15 April 2016

ಇತಿಹಾಸದ ಮರುಕಳಿಕೆ

ಜಿ.ಎನ್.ಅಶೋಕವರ್ಧನನ ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಅಧ್ಯಾಯ ಎಂಟು

[ಜಿಟಿನಾ ಸಂಪಾದಕೀಯ ಟಿಪ್ಪಣಿ: ಸರಕಾರೀ ಸಂಸ್ಥೆಗಳಿರುವುದು ಜನ ಸೇವೆಗಾಗಿಯೇ ಹೊರತು ಜನರಿರುವುದು ಈ ಸಂಸ್ಥೆಗಳನ್ನು ಬೆಳೆಸಿ ಪೋಷಿಸಲೆಂದಲ್ಲ. ಪುಸ್ತಕೋದ್ಯಮಕ್ಕೆ ಸಂಬಂಧಿಸಿದ ನಮ್ಮ ಎಲ್ಲ ಸಾರ್ವಜನಿಕ ಸಂಸ್ಥೆಗಳೂ (ವಿರಳಾತಿವಿರಳ ಅಪವಾದಗಳ ವಿನಾ) ಈ ಪ್ರಾಥಮಿಕ ನಿಯಮವನ್ನೂ ಅರಿಯದಿರುವುದು ಮಾತ್ರವಲ್ಲ, ಜನರಿರುವುದೇ ತಮ್ಮ (ಸಂಸ್ಥೆಗಳ) ಸೇವೆಗಾಗಿ, ತಾವು ಒದಗಿಸಿದ್ದನ್ನು ಜನರು ಅನುಗ್ರಹವೆಂದು ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಭಾವಿಸಿ ತದನುಸಾರ ವರ್ತಿಸುತ್ತಿರುವುದು ರಾಷ್ಟ್ರೀಯ ದುರಂತ. ಇಂಥ ಸಂಸ್ಥೆಗಳು ಸಹಜವಾಗಿ ಜನಪೀಡಕಗಳೂ ನೆತ್ತರು ಹೀರುಕಗಳೂ ಆಗಿ ವಿಕೃತವಾಗಿರುವುದು ಸ್ವತಂತ್ರ ಭಾರತದ ತತ್ರಾಪಿ ಅಖಂಡ ಕರ್ನಾಟಕದ ಬಲುದೊಡ್ಡ ವಿಪರ್ಯಾಸ]

ಕನ್ನಡ ವಿಶ್ವವಿದ್ಯಾಲಯದ ಒಂದು ಪ್ರಕರಣ

ಕನ್ನಡ ವಿಶ್ವವಿದ್ಯಾಲಯ ಅದರ ಎಲ್ಲ ಆರಂಭಿಕ ಅವ್ಯವಸ್ಥೆ ಮತ್ತು ಅನನುಭವದ ಗೊಂದಲಗಳೊಡನೆಯೂ ನನಗೆ ಸದಾ ಬಹು-ಮಿತ್ರ ಕೂಟವೂ ಆಗಿಯೇ ಉಳಿದಿದೆ. ಅಲ್ಲಿನ ಗ್ರಂಥಾಲಯಕ್ಕೆ ನಾನು ಪುಸ್ತಕ ಒದಗಿಸಿ ಪಾವತಿ ಪಡೆಯಲು ಒದ್ದಾಡಿದ್ದುಂಟು. ಅಲ್ಲಿಯ ವಿಜ್ಞಾನ ಪತ್ರಿಕೆಯನ್ನು ಗಂಭೀರವಾಗಿ ಭ್ರಮಿಸಿ, ವಿಮರ್ಶೆ ಬರೆದು ಸೋತದ್ದುಂಟು. ವಿಶ್ವಕೋಶಕ್ಕೆ ಲೇಖನಾಹ್ವಾನ ಪಡೆದು ಸಂಭ್ರಮಿಸಿ, ಪರಿಷ್ಕಾರಕ್ಕೆ ಇಳಿದು ಹೆಡ್ಡು ಬಿದ್ದದ್ದೂ ಉಂಟು. ಅವೆಲ್ಲಕ್ಕೂ ಹೆಚ್ಚಾಗಿ ಅಲ್ಲಿನ ಪ್ರಸಾರಾಂಗಕ್ಕೆ ನಾನು ಸದಾ ಗಿರಾಕಿಯಂತೂ ಹೌದೇ ಹೌದು. ಡಬ್ಬಿ ಬಳಸುವುದು, ಗೋಣಿ ಹೊಲಿಯುವುದರಿಂದ  ಹಿಡಿದು ಲೆಕ್ಕ ತಿದ್ದುವಲ್ಲಿಯವರೆಗೂ ನಾನು ಅದರ ಕ್ಷೇಮಾಭಿವೃದ್ಧಿಯ ಬಗ್ಗೆ ಹಚ್ಚಿಕೊಂಡಿದ್ದೆ. ಮನೆಯವನ ಅನೌಪಚಾರಿಕತೆಯಲ್ಲೇ ಅವರ ವ್ಯಾವಹಾರಿಕ ಪತ್ರಗಳನ್ನು ಗೇಲಿಯೂ ಮಾಡುತ್ತಿದ್ದೆ. ಅಲ್ಲಿನ ಕರಣಿಕರ ತಪ್ಪಿನಿಂದ ನಾನು ಪೂರ್ಣ ಪಾವತಿ ಕೊಟ್ಟೂ ಸಾಲಗಾರನಾದದ್ದಿತ್ತು. ಅದನ್ನೂ ನಾನು ತೋರಿಕೊಡುವುದರೊಡನೆ ಹಗುರವಾಗಿಯೇ ಮುಗಿಸಿದ್ದಿತ್ತು. ಆದರೆ ಈಚೆಗೆ ಒಂದು ಪ್ರಸಂಗ, ತಪ್ಪುಗಳು ದುರುದ್ದೇಶದಿಂದಲೇ ನಡೆಯುತ್ತಿವೆ ಎಂದು ಸಾರಿ ಹೇಳಿದಾಗ ನಾನು ಕಟುವಾಗಬೇಕಾಯಿತು. ಅದನ್ನು ಕೇವಲ ವಿನಿಮಯಗೊಂಡ ಪತ್ರಗಳ ಮೂಲಕ ಅದರಲ್ಲೂ ಸ್ವಲ್ಪ ಮುಂದುವರಿದ ಹಂತದಿಂದ ಇಲ್ಲಿ ನಿರೂಪಿಸುತ್ತಿದ್ದೇನೆ.

೧೨-೯-೧೯೯೮ರಂದು ನಾನು ಕವಿವಿ ಕುಲಪತಿಗಳಿಗೆ ಬರೆದ ಪತ್ರ: ಮಾನ್ಯರೇ, ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳೆಲ್ಲ ಬೋಧನಾಂಗ ಮತ್ತು ಪ್ರಕಟಣಾಂಗಗಳನ್ನು ಪ್ರಧಾನವಾಗಿ ಪೋಷಿಸುತ್ತವೆ. ಕನ್ನಡ ವಿಶ್ವವಿದ್ಯಾಲಯವಾದರೋ ಸಂಶೋಧನಾಂಗವನ್ನಷ್ಟೇ ಉದ್ದೇಶಿಸಿ ಹುಟ್ಟಿ, ವಿಕಸಿಸಿದೆ. ಪ್ರಸಾರಾಂಗ ಇದರ ಅಭಿವ್ಯಕ್ತಿ (ಪ್ರತ್ಯೇಕ ಅಂಗ ಅಲ್ಲ ಎಂಬರ್ಥದಲ್ಲಿ). ಇತರ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಎಡವಿದರೂ ಮುಚ್ಚಿದರೂ ಒಟ್ಟಾರೆ ವಿಶ್ವವಿದ್ಯಾಲಯದ ಅಸ್ತಿತ್ವವನ್ನು ಪ್ರಶ್ನಿಸಿದವರಿಲ್ಲ. (ಇದು ಸರಿ ಎಂದೇನೂ ಅಲ್ಲ!). ಆದರೆ ನಿಮ್ಮದು ಹಾಗಲ್ಲ. ಸಾಮಾಜಿಕ ಪರಿಸರದ ಮೇಲೇ ಪ್ರಭಾವ ಬೀರುತ್ತೀರಿ ಎನ್ನುವಂತಿಲ್ಲ - ಎಲ್ಲೋ ಮೂಲೆಯಲ್ಲಿದ್ದೀರಿ. ಪರಂಪರೆಯನ್ನು ಉಳಿಸಿ ಬೆಳೆಸುವವರಿದ್ದಾರೆ ಎನ್ನುವಂತಿಲ್ಲ - ವಿದ್ಯಾರ್ಥಿ ಮತ್ತು ವಿದ್ಯಾ ಸಂಸ್ಥೆಗಳ ಜಾಲದಿಂದ ಹೊರಗಿದ್ದೀರಿ. ಹಾಗಾಗಿ ನಿಮ್ಮ ಪ್ರಸಾರಾಂಗ ತನ್ನ ಪ್ರಕಟಣೆ ಮತ್ತು ಪ್ರಸಾರ ವ್ಯಾಪಕತೆಯನ್ನು ಎಂದೂ ಕಳೆದುಕೊಳ್ಳಬಾರದು, ಸಾತತ್ಯಕ್ಕೆ ತಡೆ ಬರಬಾರದು. ಅದರಲ್ಲೂ ವೈಯಕ್ತಿಕ ದೌರ್ಬಲ್ಯಗಳಿಗೆ ಬಲಿಯಾಗಲು ಬಿಡಲೇಬಾರದು. ಆದರೆ ಈಗ ನಾನು ಹೆದರಿದ್ದೇ ಆಗಿದೆ ಎಂಬುದಕ್ಕೆ ದಿನಾಂಕ ೧-೮-೧೯೯೮ರಂದು ನಿಮ್ಮ ಪ್ರಸಾರಾಂಗದ ನಿರ್ದೇಶಕರಿಗೆ ನಾನು ಬರೆದ, ಸ್ವಪರಿಚಯವನ್ನೂ ಮಾಡಿಕೊಳ್ಳಬಲ್ಲ ಪತ್ರದ ಯಥಾಪ್ರತಿಯನ್ನು ನೋಡಿ:

ಮಾನ್ಯರೇ, `ಶಾಂತವೇರಿ’ ಪುಸ್ತಕ ಬಿಡುಗಡೆಯ ಆಮಂತ್ರಣ ಬಂದ ಕಾಲಕ್ಕೇ ನಿಮ್ಮಲ್ಲಿ `ಮಲೆಮಾದೇಶ್ವರ’ವೋ `ಮಂಟೇಸ್ವಾಮಿ’ಯೋ (ಪುಸ್ತಕಗಳ ಹೆಸರು) ತುರ್ತಾಗಿ ಕೋರಿದ್ದೆ. ಪ್ರೊ. ಸಿ.ಎನ್ ರಾಮಚಂದ್ರನ್ ಅವರಿಗೆ ಕೊಡಬೇಕಾಗಿದೆ ಎಂದೂ ಸೇರಿಸಿಯೇ ಬರೆದಿದ್ದೆ. ಹೊಸ ಬಿಡುಗಡೆಗಳೂ ಸೇರಿದಂತೆ ಇತರ ಲಭ್ಯಪುಸ್ತಕಗಳ ಪಟ್ಟಿ ಕಳಿಸುವಂತೆಯೂ ಕೇಳಿಕೊಂಡಿದ್ದೆ. ನಿಮ್ಮಿಂದ ಪುಸ್ತಕ, ಪತ್ರ ಏನೂ ಬರಲಿಲ್ಲ. ವಿಳಂಬಿತವಾಗಿ ಪಟ್ಟಿ ಮಾತ್ರ ಬಂತು. ಏತನ್ಮಧ್ಯೆ ನಿಮ್ಮ ಚಿತ್ರಗುಪ್ತರಿಂದ ಗಣಕೀಕೃತ (ಹಾಗಾಗಿ ನಿಖರವಾಗಿರಬೇಕೆಂಬುದು ಮೂಢ ನಂಬಿಕೆ!) ದಾಖಲೆಯೊಂದಿಗೆ ನನ್ನನ್ನು ಸಾಲಗಾರ ಎಂದು ಘೋಷಿಸುವ ಬೆದರಿಕೆ ಪತ್ರ ಬಂತು. ಶುದ್ಧ ವ್ಯಾವಹಾರಿಕ ಪತ್ರದಲ್ಲೂ ನಿಮ್ಮ ಪ್ರಸಾರಾಂಗದೊಂದಿಗೆ ನಾನು “ಇಲ್ಲೊಂದು ಮಳಿಗೆ, ಅಲ್ಲೊಂದು ಗುದಾಮು” ಎಂಬ ಧೋರಣೆ ಇಟ್ಟುಕೊಂಡದ್ದಿಲ್ಲ. ಇದು ಕನಿಷ್ಠ ಎರಡು ವ್ಯಕ್ತಿಗಳ ನಡುವಣ ಮಾನಸಿಕ ವ್ಯಾಪಾರ ಎಂದೇ ನಡೆದಿದ್ದೆನೆ. ಹಾಗಾಗಿ ಚಿಕಿತ್ಸಕವಾಗಿ ಆ ಪತ್ರದ ಹುಸಿತನವನ್ನು ಒಡೆದು, ಕನ್ನಡ ವಿವಿನಿಲಯಕ್ಕೆ ಶೋಭೆ ತರದ ಅದರ ಒಕ್ಕಣೆಯನ್ನಷ್ಟು ಒಕ್ಕಿ, ಗೇಲಿಮಾಡಿದೆ. ಆದರೂ ತಾಳ್ಮೆ ಕಳೆದುಕೊಳ್ಳದೆ ನನ್ನ ಹಳೆ ಬೇಡಿಕೆ ರದ್ದು ಪಡಿಸಿ, ದೊಡ್ಡ ಹೊಸ ಬೇಡಿಕೆಯನ್ನೇ ಕಳಿಸಿದೆ. ಜೊತೆಗೆ ನಿಮ್ಮ ಖಾಸಗಿ ಪ್ರಕಟಣೆಯೊಂದನ್ನೂ ಕೇಳಿದ್ದೆ. ಅಂಚೆ ಮುಷ್ಕರದ ಕಾಲವಾದ್ದರಿಂದ ಎಲ್ಲವನ್ನೂ ಕೊರಿಯರ್ ಮೂಲಕ ಹೆಚ್ಚಿನ ವೆಚ್ಚದಲ್ಲಿ ಕಳಿಸಿಕೊಟ್ಟೆ.

ಮೂರೇ ದಿನಗಳ ಅಂತರದಲ್ಲಿ ನಿಮ್ಮ ಖಾಸಗಿ ಪ್ರಕಟಣೆಯೇನೋ ನಾನು ಕೇಳಿದ ಸಂಖ್ಯೆಯಲ್ಲಿ ಕೊರಿಯರ್ ಮೂಲಕ ಬಂತು. ಆದರೆ ನೀವು ಅಲಂಕರಿಸಿದ ಸ್ಥಾನಕ್ಕೆ ಗೌರವ ತರಬಹುದಾದ ಪ್ರಸಾರಾಂಗದ ಭಾಂಗಿಯಾಗಲಿ, ಪತ್ರವಾಗಲಿ ಬರಲೇ ಇಲ್ಲ. ನಿಮ್ಮ ನಿರುತ್ತರ ನಿಷ್ಕ್ರಿಯೆ ಕಂಡು ರೋಸಿ ಕಳೆದ ಗುರುವಾರ (೨೩-೭-೯೮) ನಾನು ನಿಮ್ಮನ್ನು ನೇರ ದೂರವಾಣಿಯಲ್ಲಿ ಸಂಪರ್ಕಿಸಿದೆ. ನೀವು ಕೇವಲ ಒಂದು ದಿನದ ನಿಮ್ಮ ರಜೆಯನ್ನೇ ನೆಪವಾಗಿ ಹೇಳಿ, ವಿಳಂಬಕ್ಕೆ ಕ್ಷಮೆ ಕೋರಿ “ಇಂದೇ ಪುಸ್ತಕಗಳನ್ನು ಕಳಿಸುತ್ತೇನೆ” ಎಂದಿರಿ. ಸರಿ, ಮತ್ತೆ ಮೂರನೇ ದಿನ ದಾಖಲೆಗಳು ಬರುತ್ತವೆ, ನಾಲ್ಕೋ ಐದೋ ದಿನಗಳಲ್ಲಿ ಭಾಂಗಿಯೂ ಬರುತ್ತದೆ ಎಂದು ನಿಶ್ಚಿಂತನಾದೆ.

೨೫-೭-೧೯೯೮ರಂದು ಉದಯವಾಣಿಯಲ್ಲಿ ನಿಮ್ಮ ಪ್ರಕಟಣೆಯೇ ಆದ `ತುಳು ಪಾಡ್ದನ ಸಂಪುಟ’ದ ಒಳ್ಳೆಯ ಸಮೀಕ್ಷೆ ಪ್ರಕಟವಾಯ್ತು. ಸಹಜವಾಗಿ ಒಮ್ಮೆಗೇ ನನ್ನಲ್ಲಿ ಆ ಪುಸ್ತಕಕ್ಕೆ ಬೇಡಿಕೆ ಹೆಚ್ಚಿತು. ಆದರೆ ಬಹಳ ಮೊದಲೇ ಅದು ನನ್ನಲ್ಲಿ ಮುಗಿದಿತ್ತು. ಅದನ್ನು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ನಿಮಗೆ ಸಲ್ಲಿಸಿದ್ದ ಬೇಡಿಕೆ ಪಟ್ಟಿಯಲ್ಲೇನೋ ಸೇರಿಸಿದ್ದೆ. ಆದರೂ ತಾತ್ಕಾಲಿಕ ಗಿರಾಕಿ ಉಪಶಮನಕ್ಕಾಗಿ, ನಮ್ಮಲ್ಲೇ ಇರುವ ಅದರ ಸಂಪಾದಕ, ಪ್ರೊ. ಅಮೃತ ಸೋಮೇಶ್ವರರ ಮೊರೆ ಹೋದೆ. ಅಮೃತರು ನನಗೆ ದೂರದವರಲ್ಲ. ಸದ್ಯ ಅವರಿಂದ ಕೆಲವು ಪ್ರತಿಗಳನ್ನು ಎರವಲಾಗಿ ಪಡೆದು ಗಿರಾಕಿ ಸುಧಾರಿಸುವ ಯೋಜನೆ ನನ್ನದು. ಆದರೆ ಅವರಲ್ಲಿ ಪ್ರತಿಗಳು ಇರಲಿಲ್ಲ. ಬದಲಿಗೆ ಆಶ್ಚರ್ಯಾಘಾತ ಆಗುವ ಹಲವು ವಿವರಗಳು ಸಿಕ್ಕವು. ಸೂಕ್ಷ್ಮವಾಗಿ ಹೇಳುವುದಾದರೆ ಅಮೃತರಿಗೆ ಸಂಪಾದಕನ ನೆಲೆಯಲ್ಲಿ ಸಿಕ್ಕ ಗೌರವ ಪ್ರತಿಗಳು ಎಂದೋ ವಿತರಿಸಿ ಮುಗಿದಿತ್ತಂತೆ. ಆ ಪೈಕಿ ಕೊನೆಯವು `ಉದಯವಾಣಿ’ಗೇ ಹೋಗಬೇಕಾದದ್ದು ಒಂದು ವಿಪರ್ಯಾಸವೇ ಸರಿ. ನಿಮಗೆ ಗೊತ್ತು – ತುಳು ವಲಯವನ್ನು ಗಾಢವಾಗಿ ತಟ್ಟಬಲ್ಲ ಪತ್ರಿಕೆ ಉದಯವಾಣಿ. ಇವರಿಗೆ ಅಧಿಕೃತವಾಗಿ ವಿಮರ್ಶೆ ಕೋರುವ ಪ್ರತಿಗಳು ಪ್ರಕಾಶಕರಿಂದ (ಅಂದರೆ ನಿಮ್ಮಿಂದ) ಹೋಗಿರಲಿಲ್ಲ. ಹಾಗೆಂದು ಅವರು ಸುಮ್ಮನೆ ಕೂರದೇ ಅಮೃತರಿಂದಲೇ ಪ್ರತಿ ಪಡೆದಿದ್ದರಂತೆ. ಸಹಜವಾಗಿ ಅಮೃತರು ಕ್ರಯ ಕೊಟ್ಟೇ ಹೆಚ್ಚಿನ ಪ್ರತಿ ಸಂಗ್ರಹಿಸಲು ನಿಮ್ಮಲ್ಲಿಗೆ ಪಾವತಿ ಸಹಿತ ಬೇಡಿಕೆ ಕಳಿಸಿ ತಿಂಗಳೊಂದರ ಮೇಲಾಯ್ತಂತೆ. ಪುಸ್ತಕದ ಸಂಪಾದಕ, ನಿಮಗೆ ಗುರುಸಮಾನರಾದವರಿಗೂ ದೊರಕಿದ್ದು ನಿಸ್ಪಂದ ನಿಷ್ಕ್ರಿಯೆ!

ಬರಿಯ ಕಾಗದದ ಮೇಲಿನ ಘನೋದ್ದೇಶಗಳು ಯಾವ ಸಂಸ್ಥೆಯನ್ನೂ ಕಟ್ಟಿದ್ದಿಲ್ಲ. ಸ್ವಾರ್ಥ ತ್ಯಾಗಮಾಡಿ, ವ್ಯಕ್ತಿಮಿತಿಯ ಗರಿಷ್ಠಕ್ಕೆ ದುಡಿದವರಿಂದಲೇ ಆದರ್ಶಗಳು ಸ್ಥಾಪಿಸಲ್ಪಡುತ್ತವೆ. ನನಗೆ ನಿಮ್ಮಲ್ಲಿಂದ ಬರುತ್ತಿದ್ದ ಭಾಂಗಿಗಳ ಎಡವಟ್ಟು, ಪತ್ರ ಹಾಗೂ ಖಾತಾ ನಿರ್ವಹಣೆಯ ಗೊಂದಲಗಳೆಲ್ಲವನ್ನು, ನಾನು ಚುಚ್ಚುತ್ತಿದ್ದರೂ ಹಿಂಬಾಲಿಸುತಿದ್ದ ನಿಮ್ಮ ಕ್ಷಮಾಪಣಾ ಕೋರಿಕೆಗಳನ್ನು ನಂಬಿ, ನಿಮ್ಮೊಡನಿರುವ ಪೂರ್ವ ಪರಿಚಯದ ವಿಶ್ವಾಸದಲ್ಲಿ ಮರೆವಿಗೆ ಬಿಡುತ್ತಿದ್ದೆ. ಸ್ವಾಮೀ, ಕ್ಷಮಾ ಕೋರಿಕೆ ಮಿತಿ ಮೀರುವುದು ವ್ಯಕ್ತಿ ಗೌರವಕ್ಕೆ ಕುಂದು ಅಂತ ನಿಮಗನ್ನಿಸುವುದಿಲ್ಲವೇ? ಯಾರದೋ ಒತ್ತಾಯಕ್ಕೆ ನೀವು ನಿರ್ದೇಶಕರಾಗಿರುವುದು ಇರಬಹುದು. ಅಂದ ಮಾತ್ರಕ್ಕೆ ಕಾರ್ಯನಿರ್ವಹಣೆಯ ಪ್ರತಿ ಹಂತಕ್ಕೂ ಅದನ್ನೇ ಹಾಡಿ ಅಳುವಷ್ಟು ಸಣ್ಣವರು ನೀವಲ್ಲ. ಕನಿಷ್ಠ ದೂರವಾಣಿಯಲ್ಲಿ “ಇಂದು ಕಳಿಸುತ್ತೇನೆ” ಎಂದ ನಿಮ್ಮದೇ ಮಾತಿನ ಮರ್ಯಾದೆಗಾದರೂ ಪುಸ್ತಕ ಕಳಿಸಿ. ನಿಮಗೆ ಸಂಬಳ, ಸವಲತ್ತುಗಳ ಭದ್ರತೆಯಿದೆ – ಪುಸ್ತಕ ಮಾರಿದರೂ ಬಿಟ್ಟರೂ. ನನಗೆ ಹಾಗಲ್ಲ; ಮಾರು ಇಲ್ಲವೇ ಮಡಿ ಒಂದೇ ಜೀವನ ಮಂತ್ರ. ನಿಮ್ಮ ಖಾಸಗೀ ಪ್ರಕಟಣೆಗೆ ತೋರಿದ ಉತ್ಸಾಹದ ಒಂದಂಶವನ್ನಾದರೂ ನಿಮ್ಮ ವೃತ್ತಿಗೆ ತೋರಿ, ನಮ್ಮಂಥವರ ಬಾಯಲ್ಲಿ ಮತ್ತೊಮ್ಮೆ “ಹಾಳುಹಂಪಿ” ಬಾರದಂತೆ ನೋಡಿಕೊಳ್ಳಿ. ನನ್ನ ಹೆಚ್ಚಿನ ಮಾತು ಮತ್ತು ಕ್ರಿಯೆಗಳಿಗೆ ಆಸ್ಪದವಾಗದಂತೆ ಇನ್ನಾದರೂ ಕೂಡಲೇ ಪುಸ್ತಕ ಕಳಿಸಿ. (ಇದರ ಯಥಾಪ್ರತಿಯನ್ನು ಅಮೃತ ಸೋಮೇಶ್ವರರಿಗೂ ಕೊಟ್ಟಿದ್ದೇನೆ.) (ನಿರ್ದೇಶಕರಿಗೆ ಬರೆದ ಪತ್ರ ಮುಗಿಯಿತು.)

ನಾನು (ಅರ್ಥಾತ್ ನನ್ನ ಅತ್ರಿ ಬುಕ್ ಸೆಂಟರ್) ನಿಮ್ಮ ಸಂಸ್ಥೆಯೊಡನೆ ಮೊದಲಿನಿಂದಲೂ ಹಲವು ಮುಖಗಳ ಸಂಬಂಧ ಇಟ್ಟುಕೊಂಡವನು. ನಿಮ್ಮೊಡನೆ ಪರಸ್ಪರ ಗೌರವಯುತ ಲಾಭಕ್ಕಾಗಿಯೇ ವ್ಯವಹರಿಸಿದವನು ಎಂಬುದನ್ನು ನೀವು ಮೊದಲು ಮನಸ್ಸಿಗೆ ತಂದುಕೊಳ್ಳಬೇಕು. ನಿಮ್ಮ ಗ್ರಂಥಾಲಯಕ್ಕೆ ಪುಸ್ತಕ ಒದಗಿಸುವವನಾಗಿ, ವಿಶ್ವಕೋಶಕ್ಕೆ (ಅದು ಈ ವರೆಗೆ ಪ್ರಕಟವಾಗಿಲ್ಲ!) ಲೇಖನದಿಂದ ಸಾಕ್ಷರತಾ ಆಂದೋಲನದ ಅಂಗವಾದ ಪುಸ್ತಕ ರಚನೆಯವರೆಗೂ (ನೋಡಿ ನಿಮ್ಮದೇ ಪ್ರಕಟಣೆ – ಬೆಟ್ಟ ಗುಡ್ಡಗಳು) ಸಹಕರಿಸಿದವನು. ನಿಮ್ಮ ಪ್ರಸಾರಾಂಗದ ಅತ್ಯುತ್ತಮ ಗಿರಾಕಿಗಳಲ್ಲಿ ನಾನು ಒಬ್ಬ ಎಂದು ಸಂದ ಹಲವು ಪ್ರಸಾರಾಂಗ ನಿರ್ದೇಶಕರಿಂದ ಹಿಡಿದು ಇಂದಿನವರವರೆಗೂ ಪ್ರಶಂಸೆಗೆ ಒಳಗಾದವನು. ಆದರೂ ಸದ್ಯ ನನಗೆ ಸಿಗುತ್ತಿರುವ `ಉಪಚಾರಕ್ಕೆ’ ಕಾರಣವೇನೆಂಬುದನ್ನು ಅರಿಯದೆ ಚಡಪಡಿಸುತ್ತಿದ್ದೇನೆ. ನಿಮಗವಶ್ಯ ಎನಿಸಿದರೆ ಹೆಚ್ಚಿನ ವಿವರ, ಸಾಕ್ಷಿ ಒದಗಣೆಗೆ ನಾನು ಬದ್ಧನಾಗಿದ್ದೇನೆ. ಕ್ಷಿಪ್ರ ಕಾರ್ಯಾಚರಣೆ, ಎಲ್ಲರಿಗೂ ಮಂಗಳಕರವಾದ ನಿರ್ಧಾರಗಳು ನಿಮ್ಮಿಂದ ಅವಶ್ಯ ಆಗುತ್ತವೆ ಎಂಬ ನಿರೀಕ್ಷೆ ನನ್ನದು. ಅದಕ್ಕಾಗಿ ಮುಂದಾಗಿಯೇ ಕೃತಜ್ಞತೆಗಳನ್ನು ಅರ್ಪಿಸುತ್ತ ವಿರಮಿಸುವೆ. (ಕುಲಪತಿಗಳಿಗೆ ಬರೆದ ಪತ್ರವೂ ಮುಗಿಯಿತು)

ದಿನಾಂಕ ೧೪-೮-೧೯೯೮ರಂದು ಕುಲಪತಿಗಳು ಬರೆದ ಉತ್ತರ (ಸಂಗ್ರಹ) “ಪ್ರಿಯರೇ ನಿಮ್ಮ ಸಿಟ್ಟಿನ ಹಿಂದಿರುವ ಕಳಕಳಿಯನ್ನು ಅರ್ಥಮಾಡಿಕೊಂಡಿದ್ದೇನೆ. ಪ್ರಸಾರಾಂಗ ಈಗ ಒಂದು ವ್ಯವಸ್ಥೆಗೆ ಬರುತ್ತಲಿದೆ. ಈ ಸಂದರ್ಭದ ಕೆಲಸದ ಒತ್ತಡ ಕಾರಣವಾಗಿ ಒಂದಿಷ್ಟು ವಿಳಂಬವಾಗಿರಬಹುದು. ಇನ್ನು ಮುಂದೆ ಹೀಗಾಗದಂತೆ ಪ್ರಸಾರಾಂಗ ನೋಡಿಕೊಳ್ಳುತ್ತದೆ. ದಯವಿಟ್ಟು ಸಹಕರಿಸಿ.”
[ಅಂದು ಮತ್ತೆ ಪುಸ್ತಕಗಳು ಬಂದಿರಬೇಕು. ಆದರೆ ಕನ್ನಡ ವಿಶ್ವವಿದ್ಯಾಲಯ ನಾನು ಅತ್ರಿ ಮುಚ್ಚುವವರೆಗೂ ಉತ್ತಮಗೊಂಡದ್ದಿಲ್ಲ – ೨೦೧೬]

ಬೇಕೇ ಸರಕಾರಿ ಪುಸ್ತಕೋದ್ಯಮ ?

ದಿನಾಂಕ ೫-೧-೧೯೯೬ರ  ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಪತ್ರ:

ಮಾನ್ಯರೇ, ಕನ್ನಡ ಪುಸ್ತಕೋದ್ಯಮದ ಬಗ್ಗೆ ಸರ ಸುದರ್ಶನರ ತಾ ೨೧ ಹಾಗೂ ೨೨-೧೨-೧೯೯೫ರ ಲೇಖನಗಳು.

ಕನ್ನಡಿಗರಲ್ಲಿ ಪುಸ್ತಕ ಕೊಂಡು ಓದುವವರ ಸಂಖ್ಯೆ ಕಡಿಮೆ ಎನ್ನುವುದಕ್ಕೆ ಅಪವಾದ ಮೂರ್ತಿರಾಯರ ದೇವರು. ಈ ವೈಚಾರಿಕ ಕೃತಿ ಮರುಮುದ್ರಣ ಕಾಣುತ್ತಲೇ ಇದೆ ಎನ್ನುತ್ತಾರೆ ಸರಸು. ಒಪ್ಪಿದೆ, ಆದರೆ ಮೂರ್ತಿರಾಯರಿಗೆ ಆ ಪುಸ್ತಕ ಬರೆಯುವಲ್ಲಿ ಒತ್ತಾಯದ ಪ್ರೇರಣೆ ಕೊಟ್ಟು ಮತ್ತೆ ಪುಸ್ತಕವನ್ನು ಪ್ರಕಟಿಸಿ, ಮಾರುಕಟ್ಟೆಯಲ್ಲಿ ಯಶಸ್ಸು ಕಾಣಿಸುವಲ್ಲಿ ಪ್ರಕಾಶಕರಾದ ಡಿವಿಕೆ ಮೂರ್ತಿ ಅವರ ಉದ್ಯಮ ನಿಷ್ಠೆ, ಪರಿಶ್ರಮಗಳ ಪಾಲು ದೊಡ್ಡದಿದೆ ಎಂದು ನಾನು ಸೇರಿಸಲಿಚ್ಛಿಸುತ್ತೇನೆ.

“ಹುಡುಗರೇನು ಪುಸ್ತಕ ಮಾರಿಯಾರು ಅಥವಾ ಅವರೇನು ಕೊಂಡಾರು ಎನ್ನುವ ಸಿನಿಕತನವನ್ನು ಹುಸಿ ಮಾಡಿದೆವು”  ಸರಸು ಉವಾಚ. ಸವಾಲುಗಳಿಗೆ ಸೆಡ್ಡು ಹೊಡೆಯುವುದರಲ್ಲೇ ವಿದ್ಯಾರ್ಥಿ ಪರಿಷತ್ತಿನ ಮಾರಾಟದ ಯಶಸ್ಸಿನ ಗುಟ್ಟು ಇದೆ ಎಂದು ದಾಖಲಿಸುವಲ್ಲಿ ಸರಸು ಯೋಚನಾಲಹರಿ ಸರಿ ದಿಕ್ಕಿನಲ್ಲೇ ಹರಿದಿದೆ. ಆದರೆ ಮುಂದೆ ಮಾತ್ರ ಸರಕಾರಿ ಪುಸ್ತಕರಂಗವೆಂಬ ಮರುಭೂಮಿಯತ್ತ ತಿರುಗಿ ವ್ಯರ್ಥವಾಗಿದೆ.

ಹಲವು ವೃತ್ತಿಗಳ ಸಂಗಮ ಪುಸ್ತಕೋದ್ಯಮ. ಇದು ಸ್ಪರ್ಧಾತ್ಮಕವಾದಷ್ಟು ಯಶಸ್ಸು ಹೆಚ್ಚು. ಸ್ಪರ್ಧೆಯ ತುರುಸಿನಲ್ಲಿ ಸಮಾಜದ್ರೋಹವಾಗದಂತೆ ನಿಗಾ ವಹಿಸುವ ಹೊಣೆ ಸರಕಾರದ್ದು. ಆದರೆ ಇಂದು ಸರಕಾರವೇ ಉದ್ಯಮಕ್ಕಿಳಿದು ಬಲು ದೂರ ನಡೆದ ಎರಡು ಚಿತ್ರಗಳನ್ನು ನೋಡಿ. ಬರವಣಿಗೆ ಯೋಜನೆಗಳು, ಕಾಗದ ಮತ್ತು ಮುದ್ರಣದಲ್ಲಿ ರಿಯಾಯಿತಿ, ಸಾಲ ಸವಲತ್ತು, ಪ್ರಕಾಶನ ಸಹಾಯ, ಸಗಟು ಖರೀದಿ, ಬಹುಮಾನ ಎಂಬಿತ್ಯಾದಿ ಪರೋಕ್ಷ ಮುಖ ಮೊದಲನೆಯದು. ಇನ್ನೊಂದರಲ್ಲಿ ಅಸಂಖ್ಯ ವಿವಿ ನಿಲಯಗಳು, ಅಕಾಡೆಮಿಗಳು, ಇಲಾಖೆಗಳು, ಸಾಹಿತ್ಯ ಪರಿಷತ್ತಿನಂಥ ತೋರಿಕೆಗೆ ಸ್ವತಂತ್ರ ವಾಸ್ತವದಲ್ಲಿ ಪರಪುಟ್ಟ ಜೀವಿಗಳು ಪುಸ್ತಕೋದ್ಯಮದಲ್ಲಿ ಸರಕಾರ ಪ್ರತ್ಯಕ್ಷವಾಗಿ ತೊಡಗಿರುವುದನ್ನು ಕಾಣುತ್ತೇವೆ. ಇವು ಒಂದರಿಂದೊಂದು ಹೊಸ ಆದರ್ಶ, ಪ್ರಯೋಗಗಳನ್ನು ತೀರ ಬೇಜವಾಬ್ದಾರಿಯಿಂದ ನಡೆಸಿ ವಿಫಲವಾಗಿರುವುದನ್ನು ನಾವು, ಅಂದರೆ ಸರಕಾರಕ್ಕೆ ಅನುದಾನ ಕೊಡುವ ಪ್ರಜೆಗಳು, ಮೊದ್ದುಗಳಂತೆ ನೋಡುತ್ತಲೇ ಬಂದಿದ್ದೇವೆ. ಈ ಸಾಲಿನಲ್ಲಿ ಸುದರ್ಶನರ ಹೊಸ ಶಿಫಾರಸುಗಳು ಇನ್ನಷ್ಟು ಹಣ ದುರ್ವ್ಯಯ ಮಾಡುವ ಅಧಿಕಾರ ವರ್ಗವನ್ನಷ್ಟೆ ಸೃಷ್ಟಿಸುತ್ತದೆ.

ಕುಸಿಯುವ ಸರಕಾರಿ  ಪುಸ್ತಕೋದ್ಯಮಕ್ಕೆ ನಿಸರ್ಗ ನಿಯಮ ಅಳವಡಲಿ – ಸತ್ತ್ವವೊಂದೇ ಉಳಿಯುವ ತತ್ತ್ವವಾಗಲಿ. ವಿಫಲ ಅಂಗಗಳನ್ನು ಬರ್ಖಾಸ್ತುಗೊಳಿಸಿ. ಹೊಸ ಊರುಗೋಲು ಹುಡುಕುವುದಕ್ಕಿಂಥ ಜಾಗ ತೆರವುಗೊಳಿಸಿ, ನೆಲದ ಗುಣಕ್ಕೆ ಹೊಸ ಮೊಳಕೆಗಳು ಮರವಾಗುವುದು ನಿಶ್ಚಯ.

ನಾಲ್ಕು ಟಿಪ್ಪಣಿಗಳು
ದಿನಾಂಕ ೩೧-೧-೧೯೯೫ರ ಉದಯವಾಣಿಯಲ್ಲಿ ಪ್ರಕಟವಾದ ಶ್ರೀ ರಾಮಚಂದ್ರ ದೇವ ಅವರ ಅಂಕಣ ಬರಹದ ಪುಸ್ತಕ ಪ್ರಕಾಶನದ ಸಮಸ್ಯೆ ಲೇಖನಕ್ಕೆ ಪ್ರತಿಕ್ರಿಯೆಯಾಗಿ ದಿನಾಂಕ ೨೮-೨-೧೯೯೫ರಂದು ಪ್ರಕಟವಾದದ್ದು:

  1. “ಅಚ್ಚು ಹಾಕಿಸಿದ ಪುಸ್ತಕಗಳೆಲ್ಲ ಖರ್ಚಾಗಬೇಕೆಂದು ನಿಯಮ ಎಲ್ಲಿದೆ” ಎಂದು ರಾಮಚಂದ್ರರು ಪ್ರಶ್ನಿಸುತ್ತಾರೆ. ನಾನು ಮುಂದುವರಿದು ಹೇಳುತ್ತೇನೆ – ಅಚ್ಚು ಹಾಕಿಸಿ, ರಟ್ಟು ಕಟ್ಟಿಸಿದವೆಲ್ಲ ಪುಸ್ತಕಗಳಾಗುತ್ತವೆ ಎಂದೂ ಹೇಳುವಂತಿಲ್ಲ. ಲೇಖಕ, ಓದುಗ, ವಿಮರ್ಶಕರ ನೆಲೆಗಳಲ್ಲಿ ರಾಮಚಂದ್ರರು ಪುಸ್ತಕದ ಗುಣಮಟ್ಟದ ಮಾತು ತೆಗೆದಿದ್ದಾರೆ. ವ್ಯಾಪಾರಿಯಾಗಿ ನಾನು ಸಣ್ಣ ತಿದ್ದುಪಡಿ ಸೂಚಿಸುತ್ತೇನೆ – ಗುಣಮಟ್ಟ ಎನ್ನುವುದು ಸಾಪೇಕ್ಷ. ಮೇಲಿನೆಲ್ಲಾ ಬಂಧದೊಡನೆ ಕನಿಷ್ಠ ಮಾರಾಟಯೋಗ್ಯತೆ ಸೇರಿದವು ಮಾತ್ರ ನಿಜ ಪುಸ್ತಕ. ವಿಚಾರಪರ ಓದುಗನಿಗೇ ಪುಸ್ತಕೋದ್ಯಮ ಸೀಮಿತಗೊಂಡರೆ ನಾನು ದಿವಾಳಿಯಾಗುವುದು ಖಂಡಿತ!
  2. ಇಂಗ್ಲಿಷ್ ಪುಸ್ತಕ ಪ್ರಪಂಚದ ತತ್ತ್ವ ಕನ್ನಡಕ್ಕೆ ಅನ್ವಯಿಸುವುದು ಕಷ್ಟ. ವಿದೇಶೀ ಬಿಡಿ, ಕೇವಲ ಭಾರತೀಯ ಇಂಗ್ಲಿಷಿನ ಯಾವುದೇ ಚೊತ್ತೆ ಕೃತಿಗೂ ಪ್ರಕಾಶನ ತಾಕತ್ತಿನ ಮೇಲೆ ಐದರಿಂದ ಹತ್ತು ಸಾವಿರದ ಮೊದಲ ಮುದ್ರಣದ ಮತ್ತು ದೇಶವ್ಯಾಪೀ ವಿತರಣ ಯೋಗ್ಯತೆ ಲಭಿಸುತ್ತದೆ. ಅದೇ ಕನ್ನಡಕ್ಕೆ ಬನ್ನಿ. ಗೀತಾ ಏಜೆನ್ಸೀಸ್ ಕನ್ನಡದ ಒಂದು ಮುಂಚೂಣಿ ಪ್ರಕಾಶನ ಸಂಸ್ಥೆ. ಅತ್ಯಧಿಕ ಬೇಡಿಕೆಯಲ್ಲಿರುವ ಸಾಯಿಸುತೆ, ರಾಧಾದೇವಿಯಂಥ ಲೇಖಕಿಯರ ಪ್ರಕಾಶಕರಿವರು. ಇವರು ರಾಜ್ಯ ಮತ್ತು ಹೊರಗಿನ ವ್ಯಾಪಾರಿ ಮತ್ತು ಕನ್ನಡಪರ ಸಂಘಟನೆಗಳಿಗೆ ಸದಾ ಕರಪಟ್ಟಿ, ಮಾದರಿ ಮುಖಪುಟ ಕಳಿಸಿ ಪ್ರಚಾರ ಮಾಡುತ್ತಾರೆ. ಪತ್ರಿಕೆಗಳ ಸಾದರ ಸ್ವೀಕಾರ, ವಿಮರ್ಶಾ ಅಂಕಣಗಳನ್ನು ಪ್ರಚಾರಕ್ಕೆ ಬಳಸುತ್ತಾರೆ. ಆದರೂ ಇವರ ಒಂದು ಹೊಸ ಕಾದಂಬರಿಯ ಎರಡರಿಂದ ಮೂರು ಸಾವಿರ ಪ್ರತಿ ಮಾರಿ ಮುಗಿಯಲು ಮೂರರಿಂದ ನಾಲ್ಕು ವರ್ಷಗಳೇ ಬೇಕಾಗುತ್ತವಂತೆ.
  3. ಕನ್ನಡ ಜನಪ್ರಿಯ ಸಾಹಿತ್ಯದ ಪ್ರಕಟಿತ ಬೆಲೆ ಸರಾಸರಿಯಲ್ಲಿ ರೂಪಾಯಿ ಇಪ್ಪತ್ತರಲ್ಲಿ ನಿಂತರೆ ಇಂಗ್ಲಿಷಿನದ್ದು (ದೇಶೀ) ಸುಮಾರು ರೂಪಾಯಿ ಐವತ್ತು. ರಾಮಚಂದ್ರ ದೇವರು ಹೇಳಿದಂತೆ ಕರಪತ್ರ, ವಿಳಾಸಗಳ ಪಟ್ಟಿ ಹಿಡಿದು ಬಟವಾಡೆ, ಪುಸ್ತಕ ಕುರಿತಂತೆ ಗೋಷ್ಠಿ ಎಂದೆಲ್ಲ ಕನ್ನಡ ಪುಸ್ತಕಗಳಿಗೆ ಮಾಡಹೊರಟರೆ, ಬಹುಶಃ ಪುಸ್ತಕದ ಬೆಲೆ ಏರಿಕೆಯಷ್ಟೇ ಸಾಧನೆಯಾಗಬಹುದು; ಮಾರಾಟವಲ್ಲ!
  4. “ಬೇರೆ ಉದ್ಯಮಗಳಿಗೆ ಅನ್ವಯಿಸುವ ಎಲ್ಲ ನಿಯಮಗಳು ಪುಸ್ತಕ ಪ್ರಕಾಶನಕ್ಕೂ ಅನ್ವಯಿಸುತ್ತವೆ” ಎನ್ನುವುದು ತುಂಬ ಸರಿ. ಅವರು ಮುಂದುವರಿದು ಪುಸ್ತಕದ ಖರ್ಚು ಅದರ ಮಾರಾಟದಿಂದಲೇ ಹುಟ್ಟಬೇಕು. ಸರಕಾರ ಅಗ್ಗದ ಬೆಲೆ ಮಾರಾಟ ಮಾಡುವುದು ಪರಿಹಾರವಲ್ಲ. ಅದು ಉದ್ಯಮದ ಸಹಜ ವಿಶ್ವಾಸಕ್ಕೆ ತಡೆ ಎಂಬಿತ್ಯಾದಿ ಮಾತುಗಳು ನೂರಕ್ಕೆ ನೂರು ನಿಜ. ಆದರೆ ಅದು ಈಚಿನ ಕನ್ನಡ-ಕನಸು, ಅರ್ಥಾತ್ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೊಡಗಿ, ಎಲ್ಲ ಸರಕಾರೀ ಪ್ರಕಟಣಾಂಗಗಳಿಗೂ ಭಾಷಾ ಮೀಸಲಾತಿ ಬಗ್ಗೆ ಬೊಬ್ಬಿರಿಯುವ ಕನ್ನಡ ಅಧ್ವರ್ಯುಗಳಿಗೂ ಖಂಡಿತ ರುಚಿಸದು! ರಾಮಚಂದ್ರರು ತಾಲೂಕಿಗೊಂದು ವಿತರಣ ಕೇಂದ್ರ ಕೇಳುತ್ತಾರೆ. ಅದು ಬಿಡಿ, ಜಿಲ್ಲೆಗಾದರೂ ಒಂದು ಸಮರ್ಥ ವಿತರಣ ಕೇಂದ್ರ ಇಲ್ಲದ ಇಂದಿನ ದುಃಸ್ಥಿತಿಗೆ ಪರಿಹಾರವೂ ಮೇಲಿನ ತತ್ತ್ವಗಳಲ್ಲಿದೆ. ಅನುಷ್ಠಾನಿಸುವವರು ಅರ್ಥವಿಸಿಕೊಳ್ಳಬಲ್ಲರೇ?

ಮೂರ್ಖರು ಕಟ್ಟುತ್ತಾರೆ, ಶಾರ್ಕರು ಮುಕ್ಕುತ್ತಾರೆ

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಸಾರ್ವಜನಿಕ ಹಣದ ಒಂದು ಸೇವಾ ಸಂಸ್ಥೆ. ಇದರ ವಿನಿಯೋಗಗಳೆಲ್ಲ (ಕಲಾಪಗಳು, ಪ್ರಕಟಣೆಗಳು) ಸಾರ್ವಜನಿಕರ ಸಾಹಿತ್ಯ ಹಿತಾಸಕ್ತಿಗಳನ್ನು ಗುಣೈಕ ದೃಷ್ಟಿಯಿಂದ, ಆದರೆ ಆರ್ಥಿಕವಾಗಿ ಅತ್ಯಂತ ಸುಲಭವಾಗಿ ಪೂರೈಸಿ ಪೋಷಿಸುವುದೇ ಆಗಿದೆ. ಯೋಜನೆಗಳಿಗೆ ಮುಕ್ತ ಕೈ, ಯೋಗ್ಯತೆಗಳಿಗೆ ಯುಕ್ತ ಪುರಸ್ಕಾರ, ಪ್ರಕಟಣೆಗಳಿಗೆ ನಿಯುಕ್ತ ಬೆಲೆ, ವಿತರಣೆ ಬೆಳೆಸುವಲ್ಲಿ ವೃತ್ತಿ ನಿರತರಿಗೆ ಉಚಿತ ರಿಯಾಯಿತಿ, ಸಾಹಿತ್ಯಕ ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕರಿಗೂ ಸಾಂಕೇತಿಕ (೧೦%) ದರ ಕಡಿತ ಇತ್ಯಾದಿ - ಅಕಾಡೆಮಿ ನಡೆದು ಬಂದಿರುವ ದಾರಿ. ಈ ತರ್ಕ ಮತ್ತು ನ್ಯಾಯದ ಪರಿಧಿಯೊಳಗೇ ಇರುವ ದಾಸ್ತಾನನ್ನು ಅಕಾಡೆಮಿ ಒಮ್ಮಿಂದೊಮ್ಮೆಗೆ ಅನುದ್ದೇಶಿತ ನೆಪದಲ್ಲಿ ೫೦% ರಿಯಾಯಿತಿಗೆ, ಅದೂ ವರ್ಷಪೂರ್ತಿ ಒಡ್ದುವ ಘೋಷಣೆ ಮಾಡಿದೆ. ಇದು ಅನ್ಯಾಯ, ಪೂರ್ವಸೂರಿಗಳ ಔದಾರ್ಯದ ಅವಹೇಳನ.

ಎಲ್ಲ ಸರಕಾರೀ ಸಂಸ್ಥೆಗಳ ಅದಕ್ಷ ಪುಸ್ತಕ ನಿರ್ವಹಣೆ ಅಂದರೆ, ಕೆಟ್ಟ ಮುದ್ರಣ, ಕಳಪೆ ರಟ್ಟು ಕಟ್ಟುವಿಕೆ, ನಿಜ ವಿತರಕರಿಗೆ ಪುಸ್ತಕ ಮಾಹಿತಿ ಕೊಡದಿರುವುದು, ಅವರಾಗಿಯೇ ತಿಳಿದು ಬೇಡಿಕೆ ಮಂಡಿಸಿದರೂ ಅತಿ ವಿಳಂಬ ಅಥವಾ ಕಳಿಸದೇ ಇರುವುದು ಇತ್ಯಾದಿ, ಸಾಹಿತ್ಯ ಅಕಾಡೆಮಿಯನ್ನೂ ಬಿಟ್ಟಿಲ್ಲ. ಹಾಗೆಂದು ಎಂತೆಂಥದ್ದೋ ಗೋಷ್ಠಿ ಕಮ್ಮಟಗಳ ಅದ್ದೂರಿ ಉದ್ಘಾಟನೆ ಮತ್ತು ಸಮಾರೋಪ, ಪುಸ್ತಕ ಬಿಡುಗಡೆಯ ನಾಟಕ ಎಂದಿತ್ಯಾದಿ ಪ್ರಚಾರಕೇಂದ್ರಿತವಾದ, ಆದರೆ ಶುದ್ಧ ಅಸಾಹಿತ್ಯಕ ಮತ್ತು ಅನುತ್ಪಾದಕ ಔಪಚಾರಿಕ ಕಾರ್ಯಕ್ರಮಗಳನ್ನು ಮಾಡದುಳಿದದ್ದೂ ಇಲ್ಲ. ಇದನ್ನರಿತೇ ಜಿ.ಎಸ್. ಶಿವರುದ್ರಪ್ಪನವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಕನಿಷ್ಠ ಖಾಸಗಿ ಪುಸ್ತಕ ವ್ಯಾಪಾರಿಗಳಿಂದಾದರೂ ತಮ್ಮ ಪ್ರಕಟಣೆಗಳ ನ್ಯಾಯವಾದ ವಿತರಣೆ ನಡೆಯಲಿ ಎಂದು ವ್ಯಾಪಾರಿ ವಟ್ಟಾ ಸೇರಿದಂತೆ ನಿಯಮಾವಳಿಗಳನ್ನು ರೂಪಿಸಿದರು. ಅವನ್ನವಲಂಬಿಸಿ, ಅಕಾಡೆಮಿಯ ಅದಕ್ಷತೆ ಸಹಿಸಿಕೊಂಡು, ಕಾಲಕಾಲಕ್ಕೆ ಅದರ ಪ್ರಕಟಣೆಗಳನ್ನು ನಗದು ಕೊಟ್ಟು ಕೊಂಡು, ವ್ಯವಹಾರದಲ್ಲಿ ತೊಡಗಿಸಿರುವ ನನ್ನಂಥವರ ನ್ಯಾಯಬದ್ಧವಾದ ಹಿತಾಸಕ್ತಿಯನ್ನು ಕಾಯುವ ಜವಾಬ್ದಾರಿ ಅಕಾಡೆಮಿಗಿರಲೇಬೇಕು. ಆದರೆ ಅದನ್ನು ಮರೆತ ಸನ್ನಿವೇಶ ಈಗ (೧೯೯೭) ಬಂದಿದೆ. ಸ್ವಾತಂತ್ರ್ಯ ಸ್ವರ್ಣೋತ್ಸವದ ನೆಪ ಹಿಡಿದು ಅಕಾಡೆಮಿ ಒಂದು ವರ್ಷ ಪೂರಾ ತನ್ನ ಎಲ್ಲ ಪ್ರಕಟಣೆಗಳನ್ನು ಶೇಕಡಾ ಐವತ್ತರ ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಮಾರುವುದಾಗಿ ಘೋಷಿಸಿದೆ. ಈ ಸನ್ನಿವೇಶದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮುಂದುವರಿದದ್ದು ಅಪ್ರಾಮಾಣಿಕ ವ್ಯವಹಾರ ನೀತಿಯೇ ಆಗುತ್ತದೆ. ಇದನ್ನೆಲ್ಲ ವಿವರಿಸಿ ಅಕಾಡೆಮಿ ಅಧ್ಯಕ್ಷರಿಗೆ ಪತ್ರಿಸಿದೆ. ಕೊನೆಯಲ್ಲಿ, “ಕೆಳ ಕಾಣಿಸಿರುವ ಸಂಶಯಗಳಿಗೆ ಸಮಾಧಾನ ಕೊಡಿ”, ಎಂದು ಸವಾಲೊಡ್ಡಿದೆ.

ಪ್ರಶ್ನೆ ೧. ಮೊದಲೇ ಸುಲಭ ಬೆಲೆಯಲ್ಲಿರುವವನ್ನು ಮತ್ತೆ ಇಳಿಸುವುದಾದರೆ ಮುದ್ರಿತ ಬೆಲೆ ಯಾಕೆ?
ಪ್ರಶ್ನೆ ೨. ಇಂದು ೫೦% ಸರಿಯೆಂದಾದರೆ ನಾಳೆ ೭೫% ಅಥವಾ ೧೦೦% ಘೋಷಣೆ ಆಗುವುದಿಲ್ಲ ಎಂದೇನು ಭರವಸೆ? [ಮುಂದೊಂದು ಕಾಲದಲ್ಲಿ, ಇನ್ನೊಂದೇ ಸರಕಾರೀ ಪುಸ್ತಕೋದ್ಯಮಿ - ಕನ್ನಡ ಪುಸ್ತಕ ಪ್ರಾಧಿಕಾರ, ತನ್ನದೇ ಭಾರೀ ಪುಸ್ತಕ ಗಂಟುಗಳನ್ನು ಹೊರನಾಡ ಕನ್ನಡ ಸಂಸ್ಥೆಗಳಿಗೆ ಉಚಿತವಾಗಿಯೇ ಕೊಟ್ಟದ್ದಿದೆ. ಇದರಿಂದ ಆ ಕಾಲದಲ್ಲಿ ನನ್ನ ಕಾಸರಗೋಡಿನ ವ್ಯಾಪಾರವೆಲ್ಲ ಪ್ರಭಾವಿತವಾಗಿತ್ತು. ಹಾಗೇ ಮತ್ತೊಂದು ಸರಕಾರೀ ಪುಸ್ತಕೋದ್ಯಮಿ – ಮೈವಿವಿನಿಲಯ, ತನ್ನ ಯಾವ ಪ್ರಯತ್ನವೂ ಇಲ್ಲದೇ ಸಂದ ಯಾವುದೋ ವರ್ಷದ ಲೆಕ್ಕದಲ್ಲಿ, ಅಧೀನ ಕಾಲೇಜುಗಳಿಗೆಲ್ಲ ವಿಶ್ವಕೋಶಾದಿ ತನ್ನ ಬಹುಪ್ರಕಟಣೆಗಳನ್ನು ಉಚಿತವಾಗಿಯೇ ಕೊಟ್ಟಿತ್ತು. ಆಗಲೂ ಆ ಅಧೀನ ಕಾಲೇಜುಗಳನ್ನೇ ನಂಬಿ ನಾನಿಟ್ಟ ದಾಸ್ತಾನು ನನ್ನನ್ನು ಬಡ್ಡಿ-ಮಗನನ್ನಾಗಿಸಿತ್ತು! - ೨೦೧೬]
ಪ್ರಶ್ನೆ ೩. ನಿಮ್ಮ ವಿತರಣಾ ಕೇಂದ್ರದಂತೆಯೇ ಕೆಲಸ ಮಾಡುತ್ತಿರುವ, ಆದರೆ ನಮ್ಮದೇ ಹಣ ತೊಡಗಿಸಿರುವ ನಮ್ಮ ದಾಸ್ತಾನಿಗೇನು ವ್ಯವಸ್ಥೆ?
ಪ್ರಶ್ನೆ ೪. ನಿಮ್ಮ ಪ್ರಕಟಣೆಗಳಲ್ಲಿ ಹೆಚ್ಚಿನ ಮಾರಾಟ ಯೋಗ್ಯತೆಯವನ್ನು ಗುರುತಿಸಿ ಯಾರೋ ಬಂಡವಾಳಶಾಹಿ ಖಾಸಗಿ ಪುಸ್ತಕೋದ್ಯಮಿ ಲಭ್ಯ ಪ್ರತಿಗಳಷ್ಟನ್ನೂ ಕೊಂಡು, ಮುಂದೆ ಮುದ್ರಿತ ಬೆಲೆಗೇ ಮಾರಿಕೊಳ್ಳುತ್ತಾನೆಂದಾದರೆ (ನೀವು ನಿರಾಕರಿಸುವುದು ಅಸಾಧ್ಯ) ನಿಮ್ಮ ಘೋಷಣೆಯ ಪಾವಿತ್ರ್ಯ ಎಲ್ಲುಳಿಯಿತು?

೧೯೯೭ರ ಸೆಪ್ಟೆಂಬರಿನಲ್ಲೇ ಪತ್ರದ ಯಥಾ ಪ್ರತಿಯನ್ನು ಕರ್ನಾಟಕ ಸರಕಾರದ ಅಕೌಂಟ್ಸ್ ಜನರಲ್ ಕಛೇರಿಗೂ ಪತ್ರಿಕಾಲಯಗಳಿಗೂ ಕಳಿಸಿ ಅನ್ಯಾಯ ತಡೆಗೆ ಕೋರಿದೆ. ಯಾರಿಂದ ಏನೂ ಆಗಲಿಲ್ಲ. ಪತ್ರಿಕೆಗಳೂ ಪ್ರಕಟಿಸಲಿಲ್ಲ. ಕಾಲಕ್ರಮದಲ್ಲಿ ಹೊಸ ಅಧ್ಯಕ್ಷರಾಗಿ ಬಂದವರು (ಅವರು ಹಿಂದಿನ ಕೂಟದಲ್ಲಿ ಸದಸ್ಯರೂ ಆಗಿದ್ದರು) ಈಚೆಗೆ (ಜುಲೈ ೧೯೯೮) ನನ್ನನ್ನು ಭೇಟಿಯಾದಾಗ ವೈಯಕ್ತಿಕ ನೆಲೆಯಲ್ಲಿ ತಪ್ಪೊಪ್ಪಿಕೊಂಡಿರುವುದಷ್ಟೇ ನನಗೆ ಸಣ್ಣ ಸಮಾಧಾನ. ಆದರೆ ಸರ್ಕಾರೀ ಯಂತ್ರದ ಜಡತೆ ಮತ್ತು ಆಡಳಿತ ಅಸಾಮರ್ಥ್ಯ ಮತ್ತೆ ಮತ್ತೆ ಇಂಥಾ ಪರಿಸ್ಥಿತಿಯನ್ನು ತರುತ್ತಲೇ ಇತ್ತು!

ವಿದ್ಯೆ ಇಲ್ಲದ ಸಂಸ್ಕೃತಿ

ದಿನಾಂಕ ೧-೧೨-೧೯೮೮ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಪತ್ರ:

ನಾನೊಬ್ಬ ಪುಸ್ತಕ ವ್ಯಾಪಾರಿ. ಕಳೆದ ಸೆಪ್ಟೆಂಬರಿನಲ್ಲಿ ಸಮೀಪದ ಒಂದು ಸಣ್ಣ ಊರಿನ ಸರಕಾರಿ ಕಾಲೇಜಿನವರು ಸುಮಾರು ಒಂದು ಸಾವಿರ ರೂಪಾಯಿ ಬೆಲೆಯ ಪುಸ್ತಕಗಳನ್ನು ನನ್ನಿಂದ ಕಡವಾಗಿ ಒಯ್ದರು. ಆಗ ಗ್ರಂಥಾಲಯಗಳ ಕ್ರಮದಂತೆ, ಒಂದು ವಾರದೊಳಗೆ ಪಾವತಿ ಕಳಿಸುವ ಆಶ್ವಾಸನೆ ಕೊಟ್ಟಿದ್ದರು. ವಾರ ಮೂರಾದರೂ ಪಾವತಿ ಬರಲಿಲ್ಲ. ನೆನಪಿನೋಲೆ ಕಳಿಸಿದೆ. ಕಟುವಾಯಿತೋ ಏನೋ, ಸ್ವತಃ ಪ್ರಾಂಶುಪಾಲರು ಕ್ಷಮೆ ಯಾಚಿಸುತ್ತ ಧಾವಿಸಿ ಬಂದರು. ಪರಿಸ್ಥಿತಿಯನ್ನು ಹೀಗೆ ವಿವರಿಸಿದರು. ”ವಾರ್ಷಿಕ ಅನುದಾನಗಳನ್ನು ಘನ ಸರಕಾರ ಜಿಲ್ಲಾ ಖಜಾನೆಗೆ ಬಿಡುಗಡೆ ಮಾಡಿದೆ. ಆದರೆ ನಾವದನ್ನು ನಗದೀಕರಿಸುವ ಹಂತದಲ್ಲಿ ಘನ ಸರಕಾರ ಆರ್ಥಿಕ ಕೊರತೆಯಿಂದ ನಮ್ಮ ನಿತ್ಯಾವಶ್ಯಕ ಖರ್ಚುಗಳವರೆಗೆ ಎಲ್ಲಕ್ಕೂ ತಡೆ ಹಾಕಿತು! ಈಗ ಕಾಲೇಜು ಗುಡಿಸುವವನ ದಿನಗೂಲಿ ನನ್ನ ಕಿಸೆಗೆ ಹೊರೆ. ಕಛೇರಿ ಬರವಣಿಗೆ ಸಾಮಗ್ರಿಗಳ ಸ್ಥಳೀಯ ಪೂರೈಕೆದಾರ ಕಡ ಪಟ್ಟಿಯ ಬೆಳೆವಣಿಗೆಯಿಂದ ಬಳಲಿ ಕೈಚೆಲ್ಲಿದ್ದಾನೆ. ಅದನ್ನೂ ಸೇರಿಸಿಕೊಂಡು ಈಗ ನಗರಕ್ಕೆ ಬಂದಿದ್ದೇನೆ. ಹಳೆ ಸಾಲಕ್ಕೆ ಸಹಕಾರ ಕೋರಿ, ಕನಿಷ್ಠ ಒಂದು ರೀಮು ಕಾಗದ ಹೊಸ ಸಾಲವಾಗಿ ಪಡೆಯಲು ಪ್ರಯತ್ನಿಸಬೇಕಾಗಿದೆ.”

ಬಹುಶಃ ಆ ಕಾಗದದಲ್ಲಿ ನನ್ನಂಥವರ ನೆನಪಿನೋಲೆಗಳಿಗೆ ಉತ್ತರ ಬರೆಯಬಹುದೋ ಏನೋ ಎಂದು ನಾನು ಯೋಚಿಸುತ್ತಿದ್ದಾಗ, ದಿನದ ಟಪಾಲು ಬಂತು. ಅದರಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ‘ಕನಕ ಜಯಂತ್ಯುತ್ಸವ’ದ ಆಮಂತ್ರಣ ಬಂದಿತ್ತು. ಹಾಲು ಬಿಳುಪಿನ ಹೊಳಪಿನ ಕಾರ್ಡಿನ ಮೇಲೆ ಚತುರ್ವರ್ಣ ಮುದ್ರಣ. ಅದರ ಮೂರು ಮಡಿಕೆಗಳ ತುಂಬಾ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಕಳಕಳಿ ತುಂಬಿ ಪ್ರತ್ಯೇಕ ಲಗತ್ತಿಸಿದ ಇನ್ನೊಂದು ಸುಂದರ ಹಾಳೆಗೂ ಉಕ್ಕಿ ಹರಿದಿತ್ತು. ಇದು ತೇಲುವ ಮಂಜುಗಡ್ಡೆಯ ತುದಿ ಮಾತ್ರ. ಐವತ್ತಕ್ಕೂ ಮಿಕ್ಕು ವಿಶೇಷ ಆಹ್ವಾನಿತರು, ಹೆಬ್ಬೊತ್ತಗೆ ಪ್ರಕಾಶನೇತ್ಯಾದಿ ಇನ್ನಷ್ಟು ವಿವರಗಳು ಇದ್ದುವು. ಇದರ ಹಿನ್ನೆಲೆಯಲ್ಲಿ ಕಣ್ಣು ಹಾಯಿಸಿದರೆ ಇದಕ್ಕೂ ಮಿಕ್ಕಿದ ಉತ್ಸಾಹದ ಉತ್ಸವಗಳೆಷ್ಟು! ಪುರಂದರ, ಡಿವಿಜಿ, ವಿಶ್ವಕನ್ನಡ ಇತ್ಯಾದಿ. ಅಲ್ಲೆಲ್ಲ ಸಭೆ ಬರ್ಖಾಸ್ತಿನೊಡನೆ ಮುಗಿಸಲಾಗದ ಹೊಣೆಗಾರಿಕೆಗಳಾಗಿ ಪುರಂದರ ಕೃತಿ ಸಂಪುಟ, ಡಿವಿಜಿ ಕೃತಿ ಶ್ರೇಣಿಗಳು, ವಿಶ್ವ ಕನ್ನಡದ ಹಲವು ನೂರು ಪುಸ್ತಕಗಳು, ಸ್ಮರಣ ಸಂಚಿಕೆಗಳು, ಕಲಾಪ ಸಂಗ್ರಹಗಳೂ ಇದ್ದುವು. ಸೂಕ್ಷ್ಮವಾಗಿ ಹೇಳುವುದಾದರೆ ಅವೆಲ್ಲ ಇಂದಿಗೂ ಪರಿಪೂರ್ಣವಾಗಿಲ್ಲ, ಸಾರ್ಥಕತೆಯನ್ನೂ ಕಂಡಿಲ್ಲ. ಆದರೂ ಇಲ್ಲಿ ಹಣದ ಹೊಳೆ ಅಬ್ಬರಿಸುತ್ತಿದೆ.


ರಾಜ್ಯಾದ್ಯಂತ ಹರಡಿರುವ ವಿದ್ಯಾಸಂಸ್ಥೆಗಳು ಕಲೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ, ಬೆಳವಣಿಗೆಗೆ ಮೂಲ ದ್ರವ್ಯಗಳು. ಇವನ್ನು ಪುಷ್ಟಿ ಮಾಡದೇ ನಡೆಸುವ ಉತ್ಸವಗಳು ಶಿಥಿಲ ಮಂಟಪಕ್ಕಿಟ್ಟ ಹೊನ್ನ ಕಳಶಗಳು; ಸಂಸ್ಕೃತಿಯ ಭ್ರಷ್ಟತೆಗೆ ನೀಚ ರಾಜಕೀಯ ಕೊಡುಗೆಗಳು.

1 comment:

  1. ಸರಕಾರಿ ಪ್ರಾಯೋಜಿತ ವ್ಯವಸ್ಥೆಗಳ ಬಗ್ಗೆ "ತೇಲುವ ಮಂಜುಗಡ್ಡೆಯ ತುದಿ (ಟಿಪ್ ಆಫ್ ಐಸ್ ಬರ್ಗ್)" ಅತ್ಯುತ್ತಮ ಹೋಲಿಕೆ. ಕಾಣುವಂತಹ ವ್ಯರ್ಥವೆಚ್ಚಗಳು ಶೇ. ೨೦ ಆದರೆ ಮುಳುಗಿರುವ (ಕಾಣದಿರುವ) ಅನಗತ್ಯ ವೆಚ್ಚಗಳು ಶೇ. ೮೦.

    ReplyDelete