ಶ್ಯಾಮಲಾ
ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’
ಅಧ್ಯಾಯ – ೭
ನಮ್ಮ ಮುತ್ತಜ್ಜನ ಮಕ್ಕಳಲ್ಲಿ ರಾವ್
ಬಹದ್ದೂರ್ ಬಿರುದಾಂಕಿತ ಜಡ್ಜ್ ಅಜ್ಜ – ರಾಮಪ್ಪ, ಐದನೆಯವರು. ಮದರಾಸ್ ಸೆಶ್ಶನ್ಸ್ ಕೋರ್ಟ್ ಜಡ್ಜ್
ಆಗಿ ಖ್ಯಾತರಾಗಿದ್ದ ಅಜ್ಜ, ತಮ್ಮ ಸೇವೆಗೆ ಮನ್ನಣೆಯಾಗಿ ರಾವ್ ಬಹದ್ದೂರ್ ಬಿರುದು ಪಡೆದವರು. ಮದರಾಸ್
ನಗರದ ಮಧ್ಯಭಾಗದಲ್ಲಿ ನಿಡುತೋಪಿನ ಕಾಲ್ದಾರಿಯ ಕೊನೆಗೆ ಕಾಸ್ಮಸ್ ಎಂಬ ವಿಶಾಲ ಬಂಗಲೆ ಅವರ ಆವಾಸವಾಗಿತ್ತು.
ನಗರದ ಹೊರವಲಯದಲ್ಲಿ ಅವರ ಕೃಷಿತೋಟವೂ, ದೂರದ ಏರ್ಕಾಡ್ನಲ್ಲಿ ಕಾಫಿ ತೋಟವೂ ಇದ್ದುವು.
[ಜಡ್ಜ್ ಅಜ್ಜರಾವ್ ಬಹದ್ದೂರ್
ಯು.ರಾಮಪ್ಪ]
ಜಡ್ಜ್ ಅಜ್ಜನ ತಮ್ಮ ಕಣ್ಣಪ್ಪ ನಮ್ಮೆಲ್ಲರಿಗೆ
ಪ್ರೀತಿಯ ಕನ್ನಾಟಿ ಅಜ್ಜ ಆಗಿದ್ದರು. ದಪ್ಪ ಕನ್ನಡಕ ( ಕನ್ನಾಟಿ ) ಧರಿಸುತ್ತಿದ್ದರಿಂದ ಈ ಹೆಸರು!
ಸೇಂಟ್ ಅಲೋಶಿಯಸ್ ಕಾಲೇಜ್ನ ಬಿ.ಎ. ಪದವಿ ಪರೀಕ್ಷೆಯಲ್ಲಿ ಲ್ಯಾಟಿನ್ ಮತ್ತು ಗಣಿತದಲ್ಲಿ ರ್ಯಾಂಕ್
ಗಳಿಸಿದ ಅಜ್ಜ, ಅಲ್ಲೇ ಅಧ್ಯಾಪಕರಾಗಿ ಸೇರಿಕೊಂಡವರು, ಅಲ್ಲಿ ವೃತ್ತಿನಿರತನಾದ ಅನಿತರಲ್ಲೇ ಕ್ರೈಸ್ತಧರ್ಮವನ್ನಾಂತು
ಕ್ರೈಸ್ತರಾದರು. ಮನೆಯ ಪಕ್ಕದಲ್ಲಿದ್ದ ಬೆಂದೂರ್ ಚರ್ಚ್ ಹಾಗೂ ಕಾಲೇಜ್ನಲ್ಲಿ ಐಚ್ಛಿಕ ಪಠ್ಯವಾಗಿದ್ದ
ಬೈಬ್ಲ್ ಮತ್ತು ಲ್ಯಾಟಿನ್ ಅವರ ಮೇಲೆ ಪ್ರಭಾವ ಬೀರಿರಬಹುದು. ರ್ಯಾಂಕ್ ವಿಜೇತ ಹಿಂದೂ ಹುಡುಗ ಹೀಗೆ
ಮತಾಂತರವಾದುದನ್ನು ಸಹಿಸದೆ, ನಗರದಲ್ಲಿ ಸಣ್ಣ ಮಟ್ಟಿನ ಮತೀಯ ಗಲಭೆ ಎದ್ದ ಕಾರಣ ಅಜ್ಜ, ಮೂರು ತಿಂಗಳ
ಕಾಲ ನಗರದಿಂದ ಹೊರಗೆ, ಬೆಳಗಾವಿಯಲ್ಲಿ ಅಜ್ಞಾತವಾಸದಲ್ಲಿರಬೇಕಾಗಿ ಬಂತಂತೆ. ಮದರಾಸಿನಲ್ಲಿ ಎಮ್.ಎ.ಎಲ್.ಟಿ.
ಪದವಿ ಗಳಿಸಿದ ಅಜ್ಜ, ಮದರಾಸ್ ಪ್ರಾಂತ್ಯದ ವಿವಿಧ ಕಾಲೇಜ್ಗಳಲ್ಲಿ ಪ್ರಾಧ್ಯಾಪಕರಾಗಿ, ಹಾಗೂ ಮಂಗಳೂರಿನ
ಸರಕಾರೀ ಕಾಲೇಜ್ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಮದುವೆಯಾಗಬೇಕೆಂಬ ಅಮ್ಮನ ಒತ್ತಾಯಕ್ಕೆ
ಮಣಿದು ಕ್ರೈಸ್ತ ಹುಡುಗಿಯನ್ನೇ ಮದುವೆಯಾದರು. ಮೂವರು ಹೆಣ್ಮಕ್ಕಳು ಅಜ್ಜನಿಗೆ ತಕ್ಕಂತೆ ವಿದ್ಯಾರತ್ನಗಳಂತಿದ್ದರೆ,
ಗಂಡುಮಕ್ಕಳಿಬ್ಬರೂ ವಿದ್ಯೆಯಲ್ಲಿ ಹಿಂದಾದರೆಂಬ ಕೊರಗು ಅವರಿಗಿತ್ತು. ಕನ್ಯಾಮಠ ಸೇರಿದ ಹಿರಿಯ ಮಕ್ಕಳಿಬ್ಬರಲ್ಲಿ
ಆಂಟ್ ಗ್ಲಾಡೀಸ್ - ಸಿಸ್ಟರ್ ಆಂಟೊನೆಟ್ ಆಗಿ - ಮದರಾಸಿನ
ಸೇಂಟ್ ಮೇರಿ ಕಾನ್ವೆಂಟ್ನಲ್ಲಿ ಪ್ರಾಚಾರ್ಯೆಯಾಗಿದ್ದರು. ನಿವೃತ್ತಿಯ ಬಳಿಕ ಬಡವರ, ಅನಾಥರ ಸೇವಾಕಾರ್ಯದಲ್ಲಿ
ಮಗ್ನರಾಗಿದ್ದು, ಈಗ್ಗೆ ಕೆಲ ವರ್ಷಗಳ ಹಿಂದೆ ನಮ್ಮನ್ನು ಅಗಲಿದರು. ಆಂಟ್ ಐರಿನ್ - ಮದರ್ ಬೀಟ್ರಿಸ್
ಆಗಿ - ನಗರದ ಶಾಲೆಗಳಲ್ಲಿ ಮದರ್ ಸುಪೀರಿಯರ್ ಆಗಿದ್ದು, ಲೇಡಿಹಿಲ್ ಕಾನ್ವೆಂಟ್ನಲ್ಲಿ ಈಗ್ಗೆ ಕೆಲವರ್ಷಗಳ
ಹಿಂದೆ ಕ್ರಿಸ್ತೈಕ್ಯರಾದರು. ಎಲ್ಲರೂ ಸೇಂಟ್ ಎಂದೇ ಪರಿಭಾವಿಸಿದ್ದ ಸೌಜನ್ಯಮೂರ್ತಿ ಅವರು. ರುಗ್ಣ
ಶಯ್ಯೆಯಲ್ಲಿ ಒರಗಿದ್ದಾಗಲೂ ಮಗುವಿನಂತಹ ಸ್ನಿಗ್ಧ ನಗು ಹರಿಸುತ್ತಿದ್ದ ಪ್ರೀತಿಯ ಆ ಮುಖ ಎಂದಿಗೂ ಮರೆಯಾಗದು.
ಆಂಟ್ ಲೀನಾ, ಮಂಗಳೂರು ಸರಕಾರೀ ಕಾಲೇಜ್ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ನಿವೃತ್ತರಾಗಿದ್ದಾರೆ.
ಆಂಟ್ ಫ್ಲೇವಿ, ದೆಹಲಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ನಿವೃತ್ತರಾದವರು. ಆಂಗ್ಲ ಸಾಹಿತ್ಯದ
ಜ್ಞಾನಕೋಶದಂತಿರುವ ನನ್ನೀ ಪ್ರಿಯಬಂಧುಗಳ ಬಗ್ಗೆ, ನನ್ನ ಪ್ರೀತಿಯ ಅವರ ಮನೆ ಆಲ್ಡೇಲ್ ಬಗ್ಗೆ ಹೇಳಿಕೊಳ್ಳುವುದು
ಮುಂದೆ ಇನ್ನೂ ಇದೆ.
[ಅಜ್ಜ ಕಣ್ಣಪ್ಪ, ಸೋದರಿಯರು,
ಮಕ್ಕಳು]
ಅಜ್ಜ ಅಲೋಶಿಯಸ್ ಯು.ಕಣ್ಣಪ್ಪ, ಸಮಾಜಕ್ಕೆ
ಸಲ್ಲಿಸಿದ ಸೇವೆಗಾಗಿ, ಅಂದಿನ ಪೋಪ್ಅವರು, ಶೆವಲಿಯರ್ ಎಂಬ ಅಭಿದಾನದೊಂದಿಗೆ ನೈಟ್ ಆಫ್ ಸೇಂಟ್ ಗ್ರೆಗರಿ
ಪದವಿಯನ್ನಿತ್ತು ಅವರನ್ನು ಸಮ್ಮಾನಿಸಿದ್ದರು. ಸೇಂಟ್ ಅಲೋಶಿಯಸ್ ಕಾಲೇಜ್ ಕಟ್ಟಡ ಹಾಗೂ ಫಾ. ಮುಲ್ಲರ್ಸ್
ಸೇವಾಸ್ಪತ್ರೆಯ ಕಟ್ಟಡಗಳ ಸ್ಥಾಪಕ ಹಾಗೂ ಪೋಷಕರ ಯಾದಿಯಲ್ಲಿ ಅಜ್ಜ ಅಲೋಶಿಯಸ್ ಯು.ಕಣ್ಣಪ್ಪ ಅವರ ಹೆಸರು
ಕೆತ್ತಲ್ಪಟ್ಟಿದೆ. ಅಜ್ಜನ ವೃಧ್ಧಾಪ್ಯದಲ್ಲಿ ಹೊರ
ಹೋಗ ಬೇಕಾದಾಗಲೆಲ್ಲ ಹಾಗೂ ಪತ್ರ ಓದುವುದೋ ಉತ್ತರಿಸುವುದೋ ಮುಂತಾದ ಕೆಲಸಗಳಿಗೆಲ್ಲ ಅಜ್ಜ ನಮ್ಮಣ್ಣನನ್ನು
ಕರೆಸಿ ಕೊಳ್ಳುತ್ತಿದ್ದರು. ಒಂದಿನ ಅಜ್ಜನ ಬಳಿಯಿಂದ ಹಿಂದಿರುಗಿದ ಅಣ್ಣ, ಅಜ್ಜನ ವಿದ್ಯಾರ್ಥಿ ಸುಬ್ಬಯ್ಯ
ಎನ್ನುವವರು, ಚಾರ್ಲ್ಸ್ ಡಿಕ್ಕನ್ಸ್ನ ' ಡೇವಿಡ್ ಕಾಪರ್ಫೀಲ್ಡ್' ಕಾದಂಬರಿಯ ತಮ್ಮ ಕನ್ನಡಾನುವಾದ ಕೃತಿಯನ್ನು ತಂದು,
ತನ್ನ ಗುರುಗಳಾದ ಅವರಿಗೆ ಸಮರ್ಪಿಸಿರುವುದಾಗಿ ತಿಳಿಸಿ (ನೋಡಿ: ಅರ್ಪಣೆ) [ಸೇತು ಅಜ್ಜನ ಕೈಯಲ್ಲಿಟ್ಟು ಕಾಲಿಗೆರಗಿ ನಮಸ್ಕರಿಸಿದ ಬಗ್ಗೆ ಸಂಭ್ರಮದಿಂದ ವರದಿ ಮಾಡಿದ್ದ. ಅಜ್ಜನಿಗೆ ಸಮರ್ಪಿತವಾಗಿ
ಅವರ ಕೈಯಲ್ಲಿರಿಸಲ್ಪಟ್ಟ ಈ ಕೃತಿ, ಈಗಲೂ ಊರಲ್ಲಿ ನಮ್ಮ ಮನೆಯ ಪುಸ್ತಕದ ಕಪಾಟಿನಲ್ಲಿದೆ.
ತಮ್ಮ ಎಂಬತ್ತನೆಯ ಹುಟ್ಟು ಹಬ್ಬದಂದು,
ತನ್ನಂತ್ಯ ಸಮೀಪಿಸಿದೆಯೆಂದು ನುಡಿದು, ಅದನ್ನು ಕೇಳಿ ನೊಂದ ನನ್ನಣ್ಣನಿಗೆ, ಅವನ ಹುಟ್ಟುಹಬ್ಬದವರೆಗೂ
ಖಂಡಿತ ಜೀವಿಸಿರುವೆನೆಂದ ಅಜ್ಜ, ಇಚ್ಛಾಮರಣಿಯಂತೆ ಮತ್ತಾರು ತಿಂಗಳು ಬದುಕಿ, ಅಣ್ಣನ ಹುಟ್ಟುಹಬ್ಬದ
ಮರುದಿನ- ೧೯೬೮ರ ಜನವರಿ ೩೧ರಂದು ಶಾಂತರಾಗಿ ಕೊನೆಯುಸಿರೆಳೆದರು. [ಅಜ್ಜ ಕೃಷ್ಣಪ್ಪ]
ಸಾಯುವ ಕೆಲದಿನಗಳ ಮೊದಲು, "
ನೋಡು, ತಮ್ಮ ಕೃಷ್ಣಪ್ಪ ಅಲ್ಲಿ ನನ್ನನ್ನು ಕರೆಯುತ್ತಿದ್ದಾನೆ ", ಎಂದು ನುಡಿದ ಅಜ್ಜ! ನಮ್ಮ
ತಾಯಿಯ ತಂದೆ ಅಜ್ಜ ಕೃಷ್ಣಪ್ಪನ ಬಗ್ಗೆ ನಮಗೆ ಇನಿತಾದರೂ
ಅರಿತುದು, ಅವರ ಈ ಅಣ್ಣನಿಂದಲೇ. ಅಲೋಶಿಯಸ್ ಕಾಲೇಜ್ನಲ್ಲಿ ಬಿ.ಎ.ಎಲ್.ಟಿ. ಮಾಡಿ, ಚಿತ್ತೂರಿನಲ್ಲಿ
ತಹಶೀಲ್ದಾರರಾಗಿದ್ದರು, ನಮ್ಮಜ್ಜ. ಅಲೋಶಿಯಸ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಕಾಲೇಜಲ್ಲಿ ಆಡಿದ
ಕ್ರಿಕೆಟ್ ಮ್ಯಾಚ್ನಲ್ಲಿ, ವೇಗದ ಬೌಲರ್ ಆಗಿದ್ದ ಅವರ ಎಸೆತಕ್ಕೆ ದಾಂಡಿಗ ಹೊಡೆದ ಚೆಂಡು ಅಜ್ಜನ ಎದೆಗೇ
ಬಂದು ಬಡಿದು ,ಎದೆಯಲ್ಲಿ ರಕ್ತ ಹೆಪ್ಪುಗಟ್ಟಿ ದೊಡ್ಡ ಸಮಸ್ಯೆಯಾಗಿತ್ತಂತೆ. ಚಿತ್ತೂರಲ್ಲಿ ತಹಶೀಲ್ದಾರರಾಗಿದ್ದಾಗ,
೨೭ರ ಎಳೆ ಹರೆಯದಲ್ಲೇ ಭಡ್ತಿ ಹೊಂದಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ನೇಮಿತರಾದ ಅಜ್ಜ, ಆ ಹುದ್ದೆಯನ್ನಲಂಕರಿಸುವ
ಮೊದಲೇ ಹೃದಯಾಘಾತದಿಂದ ಕೊನೆಯುಸಿರೆಳೆದರು. ಭಡ್ತಿಯ ನಿಮಿತ್ತ ಗೆಳೆಯರು ಆಯೋಜಿಸಿದ ಸಂತೋಷಕೂಟದ ಕುದುರೆ
ಸವಾರಿಯ ಒತ್ತಡದಿಂದ, ಮೊದಲೇ ವೇಗದ ಚೆಂಡಿನಿಂದ ಘಾಸಿಗೊಂಡಿದ್ದ ಹೃದಯ ಆಘಾತಕ್ಕೀಡಾಗಿ ಅಜ್ಜ ಕೊನೆಯುಸಿರೆಳೆದರು.
ತನ್ನ ತಮ್ಮ ಬದುಕಿದ್ದಿದ್ದರೆ, ತಮ್ಮೆಲ್ಲರಿಗಿಂತ ಹೆಚ್ಚಾಗಿ ತನ್ನ ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗುತ್ತಿದ್ದುದು
ಖಂಡಿತ, ಎಂದು ಕಣ್ಣಪ್ಪಜ್ಜ ಹೇಳುತ್ತಿದ್ದರು. ಅಗಲಿದ ತಮ್ಮನಿಗೆ ಸೇರಿದ್ದ ಬೆಳ್ಳಿಯೇ ಮುಂತಾದ ಅಮೂಲ್ಯ
ಸಂಪತ್ತನ್ನು ಎರಡು ದೊಡ್ಡ ಪೆಠಾರಿಗಳಲ್ಲಿರಿಸಿ, ಬೀಗವಿಕ್ಕಿ, ಮನೆ ಸೀಗೆಬಲ್ಲೆ ಹೌಸ್ನಲ್ಲಿ ಜೋಪಾನವಾಗಿ
ಇರಿಸಿದ ಅಜ್ಜ ಗುಡ್ಡಪ್ಪ, ಬೀಗದ ಕೈಯನ್ನು ನಮ್ಮಜ್ಜಿಯ ಕೈಯಲ್ಲಿಟ್ಟು," ವಸಂತಳ ಮದುವೆಯ ಸಮಯ
ಇದನ್ನು ಅವಳ ವಶಕ್ಕೆ ಕೊಡು," ಎಂದು ಆದೇಶಿಸಿದ್ದರಂತೆ. ಅಜ್ಜಿಯ ಮರಣಾನಂತರ ಆ ಬೀಗದ ಕೈಗಳು
ಮಾತ್ರ ನಮ್ಮಮ್ಮನ ಕೈ ಸೇರಿ, ತಂದೆಯ ಡ್ರಾವರಿನಲ್ಲಿ ಈಗಲೂ ತಣ್ಣಗೆ ಕುಳಿತಿವೆ. ಗತ ಇತಿಹಾಸ ಬೀಗವಿಕ್ಕಿ
ಕೊಂಡಿದೆ.
ನಮ್ಮ ಸಮಾಜದಲ್ಲೇ ವಿದ್ಯಾರ್ಜನೆಗೈದ
ಮೊದಲಿಗರಾದ ನಮ್ಮ ಮುತ್ತಜ್ಜ ಮತ್ತವರ ಕುಟುಂಬ, ತಾವು ಮಾತ್ರ ವಿದ್ಯಾವಂತರಾಗಿ ಏಳಿಗೆ ಹೊಂದಿ ಸುಮ್ಮನುಳಿದವರಲ್ಲ.
ಪ್ರಥಮ ಮಹಾಯುದ್ಧದ ಕಾಲದಲ್ಲಿ ಕಡು ದಾರಿದ್ರ್ಯದಿಂದ ಬಳಲಿದ್ದ ನಮ್ಮ ಸಮಾಜಕ್ಕೆ ವಿದ್ಯೆಯ ಅಗತ್ಯವನ್ನು
ಮನಗಂಡು, ನಮ್ಮ ಮುತ್ತಜ್ಜ ಮಂಜಪ್ಪನವರು ಉದ್ಯಾವರ ಬೀಚ ಬೆಳ್ಚಪ್ಪಾಡರ ಜೊತೆಗೆ ಉಚ್ಚಿಲದ ಬಸ್ತಿಪಡ್ಪು
ಎಂಬಲ್ಲಿ ಊರವರಿಗಾಗಿ ಶಾಲೆಯನ್ನು ಆರಂಭಿಸಿದರು. ಮುತ್ತಜ್ಜ ತೀರಿಕೊಂಡ ಬಳಿಕ, ಹಿರಿಮಗ ಅಜ್ಜ ಬಸಪ್ಪನವರು,
ಉಚ್ಚಿಲ ಕೋಟೆಯ ಬಳಿಯಿದ್ದ ತಮ್ಮ ಕುಟುಂಬಕ್ಕೆ ಸೇರಿದ ಬಂಗ್ಲೆ ಎಂಬ ಮನೆಯನ್ನು ಶಾಲೆಗಾಗಿ ನೀಡಿದರು.
ಅಜ್ಜ ಪೊಲೀಸ್ ಇನ್ಸ್ಪೆಕ್ಟರ್ ವೀರಪ್ಪ, ನೀಲೇಶ್ವರ ದಾಮೋದರ ತಂತ್ರಿಯವರಿಂದ ಊರ ಮಧ್ಯೆ ಶಾಲೆಗಾಗಿ
ಶಾಶ್ವತ ನಿವೇಶನವೊಂದನ್ನು ದಾನವಾಗಿ ಪಡೆವಲ್ಲಿ ಯಶಸ್ವಿಯಾದರು. ಸರಕಾರೀ ಕಾಲೇಜ್ ಪ್ರಾಂಶುಪಾಲರಾದ
ಅಜ್ಜ ಕಣ್ಣಪ್ಪ, ಶಾಲೆಗಾಗಿ ಸರಕಾರದ ಖಾಯಂ ಮಂಜೂರಾತಿ ದೊರಕಿಸಿ ಕೊಟ್ಟರು. ಶಾಲೆ ಮತ್ತು ಸಮಾಜದ ಏಳಿಗೆಗಾಗಿ
ಅಜ್ಜ ರಾವ್ ಬಹದ್ದೂರ್ ರಾಮಪ್ಪನವರು ನೀಡಿದ ಸಹಕಾರ ಅಪಾರ. ವಿದ್ಯೆಯ ಬೆಳಕಿನಿಂದ ನಮ್ಮ ಸಮಾಜವನ್ನು
ಬೆಳಗಿದ ಸಾರ್ಥಕ ಬದುಕು, ಅವರೆಲ್ಲರದು!
(ಮುಂದುವರಿಯಲಿದೆ)
No comments:
Post a Comment