಾಳೆ, ತೊಂಡೆ ಬಳ್ಳಿಯ ಚಪ್ಪರ ಎಲ್ಲವೂ ಎದ್ದು ನಿಂತಿತ್ತು. ಶ್ರಮಜೀವಿ ಲತೀಫ್ಗೆ ದುಡಿಯುವಷ್ಟು ಮುಖ್ಯ ದುಡ್ಡು ಮಾಡುವುದಾಗಿರಲಿಲ್ಲ. ಅವರ ಹಿತ್ತಿಲಲ್ಲಿ ಕಣ್ಸೆಳೆಯುತ್ತಿದ್ದ ಪಪ್ಪಾಯಿ ಕಂಡು, ಬಸಳೆ ಪಲ್ಯಕ್ಕೆ ಹಾಕಲೆಂದು ಕೇಳ ಹೋಗಿದ್ದೆ. ಕಿತ್ತು ಕೊಟ್ಟ ಲತೀಫ್, ಹಣ ಕೊಡಲು ಹೋದರೆ ತೆಗೆದುಕೊಳ್ಳಲೇ ಇಲ್ಲ. “ಯಾರಿಗೆ ಹಣ? ದೇವರು ಕೊಟ್ಟದ್ದು; ಹಕ್ಕಿ ಎಲ್ಲಿಂದಲೋ ಬೀಜ ತಂದು ಹಾಕಿದ್ದು. ನಾವೇನೂ ಮಾಡಿದ್ದಲ್ಲ,” ಎಂದ! ಲತೀಫ್ ಇರುವಷ್ಟು ದಿನ ನಮಗೆ ಯಾವ ಚಿಂತೆಯೂ ಇರಲಿಲ್ಲ; ಎಲ್ಲ ರೀತಿಯ ನೆರವು ಇತ್ತು. ಅಮ್ಮ ಎಂದಾದರೂ ಒಬ್ಬರೇ ಆದರೆ ಬಂದು ನೋಡಿ ಹೋಗಲು ಲತೀಫ್ ಇದ್ದ. ಸಾಮಾನು ಬೇಕಿದ್ದರೆ, ನಮ್ಮ ದರೆಯಾಚಿನಿಂದ ಕೂಗಿದರಾಯ್ತು; ಬಂದು ಕೇಳಿ ತಂದು ಕೊಡುತ್ತಿದ್ದ ಎಲ್ಲ ಅನುವು ಆಪತ್ತಿಗಾಗುತ್ತಿದ್ದ. ಬೇಸಗೆಯಲ್ಲಿ ನಮ್ಮ ಪಾತಾಳ ಬಾವಿ ಖಾಲಿಯಾದಾಗ ತನ್ನ ಬಾವಿಯಿಂದ ಪೈಪ್ ಇಡಿಸಿ ನೀರು ಸರಬರಾಜು ಮಾಡುತ್ತಿದ್ದ. ಈಗಲೂ ನಮಗೆ ಬೇಸಗೆಯಲ್ಲಿ ಲತೀಫ್ ಮನೆಯ ಬಾವಿ ನೀರು. ಇಂದು ಲತೀಫ್ ಮನೆ ಮಾತ್ರ ಅಲ್ಲ, ಅಂಗಡಿಗಳೂ ಇಲ್ಲ; ಎಲ್ಲವೂ ಚತುಷ್ಪಥಕ್ಕೆ ಹೊರಟು ಹೋಗಿವೆ. ನಮ್ಮ ಗುಡ್ಡೆಮನೆಯೆದುರಿಗೆ ಒಳರಸ್ತೆಯಲ್ಲಿ ಗದ್ದೆಗಳಾಚೆ ಲತೀಫ್ ಹೊಸದಾಗಿ ಚೆಲುವಾದ ಮನೆ ಕಟ್ಟಿಸಿದ್ದಾನೆ. ನಸೀಮಾ ನನ್ನ ಪುಸ್ತಕಗಳನ್ನು ಓದಿ ಸಂತೋಷಿಸುವವಳು. ಉಳ್ಳಾಲ ದರ್ಗಾ ಉರೂಸ್ ಸಂಭ್ರಮ ನೋಡಲು ನಾನು ಲತೀಫ್ನೊಂದಿಗೆ ಹೋಗಿ ಬಂದಿದ್ದೆ. ಜನರಲ್ಲಿ , ಮತಧರ್ಮಗಳಲ್ಲಿ ಭೇದಭಾವ, ವಿದ್ವೇಷ ನನಗೆ ಅರ್ಥವಾಗುವುದೇ ಇಲ್ಲ. ಮಾನವೀಯತೆಯೊಂದೇ ನನ್ನ ಧರ್ಮ.
          
ಮಂಗಳೂರಿಗೆ ಬಂದಿದ್ದ ಗೆಳೆಯ, ಸಾಹಿತಿ ರಹಮತ್ ತರೀಕೆರೆ ಅವರನ್ನು ನಮ್ಮೂರು ತುಂಬ ಚಂದ, ಬನ್ನಿ, ನೋಡಿ, ಎಂದು ಕರೆದೊಯ್ದಿದ್ದೆ. ಹೌದು, ಗುರುಗಳಾದ ಅಮೃತ ಸೋಮೇಶ್ವರರನ್ನು ಕಾಣಲೇ ಬೇಕು, ಎಂದು ಸಡಗರದಿಂದ ಬಂದಿದ್ದರು, ರಹಮತ್. ಆದರೆ ಈಗ ನನ್ನೂರಲ್ಲಿ ತೋರಲು ಏನುಳಿದಿದೆ, ಅಷ್ಟೊಂದು ಚೆಲುವಾದ ಸಮುದ್ರ ತಡಿ, ಅಳಿವೆ ಪ್ರದೇಶ ಎಲ್ಲ ಹಾಳಾಗಿದೆಯಲ್ಲ, ಎಂಬ ದುಃಖ ನನ್ನದು. ಸಮುದ್ರ ತಡಿ ಬಂಡೆಗಳ ತಡೆಗೋಡೆ ಹೇರಿಕೊಂಡಿದ್ದರೆ, ಅಳಿವೆ ಕೊಳಚೆ, ಕಶ್ಮಲಮಯವಾಗಿದೆ. ಮಂಗಳೂರ ಬಾವುಟಗುಡ್ಡೆಯಲ್ಲಿ ಪಶ್ಚಿಮಾಂಬುಧಿಯ ಸೂರ್ಯಾಸ್ತದ ಸುಂದರ ದೃಶ್ಯವನ್ನು ಕಾಣುತ್ತಲೇ ಬೆಳೆದ ಕಣ್ಗಳ ನೋಟಕ್ಕೆ ಅಡ್ಡವಾಗಿ ಈಗಲ್ಲಿ ಎದ್ದುನಿಂತಿರುವ ದೈತ್ಯಾಕಾರದ ವಸತಿ ಕಟ್ಟಡ, ಇದು ನನ್ನ ಮಂಗಳೂರೇ ಎಂಬ ವಿಷಾದಭಾವದಿಂದ ಹೃದಯವನ್ನು ಕೊರೆಯುತ್ತದೆ. ನಗರದ ಪಾರಂಪರಿಕ ಮಹತ್ವದ ದೃಶ್ಯ ವೈಭವವನ್ನು ಮರೆ ಮಾಡಿದ ವಿಕೃತಿಗೆ ಅಲ್ಲಿ ಅನುಮತಿ ಹೇಗಾದರೂ ದೊರೆಯಿತು? ಪಾರಂಪರಿಕ ಮಹತ್ವದ ಪ್ರಜ್ಞೆಯೇ ಇಲ್ಲದಾಯ್ತೇ, ಎಂಬ ಹೃದಯ ಹಿಂಡುವ ಸಂಕಟ ನನ್ನದು. ಕಾಡಿನ ನಡುವಣ ನಿರ್ಮಲ ಪ್ರಕೃತಿಯ ಮಡಿಲಲ್ಲಿ ಸತತ ಕೃಷಿಯ ಪರಿಶ್ರಮದಿಂದ ಬದುಕು ಕಟ್ಟಿಕೊಂಡ ಅಮೆರಿಕಾದ ಕಾನ್ಸಾಸ್ ಜನಜೀವನದ ಅತಿಸುಂದರ ಚಿತ್ರಣವನ್ನು ಕಟ್ಟಿಕೊಟ್ಟ ಕೃತಿ, ಲಾರಾ ಇಂಗಲ್ಸ್ ವೈಲ್ಡರ್ ` ಲಿಟ್ಲ್ ಹೌಸ್ ಇನ್ ಬಿಗ್ ವುಡ್ಸ್ ಕೃತಿಯನ್ನು ಕನ್ನಡದಲ್ಲಿ ಅನುವಾದಿಸಿದ ಎಸ್. ಅನಂತನಾರಾಯಣ ಅವರ `ದೊಡ್ಡ ಕಾಡಿನಲ್ಲಿ ಪುಟ್ಟ ಮನೆ’, ಇಂತಹ ಅತ್ಯಂತ ಚೆಲುವಾದ ಕೃತಿಯ ಸುಂದರ ಅನುವಾದ. ಇಂತಹ ಸಾಹಿತ್ಯ ಓದುಗರ ಮನದಲ್ಲಿ ಶಾಶ್ವತವಾಗಿ ಉಳಿದು ಬಿಡುವಂತಹುದು!   
         
ಅನುವಾದ ಅಕಾಡೆಮಿ ಗೌರವ ಪ್ರಶಸ್ತಿಯ ಬೆನ್ನಿಗೇ ೨೦೧೫ರಲ್ಲಿ ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ತು, ಗಮಕಿ ಪ್ರಸನ್ನ ಅವರ ಕೈಯಿಂದ ಗೌರವ ಪ್ರಶಸ್ತಿಯಿತ್ತು ಸನ್ಮಾನಿಸಿದಾಗ ಹೃದಯ ತುಂಬಿದ ಸಂತಸ! ಗೋರೆಗಾಂವ್ ಕರ್ನಾಟಕ ಸಂಘವು, ಹಿಂದೆ ಮಹಿಳಾ ಭಾರತಿ, ವಿಚಾರ ಭಾರತಿಗಳಲ್ಲಿ ವಿಚಾರ ಮಂಡನೆಗೆ ಆಹ್ವಾನಿಸಿ, ಮತ್ತೆ ಮಹಿಳಾ ದಿನ ಪ್ರಯುಕ್ತ ದತ್ತಿನಿಧಿ ಪ್ರಶಸ್ತಿಯಿಂದಲೂ ಸಮ್ಮಾನಿಸಿದಾಗ ಧನ್ಯತಾ ಭಾವ!   ಯಂಗ್ಮೆನ್ಸ್ ಬೋವಿ ಅಸೋಸಿಯೇಶನ್ ಗೌರವಿಸಿ ಸಮ್ಮಾನಿಸಿದಾಗ, ಹುಟ್ಟೂರು, ನನ್ನ ಜನರು ನೀಡಿದ ಸನ್ಮಾನವೆಂಬ ಅಭಿಮಾನ! ಎಲ್ಲಕ್ಕೂ ಹೆಚ್ಚಿನ ಸಂತಸದಿಂದ ಹೃದಯ ತುಂಬಿ ಬರುವುದು, ನಮ್ಮ ಕೃತಿಗಳನ್ನೋದಿ ಓದುಗರು ಸ್ಪಂದಿಸಿದಾಗ!
       
ವಿಶ್ವ ಸಾಹಿತ್ಯದ ಅತ್ಯುತ್ತಮ ಕೃತಿಗಳನ್ನೆಲ್ಲ ನನ್ನ ಕನ್ನಡ ನುಡಿಗಿಳಿಸಿ ಓದುಗರ ಕೈಗಿಡಬೇಕೆಂಬ ಹಂಬಲ ನನ್ನದು. ಆದರೆ ಹಂಬಲವನ್ನು ಸಾಕಾರಗೊಳಿಸಿಕೊಳ್ಳುವ ಧೃಢತೆ ಮಾತ್ರ ಅತ್ಯಲ್ಪ. ಟಿ.ವಿ., ಅಂತರ್ಜಾಲಗಳ ಬಿಡಲಾರದ ಅಂಟಿನಿಂದಾಗಿ ಕಾಲಹರಣ! ಜೊತೆಗೆ ಹಲವಾರು ಸಾಮಾಜಿಕ ಬಾಧ್ಯತೆಗಳ ಬಂಧನ! ನನ್ನ `ಗಾನ್ ವಿದ್ ವಿಂಡ್’ನ ಸ್ಕಾರ್ಲೆಟ್ಳಂತೆ ಇಚ್ಛೆ ಹಾಗೂ ಪ್ರಾಪ್ತಿ ಎರಡು ಭಿನ್ನ ವಿಷಯಗಳು ಎಂಬುದನ್ನರಿಯದಂತೆ ಜೀವಿಸಿರುವವಳು, ನಾನು! ನನ್ನ `ಜೇನ್ ಏರ್’ನ ಜೇನ್ ವಿವೇಕ, ತಾಳ್ಮೆ, ಧೃಢತೆಗಾಗಿಯೂ ಆಶಿಸುವವಳು, ನಾನು. ನಾಳೆ ಇನ್ನೂ ಇದೆ ಎಂಬ ಆಶಾಭಾವನೆಯ ಜೊತೆಗೇ, ನಾಳೆ ಇನ್ನಿಲ್ಲವೆಂಬಂತೆ ಕಾರ್ಯಪ್ರವೃತ್ತಳಾಗಬೇಕು, ಎಂದಂದುಕೊಳ್ಳುವವಳು. ಸ್ಥಿರತೆಯೇ ಮೂರ್ತಿಮತ್ತಾದ ತಂದೆಯ ಮಗಳು, ನಾನು!

(ಶ್ಯಾಮಲಾ ಮಾಧವರ ಜೀವನಕ್ಕೆ ಅನೇಕ ನಾಳೆಗಳು ಇನ್ನೂ ಕಾದಿವೆ, ಪ್ರಸ್ತುತ ಧಾರಾವಾಹಿಗೆ ಮಾತ್ರ ಇದೇ ಕೊನೆ – ಮುಗಿಯಿತು)


4 comments:

 1. "ಹೃದಯದಲ್ಲಿ ಬರೆದುದೆಲ್ಲವನ್ನೂ ಅಕ್ಷರಕ್ಕಿಳಿಸುವುದು ಸಾಧ್ಯವೂ ಅಲ್ಲ; ಸಾಧುವೂ ಅಲ್ಲ."
  Yep that is the great difficulty in writing an autobiography.
  Though I have made few comments about shortness of the narrative at times, the hurried chapters, when looking back in the light of your above said words I can now better understand your perspective.
  Thank you for narrating your life story to us people at large.

  ReplyDelete
 2. Now that you have finished your life story, I wonder when Ashokavardhana will narrate his !?

  ReplyDelete
 3. ನಿಜಕ್ಕೂ ,ಅದೆಷ್ಟು ಸತ್ವಭರಿತ ಬದುಕು ಶ್ಯಾಮಲಾ ಅವರದ್ದು! ಉನ್ನತ ಮನಸ್ಸುಗಳೊಂದಿಗಿನ ಒಡನಾಟ.ಅಪ್ಪ ಅಮ್ಮ ಅಣ್ಣ ತಂಗಿ ಎಲ್ಲರಿಂದಲೂ ಸದ್ಭಾವ, ಸಚ್ಯಾರಿತ್ರದ ನೆನಪುಗಳು..
  ವೈದೇಹಿಯವರು ಹೇಳಿದಂತೆ ಎಲ್ಲೂ ಕಹಿಯಿಲ್ಲ...
  ಆಡಿಯೋ ಇದ್ದುದರಿಂದ, ನನಗಿರುವ ಕಣ್ಣಿನ ತೊಂದರೆಯಿಂದಾಗಿ , ಕೃತಿಯ ಈ ಭಾಗ ನನಗೆ ದೇವಕಿಯವರಿಂದಾಗಿ ಸುಲಭವಾಗಿ ದಕ್ಕಿತು. ಹಾಗಾಗಿ ದೇವಕಿಯವರಿಗೆ ಮತ್ತು ಅಶೋಕವರ್ಧನ ಅವರಿಗೆ ಧನ್ಯವಾದಗಳು... 🙏

  ReplyDelete
 4. The autobiography of Shyamala Madhava has well revealed her literary achievements, so many memorable and meaningful moments and so many great personalities.

  ReplyDelete