03 July 2015

ಮಕ್ಮಲ್ಲಿನ ನುಣುಪು? ಕೇಸರಿಯ ಕಂಪು?


(ಜಮ್ಮು ಕಾಶ್ಮೀರ ಪ್ರವಾಸ ಕಥನ -)

ನಾವು ತಡವಾಗಿ ಮಲಗಿದವರೆಂದು ಮುಂಬೆಳಕು ತಡವಾಗುವುದುಂಟೇ! ಮತ್ತೆ ನಮ್ಮ ಪ್ರಾಯಕ್ಕೆ ಸಹಜವಾಗಿ ಹಾಸಿಗೆ ಬಿಸಿ ಮಾಡುವುದು ಆಗಲೇ ಇಲ್ಲ. ಆರು ಗಂಟೆಗೆಲ್ಲ ನಾವು ಶೌಚ, ಬಿಸಿನೀರ ಸ್ನಾನವೆಲ್ಲ ಮುಗಿಸಿ ಯುದ್ಧಸನ್ನದ್ಧರಾಗಿದ್ದೆವು! ಹೋಟೆಲಿನ ಕೊನೆಯ ಮತ್ತು ನಾಲ್ಕನೇ ಮಾಳಿಗೆಯ ನಮ್ಮ ಕೋಣೆಯ ಸೌಲಭ್ಯಗಳು ಚೆನ್ನಾಗಿಯೇ ಇದ್ದುವು.


ಅದಕ್ಕೆ ಎದುರಿನ ಮುಖ್ಯ ದಾರಿಗೆ ತೆರೆಯುವಂತೆ ಎರಡು ಪೂರ್ಣ ವ್ಯಕ್ತಿ ಗಾತ್ರದ, ಸರಳುಗಳೂ ಇಲ್ಲದ ಕಿಟಕಿಗಳಿದ್ದುವು. ಆಚೆ ಬಾಲ್ಕನಿಯ ರೂಪದಲ್ಲಲ್ಲದಿದ್ದರೂ ಮೋಟು ಗೋಡೆಯ ಪುಟ್ಟ ತಾರಸಿ ಇತ್ತು. ನಾವು ಅಲ್ಲಿ ನಿಂತು ದಿಟ್ಟಿ ಹಾಯಿಸಿದೆವು. ತುಸು ಚಳಿ ಅನ್ನಿಸಿದರೂ ಮಂಜು ಮಳೆಯ ಸೋಂಕೇನೂ ಇರಲಿಲ್ಲ. ನಮ್ಮ ಕಟ್ಟಡಕ್ಕೆ ನೇರ ಎದುರಿನ ಹಳೆಗಾಲದ ಮರ, ತಗಡು ಪ್ರಧಾನವಾದ ಕಟ್ಟಡಗಳು ಸೇರಿದಂತೆ ದಿಗಂತದವರೆಗೆ ನಗರ ತೆರೆದು ಬಿದ್ದಿತ್ತು. ಎಡ ಮೂಲೆಯಿಂದ ತೊಡಗಿದಂತೆ ಹಿಂಬದಿಗೆ, ಸುದೂರದಲ್ಲಿ ಮಹಾಗಿರಿ ಸಾಲು ಶೋಭಿಸುತ್ತಿತ್ತು. ಅದರ ಮರೆಯಲ್ಲಿದ್ದ ಸೂರ್ಯ ಮೊದಲು ನಸು ಕೆಂಬಣ್ಣದ ಪರಿಚಯ ಪತ್ರವನ್ನು ಮೇಲೊಡ್ಡಿದ್ದ. ಹಿಮತೊಳೆದ ಪರಿಸರವಾದ್ದಕ್ಕೋ ಕೀರ್ತಿಗಳನ್ನು ಹಾಡಲು ಮೋಡಗಳ ಸಾಂಗತ್ಯ ಇಲ್ಲವಾದ್ದಕ್ಕೋ ಸೂರ್ಯ ನಿಸ್ತೇಜನಂತೆಯೇ ಮೇಲೆ ಬಂದ. ಹಿಂದಿನ ದಿನ ಗಿರೀಶ್, “ಎಂಟು ಗಂಟೆಗೆ ಉಪಾಹಾರ ಮತ್ತೆ ಶ್ರೀನಗರ ದರ್ಶನಎಂದು ತಿಳಿಸಿದ್ದರು. ಹಾಗಾಗಿ ಕನಿಷ್ಠ ಒಂದೂವರೆ ಗಂಟೆ ಬಿಡುವು ನಮ್ಮೆದುರು ಇತ್ತು.


`ನಡೆದು ನೋಡಾ ಶ್ರೀನಗರದ ಬೆಡಗಾಎಂದುಕೊಂಡು ನಾವೇ ಹೋಟೆಲಿನ ಹೆಬ್ಬಾಗಿಲು ತೆರೆದು, ಮಹಾದ್ವಾರ ಹಾರುಹೊಡೆದು ದಾರಿಗಿಳಿದೆವು. ಜನ ವಾಹನ ಸಂಚಾರ ತುಂಬಾ ಕಡಿಮೆಯಿತ್ತು. ಆದರೂ ಜನ, ಸೈಕಲ್, ಸ್ಕೂಟರ್, ಬೈಕ್, ಕೆಲವು ಕಾರಿನಲ್ಲೂ ಹೆಚ್ಚು ಕಡಿಮೆ ಪ್ರತಿ ಎರಡನೆಯವರು ನಮ್ಮನ್ನು ಪ್ರವಾಸಿಗಳೆಂದು ಗುರುತಿಸುತ್ತಿದ್ದರು ಮತ್ತು ಅವರು ವ್ಯಾಪಾರಿಯಾಗಿರುತ್ತಿದ್ದರು! ಅವರ ಮಾಲಿನ ಹೊರೆಯನ್ನು ನಮ್ಮೆದುರು ಬಿಚ್ಚಲು ತೊಡಗುತ್ತಿದ್ದರು! ಶಾಲು, ಸ್ವೆಟ್ಟರ್, ಮಫ್ಲರ್, ಮಂಗನತೊಪ್ಪಿ, ಕೈ ಚೀಲಗಳು, ಕಸೂತಿ ನಮೂನೆಗಳು, ಸೀರೆ, ಕೇಸರ್, ಬಾದಾಮ್ ಮುಂತಾದವು (ಅವರ ಮಾತುಗಳಲ್ಲೇ ಹೇಳುವುದಿದ್ದರೆ) ನಮಗೋಸ್ಕರ ನೇರ ಕಾರ್ಯಾಗಾರದಿಂದ ಬಂದಿತ್ತು ಮತ್ತು ನಮಗೋಸ್ಕರ ಅತ್ಯಂತ ಕಡಿಮೆ ಬೆಲೆಯಲ್ಲೂ ಸಿಗುತ್ತಿತ್ತು! ನಾವು ಕುತೂಹಲದ ದುರ್ಬಲ ಎಳೆ ಪ್ರದರ್ಶಿಸಿದರೂ ಸಾಕಿತ್ತು, ಅವರು ಸಿಂದಾಬಾದನ ಮುದುಕನಂತೆ ನಮ್ಮ ಬೆನ್ನು ಹತ್ತುವುದೂ ಖಾತ್ರಿಯಿತ್ತು. ಹಾಗಾಗಿ ದೇವಕಿ ಕಣ್ಣರಳಿಸುವ ಮೊದಲು ನಾನು ಹುಬ್ಬು ಗಂಟಿಕ್ಕಿನೈ ನೈ ಕುಛ್ ನೈ ಚಾಹಿಯೇಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿ ಏನೋ ಮಹತ್ತಾದ ರಾಜಕಾರ್ಯ ಇರುವವನಂತೆ ಮುಂದುವರಿಯುತ್ತಿದ್ದೆ. ಅನಿವಾರ್ಯವಾಗಿ ದೇವಕಿ ಹಿಂಬಾಲಿಸುತ್ತಿದ್ದಳು. ಆಕೆ ಮೊದಮೊದಲು ಅವನ್ನು ನೋಡಲೂ ಬಿಡದ ನನ್ನ ಒರಟುತನಕ್ಕೆ ಗೊಣಗುತ್ತಿದ್ದಳು. ಮತ್ತೂ ಆಚಿನ ಕಾಲಘಟ್ಟದಲ್ಲಿಅಲ್ಲ ನೋಡಿ ಮಾಡುವುದೇನಿಲ್ಲ. ನಮಗಿರೋದನ್ನೇ ಬಳಸಲು...” ಎಂದು ವೇದಾಂತವನ್ನೂ ಬಿಡುತ್ತಿದ್ದಳು. ಕೆಲವೊಮ್ಮೆ ಪಾಠಾಂತರ ಬದಲಿ ಸವಾಲಾಗುತ್ತಿದ್ದಳುಅಷ್ಟು ಉರಿಹೋಗುವವರು ಪ್ರವಾಸಕ್ಕೇ ಹೊರಡಬಾರದು. ಇವೂ ಒಂದು ನೋಡುವ ಸಂಗತಿ ಯಾಕಾಗಬಾರದು?”


ದಾರಿಯ ಎಡ ಮೂಲೆಯಲ್ಲಿ ಬೋಳು ಬಿಳಿಯ ಗೋಪುರದ ಶಿವಮಂದಿರವೊಂದಿತ್ತು. ಅದು ಜನಬಳಕೆಯಿಂದ ದೂರ ಸರಿದಂತೆ ಕಾಣುತ್ತಿತ್ತು (ಭಯೋತ್ಪಾದನೆಯಲ್ಲಿ ಭಕ್ತಾದಿಗಳು ಊರು ಬಿಟ್ಟೋಡಿದ್ದಿರಬಹುದೇ? – ತಿಳಿದಿಲ್ಲ. ಒಂದು ಗಳಿಗೆಗಾದರೂ ಅದರೊಳಗೆ ಹೋಗಿ ಬರಬೇಕೆಂದು ಯೋಚಿಸಿದ್ದೇ ಬಂತು, ಸಮಯಾನುಕೂಲವೇ ಆಗಲಿಲ್ಲ) ಮಂದಿರದ ಎದುರಿನ ಕೂಡು ರಸ್ತೆಯ ಆಚೆಗೆ ದಾಲ್ ಸರೋವರದ ಒಂದು ನಾಲೆಯ ದಂಡೆ. ನಾವು ಹೆಚ್ಚು ಪೇಟೆಯತ್ತ ಹೋಗುವಂತೆ ತೋರಿದ ಬಲ ದಿಕ್ಕಿಗೆ ನಡೆದೆವು. ಅದು ಗಲ್ಲಿ ದಾರಿಯಂತೆ ತೊಡಗಿದರೂ ರಚನೆಯಲ್ಲಿ ಚತುಷ್ಪಥವೇ ಆಗಿತ್ತು. ಆದರೆ ಹಾಳು ಸುರಿಯುವಲ್ಲಿ ಅದು ದ್ವಿಪಥಕ್ಕೂ ನಾಲಾಯಕ್ಕಿತ್ತು. ಒತ್ತೊತ್ತಾಗಿ ಇದ್ದ ವ್ಯಾಪಾರೀ ಮಳಿಗೆಗಳು, ದೂಳು, ಕಸ, ಉಕ್ಕುವ ಚರಂಡಿಗಳು ಬೀಡಾಡಿ ನಾಯಿಗಳು ಅಪ್ಪಟ ನಮ್ಮೂರೇ ಎಂಬ ಭಾವ ಮೂಡಿಸಿತು. ಪೌರ ಕಾರ್ಮಿಕರು ಉದ್ದದ ಕಡ್ಡಿಹಿಡಿಗೆ ಆಳೆತ್ತರಕ್ಕೆ ಕೋಲು ಕಟ್ಟಿ ಗುಡಿಸುವ ಕ್ರಿಯೆಯಲ್ಲಿ ಭಯಂಕರ ದೂಳಿನಲೆಗಳನ್ನೆಬ್ಬಿಸುತ್ತಿದ್ದರು. ಗಲ್ಲಿ ಗಲ್ಲಿಯಲ್ಲಿ ಅದೇನೋ ಕ್ರಿಮಿನಾಶಕದಂತ ಬಿಳಿಹುಡಿಯನ್ನು ಧಾರಾಳ ಎರಚಿದ್ದರು. ಹಿಂದೆ ನಾನು ಭಾಗವಹಿಸಿದ್ದ ಮುಧೋಳದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಲ್ಲಿನ ಕಾರ್ಮಿಕರು ಪೂರ್ಣ ಅಜ್ಞಾನದಲ್ಲಿ, ಬರಿಗೈಯಲ್ಲಿ ಡಿಡಿಟಿ ಪುಡಿಯನ್ನೇ ಕೊಳಚೆ ಪ್ರದೇಶದಲ್ಲೆಲ್ಲ ಎರಚುತ್ತಿದ್ದ ಪರಿ ನೋಡಿ ನಾನು ಕಂಗಾಲಾಗಿದ್ದೆ! ಲೆಕ್ಕಕ್ಕೆ ಈಗ ಡಿಡಿಟಿ ರದ್ಧಾಗಿದೆ, ಮತ್ತೆ ಇಲ್ಲಿನ ಹುಡಿಗೆ ಅದರ ಘಾಟೂ ಇರಲಿಲ್ಲ. ಆದರೂ ವಿಷ ವಿಷವೇ. ನಮಗೆ ಅದನ್ನು ಹಾಕುವ ಕ್ರಮ ನೋಡಲು ಸಿಗಲಿಲ್ಲ. ಆದರೂ ಊಹಿಸಬಲ್ಲೆ, ಅಧಿಕಾರಿಗಳು ಕೆಳವರ್ಗದ ಮೇಲೆ ಇಂಥ ಜವಾಬ್ದಾರಿಗಳನ್ನು ಹೇರುವ ಕ್ರಮ ಭಿನ್ನವಾಗುವುದು ಅಸಾಧ್ಯ! (ಮಲ ಹೊರುವುದನ್ನು ಬಸವಲಿಂಗಪ್ಪ ರದ್ದುಪಡಿಸಿ ಕೆಲವು ದಶಕಗಳ ಮೇಲೆ ಈಚೆಗೆ ಹುಬ್ಬಳ್ಳಿಯಂಥ ಮಹಾನಗರಿಯಲ್ಲೇ ಕಾರ್ಯನಿರತ ಪೌರ ಕಾರ್ಮಿಕರು ಕೊಳಚೆ ಕೊಳದಲ್ಲಿ ಮುಳುಗಿ ಸಾಯಲಿಲ್ಲವೇ!)

ಸುಮಾರು ದೂರ ನಡೆದೆವು. ದಿನದ ಮೊದಲ ಸುತ್ತಿನಲ್ಲೇ ಎಂಬಂತೆ ಸಮವಸ್ತ್ರಬದ್ಧ ಚಿಣ್ಣರು, ಶಾಲಾ ವಾಹನಗಳು ಓಡಾಡುವುದು ಕಂಡಾಗ ಇಲ್ಲೂ ಘನಘೋರ ಶಿಕ್ಷಣ ಉದ್ದಿಮೆ ಜಾಗೃತವಿದೆ ಎಂದು ವಿಷಾದವಾಯ್ತು. ನಮ್ಮ ನಡಿಗೆಗೆ ಚಾ ಕುಡಿಯುವುದೂ ಸಣ್ಣ ಲಕ್ಷ್ಯವಾಗಿತ್ತು. ಆದರೆ ಹೋಟೆಲ್ ನಾಮಾಂಕಿತ ದೊಡ್ಡ ಕಟ್ಟಡಗಳು, ಇತರ ಅಂಗಡಿಗಳು, ಕನಿಷ್ಠ ನೂಕುಗಾಡಿಯ ಚಾಯ್ವಾಲಾಗಳೂ ಕೆಲಸಕ್ಕಿಳಿದಂತಿರಲಿಲ್ಲ. ಇಂದಿಗೆ ಶನೀಲಿನ ಚಪ್ಪೆ ನೀರೇ ಸರಿ ಎಂದುಕೊಳ್ಳುವ ಹೊತ್ತಿಗೆ ಒಂದು ಪಡಖಾನೆಯಂತ ಪುಟ್ಟ ಅಡ್ಡಾ ಚಾ ಕೊಟ್ಟಿತು, ಕುಡಿದು ಕೃತಾರ್ಥರಾದೆವು.

ಶ್ರೀನಗರದಲ್ಲಿ ಮುಂದೆ ನಾವು ಕಂಡ ಮೂರೂ ಬೆಳಿಗ್ಗೆ ಹೀಗೆ ಊರು ಸುತ್ತುವ ಕೆಲಸ ಮಾಡಿ ಸಂತೋಷಿಸಿದೆವುಎರಡನೇ ದಿನ ಶಿವ ಮಂದಿರದಿಂದಾಚಿನ ನೇರ ದಾರಿ ಹಿಡಿದಿದ್ದೆವು. ಕಳೆದ ವರ್ಷ ಶ್ರೀನಗರ ಭಾರೀ ಮಳೆ ಕಂಡು, ದಾಲ್ ಸರೋವರ ಇಮ್ಮಡಿ ಸೊಕ್ಕಿತ್ತಂತೆ. ಬಹುಶಃ ಆನಂತರದ ದಿನಗಳಲ್ಲಿ ವಲಯದ ದಂಡೆಯನ್ನು ಬಲು ಎತ್ತರಿಸಿದ ಸೇತುವೆಯ ಹಾಗೇ ಕಟ್ಟಿದ್ದಿರಬೇಕು. ಇಲ್ಲಿ ಸರೋವರದ ನೀರು ಒಂದು ಕಾಲುವೆಯಂತೆ ವಿಸ್ತರಿಸಿದೆ. ಇದರ ಎದುರು ದಂಡೆಯ ಅಂಚಿನಲ್ಲಿ, ಉದ್ದಕ್ಕೂ ಹಲವು ವಿಲಾಸೀ ದೋಣಿಮನೆಗಳು ತಂಗಿದ್ದುವು. ಕಳೆದ ವರ್ಷದ ಮಳೆಯ ಹೊಡೆತಕ್ಕೋ ನಿರೀಕ್ಷಿತ ಪ್ರವಾಸೀ ಋತುಗಳು ಸೋತದ್ದಕ್ಕೋ ಬಹುತೇಕ ದೋಣಿಮನೆಗಳು ಹಾಳು ಸುರಿಯುತ್ತಿದ್ದುವು, ಉಪಯೋಗ ದೂರವಾದವೂ ಇದ್ದಿರಬೇಕು. ನಾಲೆಯನ್ನು ಬಳಸಿಕೊಂಡು ಹೋಗುವ ಹೊಸ ದಾರಿಗೆ ಸಮಸಮವಾಗಿ ಇತ್ತ ಹಳೆದಾರಿಯೂ ಮನೆ, ಅಂಗಡಿ ಮುಂಗಟ್ಟೂ ಸಾಕಷ್ಟಿವೆ. ಸುಮಾರು ಒಂದು ಕಿಮೀ
ಕೊನೆಯಲ್ಲಿ ಸಿಗುವ ದೊಡ್ಡ ಕೂಡು ರಸ್ತೆಯನ್ನು ದಾಲ್ (ಸರೋವರಕ್ಕೆ?) ಗೇಟ್ ಎಂದೇ ಗುರುತಿಸುತ್ತಾರೆ. ಅಲ್ಲಿ ನಾಲೆಯ ಒಂದು ಕವಲಿಗೆ ಅಲಂಕಾರಿಕ ಸ್ವಾಗತ ಕಮಾನು ಕಟ್ಟಿದ್ದರು. ಇಂಥಾ ಔಪಚಾರಿಕ ರಚನೆಗಳ ನಿರುಪಯುಕ್ತತೆಯನ್ನು ಸಾರುವಂತೆ ಅದು ಹಾಳು ಬೀಳುತ್ತಿರುವುದೂ ಸ್ಪಷ್ಟವಿತ್ತು. ನಿಜದಲ್ಲಿ ಯಾವುದೇ ಊರಿನ ಅಥವಾ ದೇವಳದ ಸ್ವಾಗತ ಕಮಾನು, ನಿರ್ಮಾತೃವಿನ ವಹಿವಾಟು ಲಾಭವನ್ನು ಮೀರಿ ಪ್ರಯೋಜನಕಾರಿಯಾದದ್ದು ನಾನಂತೂ ಕಾಣೆ.

ದಾಲ್ ಗೇಟ್ ಬಳಿ ಐದು ಗಂಟೆಯ ಸುಮಾರಿಗೇ ಒಳ್ಳೆಯ ಡಾಬಾ, ಕಾಶ್ಮೀರದ ಸರಕಾರೀ ಹಾಗೂ ಕೆಲವು ಖಾಸಗಿ ಕಂಪೆನಿಗಳದ್ದೂ ಹೈನು ಉತ್ಪನ್ನಗಳ ಮಳಿಗೆ, ವರ್ತಮಾನ ಪತ್ರಿಕೆಗಳ ಪುಟ್ಟಪಥ ಬಿಕರಿಗಳೆಲ್ಲ ಚುರುಕಾಗಿರುತ್ತದೆ. ನೊಣನುಸಿಗಳ ಬಾಧೆಯಿಲ್ಲದೇ ರೆಫ್ರಿಜಿರೇಟರಿನ ಅಗತ್ಯ ಕಾಣದೇ ತೆರೆದ ಭಾಂಡಗಳಲ್ಲಿ ಹಾಲಿನುತ್ಪನ್ನಗಳು ಮಾರಾಟವಾಗುತ್ತಿದ್ದುದು ಅಲ್ಲಿನ ವಾತಾವರಣದ ಮಹಾತ್ಮ್ಯೇ ಸರಿಅಲ್ಲಿ ಚಿಲ್ಲರೆ ಗಿರಾಕಿಗಳಿಗೆ ಸಿದ್ಧ ಹಾಲು ಮೊಸರಿನ ತೊಟ್ಟೆಗಳೂ ಸಾಕಷ್ಟಿದ್ದುವು. ಚೀಸ್ ದೊಡ್ಡ ಮಂಜಿನ ಇಟ್ಟಿಗೆಯಂತೆ, ಬೆಣ್ಣೆ ಹಿಮದ ಗುಡ್ಡೆಯಂತೆ ತೆರೆದ ತಟ್ಟೆಗಳಲ್ಲಿ ಕತ್ತರಿಸುವ ಚಾಕು ತೂಗುವ ತಕ್ಕಡಿಗಳ ಸಮಕ್ಷಮದಲ್ಲಿ ಶೋಭಿಸುತ್ತಿದ್ದುವು. ಅಂಗಡಿಯ ಹೊರಜಗುಲಿಯ ಮೇಲೆ ಉದ್ದಕ್ಕೆ ಕುಳಿತ ಹಾಲಿನ ಭಾಂಡಗಳೆಲ್ಲ ನಗರದ ವಿವಿಧ ಡಾಬಾಗಳ ಖಾಯಂ ಬೇಡಿಕೆಯಂತೆ.

ಮೂರೂ ದಿನ ನಾನಲ್ಲಿನ ಇಂಗ್ಲಿಷ್ ಪತ್ರಿಕೆಯನ್ನು ಕೊಂಡಿದ್ದೆ. ನಿಜಾರ್ಥದ ರಾಷ್ಟ್ರೀಯ ಪತ್ರಿಕೆಗಳೆಲ್ಲ ಮಳಿಗೆಗೆ ಬರುವಾಗ ಮಧ್ಯಾಹ್ನವಾಗುತ್ತದಂತೆ. ಡಾಬಾದಲ್ಲಿ ಮಾಮೂಲೀ ಪರಾಟಾ ಸಬ್ಜೀ ದಾಲ್ ಚಾಯ್ ಮುಂತಾದವಲ್ಲದೆ ಇನ್ನೆಲ್ಲೋ ಚೂಲಾದಲ್ಲಿ ಸಿದ್ಧಗೊಂಡು ಬಂದ ಬಿಸಿಬಿಸಿ ರೊಟ್ಟಿಗಳೂ ಮಾರಾಟವಾಗುತ್ತಿದ್ದುವು

ಅಲ್ಲಿಂದ ಎರಡೋ ಮೂರೋ ದಪ್ಪ ರೊಟ್ಟಿಯನ್ನು ಪೇಪರ್ ಪ್ಲ್ಯಾಸ್ಟಿಕ್ ಆವರಣಗಳ ಹಂಗಿಲ್ಲದೇ ಕೊಂಡೊಯ್ಯುವ ತರುಣನೊಡನೆ ಒಂದು ದಿನ ನಾವು ಪಟ್ಟಾಂಗ ಹೊಡೆಯುತ್ತ ಹೆಜ್ಜೆ ಹಾಕಿದ್ದೆವು. ಆತಇಲ್ಯಾಸ್ ಅಂತಿಟ್ಟುಕೊಳ್ಳಿ, ದೋಣಿಮನೆಯೊಂದರ ಯಜಮಾನನ ಮಗ. ಆದರೆ ಇಲ್ಲಿನ ನಿರುದ್ಯೋಗಕ್ಕೆ ಬಳಲಿ ಹೆಂಡತಿ ಮಗುವನ್ನು ಇಲ್ಲೇ ಬಿಟ್ಟು ದೂರದ ಯಾವುದೋ ಊರಿನಲ್ಲಿ ತಾಪೇದಾರಿ ಒಪ್ಪಿಕೊಂಡಿದ್ದನಂತೆ. ದಾಲ್ ಕಾಲುವೆಯನ್ನು ಅಡ್ಡ ಹಾಯುವ ದೊಡ್ಡ ಸೇತುವೆಯ ಮೂಲಕ ಆತ ಎದುರು ದಂಡೆಗೆ ನಡೆದ. ಅಲ್ಲಿ ಕಡಿಮೆ ಉಪಯೋಗದ ಸಪುರ ಡಾಮರಿನ ಮಾರ್ಗವಿತ್ತು. ಅದರ ಉದ್ದಕ್ಕೂ ಎಡಕ್ಕೆ ಭಾರೀ ಮರಗಳ ತೋಪು ಮತ್ತು ಗೊಸರು ಕೊಳೆ ತುಂಬಿದ್ದ ಉದ್ಯಾನವನವಿದ್ದರೆ (ಬಹುಶಃ ಹಿಂದಿನ ಗಾಲ್ಫ್ ಮೈದಾನದ ಭಾಗ) ಬಲಕ್ಕೆ ದೋಣಿಮನೆಗಳಿಗೆ ಇಳಿಯುವ ಕಾಲು ದಾರಿಗಳು.


ರಾಜಕೀಯ ಅಸ್ಥಿರತೆಯ ಮಹಾಗಾಯದ ಮೇಲೆ ಕಳೆದ ವರ್ಷದ ನೆರೆಯ ಬರೆ ಬಿದ್ದು ಶ್ರೀನಗರ ತುಂಬಾ ಬಳಲಿದೆ. ಪ್ರವಾಸೋದ್ದಿಮೆಯಂತೂ ಶೇಕಡಾ ಹತ್ತಕ್ಕೆ ಇಳಿದುಹೋಗಿದೆಎಂದೇ ಆತ ನುಡಿದ. [ಇದನ್ನೆ ಮುಂದೊಬ್ಬ ಬಟ್ಟೆಯಂಗಡಿಯವ ಬೇರೇ ರೀತಿಯಲ್ಲಿ ಹೇಳಿದ. “ಇಂದು ನಿಮ್ಮನ್ನು, `ವಿರಾಮದಲ್ಲಿ ನೋಡಿಯಾದರೂ ಹೋಗಿಎನ್ನುತ್ತಿದ್ದೇವೆ. ಹಿಂದೆಲ್ಲ ಇದೇ ಕಾಲದಲ್ಲಿ (ಹೈ ಸೀಸನ್!) ಗಟ್ಟಿ ಗಿರಾಕಿಗಳನ್ನೇ ಸರಿಯಾಗಿ ಮಾತಾಡಿಸಲು ಆಗುತ್ತಿರಲಿಲ್ಲ. ನಮಗೆ ಚಾ ಕುಡಿಯಲು, ಕನಿಷ್ಠ ಮೂತ್ರ ಮಾಡಲೂ ಬಿಡುವಾಗುತ್ತಿರಲಿಲ್ಲ...”] ಸ್ವಲ್ಪ ನಡೆಯುತ್ತಿದ್ದಂತೆ ಆತನ ಕುಟುಂಬದ ಆಸ್ತಿದೋಣಿಮನೆ, ಬಂದಿತ್ತುಆತ ಪ್ರೀತಿಯಿಂದಲೇ ನಮ್ಮನ್ನು ಮನೆಗೆ ಕರೆದರೂ ನಾವು ದಾಕ್ಷಿಣ್ಯದಿಂದಲೇ ನಿರಾಕರಿಸಿದೆವು.

ಅವನಮ್ಮ, ಪುಟಾಣಿ ಮೊಮ್ಮಗನನ್ನು (ಇನ್ನೂ ಎರಡೋ ಮೂರೋ ವರ್ಷವಿದ್ದಿರಬೇಕು) ಕೈ ಹಿಡಿದು ಹಲಗೆಯೊಂದರ ಮೇಲೆ ನಡೆಸಿಕೊಂಡು ದಂಡೆಗೆ ತಂದು, ನಮ್ಮ ದಾರಿಯಲ್ಲೇ ವಾಕಿಂಗ್ ಹೊರಟಿದ್ದಳು. ಹಾಗೇ ಅಜ್ಜಿ ಮೊಮ್ಮಗನನ್ನೂ ಮಾತಾಡಿಸಿಕೊಂಡು ನಾವು ಮುಂದೊಂದು ಸರಿಯಾದ ಉದ್ಯಾನವನವನ್ನೇ ಸೇರಿದ್ದೆವು. ನಮ್ಮ ಕದ್ರಿ, ಪಿಲಿಕುಳಾದಿ  ಸರಕಾರೀ ಉದ್ಯಾನವನದಂತೇ ಇಲ್ಲೂ ಅನೇಕ ವ್ಯರ್ಥ ವೆಚ್ಚ, ಹಾಳು ಸುರಿಯುವ ರಚನೆಗಳಿದ್ದುವು. (ಬಿಲ್ಲು ಪರಿಣತರು ಸರ್ವವ್ಯಾಪಿಗಳು.) ಉದ್ಯಾನವನದಾಚಿನ ಇನ್ನೊಂದೇ ಸೇತು ದಾಟಿದಲ್ಲಿ ವಲಯದ ಪೋಲಿಸ್ ಠಾಣೆ. ಮತ್ತೆ ನೂರೇ ಮೀಟರಿಗೆ ನಮ್ಮ ಹೋಟೆಲ್.


ಇನ್ನೊಂದು ದಿನ ನಮ್ಮ ಹೋಟೆಲಿನ ಹಿಂಬದಿಗೋಡುವ ದಾರಿ ಅನುಸರಿಸಿದ್ದೆವು. ದಾಲ್, ಹೆಸರೇ ಹೇಳುವಂತೆ ಸರೋವರ, ಹರಿವಿರುವ ತೊರೆ ನದಿಯಲ್ಲ. ಹಾಗಾಗಿ ಕಳೆದ ವರ್ಷ ಅಲ್ಲಿ ಬಂದ ಐತಿಹಾಸಿಕ ಅತಿವೃಷ್ಟಿಯಲ್ಲಿ ಉಕ್ಕಿದ ಸರೋವರದ ನೀರು ನಗರದ ಎಷ್ಟೋ ಭಾಗಗಳನ್ನು ವಾರಗಟ್ಟಳೆ ಪೂರ್ಣ ಜಲಸ್ತಂಭನದಲ್ಲೇ ಇಟ್ಟಿತ್ತಂತೆ. ಒಂದು ಬೀದಿಯ ಗೋಡೆಯ ಮೇಲೆ ಅಂದಿನ ನೀರ ಕಲೆಯನ್ನು ನೆಲದಿಂದ ಆರಡಿ ಎತ್ತರದಲ್ಲಿ ಜನ ತೋರಿಸಿದರು!


ಮನೆಕಳೆದುಕೊಳ್ಳದ ಜನಗಳೂ ವಾರಗಟ್ಟಲೆ ಅಭದ್ರ ಮಾಳಿಗೆಗಳಲ್ಲಿ ವಾಸ ಮಾಡಬೇಕಾಯ್ತು, ನಡೆದಾಡುತ್ತಿದ್ದಲ್ಲೇ ದೋಣಿ ಚಲಾಯಿಸುವಂತಾಯ್ತು. ನಮ್ಮ ಹೋಟೆಲಿನ ಹಿಂಬದಿಯ  ನುಣ್ಣನೆ ಮಾರ್ಗ ಇನ್ನೂ ಮೀಟರ್ ಆಚೆ ಇಂದಿಗೂ ತಣ್ಣಗೆ ನೀರಿನೊಳಗೆ ಸರಿದು ಹೋಗುವುದನ್ನು ಕಂಡೆವು. ಆಚೆ ಎಲ್ಲೋ ಮನೆಯಿದ್ದವರ ಕಾರು, ಬೈಕು ಇಲ್ಲಿ ನಡುದಾರಿಯಲ್ಲೇ ಎಂಬಂತೆ ಠಿಕಾಣಿ ಹೂಡಿದ್ದುವು. ಹಾಗೇ ಆಚಿನ ಯಾವುದೋ ಗಲ್ಲಿಯಲ್ಲಿದ್ದ ವೃದ್ಧನೊಬ್ಬ ಅನಿವಾರ್ಯ ಓಡಾಟಕ್ಕೆ ತೂತು ದೋಣಿ ತಂದದ್ದಿರಬೇಕು. ಮರಳಿ ಹೊರಡುವ ಮುನ್ನ ನಿರ್ಲಿಪ್ತನಂತೆ ಅದರೊಳಗಿನ ನೀರು ಮೊಗೆಯುತ್ತಿದ್ದ; ಅಷ್ಟೇ ಸುಲಭದಲ್ಲಿ ಅಲ್ಲಿನ ದುಃಖಗಳನ್ನು ಮೊಗೆಯುವಂತ್ತಿದ್ದಿದ್ದರೆ?

ಹೋಟೆಲ್ ಹಿತ್ತಲಿನ ದಾರಿಯಿಂದ ಪುಟ್ಟ ಒಂದು ಗಲ್ಲಿ ನೀರಂಚಿನಲ್ಲೇ ದಾಲ್ ಗೇಟಿನತ್ತ ಹೋಗುವುದನ್ನು ಒಮ್ಮೆ ಅನುಸರಿಸಿದ್ದೆವು. ದಾರಿ ಕೆಲವೆಡೆಗಳಲ್ಲಿ ತತ್ಕಾಲೀನ ಕಬ್ಬಿಣದ ಸೇತುವೆಗಳ ಮೇಲೂ ದಾಟುವುದೂ ಮುಳುಗಡೆಯ ಪರಿಣಾಮವೇ ಇರಬೇಕು. ಅದರಲ್ಲಿ ಕಾರ್ ಶೆಡ್ಡಿನಂಥ ಒಂದು ಜಾಗದಲ್ಲಿ ರೊಟ್ಟಿ ತಯಾರಿಯ ಅಂಗಡಿಯೇ ಇತ್ತು. ದೊಡ್ಡ ಚೂಲಾದ ಒಂದು ಬದಿಯ ತಗ್ಗಿನಲ್ಲಿ ರೊಟ್ಟಿ ತಟ್ಟುವವ ಚೆನ್ನಾಗಿ ಕಲೆಸಿ, ಎಣ್ಣೆಯಲ್ಲಿ ನಾದಿದ ಭಾರೀ ಹಿಟ್ಟಿನ ಮುದ್ದೆಯಿಂದ ಸಣ್ಣ ಉಂಡೆ ಹಿರಿಯುತ್ತಾ ತುಸು ಲಟ್ಟಿಸಿ, ಸ್ವಲ್ಪ ಮಾಯಗಾರನಂತೆ ಕೈಯಲ್ಲಾಡಿಸಿ, ಪುಟ್ಟ ಬಟ್ಟೆ ಗಂಟೊಂದರ ಮೇಲಿರಿಸಿ ಭಟ್ಟಿಯೊಳಗಿನ ಗೋಡೆಗೆ ಅಂಟಿಸುತ್ತಿದ್ದ. ಭಟ್ಟಿಯ ಇನ್ನೊಂದು ಬದಿಯ ಎತ್ತರದ ದಂಡೆಯ ಮೇಲೆ ಒಂದು ಬದಿಗೆ ಗಲ್ಲಾ ಪೆಟ್ಟಿಗೆ ಇಟ್ಟುಕೊಂಡು ಅಂಗಡಿಯ ಮಾಲಕಿಯಂಥವಳು ಕುಳಿತಿದ್ದಳು

ಆಕೆ ಉದ್ದ ಕಬ್ಬಿಣದ ಸಲಾಕಿ ಹಿಡಿದು ರೊಟ್ಟಿಗಳ ಸುಡುವ ಹದ ನೋಡುತ್ತಾ ಚುಚ್ಚಿ ತೆಗೆಯುತ್ತಾ ಸರದಿ ಕಾಯುವವರಿಗೆ ಲೆಕ್ಕಾಚಾರದೊಡನೆ ವಿತರಿಸುತ್ತಿದ್ದಳು. ದೋಣಿಯವರು ಮತ್ತು ಎಷ್ಟೋ ಸಣ್ಣ ಮನೆಯವರಿಗೆಲ್ಲ ದಿನದ ನಾಕೆಂಟು ರೊಟ್ಟಿಗಾಗಿ ಸ್ವಂತದ ಭಟ್ಟಿ (ಚೂಲಾ) ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲವಂತೆ. ಆರ್ಥಿಕವಾಗಿಯೂ ಅದು ಹೊರೆಯೇ ಸರಿ ಎನ್ನಿಸಿತು. ಇಲ್ಲಿ ಬರಿಗೈಯಲ್ಲಿ ಎರಡು ಮೂರು ಒಯ್ಯುವವರಿಂದ ತೊಡಗಿ ಬೋಗುಣಿ, ಭಾರೀ ಬುಟ್ಟಿ ಹಿಡಿದು ನಿಂದವರೂ ಇದ್ದರು. ನಾವು ಕುತೂಹಲಕ್ಕೆ ಒಂದು ರೊಟ್ಟಿ ಬಯಸಿದಾಗ ಎಲ್ಲ ನಗುತ್ತಲೇ ತೆಗೆಸಿಕೊಟ್ಟರು. ಐದೇ ರೂಪಾಯಿಗೆ ಸಿಕ್ಕ ದಪ್ಪನ್ನ, ಬಿಸಿಯೂ ಗರಿಗರಿಯೂ ಇದ್ದ ರೊಟ್ಟಿಯನ್ನು ನಾವಿಬ್ಬರು ಪಾಲು ಮಾಡಿಕೊಂಡು, ಯಾವುದೇ ಕೂಟಕವೂ ಇಲ್ಲದಿದ್ದರೂ ರುಚಿಯಾಗಿಯೇ ತಿಂದೆವು. ಶೆಡ್ಡಿನೊಳ ಭಾಗದಲ್ಲಿ ಧಾನ್ಯವನ್ನು ಹಿಟ್ಟು ಮಾಡುವ ಗಿರಣಿಯೂ ಇದ್ದದ್ದು ಆಕೆಯ ಉದ್ಯಮಶೀಲತೆ ಕುರಿತು ಹೆಚ್ಚಿನ ಗೌರವ ಮೂಡಿಸಿತು.

ನಮ್ಮ ಮೊದಲ ದಿನದ ಬೆಳಗ್ಗಿನ ಓಡಾಟ ತಂಡದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನೇ ಉಂಟು ಮಾಡಿತು. “ರಾತ್ರಿ ಮಲಗಿದ್ದೇ ಲೇಟೂ...” ಎನ್ನುವಲ್ಲಿಂದ, ವಿರಾಮವೇ ಪ್ರವಾಸದ ಮುಖ್ಯ ಭಾಗ ಎನ್ನುವಂಥ ಅಭಿಪ್ರಾಯಗಳು ಹೆಚ್ಚಿದ್ದುವು. ಗಿರೀಶ್ನಾವಿನ್ನೂ ಎರಡು ದಿನ ಶ್ರೀನಗರದಲ್ಲಿದ್ದರೆ ಅಶೋಕ್ ಫ್ಯಾಮಿಲಿ ನಡೆದೇ ಶ್ರೀನಗರ ಮುಗಿಸಿಬಿಡ್ತಾರೆಎಂದು ಪರೋಕ್ಷವಾಗಿ ಮೆಚ್ಚುಗೆಯ ನುಡಿಯನ್ನೇ ಆಡಿದರು. ಮತ್ತೆ ಗಣೇಶ್ ಭಟ್ ದಂಪತಿ ನಮ್ಮ ಮಾತು ಕೇಳಿ ಎರಡು ದಿನ ಹೀಗೇ ಮುಂಜಾನೆ ನಡೆದು ಆನಂದಿಸಿದ್ದರು, ಅಷ್ಟೆ. ವಾಸ್ತವವಾಗಿ ನಾವು ಕಾಶ್ಮೀರ ಪ್ರವಾಸದ ಹೊಳಹು ಹಾಕಿದ್ದಾಗಲೇ ಬೆಂಗಳೂರಿನ ಸೈಕಲ್ ಗೆಳೆಯ ಮುರಳಿ ದೂರವಾಣಿಸಿದ್ದರು. ಅವರ ಸೈಕಲ್ ಪ್ರಸರಣ ಯೋಜನೆಯಲ್ಲಿ ಶ್ರೀನಗರ ಸೇರಿತ್ತಂತೆ. ನನಗಲ್ಲಿನ ಒಳ್ಳೆಯ ಬಾಡಿಗೆ ಸೈಕಲ್ ಸಂಪರ್ಕ ಸಂಖ್ಯೆ ಎಲ್ಲ ಕೊಡ್ತೇನೆ ಎಂದೇ ತಿಳಿಸಿದ್ದರು. ಆದರೆ ನಾವು ಶ್ರೀನಗರದಲ್ಲಿ ಸ್ವತಂತ್ರರಿಲ್ಲ (ಕೂಟ ಒಂದರ ಭಾಗ) ಮತ್ತು ಒಂಟಿ ಸೈಕಲ್ಲೇರಿ ನಗರ ಸುತ್ತುವಷ್ಟು ದೇವಕಿ ಪರಿಣತಳಲ್ಲ ಎಂಬೆರಡು ಕಾರಣಕ್ಕೆ ನಾನೇ ಹಿಂದೆ ಸರಿದಿದ್ದೆ. ಆದರೂ ಶ್ರೀನಗರದಲ್ಲಿದ್ದಾಗ ನಮ್ಮ ಹೋಟೆಲ್ ಸೇರಿದಂತೆ ಅವರಿವರಲ್ಲಿ ಬಾಡಿಗೆ ಸೈಕಲ್ಲುಗಳ ಕುರಿತು ವಿಚಾರಿಸಿದ್ದು ಫಲಿಸಲಿಲ್ಲ. ದಾಲ್ ಗೇಟ್ ಬಳಿ ಒಬ್ಬ ಸ್ಕೂಟರ್ ಮೆಕಾನಿಕ್ ತನ್ನ ಸ್ಕೂಟರ್ ಬೇಕಾದರೆ ಬಾಡಿಗೆಗೆ ಕೊಡುವೆ ಎಂದಿದ್ದ. ಆದರೆ ಸ್ಕೂಟರ್ ಸ್ಥಿತಿ ನೋಡಿ, ನಮ್ಮ ತಿರುಗಾಟದ ಯಶಸ್ಸಿಗೆ ಮೂರನೇ ಸವಾರನನ್ನಾಗಿ ಮೆಕ್ಯಾನಿಕ್ಕನನ್ನೂ ಕೂರಿಸಿಕೊಳ್ಳಬೇಕಾದೀತು ಎಂದೇ ಕಾಣಿಸಿತ್ತು!

ಶ್ರೀನಗರದ ಮೊದಲ ದಿನ ಬೆಳಗ್ಗೆ ಶನೀಲ್ ಹೋಟೆಲಿನವರೇ ತಿಂಡಿ ಸಜ್ಜುಗೊಳಿಸಿದ್ದರು. ಪರಾಟ, ಸಬ್ಜಿ, ದಾಲ್, ಚಾ ಬಿಸಿಯಾಗಿಯೇ ರುಚಿಯಾಗಿಯೇ ಇತ್ತು. ಆದರೆ ವಲಯದ ಅಭ್ಯಾಸ ದಕ್ಷಿಣ ಭಾರತೀಯರಾದ (ಅಕ್ಕಿ ವಲಯದವರು) ನಮಗೆ ಎಲ್ಲ ಹೊತ್ತಿಗೂ ಪರಾಟ, ಆಲೂಗೆಡ್ಡೆ, ಗರಂ ಮಸಾಲಾಯುಕ್ತ ತಿನಿಸು ಕಷ್ಟವಾದೀತೆಂದು ಗಿರೀಶ್ ಸರಿಯಾಗಿಯೇ ಊಹಿಸಿದ್ದರು. ಹಾಗಾಗಿ ಅಂದು ಮಧ್ಯಾಹ್ನದೂಟಕ್ಕೆ ಪೇಟೆಯೊಳಗೆ ಪರಿಚಯಿಸಿದ ಕೃಷ್ಣ ವೈಷ್ಣೋ ಡಾಬಾವನ್ನು ಮುಂದಿನ ಎರಡು ಬೆಳಗ್ಗಿನ ಉಪಾಹಾರಕ್ಕೂ ಬಳಸಿಕೊಂಡೆವು. ಡಾಬಾದಲ್ಲಾದರೋ ಇಡ್ಲಿ, ದೋಸೆಯಾದಿ ದಕ್ಷಿಣ ಭಾರತೀಯರಿಗೆ ಹೆಚ್ಚು ಹೊಂದಾಣಿಕೆಯ ತಿನಿಸುಗಳೂ ಸಿಕ್ಕುತ್ತಿತ್ತು

ನಾವಿಬ್ಬರು ಹಿಂದಿನ ಎರಡು ಬಾರಿಯ ಅಖಿಲ ಭಾರತ ಬೈಕ್ ಯಾನದಲ್ಲಿ ಆಹಾರ ಹೊಂದಾಣಿಕೆಯಲ್ಲಿ ಯಾವ ಕಿಸುರೂ ಇಲ್ಲದೆ ಸುಧಾರಿಸಿದ್ದೆವು. ಹಾಗೆ ಇಲ್ಲೂ ಮೂರು ಹೊತ್ತು ಪರಾಟ, ಆಲೂ, ಬೇಳೇ, ಕಾಳೂ ತಿನಿಸುಗಳನ್ನು, ಅದೂ ಎಷ್ಟೋ ಬಾರಿ ಅವೇಳೆಯಲ್ಲಿ ತಿಂದುಕೊಂಡು ಚೆನ್ನಾಗಿಯೇ ಇದ್ದೆವು. (ಗುಟ್ಟುಯಾರದ್ದೇ ಘ್ರಾಣಕ್ಕೆ ಹಾನಿಯಿಲ್ಲದ ಅನಿಯಂತ್ರಿತ ಅಪಾನವಾಯು ಪ್ರೇರಿತ ವಿಸ್ಫೋಟಗಳು ಕ್ವಚಿತ್ತಾಗಿ ಕಾಡಿತ್ತು!) ಅನ್ನ, ಇನ್ನೂ ಮುಖ್ಯವಾಗಿ ಮೊಸರು, ನಂಚಿಕೊಳ್ಳಲು ಉಪ್ಪಿನ ಕಾಯಿಯ ಬಂದೋಬಸ್ತು ಗಿರೀಶ್ ವಿಶೇಷ ಮುತುವರ್ಜಿ ವಹಿಸಿ ವ್ಯವಸ್ಥೆ ಮಾಡುತ್ತಿದ್ದುದರಿಂದ ತಂಡದ ಉದರಶಾಂತಿ ಎಲ್ಲೂ ದೊಡ್ಡ ಸಮಸ್ಯೆಯಾಗಲಿಲ್ಲ

ಮೊದಲ ಹಂತದಲ್ಲೇ ನಮ್ಮ ತಂಡಕ್ಕೆ ಜಮ್ಮುಶ್ರೀನಗರ ಪ್ರಯಾಣ ಕಡ್ಡಾಯವಾಗಲು ಬಲು ಮುಖ್ಯ ಕಾರಣ ಓಬಳೇಶ್ ಕುಟುಂಬ. ತೆಲುಗು ಮೂಲದ ಓಬಳೇಶ್, ಬೆಂಗಳೂರಿನಲ್ಲಿ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕುಟುಂಬವನ್ನು (ಗೃಹಿಣಿ ಹೆಂಡತಿ, ಇಂಜಿನಿಯರಿಂಗ್ ವಿದ್ಯಾರ್ಥಿ ಮಗ ಮತ್ತು ಪದವಿಪೂರ್ವ ವಿದ್ಯಾರ್ಥಿ ಮಗಳು) ಬೆಂಗಳೂರಿನಲ್ಲೇ ಬಿಟ್ಟು ಚೆನ್ನೈಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದಾರೆ. ರಜೆಯಲ್ಲಿ ಅವರೆಲ್ಲ ಚೆನ್ನೈಯಲ್ಲಿ ಸೇರಿ, ನೇರ ಶ್ರೀನಗರಕ್ಕೆ ವಿಮಾನದಲ್ಲಿ ಹಾರಿ, ನಮ್ಮ ತಂಡಕ್ಕೆ ಸೇರಿಕೊಂಡರು. ತಂಡದ ಹೆಚ್ಚಿದ ಜನಸಂಖ್ಯೆಗೋಸ್ಕರ ಮುಂದೆ ಶಬೀರ್ ಟ್ರಾವೆಲ್ಸಿನ ಒಂದು ಕಾರೂ ನಮ್ಮೊಡನಿತ್ತು.


ಶ್ರೀನಗರ ದರ್ಶನದಲ್ಲಿ ಮೊದಲ ಸ್ಥಾನ ಶಂಕರಾಚಾರ್ಯ ಪೀಠಕ್ಕೆ. ಬೆಳಿಗ್ಗೆ ಸೂರ್ಯೋದಯದ ವೇಳೆ ದಿಗ್ಗಜ ಪರ್ವತಗಳನ್ನು ನೋಡುತ್ತಿದ್ದಾಗಲೇ ಮುನ್ನೆಲೆಯಲ್ಲಿ ಮತ್ತು ಸನಿಹದಲ್ಲೇ ಸಣ್ಣದೊಂದು ಗುಡ್ಡೆ ಕಾಣಿಸಿತ್ತು. ನಗರದ ಮಿತಿಯೊಳಗೇ ಇದ್ದು ದಟ್ಟ ಕಾಡು ಮುಚ್ಚಿದ, ಆದರೆ ನೆತ್ತಿಯಲ್ಲಿ ಭಾರೀ ಮೈಕ್ರೋವೇವ್ ಟವರ್ ಹೊತ್ತ ಗುಡ್ಡದ ಶಿಖರವೇ ಶಂಕರಾಚಾರ್ಯ ಪೀಠಅದು ಅರಣ್ಯ ಇಲಾಖೆಯ ಭಾಗವೇ ಆದರೂ ಭಯೋತ್ಪಾದನೆಯ ನೆರಳಿನಲ್ಲಿ ಸೇನಾಠಾಣೆಯ ಒಂದು ಭಾಗದಂತೇ ನಮಗೆ ಭಾಸವಾಯ್ತು. ಬೆಟ್ಟದ ಬುಡದಲ್ಲೇ ನಮ್ಮನ್ನೆಲ್ಲ ವ್ಯಾನಿಳಿಸಿ, ಅದನ್ನೂ ನಮ್ಮನ್ನೂ ಪ್ರತ್ಯೇಕ ತನಿಖೆಗೊಳಪಡಿಸುತ್ತಾರೆ

ಇದನ್ನು ಕಾಟಾಚಾರದಂತೆ ಮುಗಿಸಿದರು. ಅನಂತರ ವ್ಯಾನಿನಲ್ಲೇ ನಾಕೆಂಟು ಹಿಮ್ಮುರಿ ತಿರುವುಗಳ ಘಾಟೀ ದಾರಿಯಲ್ಲಿ ಬೆಟ್ಟ ಏರುತ್ತೇವೆ. ಉದ್ದಕ್ಕೆ ಭಾರಿ ಮರಗಳೇನೂ ಇಲ್ಲದಿದ್ದರೂ ದಾರಿ ಸಪುರವಾಗಿ, ಹಸಿರ ಮುಚ್ಚಿಗೆ ದಟ್ಟವಾಗಿರುವುದರಿಂದ ಅನ್ಯ ದೃಶ್ಯ ಸಿಗಲಿಲ್ಲ. ಗುಡ್ಡೆಯ ಹೆಕ್ಕತ್ತಿನ ಮಟ್ಟಕ್ಕೆ ವಾಹನಯೋಗ್ಯ ದಾರಿ ಮುಗಿದಿತ್ತು. ಅಲ್ಲಿ ವ್ಯಾನಿಳಿದ ಮೇಲೆ ಹೆಚ್ಚು ಬಿಗಿಯ ತನಿಖೆ


ಮುಂದಕ್ಕೆ ಪರ್ಸು, ಕ್ಯಾಮರಾ, ಚರವಾಣಿ ಎಲ್ಲ ನಿಷಿದ್ಧ. ಗಂಡಸು ಹೆಂಗಸೆಂದು ಬೇರ್ಪಡಿಸಿ, ಮೈ ಸವರಿಯೇ ಮೆಟ್ಟಿಲ ಸಾಲಿಗೆ ಬಿಡುತ್ತಾರೆ. ಮುಂದುವರಿದರೆ ಮುನ್ನೂರು ನಾನೂರು ಸುಲಭ ಮೆಟ್ಟಿಲುಗಳ ಸರಣಿಯಲ್ಲಿ ಬಂಡೆಗುಂಡುಗಳೇ ಪ್ರಧಾನವಾದ ಶಿಖರ. ಪ್ರಧಾನ ಬಂಡೆಯೊಂದರ ಮೇಲಿದ್ದ ಶಂಕರಾಚಾರ್ಯ ಪೀಠ ಅದರ ಒಂದು ಮಗ್ಗುಲಲ್ಲಿದ್ದ ಧ್ಯಾನ ಗುಹೆಗಳೆಲ್ಲ ಸಾಮಾನ್ಯ ಆರಾಧನಾ ಕೇಂದ್ರಗಳ ಹಾಗೇ ಇತ್ತು. ಸಹಜವಾಗಿ ಭಕ್ತಿ ಪ್ರಧಾನವಾಗಿ ಕಾಣುವವರ ಸಂದಣಿ ಚೆನ್ನಾಗಿಯೇ ಇತ್ತು. ಸ್ಥಳ ಪುರಾಣ ಶಂಕರಾಚಾರ್ಯ ಅಲ್ಲಿಗಿತ್ತ ಐತಿಹಾಸಿಕ ಭೇಟಿ ಮತ್ತು ಧ್ಯಾನವನ್ನು ಸ್ಪಷ್ಟವಾಗಿಯೇ ದಾಖಲಿಸುತ್ತದೆ. ಆದರೆ ಗೆಳೆಯ ಮತ್ತು ಕುಟುಂಬ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ನಾವು ಮಂಗಳೂರು ಬಿಡುವ ಮೊದಲು ಆರೋಗ್ಯ ತಪಾಸಣೆಗೆ ಹೋದಾಗ ಹೇಳಿದ ಮಾತು ನೆನಪಿನಲ್ಲಿತ್ತು. “ಸ್ಥಳಪುರಾಣ ಏನೇ ಹೇಳಲಿ, ಸಂಶೋಧಿತ ಸಾಕ್ಷಿಗಳು ಶಂಕರಾಚಾರ್ಯರ ಕಾಶ್ಮೀರ ಭೇಟಿಯನ್ನೇ ದಾಖಲಿಸುವುದಿಲ್ಲ.”

ಶಂಕರಾಚಾರ್ಯ ಪೀಠದ ವಿಸ್ತಾರ ಅಂಗಳದಲ್ಲಿ ವೀಕ್ಷಣೆಗೆ, ಕುಡಿನೀರಿಗೆ, ಮೂತ್ರಕ್ಕೆಲ್ಲಾ ಒಳ್ಳೆಯ ವ್ಯವಸ್ಥೆ ಮಾಡಿದ್ದಾರೆ. ಸುತ್ತೂ ಶ್ರೀನಗರದ ಹರಹು ಸಾಮಾನ್ಯ ಕಣ್ಣಿಗೆ ಮನೋಹರವಾಗಿ ಕಾಣುತ್ತದೆ. ಬಹುಶಃ ಅದೇ ಸೈನ್ಯದ ಕಣ್ಣಿಗೆ, ವೈರಿ ನೆಲೆ ನಿಲ್ಲಲು ಆಯಕಟ್ಟಿನ ಜಾಗವಾಗಿಯೇ ತೋರಿದ್ದರೆ ತಪ್ಪಿಲ್ಲ. ಅದೇ ಕಾರಣದಿಂದಿರಬೇಕು ಅಲ್ಲೆಲ್ಲೂ ಪೂಜಾವಸ್ತುಗಳ ಮತ್ತು ಅದರ ನೆಪದಲ್ಲಿ ಬಿಡಿಸಿಕೊಳ್ಳುವ ನೂರೆಂಟು ತಿನಿಸು ಪಾನೀಯ ಸೇರಿದಂತೆ ಮಾಲುಗಳ ಮಾರಾಟ ಮಳಿಗೆಗಳಿಗೆ ಅವಕಾಶವನ್ನೇ ಕೊಟ್ಟಿಲ್ಲ. ಇದು ಪರೋಕ್ಷವಾಗಿ ಪರಿಸರ ಮಾಲಿನ್ಯವನ್ನು ಖಂಡಿತ ಕಡಿಮೆ ಮಾಡಿತ್ತು. ಗುಡ್ಡೆ ಇಳಿಯುವ ಮಾರ್ಗದ ಅರ್ಧದಲ್ಲಿ ಒಂದೆಡೆ ಸಣ್ಣ ವೀಕ್ಷಣಾ ಕಟ್ಟೆಯನ್ನು ರಚಿಸಿದ್ದಾರೆ. ಶಿಖರದಲ್ಲಿ ಕಣಿವೆಯ ಚಿತ್ರಗ್ರಹಣಕ್ಕೆ ಸಿಗದ ಅವಕಾಶವನ್ನು ಇಲ್ಲಿ ಈಡೇರಿಸಿಕೊಂಡು ಪೂರ್ತಿ ಇಳಿದೆವು.

ಶ್ರೀನಗರ ಮೊಘಲ್ ಮತ್ತೆ ಬ್ರಿಟಿಶರ ಆಡಳಿತಾವಧಿಗಳಲ್ಲೂ ಬೇಸಗೆಯ ವಿರಾಮಧಾಮವಾಗಿ ಪ್ರಸಿದ್ಧವಿತ್ತು. ಅದರ ನೆನಪಿಗೆಂಬಂತೆ ಇರುವ ಎರಡು ಉದ್ಯಾನವನಗಳ ಭೇಟಿ ನಡೆಸಿದೆವುಮಾಮೂಲಿನಂತೆ ವಿಪರೀತ ಹುಲ್ಲ ಹಾಸು, ಅಂಚುಗಟ್ಟಿದಂತೆ ಹೂಪಾತಿಗಳು, ಒಂಟೊಂಟಿ ಅಂಕಣದಲ್ಲಿ ಗುಲಾಬಿ, ಡೇಲಿಯಾ ಮುಂತಾದ ವಿಶಿಷ್ಟ ಹೂಗಳು, ಬಳ್ಳಿಮಾಡಗಳು, ಚಿತ್ರಹಿಂಸೆಗೊಳಗಾದ ಪೊದರು ಗಿಡಗಳು, ಬಣ್ಣದ ಪಾತ್ರೆಗಳಲ್ಲಿ ಹಾರುವ ಹರಿಯುವ ಕಾರಂಜಿ,
ಝರಿ ಇತ್ಯಾದಿ ಇತ್ಯಾದಿ. ಸಾಂಪ್ರದಾಯಿಕ ಕಾಶ್ಮೀರೀ ಉಡುಪು ತೊಡಪುಗಳನ್ನು ಹಾಕಿಸಿಕೊಂಡು ಚಿತ್ರ ತೆಗೆಸಿಕೊಳ್ಳುವವರು, ಏನೇನೋ ಹಿನ್ನೆಲೆ ಚೌಕಟ್ಟು ಕಲ್ಪಿಸಿಕೊಂಡು ಸ್ವಂತೀ ಹೊಡೆಯುವವರು, ಕ್ಯಾಮರಾ ಕಣ್ಣಿಗಾಗಿ ಇಲ್ಲದ ಭಾವಗಳನ್ನು ತಂದುಕೊಳ್ಳುವವರು ಇತ್ಯಾದಿ ಎಲ್ಲೆಡೆ ಇದ್ದದ್ದೇ. ಗೊಂದಲದ ನಡುವೆಯೂ ಸ್ತೂಪದ ರೂಪಕ್ಕೆ ಕತ್ತರಿಸಿಟ್ಟ ಮರಗಳ ಎಲೆಗಳ ಒತ್ತಿನಲ್ಲಿ ಕೆಲವು ಹಕ್ಕಿಗಳು ಕನ್ನ ಹೊಡೆದಿದ್ದವು

ಅವು ಒಳಕೊಂಬೆಯಲ್ಲೆಲ್ಲೋ ಗೂಡು, ಮರಿ ಸಲಹುತ್ತಿದ್ದುದು ನನಗೆ ಹೆಚ್ಚು ರುಚಿಸಿತು! ನಾನು ಮಡಿಕೇರಿಯ ಬಾಲ್ಯದಲ್ಲಿ ಸಾಕಷ್ಟು ಬಿಳಿಯ ಕಾಡುಗುಲಾಬಿಯನ್ನು ಕಂಡವ. ಕಾಶ್ಮೀರದ ಹವಾಮಾನದಲ್ಲಿ ಅಂಥದ್ದೇ ಆದರೆ ವರ್ಣಮಯ ಗುಲಾಬಿ ಸಾಕಷ್ಟು ಕಾಣಿಸುತ್ತಿತ್ತು. ನಮ್ಮ ಹೋಟೆಲಿನ ಅಂಗಳದಲ್ಲಿ, ಪೋಲೀಸು ಠಾಣೆಯೆದುರಿನ ಪುಟ್ಟಪಥದಲ್ಲಿ, ಗಲ್ಲಿಮನೆಯ ಬಾಲ್ಕನಿಯಲ್ಲೂ ಗುಲಾಬಿ ಪೊದರಾಗಿ, ಗಿಡವಾಗಿ, ಮರದಂತೆಯೂ ನಮ್ಮನ್ನು ಮೋಹಕ್ಕೊಳಪಡಿಸಿತ್ತು.

ಹಿಮಾಲಯದ ಹೂಗಳ ವಿಚಾರ ಬರುವಾಗ ಅತ್ತ ಉತ್ತರಖಂಡದ ಹೂಗಳ ಕಣಿವೆ ಒಂದು ಪ್ರಾಕೃತಿಕ ಸತ್ಯವಾಗಿ ಪ್ರಸಿದ್ಧ. ಹಾಗೇ ಇತ್ತ ಕಾಶ್ಮೀರದಲ್ಲಿ ಸೂಕ್ತ ಕಾಲದಲ್ಲಿ ಅಸಂಖ್ಯ ಮಡಿಗಳಲ್ಲಿ ನಾಟಿ ಮಾಡಿ ಬಣ್ಣದ ಹೊಳೆಯಾಗುವ ಟುಲಿಪ್ ಮೇಳವೂ ಪ್ರಸಿದ್ಧವೇ. ಗಣೇಶ ಭಟ್ಟರು ಸಹಜವಾಗಿಯೇ ಗಿರೀಶರನ್ನು ಟುಲಿಪ್ ಉದ್ಯಾನಕ್ಕಿಲ್ಲವೇ ಭೇಟಿ ಎಂದು ವಿಚಾರಿಸಿದ್ದರು. ಗಿರೀಶ್ಅದೀಗ ಸೀಸನ್ನಲ್ಲಎಂದು ಹಾರಿಸಿಬಿಟ್ಟಿದ್ದರು. ಆದರೆ ಮಂಗಳೂರಿಗೆ ಮರಳಿದಾಗ ಮನೋಹರ ಉಪಾಧ್ಯರು ಕೊಟ್ಟ ಚಿತ್ರವೇ ಬೇರೆ. “ಕಾಶ್ಮೀರದ ಹಿತಕರ ವಾತಾವರಣದಲ್ಲಿ ಎರಡು ಸೀಸನ್ಸೇಬಿನದ್ದು ಒಂದು, ಟುಲಿಪ್ಪಿನದು ಇನ್ನೊಂದು. ಸೇಬು ಈಗ ಹೂ ಮಿಡಿಗಳ ಹಂತದಲ್ಲಿದ್ದರೆ ಟುಲಿಪ್ ಪೂರ್ಣ ಅರಳಿನಲ್ಲಿ `ಆಳುತ್ತಿದೆ’. ಅದು ತಿಳಿದೇ ನಾವು ಹೋದ್ದು ಮಾರಾಯ್ರೇ. ಏನು ಚಂದ, ಏನು ಚಂದ! ಅದ್ಯಾರು ನಿಮಗೆ ಹೇಳಿದ್ದು ಇದು ಸೀಸನ್ನಲ್ಲಾಂತ? ಬರೇ ಮೋಸ!” (ವಾಸ್ತವದಲ್ಲಿ ನಾವು ನೋಡಿದ ಮೊದಲ ಉದ್ಯಾನವನಕ್ಕೆ ಬಹು ಸಮೀಪದ ರೈನವಾರಿ ಎಂಬಲ್ಲೇ ಟುಲಿಪ್ ಉದ್ಯಾನ ಇರುವುದನ್ನು ಭೂಪಟಗಳು ಸಾರುತ್ತವೆ)  

ಮಧ್ಯಾಹ್ನದೂಟಕ್ಕೆ ಕೃಷ್ಣ ವೈಷ್ಣೋ ಡಾಬಾಕ್ಕೆ ಹೋದದ್ದೇನೋ ಆಗಲೇ ಹೇಳಿದ್ದೇನೆ. ಆದರೆ ಭೋಜನೇತರ ತಮಾಷೆ ಒಂದನ್ನು ಮಾತ್ರ ಇಲ್ಲಿ ಹೇಳಿಬಿಡುತ್ತೇನೆ. ಡಾಬಾ ನಗರದ ಒಂದು ಮುಖ್ಯ ಬೀದಿಯಲ್ಲೇ ಇದೆ. ಆದರೆ ಉದ್ದಕ್ಕೂ ಅಲ್ಲಿನ ಡಾಮರು ಢಮಾರ್ ಆಗಿ, ಚರಂಡಿ ಮತ್ತು ಅಂತರ್ವಾಹಿನಿಗಳು (ಕೊಳಚೆ ಕೊಳಾಯಿ) ಉತ್ಸಾಹದಲ್ಲಿ ಉಕ್ಕೇರಿ ನಿರಂತರ ಸಂವಾದ ನಡೆಸಿದ್ದವು. ಇವು ತಮ್ಮ ವ್ಯಾಪ್ತಿಯೊಳಗೆ ದೂಳೇನೋ ಏಳದಂತೆ ಉಪಕರಿಸುತ್ತದೆ. ಮತ್ತೆ ನೀರು ಸೋಂಕದ ಇತರ ಜಾಗಗಳಿಂದ ಏಳುವ ದೂಳು ಮೂಗು ಸೇರಿ ಬಾಧಿಸದಂತೆ ಎಲ್ಲರೂ ಮೂಗುಮುಚ್ಚಿ ನಡೆಯುವಂತೆಯೂ ನೋಡಿಕೊಳ್ಳುತ್ತದೆ

ಮೇಲಾಗಿ ಓಡಾಡುವ ಅಪರಿಮಿತ ವಾಹನಗಳ ಸಹಕಾರದಲ್ಲಿ ಸೂರ್ಯ ತಾಪದಿಂದ ಬಳಲಿದ ಸಾರ್ವಜನಿಕರ ಮುಖಮೈಗಳಿಗೆ ನೀರು ಹಾರಿಸಿ ತಂಪಾಗಿಸುತ್ತದೆ. ಕೃಷ್ಣ ವೈಷ್ಣೋ ಡಾಬಾದ ಆಚೀಚೆ ಇನ್ನಷ್ಟು ವೈಷ್ಣೋ ಡಾಬಾಗಳಿದ್ದುವು. (ವೈಷ್ಣೋ ವಲಯವಗಳಲ್ಲಿ ಸಸ್ಯಾಹಾರಿ ಎನ್ನುವುದನ್ನು ಸೂಚಿಸುವ ಪದ. ನಮ್ಮಲ್ಲಿ ಬಂಟರು, ಬಿಲ್ಲವರಾದಿ `ಉಡುಪಿ ಬ್ರಾಹ್ಮಣರ ಹೋಟೆಲ್ನಡೆಸಿದ ಹಾಗೆ) ಆದರೆ ಕೃಷ್ಣದೊಳಗೆ ನಾಲ್ಕೂ ಸಾಲಿನ ಎಲ್ಲ ಮೇಜು ಕುರ್ಚಿಗಳು ಖಾಲಿಯಾಗುವುದನ್ನು ಜನ ಸರದಿಯ ಸಾಲಿನಲ್ಲಿ ನಿಂತು ಜನ ಕಾದಿದ್ದರೆ, ಉಳಿದ ಡಾಬಾಗಳಲ್ಲಿ ಇದ್ದ ನಾಲ್ಕೆಂಟು ಮೇಜು ಕುರ್ಚಿಗಳೂ ಖಾಲಿ ಖಾಲಿ! ಅವಕಾಶ ಸಿಕ್ಕಂತೆ ನಾವು ಕೆಲವರು ಮೊದಲು  ಊಟ ಮುಗಿಸಿದವರು ಹೊರಗೆ ಪುಟ್ಟಪಥದ ಮೇಲೆ ಇತರರನ್ನು ಕಾದಿದ್ದೆವು. ಅತ್ತ ಬಿಸಿಲು ಬಡಿಯದಂತೆ ಇತ್ತ ಕೊಚ್ಚೆ ರಟ್ಟದಂತೆ ಆಯಕಟ್ಟಿನ ಜಾಗ ಹಿಡಿದು ನಿಂತಿದ್ದೆವು. ಆಗ ಒಮ್ಮೆಲೆ ನಾಲ್ಕೈದು ಬಂದೂಕುಧಾರೀ ಜವಾನರು ಬಂದು, ಅಶಿಸ್ತಿನಲ್ಲಿ ನಿಂತಿದ್ದ ವಾಹನಗಳನ್ನು ಓಡಿಸಿ, ಕೃಷ್ಣ ಡಾಬಾದ ಸುತ್ತಮುತ್ತ ಬಂದೋಬಸ್ತು ವಹಿಸಿಕೊಂಡರು. ಹಿಂಬಾಲಿಸಿದಂತೆ ಗುಂಡುನಿರೋಧೀ ಕನ್ನಡಿ ಏರಿಸಿದ ಒಂದು ಕಾರು ಬಂತು. ಅದು ನಿಲ್ಲುವ ಮೊದಲು ಎದುರು ಬಾಗಿಲಿನಿಂದ ಚಿಮ್ಮಿದೊಬ್ಬ ಎಳೆಯ ಅಧಿಕಾರಿ ಡಾಬಾದೊಳಕ್ಕೆ ವ್ಯವಸ್ಥೆಗೆ ಧಾವಿಸಿದ. ಚಾಲಕ ಬಂದು ಹಿಂದಿನ ಬಾಗಿಲು ತೆರೆದಾಗ, ಸ್ವಲ್ಪ ವಿರಾಮದಲ್ಲೇ ಸಾಮಾನ್ಯ ಗಾತ್ರದ ವ್ಯಕ್ತಿಯೊಬ್ಬ ಇಳಿದ. ಮುಖದಲ್ಲಿ ದೇಶಾವರಿ ನಗು ಹೊತ್ತು, ಆಚೀಚೆ ಕೃಪಾದೃಷ್ಟಿ ಬೀರಿ, ಯಾರೂ ಕೊಡದಿದ್ದ ನಮಸ್ಕಾರವನ್ನು ಶ್ರೀಮದ್ಗಾಂಭೀರ್ಯದಿಂದ ಸ್ವೀಕರಿಸುತ್ತ ಕೃಷ್ಣ ಡಾಬಾದೊಳಕ್ಕೆ ನಡೆದ. ನಿಸ್ಸಂದೇಹವಾಗಿ ಪುಡಾರಿ, ಊಟಕ್ಕೆ ಬಂದಿದ್ದ. ಹೊರಗಿನ ಜವಾನರು ತುಸು ಹಗುರಾದಾಗ ಒಬ್ಬನನ್ನು ವಿಚಾರಿಸಿದೆಆದ್ಮಿ ಕೋನ್?” ಜವಾನನಿಂದ ಖಡಕ್ ಉತ್ತರ ಬಂತುಹೇಲ್ತ್ಮಿನಿಶ್ಟರ್.” ದಾರಿಯ ಕೊಳಚೆ, ಭಯೋತ್ಪಾದನೆ ಧಾರಾಳ ಇರುವ ಪರಿಸ್ಥಿತಿಯಲ್ಲೂ ಸಾರ್ವಜನಿಕ ಸ್ಥಳಕ್ಕೆ ಬರುವ ಆತನ ದಾರ್ಷ್ಟ್ಯ, ನಡೆಯಲ್ಲಿನ ಗತ್ತು ಕಂಡು ರೋಸಿದ ಮನಸ್ಸಿನೊಳಗೇ ವ್ಯಂಗ್ಯ ನುಡಿದಿತ್ತುಹೂಂ ಹೇಲ್ತಿನ್ನೋನೇ ಇರಬೇಕು!”


[ಹೀಗೆ ಮನಸ್ಸಿಗೆ ಮೆತ್ತಿದ ಕೊಳೆಯನ್ನು ತೊಳೆಯುವಂತೆ ಅಪರಾಹ್ನ ದಾಲ್ ಸರೋವರದಲ್ಲಿ ವಿಹಾರವಿತ್ತು. ಅದಕ್ಕೆ ವಾರದ ಓದವಧಿಯಲ್ಲಿ ನೀವು ಕೊಡುವ ಪೂರಕ ಟಿಪ್ಪಣಿಗಳ ಬಲವೇ ನನ್ನ ತೇಲಂಗಿ (life jacket). ಹಾಗೆ ಮುಂದುವರಿಕೆ ಮುಂದಿನ ಶುಕ್ರವಾರ.]

3 comments:

 1. ನಾನೂ ಇವನ್ನೆಲ್ಲ "ನೋಡಿದ್ದೇನೆ" ಆದರೆ ಒಬ್ಬ ಪ್ರಾಮಾಣಿಕ ಬರಹಗಾರನ ನೊಟಕ್ಕೂ ಒಬ್ಬ ಪಾಶ್ಚಿಮಾತ್ಯ ಸ೦ಸ್ಕಾರ ಪೂರ್ವಗ್ರಹ ಪೀಡಿತನ ನೋಟಕ್ಕೂ ಅಜಗಜಾ೦ತರ ಕಣೋ ಆಗ್ರಜ. ನೀನ್ನ ಮೂಲಕ ಮತ್ತೊಮ್ಮೆ ನೋಡಿದಾಗಯ್ತು. ಕಾ೦ಬ

  ReplyDelete
 2. Himagirigalu, neelasarovaragalu, varnaranjita hoogidagalu, podarugalu haagu ashokara paryatana vivaragalu ranjisiduvu. Devakige nodalu anuveeyade odisikondu hodudu kannige kattitu. Ondu gulabi gidavannaadru taralillave?
  Shyamala Madhav

  ReplyDelete
 3. ಹಾ.... ವೈವಿಧ್ಯಮಯ ಅನುಭವಗಳು...... !

  ReplyDelete