26 January 2016

ಉದ್ಯೋಗಪರ್ವದ ಪೂರ್ವರಂಗ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿದೀಪದಡಿಯ ಕತ್ತಲೆ
ಅಧ್ಯಾಯ ಹನ್ನೆರಡು

``ನನ್ನ ಮಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಸುವವರೆಗೆ ನಾನು ಬದುಕಿದರೆ ಸಾಕು, ನನ್ನ ಮಗಳಿಗೊಂದು ಟೀಚರ್ ಟ್ರೈನಿಂಗ್ ಪರೀಕ್ಷೆ ಮುಗಿಸುವವರೆಗೆ ನಾನು ಬದುಕಿದರೆ ಸಾಕು'' ಎಂದು ಯಮನಲ್ಲಿ ಬೇಡಿಕೆ ಸಲ್ಲಿಸುತ್ತಾ ಬಂದ ಅಪ್ಪ ವರ್ಷದಲ್ಲಿ ನಾಲ್ಕೈದು ಬಾರಿಯಾದರೂ ಯಮನನ್ನು ಕಂಡು, ಇನ್ನೇನು ಅವನ ಕೈಕುಲುಕಿ ಅಪ್ಪಿಕೊಳ್ಳುತ್ತೇನೆಂದು ಯೋಚಿಸುವಷ್ಟರಲ್ಲಿ ಯಾವ ಮಾಯಕದಲ್ಲೋ ತಪ್ಪಿಸಿಕೊಂಡು ಮರಳಿ ಬರುತ್ತಿದ್ದರು.
ಹಾಗೆ ತಪ್ಪಿಸಿಕೊಂಡು ಬರುವುದಕ್ಕೆ ಡಾ. ಉಮಾನಾಥ ಸುವರ್ಣರೋ, ಡಾ. ಬಾಳ್ತಿಲ್ಲಾಯರೋ ನೆರವಾಗುತ್ತಿದ್ದರು. ಇಂಜೆಕ್ಷನು, ಮಾತ್ರೆಗಳು ತತ್ಕಾಲದ ಶಮನಕ್ಕೆ ಸಹಾಯವಾಗುತ್ತಿದ್ದುವು. ಅಪ್ಪನ ಮೂವತ್ತು ವರ್ಷ ವಯಸ್ಸಿನಿಂದಲೇ ಅಪ್ಪಿಕೊಂಡ ಅಸ್ತಮಾ ಎಂಬ ಪ್ರೇಯಸಿಯ ಸಂಬಂಧ ಎಷ್ಟು ಗಾಢವಾಗಿತ್ತೆಂದರೆ ಕೊನೆಯ ಕ್ಷಣದವರೆಗೂ ಅವರು ಜೊತೆಯಾಗಿಯೇ ಬಾಳಿದರು.


ಕುಂಯಿ ಕುಂಯಿ ಎಂದು ಅವರ ಪ್ರೇಮಾಲಾಪ ಮಾರು ದೂರದವರೆಗೂ ಕೇಳುತ್ತಿತ್ತು. ಆಗ ಉಸಿರಾಡಲೂ ಒದ್ದಾಡುವ ಅಪ್ಪನ ಸ್ಥಿತಿಯನ್ನು ಕಂಡು ಬಿಸಿನೀರಿನ ಶಾಖ ಕೊಡುವುದೋ ಎದೆ ಬೆನ್ನುಗಳನ್ನು ತಿಕ್ಕುವುದೋ ಮುಂತಾದ ಶುಶ್ರೂಷೆಯಲ್ಲಿ ನಾನೂ ಅಮ್ಮನೂ ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದದ್ದುಂಟು. ಡಾಕ್ಟರುಗಳ ಇಂಜೆಕ್ಷನ್ ಮಾತ್ರೆಗಳಿಗಿಂತಲೂ ತನ್ನ ರೋಗಕ್ಕೆ ಅಪ್ಪ ತನ್ನದೇ ರೀತಿಯಲ್ಲಿ ಪರಿಹಾರ ಕಂಡುಕೊಂಡರು.

ಉನ್ಮತ್ತದ ಹೂಗಳನ್ನು ತಂದು ಒಣಗಿಸಿ ಅವುಗಳನ್ನು ಪುಡಿ ಮಾಡಿ ಪೇಪರಿನಲ್ಲಿ ಸಿಗರೇಟಿನಂತೆ ತುಂಬಿಸಿ ಸುರುಳಿ ಸುತ್ತಿ ಅದರ ಒಂದು ತುದಿಗೆ ನೂಲಿನಿಂದ ಸುತ್ತಿ ಪುಡಿ ಉದುರದಂತೆ ಕಟ್ಟುತ್ತಿದ್ದರು. ದಮ್ಮು ಜೋರಾಗುತ್ತದೆ, ಶ್ವಾಸ ಬಿಡಲು ಕಷ್ಟವಾಗುತ್ತದೆಂದು ಅನಿಸಿದ ಕೂಡಲೇ ಸಿಗರೇಟಿಗೆ ಬೆಂಕಿ ಹಚ್ಚಿ ಅದರ ಹೊಗೆಯನ್ನು ನುಂಗುತ್ತಿದ್ದರು. ಆಗ ಗಂಟಲಲ್ಲಿ ಸಿಕ್ಕಿಕೊಂಡ ಕಫ ಹೊರಗೆ ಬರುತ್ತಿತ್ತು. ಸಲೀಸಾಗಿ ಉಸಿರಾಡಲು ಸಾಧ್ಯವಾಗುತ್ತಿತ್ತು. ಉನ್ಮತ್ತದ ಕಾಯಿ ತಿಂದರೆ ಹುಚ್ಚು ಹಿಡಿಯುತ್ತದೆಂದು ಪ್ರತೀತಿ ಇದೆ. ತುತ್ತೂರಿಯಂತಹ ಅದರ ಬಿಳಿ ಹೂಗಳಲ್ಲೂ ಅಂತಹ ಮಾದಕ ವಸ್ತು ಇರಬಹುದಲ್ಲವೇ? ಹೆಚ್ಚೂ ಕಡಿಮೆ ಸುಮಾರು ೨೦ ವರ್ಷಗಳ ಕಾಲ ಉನ್ಮತ್ತದ ಹೂಗಳ ಪುಡಿಯಿಂದ ಮಾಡಿದ ಸಿಗರೇಟನ್ನು ಸೇದಿಯೇ ಅಪ್ಪ ತನ್ನ ಅಸ್ತಮಾ ರೋಗಕ್ಕೆ ತಾತ್ಕಾಲಿಕ ಶಮನ ಕಂಡುಕೊಂಡಿದ್ದರು. ಆದರೆ ಹೂಗಳು ವರ್ಷದ ಎಲ್ಲಾ ಕಾಲಗಳಲ್ಲೂ ಸಿಗುವುದು ಕಷ್ಟ. ಹೂಗಳನ್ನರಸಿ ಎಲ್ಲೆಲ್ಲೋ ಹೋಗಿ ಸಂಗ್ರಹಿಸಿ ತಂದು ಒಲೆಯ ಮೇಲಿನ ಅಟ್ಟದಲ್ಲಿ ಸಂಗ್ರಹಿಸಿಡುತ್ತಿದ್ದೆವು. ಹೂವಿನ ಅಗತ್ಯವನ್ನು ತಿಳಿದ ಬಂಧುಗಳು ಪರಿಚಿತರು ಇವರಿಗಾಗಿ ಹೂಗಳನ್ನು ತಂದು ಕೊಡುತ್ತಿದ್ದರು. ಹೂಗಳು ಇಲ್ಲದಾಗ ಅದರ ಎಲೆಗಳನ್ನಷ್ಟೇ ಉಪಯೋಗಿಸುತ್ತಿದ್ದರು. ಅನ್ನ ನೀರಿಲ್ಲದೆ ಬದುಕಬಲ್ಲೆ. ಆದರೆ ಉನ್ಮತ್ತದ ಹೂವಿಲ್ಲದೆ ಬದುಕಲಾರೆ ಎಂಬಂತಹ ಸ್ಥಿತಿಗೆ ಅಪ್ಪ ತಲುಪಿದರು. ಒಂದು ಸಲ ಡಾಕ್ಟರ್ ಉಮಾನಾಥ ಸುವರ್ಣರು ಅಪ್ಪನಿಗೆ ಟಿ.ಬಿ. ಇರಬಹುದೇನೋ ಎಂದು ಖಾತ್ರಿ ಮಾಡಿಕೊಳ್ಳಲು ವೆನ್ಲಾಕ್ ಆಸ್ಪತ್ರೆಗೆ ಹೋಗಿ ಎಕ್ಸ್ರೇ ಪರೀಕ್ಷೆ ಮಾಡಿಸಿಕೊಂಡು ಬರಲು ಹೇಳಿದರು. ಒಂದು ಬೆಳಿಗ್ಗೆ ನಾವು ಹೊರಟೆವು. ಆಸ್ಪತ್ರೆಗೆ ತಲುಪಿ ಪರೀಕ್ಷೆಗಳೆಲ್ಲಾ ಮುಗಿದು ಮನೆಗೆ ಮರಳುವಾಗ ದಮ್ಮು ಜೋರಾಯಿತು. ಒಂದು ಹೆಜ್ಜೆಯೂ ನಡೆಯಲು ಸಾಧ್ಯವಿಲ್ಲದೆ ಅಪ್ಪ ಮಾರ್ಗದ ಬದಿಯಲ್ಲಿ ಕೂತುಕೊಂಡರು. ಆಗ ಕ್ಷಯರೋಗ ಪರೀಕ್ಷೆಯ ವಿಭಾಗವು ವೆನ್ಲಾಕ್ ಆಸ್ಪತ್ರೆಯ ಹಿಂಭಾಗದಲ್ಲಿ ಅಂದರೆ ರೈಲ್ವೇ ಸ್ಟೇಶನಿಗೆ ಹತ್ತಿರದ ಭಾಗದಲ್ಲಿತ್ತು. ಅಪ್ಪ ಸಂಜೀವಿನಿ ಸಿಗರೇಟು ಹೊತ್ತಿಸಿ ದಮ್ಮು ಎಳೆದು ಕಫವನ್ನು ಹೊರ ಹಾಕುವುದಕ್ಕೆ ಪ್ರಯತ್ನಿಸುತ್ತಿದ್ದರು. ರಸ್ತೆಯಲ್ಲಿ ಹೋಗುವವರೆಲ್ಲಾ ನಮ್ಮನ್ನೇ ಗಮನಿಸುತ್ತಿದ್ದರು. ಕೆಲವರು ನಮ್ಮನ್ನು ಅನುಕಂಪದಿಂದ ನೋಡತೊಡಗಿದರು. ಕೆಲವರು ಕುತೂಹಲ ತಡೆಯಲಾರದೆ ನನ್ನನ್ನು ವಿಚಾರಿಸಿದರು. ಒಬ್ಬ ಗಂಡಸಂತೂ ಅಷ್ಟು ಕೆಮ್ಮು ಇರುವಾಗ ಸಿಗರೇಟು ಯಾಕೆ ಸೇದುತ್ತೀರಿ ಎಂದು ಜೋರಾಗಿಯೇ ಅಪ್ಪನನ್ನು ಗದರಿಸಿದ. ಉತ್ತರ ಅಪ್ಪನಿಂದ ಸಿಗದೇ ಹೋದಾಗ ನನ್ನಲ್ಲಿ ವಿಚಾರಿಸಿದ. ``ಇವರ್ಯಾರು? ನಿನ್ನ ಅಪ್ಪನಾ? ನೀನಾದರೂ ಅವರು ಚುಟ್ಟಾ ಸೇದುವುದನ್ನು ತಡೆಯಬಾರದಾ? ಸುಮ್ಮನೆ ನೋಡುತ್ತಾ ನಿಂತಿದ್ದೀಯಲ್ಲಾ?'' ಎಂದು ಜೋರಾಗಿಯೇ ನನ್ನನ್ನು ಗದರಿಸಿದ. ``ಅದು ಸಿಗರೇಟು ಅಲ್ಲ, ಚುಟ್ಟಾವೂ ಅಲ್ಲ. ಅದು ಅವರ ದಮ್ಮಿಗೆ ಇರುವ ಔಷಧಿ ಎಂದು ವಿವರಿಸಿ ಹೇಳಿದಾಗ ಬೆರಗಾದ. ಅದರಲ್ಲಿ ಉನ್ಮತ್ತದ ಹೂಗಳ ಪುಡಿ ಇದೆ” ಎಂದು ನಾನು ಹೇಳಿದಾಗ ``ಯಾವ ಡಾಕ್ಟರು ಸಲಹೆ ನೀಡಿದ್ದು? ಹೂಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದನ್ನು ಉಪಯೋಗಿಸದಿರುವುದು ಒಳ್ಳೆಯದು'' ಎಂದು ಬಹಳ ಕಾಳಜಿಯುಕ್ತವಾದ ಸಲಹೆ ನೀಡಿದ. ಅಪ್ಪನ ದಮ್ಮು ಸರಿಯಾಗುವವರೆಗೂ ನಮ್ಮ ಜೊತೆಯೇ ನಿಂತ. ನನ್ನ ದೈನ್ಯ ತುಂಬಿದ ಮುಖಭಾವವನ್ನು ಗಮನಿಸಿಯೋ ಏನೋ ಅಪ್ಪ ಮೆಲ್ಲ ಎದ್ದು ನಿಂತ ಮೇಲೆ ಅವರ ಕೈಹಿಡಿದು ಬನ್ನಿ, ನಾನು ನಿಮ್ಮನ್ನು ಬಸ್ಸ್ಟ್ಯಾಂಡಿಗೆ ಮುಟ್ಟಿಸುತ್ತೇನೆ ಎಂದು ಆದರಿಸಿ ಕರೆತಂದು ಬಸ್ ಹತ್ತಿಸಿ `ಜಾಗ್ರತೆ' ಎಂದು ನನಗೂ ಹೇಳಿ ಕಂಡಕ್ಟರನಲ್ಲಿ ಇವರನ್ನು ಜಾಗ್ರತೆಯಿಂದ ಕೈಹಿಡಿದು ಕೆಳಗಿಳಿಸಿ ಎಂದು ವಿನಂತಿಸಿ ಹೋದ. ಗುರುತು ಪರಿಚಯವಿಲ್ಲದ ಮಹಾನುಭಾವನ ಮುಖ ಈಗಲೂ ನನ್ನ ಕಣ್ಣೆದುರು ಬಂದು ನಿಂತಂತಿದೆ.

ಅಂದು ನಾವು ಮನೆಗೆ ಮುಟ್ಟುವಾಗ ಸೂರ್ಯ ತಾಪ ಕಳೆದುಕೊಂಡು ಪಶ್ಚಿಮಕ್ಕೆ ವಾಲತೊಡಗಿದ್ದ. ಅಂದು ಅಪ್ಪನಿಗೆ ಅನ್ನ ಸೇರಲಿಲ್ಲ. ಒಂದಿಷ್ಟು ಬಿಸಿನೀರು ಕುಡಿದು ಹಾಗೇ ಮಲಗಿದರು. ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಕರೆದು ``ರೋಹಿಣಿ, ಇನ್ನು ನನಗೆ ಯಾವ ಡಾಕ್ಟರ ಔಷಧಿಯೂ ಬೇಡ. ಡಾಕ್ಟರನ್ನು ಕರೆತರುವುದೂ ಬೇಡ. ನಾನು ಹೋಗುವುದೂ ಇಲ್ಲ. ಹೇಗೂ ಇಷ್ಟು ವರ್ಷ ರೋಗದೊಂದಿಗೆ ಏಗಿದೆ. ಇನ್ನು ಬಾಕಿ ಉಳಿದಿರುವ ಸ್ವಲ್ಪ ಕಾಲವನ್ನು ಏನೇನೋ ಹಿಂಸೆ ಪಟ್ಟು ಸಾಯುವುದು ಬೇಡ'' ಎಂದಾಗ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಹೆಜ್ಜೆ ಎತ್ತಿ ಇಡಲಾರದ ನಿಶ್ಶಕ್ತಿ, ಉಸಿರನ್ನು ಒತ್ತಿ ಹಿಡಿದ ಅಸ್ತಮಾ. ಇದರಿಂದ ಯಾವಾಗ ಮುಕ್ತಿ ಸಿಗುತ್ತದೋ ಎಂದು ಪರಿತಪಿಸುತ್ತಿದ್ದರು ಅಪ್ಪ. ವೆನ್ಲಾಕ್ ಆಸ್ಪತ್ರೆಯ ರಿಪೋರ್ಟಿನಲ್ಲಿ ಟಿ.ಬಿ. ಅಟ್ಯಾಕ್ ಆಗಿದೆ ಎಂದಿದ್ದುದರಿಂದ ಅದಕ್ಕೆ ಆರು ತಿಂಗಳು ಬಿಡದೆ ಮಾತ್ರೆ ಸೇವಿಸಬೇಕು, ಉತ್ತಮ ಆಹಾರ ನೀಡಬೇಕೆಂದು ಸಲಹೆ ನೀಡಿದ್ದರು ಡಾಕ್ಟರುಗಳು. ಮಾತ್ರೆಯನ್ನು ನಾನು ಒತ್ತಾಯ ಮಾಡಿ ತಿನ್ನಿಸಲು ಪ್ರಯತ್ನಿಸಿದಾಗ ನನ್ನ ಮೇಲೆ ಆಕ್ರೋಶಗೊಂಡು ಗದರಿಸಿದ ರೀತಿಗೆ ನಾನು ಬೆರಗಾದೆ. ಅಮ್ಮನ ವಿನಂತಿಗೂ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದರಿಂದ ಮಾತ್ರೆಗಳನ್ನು ಅವರ ಕೈಗೆಟಕುವಂತೆ ಇರಿಸಿ ಸುಮ್ಮನಾದೆವು. ಅಸ್ತಮಾ ಮಾತ್ರವಲ್ಲದೆ ಟಿ.ಬಿ. ಕಾಯಿಲೆಯೂ ಇದೆ ಎಂದು ಗೊತ್ತಾಗಿ ಕೆಲಕಾಲ ಖಿನ್ನತೆಗೊಳಗಾದಂತೆ ವರ್ತಿಸುತ್ತಿದ್ದರು. ವಿನಾ ಕಾರಣ ರೇಗುವುದು ಸಾಮಾನ್ಯವಾಯಿತು. ಸಮಯದಲ್ಲಿ ನನ್ನ ಅಮ್ಮನ ತಾಳ್ಮೆಯನ್ನು ಪ್ರಶಂಸಿಸಲೇಬೇಕು. ಅಪ್ಪ ಎಷ್ಟೇ ರೋಷದಿಂದ ಬೈದರೂ ಒಂದು ಸಲವೂ ಅಮ್ಮ ಸಹನೆ ಕಳಕೊಂಡದ್ದಿಲ್ಲ. ಅಪ್ಪನಿಗೆ ನೋವಾಗುವಂತೆ ಮಾತಾಡಿದ್ದಿಲ್ಲ. ಅಮ್ಮನ ಭೂಮಿತೂಕದ ಸಹನೆಯೇ ನಮ್ಮ ಕುಟುಂಬವನ್ನು ಪೊರೆವ ಶಕ್ತಿಯಾಯಿತು. ಅಪ್ಪ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುವಂತಾಯಿತು.

ನಾನಾಗ ಎಸ್.ಎಸ್.ಎಲ್.ಸಿ.ಯಲ್ಲಿದ್ದೆ. ನಮ್ಮ ಮಿತ ಆದಾಯದಲ್ಲಿ ಅಪ್ಪನಿಗೆ ಉತ್ತಮ ಆಹಾರ ನೀಡಲು ಪ್ರಯತ್ನಿಸಿದೆವು. ಇದೇ ಸಮಯದಲ್ಲಿ ಪರೀಕ್ಷೆಗೆ ಹಣ ಕಟ್ಟುವ ಸಮಯವೂ ಬಂತು. ಯಾರಲ್ಲಿ ಕೇಳುವುದು? ತಕ್ಷಣಕ್ಕೆ ಯಾರಲ್ಲೂ ಕೈಚಾಚುವುದು ಬೇಡವೆಂದು ಅಮ್ಮ ತನ್ನ ಬೆಂಡೋಲೆಯನ್ನು ತಿಮ್ಮಪ್ಪಣ್ಣನಲ್ಲಿ ಅಡವಿಟ್ಟು ಹಣ ಪಡೆದರು. ಮತ್ತೆರಡು ದಿನದಲ್ಲಿ ಕೂಸಕ್ಕನ ಕುರಿಫಂಡನ್ನು ತೆಗೆದು ಅಮ್ಮನ ಬೆಂಡೋಲೆ ಬಿಡಿಸಲಾಯಿತು. ಚಿನ್ನದ ತುಂಡು ಎಂದು ಅಮ್ಮನಲ್ಲಿ ಇದ್ದುದು ಅದೊಂದೇ. ಅದೇ ನಮ್ಮ ಆಪತ್ಕಾಲಕ್ಕೆ ಆಸರೆಯಾಯಿತು. ಕೂಸಕ್ಕ ನಮ್ಮ ನೆರೆಮನೆಯವರು. ಅವರ ಯಜಮಾನಿಕೆಯಲ್ಲಿ ಕುರಿಫಂಡು ಚೆನ್ನಾಗಿಯೇ ನಡೆಯುತ್ತಿತ್ತು. ವಾರಕ್ಕೆ ಐದು ರೂಪಾಯಿ ಬಹಳ ಕಷ್ಟದಿಂದ ನಾವು ಕಟ್ಟುತ್ತಿದ್ದೆವು. ಮೊದಲ ಸಲ ಪರೀಕ್ಷೆಯ ನೆವನದಲ್ಲಿ ವಾರ್ನಲ್ಲಿ ಹಣ ಏರಿಸಿ ನಷ್ಟದಲ್ಲಿ ಹಣ ಪಡೆದಿದ್ದೆವು. ಬಳಿಕದ ಕುರಿಫಂಡಿಗೆ ನಾವು ಹಣವನ್ನೇನೋ ಕೊನೆಯವರೆಗೆ ಕಟ್ಟಿದೆವು. ಆದರೆ ಕೂಸಕ್ಕ ನಮಗೆ ಹಣ ಕೊಡಲೇ ಇಲ್ಲ. ಕುರಿಫಂಡಿನಲ್ಲಿ ಹಣ ಪಡೆದುಕೊಂಡವರು ಮತ್ತೆ ಹಣ ಕಟ್ಟದ ಕಾರಣ ಕೂಸಕ್ಕನಿಗೆ ಸೋಲಾಯಿತು. ನಮಗೆ ಹಣ ಮುಳುಗಿಸಬೇಕೆಂಬ ಇರಾದೆ ಅವರಿಗಿರಲಿಲ್ಲ. ಅವರು ಅಸಹಾಯಕರಾಗಿದ್ದರು. ನನ್ನ ಅಪ್ಪನ ಮೇಲೆ ಬಹಳ ಅಭಿಮಾನ ಗೌರವಗಳಿದ್ದ ಕಾರಣ ತನ್ನ ಕಷ್ಟ ಹೇಳಿಕೊಂಡು ಅಳುತ್ತಿದ್ದರು. ಹಾಗಾಗಿ ನಾವೂ ನಮ್ಮ ಪಾಲಿನ ಶೋಕ ವ್ಯಕ್ತಪಡಿಸಿ ಸುಮ್ಮನಾಗುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ.

ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಾನು ಹೇಗೆ ಪಾಸಾದೆನೋ ನನಗೇ ಆಶ್ಚರ್ಯ. ಬೀಡಿ ಕಟ್ಟುವ ಸೂಪಿನಲ್ಲಿ ಪುಸ್ತಕವಿಟ್ಟು ಓದುವುದನ್ನೇ ಅಭ್ಯಾಸ ಮಾಡಿಕೊಂಡಿದ್ದೆ. ಗಣಿತದಲ್ಲಿ ೩೫ ಮಾರ್ಕ್ಸ್ ಬಂದಿತ್ತು. ಒಂದು ಮಾರ್ಕ್ಸ್ ಕಮ್ಮಿಯಾದರೆ ನನ್ನ ಭವಿಷ್ಯವೇ ಬದಲಾಗುತ್ತಿತ್ತು. ಯಾರೋ ಪುಣ್ಯಾತ್ಮ ಪರೀಕ್ಷಕರು ೩೫ ಅಂಕವನ್ನು ಗಡಿಗೆ ತಂದು ಮುಟ್ಟಿಸಿರಬೇಕು. ಯಾಕೆಂದರೆ ಗಣಿತದಲ್ಲಿ ನಾನು ದಡ್ಡಿ. ಉಳಿದ ಪಾಠಗಳಲ್ಲಿ ೫೦ಕ್ಕಿಂತ ಮೇಲೆ ಇದ್ದರೂ ಗಣಿತದಲ್ಲಿ ಮಾತ್ರ ನಾನು ಲೆಕ್ಕಕ್ಕಿಲ್ಲ. ಅಂತೂ ಪಾಸಾದೆನಲ್ಲಾ ಅದೇ ದೊಡ್ಡ ಪವಾಡವೆಂದೇ ಅನಿಸಿತು. ಮುಂದೇನು? ನರ್ಸಿಂಗ್ ತರಬೇತಿಗೆ ಸೇರುವುದೆಂದು ನನ್ನ ಗೆಳತಿಯರಾದ ಐರಿನ್ ಮತ್ತು ಲೆತ್ತಿಷ್ಯಾ ನಿಶ್ಚಯಿಸಿದ್ದರು. ನಾನೂ ಅದನ್ನೇ ಆಶಿಸಿದ್ದೆ. ಯಾಕೆಂದರೆ ನರ್ಸಿಂಗ್ ತರಬೇತಿಗೆ ಸ್ಟೈಫಂಡ್ ಕೊಡುತ್ತಿದ್ದರಲ್ಲಾ. ಕಲಿಯುವಿಕೆಯ ಜೊತೆಗೆ ಹಣವೂ ಸಿಗುವುದು ನನ್ನಂತಹ ದುರ್ಬಲ ವರ್ಗದವರಿಗೆ ಅದೊಂದು ವರದಾನವೇ ಸರಿ. ನಾನೂ ಮನೆಯಲ್ಲಿ ಅಪ್ಪನೊಡನೆ ನರ್ಸಿಂಗ್ ಸೇರುವ ಆಸೆ ವ್ಯಕ್ತಪಡಿಸಿದೆ. ನನ್ನ ಗೆಳತಿಯರೆಲ್ಲಾ ಸೇರಿದ್ದಾರೆ. ಹಣ ಸಿಗುತ್ತದೆ ಎಂದೆಲ್ಲಾ ಅವರನ್ನು ಒಲಿಸಲು ಪ್ರಯತ್ನಿಸಿದೆ. ಉಹುಂ, ಅವರು ಒಪ್ಪಲೇ ಇಲ್ಲ. ಅವರು ಸಮ್ಮತಿಸದಿರಲು ಕಾರಣವೇನೆಂದು ಗೊತ್ತಾದದ್ದು ನಾನು ಟೀಚರ್ ಟ್ರೈನಿಂಗ್ಗೆ ಸೇರಿದ ಮೇಲೆ. ಅಪ್ಪನ ಗೆಳೆಯರೊಬ್ಬರು ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದವರು ಅಪ್ಪನನ್ನು ಕಾಣಲು ಬಂದಿದ್ದರಂತೆ. ಆಗ ಅಪ್ಪ ಅವರಲ್ಲಿ ಮಗಳ ಆಸೆಯ ಬಗ್ಗೆ ತಿಳಿಸಿದರಂತೆ. ಗೆಳೆಯ ಅಪ್ಪನಿಗೆ ಕೊಟ್ಟ ಸಲಹೆಯೇನು ಗೊತ್ತೇ? ``ನಿಮಗೆ ಒಬ್ಬಳೇ ಹೆಣ್ಣುಮಗಳಲ್ಲವೇ? ನರ್ಸಿಂಗ್ಗೆ ಕಳುಹಿಸಿದರೆ ಅವಳು ನಿಮ್ಮ ಕೈಗೆ ಸಿಗಲಿಕ್ಕಿಲ್ಲ. ಆದುದರಿಂದ ಟೀಚರ್ ಟ್ರೈನಿಂಗ್ಗೆ ಕಳಿಸಿ'' ಎಂದರಂತೆ. ಟೀಚರ್ ಟ್ರೈನಿಂಗ್ಗೆ ಕಳಿಸಿದರೆ ಮಗಳು ಕೈಗೆ ಸಿಗುತ್ತಾಳೆಂದು ಯಾವ ಧೈರ್ಯದಲ್ಲಿ ಹೇಳಿದರೋ? ನನಗೆ ಗೊತ್ತಿಲ್ಲ. ಅಮ್ಮನ ಪ್ರಭಾವ ಬಳಸಿ ನೋಡುವುದೂ ಸಾಧ್ಯವಿರಲಿಲ್ಲ. ಯಾಕೆಂದರೆ ಅಮ್ಮನ ಮಾತನ್ನು ಅಪ್ಪ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಮ್ಮನೇ ಸೋಲುತ್ತಿದ್ದರು ವಿನಃ ಅಪ್ಪ ಸೋತದ್ದನ್ನು ನಾನು ಕಂಡಿಲ್ಲ. ವರ್ಷಗಳ ಬಳಿಕ ನನ್ನನ್ನು ಯಾಕೆ ನರ್ಸಿಂಗ್ಗೆ ಕಳುಹಿಸಲು ಒಪ್ಪಲಿಲ್ಲವೆಂದು ಅಮ್ಮನಲ್ಲಿ ನಾನು ಕೇಳಿದಾಗ ``ಹಗಲು ರಾತ್ರಿ ಗಂಡು ಹೆಣ್ಣು ಒಟ್ಟಿಗಿದ್ದರೆ ಹೆಣ್ಣುಮಕ್ಕಳು ದಾರಿ ತಪ್ಪುವ ಅವಕಾಶಗಳು ಹೆಚ್ಚು. ಮಗ ದೊಡ್ಡವನಾಗುವವರೆಗೆ ನಮಗೆ ಅವಳೇ ಆಧಾರವಲ್ಲವೇ? ಟೀಚರಾದರೆ ಹಾಗಲ್ಲ'' ಎಂದು ಹೇಳಿದರಂತೆ. ಯಾವ ಕಾಲದ ಹೆಣ್ಣು ಹೆತ್ತವರೂ ಕೂಡ ವ್ಯಕ್ತಪಡಿಸುವ ಅಭಿಪ್ರಾಯವಿದು. ಅಪ್ಪ ದೈಹಿಕವಾಗಿ ಅಸ್ವಸ್ಥರಾಗಿ ದುರ್ಬಲಗೊಂಡಿರಬಹುದು. ಆದರೆ ಮಾನಸಿಕವಾಗಿ ಬಹಳ ದೃಢತೆಯುಳ್ಳವರು. ನನ್ನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಆದರೆ `ರಿಮೋಟು' ಮಾತ್ರ ಅವರ ಕೈಯಲ್ಲೇ ಇತ್ತು. ನರ್ಸಿಂಗ್ ಸೇರದ ನಿರಾಸೆಯಿಂದ ನಾನು ಮೇಲೆದ್ದು ನಿಂತದ್ದು ಹಿಂದಿ ಮಾಸ್ಟ್ರು ಹಿಂದಿ ಕಲಿಯಲು ನೀಡಿದ ಸಲಹೆಯಿಂದ.

ರಾಷ್ಟ್ರಭಾಷಾ ವಿಶಾರದ ಪರೀಕ್ಷೆಗೆ ತಯಾರಾಗಲು ಡೊಂಗರಕೇರಿಯ ಕೆನರಾ ಹೈಸ್ಕೂಲಲ್ಲಿ ಕ್ಲಾಸು ನಡೆಸುತ್ತಾರೆಂದು ನನ್ನ ಹಿಂದಿ ಮಾಸ್ಟ್ರು ಮಾಹಿತಿ ನೀಡಿದ್ದರಿಂದ ನಾನು ಹೋಗಿ ಸೇರಿಕೊಂಡೆ. ವಾರದಲ್ಲಿ ಎರಡು ದಿನ ಬುಧವಾರ, ಶುಕ್ರವಾರ ಕ್ಲಾಸಿತ್ತು. ಒಂದು ವಾರದ ಕ್ಲಾಸಿಗೆ ಹಾಜರಾಗಿದ್ದೆ. ನಂತರದ ವಾರದ ಬುಧವಾರ ನಾನು ಯಾವುದೋ ಕಾರಣಕ್ಕೆ ಕ್ಲಾಸಿಗೆ ಹೋಗಿರಲಿಲ್ಲ. ಶುಕ್ರವಾರ ಹೋದೆ. ಕ್ಲಾಸು ನಡೆಯುವ ಮಾಳಿಗೆ ಮೇಲಿನ ರೂಮಿನ ತರಗತಿಯಲ್ಲಿ ಹೋಗಿ ಕೂತೆ. ಯಾರೂ ಬರುವುದು ಕಾಣಲಿಲ್ಲ. ಕಳೆದ ವಾರದ ತರಗತಿಯಲ್ಲಿ - ಮಂದಿ ವಿದ್ಯಾರ್ಥಿಗಳಿದ್ದರು. ಯಾರೂ ಕಾಣುವುದಿಲ್ಲ ಯಾಕೆ ಎಂದು ತರಗತಿಯಿಂದ ಎದ್ದು ಹೊರಗೆ ವೆರಾಂಡಕ್ಕೆ ಬಂದೆ. ಕೆಳಗಿನ ಎಲ್ಲಾ ಕೋಣೆಗಳಿಗೂ ಬೀಗ ಹಾಕಲಾಗಿತ್ತು. ನಾನಿದ್ದ ಕೋಣೆಯಿಂದ ಹೊರಗೆ ಬಂದು ಕಟ್ಟಡದ ಮುಖ್ಯ ದ್ವಾರದ ಬಳಿಗೆ ಬಂದಾಗ ಬಾಗಿಲು ಹಾಕಲಾಗಿತ್ತು. ಕಟ್ಟಡದ ಹೊರಗೆ ಅಂಗಳದಲ್ಲಿ ವಾಚ್ಮೆನ್ ಆವರಣದ ಗೇಟಿನತ್ತ ಹೋಗುತ್ತಿದ್ದ. ಅವನು ಕಂಪೌಂಡಿನ ಗೇಟಿಗೆ ಬೀಗ ಹಾಕಿ ಹೊರಗೆ ಹೋಗುವ ತಯಾರಿಯಲ್ಲಿದ್ದ. ನಾನು ಆತಂಕದಿಂದ `ಸಾರ್' ಎಂದೂ ಕರೆದೆ. ಆತ ಅಶರೀರವಾಣಿ ಕೇಳಿದಂತೆ ಬೆಚ್ಚಿಬಿದ್ದ. ಅವನು ಹಿಂತಿರುಗಿ ನೋಡಿದಾಗ ನಾನು ಕಟ್ಟಡದ ಮಹಾದ್ವಾರದ ಮೆಟ್ಟಲುಗಳನ್ನು ಇಳಿದು ಬೀಗ ಹಾಕಿದ ಕಟ್ಟಡದ ಕಬ್ಬಿಣದ ಗೇಟಿನತ್ತ ಬರುತ್ತಿದ್ದೆ. ನನ್ನನ್ನು ಕಂಡವನೇ `ಓಲು ಸೈತ್ ಪೋದಿತ್ತ?' (ಎಲ್ಲಿ ಸತ್ತು ಹೋಗಿದ್ದಿ) ಎಂದು ಹೆಚ್ಚು ಕಡಿಮೆ ಕಿರುಚಿದ ಸ್ವರದಲ್ಲೇ ಬೊಬ್ಬೆ ಹಾಕಿದ. ಓಡಿ ಬಂದವನೇ ಗೇಟಿನ ಬೀಗ ತೆಗೆದ. ಇನ್ನೇನು ಅವನು ಹೊಡೆಯಲು ಕೈಯೆತ್ತುವುದೊಂದು ಬಾಕಿ. ಪರಿಸ್ಥಿತಿಯ ಅರಿವಾಗಿ ನನ್ನ ದುಃಖದ ಕಟ್ಟೆ ಒಡೆಯಿತು. ``ನೀನ್ಯಾಕೆ ಬಂದೆ? ನಿನಗೆ ಕ್ಲಾಸು ಇಲ್ಲಾಂತ ಗೊತ್ತಿಲ್ಲವೇ?'' ಈಗ ನಾನು ನೋಡದೆ ಇರುತ್ತಿದ್ದರೆ ಇಡೀ ರಾತ್ರಿ ಇಲ್ಲಿ ಏನು ಮಾಡುತ್ತಿದ್ದೆ?'' ಮಾತು ಕೇಳಿ ನನಗೆ ಕಣ್ಣುಕತ್ತಲೆ ಬಂದಂತಾಯಿತು. ನನಗೆ ಗೊತ್ತಿದ್ದ ದೇವರ ಹೆಸರುಗಳನ್ನೆಲ್ಲಾ ಸ್ಮರಿಸಿ ಕೃತಜ್ಞತೆ ಸಲ್ಲಿಸಿದೆ. ``ನಡಿ ಹೋಗು, ನಿನ್ನ ಮನೆ ಎಲ್ಲಿ? ನೀನು ನನ್ನ ಕಣ್ಣಿಗೆ ಬೀಳದೆ ನಾನು ಗೇಟಿಗೆ ಬೀಗ ಹಾಕಿ ಹೋಗುತ್ತಿದ್ದರೆ ನಾಳೆ ನನ್ನ ಅನ್ನಕ್ಕೂ ಸಂಚಕಾರ ಬರುತ್ತಿತ್ತು ಗೊತ್ತಾ? ನಿನ್ನನ್ನು ಶಾಲೆಯೊಳಗೆ ಬೀಗ ಹಾಕಿ ಹೋಗಿದ್ದೇನೆಂದು ನನ್ನ ಮೇಲೆ ಆರೋಪ ಹೊರಿಸಿ ನನ್ನನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದರು ಗೊತ್ತಾ'' ಎಂದೆಲ್ಲಾ ಬಡಬಡಿಸಿದ. ಕ್ಷಣದಲ್ಲಿ ಅವನೇ ದೇವರಾಗಿ ಕಂಡ. ಅಂತೂ ನನ್ನನ್ನು ಕಂಪೌಂಡಿನ ಹೊರಗೆ ಕಳಿಸಿ ಗೇಟಿಗೆ ಬೀಗ ಹಾಕಿ ಅವನು ಸೈಕಲ್ ಹತ್ತಿ ಅವನ ಮನೆಗೆ ಹೋದ. ನನ್ನ ಮಾನಸಿಕ ವಿಪ್ಲವದ ಕತೆಯೇ ಬೇರೆ. ಹೇಗೆ ಬಸ್ಸು ನಿಲ್ದಾಣಕ್ಕೆ ತಲುಪಿದೆನೋ ಬಸ್ಸು ಹತ್ತಿ ಮನೆಗೆ ಹೇಗೆ ಬಂದೆನೋ ಗೊತ್ತಿಲ್ಲ. ಒಂದು ವೇಳೆ ವಾಚ್ಮೆನ್ ನನ್ನನ್ನು ಕಾಣದಿರುತ್ತಿದ್ದರೆ ಮರುದಿನ ಬೆಳಿಗ್ಗೆ ಶಾಲೆಯ ಬಾಗಿಲು ತೆರೆಯುವವರೆಗೂ ನಾನು ಅಲ್ಲೇ ಬಿದ್ದಿರಬೇಕಿತ್ತು. ಕ್ಲಾಸಿಗೆ ಹೋದ ಹುಡುಗಿ ಮನೆಗೆ ಬರಲಿಲ್ಲ ಎಂದಾದರೆ ಅಪ್ಪ ಅಮ್ಮನಿಗಾಗುವ ದುಃಖವನ್ನು ಶಮನ ಮಾಡುವವರಾರು? ಒಂದು ವೇಳೆ ಬೇಕರಿ ನಾರಾಯಣ್ಣನ ಸಹಾಯ ಪಡೆದು ಅಪ್ಪ ಹುಡುಕಿಸುತ್ತಿದ್ದರೋ ಏನೋ? ಆದರೆ ಊರಲ್ಲಿ ನೆರೆಕರೆಯಲ್ಲಿ ಜನರು ಘಟನೆಯ ಬಗ್ಗೆ ಏನೆಲ್ಲಾ ಕತೆ ಕಟ್ಟಿಯಾರು? ಶಾಲೆಗೆಂದು ಹೋದವಳು ಮನೆಗೇ ಬರಲಿಲ್ಲವಂತೆ. ರಾತ್ರಿ ಎಲ್ಲೋ ಇದ್ದಳಂತೆ ಮುಂತಾದ ಮಾತುಗಳು ರೆಕ್ಕೆಪುಕ್ಕ ಸೇರಿ ಗಾಳಿಯಲ್ಲಿ ಹಾರಾಡಬಹುದೆಂಬ ಭಯದಿಂದಲೇ ನಾನು ತತ್ತರಿಸಿದೆ. ಹಿಂದಿ ಕಲಿಯುವುದೂ ಬೇಡ, ಪರೀಕ್ಷೆಯೂ ಬೇಡವೆಂದು ನಿರ್ಧಾರಕ್ಕೆ ಬಂದಿದ್ದೆ.

ಪುಸ್ತಕಗಳನ್ನೇನೋ ತೆಗೆದುಕೊಂಡಾಗಿತ್ತು. ನಾನೇ ಮನೆಯಲ್ಲಿ ಓದಿಕೊಳ್ಳುವುದು, ಕಷ್ಟವಾದರೆ ಹಿಂದಿ ಮಾಸ್ಟ್ರಲ್ಲಿ ಪಾಠ ಹೇಳಿಸಿಕೊಳ್ಳುವುದೆಂದು  ನಿರ್ಧರಿಸಿದ್ದೆ. ಇವತ್ತಿಗೂ ಅಂದಿನ ಘಟನೆಯ ಕ್ಷಣವನ್ನು ನೆನೆಸಿಕೊಂಡರೆ ಅದೊಂದು ಪವಾಡವೆಂದೇ ಭಾಸವಾಗುತ್ತದೆ.

೧೯೬೧ರಲ್ಲಿ ನಾನು ಟೀಚರ್ ಟ್ರೈನಿಂಗ್ಗೆ ಬಲ್ಮಠದ ಸರಕಾರೀ ಶಾಲೆಗೆ ಸೇರಿದೆ. ಸರಕಾರ ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ಸ್ಥಾಪನೆ ಮಾಡಿದ ಕಾಲವದು. ಶಿಕ್ಷಕಿಯರ ಆವಶ್ಯಕತೆ ಹೆಚ್ಚಿತು. ಹಾಗಾಗಿ ಶಿಕ್ಷಕ ತರಬೇತಿಯನ್ನು ಒಂದು ವರ್ಷಕ್ಕೆ ಇಳಿಸಿತು. ಹಿಂದೆ ಎರಡು ವರ್ಷದ ತರಬೇತಿ ಪಡೆದು ಶಿಕ್ಷಕರಾದವರಿಗೆಲ್ಲಾ ಒಂದು ವರ್ಷದ ತರಬೇತಿ ತರಬೇತಿಯೇ ಅಲ್ಲ ಎಂಬ ಭಾವದಿಂದ ಮಾತಾಡಿಕೊಳ್ಳುತ್ತಿದ್ದರು. ಯಾರೂ ಏನೇ ಹೇಳಲಿ ನಾನು ತರಬೇತಿ ಶಾಲೆಗೆ ಸೇರಿದೆ. ನಮ್ಮ ಬ್ಯಾಚಲ್ಲಿ ಸುಮಾರು ೩೫ ಮಂದಿ ಇದ್ದರು. ಒಂದು ವರ್ಷದ ಶಿಕ್ಷಕ ತರಬೇತಿಯು ನನಗೆ ಕಲಿಕೆಯ ಒತ್ತಡ, ಕೆಲಸದ ಒತ್ತಡ ಮತ್ತು ಆರ್ಥಿಕ ಒತ್ತಡಗಳಿಂದ ನನ್ನನ್ನು ಹೈರಾಣಾಗಿಸಿಬಿಟ್ಟಿತ್ತು. ಓದುವುದು ಕಷ್ಟದ ವಿಷಯವಲ್ಲ. ಪಾಠಗಳಿಗೆ ಉಪಕರಣಗಳನ್ನು ತಯಾರು ಮಾಡುವುದಕ್ಕೆ ಬಹಳಷ್ಟು ಸಮಯ ವಿನಿಯೋಗಿಸಬೇಕಾಯಿತು. ಚಿತ್ರಕಲೆಯಲ್ಲಿ ನನಗೆ ಅಭಿರುಚಿ ಇದ್ದುದರಿಂದ ಅದು ನನಗೆ ಸುಲಭವಾಯಿತು. ಅಭಿರುಚಿಯು ಬೇರೆಯವರು ನನ್ನಿಂದ ಬಹಳಷ್ಟು ಚಾರ್ಟ್ಗಳನ್ನು ಮಾಡಿಸುವಷ್ಟು ಕೆಲಸ ಕೊಟ್ಟಿತು. ಪ್ರಶಂಸೆಗೆ ಹಿಗ್ಗದವರಾರು? ಅದು ಸ್ವಾರ್ಥ ಸಾಧನೆಯ ಪ್ರಶಂಸೆ ಎಂದು ತಡವಾಗಿ ತಿಳಿದ ಮೇಲೆ ಬಿಟ್ಟಿ ಕೆಲಸಗಳಿಂದ ತಪ್ಪಿಸಿಕೊಳ್ಳಲು ನಾನು ನಾನಾ ರೀತಿಯ ಸುಳ್ಳುಗಳನ್ನು ಹೇಳಬೇಕಾಯಿತು. ಹೇಗಪ್ಪಾ ಒಂದು ವರ್ಷದ ತರಬೇತಿ ಮುಗಿಸುವುದು ಎಂದು ಆತಂಕಪಡುತ್ತಿದ್ದಂತೆಯೇ ವರ್ಷ ಕಳೆದೇ ಬಿಟ್ಟಿತು. ಇನ್ನು ಮುಂದಿನದು ಕೆಲಸದ ಬೇಟೆ. ನನ್ನ ಹಿಂದಿ ಪರೀಕ್ಷೆ ವಿಶಾರದ ಹಂತಕ್ಕೆ ಬಂದು ನಿಂತಿದ್ದವು. ಈಗ ಶಿಕ್ಷಕ ತರಬೇತಿ ಮುಗಿದ ಕೂಡಲೇ ಪ್ರವೀಣ ಪರೀಕ್ಷೆಯ ತಯಾರಿಗೆ ಸಿದ್ಧಳಾದೆ.

೧೯೬೩ನೇ ಇಸವಿಯ ಮಾರ್ಚ್ ತಿಂಗಳಲ್ಲಿ ಮುನ್ಸಿಪಲ್ ಶಾಲೆಗಳಲ್ಲಿ ಹಿಂದಿ ಟೀಚರುಗಳನ್ನು ಕಡ್ಡಾಯ ನೇಮಕಗೊಳಿಸಬೇಕೆಂಬ ಕೇಂದ್ರ ಸರಕಾರದ ಆದೇಶಕ್ಕನುಸಾರವಾಗಿ ಮಂಗಳೂರಿನ ಮುನ್ಸಿಪಲ್ ಶಾಲೆಗಳಲ್ಲಿ ನೇಮಕಾತಿಯನ್ನು ಮಾಡಿದರು. ಕೌನ್ಸಿಲರ್ ಆಗಿದ್ದ ಉಮಾನಾಥ ಸುವರ್ಣರು ಸೂಚನೆ ಕೊಟ್ಟಿದ್ದರು. ನಗರಸಭೆಯ ಆಗಿನ ಚೇರ್ಮ್ಯಾನ್ ಆಗಿದ್ದ ಸೋಮಶೇಖರ ರಾವ್ ಅವರ ಆಪ್ತಮಿತ್ರರಾದ ನಿವೃತ್ತ ಜಡ್ಜ್ ಕೊರಗಪ್ಪನವರ ಬಳಿಗೂ ನಾನು ನೇಮಕಾತಿಯ ಬಗ್ಗೆ ವಿನಂತಿ ಮಾಡಿಕೊಂಡಿದ್ದೆ. ಕಾಲದಲ್ಲೇ ಇನ್ಪ್ಲೂಯೆನ್ಸ್ನಿಂದ ಕೆಲಸ ಗಿಟ್ಟಿಸಿಕೊಂಡವಳು ನಾನು. ಅವರ ಪ್ರಭಾವವಿಲ್ಲದಿರುತ್ತಿದ್ದರೆ ನನಗೆ ಕೆಲಸ ಸಿಗುತ್ತಿದ್ದುದು ಸಂಶಯವೇ. ಯಾಕೆಂದರೆ ಅಷ್ಟು ಮಂದಿ ಉದ್ಯೋಗಾಕಾಂಕ್ಷಿಗಳು ಇದ್ದರು. ಅಂತೂ ಕೆಲಸವೇನೋ ಸಿಕ್ಕಿತು. ಬಹುಕಾಲದ ಕನಸು ಕೈಗೂಡಿತು. ಮಾರ್ಚ್ ೨೩ಕ್ಕೆ ಅಪಾಯಿಂಟ್ಮೆಂಟ್ ಆರ್ಡರ್ ಹಿಡಿದುಕೊಂಡು ಕಾಪಿಕಾಡು ಶಾಲೆಗೆ ನಾನು ಕಾಲಿಟ್ಟಾಗ ನನ್ನನ್ನು ಕಂಡ ಹೆಡ್ಮಾಸ್ಟರು ಶಿವರಾಯರು ನಿರುತ್ಸಾಹದಿಂದಲೇ ಸ್ವಾಗತಿಸಿದರು. ಆಗ ಎಂಟನೆಯ ತರಗತಿಯ ಪರೀಕ್ಷೆ ನಡೆಯುತ್ತಿತ್ತು. ಆದುದರಿಂದ ನನಗೆ ಬಾಲವಾಡಿಯ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ಕೆಲಸವನ್ನು ಒಪ್ಪಿಸಿದರು. ವಾರ್ಷಿಕ ರಜೆಗೆ ಎರಡು ವಾರಗಳೇ ಬಾಕಿ ಇದ್ದುದರಿಂದ ಮುಂದಿನ ಶಾಲಾ ವರ್ಷದಲ್ಲಿ ಅಂದರೆ ಜೂನ್ ತಿಂಗಳಲ್ಲಿ ನನಗೆ ತರಗತಿಗಳ ಪಾಠಗಳನ್ನು ಹಂಚಿಕೊಡಲಾಗುವುದೆಂದು ಗಿರಿಜ ಟೀಚರು ತಿಳಿಸಿದರು. ``ನೀವು ಸಣ್ಣ ಹುಡುಗಿಯ ಹಾಗೆ ಕಾಣುತ್ತೀರಿ. ಜಡೆಯನ್ನು ಸೂಡಿ ಹಾಕಿಕೊಂಡು ಅಂದರೆ ಹೆರಳು ಮೇಲೆ ಕಟ್ಟಿ ಬನ್ನಿ'' ಎಂಬ ಸಲಹೆಯನ್ನೂ ಅವರು ನೀಡಿದರು. ಅವರ ಮಾತಿಗೆ ಒಪ್ಪಿ ಹೆರಳು ಕಟ್ಟಿಕೊಂಡು ಹೋದಾಗ ನನ್ನ ವ್ಯಕ್ತಿತ್ವಕ್ಕೆ ಗೌರವ ಹೆಚ್ಚಾಯಿತೋ ಇಲ್ಲವೋ ಗೊತ್ತಿಲ್ಲ. ಶಿಕ್ಷಕಿಯ ಗೌರವವನ್ನು ಹೆಚ್ಚಿಸಿಕೊಳ್ಳಬೇಕಾದರೆ ಇನ್ನಷ್ಟು ಜಾಣ್ಮೆ, ಪ್ರತಿಭೆಗಳನ್ನು ನಾವು ಮೈಗೂಡಿಸಿಕೊಂಡಿರಬೇಕು ಎಂಬುದು ನನಗೆ ಖಾತ್ರಿಯಾಯಿತು.


ನನ್ನ ಕುಟುಂಬದ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೆ ಉದ್ಯೋಗ ನೆರವಾಯಿತಲ್ಲಾ ಎಂದು ಮನಸ್ಸು ನಿರಾಳವಾಯಿತು. ನರ್ಸ್ ಆಗಬೇಕೆಂಬ ಹಂಬಲವುಳ್ಳವಳು ನಾನು ಟೀಚರಾದೆ. ಟೀಚರಾದ ಮೇಲೆ ವೃತ್ತಿಯನ್ನು ಪ್ರೀತಿಸತೊಡಗಿದೆ. ನನಗಿಂತಲೂ ಹೆಚ್ಚು ನೆಮ್ಮದಿಯ ನಿಟ್ಟುಸಿರು ಬಿಟ್ಟವರು ನನ್ನಪ್ಪ. ಒಡಕು ದೋಣಿಯಲ್ಲಿ ಕುಳಿತು ಬದುಕಿನ ಪಯಣ ಮಾಡಲು ಹೊರಟ ನನ್ನಪ್ಪನಿಗೆ ಭವಸಾಗರವನ್ನು ದಾಟಿದ ತೃಪ್ತಿಯಿಂದಾಗಿ ಏನೋ ಸಾಧನೆ ಮಾಡಿ ಗೆದ್ದಂತಹ ಪ್ರಸನ್ನತೆಯಿಂದ ಮುಖ ಅರಳಿತು. ಜೀವನ ನನ್ನದೇ ಆದರೂ ಅದರ ಗತಿಯನ್ನು ನಿರ್ದೇಶಿಸುವವರು ನನ್ನ ಅಪ್ಪನೇ ಅಲ್ಲವೇ? ಸಮಾಜದಲ್ಲಿ ಸೆಗಣಿಯ ಹುಳುಗಳಂತೆ ಬದುಕುತ್ತಿದ್ದ ನಮಗೆ ಸಣ್ಣ ಮಟ್ಟಿನ ಗುರುತಿಸುವಿಕೆಯು ನನ್ನ ಉದ್ಯೋಗದಿಂದ ಲಭಿಸಿದ್ದಂತೂ ಸತ್ಯ. ದೇವಕಿಯ ಮಗಳಿಗೆ ಸರಕಾರಿ ಕೆಲಸ ಸಿಕ್ಕಿತಂತೆ ಎಂದು ಅಮ್ಮನ ಕುಟುಂಬದಲ್ಲೂ ಕೊಗ್ಗಣ್ಣನ ಮಗಳು ಟೀಚರಾದಳಂತೆ ಎಂದು ಅಪ್ಪನ ಕುಟುಂಬದಲ್ಲೂ ಒಂದು ಸಣ್ಣ ಕಂಪನವುಂಟಾಯಿತು. ಎಷ್ಟೋ ಬಂಧುಗಳಿಗೆ ನಾವು ಬದುಕಿದ್ದೇವೆಂದೇ ಗೊತ್ತಿರಲಿಲ್ಲ. ಶಿಕ್ಷಣ ಮತ್ತು ಉದ್ಯೋಗಗಳು ಮನುಷ್ಯನ ಚರಿತ್ರೆಯನ್ನೇ ಬದಲಾಯಿಸಿದ ಪ್ರಕ್ರಿಯೆಯನ್ನು ಜಗತ್ತು ಕಂಡಿದೆ. ಹಾಗೆಯೇ ಸಮಾಜ ನಮ್ಮನ್ನು ಕಾಣುವ ದೃಷ್ಟಿ ತುಸು ಬದಲಾಯಿತು. ಎಲ್ಲಾದರೂ ಕಂಡರೆ ಪರಿಚಯವೇ ಇಲ್ಲದವರಂತೆ ಮಾಡುತ್ತಿದ್ದವರು ಒಮ್ಮೆ ಇಣುಕಿ ನೋಡಿ `ಏನು, ಹೇಗಿದ್ದೀರಿ?' ಎಂದು ಕೇಳುವಷ್ಟು ಪ್ರಗತಿ ಹೊಂದಿತು.


(ಮುಂದುವರಿಯಲಿದೆ)

3 comments:

 1. ಶಾಲೆಯ ಮುಚ್ಚಿದ ಬಾಗಿಲೊಳಗೆ ಬಂಧಿಯಾಗಲಿದ್ದ ಹುಡುಗಿಯ ಪಾಡು ಕಣ್ಣಿಗೆ ಕಟ್ಟಿದಂತಾಯ್ತು. ಜೊತೆಗೆ ತೀವ್ರ ಅಸ್ತಮಾ ರೋಗಿಯಾದ ತಂದೆಯ ಶುಶ್ರೂಷೆಯ ಪರಿಯು. ಸಹ. ದಾದಿಯಾಗಿದ್ದರೆ ಶುಶ್ರೂಷಾ ಲೋಕಕ್ಕೆ ಉತ್ತಮ ಕೊದುಗೆಯಾಗುತ್ತಿತ್ತೇನೋ ನಿಜ; ಆದರೆ ಶಿಕ್ಷಕಿಯಾಗಿ ಸಾಹಿತ್ಯ ಲೋಕಕ್ಕೆ ಲಾಭವೇ ಆಯ್ತೆನ್ನ ಬೇಕು. ಅಧ್ಯಾಪಕಿಯ ಅಧ್ವಾನಗಳ ಸವಿಯನ್ನುಂದಿದ್ದೇನೆ., ಅವರದೇ ಲೇಖನಿಯಲ್ಲಿ.

  ReplyDelete
 2. ಎಪ್ಪತ್ತನೆಯ ದಶಕದತ್ತ ಒಂದು ನೋಟ ಬೀರಿದಂತಾಯಿತು. ಸಲೀಸಾಗಿ ಓದಿಸಿಕೊಂಡು ಹೋಗುತ್ತಿದೆ.

  ReplyDelete
 3. ಬಿಕರ್ನಕಟ್ಟೆವಾಸಿಗಳ ಜ್ವರವನ್ನು ಓಡಿಸುವ ಶಕ್ತಿ ಡಾ. ಸುವರ್ಣರ ಕೆಂಪು ನೀರು ಮದ್ದಿಗೆ ಇತ್ತು. ಆದರೆ ನನಗೆ ಮಾತ್ರ ಆ ನೀರು ಮದ್ದು ಮತ್ತು ಬಿಳಿ ಹುಡಿಯನ್ನು ನೆನಸಿಕೊಂಡರೆ ಈಗಲೂ ಚಳಿ ಚಳಿಯೆನಿಸುತ್ತದೆ. ನಾನು ಕಾಲೇಜು ಮುಗಿಯುವ ವರೆಗೆ ದಿನೇಶ್ ನೆಟ್ಟಾರ್ ಅವರು ಬಳಸುತ್ತಿದ್ದ ಆಕ್ಸ್ಫ಼ರ್ಡ್ ಡಿಕ್ಷನರಿಯನ್ನೇ ಬಳಸಿದರೂ ಇನ್ನೂ ಇಂಗ್ಲಿಷ್ನಲ್ಲಿ ಹಿಂದೆ ಯಾಕೋ ಗೊತ್ತಿಲ್ಲ. ದಿನೇಶ್ ನೆಟ್ಟಾರ್ ಅವರೇ ನಾನು ಕರ್ಕೇರರ ಮಗಳು. . ನಿಮಗೆ ನನ್ನ ಪರಿಚರಯವಿರಲಿಕ್ಕಿಲ್ಲ. ಆದರೆ ಆ ಡಿಕ್ಷನರಿ ನಿಮ್ಮ ತಂದೆಯವರ ಮೂಲಕ ನನಗೆ ಸಿಕ್ಕಿತ್ತು.


  ಬಿಕರ್ನಕಟ್ಟೆವಾಸಿಗಳ ಜ್ವರವನ್ನು ಓಡಿಸುವ ಶಕ್ತಿ ಡಾ. ಸುವರ್ಣರ ಕೆಂಪು ನೀರು ಮದ್ದಿಗೆ ಇತ್ತು. ಆದರೆ ನನಗೆ ಮಾತ್ರ ಆ ನೀರು ಮದ್ದು ಮತ್ತು ಬಿಳಿ ಹುಡಿಯನ್ನು ನೆನಸಿಕೊಂಡರೆ ಈಗಲೂ ಚಳಿ ಚಳಿಯೆನಿಸುತ್ತದೆ. ನಾನು ಕಾಲೇಜು ಮುಗಿಯುವ ವರೆಗೆ ದಿನೇಶ್ ನೆಟ್ಟಾರ್ ಅವರು ಬಳಸುತ್ತಿದ್ದ ಆಕ್ಸ್ಫ಼ರ್ಡ್ ಡಿಕ್ಷನರಿಯನ್ನೇ ಬಳಸಿದರೂ ಇನ್ನೂ ಇಂಗ್ಲಿಷ್ನಲ್ಲಿ ಹಿಂದೆ ಯಾಕೋ ಗೊತ್ತಿಲ್ಲ. ದಿನೇಶ್ ನೆಟ್ಟಾರ್ ಅವರೇ ನಾನು ಕರ್ಕೇರರ ಮಗಳು. . ನಿಮಗೆ ನನ್ನ ಪರಿಚರಯವಿರಲಿಕ್ಕಿಲ್ಲ. ಆದರೆ ಆ ಡಿಕ್ಷನರಿ ನಿಮ್ಮ ತಂದೆಯವರ ಮೂಲಕ ನನಗೆ ಸಿಕ್ಕಿತ್ತು.

  ReplyDelete