05 July 2016

ಡಾಕ್ಟರುಗಳಿಂದಾದ ಪ್ರಮಾದಗಳು

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತಾರು

``ನಾಳೆ ಎಂಬುದು ನಿನ್ನಿನ ಮನಸು, ಮುಂದೆ ಎಂಬುದು ಅಂದಿನ ಕಣಸು'' ಇದು .ರಾ. ಬೇಂದ್ರೆಯವರ ಕವನದ ಸಾಲು. ನಾಳೆ ಏನಾಗುತ್ತದೋ ಎಂಬ ಭಯ ಮತ್ತು ನಾಳೆಗಾಗಿ ಸಿದ್ಧತೆ, ನಾಳೆಯ ಬಗ್ಗೆ ಮುಂದಾಲೋಚನೆ ಮಾಡದ ಮನುಷ್ಯರಿದ್ದಾರೆಯೇ? ಬಹುಶಃ ಇರಲಾರರು. ಭಿಕ್ಷುಕನೇ ಆಗಿರಲಿ, ಸನ್ಯಾಸಿಯೇ ಆಗಿರಲಿ ಅವನಿಗೂ ಅವನದೇ ಆದ ಕನಸುಗಳಿರುತ್ತವೆ, ಆಶೆಗಳಿರುತ್ತವೆ. ಇದು ಸೃಷ್ಟಿಯ ಎಲ್ಲ ಜೀವಿಗಳಲ್ಲೂ ಇರುವ ಮೂಲಭೂತವಾದ ಮತ್ತು ನಿಸರ್ಗದತ್ತವಾದ ಗುಣಗಳಾಗಿರಬಹುದೇ? ಇರುವೆಗಳು ತಮ್ಮ ಗೂಡಿಗೆ ಆಹಾರವನ್ನು ಹೊತ್ತೊಯ್ಯುವ ಸಡಗರವೂ, ಜೇನನ್ನು ಸಂಗ್ರಹಿಸುವ ಜೇನುನೊಣಗಳ ಪರಿಶ್ರಮವೂ ನಾಳೆಯ ಬಗ್ಗೆ ಅವುಗಳಿಗೆ ಭರವಸೆಯಿದ್ದುದರಿಂದಲೇ ಇರಬೇಕು. ಪರಿಶ್ರಮಿಗಳಿಗೆ, ನೋವುಂಡವರಿಗೆ ಬದುಕಿನಲ್ಲಿ ಪರಿಹಾರ ಸಿಗುವುದು ಭರವಸೆಯಿಂದ ಮಾತ್ರ. ಒಂದರ್ಥದಲ್ಲಿ ಭಯ ಮತ್ತು ಭರವಸೆ ಎರಡೂ ಒಂದನ್ನೊಂದು ಹಿಂಬಾಲಿಸುತ್ತಲೇ ಇರುತ್ತದೆ. ಇದೆಲ್ಲಾ ನೆನಪಾದುದಕ್ಕೆ ಕಾರಣವಿದೆ. ಯಾರಲ್ಲಿ ಭರವಸೆಯಿಡಲಿ? ಎಂದು ಗೊತ್ತಾಗದೆ ಒದ್ದಾಡಿದ ಕ್ಷಣಗಳವು. ಭರವಸೆ ಎನ್ನುವುದು ರಸ್ತೆಯಂತೆ ಎನ್ನುತ್ತಾರೆ. ಯಾಕೆಂದರೆ ಅದು ಮುಂಚೆ ಇರಲಿಲ್ಲ. ಸಾವಿರಾರು ಮಂದಿ ಓಡಾಡಿದ ಮೇಲೆ ಅದು ನಿರ್ಮಾಣವಾಗುತ್ತದಂತೆ. ಅಂದರೆ ನಾವು ಅನೇಕ ಸಾರಿ ಮೆಟ್ಟುಗಳಿಂದ ಕಚ್ಚಿಸಿಕೊಂಡ ಮೇಲೆ ಅದರ ಮೇಲೆ ಭರವಸೆ ಇಡುತ್ತೇವಲ್ಲಾ ಹಾಗೆ ಎಂಬುದು ನನ್ನ ಭಾವನೆ.ಹಲವಾರು ವರ್ಷಗಳಿಂದ ಸೈನಸ್ ಕಾಯಿಲೆಯಿಂದ ಬಳಲುತ್ತಿದ್ದ ನಾನು ಎರಡು ಸಲ ಮೂಗನ್ನು ಪಂಕ್ಚರ್ ಮಾಡಿಸಿಕೊಂಡಿದ್ದೆ. ಅಂದರೆ ಸೂಜಿ ಹಾಕಿ ಮೂಗಿನ ಗುಳಿಗಳಲ್ಲಿ ತುಂಬುವ ಕೀವನ್ನು ಹೊರತೆಗೆಯುವ ಕ್ರಿಯೆಯನ್ನು ಮಾಡಿಸಿಕೊಂಡಿದ್ದೆ. ಎರಡೂ ಸಲವೂ ಸರಕಾರಿ ಆಸ್ಪತ್ರೆಯಲ್ಲಿ ಮಾಡಿಸಿದ್ದೆ, ಡಾ. ಸತ್ಯಶಂಕರ್ ಅವರಿಂದ. ಮೂರನೇ ಸಲವೂ ಮೂಗಿನ ಕಿರಿಕಿರಿ ತಾಳಲಾರದೆ ಡಾ. ರಾಧಾಕೃಷ್ಣನ್ ಅವರಲ್ಲಿ ಹೋದಾಗ ಅವರು ಮೂಗಿನೊಳಗೆ ದುರ್ಮಾಂಸ ಬೆಳೆದಿದೆ. ಅದನ್ನು ತೆಗೆಸಬೇಕೆಂದು ಸಲಹೆಯಿತ್ತರು. ನನ್ನ ಮೂಗು ಸರಿಯಿಲ್ಲವೆಂಬ ಅನುಭವವಾಗಿತ್ತು. ಮೂಗಿನ ಎಡಭಾಗದಿಂದ ಶ್ವಾಸ ತೆಗೆದುಕೊಳ್ಳಲು ಕಷ್ಟವಾಗುತ್ತಿತ್ತು. ಆದುದರಿಂದ ಡಾಕ್ಟರ ಸಲಹೆಯಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಿದ್ಧಳಾದೆ.

೧೯೯೮ರ ಅಕ್ಟೋಬರ್ ೬ರ ಒಂದು ಶುಭದಿನದಂದು ಎಸ್.ಸಿ.ಎಸ್. ಆಸ್ಪತ್ರೆಗೆ ಅಡ್ಮಿಟ್ ಆದೆ. ಮೂಗಿನ ಶಸ್ತ್ರಚಿಕಿತ್ಸೆ ಎಂಬ ಕಾರಣದಿಂದಲೂ ಇರಬಹುದೇನೋ ನನ್ನ ಆರನೇ ಇಂದ್ರಿಯವು ಜಾಗೃತವಾಗಿ ಎಚ್ಚರಿಕೆ ನೀಡುತ್ತಿತ್ತು. ದಿನ ನನ್ನ ಡೈರಿಯಲ್ಲಿ ನಾನು ಚಿಕಿತ್ಸೆಯಲ್ಲಿ ಗೊಟಕ್ ಎಂದರೆ ನನ್ನ ಹಣವನ್ನು ಹೇಗೆ ವಿಲೇವಾರಿ ಮಾಡಬೇಕೆಂದು ಬರೆದಿಟ್ಟಿದ್ದೆ. ಲೇಖಕಿಯರ ಸಂಘದ ಕಟ್ಟಡನಿಧಿಗೆ ಒಂದಷ್ಟು ಮತ್ತು ದತ್ತಿನಿಧಿಗೆ ಒಂದಿಷ್ಟು ಹಣ ನೀಡಬೇಕು ಎಂದು ಬರೆದಿಟ್ಟು ಲಕ್ಷ್ಮೀ ಟೀಚರಲ್ಲಿ ಹೇಳಿದ್ದೆ. ``ಏಯ್ ಸುಮ್ಮನಿರೇ, ಶಸ್ತ್ರಚಿಕಿತ್ಸೆಗಿಂತ ನಿನಗೆ ಹಣದ ವಿಲೇವಾರಿಯ ಚಿಂತೆಯೇ ಜೋರಾಗಿರುವಂತಿದೆ. ಈಗ ನಿನ್ನ ಪ್ರಾಣ ಡಾಕ್ಟರ ಕೈಯಲ್ಲಿದೆ. ಅದರ ಬಗ್ಗೆ ಚಿಂತೆ ಮಾಡು. ಹಣಕ್ಕೆ ಯಾರೂ ನಡಿಗೆ ಕಲಿಸಬೇಕಾಗಿಲ್ಲ. ಅದು ಅದರಷ್ಟಕ್ಕೆ ಬರುತ್ತದೆ. ಹೋಗುತ್ತದೆ. ಗೊತ್ತಾಯ್ತಾ?'' ಎಂದು ನನ್ನ ಬೆನ್ನಿಗೊಂದು ಗುದ್ದಿ ಹುಸಿಮುನಿಸು ತೋರಿದರು.

ಸ್ವಲ್ಪ ಹೊತ್ತಿನಲ್ಲೇ ಓಪರೇಷನ್ ಥಿಯೇಟರ್ಗೆ ನನ್ನನ್ನು ಕರೆದೊಯ್ದರು. ಗಾಡಿಯಲ್ಲಿ ನನ್ನನ್ನು ಮಲಗಿಸಿ ಒಯ್ಯುವಾಗಲೇ ಡಾಕ್ಟರ್ ಕೂಡಾ ಜೊತೆಯಲ್ಲಿ ಬಂದರು. ಕೋಣೆಗೆ ತಲುಪಿದ ಮೇಲೆ ನರ್ಸುಗಳೊಡನೆ ಡಾಕ್ಟರು ಮಾತಾಡುವ ರೀತಿ ಕಂಡೇ ನಾನು ಮುಜುಗರಪಟ್ಟೆ. ಕಾಫಿ ಕ್ಲಬ್ನಲ್ಲೋ, ಪಬ್ನಲ್ಲೋ, ಪಾರ್ಕ್ನಲ್ಲೋ ಸಂಗಾತಿಗಳೊಂದಿಗೆ ಹರಟುತ್ತಾರಲ್ಲಾ, ಹಾಗೆ ಇದ್ದರು. ಓಪರೇಷನ್ ಥಿಯೇಟರ್ನೊಳಗೆ ಇದ್ದೇವೆಂದೇ ಮರೆತಂತಿತ್ತು ಅವರ ಹಾವಭಾವ. ಶಸ್ತ್ರಚಿಕಿತ್ಸೆ ಮುಗಿದು ರೂಮಿಗೆ ಬಂದು ಸ್ಮೃತಿ ಬಂದ ಮೇಲೆ ನನ್ನ ಮೊಣಕಾಲು ಹಿಂಭಾಗದಲ್ಲಿ ಉರಿಯುವಂತೆ ಭಾಸವಾಯಿತು. ನೋಡಿದರೆ ಮೊಣಕಾಲಿನ ಮಾಂಸಖಂಡದಲ್ಲಿ ಸುಟ್ಟಗಾಯವಾಗಿದ್ದು, ದೊಡ್ಡ ಗುಳ್ಳೆಯೆದ್ದಿತ್ತು. ನನ್ನ ಪಕ್ಕ ಇದ್ದ ಲಕ್ಷ್ಮೀ ಟೀಚರು ನರ್ಸನ್ನು ಕರೆದು ಹೇಳಿದರು. ಶಸ್ತ್ರಚಿಕಿತ್ಸೆಯ ಕೋಣೆಗೆ ಹೋಗುವಾಗ ಸರಿಯಿದ್ದ ಕಾಲಿಗೇನಾಯಿತು ಎಂದು ನರ್ಸ್ನಲ್ಲಿ ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಡಾ. ರಾಧಾಕೃಷ್ಣನ್ ಕೆಲಸ ಮುಗಿಸಿ ಮನೆಗೆ ಹೋಗಿದ್ದರು. ವಾರ್ಡ್ನಲ್ಲಿ ಇದ್ದ ಹಿರಿಯ ಡಾಕ್ಟರನ್ನು ನರ್ಸ್ ಕರೆತಂದಳು. ಅವರು ಅದಕ್ಕೆ ಔಷಧಿ ಬರೆದುಕೊಟ್ಟರೇ ಹೊರತು ಸುಟ್ಟ ಗಾಯ ಹೇಗಾಯಿತೆಂದು ಕೇಳಿದರೆ ಅವರಲ್ಲಿ ಉತ್ತರವಿರಲಿಲ್ಲ. ನಾಳೆ ಡಾಕ್ಟರು ಬರುತ್ತಾರೆ. ಅವರಲ್ಲಿ ಕೇಳಿದರೆ ಗೊತ್ತಾದೀತು ಎಂದರು. ಮರುದಿನ ರಾಧಾಕೃಷ್ಣ ಡಾಕ್ಟರ ಪತ್ತೆ ಇಲ್ಲ. ನಾಲ್ಕನೇ ದಿನ ಡಿಸ್ಚಾರ್ಜ್ ಆಗುವಾಗ ಮೂಗಿನ ಔಷಧಿಯಲ್ಲದೆ ಕಾಲಿಗೂ ಔಷಧಿ ಬರೆದುಕೊಟ್ಟರು. ಸರಸರನೇ ಮಾಳಿಗೆ ಮೆಟ್ಟಲು ಹತ್ತಿಕೊಂಡು ಆಸ್ಪತ್ರೆಯಲ್ಲಿ ಎಡ್ಮಿಟ್ ಆದವಳು ಹಿಂತಿರುಗಿ ಬರುವಾಗ ಕುಂಟುತ್ತಾ ಇಳಿಯುವಂತಾದುದು ಡಾಕ್ಟರ ಕರುಣೆಯಿಂದ! ಅವರ ಪರಿಶ್ರಮದಿಂದ. ಅವರು ನನ್ನನ್ನು ಸತ್ಯ ಸಂಗತಿಯಿಂದ ಮರೆಮಾಡಿ ಮೂರ್ಖಳನ್ನಾಗಿ ಮಾಡಿದರು.

ವಾರದ ಬಳಿಕ ನನ್ನ ಕಾಲು ಕೀವು ಬಾವು ತುಂಬಿ ಜ್ವರವೂ ಬಂತು. ಮುಲ್ಕಿಯ ಡಾ. ಸಬಿತಾ ಭಟ್ ಅವರಲ್ಲಿ ಜ್ವರಕ್ಕಾಗಿ ಔಷಧಿಗೆ ಹೋದಾಗ ನನ್ನ ಕಾಲನ್ನು ನೋಡಿ ಗಾಬರಿಯಾದರು. ``ಇದು ಸೆಪ್ಟಿಕ್ ಆಗಿದೆ. ನೀವು ಈಗಲೇ ಆಸ್ಪತ್ರೆಗೆ ಎಡ್ಮಿಟ್ ಆಗಿ'' ಎಂದು ಸಲಹೆ ನೀಡಿದರು. ಈಗ ನನ್ನ ಕಾಲುಗಳು ಮಣಭಾರವಾಗಿ ಹೆಜ್ಜೆ ಎತ್ತಿಡುವುದೂ ಕಷ್ಟವಾಯಿತು. ತಕ್ಷಣ ನಾನು ತಮ್ಮನಿಗೆ ಹೇಳಿ ಕಳುಹಿಸಿ ಅವನೊಂದಿಗೆ ಮತ್ತೆ ಅದೇ ಎಸ್.ಸಿ.ಎಸ್. ಆಸ್ಪತ್ರೆಗೆ ಎಡ್ಮಿಟ್ ಆದೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಯಾವ ಬಲದಿಂದ ಬಂದೆನೋ ತಿಳಿಯದು. ಅಲ್ಲಿ ಜ್ವರದ ಪರಿಣಾಮವೋ, ನೋವಿನ ಪರಿಣಾಮವೋ ಗೊತ್ತಿಲ್ಲ. ಮೂರ್ಛೆ ತಪ್ಪಿ ಬಿದ್ದವಳಿಗೆ ಮತ್ತೆ ಏನಾಯಿತೆಂದೇ ನೆನಪಿಲ್ಲ. ನನ್ನನ್ನು ಎತ್ತಿ ತಂದು ಏನೇನೋ ಪ್ರಯತ್ನ ಮಾಡಿ ಡಾಕ್ಟರು ಮತ್ತೆ ಎಚ್ಚರಗೊಳ್ಳುವಂತೆ ಮಾಡಿದರಂತೆ. ಆಗ ಡಾ. ರಾಧಾಕೃಷ್ಣನನ್ನು ಅಲ್ಲಿಗೆ ಕರೆಸಿದ್ದರು. ಯಾಕೆಂದರೆ ಅವರು ಚಿಕಿತ್ಸೆ ಕೊಡಿಸಿದ ಪೇಶೆಂಟ್ ಆದ ಕಾರಣ ಅವರನ್ನೇ ಕರೆಸಿದರಂತೆ. ಸೆಪ್ಟಿಕ್ ಆದ ಕಾಲಿನ ಭಾಗವನ್ನು ಕೆತ್ತಿ ತೆಗೆದು ಕಾಲಿಗೆ ಬ್ಯಾಂಡೇಜ್ ಹಾಕಿದರು. ತಾನು ಮಾಡಿದ ಪ್ರಮಾದದಿಂದಾಗಿ ಜೀವಕ್ಕೆ ಎಷ್ಟೊಂದು ಹಿಂಸೆಯಾಯಿತು ಎಂಬ ಭಾವನೆ ಎಳ್ಳಷ್ಟೂ ಇಲ್ಲದ ಡಾಕ್ಟರು ಹೇಳಿದ ಮಾತು ಕೇಳಿ ನನ್ನ ರಕ್ತ ಕುದಿಯಿತು. ``ಮದುವೆಯಾಗದವರಿಗೆ ನೋವನ್ನು ಸಹಿಸುವ ಶಕ್ತಿ ಇರುವುದಿಲ್ಲ. ಇದೇನೂ ದೊಡ್ಡ ಸಂಗತಿಯಲ್ಲ'' ಎಂದರು. ತಪ್ಪು ಮಾಡಿದ್ದಲ್ಲದೆ ಅದನ್ನು ಸಮರ್ಥಿಸಿಕೊಳ್ಳಲು ನೀಡಿದ ಉದಾಹರಣೆಯನ್ನು ಪ್ರಜ್ಞಾವಂತರು ಯಾರೂ ಊಹಿಸಲೂ ಸಾಧ್ಯವಿಲ್ಲ. ಹಾಗಾದರೆ ಮದುವೆ ಆದವರಿಗೆ ಹೀಗೆ ಕಾಲನ್ನು ಸುಟ್ಟು ಹಾಕಿದರೆ ಸುಮ್ಮನಿರುತ್ತಾರೆಯೇ? ಎಂದು ಕೇಳಿದೆ. ಆಗ ``ನಾನು ಹೇಳಿದ್ದು ಹೆರದ ಹೆಂಗಸರಿಗೆ ನೋವು ಸಹಿಸುವ ಶಕ್ತಿಯಿರುವುದಿಲ್ಲ'' ಎಂದು ಹೇಳಿದಾಗ ಅವರ ಸಣ್ಣತನಕ್ಕೆ ನನಗೇ ಹೇಸಿಗೆಯೆನಿಸಿತು. ಮನುಷ್ಯ ಡಾಕ್ಟರ್ ವೃತ್ತಿಗೇ ಅಯೋಗ್ಯ ಮಾತ್ರವಲ್ಲ. ಮಾತಾಡಲೂ, ವಾದಿಸಲೂ ಯೋಗ್ಯನಲ್ಲವೆಂದು ನನ್ನ ಮನಸ್ಸು ಮುದುಡಿತು. ಅವಿವಾಹಿತೆ ಎಂಬ ಕಾರಣಕ್ಕಾಗಿ ಅವಳನ್ನು ಹೇಗೆ ಸಮಾಜ ಸ್ವೀಕರಿಸುತ್ತದೆ ಎಂಬುದಕ್ಕೆ ಇದೊಂದು ಕೆಟ್ಟ ನಿದರ್ಶನ. ಸೆಗಣಿ ಹೊತ್ತವನೊಂದಿಗೆ ಜಗಳ ತರವಲ್ಲವೆಂದು ಸುಮ್ಮನಾದೆ. ಆದರೆ ಮನಸ್ಸು ಕುದಿವ ಕೊಪ್ಪರಿಗೆಯಾಯಿತು.

ಶಾಲೆಗೆ ಒಂದು ತಿಂಗಳು ರಜೆ ಹಾಕಬೇಕಾಯಿತು. ಮಧ್ಯೆ ನನ್ನ ಪರಿಸ್ಥಿತಿಯನ್ನು ವಿವರಿಸಿ ಉಡುಪಿಯ ಬಳಕೆದಾರರ ವೇದಿಕೆಗೆ ಪತ್ರ ಬರೆದೆ. ಅವರಿಂದ ಕೂಡಲೇ ಉತ್ತರ ಬಂತು. ಅವರು ಹೇಳಿದಂತೆ ಆಸ್ಪತ್ರೆಯ ನಿರ್ದೇಶಕರಿಗೆ ಪತ್ರ ಬರೆದೆ. ಅವರಿಗೆ ಪತ್ರ ತಲುಪಿದ ಮರುದಿನವೇ ನನಗೆ ನಿರ್ದೇಶಕರನ್ನು ಬಂದು ಕಾಣಬೇಕೆಂದು ಸೂಚನೆ ಬಂತು. ನಿರ್ದೇಶಕರ ಆಪ್ತಮಿತ್ರರೊಬ್ಬರು ನನ್ನ ಹತ್ತಿರದ ಬಂಧುವಾಗಿದ್ದರು. ಅವರ ಮೂಲಕ ನನಗೆ ಹೇಳಿ ಕಳುಹಿಸಲಾಯಿತು. ಆಗ ಚರವಾಣಿ, ಸ್ಥಿರವಾಣಿ ಯಾವುದೂ ಇರದ ಕಾಲವಾಗಿತ್ತು. ಮರುದಿನ ಅವರ ಛೇಂಬರಿನಲ್ಲಿ ನಾನು ಭೇಟಿಯಾದೆ. ನನ್ನ ಪೂರ್ವಾಪರಗಳನ್ನೆಲ್ಲಾ ವಿಚಾರಿಸಿದ ಮೇಲೆ, ``ಟೀಚರ್, ನಮ್ಮಿಂದ ತಪ್ಪಾಗಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆಪರೇಷನ್ ಮಾಡುವಾಗ ಅರ್ಥಿಂಗ್ ಅನ್ನು ಮರೆತು ನಿಮ್ಮ ಕಾಲ ಅಡಿಯಲ್ಲಿ ಇರಿಸಿದ್ದರಿಂದ ಕಾಲು ಸುಟ್ಟುಹೋಗಿದೆ. ನಾವು ಡಾಕ್ಟರರ ಮೇಲೆ ಆರೋಪ ಹೊರಿಸಿ ವಿವರ ಕೇಳಿದ್ದೇವೆ. ಅವರು ನರ್ಸ್ಗಳ ತಪ್ಪೆಂದು ವಾದಿಸುತ್ತಾರೆ. ನಿಮ್ಮ ಬಗ್ಗೆ ನಮಗೆ ಪಶ್ಚಾತ್ತಾಪವಿದೆ. ನಾನು ಒಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನೀವು ದಯವಿಟ್ಟು ವಿಷಯವನ್ನು ಪತ್ರಿಕೆಯಲ್ಲಿ ಬರೆಯಬೇಡಿ. ಬಳಕೆದಾರ ವೇದಿಕೆಯೊಂದಿಗೂ ವ್ಯವಹರಿಸಬೇಡಿ. ನಮ್ಮ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತದೆ. ನಿಮ್ಮ ಆಸ್ಪತ್ರೆಯ ಎಲ್ಲಾ ಖರ್ಚನ್ನು ನಾವು ನಿಮಗೆ ಹಿಂದಿರುಗಿಸುತ್ತೇವೆ'' ಎಂದು ವಿನಂತಿಸಿದರು. ಹಣ ಹಿಂದಿರುಗಿಸುವುದು ನೋವಿಗೆ ಪರಿಹಾರವಲ್ಲ ಎಂದು ಗೊತ್ತು. ಯಾವುದೇ ಆಪತ್ಕಾಲದಲ್ಲಿ ನೀವು ನಮ್ಮಲ್ಲಿಗೆ ಬಂದರೂ ನಿಮಗೆ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದಾಗ ನಾನು ನಿಧಾನವಾಗಿ ಕರಗತೊಡಗಿದೆ. ನಾನು ಆಸ್ಪತ್ರೆಯವರಿಂದ ೩೦ ಸಾವಿರ ಪರಿಹಾರ ನೀಡಬೇಕೆಂದು ಬಳಕೆದಾರರ ಕೋರ್ಟಿನಲ್ಲಿ ಕೇಸು ಹಾಕಿದರೆ ನನಗೆ ಜಯ ಸಿಗುವುದು ಅಸಂಭವ. ಯಾಕೆಂದರೆ ಡಾಕ್ಟರು ಕೊಟ್ಟ ಕೇಸ್ಶೀಟಿನಲ್ಲಿ ಸುಟ್ಟ ಗಾಯದ ಸುದ್ದಿಯೇ ಇಲ್ಲ. ನನ್ನ ವಾದಕ್ಕೆ ಸಮರ್ಥನೆ ನೀಡಲು ನಾನು ಏನೇನೋ ಕಸರತ್ತು ಮಾಡಬೇಕಾದೀತು ಎಂದು ಯೋಚಿಸಿದೆ. ಡಾ. ರಾಧಾಕೃಷ್ಣ ಅವರೇನಾದರೂ ಎದುರಿಗಿದ್ದರೆ ನನಗೆ ವಾದಿಸುವ ಮನಸ್ಸು ಇರುತ್ತಿತ್ತೋ ಏನೋ? ನಿರ್ದೇಶಕರಾದ ಡಾ. ಸೊರಕೆಯವರಂತಹ ಸರಳ, ಸಜ್ಜನ ವ್ಯಕ್ತಿಯೊಂದಿಗೆ ನನ್ನ ರೋಷ ವ್ಯಕ್ತಪಡಿಸುವುದು ತರವಲ್ಲ ಎಂಬ ಭಾವನೆಯುಂಟಾಗಿ ಸದ್ದಿಲ್ಲದೆ ಅವರ ಛೇಂಬರಿನಿಂದ ಹೊರಬಂದೆ. ಶಸ್ತ್ರಚಿಕಿತ್ಸೆಗಾಗಿ ನೀಡಿದ ಬಿಲ್ಲನ್ನು ಮರಳಿ ಪಡೆದು ಮನೆಗೆ ಹೋದೆ. ಹಾಗೆ ಬಂದವಳಿಗೆ ಆಮೇಲೆ ಏನೇನೋ ಕಾಯಿಲೆಗಳು ಬಂದರೂ ಎಸ್.ಸಿ.ಎಸ್. ಆಸ್ಪತ್ರೆಯತ್ತ ಮುಖ ಮಾಡಿಲ್ಲ. ಡಾ. ಸೊರಕೆಯವರ ಮಾತಿಗೆ ಶರಣಾದುದು ನನ್ನ ದೌರ್ಬಲ್ಯವೆಂದೂ ಸೋಲೆಂದೂ ಆಗ ಭಾವಿಸಿದ್ದೆ. ಆದರೆ ಮತ್ತೆ ಕ್ರಮೇಣ ನಾನು ಕೋರ್ಟಿಗಾಗಿ ತಲೆಬಿಸಿ ಮಾಡಿಕೊಂಡು ಇದ್ದ ಸಮಯವನ್ನು ಶಾಂತಿಯನ್ನು ಕಳಕೊಳ್ಳುವುದಕ್ಕಿಂತ ಸೋತು ಶರಣಾದುದೇ ಉತ್ತಮವೆಂದು ಮನಗಂಡೆ.

ಒಂದು ವೇಳೆ ಡಾ. ಸಬಿತಾ ನನ್ನನ್ನು ಎಚ್ಚರಿಸದಿದ್ದರೆ ಮಾತ್ರೆಗಳನ್ನು ನುಂಗುತ್ತಾ ದಿನ ದೂಡುತ್ತಿದ್ದ ನನ್ನ ಕಾಲು ಒಳಗೇ ಕೊಳೆತು ಕಾಲು ಕತ್ತರಿಸುವ ಪ್ರಸಂಗವುಂಟಾಗುತ್ತಿತ್ತೋ ಏನೋ ಎಂಬ ಭಯ ನನ್ನನ್ನು ಬೆಚ್ಚಿ ಬೀಳಿಸುತ್ತಿತ್ತು. ನಮ್ಮ ದೇಹವೊಂದು ಗಡಿಯಾರದಂತೆ ಎನ್ನುತ್ತಾರೆ. ಒಮ್ಮೆ ಅದು ರಿಪೇರಿಗೊಳಪಟ್ಟರೆ ಮತ್ತೆ ಅದು ಆಗಾಗ ತಕರಾರು ಮಾಡುತ್ತಲೇ ಇರುತ್ತದೆ. ಕಾಯಿಲೆಗಳು ಕುದುರೆ ಮೇಲೆ ಕೂತು ಬರುತ್ತವೆ. ಕಾಲ್ನಡಿಗೆಯಲ್ಲಿ ಹೋಗುತ್ತವೆ ಎಂಬ ಗಾದೆಮಾತಿದೆ. ಆಧುನಿಕ ಕಾಲದಲ್ಲಿ ಆಸ್ಪತ್ರೆಗಳು ವ್ಯಾಪಾರ ಕೇಂದ್ರಗಳಾದ ಮೇಲೆ ಮನುಷ್ಯರು ಸಾಯುವುದು ರೋಗದಿಂದಲ್ಲ. ಔಷಧಿಗಳಿಂದ ಎಂಬ ಮಾತು ಸತ್ಯವೆನಿಸುತ್ತದೆ. ಹಾಗಿದೆ ನಮ್ಮ ಹೈಟೆಕ್ ಆಸ್ಪತ್ರೆಗಳ ಶುಶ್ರೂಷಾ ಕ್ರಮ.

ಡಾಕ್ಟರುಗಳಿಂದಾದ ಪ್ರಮಾದದ ಇನ್ನೊಂದು ದಾರುಣ ಘಟನೆಯನ್ನು ಹೇಳಿದರೆ ಆಸ್ಪತ್ರೆಗಳ ಬಗ್ಗೆಯೇ ನಮಗೆ ನಡುಕ ಹುಟ್ಟಬಹುದು. ಬಿಕರ್ನಕಟ್ಟೆಯಲ್ಲಿ ನಾನಿದ್ದಾಗ ನಮ್ಮ ನೆರೆಮನೆಯಲ್ಲಿದ್ದ ಒಂದು ಕುಟುಂಬದ ಕತೆಯಿದು. ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಹುಡುಗ ಜನ್ನ (ಜನಾರ್ದನ) ಪಾಲಿಟೆಕ್ನಿಕ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ .ಟಿ..ನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಅವನ ತಂಗಿ ಬೇಬಿ (ಸರೋಜಿನಿ) ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಕ್ಲಾರ್ಕ್ ಆಗಿ ಕೆಲಸದಲ್ಲಿದ್ದರು. ತಂದೆ ಕಬ್ಬಿಣದ ಕೆಲಸ ಮಾಡುತ್ತಿದ್ದರು. ಅವರ ಮಿತ ಆದಾಯದಲ್ಲಿ ಮಕ್ಕಳಿಬ್ಬರೂ ಜಾಣರಾದ ಕಾರಣ ಅಷ್ಟು ವಿದ್ಯೆ ನೀಡಿದ್ದರು. ಜನ್ನ ಬೆಂಗಳೂರು, ಮಂಗಳೂರು, ಹೊಳೆನರಸೀಪುರ, ಮಡಿಕೇರಿ ಮುಂತಾದ ಕಡೆಗಳಲ್ಲಿ .ಟಿ..ಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಮಡಿಕೇರಿಯಲ್ಲಿದ್ದಾಗ ಅವನಿಗೆ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ. ಡಾಕ್ಟರರ ತಪಾಸಣೆಯಲ್ಲಿ ಅವನ ಮೇದೋಜೀರಕದಲ್ಲಿ ಕಲ್ಲುಗಳಾಗಿವೆ. ಅವುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲು ಸಾಧ್ಯವಿಲ್ಲವಾದುದರಿಂದ ಭಾಗಕ್ಕೆ ಅನಸ್ತೇಶಿಯಾ ಕೊಟ್ಟು ಶಮನ ಮಾಡಬಹುದೆಂದು ತಿಳಿಯಿತು. ಚಿಕಿತ್ಸೆಯಿಂದ ಅವನ ಹೊಟ್ಟೆನೋವು ಶಮನಗೊಂಡಿತು. ಮೂರು ವರ್ಷದ ಬಳಿಕ ಮತ್ತೆ ನೋವು ಕಾಣಿಸಿಕೊಂಡಾಗ ಮಂಗಳೂರಿನ ಕದ್ರಿ ನರ್ಸಿಂಗ್ ಹೋಮ್ಗೆ ೧೯೮೫ರ ನವೆಂಬರ್ ಒಂದರಂದು ದಾಖಲಾದ. ಮರುದಿನದ ಸೂರ್ಯ ಅವನ ಪಾಲಿಗೆ ಕರಾಳ ಕತ್ತಲೆಯನ್ನೇ ಶಾಪವಾಗಿ ಕರುಣಿಸುತ್ತಾನೆಂದು ಯಾರೂ ಊಹಿಸಿರಲಿಲ್ಲ. ಡಾ. ಠಾಕೂರ್ ಎಂಬವರು ಅವನಿಗೆ ಚಿಕಿತ್ಸೆ ನೀಡುವಾಗಲೇ ಜನ್ನನ ಆರನೆಯ ಇಂದ್ರಿಯ ಜಾಗೃತಗೊಂಡು ``ಡಾಕ್ಟರ್ ಮದ್ದು ಮೇದೋಜೀರಕಕ್ಕೆ ಹೋಗುತ್ತಿಲ್ಲ. ಬೇರೆಲ್ಲಿಗೋ ಹೋಗುವ ಅನುಭವವಾಗುತ್ತಿದೆ. ನನ್ನ ಕಾಲಿಗೆ ಹರಿದಂತೆ ಭಾಸವಾಗುತ್ತದೆ. ದಯವಿಟ್ಟು ನಿಲ್ಲಿಸಿ'' ಎಂದು ಗೋಗರೆದ. ರೋಗಿಯ ಮಾತನ್ನು ಕೇಳುವಷ್ಟು ದಡ್ಡರಲ್ಲವಲ್ಲಾ ಡಾಕ್ಟರುಗಳು. ರೋಗ ಎಲ್ಲಿದೆ ಎಂದು ರೋಗಿಯನ್ನು ಕೇಳಿ ವೈದ್ಯನನ್ನಲ್ಲ ಎಂಬ ಮಾತಿಗೆ ವಿರುದ್ಧವಾಗಿ ನಡೆದ ಬುದ್ಧಿವಂತ ವೈದ್ಯರು ಮಾಡಿದ ಪ್ರಮಾದದಿಂದಾಗಿ ಜನ್ನ ಅಂಗವಿಕಲನಾಗುವಂತಾಯಿತು. ಸೊಂಟದ ಕೆಳಗಿನ ಭಾಗ ಪೂರ್ಣ ನಿಷ್ಕ್ರಿಯಗೊಂಡಿತು. ಅದು ಡಾಕ್ಟರರಿಗೆ ಗೊತ್ತಾದದ್ದು ಮರುದಿನ. ಅಂದಿನಿಂದ ಅವನ ಎಲ್ಲಾ ಕ್ರಿಯೆಗಳು ಮಲಗಿದಲ್ಲೇ. ಸೊಂಟದ ಮೇಲಿನ ಅಂಗಗಳು ಆರೋಗ್ಯಪೂರ್ಣವಾಗಿದ್ದವು. ಮರುದಿನದಿಂದ ವೈದ್ಯರ ದಂಡು ಬಂದು ಅವನನ್ನು ಬೇರೆ ಬೇರೆ ಪರೀಕ್ಷೆಗೊಳಪಡಿಸಿದರು. ಡಾಕ್ಟರುಗಳು ಮಾನಸಿಕ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಆದರೆ ಜನ್ನನಿಗೆ ಖಾತ್ರಿಯಾಗಿತ್ತು. ತಾನಿನ್ನು ಜೀವಂತ ಶವವೆಂದು. ಆದರೂ ಅವನ ಮಾನಸಿಕ ಇಚ್ಛಾಶಕ್ತಿ ಗಟ್ಟಿಯಾಗಿತ್ತು. ಪ್ರತಿಭಾವಂತನೂ ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡವನೂ, ಮಾನವಪ್ರೀತಿ ಜೀವನೋತ್ಸಾಹವನ್ನು ಮೈಮನಗಳಲ್ಲಿ ತುಂಬಿಸಿಕೊಂಡ ಕನಸು ಕಂಗಳ ೩೩ರ ತರುಣ ತನಗಾದ ಆಘಾತವನ್ನು ಸಹಿಸಿಕೊಳ್ಳಲು ಅಭ್ಯಾಸ ಮಾಡಿದ. ಅವನ ಆಸಕ್ತಿಯ ವಿಷಯಗಳ ಪುಸ್ತಕಗಳನ್ನು ತರಿಸಿ ಓದತೊಡಗಿದ. ಮಲಗಿದಲ್ಲಿಂದಲೇ ರೇಡಿಯೋ ರಿಪೇರಿಯಂತಹ ಕೆಲಸಗಳನ್ನು ಮಾಡತೊಡಗಿದ. ಯಾರ ಮೇಲೂ ಅಸಹನೆಯನ್ನು ತೋರ್ಪಡಿಸದೆ ವಿಧಿಯ ಕ್ರೌರ್ಯವನ್ನು ತನ್ನದೇ ರೀತಿಯಲ್ಲಿ ಎದುರಿಸಿದ. ಕಷ್ಟಗಳು ಚಾಕುವಿನಂತೆ ಎನ್ನುತ್ತಾರೆ. ಅದರ ಹಿಡಿ ಹಿಡಿದರೆ ಮಾತ್ರ ನಮ್ಮ ಉಪಯೋಗಕ್ಕೆ ಆಗುತ್ತದೆ. ಕೊನೆಯನ್ನು ಹಿಡಿದರೆ ಕೈ ಕತ್ತರಿಸಲ್ಪಡುತ್ತದೆ. ಜನ್ನ ನೋವಿನ ಹಿಡಿಯನ್ನು ಹಿಡಿದು ತನ್ನನ್ನು ಸಲಹುವ ತಂದೆ ತಾಯಿ ಮತ್ತು ತಂಗಿಯರ ಬಾಳು ಚಿಂದಿಯಾಗದಂತೆ ಎಚ್ಚರ ವಹಿಸಿದ. ಸಾಣೆಗೆ ಸಿಗದ ವಜ್ರ ವಜ್ರವಲ್ಲ. ಹಾಗೆಯೇ ಕಷ್ಟಕ್ಕೆ ಸಿಗದ ಮನುಷ್ಯ ಮನುಷ್ಯನಲ್ಲ. ಸಮಯದಲ್ಲಿ ಅವನನ್ನು ಮಾತಾಡಿಸಿದಾಗ ಹೇಳಿದ ಮಾತು ಈಗಲೂ ನೆನಪಿದೆ. ``ರೋಹಿಣಿಯಕ್ಕಾ, ನಮ್ಮ ಬುದ್ಧಿ ತೀಕ್ಷ್ಣಗೊಳ್ಳುವುದು ಇಂತಹ ಸಂದರ್ಭದಲ್ಲಿ. ನಮ್ಮ ಯೋಗ್ಯತೆಯನ್ನು ಸಾಬೀತುಪಡಿಸುವುದೂ ಇಂತಹ ಘಟನೆಗಳು. ಏನೇ ನೋವು ಬರಲಿ, ಅದನ್ನು ಸಹಿಸುವ ಶಕ್ತಿ ನನಗಿರಲಿ ಎಂದು ಮನಸ್ಸಿಗೆ ಪ್ರತಿಕ್ಷಣ ಧೈರ್ಯ ತುಂಬುತ್ತಿದ್ದೇನೆ'' ಎಂದಾಗ ಇಂತಹ ಹುಡುಗನಿಗೆ ಹೊಟ್ಟೆನೋವು ಹೇಗೆ ಶಾಪವಾಗಿ ಕಾಡಿತು ಎಂದು ನಾನು ಖಿನ್ನಳಾದೆ.


ವೈದ್ಯಕೀಯ ರೋಗನಿದಾನದ ಪರಿಭಾಷೆಯಲ್ಲಿ ಮೇದೋಜೀರಕದಲ್ಲಿ ಕಲ್ಲು ಆಗುವುದು ಕುಡಿತದ ಅಭ್ಯಾಸವಿದ್ದವರಿಗೆ ಮಾತ್ರವಂತೆ. ವಿಚಿತ್ರ ನೋಡಿ, ಕುಡಿತದ ವಾಸನೆಯೂ ಗೊತ್ತಿಲ್ಲದ, ಬೀಡಿ ಸಿಗರೇಟುಗಳನ್ನೂ ಮೂಸದ ಜನ್ನನಿಗೆ ಹೇಗೆ ಇಂತಹ ಕಾಯಿಲೆ ಬಂತು? ಇದಕ್ಕೆ ಉತ್ತರವಿಲ್ಲ. ಕಾಯಿಲೆ ಬಂದಿದೆ ಅದರಿಂದ ಮೇಲೆದ್ದು ಬರುವುದಷ್ಟೇ ಈಗ ಅವನ ಪ್ರಯತ್ನ. ತನಗಾದ ಅನ್ಯಾಯದ ವಿರುದ್ಧ ಕೋರ್ಟಿಗೆ ಹೋಗುವ ಪ್ರಯತ್ನವನ್ನು  ಅವನ ಗೆಳೆಯರು ಮಾಡಿದರು. ಆಸ್ಪತ್ರೆಯ ಡಾಕ್ಟರರು ಕೇಸ್ ಶೀಟಿನಲ್ಲಿ ಚಿಕಿತ್ಸೆ ನೀಡುವಾಗ ರೋಗಿಗೆ ಬ್ಲಡ್ ಪ್ರೆಶರ್ ಏರಿತ್ತು ಎಂದು ದಾಖಲಿಸಿಬಿಟ್ಟಿದ್ದರು. ಅದನ್ನು ಪರೀಕ್ಷಿಸದ್ದು ಡಾಕ್ಟರರ ಅಪರಾಧವಲ್ಲವೇ? ನಿಜವಾಗಿ ಅವನಿಗೆ ಪ್ರೆಶರ್ ಇರಲೇ ಇಲ್ಲ. ತಮ್ಮ ರಕ್ಷಣೆಗಾಗಿ ವೈದ್ಯರು ಪ್ರೆಶರನ್ನು ಕೇಸ್ಶೀಟಿನಲ್ಲಿ ಸೇರಿಸಿ ಫಿಕ್ಸ್ ಮಾಡಿಬಿಟ್ಟಿದ್ದರು. ಸುಮಾರು ಒಂದೂವರೆ ವರ್ಷ ಅವನನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡು ಉಚಿತ ಚಿಕಿತ್ಸೆ ನೀಡಿದರು. ವೈದ್ಯರಿಗೆ ತಮ್ಮಿಂದ ತಪ್ಪಾಗಿದೆ ಎಂಬ ಅಳುಕು ಇತ್ತು. ಆದುದರಿಂದ ಅವನಿಗೆ ಏನೇನು ಚಿಕಿತ್ಸೆ ನೀಡಲು ಆಗ ಸಾಧ್ಯವಿತ್ತೋ ಅದನ್ನೆಲ್ಲಾ ಕೊಡಿಸಿದರು. ಅವನ ದೈಹಿಕ ಸ್ಥಿತಿಯಲ್ಲಿ ಏನೂ ವ್ಯತ್ಯಾಸವಾಗಲಿಲ್ಲ. ಮನಸ್ಸು ಮಾತ್ರ ಗಟ್ಟಿಕೊಂಡು ನ್ಯೂನತೆಯನ್ನು ಒಪ್ಪಿಕೊಂಡು ಬದುಕಲು ಸಿದ್ಧವಾಯಿತು.

ಸಮಯದಲ್ಲಿ ನಾನು ಮುಂಗಾರು ಪತ್ರಿಕೆಯ ಸಂಪಾದಕರಿಗೆ ಒಂದು ಪತ್ರ ಬರೆದು ವಿಷಯ ತಿಳಿಸಿದೆ. ಆಗ ಅಲ್ಲಿ ಉಪಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಚಿದಂಬರ ಬೈಕಂಪಾಡಿಯವರು ಆಸ್ಪತ್ರೆಗೆ ಬಂದು ಜನ್ನನನ್ನು ಮಾತಾಡಿಸಿ ಒಂದು ಲೇಖನ ಬರೆದರು. ಇದನ್ನು ಓದಿದ ಅವನ ಮಿತ್ರರು, ಹಿತೈಷಿಗಳು ಒಂದು ಸಣ್ಣ ಮೊತ್ತವನ್ನು ಸಂಗ್ರಹಿಸಿ ನೀಡಿದರು. ಯಾಕೆಂದರೆ ಈಗ ಮನೆಯ ಆರ್ಥಿಕ ಪರಿಸ್ಥಿತಿಯೂ ಕುಸಿಯಿತು. ಜನ್ನನ ತಂದೆ ಅವನಿಗೆ ಹೀಗಾದ ಎರಡು ವರ್ಷಗಳಲ್ಲಿ ಅಂದರೆ ೧೯೮೭ರ ಅಕ್ಟೋಬರ್ನಲ್ಲಿ ನಿಧನಗೊಂಡರು. ತಂಗಿ ಬೇಬಿ ಮದುವೆಯಾಗಿ ಕಾಂಞಂಗಾಡಿನಲ್ಲಿ ನೆಲೆಯಾದವಳು ಮಗುವಿನ ಸಮೇತ ಈಗ ಇಲ್ಲೇ ಇರಬೇಕಾಯಿತು. ದುಡಿಮೆ ಬಿಟ್ಟು ಯಾವ ಆಸ್ತಿಯ ಮೂಲವೂ ಇಲ್ಲದ ಜನ್ನನ ಕುಟುಂಬಕ್ಕೆ ಬೇಬಿಯ ಆದಾಯವಿಲ್ಲದಿರುತ್ತಿದ್ದರೆ ಬದುಕುವುದೇ ಸಾಧ್ಯವಿರಲಿಲ್ಲ. ಇಂತಹ ಸ್ಥಿತಿಯಲ್ಲಿದ್ದರೂ ಜನ್ನ ತನ್ನನ್ನು ಕಾಣಲು ಬರುವವರೊಂದಿಗೆ ನಗುತ್ತಾ ಮಾತಾಡಿ ನಗಿಸುತ್ತಿದ್ದ. ತೀವ್ರವಾದ ದುಃಖತಪ್ತನಿಗೆ ದುಃಖವನ್ನು ಸ್ಮರಿಸಿದರೇ ನಗು ಬರುತ್ತದಂತೆ. ಹಾಗೆ ಇವನಿಗೆ ದುಃಖವೇ ಕಡಲು, ದುಃಖವೇ ಹಡಗು, ದುಃಖವೇ ಹಡಗು ನಡೆಸುವ ಹಾಡು ಎಂಬ ಕವಿಮಾತಿನಂತಾಯಿತು.

೧೯೭೩ರಲ್ಲಿ ಸರಕಾರಿ ನೌಕರಿಗೆ ಸೇರಿದ ಜನ್ನನಿಗೆ ಸೇವಾ ಅವಧಿ ಸುಮಾರು ೧೩ ವರ್ಷ ಮಾತ್ರವಾದುದರಿಂದ ಪೆನ್ಶನ್ ಕೂಡಾ ಲಭಿಸುವುದು ಕಷ್ಟವಾಯಿತು. ಕನಿಷ್ಟ ೧೫ ವರ್ಷ ಸೇವಾ ಅವಧಿಯಿಲ್ಲದೆ ಪೆನ್ಶನ್ ಸಿಗಲಾರದು ಎಂಬ ಉತ್ತರ ಸರಕಾರದಿಂದ ಬಂದ ಮೇಲೆ ಇದರ ಬೆನ್ನು ಹತ್ತಿ  ಏನಾದರೂ ಕೆಲಸ ಮಾಡಬೇಕೆಂದು ನಾನೂ ಬೇಬಿಯೂ ಪ್ರಯತ್ನಿಸಿದೆವು. ನಾನು ಪ್ರಧಾನಮಂತ್ರಿಗೆ, ಮುಖ್ಯಮಂತ್ರಿಗೆ, ಶಿಕ್ಷಣಮಂತ್ರಿಗೆ ಪತ್ರ ಬರೆದೆ. ಹೀಗೆ ಯಾವ್ಯಾವ ಬಾಗಿಲನ್ನು ಬಡಿದರೆ ನಮ್ಮ ಕೂಗು ಕೇಳಬಹುದು ಎಂದು ಕಾದು ನೋಡಿದೆವು. ಆಗಿನ ಪ್ರಧಾನ ಮಂತ್ರಿ ರಾಜೀವ ಗಾಂಧಿಯಿಂದ ಒಂದು ಸಾಂತ್ವನದ ಪತ್ರ ಬಂತು. ರಾಜ್ಯ ಸರಕಾರಕ್ಕೆ ನಿಮ್ಮ ಎಲ್ಲ ವಿವರಗಳನ್ನ ಕಳಿಸಿ ಎಂದು ಸಲಹೆ ನೀಡಿದ್ದರು. ಅವರು ಬಿಟ್ಟರೆ ನಮ್ಮ ರಾಜ್ಯದ ಬೇರೆ ಯಾವ ಮಂತ್ರಿಗಳೂ ನಿಮ್ಮ ಪತ್ರ ಬಂದಿದೆ ಎಂದು ತಿಳಿಸುವ ಸೌಜನ್ಯವನ್ನು ತೋರಿಸಿಲ್ಲ.

ನಾನು ಮತ್ತು ಬೇಬಿ ಬೆಂಗಳೂರಿಗೆ ಹೋಗಿ ಅವರ ಇಲಾಖೆಯ ಅಧಿಕಾರಿಯನ್ನು ಕಂಡು ಮನವಿ ಕೊಟ್ಟು ಬಂದೆವು. ಅಧಿಕಾರಿ ನಮ್ಮ ನೋವನ್ನು ಕಿವಿಗೊಟ್ಟು ಕೇಳಿದ್ದು ಮಾತ್ರವಲ್ಲದೆ ಸರಕಾರದ ನಿಯಮವನ್ನು ಉಲ್ಲಂಘಿಸಿ ಅವನಿಗೆ ಪೆನ್ಶನ್ ಜಾರಿಗೊಳಿಸಿದರು. ಸರಕಾರದ ಕಾನೂನಿನ ಕಲ್ಲು ಬಂಡೆಯನ್ನು ಸರಿಸಿ ಅದರೊಳಗಿಂದ ಜೀವಜಲದ ಒರತೆಯನ್ನು ಹರಿಸಿದ ಅಧಿಕಾರಿಯ ಕಾರುಣ್ಯಕ್ಕೆ ಈಗಲೂ ಶಿರಬಾಗುತ್ತೇನೆ. ಪೆನ್ಶನ್ ಬಂದುದು ಜನ್ನನಿಗೆ ಪುನರ್ಜನ್ಮ ಬಂದಷ್ಟೇ ಖುಷಿಯಾಯಿತು. ಸೊಂಟದಿಂದ ಕೆಳಗಿನ ಭಾಗ ಸ್ಪರ್ಶಜ್ಞಾನವಿಲ್ಲದೆ ಮಲ ಮೂತ್ರಾದಿಗಳಿಗೆ ಯಂತ್ರವನ್ನು ಬಳಸಬೇಕಾಗುತ್ತಿತ್ತು. ಒಮ್ಮೆ ರಾತ್ರಿ ಮನೆಯಲ್ಲಿ ಮಲಗಿದಾಗ ಇಲಿ ಅವನ ಕಾಲಿಗೆ ಕಚ್ಚಿ ಮಾಂಸವನ್ನೇ ತಿಂದಾಗಲೂ ಅವನಿಗೆ ಗೊತ್ತಾಗಿರಲಿಲ್ಲ. ಇಂತಹ ದಯನೀಯ ಸ್ಥಿತಿಯಲ್ಲೂ ಅವನು ಧೈರ್ಯಗುಂದಲಿಲ್ಲ. ಆದರೂ ಇಳಿವಯಸ್ಸಿನಲ್ಲೂ ತಾಯಿ ತನಗಾಗಿ ಪಡುತ್ತಿರುವ ಕಷ್ಟ, ತಂಗಿ ಒದ್ದಾಡುವ ರೀತಿಯನ್ನು ಕಂಡು ತಾನು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು? ಎಲ್ಲರ ನೋವಿಗೆ ಯಾಕೆ ಪರಿಹಾರ ಕಂಡುಕೊಳ್ಳಬಾರದು ಎಂದು ಯೋಚಿಸಿ ಪ್ರಯತ್ನಪಟ್ಟದ್ದೂ ಉಂಟು. ಆದರೆ ತಾಯಿಯ ಕಣ್ಗಾವಲು ಮತ್ತು ಸಮಯಪ್ರಜ್ಞೆಯಿಂದಾಗಿ ಜನ್ನನ ಯೋಚನೆ ಕಾರ್ಯಗತವಾಗಲಿಲ್ಲ.


ವೈದ್ಯರಿಂದ ಸಾಧ್ಯವಾಗದ ರೋಗಗಳನ್ನು ದೈವಬಲದಿಂದ ಗುಣಪಡಿಸುತ್ತೇವೆಂದು ಪ್ರಚಾರ ಮಾಡುವ ಒಂದು ಗುಂಪು ಜನ್ನನನ್ನು ಭೇಟಿಯಾಯಿತು. ಮನೆಯಲ್ಲಿ ಬಂದು ಅವನ ಮುಂದೆ ಪ್ರಾರ್ಥನೆ ಮಾಡತೊಡಗಿದ್ದಲ್ಲದೆ ಅವನಿಗಾಗಿ ಬೇರೆ ಬೇರೆ ಪ್ರಾರ್ಥನಾಕೂಟಗಳಲ್ಲೂ ದೇವರಿಗೆ ಮನವಿ ಸಲ್ಲಿಸಲಾಯಿತು. ಅವರನ್ನು ಬಾಗಿಲಾಚೆಯಿಂದಲೇ ಕಳಿಸುವ ಮನಸ್ಸು ಜನನ್ನಿಗಿತ್ತು. ಆದರೆ ಅವನ ತಾಯಿಯ ಮೆದುಳನ್ನು ಕೂಟದವರು ಚೆನ್ನಾಗಿ ತೊಳೆದು ಅವರಿಗೆ ಶರಣಾಗುವಂತೆ ಒಪ್ಪಿಸಿದ್ದರು. ಕೂಟದಲ್ಲಿ ತನ್ನ ಆತ್ಮೀಯ ಬಂಧುಗಳೂ ಇದ್ದುದರಿಂದ ಜನ್ನ ಉಸಿರೆತ್ತಲಿಲ್ಲ. ಹೀಗೆ ಕೆಲವು ದಿನಗಳ ಕಾಲ ಪ್ರಾರ್ಥನಾ ಕೂಟ ಜರಗಿದ ಮೇಲೆ ಒಂದು ದಿನ ಬೆಂದೂರು ಚರ್ಚಿನಲ್ಲಿ ಜನ್ನನಿಗೆ ನಡೆಯಲು ಸಾಧ್ಯವಾಯಿತಂತೆ ಎಂಬ ಪವಾಡದ ಸುದ್ದಿ ಪ್ರಚಾರವಾಯಿತು. ಅದು ನನ್ನ ಕಿವಿಗೂ ಬಿದ್ದಾಗ ದೇವರ ದಯನೀಯ ಸ್ಥಿತಿಯ ಬಗ್ಗೆ ನಾನೂ ನೊಂದುಕೊಂಡೆ. ಮನುಷ್ಯ ದೇವರು ಎಂಬ ಅಸ್ತ್ರವನ್ನು ಬಳಸಿ ಹೇಗೆ ತಮ್ಮ ಸ್ವಾರ್ಥವನ್ನು ಪೂರೈಸುತ್ತಾರೆ ಎಂಬುದು ಈಗಲೂ ನನಗೆ ಸೋಜಿಗದ ಸಂಗತಿ. ನಾನು ಜನ್ನನಿಗೆ ವಿಷಯ ತಿಳಿಸಿದಾಗ ಜನ್ನ ದೊಡ್ಡ ಸ್ವರದಲ್ಲಿ ನಗಾಡಿದ. ಹೀಗೆ ಆದೀತು ಎಂದು ನಾನು ಮೊದಲೇ ಊಹಿಸಿದ್ದೆ ಎಂದ. ಸೊಂಟದ ಕೆಳಗಿನ ಭಾಗ ಸ್ಪರ್ಶಜ್ಞಾನವಿಲ್ಲದೆ ನಿಷ್ಟ್ರಿಯಗೊಂಡರೂ ಅವನ ಮಾನಸಿಕ ಆರೋಗ್ಯ ಉತ್ತಮವಾಗಿತ್ತು. ತನ್ನನ್ನು ಕಾಣಲು ಬಂದವರೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆಯುವುದು ಅವನಿಗೆ ಸಂತೋಷವನ್ನು ನೀಡುತ್ತಿತ್ತು. ತನ್ನ ಕಾಯಿಲೆಯ ಬಗ್ಗೆ ಓದಿಕೊಂಡು ನುರಿತ ವೈದ್ಯನಂತೆ ಸಂವಾದ ಮಾಡುತ್ತಿದ್ದ. ಹೀಗೆ ಅವನ ಜೀವನದ ಫಲಪ್ರದವಾದ ಆಯಸ್ಸು ಮಂಚದ ಮೇಲೆ ನಿಶ್ಚಲವಾಗಿ ಕಳೆಯಿತು. ೧೯೯೮ರಲ್ಲಿ ಒಂದು ಸಣ್ಣ ಜ್ವರವು ಅವನನ್ನು ಧೃತಿಗೆಡಿಸಿತು. ಅದೇ ಅವನ ಎಲ್ಲ ನೋವುಗಳಿಗೆ ಮುಕ್ತಿ ನೀಡಿತು. ಹೀಗೆ ಡಾಕ್ಟರುಗಳ ಪ್ರಮಾದದಿಂದ ಉಂಟಾದ ನೋವು ಹಿಂಸೆಗಳು ಕುಟುಂಬದ ಚೈತನ್ಯವನ್ನೇ ಕಸಿಯಿತು. ಈಗಲೂ ಅವನ ತಾಯಿ ೯೫ರ ವೃದ್ಧೆ ತನ್ನ ಮಗನನ್ನು ವೈದ್ಯರು ಕೊಂದುಬಿಟ್ಟರು ಎಂದು ನೆನಪಾದಾಗಲೆಲ್ಲಾ ಹೇಳಿ ದುಃಖಿಸುತ್ತಾರೆ. ಮಕ್ಕಳ ಮರಣದ ದುಃಖಕ್ಕೆ ಸಮನಾದ ದುಃಖ ಬೇರೆ ಇರಲಾರದು. ಇದು ಸತ್ಯವೂ ಹೌದು.

(ಮುಂದುವರಿಯಲಿದೆ)

4 comments:

 1. ರೋಹಿಣಿಯವರೇ ,

  ನಿಮ್ಮ ಧಾರಾವಾಹಿ ` ದೀಪದಡಿಯ ಕತ್ತಲೆ ' ೩೬ನೆಯ ಅಧ್ಯಾಯವನ್ನು ಓದಿದೆ/ಕೇಳಿದೆ -
  - ನಿಮ್ಮ ಬರೆವಣಿಗೆಯ ಓಟ ಚೆನ್ನಾಗಿದೆ, ಖುಷಿ ಆಯಿತು .
  - ನಿಮ್ಮ ಬರೆವಣಿಗೆಯನ್ನು ನೀವೇ ಓದಿರುವುದು ಸೂಕ್ತವಾಗಿದೆ .
  - ಆತ್ಮಕತೆಯನ್ನು ಪ್ರಸ್ತುತ ಪಡಿಸಿದ ರೀತಿ ಉತ್ತಮವಾಗಿದೆ.
  - ವೈದ್ಯರು ಮಾಡಿದ ಅನಾಹುತಗಳನ್ನು ಮನಮುಟ್ಟುವಂತೆ ಬರೆದಿದ್ದೀರಿ.

  ಅತ್ರಿ ಬುಕ್ ಸೆಂಟರ್ - ಬ್ಲಾಗನ್ನು ನನ್ನ ಕುಟುಂಬದವರಿಗೂ , ನನ್ನ ಮಿತ್ರರಿಗೂ ಪರಿಚಯಿಸಿದ್ದೇನೆ.

  ReplyDelete
 2. ಇಂತಹ ಅದೆಷ್ಟೋ ಘಟನೆಗಳ "ಫಲಾನುಭವಿಗಳು" ಅಲ್ಲಲ್ಲಿ ಇದ್ದಾರೆ. ಸಾಕ್ಷಿಗಳ ಕೊರತೆಯಿಂದಲೋ, ಮಾಹಿತಿಯ ಅಭಾವದಿಂದ, ಅಧೈರ್ಯದ ಕಾರಣ ಅಥವಾ ಆರ್ಥಿಕ ಪರಿಸ್ಥಿತಿಯಿಂದಾಗಿ ಬಹುತೇಕ ಸಂತ್ರಸ್ತರು ನ್ಯಾಯಾಲಯ ಅಥವಾ ಗ್ರಾಹಕರ/ ಬಳಕೆದಾರರ ವೇದಿಕೆಯ ಬಾಗಿಲು ತಟ್ಟಲು ಹೋಗುವುದೇ ಇಲ್ಲ. ಇನ್ನು ದೇವರ ದಯೆ.. ಕೆಲವರಷ್ಟೇ ಅದಕ್ಕೆ ಅರ್ಹರು. ಉತ್ತಮ ಬರಹ.

  ReplyDelete
 3. Rohini Teacher's auto-biographical notes, show that there is lot beyond the copy book styles and in people who do not profess to be writers or intellectuals. The writings are a valuable record of a time and events written with a close observation and backed by solid experience, anubhava and a forward looking, balanced outlook

  ReplyDelete
 4. ಮಾನವೀಯತೆಯ ಗೈರುಹಾಜರಿಯ ಕಥನ--ಮತ್ತು ಸಹಜ ಮಾನವೀಯ ಕಳಕಳಿಯ ಬರಹ.

  ReplyDelete