14 August 2015

ಪ್ರವಾಸದ ರುಚಿಗೆಡಿಸಿದ ಪ್ಯಾಕೇಜ್

(ಜಮ್ಮು ಕಾಶ್ಮೀರ ಪ್ರವಾಸ ಕಥನ )

ವೈಷ್ಣೋದೇವಿ ದರ್ಶನದೊಡನೆ ನಮ್ಮ ಪ್ಯಾಕೇಜಿನ ಮುಖ್ಯ ವೀಕ್ಷಣಾಂಶಗಳು ಮುಗಿದಿದ್ದುವು. ಉಳಿದದ್ದು ಮರುಪಯಣ. ಆದರೆ ನಮ್ಮ ತಂಡ ಒಗ್ಗೂಡುವಲ್ಲಿ ಇದ್ದಂತೇ ಚದುರುವಲ್ಲೂ ಭಿನ್ನ ಇಷ್ಟಾನಿಷ್ಟಗಳಿದ್ದುವು. ಅದಕ್ಕನುಗುಣವಾಗಿ ಗಿರೀಶ್ ನಮ್ಮ ಒಳಗುಂಪುಗಳಿಗೆ ಅವರವರ ಊರಿಗೆ ಮರುಪಯಣದ ಟಿಕೆಟ್ಟು ಸಹಿತ ಮುಂದಿನ ಕಲಾಪಗಳನ್ನು ವಿಷದಪಡಿಸಿದರು. ಪ್ರಕಾರ (ಇನ್ನೊಂದೇ ಕಾರಿನಲ್ಲಿ ನಮಗೆ ಜೊತೆಗೊಟ್ಟಿದ್ದ) ಓಬಳೇಶ್ ಕುಟುಂಬ ಜಮ್ಮುವಿಂದಲೇ ವಿಮಾನದಲ್ಲಿ ಚನ್ನೈಗೆ ಹಾರುವುದಿತ್ತು. ಕತ್ರದ ಹೊಸಹಗಲಿನಲ್ಲಿ ಗಿರೀಶ್ ಕಾರಿನಲ್ಲಿ ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು, ಸುವರ್ಣ, ರೇಖಾ ಮತ್ತು ವಿದ್ಯಾರಣ್ಯರನ್ನು ಜಮ್ಮುವಿಗೆ ಕರೆದೊಯ್ದರು. ಎರಡನೇ ಕಂತಿಗೆ ಉಳಿದ ಎಂಟೂ ಜನಕ್ಕೆ ಮಧ್ಯಾಹ್ನದ ಊಟದವರೆಗೆ ಅದೇ ಹೋಟೆಲಿನಲ್ಲಿ ವಿಶ್ರಾಂತಿ.
ಅರ್ಧ ಹಗಲು ಸುಮ್ಮನೆ ಕೂರುವುದು ನಮ್ಮಿಂದಾಗದು. ಹಾಗೆಂದು ಪ್ರವಾಸೀ ಕೇಂದ್ರದ ಅವಗುಣಗಳನ್ನು ರೂಢಿಸಿಕೊಂಡ ಕತ್ರ ಸುತ್ತುವ ಮನಸ್ಸೂ ನಮಗೆ ಬರಲಿಲ್ಲ. ಆಗ ಒದಗಿದ್ದು ಹೋಟೆಲಿನಿಂದ ಎರಡೇ ಮಿನಿಟು ದೂರದಲ್ಲಿದ್ದ ಹೊಸಾ ಮಾಲ್-ಮಲ್ಟಿಪ್ಲೆಕ್ಸ್. ಅಲ್ಲಿ ವಾರದ ಹಿಂದಷ್ಟೇ ಬಿಡುಗಡೆಗೊಂಡ ಹಿಂದಿ ಚಿತ್ರ `ಪೀಕು’ – (ಅಮಿತಾಭ್, ದೀಪಿಕಾ, ಇರ್ಫಾನ್) ನಮ್ಮನ್ನು ಆಕರ್ಷಿಸಿತ್ತು. ಗಂಟೆ ಹತ್ತಾದರೂ ಧಿಯೇಟರೇನು ವಲಯದ ಪೇಟೆಯೇ ಖಾಲಿ ಹೊಡೆದಿತ್ತು. ನಾವು ನಿರ್ಯೋಚನೆಯಿಂದ ಹತ್ತೂಕಾಲರ ಪ್ರದರ್ಶನಕ್ಕೆ ಟಿಕೆಟ್ ಖರೀದಿಸಿದೆವು. ಟಿಕೆಟ್ಟಿನಾಕೆ ಸಂಕೋಚದಲ್ಲೇ ಹೇಳಿದಳುಇದರಿಂದ ಪೀಕುಗೆ ಮೂರು ಜನ ಪ್ರೇಕ್ಷಕರು ಬಂದಂತಾಯ್ತು! ಕನಿಷ್ಠ ಆರು ಜನವಾಗದಿದ್ದರೆ ಪ್ರದರ್ಶನ ರದ್ದಾಗುತ್ತದೆ. ಆಗ ಇದೇ ಟಿಕೆಟ್ಟನ್ನು ನೀವು ಮತ್ತೈದೇ ಮಿನಿಟಿನಲ್ಲಿ ತೊಡಗುವ, ಇನ್ನೊಂದೇ ಹೊಸ ಸಿನಿಮಾಗಬ್ಬರಿಗೆ (ಅಕ್ಷಯ ಕುಮಾರ್, ಪ್ರಿಯಾಂಕಾ) ಬಳಸಿ ಸಹಕರಿಸಬೇಕು.” ಪೀಕುಗೆ ನಮಗೂ ಮೊದಲೇ ಮುಂಬೈ ತರುಣನೊಬ್ಬ ಟಿಕೆಟ್ ತೆಗೆದಿದ್ದ. ಆತ ನಮ್ಮ ಸೇರ್ಪಡೆಯಿಂದ ತುಸು ಉತ್ತೇಜಿತನಾಗಿ ವಠಾರದಲ್ಲಿದ್ದ ಇತರ ನಾಲ್ಕೈದೇ ಮಂದಿಯಲ್ಲಿ ಪೀಕು ದೇಖೋಪುಸಲಾವಣೆಗಿಳಿದ. ಆದರೆ ಅವರ ಹೇಳಿಕೆ ನಮ್ಮ ಸಾಮಾನ್ಯ ಚಿತ್ರವೀಕ್ಷಕರ ಮನೋಸ್ಥಿತಿಗೆ ಹಿಡಿದ ಕನ್ನಡಿ: “ಅಯ್ಯೋ ಮುದ್ಕ ಅಮಿತಾಬ್...!” ಅನಿವಾರ್ಯವಾಗಿ ನಾವು ಮೂವರು ಮತಾಂತರಗೊಂಡೆವು. ಹಾಗೆಂದು ಅಲ್ಲಿ ಗಬ್ಬರ್ ಯಶಸ್ವಿ ಎಂದು ಭಾವಿಸಬೇಡಿ. ಒಟ್ಟು ವೀಕ್ಷಕ ಸಂಖ್ಯೆ ಹದಿನೈದನ್ನು ಮೀರಲಿಲ್ಲ
ಚಿತ್ರದಲ್ಲಿ, ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕನೊಬ್ಬ ಜಗಭ್ರಷ್ಟನಿಂದ ಸತ್ತೂ ಬದುಕುತ್ತಾನೆ. ಮತ್ತೆ ಆದರ್ಶ ಸಮಾಜ ರಚನೆಯ ಪಣ ತೊಟ್ಟು, ಆಪ್ತ ಶಿಷ್ಯವೃಂದದ ಕೂಟ ಕಟ್ಟುತ್ತಾನೆ. `ಗಬ್ಬರ್ಎಂಬ ವೀರನಾಮದಲ್ಲಿ ಅತಿಮಾನುಷ ಸಾಹಸಗಳೊಡನೆ ನಾಯಕತ್ವ ಕೊಡುತ್ತಾನೆ. ಮಹಾಭ್ರಷ್ಟನನ್ನು ಮುಗಿಸುವುದರಲ್ಲಿ ಕಥೆ ಶಿಖರ ಮುಟ್ಟುತ್ತದೆ. ಉದ್ದಕ್ಕೂ ಹರಿದ ಸಂದೇಶಗಳ ಪ್ರವಾಹಕ್ಕೆ ತಾರ್ಕಿಕ ಕೊನೆ ತೋರುವಂತೆ, “ಕಾನೂನಿಗೆ ಯಾರೂ ಅತೀತರಲ್ಲಎನ್ನುವುದನ್ನೂ ಮೆರೆಯಿಸಿ, ನಾಯಕ ಗಲ್ಲುಗಂಬ ಏರುವುದರೊಂದಿಗೆ ನಮಗೆ ಮುಕ್ತಿ ಸಿಕ್ಕಿತು. [ಶಿಳ್ಳೆ ಬೊಬ್ಬೆಗಳ ಕೊರತೆ ಕಂಡು (ಅಕ್ಷಯ್ ಕುಮಾರ್) “ಫ್ಯಾನುಗಳಿರಲಿಲ್ಲನಾನಂದೆ. ಒಂದೂವರೆ ಗಂಟೆ ತಂಪಾಗಿ ಕಳೆದ ಸಂತೋಷಕ್ಕೆ ಜತೆಗಾತಿಏಸಿ ಇತ್ತಲ್ಲಾಅನ್ನಬೇಕೆ!]

ಹೋಟೆಲಿನಲ್ಲಿ ಉಳಿದವರ ಜತೆ ಊಟ ಮುಗಿಸಿದೆವು. ಗಿರೀಶ್ ನಿಶ್ಚೈಸಿದ್ದ ಕಾರು ನಮ್ಮನ್ನೇ ಕಾದಿತ್ತು. ಅದನ್ನೇರಿ ಹೋಟೆಲಿಗೂ ಕತ್ರಕ್ಕೂ ವಿದಾಯ ಹೇಳಿದೆವು. ಜಮ್ಮು ದಾರಿಯಲ್ಲಿ  ನಗ್ರೋಟ ಎಂಬಲ್ಲಿ ಎರಡು ದೇವಸ್ಥಾನಗಳ ಸಂದರ್ಶನವಾಯ್ತು.
ಇದು ದೊಡ್ಡ ದೇವರ (ವೈಷ್ಣೋದೇವಿ) ಭಕ್ತರಲ್ಲಿ ಕಿರಿಪಾಲು ಕೇಳುವಂತೆ `ಪ್ರಥಮ ವೈಷ್ಣೋದೇವಿಎಂದೇ ಪ್ರಸಿದ್ಧವಂತೆ. (ಮಂಜುನಾಥನ ಭಕ್ತರಲ್ಲಿ ಚಾರ್ಮಾಡಿಯ ಅಣ್ಣಪ್ಪ ಪಾಲು ಕೇಳಿದ ಹಾಗೆ?) ಅಲ್ಲಿನ ವಿಸ್ತಾರ ಬಸ್ ನಿಲ್ದಾಣದಲ್ಲಿ ಎರಡು ಪ್ರವಾಸೀ ಬಸ್ಸುಗಳು ಬಂದು ಠಿಕಾಣಿ ಹೂಡಿದ್ದು ಪ್ರೇಕ್ಷಣೀಯವಾಗಿತ್ತು.
ಗ್ಯಾಸ್ ಸ್ಟವ್, ತರಕಾರಿ ಕೊಚ್ಚು, ಅಡುಗೆ-ಪಡುಗೆ ಬಸ್ಸಿನ ಬುಡದಲ್ಲೇ ನಡೆದಿತ್ತು. ಯಾತ್ರಿಗಳು ಮಂದಿರದ ಹಜಾರಗಳಲ್ಲಿ ಮನಸ್ಸಿನ ಶಾಂತಿಯನ್ನೂ ದೇಹದ ವಿಶ್ರಾಂತಿಯನ್ನೂ ತಳುಕು ಹಾಕಿ ನಿದ್ರಿಸಿದ್ದರು! ನಾವು ಸಾಕಷ್ಟು ಚುರುಕಿನಲ್ಲೇ ದೇವಾಲಯಕ್ಕೊಂದು ಸುತ್ತು ಹಾಕಿ ಪ್ರಯಾಣ ಮುಂದುವರಿಸಿದೆವು.

ಜಮ್ಮು ಹೊರವಲಯದಲ್ಲಿ ಇನ್ನೊಂದು ದೇವಳ ದರ್ಶನರಘುನಾಥ ಮಂದಿರ. ಇದು ಪಕ್ಕಾ ವಾಣಿಜ್ಯ ಹಾಗೂ ವಸತಿ ಸಂಕೀರ್ಣಗಳ ಮತ್ತು ಸದಾ ಜನವಾಹನ ಸಮ್ಮರ್ದವುಳ್ಳ ವಠಾರದ ನಡುವೆ ಇದೆ. ಆದರೂ ಬಹಳ ದೊಡ್ಡ ವಠಾರವುಳ್ಳ ದೇವಳ.
ಇಲ್ಲಿ ಹಲವು ಆರಾಧನಾಮೂರ್ತಿಗಳ ನಡುವೆ ರಘುನಾಥ ಅಧಿ ದೇವರು. ಏಳು ಗೋಪುರಗಳ ಮಂದಿರ, ಸುಮಾರು ನೂರೈವತ್ತು ವರ್ಷಗಳ ಪ್ರಾಚೀನತೆಯುಳ್ಳ ಬಹುಜನ ವಿಶ್ವಾಸದ ಕೇಂದ್ರ, ಎಂದೆಲ್ಲ ಅಂತರ್ಜಾಲ ವಿಶ್ವಕೋಶ (ವಿಕಿಪೀಡಿಯ) ಇದರ ಕುರಿತು ಉದ್ದುದ್ದ ಹಾಡುತ್ತದೆ. ಮುಂದುವರಿದು, ಸಹಜವಾಗಿ ೨೦೦೨ರಷ್ಟು ಹಿಂದೆಯೇ ಎರಡೆರಡು ಬಾರಿ ಇದರ ಮೇಲೆ ಉಗ್ರರ ಕೈ ಬಾಂಬು ದಾಳಿ ನಡೆದು ಹಲವು ಜೀವಹಾನಿಯಾದದ್ದನ್ನೂ ದಾಖಲಿಸುತ್ತದೆ. ಹಾಗಾಗಿ ಈಗ ಭಾರೀ ಸೈನಿಕ ಬಂದೋಬಸ್ತು. ಅಂದರೆ ವೈಷ್ಣೋದೇವಿ ಮಂದಿರದಂತೇ ನಮ್ಮನ್ನು ಜಾಲಾಡಿ, ವಾಚು, ಪೆನ್ನಿನವರೆಗೆ ಎಲ್ಲವನ್ನೂ  ಹೊರಗೇ ಉಳಿಸಿ ಒಳಗೆ ಬಿಟ್ಟರು. ಒಂದು ಸುತ್ತು ಹಾಕಿದೆವು. ಅದಕ್ಕಿರುವ ಜನಪ್ರಿಯತೆಗೆ (ಆದಾಯಕ್ಕೆ) ನಿರ್ವಹಣೆ ತುಂಬ ಕೊಳಕಾಗಿದೆ. ಲೌಕಿಕ ಶುದ್ಧವನ್ನೇ ಕಾಣದ ತಾಣ ಏನು ಪಾರಮಾರ್ಥಿಕಶುದ್ಧಿಯನ್ನು ಕೊಟ್ಟೀತೋ! “ಸ್ವರ್ಗವೇ ಭೂಮಿಯೊಳಗಿರದಿರೆ ನೀನು, ಬೇರೆಲ್ಲೂ ಇಲ್ಲಾಎಂಬ ಕುವೆಂಪು ಗೀತೆ ಗುನುಗಿಕೊಂಡು ಕಾರಿಗೆ ಮರಳಿದೆವು. ಕಾರಿನವನು ನಮ್ಮನ್ನು ರೈಲ್ವೆ ನಿಲ್ದಾಣಕ್ಕೊಯ್ದು ಬಿಟ್ಟು ಹೋದ.

ಜಮ್ಮು ರೈಲ್ವೇ ನಿಲ್ದಾಣಕ್ಕೆ ನೆರೆ ಬಂದಿತ್ತು. ಎಲ್ಲಾ ಆರಾಮ್ಘರ್ಗಳಿಗೂ ಪ್ಲ್ಯಾಟ್ ಫಾರಮ್ಮಿನ ಆಸನ ಸಾಲುಗಳಿಗೂ ಜಗುಲಿಗೂ ಜನಮಹಾಪೂರ ಬಂದು ತಳಮಳಿಸಿತ್ತು. ಇನ್ನೂ ಸಂಜೆ ಐದು ಗಂಟೆ, ನಮಗೆ ರೈಲು ರಾತ್ರಿ ಒಂಬತ್ತರ ಮೇಲೆ! ಅಂದರೆ ಸುಮಾರು ನಾಲ್ಕರಿಂದ ಐದು ಗಂಟೆಯವರೆಗೆ (ಸಮಯಕ್ಕೆ ಸರಿಯಾಗಿ ಯಾವ ರೈಲು ಓಡುತ್ತದೆ ಹೇಳಿ!) ನಾವು ಅಕ್ಷರಶಃ ಕೇರಾಫ್ ರೈಲ್ವೇ ಫುಟ್ಪಾತ್! ಇದ್ದದ್ದರಲ್ಲಿ ಚೊಕ್ಕವಿದ್ದ, ಫ್ಯಾನ್ ತಳದ ನೆಲ ಹುಡುಕಿ, ಗಂಟು ಗದಡಿ ಎದುರಿಟ್ಟುಕೊಂಡು, ಅದರ ಮೇಲೆ ಗಿರೀಶ್ ಕಟ್ಟಿಸಿಕೊಟ್ಟಿದ್ದ ಬುತ್ತಿಯೂಟ ಇಟ್ಟುಕೊಂಡು ಕುಳಿತೆವು.
ಜನಸಾಗರ, ವರ್ತನಾ ವೈಖರಿಗಳು, “ಪ್ರಯಾಣಿಕರ ಗಮನಕ್ಕೆಘೋಷಣೆಗಳು, ಕಡಲನ್ನು ಚಮಚದಲ್ಲಿ ಮೊಗೆದಂತೆ ಆಗೀಗ ಬಂದು ಹೋಗುತ್ತಿದ್ದ ರೈಲು ಗಾಡಿಗಳು, ಶ್ವಾನ ಸಹಿತ ವಿಶೇಷ ಪೋಲಿಸ್ ತನಿಖೆಗಳು ಮಿನಿಟು ಮಿನಿಟಾಗಿ ಎಳೆದು ನಮ್ಮ ಸಮಯವನ್ನು ತರಲು ಸಹಕರಿಸುತ್ತಿತ್ತು. ಮೂರು ಅಡ್ಡೆ ಸುತ್ತಿ, ಹೊರಾವರಣದ ಕಟ್ಟಡಕ್ಕೆ ಹೋಗಿ, ಸ್ಥಳನಿರ್ದೇಶನ ಕಾಣಿಸದ ನಮ್ಮಿಬ್ಬರ ಟಿಕೆಟ್ಟನ್ನು ಸರಿಪಡಿಸಿಕೊಂಡು ಬಂದೆ. ಉಳಿದಂತೆ `ವಿಚಾರಣಾ ಅಡ್ಡೆ ತಲೆ ತಿನ್ನುವುದು, ಮೂತ್ರದೊಡ್ಡಿ ಸಂದರ್ಶನ, ಅಕ್ಬಾರ್ ದುಕಾನ್ ಹುಡುಕಾಟ, ಚಿಲ್ಲರೆ ಖರೀದಿಗಳು, ಚಾಯ್ಪಾನದ ಭ್ರಮೆ ಎಲ್ಲಾ ಮುಗಿದ ಮೇಲೆಬಾಲೇ ಟೋಟದ ಪಕ್ಕದ ಕಾಡೊಲು...” ಇದ್ದ ಪ್ರಜೆಗಳಂತೆ, ರಾತ್ರಿ ಊಟ ಯಾವ ವೇಳೆಗೆ ಪ್ರಶಸ್ತ ಎಂದು ಗಂಭೀರ ಚರ್ಚೆ ನಡೆಸಿದೆವು.

ಗಣೇಶ ಭಟ್ಟ್ ದಂಪತಿ ಹವಾನಿಯಂತ್ರಿತ ಭೋಗಿ ಬಯಸಿದ್ದರಿಂದ ತುಸು ಮೊದಲಿನ ಪ್ರತ್ಯೇಕ ಗಾಡಿ. ಅದು ಲೆಕ್ಕಕ್ಕೆ ಏಳೂವರೆಯಾದರೂ ಎಂಟೂಹತ್ತಕ್ಕೆ ಅವರನ್ನೊಯ್ಯಿತು. ನಮ್ಮ ಮತ್ತು ಧನಂಜಯರ ಕುಟುಂಬದ ಗಾಡಿ ಒಂಬತ್ತರದ್ದು ಜಮ್ಮು ಬಿಡುವಾಗ ಹತ್ತಾಗಿತ್ತು. ಗಾಡಿಯೊಳಗೆ ನಮ್ಮೆರಡು ಕುಟುಂಬಕ್ಕೆ ಸಿಕ್ಕ ಸ್ಥಾನಗಳು ಭಿನ್ನ ಮೂಲೆಗಳಲ್ಲಿದ್ದುವು. ಸಹಜವಾಗಿ ರಾತ್ರಿಯುದ್ದಕ್ಕೆ ಬಂದುಹೋಗುವವರ ಗೊಂದಲ, ನಮ್ಮ ಸೊತ್ತುಗಳ ಕುರಿತ ಆತಂಕ - ನಮ್ಮ ನಿದ್ರೆ ಕನಸಾಯ್ತು. ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ದಿಲ್ಲಿ ತಲಪಿದೆವು. ಅಲ್ಲಿ ಒಟ್ಟಾಗಿ ಟ್ಯಾಕ್ಸೀ ಮಾಡಿ ಮತ್ತೆ ಕರೋಲ್ಭಾಗಿನ ಹೋಟೆಲ್ ಸನ್ಶೈನ್ ಸೇರಿಕೊಂಡೆವು.
ದಿನ ಎಲ್ಲರಿಗೂ ವಿಶ್ರಾಂತಿ ದಿನವೆಂದೇ ಗಿರೀಶ್ ಘೋಷಿಸಿದ್ದರು. ಅದು ಕೊಳ್ಳುಬಾಕರಿಗೆ ದಿಲ್ಲಿ ಮಾರುಕಟ್ಟೆ ಕೊಳ್ಳೆ ಹೊಡೆಯುವುದಕ್ಕೆ ಇರಬಹುದು. ಅಥವಾ ಕಾಶ್ಮೀರದ ಭೌಗೋಳಿಕ ಅಸ್ಥಿರತೆಯಲ್ಲೋ ರಾಜಕೀಯ ತಳಮಳದಲ್ಲೋ ಸಮಯಕ್ಕೆ ಬರಲಾಗದಿದ್ದರೆ ಎಂದು ಟ್ರಾವೆಲ್ಸಿನವರು ಹೆಚ್ಚುವರಿಯಾಗಿ ಇಟ್ಟುಕೊಂಡದ್ದೂ  ಇರಬಹುದು. ಮಾರಣೇ ದಿನ ಅಲ್ಲಿಂದ `ಮರಳಿ ಕರ್ನಾಟಕಸಂಚಾರ ವ್ಯವಸ್ಥೆ (ನಾವೇ ಬಯಸಿದಂತೆ) ನಮ್ಮ ತಂಡವನ್ನು ಇನ್ನಷ್ಟು ಚದುರಿಸಿತು. ಧನಂಜಯ ಕುಟುಂಬಕ್ಕೆ ವಿಮಾನದ ಟಿಕೆಟ್. ಭಟ್ ಕುಟುಂಬಕ್ಕೆ ಬೆಳಿಗ್ಗೆ ಬೇಗನೆ ಹೊರಡುವ ಬೆಂಗಳೂರು ರೈಲು. ನಮಗೆ ಸುಮಾರು ಹತ್ತು ಗಂಟೆಗೆ ಹೊರಡುವ ಮಂಗಳೂರು ರೈಲು. ಗೊಂದಲದಲ್ಲಿ ವಿಕ್ರಂ ಟ್ರಾವೆಲ್ಸಿನೊಡನೆ ಹೆಚ್ಚು  ಒಡನಾಡಿದವರೇ ಆದ ಸುವರ್ಣ ಮತ್ತು ರೇಖಾ ಜೋಡಿ ಮಾತ್ರ ಅತಂತ್ರರಾದದ್ದು ದೊಡ್ಡ ವಿಪರ್ಯಾಸ; ಮೂವರಿಗೆ ಟಿಕೆಟ್ಟೇ ಆಗಿರಲಿಲ್ಲ. ಅದನ್ನು ಸರಿಪಡಿಸಲು ಗಿರೀಶ್ ಸರ್ಕಸ್ ನಡೆಸಿದ್ದರು. (ಎರಡು ದಿನಗಳ ದಿಲ್ಲಿ ವಿಶ್ರಾಂತಿಯ ಕೊನೆಯಲ್ಲಿ, ಸ್ವತಃ ಗಿರೀಶ್ ಜೊತೆಗೊಟ್ಟು, ಬಳಸು ದಾರಿಯಲ್ಲಿ ಮೂವರನ್ನೂ ಊರು ಮುಟ್ಟಿಸಿದರೆಂದು ಅನಂತರ ತಿಳಿಯಿತು)

ಭಾರತೀಯ ದೇಗುಲಗಳ ಪೈಕಿ ಆರಾಧನೆಗೂ ಭಕ್ತರಿಗೂ ಆಧುನಿಕ ಶಿಸ್ತು ಮತ್ತು ಶುಚಿಯನ್ನು ಅಳವಡಿಸಿದವುಗಳಲ್ಲಿ ರಾಮಕೃಷ್ಣಾಶ್ರಮ (ಕ್ರಿ..೧೮೯೭. ಇದು ಬಹುಶಃ ಪ್ರಥಮವೂ ಇರಬೇಕು) ಅಗ್ರೇಸರ. ಅನಂತರದ ದಿನಗಳಲ್ಲಿ ಅದನ್ನು ಅನುಸರಿಸಿದಂತೆ ಹಲವು ಭಕ್ತಿ ಕೇಂದ್ರಗಳೇನೋ ಬಂದಿವೆ. ಆದರೆ ರಾಮಕೃಷ್ಣಾಶ್ರಮಗಳು ರೂಢಿಸಿದ ಸರಳತೆ ಮತ್ತು ಮಂದಿರ ಕೇಂದ್ರಿತವಾದ ಆರ್ಥಿಕ ಉತ್ಪನ್ನವನ್ನು ವಿವಿಧ ಸಾಮಾಜಿಕ ಸೇವೆಗೇ ಬದ್ಧವಾಗಿಸುವ (ಅನಾಥಾಶ್ರಮ, ವಿದ್ಯಾ ಸಂಸ್ಥೆ, ವಿದ್ಯಾರ್ಥಿ ನಿಲಯ, ಆದಿವಾಸಿಗಳ ಪುನರುತ್ಥಾನ ಇತ್ಯಾದಿ) ಕ್ರಮವನ್ನು ಇನ್ನೊಂದು ಸಂಸ್ಥೆಯಲ್ಲಿ ನಾನು ಕಾಣಲಿಲ್ಲ. ಅಂದರೆ, ಉಳಿದವು ದೇಗುಲದ ಮತ್ತು ತತ್ಸಂಬಂಧೀ ಆಚರಣೆಗಳ ವೈಭವೀಕರಣ ನಡೆಸುತ್ತವೆ. ಇವರ ವಿನಿಯೋಗಗಳೇನಿದ್ದರೂ ತಮ್ಮದೇ ಭಕ್ತಿ ಪೂರಕವಾದ ಚಟುವಟಿಕೆಗೆ, ಸಂಸ್ಥೆಗೆ ಲಾಭ ತರುವ ಬಾಬುಗಳಿಗಷ್ಟೇ ಇರುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಇಂಥಾ ದೇವಳಗಳಲ್ಲಿ ಮೂಲ ಹೂಡಿಕೆ ಪಕ್ಕಾ ವಾಣಿಜ್ಯೋದ್ಯಮಗಳದ್ದೇ ಇರುವುದನ್ನು ನಾವು ಕಾಣುತ್ತೇವೆ. ಇಂಥ ಭಕ್ತ್ಯೋದ್ಯಮದಲ್ಲಿ ದಿಲ್ಲಿಯ ಅಕ್ಷರಧಾಮ ಎಂಬ ಸ್ವಾಮಿ ನಾರಾಯಣರ ಆರಾಧನಾ ಕೇಂದ್ರ ತನ್ನ ವಿಸ್ತಾರ ವೈಭವಗಳಿಂದಲೇ ಬಹುಪ್ರಚುರಿತವಾಗಿದೆ. ಇದರ ಗುಜರಾಥ್ ಶಾಖೆಯ ಮೇಲೆ ೨೦೦೨ರಲ್ಲಿ ಭಯೋತ್ಪಾದಕರ ದುರಾಕ್ರಮಣವಾಗಿತ್ತು. ಅದು ಉಂಟು ಮಾಡಿದ ಅನುಕಂಪದ ಅಲೆಯೂ ಮಂದಿರಗಳಿಗೆ ಕೊಟ್ಟ ಪ್ರಚಾರ ಸಣ್ಣದಲ್ಲ. ಹಾಗಾಗಿ ದಿಲ್ಲಿ-ವಿಶ್ರಾಂತಿಯ ಪೂರ್ವಾಹ್ನ ನಾವಿಬ್ಬರು ಮೆಟ್ರೋ ರೈಲೇರಿ ಅಕ್ಷರಧಾಮಕ್ಕೆ ಭೇಟಿ ಕೊಟ್ಟೆವು.
ಸುಮಾರು ಎರಡು ಗಂಟೆಗಳ ಕಾಲ ಅದರ ಖಾಯಂ ಪ್ರದರ್ಶನಗಳನ್ನೆಲ್ಲ ವಿರಾಮದಲ್ಲಿ ನಡೆದು ನೋಡಿದೆವು. ಸಂಜೆಗಳಿಗೇ ಮೀಸಲಾದ ವಿಶೇಷ ಪ್ರದರ್ಶನಗಳ ಬಗ್ಗೆ ಪ್ರಚಾರ ಸಾಹಿತ್ಯ ನೋಡಿಯೇ ಸಾಕೆನ್ನಿಸಿತು. ಪಾರಂಪರಿಕವಾಗಿ ಆರಾಧನಾ ಕೇಂದ್ರಗಳಿಗೆ ಏನೂ ಕೊರತೆಯಿಲ್ಲದ ದೇಶದಲ್ಲಿ ಅಕ್ಷರಧಾಮ ತನ್ನನ್ನೇ ಬಣ್ಣಿಸಿಕೊಳ್ಳುವ ಇನ್ನೊಂದು ವಾಣಿಜ್ಯ ಕೇಂದ್ರ.
ಕನಿಷ್ಠ ನಾಗರಿಕ ಸೌಕರ್ಯಗಳಿಗೂ (ನೆಲ, ನೀರು, ವಿದ್ಯುತ್, ಸಂಪರ್ಕ ಇತ್ಯಾದಿ) ವಿಪರೀತ ಒತ್ತಡ ಇರುವ ಮಹಾನಗರ ಕೇಂದ್ರಿತವಾಗಿಯೇ ಬರುವ ಅಕ್ಷರಧಾಮವನ್ನು ಯಾವ ಮೌಲ್ಯದ ಹೆಸರಿನಲ್ಲೂ ನಾನು ಮೆಚ್ಚಲಾರೆ. (ಅದರ ಶಿಲ್ಪಕಲಾವೈಭವ, ಪ್ರದರ್ಶಿಕೆಗಳ ಮಹತ್ತ್ವ, ವಿಶೇಷ ಪ್ರದರ್ಶನಗಳ ಪರಿಣಾಮ ಮುಂತಾದವುಗಳು ವಿವಿಧ ಮಾಧ್ಯಮಗಳಲ್ಲಿ ಸಾಕಷ್ಟು ಇವೆಆಸಕ್ತರು ಓದಿಕೊಳ್ಳಬಹುದು!)


ಸಂಜೆ ಮತ್ತೆ ಕರೋಲ್ ಭಾಗ್ ಮಾರುಕಟ್ಟೆಯಲ್ಲಿ ಸಾಕಷ್ಟು ವ್ಯಾಪಕವಾಗಿಯೇ ಸುತ್ತಿ ಹೋಟೆಲಿಗೆ ಮರಳಿದೆವು. ಮರು ಬೆಳಿಗ್ಗೆ ಆರಾಮವಾಗಿ ನಾವಿಬ್ಬರೇ ಗಿರೀಶ್ ಮಾಡಿಕೊಟ್ಟ ರಿಕ್ಷಾ ಏರಿ ನಿಜಾಮುದ್ದೀನ್ ರೈಲ್ವೇ ನಿಲ್ದಾಣಕ್ಕೆ ಹೋದೆವು.

ಹತ್ತು ಗಂಟೆ ಐದು ಮಿನಿಟಿಗೆಂದು ನಿಗದಿಗೊಂಡ ರೈಲು ಅರ್ಧ ಗಂಟೆ ತಡವಾಗಿ ಹೊರಟದ್ದೇ ನಮ್ಮ ಪುಣ್ಯ. ಅದು ದಿಲ್ಲಿ ಹೊರವಲಯ ತಲಪುತ್ತಿದ್ದಂತೆ ಮಧ್ಯಾಹ್ನದ `ಬಿಸಿಯೂಟಕ್ಕೆ ಹೆಸರು ನೋಂದಾಯಿಸಿಕೊಳ್ಳುವ ಜನಕ್ಕೆ ಹೆಸರು ಕೊಟ್ಟೆವು. ಆದರೆ ರೈಲಿನ ವಿರಾಮದ ಓಟದಲ್ಲಿ ನಿಗದಿತ ಊಟದ-ನಿಲ್ದಾಣ, ಅಂದರೆ ಸವಾಯ್ ಮಾಧೋಪುರ, ಬರುವಾಗ ಅಪರಾಹ್ನ ಗಂಟೆ ಮೂರಾಗಿತ್ತು. ಪಾಠ ನಮ್ಮ ಮುಂದಿನ ಮೂರು ಊಟಗಳನ್ನು ಪರೋಕ್ಷವಾಗಿ ಕಾಪಾಡಿತು! ನಾವು ದಿಲ್ಲಿ ಪೇಟೆ ಸುತ್ತಾಟದಲ್ಲಿ ಸಂಗ್ರಹಿಸಿದ್ದ ಮಾವು, ಸೌತೆ (ಕಾಕ್ಡೀ), ಬಾಳೇಹಣ್ಣು ತುಂಬಾ ಉಪಯೋಗಕ್ಕೆ ಬಂತು. ಉಳಿದಂತೆ ಸ್ವಲ್ಪ ಹಗುರ ಹೊಟ್ಟೆಯಲ್ಲೇ ಇದ್ದು, ಮಾರಿ ಬರುತ್ತಿದ್ದ ಚಾ ಮತ್ತು ಆಯ್ದ ಸಣ್ಣಪುಟ್ಟ ತಿನಿಸುಗಳಲ್ಲೇ ಮುಂದಿನ ಪ್ರಯಾಣಾವಧಿಯನ್ನು ಪೂರೈಸಿಕೊಂಡೆವು. ಸಿಕ್ಕಿದ್ದನ್ನು ತಿಂದು, ಸಿಕ್ಕಿದಲ್ಲಿ ತೂರಿ ಸಾರ್ವಜನಿಕ ಪೀಡೆಗಳಾಗಲಿಲ್ಲ, ಸ್ವಂತ ಆರೋಗ್ಯವನ್ನೂ ಉಳಿಸಿಕೊಂಡೆವು.


ಸೆಕೆ, ನೀರಿನ ಅಭಾವ ರೈಲು ಪ್ರಯಾಣದಲ್ಲಿ ಬಹಳ ಕಾಡಿತು. `ಬಾಟಲ್ಡ್ ವಾಟರ್ ಭ್ರಮೆಯವರಿಗೆ `ಠಂಡ ಪಾನಿಎಷ್ಟೂ ಎಲ್ಲೂ ಸಿಗುತ್ತಿತ್ತು. ಅದಕ್ಕೆ ಸರಿಯಾಗಿ ಪರ್ಲ್ಪೆಟ್ ಬಾಟಲುಗಳು (ಎಷ್ಟೋ ಅರ್ಧಂಬರ್ಧ ನೀರಿದ್ದಂತೇ) ಭೋಗಿಯೋಳಗೂ ಮಾರ್ಗದುದ್ದಕ್ಕೂ ಎರಚಾಡಿಕೊಂಡಿದ್ದದ್ದನ್ನು ನೋಡಿದಾಗ ಸಂಕಟವಾಗುತ್ತಿತ್ತು. ನಾವಂತೂ ಸಾರ್ವಜನಿಕ ವಿತರಣೆಗಳನ್ನು ಆದಷ್ಟು ಬಳಸಿ, `ವ್ಯವಸ್ಥೆಅದನ್ನು ಪೂರ್ಣ ನಿರಾಕರಿಸುವ ದಿನ ದೂರ ಮಾಡಲು ಯತ್-ಕಿಂಚಿತ್ ಕರ್ತವ್ಯ ಪೂರೈಸಿದ್ದೇವೆ. (ನಮ್ಮ ಸರಕಾರೀ ಕನ್ನಡ ಶಾಲೆಗಳನ್ನು ನೆನೆಸಿಕೊಳ್ಳಿ.) ನಮ್ಮ ಎರಡು ಟಪ್ಪರ್ ವೇರ್ ಖಾಯಂ ಬಾಟಲುಗಳನ್ನು ಉದ್ದಕ್ಕೂ ನಿಲ್ದಾಣಗಳಲ್ಲಿ ಸಿಕ್ಕ `ಕುಡಿಯುವ ನೀರುಅಡ್ಡೆಗಳಿಂದ ಮರುಪೂರಣಗೊಳಿಸಿಕೊಳ್ಳುತ್ತಲೇ ಬಳಸಿದ್ದೇವೆ. ನಲ್ಲಿಗಳ ಪರಿಸರ ಎಲ್ಲೆಡೆ ಶುದ್ಧವಿತ್ತೆಂದು ಹೇಳಲಾರೆ. ಆದರೆ ನೀರಿನಿಂದ ನಮ್ಮ ಆರೋಗ್ಯ ಎಲ್ಲೂ ಕೆಡಲಿಲ್ಲ! ಅದಕ್ಕೂ ಮಿಕ್ಕು ಕನಿಷ್ಠ ಹನ್ನೆರಡರಿಂದ ಇಪ್ಪತ್ತು ಪರ್ಲ್ಪೆಟ್ ಬಾಟಲುಗಳ ಪ್ರಸರಣವನ್ನು ಕಡಿಮೆಮಾಡಿದ್ದೇವೆ. ಎರಡನೇ ದಿನ ಹಗಲು ಸುಮಾರು ಹನ್ನೊಂದು ಗಂಟೆಗೇ ನಮ್ಮ ಭೋಗಿಯ ಅನ್ಯ ಬಳಕೆಯ ನೀರದಾಸ್ತಾನು ಮುಗಿದು ಹೋಗಿತ್ತು. ಒಂದೆರಡು ದೊಡ್ಡ ನಿಲ್ದಾಣಗಳನ್ನು ಕಳೆದರೂ ಪರಿಸ್ಥಿತಿ ಸುಧಾರಿಸಲಿಲ್ಲ. ನಾನು ಮೊದಲು ಗಾಡಿಯ ರಕ್ಷಕನ ಬಳಿ ದೂರು ಸಲ್ಲಿಸಿದೆ. ಆತ ಎಂಜಿನ್ ಚಾಲಕನನ್ನು ಸಂಪರ್ಕಿಸಲು ತಿಳಿಸಿದ. ಚಾಲಕನೂ ಅಸಹಾಯಕ. ದಾರಿಯಲ್ಲಿ ಭೋಗಿಗಳಿಗೆ ನೀರು ಮರುಪೂರಣ ವ್ಯವಸ್ಥೆಯಿದ್ದ ನಿಲ್ದಾಣ (ಮಡ್ಗಾಂವ್) ಬರಬೇಕಾದರೆ ಸಂಜೆ ಏಳಾಗಿತ್ತು. ದುರಂತವೆಂದರೆ ಇದು ಗಾಡಿಯ ಕಕ್ಕೂಸುಗಳಲ್ಲಿ, ಕೈತೊಳೆಯುವ ಬಾನಿಗಳಲ್ಲೂ ಪರ್ಲ್ಪೆಟ್ ಬಾಟಲುಗಳ ಮೆರೆತವನ್ನು ಕಾಣಿಸಿತ್ತು. ಇದರ ಮೇಲೆ ಬಹುತೇಕ ಸಾರ್ವಜನಿಕರ ಅಶಿಸ್ತು ಹಾಗೂ ನೈರ್ಮಲ್ಯಗಳ ಕೊರತೆ ನಮ್ಮ ಪ್ರಯಾಣವನ್ನು ಅಸಹ್ಯಗೊಳಿಸಿತ್ತು.

ಒಟ್ಟು ಯೋಜಿತ ಪ್ರವಾಸದ ನಿರೀಕ್ಷೆಗಳು ಸೋತದ್ದನ್ನು ಮರುಪಯಣ ಹೆಚ್ಚಿಸಿತು. ಕತ್ರದ ಅರ್ಧ ದಿನದಿಂದ ತೊಡಗಿ ಸುಮಾರು ನಾಲ್ಕು ದಿನಗಳ ಉದ್ದವನ್ನು ನಾವು ನೀರಸವಾಗಿ ಕಳೆದೆವು. (ಇದು ಮೊದಲೇ ಸ್ಪಷ್ಟವಾಗಿದ್ದರೆ ನಾವೂ ಜಮ್ಮುವಿನಿಂದಲೇ ವಿಮಾನ ಹಿಡಿದು ಮುಗಿಸುತ್ತಿದ್ದೆವು ಖಂಡಿತ.) ನಮ್ಮ ರೈಲಾದರೋ ಮತ್ತೆ ಕೇರಳ ಲಕ್ಷ್ಯದ್ದೇ ಆಗಿತ್ತು. ಅದು ತೀರಾ ಅವೇಳೆಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ, ಮಂಗಳೂರ ಸಂಧಿಸ್ಥಳದಲ್ಲಿ (ಕಂಕನಾಡಿ) ಕೇವಲ ಐದು ಮಿನಿಟಷ್ಟೇ ನಿಂತು ಮುದುವರಿಯುವುದಿತ್ತು. ಇದು ನಮ್ಮ ಒಳಗುದಿಯನ್ನು ಹೆಚ್ಚಿಸಿ, ‘ಮಂಗಳೂರು ತಪ್ಪಿಯೇ ಹೋಗಬಹುದುಎಂಬ ಆತಂಕವನ್ನೇ ಮೂಡಿಸಿತ್ತು. ಹಾಗಾಗಿ ನಾವು ಕುಂದಾಪುರದಿಂದಲೇ ಸಜ್ಜಾಗಿ ಕುಳಿತು, ಹಾದುಹೋಗುವ ನಿದ್ದೆಗಣ್ಣಿನ ನಿಲ್ದಾಣಗಳ ಲೆಕ್ಕ ಹಾಕಿದೆವು. ಉಡುಪಿ ಮಂಗಳೂರುಗಳ ನಿಗದಿತ ತಂಗುವಿಕೆಯನ್ನು ಮೀರಿ ಯಾವ್ಯಾವುದೋ ಕಾರಣಕ್ಕೆ ಹಸಿರು ಕಂದೀಲು ಸಿಗದೆ ನಿಂತದ್ದೆಲ್ಲ ಸೇರಿ ಭಾರೀ ವಿಳಂಬವನ್ನೇ ಲೆಕ್ಕ ಹಾಕಿದ್ದೆವು. ಆದರೆ ಒಂದು ಗಂಟೆಯ ಸುಮಾರಿಗೇ ಕಂಕನಾಡಿ ಬಂದಾಗ ಕಡೆಗೂ ಮುಗಿಯಿತಲ್ಲ ಎಂಬ ಬಿಡುಗಡೆಯ ಭಾವ ಬಂದಿತ್ತು. ನಿಲ್ದಾಣದ ಆಟೋ ರಾಕ್ಷಸ ನಿರ್ದಯೆಯಿಂದ ನೂರೈವತ್ತು ರೂಪಾಯಿ (ಮುಂದಾಗಿಯೇ ಮಾತಾಡಿದಂತೇ) ವಸೂಲು ಮಾಡಿ ಮನೆ ಮುಟ್ಟಿಸಿದಾಗ, ಬಳಕೆದಾರ ಜಾಗೃತಿಗೂ ಮಿತಿಯುಂಟೆಂದು ಕೇವಲ ತರ್ಕಿಸಿ ತೃಪ್ತಿಪಟ್ಟುಕೊಂಡೆವು.

ಮರು ಹಗಲೇ ವಿಕ್ರಂ ಟ್ರಾವೆಲ್ಸಿಗೆ ನಾನು ೧೪ ಅಂಶಗಳ ವಿವರಣೆ ಕೇಳಿ ಪತ್ರ ಬರೆದೆ. ಪತ್ರದಲ್ಲಿನ ಹಣಕಾಸಿನ ಲೆಕ್ಕ ಮತ್ತು ನಮ್ಮ ವೈಯಕ್ತಿಕ ದೂರುಗಳನ್ನು ಬದಿಗಿಟ್ಟು ಸಾರಾಂಶವನ್ನು ಮಾತ್ರ ಕೊಡುತ್ತೇನೆ:
ನಾವು ಮಂಗಳೂರು ಬಿಡುವ (--೧೫) ಮೊದಲೇ ಪತ್ರಿಕೆಯಲ್ಲಿ ಓದಿ ತಿಳಿದಿದ್ದೆವು - 'ಕಾಶ್ಮೀರದಲ್ಲಿ ಮಳೆಯಿಂದ ಭೂಕುಸಿತಗಳಾಗಿವೆ. ಜಮ್ಮು ಶ್ರೀನಗರ ದಾರಿಯನ್ನು ಏಕಮುಖ ಸಂಚಾರಕ್ಕೆ ತೆರೆದಿದ್ದಾರೆ.'   ಕುರಿತು ನಿಮ್ಮ ಪ್ರತಿನಿಧಿ - ಗಿರೀಶ್ ತಿಳುವಳಿಕೆ ತಂದುಕೊಳ್ಳದೆ ಆರಾಮವಾಗಿ ಹನ್ನೊಂದು ಗಂಟೆಗೆ ಜಮ್ಮು ಬಿಟ್ಟದ್ದಕ್ಕೆ ನಾವು (ಒಟ್ಟು ತಂಡ) ಅಪಾರ ಹಿಂಸೆ, ಕಾನೂನಿನ ವಿರುದ್ಧದ ಪ್ರಯಾಣ, ಅವೇಳೆಯಲ್ಲಿ ಊಟ, ವಿಶ್ರಾಂತಿ ಎಲ್ಲ ಅನುಭವಿಸಬೇಕಾಯ್ತು. ಸ್ಥಳೀಯ ಕಟ್ಟಳೆಗಳನ್ನು ಪ್ರವಾಸೀ ನಿರ್ವಾಹಕ ಮೊದಲೇ ತಿಳಿದುಕೊಂಡು ತಂಡವನ್ನು ನಡೆಸಬೇಡವೇ? ಇದು ವೀಕ್ಷಣಾ ಸ್ಥಳ ಮತ್ತು ಸಮಯದ ಹೊಂದಾಣಿಕೆಗೂ ಅನ್ವಯಿಸಬೇಕಿತ್ತು. ನಮ್ಮ ಬಹುತೇಕ ಮಧ್ಯಾಹ್ನದ ಊಟಗಳು ತಡವಾಗಿಯೂ ಸ್ಥಳವೀಕ್ಷಣಾ ಸಮಯ ತೀರಾ ಅವಸರದ್ದೂ ಆದದ್ದು ಸರಿಯೇ?
ವೈಷ್ಣೋದೇವಿ ಬೆಟ್ಟ ಇಳಿದ ಮೇಲೆ ನಾವು ನಮ್ಮದೇ ವೆಚ್ಚದಲ್ಲಿ, ಎಚ್ಚರಿಕೆಯಲ್ಲಿ ಹೋಟೆಲು ಸೇರಿಕೊಂಡೆವು. ಅಪರಿಚಿತ ಸ್ಥಳ, ಅವೇಳೆ, ಭಾಷಾ ಸಮಸ್ಯೆ, (ಕಾಶ್ಮೀರ ಎಂದ ಮೇಲೆ ಭಯೋತ್ಪಾದನೆ ಹಾಗೂ ಪಾಕೃತಿಕ ಅಸ್ಥಿರತೆಯನ್ನೂ ಸೇರಿಸಿ,) ಚರವಾಣಿಯದ್ದೂ ಸಂಪರ್ಕ ಸಮಸ್ಯೆ ಇದ್ದಲ್ಲಿ ಪ್ರವಾಸೀ ಸದಸ್ಯರನ್ನು ಸುಕ್ಷೇಮವಾಗಿ ಮತ್ತೆ ಸೇರಿಸಿಕೊಳ್ಳುವ ಜವಾಬ್ದಾರಿ ಟ್ರಾವೆಲ್ಸ್‍ಗೆ ಬೇಡವೇ?
ದಾಲ್ ಸರೋವರದಲ್ಲಿ ದೋಣಿ, ಉಳಿದಂತೆ ಕುದುರೆ, ದೋಲಿ, ಜೀಪು, ಕೊನೆಗೆ ಬೂಟು, ಕೋಟುಗಳಲ್ಲೂ ನಮ್ಮನ್ನು ಸ್ಥಳೀಯರ ಸುಲಿಗೆಗೆ ಬಿಟ್ಟು ನಿರ್ವಾಹಕ ದೂರ ಉಳಿದದ್ದು ಸರಿಯಲ್ಲ. ಪೂರ್ವಸಿದ್ಧ ಯೋಜನೆಯಲ್ಲಿದು ಗುಪ್ತ-ವೆಚ್ಚಗಳಾಗಿಯೇ ನಮ್ಮನ್ನು ಕಾಡಿವೆ.
ಕಾಶ್ಮೀರದ ಬೇಸಗೆಯಲ್ಲಿ ಮುಖ್ಯವಾಗಿ ಎರಡು ಋತುಗಳು - ಸೇಬಿನದ್ದು ಮತ್ತು ಹೂಗಳದ್ದು (ಟುಲಿಪ್). ಟುಲಿಪ್ ಉದ್ಯಾನವನ ಇದ್ದಾಗಲೂ ನಮಗೆ ತಪ್ಪು ಮಾಹಿತಿ ಕೊಟ್ಟು, ತೋರಿಸದಿದ್ದುದು ಯಾಕೆ? ಪ್ರವಾಸೀ ಮಾರ್ಗದರ್ಶಿ ವ್ಯವಸ್ಥೆಗಳ ನಿರ್ಹಣೆಯೊಡನೆ ಮಾಹಿತಿ ಮೂಲವೂ ಆಗಬೇಕಿತ್ತು. ವೈಷ್ಣೋದೇವಿಯ ಸ್ಥಳಪುರಾಣ ಬಿಟ್ಟರೆ ಎಲ್ಲೂ ಆ ವಿವರಗಳು ನಮಗೆ ಸಿಕ್ಕಲಿಲ್ಲ, ಅಲ್ಪ ಸ್ವಲ್ಪ ಹೇಳಿದ್ದಿದ್ದರೆ ಅವು ಸಮರ್ಪಕವಾಗಿರಲಿಲ್ಲಇದು ಮೊದಲೆಂಬಂತೆ ಯೋಜಿತ ಪ್ರವಾಸವನ್ನು ಒಪ್ಪಿಕೊಂಡ ನನಗೆ ಈ ಯಾತ್ರೆ ಭಾರೀ ನಿರಾಶೆಯನ್ನೇ ಉಂಟು ಮಾಡಿದೆ.”

ವಿಕ್ರಂ ಟ್ರಾವೆಲ್ಸಿಗೆ ಚರವಾಣಿಯ ಕಿರು ಸಂದೇಶದಲ್ಲಿ ಎರಡೆರಡು ಬಾರಿ ಮೇಲಿನ ಪತ್ರದ ನೆನಪು ಹುಟ್ಟಿಸಿದೆ. ಕೊನೆಗೆ ವೈಯಕ್ತಿಕವಾಗಿ ಅವರಲ್ಲಿಗೆ ಹೋಗಿ, ಬಾಯ್ದೆರೆ ಹೇಳಿ ಬಂದೆ. ಮತ್ತೆ ವಿರಾಮದಲ್ಲಿ ಮಾಲಿಕರ ದೂರವಾಣಿ ಕರೆ ಮಾತ್ರ ಬಂತು – “SORRY!” (ಇನ್ನೊಮ್ಮೆ ಬನ್ನಿ, ತಿದ್ದಿಕೊಂಡು ನಡೆಸುತ್ತೇವೆಎಂದೂ ಸೇರಿಸಿದ್ದರು.) ನಿಜ, ಜಮ್ಮು ಕಾಶ್ಮೀರ ಸಿದ್ಧ ಪ್ರವಾಸೀ ಯೋಜನೆಯ ಕೊನೆಯಲ್ಲಿ ನಮಗುಳಿದದ್ದು ದೊಡ್ಡ, ಭರಿಸಲಾಗದ ವಿಷಾದ ಮಾತ್ರ. ಅಸಂಖ್ಯ ಸಾಹಸ ಯಾತ್ರೆ, ಮೂರು ಸುದೀರ್ಘ ಮೋಟಾರ್ ಸೈಕಲ್ ಯಾನಗಳನ್ನೂ (ಒಂದು ದಕ್ಷಿಣ ಭಾರತ, ಉಳಿದೆರಡು ಅಖಿಲ ಭಾರತ) ಕೇವಲ ವೈಯಕ್ತಿಕ ನೆಲೆಯಲ್ಲಿ ಯೋಜಿಸಿ, ಯಶಸ್ವಿಯಾಗಿ ಪೂರೈಸಿದ ನನಗೆ ಇನ್ನೊಂದು ಪೂರ್ವಸಿದ್ಧ ಪ್ರವಾಸ ಖಂಡಿತಕ್ಕೂ ಬೇಡ.
(ಒಂಬತ್ತು ಕಂತುಗಳ ಜಮ್ಮು ಕಾಶ್ಮೀರ ಪ್ರವಾಸ ಕಥನ ಮುಗಿಯಿತು)

4 comments:

 1. "ಪೂರ್ವಸಿದ್ಧ ಪ್ರವಾಸ ಖಂಡಿತಕ್ಕೂ ಬೇಡ" - ನನ್ನದೂ ಇದೇ ಅಭಿಪ್ರಾಯ

  ReplyDelete
 2. Wonderful and useful information with some precautions to be taken with Travel agency. Thank your Ashokvardhana

  ReplyDelete
 3. Tumba vicharagalu tiliyitu;Lekhana oodisi kondu hoyitu,yellu noyisalilla.Dhanyavadagalu.

  ReplyDelete
 4. ಎಲ್ಲರೂ ಪಾಠ ಕಾಳಿಯ ಬಹುದಾದ ಪ್ರವಾಸೀ ಅನುಭವ ಸಾರ! ನೀಜ್, ಸ್ವತಂತ್ರ ಪ್ರವಾಸವೇ ಉತ್ತಮ.

  - Shyamala Madhav.

  ReplyDelete