27 September 2016

ಬದಲಾದ ನೆಲೆಗಳಲ್ಲಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ
ಅಧ್ಯಾಯ


ಇದೇ ನಮ್ಮ ಮನೆ, ನಮ್ಮ ನೆಲೆ, ಎಂದುಕೊಂಡ ತಾಣವನ್ನು ಬಿಟ್ಟು ದೂರ ಹೋಗಬೇಕಾಗಿ ಇರುವ ಸ್ಥಿತಿ ಬಂದರೆ? ಅಂತಹದೊಂದು ಕಲ್ಪನೆಯೂ ಇರದಿದ್ದ ನಮಗೆ, ಬೆಸೆಂಟ್ ಶಾಲೆಯ ಆವರಣದೊಳಗಿನ ಮನೆಯನ್ನು ತೊರೆದು ಬೇರೆ ನೆಲೆ ಕಂಡುಕೊಳ್ಳಬೇಕಾಗಿ ಬಂದಾಗ, ನೀರಿನಿಂದ ಕಿತ್ತ ತಾವರೆಯಂತೇ ಆಯ್ತು, ನಮ್ಮ ಗತಿ. ನಾವಿದ್ದ ಸ್ಥಳದಲ್ಲಿ ಹೋಮ್ಸಾಯನ್ಸ್ ಕಾಲೇಜ್ ಕಟ್ಟಡ ಬರಲಿರುವ ಕಾರಣ, ಅನ್ಯ ನೆಲೆ ಕಂಡುಕೊಳ್ಳಬೇಕೆಂದು ಅಮ್ಮನಿಗೆ ತಿಳಿಸಲಾದಾಗ, ನಾನು ಥರ್ಡ್ ಫಾರ್ಮ್ನಲ್ಲಿದ್ದೆ. ಶಾಲೆಯ ಆವರಣವನ್ನು ಬಿಟ್ಟು ಹೋಗುವುದಾದರೂ ಹೇಗೆ? ಪ್ರೀತಿಯ ಟೀಚರ್ಸ್, ನೆಚ್ಚಿನ ಗೆಳತಿಯರು, ಕೈಯೆಟುಕಿನಲ್ಲಿದ್ದ ಲೈಬ್ರೆರಿಗಳು, ಸಮೃದ್ಧ ಹೂತೋಟ, ನನ್ನ ಪ್ರೀತಿಯ ರೆಂಜೆಮರ - ವಿಚಾರದಿಂದಲೇ ಮನಸು ನೊಂದುಕೊಳ್ಳುತ್ತಿತ್ತು. ಅಮ್ಮ ನೆಟ್ಟಿದ್ದ ಕಸಿಯ ಹಣ್ಣಿನ ಗಿಡಗಳು - ಪಪ್ಪಾಯಿ, ಗೇರು, ದಾಳಿಂಬೆ - ಅದೇ ತಾನೇ ಮೊದಲ
ಫಲಗಳನ್ನಿತ್ತು ಎಲ್ಲರ ಕಣ್ಸೆಳೆಯುವಂತಿತ್ತು. ಸಣ್ಣ ಶಾಲೆಯ ಮೂಲೆಯಲ್ಲಿದ್ದ ಶಾಲಾ ಪೀಯೋನ್ ಕೊರಗನ ಮಕ್ಕಳು ಪುಷ್ಪಾ, ಯಶವಂತಿ, ಜಯಂತಿಯರು ನಮ್ಮ ಆಟದ ಪ್ರಿಯ ಗೆಳತಿಯರು. ಪಕ್ಕದಲ್ಲಿದ್ದ ಡಾ. ವಸಂತಾ ಸತ್ಯಶಂಕರ್ ಅವರ ಮಕ್ಕಳು ಶ್ಯಾಮಲಾ, ರಘು, ಮುಕುಂದರಾಯರ ಮಕ್ಕಳು ಅರುಣ, ಮನೋರಮಾ, ಸುಧಾಕರ, ಅನತಿ ದೂರದಲ್ಲಿದ್ದ ಅಣ್ಣನ ಗೆಳೆಯ ಡಾಲ್ಫಿ - ಎಲ್ಲರಿಂದ ದೂರಾಗಿ ಹೋಗಬೇಕು. ಸಿಕ್ಕ ಬಾಡಿಗೆಮನೆ ದೂರ ಉರ್ವಾದಲ್ಲಿದ್ದ ಕಾರಣ, ಶಾಲೆಯೂ ಬದಲಾಗಲೇ ಬೇಕು. ಹೊಸದಾಗಿ ಸೇರಲಿದ್ದ ಲೇಡಿಹಿಲ್ ಶಾಲೆಯಲ್ಲಿ ಸಂಸ್ಕೃತ ಪಾಠವಿಲ್ಲ. ನನಗೆ ತುಂಬ ಪ್ರಿಯವಾಗಿ ಪೂರ್ಣಾಂಕಗಳು ದೊರೆಯುತ್ತಿದ್ದ ಸಂಸ್ಕೃತ ಇನ್ನು ನನ್ನ ಪಾಲಿಗಿಲ್ಲ! ಅಂತೂ ಮುದುಡಿದ ಮನದಿಂದಲೇ ನಾವು ಪ್ರಿಯ ನೆಲೆಯನ್ನು ತೊರೆದು ಹೊರಟೆವು
ಉರ್ವಾ ಮಾರಿಗುಡಿ ಬಳಿಯಲ್ಲಿ ನಮ್ಮ ಹೊಸ ಬಾಡಿಗೆ ಮನೆ. ಮನೆ ಧಣಿಗಳು ಪಕ್ಕದಲ್ಲೇ ಇದ್ದ ಕೊಂಕಣಿ ಕುಟುಂಬ. ಸಜ್ಜನರು. ಶಾಲೆಯ ದಾರಿ ಸಾಕಷ್ಟು ದೂರವೇ ಇತ್ತು. ಐದು ನಿಮಿಷ ಮನೆಯಿಂದ ಮುಂದಕ್ಕೆ ನಡೆದರೆ, ಅಲ್ಲಿ ಮಾರಿಗುಡಿ. ಮತ್ತೆ ಕೆಲ ಹೆಜ್ಜೆಗಳಲ್ಲಿ ನನ್ನ ಹೊಸ ಕ್ಲಾಸ್ ಮೇಟ್ ಗ್ರೇಸಿಯ ಮನೆ. ನಾಗರ ಪಂಚಮಿಗೆ ಗ್ರೇಸಿಯ ತೋಟದಿಂದ ಅರಸಿನದೆಲೆ ತಂದರೆ, ಅಷ್ಟಮಿ, ಚೌತಿ ಹಬ್ಬಕ್ಕೆ ಹರಿವೆ, ಹಾಗಲಕಾಯಿ, ಕೆಸುವಿನೆಲೆ, ಅಲಸಂಡೆ ಮುಂತಾದ ತರಕಾರಿಗಳನ್ನು ಅವರ ತೋಟದಿಂದಲೇ ಕೊಂಡು ತಂದಿದ್ದೆವು. ಮನೆಯೆದುರಿನ ಸ್ಥಳದಲ್ಲಿ ತರಕಾರಿ ಬೆಳೆದು ಮಾರಿ ಜೀವನ ಸಾಗಿಸುತ್ತಿದ್ದ ಮನೆಯ ಗ್ರೇಸಿಯನ್ನು ನಾನು ಮರೆತಿಲ್ಲ. ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಸಿಡುಬು ರೋಗದ ಶೆಡ್ ಇತ್ತು. ಅಲ್ಲಿ ರೋಗಿಗಳ ಚಿಕಿತ್ಸಾ ನಿರತರಾಗಿದ್ದ ಇಂಟರ್ನಿ ಯುವ ಡಾಕ್ಟರ್, ರೋಗ ಸಂಪರ್ಕದಿಂದ ಕೆಲದಿನಗಳಲ್ಲಿ ಅಲ್ಲೇ ತೀರಿಕೊಂಡಿದ್ದರು. ಅತ್ತಣಿಂದ ಸಾಗುವಾಗ ತಗ್ಗುತ್ತಿದ್ದ ನಮ್ಮ ಹರಟೆಯ ದನಿ ಅಂದು ಅಡಗಿ, ಹೃದಯದಲ್ಲಿ ಭೀತಿ ಕವಿದಿತ್ತು.

ಅದೇ ವರ್ಷ ಶಾಲಾ ತರಗತಿಗಳು ಫಾರ್ಮ್ ಎಂದಿದ್ದುದು ಸ್ಟಾಂಡರ್ಡ್ ಎಂದು ಬದಲಾಗಿ, ಥರ್ಡ್ ಫಾರ್ಮ್ ಮುಗಿಸಿದ್ದ ನಮ್ಮ ಬ್ಯಾಚ್, ಸ್ಟಾಂಡರ್ಡ್ ಎಂದು ಒಂದು ವರ್ಷ ರಿಪೀಟ್ ಮಾಡಬೇಕಾಯ್ತುಹೊಸ ವಿದ್ಯಾರ್ಥಿನಿಯಾಗಿ ಸೇರಿಕೊಂಡಿದ್ದರೂ, ಡ್ರೆಮಾಟಿಕ್ಸ್ನಲ್ಲಿ ಹಿಂದೀ ನಾಟಕವೊಂದರಲ್ಲಿ ಅಭಿನಯಿಸುವ ಅವಕಾಶ ನನ್ನ ಪಾಲಿಗೆ ಬಂದಿತ್ತು. ಶಿಕ್ಷಕರು, ಸಹಪಾಠಿಗಳೆಲ್ಲರೂ ನನ್ನ ಅಭಿನಯವನ್ನು ಮೆಚ್ಚಿ, ನನ್ನನ್ನು ಕಂಡೊಡನೆ ಎಲ್ಲರ ಕಣ್ಣುಗಳೂ ನಗುವಿನಿಂದ ಅರಳುತ್ತಿದ್ದುವು. ಹಾಗೆಂದೇ ಇಂಗ್ಲಿಷ್ ನಾಟಕದಲ್ಲೂ ಅಭಿನಯಿಸಲು ನನ್ನನ್ನು ಆರಿಸಿದರೂ, ಪ್ರಾಕ್ಟೀಸ್ ಎರಡೇ ದಿನಗಳಲ್ಲಿ ಇಂಗ್ಲಿಷ್ ಮಟ್ಟಿಗೆ ನನ್ನ ವೈಫಲ್ಯದರಿವಾಗಿ, ನನಗೆ ಬಿಡುಗಡೆಯಾಯ್ತು. ವಿದ್ವಾನ್ ಶಂಭು ಭಟ್ಟರು ನಮ್ಮ ಕನ್ನಡ ಮಾಷ್ಟ್ರು. "ಕಡೆಕಂಜಿ" ಕವನವನ್ನು ಅವರು ಪಾಠ ಮಾಡಿದ್ದನ್ನು ನಾನೆಂದೂ ಮರೆಯೆ. ಹೆಚ್ಚಿನ ಕನ್ನಡ ಪಾಠಗಳು, ಕವನಗಳು ನನಗೆ ಬಾಯಿಪಾಠ ಇದ್ದುವು. ಒಂದಿನ ನಾನು ಶಾಲೆ ತಲುಪುವಾಗ ತಡವಾಗಿ, ಮೊದಲ ಪೀರಿಯಡ್ ಆದ ಕನ್ನಡ ಕ್ಲಾಸ್ ಶುರುವಾಗಿ ಬಿಟ್ಟಿತ್ತು. ಒಳ ಬರಲು ಮಾಷ್ಟ್ರ ಅನುಮತಿ ಕೇಳಿದರೆ, ತಡವಾದ ಕಾರಣ ಹೇಳಬೇಕಾಯ್ತು. ಅಮ್ಮನಿಗೆ ಸೌಖ್ಯವಿರಲಿಲ್ಲವೆಂದು ತಡವರಿಸಿ ಬಿಟ್ಟೆ. ಲೇಡಿಹಿಲ್ ಸ್ಟಾಪ್ನಲ್ಲಿ ಬಸ್ಸಿನಿಂದಿಳಿವಾಗ, ಶಾಲೆಗೆ ಹೋಗಲೆಂದು ಅದೇ ಬಸ್ ಹತ್ತಿದ ನಮ್ಮಮ್ಮನನ್ನು ನೋಡಿದ್ದ ಮಾಷ್ಟ್ರು, ಸುಳ್ಳು ಹೇಳಿದ ಅಪರಾಧಕ್ಕಾಗಿ ನನ್ನನ್ನು ಹೆಡ್ಮಿಸ್ಟ್ರೆಸ್ ಕೋಣೆಗೆ ಕಳುಹಿದರು. ಇಡೀ ಪೀರಿಯಡ್, ಹೆಡ್ಮಿಸ್ಟ್ರೆಸ್ ಕೋಣೆಯನ್ನು ಧೂಳು ಒರೆಸಿ ಸ್ವಚ್ಛವಾಗಿಸುವ ಶಿಕ್ಷೆ ನನ್ನ ಪಾಲಿಗೆ ಬಂತು. ಅವಮಾನ, ಪಶ್ಚಾತ್ತಾಪದಿಂದ ನನ್ನ ಹೃದಯ ಕುಸಿಯಿತು.

ಮಿಸ್ ಐರಿನ್ ವಾಸ್, ಇಲ್ಲಿ ನನ್ನ ಸಾಯನ್ಸ್ ಟೀಚರಾಗಿದ್ದು, ನಾನು ಅವರ ಮೆಚ್ಚಿನ ವಿದ್ಯಾರ್ಥಿನಿಯಾದೆ. ಶಾಲೆಯಿಂದ ಸ್ವಲ್ಪ ಮುಂದೆ, ಮನೆಯ ದಾರಿಯಲ್ಲೇ ಉರ್ವಾ ಚರ್ಚ್ ಇತ್ತು. ಗ್ರೇಸಿ, ಫಿಲೊಮಿನಾರೊಡನೆ ನಾನೂ ಚರ್ಚ್ ಹೊಕ್ಕು, ಪ್ರಾರ್ಥಿಸಿ ಬರುತ್ತಿದ್ದೆ. ಫಾದರ್ ಅವರಿಗೆ ನನ್ನ ಪರಿಚಯವಾಗಿತ್ತು. ಒಂದಿನ ಕ್ರಿಶ್ಚಿಯನ್ ಆಗುವ ಉದ್ದೇಶದಿಂದ ನಾನು ಚರ್ಚ್ಗೆ ಹೋದೆ. ಐರಿನ್ ವಾಸ್ ಟೀಚರ್ ಇದನ್ನರಿತು, ಹಿಂದೆಯೇ ಬಂದು, "ಇಂತಹ ನಿರ್ಧಾರಕ್ಕೆ ನೀನಿನ್ನೂ ಸಣ್ಣವಳು, ವಿದ್ಯಾಭ್ಯಾಸ ಮುಗಿದ ಮೇಲೆ ಬಗ್ಗೆ ಯೋಚಿಸ ಬಹುದು", ಎಂದು ಹೇಳಿ ನನ್ನನ್ನಲ್ಲಿಂದ ಹೊರಡಿಸಿದರು. ಅಲೋಶಿಯಸ್ ಕಾಲೇಜ್ ಚಾಪಲ್, ಬೆಂದೂರ್ ಚರ್ಚ್ ಇವೆಲ್ಲ ಬಾಲ್ಯದಲ್ಲಿ ನಾವು ಹೊಕ್ಕು ಬರುತ್ತಿದ್ದ ಇಗರ್ಜಿಗಳು. ಒಂದಿನ ಯಾರೋ ಒಬ್ಬಾತ ಮತಿಭ್ರಾಂತ, ಕೊಡಿಯಾಲಬೈಲ್ ಚರ್ಚ್ ಗೋಪುರದ ಮೇಲೇರಿ  ಶಿಲುಬೆಯನ್ನು ಮುರಿದು ಎಸೆದುದು, ನಗರವನ್ನು ಅಲ್ಲೋಲ ಕಲ್ಲೋಲವಾಗಿಸಿತ್ತು. ನವಭಾರತ ಪತ್ರಿಕೆಯಲ್ಲಿ ಕಂಡ ಫೋಟೋ ಮತ್ತು ವಿವರ ಈಗಲೂ ನನ್ನ ಚಿತ್ತಭಿತ್ತಿಯಲ್ಲಿದೆ.

ಬೆಂದೂರಿನಲ್ಲಿ ತುಳಸೀ ವಿಲಾಸದೆದುರಿಗೆ ನಮ್ಮ ಗೋಪಿ ದೊಡ್ಡಮ್ಮನ ಮನೆ, 'ಗಂಗ ನಿವಾಸ'. ಗಂಗ ನಿವಾಸ್ ಔಟ್ ಹೌಸ್ನಂತಿದ್ದ ಚಿಕ್ಕ ಮನೆ ಖಾಲಿಯಾದಾಗ, ದೂರ ಉರ್ವಾದ ಮನೆಗಿಂತ ಹತ್ತಿರವೆಂದು ಪುನಃ ನಮ್ಮ ವಾಸಸ್ಥಳ ಬದಲಾಯ್ತು. ಸುತ್ತ ಮುತ್ತ ಬಂಧುಗಳೇ. ಬಲಕ್ಕೆ ತುಳಸೀ ವಿಲಾಸದಲ್ಲಿ ಅಣ್ಣಂದಿರ ಹುಡುಗು ಪಾಳ್ಯ; ಎದುರಿಗೆ ಗಂಗ ನಿವಾಸ್ ಹಿತ್ತಿಲ ಗೋಡೆಗೆ ತಾಗಿಕೊಂಡೇ ಲೇನ್ ಕಾಟೇಜ್; ಅಲ್ಲಿನ ಎರಡು ಮನೆಗಳ ತುಂಬ ದೊಡ್ಡ ಸಂಸಾರ. ಅದರಾಚೆ ಕೆಳಕ್ಕೆ ಎಂಜಿನಿಯರ್ ಮಾವನ ಮನೆ, 'ಪುಷ್ಪ ವಿಹಾರ' ದೊಡ್ಡ ಹಿತ್ತಿಲು; ಪೋರ್ಟಿಕೋ ಹಾಗೂ ಕಂಬಗಳ ವಿಶಾಲ ಮನೆಯಲ್ಲಿ ಎಂಜಿನಿಯರ್ ಮಾವ, ಹೆಂಡತಿ, ಮಕ್ಕಳ ಕುಟುಂಬ. ನಮ್ಮ ಮನೆಯ ಎಡಕ್ಕೆ ಮೇವಿಸ್ ಹಿತ್ತಿಲು. ಬಲಕ್ಕೆ ರೋಸ್ ವಿಲ್ಲಾ. ಎಲ್ಲ ಅಮ್ಮನ ಪರಿಚಯದ ಮನೆಗಳು. ಎರಡು ಹೆಜ್ಜೆ ಕೆಳಗೆ ನಡೆದರೆ ಡಾ. ಕುಲಾಸೋ ಹಾಸ್ಪಿಟಲ್. ಅದರೆದುರು ಪಾರೇಖ್ ಗುಜರಾಥಿ ಕುಟುಂಬದ ಮನೆ. ಆಗಿನ ಮಂಗಳೂರಲ್ಲಿ ಚಂದ್ರಾನಾ ಬ್ರದರ್ಸ್, ಜಯಂತಿಲಾಲ್ ಮತ್ತು ಪಾರೇಖ್ - ಇವಿಷ್ಟೇ ಗುಜರಾಥೀ ಕುಟುಂಬಗಳು ನಮಗೆ ತಿಳಿದಿದ್ದುದು. ಚಂದ್ರಾನಾ ಬ್ರದರ್ಸ್, ವರ್ಷಕ್ಕೊಮ್ಮೆ ಅಮ್ಮ ನಮಗಾಗಿ ಹೊಸಬಟ್ಟೆ ಕೊಳ್ಳುತ್ತಿದ್ದ ಜವಳಿ ಅಂಗಡಿ. ಎಂಥಾ ಸಂಭ್ರಮವದು! ಲಾಂಗ್ಕ್ಲಾತ್, ಪಾಪ್ಲಿನ್ ಎಂದೆಲ್ಲ ಅಮ್ಮ ಅಲ್ಲಿ ವಿಚಾರಿಸುವಾಗ ನಾವು ಹೊಸಬಟ್ಟೆಯ ವಾಸನೆಯನ್ನು ಆಘ್ರಾಣಿಸುತ್ತಾ, ಬೆರಗು ಕಣ್ಣುಗಳಿಂದ ನೋಡುತ್ತಾ ನಿಂತಿರುತ್ತಿದ್ದೆವು. ವರ್ಷಕ್ಕೆರಡೇ ಹೊಸ ಉಡುಪು. ಬಟ್ಟೆ ಹಾಗೂ ಅಜ್ಜ ಬೊಂಬಾಯಿಂದ ತಂದಿರುತ್ತಿದ್ದ ವಿಶೇಷ ಸಮಾರಂಭಗಳಿಗಾಗುವ ಬಟ್ಟೆಯೊಡನೆ ಹಂಪನಕಟ್ಟೆ ತಿರುವಿನಲ್ಲಿದ್ದ ಭಾಸ್ಕರ್ ಟೇಲರ್ ಅಂಗಡಿ ಮಾಳಿಗೆ ಏರುವ ಸಂಭ್ರಮವೇನು! ಎಷ್ಟೊಂದು ಸರಳ, ಸುಂದರವಿತ್ತು, ಬದುಕುಈಗ ಕಪಾಟು ತುಂಬಿದ ಬಟ್ಟೆಗಳು ಭಾರವೆನಿಸುವಾಗ ಚಂದ್ರಾನಾ ಬ್ರದರ್ಸ್ ದಿನಗಳು ನೆನಪಾಗದೆ ಇರುವುದಿಲ್ಲ.

[ಎಸ್.ಎಸ್.ಎಲ್.ಸಿ. ಕ್ಲಾಸ್ ಫೋಟೋ] ಮನೆ ಬದಲಾದಂತೆ ನನ್ನ ಶಾಲೆಯೂ ಬದಲಾಯ್ತು. ಸೇಂಟ್ ಆಗ್ನಿಸ್ ಹೈಸ್ಕೂಲ್ ಬೇಗನೇ ನನಗೆ ಪ್ರಿಯವಾಯ್ತು. ಶಾಲೆಗೆ ಹೊರಡುವಾಗ ಕಾಲೇಜ್ ವಿದ್ಯಾರ್ಥಿನಿಯರಾದ ಲೇನ್ ಕಾಟೇಜ್ ಅಕ್ಕಂದಿರು ಪೂರ್ಣಕಲಾ, ಹರಿಣಿ ಜೊತೆಯಾಗುತ್ತಿದ್ದರು. ಈವ್ ಟೀಸಿಂಗ್ಗೆ ಅಲ್ಲೇ ಹೊರಗೆ ಮೇವಿಸ್ ಮನೆಯ ಗೇಟ್ ಬಳಿ ಬಂಧು ಹುಡುಗರ, ಅವರ ಗೆಳೆಯರ ಪಾಳ್ಯ ಕಾದಿರುತ್ತಿತ್ತು. ಚೆಲುವೆಯರಾದ ಅಕ್ಕಂದಿರು ಅಷ್ಟೇ ಸೌಮ್ಯರೂ, ಸನ್ನಡತೆಯವರೂ ಆಗಿದ್ದರು. ಹುಡುಗರ ಕೀಟಲೆಗೆ ಕಿವಿ ಕೊಡದೆ ಕೇಳದಂತಿದ್ದು, ನಮ್ಮ ಪಾಡಿಗೆ ನಾವು ಸಾಗಬೇಕೆಂದು ಅವರು ಕಿವಿ ಮಾತು ಹೇಳಿದ್ದರು. ಲೇನ್ಕಾಟೇಜ್ ಸಂತೋಷಣ್ಣ, ನನ್ನನ್ನು ಕಂಡೊಡನೆ 'ಶ್ಯಾಮಲ್ ಶ್ಯಾಮಲ್ ಪವನ್ ..." ಎಂದು ಶುರು ಮಾಡುತ್ತಿದ್ದರು. ನನಗೆ ಸಿಟ್ಟು ಬರುತ್ತಿತ್ತು. ಇಂದಿಗೂ ತಪ್ಪದೆ, ನನ್ನನ್ನು ಕಂಡೊಡನೆ ಸಂತೋಷಣ್ಣ ಪಠಿಸುವ ಹಾಡು, ಈಗ ನಗು ತರಿಸುತ್ತದೆ.

ದೇಹ ಸೌಷ್ಟವದ ಕಾರಣ ಹಾಫ್ ಸ್ಕರ್ಟ್ ನನಗೆ ನಿಷಿದ್ಧವಾಗಿ, ದಾವಣಿ ಉಡಬೇಕಾಯ್ತು. ಕ್ಲಾಸಿನಲ್ಲಿ ಎಲ್ಲರಿಗಿಂತ ಪ್ರಾಯದಲ್ಲಿ ಕಿರಿಯಳಾಗಿದ್ದರೂ, ನನ್ನೊಬ್ಬಳ ಉಡುಪು ಮಾತ್ರ ಹೀಗೆ ಭಿನ್ನವಿತ್ತು. ಆರು ತಿಂಗಳು ಕಳೆಯುವಷ್ಟರಲ್ಲಿ ದಾವಣಿಯೂ ಹೋಗಿ ಸೀರೆ ಬಂತು. ಮರುವರ್ಷ ಎಸ್.ಎಸ್.ಎಲ್.ಸಿ.ಗೆ ಬಂದಾಗ, ಗೆಳತಿ, ಗಣಪತಿ ದೇವಸ್ಥಾನದ ಶಾಸ್ತ್ರಿಗಳ ಮಗಳು ಸರಳಾ ಶಾಸ್ತ್ರಿ, ಹಾಫ್ಸಾರಿ ಉಡತೊಡಗಿದ್ದಳು. ಈಗೆರಡು ವರ್ಷಗಳ ಹಿಂದೆ, ಊರಲ್ಲಿ ತಂದೆಯವರ ಮೇಜಿನ ಡ್ರಾವರಿನಲ್ಲಿ ನನ್ನ ಎಸ್.ಎಸ್.ಎಲ್.ಸಿ. ಗ್ರೂಪ್ ಫೋಟೋ ಸಿಕ್ಕಿತು. ಸ್ಕರ್ಟ್-ಬ್ಲೌಸ್ ಹುಡುಗಿಯರ ನಡುಮಧ್ಯೆ ಎರಡನೇ ಸಾಲಿನಲ್ಲಿ ಸೀರೆ ಉಟ್ಟು ನಿಂತಿದ್ದ ನನ್ನ ಮೇಲೆ ಅಕ್ಕರೆಯಿಂದ ಬೆರಳಾಡಿಸಿದೆ. ಬೆರಳು ತಾಕಿದೊಡನೆ ಅದುವರೆಗೆ ಅಲ್ಲಿ ನಗುತ್ತಿದ್ದ ನಾನು ಮಾಯವಾಗಿ ಹೋದೆ! ಕ್ರಿಸ್ತಿನ್, ಪ್ರಭಾ, ಝರೀನಾ, ಹರ್ಮಿ, ಜಾಸ್ಮಿನ್, ಉಷಾ, ಶೋಭಾ, ಲವ್ಜಾಯ್, ಫ್ಲೇವಿ, ಮೇಲಿನ ಸಾಲಲ್ಲಿ ದಾವಣಿಯಲ್ಲಿ ಸರಳಾ ಮುಂತಾಗಿ ಎಲ್ಲರೂ ಇದ್ದರು. ನಾನು ಮಾತ್ರ ಇನ್ನೆಂದೂ ಸಿಗದಂತೆ ಕಾಣದಾಗಿದ್ದೆ!

(ಮುಂದುವರಿಯಲಿದೆ)

No comments:

Post a Comment