06 February 2017

ಬೆಳಕಿನ ದಾರಿ

ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ - ನಾಳೆ ಇನ್ನೂ ಕಾದಿದೆ
ಅಧ್ಯಾಯ - ೨೪

ನಮ್ಮಣ್ಣ, ಸೌದಿಯಲ್ಲಿ ವೃತ್ತಿನಿರತನಾಗಿ ಹತ್ತು ವರ್ಷ ನೆಲಸಿದವನು, ಅತ್ತಿಗೆ ಸುಜಾತಾ ಹಾಗೂ ಮಗು ಅನಿರುದ್ಧನೊಡನೆ ಊರಿಗೆ ಹಿಂದಿರುಗಿದ್ದ. ಸೌದಿಗೆ ತೆರಳುವಾಗ ಮುಂಬೈಯಲ್ಲಿ ಅಜ್ಜಿ, ಅಜ್ಜಂದಿರ ಜೊತೆ ಉಳಿದು ಅಲ್ಲೇ  ಶಾಲೆಗೆ ಹೋದ ಮಗು ಅವಿನಾಶ್, ಮತ್ತೂ ಮುಂಬೈಯಲ್ಲೇ ಉಳಿದ. ಒಂದು ಬೇಸಿಗೆ ರಜೆಯಲ್ಲಿ ನಾವೆಲ್ಲ ಊರಿಗೆ ಹೋದಾಗ ಅತ್ತಿಗೆ ಮುಂಬೈಗೆ ಬಂದಿದ್ದಳು. ಅನಿರುದ್ಧ ಊರಲ್ಲೇ ನಮ್ಮೊಡನಿದ್ದ.

ಮನೆಯೆದುರಿನ 'ಸನ್ವೂ'ಗೆ ಮಕ್ಕಳೊಡನೆ ಹೋಗಿದ್ದ ಅಣ್ಣ, ಹಿಂದಿರುಗುವಾಗ ರಸ್ತೆ ದಾಟಲು ಮಕ್ಕಳು ಹರ್ಷ, ಅನಿರುದ್ಧರ ಕೈ ಹಿಡಿದು ನಿಂತಿದ್ದ. ಮಗು ಅನಿರುದ್ಧ ಅನಿರೀಕ್ಷಿತವಾಗಿ ತಂದೆಯ ಕೈ ಬಿಟ್ಟು, ರಸ್ತೆ ದಾಟಲು ಓಡಿಬಿಟ್ಟ. ಮಂಗಳೂರಿನತ್ತ ಬರುತ್ತಿದ್ದ ಕೇರಳ ಸರಕಾರೀ ಬಸ್, ಮಗುವನ್ನು ಕಂಡು ಅಪಘಾತವನ್ನು ತಪ್ಪಿಸಲು ಥಟ್ಟನೆ ಪಕ್ಕಕ್ಕೆ ತಿರುಗಿದರೂ, ಬಸ್ ಮೂಲೆ ಮಗುವಿಗೆ ಬಡಿದೇ ಬಿಟ್ಟಿತು.
ಹಣೆಯೊಡೆದು ರಕ್ತ ಸುರಿಯುತ್ತಾ ಪ್ರಜ್ಞಾಹೀನನಾಗಿದ್ದ ಮಗುವನ್ನು ತೋಳ್ಗಳಲ್ಲೆತ್ತಿಕೊಂಡ ಅಣ್ಣ, ವಿಹ್ವಲನಾಗಿದ್ದ. ಅಲ್ಲೇ ರಸ್ತೆಯಂಚಿನ ಬೋರ್ವೆಲ್ನಿಂದ ಕೊಡದಲ್ಲಿ ನೀರು ತುಂಬಿಸಿ ಮನೆಗೊಯ್ಯಲು ಸೊಂಟದಲ್ಲಿಟ್ಟಿದ್ದ ನಾನು, ಕೊಡವನ್ನಲ್ಲೇ ಕುಕ್ಕಿ, ಸೆರಗಿನಂಚನ್ನು ಹರಿದು, ನೀರಲ್ಲಿ ಮುಳುಗಿಸಿ, ಮಗುವಿನ ಹಣೆಗೆ ಕಟ್ಟಿದೆ. ಅಣ್ಣ, ಕಾರ್ ಡ್ರೈವ್ ಮಾಡುವ ಸ್ಥಿತಿಯಲ್ಲಿರದುದರಿಂದ ಯಾರೋ ದಾರಿಹೋಕರು ನೆರವಿಗೆ ಬಂದರು. ದಾರಿಯುದ್ದಕ್ಕೂ ನಮ್ಮಣ್ಣ, "ಅಮ್ಮಾ, ನನ್ನ ಪ್ರೀತಿಯ ಮಗು; ಉಳಿಯುವನಲ್ಲಾ?" ಎಂದು ಹಲುಬುತ್ತಿದ್ದನಂತೆ. ಫಾ|ಮುಲ್ಲರ್ಸ್ ತಲುಪಿ, ಶಸ್ತ್ರಕ್ರಿಯೆಯಾಗಿ, ಪ್ರಜ್ಞೆ ಮರುಕಳಿಸಿದ ಮಗು, ವಾರದಲ್ಲಿ ಚೇತರಿಸಿಕೊಂಡು ಮನೆಗೆ ಮರಳಿದ. ಮೇಲೆ ತಿಂಗಳವರೆಗೂ, ಆಗಾಗ ಮಗು ನಿಟ್ಟುಸಿರು ಬಿಡುವಾಗ ನಮಗೆ ಕರುಳು ಕತ್ತರಿಸಿದಂತನಿಸುತ್ತಿತ್ತು.

ಮುಂದಿನ ವರ್ಷ, ಒಂದು ಮಧ್ಯಾಹ್ನ ನಾವು ಊಟದಲ್ಲಿದ್ದಾಗ, ರಸ್ತೆಯಿಂದ ದೊಡ್ಡ ಶಬ್ದ ಕೇಳಿ, ಆಕ್ಸಿಡೆಂಟ್! ಎಂದು ನಾವೆಲ್ಲ ಹೊರಗೋಡಿದೆವು. ಕೆಂಪು ಕಾರೊಂದು ಬಸ್ ಢಿಕ್ಕಿಯಾಗಿ, ತೋಡಿನೊಳಗೆ ಬಿದ್ದಿತ್ತು. ಒಳಗೆ ಚಾಲಕನೊಬ್ಬನೇ ಇದ್ದು, ಪ್ರಜ್ಞಾಹೀನನಾಗಿದ್ದ. ಮದುವೆಯ ಆಮಂತ್ರಣ ಪತ್ರಿಕೆಗಳು ಸೀಟ್ನಲ್ಲಿದ್ದುವು. ಬಹಳ ಕಷ್ಟದಿಂದ ಕಾರಿನ ಬಾಗಿಲನ್ನು ತೆರೆದು ಅವನನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯ್ತು. ಅವನೇ ಮದುಮಗ - ಗೋಪಾಲಕೃಷ್ಣ ಭಟ್ - ಎಂದು ನಂತರ ತಿಳಿಯಿತು. ಪೊಲೀಸರು ನಮ್ಮ ಅನುಮತಿಯೊಂದಿಗೆ ನಮ್ಮ ಕಂಪೌಂಡ್ನಲ್ಲಿ ಇಟ್ಟು ಹೋದ ಕಾರನ್ನು ನೋಡಿ, ಗಾಬರಿಯಾಗಿ ಜನರು ನಮ್ಮ ಸುರಕ್ಷೆಯ ಬಗ್ಗೆ ವಿಚಾರಿಸಲು ಬಂದಿದ್ದರು!

ನನ್ನ ತಮ್ಮ ಮುರಲಿ, ಮಂಗಳೂರಿಂದ ಹಿಂದಿರುಗುತ್ತಿದ್ದ ಬಸ್ಸಿಗೆ ಸಂಭವಿಸಿದ ಅಪಘಾತದಲ್ಲಿ ಪುಣ್ಯವಶಾತ್ ಹೆಚ್ಚಿನ ಅಪಾಯವಾಗದೆ ಉಳಿದುಕೊಂಡಿದ್ದ. ನಮ್ಮ ಚಿಕ್ಕಪ್ಪನ ಮಕ್ಕಳು ಸುಕ, ಸುಜಿ, ಕಾಲೇಜ್ಗೆ ಪಯಣಿಸುವಾಗ ನಡೆದ ಅಪಘಾತದಿಂದ ಅವರೂ ಬದುಕಿ ಬಂದಿದ್ದರು. ನೇತ್ರಾವತಿ ನದಿ ಪಕ್ಕ ನೀರು ತುಂಬಿದ ಗದ್ದೆಗುರುಳಿದ ಬಸ್ನಿಂದ ಅವರನ್ನು ರಕ್ಷಿಸಲಾದರೂ, ಕೆಸರು ನೀರು ಕುಡಿದ ಸುಕನ ಸ್ಥಿತಿ ಗಂಭೀರವೇ ಇತ್ತು.
          
ನಮ್ಮೂರ ಮಂದಬುದ್ದಿಯ ನಿರುಪದ್ರವಿಯೊಬ್ಬ ನಮ್ಮ ಕಣ್ಣೆದುರೇ ನಮ್ಮ ಮನೆಯೆದುರಿನ ಹೆದ್ದಾರಿಯಲ್ಲಿ ಬಸ್ ಆಕ್ಸಿಡೆಂಟ್ ಆಗಿ ಜೀವ ಬಿಟ್ಟಿದ್ದ. ಹೀಗೆ ಇಲ್ಲಿ ನಡೆದ ಅಪಘಾತಗಳು ನೂರಾರು. ರಸ್ತೆಯ ತೀವ್ರ ಅಪಾಯಕರ ಇಳಿಜಾರು, ಹೆದ್ದಾರಿಯೆಂಬ ಅತಿವೇಗ, ಸಿಟಿಬಸ್ಗಳ ಪೈಪೋಟಿ ಮತ್ತು ಏರಿದ ವಾಹನ ಸಂಚಾರವೇ ಇದಕ್ಕೆ ಕಾರಣ. "ಬಲೆ, ಬಲೆ, ಬೇಗ ಬೇಗ; ಪಿರ ಪೋಲೆ, ದುಂಬು ಪೋಲೆ; ಜಪ್ಪುಲೆ, ಬೇಗ, ಬೇಗ!" ಎಂಬ ಆದಷ್ಟೂ ಹೆಚ್ಚು ಜನರನ್ನು ತುಂಬಿಸಿಕೊಂಡು ಟಿಕೆಟ್ ಕೊಡದೆ ಹಣ ಪಡೆವ ತರಾತುರಿಯಲ್ಲಿರುವ ಯಮದೂತರಂಥ ಸಾರಿಗೆ ವ್ಯವಸ್ಥೆ, ನಮ್ಮೂರ ವೈಶಿಷ್ಟ್ಯವೇ ಆಗಿದೆ.
          
ಒಂದಿನ ಬಹುತೀವ್ರ ಅಪಘಾತ ಕ್ಷೇತ್ರವಾದ ಕಲ್ಲಾಪುವಿನಲ್ಲಿ ನಮ್ಮಣ್ಣನ ಕಾರ್ ಭಯಂಕರ ಅಪಘಾತಕ್ಕೀಡಾಗಿ, ಕಾರನ್ನು ಅಲ್ಲಿ ಕಂಡವರು, ಅದರಲ್ಲಿದ್ದವರು ಉಳಿದಿರುವ ಯಾವುದೇ ಛಾನ್ಸ್ ಇಲ್ಲ ಎಂದೇ ನಂಬಿದ್ದರು. ಆದರೆ ಅಣ್ಣ ಪವಾಡಸದೃಶವಾಗಿ ಬದುಕಿ ಉಳಿದಿದ್ದ. ಜೊತೆಯಲ್ಲಿದ್ದ ಕುಟ್ಟಂಕ್ಲ್ ಹಣೆ, ತಲೆಗೆ ಗಾಯವಾಗಿತ್ತು. ಬೆಂಗಳೂರಿಂದ ಬರುತ್ತಾ ದಾರಿಯಲ್ಲಿ ಕಾರನ್ನು ಕಂಡ ನಮ್ಮ ಯಶೋಧರಣ್ಣನ ಡ್ರೈವರ್ ಎಡ್ವಿನ್, ಅಣ್ಣನನ್ನು ಪಕ್ಕಕ್ಕೆ ಕರೆದು, ತಾನು ಕಂಡುದನ್ನು ತಿಳಿಸಿ, ಒಳಗಿದ್ದವರು ಬದುಕಿ ಉಳಿದಿರುವ ಯಾವುದೇ ಛಾನ್ಸ್ ಇಲ್ಲ, ಎಂದೇ ಹೇಳಿದ್ದನಂತೆ. ಕಾರ್ ಅಂತೂ ಸಂಪೂರ್ಣ ನಾಶವಾಗಿತ್ತು. ಅಣ್ಣ ಮಾತ್ರ ಕೂದಲೂ ಕೊಂಕದೆ ಪಾರಾಗಿದ್ದ.

ಮುಂಬೈಯಲ್ಲಿ ಸುಧಕ್ಕ ಹಾಗೂ ಗೆಳತಿ ಸ್ವರ್ಣಳೊಡನೆ ನಾನು ಪಯಣಿಸುತ್ತಿದ್ದ ರಿಕ್ಷಾ ಅಪಘಾತಕ್ಕೀಡಾದ ಪ್ರಸಂಗದಲ್ಲಿ ಹೆಚ್ಚು ನೋವುಂಡವರು ನಮ್ಮ ಸುಧಕ್ಕ. ಸಾಂತಾಕ್ರೂಜ಼್ನಿಂದ ಬರುವಾಗ ಖಾರ್ ಲಿಂಕ್ರೋಡ್ನಲ್ಲಿ ಸಿಗ್ನಲ್ ಸಮೀಪಿಸುವಾಗ ನಮ್ಮ ರಿಕ್ಷಾ ಡ್ರೈವರ್ ಇದ್ದಕ್ಕಿದ್ದಂತೆ ಫ್ಲೈಯಿಂಗ್ ಸಾಸರ್ನಂತೆ ರಿಕ್ಷಾದಿಂದ ಹೊರ ಹಾರಿದ್ದ ಕಂಡು, ಇದೇನೆಂದು ನಾವು ಅಚ್ಚರಿಗೊಂಡೆವು. ನಾವು ಎಷ್ಟೊಂದು ಮಾತಿನಲ್ಲಿ ಮುಳುಗಿದ್ದೆವೆಂದರೆ, ನಮ್ಮ ರಥಕ್ಕೆ ಹಿಂದಿನಿಂದ ವಾಹನವೊಂದು ಬಡಿದುದೂ ನಮ್ಮರಿವಿಗೆ ಬಂದಿರಲಿಲ್ಲ. ನಾವು ಮೂವರೂ ಒಳ್ಳೇ ಪ್ಯಾಕ್ ಆದಂತೆ ಕುಳಿತಿದ್ದರೂ, ತನ್ನ ಸೀಟಿನ ತುದಿಯಲ್ಲಿ ಹಗುರವಾಗಿ ಕುಳಿತಿದ್ದ ನಮ್ಮ ಸಾರಥಿ, ಢಿಕ್ಕಿಯ ಆಘಾತಕ್ಕೆ ನೆಲೆ ತಪ್ಪಿ ಹೊರಗೆ ರಟ್ಟಿದ್ದ! ರಿಕ್ಷಾ ಸಾರಥ್ಯವಿಲ್ಲದೇ, ತಾನಾಗಿಯೇ ಮುಂದೆ ಹೋಗುತ್ತಿದೆ ಎಂದು ನಮಗೆ ಅರಿವಾಗುವಷ್ಟರಲ್ಲಿ ಸುತ್ತ ಜನರ ಬೊಬ್ಬೆ ಕೇಳಿಸಿತು. ಹಾಗೂ ರಿಕ್ಷಾ ಮುಂದೆ ಹೋಗಿ ಸಿಗ್ನಲ್ನಲ್ಲಿ ಮಗುಚಿಕೊಂಡಿತು. ಜನ ಸೇರಿ ನಮ್ಮನ್ನು ಎಬ್ಬಿಸಿ ನಿಲ್ಲಿಸಿದರು. ರಿಕ್ಷಾ ಚಲನೆಯಲ್ಲೇ ಇದ್ದುದರಿಂದ ಅಡಿಗೆ ಬಿದ್ದಿದ್ದ ಸುಧಕ್ಕನ ಕೋಲುಕಾಲಿಗೆ ತಿರುಗುತ್ತಿದ್ದ ಅದರ ಚಕ್ರದ ನಟ್ ಸಿಕ್ಕಿಕೊಂಡು ಗಾಯವಾಗಿತ್ತು. ನನಗೂ ಸ್ವರ್ಣನಿಗೂ ತರಚು ಗಾಯಗಳಷ್ಟೇ ಆಗಿದ್ದುವು. ನನ್ನ ತಲೆಯಲ್ಲೊಂದು ಸಣ್ಣ ಅಪ್ಪ ಮೂಡಿತ್ತು. ಜನರು ನಮ್ಮನ್ನು ಸಮೀಪದಲ್ಲೆ ಇದ್ದ ಡಿಸ್ಪೆನ್ಸರಿಗೆ ಒಯ್ದರು. ಸುಧಕ್ಕನ ಕಾಲಿನ ರಕ್ತನಾಳ ಹರಿದು, ರಕ್ತ ಸುರಿಯುತ್ತಿತ್ತು. ಪ್ರಥಮ ಚಿಕಿತ್ಸೆಯ ಬಳಿಕ ಘಾಟ್ಕೋಪರ್ ಆಸ್ಪತ್ರೆಗೇ ಹೋಗಬೇಕಾಗಿ ಬಂದಿತ್ತು. ಎರಡು ತಿಂಗಳ ವರೆಗೆ ದಿನ ಬಿಟ್ಟು ದಿನ ಸುಧಕ್ಕನ ಕಾಲ ಗಾಯವನ್ನು ಕೆರೆದು ಕೆರೆದು ಡೆಡ್ ಟಿಶ್ಯೂಗಳನ್ನು ತೆಗೆಯಬೇಕಾಗಿ ಬಂದಿತ್ತು.
         
ಕೆಲ ವರ್ಷಗಳ ಬಳಿಕ, ಗೆಳೆಯನೊಡನೆ ಪಿಲಿಯನ್ ರೈಡ್ ಹೋಗಿದ್ದ ತುಷಾರ್ ಕೂಡಾ, ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೇಯ ಸಬ್ವೇಯಲ್ಲಿ ಹೀಗೇ ಅಪಘಾತಕ್ಕೀಡಾಗಿ, ದೀರ್ಘಕಾಲ ಕಾಲಿನ ಮಣಿಗಂಟಿನ ಗಾಯಕ್ಕೆ ಚಿಕಿತ್ಸೆ ಪಡೆಯಬೇಕಾಯ್ತು.
         
ಅಪಘಾತದ ಕಹಿನೆನಪುಗಳ ಭಾರ ಕಡಿಮೆಯಾಗುವಂತೆ ಮನೆಯಲ್ಲಿ ಸಂತೋಷದ ಸಂಭ್ರಮವೆದ್ದಿತು. ಸೌದಿಯಲ್ಲಿ ನೆಲಸಿದ್ದ ತಮ್ಮ ಮುರಲಿ, ಕೊನೆಗೂ ಮದುವೆಗೆ ಒಪ್ಪಿ, ಊರಿಗೆ ಮರಳಲಿದ್ದ. ಆದರೆ ಮದುವೆಯ ಸಮಾರಂಭ, ಸಂಪ್ರದಾಯವೇನೂ ಕೂಡದೆಂದು ಸರಳ ಮದುವೆಗೆ ಮಾತ್ರ ನನ್ನ ತಮ್ಮ ಒಪ್ಪಿಗೆಯಿತ್ತಿದ್ದರೂ, ಅತಿ ಸನಿಹದ ಹಿರಿಯ ಬಂಧುಗಳಿಗಾದರೂ ತಿಳಿಸದೆ ಇರುವುದು ನಮ್ಮಿಂದಾಗಲಿಲ್ಲ. ಯಾರಿಗೂ ಆಮಂತ್ರಣವೀಯದೆ, ಕೇವಲ ಮದುವೆಯ ಬಗ್ಗೆ ಹೇಳಿಕೊಂಡಿದ್ದರೂ, ಪ್ರಿಯರಾದ ಕೆಲ ಸನಿಹ ಬಂಧುಗಳು ಮುರಲಿಯ ಮದುವೆಯ ಸಂತಸದಲ್ಲಿ ಪಾಲ್ಗೊಳ್ಳಲು ತಾವಾಗಿಯೇ ಬಂದರು. ಯಾವುದೇ ಸಾಂಪ್ರದಾಯಿಕ ಉಡುಪನ್ನೂ ಒಪ್ಪದೆ, ಪ್ಯಾಂಟ್, ಶರ್ಟ್ನಲ್ಲೆ ಇದ್ದ ನನ್ನ ತಮ್ಮನನ್ನು ವರಿಸಿದ ನಿತ್ಯಾ, ನಮ್ಮ ತಂದೆಯ ಚಿಕ್ಕಪ್ಪನ ಮಗಳು ಹೇಮಕ್ಕನ ಮಗಳು; ಹಿರಿಯ ಬಂಧು ಅಮೃತ ಸೋಮೇಶ್ವರರ ಪತ್ನಿ ನರ್ಮದಕ್ಕನ ಅಕ್ಕನ ಮಗಳು.
ದೂರದೂರಿನಲ್ಲಿ ಏಕಾಂಗಿಯಾಗಿರುವ ತಮ್ಮನಿಗೆ ಜೊತೆಯಾಗಿರಲು ಪ್ರಿಯ ಸಹಚರಿಯೊಬ್ಬಳು ಬಂದಳೆಂಬ ಸಂತಸ, ಸಮಾಧಾನ ನನ್ನದಾಯ್ತು; ನಮ್ಮೆಲ್ಲರದಾಯ್ತು.


ಸೋದರತ್ತೆಯ ಮಗಳು ನೀಲೂ ಮಡಿಕೇರಿಯಲ್ಲಿದ್ದಾಗ ಮಗು ಅಕ್ಷಯ್ನನ್ನು ನೋಡಲೆಂದು ಹೋಗಿ ಬಂದ ಒಂದು ದಿನದ ಭೇಟಿಯಲ್ಲಿ ಮಡಿಕೇರಿಯ ತಣ್ಪು, ಪ್ರಕೃತಿ ಸೌಂದರ್ಯ, ಕ್ಷಣ ಮಾತ್ರ ದಕ್ಕಿದ ನಿಧಿಯಂತಾಗಿತ್ತು. ಮುಂದೊಂದು ದಿನ ಅಣ್ಣ ಮೋಹನ್, ಗೆಳೆಯ ರವಿಯೊಡನೆ ಬಂಧುಗಳೊಡಗೂಡಿ ನಮ್ಮನ್ನು ಹೆಬ್ರಿಯ ಕೂಡ್ಲುತೀರ್ಥಕ್ಕೆ ಕರೆದೊಯ್ದುದು ನಮಗೆ ಸ್ವರ್ಗವೇ ಕೈಗೆ ಸಿಕ್ಕಂತನಿಸಿತ್ತು. ಹೆಬ್ರಿಯಲ್ಲಿಳಿದು, ಕಾಡದಾರಿಯಲ್ಲಿ ಮೇಲೇರಿ, ಸೀತಾನದಿಯ ಸುರಮ್ಯ ಜಲಪಾತದ ಅಡಿಯ ಕೊಳ್ಳದಲ್ಲಿ ನಡೆಸಿದ ಜಲವಿಹಾರ ಮರೆಯಲಾಗದ ಅನುಭವ. ಸುಮಾರು ಎರಡು ಗಂಟೆ ತಂಪು ತಂಪು ಶೀತಲ ನೀರಿನಲ್ಲಿ ಆಡಿ ಮರಳುವಾಗ, ಉಬ್ಬಸ ಬಾಧೆಯ ಅಣ್ಣ ಮೋಹನ್ ಹಾಗೂ ತಂಗಿ ಮಂಜುಳಾ, ಮರುದಿನ ಹಾಸಿಗೆ ಹಿಡಿಯುವುದು ಖಂಡಿತ ಎಂದು ನಾವಂದುಕೊಂಡರೂ ಹಾಗೇನೂ ಆಗದೇ ಅವರು ಹೆಚ್ಚು ಸ್ವಸ್ಥರಾಗಿದ್ದರು. ಏರಿ, ಇಳಿದು, ಅಷ್ಟು ಹೊತ್ತು ಕೊರೆವ ನೀರಲ್ಲಾಡಿದ ನಾವು, ಮೈ ಕೈ ನೋವಿನಿಂದ ಬಳಲುವುದು ಖಂಡಿತ; ಮರುದಿನ ಇನ್ನು ನೀರು ಹೊರುವುದು ಹೇಗಪ್ಪಾ, ಎಂದು ಕೊಂಡರೆ, ಪುನಃ ಕೂಡ್ಲುತೀರ್ಥಕ್ಕೇ ಹೋಗಿ ನೀರೆತ್ತಿ ತರಬಹುದು, ಎಂಬಂತೆ ನಾವೆಲ್ಲ ಚೈತನ್ಯಶಾಲಿಗಳಾಗಿದ್ದೆವು. ಜಲಪಾತಕ್ಕೆ ಬೊಗಸೆಯೊಡ್ಡಿ ನಾವು ಕುಡಿದ ನೀರು ಅಮೃತ ಸಮಾನವಾಗಿತ್ತು, ಎಂದೇ ಅನಿಸಿತ್ತು!

ಸಾಹಿತಿ ಕೆ.ಟಿ.ಗಟ್ಟಿ ಅವರು, ಮಗಳು ಚಿತ್ಪ್ರಭಾಳೊಡನೆ ಉತ್ತರ ಭಾರತ ಪ್ರವಾಸಕ್ಕೆ ಹೊರಟವರು, ಹಿಂದಿರುಗುವಾಗ ನಮ್ಮಲ್ಲಿಗೆ ಬಂದು ಕೆಲ ದಿನಗಳಿದ್ದು ಹಿಂದಿರುಗಿದರು. ಚಿತ್ಪ್ರಭಾ ನನಗೆ ಮಗಳಂತೆ ಪ್ರಿಯಳಾದಳು. ಸ್ನಿಗ್ಧಹಾಸದ ಸೌಮ್ಯ ಹುಡುಗಿ ಚಿತ್ಪ್ರಭಾ, ನನ್ನ ತುಷಾರ್ನಂತೇ ತುಂಬ ಮೇಧಾವಿ. ತುಷಾರ್ನಂತೇ ಸ್ವತಂತ್ರ ಪ್ರವೃತ್ತಿಯ ಸರಳ ನಡೆನುಡಿಯ ಬುದ್ಧಿಜೀವಿ.
          
ಮುಂಬೈ ಕರ್ನಾಟಕ ಸಂಘದಲ್ಲಿ ನಡೆದ ತುಳು ಪರ್ಬಕ್ಕೆ ಅತಿಥಿಗಳಾಗಿ  ಕೆ.ಟಿ.ಗಟ್ಟಿ ಅವರು ಬರುವಾಗ ಪತ್ನಿ ಯಶೋದಾ ಕೂಡಾ ಜೊತೆಗಿದ್ದು, ಕೆಲದಿನಗಳು ನಮ್ಮಲ್ಲಿದ್ದು ಹಿಂತಿರುಗಿದರು. ನನ್ನ ತಾಯಿ, ತಂದೆ ಹಾಗೂ ಕೆ.ಟಿ.ಗಟ್ಟಿಯವರೊಡನೆ ನಿರಂತರ ನಡೆದ ಪತ್ರವ್ಯವಹಾರ ನನ್ನ ಬರವಣಿಗೆಯನ್ನೂ ಬಹುವಾಗಿ ಪ್ರಭಾವಿಸಿರಬಹುದು ಎಂದುಕೊಂಡಿದ್ದೇನೆ. ತಾಯ್ತಂದೆಯರೊಡನೆ ಪತ್ರವ್ಯವಹಾರ ಇಂಗ್ಲಿಷ್ನಲ್ಲೇ ನಡೆದರೆ, ಕೆ.ಟಿ.ಗಟ್ಟಿ ಅವರೊಡನೆ ಇಂಗ್ಲಿಷ್, ಕನ್ನಡ ಎರಡರಲ್ಲೂ ನಡೆದಿತ್ತು. ಯಶೋದಾ, ಹಾಗೂ ಅವರ ಅಕ್ಕ ಯಮುನಕ್ಕನೊಂದಿಗೆ ಕನ್ನಡದಲ್ಲಿ. ಇವೆಲ್ಲವೂ ಇತರ ಬಂಧು, ಮಿತ್ರರ, ಸಾಹಿತಿಗಳ ನೂರಾರು ಪತ್ರಗಳೊಡನೆ ನಾಲ್ಕೈದು ಚೀಲಗಳಲ್ಲಿ ಈಗಲೂ ನನ್ನಲ್ಲಿ ಸುರಕ್ಷಿತವಿದೆ. ಕೈಬರಹದ ಪತ್ರಗಳ ಸ್ಥಾನವನ್ನು ಈಗ ಇಮೇಲ್ಗಳು ಆಕ್ರಮಿಸಿ ಬಿಟ್ಟಿದ್ದರೂ, ಎಲ್ಲ ಹಳೆಯ ಪತ್ರಸಂಪತ್ತನ್ನು ನನ್ನ ಅಮೂಲ್ಯನಿಧಿಯಾಗಿ ಕಾಪಿಟ್ಟಿದ್ದೇನೆ.

ಎಸ್.ಎಸ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ನಮ್ಮ ಸಮುದಾಯಕ್ಕೇ ಮೊದಲಿಗನಾಗಿ ಬಂದ ತುಷಾರ್, ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಆರಿಸಿಕೊಂಡು, ಮುಂದೆ ಮೆಡಿಕಲ್ಗೆ ಹೋಗಲೆಂದು ನನಗೆ ತುಂಬ ಆಶೆಯಿತ್ತು. ನನ್ನ ಹಂಬಲವಾಗಿದ್ದು ನನ್ನಿಂದ ಅಸಾಧ್ಯವಾದ ಮೆಡಿಕಲ್ ವಿದ್ಯಾಕ್ಷೇತ್ರ ಅವನದಾಗಲೆಂದು ನಾನು ಹಾರೈಸಿದ್ದೆ. ಆದರೆ ತುಷಾರ್, ಆರ್ಟ್ಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿದಾಗ ಎಲ್ಲರೂ ದಂಗಾಗಿದ್ದರು. ನೆರೆಯವರೆಲ್ಲರೂ, ಬಂಧುಗಳೂ, ಗೆಳೆಯರೂ ಎಲ್ಲರೂ ಎಷ್ಟೇ ಹೇಳಿದರೂ ತುಷಾರ್ ನಿರ್ಧಾರ ಬದಲಾಗಲಿಲ್ಲ. ಭಾಂಡೂಪ್ ನಮ್ಮ ಪ್ರಿಯ ನೆರೆಯವರಾದ
ಅವನ ಪ್ರೀತಿಯ ಬಾಲುಮಾಮ, ಅವನನ್ನು ಸಿಕ್ಕಿ ಮಾತನಾಡಿ ಒಪ್ಪಿಸಲೆಂದು ಬಂದು ಬಹಳ ಯತ್ನಿಸಿ ನಿರಾಶರಾಗಿ ಹಿಂದಿರುಗಿದರು. ಆದರೆ ತುಷಾರ್ ನಿರ್ಧಾರವನ್ನು ಕದಲಿಸುವುದು ಯಾರಿಂದಲೂ ಆಗಲಿಲ್ಲ. ಅದನ್ನು ಕೇಳಿ ಆತ್ಮೀಯರಾದ ಕೆ. ಟಿ.ಗಟ್ಟಿ ಅವರು ಬರೆದ ಪತ್ರವನ್ನು ಹೀಗೆ ಮುಗಿಸಿದ್ದರು :  "  ...... ಮೆಡಿಕಲ್ ಪ್ರೊಫೆಶನ್ ಮೇ ಲೂಸ್ ಗುಡ್ ಪ್ರಾಕ್ಟೀಶನರ್, ಬಟ್ ನೇಶನ್ ವಿಲ್ ಗೆಟ್ ಟ್ರೂ ಸಿಟಿಜ಼ನ್ ! " ಅವರ ಚಿನ್ನದಂಥ ಮಾತು ಸುಳ್ಳಾಗಲಿಲ್ಲವೆಂಬ ಧನ್ಯತೆ, ನನ್ನದು!

(ಮುಂದುವರಿಯಲಿದೆ)

No comments:

Post a Comment