05 January 2016

ಮನಸಿಜನ ಮಾಯೆ

(ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
– ದೀಪದಡಿಯ ಕತ್ತಲೆ)
ಅಧ್ಯಾಯ ಒಂಬತ್ತು

ಕಳೆದ ಶತಮಾನದ ಪೂರ್ವಾರ್ಧದಲ್ಲಿ ಬಿಕರ್ನಕಟ್ಟೆಯಲ್ಲಿ ಗಾಡಿಗಳ ಸುಂಕ ವಸೂಲಿ ಮಾಡುವ ಒಂದು ಕಟ್ಟೆ ಇತ್ತುಗೇಟಿನ ಕೊಗ್ಗಣ್ಣ ಎಂಬವರಿಗೆ ಅಧಿಕಾರವಿತ್ತು. ಅಧಿಕಾರ ಮತ್ತು ಸಂಪತ್ತು ಇದ್ದರೆ ಊರಿನಲ್ಲಿ ಗೌರವ ತಾನಾಗಿಯೇ ಬರುತ್ತದೆ ಅಲ್ಲವೇ? ಅದರ ಜೊತೆಯಲ್ಲಿ ಸ್ವಲ್ಪ ಗೂಂಡಾಗಿರಿ, ಪೊಲೀಸ್ ಕೇಸೆಲ್ಲಾ ಇದ್ದರೆ ಕೇಳಬೇಕೇ? ಪರವೂರಲ್ಲೂ ಗೌರವ ಪ್ರಸಿದ್ಧಿ ಲಭಿಸುತ್ತಿತ್ತು. ಅಂತಹ ಪ್ರಸಿದ್ಧಿಯ ಕಾಲದಲ್ಲಿ ಅವರ ಆಸರೆ ಬಯಸಿ ಬರುವವರಿರುವುದು ಸಹಜ ತಾನೇ? ದೊಡ್ಡ ಮೊಗಸಾಲೆಯಿದ್ದ ಮಾಳಿಗೆಯ ಮನೆಯಲ್ಲಿ ಬಂಧುಗಳು ಆಳುಕಾಳುಗಳಿಂದ ತುಂಬಿ ಸದಾ ಗಲ ಗಲ ಸದ್ದು ಮಾಡುತ್ತಿತ್ತು. ಅವರ ಗಂಡು ಮಕ್ಕಳಿಬ್ಬರೂ ವಿದ್ಯಾವಂತರಾಗಿ ಸರಕಾರೀ ನೌಕರಿಯಲ್ಲಿದ್ದರು. ಮಗಳನ್ನು ಬೋಳಾರದ ಕಟ್ಟೆಮನೆಯ ಕೊರಗಪ್ಪ ಎಂಬವರಿಗೆ ಮದುವೆ ಮಾಡಿಕೊಟ್ಟರು. ಕೊರಗಪ್ಪ ಅವರು ನಮ್ಮ ಸಮುದಾಯದಲ್ಲಿ ಮೊತ್ತಮೊದಲು ವಕೀಲರಾಗಿ ಬೇರೆ ಬೇರೆ ಕಡೆಗಳಲ್ಲಿ ಡಿಸ್ಟ್ರಿಕ್ಟ್ ಜಡ್ಜ್ ಆಗಿ ಕೀರ್ತಿ ಗಳಿಸಿದ್ದರು. ಆಗ ತಾನೇ ಹಿಂದುಳಿದ ಸಮುದಾಯ ಶಿಕ್ಷಣದ ಸಮ್ಮೋಹಿನಿಗೆ ಒಳಗಾಗಿತ್ತು. ಶಿಕ್ಷಕ, ನರ್ಸ್, ಕ್ಲಾರ್ಕ್ ಮುಂತಾದ ಉದ್ಯೋಗಗಳು ಇವರನ್ನು ಬಾಗಿಲು ತೆರೆದು ಸ್ವಾಗತಿಸುತ್ತಿತ್ತು. ಡಾಕ್ಟರು, ವಕೀಲ ಮುಂತಾದ ಹುದ್ದೆಗಳನ್ನು ಪಡೆಯುವುದು ಹಿಂದುಳಿದ ವರ್ಗದವರಿಗೆ ಅಷ್ಟು ಸುಲಭವಿರಲಿಲ್ಲ. ಆದರೂ ಕಟ್ಟೆಮನೆಯ ಕೊರಗಪ್ಪನವರು ಮದ್ರಾಸಿನಲ್ಲಿ ವಕೀಲವೃತ್ತಿ ಕಲಿತು, ಬೇರೆ ಬೇರೆ ಜಿಲ್ಲೆಗಳ ಕೋರ್ಟುಗಳಲ್ಲಿ ಜಡ್ಜ್ ಆದದ್ದು ವಿಶೇಷ. ಗೇಟಿನ ಕೊಗ್ಗಣ್ಣನ ಆರ್ಥಿಕ ಗಟ್ಟಿತನವು ಮಗಳಿಗೆ ಸುಶಿಕ್ಷಿತ ವರನನ್ನು ಪಡೆಯಲು ಸಾಧ್ಯವಾಯಿತು. ಬಂಧು, ಬಳಗ, ಪರಿವಾರ ಹೆಚ್ಚಾಗುತ್ತಾ ಬಂದಂತೆಲ್ಲಾ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆದೇ ಇತ್ತು. ಜೊತೆಗೆ ನಾನಾ ರೀತಿಯ ಒಳ್ಳೆಯ ಮತ್ತು ಕೆಟ್ಟ ಹವ್ಯಾಸಗಳು, ಚಟಗಳು ಮನೆತನದ ಪ್ರತಿಷ್ಠೆ ಕುಸಿಯುವಂತೆ ಮಾಡಿತು. ಕೂಡಿಟ್ಟ ಹೊನ್ನು ಎಷ್ಟು ಕಾಲ ಬಂದೀತು? ಇವರ ಕಾಲದ ಬಳಿಕ ದೊಡ್ಡ ಮನೆಯೂ ಸಾಲಗಾರರ ವಶವಾಗಿ ಬಳಿಕ ಸಣ್ಣ ಮನೆಯಲ್ಲಿ ಹಿರಿಮಗ ವಾಸ ಮಾಡತೊಡಗಿದ.

ಸಮಯದಲ್ಲಿ ಎಲ್ಲೋ ದೂರದ ಹಳ್ಳಿಯ ವಿಧವೆಯೊಬ್ಬಳು ತನ್ನ ಮಕ್ಕಳ ಜೊತೆಗೆ ಮನೆಗೆ ಆಶ್ರಯ ಬೇಡಿ ಬಂದಳು. ಆರ್ಥಿಕ ಸ್ವಾವಲಂಬನೆ ಇಲ್ಲದ ಕಾಲದಲ್ಲಿ ಗಂಡ ಸತ್ತರೆ ಬೀದಿಗೆ ಬೀಳುವ ಪರಿಸ್ಥಿತಿ. ತವರುಮನೆಯಲ್ಲಿ ಕರೆದು ಆದರಿಸುವವರಿದ್ದರೆ ಪುಣ್ಯ. ಇಲ್ಲದವರ ಸ್ಥಿತಿ ಹೀಗೆ ಯಾರಾದರೂ ಶ್ರೀಮಂತರ ಮನೆ ಬಾಗಿಲು ಬಡಿದು ಆಶ್ರಯ ಪಡೆದು ಅವರ ಮನೆಯ ಚಾಕರಿ ಮಾಡಿ ಜೀವನ ನಡೆಸಬೇಕಿತ್ತು. ಹೀಗೆ ಬಂದ ತನ್ನ ಮಕ್ಕಳಿಗೆ ಒಂದು ಭದ್ರ ನೆಲೆ ಕಂಡದ್ದು ಗೇಟಿನ ಕೊಗ್ಗಣ್ಣನ ಮಗ ಸುಂದರಣ್ಣನ ಮನೆಯಲ್ಲಿ. ಗಂಡುಮಕ್ಕಳು ಆಗ ತಾನೇ ಪ್ರಾರಂಭವಾದ ಬೀಡಿ ಉದ್ಯಮದಿಂದ ಬದುಕಿನ ದಾರಿಯನ್ನು ಕಂಡುಕೊಂಡರು. ಹೆಣ್ಣುಮಕ್ಕಳು ತಾಯಿಯ ಜೊತೆ ಇದೇ ಮನೆಯಲ್ಲಿದ್ದರು. ಇವರಲ್ಲಿ ಸಣ್ಣವಳು ಎಂಟನೇ ತರಗತಿ ಕಲಿತು ಶಿಕ್ಷಕ ತರಬೇತಿ ಪಡೆದು ಶಿಕ್ಷಕ ವೃತ್ತಿಯನ್ನು ಗಳಿಸಿದಳು. ಗೋಧಿ ಮೈ ಬಣ್ಣದ ಚಿಗುರು ಕಂಗಳ ಚೆಲುವೆಯ ನಯ ವಿನಯದ ಮಾತು, ಸಹನೆ, ಹೊಂದಾಣಿಕೆಯ ಸ್ವಭಾವ, ಮುಗ್ಧ ಮನಸ್ಸು ಎಲ್ಲವೂ ಅವಳನ್ನು ಗುಂಪಿನಲ್ಲಿ ಪ್ರತ್ಯೇಕವಾಗಿ ಗಮನಿಸುವಂತೆ ಮಾಡುತ್ತಿತ್ತು. ಕ್ರಮೇಣ ಅಕ್ಕಂದಿರಿಗೂ ಮದುವೆಯಾಯ್ತು. ಚೆಲುವೆಯನ್ನೂ ಬಯಸಿದ ವರಗಳು ಬಂದರು. ಆದರೆ ಸುಂದರಣ್ಣ ಸಮ್ಮತಿಸಲೇ ಇಲ್ಲ. ಆಗಲೇ ಮದುವೆಯಾಗಿ ಮೂವರು ಮಕ್ಕಳ ತಂದೆಯಾಗಿದ್ದ ಸುಂದರಣ್ಣ ತನಗಿಂತ ಸುಮಾರು ೨೫ ವರ್ಷ ಚಿಕ್ಕವಳಾದ ಚೆಲುವೆಯ ಮೋಹಕ್ಕೆ ಸಿಲುಕಿಬಿಟ್ಟು ಅವಳನ್ನು ಒಲಿಸಿಕೊಂಡರು. ಇದನ್ನು ಕಂಡು ಕಟ್ಟಿಕೊಂಡ ಹೆಂಡತಿ ಮನೆ ಬಿಟ್ಟು ಮಕ್ಕಳನ್ನು ಕರೆದುಕೊಂಡು ತವರಿಗೆ ಹೋದಳು. ಮನಸಿಜನ ಮಾಯೆ ಏನೆಲ್ಲ ಮಾಡುತ್ತದೆಂದು ಹೇಳಲಾಗದಲ್ಲವೇ? ಚೆಲುವೆಯೂ ತನಗೆ ಆಶ್ರಯ ಕೊಟ್ಟು ವಿದ್ಯೆ ನೀಡಿದ ರಕ್ಷಕನಿಗೆ ಶರಣಾದಳು. ಋಣಭಾರಕ್ಕೆ ಮಾತ್ರ ಬಾಗಿದಳೆನ್ನಲಾಗದು. ಇವಳೊಳಗೂ ಕೆಮಿಸ್ಟ್ರಿ ಕೆಲಸ ಮಾಡಿರಬೇಕು. ಇದರಿಂದ ಹಾದಿ ಬೀದಿಯ ಚಾಲಿಪೋಲಿಗಳಾರೂ ಇವಳನ್ನು ಕಣ್ಣೆತ್ತಿ ನೋಡದಂತಹ ವಾತಾವರಣ ಸೃಷ್ಟಿಯಾದದ್ದಂತೂ ಸತ್ಯ.

ಇವಳಿಗೆ ೨೫-೩೦ ವರ್ಷ ದಾಟಿದ ಮೇಲೆ ಆಕೆ ಮುಳ್ಳು ಬೇಲಿಯಾಚೆಗೆ ಜಿಗಿಯುವ ಪ್ರಯತ್ನ ಮಾಡಿದಳು. ಮಾಸ್ಟರ್ ವಿಠಲ್ ಅವರಲ್ಲಿ ನೃತ್ಯ ಕಲಿಯಲು ಪ್ರಾರಂಭಿಸಿದಳುಕಲಿಯಬೇಕೆಂಬ ಹಠವೊಂದು ಬಿಟ್ಟರೆ ಆಕೆಯಲ್ಲಿ ಬೇರಾವ ಅರ್ಹತೆಯೂ ಇರಲಿಲ್ಲ. ಶಾಲೆ ಮತ್ತು ಮನೆಯಿಂದಾಚೆಗೆ ದೃಷ್ಟಿ ಹಾಯಿಸಲು ಸಾಧ್ಯವಿಲ್ಲದ ಕೋಟೆಗೆ ಆಕೆ ಆಗ ತಾನೇ ಸಣ್ಣ ಬಾಗಿಲು ನಿರ್ಮಿಸಿದಳು. ಅವಳ ಆಸಕ್ತಿಯ ವಲಯ ವಿಸ್ತಾರವಾಯಿತು. ಮಿನುಗು ತಾರೆ ಕಲ್ಪನಾ ಜೊತೆಗೆ ಮನೆಯಲ್ಲಿ ಕೆಲವು ಕಾರ್ಯಕ್ರಮಗಳಿಗೆ ಅಭ್ಯಾಸ ಮಾಡುತ್ತಿದ್ದುದನ್ನು ಕಂಡವಳು ನಾನು. ಆಗ ನೃತ್ಯಕ್ಕೆ ಹಾಡಲು ಸಾಧ್ಯವೇ ಎಂದು ನನ್ನಲ್ಲಿ ಕೇಳಿದ್ದೂ ಉಂಟು. ದೇವಸ್ಥಾನದಲ್ಲೇ ಹಾಡಲು ಬಿಡದ ನನ್ನಪ್ಪ ಇನ್ನು ನೃತ್ಯ ಕಾರ್ಯಕ್ರಮಕ್ಕೆ ಹಾಡಲು ಬಿಟ್ಟಾರೆಯೇ? ಎಂದು ತಳ್ಳಿಬಿಟ್ಟಿದ್ದೆ. ಬಿಡಿ, ಅದು ಆಗದ ಮಾತು.
ಈಕೆ ಶಿಕ್ಷಕ ವೃತ್ತಿಯ ಜೊತೆಗೆ ನೃತ್ಯಕಲೆಯನ್ನು ಕಲಿತದ್ದು ಅವಳ ಬಾಳಿನ ಬರಡುತನಕ್ಕೆ ಹಸಿರು ಹೊದಿಸಿದಂತಾಯಿತು. ಮನಸ್ಸಿನ ಖಾಲಿತನದಲ್ಲಿ ಹೊಸ ಭರವಸೆಯ ಹಣತೆಗಳನ್ನು ಹಚ್ಚಿದಂತಾಯಿತು. ನೂರಾರು ಶಿಷ್ಯೆಯರನ್ನು ತಯಾರುಗೊಳಿಸಿದ್ದಲ್ಲದೆ ಊರು ಪರವೂರುಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡುತ್ತಾ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಳು.

ಒಂದು ದಿನ ಸುಂದರಣ್ಣ ಹೃದಯಾಘಾತದಿಂದ ನಿಧನ ಹೊಂದಿದರು. ಅಲ್ಲಿಗೆ ತೆರಳಿದ ನನಗೆ ಅವಳ ರೋದನ, ಚೀರಾಟ ಕೇಳಿ ದಿಗ್ಭ್ರಮೆಯಾಯಿತು. ಹೇಗೆ ಸಂತೈಸಬೇಕೆಂದೇ ತಿಳಿಯದೆ ಮೂಕಳಾದೆ. ಅವರೊಳಗಿನ ಸಂಬಂಧ ಅಷ್ಟು ಗಾಢವಾಗಿತ್ತೇ? ತನ್ನ ಬದುಕಿಗೊಂದು ಕಳಂಕ ಹಚ್ಚಿಹೋದನೆಂಬ ಆಕ್ರೋಶವು ರೀತಿ ಪ್ರಕಟವಾಯಿತೇ? ಗೊತ್ತಿಲ್ಲ. ಈಕೆ ನೃತ್ಯ ಕಲಿಯುವಿಕೆಗೆ ಮುಂದಾದಾಗ ಅದರ ಪರಿಣಾಮದ ಕಲ್ಪನೆ ಸುಂದರಣ್ಣನಿಗಿರಲಿಲ್ಲ. ಕ್ರಮೇಣ ಹಗಲು ರಾತ್ರಿ ನೃತ್ಯಾಭ್ಯಾಸದಲ್ಲಿ ನಿರತಳಾಗಿ ದೂರದೂರುಗಳಲ್ಲಿ ಕಾರ್ಯಕ್ರಮಗಳೆಲ್ಲಾ ಸಂಯೋಜಿಸಲ್ಪಟ್ಟ ಮೇಲೆ ಅವರೊಳಗೆ ಶೀತಲ ಸಮರವುಂಟಾಗುತ್ತಿತ್ತೆಂದು ನನ್ನರಿವಿಗೆ ಬಂದಿತ್ತು. ಅಪ್ಪಣೆ ಸಿಕ್ಕಿದರೆ ಮಾತ್ರ ಹೊಸಿಲು ದಾಟುತ್ತಿದ್ದ ಆಕೆ ಕ್ರಮೇಣ ಅಪ್ಪಣೆಗಾಗಿ ಕಾಯದೆ ತನ್ನಿಷ್ಟದಂತೆ ನಡೆಯುವುದನ್ನು ಕಂಡು ಸುಂದರಣ್ಣ ಅಸಹಾಯಕತೆಯಿಂದ ಮೈಯೆಲ್ಲಾ ಪರಚಿಕೊಳ್ಳುವಂತಾಯಿತು. ಇವರನ್ನು ಕೈಹಿಡಿದ ಹೆಂಡತಿಯೂ ಶಿಕ್ಷಕಿಯಾದುದರಿಂದ ಗಂಡನ ಸಂಬಂಧದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಕ್ಕಳ ಶಿಕ್ಷಣ ಮತ್ತು ಪೋಷಣೆಯಲ್ಲಿ ನಿರತರಾಗಿದ್ದರು. ಎಷ್ಟಾದರೂ ಇಂತಹ ಅಪ್ಪನ ಬಗ್ಗೆ ಮಕ್ಕಳು ಗೌರವವಿಟ್ಟುಕೊಳ್ಳುವುದು ಸಾಧ್ಯವೇ? ಹುಟ್ಟಿಸಿದವನು ಎಂಬ ಕಾರಣಕ್ಕೆ ಮಾತ್ರ ಎಂದಾದರೊಮ್ಮೆ ಬಿಕರ್ನಕಟ್ಟೆಯ ಮನೆಗೆ ಮಕ್ಕಳು ಬರುತ್ತಿದ್ದರು. ಅದು ಎಷ್ಟೋ ಸಲ ಅವರ ಮನ ಮುರಿಯುವಿಕೆಗೆ ಕಾರಣವೂ ಆಗಿತ್ತು. ಸುಂದರಣ್ಣ ಸತ್ತ ಮೇಲೆ ಮನೆಯು ಕಟ್ಟಿಕೊಂಡ ಮಡದಿ ಮಕ್ಕಳಿಗೆ ಸೇರಬೇಕು ತಾನೇ? ಇಲ್ಲಿಂದ ಸಣ್ಣ ಸಣ್ಣ ವಾದ ವಿವಾದಗಳಾಗಿ ಇಟ್ಟುಕೊಂಡವಳಾದ ಆಕೆ ಬದುಕಿರುವವರೆಗೆ ಮನೆಯಲ್ಲಿ ಇರಬಹುದು ಎಂದು ಮಡದಿ ಮಕ್ಕಳು ಒಪ್ಪಿಗೆ ಇತ್ತರು.

ಸ್ವತಂತ್ರವಾಗಿ ಏನೂ ಮಾಡಲರಿಯದ, ಸ್ವತಂತ್ರವಾಗಿ ಯಾವ ನಿರ್ಧಾರವನ್ನೂ ಕೈಗೊಳ್ಳಲಾರದ ಆಕೆಯನ್ನು ಈಗ ಹಲವಾರು ಶಕುನಿಗಳು ಸುತ್ತುವರಿದರು. ಹೊಗಳಿಕೆಗೆ ಬೇಗನೇ ಕರಗುವ ಆಕೆ ತನ್ನ ಗಳಿಕೆಯ ಹಣವನ್ನು ಬಡ್ಡಿಯಾಸೆಗೆ ನಾಗೇಶನೆಂಬ ಹೊಸ ಉದ್ಯಮಿಗೆ ಕೊಟ್ಟು ಪಂಗನಾಮ ಹಾಕಿಸಿಕೊಂಡು ಪಾಠ ಕಲಿಯಬೇಕಿತ್ತು. ಉಹೂಂ, ಮತ್ತೆ ಯಾರಾದರೂ ಪಂಚವರ್ಣದ ಮಾತುಗಳಿಂದ ಮೋಡಿ ಮಾಡಿದರೆ ಕೂಡಲೇ ಅವರಿಗೆ ಕೇಳಿದ್ದೆಲ್ಲವನ್ನು ಹಿಂದೆ ಮುಂದೆ ನೋಡದೆ ಕೊಟ್ಟೇ ಬಿಡುತ್ತಿದ್ದಳು. ಒಂಟಿ ಹೆಂಗಸರನ್ನು ಯಾಮಾರಿಸಲು ಸದಾ ಕಾಯುತ್ತಿರುವ ಒಂದು ಗುಂಪು ಇವಳನ್ನು ಸುತ್ತುವರಿದಿದೆ ಎಂದು ಎಚ್ಚರಿಸಿದರೂ ಆಕೆಗೆ ಬುದ್ಧಿ ಬರಬೇಕಾದರೆ ಇನ್ನಷ್ಟು ಆಘಾತಗಳು ನಡೆಯಬೇಕಾಯಿತು. ಅನುಚಿತ ಲಾಭದಾಸೆ ಹಾನಿಯ ಮುನ್ಸೂಚನೆಯಲ್ಲವೇ?

ಇಂತಹ ಗೊಂದಲಮಯ ಮನಸ್ಥಿತಿಯಲ್ಲಿ ಆಕೆ ಇದ್ದಾಗ ಸ್ವಜಾತಿ ಬಾಂಧವನೂ ಆದ ಬಾಲಕೃಷ್ಣ ಅವಳ ಬದುಕಿನಲ್ಲಿ ಪ್ರವೇಶಿಸಿದ. ತುಳು, ಕನ್ನಡ ನಾಟಕ ಕಲಾವಿದನೂ, ಚಲನಚಿತ್ರ ಕಲಾವಿದನೂ ಆದ ಆತ ನೃತ್ಯ ಕಲಿಯಲೆಂದು ಅವಳ ಮನೆಗೆ ಬಂದವ ಅವಳನ್ನು ಒಲಿಸಿಕೊಂಡು ಮದುವೆಯಾದ. ಆಕೆಗೂ ಮನಸ್ಸಿನ ದುಗುಡವನ್ನು ಕಳೆಯಲು, ಒರಗಿ ಸಾಂತ್ವನ ಪಡೆಯಲು ಒಂದು ತೋಳಿನ ಅವಶ್ಯಕತೆ ಇತ್ತು. ಈಕೆಯೇ ಅವನಿಗಿಂತ ವಯಸ್ಸಿನಲ್ಲಿ ದೊಡ್ಡವಳು. ಅದು ಇವರ ಮದುವೆಗೆ ಅಡ್ಡಿಯಾಗಲಿಲ್ಲ. ಇವಳ ಹಣದ ಮೇಲೆ ಕಣ್ಣಿಟ್ಟೇ ಮದುವೆಯಾದನೆಂದು ನಾವೆಲ್ಲ ಭಾವಿಸಿದ್ದೆವು. ಹಾಗಾಗಲಿಲ್ಲ. ಆಕೆಯನ್ನು ಪ್ರೀತಿಯಿಂದಲೇ ನೋಡಿಕೊಂಡ. ಅವನಿಗೂ ಕರೆದು ಕೇಳುವ, ಪ್ರೀತಿಸುವ ಜೀವವೊಂದು ಹತ್ತಿರದಲ್ಲಿರಬೇಕೆಂಬ ಆಶೆಯಿತ್ತು. ಹಾಗಾಗಿ ನನಗೆ ನೀನು, ನಿನಗೆ ನಾನು ಎಂಬಂತೆ ಕೆಲವು ವರ್ಷ ಜೊತೆಯಾಗಿ ಬಾಳಿದರು. ಆಕೆಗೂ ತಾನು ಯಾರೋ ಒಬ್ಬನ `ಕೀಪ್' ಆಗಿ ಬದುಕುವುದಕ್ಕಿಂತ ಒಬ್ಬನ ಮಡದಿಯಾಗಿ ಬದುಕುವುದು ಹೆಚ್ಚು ಗೌರವವೂ ಸಂತೃಪ್ತಿಯ ವಿಷಯವೂ ಆಗಿತ್ತು. ಕೊನೆಗಾಲದವರೆಗೂ ಪ್ರೀತಿಯಿಂದ ನೋಡಿಕೊಂಡ ಅವನು ಆಕೆಯ ನಿಧನದ ಬಳಿಕ ಹೆಚ್ಚು ವರ್ಷ ಬದುಕಲಿಲ್ಲ. ಅವನು ಎಷ್ಟು ನೃತ್ಯ ಕಲಿತನೋ ಬಿಟ್ಟನೋ ಆದರೆ ಆಕೆಯ ಕೊನೆಗಾಲವನ್ನು ಶಾಂತಿಯಿಂದ ಕಳೆಯುಂತೆ ನೋಡಿಕೊಂಡದ್ದು ಮೆಚ್ಚಲೇಬೇಕಾದ ವಿಷಯ. ಹೆಣ್ಣಿಗೆ ಗಂಡು ಮಾಯೆಯಾಗಿ ಕಾಣುವಂತೆ ಗಂಡಿಗೆ ಹೆಣ್ಣು ಮಾಯೆಯಾಗಿ ಕಾಣುವುದು ಲೋಕ ಧರ್ಮವೇ ಆಗಿದೆ. ಮಾಯೆಯೆಂಬುದು ಮನಸ್ಸಿನ ಆಸೆಯೇ ಆಗಿದೆ. ಮನಸ್ಸಿನೊಳಗೆ ಆಸೆಯನ್ನು ತುಂಬಿದೆ ಪ್ರಕೃತಿ. ಅದನ್ನು ತಪ್ಪು ಎಂದೋ ಕಳಂಕವೆಂದೋ ಟೀಕಿಸಲು ನಾವ್ಯಾರು? ನನ್ನ ಬಹುಕಾಲದ ಆತ್ಮೀಯ ಬಂಧುವಾಗಿ ನನ್ನ ಒಡನಾಟದಲ್ಲಿದ್ದ ಆಕೆ ಯಾರೆಂದು ನಿಮಗೂ ಗೊತ್ತಾಗಿರಬಹುದೇನೋ? ಆಕೆಯೇ ಡ್ಯಾನ್ಸರ್ ಸೀತಾ ಎಂಬ ಶ್ವೇತಾಂಬರಿ. ಅವಳನ್ನು ಬಿಳಿ ಸೀರೆಯ ಹೊರತಾಗಿ ನಾನು ಕಂಡದ್ದೇ ಇಲ್ಲ. ಬಣ್ಣದ ಸೀರೆಯಲ್ಲಿ ಅವಳನ್ನು ಕಾಣಬೇಕೆಂದು ನಾವು ಹಂಬಲಿಸಿದರೂ ಅದನ್ನು ತಿರಸ್ಕರಿಸಿ ಕೊನೆಯವರೆಗೂ ನಿಷ್ಕಲಂಕ ಮನಸ್ಸಿನ ಒಡತಿಯಾಗಿ ಬಾಳಿದ ಆಕೆಯ ಶಿಷ್ಯವರ್ಗದ ಮನದಲ್ಲಿ ಒಂದು ಶಾಶ್ವತವಾದ ಸ್ಥಾನವನ್ನು ಉಳಿಸಿ ಹೋಗಿದ್ದಾಳೆ.


[ಹಿಂದಿನ ಅಧ್ಯಾಯಗಳಲ್ಲಿ ಉಲ್ಲೇಖಿತ ಡಾ| ಉಮಾನಾಥ ಸುವರ್ಣರ ಭಾವಚಿತ್ರ, ಕೃಪೆ ಅವರ ಪುತ್ರ ಡಾ|ಪ್ರವೀಣಚಂದ್ರ ಸುವರ್ಣ]


(ಮುಂದುವರಿಯಲಿದೆ)

6 comments:

 1. ಉತ್ತಮ ಬರಹ... ಎಲ್ಲವೂ ನಾವಂದುಕೊಂಡಷ್ಟು ಒಳ್ಳೆಯದೂ ಆಗಿರುವುದಿಲ್ಲ, ಕೆಟ್ಟದ್ದೂ ಆಗಿರುವುದಿಲ್ಲ.

  ಗಿರೀಶ್ ಪಾಲಡ್ಕ, ಬಜಪೆ

  ReplyDelete
 2. ಶ್ರೀಮತಿ ರೋಹಿಣಿಯವರ ಕಥಾನಕ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಮತ್ತೊಮ್ಮೆ ಮಗದೊಮ್ಮೆ ಓದೋಣವೆನ್ನಿಸುತ್ತದೆ. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

  ReplyDelete
 3. ಪ್ರಕೃತಿ ನಮಗೆ ಬೇಡದ ಜನ್ಮ, ಅರ್ಥವಿಲ್ಲದ ಜೀವನ, ಬಿಡದ ಸಾವನ್ನು ನೀಡಿದ್ದಾಳೆ. ನಾವು ನಿನ್ನೆಯನ್ನು ಮರೆತು, ಇಂದಿಗೆ ಬದುಕಿ, ನಾಳೆಗೆ ಯೋಜನೆ ಮಾಡುತ್ತಾ ಸಾಧ್ಯವಾದಷ್ಟು ಸಂತಸವಾಗಿ ಜೀವನ ನಡೆಸಿ ಹೊರಟು ಬಿಡಬೇಕು ಅಷ್ಟೆ.

  ReplyDelete
 4. ದಿನೇಶ ನೆಟ್ಟಾರ್05 January, 2016 11:42

  (ಅಮೀನ ಸುಂದರ ಮತ್ತು) ಸೀತಾ ಟೀಚರ್ ಅವರ ಕತೆ ಇಷ್ಟೊಂದು ಮನನವಾಗಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು. ಸೀತಾ ಟೀಚರ್ ಟೌನ್ ಹಾಲಿನಲ್ಲಿ ನಮ್ಮ ಪ.ಮು.ಕಿ.ಬು. ಶಾಲೆಯ ಕಟ್ಟಡ ನಿಧಿಗಾಗಿ ನೃತ್ಯ ಕಾರ್ಯಕ್ರಮ ಕೊಟ್ಟಿದ್ದರು. ನಾನು ಟಿಕೆಟ್ ಮಾರಲು ಕುಳಿತಿದ್ದೆ.

  ಅಮೀನ ಸುಂದರ ಮತ್ತು ಸೀತಾ ಟೀಚರ್ ಅವರ ಕತೆ ಇಷ್ಟೊಂದು ಮನನವಾಗಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು. ಸೀತಾ ಟೀಚರ್ ಟೌನ್ ಹಾಲಿನಲ್ಲಿ ನಮ್ಮ ಪ.ಮು.ಕಿ.ಬು. ಶಾಲೆಯ ಕಟ್ಟಡ ನಿಧಿಗಾಗಿ ನೃತ್ಯ ಕಾರ್ಯಕ್ರಮ ಕೊಟ್ಟಿದ್ದರು. ನಾನು ಟಿಕೆಟ್ ಮಾರಲು ಕುಳಿತಿದ್ದೆ.

  ಸೀತಾ ಟೀಚರ್ ಮನೆಗೆ ಅಂಟಿದಂತೆ ಪಕ್ಕದ ಮನೆಯಲ್ಲಿ ಒಂದು ಹವ್ಯಕ ಬ್ರಾಹ್ಮಣ ಕುಟುಂಬ ಬಾಡಿಗೆಗೆ ಬಂದಿತ್ತು. ಗಂಡ ಲಾರಿ ಡ್ರೈವರ್. ಅವರು ಹೆಚ್ಚಾಗಿ ಕೆಲಸದ ಮೇಲೆ ಊರೂರು ಹೋಗಬೇಕಾಗಿ ಬರುತ್ತಿತ್ತು. ಹಾಗೊಮ್ಮೆ ಹೋಗಿದ್ದಾಗ ಅವರ ಪತ್ನಿಗೆ ಒಂದು ತುಂಬಾ ಸುಂದರವಾದ ಮಗು ಹುಟ್ಟಿತ್ತು. ನಾನೂ ನೋಡಲು ಹೋಗಿದ್ದೆ. ಕೆಲವೇ ದಿನಗಳ ಮೇಲೆ ಅದಕ್ಕೆ ತೆಳ್ಳಗೆ ಭೇದಿಯಾಗಿತ್ತೆಂದು ಅದರ ಅಜ್ಜಿ ಏನೋ ಮದ್ದು ಕೊಟ್ಟು ಆ ಮಗು ಸಾಯುವ ಸ್ಥಿತಿಗೆ ಬಂದಿತ್ತು. ಅಜ್ಜಿ ನನ್ನ ತಂದೆಯವರ ಬೀಡಿ ಅಂಗಡಿಗೆ ಬಂದು ಹೇಳಿತು. ನನ್ನ ತಂದೆಯವರಿಗೆ ಕೆಂಡಾಮಂಡಲ ಕೋಪ ಬಂತು. ಆಸ್ಪತ್ರೆಗೆ ಸೇರಿಸಿ ಅದರ ಜೀವ ಉಳಿಸಿದರು. ಡಾಕ್ಟರು ಸಹಾ ಅಜ್ಜಮ್ಮನನ್ನು ಬೈದರು. ಒಂದೇ ವಾರದಲ್ಲಿ ಮತ್ತೆ ಇನ್ನೇನೋ ಕಾರಣಕ್ಕಾಗಿ ಅಜ್ಜಿ ಇನ್ನೊಂದು ಮದ್ದು ಕೊಟ್ಟರು. ಮತ್ತೆ ಮಗು ಮೇಲುಗಣ್ಣು ಹಾಕಿತು. ನಾನಿದ್ದಾಗ ಅಂಗಡಿಗೆ ಬಂದು ತಂದೆಯವರಿಗೆ ಹೇಳಿದರು. ಈ ಸಲ ಮಗು ಜೀವಂತ ಆಸ್ಪತ್ರೆ ತಲುಪಲಿಲ್ಲ.

  ReplyDelete
 5. ತುಂಬಾ ಸ್ವಾರಾಸ್ಯಕರವಾಗಿದೆ. ಮೊದಲ ಸಂಚಿಕೆಗಳನ್ನು ಬೇಗ ಓದಬೇಕು

  ReplyDelete
 6. o ಒಳಿತು ಕೆಡುಕೆಂಬ ಹಣೆಪಟ್ಟಿ ಇಡದೆ ವ್ಯಕ್ತಿಚಿತ್ರವನ್ನು ಆತ್ಮೀಯತೆಯ ನೆಲೆಯಲ್ಲಿ ಕತ್ತಿ ಕೊಡುವ ಈ ಅಪರೂಪದ ಚಿತ್ರಗಳಿಗಾಗಿ ಸದಾ ಉತ್ಸುಕಳಾಗಿ ಕಾಯುತ್ತಿರುವೆ.
  - ಶ್ಯಾಮಲಾ ಮಾಧವ.

  ReplyDelete