29 January 2016

ವೃತ್ತಿರಂಗಭೂಮಿಯಲ್ಲಿ ನನ್ನ ಪ್ರವೇಶ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿದೀಪದಡಿಯ ಕತ್ತಲೆ
ಅಧ್ಯಾಯ ಹದಿಮೂರು

ಶಿಕ್ಷಕಿಯಾಗಿ ನನ್ನ ಅನುಭವಗಳನ್ನು `ಅಧ್ಯಾಪಿಕೆಯ ಅಧ್ವಾನಗಳು' ಎಂಬ ಕೃತಿಯಲ್ಲಿ ನಾನು ಸಂಕ್ಷಿಪ್ತವಾಗಿ ಬರೆದು ಪ್ರಕಟಿಸಿದ್ದೆ. ಕೃತಿಯ ಕೆಲವು ತುಣುಗಳನ್ನು ಮಾತ್ರ ಹೇಳುವುದು ಸೂಕ್ತವೆಂದೆನಿಸುತ್ತದೆ. ವೃತ್ತಿಗೆ ಸೇರಿದ ಆರಂಭದಲ್ಲಿ ಎಲ್ಲರಿಗೂ ಸೋಡಾಬಾಟ್ಲಿ ಸ್ಪಿರಿಟ್ ಇರುತ್ತದೆ. ಹಾಗೆಯೇ ನನಗೂ ಇತ್ತು.
(ಶಿಷ್ಯೆಯ ಪ್ರಿಯ ಬಂಧನದಲ್ಲಿ - ಚಿತ್ರ ಕೃಪೆ: ರವಿ ಪೊಸವಣಿಕೆ)ನಾನು ಹೇಳಲಿಕ್ಕೇ ಇರುವವಳು. ಮಕ್ಕಳು ಕೇಳಲಿಕ್ಕೇ ಇರುವವರು ಎಂಬ ಭಾವವಿತ್ತು. ಶಿಕ್ಷಕ ತರಬೇತಿಯಲ್ಲಿ ಮಕ್ಕಳ ಮನಶ್ಶಾಸ್ತ್ರವನ್ನು ಶಾಲಾ ಆಡಳಿತದ ನಿಯಮ, ಕಲಿಕೆಯ ವಿಧಾನ ಇತ್ಯಾದಿಗಳನ್ನು ನಮಗೆ ಅರೆದು ಕುಡಿಸಿದ್ದರು. ಅದನ್ನು ಎಷ್ಟು ಅರಗಿಸಿಕೊಂಡಿದ್ದೇನೆ ಎನ್ನುವುದು ಈಗ ವೃತ್ತಿಗೆ ಸೇರಿದ ಮೇಲೆ ಗೊತ್ತಾಗುತ್ತದೆ. ಥಿಯರಿಯ ಜ್ಞಾನಕ್ಕೂ ಇಲ್ಲಿ ತರಗತಿಯೊಳಗಿನ ಕಲಿಕೆಗೂ ಸಂಬಂಧ ಕಲ್ಪಿಸಲಾಗದೆ ಸೋಲುವ ಸಂದರ್ಭಗಳು ಬರುತ್ತವೆ. ಆಗ ನಮ್ಮ ರಕ್ಷಣೆಗೆ ಒದಗುವುದು ನಮ್ಮ ಸಂಸ್ಕಾರ, ಪ್ರತಿಭೆಗಳು ಮಾತ್ರ. ಮಕ್ಕಳನ್ನು ಏನೂ ಗೊತ್ತಿಲ್ಲದ ಮಣ್ಣಮುದ್ದೆಗಳು ಎಂದೇ ನಾವು ಸಾಮಾನ್ಯವಾಗಿ ತಿಳಿದುಕೊಂಡಿರುತ್ತೇವೆ. ಅದು ತಪ್ಪು ಎಂದು ಗೊತ್ತಾದಾಗ ನಮ್ಮ ಅಹಂನ ಕೋಟೆ ಕುಸಿಯಲೇಬೇಕು. ಕುಸಿಯದಿದ್ದರೆ ಮಕ್ಕಳೊಂದಿಗಿನ ನಮ್ಮ ಸಂವಹನಕ್ಕೆ ತೊಡಕುಂಟಾಗುತ್ತದೆ. ಪ್ರತಿದಿನ ತರಗತಿಗೆ ಪ್ರವೇಶಿಸುವಾಗಲೂ ಅದು ಮೊದಲ ದಿನವೆಂಬ ರೀತಿಯ ತಯಾರಿಯಲ್ಲೇ ಹೋಗುತ್ತಿದ್ದೆ. ಮಕ್ಕಳು ಚಿಕ್ಕವರೆಂಬ ತಾತ್ಸಾರ ಸಲ್ಲದೆಂಬ ಪಾಠವನ್ನು ನನ್ನ ಮಕ್ಕಳೇ ನನಗೆ ಕಲಿಸಿಕೊಟ್ಟರು. ನಾನು ಕಲಿಸಿದ್ದಕ್ಕಿಂತ ಹೆಚ್ಚು ಅವರಿಂದ ನಾನು ಕಲಿತಿದ್ದೇನೆ. ಶಿಕ್ಷಕಿಯಾಗುವುದಕ್ಕೆ ಮಾನಸಿಕವಾದ ಮತ್ತು ಸಾಂಸ್ಕೃತಿಕವಾದ ತಯಾರಿ ಬೇಕೆಂಬ ಸೂಚನೆ ನನಗೆ ಆರಂಭದಲ್ಲೇ ಸಿಕ್ಕಿತ್ತು. ನನ್ನ ವಿದ್ಯಾರ್ಥಿ ಜೀವನದಲ್ಲಿ ನಾನು ಕಂಡ ಶ್ರೇಷ್ಠ ಗುರುಗಳ ಮಾದರಿ ನನ್ನ ಕಣ್ಣ ಮುಂದಿತ್ತು. ಮಕ್ಕಳೊಂದಿಗೆ ಅತಿ ಸಲುಗೆಯಾಗಲೀ, ಅತೀ ದ್ವೇಷವಾಗಲೀ ಇಟ್ಟುಕೊಳ್ಳದೆ ವ್ಯವಹರಿಸುತ್ತಿದ್ದೆ. ಶಾಲೆಯಲ್ಲಿ ದೇವಕಿ ಟೀಚರೆಂಬ ಹಿರಿಯರಿದ್ದರು. ಅವರ ಕೈಯಲ್ಲಿ ಯಾವಾಗಲೂ ಒಂದು ಬೆತ್ತವಿರುತ್ತಿತ್ತು. ಅದು ಅವರ ರಕ್ಷಣೆಗೆ ಮಾತ್ರ. ಆದರೆ ಅವರು ಸಿಟ್ಟಿನಿಂದ ಎಲ್ಲಾದರೂ ಬೆತ್ತ ಎತ್ತಿದರೆ ಅದು ಮಕ್ಕಳ ಕೈಯಲ್ಲಿರುತ್ತಿತ್ತು. ಅವರ ಕೈಯಲ್ಲಿ ಬೆತ್ತವೇ ಒಂದು ನಗೆಪಾಟಲಿನ ವಸ್ತುವಾಗಿಬಿಟ್ಟಿತ್ತು. ಹೆಡ್ಮಾಸ್ಟರ ಕೋಣೆಯಲ್ಲಂತೂ ಸದಾ ನಾಗರಬೆತ್ತ ಪ್ರತಿಷ್ಠಾಪನೆಯಾಗುತ್ತಿತ್ತು. ಶಿಕ್ಷಕಿಯರಿಗೆ ಸಂಬಾಳಿಸಲು ಸಾಧ್ಯವಿಲ್ಲದ ಮಕ್ಕಳನ್ನು ಹೆಡ್ಮಾಸ್ಟರರ ಕೋಣೆಗೆ ಕಳಿಸಿ ಅಲ್ಲಿ ನ್ಯಾಯತೀರ್ಮಾನವಾಗುತ್ತಿತ್ತು.ಇದು ನನ್ನ ವಿದ್ಯಾರ್ಥಿಜೀವನದಲ್ಲಿಯೂ ಕಂಡ ದೃಶ್ಯಗಳೇ ಆಗಿವೆ. ತಮಗೆ ಬುದ್ಧಿ ಕಲಿಸಲು ಸಾಧ್ಯವಿಲ್ಲವೆಂದು ತಿಳಿದ ಹೆತ್ತವರು ಶಾಲೆಗೆ ಬಂದು ``ನೀವೇ ನಾಲ್ಕು ಬಾರಿಸಿ ಬುದ್ಧಿ ಕಲಿಸಿ'' ಎಂದು ಶಿಕ್ಷಕರಲ್ಲಿ ಬೇಡಿಕೊಳ್ಳುತ್ತಿದ್ದವರೂ ಇದ್ದರು. ಹೆತ್ತವರು ಸ್ವಾತಂತ್ರ್ಯ ಕೊಟ್ಟಿದ್ದಾರೆಂದು ಭಾವಿಸಿ ಮನ ಬಂದಂತೆ ವರ್ತಿಸಿದ ಶಿಕ್ಷಕರಿಗೆ ಮುಖಭಂಗವಾದುದೂ ಉಂಟು. ಮೇಲ್ವರ್ಗದವರೇ ಶಿಕ್ಷಕರಾಗಿರುವ ಕಾಲದಲ್ಲಿ ಮಕ್ಕಳಿಗೆ ಶಿಕ್ಷೆ ಕೊಟ್ಟರೆ ಹೆತ್ತವರು ಕಿಡಿಕಿಡಿಯಾದ ಪ್ರಸಂಗಗಳು ಕಡಿಮೆ. ಯಾವಾಗ ಎಲ್ಲಾ ಜಾತಿ ಸಮುದಾಯದವರು ಶಿಕ್ಷಕರಾದರೋ ಆಗ ತಮ್ಮ ಮಕ್ಕಳು ಶಿಕ್ಷಕರಿಂದ ಹೊಡೆಸಿಕೊಳ್ಳುವುದನ್ನು ಹೆತ್ತವರು ಪ್ರಶ್ನಿಸುವ ಮತ್ತು ದಂಡು ತೆಗೆದುಕೊಂಡು ಬಂದು ಗಲಾಟೆ ಮಾಡುವ ಪ್ರವೃತ್ತಿ ನಾನು ಶಿಕ್ಷಕಿಯಾದ ಕಾಲದಲ್ಲೇ ಪ್ರಾರಂಭವಾಗಿತ್ತು. ಹಿಂದೆ ಮಾಸ್ಟ್ರು ಹೊಡೆದರೆಂದು ಅವರನ್ನು ಬೈದವರಿಗೆ ಮಕ್ಕಳಿಗೆ ವಿದ್ಯೆ ತಲೆಗೆ ಹತ್ತುವುದಿಲ್ಲವೆಂದು ಹೇಳುತ್ತಿದ್ದ ಹೆತ್ತವರು ನನ್ನ ಬಾಲ್ಯದಲ್ಲಿದ್ದರು. ನಾನು ಶಿಕ್ಷಕಿಯಾದಾಗ ಸಮಾಜದ ಮನೋಭಾವದಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ಎಲ್ಲಾ ಜಾತಿ ವರ್ಗದ ಮಕ್ಕಳು ಶಾಲೆಗೆ ಬರತೊಡಗಿದರು. ಹಾಗೆಯೇ ಎಲ್ಲಾ ಜಾತಿ ವರ್ಗದ ಶಿಕ್ಷಕರು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಹಿಂದುಳಿದವರು, ದಲಿತರು ಶಿಕ್ಷಕರಾದುದರಿಂದಲೇ ಶಿಕ್ಷಣದ ಗುಣಮಟ್ಟ ಕುಸಿಯಿತೆಂದು ಹೇಳುವವರನ್ನು ನನ್ನ ಕಿವಿಯಾರೆ ಕೇಳಿದ್ದೇನೆ. ಆದರೆ ಅದೇ ಮಾತು ಕ್ರೈಸ್ತ ಮಿಶನರಿಗಳ ಶಾಲೆಗಳ ಶಿಕ್ಷಕರ ಬಗ್ಗೆ ಇಲ್ಲ ಎಂಬುದೇ ಆಶ್ಚರ್ಯ. ಅವರ ಶಾಲೆಯ ಕಟ್ಟಡ, ಫೀಸು, ಡ್ರೆಸ್ಸು, ಗತ್ತು ಗೈರತ್ತುಗಳೆಲ್ಲವೂ ಅವರ ಕೊರತೆಗಳನ್ನು ನುಂಗಿ ಹಾಕುತ್ತಿದ್ದುವೇ? ಗೊತ್ತಿಲ್ಲ. ಸರಕಾರಿ ಮತ್ತು ಖಾಸಗಿ ಎರಡೂ ಶಾಲೆಗಳಲ್ಲಿ ಓದಿದ ಮತ್ತು ಸೇವೆ ಸಲ್ಲಿಸಿದ ಅನುಭವಗಳು ನನ್ನನ್ನು ಮಾತುಗಳನ್ನಾಡಿಸಿವೆ.

ನನಗಿಂತ ಉದ್ದ ತೋರವಿದ್ದ ಗಂಡುಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಪಾಠ ಮಾಡುವುದೆಂದರೆ ಹರಸಾಹಸವೇ ಸರಿ. ಯಾಕೆ ಗೊತ್ತೇ? ಅಷ್ಟರವರೆಗೆ ಹಿಂದಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಅದರಲ್ಲಿ ಫೈಲಾದರೂ ಫಲಿತಾಂಶಕ್ಕೇನೂ ತೊಂದರೆಯಿಲ್ಲ. ಆದುದರಿಂದ ಅದೊಂದು ತಿರಸ್ಕೃತ ಪಿರೇಡೇ ಆಗಿತ್ತು. ಅಂತಹ ಪಿರೇಡಿನಲ್ಲಿ ಪಾಠ ಕೇಳುವಂತೆ ಮಾಡಿ ಮಕ್ಕಳು ಕಲಿಯುವಂತೆ ಮಾಡುವುದು ಎಷ್ಟು ಕಷ್ಟವಾಯಿತೆಂದರೆ ನಾನು ಕಲಿತ ವಿದ್ಯೆಯನ್ನೆಲ್ಲಾ ಉಪಯೋಗಿಸಬೇಕಾಯಿತು. ಅಭಿನಯದಲ್ಲಿ ಆಸಕ್ತಿಯಿರುವ ಕಾರಣ ಸ್ವರಭಾರ ಏರಿಸಿ ತರಗತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಂಡೆ. ಮಕ್ಕಳು ಪಾಠವೇನೋ ಕೇಳುವಂತಾಯಿತು. ಆದರೆ ಪರೀಕ್ಷೆಯಲ್ಲಿ ಅಂಕಗಳನ್ನು ಪಡೆಯುವುದು ಮಾತ್ರ ಬಹಳ ಪ್ರಯಾಸದ ಕೆಲಸ. ಮಕ್ಕಳ ಪ್ರೀತಿಯನ್ನು ಗಳಿಸದೆ ಪಾಠದಲ್ಲಿ ಪ್ರೀತಿ ಹುಟ್ಟದು ಎಂಬುದು ಖಾತ್ರಿಯಾಯಿತು. ಆದುದರಿಂದ ನಿಟ್ಟಿನಲ್ಲಿ ನಾನು ಪ್ರಯತ್ನ ನಡೆಸಿ ಸ್ವಲ್ಪ ಮಟ್ಟಿನ ಯಶಸ್ಸನ್ನು ಗಳಿಸಿದೆ.

ನಾನು ಕೆಲಸಕ್ಕೆ ಸೇರಿದ ಎರಡನೇ ವರ್ಷವಿರಬೇಕು. ಪರೀಕ್ಷೆಯ ಉತ್ತರಪತ್ರಿಕೆಗಳನ್ನು ತಿದ್ದಿದ ಮೇಲೆ ಅದನ್ನು ಮಕ್ಕಳಿಗೆ ಕೊಡುವಾಗ ಅವರು ಎಷ್ಟು ಅಂಕಗಳನ್ನು ಪಡೆದಿದ್ದಾರೆಂದು ಕ್ಲಾಸಲ್ಲಿ ಎಲ್ಲರ ಮುಂದೆ ಹೇಳಿಯೇ ಕೊಡುವ ಕ್ರಮವನ್ನು ಪಾಲಿಸಿಕೊಂಡಿದ್ದೆ. ಒಂದು ದಿನ ಆರನೆಯ ತರಗತಿಯ ಬೂಬ ಎಂಬ ಹುಡುಗನು ನಾನು ಉತ್ತರಪತ್ರಿಕೆಯನ್ನು ಕೊಟ್ಟ ಕೂಡಲೇ ಅದನ್ನು ಕೈಯಲ್ಲಿ ಹಿಸುಕಿ ಮುದ್ದೆ ಮಾಡಿ ನನ್ನೆದುರೇ ಬಿಸಾಡಿಬಿಟ್ಟ. ಅನಿರೀಕ್ಷಿತ ಘಟನೆಯನ್ನು ಕಂಡು ನನ್ನ ಪಿತ್ತ ಕೆರಳಿತು. ಹತ್ತಿರದ ಮಕ್ಕಳಿಂದ ಅಡಿಕೋಲನ್ನು ತೆಗೆದುಕೊಂಡು ಅವನ ಬಳಿಗೆ ಹೋಗಿ ನಾಲ್ಕು ಬಾರಿಸಿದೆ. ಮಕ್ಕಳಿಗೆ ಅದು ನನ್ನ ಮೊದಲ ಬೆತ್ತ ಪ್ರಹಾರ. ಬೂಬ ನನ್ನ ಪೆಟ್ಟಿಗೆ ಹೆದರಿದನೋ ಅಂಕಗಳು ಕಡಿಮೆಯೆಂದು ಹೆದರಿದನೋ ಅಂತೂ ಅವನ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಅವನು ಯಾಕೆ ಹಾಗೆ ಮಾಡಿದ? ನಾನ್ಯಾಕೆ ಹಾಗೆ ಅವನಿಗೆ ಹೊಡೆದೆ? ಇದು ಸರಿಯೇ? ಎಂಬ ಪ್ರಶ್ನೆ, ನನ್ನ ಪ್ರಶ್ನೆ ಇಡೀ ದಿನ ತಲೆಯನ್ನು ಕೊರೆಯತೊಡಗಿತು. ಕ್ಲಾಸಿನಲ್ಲಿ ಎಲ್ಲ ಮಕ್ಕಳ ಮುಂದೆ ಅವನ ಅಂಕಗಳನ್ನು ನಾನು ಬಹಿರಂಗಪಡಿಸಿದ್ದು ಅವನಿಗೆ ಅವಮಾನವಾಗಿತ್ತು. ಅದರ ಮೇಲೆ ಎಲ್ಲರ ಮುಂದೆ ನಾನು ಹೊಡೆದದ್ದು ಮತ್ತೂ ದೊಡ್ಡ ನಾಚಿಕೆಯ ಸಂಗತಿಯಾಯಿತು.

ಮನೆಗೆ ತಲುಪಿದರೂ ಬೂಬ ನನ್ನ ಹಿಂದೆಯೇ ನೆರಳಿನಂತೆ ಬಂದಿದ್ದ. ರಾತ್ರಿ ಕನಸು ನನಗೆ. ಬೂಬನ ತಂದೆತಾಯಿಗಳು ಬಂದು ನನ್ನನ್ನು ಹೀನಾಯವಾಗಿ ಬೈದು ಹೊಡೆಯಲು ಬಂದಂತೆ. ನಾನು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದಂತೆ. ಹೆಡ್ಮಾಸ್ಟರು ಕೂಡಾ ನನ್ನನ್ನೇ ಅಪರಾಧಿಯಾಗಿ ಕಂಡಂತೆ. ಕನಸಲ್ಲೂ ನಾನು ಗಾಬರಿಗೊಂಡು ಎದ್ದು ಕುಳಿತಿದ್ದೆ. ಶಾಲೆಯ ಉಳಿದ ಶಿಕ್ಷಕ ಶಿಕ್ಷಕಿಯರೂ ಹೊಡೆಯುತ್ತಿದ್ದರು. ಅವರೆಲ್ಲಾ ಹೀಗೆ ಭಯಪಡುತ್ತಿದ್ದರೇ? ಇರಲಾರದು. ನನಗೇಕೆ ಭಯ? ನಾಳೆ ಶಾಲೆಗೆ ಯಾವ ಮುಖ ಹೊತ್ತು ಹೋಗಲಿ? ರಜೆ ಹಾಕಲೇ ಎಂದು ಪರಿತಪಿಸಿದೆ. ಮರುದಿನ ಭಯದಿಂದಲೇ ಶಾಲೆಗೆ ಹೋದೆ. ಆರನೇ ತರಗತಿಯತ್ತ ಒಮ್ಮೆ ಇಣುಕಿದೆ. ಬೂಬ ಇದ್ದಾನೆ. ಏನೂ ನಡೆದೇ ಇಲ್ಲವೆಂಬಂತೆ ಅವನು ನಿರಾಳವಾಗಿದ್ದಾನೆಂಬುದನ್ನು ಕಂಡು ನನಗೆ ಸೋಜಿಗವೆನಿಸಿತು. ಅವನನ್ನು ಕರೆದೆ. ಮುಗುಳುನಗುತ್ತಾ ಬಂದ. ``ಏನಾ, ನಿನ್ನೆಯ ಪೆಟ್ಟು ತಾಗಿತಾ? ಇಷ್ಟು ಸಣ್ಣ ಹುಡುಗನಿಗೆ ಅಷ್ಟು ಸಿಟ್ಟು ಇದ್ದರೆ ನನಗೆ ಎಷ್ಟು ಸಿಟ್ಟು ಇಲ್ಲ? ಇನ್ನು ಹಾಗೆ ಮಾಡಬೇಡ ಆಯ್ತಾ?'' ಎಂದು ಅಡಿಗೆ ಬಿದ್ದರೂ ಮೂಗು ಮೇಲೆ ಎಂಬಂತೆ ನನ್ನನ್ನು ನಾನೇ ಸಮರ್ಥಿಸಿ ಹುಸಿಧೈರ್ಯ ತಂದುಕೊಂಡೆ. ಮುಂದೆ ವೃತ್ತಿಜೀವನದುದ್ದಕ್ಕೂ ಮಕ್ಕಳಿಗೆ ಶಿಕ್ಷೆ ಕೊಡುವ ಪ್ರಸಂಗವನ್ನು ಆದಷ್ಟೂ ಕಡಿಮೆ ಮಾಡುತ್ತಿದ್ದೆ. ಆದರೂ ತಾಳ್ಮೆಯ ಕಟ್ಟು ಹರಿದಾಗ ಮಕ್ಕಳಿಗೆ ಶಿಕ್ಷೆ ಕೊಟ್ಟ ಪಶ್ಚಾತ್ತಾಪ ಪಟ್ಟ ಕೆಲವು ಘಟನೆಗಳೂ ಇದ್ದುವು.

ಶಿಕ್ಷೆಯನ್ನೇ ಶಾಲೆಯಿಂದ ಬಹಿಷ್ಕರಿಸಿದ್ದು ನಿಜವಾಗಿಯೂ ಶ್ಲಾಘ್ಯವಾದ ಕಾನೂನೇ ಆಗಿದೆ. ಶಿಕ್ಷೆ ಇದೆ ಎಂಬ ಕಾರಣಕ್ಕೆ ನಮ್ಮ ಸಮಾಜದಲ್ಲಿ ದುಷ್ಕೃತ್ಯಗಳು ಕಡಿಮೆಯಾಗಿವೆಯೇ? ಇಲ್ಲ, ಜೈಲುಗಳು ಕಿಕ್ಕಿರಿದು ತುಂಬಿವೆ. ವಕೀಲರಿಗೆ ಬಿಡುವಿಲ್ಲದ ಕೆಲಸ ನೀಡಿದೆ. ಒಂದು ವೇಳೆ ಶಿಕ್ಷೆಯೇ ಇಲ್ಲದಿದ್ದರೆ ಸಮಾಜ ಹೇಗಿರುತ್ತಿತ್ತು? ಕಾನೂನುಗಳು ಇದ್ದುದರಿಂದ ಸಮಾಜ ಎಷ್ಟು ಸುಧಾರಣೆಯಾಗಿದೆ? ಕಾನೂನುಗಳು ಜೇಡನ ಬಲೆಯಂತೆ. ದುಂಬಿ ಅದನ್ನು ಹರಿದುಕೊಂಡು ಹಾರಿಹೋಗುತ್ತದೆ. ಸಣ್ಣ ಸೊಳ್ಳೆಗಳು ಮಾತ್ರ ಸಿಕ್ಕಿ ಹಾಕಿಕೊಳ್ಳುತ್ತವೆ ಎಂಬ ಗಾದೆಮಾತಿದೆ. ಮಾತು ಅಪ್ಪಟ ಸತ್ಯವೆಂದು ನಮಗೆಲ್ಲಾ ಗೊತ್ತಿದೆ. ಶಾಲೆಗಳಲ್ಲೂ ಒಂದು ರೀತಿಯ ತರತಮ ಭೇದಗಳಿರುವುದು, ಉಳ್ಳವರಿಗೆ ಮತ್ತು ಇಲ್ಲದವರಿಗೆ ಬೇರೆ ಬೇರೆ ಶಾಲೆಗಳಿರುವುದು ನಮಗೆ ಗೊತ್ತಿದೆ. ಶಾಲೆಯೊಳಗೆ ಮಕ್ಕಳಲ್ಲೂ ಬಡವ ಶ್ರೀಮಂತ, ಪ್ರತಿಭಾವಂತ, ಪ್ರಭಾವಳಿಯುಳ್ಳ ಹೆತ್ತವರಿಂದಾಗಿ ಅಲ್ಲೂ ತರತಮ ಭೇದಗಳಿರುವುದು ಕಣ್ಣಿಗೆ ಹೊಡೆದಂತೆ ಗೋಚರಿಸಬಹುದು. ಆದರೆ ಅದು ತೆರೆಯ ಮರೆಯಲ್ಲಿ ಕೆಲಸ ಮಾಡುತ್ತದೆಂಬುದು ಎಲ್ಲರಿಗೂ ತಿಳಿದ ವಿಷಯ. ತಪ್ಪುಗಳನ್ನು ಮಾಡಬಾರದು. ತಪ್ಪುಗಳಿಗೆ ಶಿಕ್ಷೆ ಇದೆ ಎಂಬ ಅರಿವು ಮಕ್ಕಳಿಗೆ ಇರಬೇಕಾದುದು ಮುಖ್ಯ. ಆದರೆ ತಪ್ಪುಗಳ ಬಗ್ಗೆ ಹಿರಿಯರು ಪೂರ್ವಗ್ರಹ ಪೀಡಿತರಾಗಿರಬಾರದು. ತಾವೂ ಬಾಲ್ಯದಲ್ಲಿ ತಪ್ಪು ಮಾಡಿಯೇ ಬೆಳೆದವರು ಎಂಬುದು ಹಿರಿಯರಿಗೆ ನೆನಪಿದ್ದರೆ ಮಕ್ಕಳು ಮಾಡುವ ಎಷ್ಟೋ ತಪ್ಪುಗಳು ಕ್ಷಮಾರ್ಹವಾಗಿರುತ್ತವೆ. ಕದಿಯುವುದು, ಸುಳ್ಳು ಹೇಳುವುದು, ಹೊಡೆಯುವುದು, ನಿಂದಿಸುವುದು, ವಂಚನೆ ಮಾಡುವುದು ಇಂತಹ ತಪ್ಪುಗಳು ಮಕ್ಕಳಿಂದ ಆದಾಗ ಅದರ ಮೂಲ ಕಾರಣ ಹುಡುಕುವ ತಾಳ್ಮೆ ನಮ್ಮಲ್ಲಿದ್ದರೆ ಶಿಕ್ಷೆಯ ಅಗತ್ಯವಿರಲಾರದು. ಮಕ್ಕಳು ಏನಾದರೂ ಮಾಡಲಿ, ನನಗೇನು ಎಂದು ಶಿಕ್ಷಕರು ಬಿಟ್ಟು ಬಿಡುವುದಿದೆಯಲ್ಲಾ ಇದು ಮಕ್ಕಳ ಭವಿಷ್ಯಕ್ಕೆ ಬಹಳ ಅಪಾಯಕಾರಿ ಎಂದೇ ನನ್ನ ಭಾವನೆ. ಹೆತ್ತವರು ತಮ್ಮ ಮಕ್ಕಳನ್ನು ನನ್ನದಲ್ಲ ಎಂದು ಸಾಕಬೇಕಂತೆ. ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳೆಂದೇ ಪೋಷಿಸಬೇಕಂತೆ. ಎರಡೂ ವಿಧಾನಗಳು ಪ್ರಯೋಗದಲ್ಲಿ ವಿಫಲವಾದವುಗಳು ಹೆಚ್ಚು, ಸಫಲವಾದವುಗಳು ಕಡಿಮೆ. ಆದರೂ ನಾವು ಆಶಾವಾದಿಗಳಾಗೋಣ. ದೌರ್ಬಲ್ಯಗಳು ಮನುಷ್ಯ ಸಹಜ ಗುಣಗಳಲ್ಲವೆ? ಮಕ್ಕಳಿಂದ ತಪ್ಪುಗಳಾಗದಂತೆ ತಡೆಯಲು ನಮ್ಮಿಂದ ತಪ್ಪುಗಳಾಗದಂತೆ ಎಚ್ಚರ ವಹಿಸುವುದೇ ಫಲಪ್ರದವಾದ ಮಾರ್ಗವಾಗಿದೆ.


ನನ್ನ ತರಗತಿಯಲ್ಲಿದ್ದ ಹುಡುಗಿಯೊಬ್ಬಳ ಒಂದು ಕಣ್ಣು ನೋಡುವಾಗಲೇ ಏನೋ ಒಂದು ರೀತಿಯಲ್ಲಿದ್ದುದರಿಂದ ಅವಳನ್ನು ವಿಚಾರಿಸಿದೆ. ಹೊಡೆಯುವಾಗ ಕಣ್ಣಿಗೆ ಪೆಟ್ಟು ಬಿದ್ದು ಕಣ್ಣೇ ಹೋಗಿಬಿಟ್ಟಿದೆಯಂತೆ. ಬಳಿಕ ಕೃತಕ ಕಣ್ಣನ್ನು ಜೋಡಿಸಲಾಯಿತೆಂದು ಹೇಳಿದಾಗ ನಾನು ದಂಗಾಗಿಬಿಟ್ಟಿದ್ದೆ. ಮರುದಿನ ಅವಳ ತಾಯಿ ಬಂದು ಕಣ್ಣಲ್ಲಿ ನೀರು ತುಂಬಿಕೊಂಡು ಗೋಳೋ ಎಂದು ಅತ್ತು ವಿಷಯ ತಿಳಿಸಿದರು. ತಾನೇ ತನ್ನ ಕೈಯಿಂದ ಮಗಳಿಗೆ ಹೊಡೆದ ಪೆಟ್ಟು ಕಣ್ಣು ಕಳಕೊಳ್ಳುವಂತಾಗಬಹುದೆಂದು ಊಹಿಸಿರಲಿಲ್ಲವಂತೆ. ಜೀವಮಾನವಿಡೀ ನನ್ನನ್ನು ಕೊರಗಿ ಸಾಯುವಂತೆ ಮಾಡಿದ ಘಟನೆಯೇ ನನಗೆ ದೇವರು ನೀಡಿದ ಶಿಕ್ಷೆ. ಎಲ್ಲರೂ ಕೇಳುವಾಗ ನನಗೆ ನಾನು ಸತ್ತು ಹೋಗಬಾರದೇ ಎಂಬಷ್ಟು ಹಿಂಸೆ ಉಂಟಾಗುತ್ತದೆ. ನೀವು ಕೇಳಿದಿರೆಂದು ನಿಮ್ಮ ಬಳಿ ಬಂದು ನನ್ನ ತಪ್ಪು ಒಪ್ಪಿಕೊಂಡೆ ಎಂದು ಹೇಳಿ ಅತ್ತು ನಿರಾಳವಾದರು. ಆಕೆ ಈಗ ಕಾನ್ವೆಂಟಿಗೆ ಸೇರಿ ಸಿಸ್ಟರ್ ಆಗಿ ಎಲ್ಲೋ ಕೆಲಸದಲ್ಲಿದ್ದಾಳೆ.

ಪದ್ವಾ ಹೈಸ್ಕೂಲಿನ ಹಿಂದಿ ಮಾಸ್ಟ್ರನ್ನು ಅವರ ಶಿಷ್ಯರು ಮರೆಯಲಾರರು. ಹಿಂದಿ ಪಾಠ ಆಗ ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎಂದೆನಲ್ಲಾ. ಕಾಲದಲ್ಲಿ ಹುಡುಗರು ಹಿಂದಿ ಪಾಠದ ಕಡೆಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಲು ಅವರು ಮಾಡಿದ ತಂತ್ರವೇನು ಗೊತ್ತೇ? ಪ್ರತೀದಿನ ಹಿಂದಿ ಪಿರೇಡಿನಲ್ಲಿ ೧೦ ನಿಮಿಷ ಅವರು ಕತೆ ಹೇಳುತ್ತಿದ್ದರು. ಅವರು ಕತೆ ಹೇಳುವ ಶೈಲಿ, ಹಾವಭಾವಗಳು ಎಷ್ಟು ಆಕರ್ಷಕವಾಗಿರುತ್ತಿದ್ದುವೆಂದರೆ ಹಿಂದಿ ಪಿರೇಡನ್ನು ಎಂದೂ ತಪ್ಪಿಸಿಕೊಳ್ಳಲಾರದಷ್ಟು. ಹಿಂದಿ ಪಾಠದಲ್ಲಿ ಎಲ್ಲರೂ ಕನಿಷ್ಠ ಇಂತಿಷ್ಟು ಅಂಕಗಳನ್ನಾದರೂ ಪಡೆಯಲೇಬೇಕು. ಇಲ್ಲದಿದ್ದರೆ ಕತೆ ಇಲ್ಲ ಎಂಬ ಅವರ ಎಚ್ಚರಿಕೆ ಒಳ್ಳೆ `ವರ್ಕೌಟ್' ಆಗುತ್ತಿತ್ತು. ಅವರ ಕತೆ ಹೇಳುವ ಶೈಲಿಗೆ ಮಕ್ಕಳು ಎಷ್ಟು ಮರುಳಾಗಿಬಿಟ್ಟಿದ್ದರೆಂದರೆ ಹಿಂದಿ ಪಾಠವನ್ನು ಶ್ರದ್ಧೆಯಿಂದ ಕಲಿಯುವ ಮನಸ್ಸು ಮಾಡುತ್ತಿದ್ದರು. ಕನಿಷ್ಠ ಪಾಸಾಗುವಷ್ಟು ಮಾತ್ರ ಸಾಕೆಂಬ ನಿರ್ಧಾರಕ್ಕೆ ಮಕ್ಕಳು ಬದ್ಧರಾಗಿ ಕಲಿಯುತ್ತಿದ್ದರು. ಇನ್ನೂ ಒಂದು ವಿಶೇಷ ಗೊತ್ತಾ? ಕತೆ ಎಂಟನೇ ತರಗತಿಯಲ್ಲಿ ಪ್ರಾರಂಭವಾದರೆ ಎಸ್.ಎಸ್.ಎಲ್.ಸಿ.ವರೆಗೆ ಅದು ಧಾರಾವಾಹಿಯಾಗಿ ಮುಂದುವರಿಯುತ್ತಿತ್ತಂತೆ. ಮಾಸ್ಟ್ರು ಹೇಗೆ ಅದನ್ನು ನೆನಪಿಟ್ಟು ಮುಂದುವರಿಸಿಕೊಂಡು ಹೋಗುತ್ತಿದ್ದರೋ ಗೊತ್ತಿಲ್ಲ. ನನ್ನ ತಮ್ಮನೂ ಅವರ ವಿದ್ಯಾರ್ಥಿ. ಯಾವ ಕತೆ ಹೇಳುತ್ತಿದ್ದರು ಎಂದು ನಾನು ಅವನಲ್ಲಿ ಒಮ್ಮೆ ಕೇಳಿದ್ದೆ. `ಹೇ, ಅದೆಲ್ಲಾ ಬಂಡಲ್ ಕತೆ. ಆದರೆ ಅವರು ಹೇಳುವ ರೀತಿಯಿದೆಯಲ್ಲಾ, ಹೇಳುವ ಭಾಷೆಯಿದೆಯಲ್ಲಾ ಅದು ಬಹಳ ಸ್ವಾರಸ್ಯವಾಗಿರುತ್ತಿದ್ದವು. ಅವರ ಹಿಂದಿ ಪಿರೇಡಿಗೆ ನಾವು ಮೈಯೆಲ್ಲಾ ಕಿವಿಯಾಗಿ ಕೂರುತ್ತಿದ್ದೆವು' ಎಂದು ಹೇಳಿದ. ಜಾನ್ ಮಾಸ್ಟ್ರು ಮಕ್ಕಳಿಗಾಗಿ ಒಂದಿಷ್ಟು ನಾಟಕ, ಹಾಡುಗಳನ್ನೆಲ್ಲಾ ಬರೆದವರು. ಮಕ್ಕಳ ಪ್ರೀತಿಯನ್ನು ಗಳಿಸಿಕೊಂಡವರು. ಅಂತಹ ಮಾಸ್ಟ್ರು ಬಾಲ್ಯದಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದಾಗ ಶಿಕ್ಷಕರೊಬ್ಬರು ಕೆನ್ನೆಗೆ ಹೊಡೆದ ಪೆಟ್ಟಿಗೆ ಅವರ ಒಂದು ಕಿವಿ ಕೆಪ್ಪಾಗಿಯೇ ಹೋಯಿತಂತೆ. ಅದೂ ಅವರದು ತುಂಬಾ ದಾರಿದ್ರ್ಯದ ಕುಟುಂಬವಾಗಿತ್ತಂತೆ. ಆಗ ಪಟ್ಟ ಕಷ್ಟವನ್ನು ನೆನೆಸಿಕೊಂಡು ಹೇಳುತ್ತಿದ್ದಾಗ ಅವರ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಇದನ್ನು ಯಾಕೆ ಹೇಳಿದೆನೆಂದರೆ ಹೆತ್ತವರಿಂದಲೂ ತಪ್ಪಾಗುತ್ತದೆ, ಶಿಕ್ಷಕರಿಂದಲೂ ತಪ್ಪಾಗುತ್ತದೆ ಎಂಬುದು ನಮಗೆ ಗೊತ್ತಿರಬೇಕು. ಅದರಲ್ಲೂ ಹದಿಹರೆಯದ ಗಂಡುಮಕ್ಕಳು ಮಾಡುವ ತುಂಟಾಟಗಳಿಂದಾಗಿ ಶಿಕ್ಷಕರ ಪ್ರಾಣಕ್ಕೆ ಸಂಚಕಾರವಾದ ಘಟನೆಗಳೂ ಇದೆ. ಜಾನ್ ಮಾಸ್ಟ್ರ ಶಾಲೆಯಲ್ಲಿ ಒಮ್ಮೆ ಮಕ್ಕಳು ಮಾಸ್ಟ್ರ ಮೇಲಿನ ಹಗೆಯಿಂದ ಅವರ ಕುರ್ಚಿಯಡಿಯಲ್ಲಿ ಪಟಾಕಿ ಸಿಡಿಸಿ ಮಾಸ್ಟ್ರು ಹೆದರಿ ಬಿದ್ದ ಪೆಟ್ಟಿಗೆ ಪ್ರಾಣ ಹೋಯಿತೆಂದೇ ಭಾವಿಸಿದ್ದರಂತೆ. ಮತ್ತೆ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಪಡೆದ ಮೇಲೆ ಗುಣಮುಖರಾದರೆಂದೂ ಅವರು ಹೇಳುವುದನ್ನು ಕೇಳಿದ್ದೆ. ಮಾಸ್ಟ್ರುಗಳಿಗೆ, ಟೀಚರುಗಳಿಗೆ ಅಡ್ಡ ಹೆಸರಿಡುವುದು ಸಾಮಾನ್ಯ ಸಂಗತಿ. ಹಾಗೆ ಹೆಸರಿಡುವುದರಲ್ಲಿ ಮಕ್ಕಳ ಸೂಕ್ಷ್ಮಗ್ರಾಹಿ ಗುಣವನ್ನು ಮೆಚ್ಚಿಕೊಳ್ಳಬೇಕು. ನಮ್ಮ ನಿಜವಾದ ಮೌಲ್ಯಮಾಪಕರು ನಮ್ಮ ವಿದ್ಯಾರ್ಥಿಗಳು ಎಂದು ಜಾನ್ ಮಾಸ್ಟ್ರು ಹೇಳಿದ್ದು ಎಷ್ಟು ಸತ್ಯವೆಂಬುದು ನನ್ನ ವೃತ್ತಿಜೀವನದಲ್ಲೂ ಸಾಬೀತಾಗಿದೆ.

 (ಮುಂದುವರಿಯಲಿದೆ)


3 comments:

 1. ಈ ಜಾನ್ ಮಾಸ್ತರರಂತೆ ನಾಲ್ಕನೆ ತರಗತಿಯಲ್ಲಿ ನಮಗೊಬ್ಬರು ಧಾರಾವಾಹಿ ಕಥೆ ಹೇಳುವ ತೊಬೇಸ್ ಮಾಸ್ತರರಿದ್ದರು.ಅಲಿಬಾಬನ ಕಥೆಯನ್ನು ನಾನಂತು ಮೊದಲು ಕೇಳಿದ್ದು ಅವರಿಂದಲೇ.ಪಾಠದ ನಂತರ ಕೊನೆಯ ಹತ್ತು ನಿಮಿಷ ಕಥೆಗಾಗಿ ಮೀಸಲು.
  ಅನುಪಮಾ ಪ್ರಸಾದ್.

  ReplyDelete
 2. ಇದು ಶಿಕ್ಷಣದ, ಶಿಕ್ಷಕರ ಬಗ್ಗೆ ಏನೇನೋ ಮಾತನಾಡುವ ಮಂದಿಗೆ ಒಂದಷ್ಟು ಪಾಠ. ಮಕ್ಕಳಲ್ಲೂ ಒಳ್ಳೆಯವರು ಮತ್ತ್ತು ಕೆಟ್ಟವರಿದ್ದಾರೆ. ಶಿಕ್ಷಕರ ವೃತ್ತಿಯೇ ಅಂಥಾದ್ದು. ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಶಿಕ್ಷಕರಿಗಿದೆ.
  ಗಿರೀಶ್ ಪಾಲಡ್ಕ

  ReplyDelete
 3. ದಿನೇಶ ನೆಟ್ಟಾರ್03 February, 2016 09:12

  ಶ್ರೀ ಜಾನ್ ಡಿಸೋಜ ಅವರ ಬಗ್ಗೆ ಓದಿದಂತೆ ನನಗೆ ಕಣ್ಣೀರು ಬಂತು. ಅಂತಹ ಗುರುಗಳು ಲಕ್ಷದಲ್ಲಿ ಒಬ್ಬರೂ ಇಲ್ಲ. ಅವರು ೬ ವರ್ಷ (ಇಡೀ ಹೈಸ್ಕೂಲು - ೧ನೇ ಫಾರ್ಮ್ ನಿಂದ ೩ನೇ ಫಾರ್ಮ್ ವರೇಗೂ, ೮ನೇ ಕ್ಲಾಸಿನಿಂದ ೧೦ನೇ ಕ್ಲಾಸಿನ ವರೇಗೂ) ನನ್ನ ಹಿಂದಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ನನ್ನ ಪಿ.ಎಚ್.ಡಿ. ಗುರುಗಳನ್ನು ಬಿಟ್ಟರೆ ಯಾರೊಬ್ಬರೂ ಇಷ್ಟು ಕಾಲ ನನಗೆ ಗುರುಗಳಾಗಿರಲಿಲ್ಲ. ಅವರಿಂದಾಗಿ ನಾನು ಹೈಸ್ಕೂಲು ಮುಗಿಸಿ ೪೦ ವರ್ಷಗಳ ನಂತರ ಈಗಲೂ ನಿರರ್ಗಳವಾಗಿ ಹಿಂದಿ ಮಾತಾಡುತ್ತೇನೆ. ಕ್ಲಾಸಿಗೆ ಬಂದಾಗ ಮೊದಲು ಕಾಪಿ ಪುಸ್ತಕ ಪರೀಕ್ಷೆ. ಕಾಪಿಗೆ ಅವರ 'Good' (Gಗೆ ಅವರದೇ ಒಂದು ವಿಶಿಷ್ಟ ಸುಳಿ ಇತ್ತು) ಸಿಗಬೇಕೆಂದು ಯಾವಾಗಲೂ ನನ್ನ ಪ್ರಯತ್ನ. ಹೆಚ್ಚಿನ ಪಾಲು ಸಿಕ್ಕಿತ್ತು. 'A' ಬಂದರೆ ನನಗೆ ದುಃಖ. ೨ನೇ ಫಾರ್ಮಿನಲ್ಲಿ ಅವರು ನನ್ನನ್ನು ಅವರ ಮನೆಗೆ ಕರೆಸಿ, ಅವರ ಮಡದಿ ನನ್ನ ತಲೆ ಬಾಚಿ, ಬೆಂದೂರಿಗೆ ಕರೆದುಕೊಂಡು ಹೋಗಿ ನನ್ನ ಕೈಯಲ್ಲಿ ಹಿಂದಿ ಪುಸ್ತಕ ಹಿಡಿಸಿ ತೆಗೆಸಿದ ಫೋಟೋ ನಮ್ಮ ಮನೆಯಲ್ಲಿ ಯಾವಾಗಲೂ ಗೋಡೆಯ ಮೇಲೆ ಇತ್ತು. ನನ್ನ ೧ನೇ ಫಾರ್ಮಿನಲ್ಲಿ ಅವರು ಆಗ ತಾನೇ ಒಂದೆರಡು ವರ್ಷಗಳ ಮೊದಲು ಪದುವಾ ಶಾಲೆಗೆ ಮಾಸ್ಟರ್ ಆಗಿ ಬಂದಿದ್ದರು. ಹಿಂದಿ ರಾಷ್ಟ್ರಭಾಷಾ ಪರೀಕ್ಷೆಯಲ್ಲಿ ಪಾಸಾದ ಸಂತೋಷಕ್ಕಾಗಿ ಅವರ ಎಲ್ಲಾ ವಿದ್ಯಾರ್ಥಿಗಳಿಗೂ ಲಡ್ಡು ಹಂಚಿದ್ದರು. ಮತ್ತೆ ವಿಶಾರದ ಪಾಸಾದಾಗಲೂ ಹಾಗೇ ಸಿಹಿ ಹಂಚಿದ್ದರು. ನನ್ನನ್ನು ಕೆಲವುಸಲ ನಾಟಕಕ್ಕೆ ಸೇರಿಸಿದ್ದರು.

  ಅವರು ಕತೆ ಹೇಳುವಾಗ ಕ್ಲಾಸಿನಲ್ಲಿ ಸಂಪೂರ್ಣ ನಿಶ್ಶಬ್ದವಾಗಿರುತ್ತಿತ್ತು. ಅವರ ಕತೆಗಳು 'ಬಂಡಲ್' ಕತೆಗಳಲ್ಲ. ೧. ಕೃಷ್ಣಮೂರ್ತಿ - ಇದು ಒಂದು ದಾರುಣ ಕತೆ. ಒಬ್ಬ ಹುಡುಗ ತನ್ನ ಸವತಿ ತಾಯಿಯ ಕೈಯಲ್ಲಿ ಪಡೆಯುವ ಹಿಂಸೆಯ ಕತೆ. ದುರಂತದಲ್ಲೇ ಮುಗಿಯುತ್ತದೆ. ನಾವೆಲ್ಲಾ ಕ್ಲಾಸಿನಲ್ಲಿ ಕಣ್ಣೀರು ಸುರಿಸಿದ ಕತೆ. ಇದಕ್ಕೆ ಸುಮಾರು ಒಂದು ವರ್ಷವೇ ಬೇಕಿತ್ತು. ೨. ಕಿಟ್ಟ - ಒಬ್ಬ ಅನಾಥ ಚುರುಕಿನ ಹುಡುಗ. ಒಬ್ಬ ಸಾಯಿಬ ಡ್ರೈವರನೊಂದಿಗೆ ಕೆಲಸಕ್ಕೆ ಸೇರಿ, ಅನೇಕ ಹಾಸ್ಯಮಯ ಸನ್ನಿವೇಶಗಳ ನಂತರ ಜೀವನದಲ್ಲಿ ಮುಂದೆ ಬರುತ್ತಾನೆ. ಇದರಲ್ಲಿ ಹಾಡುಗಳೂ ಇರುತ್ತಿದ್ದುವು. ಈ ಕತೆ ಸುಮಾರು ಎರಡು ವರ್ಷದಷ್ಟು ಉದ್ದ ಇತ್ತು. ಜಾನ್ ಮಾಸ್ಟರು ಇವುಗಳನ್ನು ಯಾವುದೋ ಪುಸ್ತಕದಲ್ಲಿ ಓದಿ ನೆನಪಿಟ್ಟುಕೊಂಡು ಹೇಳಿರಬೇಕು.

  ReplyDelete