ಶ್ಯಾಮಲಾ
ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’
ಅಧ್ಯಾಯ – ೬
ವರ್ತಕ ವಿಲಾಸ ಬಂದರು ಪ್ರದೇಶದಲ್ಲಿದ್ದ ಪಡಿವಾಳರ ಕಛೇರಿ. ಅಲ್ಲಿ ತಮ್ಮ ದಿನದ ಕೆಲಸದ ಬಳಿಕ ನಮ್ಮ ತಂದೆ ಸಂಜೆಯ ರೈಲು ಹಿಡಿದು ಊರಿಗೆ ಹೋಗಿ, ಕರೆಸ್ಪಾಂಡೆಂಟರಾಗಿ ಶಾಲಾ ಕೆಲಸದ ಜವಾಬ್ದಾರಿ ನಿರ್ವಹಿಸಿ, ರಾತ್ರಿ ಹನ್ನೊಂದರ ರೈಲಿನಲ್ಲಿ ಹಿಂದಿರುಗುತ್ತಿದ್ದರು. ಅಮ್ಮ ಅವರಿಗಾಗಿ ಕಾಯುತ್ತಾ ಕುಳಿತಿರುತ್ತಿದ್ದರು. ಸದಾ ಕಾಡುತ್ತಿದ್ದ ಉಬ್ಬಸದಿಂದಾಗಿ ತಂದೆಯವರು ಮಲಗಿ ನಿದ್ರಿಸಿದ ರಾತ್ರಿಗಳು ಇಲ್ಲವೇ ಇಲ್ಲವೆನ್ನಬಹುದು. ಸರಿರಾತ್ರಿಯಲ್ಲಿ ಅಮ್ಮ ಅವರ ಬೆನ್ನು ನೀವಿ, ಗಾಳಿ ಹಾಕಿ, ಕುಡಿಯಲು ಸ್ಟ್ರಾಂಗ್ ಕಾಫಿ ಮಾಡಿ ಕೊಟ್ಟು ಉಪಚರಿಸುತ್ತಿದ್ದರು.
ಶಾಲಾ ಕೆಲಸದ ನಿಮಿತ್ತ ತಂದೆಯವರನ್ನು ಕಾಣಲು ಬರುವವರು ಅನೇಕರಿದ್ದರು. ಹೆಚ್ಚಾಗಿ ಬರುತ್ತಿದ್ದ ಡಿಸ್ಟ್ರಿಕ್ಟ್ ಬೋರ್ಡ್ ಮಾವ, ಉದ್ಯಾವರ ದೊಡ್ಡಪ್ಪ, ಗುಡ್ಡಪ್ಪ ಮಾಷ್ಟ್ರು, ಕರುಣಾಕರಜ್ಜ, ಮುಲ್ಕಿ ಮಾವ ಇವರೆಲ್ಲರೊಡನೆ ನಡೆಯುತ್ತಿದ್ದ ಗಂಭೀರ ಚರ್ಚೆ, ಅವರ ತೂಕದ ಮಾತುಗಳು! ಹಾಗೆಯೇ ಅಮ್ಮನನ್ನು ಕಾಣಲು ಅವರ ಅಣ್ಣ - ಹ್ಯಾಟುಬೂಟು ಮಾಮ ಎಂದು ನಾವು ಕರೆಯುತ್ತಿದ್ದ
ಎಂಜಿನಿಯರ್ ಮಾವ, ಅಮ್ಮನ ದೊಡ್ಡಪ್ಪ ಕಣ್ಣಪ್ಪಜ್ಜನ ಮಗ - ಎರಿಕ್ ಅಂಕ್ಲ್, ಅಮ್ಮನ ಅಕ್ಕ ಯಶೋದಾಂಟಿಯ ಮಕ್ಕಳು - ಪಂಚ ಪಾಂಡವರು, ನಮ್ಮ ಗೋಪಿ ದೊಡ್ಡಮ್ಮ ಇವರೆಲ್ಲ ರವಿವಾರದ ರಜಾದಿನಗಳಲ್ಲಿ ಬರುತ್ತಿದ್ದರು. ಅಮ್ಮ ಬಟ್ಟೆ ಒಗೆಯುತ್ತಾ ಪಾತ್ರೆ ತೊಳೆಯುತ್ತಾ ಅಡಿಗೆ ಮಾಡುತ್ತಾ ಅವರೊಡನೆ ಮಾತನಾಡುತ್ತಿದ್ದರು; ಹೆಚ್ಚಾಗಿ ಅವರ ಮಾತುಗಳನ್ನು ಆಲಿಸುತ್ತಿದ್ದರು.
ಅಮ್ಮನ ತಂದೆಯ ಕಡೆಯ ಬಂಧುಗಳ ಮಾತುಕತೆ ಹೆಚ್ಚಾಗಿ ಇಂಗ್ಲಿಷ್ನಲ್ಲೇ ನಡೆಯುತ್ತಿತ್ತು. ನಡುನಡುವೆ ನಮ್ಮ ಮಲೆಯಾಳ ಮಿಶ್ರಿತ ಗಡಿನಾಡ ಮಿಶ್ರಭಾಷೆಯು ಅವರ ಇಂಗ್ಲಿಷಿನೊಡನೆ ಸರಾಗವಾಗಿ ಸುಲಲಿತವಾಗಿ ನುಸುಳುತ್ತಾ ಸಾಗುವಾಗ ನಾನು ಬಲು
ಮೆಚ್ಚಿನಿಂದ ಅವರ ಸಂಭಾಷಣೆಯನ್ನಾಲಿಸುತ್ತಿದ್ದೆ. ನನಗೆ ಅರ್ಥವಾಗುತ್ತಿದ್ದುದು ಅತ್ಯಲ್ಪ. ಎರಿಕ್ ಅಂಕ್ಲ್ಗೆ ಅಮ್ಮನೊಡನೆ ತುಂಬಾ ಹೇಳಿಕೊಳ್ಳುವುದಿರುತ್ತಿತ್ತು. ಗೋಪಿ ದೊಡ್ಡಮ್ಮನಿಗೂ ಸಹ.
ಯಶೋದಾಂಟಿಯ ಮಕ್ಕಳಲ್ಲಿ ಕಿರಿಯವ ರಘು, ಅಣ್ಣನ ಸಹಪಾಠಿಯಾಗಿದ್ದು, ಆಗಾಗ ನಮ್ಮೊಡನೆ ಆಡಲು ಬರುತ್ತಿದ್ದ. ಅವರ ಮನೆ 'ತುಳಸೀ ವಿಲಾಸ' ದೊಡ್ಡ ಬಂಗಲೆಯಾಗಿದ್ದು, ಚಿಕ್ಕಂದಿನಲ್ಲಿ ಅದರೊಳ ಹೊಕ್ಕು, ಯಶೋದಾಂಟಿಗೆ ಸಿಗುವುದು ನನ್ನ ಪಾಲಿಗೆ ಅಷ್ಟೊಂದು ಇಷ್ಟದ ವಿಷಯವಾಗಿರಲಿಲ್ಲ. ಯಶೋದಾಂಟಿ ತುಂಬ ಬೆಳ್ಳಗಿನ ಮಹಾಕಾಯೆ. ಸೇಂಟ್ ಆಗ್ನಿಸ್ ಕಾಲೇಜ್ನಲ್ಲಿ ಕೆಲಕಾಲ ಫ್ರೆಂಚ್ ಪ್ರಾಧ್ಯಾಪಕಿಯಾಗಿದ್ದ ಅವರು ಮಂಗಳೂರು ಮಹಿಳಾ ಸಭಾದಲ್ಲಿ ಕಾರ್ಯನಿರತರಾಗಿರುತ್ತಿದ್ದರು. ಲೈಟ್ಹೌಸ್ ಹಿಲ್ನ ಕೆಳಗೆ, ಜ್ಯೋತಿ ಟಾಕೀಸ್ ಎದುರಿಗಿದ್ದ ಮಹಿಳಾ ಸಭಾಕ್ಕೆ ಹಾಲಿನ ಪುಡಿಯ ಡಬ್ಬಗಳಿಗಾಗಿ ಅಮ್ಮ ನಮ್ಮನ್ನು ಕಳುಹುತ್ತಿದ್ದರು. ಅಲ್ಲಿ ವ್ಯಸ್ತರಾಗಿರುತ್ತಿದ್ದ ಆಂಟಿಯಿಂದ ಹಾಲಿನ ಡಬ್ಬ ಪಡೆವಾಗ, ಅವರ ಜೊತೆಗಿದ್ದ ಪ್ರತಿಷ್ಠಿತ ಮಹಿಳೆಯರು ನಮ್ಮನ್ನು ಕಂಡು ಸೌಮ್ಯ ನಗು ಬೀರುತ್ತಿದ್ದರು. ಅವರ ಮಾತುಕತೆಗಳನ್ನು ಆಲಿಸುತ್ತಾ ಕುಳಿತಿರುತ್ತಿದ್ದ ನನಗೆ ಏನೋ ಮುಜುಗರ ಬಾಧಿಸುತ್ತಿತ್ತು. ಒಂದೆರಡು ಬಾರಿ, ಏನೋ ಕಾರಣದಿಂದ ಯಶೋದಾಂಟಿಯ ಮನೆ ತುಳಸೀ ವಿಲಾಸಕ್ಕೆ ಹೋಗಿ ಅಲ್ಲಿ ತೆಗೆದಿರಿಸಿರುತ್ತಿದ್ದ ಹಾಲಿನ ಡಬ್ಬ ತರಬೇಕಾಗುತ್ತಿತ್ತು.ಆಗ ಸೊಗಸಾದ ಪಿಂಗಾಣಿ ತಟ್ಟೆಯಲ್ಲಿ ಆಂಟಿ ತಿನ್ನಲು ಕೊಟ್ಟ ಕಸ್ಟರ್ಡ್, ಪುಡ್ಡಿಂಗ್ಗಳಂತಹ ನಮಗೆ ಅಸಾಮಾನ್ಯವಾಗಿದ್ದ ತಿಂಡಿಗಳನ್ನು ಆ ನಾಜೂಕು ತಟ್ಟೆ, ಚಮಚಗಳಿಂದ ತಿನ್ನುವಾಗ ನನಗೆ ಬಲು ಮುಜುಗರವೆನಿಸುತ್ತಿತ್ತು.
ಯಶೋದಾಂಟಿ, ಆನಂದಂಕ್ಲ್ ಅಂಡಮಾನ್ಗೆ ಪೋಸ್ಟಿಂಗ್ ಮೇಲೆ ಹೋದ ಬಳಿಕ ಈ ಹಿಂಸೆ ತಪ್ಪಿತು.
ತುಳಸೀ ವಿಲಾಸ - ಹುಟ್ಟಿ ಮೂರು ತಿಂಗಳಲ್ಲೇ ತಮ್ಮ ತಂದೆಯನ್ನು ಕಳಕೊಂಡ ನಮ್ಮಮ್ಮ, ತನ್ನ ದೊಡ್ಡಪ್ಪನ ಆಶ್ರಯದಲ್ಲಿ
ತಮ್ಮ ಶೈಶವ, ಬಾಲ್ಯದ ಮೊದಲ ಆರು ವರ್ಷಗಳನ್ನು ಕಳೆದ ತಾಣವದು. ಅಮ್ಮನ ತಂದೆಯ ತಂದೆ, ನಮ್ಮ ಮುತ್ತಜ್ಜ ಮಂಜಪ್ಪಜ್ಜ, ಮಂಗಳೂರು ನ್ಯಾಯಾಲಯದಲ್ಲಿ ಗುಮಾಸ್ತರಾಗಿದ್ದರು. ಅಂದಿನ ಆಂಗ್ಲ ನ್ಯಾಯಾಧೀಶರ ಪ್ರಭಾವದಿಂದ ತಮ್ಮ ಏಳು ಮಂದಿ ಗಂಡು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನಿತ್ತ ಅವರು, ತಮ್ಮಿಬ್ಬರು ಹೆಣ್ಮಕ್ಕಳಿಗೂ ವಿದ್ಯೆಯಿತ್ತಿದ್ದರು. ಈ ನಮ್ಮ ಅಜ್ಜಿಯಂದಿರು, ದೇವಮ್ಮ, ಪೊನ್ನಮ್ಮ ಸಮಗ್ರ ರಾಮಾಯಣ, ಮಹಾಭಾರತ ವಾಚನ ಮಾಡುತ್ತಿದ್ದರು. ಮಂಗಳೂರು ಲೇಡೀಸ್ ಕ್ಲಬ್ನ ಸದಸ್ಯೆಯರಾಗಿದ್ದರು. ೧೮೫೭ರಲ್ಲಿ ಮಂಗಳೂರಿನ
ಬೆಂದೂರ್ ಚರ್ಚ್ ಪಕ್ಕದ ಸ್ವಂತ ಮನೆಗೆ ಹಂಪನಕಟ್ಟೆಯ ಬಾಡಿಗೆ ಮನೆಯಿಂದ ಬರುವಾಗ ಹನ್ನೆರಡು ಬತ್ತಿಗಳ ದೀಪದ ಕುಡಿಗಳು ಬೆಳಗುವ ದೊಡ್ಡ ತೂಗುದೀಪವನ್ನು ಉರಿಸಿಕೊಂಡೇ ಬಂದಿದ್ದರಂತೆ. ಮನೆ - 'ಸೀಗೆಬಲ್ಲೆ ಹೌಸ್', ಮಕ್ಕಳಿಂದಲೂ, ಸಮೀಪ ಬಂಧುಗಳಿಂದಲೂ ತುಂಬಿ ತುಳುಕುತ್ತಿತ್ತು. ಹಿತ್ತಿಲ ತುಂಬ ಹಲಸು, ಮಾವು, ಚಿಕ್ಕು,, ಸೀತಾಫಲ, ಚಕ್ಕೋತ, ಸೀಗೆ ಮರಗಳು ತುಂಬಿದ್ದವು.
ಮಕ್ಕಳಲ್ಲಿ ನಮ್ಮಮ್ಮನ ತಂದೆ ಕೃಷ್ಣಪ್ಪ ಎಲ್ಲರಿಗಿಂತ ಕಿರಿಯರು. ಹಿರಿಯವರಾದ ಅಜ್ಜ ಬಸಪ್ಪ ಆಹಾರ ಸರಬರಾಜು ಖಾತೆಯಲ್ಲಿ ಸರಕಾರೀ ನೌಕರಿಯಲ್ಲಿದ್ದರೆ, ಎರಡನೆಯವರಾದ ಅಜ್ಜ ಗುಡ್ಡಪ್ಪ, ಕ್ರೈಸ್ತರಾಗಿ ಪರಿವರ್ತಿತರಾಗಿ, ಪಾದ್ರಿಯಾಗಿ ಜೆಪ್ಪು ಸೆಮಿನರಿಯಲ್ಲಿ ಸೇವೆಯಲ್ಲಿದ್ದರು. ಮೂರನೆಯವರಾದ ಅಜ್ಜ ಪರಮೇಶ್ವರ
ಎಕ್ಸೈಸ್ ಇನ್ಸ್ಪೆಕ್ಟರ್ ಆಗಿ ಹೆಸರು, ಹಣ ಮಾಡಿದವರು. ಬೆಂದೂರ್ವೆಲ್ ಬಳಿ ' ತುಳಸೀ ವಿಲಾಸ ' ಅವರ ಮನೆ. ಅವರ ಮಕ್ಕಳನ್ನು, ' ಬಾರ್ನ್ ವಿದ್ ಅ ಸಿಲ್ವರ್ ಸ್ಪೂನ್ ' ಎಂದು ಜನರಾಡಿ ಕೊಳ್ಳುತ್ತಿದ್ದರಂತೆ. ಕಂದಾಯ ವಸೂಲಿಗೆ ಅಜ್ಜ ಕುದುರೆಯೇರಿ ಸಾಗುವಾಗ, ಖಡ್ಗಧಾರಿಗಳಾದ ಭಟರಿಬ್ಬರು ಕುದುರೆಯ ಅಕ್ಕಪಕ್ಕ ಓಡುತ್ತಾ ಸಾಗುತ್ತಿದ್ದರಂತೆ. ತುಳಸೀ ವಿಲಾಸದೊಡತಿ ತುಳಸಿ, ನಮ್ಮ ತಂದೆಯ ಸೋದರತ್ತೆಯಾಗಿದ್ದು, ತಂದೆಯ ತಂಗಿ, ನಮ್ಮ ಸೋದರತ್ತೆ ದೇವಕಿ ಅತ್ತೆ, ಚಿಕ್ಕ ಬಾಲಕಿಯಾಗಿದ್ದಾಗ, ಅಜ್ಜ ಗಂಜಾಂಗೆ ಕಂದಾಯ ವಸೂಲಿಗೆ ಹೊರಡುವಾಗ ಸಾರೋಟಿನಲ್ಲಿ ಜೊತೆಗೆ
ಕರೆದೊಯ್ಯುತ್ತಿದ್ದರಂತೆ. ತುಂಬ ಬೆಳ್ಳಗೆ ಚೆಲುವೆಯಾಗಿದ್ದ ದೇವಕಿ ಅತ್ತೆಯ ಬಾಯಿಂದಲೂ ಈ ವಿವರಗಳನ್ನು ನಾವು ಕೇಳಿದ್ದೆವು. ಜನರು ತಮ್ಮಲ್ಲಿ ಅಡವಿಟ್ಟ ಆಸ್ತಿಗಳನ್ನು ಸಾಲ ತೀರಿಸಲಾಗದೆ ವಾಯ್ದೆ ಮುಗಿದಾಗ ಅಜ್ಜ ಮಟ್ಟ ಹಾಕಿ ಕೊಳ್ಳುತ್ತಿದ್ದರು. ಹೀಗೆ
ಅವರದಾದ ಕೆಲ ಆಸ್ತಿಗಳಲ್ಲಿ ಎಕ್ಕೂರು ಗುಡ್ಡದಿಂದ ನೇತ್ರಾವತಿ ನದಿದಡದವರೆಗಿದ್ದ ಐನೂರು ಎಕ್ರೆ ಭೂಮಿಯ ಒಡೆತನವೂ ಒಂದು.
ಭೂಮಿಯನ್ನು ಅಡವಿಟ್ಟು ಬಿಡಿಸಿ ಕೊಳ್ಳಲಾಗದ ಸದ್ಗೃಹಸ್ಥರೊಬ್ಬರು, ಹೆಚ್ಚಿನ ವಾಯ್ದೆಗಾಗಿ ಬೇಡಿ, ಅದು ಸಿಗದಾಗ ನಿರಾಶರಾಗಿ ಎಲ್ಲವನ್ನೂ ಕಳಕೊಂಡ ದುಃಖದಿಂದ ಅಳುತ್ತಾ, ಕುಟುಂಬ ಸಮೇತ ದೇಶಾಂತರ ಹೋದರಂತೆ. ಇತ್ತ ಅಜ್ಜನ ಬಾಳಲ್ಲಿ ಒಂದೊಂದಾಗಿ ದುರಿತಗಳು ತೊಡಗಿ ಸುಖ ಸಂಪತ್ತಿನಲ್ಲಿ ತೇಲುತ್ತಿದ್ದ ಸಂಸಾರ ದುಃಖಸಾಗರದಲ್ಲಿ ಮುಳುಗಿತು. ಅತ್ಯಂತ ಮೇಧಾವಿ ಇಂಜಿನಿಯರ್ ಆಗಿದ್ದ ಎರಡನೆ ಮಗ ಯು. ನಾರಾಯಣ, ಚಿತ್ತಸ್ವಾಸ್ಥ್ಯ ಕಳಕೊಂಡು ಸರಕಾರಿ ಕೆಲಸದಿಂದ ಹೊರ ಬರಬೇಕಾಯ್ತು. ಮೆಡಿಕಲ್ ಕೊನೆಯ ವರ್ಷದಲ್ಲಿದ್ದ ಮಗ ಹಾಗೂ ಕಾನೂನು ಪದವಿಯ ಕೊನೆಯ ಹಂತದಲ್ಲಿ ಮದರಾಸ್ನಲ್ಲಿ ಕಲಿಯುತ್ತಿದ್ದ ಇನ್ನೊಬ್ಬ ಮಗ - ಇಬ್ಬರೂ ಜ್ವರ ಉಲ್ಬಣಿಸಿ ನಿಧನ ಹೊಂದಿದರು. ಈರ್ವರು ಪುತ್ರಿಯರೂ ಅಕಾಲ ಮರಣಕ್ಕೆ ತುತ್ತಾದರು. ಅಂದು ಕಣ್ಣೀರು ಸುರಿಸುತ್ತಾ ದೇಶಾಂತರ ಹೊರಟು ಹೋದ ಆ ಸದ್ಗೃಹಸ್ಥನ ಹೃದಯದ ನೋವೇ ಇದಕ್ಕೆಲ್ಲ ಕಾರಣ ಎಂದುಕೊಂಡು, ಆ ಭೂಮಿಯನ್ನು ಆ ಕುಟುಂಬಕ್ಕೆ ಮರಳಿಸಲೆಂದು ಊರೂರು ಅರಸಿದರೂ ಎಲ್ಲೂ ಅವರ ಪತ್ತೆಯಾಗದೆ ಹೋದಾಗ, ಅಜ್ಜ ಎಲ್ಲವನ್ನೂ ಗೇಣಿದಾರರಿಗೆ ಬಿಟ್ಟುಕೊಟ್ಟು ವಿರಕ್ತರಾಗಿ ಇಗರ್ಜಿಯಲ್ಲಿ ಪ್ರಾರ್ಥನೆಯಲ್ಲಿ ಕಾಲ ಕಳೆಯ ತೊಡಗಿ, ಕ್ರೈಸ್ತ ಮತವನ್ನೂ ಅಪ್ಪಿಕೊಂಡರು. ಆದರೆ ತಮ್ಮ ಪತ್ನಿಯನ್ನೂ ಕ್ರಿಸ್ತಾನುಯಾಯಿಯಾಗಿಸುವಲ್ಲಿ ಮಾತ್ರ ಅವರು ಸಫಲರಾಗಲಿಲ್ಲ.
ಮೂರು ತಿಂಗಳ ಪ್ರಾಯದಲ್ಲಿ ತಂದೆಯನ್ನು ಕಳಕೊಂಡ ನಮ್ಮಮ್ಮನನ್ನು ಈ ತುಳಸೀ ವಿಲಾಸದ ದೊಡ್ಡಪ್ಪ ಆರು ವರ್ಷಗಳವರೆಗೆ ತಮ್ಮೊಡನಿರಿಸಿಕೊಂಡು ಪೋಷಿಸಿದ್ದರು. ಊರಿನಿಂದ ವಿದ್ಯಾರ್ಜನೆಗಾಗಿ ಬಂದ ಬಂಧುವರ್ಗದ ಕೆಲ ಹುಡುಗರೂ ಜೊತೆಗಿದ್ದ ಈ ವಿಶಾಲ ಮನೆಯಲ್ಲಿ ಒಟ್ಟು ಇಪ್ಪತ್ತೈದು ಜನರಿದ್ದು, ಎಲ್ಲರ ಬಟ್ಟಲುಗಳಿಗೂ ದೊಡ್ಡಮ್ಮ ಹೇಗೆ ಒಂದೇ ಪ್ರಮಾಣದಲ್ಲಿ ಬಡಿಸುತ್ತಿದ್ದರೆಂದು ಅಮ್ಮ ಹೇಳುತ್ತಿದ್ದರು. ಮುತ್ತಜ್ಜ ಮಂಜಪ್ಪಜ್ಜನ ನಾಲ್ಕನೇ ಮಗ ಅಜ್ಜ ವೀರಪ್ಪ, ತುಳಸೀ ವಿಲಾಸದ ಪಕ್ಕದಲ್ಲಿಯೇ ಮನೆ ಮಾಡಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಅವರ ಮನೆ ' ಲೇನ್ ಕಾಟೇಜ್ ' ಈಗಲೂ ಅಸ್ತಿತ್ವದಲ್ಲಿದೆ.
ತುಳಸೀ ವಿಲಾಸದಲ್ಲಿ ಆರು ವರ್ಷ ಕಳೆದ ನಮ್ಮಮ್ಮನನ್ನು, ಸೀಗೆಬಲ್ಲೆ ಹೌಸ್ನ
ಸೋದರತ್ತೆ ದೇವಮ್ಮ, ಮುಂದಿನ ಆರು ವರ್ಷ ತಮ್ಮೊಡನಿರಲು ಕರೆದೊಯ್ದರು. ಮತ್ತೂ ಮುಂದಿನ ಆರು ವರ್ಷ, ನಮ್ಮಮ್ಮ, ಸಣ್ಣತ್ತೆ ಪೊನ್ನಮ್ಮನೊಂದಿಗೆ ಅವರ ಮನೆ ಮಾಧವ ವಿಲಾಸದಲ್ಲಿ ಇರಬೇಕಿತ್ತು. ತಮ್ಮ ಕೃಷ್ಣಪ್ಪ ಆಕಸ್ಮಿಕವಾಗಿ ತೀರಿ ಕೊಂಡಾಗ ಅಣ್ಣಂದಿರು ಸೇರಿ ಮಾಡಿದ ಏರ್ಪಾಡದು. ಶೈಶವದಲ್ಲೇ ತಂದೆಯನ್ನು ಕಳಕೊಂಡರೂ, ಪ್ರಾಯ ಪ್ರಬುದ್ಧಳಾಗುವವರೆಗೂ ನಮ್ಮಮ್ಮನಿಗೆ ತಂದೆಯ ಮನೆ ಎರವಾಗಿರಲಿಲ್ಲ. ಮುಂದೆ...
(ಮುಂದುವರಿಯಲಿದೆ)
ಒಂದು ಕಾಲದ ನೆನಪುಗಳು... ಬರವಣಿಗೆ ಚೆನ್ನಾಗಿದೆ.
ReplyDelete