29 December 2015

ನನ್ನೂರಿನ ಮಹಾನುಭಾವರು

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ
ಅಧ್ಯಾಯ ಎಂಟು
ಊರು ಅಂದ ಮೇಲೆ ಅದಕ್ಕೊಂದು ಹೆಸರು ಇರಲೇ ಬೇಕು. ಬಿಕ್ಕನಾಯ್ಕನ ಕಟ್ಟೆಯಾಗಲೀ, ಭೀಕರ ನ್ಯಾಯಕಟ್ಟೆಯಾಗಲೀ, ಬಿಕನಾಸಿ ಕಟ್ಟೆಯಾಗಲೀ (ಕೆಲವರು ಹಾಗೆ ಹೇಳುತ್ತಿದ್ದುದುಂಟು) ಅದು ಮುಖ್ಯವಾಗುವುದಿಲ್ಲ. ಜನರಿಂದ ಊರಿಗೆ ಹೆಸರೇ ವಿನಃ ಊರಿಂದ ಜನರಿಗೆ ಹೆಸರು ಬರುವುದಿಲ್ಲ. ಅಲ್ಲಿರುವ ಜನರ ಕೆಲವು ವಿಶಿಷ್ಟ ಗುಣ ನಡತೆಗಳಿಂದ ಶೌರ್ಯ ಸಾಹಸಗಳಿಂದ, ಸಹಜ ದೌರ್ಬಲ್ಯಗಳಿಂದ ತುಂಬಿ ತುಳಕುತ್ತಿರುವ ಊರು ಸರ್ವ ಜನಾಂಗದ ಶಾಂತಿಯ ತೋಟವೆಂಬ ಕವಿಮಾತಿಗೆ ಸಾಕ್ಷಿಯಾಗಿದೆ. ಹೇಗೆ ಅಂತಿರಾ?

ಇಲ್ಲಿ ಎಲ್ಲಾ ಜಾತಿ ಸಮುದಾಯದ ಜನಗಳು ಇದ್ದಾರೆ. ಮೊಗವೀರ ಕುಂಬಾರ ಸಮುದಾಯವನ್ನು ಬಿಟ್ಟು ಉಳಿದ ಎಲ್ಲಾ ಸಮುದಾಯದ ಮತಪಂಥದವರು ಕೂಡಿ ಬಾಳಿದ ಊರಿದು. ಜಿನಸಿ ಅಂಗಡಿ ಮತ್ತು ಹೋಟೆಲುಗಳು ಗೌಡ ಸಾರಸ್ವತರ ಸುಪರ್ದಿಯಲ್ಲಿದ್ದರೆ, ಸುಲೇಮಾನ ಸಾಹೇಬರ ಸೈಕಲ್ಶಾಪು, ಅಬ್ದುಲ್ಲ ಕಾಕನ ಟಿನ್ನಿನ ಅಂಗಡಿ, ಆದಂ ಸಾಹೇಬರ ಬೀಡಾ ಬೀಡಿ ಅಂಗಡಿಗಳು ಮುಸ್ಲಿಂ ಸಮುದಾಯದವರದ್ದಾಗಿತ್ತು. ಜಿನಸಿ ಅಂಗಡಿಯೊಂದು ತಿಮ್ಮಪ್ಪಣ್ಣನ ಉಸ್ತುವಾರಿಯಲ್ಲಿದ್ದು ಕೆಲ ವರ್ಷ ಚೆನ್ನಾಗಿ ನಡೆದರೂ ಮತ್ತೆ ಯಾಕೋ ಬರ್ಕತ್ತಾಗದೆ ಊರು ಬಿಟ್ಟೇ ಹೋಗಿಬಿಟ್ಟರು. ಮಿಂಗೆಲ್ ಪೊರ್ಬುಗಳ ಬಟ್ಟೆ ಅಂಗಡಿ, ಕರ್ಕೇರರ ಚಂದ್ರಾ ಕ್ಲೋತ್ ಸ್ಟೋರ್ ಜವಳಿ ಅಂಗಡಿಗಳು ಪ್ರಸಿದ್ಧವಾಗಿದ್ದವು. ಸಮಗಾರ ಬಾಬಣ್ಣನ ಮೆಟ್ಟು ಹೊಲಿಯುವ ಅಂಗಡಿ ಇತ್ತು. ಕಂಡೆಟ್ಟಿಗೆ ಹೋಗುವ ದಾರಿಯ ಮನೆಯಲ್ಲಿದ್ದ ದಾಸಯ್ಯನೂ ಊರಿನ ಸಾಂಸ್ಕೃತಿಕ ಚಹರೆಯಲ್ಲಿ ಮುಖ್ಯವಾಗುತ್ತಾನೆ. ವಾರದಲ್ಲಿ ಒಂದು ದಿನ ಶಂಖ ಜಾಗಟೆ ಹಿಡಿದು ಮನೆ ಮನೆಗೆ ಹೋಗಿ ಶಂಖ ಊದಿ, ಜಾಗಟೆ ಬಾರಿಸಿ ತನ್ನ ಡ್ಯೂಟಿ ನೆರವೇರಿಸುತ್ತಿದ್ದ. ಮನೆಯವರು ನೀಡಿದ್ದನ್ನು ಸ್ವೀಕರಿಸಿ ಮರುಮಾತಿಲ್ಲದೆ ಮತ್ತೊಂದು ಮನೆಯತ್ತ ಸಾಗುತ್ತಿದ್ದ. ದಾಸಯ್ಯನ ಮಗ ಕೃಷ್ಣ ನನ್ನ ಕ್ಲಾಸ್ಮೇಟ್ ಆಗಿದ್ದುದರಿಂದ ಅವನನ್ನು ವಿಶೇಷವಾಗಿ ಗಮನಿಸುತ್ತಿದ್ದೆ. ತಂದೆಯ ಕುಲಕಸುಬನ್ನು ಮಗ ಮುಂದುವರಿಸಲಿಲ್ಲ. ಯಾವುದೋ ಸರಕಾರಿ ಕಚೇರಿಯಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದನೆಂದು ನೆನಪು.ಶಿಕ್ಷಣ ಸಂಸ್ಕೃತಿಗೆ ಸಮಾಜ ತೆರೆದುಕೊಂಡಂತೆಲ್ಲಾ ಕುಲಕಸುಬುಗಳು ತಿರಸ್ಕೃತವಾಗುವುದು, ಇಲ್ಲವೆ ಬೇರೆ ಕುಲದವರ ವಶವಾಗುವ ಪ್ರಕ್ರಿಯೆ ನಿಧಾನವಾಗಿ ಕಳೆದ ಶತಮಾನದ ಆರಂಭದಿಂದಲೇ ಪ್ರಾರಂಭವಾಗಿತ್ತು. ಅದು ನನ್ನೂರಿನಲ್ಲೂ ಕಾಣಿಸಿಕೊಳ್ಳತೊಡಗಿತ್ತು. ಕೈಗಾರಿಕೀಕರಣ, ಜಾಗತೀಕರಣಗಳು ಸಣ್ಣ ರೂಪದಲ್ಲಿ ಆಗಲೇ ಕಾಣಿಸಿಕೊಳ್ಳತೊಡಗಿತ್ತು.
ಇದೇ ಹೊತ್ತಿಗೆ ಹೆಂಗುಸರು ಹೊಸ ದುಡಿಮೆಯ ಬಾಗಿಲುಗಳನ್ನು ತೆರೆದು ಪ್ರವೇಶಿಸಿದ್ದರು. ಮಾಣಿಕಕ್ಕನ ಪೊಟ್ಟು ಕಾಫಿ ಮತ್ತು ದೋಸೆಯ ಸಣ್ಣ ಅಂಗಡಿ. ಅದರ ಪಕ್ಕದಲ್ಲಿ ಬಾಯಮ್ಮನ ಚಾಕಣದ ಅಂಗಡಿ ಆಗ ಪ್ರಸಿದ್ಧವಾಗಿತ್ತು. ಬಾಯಮ್ಮನ ಚಾಕಣದ ಅಂಗಡಿ ಕಳ್ಳು ಕುಡಿಯುವವರಿಗೆ ಇಷ್ಟವಾದರೆ (ಆಗ ಅದರ ಪಕ್ಕದಲ್ಲೇ ಗಡಂಗು ಇತ್ತು) ಮಾಣಿಕಕ್ಕನ ಬೆಲ್ಲದ ಕಾಫಿ (ಹಾಲಿಲ್ಲದ) ಮತ್ತು ದೋಸೆ ಸರ್ವ ಜನರಿಗೂ ಮೆಚ್ಚಿಕೆಯಾಗಿತ್ತು.

ಮಾಣಿಕಕ್ಕ ದರ್ಗಾಸಜ್ಜನ ತಮ್ಮ ಕಣ್ಣಜ್ಜನ ಹೆಂಡತಿ. ಕಣ್ಣಜ್ಜನದು ಅಲೆಮಾರಿ ಸ್ವಭಾವ. ಸವಾರಿ ಹೊರಟರೆ ತಿಂಗಳುಗಟ್ಟಲೆ ಊರಿನತ್ತ ತಲೆ ಹಾಕುವುದೇ ಇಲ್ಲ. ಹೋದ ಊರಲ್ಲಿ ಸಿಕ್ಕಿದ ಕೆಲಸ ಮಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಯಾವ ಕ್ಷಣದಲ್ಲಾದರೂ ಹೊರಡಬೇಕು ಅನಿಸಿದರೆ ನಿಂತ ನಿಲುವಿಗೇ ಹೊರಟುಬಿಡುತ್ತಿದ್ದರಂತೆ. ಕೆಲವು ಕಾಲ ಗಟ್ಟದಾಚೆಯೇ ಇದ್ದರಂತೆ. ಇಂತಹ ಬೇಜವಾಬ್ದಾರಿಯ ಗಂಡನ ವರ್ತನೆಗೆ ರೋಸಿ ಹೋಗಿ ಮಾಣಿಕಜ್ಜಿ ತನ್ನ ಮೂವರು ಮಕ್ಕಳನ್ನು ಹಿಡಿದುಕೊಂಡು ತವರಿಗೆ ಬಂದವರು ಮರಳಿ ಗಂಡನ ಮನೆಗೆ ಹೋಗಲಿಲ್ಲ. ಪುಟ್ಟ ಮಕ್ಕಳನ್ನು ಅದೇ ಕಾಫಿ ದೋಸೆ ಅಂಗಡಿಯ ದುಡಿಮೆಯಿಂದ ಬೆಳೆಸಿದರು. ಇದೇ ಕಾಲಕ್ಕೆ ಮಂಗಳೂರಿನ ಬಂದರಿನಲ್ಲಿ ನಮ್ಮದೇ ಸಮುದಾಯದ ಹೆಂಗಸೊಬ್ಬರು ಊಟದ ಹೋಟೆಲಿಟ್ಟಿದ್ದರು. ಆಕೆಗೂ ಇಂತದೇ ಯಾವುದೋ ಕೌಟುಂಬಿಕ ಸಮಸ್ಯೆಗಳಿದ್ದಿರಬಹುದು. ಆಕೆಯ ಬಗ್ಗೆ ಯಾರೋ ಮೂಕರ್ಜಿಯನ್ನು ಬರೆದು ಆಗ ಅಧಿಕಾರಿಯಾಗಿದ್ದ ಬ್ರಿಟಿಷ್ ದೊರೆಗೆ ಕಳಿಸಿದರಂತೆ. ಈಕೆಯ ನಡತೆ ಸರಿಯಿಲ್ಲವೆಂದು ಅವಳಿಗೆ ಆಗದವರು ಯಾರೋ ಅರ್ಜಿ ಹಾಕಿದ್ದರಿಂದ ದೊರೆ ಮಾರುವೇಷದಲ್ಲಿ ಹೋಟೆಲಿಗೆ ಬಂದು ಹೆಂಗಸಿನ ನಡತೆ, ವರ್ತನೆ ಕಂಡು ಸಂತಸಗೊಂಡನೆಂದೂ ಮೂಕರ್ಜಿದಾರರ ಮಿಥ್ಯಾರೋಪದ ಬಗ್ಗೆ ಸಿಟ್ಟುಗೊಂಡನೆಂದೂ ಹೇಳಲಾದ ಘಟನೆ ಚರಿತ್ರೆಯಲ್ಲಿ ದಾಖಲಾಗಿದೆ.

ಅವಲಕ್ಕಿ ತಯಾರಿಸುವ ಉದ್ಯಮವನ್ನು ಮಾಡುತ್ತಿದ್ದವರು ಕಲ್ಯಾಣಿಯಕ್ಕ, ಅವಲಕ್ಕಿ ಜಿಡ್ಡೆಯನ್ನು ತುಳಿಯುವ ಕೆಲಸವನ್ನು ಅವರ ಸೊಸೆಯಂದಿರು ಮಾಡುತ್ತಿದ್ದರು. ಒಂದು ಕೈಯಲ್ಲಿ ಅಕ್ಕಿ ಹುರಿಯುತ್ತಾ ಇನ್ನೊಂದು ಕೈಯಲ್ಲಿ ಜಿಡ್ಡೆಯ ಪೆಟ್ಟು ಸಮವಾಗಿ ಬೀಳುವಂತೆ ಎಚ್ಚರವಹಿಸುತ್ತಾ ಮಾಡುವ ಅವರ ಕೈಚಳಕವನ್ನು ನಾನು ಗಂಟೆಗಟ್ಟಲೆ ಕೂತು ನೋಡುತ್ತಿದ್ದುದುಂಟು. ಕೆಲಸವನ್ನು ಗಂಡಸರು ಮಾಡುತ್ತಿರಲಿಲ್ಲ. ಯಾಕೆಂದು ಗೊತ್ತಿಲ್ಲ.ಕಳೆದ ಶತಮಾನದ ಪ್ರಾರಂಭದಿಂದಲೇ ಇಲ್ಲಿಯ ಹಂಚಿನ ಕಾರ್ಖಾನೆ, ಕಾಫಿ ಕಾರ್ಖಾನೆ, ಗೇರುಬೀಜ ಕಾರ್ಖಾನೆಗಳಲ್ಲಿ ಶೂದ್ರ ಸಮುದಾಯದ ಹೆಂಗಸರು ದುಡಿಯುತ್ತಿದ್ದರು. ಮೇಲ್ವರ್ಗದ ಹೆಂಗಸರು ಕಾರ್ಖಾನೆಯ ಕೆಲಸವಾಗಲೀ, ಬೀಡಿ ಉದ್ಯಮವಾಗಲೀ ಕೈಗೊಂಡದ್ದನ್ನು ಕಾಲದಲ್ಲಿ ನಾನು ಕಂಡಿಲ್ಲ. ಹೆಂಗಸರಿಗೆ ಮೊತ್ತಮೊದಲು ಅವಕಾಶವನ್ನು ನೀಡಿದ್ದು ಮಿಶನರಿಗಳು ಸ್ಥಾಪಿಸಿದ ಕಾರ್ಖಾನೆಗಳು. ಶತಮಾನದ ಪಲ್ಲಟ ಹೀಗೆ ಪ್ರಾರಂಭವಾಯಿತು ನನ್ನೂರಿನಲ್ಲಿ. ನನ್ನೂರಲ್ಲೇ ಗೇರುಬೀಜದ ಕಾರ್ಖಾನೆಗಳೆರಡು ಮತ್ತು ಕಾಫಿ ಕಾರ್ಖಾನೆಯೊಂದು ಹೆಂಗಸರಿಗೆ ದುಡಿಮೆಗೆ ಆಶ್ರಯ ನೀಡಿತು.

ನಾಯ್ಗರ್ಲೇನ್ನಲ್ಲಿ ಸಂಕಪ್ಪ ಕೊಟ್ಟಾರಿಯ ಮಗ್ಗಗಳ ಲಟಲಟ, ಕಟಕಟ ಶಬ್ದದ ನಾದ ಕೇಳುತ್ತಿತ್ತು. ಮಾಲೀಕರು ಸಂಕಪ್ಪಣ್ಣನಾದರೂ ಅಲ್ಲಿ ನೇಯುವವರು ಶೆಟ್ಟಿಗಾರರು. ಗಾಣಿಗ, ಮಡಿವಾಳ ಸಮುದಾಯದವರು ತಮ್ಮ ಕುಲಕಸುಬನ್ನು ಮರೆತು ಕೂಲಿಕಾರ್ಮಿಕರಾಗಿದ್ದವರೇ ಹೆಚ್ಚು. ನನ್ನೂರಲ್ಲಿ ದೋಬಿ ಮತ್ತು ಇಸ್ತ್ರಿ ಅಂಗಡಿಯಿಟ್ಟವರು ಮೋಂತು ಪೊರ್ಬುಗಳು. ಗಾಣಿಗರ ನಾರಾಯಿಣಣ್ಣ ಮಾತ್ರ ಬೇಕರಿ ಉದ್ಯಮದಲ್ಲಿ ನಿರತರು. ಮರದ ಕೆಲಸ, ಚಿನ್ನದ ಕೆಲಸ ಮಾಡುವ ವಿಶ್ವಕರ್ಮ ಸಮುದಾಯದ ಹಲವರು ವೃತ್ತಿನಿರತರಾಗಿದ್ದರೆ ಕೆಲವರು ಬೇರೆ ಬೇರೆ ಉದ್ಯೋಗಗಳಲ್ಲಿ ನಿರತರಾಗಿದ್ದರು.

ಗೊಲ್ಲ ಸಮುದಾಯದ ರಾಜೀವಿ ಅಕ್ಕನನ್ನು ತಿಳಿಯದವರಾರು? ಪ್ರತಿದಿನ ತಲೆ ಮೇಲೆ ಮಜ್ಜಿಗೆಯ ಮಡಿಕೆಯನ್ನು ಹೊತ್ತು ಹಂಪನಕಟ್ಟೆಗೆ ಹೋಗುತ್ತಿದ್ದ ಠೀವಿಯನ್ನು ನನ್ನ ಸಮಕಾಲೀನರು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಅದೂ ನಡೆದುಕೊಂಡೇ. ಇತ್ತೀಚೆಗೆ ಎಂದರೆ ೧೫ ವರ್ಷಗಳ ಹಿಂದಿನವರೆಗೂ ಮಜ್ಜಿಗೆ ವ್ಯಾಪಾರಕ್ಕೆ ಹೊರಡುತ್ತಿದ್ದರು. ಅವರ ದೇಹಕ್ಕೆ ಮುಪ್ಪು ಬಂದಿದೆ. ಆದರೆ ಅವರ ಸಪೂರ ನೀಳಕಾಯ, ವಿಶಿಷ್ಟ ರೀತಿಯಲ್ಲಿ ತಲೆಯ ಕೂದಲನ್ನು ಕಟ್ಟುವ ರೀತಿ, ಮೊಣಕಾಲವರೆಗೆ ಸೀರೆಯುಡುವ ವಿಶಿಷ್ಟ ಶೈಲಿ, ಗಂಡಸರೊಡನೆ ಮಾತಾಡುವ ದಿಟ್ಟತನದ ದೃಶ್ಯ ನನ್ನ ಕಣ್ಣ ಮುಂದಿದೆ. ಅವರಿಗೆ ಸಣ್ಣ ಪ್ರಾಯದಲ್ಲೇ ಮದುವೆಯೇನೋ ಆಗಿತ್ತು. ಬೇರೆ ಹೆಣ್ಣಿನ ಸಂಪರ್ಕದಿಂದ ಗಂಡ ಇವರನ್ನು ತೊರೆದ ಮೇಲೆ ರಾಜೀವಿ ಅಕ್ಕ ಕೊರಗಲಿಲ್ಲ, ಕುಗ್ಗಲಿಲ್ಲ. ತನ್ನ ತಮ್ಮನ ಕುಟುಂಬದೊಂದಿಗೆ ಒಂದೆರಡು ದನ ಸಾಕುತ್ತಾ ಮಜ್ಜಿಗೆ, ಬೆಣ್ಣೆ, ತುಪ್ಪ ಮಾರಾಟ ಮಾಡುತ್ತಾ ಹೊಂದಿಕೊಂಡು ಬಾಳುತ್ತಿದ್ದರು.

ಪಿಯರ್ಸ್ ಲೆಸ್ಲಿ ಬೀಜದ ಕಾರ್ಖಾನೆಯ ಹಿಂದಿನ ಭಾಗದಲ್ಲಿದ್ದ ಕಾಡಿನಲ್ಲಿ ಕೊರಗರ ಮನೆಗಳಿದ್ದವು. ಬಿದಿರಿನ ಬುಟ್ಟಿ ಇತ್ಯಾದಿ ಹೆಣೆಯುವ ಕುಶಲ ಕಲೆ ಅವರದು. ಒಮ್ಮೆ ನಾನು ಸುಶೀಲಕ್ಕನ ಜೊತೆಗೆ ಯಾರದೋ ಮನೆಗೆ ಹೋಗುವಾಗ ಅವರ ಮನೆಯಲ್ಲಿ ಮಾಂಸದ ಉದ್ದ ಸೀಳುಗಳನ್ನು ಒಣಗಲು ಹಾಕಿದ್ದನ್ನು ಕಂಡಿದ್ದೆ. ಅಲ್ಲಿಯ ದಂಪತಿಗಳು ನನ್ನ ನೆನಪಿನಕೋಶದಲ್ಲಿ ಭದ್ರವಾಗಿದ್ದಾರೆ. ಇಬ್ಬರದೂ ಗಟ್ಟಿಮುಟ್ಟಾದ ದೇಹ. ಅವರ ಉಡುಗೆ ತೊಡುಗೆಗಳು ಕುತೂಹಲ ಹುಟ್ಟಿಸುವಂತಿತ್ತು. ಅವರ ನೆನಪಾಗುವುದಕ್ಕೆ ಕಾರಣವೇನೆಂದರೆ ಅವರಿಬ್ಬರೂ ಹಣ್ಣು ಹಣ್ಣು ಮುದುಕರಾಗುವವರೆಗೂ ಜೊತೆ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಅಂತಹ ಅನುರೂಪದ ಸರಸ ದಾಂಪತ್ಯ ಅವರದು. ಹೋಟೆಲುಗಳಲ್ಲಿ ಅವರಿಗೆ ಒಳಗೆ ಹೋಗಲಿಕ್ಕಿರಲಿಲ್ಲ. ಹೊರಗೆ ಸಣ್ಣ ಕಿಟಕಿಯಲ್ಲಿ ಅವರಿಗೆ ಬೇರೆಯೇ ಗ್ಲಾಸು ಇತ್ತು. ಅದರಲ್ಲಿ ಅವರಿಗೆ ಚಾ ಹೊಯ್ಯುತ್ತಿದ್ದರು. ಕುಡಿದ ಮೇಲೆ ಅವರೇ ತೊಳೆದು ಇಡುತ್ತಿದ್ದರು. ಇಂತಹ ಅಸ್ಪೃಶ್ಯತೆ ಇದ್ದ ಕಾಲದಲ್ಲೇ ನನ್ನೂರಲ್ಲಿ ಇನ್ನೂ ಒಂದು ವೈಚಿತ್ರ್ಯವಿತ್ತು. ಪಾನ ನಿಷೇಧ ಇರುವ ಕಾಲದಲ್ಲಿ ಅಲ್ಲಲ್ಲಿ ಕೆಲವು ಚಿಲ್ಲರೆ ಗಡಂಗುಗಳಿದ್ದುವು. ಅದು ಓಪನ್ಬಾರ್ ಇದ್ದಂತೆ. ಯಾವುದಾದರೂ ಮನೆಯ ಹಿತ್ತಲೋ ಗೋಡೆಯ ತೂತುಗಳಲ್ಲೋ ಬಾಟ್ಲಿಗಳನ್ನು ಅಡಗಿಸಿಡುತ್ತಿದ್ದರು. ಆಕಾಂಕ್ಷಿಗಳು ಬಂದ ಕೂಡಲೇ ಗ್ಲಾಸಿಗೆ ಹೊಯ್ದು ಕೊಡುವವರಿದ್ದರು. ಸ್ಥಳ ಕೆಲವೊಮ್ಮೆ ಬದಲಾಗುತ್ತಿದ್ದರೂ ಯಾವ ಮಾಯಕದಲ್ಲೋ ಮದ್ಯವ್ಯಸನಿಗಳು ಓಪನ್ಬಾರನ್ನು ಪತ್ತೆಹಚ್ಚುತ್ತಿದ್ದರು. ಕೆಲಸಕ್ಕೆ ಸಾಮಾನ್ಯವಾಗಿ ಸಣ್ಣ ಪ್ರಾಯದ ಹುಡುಗರೇ ಇರುತ್ತಿದ್ದರು. ಯಾಕೆಂದರೆ ಪೊಲೀಸರ ರೈಡು ಆದಾಗ ಓಟಕ್ಕೆ ಒಳ್ಳೆ ಸ್ಪೀಡ್ ಬೇಕಿತ್ತಲ್ಲಾ, ಅದಕ್ಕೆ. ಅಲ್ಲಿ ಇರುವುದು ಒಂದೇ ಗ್ಲಾಸು. ಕುಡಿಯುವವರು ಕಚ್ಚಿಯೇ ಕುಡಿಯುತ್ತಿದ್ದರು. ತೊಳೆಯುವ ಪ್ರಶ್ನೆಯೇ ಇಲ್ಲ. ಸರ್ವರಿಗೂ ಇದೊಂದೇ ಗ್ಲಾಸಲ್ಲಿ ಶರಾಬು ಸರಬರಾಜು ಮಾಡಲಾಗುತ್ತಿತ್ತು. ಕೊರಗ ದಂಪತಿಗಳೂ ಓಪನ್ ಬಾರ್ಗೆ ಬರುತ್ತಿದ್ದರು. ಇದೆಲ್ಲಾ ನಮ್ಮ ಮನೆಯ ಮುಂದಿನ ಓಣಿಯಲ್ಲಿ ನಿತ್ಯ ವರ್ತಮಾನವಾಗಿತ್ತು. ಇದಕ್ಕೇ ನಾನು ವಿಚಿತ್ರ ಅಂದದ್ದು. ಕುಡಿತಕ್ಕೆ ಮೈಲಿಗೆ ಇಲ್ಲ ಹಾಗೆಯೇ ಹಾದರಕ್ಕೂ ಅಸ್ಪೃಶ್ಯತೆಯ ಶಾಪ ತಟ್ಟುವುದಿಲ್ಲವೆಂಬ ಸತ್ಯ ಗೊತ್ತಾಗಿ ನಾನು ಗೊಂದಲಕ್ಕೊಳಗಾಗುತ್ತಿದ್ದೆ.

ಕ್ರೈಸ್ತ ಸಮುದಾಯದ ಕ್ಯಾಸ್ತಲಿನೋ ಕುತಿಞ ಬಂಧುಗಳು ಗಟ್ಟದಲ್ಲಿ ತೋಟವಿದ್ದ ಆರ್ಥಿಕ ಸ್ಥಿತಿವಂತರು. ಪ್ರೊಟೆಸ್ಟೆಂಟರ ಕುಟುಂಬ ನಮಗೆಲ್ಲಾ ತುಂಬಾ ಆತ್ಮೀಯವಾಗಿತ್ತು. ಮೂಲತಃ ಉಡುಪಿಯವರಾದ ಗಂಡಸು ಡ್ರೈವರಾಗಿ ಕೆಲಸ ಮಾಡುತ್ತಿದ್ದರು. ಗಂಡ ಹೆಂಡತಿ ಮತ್ತು ಇಬ್ಬರು ಪುಟ್ಟ ಗಂಡು ಮಕ್ಕಳ ಸಂಸಾರ. ಹೆಂಡತಿ ಬ್ರಾಹ್ಮಣ ಸಮುದಾಯದ ಬಾಲ ವಿಧವೆಯಾಗಿದ್ದರು. ತೀರಾ ದಾರಿದ್ರ್ಯದ ಬಡ ವಿಧವೆಯ ಕುಟುಂಬಕ್ಕೆ ಮಿಶನರಿಗಳು ಆಸರೆ ನೀಡಿದರು. ಮಿಶನರಿಗಳಿಂದ ಸಹಾಯ ಪಡೆದದ್ದನ್ನು ಕಂಡು ಬಂಧುಗಳೆಲ್ಲಾ ಅವರನ್ನು ಜಾತಿಯಿಂದ ಬಹಿಷ್ಕಾರ ಹಾಕಿದರಂತೆ. ಹಾಗೆ ಬಂದು ಆಶ್ರಮಕ್ಕೆ ಸೇರಿದ ಅವರನ್ನು ಇದೇ ಡ್ರೈವರಿಗೆ ವಿವಾಹ ಮಾಡಿಕೊಟ್ಟರು ಆಶ್ರಮದವರು. ಖಾಸಗಿ ಕಂಪೆನಿಯಲ್ಲಿ ಡ್ರೈವರನಾದ ಗಂಡನಿಗೆ ವರ್ಗವಾಗಿ ನಮ್ಮ ಬಿಕರ್ನಕಟ್ಟೆಗೆ ಬಂದು ಡಾ. ಸುವರ್ಣರ ಕಂಪೌಂಡಿನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಯುಸ್ತಿನ್, ಗ್ಲ್ಯಾಡ್ಸನ್ ಎಂಬ ಅವರ ಇಬ್ಬರು ಗಂಡುಮಕ್ಕಳು ಮುದ್ದಾಗಿದ್ದರು ಮಾತ್ರವಲ್ಲದೆ ಬಹಳ ಪ್ರತಿಭಾವಂತರಾಗಿದ್ದರು. ಸಂಗೀತ ಮತ್ತು ಪಕ್ಕವಾದ್ಯ ನುಡಿಸುವುದರಲ್ಲಿ ಅವರದು ಏಕಲವ್ಯ ಸಾಧನೆ. ಸಣ್ಣ ಪ್ರಾಯದಲ್ಲೇ ಅನೇಕ ಸಂಗೀತ ಉಪಕರಣಗಳನ್ನು ಬಾರಿಸುವುದನ್ನು ಕಲಿತು ಕಾರ್ಯಕ್ರಮ ನೀಡುತ್ತಿದ್ದುದು ನಮ್ಮ  ಊರವರನ್ನೆಲ್ಲಾ ಬೆರಗುಗೊಳಿಸುತ್ತಿತ್ತು. ನಮ್ಮೂರ ಯುವಕ ಸಂಘದಲ್ಲಿ ಅವರ ಪ್ರತಿಭೆಗೆ ಸಾಕಷ್ಟು ಅವಕಾಶ ಸಿಕ್ಕಿತು.

ಬ್ರಾಹ್ಮಣ ಸಮುದಾಯದವರ ಎರಡು ಮನೆಗಳ ಬಗ್ಗೆ ಸಾಕಷ್ಟು ನೆನಪುಗಳಿವೆ. ಡಾ. ಕೆ.ಜಿ. ರಾವ್ ಎಂಬವರು ತನ್ನ ತಾಯಿಯೊಂದಿಗೆ ದೊಡ್ಡ ಮನೆಯಲ್ಲಿ ಬಿಕರ್ನಕಟ್ಟೆಯ ನಾಯ್ಗರ್ ಲೇನಿನಲ್ಲಿ ವಾಸವಾಗಿದ್ದರು. ತಾಯಿ ತೀರಿದ ಮೇಲೆ ದೀರ್ಘ ಕಾಲದವರೆಗೆ ದೊಡ್ಡ ಮನೆಯಲ್ಲಿ ಒಂಟಿಯಾಗಿಯೇ ಬದುಕುತ್ತಿದ್ದರು. ಅವರ ಹೆಸರಿನ ಹಿಂದೆ ಡಾಕ್ಟರ್ ಎಂಬ ಉಪಾಧಿಯು ಹಿಂದಿನ ಕಾಲದ ಅಲೋಪತಿ ಪದವಿಯದಾಗಿತ್ತು. ಆದರೆ ಅವರು ಯಾರಿಗೂ ಔಷಧಿ ಕೊಟ್ಟಿಲ್ಲ. ಅವರ ಬಳಿಗೆ ಅದಕ್ಕಾಗಿ ಯಾರೂ ಹೋಗುತ್ತಿರಲಿಲ್ಲ. ಒಂದು ಬಣ್ಣ ಮಾಸಿದ ಮುಂಡು, ಅರ್ಧ ತೋಳಿನ ಶರ್ಟ್ ಹಾಕಿ ಗಡಿಗೆ ಮುಖ ಹೊತ್ತು ನಮ್ಮ ಕಣ್ಮುಂದೆ ಯಾವಾಗಲೂ ಕಾಣಿಸುತ್ತಿದ್ದರು. ನೆರೆಕರೆಯಲ್ಲಿ ಯಾರಲ್ಲೂ ಅವರು ಮಾತಾಡಿದ್ದು ಕಾಣೆ. ಅವರ ನಗುಮುಖವನ್ನೂ ನಾನು ಕಂಡಿಲ್ಲ. ಯೌವನದಲ್ಲಿ ಘಟಿಸಿದ ಭಗ್ನಪ್ರಣಯದ ಪರಿಣಾಮದಿಂದ ಖಿನ್ನತೆಗೊಳಗಾದರಂತೆ ಎಂದು ಹೇಳುವುದು ಕೇಳಿದ್ದೆ. ಅದಕ್ಕಾಗಿ ಅವರು ಮನುಷ್ಯರೊಂದಿಗೆ ಬೆರೆಯುವುದನ್ನೇ ಕಡಿಮೆ ಮಾಡಿದ್ದರು ಎಂಬ ಕತೆ ಅವರ ಒಂಟಿತನದ ಹಿಂದೆ ಇದೆಯೆಂದು ಹೇಳುತ್ತಾರೆ. ಆದರೆ ನಮ್ಮೂರಿನ ಗೌಡ ಸಾರಸ್ವತರ ಜಿನಸಿ ಅಂಗಡಿ (ಅಳಿಕೆ ಅಂಗಡಿ)ಯಲ್ಲಿ ಪ್ರತಿನಿತ್ಯ ಅವರಿಗೊಂದು ಡ್ಯೂಟಿ ಇತ್ತು. ಅದು ಡಾಕ್ಟರೇ ಸ್ವ ಇಚ್ಛೆಯಿಂದ ಮಾಡುತ್ತಿದ್ದ ಕೆಲಸ. ಹಿಂದೆ ಅಂಗಡಿಯಲ್ಲಿ ಕಾಗದದಲ್ಲಿ ಸಾಮಾನು ಕಟ್ಟಿಕೊಡಲು ಸೆಣಬಿನ ದಾರವನ್ನು ಉಪಯೋಗಿಸುತ್ತಿದ್ದರು. ಅದಕ್ಕಾಗಿ ಡಾಕ್ಟರು ಗೋಣಿಚೀಲವನ್ನು ಬಿಡಿಸಿ ದಾರವನ್ನು ಉಂಡೆ ಮಾಡಿಕೊಡುವ ಕೆಲಸ ಮಾಡುತ್ತಿದ್ದರು. ಇದೆಂತಹ ಅನುಬಂಧ! ಇದನ್ನು ವಿಧಿಲಿಖಿತ ಎನ್ನೋಣವೇ? ಅವರಿಗೆ ಜೀವನಕ್ಕೇನೂ ಆರ್ಥಿಕ ಕೊರತೆಯಿರಲಿಲ್ಲ. ಸಾಕಷ್ಟು ಆಸ್ತಿ ಇತ್ತು. ಆದರೆ ಅವರು ಡಾಕ್ಟರ್ ವೃತ್ತಿಯನ್ನು ಕೈಗೊಳ್ಳದಿರಲು ಕಾರಣವೇನು ಎಂದು ಗೊತ್ತಿಲ್ಲ. ಅದಕ್ಕೂ ಏನಾದರೂ ಕಾರಣಗಳಿರಬಹುದು. ಒಬ್ಬ ಕೂಲಿಯಾಳಿನಂತೆ ಅಂಗಡಿಯಲ್ಲಿ ಕೂತು ಕೆಲಸ ಮಾಡುವುದನ್ನು ಕಂಡು ನನ್ನ ಮನಸ್ಸು ಮರುಗುತ್ತಿತ್ತು. ಕೂಲಿ ಕೆಲಸಕ್ಕಾಗಿ ಅಷ್ಟು ವರ್ಷ ಡಾಕ್ಟರ್ ಪದವಿ ಪಡೆಯಬೇಕಾಯಿತೇ? ಬದುಕೊಂದು ಕೌತುಕಗಳ ಸರಮಾಲೆ ಎಂದು ಹೇಳುವುದು ಇದಕ್ಕೇ ಇರಬಹುದೇ?

ಇನ್ನು ನಮ್ಮ ನೆಟ್ಟಾರ್ ಭಟ್ಟರು (ಜಿ.ಕೆ. ನೆಟ್ಟಾರ್) ನಮ್ಮೂರಿನ ಪ್ರಗತಿಯಲ್ಲಿ ಕೈಜೋಡಿಸಿದವರು. ಅವರಿಗೆ ಬಿಕರ್ನಕಟ್ಟೆಯಲ್ಲಿ ಬೀಡಿ ಬ್ರಾಂಚ್ ಇತ್ತು. ನಾನು ಅವರದೇ ಬ್ರಾಂಚಿನ ಉದ್ಯೋಗಿಯಾದುದರಿಂದ ನನಗೆ ನಿಕಟ ಸಂಪರ್ಕ. ವಿಚಾರವಾದಿಯೂ, ಸರಳ ಜೀವಿಯೂ ಆಗಿದ್ದ ಅವರ ಮಾತುಗಳೆಂದರೆ ಒಂದು ಪೆಟ್ಟು ಎರಡು ತುಂಡು. ನಮ್ಮೂರ ಓಣಿಯಲ್ಲಿ ಆಗಾಗ ನಾಗರಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ಜನಸಂಚಾರವಿರುವ, ಮಕ್ಕಳು ಸದಾ ಓಡಾಡುವ ಜಾಗದಲ್ಲಿ ಕಾಣಿಸಿಕೊಂಡು ಗಾಬರಿ ಹುಟ್ಟಿಸುತ್ತಿದ್ದ ನಾಗರಹಾವಿನ ಉಪಟಳವನ್ನು ಕಂಡು ಭಟ್ಟರು ರೋಸಿಹೋದರು. ಒಂದು ದಿನ ಹಗಲಲ್ಲಿ ಕಂಡ ನಾಗನನ್ನು ಒಂದೇ ಪೆಟ್ಟಿನಿಂದ ಕೊಂದುಬಿಟ್ಟರು. ಬಿಕರ್ನಕಟ್ಟೆಯ ಮಂದಿ ಭಟ್ಟರ ಕೃತ್ಯವನ್ನು ಕಂಡು ಬೆಚ್ಚಿಬಿದ್ದರು. ಯಾಕೆಂದರೆ ಹಾವು ಸತ್ತದ್ದನ್ನು ನೋಡಿದರೂ ಪ್ರಾಯಶ್ಚಿತ್ತ ಮಾಡಬೇಕೆಂಬ ನಂಬಿಕೆ ಹಿಂದುಗಳಲ್ಲಿತ್ತು. ಆದುದರಿಂದ ``ಇವನು ಭಟ್ಟನೇ ಅಲ್ಲ, ಕುಷ್ಠ ಹಿಡಿದು ಸಾಯುತ್ತಾನೆ. ವರ್ಷದೊಳಗೆ ನಾಗನ ದೋಷ ಕಾಣಿಸಿಕೊಳ್ಳುತ್ತದೆ. ನಾಗನ ಜೋಡಿಯೋ ಸಂತತಿಯೋ ಅವರನ್ನು ಇಂದಲ್ಲ ನಾಳೆ ಹುಡುಕಿ ಬಂದು ಕೊಲ್ಲುತ್ತದೆ. ಭಟ್ಟ ಅನ್ನ ನೀರಿಲ್ಲದೆ ಸಾಯುತ್ತಾನೆ''. ಹೀಗೆ ಊರ ಜನ ಸಹಸ್ರ ನಾಮಾರ್ಚನೆ ಮಾಡಿದರು. ಅವರ ಮುಂದೆ ನಿಂತು ಅಲ್ಲ, ಹಿಂದಿನಿಂದ. ಯಾಕೆಂದರೆ ಅವರ ಮುಂದೆ ನಿಂತು ಮಾತಾಡಲು ಯಾರಿಗೂ `ಬ್ಯಾಟರಿ' ಇರಲಿಲ್ಲ. ಭಟ್ಟರ ಕುಟುಂಬದಲ್ಲಿ ಜೋರಾಗಿ ಕೆಮ್ಮಿದರೂ, ಸೀನಿದರೂ ಕಾತರದಿಂದ ಕಾಯುವ ಮಂದಿ ಇದ್ದರು. ``ಅಗೋ ನೋಡು, ಶಾಪ ತಟ್ಟದೇ ಬಿಡುತ್ತದಾ'' ಎಂದು ಹೇಳುವ ಸಂದರ್ಭಕ್ಕಾಗಿ ಕಾಯುವ ನೂರಾರು ಮಂದಿ ಊರಲ್ಲಿದ್ದರು. ವಿಶೇಷವೆಂದರೆ ಅವರೆಲ್ಲಾ ಕಾದದ್ದೇ ಬಂತು. ಅವರ ಮಗನೊಬ್ಬ ರ್ಯಾಂಕ್ ವಿದ್ಯಾರ್ಥಿಯಾಗಿ ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಪ್ರಸಿದ್ಧನಾದರೆ ಉಳಿದ ಹೆಣ್ಣುಮಕ್ಕಳೆಲ್ಲಾ ಅತ್ಯಂತ ಪ್ರತಿಭಾವಂತರಾಗಿ ಅತ್ಯುತ್ತಮ ಅಂಕ ಗಳಿಸಿದ್ದಲ್ಲದೆ ಬ್ಯಾಂಕ್ ಉದ್ಯೋಗಿಯಾಗಿಯೂ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸಿಯೂ ನೆಮ್ಮದಿಯ ಬದುಕು ಗಳಿಸಿದರು. ಉತ್ತಮ ಆರೋಗ್ಯ ಭಟ್ಟರಿಗೆ ವರವಾಗಿ ಲಭಿಸಿತ್ತು. ಹಾಗಾಗಲು ಅವರ ಜೀವನಶೈಲಿಯೂ ಕಾರಣ. ಕಾಯಕದಲ್ಲಿ ಮೇಲು, ಕೀಳು ಎಂಬುದು ಇಲ್ಲವೆಂದು ದೃಢವಾಗಿ ನಂಬಿದ ಭಟ್ಟರ ಜೀವನೋತ್ಸಾಹವೂ, ಜೀವನಪ್ರೀತಿಯೂ ಅನುಕರಣೀಯವಾಗಿತ್ತು. ಕಕ್ಕುಸುಗುಂಡಿ ತುಂಬಿದರೆ ಎಲ್ಲರೂ ಕರೆ ಮಾಡಿ ಕಾಯುವುದು ಪೌರಕಾರ್ಮಿಕರನ್ನು ಅಲ್ಲವೇ? ಭಟ್ಟರು ತಾನೇ ಕಕ್ಕಸು ಗುಮ್ಡಿಗೆ ಇಳಿದು ಒಣಗಿ ಕಪ್ಪಾದ ಮಲವನ್ನು ತೆಗೆದು ಹೊರ ಹಾಕಿದಾಗ ಊರವರು ಬೆಕ್ಕಸ ಬೆರಗಾಗಿ ನೋಡಿದ್ದುಂಟು. ಕಕ್ಕುಸಿನ ಚೀಲವನ್ನು ದೇಹದಲ್ಲಿ ಹೊತ್ತುಕೊಂಡು ತಿರುಗುವ ನಮಗೆ ಅದು ಹೊರಗೆ ಬಂದಾಗ ಮಾತ್ರ ಯಾಕೆ ಹೇಸಿಗೆಯಾಗಬೇಕು? ನಮ್ಮದೇ ಮಲವನ್ನು ಇನ್ನೊಬ್ಬರಿಂದ ತೆಗೆಸುವುದು ಪರಮ ಪಾತಕವೆಂದು ಭಟ್ಟರು ವಾದಿಸುತ್ತಿದ್ದರು. ಪಕ್ಕಾ ನಾಸ್ತಿಕನಂತೆ ಮಾತಾಡುವ ಇವರು ಅಪ್ಪಟ ಮಾನವತಾ ಪ್ರೇಮಿ. ಇಂತಹವರು ಕೋಟಿಗೊಬ್ಬರೂ ಸಿಗಲಾರರು. ಇಂತಹ ಮಹಾನುಭಾವರಿಂದ ನನ್ನೂರಿಗೆ ಗೌರವ ಬಂತು.ಅವರ ಹಿರಿಮಗಳಿಗೆ ಮದುವೆ ಎಂಬ ಸುದ್ದಿಯಾಯಿತು. ಮದುವೆಯ ದಿನ ನಾವೆಲ್ಲಾ ಕಾತರದಿಂದ ದಿಬ್ಬಣ ಹೊರಡುವುದನ್ನು ಕಾಯುತ್ತಿದ್ದೆವು. ಎಂದಿನಂತೆ ಕಾಲೇಜಿಗೆ ಹೊರಡುವಂತಿದ್ದ ಮದುಮಗಳು ಕಾರನ್ನೇರಿದ್ದನ್ನು ಕಂಡಾಗ ನಾವು ಮೂಗಿನ ಮೇಲೆ ಬೆರಳಿಟ್ಟೆವು. ಬಾಜಾ ಭಜಂತ್ರಿಗಳಿಲ್ಲದೆ, ಚಿನ್ನ, ಒಡವೆ, ಸೀರೆ, ಹೂಗಳ ಪ್ರದರ್ಶನವಿಲ್ಲದೆ ಸರಳ ರೀತಿಯಲ್ಲಿ ಹೀಗೂ ಮದುವೆ ಮಾಡಬಹುದೆಂಬುದನ್ನು ಮಾಡಿ ತೋರಿಸಿ ಮಾದರಿಯಾದವರು ಭಟ್ಟರು. ನನ್ನಂತಹವರಲ್ಲಿ ಒಂದು ವೈಚಾರಿಕ ಜಾಗೃತಿಯನ್ನು ಮೂಡಿಸಿದ ಭಟ್ಟರು ಊರವರ ಮಟ್ಟಿಗೆ ಕೆಲವು ದಿನ ನಾಲಗೆಗೆ ಕವಳವಾದರು. ಕೆಲವರಂತೂ ಅದು ಮದುವೆಯೇ ಅಲ್ಲ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ದೇವರು, ದೇವಸ್ಥಾನ, ಗುರುಪೀಠಗಳನ್ನು ತಮ್ಮ ಬದುಕಿನ ವಲಯದಿಂದಾಚೆಗೆ ಬಹಿಷ್ಕರಿಸಿದ್ದ ಭಟ್ಟರು ಒಳ್ಳೆಯತನ ಮತ್ತು ಸತ್ಕಾರ್ಯಗಳಲ್ಲೇ ನೆಮ್ಮದಿಯನ್ನು ಕಂಡಿದ್ದರು. ಇವರ ಬೀಡಿ ಬ್ರಾಂಚಿನ ಪಕ್ಕದಲ್ಲಿದ್ದ ಚಂದ್ರಾ ಕ್ಲೋತ್ ಸ್ಟೋರಿನ ಮಾಲಕ ಕರ್ಕೇರರು ಮತ್ತು ಇವರು ಸಮಾನ ಚಿಂತನೆಯುಳ್ಳವರು. ಊರು ಮತ್ತು ದೇಶದ ಸಾಮಾಜಿಕ ಸ್ಥಿತಿ ಹಾಗೂ ರಾಜಕೀಯದ ಬಗ್ಗೆ ಇವರಿಬ್ಬರೂ ವಿಚಾರ ವಿಮರ್ಶೆ ಮಾಡುತ್ತಿದ್ದರು. ಗೋಷ್ಠಿಯಲ್ಲಿ ಕೆಲವೊಮ್ಮೆ ನನ್ನ ಅಪ್ಪನೂ ಭಾಗಿಯಾಗುತ್ತಿದ್ದುದುಂಟು. ಮನೆಗೆ ಬಂದು ನನ್ನಲ್ಲಿ ಚರ್ಚೆಯ ವರದಿ ಒಪ್ಪಿಸುತ್ತಿದ್ದರು. ಆಗ ಅದು ನನಗೆ ಅರ್ಥವಾಗದಿದ್ದರೂ ನಾನು ತಿಳಿದುಕೊಳ್ಳಬೇಕಾದ ಹಲವು ಜ್ಞಾನಶಾಖೆಗಳಿವೆ ಎಂಬುದನ್ನು ನನಗೆ ತೋರಿಸಿಕೊಟ್ಟ ಕ್ಷಣಗಳಿವು. ನಾನೂ ಹೀಗೆ ತುಂಬಾ ಓದಿಕೊಂಡು ಜ್ಞಾನ ಗಳಿಸಿಕೊಳ್ಳಬೇಕೆಂಬ ಆಕಾಂಕ್ಷೆಗೆ ಪ್ರೇರಣೆ ನೀಡಿದ ಸಂದರ್ಭವದು. ನಮ್ಮ ಜೀವನವು ಸಾರ್ಥಕವಾಗುವುದು ಎಷ್ಟು ವರ್ಷ ಬದುಕಿದೆವು ಎಂದು ಲೆಕ್ಕ ಹಾಕುವುದರಿಂದಲ್ಲ. ವರ್ಷಗಳಿಗೆ ಜೀವಂತಿಕೆಯನ್ನು, ಚೈತನ್ಯವನ್ನು, ಸಹಿಷ್ಣುತೆಯನ್ನು, ಮಾನವೀಯತೆಯನ್ನು ತುಂಬಿಸಿಕೊಳ್ಳುವುದರಿಂದ. ಇಂತಹ ಸಮೃದ್ಧ ಬದುಕಿನಿಂದ ದೀರ್ಘ ಕಾಲ ಬಾಳಿದ ನೆಟ್ಟಾರ್ ಭಟ್ಟರು ನನಗೆ ಪ್ರಾತಃಸ್ಮರಣೀಯರು.
ನನ್ನ ಬಾಲ್ಯ ಕಾಲದಲ್ಲಿ ನನ್ನೂರನ್ನು ಸಂಪನ್ನಗೊಳಿಸಿದ ಅನೇಕರು ನೆನಪಾಗುತ್ತಾರೆ. ಬಿರುಸಿನ ಮಳೆಗಾಲ ನಿಂತ ಕೂಡಲೇ ಹೆಚ್ಚೂ ಕಡಿಮೆ ತಿಂಗಳು ಎರಡು ತಿಂಗಳಿಗೊಮ್ಮೆ ರಸ್ತೆಯಲ್ಲಿ ರಾಗವಾಗಿ ದೊಡ್ಡ ಸ್ವರದಲ್ಲಿ ಘೋಷಣೆಗಳು ಕೇಳಿಬರುತ್ತಿದ್ದುವು. `ಕಲ್ಲ್ ಕುಟ್ಟಿ ಪಾಡೆರೆಗುಂಡಾ?' (ಅರೆಯುವ ಕಲ್ಲಿಗೆ ಕುಟ್ಟಿ ಹಾಕಲಿಕ್ಕಿದೆಯೇ?) ಮತ್ತು `ಗುವೆಲ್ಡ್ದ್ ಕೊಡಪಾನ ದೆಪ್ಪೆರೆಗುಂಡಾ?' (ಬಾವಿಗೆ ಬಿದ್ದ ಕೊಡಪಾನ ತೆಗೆಯಲಿಕ್ಕಿದೆಯೇ?). ಮಿಕ್ಸಿ, ಗ್ರೈಂಡರ್ಗಳಿಲ್ಲದ, ನಳ್ಳಿನೀರು ಸರಬರಾಜಿಲ್ಲದ ಕಾಲವದು. ಇದೇ ಅವರ ಮುಖ್ಯ ಕಸುಬಾಗಿರಲಾರದು. ಇದು ಅವರ ಕೌಶಲ್ಯದ ಸೈಡ್ ಉದ್ಯಮವಾಗಿರಬಹುದೆಂದು ನನ್ನ ಭಾವನೆ. ನನಗೆ ಈಗಲೂ ವಿಚಿತ್ರವೆನಿಸುವುದು ಅವರ ಘೋಷಣೆ ಧ್ವನಿವರ್ಧಕದಷ್ಟೇ ಗಟ್ಟಿಯಾಗಿತ್ತು ಎನ್ನುವುದು. ಶಬ್ದಮಾಲಿನ್ಯವಿಲ್ಲದ ಕಾಲದಲ್ಲಿ ಟಾಗೋರ್ ಪಾರ್ಕಿನಿಂದ ಪ್ರತಿದಿನ ಮಧ್ಯಾಹ್ನ ೧೨ ಗಂಟೆಗೆ ಮತ್ತು ಸಾಯಂಕಾಲ ಗಂಟೆಗೆ ಸೈರನ್ ಆಗುತ್ತಿತ್ತು. ಗಡಿಯಾರದ ಮುಖವನ್ನೇ ಕಂಡಿರದಿದ್ದ ನಮಗೆಲ್ಲಾ `ಬಿಗಿಲಾಂಡ್' ಎಂಬ ಸೂಚನೆ ಸಿಗುತ್ತಿತ್ತು. ದೈನಂದಿನ ಕೆಲಸಗಳಿಗೆ ಪ್ರೇರಣೆ ಮತ್ತು ಸಮಯಪಾಲನೆಗೆ ಉತ್ತೇಜನವೀಯುತ್ತಿತ್ತು. ಮಳೆಗಾಲದಲ್ಲಿ ಸೊಕ್ಕಿ ಅಬ್ಬರಿಸುವ ಅರಬೀಸಮುದ್ರದ ಭೋರ್ಗರೆತವೂ ನಮಗೆ ಕೇಳುತ್ತಿತ್ತು. ಕೆಲವೊಮ್ಮೆ ಯಾರದೋ ಕ್ರೈಸ್ತ ಬಂಧುಗಳ ಮನೆಯ ಶುಭ ಸಮಾರಂಭಕ್ಕೆ ರಾತ್ರಿ ಹೊತ್ತು ಹಂದಿಯ ಕತ್ತು ಕೊಯ್ಯುವ ಅರಚಾಟ ಕೇಳಿಸುತ್ತಿತ್ತು. ಹಾಗೆಯೇ ಚರ್ಚಿನ ಪೂಜೆಯ ಗಂಟಾನಾದವೂ, ಪಳ್ಳಿಯ ನಮಾಜಿನ ಕರೆಯ ಬಾಂಗ್ ಕೂಡ ಕೇಳುತ್ತಿತ್ತು. ಬಜ್ಜೋಡಿಯ ಗುಡ್ಡೆಯಿಂದ ನರಿಗಳು ಊಳಿಡುವ ಸ್ವರವಂತೂ ಸಾಮಾನ್ಯವಾಗಿ ಯಾವಾಗಲೂ ಕೇಳಿಸುತ್ತಿತ್ತು.


ಇದೆಲ್ಲದರ ಜೊತೆಗೆ ಬಿಕರ್ನಕಟ್ಟೆಯಲ್ಲಿ ಹಿಂದೆ ಇನ್ನೂ ಒಂದು ಕೆಲಸ ನಡೆಯುತ್ತಿತ್ತು. ಎತ್ತಿನಗಾಡಿ, ಜಟಕಾಗಳ ಕಾಲದ ಕತೆಯಿದು. ಚಕ್ರಗಳ ಸಂಶೋಧನೆ ಮಾನವನ ಇತಿಹಾಸದಲ್ಲಿ ಮಹತ್ತರವಾದ ಪರಿವರ್ತನೆಗೆ ಕಾರಣವಾಗಿದೆ. ಅಲ್ಲವೇ? ಬಿಕರ್ನಕಟ್ಟೆಗೆ ಹಿಂದೆ ಬಂಡೀಮಠವೆಂಬ ಹೆಸರೂ ಇತ್ತಂತೆ. ಎತ್ತಿನ ಗಾಡಿಗಳು ರಿಪೇರಿಗೆ ಮತ್ತು ಎತ್ತುಗಳ ಕಾಲುಗಳ ಗೊರಸುಗಳಿಗೆ ಲಾಳ ಹೊಡೆಯುವ ಕೆಲಸ ಇಲ್ಲಿ ನಡೆಯುತ್ತಿತ್ತು. ಈಗ ದೋಹಾ ಸೂಪರ್ ಬಜಾರ್ ಇದ್ದ ಸ್ಥಳದಲ್ಲಿ. ಹೋರಿಗಳ ಬೀಜ ಒಡೆಯುವ ಕೆಲಸವೂ ನಡೆಯುತ್ತಿತ್ತು. ಆಗ ಮಕ್ಕಳನ್ನು ಅತ್ತ ಇಣುಕಲೂ ಬಿಡುತ್ತಿರಲಿಲ್ಲ ಹಿರಿಯರು. ನನ್ನ ಅಪ್ಪನ ಬಾಲ್ಯದಲ್ಲಿ ಹುಡುಗರು ಆಟವಾಡುವಾಗ ತರಡುಗಳನ್ನು ಗುದ್ದುವ ಆಟ ಆಡಿ ಒಬ್ಬ ಹುಡುಗನ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದರಂತೆ. ಗಾಡಿಗಳ ಯುಗದ ಕುಶಲಕರ್ಮಿಗಳಾದ ಕಮ್ಮಾರರು ಬಡಗಿಗಳು ಈಗ ಕಾಣೆಯಾಗಿದ್ದಾರೆ. ಅವರಿಗೆ ಆಧುನಿಕ ಯಂತ್ರಯುಗದ ಕೌಶಲವನ್ನು ಗಳಿಸಿಕೊಳ್ಳದೆ ನಿರ್ವಾಹವೇ ಇಲ್ಲದಾಗಿದೆ. ನನ್ನೂರಲ್ಲಿ ಎತ್ತುಗಳ ಗೊರಸಿಗೆ ಲಾಳ ಕಟ್ಟುವ ಕುಶಲಕರ್ಮಿಯಾಗಿ ಮುಸ್ಲಿಂ ಸಾಹೇಬರೊಬ್ಬರಿದ್ದರು. ಅವರ ಹೆಸರೇನೋ ಗೊತ್ತಿಲ್ಲ. ಊರಲ್ಲಿ ಲಾಳದ ಸಾಯಿಬರು ಎಂದಷ್ಟೇ ಪರಿಚಿತರು. ಇನ್ನೊಬ್ಬರ ಮುಖವೂ ನೆನಪಾಗುತ್ತದೆ. ದಪ್ಪ ಮೀಸೆಯ, ಗುಂಡುಕಲ್ಲಿನಂತಹ ದಷ್ಟಪುಷ್ಟವಾದ ದೇಹ, ದುಂಡು ಮುಖದ, ಕೂದಲನ್ನು ಹೆಂಗಸರಂತೆ ಸೂಡಿ ಕಟ್ಟಿದ, ತುಂಡು ತೋಳಿನ ಅಂಗಿ ಮತ್ತು ಚೌಕಳಿಯ ಮುಂಡು ತೊಟ್ಟ ಒಬ್ಬ ವ್ಯಕ್ತಿಯು ನನ್ನೂರಿನಲ್ಲಿ ಆಗಾಗ ತಮ್ಮ ಬೀಜದ ಹೋರಿಯೊಂದಿಗೆ ಕಾಣಿಸುತ್ತಿದ್ದರು. ಬೆದೆಗೆ ಬಂದ ದನಗಳನ್ನು ತಂದು ಜೋಡಿ ಮಾಡಿಸುತ್ತಿದ್ದರು. ಇಂಜೆಕ್ಷನ್ಗಳಿಂದ ಗರ್ಭ ನಿಲ್ಲಿಸುವ ಹೊಸ ಪರಿವರ್ತನೆ ಇನ್ನೂ ಪ್ರಾರಂಭವಾಗಿರದ ಕಾಲವದು. ಮನೆಯಲ್ಲೇ ದನ ಸಾಕುವವರು ದನ ಬೆದೆಗೆ ಬಂದೊಡನೆ ಅವರನ್ನು ಕರೆಸಿಕೊಳ್ಳುತ್ತಿದ್ದರೆಂದು ಕಾಣುತ್ತದೆ. ನನ್ನೂರಿನ ಹಳೇ ಚಿತ್ರಗಳಲ್ಲಿ ಇವರೂ ದಾಖಲಾಗಿದ್ದಾರೆ.

ನನ್ನೂರಿನ ರಸ್ತೆಯಲ್ಲಿ ಆಗ ಬೆಳಿಗ್ಗೆ ಏಳು ಗಂಟೆಯಿಂದ ಹೆಂಗಸರ ಸಾಲು ಮೆರವಣಿಗೆ ಸಾಗುತ್ತದೆ. ಏಳೂ ಮುಕ್ಕಾಲು ಆಯಿತೆಂದರೆ ಅವರ ಓಟವನ್ನು ಕಾಣಬಹುದಿತ್ತು. ಯಾಕೆಂದರೆ ಎಂಟು ಗಂಟೆಗೆ ಗೇರುಬೀಜದ ಕಾರ್ಖಾನೆಯ, ಕಾಫಿ ಕಾರ್ಖಾನೆಯ, ಫೆರ್ನಾಂಡಿಸ್ ಬ್ರದರ್ಸ್ ಕಾರ್ಖಾನೆಯ ಗೇಟು ಮುಚ್ಚುತ್ತಿತ್ತು. ಐದಾರು ಮೈಲಿ ದೂರದಿಂದಲೂ ಹೆಂಗುಸರು ಕಾರ್ಖಾನೆಗಳಿಗೆ ಬರುತ್ತಿದ್ದರು. ಕೆಲವರು ಮಕ್ಕಳನ್ನು ಸೊಂಟದಲ್ಲಿ ಹೊತ್ತುಕೊಂಡೂ ಬರುತ್ತಿದ್ದರು. ಸಂಜೆ ಐದು ಗಂಟೆಯಾಯಿತೆಂದರೆ ಅವರು ಮನೆಗಳಿಗೆ ಮರಳುವ ದೃಶ್ಯ ಕಾಣಬಹುದಿತ್ತು. ಅನಕ್ಷರಸ್ಥ ಹೆಂಗುಸರು ಹೊರ ದುಡಿಮೆ ಮಾಡಿದ್ದರಿಂದ  ಕಾಲದಲ್ಲಿ ಅವರ ಮಕ್ಕಳು ಅಕ್ಷರ ಸಂಸ್ಕೃತಿಗೆ ತೆರೆದುಕೊಳ್ಳುವಂತಾಗಿತ್ತು. ಮಧ್ಯಾಹ್ನ ಹನ್ನೊಂದು ಗಂಟೆಯಾಗುತ್ತಿದ್ದಂತೆ ಇನ್ನೂ ಒಂದು ಮೆರವಣಿಗೆಯನ್ನು ನೋಡಬಹುದಿತ್ತು. ರೈತ ಮಹಿಳೆಯರು ತಮ್ಮ ಹಿತ್ತಲಲ್ಲಿ ಬೆಳೆಸಿದ ತರಕಾರಿಗಳನ್ನು ತಲೆಹೊರೆಯಲ್ಲಿ ಶೇಡಿಗುಡ್ಡೆಗೆ (ಈಗಿನ ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿಗೆ) ಒಯ್ಯುತ್ತಿದ್ದರು. ನೀರ್ಮಾರ್ಗ, ಬೊಂಡಂತಿಲ, ಕುಲಶೇಖರ ಮುಂತಾದ ಕಡೆಯಿಂದ ತರಕಾರಿಗಳನ್ನಲ್ಲದೆ, ಕರಿಮೆಣಸು, ತೆಂಗಿನಕಾಯಿ, ಬೆಲ್ಲ, ಅಡಿಕೆ, ಗೇರುಬೀಜ ಮುಂತಾದ ವಸ್ತುಗಳನ್ನೂ ಶೇಡಿಗುಡ್ಡೆಯ ಕೇಂದ್ರ ಮಾರುಕಟ್ಟೆಗೆ ಒಯ್ಯುತ್ತಿದ್ದವರಲ್ಲಿ ಕ್ರೈಸ್ತ ಮಹಿಳೆಯರೇ ಹೆಚ್ಚು. ತಲೆಹೊರೆಯನ್ನು ಒಯ್ಯುತ್ತಿರುವವರಲ್ಲಿ ಗಂಡಸರು ಇಲ್ಲವೆನ್ನುವಷ್ಟು ವಿರಳ. ಹೀಗೆ ವಸ್ತುಗಳನ್ನು ಒಯ್ದು ಶೇಡಿಗುಡ್ಡೆಯಲ್ಲಿ ಮಾರಿ ಮನೆಗೆ ಬೇಕಾದ ಉಪ್ಪು, ಮೆಣಸು ಮುಂತಾದ ಅಗತ್ಯ ವಸ್ತುಗಳನ್ನು ಅಲ್ಲಿ ಖರೀದಿಸಿ ಮೂರು ಗಂಟೆಯ ಹೊತ್ತಿಗೆ ಮನೆಗೆ ಮರಳುತ್ತಿದ್ದರು.

ನನ್ನೂರಿನಲ್ಲಿದ್ದ ಒಂದು ಜಿನಸಿ ಅಂಗಡಿಯ ಮಾಲಿಕರು ಸುಮಾರು ೬೦-೬೫ರ ಹಿರಿಯರು. ಅಂಗಡಿಯಲ್ಲಿ ಕೂತರೆ ತರಕಾರಿ ತಲೆಹೊರೆ ಹೊತ್ತು ರಸ್ತೆಯಲ್ಲಿ ಹೋಗುವ ಹೆಂಗಸರನ್ನು ಕಂಡು ಅವರು ರಾಗವಾಗಿ ``ಬಾಯೇ, ನಿನ್ನ ಸೌತೆಗೆ ಹೇಗೆ ಕ್ರಯ?'' ಎಂದು ಕೊಂಕಣಿ ಭಾಷೆಯಲ್ಲೇ ಗಟ್ಟಿಯಾಗಿ ಹೇಳುವುದು ಊರಿಗೆಲ್ಲಾ ಕೇಳುತ್ತಿತ್ತು. ಅದನ್ನು ಕೇಳಿ ಅವರ ಮಾತಿಗೆ ಅಶ್ಲೀಲ ಅರ್ಥವಿಟ್ಟು ಸುತ್ತಮುತ್ತಲಿನವರು ನಗುವುದು ನಡೆಯುತ್ತಲೇ ಇತ್ತು. ಇವರ ಒತ್ತಾಯಕ್ಕೆ ಕೆಲವು ಹೆಂಗಸರು ಇವರ ಕರೆಗೆ ಸ್ಪಂದಿಸಿ ಅಂಗಡಿಗೆ ಬರುತ್ತಿದ್ದರು. ಹೇಳುವಾಗ ಗಂಭೀರವಾಗಿ ಹಿರಿಯರು ಹೇಳಿದರೂ ಅಂಗಡಿಗೆ ಕರೆಸಿದ ಮೇಲೆ ತಲೆಹೊರೆಯ ಹೆಂಗಸರ ಬುಟ್ಟಿಯನ್ನು ಕೆಳಗಿಳಿಸುವಾಗ ಮತ್ತು ವ್ಯಾಪಾರದ ಬಳಿಕ ತಲೆಗೆ ಹೊರಿಸುವಾಗ ವೃದ್ಧರ ಕಿತಾಪತಿ ಅಶ್ಲೀಲವಾಗಿಯೇ ಇರುತ್ತಿತ್ತಂತೆ. ವ್ಯಾಪಾರಕ್ಕಿಂತ ಅವರಿಗೆ ಹೆಂಗುಸರನ್ನು ಹತ್ತಿರದಿಂದ ಸ್ಪರ್ಶಿಸುವ ಅವಕಾಶಕ್ಕಾಗಿಯೇ ಕಾಯುತ್ತಿದ್ದರೇನೋ? ಒಂದು ದಿನ ಒಬ್ಬಳು ಹೆಂಗುಸು ``... ಮಗನೇ, ಇನ್ನು ಮುಂದೆ ಯಾರನ್ನಾದರೂ ಹೀಗೆ ಮುಟ್ಟಿದರೆ ನಿನ್ನನ್ನು ಹುಟ್ಟಿಲ್ಲ ಅಂತ ಮಾಡಿಬಿಡುತ್ತೇನೆ, ಜಾಗ್ರತೆ'' ಎಂದು ಕ್ಯಾಕರಿಸಿ ಅವರ ಮುಖಕ್ಕೆ ಉಗುಳಿ ಬಿರಬಿರನೆ ನಡೆದಳಂತೆ. ಲೈಂಗಿಕ ಕಿರುಕುಳಕ್ಕೆ ೬೫ ವರ್ಷದ ಹಿಂದಿನ ಕಾಲದ ಹೆಂಗಸರು ಪ್ರತಿಕ್ರಿಯೆ ತೋರಿದ ರೀತಿಯಿದು. ಆಮೇಲೆ ಹಿರಿಯರ ಸ್ವರ ತ್ರಾಣ ಕಳಕೊಂಡಿತು. ಯುವಕನಾದಾಗ ತಪ್ಪು ಮಾಡದವರು ಮುದುಕರಾದಾಗ ತಪ್ಪು ಮಾಡುತ್ತಾರೆ ಎಂಬ ಮಾತಿದೆ. ಎಷ್ಟೋ ವೇಳೆ ಯುವಕರೊಂದಿಗೆ ಒಂಟಿಯಾಗಿರಬಹುದು ಎಂಬ ಧೈರ್ಯವಿರುತ್ತಿತ್ತು. ಆದರೆ ಇಂತಹ ಹಿರಿಯರೊಂದಿಗೆ ಹೆಂಗಸರಿಗೆ ಅಪಾಯ ಹೆಚ್ಚಿತ್ತು ಅನ್ನುವುದಕ್ಕೆ ಕಾಲದಲ್ಲಿ ಹಲವು ಉದಾಹರಣೆಗಳಿದ್ದವು. ಆದರೆ ಹೊಸ ಶತಮಾನದಲ್ಲಿ ನಂಬಿಕೆ ಉಲ್ಟಾ ಆಗಿರುವುದು ಖೇದದ ಸಂಗತಿ.

ನನ್ನೂರಿನ ಯುವಕ ಸಂಘದ ಬಗ್ಗೆ ಹೇಳದಿದ್ದರೆ ಚರಿತ್ರೆ ಅಪೂರ್ಣ. ಕಂಡೆಟ್ಟು ಮೈದಾನವು ಜುಮಾದಿ ಬಂಟ ದೈವದ ದೊಂಪದ ಬಲಿ ನೇಮಕ್ಕೆ ಪ್ರಸಿದ್ಧವಾದರೆ ಇನ್ನೊಂದು ಅಲ್ಲಿ ವರ್ಷಂಪ್ರತಿ ನಡೆಯುವ ಪದವು ಯುವಕ ಸಂಘದವರ ನಾಟಕಕ್ಕೆ ಪ್ರಸಿದ್ಧ. ನಾಟಕವೂ ಎಲ್ಲಾ ಕಲೆಗಳನ್ನು ಕುದಿಸಿ ಮಾಡಿದ ರಸಪಾಕವಲ್ಲವೇ? ಎಚ್ಚಮನಾಯಕ, ಟಿಪ್ಪು ಸುಲ್ತಾನ್, ಸದಾರಮೆ, ದೇವದಾಸಿ ಮುಂತಾದ ಪ್ರಸಿದ್ಧ ನಾಟಕಗಳನ್ನು ನಾನು ಕಂಡದ್ದು ಯುವಕರ ಅಭಿನಯದಲ್ಲಿ. ಅನೇಕ ಹದಿಹರೆಯದ ಹೆಣ್ಣುಮಕ್ಕಳು ಯುವಕರ ಅಭಿನಯಕ್ಕೆ ಮರುಳಾದ ಕತೆ ಬೇರೆಯೇ ಇದೆ. ವಾಮನ್ರಾಜ್, ನೀರ್ಮಾರ್ಗ ನಾರಾಯಣ, ದಿನಕರ, ಲಕ್ಷ್ಮಣ, ತಿಮ್ಮಪ್ಪ ಮುಂತಾದ ಇನ್ನೂ ಅನೇಕ ತರುಣರು ನುರಿತ ನಟರಂತೆ ಅಭಿನಯಿಸಲು ಕಾರಣಕರ್ತರು ಆರ್.ಎಸ್. ನಾವೂರ್ಕಾರ್ ಎಂಬ ಕನ್ನಡ ಪಂಡಿತರು. ಇವರ ಕಟ್ಟುನಿಟ್ಟಿನ ನಿರ್ದೇಶನದಿಂದ ಪ್ರತಿವರ್ಷ ನಡೆಯುವ ಯುವಕ ಸಂಘದ ವಾರ್ಷಿಕೋತ್ಸವವು ನಮ್ಮೂರಿನ ದೊಡ್ಡ ಉತ್ಸವವೇ ಆಗಿತ್ತು. ಜುಮಾದಿ ಬಂಟನ ದೊಂಪದ ಬಲಿಗೆ ಇಣುಕಿ ನೋಡಲೂ ಬಾರದ ಊರ ನಾಗರಿಕರೆಲ್ಲರೂ ಮನೆಗೆ ಬೀಗ ಹಾಕಿ ನಾಟಕಕ್ಕೆ ಇಲ್ಲಿ ಸೇರುತ್ತಿದ್ದರು. ನಾವೂರ್ಕಾರ್ ಮಾಸ್ಟ್ರು ಪದ್ವಾ ಹೈಸ್ಕೂಲಿನ ಕನ್ನಡ ಪಂಡಿತರು. ದುಂಡು ಮುಖದ, ಗೋಧಿ ಮೈಬಣ್ಣದ ಬಿಳಿ ಕೂದಲಿನ ಶುಭ್ರ ಶ್ವೇತವಸನಧಾರಿಯಾದ ಅವರು ಒಂದು ಪಾರ್ಶ್ವದಿಂದ ನೋಡಿದರೆ ನಮ್ಮ ಹಿರಿಯ ಸಾಹಿತಿ ಹಾ.ಮಾ. ನಾಯಕರಂತೆ ಕಾಣುತ್ತಿದ್ದರು. ಸಂಸ್ಕೃತ, ಹಿಂದಿ ಭಾಷಾ ಪರಿಣತರೂ, ಆಯುರ್ವೇದ ಪಂಡಿತರೂ ಆದ ಅವರಾಡುವ ಮಾತುಗಳಿಗೆ ವಿಶೇಷ ತೂಕವೂ ಮೌಲ್ಯವೂ ಇರುತ್ತಿತ್ತು. ಶುದ್ಧ ಕಪಿಚೇಷ್ಟೆಯ ಯುವಕರನ್ನು ಕಂಪೆನಿ ನಾಟಕದ ನಟರಂತೆ ಪಳಗಿಸಬೇಕಾದರೆ ಮಾಸ್ಟ್ರ ಶಿಸ್ತು, ಧೀಮಂತಿಕೆ, ಗತ್ತು, ಗೈರತ್ತು ಹೇಗಿತ್ತು ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಇವರ ನಿರ್ದೇಶನದಲ್ಲಿ ಪಳಗಿದ ವಾಮನ್ರಾಜ್ ಮುಂದೆ ಕನ್ನಡ, ಮರಾಠಿ ರಂಗಭೂಮಿ, ತುಳು, ಕನ್ನಡ ಚಲನಚಿತ್ರಗಳಲ್ಲಿ ಮೆರೆದುದು ಈಗ ಇತಿಹಾಸ. ಯುವಕರ ಚಂಚಲ ಮನಸ್ಸನ್ನು ಕಲೆಯ ರಸಪಾಕದಲ್ಲಿ ಮುಳುಗಿಸಿ, ಅಪರಾಧಗಳ ಹೊಡೆತ ಬೀಳದಂತೆ ರಕ್ಷಿಸಿ, ಜೀವನದ ಪೂರ್ಣ ವಿಕಾಸಕ್ಕೆ ನೆರವಾದವರು ಆರ್.ಎಸ್. ನಾವೂರ್ಕರ್ ಎಂಬ ಮಹಾನುಭಾವರು. ಯುವಕರಿಗೆ ಮಾತ್ರವಲ್ಲ ನನ್ನೂರಿನ ಎಲ್ಲಾ ನಾಗರಿಕ ಬಂಧುಗಳಿಗೂ ಅವರು ಸ್ಮರಣೀಯರು.ಇನ್ನು ರಾಮಾಂಜನೇಯ, ವೀರಾಂಜನೇಯ ವ್ಯಾಯಾಮ ಶಾಲೆಯು ಯುವಕರನ್ನು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಗೊಳಿಸಿದ್ದುವು. ಯಾವುದೇ ಉತ್ಸವಗಳಲ್ಲಿ, ಸಮಾರಂಭಗಳಲ್ಲಿ, ಮೆರವಣಿಗೆಗಳಲ್ಲಿ ಯುವಕರ ತಾಲೀಮು ಪ್ರದರ್ಶನ ಬೆರಗುಗೊಳಿಸುತ್ತಿತ್ತು. ಹುರಿಗಟ್ಟಿದ ಮಾಂಸಖಂಡಗಳುಳ್ಳ ತರುಣರು ಮಾಡುವ ಮಲ್ಲಕಂಬ, ದೈಹಿಕ ಕಸರತ್ತುಗಳು, ಕತ್ತಿವರಸೆ, ದೊಣ್ಣೆಗಳ ಕಸರತ್ತುಗಳು, ಬೆಂಕಿಯ ನಾನಾ ರೂಪದ ಕಸರತ್ತುಗಳು ನೋಡುಗರನ್ನು ಬೆರಗುಗೊಳಿಸುತ್ತಿತ್ತು. ಊರಿನ ನೇಮ, ಜಾತ್ರೆ, ಉತ್ಸವಗಳ ಪ್ರಧಾನ ಆಕರ್ಷಣೆಯೇ ವ್ಯಾಯಾಮ ಶಾಲೆಯ ಯುವಕರು ಮಾಡುವ ಯುದ್ಧ ಕಲೆಯ ಪ್ರದರ್ಶನಗಳು ಎಂಬುದು ಸತ್ಯ. ಆಧ್ಯಾತ್ಮಿಕವಾಗಿ ಗಟ್ಟಿಗೊಳಿಸಲು ಹರಿಹರ ಪಾಂಡುರಂಗ ಭಜನಾ ಮಂಡಳಿಯು ನೆರವಾಗುತ್ತಿತ್ತು. ವರ್ಷಕ್ಕೊಮ್ಮೆ ಊರಿನ ಎಲ್ಲಾ ಮನೆಗಳಿಗೆ ನಗರಭಜನೆ ಬರುತ್ತಿತ್ತು. ಪ್ರತೀ ಮನೆಯವರು ದೀಪವಿಟ್ಟು, ಕಾಣಿಕೆ ನೀಡಿ ಸ್ವಾಗತಿಸುತ್ತಿದ್ದರು. ಗುಂಪಿನಲ್ಲಿ ಯುವಕರೇ ಹೆಚ್ಚಿರುತ್ತಿದ್ದರು ಎನ್ನುವುದು ಗಮನಿಸಬೇಕಾದ ಅಂಶ.  ವಿದ್ಯುತ್ ಇಲ್ಲದ ಕಾಲದಲ್ಲೂ ನನ್ನೂರ ಬೀದಿಯಲ್ಲಿ ದೀಪಗಳಿದ್ದವು ಎಂದರೆ ನೀವು ನಂಬಲಾರಿರಿ ಅಲ್ಲವೇ? ಸಂಜೆ ಏಳು ಗಂಟೆಯಾಗುವಾಗ ಸಣ್ಣ ಏಣಿಯನ್ನು ಹೊತ್ತುಕೊಂಡು ಬೀದಿ ದೀಪಗಳನ್ನು ಹಚ್ಚುತ್ತಾ ಬರುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ ಮಹನೀಯರಿದ್ದರು. ಕಂಬಗಳನ್ನು ಫರ್ಲಾಂಗು ದೂರದಲ್ಲಿ ನೆಟ್ಟಿದ್ದರು. ಅದರ ತುದಿಯಲ್ಲಿ ಸೀಮೆಎಣ್ಣೆ ದೀಪವಿತ್ತು. ಅದಕ್ಕೆ ಕನ್ನಡಿ ಕವಚವಿತ್ತು. ರಾತ್ರಿ ಎಷ್ಟು ಹೊತ್ತಿನವರೆಗೆ ಉರಿಯುತ್ತಿತ್ತೋ ಗೊತ್ತಿಲ್ಲ. ಬೇರೆ ಊರಲ್ಲೂ ಹಿಂದೆ ವ್ಯವಸ್ಥೆ ಇತ್ತೋ ಗೊತ್ತಿಲ್ಲ. ಅದೇ ರೀತಿ ತಲೆ ಮೇಲೆ ಮಲ ಹೊತ್ತು ಸಾಗುವ ಮಹಾನುಭಾವರು ಊರಿನ ನೈರ್ಮಲ್ಯವನ್ನು ಕಾಪಾಡುತ್ತಿದ್ದರು. ಬಿಕರ್ನಕಟ್ಟೆಯಲ್ಲಿ ನನ್ನ ಮನೆಯಿದ್ದ ಬಜ್ಜೋಡಿಯ ಪಾರ್ಶ್ವದ ಮನೆಗಳಿಗೆ ಬಯಲೇ ಶೌಚಾಲಯವೆಂದು ಹಿಂದೆ ಹೇಳಿದ್ದೆನಲ್ಲವೇ? ನನ್ನೂರಿನ ಇನ್ನೊಂದು ಪಾರ್ಶ್ವದ ಮನೆಗಳಲ್ಲಿ ಹಿಂದಿನ ಕಾಲದ ಅಂದರೆ ಮಲ ಬಾಚುವ ಕಕ್ಕುಸು ಗುಂಡಿಗಳಿದ್ದುವು. ಅಲ್ಲಿಂದ ಮಲ ಹೊತ್ತು ಒಯ್ದು ಕದ್ರಿಯ ದೊಡ್ಡ ಗುಂಡಿಗೆ ಹಾಕುತ್ತಿದ್ದರು. ಇವರೆಲ್ಲಾ ಒಂದು ವಾರ ಕೆಲಸ ಮಾಡುವುದಿಲ್ಲವೆಂದು ಕೆಲಸ ನಿಲ್ಲಿಸಿದರೆ ಏನಾದೀತು ಯೋಚಿಸಿ. ಸಮಷ್ಟಿಯ ಬದುಕನ್ನು ಸುಖವಾಗಿಡಲು, ಸ್ವಚ್ಛವಾಗಿಡಲು ಮಹಾನುಭಾವರು ಪಡುವ ಶ್ರಮದ ಅರಿವೇ ಇಲ್ಲದ ಸಮಾಜವು ಹೃದಯಸ್ಪಂದನೆಯೇ ಇಲ್ಲದೆ, ಕಲ್ಲಾಗಿ ಬಿಟ್ಟಿತ್ತು ನನ್ನ ಕಾಲದಲ್ಲಿ. ಹೊಸ ಶತಮಾನದಲ್ಲೂ ಸಮಾಜದ ಹೃದಯ ಪೂರ್ಣ ಪರಿವರ್ತನೆಯಾಗಿದೆ ಎಂದು ನನಗನಿಸುತ್ತಿಲ್ಲ. ಯಾಕೆಂದರೆ ಈಗಲೂ ನಮ್ಮ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿ ಇದೆ ಎಂದು ಪತ್ರಿಕೆಯಲ್ಲಿ ವರದಿಗಳು ಬರುತ್ತಿವೆ. ಸಾವಿರಾರು ವರ್ಷಗಳ ನಾಗರಿಕ ಮಾನವ ಇತಿಹಾಸದಲ್ಲಿ ನಮ್ಮ ನೆಟ್ಟಾರ್ ಭಟ್ಟರಂತೆ ಇವರ ಬಗ್ಗೆ ಯೋಚಿಸುವವರು ಇರಲೇ ಇಲ್ಲವೇ? ಇದು ನನ್ನನ್ನು ಕಾಡುತ್ತಿರುವ ಪ್ರಶ್ನೆ. ಹೀಗೆ ನನ್ನೂರಿನ ಸರ್ವಾಂಗೀಣ ಪ್ರಗತಿಗೆ ಇವರೆಲ್ಲಾ ಮೂಲಪುರುಷರು ಎಂಬುದನ್ನು ಹೇಗೆ ಮರೆಯಲಿ?


ನಮ್ಮೂರಿನ ಡಾ. ಉಮಾನಾಥ ಸುವರ್ಣರು ಊರಿನ ಜನರ ಆರೋಗ್ಯವನ್ನು ರಕ್ಷಿಸುವ ಹೊಣೆ ಹೊತ್ತವರು. ಯಾವ ಕಾಯಿಲೆಗೂ ಅವರು ಒಂದು ಕೆಂಪು ನೀರುಮದ್ದನ್ನು ಬಾಟ್ಲಿಯಲ್ಲಿ ಹಾಕಿಕೊಡುತ್ತಿದ್ದರು. ಅದು ಎಲ್ಲ ರೋಗಗಳಿಗೂ ರಾಮಬಾಣ. ನಮ್ಮ ಸುತ್ತಮುತ್ತಲ ಹಳ್ಳಿಗಳ ದೂರ ದೂರದ ರೋಗಿಗಳೂ ಉಮಾನಾಥ ಸುವರ್ಣರ ಕ್ಲಿನಿಕ್ಕನ್ನು ಒಮ್ಮೆ ಪ್ರವೇಶಿಸಿದರೆ ಅರ್ಧ ರೋಗ ವಾಸಿಯಾಯಿತೆಂದೇ ಲೆಕ್ಕ. ಕಾಲದಲ್ಲೇ ಅವರ ಕ್ಲಿನಿಕ್ಕನ್ನು ಬಹಳ ಸುಂದರವಾಗಿ ಓರಣಗೊಳಿಸಿದ್ದರು. ಗೋಡೆಯ ಮೇಲೆಲ್ಲಾ ಸುಂದರವಾದ ಕಲಾತ್ಮಕ ಚಿತ್ರಗಳು, ಮಧ್ಯೆ ಮಧ್ಯೆ ಅವರು ಹುಲಿ ಶಿಕಾರಿ ಮಾಡಿದ ಫೋಟೋಗಳು, ಮಹಾತ್ಮಾಗಾಂಧಿ, ನೆಹರೂರ ಭಾವಚಿತ್ರಗಳು. ಸಂದರ್ಶನಕ್ಕಾಗಿ ಕಾಯುವ ಕೊಠಡಿಯಲ್ಲಿ ಸಣ್ಣ ಮೇಜಿನ ಮೇಲೆ ಹಲವಾರು ಇಂಗ್ಲಿಷ್, ಹಿಂದಿ ಮ್ಯಾಗಝಿನ್ಗಳು ಇದ್ದುವು. ಸಂಪಿಗೆ ಹೂಗಳನ್ನು ದೊಡ್ಡ ಬೋಗುಣಿಯಲ್ಲಿ ಕೆಡದಂತೆ ಇರಿಸಿದ್ದು ಸದಾ ಕಾಣುತ್ತಿತ್ತು. ಡಾ. ಸುವರ್ಣರಿಗಿಂತಲೂ ನನಗೆ ವಿಶೇಷ ವ್ಯಕ್ತಿಯಾಗಿ ಗಮನಸೆಳೆದವರು ಅವರ ಕಂಪೌಂಡರ್ ಆಗಿದ್ದ ದೇವಪ್ಪಣ್ಣನವರು. ಡಾಕ್ಟರು ಬರೆದು ಕೊಡುವ ಚೀಟಿಯನ್ನು ಓದುವ ಕೌಶಲ ಅವರಿಗೆ ಮಾತ್ರ ಸಿದ್ಧಿಸಿತ್ತು. ಪ್ರಿಸ್ಕ್ರಿಪ್ಶನ್ ಚೀಟಿಯು ಕೆಲವೊಮ್ಮೆ ಉರ್ದು ಲಿಪಿಯಾಗಿಯೋ ಕೆಲವೊಮ್ಮೆ ಚೈನೀಸ್ ಲಿಪಿಯ ಹಾಗೆಯೋ ಕಾಣುತ್ತಿತ್ತು. ಇಂತಹ ಬ್ರಹ್ಮಲಿಪಿಯನ್ನು ಓದಿ ಸರಿಯಾಗಿ ಮದ್ದು ಕೊಡುತ್ತಿದ್ದರಲ್ಲಾ ದೇವಪ್ಪಣ್ಣ, ಅವರ ಪ್ರೌಢಿಮೆಯನ್ನು ಕಂಡು ನಾನು ಬೆರಗಾದುದುಂಟು. ಡಾ. ಉಮಾನಾಥ ಸುವರ್ಣರು ಸ್ವಲ್ಪ ಕಾಲ ಮಂಗಳೂರು ನಗರಪಾಲಿಕೆಯ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದರು. ನನಗೆ ಹಿಂದಿ ಟೀಚರಾಗಿ ನಗರಸಭೆಯ ಕಾಪಿಕಾಡು ಶಾಲೆಯಲ್ಲಿ ನೇಮಕವಾಗಲು ಅವರೂ ಮಾತಾಡಿ ಸಹಕರಿಸಿದ್ದುಂಟು. ಹೀಗೆ ಬಿಕರ್ನಕಟ್ಟೆಯ ಸಾಮಾಜಿಕ, ಸಾಂಸ್ಕೃತಿಕ ಚೆಹರೆಗಳಲ್ಲಿ ಇವರೆಲ್ಲಾ ಚಿರಪರಿಚಿತರು. ಸದಾ ಸ್ಮರಣೀಯರೂ ಆಗಿದ್ದಾರೆ.


(ಮುಂದುವರಿಯಲಿದೆ)

6 comments:

 1. ಎಷ್ಟು ಸುಂದರವಾಗಿ ಬರೆದಿದ್ದೀರಿ !!!! ನನ್ನನ್ನು ೫೫ ವರ್ಷದ ಹಿಂದೆ ಕೊಂದು ಹೋಗಿದ್ದಕ್ಕೆ ಕೃತಜ್ಞತೆ ಗಳು. ಎಲ್ಲವೂ ನೆನ್ನೆ ತಾನೇ ಆಗಿದ್ದಂತೆ ಇದೆ. ಡಾ. ಸುವರ್ಣರಂತೆ ಮರ್ನಮಿ ಕಟ್ಟೆಯಲ್ಲಿ ಡಾ.ರಾಮಯ್ಯ ಆಳ್ವ ಅಂತ ಒಬ್ಬ ವೈದ್ಯರು ಇದ್ದರು. ಅವರ ಕಂಪೌಂದರ್ ವಿನ್ಸಿ ಅಂತ.ಅವರು ಕೊಡುವ ಬಣ್ಣ ಬಣ್ಣದ ಮದ್ದು.ಕೆಲವು ಸಿಹಿ/ಘಾತಿಯಾಗಿ ಏನೋ ಒಂದು ರುಚಿ. ಚುಚ್ಹು ಮದ್ದು ಇಲ್ಲವೇ ಇಲ್ಲ .೨ ದಿನದ ಮದ್ದಿನಲ್ಲಿ ರೋಗ ವಾಸಿ. ...ದಯವಿಟ್ಟು ಈ ಪುಸ್ತಕ ಎಲ್ಲಿ ಸಿಗುತ್ತದೆ ?

  ReplyDelete
 2. ಈ ಕಂತನ್ನು ಓದುತ್ತಿದ್ದಂತೆ ನನಗೂ ನನ್ನ ಬಾಲ್ಯದ ಚಿತ್ರಗಳು ನೆನಪಾಗುತ್ತಾ ಹೋದವು. ಅವಲಕ್ಕಿ ಕುಟ್ಟುವ ಆ ಕಾಲದ ಮರದ ಯಂತ್ರ, ಅದರಲ್ಲಿ ಕೆಲಸ ಮಾಡುವ ಮಹಿಳೆಯ ಕೌಶಲ, ಶರಾಬನ್ನು ಎಲ್ಲೆಲ್ಲೋ ಅಡಗಿಸಿಟ್ಟು, ಪೋಲೀಸರ ಕಣ್ತಪ್ಪಿಸಿ ಗಿರಾಕಿಗಳಿಗೆ ಮಾರಾಟ ಮಾಡುವ ಚಾಕಚಕ್ಯತೆ, ಬೀದಿ ದೀಪ ಉರಿಸುವವನ ನಿಷ್ಠೆ, ಮಲ ಬಾಚುವವರ ತಾಳ್ಮೆ, ರಸ್ತೆಯಲ್ಲಿ ಚಲಿಸುವ ಎತ್ತಿನ ಗಾಡಿಗಳು, ಡಾಕ್ಟರ್ ಕೊಡುವ ಬಣ್ದದ ಮದ್ದು, ಜನರ ವೈವಿಧ್ಯಮಯ ಖಯಾಲಿಗಳು, ನಾಟಕಗಳು- ಎಲ್ಲವೂ ನಾನು ನನ್ನ ಬಾಲ್ಯವನ್ನು ಕಳೆದಿದ್ದ ಜೆಪ್ಪು ಬಪ್ಪಾಲಿನಲ್ಲೂ ಇತ್ತು.

  ReplyDelete
 3. ಟಿ.ಆರ್.ಭಟ್, ಮಂಗಳೂರು31 December, 2015 16:42

  ಜಿ.ಕೆ.ನೆಟ್ಟಾರರು ಸಂಪ್ರದಾಯಸ್ಥ ಹವ್ಯಕ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿ, ತನ್ನದೇ ದಾರಿ ಹುಡುಕಿ ಉಳಿದವರಿಗೆ ಈ ತರ ಬಾಳಬಹುದು ಎಂದು ನಂಬಿ ಬದುಕಿದವರು. ತಮ್ಮ ಸಂಪರ್ಕಕ್ಕೆ ಬಂದವರನ್ನೂ ತಿದ್ದುವ ಅವರಲ್ಲಿ ಸಾಮಾಜಿಕ ಕಳಕಳಿ ಮತ್ತು ಸಮಾನತೆಯ ಬಗ್ಗೆ ಅರಿವು ಉಂಟುಮಾಡುತ್ತಿದ್ದ ಅಪರೂಪದ ವ್ಯಕ್ತಿ. ಉಳಿದವರು ತಮ್ಮ ನಡೆ, ನುಡಿಗಳ ಬಗ್ಗೆ ಏನನ್ನಬಹುದು ಎಂಬುದರ ಬಗ್ಗೆ ತಲೆಕೆಡಿಸದೆ ತಮ್ಮ ಆದರ್ಶಗಳಿಗೆ ಬದ್ಧರಾಗಿ ಜೀವಿಸಿದವರು. ಅವರ ಜೀವಿತದ ಕೆಲವು ಅಸಾಮಾನ್ಯ ಘಟನೆಗಳನ್ನು ಓದುಗರ ಮುಂದಿಟ್ಟ ರೋಹಿಣಿಯವರು ಶ್ಲಾಘನೀಯರು.

  ReplyDelete
 4. ದಿನೇಶ ನೆಟ್ಟಾರ್05 January, 2016 11:01

  ಶ್ರೀಮತಿ ರೋಹಿಣಿಯವರೇ, ನಾನು ಇತ್ತೀಚೆಗೆ ಅಮೆರಿಕದಿಂದ ಮಂಗಳೂರಿಗೆ ಬಂದ ಸಂದರ್ಭದಲ್ಲಿ ಶ್ರೀ ಟಿ.ಆರ್.ಭಟ್ ಅವರು ನಿಮ್ಮ ಆತ್ಮಕಥನದ ಬಗ್ಗೆ ಹೇಳಿದರು. ನಿನ್ನೆ ೮ನೇ ಭಾಗದಿಂದ ಆರಂಭಿಸಿ ೧ನೇ ಭಾಗದ ವರೇಗೂ ಓದಿ ಮುಗಿಸಿದೆ. ನಿಮ್ಮ ಬರಹ ತುಂಬಾ ಶ್ಲಾಘನೀಯ. ಸುಲಲಿತವಾಗಿ ಕತೆ ಹೇಳುವ ಶೈಲಿಯಲ್ಲಿ ಬರೆದಿದ್ದೀರಿ. ಒಮ್ಮೆ ಆರಂಭಿಸಿದರೆ ಮುಗಿಯುವ ವರೇಗೂ ನಿಲ್ಲಿಸುವ ಹಾಗಿಲ್ಲ.

  ನಾನು ಜಿ.ಕೆ.ನೆಟ್ಟಾರರ ಮಗ. ೧೯ನೇ ವರ್ಷದಲ್ಲಿ ಮಂಗಳೂರು ಬಿಟ್ಟು ಹೋದರೂ ಬಿಕರ್ನಕಟ್ಟೆಯ ನೆನಪುಗಳು ಇನ್ನೂ ನಿನ್ನೆ ನಡೆದಂತೆ ನೆನಪಿವೆ. ನನ್ನ ತಂದೆಯವರ ಬಗ್ಗೆ ಬರೆದ ವಿಚಾರಗಳನ್ನು ಓದಿ ಮನಸ್ಸಿಗೆ ತುಂಬಾ ಸಂತೋಷವಾಯಿತು. ಶ್ರೀ ಆರ್.ಎಸ್.ನಾವೂರ್ಕಾರ್ ಕುಟುಂಬ ಮತ್ತು ನಮ್ಮ ಕುಟುಂಬ ಅನ್ಯೋನ್ಯವಾಗಿದ್ದೆವು. ಅವರು ನನ್ನ ಕನ್ನಡ ಅಧ್ಯಾಪಕರು. ನಾನು ಅವರ ಮೆಚ್ಚಿನ ಶಿಷ್ಯ. ಬಿಕ್ಕರ್ನಕಟ್ಟೆಯ ಇನ್ನೂ ಕೆಲವು ಮುಖ್ಯ ಗಣ್ಯವ್ಯಕ್ತಿಗಳು: ಶ್ರೀ ನರಸಿಂಹ ಶೆಟ್ಟರು ೧೯೬೪ರಲ್ಲಿ ರೇಶನ್ ಬಂದ ಮೇಲೆ ತಮ್ಮ ಜೀನಸಿಅಂಗಡಿಯನ್ನು ಮುಚ್ಚಿ ಸೊಸೈಟಿಗೆ ಮೆನೇಜರ್ ಆದರು. ಆ ಸಮಯದಲ್ಲಿ ನನ್ನ ತಂದೆಯವರೊಂದಿಗೆ ಸೇರಿ ಕೆಲವು ವರ್ತಕರ ಕಪ್ಪುಮಾರುಕಟ್ಟೆಯನ್ನು ನಿಲ್ಲಿಸಿ, ಪದವು ಸರ್ವೀಸ್ ಕೋ-ಆಪರೇಟಿವ್ ಸೊಸೈಟಿ ಆರಂಭಿಸಿದರು. ಈ ಸೊಸೈಟಿಯಲ್ಲಿ ಅನೇಕ ವರ್ಷ ಬಿಟ್ಟಿ ಕೆಲಸ ಮಾಡಿ ಎಷ್ಟೋ ಜನರ ಪರಿಚಯ ಮಾಡಿಕೊಂಡೆ. ಸಿಟಿ ಬೇಕರಿಯ ಶ್ರೀ ಸರ್ವೋತ್ತಮ ಭಟ್ಟರು ತೀಕ್ಷ್ಣಮತಿ. ಸಿಂಡಿಕೇಟ್ ಬೇಂಕಿನಲ್ಲಿ ಪಿಗ್ಮಿ ಡೆಪೊಸಿಟ್ ಸಂಗ್ರಹಕಾರರಾಗಿ ಮನೆ ಮನೆ ಸುತ್ತುತ್ತಿದ್ದರು. ಕನ್ನಡ-ತುಳು ಪದಗಳಲ್ಲಿ ದ್ವಂದಾರ್ಥ ಬರುವ ಚುಟುಕುಗಳನ್ನು ಕಟ್ಟುತ್ತಿದ್ದರು. ಬಂಡಿಮಠದ ಪಕ್ಕದಲ್ಲಿ ವಾಸವಾಗಿದ್ದ ಭೋಜ (ಕಳ್ಳಭಟ್ಟಿ) ಮತ್ತು ನಾಗೇಶ (ತರಕಾರಿ ಅಂಗಡಿ ಮತ್ತು ಮಟಕಾ) ಸಾಕಷ್ಟು ಹಣ ಮಾಡಿದರು, ತಮ್ಮ ಮನೆಯನ್ನು ಅಗಲಿಸುತ್ತಾ, ಸರಕಾರಿ ಜಮೀನನ್ನೂ ಕಬಳಿಸಿದರು. ಪಳ್ಳಿಯ ಮುಕ್ರಿ ಸಯ್ಯದ್ ಯೂನುಸ್ ಅವರಿಗೆ ಒಬ್ಬಳೇ ಹೆಂಡತಿ - ೧೫ ಮಕ್ಕಳು (ಇಬ್ಬರು ಹುಡುಗಿಯರು, ೧೩ ಹುಡುಗರು) - ತುಂಬಾ ಸಂಪ್ರದಾಯಸ್ಥ ಮುಸ್ಲಿಮರಾದರೂ ತಮ್ಮ ಮನೆಯ ಕಟ್ಟಡದ ಭಾಗದಲ್ಲೇ ವಾಸವಾಗಿ ಕಸುಬು ನಡೆಸುತ್ತಿದ್ದ ವೇಶ್ಯೆಯರ ಕುಟುಂಬವನ್ನು ಸಹಿಸಿಕೊಂಡರು.

  ReplyDelete
 5. ದಿನೇಶ ನೆಟ್ಟಾರ್05 January, 2016 11:04

  ಡಾ. ಕೆ.ಜಿ.ರಾವ್ ಅವರಿಗೆ ಪಿತ್ರಾರ್ಜಿತ ಆಸ್ತಿ ಬೇಕಷ್ಟು ಇತ್ತು. ಕುಡುಪಿಯಿಂದ ವರ್ಷಕ್ಕೊಮ್ಮೆ ತಲೆಹೊರೆ ಬರುತ್ತಿತ್ತು. ಅವರ ಅಣ್ಣ ನಾರಾಯಣ ರಾವ್ ವೋಲ್ಕಾರ್ಟಿನಲ್ಲಿ ಇಂಜಿನೀಯರ್. ಪತ್ನಿ ತೀರಿ ಹೋದ ಮೇಲೆ ಮರುಮದುವೆಯಾಗದೆ, ಮೂರು ಮಕ್ಕಳನ್ನು ತಮ್ಮನ ಮನೆಯಲ್ಲೇ ಬಿಟ್ಟು ಖರ್ಚಿಗೆ ಹಣ ಕಳುಹಿಸುತ್ತಿದ್ದರು. ಅಡಿಗೆಗೆ ಅವರ ೮೦ ವರ್ಷದ ತಾಯಿ ಇದ್ದರು. ಕೆ.ಜೆ.ರಾಯರು ವೈದ್ಯವೃತ್ತಿ ಆರಂಭಿಸಿದ್ದರು. ಪ್ಹೀಸ್ ತೆಗೆದುಕೊಳ್ಳಲಿಲ್ಲ. 'ಇದೇನು ಪೊಟ್ಟು ಮದ್ದು' ಎಂದು ರೋಗಿಗಳು ಬರುವುದನ್ನು ನಿಲ್ಲಿಸಿದರು. ಅಳಕೆ ಅಂಗಡಿಯ ಕೆಲಸ ಬರೇ ಸಮಯ ಕಳಕೊಳ್ಳುವ ದಿನಂಚರಿ ಕಾರ್ಯಕ್ರಮ.

  ಒಂದು ತಿದ್ದುಪಡಿ: ತಂದೆಯವರು ನಾಗರಹಾವು ಕೊಂದ ವಿಷಯ -- ನಾವು ಆಗ ಡಾ ಕೆ.ಜಿ.ರಾವ್ ಅವರ ಮನೆಯಲ್ಲಿ ಬಾಡಿಗೆ ಇದ್ದೆವು. ನನಗೆ ಸುಮಾರು ೭ ವರ್ಷ. ನಮ್ಮ ಬಚ್ಚಲು ಮನೆಯ ಹತ್ತಿರ ಹಾವು ಬಂತು. 'ನನಗೆ ಚಿಕ್ಕ ಮಕ್ಕಳಿದ್ದಾರೆ, ಹಾವು ಕಚ್ಚಿದರೆ?' ಎಂದು ತಂದೆಯವರು ಅದನ್ನು ಕೊಂದರು. ಸಂಸ್ಕಾರ ಮಾಡಲಿಲ್ಲ. ಡಾ. ಕೆ.ಜಿ.ರಾಯರ ತಾಯಿ ನನ್ನ ತಂದೆಯವರ ಜೊತೆ ಖಾಯಂ ಆಗಿ ಮಾತಾಡುವುದನ್ನು ಬಿಟ್ಟವರು. ಎಷ್ಟೋ ಜನ ೧೨ ವರ್ಷದ ಹಾವಿನ ಸೇಡು ಎಂದು ಹೆದರಿಸಿದರು. ಆದರೆ ನನಗೆ ತಂದೆಯವರ ಮೇಲೆ ಭರವಸೆ ಇತ್ತು. ನಂಬಲಿಲ್ಲ. ಮೂರು-ನಾಲ್ಕು ವರ್ಷಗಳ ನಂತರ ಕಂಡೆಟ್ಟಿನಲ್ಲಿ ಒಂದು ನಾಗರಹಾವು ಕಂಡಾಗ ಒಬ್ಬರು ತಂದೆಯವರನ್ನು ಕರೆದರು. ಹಾವನ್ನು ಕೊಂದು ತಂದು ನನಗೆ ಕೊಟ್ಟರು. ನಾನು ಅದನ್ನು 'ಪ್ಹೊರ್ಮಲಿನ್' ನಲ್ಲಿ ಒಂದು ಬಾಟ್ಲಿಯಲ್ಲಿ ಹಾಕಿಟ್ಟಿದ್ದೆ.

  ReplyDelete
 6. pಪ್ರಿಯ ರೋಹಿಣಿ, ನೀವು ಪರಿಚಯಿಸಿದ ನಿಜ ಮಾನವ, ಮಹ್ಹಾತ್ಮ್ ಜಿ. ಕೆ. ನೆತ್ತಾರರಿಗೆ ನನ್ನ ಸಾಷ್ಟಾಂಗ ನಮನ. ನನ್ನ ಬಾಲ್ಯದ ಮಂಗಳೂರ ಚಿತ್ರಣ - ಬೀಕರ್ಣಕಟ್ಟೆ ಕೊಡಿಯಾಲ ಬೈಲಿಗೆ ದೂರವಾದರೂ- ಅದೇ ಚಿತ್ರಣ ಆಪ್ಯಾಯ್ಮಾನಾವೆನಿಸಿತು . ನಮ್ಮ ಡಾ. ಎM.ಎಸ್. ಪ್ರಭು ಮತ್ತವರ ಕಂಪೌಂಡೆರ್ ಮತ್ತು ಅವರ ಮಿಕ್ಸ್ಚರ್ ಸ್ಮೃತಿ ಪಾತಾಳ ತುಂಬಿತು. ನಿಮ್ಮ ಈ ಜೀವನದೊಸಗೆ ಬಲು ಮೂಲ್ಯ, ರೋಹಿಣಿ.

  ReplyDelete