ಅಧ್ಯಾಯ ಹದಿನೆಂಟು
ಲಕ್ಷ್ಮೀ ಟೀಚರಿಗೆ ನಾನು ಸಾಕುಮಗಳಂತೆ ಆಗಿದ್ದೆ. ಅಪ್ಪ ತೀರಿದ ಮೇಲೆ ನನ್ನ ಮದುವೆಯ ಬಗ್ಗೆ ಆಗಾಗ ಅಮ್ಮನಲ್ಲಿ ಮಾತನಾಡತೊಡಗಿದಾಗ ಅಮ್ಮನಿಗೆ ಅವರು ನಮ್ಮ ಪಾಲಿನ ದೇವರಾಗಿಯೇ ಕಂಡಿದ್ದರು. ಅಪ್ಪನಲ್ಲಿ ಮಗಳ ಮದುವೆಯ ಬಗ್ಗೆ ವಾದಿಸಿ ಒಪ್ಪಿಸುವುದು ಅಮ್ಮನಿಗೆ ಸಾಧ್ಯವಿರಲಿಲ್ಲ. ಈಗ ಮುಂದೆ ನಿಂತು ತಾನೇ ಮಾಡಬೇಕು. ಮಗ ದೊಡ್ಡವನಾಗಿದ್ದಾನೆ. ಅವನ ಸಹಾಯದಿಂದಲಾದರೂ ಮಗಳಿಗೊಂದು ಗಂಡು ಹುಡುಕಬೇಕೆಂಬ ಛಲ ಅಮ್ಮನಲ್ಲಿ ಮೂಡಿತ್ತು. ಅದೇ ಸಮಯದಲ್ಲಿ ಲಕ್ಷ್ಮೀ ಟೀಚರು ಹಸಿರು ಪತಾಕೆ ಹಾರಿಸಿದ್ದು ಕಂಡು ಇನ್ನೇನು ಮಗಳಿಗೆ ಮದುವೆ ಮಾಡಿಯೇ ಸಿದ್ಧ ಎಂಬ ನಿರ್ಧಾರ ಮಾಡಿಬಿಟ್ಟಿದ್ದರು.
ಅಮ್ಮ ತಾನು ಮದುವೆಯೆಂಬ ವ್ಯವಸ್ಥೆಯಿಂದ ದೀರ್ಘಕಾಲ ನೋವು, ಹಿಂಸೆ ಅನುಭವಿಸಿದರೂ “ನೀನು ಮದುವೆಯಾಗಲೇಬೇಕು” ಎಂದು ಬಯಸುತ್ತಾರಲ್ಲಾ ಇದೇ ಈ ಜಗತ್ತಿನ ವಿಸ್ಮಯ. ಎಲ್ಲಾ ತಾಯಂದಿರೂ ಹೀಗೆಯೇ ಅಲ್ಲವೇ? ಮೋಹದ ಪಂಜರದಲ್ಲಿ ಸಿಕ್ಕಿಸಿ ಎಲ್ಲರನ್ನೂ ಪಳಗಿಸುತ್ತದೆ ಈ ಮದುವೆಯೆಂಬ ವ್ಯವಸ್ಥೆ. ನನ್ನಮ್ಮನ ಬಗ್ಗೆಯೇ ಅಪ್ಪ ಹೇಳಿದ ಮಾತು ನೆನಪಾಗುತ್ತದೆ. ``ಮಗಳೇ, ನಿನ್ನಮ್ಮ ಹೀಗಿರಲಿಲ್ಲ. ಸರ್ಕಸ್ಸಿನ ಹುಲಿಯನ್ನು ಪಳಗಿಸಿದಂತೆ ನಾನು ಪಳಗಿಸಿದ್ದೇನೆ'' ಎಂದಿದ್ದರು. ಪಿತೃಪ್ರಧಾನ ವ್ಯವಸ್ಥೆಯ ಅಪ್ಪಟ ಮಾದರಿಯಾಗಿದ್ದರು ನನ್ನಪ್ಪ. ಹೆಂಡತಿಯನ್ನೂ ಮಗಳನ್ನೂ ತನಗೆ ಬೇಕಾದಂತೆ ಪಳಗಿಸಿ ಒಂದು ಚೌಕಟ್ಟಿನೊಳಗೆ ಅವರು ಬಂಧಿಸಿಬಿಟ್ಟಿದ್ದರು. ಆದುದರಿಂದಲೋ ಏನೋ `ಗುಡ್ಗರ್ಲ್ ಸಿಂಡ್ರೋಮ್'ನಿಂದ ನಾನು ನರಳುತ್ತಿದ್ದೆ. ಇದರಲ್ಲಿ ಅಪ್ಪನ ಸ್ವಾರ್ಥವಿರುವುದು ನಿಜವಾದರೂ ಅವರ ದೈನೇಸಿ ಸ್ಥಿತಿಯಲ್ಲಿ ಹೀಗೆ ಮಾಡದೆ ಬೇರೆ ದಾರಿಯೇ ಇರಲಿಲ್ಲ. ಮಕ್ಕಳು ತಮ್ಮನ್ನು ಕಾಪಾಡಬೇಕು ಎನ್ನುವುದು ಎಲ್ಲಾ ಹೆತ್ತವರ ಮನದಾಳದ ಬಯಕೆಯೂ ಹೌದು. ಹೆತ್ತವರನ್ನು ಅವರ ಕಷ್ಟಕಾಲದಲ್ಲಿ ರಕ್ಷಿಸುವುದು ಮಕ್ಕಳ ಕರ್ತವ್ಯವೂ ಧರ್ಮವೂ ಹೌದು. ಆದರೆ ಆಗ ನಾನು ಮದುವೆಯ ಬಗ್ಗೆ ಯೋಚನೆ ಮಾಡಲಾರದಷ್ಟು ಬೇರೆ ವಿಷಯಗಳಲ್ಲಿ ತಲ್ಲೀನಳಾಗಿದ್ದೆ. ಬಾಲ್ಯದಿಂದಲೂ ನನಗೊಂದು ಹಠವಿತ್ತು. ಸೆಗಣಿಯ ಹುಳುಗಳಂತೆ ಅನಾಮಧೇಯರಾಗಿ ಬಂಧುಗಳಿಂದ ತಿರಸ್ಕೃತರಾಗಿ ನಾವು ಬದುಕುತ್ತಿದ್ದೆವು. ಸಮಾಜದಲ್ಲಿ ಮನುಷ್ಯರೆಂದು ಕರೆಸಿಕೊಳ್ಳುವಂತಹ ಸ್ಥಿತಿ ಬರಬೇಕು ಎಂಬುದು ನನ್ನ ಪ್ರಯತ್ನವಾಗಿತ್ತು. ನನ್ನ ಓದು, ಅಧ್ಯಯನ, ಸಾಹಿತ್ಯ ಕಲೆಗಳ ಮೇಲಿನ ಆಸಕ್ತಿಗಳು ಮದುವೆಯ ನೆನಪೇ ಇಲ್ಲದಂತೆ ನನ್ನನ್ನು ಬೆಳೆಸಿತ್ತು. ನನ್ನ ಸರಳ ಜೀವನಶೈಲಿಯಿಂದಾಗಿ ನಾನು ಸಂನ್ಯಾಸಿಯೆಂಬ ಬಿರುದು (ಬೈಗುಳವಾಗಿಯೂ) ಪಡೆದಿದ್ದೆ. ಯಾವ ವರನೂ ಬಂದು ಹೆತ್ತವರಲ್ಲಿ ಮದುವೆಯ ಬೇಡಿಕೆ ಇಡಲಿಲ್ಲವಾದುದರಿಂದ ನನ್ನ ಪ್ರಪಂಚದಲ್ಲಿ ನಾನು ನಿಶ್ಚಿಂತಳಾಗಿದ್ದೆ.
ಮದುವೆಯ ವಯಸ್ಸು ಅಂದರೆ ಹದಿಹರೆಯ. ಅದು ದಾಟಿದ ಕೂಡಲೇ ಮದುವೆಯ ಬಗ್ಗೆ ನಮಗಿಂತ ಹೆಚ್ಚು ಆಸಕ್ತಿ ಉಳಿದವರಿಗೆ ಅಂದರೆ ನಮ್ಮ ಸುತ್ತಮುತ್ತಲಿನವರಿಗೆ ಇರುತ್ತದೆ. ನನ್ನ ಸಹೋದ್ಯೋಗಿ ಪುರುಷರಿಗೆಲ್ಲಾ ನಾನೊಂದು ವಿಚಿತ್ರ ವಸ್ತುವಿನಂತೆ ಕಾಣುತ್ತಿದ್ದೆನೋ ಏನೋ? ಕೂಟದಲ್ಲಿ ಮಾತನಾಡುವಾಗ ವಿಷಯ ಸುತ್ತಿ ಸುತ್ತಿ ಕೊನೆಗೆ ಮದುವೆಯ ಬಗ್ಗೆ ಅದರಲ್ಲೂ ಕಾಮದ ಕೇಂದ್ರಕ್ಕೆ ಬಂದು ನಿಲ್ಲುತ್ತಿದ್ದುದು ನನ್ನಲ್ಲಿ ಸೋಜಿಗವನ್ನುಂಟುಮಾಡುತ್ತಿತ್ತು. ಮದುವೆಯ ವಯಸ್ಸು ದಾಟಿದ ಹೆಣ್ಣುಗಳೆಂದರೆ `ವಾರೀಸುದಾರರಿಲ್ಲದ ಗದ್ದೆ'ಗಳೆಂದೇ ಭಾವಿಸುವ ಸಮಾಜದ ಮನಸ್ಥಿತಿ ನನ್ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತಿದ್ದವು. ``ಏನು? ಮದುವೆಯಾಗುವುದಿಲ್ಲವಾ? ಏಕೆ?'' ಈ ಪ್ರಶ್ನೆಗಳು ಮೊದ ಮೊದಲು ಮುಜುಗರ ಹುಟ್ಟಿಸುತ್ತಿದ್ದುವು. ಕೇಳಿ ಕೇಳಿ ಚಿಟ್ಟು ಹಿಡಿದ ಮೇಲೆ ``ಆಗುತ್ತೇನೆ, ಮಾಡುತ್ತೀರಾ?'' ಎಂದು ಪ್ರಶ್ನೆ ಕೇಳಿದವರ ಮುಖಕ್ಕೆ ಎಸೆದ ಮೇಲೆ ಸ್ವಲ್ಪ ಕಡಿಮೆಯಾದವು. ಮದುವೆ ಪ್ರಾಯದ ಗಂಡು ಮಕ್ಕಳಿಗೂ ಈ ಪ್ರಶ್ನೆ ಕೇಳುವುದು, ಛೇಡಿಸುವುದು ಸಾಮಾನ್ಯ ಸಂಗತಿ. ಒಂದು ಸಣ್ಣ ವ್ಯತ್ಯಾಸವೆಂದರೆ ಗಂಡು ಹುಡುಗ ಮದುವೆ ಆಗುತ್ತಾನೆ. ಹುಡುಗಿಗೆ ಮದುವೆ ಮಾಡುತ್ತಾರೆ ಅಷ್ಟೆ. ನಮ್ಮಂತಹ ಕೆಳ ಮಧ್ಯಮ ವರ್ಗದ ಸಮಾಜದಲ್ಲಿ ಮದುವೆ ಆಗದವಳನ್ನು ಎಲ್ಲರೂ ಪ್ರಶ್ನಿಸುವವರೇ. ಮದುವೆ ಆಗದೆ ಮುಕ್ತಿಯೇ ಇಲ್ಲ ಎಂಬಷ್ಟು ಒತ್ತಡಗಳಿರುತ್ತವೆ. ಅದೂ ನಾನು ಸಾಮಾನ್ಯ ಪ್ರೈಮರಿ ಶಾಲಾ ಟೀಚರಾಗಿರುವಾಗ ಯಾರಾದರೊಬ್ಬ ಗಂಡುಸನ್ನು ನನಗೆ ಗಂಟು ಹಾಕುವುದಕ್ಕೆ ಪ್ರಯತ್ನಿಸಿದವರೂ ಇದ್ದರು. ಮದುವೆ ಅನಿವಾರ್ಯವಲ್ಲವೆಂದು ಮನಸ್ಸು ಹೇಳುತ್ತಿತ್ತು. ನನ್ನ ಕಣ್ಣ ಮುಂದೆ ಅವಿವಾಹಿತೆಯರಾಗಿ ಬದುಕಿದ ಹಲವರು ಮಾದರಿಗಳಾಗಿದ್ದರು. ಅಲ್ಲದೆ ನಾನು ಕಲಿತದ್ದು ಉದ್ಯೋಗ ಕೈಗೊಂಡದ್ದು ಸಂನ್ಯಾಸಿನಿಯರ ಶಾಲೆಗಳಲ್ಲಿಯೇ. ಆದುದರಿಂದ ಆಧ್ಯಾತ್ಮದ ಸೆಳೆತವು ವಿವಾಹದ ಆಕರ್ಷಣೆಯನ್ನು ತಗ್ಗಿಸಬಹುದೇ ಎಂದು ಯೋಚಿಸಿದ್ದುಂಟು. ಹಲವು ವರ್ಷಗಳ ಕಾಲ ಅದೇ ಭ್ರಮೆಯಲ್ಲಿ ಬದುಕಿದ್ದುಂಟು. ಗಂಡು ಹೆಣ್ಣಿನ ದೇಹದೊಳಗೆ ನಿಸರ್ಗಸಹಜವಾಗಿ ಉಂಟಾಗುವ ಕೆಮಿಸ್ಟ್ರಿ ಇದೆಯಲ್ಲಾ ಅದನ್ನು ಯಾವ ಅಧ್ಯಾತ್ಮವೂ ತಡೆಯಲಾರದು ಎಂದು ಅರ್ಥವಾಗತೊಡಗಿತು. ಸನ್ಯಾಸದ ಮುಖವಾಡದ ಹಿಂದೆಯೂ ನಿಸರ್ಗದತ್ತವಾದ ಬಯಕೆಗಳಿರುವುದು ಸಾಧ್ಯವೆಂಬುದನ್ನು ನನ್ನ ಜೀವನಾನುಭವಗಳು ಕಲಿಸಿದವು. ಕಾಮಕ್ಕೆ ಕಣ್ಣಿಲ್ಲವೆಂಬುದನ್ನು ನನ್ನ ಬಾಲ್ಯದ ನೆರೆಕರೆಯಲ್ಲಿರುವ ಕೆಲವು ಕುಟುಂಬಗಳ ಜೀವನಶೈಲಿಯಿಂದ ಕಂಡಿದ್ದೆ. ಇವರಿಗೆಲ್ಲಾ ನಾಚಿಕೆಯೆಂಬ ಪದದ ಅರ್ಥವೇ ಗೊತ್ತಿಲ್ಲವೇನೋ ಎಂದು ಭಾವಿಸಿದ್ದೆ. ಮುಂದೆ ಮನಸ್ಸು ಪಕ್ವವಾದಂತೆಲ್ಲಾ ಲೈಂಗಿಕ ಕಾಮವು ಮನುಷ್ಯನಲ್ಲಿರುವ ಅಪೂರ್ವವಾದ ಶಕ್ತಿ. ಅದರ ಬಗ್ಗೆ ನಾಚಿಕೆಪಡುವ ಅಗತ್ಯವೇನೂ ಇಲ್ಲ ಎಂದು ಅರ್ಥವಾಯಿತು. ಯಾವಾಗ ತಾಂತ್ರಿಕರ ಉಪಾಸನೆಯ ಬಗ್ಗೆ ಪುಸ್ತಕ ಓದಿದೆನೋ ಅಂದು ನನ್ನ ತಲೆ ಚಿಂದಿ ಚಿತ್ರಾನ್ನವಾಯಿತು. ಹೆಣ್ಣು ಮಾಯೆ, ನರಕಕ್ಕೆ ದಾರಿ ಎಂದ ದಾರ್ಶನಿಕರ ತತ್ವಕ್ಕೆ ತೀರಾ ವಿರುದ್ಧವಾದ ಈ ಸಿದ್ಧಾಂತಗಳನ್ನು ಹೇಗೆ ಸ್ವೀಕರಿಸುವುದೆಂದು ತಿಳಿಯದೆ ತಿಂಗಳುಗಟ್ಟಲೆ ಒದ್ದಾಡಿದ್ದುಂಟು. ಕೂಚುಭಟ್ಟನು ಮರುಳಾದದ್ದು ಇಂತಹ ಪುಸ್ತಕಗಳನ್ನು ಓದಿದ ಮೇಲೆಯೇ ಇರಬೇಕು ಎಂಬ ಸಂಶಯ ಮೂಡಿತು. ಈ ವಿಶ್ವದಲ್ಲಿದ್ದ ಎಲ್ಲಾ ವಿಷಯಗಳು ಅರ್ಥವಾಗಲೇಬೇಕೆಂಬ ಹಠ ಒಳ್ಳೆಯದಲ್ಲ. ನನಗೆ ಗೊತ್ತಿರದ ಎಷ್ಟೋ ವಿಷಯಗಳು ಇರಬಹುದು. ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಕ್ಷೇಮವೆಂದು ನಿರ್ಧರಿಸಿದೆ. ಆಚಾರ್ಯ ರಜನೀಶರು ಬರೆದ ಪುಸ್ತಕಗಳನ್ನು ಓದಿದ ಮೇಲೆ ಮನಸ್ಸು ಮತ್ತು ಮೈಗಿರುವ ಸಂಬಂಧಗಳು ಸತ್ಯವಿರಬಹುದು ಎಂದು ಅನಿಸಿತು. ಗುರು ಸಿಗ್ಮಂಡ್ ಫ್ರಾಯ್ಡ್ ಮತ್ತು ಅವನ ಶಿಷ್ಯ ಯಾಂಗ್ ಸ್ವಲ್ಪ ಭಿನ್ನ ಭಿನ್ನವಾಗಿ ಕಾಮದ ಬಗ್ಗೆ ತಮ್ಮ ವಿಚಾರಗಳನ್ನು ತಿಳಿಸಿದರೂ ಮೂಲ ಬೇರು ಒಂದೇ ಎಂಬುದನ್ನು ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳತೊಡಗಿದೆ. ಒಟ್ಟಾರೆಯಾಗಿ ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದೇ ನನಗೆ ಕುತೂಹಲದ ವಿಷಯವಾಯಿತು.

ಆಧುನಿಕ ಕಾಲದಲ್ಲಿ 'ಲಿವ್ ಟುಗೆದರ್' ಎಂಬ ವ್ಯವಸ್ಥೆಯು ಯುವಪೀಳಿಗೆಯಲ್ಲಿ ಹೆಚ್ಚುತ್ತಿರುವುದು ನಿಜವಾದರೂ ಅದು ಮದುವೆಯೆಂಬ ವ್ಯವಸ್ಥೆಗೆ ಪರ್ಯಾಯವಾಗಲಾರದು. ಮದುವೆ ವ್ಯವಸ್ಥೆಯ ಅಡಿಪಾಯವು ಅದುರುತ್ತಿರುವ ಲಕ್ಷಣಗಳೆಷ್ಟೇ ಇದ್ದರೂ, ಸಂತಾನ ಸುರಕ್ಷೆಗೆ ಇದಕ್ಕಿಂತ ಶ್ರೇಷ್ಠವಾದ ಬೇರೆ ವ್ಯವಸ್ಥೆಗಳಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು.
(ಮುಂದುವರಿಯಲಿದೆ)
ಸಮಾಜದ. ನೀತಿನಿಯಮಗಳನ್ನು ನಿಮ್ಮ ಮದುವೆ ಬಗೆಗಿನ ದೃಷ್ಟಿಕೋನಗಳನ್ನು. ಓದಿ ದಂಗಾದೆ...ಮನಮುಟ್ಟುವಂತೆ ಹೇಳಬಲ್ಲಿರಿ ನೀವು...ಪ್ರತಿಯೊಬ್ಬರಿಗೂ ಅರ್ಥ ವಾಗುವಂತೆ..ಥೇಂಕ್ಸ
ReplyDeleteಇವನ್ನು ಇಲ್ಲಿ ತರೆದಿಟ್ಟು ನಮಗೆ ಉಣಬಡಿಸಿದ್ದಿಕ್ಕೆ.ಅಶೋಕವರ್ಧನ್ಸರ್ (- ಫೇಸ್ ಬುಕ್ಕಿನಲ್ಲಿ)
ಲೇಖಕಿಯರ ಸಂಘದ ಹಿರಿಯ ಲೇಖಕಿಯರ ಸಮಾವೇಶ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಾಗ ರೋಹಿಣಿಯವರ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದರು. ನನ್ನಂತಹ ಕೆಲವರಿಗೆ ಪ್ರತಿಕ್ರಿಯೆಯೇ ಬರಲಿಲ್ಲ. (ಫೇಸ್ ಬುಕ್ಕಿನಲ್ಲಿ)
ReplyDeleteಬಿ. ಎಂ. ರೋಹಿಣಿಯವರ ಪ್ರಬುದ್ಧ ಚಿಂತನೆಗಳು..... ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ.
ReplyDeleteಮಂಗಳ ಗಂಗೋತ್ರಿಯಲ್ಲಿ ಕರ್ನಾಟಕ ಲೇಖಕಿಯರ ಸಂಘದ ಲೇಖ- ಲೋಕ ದಲ್ಲಿ ರೋಹಿಣಿಯವರು ಬಿಚ್ಚಿಟ್ಟ ಮನದಾಳದ ಮಾತುಗಳೂ ಕೇಳುಗರನ್ನು ಹಿಡಿದಿಟ್ಟು ಚಕಿತರಾಗಿಸಿದ್ದುವು.ವಿಚಾರಪೂರ್ಣನೇರ ನುಡಿಗಳವು.
ReplyDelete`ಗುಡ್ ಗರ್ಲ್ ಸಿಂಡ್ರೋಮ್'ಿಂದಿಗೂ ಈ ಸಿಂಡ್ರೋಮಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಿಂಡ್ರೋಮ್ ಇಲ್ಲದವಳಿಗೆ ಗಂಡುಬೀರಿ ಅಂತ ನಾಮಕರಣ.
ReplyDelete