18 October 2016

ಕರಂಗಲ್ಪಾಡಿಯ ದಿನಗಳು.

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ
ಅಧ್ಯಾಯ೧೨


ಭಾರತ - ಚೀನಾ ಯುದ್ಧದ ದಿನಗಳವು. ದೀಪಾವಳಿ ಸಮೀಪಿಸಿತ್ತು. ಸೀತಾ ಟೀಚರ ಸೋಶಿಯಲ್ ಸ್ಟಡೀಸ್ ಕ್ಲಾಸ್ನಲ್ಲಿ ಟೀಚರ ಅನುಮತಿ ಕೇಳಿ, ನಾನು ಮನವಿಯೊಂದನ್ನು ಸಹಪಾಠಿಗಳ  ಮುಂದಿಟ್ಟಿದ್ದೆ.  " ಬಾರಿ ಯಾರೂ ಪಟಾಕಿ ಸುಡಬಾರದು; ಪಟಾಕಿಯ ಸದ್ದು, ನಮ್ಮ ಸೈನಿಕರ ಮೇಲೆ ಸಿಡಿವ ಗುಂಡಿನ ಸದ್ದಿನಂತೆ ಕೇಳುವುದು.... " ಎಂದು ಪುಟ್ಟ ಭಾಷಣ ಬಿಗಿದಿದ್ದೆ. ಸೀತಾ ಟೀಚರ್, ಮರುದಿನ ಅಸೆಂಬ್ಲಿಯಲ್ಲಿ ನಾನು ಭಾಷಣವನ್ನು ಪುನರುಚ್ಚರಿಸುವಂತೆ ಮಾಡಿದರು. ಯುದ್ಧನಿಧಿಗೆ ನಾನು ನೀಡಿದ ನನ್ನ ಚಿನ್ನದ ಸರವನ್ನು ಟೀಚರ್ ನನಗೆ ಹಿಂತಿರುಗಿಸಿದ್ದರು. ನೆಹರೂ ಮೈದಾನಿನಲ್ಲಿ ನಡೆದ ನಿಧಿ ಸಂಗ್ರಹ ಸಭೆಯ ಪುಳಕ, ರೋಮರೋಮವೂ ನಿಮಿರಿ ನಿಂತ ಪರಿ ಈಗಲೂ ನನ್ನ ನರನಾಡಿಗಳಲ್ಲಿದೆ.

ಗಂಗ ನಿವಾಸ್ನಲ್ಲಿದ್ದಾಗ ದಸರಾ ಹಬ್ಬದ ಮಂಗಳಾದೇವಿ ಜಾತ್ರೆಗೆ ಹೋಗಿ, ಆ ಜನಸಂದಣಿಯಲ್ಲಾದ ಅಹಿತಕರ ಕೆಟ್ಟ ಅನುಭವಗಳಿಗೆ ರೋಸಿ ಇನ್ನೆಂದೂ ಇಂತಹ ಜಾತ್ರೆಗಳಿಗೆ ಹೋಗ ಬಾರದೆಂದು ನಿರ್ಧರಿಸಿದೆ. ಬಾಲ್ಯದಿಂದ ಯೌವನಕ್ಕೆ ಕಾಲಿರಿಸುತ್ತಿದ್ದ ದಿನಗಳವು. ಗಂಡಸರು ಬಳಿ ಬಂದರೆ ದೇಹ ತಾನಾಗೇ ಮುದುಡುತ್ತಿತ್ತು. ಸಂಕೋಚ, ಮುಜುಗರ
ಬಾಧಿಸುತ್ತಿತ್ತು; ಅಹಿತಭಾವನೆ ನನ್ನ ವ್ಯಕ್ತಿತ್ವವನ್ನೇ ಕುಗ್ಗಿಸುತ್ತಿತ್ತು. ಬಾಲ್ಯದಲ್ಲಿ ನಮ್ಮ ಕೋಟೆ ಜಾತ್ರೆಗೆ ಹೋಗುವುದಿತ್ತು. ಅದು ನಮ್ಮ ಮನೆಯ ಕಾರ್ಯಕ್ರಮದಂತೇ ಯಾವುದೇ ಒತ್ತಡ, ಸಂದಣಿ, ಅಹಿತಕರ ಅನುಭವಗಳಿರದ ಪ್ರಿಯ ಸಮಾರಂಭ. ಅಡ್ಕ ದೈವಸ್ಥಾನ ನಮಗೆ ದೂರವೇ ಇತ್ತು. ಅಡ್ಕದ ಅಜ್ಜಿಯ ಮನೆ ಅಲ್ಲೇ ಸನಿಹದಲಿ ಇದ್ದಾಗ ನನ್ನ ಎಂಟು ವರ್ಷ ಪ್ರಾಯದಲ್ಲಿ ಒಮ್ಮೆ ಜಾತ್ರೆಗೆ ಹೋಗಿದ್ದೆ. ಕಾರ್ಸ್ಟ್ರೀಟ್ ವೆಂಕಟರಮಣ ಜಾತ್ರೆಗೆ ಒಂದೆರಡು ಬಾರಿ ಹೋದಾಗ ದೇವಳದೆದುರು ರಥಯಾತ್ರೆಯ ದಾರಿಯಲ್ಲಿದ್ದ ನಮ್ಮ ಬಂಧುಗಳ ಅಂಗಡಿಯ ಮಾಳಿಗೆಯಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದ್ದೆವು.. ಮಣ್ಣಗುಡ್ಡೆ ದಿಂಡಿನ ದರ್ಶನ ನಮ್ಮ ಪ್ರಿಯ ಭಾಮಾಂಟಿಯ ಮನೆಯೊಳಗಿಂದಲೇ ಆಗುತ್ತಿತ್ತು. ಅಜ್ಜಿಮನೆ ಸನಿಹದ ಗದ್ದೆನೇಮದಲ್ಲಿ ಪಂಜುರ್ಲಿ ಭಯ ಹುಟ್ಟಿಸಿದರೂ, ಮತ್ತಾವ ಕಹಿ ಅನುಭವ ಇರಲಿಲ್ಲ.

ಗಂಗ ನಿವಾಸ ಮನೆಯಿಂದ ಪುನಃ ನಮ್ಮ ವಾಸ್ತವ್ಯ ಬದಲಾಗಿ ಕರಂಗಲ್ಪಾಡಿಯಲ್ಲಿ . ಡಿಸೋಜಾ ಟೀಚರ ಬಾಡಿಗೆ ಮನೆಗೆ ಬಂದು ನೆಲೆಯಾದೆವು. ಕರಂಗಲ್ಪಾಡಿಯಲ್ಲಿ ಜೈಲುರಸ್ತೆ ಸೇರುವ ಒಳರಸ್ತೆಯ ನಡುಮಧ್ಯೆ ಎರಡು ಹೆಜ್ಜೆ ಕೆಳಗಿಳಿದರೆ ಅಲ್ಲಿ ನಮ್ಮ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಮನೆ. ರಸ್ತೆಬದಿಯಲ್ಲಿ ಪರಡ್ಕರ್ ಅವರ ಮನೆ. ತೆಕ್ಕುಂಜೆಯವರ ಮನೆಯ ಎಡಕ್ಕೆ ಮುಳಿಯ ಮಹಾಬಲ ಭಟ್ಟ, ಮನೋರಮಮ್ಮನ ಮನೆ. ತೆಕ್ಕುಂಜೆಯವರ ಮನೆಗಿದಿರಾಗಿ . ಡಿಸೋಜಾ ಟೀಚರಮನೆ. ಅವರ ಎಡಕ್ಕೆ ನಮ್ಮ ಹಾಗೂ ನಮ್ಮ ಮನೆಗೆ ತಾಗಿಯೇ ಇದ್ದ ಕೊಂಕಣಿಗಳ ಮನೆನಮ್ಮ ಮನೆಗೆ ಹಿಂಬಾಗಿಲು ಇರಲಿಲ್ಲ. ಬಂದ ದಿನವೇ ಬೆಳಿಗ್ಗೆ, ಶಾಲೆಗೆ ಹೊರಡುವ ಅವಸರದಲ್ಲಿ ನಾನು ಗಂಜಿ ನೀರನ್ನು ಎದುರು ಬಾಗಿಲಿನಿಂದ ಹೊರಗೆ ಚೆಲ್ಲಿದ್ದೆ. ಡಿಸೋಜಾ ಟೀಚರ ಮನೆಯೆದುರು ಗಿಡಗಳಿಂದ ಮರೆಯಾದ ದಿನ್ನೆಯ ಮೇಲೆ ನಡೆದು ಬಂದು ನಮ್ಮ ಅಂಗಳಕ್ಕಿಳಿದ ತೆಕ್ಕುಂಜೆ ಮಾಷ್ಟ್ರು ಬೆದರಿ ಹಿಂದಡಿಯಿಟ್ಟರು. ಗಾಬರಿಯಾಗಿ "ಸಾರಿ, ಸರ್", ಎಂದು ನಾನಂದಾಗ, ತಮ್ಮ ಬಿಳಿಯ ಧೋತರವನ್ನು ಕೊಡವಿಕೊಂಡು, “ಚಿಂತೆಯಿಲ್ಲ", ಎಂದು ನಕ್ಕು ಹಾಗೇ ಮುಂದುವರಿದು ಹೋದರು. ಮುಂದಿನ ವರ್ಷಗಳಲ್ಲಿ ನನ್ನನ್ನು ಸಹಜವಾಗಿ ಹೃದಯಕ್ಕೆ ಹತ್ತಿರವಾಗಿಸಿಕೊಂಡು ಮಗಳಂತೆ ಪ್ರೀತಿಸಿದವರು!

ತೆಕ್ಕುಂಜೆ ಮಾಷ್ಟ್ರ ಮನೆಯಲ್ಲಿ ಮನೆಯ ಕೊಟ್ಟಿಗೆಯ ಹಸುಗಳೇ ಅವರ ಮಕ್ಕಳು. "ಗಂಗೇ, ಕಪಿಲೇ" ಎಂದು ದನಗಳನ್ನು ಮಾತನಾಡಿಸುವ, "ಜಾತೂ" ಎಂದು ಪಕ್ಕದ ಪರಡ್ಕರ್ ಮನೆಯ ಪುಟ್ಟ ಸುಜಾತಳನ್ನು ಕರೆವ ಅವರ ಘಂಟಾ ದನಿ ಕೇಳಿ ಬರುತ್ತಿತ್ತು. ಬೆಳಗಿನ ಕಾಫಿ ತಿಂಡಿಗೆ ಜಾತೂ ಅವರಲ್ಲಿಗೆ ಬರಬೇಕು. ಇತ್ತ ಪಕ್ಕದ ಮನೆಯಿಂದ ಬಹಳ ಠಾಕು ಠೀಕಾಗಿ ಕಛೇರಿಗೆ ಹೊರಡುತ್ತಿದ್ದ ಮಹಾಬಲ ಭಟ್ಟರು ಹೊರಟುಹೋದ ಮೇಲೆ ಮನೋರಮಮ್ಮ ನಮ್ಮವರು. ಅವರ ಮಗ ಜಯರಾಮ ನನ್ನ ತಮ್ಮ ಮುರಲಿಯ ಕ್ಲಾಸಿನಲ್ಲಿದ್ದ. ಮಗು ಮಹೇಶ ಮುದ್ದಾದ ಪುಟ್ಟ ಮಗು. ಮುರಲಿ ಕೂಡಾ ತನ್ನಣ್ಣನೆಂದೇ ತಿಳಿದುಕೊಂಡಿದ್ದ ಮಹೇಶ, "ಅಮ್ಮ, ನಾವೆಲ್ಲ ಬಿಳಿ ಇದ್ದೇವಲ್ಲ; ಮುರಲಿ ಅಣ್ಣ ಮಾತ್ರ ಯಾಕೆ ಕಪ್ಪು? " ಎಂದು ಕೇಳಿದ್ದ. "ಅದು, ನೀವು ಹೊಟ್ಟೆಯಲ್ಲಿದ್ದಾಗ ನಾನು ಸಕ್ಕರೆ ತಿಂದಿದ್ದೆ; ಮುರಲಿ ಅಣ್ಣ ಹೊಟ್ಟೆಯಲ್ಲಿದ್ದಾಗ ಬೆಲ್ಲ ತಿಂದಿದ್ದೆ", ಎಂದು ಉತ್ತರಿಸಿದ್ದರು, ಮನೋರಮಮ್ಮ!

ಡಿಸೋಜಾ ಟೀಚರ್, ತೀವ್ರ ಉಬ್ಬಸದಿಂದ ಬಳಲುತ್ತಾ ಸದಾ ಒರಗುಕುರ್ಚಿಯಲ್ಲಿ ಒರಗಿಕೊಂಡಿರುವ, ಸ್ವಲ್ಪ ತೀಕ್ಷ್ಣ ಸ್ವಭಾವದ ಮನ, ಮನೆಗಳ ಒಡತಿ. ಅವರ ತಂಗಿ ಡಿಸೋಜಾ ಆಂಟಿ ಅಷ್ಟೇ ಸೌಮ್ಯ ಸ್ವಭಾವದ, ಸದಾ ಅಡಿಗೆಕೋಣೆಯಲ್ಲೇ ವ್ಯಸ್ತರಿರುವ, ದನಿಯೆತ್ತದ ಸರಳಜೀವಿ. ಅವರ ತಮ್ಮ ಡಿಸೋಜಾ ಅಂಕ್ಲ್, ತಡರಾತ್ರಿಯಲ್ಲಿ ಹಾಡು ಗುನುಗುತ್ತಾ ಬರುವ ಸಜ್ಜನ. ನಮ್ಮ ಮನೆಯ ಬಲಕ್ಕೆ ಸೊಗಸಾದ ರುಚಿಯಾದ ಹಣ್ಣುಗಳ ಬೊಗರಿ ಹಣ್ಣಿನ ಮರವೊಂದಿತ್ತು. ನಮ್ಮ ಮನೆಗಳ ಹಿಂದೆ ಗುಲಾಬಿ ವರ್ಣದ ಪನ್ನೇರಳೆ ಹಣ್ಣುಗಳ ದೊಡ್ಡ ಮರ, ಮತ್ತೆ ಹಿಂದೆ ಬೇಲಿಯಂಚಿನಲ್ಲಿ ದಾರೆಹುಳಿ ಮರವೂ ಇತ್ತು.

ಪಕ್ಕದ ನಾಯಕ್ ಮನೆಯವರೂ ಸಜ್ಜನರು. ಅಣ್ಣ ತಮ್ಮಂದಿರ ಸಂಸಾರವಿದ್ದ ಮನೆಯಲ್ಲಿ ಗಂಡು ಮಕ್ಕಳೇ ಇದ್ದರು. ಪ್ರತಿ ಬೆಳಗೂ ಗೋಡೆಯಾಚಿನಿಂದ ಅವರ ರೇಡಿಯೋ ಅಲಾರ್ಮ್ನೊಂದಿಗೆ ನಮಗೆ ಎಚ್ಚರವಾಗುತ್ತಿತ್ತು. ನಾವು ಬೆಸೆಂಟ್ ಶಾಲೆಯಲ್ಲಿದ್ದಾಗಲೇ ತಮ್ಮ ಮುರಲಿ ಕೊಳಲು ವಾದನ ಕಲಿಯುತ್ತಿದ್ದ. ತುಂಟನಾಗಿದ್ದ ಮುರಲಿ, ಒಮ್ಮೆ ವಸಂತೋತ್ಸವದಲ್ಲಿ ಕೊಳಲು ವಾದನವೆಂದು ಅವನ ಹೆಸರು ಮೈಕ್ನಲ್ಲಿ ಕರೆದ ಮೇಲೆಯೇ, ರಸ್ತೆಯಾಚೆ ದೊಡ್ಡ ಶಾಲೆಯ ಹಿತ್ತಿಲಲ್ಲಿ ಮರವೇರಿ ಕುಳಿತಿದ್ದವ, ಓಡೋಡಿ ಬಂದು ಏರಿದ ಉಸಿರಿನಲ್ಲಿ "ಹಿಮಗಿರಿ ತನಯೆ ....... " ನುಡಿಸಿದ್ದ. ಅವನ ಕೊಳಲು  ಮಾಷ್ಟ್ರ ಮನೆ ಇಲ್ಲಿ ಕರಂಗಲ್ಪಾಡಿಯಲ್ಲಿ ನಮ್ಮಿಂದ ಅನತಿ ದೂರದಲ್ಲಿತ್ತು. ಹಾಗೂ  ಮುರಲಿಯೂ, ಅಣ್ಣನೂ ಅಲೋಶಿಯಸ್ ಹೈಸ್ಕೂಲ್ಗೆ ಹೋಗುತ್ತಿದ್ದರು. ನನ್ನ ಎಸ್. ಎಸ್. ಎಲ್. ಸಿ. ಪರೀಕ್ಷಾ ತಯಾರಿಯ ದಿನಗಳಲ್ಲಿ ಬೆಳಗಿನ ಬ್ರಾಹ್ಮೀ ಮುಹೂರ್ತದ ನಾಲ್ಕು ಗಂಟೆಗೆ ತಪ್ಪದೆ ಗೋಪಾಲಕೃಷ್ಣ ಮಾಸ್ಟರ ಮನೆಯಿಂದ ಕೊಳಲುವಾದನ ಅಲೆ ಅಲೆಯಾಗಿ ಕೇಳಿ ಬರುವಾಗ ಅಮ್ಮ ನಮ್ಮನ್ನು ಓದಲೆಂದು ಎಬ್ಬಿಸುತ್ತಿದ್ದರು. ಚಾ ಇಷ್ಟವಿಲ್ಲದ ನನ್ನ ನಿದ್ದೆಯನ್ನೋಡಿಸಲೆಂದು ಅಮ್ಮ ಚಾ ಮಾಡಿ ತಂದಿಡುತ್ತಿದ್ದರು. ಕಷ್ಟದಿಂದ ಅದನ್ನು ಕುಡಿದರೂ, ಕೊಳಲುವಾದನ ನಿಂತೊಡನೆ ನಾನು ಮೇಜಿನ ಮೇಲೆ ಬಾಗಿ ನಿದ್ದೆ ಹೋಗುತ್ತಿದ್ದೆ. ತನ್ನ ಕೆಲಸ ನಿರ್ವಹಿಸುವಲ್ಲಿ ಚಾ ಸೋಲುತ್ತಿತ್ತು; ಹಾಗೂ ಅಮ್ಮನ ಗದರಿಕೆ ನನಗಾಗಿ ಕಾದಿರುತ್ತಿತ್ತು.
 
ನೆಟಿವಿಟಿ ಹಬ್ಬದ ದಿನ ಟೀಚರ ಮನೆಯಿಂದ ಆಂಟಿ ಹಬ್ಬದಡಿಗೆ ತಂದಿಟ್ಟು ಹೋಗುತ್ತಿದ್ದರು. ವಿವಿಧ ಕಾಯಿಪಲ್ಲೆಗಳ ಮೇಲೋಗರದೊಡನೆ ಪತ್ರಡೆ ಗಷಿ, ಅಂಬಟೆ ಪದಾರ್ಥ, ಪೇರಳೆ ಜೆಲ್ಲಿ ನಮಗೆ ತುಂಬ ಇಷ್ಟವಾಗುತ್ತಿದ್ದುವು. ಅಷ್ಟಮಿ, ಚೌತಿ ಹಬ್ಬಗಳಲ್ಲಿ ನೆರೆಯ ಕೊಂಕಣಿಗಳ ಹಬ್ಬದೂಟವೂ ಬರುತ್ತಿತ್ತು. ಮನೆಯಲ್ಲಿ ನಮ್ಮದೇ ಆದ ಹಬ್ಬದಡಿಗೆ ಹೇಗೂ ಇರುತ್ತಿತ್ತು. ಚೌತಿಯ ದಿನ ಭಟ್ಟರು ಬಂದು ಅವರಲ್ಲಿ ಪೂಜೆಯಾಗುವುದು ಬಹಳ ಹೊತ್ತಾಗುತ್ತಿತ್ತು. ಬಳಿಕ ನಮ್ಮೆರಡು ಮನೆಗಳ ಉಪಯೋಗಕ್ಕಾಗಿ ಇದ್ದ ಹೆಚ್ಚೇನೂ ಆಳವಲ್ಲದ ಬಾವಿಯಲ್ಲಿ ಗಣಪತಿಯನ್ನು ವಿಸರ್ಜಿಸಲಾಗುತ್ತಿತ್ತು.
[ಕಾಲೇಜ್ ಗೆಳತಿ ಚಿತ್ರ]
ಪರಡ್ಕರ್ ಮನೆಯ ಸುಚರಿತಾಳ ಸುಶ್ರಾವ್ಯ ಕಂಠದ ಹಾಡು ಆಗಾಗ ಮೇಲಿನಿಂದ ತೇಲಿ ಬರುತ್ತಿತ್ತು. ಅವಳ ತಂಗಿ ಸುಮನಾ ಹಾರೋಡುತ್ತಲೇ ಇದ್ದುದರಿಂದ "ಶೀ ಈಸ್ ಗೋಟ್!" ಎಂದು ಡಿಸೋಜಾ ಟೀಚರ್ ಜರೆಯುತ್ತಿದ್ದರು. ಈಗ ಸುಮನಾ ಸ್ಕೇಟಿಂಗ್ ಶಿಕ್ಷಕಿಯಾಗಿದ್ದಾಳೆ
[ಕಾಲೇಜ್ ಗೆಳತಿ ಜಯಶ್ರೀ]
ನಾವು ಕರಂಗಲ್ಪಾಡಿ ಮನೆಗೆ ಬಂದ ಕೆಲ ದಿನಗಳಲ್ಲಿ ನಮ್ಮ ಚಿಕ್ಕ ದೊಡ್ಡತಂದೆ, ತೀವ್ರ ಅಸ್ವಾಸ್ಥ್ಯದಿಂದ ಆಸ್ಪತ್ರೆ ಸೇರಿದ್ದವರು, ಚೇತರಿಕೆಗಾಗಿ ನಮ್ಮ ಮನೆಯಲ್ಲಿ ಬಂದಿದ್ದರು. ಸದಾ ಕೆಮ್ಮುತ್ತಿದ್ದ ದೊಡ್ಡಪ್ಪ ಪುನಃ ಆಸ್ಪತ್ರೆ ಸೇರಿ ಅಲ್ಲೇ ನಿಧನರಾದ ಕಾಲಕ್ಕೆ ಮಂಗಳೂರು - ಸೋಮೇಶ್ವರ ಉಚ್ಚಿಲ ರಸ್ತೆಯಿನ್ನೂ ನಿರ್ಮಾಣವಾಗಿರಲಿಲ್ಲ. ಚಂಪಕ ವಿಲಾಸದ ವಕೀಲ ದೊಡ್ಡಪ್ಪ, ನಮ್ಮನ್ನು ಶಾಲೆಗಳಿಂದ ಕರಕೊಂಡು ಬಂದರಕ್ಕೆ ಬಂದು ಅಲ್ಲಿಂದ ಲಾಂಚ್ನಲ್ಲಿ ಉಳ್ಳಾಲಕ್ಕೆ ಬಂದು ಅಲ್ಲಿಂದ ಅಜ್ಜಿ ಮನೆ ತಲುಪಿಸಿದರು. ಕಂಕನಾಡಿ ಆಸ್ಪತ್ರೆಯಿಂದ ನನ್ನ ತಾಯಿ ತಂದೆ, ಲೇನ್ ಕಾಟೇಜ್ ರಮೇಶಮಾಮನೊಡನೆ   ದೊಡ್ಡಪ್ಪನ ಮೃತ ದೇಹವನ್ನು ಟ್ಯಾಕ್ಸಿಯಲ್ಲಿ ಊರಿಗೆ ತಂದಿದ್ದರು. ಇನ್ನೂ ರಸ್ತೆಯಾಗದ ಕಲ್ಲು, ಬಂಡೆ, ಮಣ್ಣಿನ ಹಾದಿ. ಎಕ್ಕೂರು ಗುಡ್ಡದ ಬೆಟ್ಟಗಳ ನಡುವಿನ ಕೊರಕಲಲ್ಲಿ ವಾಲಾಡುತ್ತಾ ಧಡ ಭಡ ಸಾಗಿದ ಟ್ಯಾಕ್ಸಿ, ಇಕ್ಕಟ್ಟಿನಲ್ಲಿ  ಕಲ್ಲೊಂದರ ಮೇಲೇರಲಾಗದೆ ನಿಂತಾಗ, ತಂದೆಯವರು ಕೆಳಗಿಳಿದು ವಾಹನಕ್ಕೆ ಕೈಕೊಟ್ಟು ದೂಡಬೇಕಾಗಿ ಬಂತಂತೆ. ಅತ್ತಿತ್ತ ಅಲುಗಾಟದಲ್ಲಿ ಅಮ್ಮನ ಮೇಲೆ ವಾಲುವ ನಿರ್ಜೀವ ದೇಹಇಂದು ಎಕ್ಕೂರು ಗುಡ್ಡವೇ ಮಾಯವಾಗಿದೆ. ಅಲ್ಲಿ ಮೈದಾಳಿದ ಚತುಷ್ಪಥದ ಮೇಲೆ ವಾಹನಗಳು
 ಮಿಂಚಿನಂತೆ ಹಾರೋಡುತ್ತಿವೆ.

ದೊಡ್ಡಪ್ಪ ತೀರಿಕೊಂಡ ತರುಣದಲ್ಲಿ ಒಂದಿನ ನಮ್ಮ ಬೆಲ್ಯಮ್ಮ, ನನ್ನ ತಂದೆಯನ್ನು "ನಾರಾಯಣಾ" ಎಂದು ಕರೆವ ಬದಲಿಗೆ ತಪ್ಪಿ, "ಚಿರಿಯಂಡಾ" (ಶ್ರೀಧರ) ಎಂದು ದೊಡ್ಡಪ್ಪನ ಹೆಸರಿಂದ ಕರೆದು ಮತ್ತೆ ಬಿಕ್ಕಿಬಿಕ್ಕಿ ಅತ್ತುದನ್ನು, ತಂದೆಯವರು ತನ್ನಮ್ಮನನ್ನು ಅಪ್ಪಿ ಹಿಡಿದು ಸಂತೈಸಿದ್ದನ್ನು ನಾನೆಂದೂ ಮರೆಯೆ

ಕೆಲ ಸಮಯದಲ್ಲೇ ತಂದೆಯವರನ್ನು ಟೈಫಾಯಿಡ್ ಜ್ವರ ಬಾಧಿಸಿದಾಗ ನಮ್ಮ ಡಾ. ರಾಧಂಕ್ಲ್ ಮನೆಗೆ ಬಂದು ಅವರ ಚಿಕಿತ್ಸೆಯನ್ನು ನೋಡುತ್ತಿದ್ದು, ಮಕ್ಕಳಾದ ನಮಗೂ ರೋಗನಿರೋಧಕ ಇನಾಕ್ಯುಲೇಶನ್ ನೀಡಿದ್ದರು.

ನಮ್ಮ ಮನೆಯೆದುರಿನ ವಿಶಾಲ ಹಿತ್ತಿಲ ಮನೆಯಲ್ಲಿ  ಕೊಂಕಣಿ ಕುಟುಂಬದ ಶಾರದಮ್ಮ ಮತ್ತು ಅವರ ವೃಧ್ಧ ಅತ್ತೆ ಇದ್ದರು. ಎಲಿಫೆಂಟೈಸಿಸ್ನಿಂದ ಬಳಲುತ್ತಿದ್ದ ವೃದ್ಧೆಯ ನರಳಾಟ ಆಗಾಗ ಕೇಳಿಸುತ್ತಿತ್ತು. ಒಂದಿನ ಅನಿವಾರ್ಯವಾಗಿ ಶಾರದಮ್ಮ ಎಲ್ಲೋ ಹೋಗಬೇಕಾಗಿ ಬಂದು ಒಬ್ಬರೇ ಇದ್ದ ಮುದಿ ಅತ್ತೆಯ ನರಳಾಟ ಮಿತಿ ಮೀರಿದಾಗ ನಮ್ಮಮ್ಮ ನೋಡಿ ಬರುವೆನೆಂದು ಅವರಲ್ಲಿಗೆ ಹೋದರುಸ್ವಲ್ಪ ಸಮಯದ ಬಳಿಕ ನರಳಾಟ ನಿಂತಿತು. ಅರ್ಧ ಗಂಟೆಯ ಬಳಿಕ ಹಿಂದಿರುಗಿದ ಅಮ್ಮ, ತಂದೆಯವರು ಏನಾಯ್ತೆಂದು ಕೇಳಿದಾಗ "ಪಾಪ! ನೋವು, ಸಂಕಟ ತಡೆಯಲಾಗದೆ, 'ಟೀಚರ್, ನಿಮ್ಮ ದಮ್ಮಯ್ಯ! ಒಮ್ಮೆ ನನ್ನನ್ನು ಎತ್ತಿ ಬಾವಿಗೆ ಹಾಕಿಬಿಡಿ; ದೇವರಾಣೆ; ನಾನು ಯಾರಿಗೂ ಹೇಳುವುದಿಲ್ಲ', ಎಂದರು" ಎಂದಂದಾಗ ಇಬ್ಬರ ಮುಖದಲ್ಲೂ ನಗು ಮೂಡಿತು. ನೆನೆದಷ್ಟೂ ನಮ್ಮಲ್ಲೂ ನಗು ಮಾರ್ದನಿಸಿತು.

(ಮುಂದುವರಿಯಲಿದೆ)

No comments:

Post a Comment