24 May 2016

ಪಡಿ ನನ್ನ ಕೈ ಹಿಡಿದೆಬ್ಬಿಸಿದ್ದು

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತು

ಜೀವನ ಎಂಬ ಪದಕ್ಕೆ ನೀರು ಎಂಬ ಅರ್ಥವೂ ಇದೆ. ಸದಾ ಚಲನಶೀಲವಾಗಿರುವುದೇ ನೀರಿನ ಸಹಜ ಗುಣ. ಸ್ಥಗಿತಗೊಂಡ ನೀರು ಕ್ರಮೇಣ ರಾಡಿಯಾಗುತ್ತದೆ. ಯಾರೂ ನೀರು ಸೇದದಿದ್ದರೆ ಬಾವಿ ನೀರು ಕೂಡಾ ಉಪಯುಕ್ತವಾಗದು. ಹಾಗೆಯೇ ನನ್ನ ೨೫ ವರ್ಷಗಳ ಶಿಕ್ಷಕ ವೃತ್ತಿಯ ಸೇವೆಯ ಅನುಭವಗಳು ಕ್ರಮೇಣ ನಾನು ವೃತ್ತಿಗೇ ಅನ್ಫಿಟ್ ಆಗಿದ್ದೇನೆ ಎಂಬ ಭಾವ ಮೂಡತೊಡಗಿತು. ಮಕ್ಕಳು ಹೊಸತನಕ್ಕೆ ತೆರೆದುಕೊಂಡು ಬೆಳೆಯುತ್ತಿದ್ದರು. ನಾನು ಅದೇ ಪ್ರಾಚೀನ ಕಾಲದ ಕ್ರಮ ನಿಯಮಗಳಿಗೆ ಜೋತುಬಿದ್ದು ನೇತಾಡುತ್ತಿದ್ದೆ. ನನ್ನ ವೃತ್ತಿಬದುಕಿಗೊಂದು ಪುನರುತ್ಥಾನದ ಆವಶ್ಯಕತೆಯಿತ್ತು. ನನ್ನ ಚಿಂತನೆಗಳಿಗೆ ಹೊಸತನದ ಕಾಯಕಲ್ಪ ನೀಡಬೇಕಾಗಿತ್ತು. ಆಗ ಮಕ್ಕಳ ಶಿಕ್ಷಣದ ಪರವಾಗಿಯೇ ಕೆಲಸ ಮಾಡುತ್ತಿದ್ದ ವೆಲೋರೆಡ್ ಸಂಸ್ಥೆಯು ನನ್ನ ಗಮನ ಸೆಳೆಯಿತು. ರೆನ್ನಿ ಡಿಸೋಜ ಅವರ ಮುಂದಾಳ್ತನದಲ್ಲಿ ಸಂಸ್ಥೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿಯೇ ಕೆಲಸ ಮಾಡುತ್ತದೆಂದು ತಿಳಿದು ನಾನು ಸಂಪರ್ಕಿಸಿದೆ. ಏಡ್ಸ್ ವಿರುದ್ಧ ಸಮರವನ್ನೇ ಸಾರಿ ಸಂಘಟನೆಯಲ್ಲಿ ಪ್ರಧಾನ ಪಾತ್ರ ವಹಿಸಿದ ವೀಣಾಧರಿಯ ಒಡನಾಟ ನನಗೆ ಲಭಿಸಿದ್ದು ಅಲ್ಲಿಯೇ. ವೀಣಾ ವೆಲೊರೆಡ್ನಲ್ಲಿ ಕೆಲಸ ಮಾಡುತ್ತಿದ್ದರು. ಸಂಸ್ಥೆ ಮಕ್ಕಳ ಹಕ್ಕುಗಳ ರಕ್ಷಣೆ, ಬಾಲಕಾರ್ಮಿಕರ ರಕ್ಷಣೆ, ಶಿಕ್ಷಣ ಇಲಾಖೆಯ ಕಾನೂನುಗಳು ಸರಿಯಾಗಿ ಜಾರಿಗೊಳಿಸುವುದರ ಬಗ್ಗೆ ಶಿಕ್ಷಕರಲ್ಲಿ ಮತ್ತು ಪೋಷಕರಲ್ಲಿ ಜಾಗೃತಿ, ಎಸ್.ಡಿ.ಎಮ್.ಸಿ.ಯ (ಶಾಲಾಭಿವೃದ್ಧಿ ಸಮಿತಿ) ಕರ್ತವ್ಯಗಳು, ಮಕ್ಕಳ ಪಠ್ಯಪುಸ್ತಕಗಳಲ್ಲಿರುವ ಲಿಂಗತಾರತಮ್ಯದ ಬಗ್ಗೆ ಅರಿವು ಮೂಡಿಸುವುದು, ನಮ್ಮೂರ ಶಾಲೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಊರವರೇ ಮುಂದಾಗಬೇಕೆಂಬ ತಿಳುವಳಿಕೆ ಉಂಟುಮಾಡುವುದು, ಪ್ರತೀ ತಾಲೂಕುಗಳಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಿ ತನ್ನೂರ ಶಾಲೆಗಳ ಸಮಸ್ಯೆಗಳಿಗೆ ತಾವೇ ಒಟ್ಟಾಗಿ ಪರಿಹಾರ ಹುಡುಕುವುದು, ಬಾಲನ್ಯಾಯ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವುದು, ಇತ್ತೀಚೆಗಿನ ಪೋಕ್ಸೊ ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದು ಮುಂತಾದ ಹತ್ತು ಹಲವು ವಿಷಯಗಳತ್ತ ಶಿಕ್ಷಕರ ಮತ್ತು ಹೆತ್ತವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಬಂದಿದೆ. ಒಟ್ಟಾರೆಯಾಗಿ ಶಾಲೆಯು ಮಗುಸ್ನೇಹಿಯಾಗಿರಬೇಕು ಮತ್ತು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರಲ್ಲಿ ಹೊಸ ಚಿಂತನೆಯನ್ನು ಕ್ರಿಯಾಶೀಲತೆಯನ್ನು ಮೂಡಿಸುವ ಕೆಲಸವನ್ನು ಕಳೆದ ೨೫ ವರ್ಷಗಳಿಂದಲೂ ಮಾಡುತ್ತಾ ಬಂದಿದೆ.


ನಮ್ಮ ಜಿಲ್ಲೆಯಲ್ಲಿ ಸ್ವಯಂಸೇವಾ ಸಂಸ್ಥೆಯೊಂದು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುವಂತೆ ಯೋಜನೆ ಹಾಕಿ ಸಂಸ್ಥೆ ಕಟ್ಟಿದವರು ಡೆಸ್ಮಂಡ್ ಅಬ್ರಿಯೋ ಎಂಬ ಮಹಾನುಭಾವರು. ಸಮಾಜ ಎಂದರೇನು, ಸೇವೆ ಎಂದರೇನು ಎಂಬುದನ್ನು ಅದರ ನಿಜವಾದ ಅರ್ಥದಲ್ಲಿ ಕಲಿಸಿಕೊಟ್ಟವರು ಅವರು. ನೆಲದ ಆದಿವಾಸಿಗಳನ್ನು, ಮಹಿಳೆಯರನ್ನು, ಮಕ್ಕಳನ್ನು, ಶೋಷಿತರನ್ನು, ದಲಿತರನ್ನು ಗುರುತಿಸಿ ಅವರಿಗೂ ಉತ್ತಮ ಭವಿಷ್ಯವನ್ನು ರೂಪಿಸುವ ಶಕ್ತಿಯಿದೆ ಎಂದು ಮೊತ್ತಮೊದಲು ಇಲ್ಲಿ ತೋರಿಸಿಕೊಟ್ಟವರವರು. ಸಮಾಜದ ನಿರ್ಲಕ್ಷಿತ ಸಮುದಾಯದಲ್ಲಿ ಹೊಸ ಕನಸುಗಳನ್ನು ತುಂಬಿದವರು ಅವರು. ಅವರ ಮಾರ್ಗದರ್ಶನದಲ್ಲಿ ಪಳಗಿದ ಶಿಷ್ಯರಲ್ಲಿ ರೆನ್ನಿ ಡಿಸೋಜ, ಮರ್ಲಿನ್ ಮಾರ್ಟಿಸ್, ಉಮಾಶಂಕರ ಪೆರಿಯೋಡಿ, ಕೇಶವ ಕೋಟೇಶ್ವರ, ಮೋಹನಚಂದ್ರ ಮುಂತಾದವರು ಪ್ರಮುಖರು. ೨೦೦೦ದಲ್ಲಿ ಡೆಸ್ಮಂಡ್ ಅವರು ತೀರಿದ ಮೇಲೆ ಅವರ ಪತ್ನಿ ಮಾರ್ಗರೆಟ್ ಅಬ್ರಿಯೋ ವೆಲೋರೆಡ್ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ಮಾಡಿದರು. ಅವರೂ ನಿಧನರಾದ ಮೇಲೆ ನಿವೃತ್ತ ಪ್ರಾಧ್ಯಾಪಕ ಜಯಂತ್ ಅವರು ಸಂಸ್ಥೆಯ ಅಧ್ಯಕ್ಷರಾಗಿ ಸಮರ್ಪಕವಾಗಿ ಮುನ್ನಡೆಸುತ್ತಿದ್ದಾರೆ. ಆಡಳಿತ ಮಂಡಳಿಯಲ್ಲಿ ಮೋಹನಚಂದ್ರ ಹಾಗೂ ಗಣನಾಥ ಎಕ್ಕಾರು, ಓಸ್ಮಂಡ್ ಶಿರಿ, ಮರ್ಲಿನ್ ಮಾರ್ಟಿಸ್, ಡಾ. ಶೋಭಾ, ಗೋಪಾಲ ಪೆರಾಜೆ, ಶ್ರೀಲತಾ ಮತ್ತು ತುಕಾರಾಮ ಎಕ್ಕಾರು ಮುಂತಾದವರಿದ್ದರು. ಒಂದು ಅವಧಿಗೆ ಉಪಾಧ್ಯಕ್ಷೆಯಾಗಿ ಇವರೊಂದಿಗೆ ಕೆಲಸ ಮಾಡಿದ ಅನುಭವ ನನಗಿದೆ. ಈಗ ಪಡಿ ಎಂಬ ಹೆಸರಿನಲ್ಲಿ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಇದೇ ಸಂಸ್ಥೆ ಕೆಲಸ ಮಾಡುತ್ತದೆ. ಶಿಕ್ಷಣವು ನಾಲ್ಕು ಗೋಡೆಗಳೊಳಗೆ ಬಂಧಿಸಲ್ಪಟ್ಟ ವಿಷಯವಲ್ಲ. ಮಕ್ಕಳನ್ನು ಅವರ ಸೃಷ್ಟಿಶೀಲ ಪ್ರತಿಭೆಗಳ ಸಮೇತ ಬೆಳೆಸುವುದೇ ಗುಣಮಟ್ಟದ ಶಿಕ್ಷಣವೆಂದು ನಂಬಿದ್ದರಿಂದ ಮಾತ್ರವಲ್ಲ ಶಿಶುಕೇಂದ್ರಿತ ಶಿಕ್ಷಣವೇ ಶಾಲೆಗಳಲ್ಲಿ ರೂಪುಗೊಳ್ಳಬೇಕು ಎಂಬ ಉದ್ದೇಶವಿಟ್ಟುಕೊಂಡು ಸಂಸ್ಥೆ ಕೆಲಸ ಮಾಡುತ್ತಿತ್ತು. ನಾನು ಹೊಸ ಚಿಂತನೆಗಳನ್ನು, ಹೊಸ ವಿಷಯಗಳನ್ನು ಕಲಿಯಬೇಕೆಂಬ ಉದ್ದೇಶದಿಂದಲೇ ಅಳುಕುತ್ತಾ ಸಂಸ್ಥೆಗೆ ಪ್ರವೇಶಿಸಿದೆ. ಬಹುಶಃ ನಾನು ೧೯೯೯ರಲ್ಲಿ ಇರಬೇಕು, ಇಲ್ಲಿಗೆ ಬಂದವಳು ಇವರ ಉಪನ್ಯಾಸಗಳನ್ನು ಕೇಳಿ ಮತ್ತು ಕಾರ್ಯಕ್ರಮಗಳನ್ನು ನೋಡಿದ ಮೇಲೆ ಪುನರ್ಜನ್ಮ ಪಡೆದೆನೆಂದೇ ಹೇಳಬೇಕು. ವಾಲಂಟರಿ ರಿಟೈರ್ಮೆಂಟ್ ತೆಗೆದುಕೊಳ್ಳಬೇಕೆಂದು ಮನಸ್ಸು ಮಾಡಿದವಳನ್ನು ಮತ್ತೆ ಮಕ್ಕಳೊಂದಿಗೆ ನಾನು ಘನಿಷ್ಠವಾಗಿ ಬೆಸೆದುಕೊಂಡೆ. ಇದು ಸಂಸ್ಥೆಯ ಒಡನಾಟದಿಂದ ನಾನು ಪಡೆದ ವರ.

ನಿವೃತ್ತಳಾದ ಮೇಲಂತೂ ನಾನು ನಿಯತವಾಗಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡೆ. ಈಗ ಶಿಕ್ಷಣ ಸಂಸ್ಥೆಯಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತಿವೆ, ಅದನ್ನು ಶಿಕ್ಷಕರು ಹೇಗೆ ಸ್ವೀಕರಿಸುತ್ತಾರೆ, ಶಾಲೆಗಳಲ್ಲಿ ಸರಕಾರ ಮಾಡಿದ ಕಾನೂನುಗಳು ಹೇಗೆ ಜಾರಿಯಾಗುತ್ತವೆ, ಹೇಗೆ ವಿಫಲಗೊಳ್ಳುತ್ತವೆ ಎಲ್ಲಾ ಸತ್ಯಗಳನ್ನು ಅರಿತುಕೊಂಡೆ. ಪಡಿಯೊಂದಿಗೆ ನಿರಂತರ ಸಂಪರ್ಕವನ್ನು ಈಗಲೂ ಉಳಿಸಿಕೊಂಡಿರುವ ಕಾರಣ ಹಳತು ಹೊಸತನ್ನು ತೂಗಿ ನೋಡುವ ವಿಮರ್ಶಾ ಶಕ್ತಿ ನನ್ನಲ್ಲಿ ಹುಟ್ಟಿತು. ನನ್ನ ನಿವೃತ್ತಿಯ ನಂತರ, ಅಂದರೆ ೨೦೦೨ರ ಬಳಿಕ ಶಾಲೆಯಿಂದ ಬೆತ್ತವನ್ನು ಸರಕಾರ ಬಹಿಷ್ಕರಿಸಿತು. ಇದರ ಬಗ್ಗೆ ಪರ ವಿರೋಧ ಚರ್ಚೆಗಳು ಜೋರಾಗಿ ನಡೆದುವು. ಬೆತ್ತವನ್ನು ಶಿಕ್ಷಕರಿಂದ ಕಸಿದದ್ದು ನಿಜವಾಗಿ ಶ್ಲಾಘನೀಯ. ಅದರ ಜೊತೆಗೆ ಮಕ್ಕಳ ಮೇಲಿನ ಪ್ರೀತಿಯನ್ನೂ ಶಿಕ್ಷಕರು ಕಿತ್ತೆಸೆದರೇ ಎಂಬ ಭಾವ ನನ್ನಲ್ಲಿ ಮೂಡಿ ಕಾಡಿತು. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮಧ್ಯೆ ಸ್ವಲ್ಪ ಮಟ್ಟಿನ ಅಂತರ ಹಿಂದೆಯೂ ಇತ್ತು. ಇತ್ತೀಚಿನ ವರ್ಷಗಳಲ್ಲಿ ಬೆಳವಣಿಗೆಯನ್ನು ಕಂಡಾಗ ಅಂತರ ಕಂದಕದಂತೆ ವಿಸ್ತಾರವಾಯಿತೇ? ಎಂಬ ಅನುಮಾನ ಕಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಾಗುವ ಪರಿವರ್ತನೆಯನ್ನು ತಟಸ್ಥಭಾವದಿಂದ ನೋಡುವುದು ಬಿಟ್ಟರೆ ಬೇರೇನೂ ಮಾಡುವುದು ನನ್ನಿಂದ ಸಾಧ್ಯವಿಲ್ಲ.


ಮಧ್ಯೆ ಅಂದರೆ ೨೦೦೦ನೇ ಇಸವಿಯಲ್ಲಿ ನನಗೆ ಶಿಕ್ಷಕ ಸಂಗತಿ ಬಳಗದೊಂದಿಗೆ ನಂಟು ಬೆಳೆಯಿತು. ಕೆ.ಎಂ. ವಾಸುದೇವ ರಾವ್, .ಕೆ. ಯಾದವ, ಉಮಾಶಂಕರ ಪೆರಿಯೋಡಿ, ರೆನ್ನಿ ಡಿಸೋಜ, ಎಂ.ಕೆ. ಮಂಜನಾಡಿ ಮುಂತಾದವರು ಬಳಗದ ಸದಸ್ಯರು. ವೆಲೊರೆಡ್ ಪಡಿ ಸಂಸ್ಥೆಯು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದ ಶಿಕ್ಷಣಕ್ರಾಂತಿಯ ಚಳುವಳಿಗೆ ಒಂದು ಸಾಹಿತ್ಯ ರೂಪ ನೀಡಿ ಅದನ್ನು ಆಸಕ್ತರಿಗೆ ತಲುಪಿಸುವ ಕೆಲಸವನ್ನು ಮಾಡಿತು. ಉಮಾಶಂಕರ ಪೆರಿಯೋಡಿಯವರ ಸಮರ್ಥ ನಿರ್ದೇಶನದಲ್ಲಿ ವಾಸುದೇವ ರಾವ್ ಅವರು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಇರುವ ತೊಂದರೆಗಳು, ಶಾಲೆಗಳ ಪರಿಸ್ಥಿತಿ, ಶಿಕ್ಷಕರ ಮತ್ತು ಮಕ್ಕಳ ಮನೋಭಾವಗಳಲ್ಲಿರುವ ವ್ಯತ್ಯಾಸ, ನಗರ ಮತ್ತು ಗ್ರಾಮಾಂತರ ಶಾಲೆಗಳ ಪರಿಸ್ಥಿತಿಗಳಲ್ಲಿರುವ ಕೊರತೆಗಳ ಬಗ್ಗೆ ಉಮಾಶಂಕರ ಪೆರಿಯೋಡಿಯವರ ಮಾರ್ಗದರ್ಶನದಲ್ಲಿ ಹಲವು ಶಿಕ್ಷಕರು ಬರಿಗಾಲ ಸಂಶೋಧನೆ ಮಾಡಿ ತೆರೆ ಎಂಬ ಪುಸ್ತಕವನ್ನು ಹೊರತಂದರು. ಇದರಿಂದಾಗಿ ಶಿಕ್ಷಣಕ್ಷೇತ್ರದಲ್ಲಿ ಮುಖ್ಯವಾಗಿ ಆಗಬೇಕಾದ ಕೆಲಸಗಳೇನು ಎಂಬ ಅರಿವು ಮೂಡಿತು. ಇದರಿಂದ ಪ್ರೇರಣೆಗೊಂಡು `ಶಿಕ್ಷಕ ಸಂಗತಿ’ ಬಳಗ ರೂಪುಗೊಂಡಿತು. ಬಳಗದ ಬೆನ್ನೆಲುಬಾಗಿ ವಾಸುದೇವ ರಾವ್ ಅವರು ಸುಮಾರು ೧೫ ವರ್ಷ ಕಾಲ ನಿರಂತರವಾಗಿ ಮಾಡಿದ ಕೆಲಸಕ್ಕೆ ಬೆಲೆ ಕಟ್ಟಲಾಗದು. ಎಲ್ಲ ಕೆಲಸವೂ ಬೀಜ ಬಿತ್ತಿದಂತೆ, ಅದು ಫಲ ಮಾತ್ರ ಕೊಡುವುದಲ್ಲದೆ ಪುನಃ ಬೀಜವನ್ನೂ ನೀಡುತ್ತದೆ. ಹಾಗೆಯೇ ವಾಸುದೇವ ರಾವ್ ಅವರ ಸಂಪಾದಕತ್ವದಲ್ಲಿ ಎರಡು ಪುಟಗಳಿಂದ ಪ್ರಾರಂಭವಾದ `ಶಿಕ್ಷಕ ಸಂಗತಿ’ ಪತ್ರಿಕೆ ೧೦-೧೬ ಪುಟಗಳ ಪುಟ್ಟ ಪುಸ್ತಕವಾಗಿ ಪ್ರತಿ ತಿಂಗಳು ಪ್ರಕಟಗೊಳ್ಳಬೇಕಾದರೆ ಅದರ ಹಿಂದಿನ ಕಾರ್ಯಭಾರ ಎಷ್ಟು ಘನವಾದುದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.


ಲೇಖನ ಸಂಗ್ರಹಿಸುವುದು ಒಂದು ರೀತಿಯ ಒತ್ತಡವಾದರೆ ಪ್ರಕಟಣೆಗೆ ಆರ್ಥಿಕ ಬಲವನ್ನು ಹುಡುಕುವುದು ಇನ್ನೊಂದು ರೀತಿಯ ಒತ್ತಡ. ಅದಲ್ಲದೆ ವರ್ಷದಲ್ಲಿ ಒಂದೆರಡು ವಿಚಾರಗೋಷ್ಠಿ ಸಂವಾದ ಕಾರ್ಯಕ್ರಮಗಳ ಮೂಲಕ ಉಡುಪಿ ಮತ್ತು .. ಜಿಲ್ಲೆಗಳ ಶಿಕ್ಷಕರಲ್ಲಿ ಹೊಸ ಚೈತನ್ಯವನ್ನು ತುಂಬಿಸುವ ಪ್ರಯತ್ನವನ್ನೂ ಮಾಡುತ್ತಿದ್ದೆವು. ಶಿಕ್ಷಕವೃತ್ತಿಗೆ ಒಮ್ಮೆ ಸೇರಿದರೆ ನಿವೃತ್ತರಾಗುವವರೆಗೂ ಶಿಕ್ಷಕರ ಮನೋವೃತ್ತಿ ಬದಲಾಗುವುದಿಲ್ಲ. ಎಲ್ಲಾ ಡಿಪಾರ್ಟ್ಮೆಂಟುಗಳ ನೌಕರರಿಗೆ ಇಲಾಖೆಯ ಪರೀಕ್ಷೆಗಳಿಗೆ ಕಲಿತು ಪರೀಕ್ಷೆ ಬರೆಯಬೇಕಾದ ನಿಯಮಗಳಿರುತ್ತವೆ. ಆದರೆ ಶಿಕ್ಷಕರಿಗೆ ಇಲ್ಲ. ಆದುದರಿಂದ ಅವರನ್ನು ಪುನರ್ನವೀಕರಣಗೊಳಿಸಬೇಕಾದ ಅಗತ್ಯ ತುಂಬಾ ಇದೆ. ಪಡಿ, ವೆಲೊರೆಡ್ ಸಂಸ್ಥೆ ಶಿಕ್ಷಕ ಸಂಗತಿ ಬಳಗದ ಮೂಲಕ ಕೆಲಸ ಮಾಡಿತು. ಹಲವಾರು ಪ್ರಸಿದ್ಧ ಮತ್ತು ಉದಯೋನ್ಮುಖ ಲೇಖಕರು ಪತ್ರಿಕೆಗೆ ಬರೆದರು. ಡಾ. ಎಲಿಜಬೆತ್ ಡೇನಿಯಲ್ ಎಂಬ ಸೈಕಾಲಜಿ ಡಾಕ್ಟರೊಬ್ಬರು ಮಕ್ಕಳ ಮನಸ್ಸಿನ ಬಗ್ಗೆ ನಿರಂತರವಾಗಿ ಬರೆಯುತ್ತಿದ್ದ ಲೇಖನಗಳಂತೂ ಸಂಗ್ರಹಯೋಗ್ಯವಾಗಿತ್ತು. ವೃತ್ತಪತ್ರಿಕೆಗಳನ್ನು ಓದದ ಶಿಕ್ಷಕರಿಗೆ ಪುಟ್ಟ ಪತ್ರಿಕೆಯನ್ನಾದರೂ ನೀಡಿ ಓದುವ ಹವ್ಯಾಸ ಬೆಳೆಸಬಹುದೆಂಬ ಇರಾದೆ ನಮ್ಮದಿತ್ತು. ಅದು ಯಶಸ್ವಿಯಾಗಲಿಲ್ಲವೆಂದು ಹೇಳಬೇಕಾಗಿಲ್ಲ ತಾನೇ? ಶಿಕ್ಷಕ ಸಮುದಾಯಕ್ಕೇ ಅದನ್ನು ತಲುಪಿಸುವುದು ನಮ್ಮಿಂದ ಸಾಧ್ಯವೂ ಇರಲಿಲ್ಲ. ಅಂತೂ ಕೆಲವರಾದರೂ ಶಿಕ್ಷಕರು ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದರು ಎಂಬುದೇ ನಮಗೆ ಸಮಾಧಾನ ತರುತ್ತಿತ್ತು. ಅಷ್ಟಕ್ಕೇ ತೃಪ್ತರಾಗಿ ಸುಮ್ಮನಾಗಬೇಕಾಯಿತು. ಸುಮಾರು ೧೫ ವರ್ಷಗಳ ಕಾಲ ಪತ್ರಿಕಾ ಸಂಪಾದಕರಾಗಿ ವಾಸುದೇವ ರಾವ್ ಅವರು ಪತ್ರಿಕೆಯನ್ನು ಮುನ್ನಡೆಸಿದರು. ಶಿಕ್ಷಕ ವೃತ್ತಿಯಲ್ಲಿರುವಾಗಲೇ ಪತ್ರಿಕೆಯ ಕೆಲಸಕ್ಕಾಗಿ ದುಡಿದ ವಾಸುದೇವ ರಾವ್ ಅವರು ೨೦೧೦ರವರೆಗೂ ಹೇಗೋ ಕಷ್ಟಪಟ್ಟು ಮುನ್ನಡೆಸಿದರು. ಯಾವುದೇ ಬಂಡವಾಳವಿಲ್ಲದೆ ಪತ್ರಿಕೆಯನ್ನು ನಡೆಸುವುದು ಸುಲಭವಲ್ಲ. ಮತ್ತೆ ಅವರ ಆರೋಗ್ಯದ ಸಮಸ್ಯೆಯೂ ಕಾಡತೊಡಗಿದ್ದರಿಂದ, ಇನ್ನು ತನಗೆ ಓಡಾಟ ಸಾಧ್ಯವಾಗದೆಂದು ಪತ್ರಿಕೆಯನ್ನು ನಿಲ್ಲಿಸಿಬಿಟ್ಟರು;  ಶಿಕ್ಷಕ ಸಂಗತಿ ಪತ್ರಿಕೆ ತನ್ನ ನಡಿಗೆ ನಿಲ್ಲಿಸಿತು.


ವಾಸುದೇವರಾವ್ ಅವರ ಅದಮ್ಯ ಸಂಕಲ್ಪವೇ ಪತ್ರಿಕೆಯ ಉಳಿವಿಗೆ ಕಾರಣವಾಯಿತು. ಪತ್ರಿಕೆ ಅನೇಕ ಹೊಸ ಬರಹಗಾರರನ್ನು ಸೃಷ್ಟಿಸಿತು. ಸಣ್ಣ ಪತ್ರಿಕೆಗಳಿಗೆ ಬರೆದು ಕೈ ಪಳಗಿದ ಮೇಲೆಯೇ ದೊಡ್ಡ ದೊಡ್ಡ ಲೇಖನಗಳನ್ನು ಬರೆಯುವ ಶಕ್ತಿ ಉಂಟಾಗುತ್ತದೆ. ಅವರೇ ಮುಂದೆ ದೊಡ್ಡ ಲೇಖಕರಾಗುತ್ತಾರೆ. ಅಂತಹ ಲೇಖಕರನ್ನು ಸೃಷ್ಟಿಸಿದ ಕೀರ್ತಿ ಶಿಕ್ಷಕ ಸಂಗತಿ ಪತ್ರಿಕೆಗಿದೆ. ಶಿಕ್ಷಕ ಸಂಗತಿ ಬಳಗದವರಾರೂ ಇದಕ್ಕಿಂತ ಹೆಚ್ಚಿಗೆ ನಿರೀಕ್ಷೆ ಮಾಡಲು ಸಾಧ್ಯವಿರಲಿಲ್ಲ. ಕೆಲಸ ಸಣ್ಣದಾದರೂ ಅದು ಕೊಡುವ ಸಂತೋಷಕ್ಕೆ ಬೆಲೆ ಕಟ್ಟಲಾಗದು. ಪತ್ರಿಕೆಯ ೫೦ನೇ ಸಂಚಿಕೆಯು ಹಲವು ಮಂದಿ ಶಿಕ್ಷಣತಜ್ಞರ ಲೇಖನಗಳನ್ನೊಳಗೊಂಡು ಸಂಗ್ರಹಯೋಗ್ಯ ಕೃತಿಯಾಗಿ ಹೊರಬಂತು. ಪ್ರಖರವಾದ ಬೆಳಕು ಹೆಚ್ಚಿನದನ್ನು ತೋರಿಸಿದರೂ ಕೆಲವು ಮರೆಯಲ್ಲೇ ಇರುತ್ತದಲ್ಲವೇ? ಹಾಗೆಯೇ ಮರೆಯಲ್ಲಿದ್ದ ಜ್ಞಾನದ ಮೂಲೆಗಳತ್ತ ಬೆಳಕು ಬೀಳುವಂತೆ ಮಾಡಿದ ಕೀರ್ತಿ ಪತ್ರಿಕೆಗಿದೆ. ಪಾಠೋಪಕರಣಗಳ ತಯಾರಿ, ಆಟದ ಮೂಲಕ ಪಾಠ, ಕಸದಿಂದಲೂ ಪಾಠಕ್ಕೆ ಬೇಕಾದ ವಸ್ತುಗಳನ್ನು ತಯಾರಿಸುವುದು - ಹೀಗೆ ಹತ್ತಾರು ಸೃಷ್ಟಿಶೀಲ ಕೈಕೆಲಸಗಳ ಮೂಲಕ ಮಗುವಿನ ಶಿಕ್ಷಣಕ್ಕೆ ಪ್ರೇರಣೆ ನೀಡುವುದು ಹೇಗೆ ಎಂಬುದನ್ನು ನೀನಾಸಂ ಕಲಾವಿದ ಮುರಹರಿಯವರು ಮಾಡಿ ತೋರಿಸಿದ್ದು ಜ್ಞಾನಮೂಲದ ವಿವಿಧ ಮಜಲುಗಳನ್ನು ಪರಿಚಯಿಸಿತು. ಹೀಗೆ ಶಿಕ್ಷಕ ಸಂಗತಿ ಬಳಗದ ನಂಟು ಶಿಕ್ಷಕ ವಿದ್ಯಾರ್ಥಿಗಳ ನಂಟು ಗಟ್ಟಿಗೊಳ್ಳುವಂತೆ ಮಾಡಿತು. ಸಂಬಂಧಗಳನ್ನು ಬೆಸೆದು ಕಂದಕಗಳನ್ನು ಮುಚ್ಚಿತು. ಇದಕ್ಕಿಂತ ದೊಡ್ಡ ಕೆಲಸ ಯಾವುದಿದೆ ಹೇಳಿ, ಅಂತೂ ನನ್ನ ವೃತ್ತಿಜೀವನದಲ್ಲಿ ಪ್ರಸನ್ನತೆಯ ಭಾವಸಮೃದ್ಧಿಯನ್ನು ನೀಡಿದವರಲ್ಲಿ ಎಲ್ಲಾ ಮಹನೀಯರೂ ಪ್ರೇರಣೆ ನೀಡಿದ್ದಾರೆಂಬುದನ್ನು ಹೇಗೆ ಮರೆಯಲಿ?

(ಮುಂದುವರಿಯಲಿದೆ)

2 comments:

  1. ಶಿಕ್ಶಣ ಕ್ಷೇತ್ರದಲ್ಲಿ ಮಕ್ಕಳ ಒಳಿತನ್ನು, ಅಭಿವ್ಱದ್ಧಿಯನ್ನೂ ಬಯಸಿ, ಛಿಂತಿಸಿ, ಮಥಿಸಿ ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟ ದಣಿವಿರದ ಸಾಧನೆಯ ಮಹತ್ವದ ಕಥನ. ಲೇಖಕಿಯ ಸತ್ವವೆಲ್ಲ ಅಲೆಯಲೆಯಾಗಿ ಹೊರ ಬರುತ್ತಿದೆ; ತುಂಬಾ ಸಂತೋಷ ಕೊಡುತ್ತಿದೆ.

    ReplyDelete
    Replies
    1. Beledu banda dariya hinnota nannanthavarige marga darshana niduvanthide

      Delete