10 May 2016

ಏಕಾಂತದ ಸುಖದಲ್ಲಿ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ತೆಂಟು

`ನಮ್ಮ ಬಯಕೆಯಂತೆ ಮನಸ್ಸನ್ನು ಹಾರಲು ಬಿಡುವ ಅವಕಾಶವಿರುವುದರಿಂದಲೇ ದೇವರು ನಮಗೆ ರೆಕ್ಕೆಗಳನ್ನು ಕೊಟ್ಟಿಲ್ಲ' ಎನ್ನುತ್ತಾರೆ ಕವಿ ರವೀಂದ್ರನಾಥ ಠಾಗೂರರು. ಆದರೆ ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಒಂದು ಪರಿಧಿಯೊಳಗೆ ಜೀವಿಸುತ್ತಾನೆ. ಪರಿಧಿಯನ್ನು ಅವನು ದಾಟಲು ಸಾಧ್ಯವಾಗದು. ದೈಹಿಕವಾಗಿ ಬಿಡಿ, ಮಾನಸಿಕವಾಗಿಯಾದರೂ ದಾಟುವುದಕ್ಕೆ ಸಾಧ್ಯವೇ? ಅದೂ ಕಷ್ಟವೇ ಸರಿ. ನಮಗೆ ನಾವೇ ಹಾಕಿಕೊಂಡ ಕೆಲವು ನಿಯಂತ್ರಣ ರೇಖೆಗಳೊಳಗೆ ಸುತ್ತಾಡಿ ಸುತ್ತಾಡಿ ಹೈರಾಣಾಗಿ ಬಿಟ್ಟಿರುತ್ತೇವೆ. ಒಮ್ಮೆ ಇದರಾಚೆ ಜಿಗಿಯಬೇಕೆಂಬ ಹಂಬಲವೇನೋ ಹಿರಿದಾಗಿದೆ. ಆದರೆ ಜವಾಬ್ದಾರಿಯೆಂಬ ಕಿರೀಟವನ್ನು ಕೆಳಗಿಳಿಸಲಾಗದೆ ಅಹಮ್ಮಿನ ಕೋಟೆಯೊಳಗೆ ನಾನು ಬಂಧಿಯಾಗಿದ್ದೆ. ೧೯೯೭ರಲ್ಲಿ ಅದಕ್ಕೆ ಒಂದು ಅವಕಾಶ ಲಭಿಸಿತು.
ಸುಮಾರು ೨೫ ವರ್ಷಕ್ಕಿಂತಲೂ ಹೆಚ್ಚು ಕಾಲ ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲೇ ಶಿಕ್ಷಕಿಯಾಗಿ ನಾನು ಹಳಬಳಾಗಿದ್ದೆ. ನನ್ನನ್ನು ನಾನು ನವೀಕರಿಸಿಕೊಳ್ಳಬೇಕಾದ ಅಗತ್ಯ ಕಂಡಿತು. ಹೊಸ ವಾತಾವರಣದಲ್ಲಿ ಹೊಸ ಸವಾಲುಗಳನ್ನು ಎದುರಿಸಬೇಕೆಂಬ ಹುಮ್ಮಸ್ಸು ಹುಟ್ಟಿತು. ಮನೆಯಲ್ಲೂ ತಮ್ಮನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿ (ನಚಿಕೇತ, ಅನಿಕೇತ) ನಾಲ್ಕನೇ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದರು. ಬೆಥನಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ವರ್ಗಾವಣೆಯ ಬೇಡಿಕೆ ಸಲ್ಲಿಸಿದೆ. ಇಷ್ಟು ಹತ್ತಿರದ ಶಾಲೆಯನ್ನು ಬಿಟ್ಟು ದೂರದ ಶಾಲೆಗೆ ವರ್ಗಾವಣೆಯನ್ನು ಕೇಳಿದ್ದನ್ನು ಕಂಡು ಹಲವರು ನನ್ನನ್ನು ಹಂಗಿಸಿದ್ದುಂಟು. ನಿನಗೇನು ಭ್ರಾಂತಾ ಎಂದು ಕೇಳಿದವರಿದ್ದರು. ಯಾರೇನೇ ಹೇಳಲಿ ನನ್ನ ನಿರ್ಧಾರಕ್ಕೆ ಬದ್ಧಳಾಗಿದ್ದೆ. ನನಗೆ ಮನೆಯ ಜವಾಬ್ದಾರಿಗಳಿಂದ ಕಳಚಿಕೊಳ್ಳಬೇಕೆಂಬ ಆಸೆ ಇತ್ತು. ಅದಕ್ಕೆ ಬೇರೆ ರೀತಿಯ ಅರ್ಥ ಹಚ್ಚಿ ನಕ್ಕವರೂ ಇದ್ದರು. ತನ್ನ ಕೋಳಿಯಿಂದಲೇ ಬೆಳಕಾಗುತ್ತದೆ. ಆದ್ದರಿಂದಲೇ ಹಳ್ಳಿಯವರೆಲ್ಲಾ ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆಂದು ತಿಳಿದ ಮುದುಕಿಯ ಕತೆ ಗೊತ್ತಲ್ಲಾ, ಹಾಗೆ. ಏನು ಬೇಕಾದರೂ ಹೇಳಲಿ, ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಲಿ. ನಾನು ಕ್ಯಾರೇ ಅನ್ನದೆ ಮುಲ್ಕಿ ಮೆಡಲಿನ್ ಶಾಲೆಗೆ ವರ್ಗ ಮಾಡಿಸಿಕೊಂಡೆ. ಅಲ್ಲಿ ನನಗೆ ವಾಸ್ತವ್ಯಕ್ಕೆ ಒಂದು ಸಣ್ಣ ಮನೆಯನ್ನೂ ನೀಡಿ ಉಪಕರಿಸಿತು ಆಡಳಿತ ಮಂಡಳಿ. ನಮಗೆ ಹೆಂಗಸರಿಗೆ ಒಂಟಿಯಾಗಿ ಕೂತು ಅಳಲಿಕ್ಕಾದರೂ ಅನುಕೂಲವಾಗುವಂತೆ ಒಂದು ಕೋಣೆಯ ಅವಶ್ಯಕತೆ ಇದೆ. ನಾನು ಬಾಲ್ಯದಿಂದಲೂ ಒಂಟಿತನಕ್ಕಾಗಿ ಹಂಬಲಿಸಿ ಹಾರೈಸಿದ್ದೆ. ಹೊಸ ಮನೆ ಕಟ್ಟಿದರೂ ಅಲ್ಲಿ ನನಗೆ ಪ್ರತ್ಯೇಕ ಕೋಣೆ ದಕ್ಕಿರಲಿಲ್ಲ. ಮುಲ್ಕಿಯಲ್ಲಿ ನನಗೆ ಅದು ವರವಾಗಿ ಲಭಿಸಿತು.

ತಮ್ಮನ ಮದುವೆ, ಮಕ್ಕಳು, ಕಾಯಿಲೆ, ಕಸಾಲೆ ಇತ್ಯಾದಿ ಸಂಸಾರ ತಾಪತ್ರಯಗಳಿಂದ ನನ್ನ ಬಗ್ಗೆ ಯೋಚಿಸಲಿಕ್ಕೇ ನನಗೆ ಪುರುಸೊತ್ತು ಇರಲಿಲ್ಲ. ಮುಲ್ಕಿಗೆ ಬಂದ ಮೇಲೆ ಅಧ್ಯಯನಕ್ಕೆ ಬರವಣಿಗೆಗೆ ಏಕಾಂತವೆಂಬ ಈವರೆಗೆ ಅಪೂರ್ವವಾದ ವಸ್ತುವನ್ನು ಪಡೆಯುವಂತಾದೆ. ಏಕಾಂತವು ನಮ್ಮನ್ನು ನಾವೇ ವಿಮರ್ಶಿಸುವ, ತಿದ್ದಿಕೊಳ್ಳುವ, ನಮ್ಮ ಶಕ್ತಿಯನ್ನು ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ. ಅದು ಶಾಂತಿಯ ಕಾಲ್ಮಣೆಯ ಮೇಲೆ ನಮ್ಮನ್ನು ಕುಳ್ಳಿರಿಸಿ ಸಲಹುತ್ತದೆ. ನನ್ನನ್ನು ಟೀಕಿಸುವವರಿರುವಂತೆ ಉಪದೇಶ ನೀಡುವವರೂ ಧಾರಾಳ ಇದ್ದರು. ಪುಕ್ಕಟೆಯಾಗಿ ಮನುಷ್ಯ ನೀಡಬಹುದಾದದ್ದು ಅದೇ ತಾನೇ? ಎಲ್ಲರ ಟೀಕೆಯೂ ಉಪದೇಶವೂ ವ್ಯರ್ಥವಾಗಲಿಲ್ಲ. ಒಳ್ಳೆ ಮಾತಿಗೂ ಸೈ ಎಂದೆ ಕೆಟ್ಟ ಮಾತಿಗೂ ಸೈ ಎಂದೆ. ಕೆಟ್ಟು ಕೂತ ಗಡಿಯಾರ ಕೂಡಾ ದಿನಕ್ಕೆರಡು ಬಾರಿ ಸರಿಯಾದ ಸಮಯವನ್ನೇ ತೋರಿಸುತ್ತದಲ್ಲವೇ?

ಮುಲ್ಕಿ ಶಾಲೆ ಶಿಕ್ಷಣದ ಬಗ್ಗೆ ನನ್ನ ಹೊಸ ಚಿಂತನೆಗಳಿಗೆ ಪ್ರಯೋಗಶಾಲೆಯಾಯಿತು. ಎಲ್ಲರೂ ಪ್ರತೀವರ್ಷ ಶಾಲಾ ಪ್ರಾರಂಭದಲ್ಲಿ ಮಕ್ಕಳನ್ನು ಮುಖಾಮುಖಿಯಾದಾಗ ಹೇಳುವ ಸಾಮಾನ್ಯ ಮಾತು ಏನೆಂದರೆ ಮಕ್ಕಳಿಗೆ ಏನೂ ಗೊತ್ತಿಲ್ಲ. ಹಿಂದಿನ ತರಗತಿಯವರು ಸರಿಯಾಗಿ ಕಲಿಸಿಲ್ಲವೆಂಬ ಸಣ್ಣ ಆರೋಪ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಶಿಕ್ಷಕರ ಸಭೆಗಳಲ್ಲಿ ಮಾತುಗಳು ಹರಿದಾಡುತ್ತಿದ್ದುವು. ಅದಕ್ಕಾಗಿ ನಾನೇ ಒಂದನೇ ತರಗತಿಗೆ ಕಲಿಸಿದರೆ ಹೇಗೆ ಎಂಬ ಹುರುಪು ಹುಟ್ಟಿ ೧೯೯೯ರಲ್ಲಿ ನಾನೇ ಬಯಸಿ ಕೇಳಿ ಒಂದನೇ ತರಗತಿಯನ್ನು ಆಯ್ಕೆ ಮಾಡಿದೆ. ೭೦ ಮಕ್ಕಳಿರುವ ತರಗತಿಯನ್ನು ನಾನು ನಿಭಾಯಿಸಲಾರದೆ ಕಂಗಾಲಾದುದೂ ನನ್ನದಿದು ದುಸ್ಸಾಹಸವಾಯಿತಲ್ಲಾ ಎಂದು ಕೊರಗಿದ್ದು, ನನಗೆ ನಾನೇ ಪರಾಕು ಪಂಪನ್ನೊತ್ತಿ ಚೈತನ್ಯ ತುಂಬಿಸಿಕೊಂಡದ್ದು ನನ್ನ ಶಿಕ್ಷಕ ವೃತ್ತಿಯ ಅಮೂಲ್ಯ ಕ್ಷಣಗಳಾಗಿವೆ. ಮಕ್ಕಳ ಪಾಠಕ್ಕೆ ಹೊಸ ಬೋಧನೋಪಕರಣ ಖರೀದಿಸಿದ್ದು, ಮಾಡಿದ್ದು, ಮಕ್ಕಳ ಹಾಡು, ನೃತ್ಯ ನಾಟಕಗಳನ್ನು ಸಂಗ್ರಹಿಸಿದ್ದು, ರಚಿಸಿದ್ದು, ತರಗತಿಯ ನಾಲ್ಕು ಗೋಡೆಗಳಾಚೆಗೆ ಮಕ್ಕಳ ಕಲಿಕೆಯನ್ನು ವಿಸ್ತರಿಸಿದ್ದು ನನ್ನಲ್ಲಿ ಕಲಿಸುವ ಖುಷಿಯನ್ನು ತುಂಬಿದುವು. ಮಕ್ಕಳ ಹೇಲು, ಉಚ್ಚೆ ಬಳಿಯುವಷ್ಟರ ಮಟ್ಟಿಗೆ ಅವರು ನನ್ನ ಮಕ್ಕಳೇ ಆದರು. ಶಾಲೆಯಲ್ಲಿ ನಾನು ಕಂಡ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯ ಬಗ್ಗೆ ನೆನಪಾಗುತ್ತದೆ. ಅವನೇ ಗೌತಮ್. ಪರೀಕ್ಷೆಯಲ್ಲಿ ಅಂಕ ಗಳಿಸುವಲ್ಲಿ ಅವನು ಸೋತಿರಬಹುದು. ಆದರೆ ಸೃಷ್ಟಿಶೀಲ ಪ್ರತಿಭೆ ಮತ್ತು ಸ್ವತಂತ್ರ ಚಿಂತನೆಯುಳ್ಳ ಗೌತಮ್ನದು ವಿಶಿಷ್ಟ ವ್ಯಕ್ತಿತ್ವ. ಈಗಲೂ ನನ್ನ ಕಣ್ಣ ಮುಂದಿದ್ದಾನೆ. ಏಳನೇ ತರಗತಿಯ ಪುಟ್ಟ ಹುಡುಗನೊಬ್ಬ ರಜೆಯಲ್ಲಿ ಒಬ್ಬನೇ ನನ್ನ ಮನೆ ಹುಡುಕಿಕೊಂಡು ಮುಲ್ಕಿಯಿಂದ ಕುಡುಪಿಗೆ ಬಂದದ್ದು, ಆಮೇಲೆ ಪತ್ರ ಬರೆದು ಅದೂ ಇಂಗ್ಲಿಷಿನಲ್ಲಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು ಇವೆಲ್ಲಾ ನನ್ನ ನೆನಪಿನ ಖಜಾನೆಯಲ್ಲಿ ಭದ್ರವಾಗಿವೆ.


ಶಿಕ್ಷಣ ಇಲಾಖೆಯೊಂದಿಗಿನ ನನ್ನ ವಾಗ್ವಾದಗಳ ಬಗ್ಗೆ ಹೇಳಲೇಬೇಕು. ಒಂದು ಸಣ್ಣ ಬಿಲ್ ಪಾಸಾಗಬೇಕಾದರೂ ಅದರ ಮೇಲೆ ಭಾರ ಇರಿಸಬೇಕಾದಂತಹ ಭ್ರಷ್ಟ ವ್ಯವಸ್ಥೆಯ ಬಗ್ಗೆ ಶಿಕ್ಷಕಿಯರು ಮತ್ತು ಖಾಸಗಿ ಶಾಲೆಗಳವರು ಪದೇ ಪದೇ ಮಾತಾಡುತ್ತಿದ್ದರು. ಹುಚ್ಚಪ್ಪನೆಂಬ ಅತ್ಯಂತ ಭ್ರಷ್ಟ ಬಿ... ಬಗ್ಗೆ ಎಲ್ಲರೂ ಹಿಂದಿನಿಂದ ಶಪಿಸುವುದು, ಅಶ್ಲೀಲವಾಗಿ ಬೈಯುವುದು ನನ್ನ ಕಿವಿಗೆ ಕೇಳಿಸುತ್ತಿತ್ತು. ಏನೂ ಮಾಡದೇ ಸುಮ್ಮನೆ ಇರುವುದಕ್ಕಿಂತ ಏನಾದರೂ ಮಾಡಬೇಕೆಂದು ನೊಂದವರ ಅಭಿಪ್ರಾಯಗಳ ಸಹಿತ ಇಲಾಖೆಗೆ, ಶಿಕ್ಷಣ ಮಂತ್ರಿಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದೆ. ಇದು ತಲುಪಿದ ವಾರದಲ್ಲಿ ಶಿಕ್ಷಕರ ಮಾಸಿಕ ಸಭೆ ಸೇರಿತು. ಸುಮಾರು ೧೦೦ ಮಂದಿ ಶಿಕ್ಷಕರ ಸಭೆಯಲ್ಲಿ ಕಾರ್ಯದರ್ಶಿಯವರು ಮುಖ್ಯ ವಿಷಯ ಮಂಡಿಸಿದರು. ಶಿಕ್ಷಣ ಇಲಾಖೆಯ ಬಗ್ಗೆ ಯಾರೋ ಸರಕಾರಕ್ಕೆ ಬರೆದಿದ್ದಾರೆ. ಹೀಗೆಯೇ ಬರೆಯಲು ಬಿಟ್ಟರೆ ಅನರ್ಥವಾದೀತು. ಆದುದರಿಂದ ಬರೆದವರು ಎದ್ದು ನಿಂತು ಇನ್ನು ಮುಂದೆ ಬರೆಯುವುದಿಲ್ಲವೆಂದು ಮಾತು ಕೊಡಬೇಕು ಎಂದು ಫರ್ಮಾನು ಹೊರಡಿಸಿದರು. ಹೇಗಿದೆ ನೋಡಿ ನಮ್ಮ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸುವ ಮನಸ್ಸುಗಳು. ಒಬ್ಬ ಪಡಪೋಶಿ ಪ್ರೈಮರಿ ಟೀಚರೊಬ್ಬರು ಇಲಾಖೆಯ ವಿರುದ್ಧ ಬರೆಯುವುದೆಂದರೆ ನಮ್ಮ ವೃತ್ತಿಗೇ ಅವಮಾನವೆಂದು ಇಡೀ ಸಭೆ ಭಾವಿಸಿದಂತಿತ್ತು. ಇದು ನನ್ನ ಬರವಣಿಗೆಯ ಕತ್ತು ಹಿಸುಕುವ ಷಡ್ಯಂತ್ರವೆಂದು ಅರ್ಥವಾಯಿತು. ಎದ್ದು ನಿಂತು ನಾನು ಅನ್ಯಾಯಗಳನ್ನು ಕಂಡಾಗಲೆಲ್ಲಾ ನನ್ನ ಮಿತಿಯೊಳಗೆ ಹಲವು ವರ್ಷಗಳ ಹಿಂದಿನಿಂದಲೂ ಬರೆಯುತ್ತಾ ಬಂದಿದ್ದೇನೆ. ಈಗಲೂ ಬರೆಯುತ್ತಿದ್ದೇನೆ. ಮುಂದೆಯೂ ಬರೆಯುತ್ತೇನೆ ಎಂದು ಹೇಳಿ ಕೂತುಕೊಂಡೆ. ಇಡೀ ಸಭೆ ನನ್ನ ಅವಮಾನಕ್ಕಾಗಿ ಕಾಯುತ್ತಿದ್ದಂತೆ ಕಂಡಿತು. ನನ್ನ ಶಾಲೆಯ ಶಿಕ್ಷಕಿಯರೂ ಚಕಾರವೆತ್ತಲಿಲ್ಲ. ಗುಸುಗುಸು ಪಿಸಪಿಸ ಮಾತಾಡುತ್ತಿದ್ದರೇ ವಿನಃ ಯಾರೂ ನನ್ನನ್ನು ಸಮರ್ಥಿಸಲಿಲ್ಲ. ೧೦-೧೫ ನಿಮಿಷ ಕಳೆದಿರಬಹುದು ಗೋಪಾಲಕೃಷ್ಣ ಮಾಸ್ಟ್ರು ಎದ್ದು ನಿಂತು ಬರೆಯುವುದು ಅವರ ಹಕ್ಕು. ಬರೆಯಬಾರದು ಎಂದು ಹೇಳುವ ಅಧಿಕಾರ ನಮಗಿಲ್ಲ. ಬಗ್ಗೆ ಅನಗತ್ಯ ಚರ್ಚೆ ಬೇಡ. ಸಭೆ ಮುಂದುವರಿಸಿ ಎಂದರು. ಸಭೆಯೊಳಗೆ ಬೆನ್ನು ಕಟ್ಟುವ ಸೋದರರು ಬೇಕು ಎಂದು ಜನಪದ ಹೆಣ್ಣು ಹಾಡಿದ್ದು ಇದಕ್ಕೇ ಇರಬೇಕು. ಇಂತಹವರನ್ನು ಕಂಡೇ ಇರಬೇಕು. ಕಾರ್ಯದರ್ಶಿ ನನ್ನ ಅಹಂಕಾರವನ್ನು ಇಳಿಸಬೇಕೆಂದೇ ನಿರ್ಧಾರ ಮಾಡಿ ಬಂದಿದ್ದರಂತೆ. ಇದು ನಂತರ ತಿಳಿಯಿತು. ಪತ್ರಿಕೆಗೆ, ಇಲಾಖೆಗೆ ವ್ಯವಸ್ಥೆಯ ಹುಳುಕುಗಳನ್ನು ನಾನು ಬರೆಯುವುದು ಅವರಿಗೆ ಅಹಂಕಾರವಾಗಿ ಕಂಡಿತ್ತು. ಇಂತಹ ಶಿಕ್ಷಕರಿಂದ ನಮ್ಮ ಮಕ್ಕಳು ಕಲಿಯುವುದೇನನ್ನು? ಯಾರಿಂದಲೂ ತಿದ್ದಲಾರದ ವ್ಯವಸ್ಥೆಯೊಂದಿದ್ದರೆ ಅದು ಶಿಕ್ಷಣ ಇಲಾಖೆ. ಯಾರನ್ನಾದರೂ ತಿದ್ದಬಹುದು ಆದರೆ ಶಿಕ್ಷಕರನ್ನಲ್ಲ ಎಂದು ಹಿರಿಯರು ಹೇಳಿದ್ದು ಇಂತಹವರನ್ನು ಕಂಡೇ ಇರಬೇಕು.

ಮುಲ್ಕಿಯ ಮೆಡಲಿನ್ ಶಾಲೆಯ ಕಟ್ಟಡವಿರುವುದು ಅಲ್ಲಿನ ಸ್ಮಶಾನದ ಪಕ್ಕದಲ್ಲಿ. ಸಿನಿಮಾದಲ್ಲಿ ಮಾತ್ರ ಕಂಡಿದ್ದ ಹೆಣ ಸುಡುವ ದೃಶ್ಯವನ್ನು ಕಣ್ಣಾರೆ ಕಂಡದ್ದು ನಾನು ಅಲ್ಲಿಯೇ. ಊರಿನ ಕಸ ತಂದು ಹಾಕಲು ಶಾಲೆಯ ಮುಂದೆ ಹಾದುಹೋಗುವ ರಸ್ತೆಯ ಇನ್ನೊಂದು ಪಾರ್ಶ್ವವನ್ನು ಆಗ ಆಯ್ಕೆ ಮಾಡಲಾಗಿತ್ತು. ಊರವರು ಒಂದಷ್ಟು ದಿನ ಹೋರಾಟ ಮಾಡಿದ ಮೇಲೆ ಸ್ಥಳ ಬದಲಾಯಿತು. ಶಾಲೆಯ ಮುಂದಿನ ಆಟದ ಮೈದಾನ, ಅದರಾಚೆ ಭತ್ತದ ಗದ್ದೆಗಳು. ಕಣ್ಣ ಮುಂದೇ ಹಸಿರೇ ಹಸಿರು. ಸಿಸ್ಟರ್ಸ್ನವರು ಪ್ರತಿ ವರ್ಷ ಬೇಸಾಯ ಮಾಡುತ್ತಿದ್ದರು. ತುಂಬೆ ಕಾಣೆಮಾರಿನ ಕೃಷಿ ಪರಿಸರದ ಬದುಕಿನ ನೆನಪುಗಳ ಚಿತ್ರ ಮಸುಕಾಗಿತ್ತು. ಅದು ೫೦ ವರ್ಷಗಳ ಬಳಿಕ ಹೊಸ ಬಣ್ಣ ತುಂಬಿ ನವೀಕರಣಗೊಂಡದ್ದು ಇಲ್ಲೇ. ೯೭ರಲ್ಲಿ ನಾನು ಅಲ್ಲಿಗೆ ಹೋದ ವರ್ಷ ಜೂನ್ ೨೭ರವರೆಗೂ ಮಳೆ ಮೋಡಗಳು ಮುನಿಸಿಕೊಂಡು ಒಂದು ಹನಿಯನ್ನೂ ಉದುರಿಸಿರಲಿಲ್ಲ. ಬಾವಿನೀರನ್ನು ಪಂಪ್ ಮೂಲಕ ಹಾಯಿಸುವ ವಿಫಲ ಸಾಹಸ ಕೈಗೊಂಡಿದ್ದರು. `ಮಾಲೀ ಸೀಂಚೆ ಸೌ ಗಡಾ ಋತು ಆವೇ ಫಲ್ ಹೋಯ್' ಎಂದು ಕಬೀರ ಹೇಳಿದ ಮಾತು ಸತ್ಯ. ವರ್ಷದ ಬೆಳೆ ಏನೇನೂ ಸುಖವಿಲ್ಲದಾಯಿತು. ಆಯಾಯ ಸಮಯಕ್ಕೆ ಸರಿಯಾಗಿ ಬರುವ ಮಳೆ, ಗಾಳಿ, ಬೆಳಕುಗಳಿಗನುಸಾರವಾಗಿಯೇ ಭೂಮಿ ಗಂಧವತಿಯಾಗಿ ಪುಷ್ಪವತಿಯಾಗಿ ಫಲವತಿಯಾಗುತ್ತಾಳೆ. ಗದ್ದೆಯ ಬದುವನ್ನು ದಾಟಿಯೇ ನನ್ನ ಮನೆಗೆ ಹೋಗುತ್ತಿದ್ದೆ. ಶಾಲೆಯ ಮುಂದಿನಿಂದ ಹಾದುಹೋಗುವ ಮಾರ್ಗದಲ್ಲೇ ಮುಂದೆ ಸಾಗಿದರೆ ಮುಲ್ಕಿ ವೆಂಕಟ್ರಮಣ ದೇವಸ್ಥಾನವಿದೆ. ಶಾಲೆಯ ಎದುರಿನಲ್ಲೇ ಪಾಳುಬಿದ್ದ ಜೈನ ಬಸದಿಯ ಅವಶೇಷಗಳಿವೆ. ನನ್ನ ಮನೆಯ ಪಕ್ಕದಲ್ಲೇ ಒಂದು ದೈವಸ್ಥಾನವಿದೆ. ಕಾರ್ನಾಡಿನಲ್ಲಿರುವ ಮಸೀದಿಯ ಬಾಂಗೂ, ಚರ್ಚಿನ ಗಂಟೆಯೂ ವೆಂಕಟ್ರಮಣ ದೇವಸ್ಥಾನದ ಪೂಜೆಯ ಗಂಟೆಯೂ ಕೇಳುವಷ್ಟು ಸಮೀಪದಲ್ಲಿ ನನ್ನ ಮನೆಯಿತ್ತು.
ಹಳ್ಳಿ ಪರಿಸರದ ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡುವ ಉದ್ದೇಶದಿಂದ ಬೆಥನಿ ಸಂಸ್ಥೆಯ ಸ್ಥಾಪಕರಾದ ಫಾ. ಆರ್.ಎಫ್.ಸಿ. ಮಸ್ಕರೇಞಸ್ ಅವರು ಇಲ್ಲಿ ಶಾಲೆಯನ್ನು ಪ್ರಾರಂಭ ಮಾಡಿದರಂತೆ.  ಶಾಲೆಯ ಆಸುಪಾಸಿನಲ್ಲಿ ಮೂರು ಇಂಗ್ಲಿಷ್ ಮಾಧ್ಯಮದ ಶಾಲೆಗಳು ಸ್ಥಾಪನೆಯಾದರೂ ಸಿಸ್ಟರ್ಸ್ನವರು ಇಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಯನ್ನು ಸ್ಥಾಪಿಸಲು ಮನಸ್ಸು ಮಾಡಿರಲಿಲ್ಲ. ಕಳೆದ ಐದಾರು ವರ್ಷಗಳಿಂದೀಚೆಗೆ ಕಿಲ್ಪಾಡಿಯಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆ ಪ್ರಾರಂಭಿಸಿದ್ದಾರೆ. ಇಂಗ್ಲಿಷ್ ಮಾಧ್ಯಮಕ್ಕೂ ಕಾನ್ವೆಂಟ್ ಎಂಬ ಪದಕ್ಕೂ ಅವಿನಾಭಾವ ಸಂಬಂಧವನ್ನು ನಮ್ಮ ಸಮಾಜ ಕಲ್ಪಿಸಿಕೊಂಡು ಬಿಟ್ಟಿತ್ತು. ಅಲ್ಲಿ ಕಲಿತರೆ ಮಾತ್ರ ಒಳ್ಳೆಯ ಶಿಕ್ಷಣ ಒಳ್ಳೆಯ ಇಂಗ್ಲಿಷ್ ಲಭಿಸುತ್ತದೆ ಎಂಬ ಭ್ರಮೆಯೂ ನಮ್ಮ ಜನಗಳಲ್ಲಿತ್ತು. ಆದುದರಿಂದ ಬೆಂಗಳೂರಿನಲ್ಲಿ ಖಾಸಗಿ ಶಾಲೆಯವರು ಯಾರೋ ಸೈಂಟ್ ಹೆಸರಿನಲ್ಲಿ ಕಾನ್ವೆಂಟ್ ಶಾಲೆ ಎಂದು ಬೋರ್ಡ್ ಹಾಕಿ ಅನ್ಯ ಧರ್ಮದವರಿಂದ ಶಾಲೆ ನಡೆಸುವ ಕುತಂತ್ರವೂ ನಡೆಯುತ್ತಿದೆ. ಪ್ರಾರಂಭ ಕಾಲದಲ್ಲಿ ಕ್ರೈಸ್ತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರಿಂದ ಹೊಗಳಿಕೆಯನ್ನು ಆಗ ಸಮಾಜ ನೀಡಿದ್ದು ಸಹಜವಾಗಿತ್ತು. ಉತ್ತಮ ಶಿಕ್ಷಣ ನೀಡುವ ಶಾಲೆ ಎಂದು ಖ್ಯಾತಿ ಗಳಿಸಲು ಶಾಲೆಯ ಕಟ್ಟಡಗಳಾಗಲೀ ಆಟದ ಮೈದಾನವಾಗಲೀ ಸಹಕರಿಸುವುದಿಲ್ಲ. ಸಮರ್ಥ ಮುಖ್ಯೋಪಾಧ್ಯಾಯರು, ಮಕ್ಕಳ ಮೇಲೂ ಶಿಕ್ಷಣದ ಮೇಲೂ ಪ್ರೀತಿಯಿರುವ ಶಿಕ್ಷಕರು ಮತ್ತು ಮಕ್ಕಳು ಇದ್ದರೆ ಸಾಕು. ಈಗ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಲ್ಲಾ ಇದೆ, ಆದರೆ ಮಕ್ಕಳೇ ಇಲ್ಲ. ಮುಲ್ಕಿಯ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಉಚಿತ ಶಿಕ್ಷಣವನ್ನು ಪಡೆಯುವುದು ತಮ್ಮ ಅಂತಸ್ತಿಗೆ ಕೊರತೆ ಎಂದೇ ಭಾವಿಸುವವರ ಸಂಖ್ಯೆ ಹೆಚ್ಚುತ್ತಿರುವುದು ಶಿಕ್ಷಣದ ಉನ್ನತಿಯೇ ಅವನತಿಯೇ ನನಗೆ ಗೊತ್ತಾಗುತ್ತಿಲ್ಲ.

ಹಿಂದೆ ಅಲ್ಲಿ ನಾನಿರುವಾಗ ಪಾವಂಜೆ, ಸುರತ್ಕಲ್, ಹೆಜಮಾಡಿ ಮುಂತಾದ ಕಡೆಗಳಿಂದ ಬರುವ ಮಕ್ಕಳೂ ಇದ್ದರು. ಪಾವಂಜೆಯಿಂದ ಬರುವ ಹುಡುಗನೊಬ್ಬ ತನ್ನ ತಂದೆ ತೀರಿಹೋದ ಕಾರಣ ಹೇಳಿ ಶಾಲೆ ತಪ್ಪಿಸುತ್ತಿದ್ದ ಘಟನೆ ನೆನಪಾಗುತ್ತದೆ. ನಾನು ಅವನಲ್ಲಿ ವಿಚಾರಿಸಿದಾಗ ಮುಕ್ಕ ಚರ್ಚ್ನಲ್ಲಿ ಶವಸಂಸ್ಕಾರ ಮಾಡಿದ್ದನ್ನು ಹೇಳಿದ್ದ. ನಾನು ಮತ್ತು ಮುಖ್ಯೋಪಾಧ್ಯಾಯಿನಿ ಅವನ ಮನೆ ಹುಡುಕಿಕೊಂಡು ಹೋದಾಗ ವಸ್ತುಸ್ಥಿತಿಯನ್ನು ಗಮನಿಸಿದಾಗ ನಾವು ಮೂರ್ಛೆ ಹೋಗುವುದೊಂದೇ ಬಾಕಿ. ಅವನ ಮುಂದೆ ತಾಯಿ ನಿಂತಿರುವಾಗ ತುಟಿ ಬಿಚ್ಚಲು ಸಾಧ್ಯವಾಗದೆ ಅವರನ್ನು ಶಾಲೆಗೆ ಕರೆಸಿ ಮಾತಾಡಿದಾಗ ತಾಯಿಯ ದುಃಖದ ಕಟ್ಟೆ ಒಡೆಯಿತು. ಕುಡುಕ ತಂದೆ ದನಕ್ಕೆ ಬಡಿದಂತೆ ಬಡಿದ ಸಿಟ್ಟಿಗೆ ಮಗ ತಂದೆಯನ್ನು ಮಾನಸಿಕವಾಗಿ ಕೊಂದು ಚರ್ಚಿನಲ್ಲಿ ಹೂತುಹಾಕಿದ್ದ. ಹೆತ್ತವರ ಮೇಲೆ ಮಕ್ಕಳು ದ್ವೇಷ ಸಾಧಿಸುವ ಹಲವು ಘಟನೆಗಳನ್ನು ಕಂಡಿದ್ದೇನೆ. ಇದು ನಿಜವಾಗಿ ಅವಿಸ್ಮರಣೀಯ. ಅಷ್ಟಾಗಿಯೂ ಬಾಲಕ ಬಹಳ ಸೌಮ್ಯ ಸ್ವಭಾವದ ಹುಡುಗ. ಜಾಣ ಕೂಡಾ. ಐದನೆಯ ತರಗತಿಯಲ್ಲಿದ್ದ. ಅಂತಹ ಮಗುವೊಂದು ಮಟ್ಟಿಗೆ ರೋಷಗೊಳ್ಳಬೇಕಾದರೆ ತಂದೆಯ ಕ್ರೌರ್ಯ ಹೇಗಿರಬಹುದು? ದೌರ್ಜನ್ಯವನ್ನು ಎದುರಿಸಲಾಗದೆ ಅಸಹಾಯಕನಾದ ಮಗುವೊಂದು ರೀತಿ ಪ್ರತಿಕ್ರಿಯಿಸಿದ್ದು ವಿಶೇಷ. ಅದಕ್ಕೇ ಹೇಳುವುದು ಮಕ್ಕಳನ್ನು ತಿದ್ದುವ ಕೆಲಸವನ್ನು ಅಜ್ಜ ಅಜ್ಜಿಯರಿಂದಲೇ ಪ್ರಾರಂಭಿಸಬೇಕು ಎಂದು. ಇದು ಸಾಧ್ಯವೇ? ಇದು ಉತ್ತರವಿಲ್ಲದ ಪ್ರಶ್ನೆ.


ಮುಂದುವರಿಯಲಿದೆ

3 comments:

 1. Officials and the teachers opinion

  The insults teachers face from some officials of the department -- It is a big untold story. Almost every HM or even asst teachers have many big and small parts of the large saga.I myself have faced, and protested in my own way such situations. Ofetn, our own 'vritthi bandhavas', dont stand upright to defend their colleagues.
  One such incident:
  A state level officer came to our institution, at a very short notice,(using another visit, to add this an extra, and told us --to gather for a meeting--to discus and express our opinion syllabus!! Seirous topic with no preparation,that too done just as a katachara. "Yes yes come on, come on give your views I have no time" was the command. A colleague of mine Dr Nayak Roop Singh and myself wanted to utilize this opportunity despite the casual way it was given. We placed two valid points and they were simply snubbed. Dr Singh wanted to add a point He was simply heckled down can say. He even asked -- if this is the attitude why did you call a meeting of an academic nature.(Later he even wrote to a higher authority explaining the whole incident) The attitude of the official was casual and arrogant.
  I, as the Vice Principal then, was to propose the vote of thanks. I told my Principal "I wont do that."
  The whole staff, later supported my action as an innovative way of protest.The management also came to know and one of the committee members told me-"You did the right thing".
  But alas, that officer was invited as guest for one of the functions in the institution as the chief guest, within a week of the incident.!
  This is how things take place. Dedicated teachers like Ms B M Rohini must have seen many such incidents.
  One of the teachers in our area told me recently -about the ill tretment meted out to them by some of the officials, even when the teacher is good at work, polite and perfect in record work. Even national awardees are not spared -- the teacher said.
  Unless this attitude changes -- policy announcements and noble pronouncements have no meaning.
  Officials have their pressures and helpless situations. They tranfser it to teachers!
  Teachers days, awards and big shallow appreciations about teachers all look to be farceful unless the Government makes some basic changes in educational administration.

  ReplyDelete
 2. ಎಂದಿನಂತೆ ಉತ್ತಮ ಬರಹ... ಉಪೇಕ್ಷೆಯೋ, ವರ್ಗಾವಣೆಗಳ ಭಯವೋ ಅಥವಾ ಇನ್ಯಾವುದೋ ಅವ್ಯಕ್ತ ಭಯವೋ ಗೊತ್ತಿಲ್ಲ... ಅಂದೂ, ಇಂದೂ (ಹಾಗೂ ಮುಂದೂ!)’ಮೇಲಧಿಕಾರಿಗಳು’ ಎಂದಾಕ್ಷಣ ಉಸಾಬರಿಯೇ ಬೇಡ ಎಂದು ದೂರ ಸರಿಯುವವರೇ ಹೆಚ್ಚು. ಇಂತಹವರಲ್ಲಿ ಬಹು ಪಾಲು "ನಾವು ಬುದ್ಧಿವಂತರು" ಅಂತ ಹೇಳಿಕೊಳ್ಳುವ ಜನ. ಜೋಷಿಯವರ ಪ್ರತಿಕ್ರಿಯೆಯೇ ಇದಕ್ಕೊಂದು ಉತ್ತಮ ಉದಾಹರಣೆ.

  ReplyDelete
 3. Wonderful nimminda navugalu kaliyabekada pata aadeshtu bakiyagideyo nechina guruve

  ReplyDelete