26 April 2016

ಜ್ಞಾನದಾಹವೇ ಶಿಕ್ಷಣ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ತಾರು

ಬುದ್ಧಿಯ ಬೀಜ ಬಿತ್ತದಿದ್ದರೆ ಮುಳ್ಳಿನಗಿಡ ಬೆಳೆಯುತ್ತದೆ ಎಂಬ ಗಾದೆ ಮಾತೊಂದಿದೆ. ಮಕ್ಕಳಲ್ಲಿ ಬುದ್ಧಿಯ ಬೀಜ ನಿಸರ್ಗದತ್ತವಾಗಿ ಇರುತ್ತದೆ. ಅದಕ್ಕೆ ನೀರು, ಗಾಳಿ, ಬೆಳಕು, ಗೊಬ್ಬರ, ಪಾತಿ ಹಾಕಿ ಸರಿಯಾಗಿ ಚಿಗುರುವ ಅವಕಾಶವಷ್ಟೇ ಶಿಕ್ಷಕರು ನೀಡಬೇಕಾಗಿದೆ. ಮಕ್ಕಳಿಗೆ ನಾನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕೊಟ್ಟ ಮೇಲೆ ಅವರ ಗೊಂದಲಗಳನ್ನು ಮುಕ್ತವಾಗಿ ನನ್ನಲ್ಲಿ ಚರ್ಚಿಸತೊಡಗಿದರು. ಅವರ ಎಷ್ಟೋ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರಗಳಿರಲಿಲ್ಲ. ಕೆಲವು ಪುಸ್ತಕಗಳನ್ನು ಕೊಟ್ಟು ಅದನ್ನು ಓದಲು ತಿಳಿಸಿದೆ. ಒಬ್ಬಳು ಹುಡುಗಿಯಂತೂ ಕ್ರಿಸ್ತ, ಪೈಗಂಬರ್, ಬಸವಣ್ಣ, ಬುದ್ಧ, ಜಿನ ಇವರೆಲ್ಲ ಹುಟ್ಟದೇ ಇರುತ್ತಿದ್ದರೆ ಜಗತ್ತಿನಲ್ಲಿ ಇಷ್ಟೊಂದು ಭೇದಭಾವಗಳೇ ಇರುತ್ತಿರಲಿಲ್ಲ  ಅಲ್ಲವಾ ಟೀಚರ್ ಎಂದಾಗ ನಾನು ಒಂದು ಕ್ಷಣ ತಬ್ಬಿಬ್ಬಾದೆಅವಳ ಪ್ರಶ್ನೆ ತಳ್ಳಿಹಾಕುವಂತದ್ದಲ್ಲ. ಆದರೆ ಅವರೆಲ್ಲಾ ಹುಟ್ಟಿದ್ದರಿಂದ ಮನುಷ್ಯನ ಬೌದ್ಧಿಕ ಪ್ರಜ್ಞೆ ಸೂಕ್ಷ್ಮವಾಗಿದೆ. ಜಡ್ಡುಗಟ್ಟಿದ ಭಾವುಕತೆಯು ಹೊಸ ಬಣ್ಣ ತೊಟ್ಟು ಹೊಸ ಮುಖ ಹೊತ್ತು ನಿಂತಿದೆ ಎಂದು ತಿಳಿಸಿದೆ. ಮನುಷ್ಯನ ಎಲ್ಲಾ ದುಃಖ ನೋವುಗಳಿಗೆ ಮೇಲಿನಿಂದಲೇ ಉತ್ತರ ಲಭಿಸುತ್ತದೆಂಬ ಆಶೆ ಮಾತ್ರ ನಾವು ಇಟ್ಟುಕೊಳ್ಳಬಾರದು. ಪ್ರತಿಯೊಬ್ಬನನ್ನೂ ಕೈಹಿಡಿದು ಆಚೆ ದಡಕ್ಕೆ ಮುಟ್ಟಿಸಲು ಯಾರೂ ಇರುವುದಿಲ್ಲ. ಆದರೂ ನಾವು ಹೇಗಾದರೂ ಮಾಡಿ ನದಿಯನ್ನು ಪಾರು ಮಾಡುತ್ತೇವೆ. ಅಲ್ಲವಾ? ಸೃಷ್ಟಿಯಲ್ಲಿ ಪ್ರತೀ ಜೀವಿಗೂ ಆಹಾರವನ್ನು ಅದರ ಗೂಡಿಗೆ ತಂದು ಯಾರೂ ಹಾಕುವುದಿಲ್ಲ. ಪ್ರತೀ ಜೀವಿಯೂ ಕಷ್ಟಪಟ್ಟು ತಾನೇ ಹುಡುಕುತ್ತದೆ ಅಲ್ಲವೇ? ಹಾಗೆಯೇ ನಮ್ಮ ಭವಿಷ್ಯವನ್ನು ನಾವೇ ರೂಪಿಸಬೇಕು. ಅದಕ್ಕೆ ಬೇಕಾದ ಸವಲತ್ತುಗಳನ್ನು ನಾವೇ ಹುಡುಕಬೇಕು. ಕೆಟ್ಟವರೊಂದಿಗೆ ಸೇರಿ ನಾನು ಕೆಟ್ಟುಹೋದೆ ಎಂದು ಆರೋಪ ಹೊರಿಸುವ ಬದಲು ಕೆಟ್ಟದ್ದರ ಬಗ್ಗೆ ಎಚ್ಚರವಿರಬೇಕಾದುದು ಅಗತ್ಯವೆಂದು ವಿವರಿಸಿದೆ. ಎಲ್ಲವೂ ನಾವು ಹುಟ್ಟುವಾಗಲೇ ನಮ್ಮ ಹಣೆಯಲ್ಲಿ ವಿಧಿ ಬರೆದಿರುತ್ತಾನೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲವೆಂಬ ಮಾತು ಇದೆಯಲ್ಲಾ? ಕಳ್ಳನೊಬ್ಬ ಕದ್ದು ಸಿಕ್ಕಿಬಿದ್ದರೆ ಅವನಿಗೆ ಶಿಕ್ಷೆ ಯಾಕೆ? ವಿಧಿ ಬರೆದುದಕ್ಕೆ ಮನುಷ್ಯ ಪ್ರತಿಭಟಿಸುವುದು ತಪ್ಪಲ್ವಾ? ದೇವರು ಯಾರು? ಅವನನ್ನು ಯಾಕೆ ಪ್ರಾರ್ಥಿಸಬೇಕು? ಇಂತಹ ನೂರಾರು ಪ್ರಶ್ನೆಗಳು, ಗೊಂದಲಗಳು ಮಕ್ಕಳ ಮನಸ್ಸನ್ನು ಕೊರೆಯುತ್ತಿದ್ದುವು. ಅವುಗಳನ್ನು ಹಿರಿಯರಲ್ಲಿ ಕೇಳಿದರೆ ಅವರು ಉತ್ತರಿಸುತ್ತಿರಲಿಲ್ಲ. ಪ್ರಶ್ನೆ ಕೇಳುವ ಸ್ವಾತಂತ್ರ್ಯ ನಾನು ಕೊಟ್ಟಾಗ  ಮಕ್ಕಳು ಕೇಳಿದ ನಾನಾ ರೀತಿಯ ಪ್ರಶ್ನೆಗಳು ನನ್ನ ಅರಿವನ್ನು ಹೆಚ್ಚಿಸಿತು. ದೇವರನ್ನು ಅದು ಕೊಡು, ಇದು ಕೊಡು ಎಂದು ಕಣ್ಣೀರಿಟ್ಟು ಬೇಡುತ್ತಿದ್ದ ನಾನು ಈಗ ಅವನ ತಂಟೆಗೇ ಹೋಗುತ್ತಿರಲಿಲ್ಲ. ಹಾಗಿರುವಾಗ ಮಕ್ಕಳಿಗೆ ನನ್ನ ನಿಲುವನ್ನು ಹೇರುವುದು ಸರಿಯೇ ಎಂಬ ತಾಕಲಾಟ ನನ್ನಲ್ಲೂ ಉಂಟಾಯಿತು. ದೇವರಲ್ಲಿ ಅದು ಕೊಡು ಇದು ಕೊಡು ಎಂದು ಕೇಳುವಾಗ ಒಂದು ವೇಳೆ ದೇವರೇ ಪ್ರತ್ಯಕ್ಷನಾಗಿ ನಾನು ಕೊಟ್ಟ ಬುದ್ಧಿಯನ್ನು ಏನು ಮಾಡಿದೆ? ಎಂದು ಕೇಳಿದರೆ ಏನು ಹೇಳುತ್ತೀರಿ ಎಂದು ಕೇಳಿದೆ. ನಮ್ಮಲ್ಲಿರುವ ಅಪಾರ ಶಕ್ತಿಯನ್ನು, ಪ್ರತಿಭೆಯನ್ನು ಸಾಮರ್ಥ್ಯವನ್ನು ಅಡಗಿಸಿಟ್ಟು ಕಂಜೂಸಿಗಳಂತೆ ಬೇಡುವುದು ದಡ್ಡತನವಾಗುತ್ತದೆ ಎಂದು ತಿಳಿಸಿದೆ. ಹೀಗೆ ನನ್ನಲ್ಲಿ ಏನಾದರೂ ಯಾವಾಗಲೂ ಪ್ರಶ್ನೆ ಕೇಳುವ ಹುಡುಗಿಯರ ಒಂದು ಸಣ್ಣ ಗುಂಪೇ ಇತ್ತು. ಧಾರ್ಮಿಕ ಶಿಕ್ಷಣವನ್ನೂ ಕಲಿಸುವ (ಕ್ರೈಸ್ತ ಮಕ್ಕಳಿಗೆ ಮಾತ್ರ) ಒಂದು ವಿದ್ಯಾಸಂಸ್ಥೆಯಲ್ಲಿ ನಾನು ಮಕ್ಕಳನ್ನು ಹೀಗೆ ಸಂವಾದಕ್ಕೆಳೆಯುವುದು ಬಹಳ ಅಪಾಯಕಾರಿ ಎಂದು ನನಗೂ ಗೊತ್ತು. ಎಚ್ಚರವನ್ನುಳಿಸಿಕೊಂಡೇ ಮಕ್ಕಳಲ್ಲಿ ಸಾಧ್ಯವಾದಷ್ಟು ವೈಚಾರಿಕ ಚಿಂತನೆಗಳನ್ನು ಬಿತ್ತಲು ಪ್ರಯತ್ನಿಸಿದೆ. ಪ್ರಶ್ನೆಗಳೇ ಹುಟ್ಟದ ಮನಸ್ಸಿನಿಂದ ಯಾವುದನ್ನೂ ಚಿಗುರಿಸಲು ಸಾಧ್ಯವಿಲ್ಲವೆಂದು ದೃಢವಾಗಿ ನಂಬಿದವಳು ನಾನು.


ಹೀಗಿರುವಾಗಲೇ ಒಮ್ಮೆ ಫಾದರ್ ಒಬ್ಬರು ಶಾಲೆಯಲ್ಲಿ ಒಂದು ಮ್ಯಾಜಿಕ್ ಪ್ರದರ್ಶನ ನೀಡಿದರು. ಅದಕ್ಕೆ ಬೈಬಲ್ ಮ್ಯಾಜಿಕ್ ಎಂಬ ಹೆಸರು ನೀಡಲಾಗಿತ್ತು. ಬೈಬಲ್ ಕಥೆಯಾಧಾರಿತ ಒಂದೊಂದೇ ಕೈಚಳಕಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸಿದರು. ಯೇಸುಕ್ರಿಸ್ತನು ದ್ರಾಕ್ಷಾರಸವನ್ನು ಸೃಷ್ಟಿ ಮಾಡಿದ ಪವಾಡವನ್ನೂ ಮಾಡಿ ತೋರಿಸಿದರು. ಪ್ರದರ್ಶನ ಮುಗಿದ ಮೇಲೆ ನಾನು ನನ್ನ ಕ್ರೈಸ್ತ ಸಹೋದ್ಯೋಗಿಗಳಲ್ಲಿ ಪ್ರಶ್ನಿಸಿದೆ. ಸಿಸ್ಟರುಗಳಲ್ಲಿ ಪ್ರಶ್ನಿಸಿದೆ. ಕುದ್ರೋಳಿ ಗಣೇಶ್ ಅಥವಾ ಪಿ.ಸಿ. ಸರ್ಕಾರ್ ಹೀಗೆ ದ್ರಾಕ್ಷಾರಸವನ್ನು ಸೃಷ್ಟಿಸಿದರೆ ನಿಮ್ಮ ಮನಸ್ಸಿನಲ್ಲಿ ಯಾವ ಭಾವ ಮೂಡುತ್ತಿತ್ತುಆಗ ಜಿಗ್ಗನೆ ಅವರ ಮನಸ್ಸಿಗೆ ಹೊಳೆಯಿತು. ನನ್ನ ತರಗತಿಯ ಹುಡುಗಿಯೊಬ್ಬಳು ಯೇಸುಕ್ರಿಸ್ತನು ಇಷ್ಟೇ ಫಾದರ್ ಮಾಡಿದ್ದನ್ನೇ ಮಾಡಿದ್ದಾ ಎಂದು ಕೇಳಿದರೆ ಏನು ಹೇಳುತ್ತೀರಿ. ಕ್ರಿಸ್ತನನ್ನು ನೀವು ಯಾವ ಮಟ್ಟಕ್ಕೆ ಇಳಿಸಿದ್ದೀರಿ ಯೋಚಿಸಿದ್ದೀರಾ ಎಂದಾಗ ನನ್ನ ಸಹೋದ್ಯೋಗಿಗಳು ನೀವು ಹೇಳಿದಂತೆ ನಾವು ಯೋಚಿಸಿರಲೇ ಇಲ್ಲ. ನೀವು ನಿಮ್ಮ ಅನಿಸಿಕೆಗಳನ್ನು ಬರೆದು ಬಿಷಪ್ ಅವರಿಗೆ ತಿಳಿಸಿ ಎಂದರು. ನಾನು ಹಾಗೆ ಮಾಡಿದೆ. ಬಹುಶಃ ಪತ್ರ ಅಲ್ಲಿನ ಕಸದ ಬುಟ್ಟಿಗೆ ಸೇರಿರಬೇಕು. ಹಾಗೆ ಮಾಡದೆ ಅವರಿಗೆ ನಿರ್ವಾಹವಿರಲಿಲ್ಲ. ಜಗತ್ತಿನ ಎಲ್ಲ ಮತಗಳೂ ನಂಬಿಕೆಯ ಬಲದಿಂದಲೇ ಉಳಿದಿವೆ. ಅದನ್ನು ಪ್ರಶ್ನಿಸುವುದು, ಅಲ್ಲಾಡಿಸುವುದು ಪಾಪಿಷ್ಟರ, ಕಾಫಿರರ, ಸೈತಾನನ ಕೆಲಸವೆಂದೇ ಶತಮಾನಗಳಿಂದ ನಂಬುತ್ತಾ ಬಂದಿದ್ದೇವೆ. ಹಾಗಿರುವಾಗ ನನ್ನ ಪತ್ರಕ್ಕೆ ದುರ್ಗತಿ ಬಂದಿದ್ದರೆ ತಪ್ಪಿಲ್ಲ ಅಲ್ಲವೇ?

ಇದಾಗಿ ಒಂದೆರಡು ವರ್ಷ ಕಳೆದು ನಾನು ಮುಲ್ಕಿ ಮೆಡಲಿನ್ ಶಾಲೆಗೆ ವರ್ಗವಾಗಿ ಹೋದಾಗ ಅಲ್ಲಿಗೂ ಇದೇ ಬೈಬಲ್ ಮ್ಯಾಜಿಕ್ ಮಾಡಲು ಅದೇ ಫಾದರ್ ಬಂದರು. ಕಾರ್ಯಕ್ರಮ ಮುಗಿದ ಮೇಲೆ ಅವರನ್ನೇ ಕಂಡು ಮಾತಾಡಿದೆ. ಅವರಿಗೆ ನಾನು ಪ್ರಶ್ನೆ ಕೇಳಿದ್ದೇ ಆಶ್ಚರ್ಯ. ``ಯಾಕೆ ಹಾಗೆ ಕೇಳುತ್ತೀರಿ? ಪ್ರಾಚೀನ ಕಾಲದಿಂದಲೂ ಧಾರ್ಮಿಕ ಪ್ರಚಾರ ಮ್ಯಾಜಿಕ್ ತಂತ್ರದ ಮೂಲಕವೇ ನಡೆಯುತ್ತಿತ್ತು. ಸನ್ಯಾಸಿಗಳು ಜಾತ್ರೆ, ಸಂತೆ ಮತ್ತು ಜನರು ಸೇರುವಲ್ಲೆಲ್ಲಾ ಇದನ್ನು ಪ್ರದರ್ಶಿಸುತ್ತಿದ್ದರು. ಅದನ್ನೇ ಕಲಿತು ಮಾಡಿದೆ'' ಎಂದು ನಿರಾಳವಾಗಿ ಹೇಳಿದರು. ಈಗ ಮ್ಯಾಜಿಕ್ ಮಾಡುವ ಮೂಲಕ ಕ್ರಿಸ್ತನನ್ನು ಒಬ್ಬ ಸಾಮಾನ್ಯ ಡೊಂಬರಾಟದವನ ಮಟ್ಟಕ್ಕೆ ಇಳಿಸಿದಂತೆ ನಿಮಗೆ ಕಾಣುತ್ತಿಲ್ಲವೇ? ಎಂದೆ. ಧಾರ್ಮಿಕ ನಂಬಿಕೆಯುಳ್ಳವರಿಗೆ ಹಾಗೆ ಕಾಣಲು ಸಾಧ್ಯವಿಲ್ಲ ಎಂದರು. ಅಲ್ಲಿಗೆ ನನ್ನ ಮಾತುಗಳು ಬಂದಾದುವು. ವಾದ ಬೆಳೆಸುವುದು ನನಗೂ ಇಷ್ಟವಿರಲಿಲ್ಲ. ಅವರಿಗೂ ಇದು `ಪೆಟ್ಟುಕಮ್ಮಿ' ಕೇಸು ಎಂದು ಮನವರಿಕೆ ಮಾಡಿಕೊಂಡರೇನೋ?

ಧಾರ್ಮಿಕ ಶಿಕ್ಷಣವಿಲ್ಲದ್ದರಿಂದಲೇ ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎಂಬುದು ಬಹುತೇಕ ಮಂದಿಯ ಆರೋಪ. ಅದರಲ್ಲೂ ಧಾರ್ಮಿಕ ಗುರುಗಳು, ಸ್ವಾಮಿಗಳು ಇದನ್ನು ಮತ್ತೆ ಮತ್ತೆ ದೊಡ್ಡ ಸ್ವರದಲ್ಲಿ ಘೋಷಿಸುತ್ತಾರೆ. ನಾನು ಕ್ರೈಸ್ತ ಸಮುದಾಯದ ಮುಸ್ಲಿಂ ಸಮುದಾಯದ ಮಕ್ಕಳು ಹೆಚ್ಚಿರುವ ಶಾಲೆಯಲ್ಲಿ ಕಲಿಸಿದ ಅನುಭವದಿಂದ ಕಂಡುಕೊಂಡ ಸತ್ಯ ಬೇರೆಯೇ ಇದೆ. ಅವರು ಕಲಿತ ಧಾರ್ಮಿಕ ಶಿಕ್ಷಣವು ಅವರನ್ನು ಸುಳ್ಳು ಹೇಳದಂತೆ, ಕದಿಯದಂತೆ, ವಂಚನೆ ಮಾಡದಂತೆ ತಡೆಯುವುದಿಲ್ಲ. ಯಾವ ಧಾರ್ಮಿಕ ಶಿಕ್ಷಣವೂ ಇಲ್ಲದ ಮಕ್ಕಳ ನಡತೆಯಲ್ಲೂ ಧಾರ್ಮಿಕ ಶಿಕ್ಷಣ ಪಡೆದ ಮಕ್ಕಳ ವರ್ತನೆಯಲ್ಲೂ ಎಳ್ಳು ಕಾಳಿನಷ್ಟು ವ್ಯತ್ಯಾಸವಿಲ್ಲ. ಇದೇಕೆ ಹೀಗೆ? ಮಕ್ಕಳು ಉಪದೇಶವನ್ನು ಕಣ್ಣಿನಿಂದ ಕೇಳುತ್ತಾರೆಂಬ ಸತ್ಯ ಗೊತ್ತಾಯಿತು. ಬಾಲ್ಯದ ಮನೆಯ ವಾತಾವರಣ, ದಾರಿದ್ರ್ಯ ಇತ್ಯಾದಿಗಳು ಕೂಡಾ ಮಕ್ಕಳಲ್ಲಿ ಕೆಲವು ಕೆಟ್ಟ ಗುಣಗಳನ್ನು ಪ್ರಚೋದಿಸುತ್ತವೆ. ಶಾಲೆಯಲ್ಲಿ ಆಗಾಗ ಮಕ್ಕಳ ಚೀಲದಿಂದ ಹಣ, ಪೆನ್ನು, ಪೆನ್ಸಿಲುಗಳು ಮಾಯವಾಗುತ್ತಿದ್ದುವು. ನಮಗೆ ಅದನ್ನು ಪತ್ತೆ ಹಚ್ಚಲು ಕಷ್ಟವಾಗುತ್ತಿತ್ತು. ನೀವೇ ನಿಮ್ಮ ವಸ್ತುಗಳನ್ನು ಜೋಪಾನ ಮಾಡಿ ಎಂದು ಬುದ್ಧಿ ಹೇಳುವುದಷ್ಟೇ ನಮ್ಮಿಂದ ಸಾಧ್ಯವಾಗುತ್ತಿತ್ತು.

ಒಂದು ದಿನ ನನ್ನ ಪರ್ಸಿನಿಂದ ಐದು ರೂಪಾಯಿ ಹಣ ಕಾಣೆಯಾಯಿತು. ನನ್ನದೇ ಲೆಕ್ಕ ತಪ್ಪಿರಬೇಕೆಂದು ಸುಮ್ಮನಾದೆ. ಮರುದಿನ ಹತ್ತು ರೂಪಾಯಿ ಕಾಣೆಯಾಯಿತು. ನಾನು ಮಕ್ಕಳಿಗೆ ಹೇಳಿದಂತೆ ಜಾಗ್ರತೆ ಮಾಡಿದೆ. ನನ್ನ ಸಹೋದ್ಯೋಗಿ ಲೀನಾ ಟೀಚರ್ ಪರ್ಸಿನಿಂದಲೂ ಹಣ ಕಳುವಾಯಿತು. ಅದು ನನಗಿಂತ ಸ್ವಲ್ಪ ದೊಡ್ಡ ಮೊತ್ತವಾದುದರಿಂದ ನಾವು ಎಚ್ಚರಾದೆವು. ಮಕ್ಕಳನ್ನು ಒಟ್ಟು ಸೇರಿಸಿ ಹೀಗೆ ಆಗಿದೆ, ಕ್ಲಾಸಿಗೆ ಹೊರಗಿನವರು ಯಾರೂ ಬಾರದ ಕಾರಣ ಆರೋಪ ನಿಮ್ಮ ಮೇಲೆಯೇ ಬೀಳುತ್ತದೆ. ಯಾರಾದರೂ ತೆಗೆದಿದ್ದರೆ ಹಣ ಹಿಂತಿರುಗಿಸಿ ನಾವು ನಿಮಗೆ ಯಾವ ರೀತಿಯ ಶಿಕ್ಷೆ ನೀಡುವುದಿಲ್ಲ. ಹೆಸರನ್ನು ಬಹಿರಂಗಪಡಿಸುವುದಿಲ್ಲ. ಇಷ್ಟರವರೆಗೆ ಮಕ್ಕಳಾದ ನಿಮ್ಮ ಮೇಲೆ ನಮಗೆ ತುಂಬಾ ವಿಶ್ವಾಸವಿತ್ತು. ಯಾರೋ ಒಬ್ಬರಿಂದ ಇಡೀ ಕ್ಲಾಸಿಗೆ ಕೆಟ್ಟ ಹೆಸರು ಬರುವುದು ಸರಿಯಲ್ಲವೆಂದು ಭಾವಿಸಿದ್ದೇನೆ. ಹೀಗೆ ಒಂದು ಹತ್ತು ನಿಮಿಷ ಎಲ್ಲಾ ಮಕ್ಕಳನ್ನೂ ಸೇರಿಸಿ ಒಂದು ಸಣ್ಣ ಪ್ರವಚನ ನೀಡಿದೆ. ಎಲ್ಲ ಪಾಠಗಳಲ್ಲಿ ಸೊನ್ನೆ ಅಂಕ ಪಡೆದ ಮಗುವಿನ ಮುಖ ಕಳೆಗುಂದಿ ಮುದುಡಿದಂತೆ ನನಗೆ  ಅವರ ಮುಖ ಕಂಡಿತು. ದುಃಖದ ಕಡಲಿನ ಭೋರ್ಗರೆತ ಅವರ ಕಣ್ಣುಗಳಲ್ಲಿ ಮೊರೆಯುವುದು ನನಗೆ ಕಾಣುತ್ತಿತ್ತು, ಕೇಳುತ್ತಿತ್ತು.

ನಾಲ್ಕೈದು ದಿನಗಳ ಬಳಿಕ ಮಧ್ಯಾಹ್ನ ನಾವು ಶಿಕ್ಷಕಿಯರು ಸಾಯನ್ಸ್ ಲ್ಯಾಬ್ನಲ್ಲಿ ಊಟ ಮಾಡುತ್ತಿರುವಾಗ ಪೂರ್ಣಿಮಾ ಮತ್ತು ಅವಳ ಗೆಳತಿಯರು ಓಡೋಡಿ ಬಂದು `ಟೀಚರ್ ಕಳ್ಳ ಸಿಕ್ಕಿದ' ಎಂದು ಹುಡುಗನೊಬ್ಬನನ್ನು ತಂದು ಎದುರು ನಿಲ್ಲಿಸಿದರು. ಲೋಕವನ್ನೇ ದಿಗ್ವಿಜಯ ಮಾಡಿದಂತಹ ಹೆಮ್ಮೆ ಅವರ ಮುಖದಲ್ಲಿತ್ತು. ಅವರನ್ನು ಕಳಿಸಿ ಹುಡುಗನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಳಿದಾಗ ಅವನು ತಿಂಡಿ ತಿನ್ನುವುದಕ್ಕಾಗಿಯೇ ಕದಿಯುತ್ತಿದ್ದುದು ಮತ್ತು ತಿಂಡಿಯನ್ನು ಗೆಳೆಯರಿಗೆಲ್ಲಾ ಹಂಚಿ ತಿನ್ನುತ್ತಿದ್ದುದು ಪರಿಶೀಲಿಸಿದಾಗ ತಿಳಿಯಿತು. ಮಧ್ಯಾಹ್ನ ಬುತ್ತಿಯೂಟವನ್ನು ಹಾಗೆಯೇ ಉಳಿಸಿ ಇಲ್ಲವೇ ಚೆಲ್ಲಿ ಹೀಗೆ ಕದ್ದ ಹಣದಿಂದ ಹೋಟೇಲಿನ ತಿಂಡಿಗಳನ್ನು ತಿಂದು ಹಸಿವು ಇಂಗಿಸಿಕೊಳ್ಳುತ್ತಿದ್ದ. ಅವನು ಸತ್ಯ ಹೇಳಿದುದನ್ನು ಮೆಚ್ಚಿ ಬುದ್ಧಿ ಹೇಳಿ ಕಳಿಸಿದೆವು. ಅವನು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವ ಐದನೇ ತರಗತಿಯ ಹುಡುಗ. ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ನಮ್ಮ ತರಗತಿಯಿರುವ ಕಟ್ಟಡಕ್ಕೆ ಬಂದು ಕೆಲಸ ಮಾಡುತ್ತಿದ್ದ. ಅವನು ಸತ್ಯ ಒಪ್ಪಿಕೊಂಡದ್ದು ನಮಗೂ ನನ್ನ ಮಕ್ಕಳಿಗೂ ಸಂತೋಷವಾಯಿತು.

ತಮ್ಮ ಮೇಲೆ ಬಂದಂತಹ ಕಳಂಕವನ್ನು ತೊಡೆದು ಹಾಕಲು ಹೆಣ್ಣುಮಕ್ಕಳು ಊಟಕ್ಕೆ ಹೋಗದೆ ಸರದಿಯಂತೆ ಕಾದರು. ಹೇಗೆ ಗೊತ್ತೇ? ನಾವು ಶಿಕ್ಷಕಿಯರು ಕುಳಿತುಕೊಳ್ಳುವ ಸ್ಟಾಫ್ ರೂಮಿನ ವೆರಾಂಡಕ್ಕೆ ಮೇಲೆ ಮರದ ಮುಚ್ಚಿಗೆಯಿತ್ತು. ಮುಚ್ಚಿಗೆಯ ಹಲಗೆಗಳ ಮಧ್ಯೆ ಎಡೆಯಿತ್ತು. ಎಡೆಯಿಂದ ಕೆಳಗಿನ ನಮ್ಮ ರೂಮಿನ ಡೆಸ್ಕುಗಳು ಕಾಣುತ್ತಿದ್ದುವು. ಹಾಗೆ ಕಾದು ಕೂತಾಗ ಹುಡುಗ ಬಂದು ಟೀಚರ ಡೆಸ್ಕನ್ನು ತೆರೆದು ಪರ್ಸ್ ತೆರೆದುದನ್ನು ಕಂಡ ಕೂಡಲೇ ಕೆಳಗೆ ಸನ್ನೆ ಮಾಡಿದರು. ಇದಕ್ಕೆ ಕಾಯುತ್ತಿದ್ದವಳೊಬ್ಬಳು ತಕ್ಷಣ ಓಡಿಬಂದು ಅವನನ್ನು ಹಿಡಿದು ನಿಲ್ಲಿಸಿದಳು. ಅವನು ಕೊಸರಾಡಬೇಕಾದರೆ ಅಷ್ಟರಲ್ಲಿ ಮೇಲೆ ಹಲಗೆಯೆಡೆಯಿಂದ ಕಣ್ಣಿಟ್ಟು ಕಾಯುತ್ತಿದ್ದವರೂ ಓಡಿ ಬಂದು ಅವನಿಗೆ ಮುತ್ತಿಗೆ ಹಾಕಿದರು. ಗೆದ್ದ ಸಂಭ್ರಮದಿಂದ ಒಂದು ಸಣ್ಣ ಹಿಂಡೇ ಅವನನ್ನು ಹಿಂಬಾಲಿಸಿತು. ನಾವು ಮಧ್ಯಾಹ್ನ ಊಟ ಮಾಡುತ್ತಿದ್ದ ಸಾಯನ್ಸ್ ಲ್ಯಾಬಿಗೆ ಬಂದು ಖುಷಿಯಲ್ಲಿ ಬೀಗಿದ ಮಕ್ಕಳ ಮುಖದ ಬೆಳಕು ಈಗಲೂ ನನ್ನ ಕಣ್ಣಿಗೆ ಕಾಣುತ್ತಿದೆ. ತಮ್ಮ ಗೆಳತಿಯರ ಹಣ ಕದ್ದಿದ್ದರೆ ಅವರು ರೀತಿಯಲ್ಲಿ ಬೇಹುಗಾರಿಕೆ ನಡೆಸುತ್ತಿರಲಿಲ್ಲ. ನಮ್ಮ ಟೀಚರ ಪರ್ಸಿನಿಂದ ಹಣ ಕಳುವಾಗಿದೆ ಎಂಬ ಅವಮಾನವನ್ನು ಮಕ್ಕಳಿಂದ ಸಹಿಸಲು ಆಗಲಿಲ್ಲ. ನಿಜ ಹೇಳಬೇಕೆಂದರೆ ಆಮೇಲೆ ಕ್ಲಾಸಿನ ಮಕ್ಕಳಿಂದ ಕಳವಿನ ಆರೋಪವೇ ಬರಲಿಲ್ಲ. ಕದಿಯುವುದು ದೊಡ್ಡ ತಪ್ಪಲ್ಲ. ತಪ್ಪನ್ನು ಒಪ್ಪಿಕೊಳ್ಳದಿರುವುದು ದೊಡ್ಡ ತಪ್ಪು ಎಂದು ಆಗಾಗ ಹೇಳುತ್ತಿದ್ದೆ. ಸುಳ್ಳು ಹೇಳುವುದು ಮಹಾಪಾಪವೆಂದು ಎಚ್ಚರಿಸುತ್ತಿದ್ದೆ. ಮಹಾತ್ಮಾ ಗಾಂಧೀಜಿ ಬಾಲ್ಯದಲ್ಲಿ ಗಾಂಧೀಜಿಯ ಜೀವನದಲ್ಲಿ ನಡೆದ ಘಟನೆಗಳನ್ನು ಹೇಳುತ್ತಾ ಪ್ರಾಮಾಣಿಕತೆಯ ಮಹತ್ವ ವಿವರಿಸಿ ಅರ್ಥವಾಗುವಂತೆ ಹೇಳಿದೆ. ಹದಿಹರೆಯಕ್ಕೆ ಸಿದ್ಧವಾಗುವ ಪ್ರಾಯದ ಮಕ್ಕಳ ಮನಸ್ಸು ತುಂಬಾ ಗೊಂದಲದಲ್ಲಿರುತ್ತದೆ. ದೈಹಿಕ ಪರಿವರ್ತನೆ, ಮಾನಸಿಕ ಪರಿವರ್ತನೆಗಳಾಗುವ ಕಾಲದಲ್ಲಿ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಬೇಕಾಗುತ್ತದೆ. ವಯಸ್ಸಿನ ಮಕ್ಕಳು ತೀರಾ ಒರಟರಂತೆ ವರ್ತಿಸುವುದೂ ಇದೆ. ತೀರಾ ನಿರಾಶರಾಗಿ ಬದುಕಿನ ಮೇಲಿನ ಆಸಕ್ತಿಯನ್ನೇ ಕಳಕೊಳ್ಳುವುದೂ ಇದೆ. ಮಕ್ಕಳ ಸೃಷ್ಟಿಶೀಲ ಶಕ್ತಿ ಮತ್ತು ಪ್ರತಿಭೆಗಳು ಸರಿಯಾದ ಮಾರ್ಗದರ್ಶನವಿದ್ದರೆ ಅರಳುವುದು. ಇದೇ ಸಮಯದಲ್ಲಿ ಅದು ಲಭ್ಯವಾಗದಿದ್ದರೆ ಕಮರಿ ಹೋಗುವುದೂ ಇದೇ ಪ್ರಾಯದಲ್ಲಿ. ಇಂತಹ ಸೂಕ್ಷ್ಮಗಳನ್ನು ಗಮನಿಸುತ್ತಾ ಹೋದಂತೆಲ್ಲಾ ನನ್ನೊಳಗಿನ ಮಾಸ್ತರಿಕೆಯ ಗತ್ತು ನಾಶವಾಗಿ ಆಪ್ತ ಸಮಾಲೋಚಕಿಯ ಕರ್ತವ್ಯಪ್ರಜ್ಞೆ ಜಾಗೃತವಾಯಿತು. ಮಕ್ಕಳ ಎಂತಹ ಸಮಸ್ಯೆಗಳಿದ್ದರೂ ಪರಿಹರಿಸುವಷ್ಟು ಮಟ್ಟಿಗೆ ನಾನು ಪರಿಣತಳಾದುದು ಹೆಣ್ಣುಮಕ್ಕಳು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಗಳಿಂದ ಎಂಬುದಂತೂ ಸತ್ಯ. ಒಟ್ಟಾರೆಯಾಗಿ ನನ್ನ ಕಾಲೂ ನೆಲದ ಮೇಲೆ ನಿಂತಿದ್ದು ಮಕ್ಕಳ ಕಾಲುಗಳೂ ಮಣ್ಣಿನ ಮೇಲೆ ಊರುವಂತೆ ಮಾಡುವ ಸಣ್ಣ ಪ್ರಯತ್ನ ಮಾಡಿದ್ದೇನೆಂಬ ನಂಬಿಕೆ ಇದೆ.

ಮುಂದುವರಿಯಲಿದೆ

No comments:

Post a Comment