22 January 2016

ಚಾರಣಿಗರ ಡಾರ್ಲಿಂಗ್ – ಡಾರ್ಜಿಲಿಂಗ್

ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ
ಜಂಟಿ ಕಥನದಲ್ಲಿ ಡಾರ್ಜಿಲಿಂಗ್ ಭಾಗ ಮೂರು

ಅಶೋಕವರ್ಧನ:

ನನ್ನ ಮೊದಲ ಎರಡೂ ಡಾರ್ಜಿಲಿಂಗ್ ಭೇಟಿಗಳು, ಒಂದು ಲೆಕ್ಕದಲ್ಲಿ ಸೋಲಿನ ಕತೆಗಳೇ ಆದದ್ದು ಕೇಳಿದ್ದೀರಿ. ಮೊದಲನೆಯದು ಅವಸರದ ಫಲವಾದರೆ, ಎರಡನೆಯದ್ದು ವಾಸ್ತವ ಮರೆತ ಬಹುನಿರೀಕ್ಷೆಯ ದೋಷ. ಆದರೆ ಗೆಳೆಯ ಗಿರೀಶ್ ಪಾಲಡ್ಕರಿಗೆ ಹಾಗಾಗಲಿಲ್ಲ. ಅದಕ್ಕೆ ನನ್ನದೇನು ವಗ್ಗರಣೆ, ಗಿರೀಶ್ ಮಾತುಗಳಲ್ಲೇ ಓದಿ ಅಥವಾ ಕೇಳಿ.

ಗಿರೀಶ್ ಪಾಲಡ್ಕ:

೨೦೧೦ ರಲ್ಲಿ ಡಾರ್ಜಿಲಿಂಗ್ಗೆ ಪೂರ್ವ ನಿಯೋಜಿತವಲ್ಲದ ಅನಿರೀಕ್ಷಿತ ಭೇಟಿಯ ಬಗ್ಗೆ ಹಿಂದೆ ಬರೆದಿದ್ದೆ. ಅದು  ಓರ್ವ ಸಾಮಾನ್ಯ ಪ್ರವಾಸಿಗನ ಅನುಭವಗಳಷ್ಟೆ. ಭಿನ್ನ ಸಂಸ್ಕೃತಿ, ಭಿನ್ನ ಪ್ರಕೃತಿಯ ಪ್ರದೇಶಗಳಲ್ಲಿ ಸಂಚಾರ ಮಾಡುವಾಗಿನ ಅನುಭವಗಳೂ ಭಿನ್ನವಾಗಿರುತ್ತವೆ ಮಾತ್ರವಲ್ಲ ವಿಶಿಷ್ಟವೂ ಅಗಿರಬಹುದು. ನಾನು ಕೆಲಸ ಮಾಡುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕ್ರೀಡಾ ನಿಯಂತ್ರಣ ಮಂಡಳಿಯು ತನ್ನ ನೌಕರರಿಗಾಗಿ ಪ್ರತಿವರ್ಷ ಕ್ಷೇತ್ರ ಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಚಾರಣವನ್ನು ಆಯೋಜಿಸುತ್ತದೆ. ಬಯಸುವ ಎಲ್ಲರಿಗೂ ಭಾಗವಹಿಸಲು ಅವಕಾಶ ಸಿಗುವುದಿಲ್ಲ. ಕೆಲವೊಮ್ಮೆ ಅದೃಷ್ಟವೂ ಬೇಕಾಗಬಹುದು. ೨೦೧೪ ರಲ್ಲಿ ಆಯೋಜಿತವಾದ ಡಾರ್ಜಿಲಿಂಗ್ ಚಾರಣಕ್ಕೆ ಅರ್ಜಿ ಸಲ್ಲಿಸಿದ್ದ ನನಗೆ ಅದೇ ರೀತಿಯಲ್ಲಿ ಅವಕಾಶ ಲಭ್ಯವಾಯಿತು. ಜಲಪಾಯಿಗುರಿಯ ಸಿಂಡ್ರೆಲ್ಲಾ ಹೋಟೇಲಿಗೆ ಬಂದು ವರದಿಮಾಡಬೇಕೆನ್ನುವ ಆದೇಶದೊಂದಿಗೆ ಹಲವಾರು ಅಡಕಗಳು. ಸೂಚನೆ, ನಿರ್ದೇಶನಗಳು, ಆವಶ್ಯಕ ಚಾರಣ ಸಾಮಗ್ರಿಗಳ ಪಟ್ಟಿ, ವೈದ್ಯಕೀಯ ಪ್ರಮಾಣಪತ್ರದ ಮಾದರಿ, ಧೃಡೀಕರಣ ಪತ್ರ ಇತ್ಯಾದಿ  ಚಾರಣಾರ್ಥಿಯಾಗಿ ಸಿಂಡ್ರೆಲ್ಲಾ ಹೋಟೇಲಿಗೆ ತಲುಪಿಯೂ ಆಯಿತು. ಇದ್ದ ಒಂದು ದಿನದಲ್ಲಿ ಅಲ್ಲಿಯೇ ಸುತ್ತಾಡಿ ಪಟ್ಟಿಯಲ್ಲಿದ್ದ ಕೆಲ ವಸ್ತುಗಳನ್ನು (ಕೊಡೆ ಇತ್ಯಾದಿ) ಅಲ್ಲಿಯೇ ಖರೀದಿ ಮಾಡಿದೆವು.


ಮರುದಿನ ಮುಂಜಾನೆ ಬಂದ ಮಿನಿ ಬಸ್ಸು ನಮ್ಮನ್ನು ಕರೆದೊಯ್ದದ್ದು ಸೀದಾ ಡಾರ್ಜಿಲಿಂಗ್ ಪದ್ಮಜಾ ನಾಯ್ಡು ಪ್ರಾಣಿ ಸಂಗ್ರಹಾಲಯಕ್ಕೆ. ಮೃಗಗಳನ್ನು ನೋಡಿ ಆನಂದಿಸಲೆಂದಲ್ಲ. ಚಾರಣದ ಜವಾಬ್ದಾರಿ ಹೊತ್ತ   ಹಿಮಾಲಯನ್ ಪರ್ವತಾರೋಹಣ ಸಂಸ್ಥೆ (ಹಿಮಾಲಯನ್ ಮೌಂಟೆನೀಯರಿಂಗ್ ಇನ್ಸಿಟಿಟ್ಯೂಟ್ - ಹೆಚ್ಚೆಮ್ಮೈ) ಇರುವುದು ಪ್ರಾಣಿಶಾಸ್ತ್ರೀಯ ಉದ್ಯಾನದೊಳಗಡೆ. ಮಿನಿ ಬಸ್ಸಿಗೂ ಅವಕಾಶ ನೀಡದಷ್ಟು ಕಡಿದಾದ ತಿರುವು ಇರುವ ಕಾರಣ ಬಸ್ಸನ್ನು ಅಲ್ಲಿಯೇ ಕೆಳಗಡೆ ನಿಲ್ಲಿಸಿದ್ದರು.  ನಮ್ಮ ಪೂರ್ಣ ಲಗೇಜುಗಳೊಂದಿಗೆ ನಾವು ಮೇಲೇರಬೇಕಾಯಿತು. ಚಾರಣಕ್ಕೆಪೂರ್ವಾಭ್ಯಾಸ!

೩೫ ಜನರಿದ್ದ ನಮ್ಮ ತಂಡದ ಚಾರಣವು ಒಂದು ವ್ಯವಸ್ಥಿತ ಕಾರ್ಯವಾದ ಕಾರಣ ಎಲ್ಲವನ್ನೂ ಕ್ರಮಬದ್ಧವಾಗಿ ಮಾಡ ಬೇಕಾಗಿತ್ತು. ವಿಪರೀತ ಕಟ್ಟುನಿಟ್ಟಿಲ್ಲದಿದ್ದರೂ ಸ್ವೇಚ್ಛಾಚಾರಕ್ಕಂತೂ ಅವಕಾಶವಿರಲಿಲ್ಲ. ಮದ್ಯಪ್ರಿಯರು ತಮ್ಮ ಬಾಟಲುಗಳನ್ನು ಇಲ್ಲೇ ಬಿಟ್ಟು ಹೋಗಬೇಕೆಂದು ಆಜ್ಞೆ ಪ್ರಾರಂಭದಲ್ಲಿಯೇ ಬಂತು. ಅರ್ಥಾತ್ ಚಾರಣ ಮಧ್ಯದಲ್ಲೆಲ್ಲೂ ಮದ್ಯ ಸೇವನೆಗೆ ಅವಕಾಶವಿಲ್ಲ. ಚಾರಣವೆನ್ನುವುದು ವನಮಧ್ಯ ಮದ್ಯಾಹಾರಿಗಳಾಗಿ ಜೋಲಾಡುತ್ತಾ "ಜಾಲಿ" ಮಾಡಲಿಕ್ಕಿರುವ ಅವಕಾಶವೆಂದುಕೊಂಡ ಬಹುತೇಕರಿಗೆ ಕೊಂಚ ನಿರಾಶೆಯಾಯಿತು. ಆದರೂ ಗುಟ್ಟಾಗಿ ಸುಧಾರಿಸಿದವರ ಸಂಖ್ಯೆಯೇನೂ ಕಮ್ಮಿಯಿರಲಿಲ್ಲ!

ಸಾಯಂಕಾಲ ಹೆಚ್ಚೆಮ್ಮೈನ ಮಾರ್ಗದರ್ಶಕ  ಸಮೂಹದವರು ಸಮಗ್ರ ಚಾರಣದಲ್ಲಿ ಪಾಲಿಸಬೇಕಾದ ನೀತಿ ನಿಯಮಗಳ ಬಗ್ಗೆ ಸಂಕ್ಷಿಪ್ತ ವಿವರಣೆಯಿತ್ತರು. ಎಲ್ಲರಿಗೂ ಬೆನ್ನಚೀಲಗಳು, ಮಲಗು ಚೀಲ (Sleeping Bag), ಆಹಾರ ತಟ್ಟೆ, ಮಳೆವಸ್ತ್ರ (ಚಳಿಗೂ ಹೊಂದುವತಹದ್ದು) ಹಾಗೂ ಮಡಚಬಲ್ಲ ಪುಟ್ಟ ಹಾಸಿಗೆಗಳನ್ನು ವಿತರಿಸಲಾಯಿತು. ಹಾಸಿಗೆ ಎಂದರೆ ಸ್ಪಾಂಜ್ ಮಾದರಿಯದ್ದು ಹೆಚ್ಚು ಕಡಿಮೆ ಅರ್ಧ ಕಿಲೊಗಿಂತಲೂ ಕಡಿಮೆ ಭಾರ. ಪಾಲಿಸಬೇಕಾದ ಶಿಸ್ತಿನ ಬಗ್ಗೆ ಒತ್ತಿ ಒತ್ತಿ ಹೇಳಿದರು. ನಮ್ಮನ್ನು ನೋಡಿ ಹೇಳಬೇಕೆನ್ನಿಸಿತೋ ಅಥವಾ ಇದು ಅಲ್ಲಿನ ಸಾಮಾನ್ಯ ಕ್ರಮವೋ ಗೊತ್ತಿಲ್ಲ! ಆದರೆ ಯಾವುದೇ ಸಂಸ್ಥೆಯಿಂದ ಆಯೋಜಿಸಲ್ಪಡುವ ಚಾರಣಗಳಲ್ಲಿ ರೀತಿಯ "ಬ್ರೀಫಿಂಗ್" ಇದ್ದೇ ಇರುತ್ತದೆ, ಇರಲೇಬೇಕು ಕೂಡಾ. ನಮಗೆ ಸ್ವಲ್ಪ ಅಹಿತವೆನಿಸಿದ್ದು "ನಾಳೆ ಬೆಳಿಗ್ಗೆ ಇಲ್ಲಿ ಸ್ನಾನ ಮಾಡಿ ಹೊರಟರೆ ನಿಮ್ಮ ಮುಂದಿನ ಸ್ನಾನ ವಾಪಾಸು ಇಲ್ಲಿ ತಲುಪಿದ ಮೇಲೆಯೇ (ಅಂದರೆ ಐದು ದಿನಗಳ ಬಳಿಕ!)" ಎಂದಾಗ.

ಸಂಜೆ ಗಂಟೆ .೩೦ ಕ್ಕೆ ಹಿಮಾಲಯನ್ ಪರ್ವತಾರೋಹಣ ಸಂಸ್ಥೆಯ ಸಮ್ಮೇಳನ ಕೊಠಡಿಯಲ್ಲಿ ಅಲ್ಲಿನ ಮುಖ್ಯಸ್ಥರ (ಹೆಸರು ನೆನಪಿಲ್ಲ) ಭಾಷಣ ಏರ್ಪಡಿಸಲಾಗಿತ್ತು. ಭಾಷಣ ಎಂದಾಕ್ಷಣ ಯಾವುದೋ ಕೆಲಸಕ್ಕೆ ಬಾರದ ಮಾತುಗಳಾಗಲಿ ಅಥವಾ ಯಾರೋ ರಾಜಕಾರಣಿಯ ಪೂಸಿ ಮಾತುಗಳಂತೆ ಅಲ್ಲವೇ ಅಲ್ಲ. ಭಾಷಣ ನಾನು ಜೀವನದಲ್ಲಿ ಕೇಳಿದ ಅತ್ಯುತ್ತಮ ಭಾಷಣಗಳಲ್ಲಿ ಒಂದೆನ್ನಬಹುದು. ಸೇನಾಧಿಕಾರಿ ಅವರು. ಅದೇ ಶಿಸ್ತಿನ ಮಾತುಗಳು. ಒಂದೇ ಒಂದು ಅನಗತ್ಯ ವಾಕ್ಯವಿಲ್ಲ. ಪುನರಾವರ್ತನೆ ಇಲ್ಲವೇ ಇಲ್ಲ. ಹಾಂ... ಹೂಂ.... ಇತ್ಯಾದಿ ಎಲ್ಲೂ ತಡವರಿಕೆಗಳಿಲ್ಲ. ಅನುಕರಣೀಯ ಶೈಲಿಯ ಸರಳ ಸ್ವಚ್ಚ ಆಂಗ್ಲ ಭಾಷೆಯಲ್ಲಿ ಅವರಾಡಿದ ಕೆಲವೇ ಮಾತುಗಳು ಎಲ್ಲರನ್ನೂ ಸೆಳೆದಿದ್ದವು. ಕೇವಲ ಹತ್ತರಿಂದ ಹದಿನೈದು ನಿಮಿಷವಷ್ಟೇ ಅವರು ಮಾತನಾಡಿದ್ದು. ಹೆಚ್ಚಿನ ಮಾತುಗಳು ನಗರಗಳ ಜನರಿಗೆ (ವಿಮಾನ ನಿಲ್ದಾಣಗಳಿರುವುದು ನಗರಗಳಲ್ಲಿಯೇ ತಾನೆ) ಪರಿಸರದ ಬಗೆಗಿನ ಹಿತೋಪದೇಶಗಳು.


ಸೂಚನೆಯಂತೆ ಮರುದಿನ ಮುಂಜಾನೆ .೩೦ ಕ್ಕೆ ಬೆನ್ನುಚೀಲ ಸಮೇತ ನಾವು ಸಿದ್ಧರಾಗಿದ್ದೆವು. ತಂಪಾದ ವಾತಾವರಣದಲ್ಲಿ ನಾಲ್ಕು "ಟಾಟಾ ಸುಮೋ"ಗಳು ನಮಗಾಗಿ ಕಾಯುತ್ತಿದ್ದವು. ಸುಮೋದಲ್ಲಿ ಚೆನ್ನಾಗಿಯೇ ಇದ್ದ ಅಂಕು ಡೊಂಕು ರಸ್ತೆಗಳಲ್ಲಿ ನೇರ ತೆರಳಿದ್ದು "ಮಾನೇಭಂಜಾಂಗ್" ಎಂಬಲ್ಲಿಗೆ.  ಅಲ್ಲೇನೋ ಕಾರ್ಯ ನಿಮಿತ್ತ ಸ್ವಲ್ಪ ಹೊತ್ತು ಕಳೆದದ್ದಾಯಿತು. ಮಾನೇಭಂಜಾಂಗ್ನಿಂದಲೂ ಚಾರಣ ಪ್ರಾರಂಭಿಸುವ ವ್ಯವಸ್ಥೆಯಿದೆ. ಆದರೆ ನಮ್ಮ ಚಾರಣ ಪ್ರಾರಂಭವಾದದ್ದು ಅಲ್ಲಿಂದ ಸ್ವಲ್ಪ ದೂರದ "ಧೋತ್ರೇ" ಎಂಬಲ್ಲಿಂದ. ನಮ್ಮ ತಂಡದ ಒಂದು ಟಾಟಾ ಸುಮೋ ದಾರಿ ಮಧ್ಯ ಕೆಟ್ಟು ನಿಂತುದರಿಂದ ಅದು ಬರುವವರೆಗೆ ನಾವು ಧೋತ್ರೇಯಲ್ಲಿ ಕಾಯಬೇಕಾಯಿತು. ಹೊಟ್ಟೆ ಹಸಿಯುತಿದ್ದುದರಿಂದ ಅಲ್ಲಿಯೇ ಇದ್ದ ಪುಟ್ಟ ಹೋಟೇಲು (ಅಥವಾ ಮನೆ ಹೋಟೇಲು ಅಂದರೂ ತಪ್ಪಿಲ್ಲ) ಹೊಕ್ಕು ತಿಂಡಿಗಾಗಿ ವಿಚಾರಿಸಿದಾಗ ಅಲ್ಲಿ ಜನಪ್ರಿಯ ನೇಪಾಳೀ ತಿಂಡಿ "ಮೋಮೋ" ಇರುವುದು ತಿಳಿಯಿತು. ನಮಗೆ ಹತ್ತನೆಯ ತರಗತಿಯಲ್ಲಿ ಕನ್ನಡ ದ್ವಿತೀಯ ಪಠ್ಯದಲ್ಲಿದ್ದ ತೇನ್ಸಿಂಗ್ ನೋರ್ಗೇಯ ಕಥೆಯಲ್ಲಿ ತಿಂಡಿಯ ಹೆಸರನ್ನು ಓದಿದ ನೆನಪು. ಅದನ್ನೇ ತರುವಂತೆ ಸೂಚಿಸಿದೆವು. ಅಲ್ಲಿಯೇ ಪಕ್ಕದಲ್ಲಿ ಇಡ್ಲಿ ಪಾತ್ರೆಯಂತೆ ಇದ್ದ ಪಾತ್ರೆಯೊಂದರಲ್ಲಿ ಮೋಮೋ ಬೇಯುತ್ತಿತ್ತು. ಹಬೆಯಲ್ಲಿ ಬೇಯಿಸಿದಸಮೋಸದಾಕಾರದ ಮೋಮೋ, ಮೈದಾಹಿಟ್ಟಿನ ಬೆಂದ ಹೊರಗವಚ, ಒಳಗಡೆ ಸಣ್ಣಗೆ ಕತ್ತರಿಸಿದ ಎಲೆಕೋಸು ಹಾಗೂ ಈರುಳ್ಳಿ. ಬಿಸಿ ಬಿಸಿ ಇದ್ದುದರಿಂದ ರುಚಿ ಎನ್ನಿಸಿತು. ಮಾಂಸಭರಿತ ಮೋಮೋ ಕೂಡಾ ತಯಾರಿಸುತ್ತರಂತೆ. ಆದರೆ ನಮಗೆಲ್ಲೂ ಸಿಗಲಿಲ್ಲ.

ಸುಮಾರು ಹನ್ನೊಂದು ಗಂಟೆಗೆ ಇನ್ನೊಂದು ಸುಮೋ ಕೂಡಾ ಧೋತ್ರೇ ತಲುಪಿತು. ಅಲ್ಲಿಂದ ಪ್ರಾರಂಭವಾಯಿತು ನಮ್ಮ ಚಾರಣ. ಸೂಚಿಪರ್ಣ ಮರಗಳ ಕಾಡಿನ ಮಧ್ಯೆ ಕಾಲ್ನಡಿಗೆಯ ಪಯಣ. ಬೆನ್ನ ಮೇಲೆ ಹೆಚ್ಚು ಕಡಿಮೆ ೨೦ ಕಿಲೋ ಭಾರದ ಬೆನ್ನಚೀಲ.

ಮುಂದೆ ಹೋಗುತ್ತಾ ತಿಳಿಯಿತು ಇದು ಚಾರಣ ಸಂಬಂಧಿ ಚಟುವಟಿಕೆಗಳಿಗೆಂದೇ "ಸಿದ್ಧಪಡಿಸಿದ ಕಾಲುದಾರಿ" ಎಂದು. ಬ್ರಿಟಿಷ್ ಆಳ್ವಿಕೆಯಲ್ಲಿ ರಚಿತವಾದ ಗಟ್ಟಿಕಲ್ಲು ಹಾಸಿದ - ಅಡಿ ಅಗಲದ ಕಾಲುದಾರಿ.
ದಾರಿ ಮಾಡಿಕೊಂಡು ಅಥವಾ ನಕ್ಷೆ ನೋಡಿಕೊಂಡು ಹೋಗಬೇಕಾದ ಅಗತ್ಯವಿಲ್ಲ. ಹೆಚ್ಚೆಮ್ಮೈಯ ಮಾರ್ಗದರ್ಶಕನನ್ನು ಹಿಂಬಾಲಿಸಿದರೆ ಸಾಕು. ಕೆಲವೆಡೆ ಸ್ವಲ್ಪ ಕಡಿದಾದ ಏರುದಾರಿಯನ್ನು ಹೊರತು ಪಡಿಸಿದರೆ ಅಂತಹ ಕಠಿಣವೇನೂ ಅಲ್ಲದ ಚಾರಣ. ಸುಮಾರು ಆರು ಕಿ.ಮೀ. ದೂರ ನಡೆದ ಮೇಲೆ ನಾವು ತಲಪಿದ್ದು ದಿನ ತಂಗಬೇಕಾದ "ಟೋಂಗ್‌ಲು" ಎಂಬಲ್ಲಿಗೆ.

ಟೋಂಗ್‌ಲು ಸಮುದ್ರ ಮಟ್ಟದಿಂದ ೧೦,೦೦೦ ಅಡಿ ಎತ್ತರದಲ್ಲಿರುವ ಅತ್ಯಲ್ಪ ಜನವಸತಿಯ ಗುಡ್ದಕಾಡು ಪ್ರದೇಶ. ಇಲ್ಲಿ "ಸಂರಕ್ಷಿತ ಔಷದೀಯ ಸಸ್ಯಗಳ ವನ" ವೊಂದಿದೆ.  ಇಲ್ಲಿಂದ ಡಾರ್ಜಿಲಿಂಗ್ ಹಾಗೂ ಕುರ್ಸೋಂಗ್ಪಟ್ಟಣಗಳನ್ನು ವೀಕ್ಷಿಸಬಹುದೆನ್ನುತ್ತಾರೆ. ಆದರೆ ದಟ್ಟ ಮಂಜಿನ ವಾತಾವರಣದಲ್ಲಿ ನಮಗೇನೂ ಗೋಚರಿಸಲಿಲ್ಲ. ತಡವಾಗಿಯಾದರೂ ನಮ್ಮ ಮಧ್ಯಾಹ್ನದ ಊಟ ಅಲ್ಲಿಯೇ ಆಯಿತು. ನೀರು ಮಿತವಾಗಿ ಲಭ್ಯವಿರುವುದರಿಂದ ಎಲ್ಲದಕ್ಕೂ ಧಾರಾಳವಾಗಿ ನೀರನ್ನು ಉಪಯೋಗಿಸುವಂತಿರಲಿಲ್ಲ. ಇದೂ ಕೂಡಾ ಚಾರಣದಲ್ಲಿ ಪಾಲಿಸಬೇಕಾದ ನಿಯಮವಾಗಿತ್ತು! ನಾವು ಉಳಿದುಕೊಂಡ ಟೋಂಗ್ಲು ಪ್ರದೇಶಕ್ಕೆ  ಮಾನೇಭಂಜ್ಯಾಂಗ್ನಿಂದ ರಸ್ತೆ ಸೌಕರ್ಯವಿದೆ. ರಸ್ತೆಯಲ್ಲಿ ಹೆಚ್ಚಾಗಿ ಬ್ರಿಟಿಷ್ ನಿರ್ಮಿತ "ಲ್ಯಾಂಡ್ರೋವರ್" ಜೀಪುಗಳು ನಿಯಮಿತವಾಗಿ ಸಂಚರಿಸುತ್ತವೆ. ಕಲ್ಲುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ನಿರ್ಮಿಸಲಾದ ಈ ರಸ್ತೆಗಳೋ ಇಂತಹ ಜೀಪುಗಳ ಸಂಚಾರಕ್ಕೆ ಮಾತ್ರ ಯೋಗ್ಯವೆನ್ನುವ ಹಾಗೆ ಕಾಣುತ್ತವೆ. ಬ್ರಿಟಿಷರ ನಿರ್ಗಮನದ ನಂತರ ಹೆಚ್ಚಿನ ಅಭಿವೃದ್ಧಿಯನ್ನು ರಸ್ತೆಗಳು ಕಂಡಿಲ್ಲವಂತೆ.


ಮರುದಿನ ಮುಂಜಾನೆ ಅಲ್ಲಿಂದ ಹೊರಡಲು ತಂಡ ಸಜ್ಜಾಗಿತ್ತು.. ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಮಳೆ ಪ್ರಾರಂಭವಾಯಿತು. ಜಡಿಮಳೆಯೇನೂ ಅಲ್ಲ. ಆದರೆ ಮಳೆಯ ಕಾರಣ ಹೆಚ್ಚು ಹೊತ್ತು ಕಾಯುತ್ತಾ ನಿಲ್ಲುವಂತಿರಲಿಲ್ಲ. ಏಕೆಂದರೆ  ದಿನ ಹೆಚ್ಚು ಕಡಿಮೆ ೨೮ ಕಿ. ಮೀ. ನಡೆಯಬೇಕಾಗುತ್ತದೆ ಎಂದು ತಿಳಿಸಿದ್ದರು. ಕೊಡೆ, ಮಳೆಹೊದಿಕೆ ಇತ್ಯಾದಿಗಳೆಲ್ಲಾ ಈಗ ಸರಿಯಾದ ಉಪಯೋಗಕ್ಕೆ ಬಂದವು.

ರಸ್ತೆಯ ಮೇಲೆಯೇ ಚಾರಣಯಾನ. ಮೇಲೆ ತಿಳಿಸಿದಂತಹ ರಸ್ತೆ. ಆಗಾಗ ಲ್ಯಾಂಡ್ ರೋವರ್ಗಳ ದರ್ಶನವಾಗುತ್ತಿತ್ತು. ನನಗೇಕೋ ರೀತಿ ವಾಹನಯೋಗ್ಯ (ಕನಿಷ್ಟ ಲ್ಯಾಂಡ್ರೋವರ್ಗಳಿಗಾದರೂ) ರಸ್ತೆಯಲ್ಲಿ ನಡೆಯುವುದು ವಿಶೇಷ ಚಾರಣವೆನಿಸಲಿಲ್ಲ. ಇಲ್ಲೊಂದು ವಿಷಯ, ರಸ್ತೆಯಂತಹ ದಾರಿಯಲ್ಲಿ ನಡೆಯುವುದು ಮೇಲ್ನೋಟಕ್ಕೆ ಸುಲಭವೆನಿಸುತ್ತದೆ. ಅನನುಭವಿಗಳಿಗಾದರೆ ತುಸು (ಕೆಲವರಿಗೆ ಬಲು) ಕಷ್ಟ. ಕಲ್ಲಿನ ರಸ್ತೆಯ ಮೇಲೆ ದೂರ ನಡೆಗೆ ಪಾದರಕ್ಷೆಗಳ ಗುಣಮಟ್ಟ ಚೆನ್ನಾಗಿರಬೇಕು. ಇಲ್ಲದೇ ಹೋದಲ್ಲಿ ಕಲ್ಲೊತ್ತು ಮುಂತಾದ ತೊಂದರೆಗಳು ಬಾಧಿಸಬಹುದು.

ಸ್ವಲ್ಪ ದೂರ ನಡೆದ ಮೇಲೆ ಸಿಂಗಲೀಲಾ ರಾಷ್ಟ್ರೀಯ ಉದ್ಯಾನದ ಸ್ವಾಗತ ಕಮಾನು ನಮ್ಮನ್ನು ಎದುರುಗೊಂಡಿತು. ಅಲ್ಲೇನೂ ಅಂತಹ ವಿಶೇಷವಿಲ್ಲವೆಂದು ಮಾರ್ಗದರ್ಶಿ ಹೇಳಿದ ಮೇಲೆ ಹೆಚ್ಚು ಹೊತ್ತು ನಿಲ್ಲದೆ ನಡಿಗೆ ಮುಂದುವರಿಸಿದೆವು. ನಂತರ ಸಿಕ್ಕಿದ ಸಾಧಾರಣ ಜನಸಂಖ್ಯೆಯ ಒಂದು ಹಳ್ಳಿ "ಜೌಬಾರಿ". ನನಗೆ ಅಲ್ಲಿ ಅದೇಕೋ ಒಂದು ವಿಚಿತ್ರ ಖುಷಿಯಾಗಿತ್ತು. ಕಾರಣ ಹಳ್ಳಿ ನೇಪಾಳಕ್ಕೆ ಸೇರಿತ್ತು. ಜೀವನದಲ್ಲಿ ಪ್ರಥಮ ಬಾರಿಗೆ ನಾನು ವಿದೇಶದ ನೆಲಕ್ಕೆ ಕಾಲಿಟ್ಟಿದ್ದೆ! ಅದೂ ಪಾಸ್ಪೋರ್ಟ್, ವೀಸಾ - ಗೀಸಾ ಏನೂ ಇಲ್ಲದೆಯೇ!

ನೇಪಾಳದ  ಇಲ್ಲಾಮ್  ಜಿಲ್ಲೆಯಲ್ಲಿದ್ದ ಹಳ್ಳಿ ಸುಮಾರಾಗಿ ನಮ್ಮ ಬಜಪೆಯಷ್ಟು ದೊಡ್ಡದಿತ್ತು ಎನ್ನಬಹುದು. ಹೊಟ್ಟೆಗೇನಾದರೂ ಹಾಕೋಣವೆಂದು ಅಲ್ಲೊಂದು ಜೀನಸು ಅಂಗಡಿ (ಹೋಟೇಲು ಸಹಿತ) ಯನ್ನು ಹೊಕ್ಕಾಗ " ವೆಲ್ಕಂ ಟು ನೇಪಾಳ್" ಎಂದು  ಅಲ್ಲಿನ ಮಾಲೀಕ  ನಮ್ಮನ್ನು ಸ್ವಾಗತಿಸಿದ. ಸ್ವಚ್ಚ ಇಂಗ್ಲಿಶ್ನಲ್ಲಿ ಮಾತಾಡುತ್ತಿದ್ದ ವರ್ತಕ ನಾವು ಕೊಂಡ ಯಾವುದೇ ಸಾಮಾನಿಗೂ ಒಂದು ರೂಪಾಯಿಯನ್ನೂ ಹೆಚ್ಚಿಗೆ ವಿಧಿಸಲಿಲ್ಲ. ನಾನ್ಯಾಕೆ ಮಾತು ಹೇಳಿದೆನೆಂದರೆ, ಗ್ರಾಮ ಜಿಲ್ಲಾ ಕೇಂದ್ರ ಇಲ್ಲಾಮ್ನಿಂದ ೩೫ ಕಿ. ಮೀ. ದೂರದಲ್ಲಿದೆಯಂತೆ. ಕಾಠ್ಮಂಡುವಿನಿಂದ ೩೦೦ ಕಿ.ಮೀ.  ಊರಿಗೂ ಅಷ್ಟೆ, ಲ್ಯಾಂಡ್ರೋವರ್ನಂತಹ ಜೀಪುಗಳನ್ನು ಬಿಟ್ಟರೆ ಬಸ್ಸು ಇತ್ಯಾದಿ ಯಾವುದೇ ವಾಹನ ಸೌಕರ್ಯವಿಲ್ಲ. ಸಾಮಾನುಗಳೆಲ್ಲಾ ದೂರದ ಮಾನೇಭಂಜ್ಯಾಂಗ್ (ಡಾರ್ಜಿಲಿಂಗ್ - ಭಾರತ) ಅಥವಾ ಇಲ್ಲಾಮ್ನಿಂದ ವಾಹನಗಳಲ್ಲೇ ಬರಬೇಕು. ನಾವು ಪ್ರಾಯಶಃ  ದುಬಾರಿ ಬೆಲೆಯನ್ನು ನಿರೀಕ್ಷಿಸಿದ್ದೆವು.


ಅಲ್ಲಿಂದ ನಮ್ಮ ನಡಿಗೆ ಇಳಿಮುಖವಾಗಿ ಸಾಗಿತು. ಸುಮಾರು ಕಿ. ಮೀ. "ಇಳಿದ" ನಂತರ ಸಿಗುವುದು "ಗೈರಿಬಾಸ್". ಇಲ್ಲಿ ಭಾರತದಗಡಿಭದ್ರತಾ ಪಡೆಯಠಾಣೆಯೊಂದಿದೆ. ಹಗಲು ರಾತ್ರಿ ದುಡಿಯುವ ಸೈನಿಕರಿದ್ದಾರೆ. ನಿಯಮಗಳ ಅನ್ವಯ ಛಾಯಾಚಿತ್ರ ತೆಗೆಯಲು ಅವಕಾಶ ನೀಡಲಿಲ್ಲ. ಗೈರಿ ಬಾಸ್ ಒಂದು ಕಣಿವೆಯಂತಹ ಪ್ರದೇಶ. ಸಣ್ಣಪುಟ್ಟ ಅಂಗಡಿಗಳಿವೆ. ನಂತರದ ಪ್ರಯಾಣ ಏರುಮುಖವಾಗಿ. ತಿರುವು ಮುರುವು ರಸ್ತೆ, ಹೆಚ್ಚು ಕಡಿಮೆ ಕಿ. ಮೀ. ರಸ್ತೆಯೇ ಆದರೂ ಇದು ಮಾತ್ರ ಸವಾಲೆನಿಸುವಂತಹ ಏರು. ಮಧ್ಯ ಮಧ್ಯ ವಿಶ್ರಾಂತಿ ಅನಿವಾರ್ಯವಾಗಿತ್ತು. ಸುತ್ತಲೂ ದಟ್ಟ ಹಸಿರು ಅರಣ್ಯ. ಹಾಗಾಗಿ ಸುಸ್ತನ್ನೂ ಖುಷಿಯಿಂದಲೇ ಅನುಭವಿಸುವಂತಾಯಿತು.

ಏರಿದ ಮೇಲೆ ಮತ್ತೆ ನಡಿಗೆ ಮುಂದುವರೆಯಿತು. ಅಲ್ಲೊಂದು ಪುಟ್ಟ ಹಳ್ಳಿ. ಒಂದೆರಡು ಚಿಕ್ಕ ಅಂಗಡಿಗಳು. ಸುಸ್ತಾದವರಿಗೆ ಆಮ್ಲೇಟ್ ಇತ್ಯಾದಿ ಲಭ್ಯವಿತ್ತು. ಅಂಗಡಿಯೊಂದರ ಮಾಲೀಕನ ಪುಟ್ಟ ಮಗ ಅಲ್ಲಿಯೇ ಆಟವಾಡುತ್ತಿದ್ದ. ರಜೆಯಲ್ಲಿ ಬಂದಿದ್ದನಂತೆ. ಸುಮಾರಾಗಿ ಇಂಗ್ಲಿಶ್ ಮಾತಾಡುತ್ತಿದ್ದ ಬಾಲಕನನ್ನು ಅಲ್ಲಿಂದ ೮೦ ಕಿ. ಮೀ. ದೂರದ ಯಾವುದೋ ಒಂದುಒಳ್ಳೆಯನಿವಾಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಓದಲು ಸೇರಿಸಿದ್ದರು. ಹೆತ್ತವರ ಮನೋಭಾವನೆ ಎಲ್ಲೆಡೆಯೂ ಒಂದೇ!

ನಂತರದ ನಡಿಗೆ ಏರು ತಗ್ಗು ದಾರಿಯಲ್ಲಿ ಮುಂದುವರೆಯಿತು. ಅನತಿ ದೂರದಲ್ಲೆಂಬಂತೆ ಆವತ್ತು ನಾವು ತಲುಪಬೇಕಾದ ಊರು, ಕಟ್ಟಡಗಳು ಗೋಚರಿಸುತ್ತಿದ್ದವು. ಕಾಡುಮಧ್ಯೆ ದಾರಿ ರಿಪೇರಿಯ ಕೆಲಸ ಮಾಡುತ್ತಿದ್ದ ನೇಪಾಳಿಗಳ ತಂಡದಲ್ಲಿ ವಿಚಾರಿಸಿದೆವು. "ಒಂದು ಕಿ.ಮೀ. ಅಷ್ಟೆ" ಅಂದರು. ಖುಷಿಯಾಯಿತು. ಆದರೆ ನಡೆದಷ್ಟೂ ಒಂದು ಕಿ. ಮೀ. ದೂರದ ಜಾಗ ಬರಲೇ ಇಲ್ಲ. ಕೊನೆಗೂ ಅಲ್ಲಿ ತಲಪಿಯಾಯಿತು. ನೋಡಿದರೆ ಅಲ್ಲಿಂದ ಒಂದೂ ಕಾಲು ಗಂಟೆ ಅಂದರೆ ಹೆಚ್ಚು ಕಡಿಮೆ ಕಿ. ಮೀ. ನಡೆದಿದ್ದೆವು ನಾವು! ಈಗ ನಾವು ತಲುಪಿದ್ದು "ಕಾಲಾಪೋಖ್ರಿ" ಅನ್ನುವ ಹಳ್ಳಿಯನ್ನು. ದಿನದ ನಮ್ಮ ವಾಸ್ತವ್ಯಕ್ಕೆ ಅಲ್ಲಿ ಏರ್ಪಾಡಾಗಿತ್ತು. 


ಕಾಲಾ ಪೋಖ್ರಿಯಲ್ಲಿ ಗುಡ್ಡಗಳ ಮಧ್ಯೆ ಪುಟ್ಟ ಕೆರೆಯೊಂದಿದೆ. ಅದರ ಮೇಲ್ಭಾಗದಲ್ಲಿ ಉದ್ದಕ್ಕೂ ಬೌದ್ಧ ದೇವಾಲಯಗಳಲ್ಲಿರುವಂತೆ ಶ್ಲೋಕಪತ್ರಗಳ ತೋರಣ ಕಟ್ಟಿದ್ದರು. ಪಕ್ಕದಲ್ಲಿಯೆ ಹಲವಾರು ಧ್ವಜಗಳನ್ನೂ ನೆಟ್ಟಿದ್ದರು. ಜನವರಿ ತಿಂಗಳ ಚಳಿಯಲ್ಲಿ ಭಾಗದ ಹೊರ ಜಲಮೂಲಗಳೆಲ್ಲವೂ ಮರಗಟ್ಟಿ ಮಂಜುಗಡ್ಡೆಯಾಗಿ ಹೋದರೂ ಕೆರೆಯ ನೀರು ಮಾತ್ರ ದ್ರವರೂಪದಲ್ಲಿಯೇ ಉಳಿಯುವುದಂತೆ. ಅಲ್ಲಿ ಆಗಾಗ ಪೂಜೆಯೂ ನಡೆಯುತ್ತದೆಯಂತೆ. ಹಾಗೆಂದು ಅಲ್ಲಿನ ನಿವಾಸಿಯೊಬ್ಬ ಹೇಳಿಕೊಳ್ಳುತ್ತಿದ್ದ.  ರಾತ್ರಿ ಕೋಳಿ ಪಲ್ಯದ ಊಟ. ಬಿಸಿಯಾಗಿತ್ತು. ಹಾಗಾಗಿ ಚೆನ್ನಾಗಿತ್ತೆಂದೇ ಹೇಳಬಹುದು. ಏರು ತಗ್ಗಿನ ನಿರಂತರ ನಡಿಗೆಯಿಂದ ಹಲವರಿಗೆ ಕಾಲು ನೋವು ಪ್ರಾರಂಭವಾಗಿತ್ತು. ಕೆಲವರು ಮರುದಿನದ ನಡಿಗೆಗೆ ಬೆನ್ನುಚೀಲ ಬೇಡ, ಲ್ಯಾಂಡ್ರೋವರ್ ಜೀಪಿನಲ್ಲಿ ಹಾಕಿ ಕಳುಹಿಸೋಣವೆಂದು ಮಾತಾಡಿಕೊಳ್ಳುತ್ತಿದ್ದುದು ಕೇಳಿಸಿತು. ಅನಿವಾರ್ಯ ಸಂದರ್ಭಗಳ ಹೊರತು ಅದು ಸಮ್ಮತಾರ್ಹವಲ್ಲವೆಂದು ನಮಗೆ ಮೊದಲೇ ತಿಳಿದಿದ್ದುದರಿಂದ ಬಗ್ಗೆ ಹೆಚ್ಚು ಯೋಚಿಸಲು ಹೋಗಲಿಲ್ಲ. ಆದರೆ ಮರುದಿನ ನಮ್ಮ ಯೋಚನೆ ಹಾಗೂ ನಿರೀಕ್ಷೆ ಗಳನ್ನು ಹೊರತಾಗಿಸಿ ಒಂದಷ್ಟು ಜನರು ವ್ಯವಹಾರದಲ್ಲಿ ಯಶಸ್ವಿಯಾಗಿದ್ದರು!

ಸಮುದ್ರಮಟ್ಟದಿಂದ ೧೨,೫೦೦ ಅಡಿ ಎತ್ತರದಲ್ಲಿರುವ  "ಸಂಡಾಕ್‌ಫೂ" ನಮ್ಮ ಚಾರಣದ ಕೊನೆಯ ತಾಣ. ಮರುದಿನ ನಾವು ಆರು ಕಿ. ಮೀ. ನಡೆದು ಭಾಗದ ಅತ್ಯಂತ ಎತ್ತರದ ಪ್ರದೇಶ ಸಂಡಾಕ್ಫೂ ಗೆ ತಲುಪಬೇಕಾಗಿತ್ತು. ಬೆಳಿಗ್ಗೆ ಎಂದಿನ ಉತ್ಸಾಹದಿಂದಲೇ ಹೊರಟಾಯಿತು. ಕಾಲಾಪೋಖ್ರಿಯಿಂದ ಸಂಡಾಕ್ಫೂವಿನ ಕಟ್ಟಡಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಹಾಗಾಗಿ ಅದು ಸುಲಭ ಚಾರಣವಿರಬಹುದೆಂದು ಅಂದುಕೊಂಡಿದ್ದೆವು. ಆದರೆ ನಡೆಯುತ್ತಾ ಮುಂದೆ ಸಾಗಿದಂತೆ ಕಡಿದಾದ ಏರುಮಾರ್ಗ ಹೆಚ್ಚಾಗುತ್ತಾ ಬಂತು. ನಿರೀಕ್ಷಿತ ಏರೇ ಆಗಿದ್ದರೂ ಹಿಂದಿನ ದಿನದ ಸುಸ್ತಿನ ಕಾರಣವೋ ಏನೋ ಕೊನೆ ದಿನದ ನಡಿಗೆ ಹೆಚ್ಚಿನವರನ್ನು ಹೈರಾಣಾಗಿಸಿತು. ನಾವೊಂದಷ್ಟು ಜನ ನಿಧಾನ ಆದರೆ ನಿರಂತರ ನಡಿಗೆಯಲ್ಲಿದ್ದ ಕಾರಣ ವಿಪರೀತವೆನ್ನುವಷ್ಟು ಸುಸ್ತೇನೂ ಆಗಲಿಲ್ಲ. ಮುಂಜಾನೆ ಗಂಟೆಗೆ ಕಾಲಾ ಪೋಖ್ರಿ ಬಿಟ್ಟವರು ೧೦:೩೦ ಗಂಟೆಗೆ ಸಂಡಾಕ್ಫೂ ತಲುಪಿದ್ದೆವು. ಎಲ್ಲರೂ ಸಂಡಾಕ್ಫೂ ತಲುಪುವ ಹೊತ್ತಿಗೆ ೧೨:೩೦ ಆಗಿತ್ತು.

ಸಂಡಾಕ್ಫೂ ತಲುಪಿದ ನಮ್ಮಲ್ಲಿ ಹೆಚ್ಚಿನವರಿಗೆ ಎವೆರೆಸ್ಟ್ ಶಿಖರ ಏರಿದಷ್ಟು ಖುಷಿಯಾಗಿತ್ತು. ಸುಮಾರು ಮಧ್ಯಾಹ್ನ ಒಂದು ಗಂಟೆಯವರೆಗೂ ಮೋಡ ಮುಸುಕಿದ ವಾತಾವರಣವಿತ್ತು. ಸ್ವಲ್ಪ ಹೆಚ್ಚೇ ಅನ್ನುವಷ್ಟು ಚಳಿ (ಹೆಚ್ಚು ಕಡಿಮೆ ೧೨ ಡಿಗ್ರೀ ಸೆಲ್ಸಿಯಸ್). ನೀರಿನ ಸೀಮಿತ ಲಭ್ಯತೆಯ ಬಗ್ಗೆ ಮತ್ತೊಮ್ಮೆ ನಮ್ಮನ್ನು ಎಚ್ಚರಿಸಲಾಯಿತು. ಮಹಿಳೆಯರ ಹೊರತಾಗಿ ಯಾರೂ ಶೌಚಾಲಯಗಳನ್ನು ಉಪಯೋಗಿಸುವಂತಿಲ್ಲ.  ಸುತ್ತಲೂ ಸಾಕಷ್ಟು ಕುರುಚಲು ಪೊದೆಯ ಕಾಡು ಇದ್ದುದರಿಂದ ನಮಗದು ಅಂತಹ ಸಮಸ್ಯೆಯೆನಿಸಲಿಲ್ಲ. ಕೆಲ ನಗರವಾಸಿಗಳಿಗೆ ಮಾತ್ರ ಸ್ವಲ್ಪ ಮುಜುಗರವೆನಿಸಿತ್ತು! ಸ್ನಾನವಂತೂ ನಮಗೆ ಮರೆತೇ ಹೋಗಿತ್ತು (ಅನಿವಾರ್ಯವಾಗಿ!). ಸಂಡಾಕ್ಫೂ ರಾಜಕೀಯವಾಗಿ ಭಾರತದಲ್ಲಿದೆ ಎನ್ನಲಾಗುತ್ತಿದ್ದರೂ ಅಲ್ಲಿ ನೇಪಾಳದ ಧ್ವಜವೂ ಹಾರಾಡುತ್ತಿತ್ತು. ತೆರೆದ ಅಂಗಡಿಗಳೇನೂ ಅಲ್ಲಿದ್ದ ಹಾಗೆ ಕಾಣಿಸಲಿಲ್ಲ. ಯಾತ್ರಿಗಳಿಗೆ ಅಥವಾ ಚಾರಣಿಗರಿಗೆ ಉಳಿದುಕೊಳ್ಳಲು ಇಲ್ಲಿ ಹೋಟೇಲು  ಮತ್ತು ಸಮೂಹ ವಸತಿ (ಡಾರ್ಮೆಟರಿ) ಸೌಲಭ್ಯವಿದೆ.

ಅಪರಾಹ್ನ .೩೦ರ ಹೊತ್ತಿಗೆ ಮಂಜಿನ ದಟ್ಟಣೆ ಕಡಿಮೆಯಾಯಿತು. ಆಗ ದೂರದಲ್ಲಿ ಕಾಂಗ್ಚೆನ್ ಜುಂಗಾ ಪರ್ವತ ಶ್ರೇಣಿಯ ಮನೋಹರ ದರ್ಶನವಾಯಿತು! ನಮ್ಮ ಚಾರಣದ ಆಕರ್ಷಕ ಭಾಗಗಳಲ್ಲಿ ಇದೂ ಒಂದು.  ಹೆಚ್ಚು ಕಡಿಮೆ ೩೦ ಕಿ. ಮೀ. ವಾಯುಮಾರ್ಗ ದೂರದಲ್ಲಿದ್ದ ಹಿಮಾಲಯ ಭಾಗವನ್ನು ವೀಕ್ಷಿಸುವುದು ಕಣ್ಣಿಗೆ ತಂಪು ನೀಡುವ ಅನುಭವ. ಉದ್ದುದ್ದ ಚಾಚಿರುವ ವಿಶಾಲ ಪರ್ವತ ಶ್ರೇಣಿ ದೂರಕ್ಕೆ  ಶಲ್ಯ ಮತ್ತು ಮುಂಡಾಸು ಹೊದ್ದು ಮಲಗಿರುವ ಓರ್ವ ವ್ಯಕ್ತಿಯಂತೆ ಕಾಣಿಸುತ್ತದಂತೆ. ಹಾಗಾಗಿ ದೃಶ್ಯವನ್ನು "ಮಲಗಿರುವ ಬುದ್ಧ (Sleeping Buddha)" ಎಂದೂ ಕರೆಯುತ್ತಾರೆ.

ರಾತ್ರಿ ಹೊರಗಡೆ ಚಳಿ ಇನ್ನೂ ಹೆಚ್ಚಾಗಿತ್ತು. ಊಟ ಮಾತ್ರ ಬಿಸಿಯಾಗಿಯೇ ಇತ್ತು. ನಮ್ಮ ಸಮೂಹ ವಸತಿಯಲ್ಲಿ ಮಂಚ ಸಿಗದೇ ಇದ್ದವರು (ಅದಾಗಲೇ ಪ್ರತೀ ದ್ವಿ ಮಂಚದಲ್ಲಿ ನಾಲ್ಕು ಅಥವಾ ಐದು ಮಂದಿ ಪವಡಿಸಿದ್ದರು!) ಮಲಗು ಚೀಲಗಳ ಮೊರೆ ಹೋದರು. ನೀರು ಮಿತವಾಗಿ ಕುಡಿದಿದ್ದ ಕಾರಣ ಮಧ್ಯರಾತ್ರಿ ಎದ್ದು ಹೊರಗೆ ಹೋಗಬೇಕಾದ ಸಂದರ್ಭ ಒದಗಲಿಲ್ಲ. ಮುಂಜಾನೆ ಸಹಜವಾಗಿಯೇ ಚಳಿ ಇನ್ನೂ ಹೆಚ್ಚಾಗಿತ್ತು. ಕೊರೆಯುವ ಚಳಿಯಲ್ಲಿ ಕಾಡಿನಲ್ಲಿ ನಮ್ಮ ಮುಂಜಾನೆಯ ಕರ್ಮಗಳನ್ನು ನಿರ್ವಹಿಸುವಾಗ ನಮಗೆ ಅನ್ನಿಸಿದ್ದು ಒಂದೇ... ಹಿಮ ಪರ್ವತಾರೋಹಿಗಳ ಪರಿಸ್ಥಿತಿ ಹೇಗಿದ್ದಿರಬಹುದು..?

ಮರುದಿನ ಮತ್ತೆ ನಡಿಗೆ ಶುರು. ಹೋದ ದಾರಿಯಲ್ಲಿಯೇ ವಾಪಾಸು. ಎಲ್ಲೂ ಹೆಚ್ಚು ಹೊತ್ತು ನಿಲುಗಡೆಯಿಲ್ಲ. ಇಳಿಮುಖ ಪ್ರಯಾಣ ಅಷ್ಟೊಂದು ಸುಲಭವೇನಲ್ಲ. ಕಾಲಾಪೋಖ್ರಿಯಲ್ಲಿ ತಿಂಡಿ. ಮುಂದುವರೆದ ನಡಿಗೆಯಲ್ಲಿ ಗೈರಿಬಾಸ್ಗೆ ಕಡಿದಾದ ಇಳಿದಾರಿ (ರಸ್ತೆ) ಯಲ್ಲಿ ಕಷ್ಟಪಟ್ಟು ಇಳಿದಾಗ ಸರಿ ಸುಮಾರು ಮಧ್ಯಾಹ್ನ ಎರಡು ದಾಟಿತ್ತು. ಮುಂಜಾನೆ ಹೊರಡುವಾಗ ಚಾರಣ ವ್ಯವಸ್ಥಾಪಕರು "ಮಧ್ಯಾಹ್ನ ವಿಶೇಷ ಊಟವೇನೂ ಇರುವುದಿಲ್ಲ. ಬೇಯಿಸಿದ ಆಲೂಗಡ್ಡೆಯ ಜತೆ ಬ್ರೆಡ್ ನೀಡಲಾಗುವುದು" ಎಂದು ಹೇಳಿದ್ದರು. ನಾವೇನೋ "ಬ್ರೆಡ್ - ಆಲೂ ಭಾಜಿ" ಇರಬಹುದು ಎಂದು ಕೊಂಡಿದ್ದೆವು.  ಅಲ್ಲಿ ತಲುಪಿದ ಮೇಲೆ ಕೊಟ್ಟಿದ್ದೇನು...? ನಮ್ಮಲ್ಲಿಕೆರೆಂಗು (ಗೆಣಸು) ಬೇಯಿಸಿದಂತೆ ಆಲೂಗಡ್ಡೆಯನ್ನು ಬೇಯಿಸಲಾಗಿತ್ತು! ರೀತಿ ಬೆಂದ ಬಟಾಟೆಯನ್ನು ತಿನ್ನಲು ಕೊಟ್ಟಿದ್ದನ್ನು ನನ್ನ ಜೀವಮಾನದಲ್ಲಿ ಮೊದಲ ಬಾರಿಗೆ ಕಾಣುತ್ತಿದ್ದೆ! ತಣ್ಣಗಾಗಿದ್ದ ಅದನ್ನು ಬ್ರೆಡ್ ಜತೆಗೆ ತಿನ್ನಲೇ ಬೇಕಾದ ಅನಿವಾರ್ಯತೆ! ಚಾರಣದಲ್ಲಿ ನಾವು ಉತ್ಕೃಷ್ಠ ಮಟ್ಟದ ತಿನಿಸೇ ಬೇಕು ಎಂದೇನೂ ಬಯಸುವುದಿಲ್ಲ. ಎಲ್ಲದಕ್ಕೂ ಹೊಂದಿಕೊಳ್ಳಲೇ ಬೇಕಾಗುತ್ತದೆ. ಇಲ್ಲಿ ನಮಗೆ ಆಶ್ಚರ್ಯವೆನಿಸಿದ್ದು ಎಂದರೆ ಜಾಗದಲ್ಲಿ ಸಾಧಾರಣ ಮಟ್ಟದ ಊಟದ ವ್ಯವಸ್ಥೆಯ (ಚಪಾತಿ ಇತ್ಯಾದಿ) ಅವಕಾಶ ಅಥವಾ ಸಾಧ್ಯತೆ ಇದ್ದರೂ ರೀತಿ ಮಾಡಿದ್ದು. ಪ್ರಾಯಶಃ ಬೇಯಿಸಿದ ಬಟಾಟೆಯ  ಹೊಸ ಅನುಭವವನ್ನು ನಮಗೆ ನೀಡಲೆಂದೇ ಇರಬೇಕು!

ಮತ್ತೆ ಏರುಮುಖ ಪ್ರಯಾಣ. ಚೌಬಾರಿ (ನೇಪಾಳ) ಯತ್ತ. ಪುನಃ ವಿದೇಶಕ್ಕೆ ಬಂದಿದ್ದೆವು. ಆಲೂಗಡ್ಡೆ ತಿನ್ನಲಾಗದ ಮಂದಿ ಅಲ್ಲಿ ಲಭ್ಯವಿದ್ದ ತಿಂಡಿ ಖರೀದಿಸಿ ಹೊಟ್ಟೆ ತುಂಬಿಸಿಕೊಂಡರು. ನೇಪಾಳದ ಗೈರಿಬಾಸ್ನಲ್ಲಿ ಅಪರಾಹ್ನ ಸ್ವಲ್ಪ ಸಮಯ ವಿಶ್ರಾಂತಿ .  ನಮ್ಮ ತಂಡದ ಒಂದಷ್ಟು ಜನ ಹಾಡು ಕುಣಿತಗಳನ್ನು ಪ್ರದರ್ಶಿಸಿದರು. ಇವೆಲ್ಲಾ ತೀರಾ ಮಾಮೂಲೇ ಆಗಿದ್ದರೂ ಹೊತ್ತಿಗೆ ನಮ್ಮ ದಣಿವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಯಿತು. ಮನೆ ಜಗಲಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದ  ಸ್ಥಳೀಯರೂ ನಮ್ಮನ್ನು ಹುರಿದುಂಬಿಸಿದರು. 

ಮರಳುವ ದಾರಿಯಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು. ನಾವು ಟೋಂಗ್ಲುವಿನಿಂದ ಬಂದ ದಾರಿಯನ್ನು ಹಿಡಿಯದೆ ಬೇರೊಂದು ದಾರಿಯಲ್ಲಿ ನಮ್ಮ ನಡಿಗೆ ಹಾಗೆಯೇ ಮುಂದುವರೆಯಿತು. ಸ್ವಲ್ಪ ಹೊತ್ತಿನ ಬಳಿಕ ಸುಮಾರು ೫೫-೬೦ ವರ್ಷ ವಯಸ್ಸಿನ ಓರ್ವ ಗೂರ್ಖಾ ಮಹಿಳೆ ಸ್ವಲ್ಪಕಾಲ ನಮ್ಮ ಜತೆಗೂಡಿದರು. ಹಿಂದಿ, ಇಂಗ್ಲಿಶ್ ಎರಡರಲ್ಲೂ ಶುದ್ಧವಾಗಿ ಮಾತನಾಡುತ್ತಿದ್ದ ಆಕೆ  ಹಿಂದೆ ಯಾವುದೋ ಆಸ್ಪತ್ರೆಯೊಂದರಲ್ಲಿ ದೀರ್ಘ ಕಾಲ ವೈದ್ಯಕೀಯ ಸಹಾಯಕಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಅಲ್ಲೆಲ್ಲೋ ಓರ್ವ ಆಸ್ಟ್ರೇಲಿಯನ್ ವೈದ್ಯ ದಂಪತಿಗಳು ತಮ್ಮ ತಂಡದೊಂದಿಗೆ ಆಗಾಗ ಬಂದು  ಅಲ್ಲಿನ ಹಳ್ಳಿಗರಿಗಾಗಿ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾರಂತೆ. ಈಕೆ ಅವರಿಗೆ ನೇಪಾಳಿ ದ್ವಿಭಾಷಿಯಾಗಿ ಸಹಾಯ ಮಾಡುತ್ತಿದ್ದರು. ಅಷ್ಟು ದೂರ ದೇಶದಿಂದ ಬಂದು ತಮ್ಮ ಸ್ವಂತ ಖರ್ಚಿನಿಂದ ಅಂತಹ ಗುಡ್ಡಗಾಡು ಹಳ್ಳಿ ಪ್ರದೇಶದಲ್ಲಿ ವೈದ್ಯಕೀಯ ನೆರವು ನೀಡುವ ವೈದ್ಯ ದಂಪತಿಗಳ ಪ್ರವೃತ್ತಿ ಹಾಗೂ ಅವರಿಗೆ ದ್ವಿಭಾಷಿಯಾಗಿ ಸಹಾಯ ಮಾಡುವ ಹಿರಿಯ ಮಹಿಳೆಯ ಆಸಕ್ತಿ ಎರಡೂ ಮೆಚ್ಚಬೇಕಾದದ್ದೆ. ಕತ್ತಲಿನ ಅವಸರದಲ್ಲಿದ್ದ ಆಕೆ ಸ್ವಲ್ಪ ಹೊತ್ತಿಗೆ ಆಕೆ ಬೇರೆ ದಾರಿಯತ್ತ ತಿರುಗಿ ಹೊರಟು ಹೋದರು. ಅಯ್ಯೋ ಆಕೆಯ ಜತೆ ಒಂದು ಚಿತ್ರ ತೆಗೆಯಲೂ ನೆನಪಾಗಲಿಲ್ಲವಲ್ಲಾ ಎಂದು ಪೇಚಾಡಿಕೊಂಡೆ.

ಕತ್ತಲು ಕವಿಯುವ ಹೊತ್ತಿಗೆ ಸುಮಾರು ಹೆಚ್ಚು ಕಡಿಮೆ ೩೨ ಕಿ. ಮೀ.  ನಡೆದಿದ್ದ  ನಮಗೆ "ಟುಮ್ಲಿಂಗ್" ಎಂಬಲ್ಲಿ ರಾತ್ರಿ ಉಳಿಯುವ ವ್ಯವಸ್ಥೆಯಾಗಿತ್ತು. ಅದಾಗಲೇ ಸ್ವಲ್ಪ ಹೆಚ್ಚೇ ಕತ್ತಲಾಗಿದ್ದುದರಿಂದ ಜಾಸ್ತಿ ಅಡ್ಡಾಡದೆ ನಾವು ನಮಗೆ ಮುಂಚಿತವಾಗಿ ಗೊತ್ತುಪಡಿಸಿದ ವಸತಿಗೃಹವನ್ನು ಹೊಕ್ಕೆವು. ಮಾಮೂಲಿ ರಾತ್ರಿ ಊಟ, ನಮ್ಮೊಳಗೆ ಒಂದಷ್ಟು ಹರಟೆ, ಮನರಂಜನೆ.  ಸುದೀರ್ಘ ನಡಿಗೆಯಿಂದ ಸುಸ್ತಾಗಿದ್ದ ನಮಗೆ ರಾತ್ರಿಯೆಲ್ಲಾ ಗಡದ್ದು ನಿದ್ದೆ. ಮರುದಿನ ಬೆಳಿಗ್ಗೆ ಎದ್ದು ಸ್ವಲ್ಪ ಮೇಲೆ ಬಂದು ನೋಡಿದಾಗ ಹಸಿರು ಕಾಡುಗಳಾಚೆ ದೂರದಲ್ಲಿ ಮತ್ತದೇ ಕಾಂಗ್ಚೆನ್ ಜುಂಗಾ! ಮೋಡಗಳಿಲ್ಲ. ಸ್ಪಷ್ಟ ನೋಟ, ಅದೇ ಚೆಲುವು, ಅದೇ ಆಕರ್ಷಣೆ.

ಅಲ್ಲಿಂದ ನಿಧಾನಗತಿಯಲ್ಲಿ ನಮ್ಮ ಯಾನ ಮುಂದುವರೆಯಿತು. ಕೊನೆಯ ದಿನದ ಯಾನ ಹೆಚ್ಚು ದೂರವೇನೂ ಇಲ್ಲವೆಂದಿದ್ದರು. ನಾವು ಪ್ರಥಮದಿನ ಚಾರಣಾರಂಭ ಮಾಡಿದ ಧೋತ್ರೇಗೆ ಬಾರಿ ತೆರಳದೆ ನೇರವಾಗಿ ಮಾನೇಭಂಜ್ಯಾಂಗ್ನತ್ತ ನಮ್ಮ ಪ್ರಯಾಣ ಸಾಗಿತು. ಅದು `ಮೇಘಮಾಎನ್ನುವ ಪ್ರದೇಶದ ಮುಖಾಂತರ. ಅಲ್ಲೂ ಅಂಗಡಿ, ಬುದ್ಧ ದೇವಾಲಯ ಇತ್ಯಾದಿಗಳಿದ್ದವು. ಮುಖ್ಯವಾಗಿ ಅಲ್ಲಿಯೂ ಭಾರತದ ಗಡಿ ಭದ್ರತಾ ಪಡೆಯವರ ಖಾಯಂ  ಶಿಬಿರವೊಂದಿತ್ತು.  ನನಗೆ ಅಲ್ಲೊಬ್ಬ ಕನ್ನಡಿಗ ಸೈನಿಕನ  ಭೇಟಿಯಾಯಿತು. ಬೆಳಗಾವಿ ಜಿಲ್ಲೆಯವರಂತೆ. ಹೆಚ್ಚು ಹೊತ್ತು ಮಾತನಾಡಲಾಗದಿದ್ದರೂ ಯಾವುದೋ ದೂರದ ಪ್ರದೇಶದಲ್ಲಿ ಕನ್ನಡದಲ್ಲಿ  ಮಾತನಾಡಿದ ಒಂದು ಖುಷಿ (ನಮ್ಮ ತಂಡದಲ್ಲಿದ್ದಿದ್ದು ನಾನೊಬ್ಬನೇ ಕನ್ನಡಿಗ..!). ಅವನೂ ಖುಷಿಪಟ್ಟ.

ಅತೀ ಸಣ್ಣ ಹಳ್ಳಿಗಳು ಮತ್ತು ಕಾಡುಗಳ ಮಧ್ಯೆ ಕಲ್ಲು ರಸ್ತೆಗಳ ಮೇಲೆ ನಡಿಗೆ. ಲಾಮಾಯ್ಧುರಾ ಎನ್ನುವಲ್ಲಿ ಅಲ್ಪ ಕಾಲದ ವಿಶ್ರಾಂತಿ. ಸ್ಥಳೀಯ ಅಂಗಡಿಯ ಚಹಾ ಬಹಳ ರುಚಿಯಾಗಿತ್ತು. ಹೇಗೆ ಮಾಡಿದ್ದರೋ, ಏನೆಲ್ಲಾ ಸೇರಿಸಿದ್ದರೋ ಗೊತ್ತಿಲ್ಲ.

ಡಾರ್ಜಿಲಿಂಗ್ ಗುಡ್ಡಕಾಡಿನ ಮಧ್ಯೆ ಇರುವ ಹಳ್ಳಿಗಳು ದೂರದಿಂದ ಕಾಣಲು ಆಕರ್ಷಕವಾಗಿವೆ. ಆದರೆ ವಿರಳ ಜನಸಂಖ್ಯೆಯ ಅಲ್ಲಿನ ಕಥೆ ವ್ಯಥೆ ಇತ್ಯಾದಿಗಳನ್ನು ಅಲ್ಲಿ ಹೋಗಿಯೆ ತಿಳಿಯಬೇಕಷ್ಟೆ.

ಅಲ್ಲಿಂದ ನಂತರ ಸಿಕ್ಕಿದ ಹಳ್ಳಿ ಚಿತ್ರೇ. ಸಣ್ಣ ಪುಟ್ಟ ಮನೆಗಳು, ಬುದ್ಧ ದೇವಾಲಯಗಳು ಇದ್ದ ಗುಡ್ಡದ ಮೇಲಿನ ಸಾಧಾರಣ ಜನಸಂಖ್ಯೆಯ ಹಳ್ಳಿ. ಅದೇನೋ ಮಾಮೂಲು. ಆದರೆ ಅಲ್ಲಿಂದ ನಂತರ ಡಾಮಾರು ರಸ್ತೆಯಲ್ಲಿ ನಡಿಗೆ. ಕಡಿದಾದ ಇಳಿಜಾರು. ಇದೇ ನಮಗೆ ತಾಪತ್ರಯವಾಯಿತು. ಮೊದಲೇ ತಿಳಿಸಿದಂತೆ ಬೆನ್ನ ಮೇಲೆ ಹೊರೆ ಹೊತ್ತು ಇಳಿಯುವುದೂ ಸುಲಭದ ಮಾತಲ್ಲ. ಹೇಗೋ ಮಾಡಿ ಇಳಿದು ಸ್ವಲ್ಪ ಹೊತ್ತಿಗೆ ಮಾನೇ ಭಂಜ್ಯಾಂಗ್ಗೆ ಬಂದಿಳಿದಾಯಿತು. ಅದೇ ಚಾರಣದ ಮುಕ್ತಾಯದ ತಾಣ. ಅಲ್ಲಿಂದ ನಂತರ ಮತ್ತೆ ಟಾಟಾಸುಮೋದಲ್ಲಿ ಹೆಚ್ಚೆಮ್ಮೈ ಗೆ ಪ್ರಯಾಣ.

ನನ್ನ ಅಭಿಪ್ರಾಯದಲ್ಲಿ ಭಾಗದ ಚಾರಣ ವಿಪರೀತ ಕಠಿಣವೇನೂ ಅಲ್ಲ.  ಆಕರ್ಷಕ ತಾಣಗಳ ಮುಖಾಂತರ ಸಾಗುವ ಇದು ತಕ್ಕ ಮಟ್ಟಿಗೆ ಮೃದು ಚಾರಣವೆಂದೇ ಹೇಳಬಹುದು. ಹಲವಾರು ಕಡೆ ನಮ್ಮ ಕುದುರೆಮುಖ, ಮಡಿಕೇರಿಗಳನ್ನು ಹೋಲುವ ವಾತಾವರಣ. ಆಸಕ್ತಿಯಿದ್ದಲ್ಲಿ ಯಾವ ವಯೋಮಾನದವರಿಗೂ ಹೊಂದುವ ಚಾರಣ. ಹಾಗಾಗಿ ನೀವೂ ಒಮ್ಮೆ ಪ್ರಯತ್ನಿಸಿ ನೋಡಬಹುದು. ಜೂನ್ನಿಂದ ನವೆಂಬರ್ ಭಾಗದ ಚಾರಣಕ್ಕೆ ಸೂಕ್ತ ಕಾಲ.

ಅಶೋಕವರ್ಧನ:

ಮೂರು ಕಂತುಗಳ ಈ ಡಾರ್ಜಿಲಿಂಗ್ ಕಥನಕ್ಕೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತ ಸಂಜಾತ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಉದ್ಧರಣೆಯೊಡನೆ ಮಂಗಳ ಹಾಡುತ್ತೇನೆ.

“ಆಕಾಶಾನ್ವೇಷಣೆಯನ್ನು ಹೆಚ್ಚಾಗಿ ಪರ್ವತಾರೋಹಣಕ್ಕೆ ಹೋಲಿಸುವುದು ವಾಡಿಕೆ – ಸಾಕಷ್ಟು ಎತ್ತರದ ಬೆಟ್ಟಗಳನ್ನೂ ಅಷ್ಟೇನು ಎತ್ತರದವಲ್ಲದ ಗುಡ್ಡಗಳನ್ನೂ ಹತ್ತುವುದು. ಆದರೆ ನಮ್ಮ ಪೈಕಿ ಯಾರು ತಾನೇ ಆಕಾಶ ನೀಲವಾಗಿದ್ದು ಮಾರುತ ನಿಸ್ಪಂದವಾಗಿರುವಾಗ, ಗೌರೀಶಂಕರ ಏರಿ, ಅನಂತಕ್ಕೆ ವ್ಯಾಪಿಸಿಕೊಂಡಿರುವ ಮಂಜಿನ ಜ್ವಲಂತ ಪರಿಶುಭ್ರತೆಯಲ್ಲಿ ಮತತು ನಿಶ್ಚಲ ವಾಯುವಿನ ನೀರವತೆಯಲ್ಲಿ, ಸಮಗ್ರ ಹಿಮಾಲಯ ಶ್ರೇಣಿಯನ್ನೇ ಸರ್ವೇಕ್ಷಿಸಲು ಕಲ್ಪನೆಯಲ್ಲಾದರೂ ಹವಣಿಸಿಯಾನು? ನಿಸರ್ಗ ಮತ್ತು ನಮ್ಮ ಸುತ್ತಲಿನ ವಿಶ್ವ ಕುರಿತಂತೆ ತತ್ಸದೃಶ ದರ್ಶನ ಲಭಿಸೀತೆಂದು ನಾವು ಯಾರೂ ಆಶಿಸಲಾರೆವು. ಆದರೆ ತಳದ ಕಣಿವೆಯಲ್ಲಿ ನಿಂತು, ಸೂರ್ಯ ಕಾಂಚನಗಂಗಾ ಶಿಖರ ಏರಿಬರುವುದನ್ನು ಪ್ರತೀಕ್ಷಿಸುವುದರಲ್ಲಿ ಹೀನವಾದುದಾಗಲೀ ದೀನವಾದುದಾಗಲೀ ಏನೂ ಇಲ್ಲ.” (ಉದ್ಧರಣೆ ಮುಗಿಯಿತು.) (ನೋಡಿ: ಜಿ.ಟಿ.ನಾರಾಯಣ ರಾವ್ ಬರೆದ ಸುಬ್ರಹ್ಮಣ್ಯನ್ ಚಂದ್ರಶೇಖರ್ – ವೈಜ್ಞಾನಿಕ ಜೀವನ ಚರಿತ್ರೆ) ಹೌದು, ಕಾಂಚನಗಂಗಾ ಏರಲಾಗದಿದ್ದರೂ ಅದರ ದರ್ಶನವನ್ನಾದರೂ ಮಾಡಬಹುದಲ್ಲವೇ? ಆ ಕಾರಣಕ್ಕಾದರೂ ಡಾರ್ಜಿಲಿಂಗಿಗೆ ಹೋಗಬಹುದಲ್ಲವೇ?

(ಮುಗಿಯಿತು)


No comments:

Post a Comment