04 October 2016

ಗಂಗಾ ನಿವಾಸದ ದಿನಗಳು

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ
ಅಧ್ಯಾಯ೧೦


ಬೆಂದೂರ್ ವೆಲ್ ವೃತ್ತದಿಂದ ಎರಡು ಹೆಜ್ಜೆ ನಡೆದರೆ ಸಿಗುವ ' ತುಲಸೀ ವಿಲಾಸ' ಎದುರಿಗೇ 'ಗಂಗ ನಿವಾಸ". ನಮ್ಮ ಗೋಪಿ ದೊಡ್ಡಮ್ಮನ ಅಮ್ಮ ಗಂಗಮ್ಮಜ್ಜಿಯ ಮನೆ, 'ಗಂಗ ನಿವಾಸ'. ಮನೆ ತುಂಬಾ ಹಸು,ಕರುಗಳು, ಆಡುಗಳು ಮತ್ತು ಬೆಕ್ಕುಗಳು. ಮರದ ಚೆಲುವಾದ ಪೀಠೋಪಕರಣಗಳು ಮನೆ ತುಂಬಿದ್ದವು. ಗೇಟಿನಿಂದ ಒಳಹೊಕ್ಕುವಲ್ಲೇ ಯಥೇಚ್ಛ ಹಣ್ಣುಗಳನ್ನು ಬಿಡುತ್ತಿದ್ದ ಬಳ್ಳಾರಿ ಮಾವಿನ ಹಣ್ಣಿನ ಮರವೊಂದಿತ್ತು. ಅಂಗಳದೆದುರಿಗೆ ದೊಡ್ಡ ಚಕ್ಕೋತ್ರದ ಮರವಿತ್ತು. ಅದರ ಕೆಳಗೆ ಫ್ಯಾಷನ್ ಫ್ರೂಟ್ ಬಳ್ಳಿಯ ಚಪ್ಪರ. ದೊಡ್ಡಮ್ಮ ಫ್ಯಾಶನ್ ಫ್ರೂಟ್ನಿಂದ ಜ್ಯೂಸ್ ತಯಾರಿಸುತ್ತಿದ್ದರು. ಅಂಗಳದೆದುರಿಗೊಂದು ರಾಟೆಬಾವಿ.

         

ಬೆಂಗಳೂರಿಂದ ಗೆಳತಿ ಸ್ವರ್ಣಲತಾ ಬಂದು ಎರಡು ದಿನ ಜೊತೆಗಿದ್ದಳು. ನಮಗಾಗ ವೀರಕೇಸರಿ ಸೀತಾರಾಮ ರಾವ್ ಅವರ ' ದೌಲತ್ ' ಕಾದಂಬರಿ ಉಪಪಠ್ಯವಾಗಿತ್ತು. ನಾನಂತೂ ದೌಲತ್ ಪುಟ ಪಟಗಳಲ್ಲಿ ವಿಹರಿಸುತ್ತಿದ್ದೆ. ಐತಿಹಾಸಿಕ ಕಾದಂಬರಿಗಳು ನನಗೆ ಬಲು ಮೆಚ್ಚುಮಾತುಕತೆ ನಡೆದಂತೇ ದೌಲತ್ ಓದು ಕೂಡಾ ಸಾಗಿತ್ತು. ಬಾವಿಯಿಂದ ನೀರೆಳೆಯಲು ಹೋದಾಗ, ದೌಲತ್ ನಮ್ಮ ಬಾವಿಕಟ್ಟೆಯಲ್ಲಿ ಆಸೀನಳಾದವಳು, ರಾಟೆ ತಿರುಗಿಸಿ ಕೊಡವೆತ್ತಿಕೊಳ್ಳುವಾಗ ಕೈ ತಾಗಿ ಬಾವಿಯೊಳಗೆ ಬಿದ್ದುಬಿಟ್ಟಳು. ನನಗೆ ಜೀವವೇ ಹೋದಂತಾಯ್ತು. "ಎಷ್ಟು ಮಾತು, ಮತ್ತೆ? ಪುಸ್ತಕ ಒಳಗಿಟ್ಟು ಬರಲಿಕ್ಕಾಗ್ಲಿಲ್ವಾ? ನೀರೆಳೆಯುವಾಗ್ಲೂ  ಪುಸ್ತಕ ಹತ್ತಿರವೇ ಇರಬೇಕಾ? " ಎಂದು ಗಂಗಮ್ಮಜ್ಜಿ ಬೈದರು. ಮತ್ತೆ ಬುಟ್ಟಿ ತಂದು, ಬುಟ್ಟಿಯಲ್ಲಿ ಕಲ್ಲು ಇರಿಸಿ ಹಗ್ಗಕ್ಕೆ ಕಟ್ಟಿ ಬಾವಿಗಿಳಿಸಿ, ಹೇಗೋ ಪುಸ್ತಕವನ್ನು ಬುಟ್ಟಿಯಲ್ಲೆತ್ತಿ ಕೊಂಡಾಗ ಹೋದ ಜೀವ ಬಂದಂತಾಯ್ತು. ಒದ್ದೆಮುದ್ದೆಯಾಗಿದ್ದ ಪುಸ್ತಕ ಒಣಗಲೆಂದು ಅಜ್ಜಿಯ ಮನೆ ಮೆಟ್ಟಲ ತಿಟ್ಟೆಯ ಮೇಲಿಟ್ಟು ಒಣಗುವುದನ್ನೇ ಕಾಯುತ್ತಿದ್ದ ನಾವು  ಮನೆಯೊಳಗೆ ಹೋದ ಹೊತ್ತು, ಅಲ್ಲೇ ಜಗಲಿಯ ಜಾಲರಿಗೆ ಕಟ್ಟಿದ್ದ ಅಜ್ಜಿಯ ಆಡು, ಮೆಲುಕಾಡಲು ಬೇರೇನೂ ಇಲ್ಲವೆಂದು ಬಾಯ್ಗೆಟುಕಿದ ನನ್ನ ಪುಸ್ತಕವನ್ನೇ ಅಗಿಯ ತೊಡಗಿತು. ನಾವು ಇತ್ತ ನಮ್ಮ ಮನೆಯೊಳಗೆ ಊಟದಲ್ಲಿದ್ದೆವು. ದೌಲತ್ ರುಚಿಯುಂಡು ಹೊಟ್ಟೆ ತುಂಬಿದ ಆಡು," ಮೇ... ಮೇ.." , ಎಂದು ಸಂತೃಪ್ತಿಯ ದನಿ ತೆಗೆದಾಗ, ಸ್ವರ್ಣ,' ಆಡಿಗೆ ಪುಸ್ತಕ ಎಟುಕಲಿಕ್ಕಿಲ್ಲವಷ್ಟೇ?" ಎಂದಳು. ನಾನು ಎದ್ದೋಡಿದೆ. ನೋಡುವಾಗ, ಅರ್ಧಾಂಶ ದೌಲತ್, ಆಡಿನ ಹೊಟ್ಟೆ ಸೇರಿದ್ದಳು!

ಸೇಂಟ್ ಆಗ್ನಿಸ್ ಹೈಸ್ಕೂಲ್ ಹೆಡ್ಮಿಸ್ಟ್ರೆಸ್ ಸಿಸ್ಟರ್ ವರ್ಜೀಲಿಯಾಸೋಶಿಯಲ್ ಸ್ಟಡೀಸ್ ಅಪ್ರತಿಮ ಶಿಕ್ಷಕಿ ಸೀತಾ ಟೀಚರ್, ಹಿಂದಿಯ ಸುವಾಸಿನಿ ಟೀಚರ್ ನನಗೆ ತುಂಬ ಪ್ರಿಯರಾಗಿದ್ದರು. ಸೀತಾ ಟೀಚರ್ ಕ್ಲಾಸ್ನಲ್ಲಿ ನೋಟ್ಸ್ ಕೊಡುತ್ತಿರಲಿಲ್ಲ. ಅವರು ಪಾಠ ಮಾಡುವಾಗ ಆಲಿಸಿ ನಾವೇ ನೋಟ್ಸ್ ಮಾಡಿಕೊಳ್ಳಬೇಕಿತ್ತು. ನನ್ನ ಪಾಲಿಗೆ ಬಹಳ ಅಮೂಲ್ಯವಾಗಿದ್ದ ನನ್ನ ಸೋಶಿಯಲ್ ಸ್ಟಡೀಸ್ ನೋಟ್ಸ್ ಬುಕ್, ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕೆಲದಿನಗಳ ಮುನ್ನ ನನ್ನ ಕೈತಪ್ಪಿ ಹೋಗಿತ್ತು. ಟೀಚರ ಪಾಠದ ಆತ್ಯುತ್ತಮ ನೋಟ್ಸ್ ಕಳೆದು ಹೋದುದು ನನಗೆ ತುಂಬ ದುಃಖ ತರಿಸಿದ್ದರೂ, ಪರೀಕ್ಷೆಯಲ್ಲಿ ವಿಷಯದಲ್ಲಿ ಅತ್ಯುತ್ತಮ ಮಾರ್ಕ್ಸ್ ಬಂದುದರ ಶ್ರೇಯ ಟೀಚರ್ಗೇ ಸಲ್ಲಬೇಕು. ಅಂಥಾ ಪಾಠ ಅವರದು! ಹಿಂದಿಯ ಸುವಾಸಿನಿ ಟೀಚರ್, ಪಾಠ ಮುಗಿದರೆ ಏನಾದರೂ ಹೇಳಿ ನಗಿಸುತ್ತಿದ್ದರು. "ಶ್ಯಾಮಲಾ ಮತ್ತು ನಾನು ನಕ್ಕು, ನಕ್ಕು ತೋರ ಆಗುವವರು" ಎನ್ನುತ್ತಿದ್ದರು. ನಾವು ಕಾಲೇಜಲ್ಲಿದ್ದಾಗ ಅವರು ಎನ್.ಸಿ.ಸಿ. ಇನಸ್ಟ್ರಕ್ಟ್ರೆಸ್ ಆಗಿ ನೇಮಿತರಾದರು. ಮೇಲೆ ಅವರ ಮುಖದಲ್ಲಿ ಹಿಂದಿನ ನಗು ಮಾಯವಾದಂತೆ ನಮಗನಿಸಿತ್ತು.

ಶಾಲಾ ಕ್ಯಾಬಿನೆಟ್ ರಚನೆಯಾದಾಗ ನಾನು ಇನ್ಫೊರ್ಮೇಶನ್ ಆಂಡ್ ಬ್ರಾಡ್ಕಾಸ್ಟಿಂಗ್  ಮಿನಿಸ್ಟರ್ ಆಗಿ ಚುನಾಯಿತಳಾಗಿದ್ದೆ. ಶಾಲೆಯಲ್ಲಿ ಪ್ರಸಿದ್ಧಿ, ಜನಪ್ರಿಯತೆಯನ್ನೂ ಸ್ಥಾನ ನನಗೆ ತಂದು ಕೊಟ್ಟಿತು ಎನ್ನಬೇಕು. ಅಮೆರಿಕಾಧ್ಯಕ್ಷ ಕೆನಡಿ ಹತ್ಯೆಯಾದಾಗ ಶಾಲಾ ಎಸೆಂಬ್ಲಿಯನ್ನುದ್ದೇಶಿಸಿ ಮಾತನಾಡ ಬೇಕಾಯ್ತು. ಏಯ್ತ್ ಸ್ಟಾಂಡರ್ಡ್ ಪುಟ್ಟ ಮಾರ್ಗರೆಟ್ ಅಂದು ನನ್ನನ್ನು ಅಂಟಿಕೊಂಡಳು. ಪ್ರಭಾ, ಝರೀನಾ ನಡುವೆ ಸ್ಕೂಲ್ ಪೀಪ್ಲ್ ಲೀಡರ್ ಸ್ಥಾನಕ್ಕೆ ಸ್ಪರ್ಧೆ ನಡೆದು ಝರೀನಾ ಆರಿಸಿ ಬಂದಿದ್ದಳು. ಪ್ರಭಾ, ಕುಲಶೇಖರದ ತನ್ನ ಮನೆಯಿಂದ ಬರುತ್ತಿದ್ದಳು. ಕ್ರಿಸ್ತಿನ್, ಪ್ರಭಾ, ನಾನು ಜೀವದ ಗೆಳತಿಯರಾದೆವು. (ಆಗಲೇ ಕಾಲೇಜ್ನಲ್ಲಿ ನಡೆದ ಕಾಲೇಜ್ ಯೂನಿಯನ್ ಲೀಡರ್ ಸ್ಪರ್ಧೆಗೆ  ಕ್ಯಾಂಪೇನ್ ಮಾಡಲು ಹೆಲಿಕಾಪ್ಟರ್ ಮೂಲಕ ಕರಪತ್ರಗಳನ್ನು ಉದುರಿಸಲಾಗಿತ್ತು. ಉಷಾ ಆಲ್ಬುಕರ್ಕ್ ಆರಿಸಿ ಬಂದಿದ್ದರು.)

ಸೇಂಟ್ ಆಗ್ನಿಸ್ ಸೇರಿದ ಆರಂಭದಲ್ಲಿ ಕ್ರಿಸ್ತಿನ್ ನನ್ನ ಬಳಿಗೆ ಬಂದು ಸ್ನೇಹ ಸೂಸಿ ಕೈ ಹಿಡಿದು ಕೊಂಡಾಗ, ಮೊದಮೊದಲು ನಾನು ಹಿಂಜರಿದಿದ್ದೆ. ಕಡ್ಡಿಯಂತಹ ಕೈಕಾಲುಗಳ, ಒಣ ಚರ್ಮದ ಕ್ರಿಸ್ತಿನ್. ಆದರೆ, ಅದೆಲ್ಲವೂ ಅಡಗಿ ಅವಳ ಪ್ರತಿಭೆ, ವ್ಯಕ್ತಿತ್ವ ನನ್ನನ್ನಾವರಿಸಿಕೊಂಡು, ಬಹುಬೇಗ ನಾವು ಗೆಳತಿಯರಾದೆವು. ಸೇಂಟ್ ಅಲೋಶಿಯಸ್ ಕಾಲೇಜ್ನಲ್ಲಿ ಇಕನಾಮಿಕ್ಸ್ ಪ್ರೊಫೆಸರ್ ಆಗಿದ್ದ ಕ್ರಿಸ್ತಿನ್ ತಂದೆ ಎಮ್.ಡಿ.ಜೋಸೆಫ್ ಅವರಿಗೆ ಹನ್ನೊಂದು ಮಕ್ಕಳು. ಜ್ಯೋತಿಯಿಂದ ಮೇಲಕ್ಕೆ ' ಗ್ಲೆನ್ ವ್ಯೂ ' ಪಕ್ಕದಲ್ಲಿ ಅಲೋಶಿಯಸ್ ಗ್ರೌಂಡ್ಸ್ಗೆ ಇಳಿದು ಹೋಗುವಲ್ಲಿ ಬಲಕ್ಕೆ ಕ್ರಿಸ್ತಿನ್ ಮನೆಯಿತ್ತುನಮ್ಮಲ್ಲಿ ನಾವು ನಾಲ್ಕು ಮಂದಿ ಮಕ್ಕಳ ಮನೆಗೆಲಸವೇ ಹೊರೆಯೆಂದನಿಸುವಾಗ ಕ್ರಿಸ್ತಿನ್ ಮನೆಯಲ್ಲಿ ಹೇಗಿರಬಹುದು, ಎಂದು ನಾನಂದುಕೊಳ್ಳುತ್ತಿದ್ದೆ. ಆದರೆ ಕ್ರಿಸ್ತಿನ್ ಮನೆಯಲ್ಲಿ ಬಟ್ಟೆ ಒಗೆಯಲು ಬಾಯ್ಲರ್ ಥರದ ವಾಶಿಂಗ್ ಮೆಶಿನ್ ಒಂದಿತ್ತು. ಇಂದು, ತನ್ನ ಶತಾಯುಷ್ಯ ಸಮೀಪಿಸಿರುವ ತಾಯಿ, ಎಲ್ಲ ಒಂಬತ್ತು ಸೋದರರ ಕುಟುಂಬ ಹಾಗೂ ತನ್ನ ಕುಟುಂಬದ ಜೊತೆ ಅಮೆರಿಕಾ ಸಂಸ್ಥಾನದ ಹೂಸ್ಟನ್ನಲ್ಲಿ ನೆಲಸಿರುವ  ಕ್ರಿಸ್ತಿನ್ ಹಾಗೂ ನನ್ನ ಗೆಳೆತನ ಇಂದಿಗೂ ಉಳಿದು ಬೆಳೆದಿದೆ. ವಿವರವೆಲ್ಲ ಮುಂದಿನ ದಿನಗಳೊಡನೆ ತೆರೆದು ಕೊಳ್ಳಲಿದೆ.

ನಾನು ಸೇಂಟ್ ಆಗ್ನಿಸ್ ಸೇರಿದ ವರ್ಷವೇ ನಮ್ಮ ಕ್ಲಾಸ್ನಲ್ಲಿದ್ದ ಇಬ್ಬರು ಜ್ಯೂಯಿಶ್ ವಿದ್ಯಾರ್ಥಿನಿಯರು ದೇಶ ತೊರೆದು ಹೊರಟು ಹೋಗಿದ್ದರು. ಅನೇಕರು ಹಾಗೆ ಹೊರಟು ಹೋಗಿದ್ದರು. ಅದನ್ನು ಸಮರ್ಥಿಸಿ ಯಹೂದಿಗಳ ಬಗ್ಗೆ ಕಟುಮಾತುಗಳೂ ಕೇಳಿ ಬಂದಿದ್ದುವುಕಾಲೇಜ್ ಕನ್ನಡ ಲೆಕ್ಷರರ್ ಪಾಲೆತ್ತಾಡಿ ಗೋಪಾಲಕೃಷ್ಣ ಭಟ್ಟರ ಮಗಳು ಉಷಾ ನಮ್ಮ ಕ್ಲಾಸ್ನಲ್ಲಿದ್ದಳು. ದಿನವೂ ಶಾಲೆಗೆ ಮಲ್ಲಿಗೆ ಮಾಲೆ ಮುಡಿದುಕೊಂಡು ಬರುತ್ತಿದ್ದಳು. ನಮ್ಮ ಪ್ರಿಯ ಗೆಳತಿಯಾದ ಶೋಭಾ ಫೆರಾಯಿಸ್ ಜಡೆಯಲ್ಲೂ ದಿನವೂ ಮಲ್ಲಿಗೆ. ಗುಂಗುರುಗೂದಲ, ಬೆಳ್ಳನೆ ಮೈ ಬಣ್ಣದ ಎತ್ತರವಿದ್ದ ಶೋಭಾ ತಲೆಯಲ್ಲಿ ಮಲ್ಲಿಗೆ ಶೋಭಿಸುತ್ತಿತ್ತು. ಶಾಲೆಗೆ ಬರುವಾಗ ಹೂ ಮುಡಿದು ಬರಬಾರದೆಂಬ ನಿಯಮ ಜ್ಯಾರಿಗೆ ಬಂತು. ವಾರ ಕಳೆದರೂ ಉಷಾ ಹೂ ಮುಡಿದು ಬರುವುದನ್ನು ಬಿಡಲಿಲ್ಲ. ಅವಳಿಗೆ ವಾರ್ನಿಂಗ್ ಕೂಡಾ ತಪ್ಪಲಿಲ್ಲ. ಕೊನೆಗೊಂದು ದಿನ ಅವಳ ತಂದೆ - ಪ್ರೊಫೆಸರ್ ಪಾಲೆತ್ತಾಡಿಯವರು - ಹೆಡ್ಮಿಸ್ಟ್ರೆಸ್ ಕೋಣೆ ಬಳಿ ಮೋಟರ್ ಬೈಕ್ ನಿಲ್ಲಿಸಿ ಆಫೀಸ್ ಹೊಕ್ಕರು. ಸುಮಾರು ಹದಿನೈದು ನಿಮಿಷ ತಮ್ಮ ಮೆಲುವಾದರೂ ಧೃಢ  ಮಾತುಗಳನ್ನು ಮುಂದಿಟ್ಟು ಮತ್ತೆ ಹೊರಗಿಳಿದು ಎಂದಿನಂತೆ ಕಾಲೇಜ್ಗೆ ಹೋದರು. ಉಷಾ ಮುಖದಲ್ಲಿ ಗೆಲುವಿನ ನಗೆಯಿತ್ತು; ಹಾಗೂ ಅವಳ ತಲೆಯಲ್ಲಿ ಹೂ ತಪ್ಪಲಿಲ್ಲ. ಶೋಭಾ ಜಡೆಯ ಮಲ್ಲಿಗೆ ಮರಳಿ ಬಂದುದು ನನಗೆ ತುಂಬ ಸಂತೋಷವಿತ್ತಿತು. ಕ್ರಿಸ್ಮಸ್ ಹಬ್ಬಕ್ಕೆ ನಾವು ಗೆಳತಿಯರು ವಾಸ್ ಲೇನ್ನಲ್ಲಿದ್ದ ಗೆಳತಿ ಹರ್ಮಿ ಮನೆಗೆ, ಅಲ್ಲಿಂದ ನನ್ನ ಮಾರ್ಗರೆಟ್ ಮನೆಗೆ ಕ್ರಿಸ್ಮಸ್ ವಿಶ್ ಮಾಡಲು ಹೋಗಿದ್ದೆವು. ಅಲ್ಲಿ ದೊಡ್ಡದೊಂದು ತೊಟ್ಟಿಲಲ್ಲಿದ್ದ ಅವಳ ಏಳು ವರ್ಷದ ತಮ್ಮನನ್ನು, ಅವನ ಅಸಹಾಯಕ ಶರೀರದ ಮುಖದಲ್ಲಿನ ನಿರ್ಮಲ ಹೂವಿನಂತಹ ನಗುವನ್ನು ಮರೆವಂತೆಯೇ ಇಲ್ಲ. ಅಲ್ಲಿಂದ ಗೆಳತಿ ಬೆಲಿಂಡಾ ಮನೆಗೆ. ಎಲ್ಲ ಮನೆಗಳ ಕ್ರಿಸ್ಮಸ್ ತಿನಿಸುಗಳಂತೆಯೇ ಬೆಲಿಂಡಾ ಮನೆಯ ದೊಡ್ಡ ಸೊಗಸಾದ ಗಾಜಿನ ಬೋಗುಣಿಯ ರಾಗಿ ಮಣ್ಣಿಯ ರುಚಿಯೂ ಮರೆತಿಲ್ಲ.
ಗಂಗ ನಿವಾಸ ಮನೆಯಲ್ಲಿದ್ದಾಗಲೇ ಒಂದಿನ, ಪಕ್ಕದ ತುಳಸೀ ವಿಲಾಸದಿಂದ ಯಶೋದಾಂಟಿ ಮಗ ಸೂರ್ಯಣ್ಣ ಬಂದು, ನಮ್ಮಮ್ಮನ ದೊಡ್ಡಪ್ಪ, ನಮ್ಮ ಜಡ್ಜ್ ಅಜ್ಜ ರಾವ್ ಬಹದ್ದೂರ್ ರಾಮಪ್ಪ, ಬೆಂಗಳೂರಲ್ಲಿ ಮಗಳು ಲಕ್ಷ್ಮಿಆಂಟಿ ಮನೆ, 'ರಾಮ ನಿವಾಸ'ದಲ್ಲಿ ಹೃದಯ ವೈಫಲ್ಯದಿಂದ ನಿಧನರಾದ ಸುದ್ದಿ ಅರುಹಿದರು. ಅಮ್ಮ ತುಂಬ ದುಃಖಿತರಾಗಿದ್ದರು.
            
ಗಂಗ ನಿವಾಸ್ ಪಕ್ಕದ ಲೇನ್ ಕಾಟೇಜ್ನಲ್ಲಿ ಅಜ್ಜ ವೀರಪ್ಪ ಅವರ ಮಕ್ಕಳು ಡಾ. ರಾಧಂಕಲ್ ಹಾಗೂ ರಮೇಶ ಮಾಮನ ಕುಟುಂಬ ವಾಸವಿದ್ದರು. ಅದರೆದುರಿನ ಔಟ್ಹೌಸ್ನಂತಹ ಮನೆಯಲ್ಲಿ ಅವರ ಸೋದರಿ ಯಮುನಾಂಟಿ ಮತ್ತವರ ಹತ್ತು ಮಕ್ಕಳ ಕುಟುಂಬ. ಯಮುನಾಂಟಿಯ ಮಗಳು ಮೋಹಿನಿ ಅಕ್ಕನ ಮದುವೆ ನನ್ನ ಪ್ರಿಯ ಮನೋಜಜ್ಜನ ಜೊತೆ ನಡೆದಿತ್ತು. ಡಾ.ರಾಧಂಕಲ್ ಅವಿವಾಹಿತರು. ಹೆಸರಾಂತ ಡಾಕ್ಟರಾಗಿದ್ದ ರಾಧಂಕಲ್, ಗೆಳೆಯರೊಡನೆ ಹಂಟಿಂಗ್ ಹೋಗುತ್ತಿದ್ದರು. ಲೇನ್ ಕಾಟೇಜ್ ಮನೆಯ ವೆರಾಂಡಾದ ಗೋಡೆಗಳನ್ನು ಅವರು ಬೇಟೆಯಾಡಿದ ಜಿಂಕೆ, ಕಾಡುಕೋಣ, ಕರಡಿ ಮುಂತಾದ ಪ್ರಾಣಿಗಳ ಕಾಪಿಟ್ಟ ತಲೆ, ಕೊಂಬುಗಳು ಅಲಂಕರಿಸಿದ್ದುವು. ಹುಲಿಚರ್ಮವೊಂದು ಕೆಳಗೆ ಪೀಠವೊಂದರ ಮೇಲಿತ್ತು. ರಾಧಂಕಲ್, ಹಕ್ಕಿ ಬೇಟೆಗಾಗಿ ನಮ್ಮ ಗುಡ್ಡೆಮನೆ ಗದ್ದೆಗಳಿಗೂ ಬರುತ್ತಿದ್ದರು. ಅಲ್ಲಿ ಕಾಡುಕೋಳಿ, ಪುಂಡದ ಹಕ್ಕಿ ಮುಂತಾದುವನ್ನು ಅವರು ಬೇಟೆಯಾಡುತ್ತಿದ್ದರು. ರಾಧಂಕಲ್ ಸೋದರಿ ಸೀತಮ್ಮಾಂಟಿಯ ಗಂಡ, 'ಮಾಧವ ವಿಲಾಸ್' ಅವರ ಅತ್ತೆಮಗ ಗೋಪಿ ಅಂಕಲ್, ವಿರಾಜಪೇಟೆಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದವರು, ಅಲ್ಲೇ ಹೃದಯಾಘಾತದಿಂದ ನಿಧನರಾಗಿ ಅವರ ಎಂಟು ಮಕ್ಕಳ ಕುಟುಂಬವೂ ಮರಳಿ ಲೇನ್ ಕಾಟೇಜ್ ಸೇರಿತು. ಆಗ ಕಿರಿಯ ಮಗು ಪ್ರದೀಪ್, ತನ್ನಮ್ಮನ ದೊಡ್ಡ ಮಡಿಲನ್ನು ತುಂಬುವಂತಹ ಮೂರು ತಿಂಗಳ ದಷ್ಟಪುಷ್ಟ ಶಿಶು. ಪದ್ದು ಎಂದೇ ಅವನ ಕೊಂಡಾಟದ ಹೆಸರಾಯ್ತು. ಹಿರಿಯ ಸಂತೋಷಣ್ಣನಿಗೆ ತುಲಸೀ ವಿಲಾಸದ ಹುಡುಗು ಪಾಳ್ಯ ಜೊತೆಯಾಯ್ತು. ಐದು ಹೆಣ್ಣು ಮಕ್ಕಳಲ್ಲಿ ರಾಜರಾಜೇಶ್ವರಿ ನನಗೆ ಜೊತೆಯಾದಳು. ರಾಜಿ ತುಂಬ ಚೆಲುವಾಗಿದ್ದಳು. ಅಷ್ಟೇ ಸೌಮ್ಯಳೂ ಕೂಡಾ. ಅಕ್ಕ ರೇಣುಕಾ; ಶಶಿ, ಸುಮಾ, ಸುಫಲಾ ತಂಗಿಯರು.


ಎಂದಾದರೂ ಸಂಜೆ ನಾನು ಲೇನ್ ಕಾಟೇಜ್ ಹೊಕ್ಕರೆ, ಅಜ್ಜಿ, ಕುಡಿಯಲು ಕಷಾಯ ಕೊಡುತ್ತಿದ್ದರು. ನನಗೆ ಚೂರೂ ರುಚಿಸದ ಕಷಾಯ ಕುಡಿವ ನನ್ನ ಕಷ್ಟ ನೋಡಿ, ಸಂತೋಷಣ್ಣ ನಗುತ್ತಾ ," ಶ್ಯಾಮಲ್ ಶ್ಯಾಮಲ್ ಪವನ್ " ಎಂದು ಗುನುಗುತ್ತಿದ್ದರು. ನನಗೆ ಸಿಟ್ಟು ಬರುತ್ತಿತ್ತು. ಅಜ್ಜಿ ತುಂಬಾ ಕಠಿಣರೆಂದು ನನಗನಿಸುತ್ತಿತ್ತು.. ಒಂದು ಸಂಜೆ ಅವರು ನಮ್ಮಮ್ಮನನ್ನು ಕಾಣಲೆಂದು ಮನೆಗೆ ಬಂದಾಗ ನಾನು ಅಕ್ಕಿ ತೊಳೆಯುತ್ತಿದ್ದೆ. ಮಾತನಾಡುತ್ತಲೇ ನನ್ನನ್ನು ಗಮನಿಸಿದ ಅಜ್ಜಿ, "ಹಾಗೇನು, ಅಕ್ಕಚ್ಚು ತೆಗೆಯುವುದು? ಸರೀ ಎರಡು ಕೈಯಲ್ಲಿ ತಿಕ್ಕಿ ತಿಕ್ಕಿ ತೊಳಿ”, ಎಂದು ಗದರಿದರು. ಮಾತಿನಲ್ಲಿ ತಮ್ಮ ಮೊಮ್ಮಕ್ಕಳ ಹುಡುಗಾಟದ ಬಗ್ಗೆಯೂ ದೂರಿಕೊಂಡರು. "ಇನ್ನೂ ಸಣ್ಣವರಲ್ವೇ, ದೊಡ್ಡಮ್ಮಾ; ಕಲಿಯುತ್ತಾರೆ, ಬಿಡಿ", ಎಂದು ನಮ್ಮಮ್ಮ ಅಂದಾಗ, " ಏನು ಸಣ್ಣವರು? ಮಣ್ಣಾಂಗಿಟ್ಟಿ! "ಎಂದು ಹಳಿದರು. ಅಜ್ಜಿಯದು ಹತ್ತು ಮಕ್ಕಳ ಸಂಸಾರ. ಕಿರಿಯ ಮಗಳು ಸತ್ಯಾಂಟಿಯ ಮದುವೆ ಆದಾಗ ನಾನಿನ್ನೂ ಪುಟ್ಟ ಹುಡುಗಿ. ಸೀತಮ್ಮಾಂಟಿಯನ್ನು ಮಾಧವ ವಿಲಾಸ್ ಗೋಪಿ ಅಂಕಲ್ಗೆ ಕೊಟ್ಟಿದ್ದರೆ, ಸೀತಮ್ಮಾಂಟಿಯ ಅಣ್ಣ ಡಾ. ಅಮೃತಂಕಲ್ಗೆ ಗೋಪಿ ಅಂಕಲ್ ಸೋದರಿ ಲಿಲ್ಲಿ ಆಂಟಿಯನ್ನು ಕೊಟ್ಟು ಸಾಟಿ ಮದುವೆಯಾಗಿತ್ತು. ದೇವಕಿ ಆಂಟಿಯನ್ನು ರವಿ ಇಂಡಸ್ಟ್ರಿಯಲ್ಸ್ ಮಂಜಪ್ಪ ಮಾವನಿಗೆ ಕೊಟ್ಟು ಮದುವೆಯಾಗಿದ್ದರೆ, ಕಮಲ ಚಿಕ್ಕಮ್ಮನನ್ನು  ಚಂಪಕ ವಿಲಾಸ್ ನನ್ನ ಶ್ರೀಧರ ದೊಡ್ಡಪ್ಪನಿಗೆ ಕೊಟ್ಟು ಮದುವೆಯಾಗಿತ್ತು. ಕಮಲ ಚಿಕ್ಕಮ್ಮನ ಮಕ್ಕಳು ಲೇನ್ ಕಾಟೇಜ್ ಅಜ್ಜಿ ಮನೆಗೆ ಬಂದು ಹೋಗುವಾಗ ನಮ್ಮನ್ನೂ ಕಾಣುತ್ತಿದ್ದರು. ಅವರಲ್ಲಿ ಸುಜಯಾ ಪುಟ್ಟ ಮಗುವಾಗಿದ್ದು ನನಗೆ ತುಂಬ ಇಷ್ಟವಾಗಿದ್ದಳು. ಚಂಪಕ ವಿಲಾಸ! ಇತಿಹಾಸದ ಪುಟಗಳಲ್ಲಿ ಸೇರಿಹೋದ ಚಂಪಕ ವಿಲಾಸದ ನೆನಪುಗಳು ಮಾಸುವುದುಂಟೇ?

(ಮುಂದುವರಿಯಲಿದೆ)No comments:

Post a Comment