17 July 2015

ಗೊಂಡೋಲಾ ನಿಸ್ಸತ್ತ್ವ ಸಂಭ್ರಮ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೫)

ಶ್ರೀನಗರದ ಮೊಕ್ಕಾಂನ ಎರಡನೇ ದಿನದ ನಮ್ಮ ಏಕೈಕ ಯೋಜನೆ ಗುಲ್ಮಾರ್ಗ್ ಭೇಟಿ, ಅರ್ಥಾತ್ ನೇರ ಹಿಮದ ಒಡನಾಟ. ವಿದ್ಯಾ ಮನೋಹರ ಉಪಾಧ್ಯ ದಂಪತಿಯನ್ನು ಇಲ್ಲಿನ ಹಿಮಮಹಿಮೆ ತುಂಬಾ ಪ್ರಭಾವಿಸಿತ್ತು. (ವಿವರಗಳನ್ನು ವಿದ್ಯಾ ಪ್ರತ್ಯೇಕ ಕಥನದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ಇಲ್ಲೇ ಹಂಚಿಕೊಳ್ಳಲಿದ್ದಾರೆ!) ಹಾಗಾಗಿ ನಮಗೆ ಚಳಿಯ ಕುರಿತು ವಿಶೇಷ ಮಾಹಿತಿಯೊಡನೆ ತಮ್ಮಲ್ಲಿದ್ದ ವಿಶೇಷ ಬೆಚ್ಚನ್ನ ಉಡುಪುಗಳನ್ನೂ ಕೊಟ್ಟಿದ್ದರು. ಇವು ಸಾಂಪ್ರದಾಯಿಕ ಹತ್ತಿ, ಉಣ್ಣೆಗಳಂತಲ್ಲ. ನೋಡಲು ಭಾರೀ ಕಾಣಿಸಿದರೂ ತೂಕದಲ್ಲಿ ತುಂಬಾ ಹಗುರ ಮತ್ತು ಚಳಿ ತಡೆಯುವಲ್ಲಿ ಅತೀವ ಪರಿಣಾಮಕಾರಿ. ನಾವು `ಕಡಿಮೆ ಒಜ್ಜೆ, ಚುರುಕು ಹೆಜ್ಜೆ’ ಎಂದು ಎರಡೇ ಚೀಲ ಯೋಚಿಸಿದ್ದೆವು. ಈ ಬೆಚ್ಚನ್ನ ಉಡುಪುಗಳಿಗಾಗಿ ಮೂರನೇ ಚೀಲವನ್ನು ಸೇರಿಸಿಕೊಂಡೆವು. ಬರಿದೇ ನೋಡುವವರು, ಹುಬ್ಬು ಹಾರಿಸಿ “ಏನು ಒಬ್ಬರಲ್ಲಿ ಎರಡು ಚೀಲ” ಎನ್ನಬಹುದಿತ್ತು. ಆದರೆ ವಾಸ್ತವದಲ್ಲಿ ಒಂದು `ಅಕ್ಕಿಮೂಟೆ’ಯಾದರೆ ಇನ್ನೊಂದು `ಅರಳೇಕುಪ್ಪೆ’!

ಶ್ರೀನಗರದೊಳಗಿನ ಎರಡು ಅತ್ಯುನ್ನತ ಸ್ಥಳಗಳಲ್ಲಿ ಶಂಕರಾಚಾರ್ಯ ಪೀಠ – ಮೈ ಪೂರಾ ಕಾಡನ್ನು ಹೊದ್ದುಕೊಂಡು ತಲೆಯಲ್ಲಿ ದೇವಾಲಯ ಹೊತ್ತ ಗಿರಿ, ನಾವು ಕಂಡಾಗಿತ್ತು. ಇನ್ನೊಂದು ಉನ್ನತಿ, ಅನೇಕ ನಾಗರಿಕ ರಚನೆಗಳೊಡನೆ ತಲೆಯಲ್ಲಿ ದೊಡ್ಡ ಕೋಟೆಯನ್ನೇ ಹೊತ್ತು ನಿಂತ ಬೆಟ್ಟ - ಹರಿಪರ್ವತ ಅಥವಾ ಕೊಹ್-ಎ-ಮರಾನ್. ಇದು ಐತಿಹಾಸಿಕವಾಗಿ ಅಕ್ಬರ್, ಶೂಜಾ ದುರಾನಿ, ಸಿಕ್ಕರ ಗುರು ಹರಗೋಬಿಂದ್, ಸೂಫಿ ಸಂತರಾದಿ ಹಲವರ ಪ್ರಭಾವ ಮತ್ತು ಕೆಲಸಗಳಿಂದ ಕೋಟೆ, ಆರಾಧನಾ ಕೇಂದ್ರಗಳನ್ನೆಲ್ಲ ಪಡೆದು ರೂಪುಗೊಂಡಿದೆ. ಸಹಜವಾಗಿ ವರ್ತಮಾನದ ಭಯೋತ್ಪಾದನಾ ಕ್ರಿಯೆಗಳಲ್ಲಿ ಆಯಕಟ್ಟಿನ ಸ್ಥಾನವನ್ನೂ ಗಳಿಸಿದೆ. ಅಂತರ್ಜಾಲ ಹಾಗೂ ಮಾರ್ಗದರ್ಶಿ ಪುಸ್ತಿಕೆಗಳು ಇದಕ್ಕೆ ಕೊಟ್ಟ ಮಹತ್ವವನ್ನು ನಮ್ಮ ಪ್ರವಾಸೀ ಆಯೋಜಕರು ಉಪೇಕ್ಷಿಸಿದ್ದರು. ಒಂದೇ ಬಗೆಯ ಎರಡು ಉದ್ಯಾನವನ ಸುತ್ತುವ ಬದಲಿಗೆ, ಅಥವಾ ದಾಲ್ ಲೇಕಿನಿಂದ ಮರಳಿದ ಮೇಲುಳಿದ ಸಮಯದಲ್ಲೂ (ನಾವು ಹೋಟೆಲಿನಲ್ಲಿ ಸೋಮಾರಿಗಳಾಗಿದ್ದೆವು) ಇದನ್ನು ಧಾರಾಳ ನೋಡಬಹುದಿತ್ತು. ಗಿರೀಶ್ ಒಂದೇ ಮಾತಿನಲ್ಲಿ ಅಲ್ಲಿಗೆ ಪ್ರವೇಶವಿಲ್ಲ ಎಂದು ಮುಗಿಸಿದ್ದರು. (ಇಂದು ಅಂತರ್ಜಾಲ, ಪ್ರವಾಸಿ ಮಾರ್ಗದರ್ಶಿ ಪುಸ್ತಕ ಹಾಗೂ ಕೆಲವು ಅನುಭವಿಗಳನ್ನು ವಿಚಾರಿಸುವಾಗ ಹಾಗೇನೂ ಇಲ್ಲ ಎಂದು ತಿಳಿದು ಬಂತು!) ನಮ್ಮ ಗುಲ್ಮಾರ್ಗ್ ದಾರಿ ಶ್ರೀನಗರದ ಹಳೇಪೇಟೆ ಸುತ್ತುವಾಗ ಹರಿಪರ್ವತದ ನೇರ ತಪ್ಪಲಲ್ಲಿ ಹಾದುಹೋಗುವುದಷ್ಟೇ ನಮಗೆ ಸಿಕ್ಕ ಪುಣ್ಯ.


ಶ್ರೀನಗರದಿಂದ ಪಶ್ಚಿಮಕ್ಕೆ, ಪಾಕಿಸ್ತಾನವನ್ನು ಹೆಚ್ಚು ಸಮೀಪಿಸುವ ಸ್ಥಳ ಗುಲ್ಮಾರ್ಗ್. ಇಲ್ಲಿನ ಬೆಟ್ಟದ ಇಳುಕಲು ಸಾರ್ವಜನಿಕ ವಿಹಾರಕ್ಕೆ ನಿರಪಾಯಕಾರಿ ಎಂದು ಕಂಡದ್ದಕ್ಕೆ ಸರಕಾರ ಇತ್ತ ಶುದ್ಧ ಪ್ರವಾಸೋದ್ದಿಮೆಗೆ ಇಂಬಾಗುವ ಅಭಿವೃದ್ಧಿಕಾರ್ಯಗಳನ್ನು ತುಸು ಹೆಚ್ಚಾಗಿಯೇ ಮಾಡಿದೆ.


`ಹೆಚ್ಚು’ ಎನ್ನುವುದಕ್ಕೆ ಇಲ್ಲಿನ ಮಾರ್ಗದ ವ್ಯವಸ್ಥೆಯನ್ನೇ ವಿಡಿಯೋ ತುಣುಕಿನಲ್ಲಿ ನೋಡಿ. ಸುಮಾರು ಐವತ್ತು ಕಿಮೀ ಉದ್ದದ ಮಾರ್ಗವನ್ನು ಚತುಷ್ಪಥ, ನೇರ, ನುಣುಪು ಮಾಡಿದ್ದೆಲ್ಲ ಸರಿಯೇ. ಆದರೆ ಉದ್ದಕ್ಕೂ ಪ್ರತಿ ಐವತ್ತು ಮೀಟರ್ ಅಂತರಕ್ಕೆ ಎರಡು ಬದಿ ಬೆಳಗುವಂಥ ದೀಪ ಕಂಬಗಳನ್ನು ನಿಲ್ಲಿಸಬೇಕಿತ್ತೇ? ವಿಶೇಷ ಜನವಸತಿ ಏನೂ ಇಲ್ಲದ, ಕೇವಲ ವಾಹನಗಳ ಬೋಳು ಮಾರ್ಗಕ್ರಮಣಕ್ಕೆ (ಚಾರಣಿಗರು ಬಾರದ ಸ್ಥಳದಲ್ಲಿ) ಇಷ್ಟು ದಾರಿದೀಪ ಅಳವಡಿಸುವ (ವೆಚ್ಚ), ಊರ್ಜಿತದಲ್ಲಿಡುವ (ಸೇವೆ) ಮತ್ತೂ ರಾತ್ರಿಯುದ್ದಕ್ಕೆ ಉರಿಸುವಷ್ಟು (ಶಕ್ತಿ) ಯಾವುದರಲ್ಲಿ ನಾವು ಶ್ರೀಮಂತರು? ಇಂದು ನಾವು ನಡೆಯುವವರಿಗೆ ದಾರಿ ತೋರಿಸಲು ದೀಪ ಹಚ್ಚುತ್ತಿಲ್ಲ. ಸಂಭ್ರಮಕ್ಕೆ (ಅಲ್ಪನಿಗೆ ಐಶ್ವರ್ಯ ಬಂದರೆ ಹಗಲಲ್ಲಿ ದೀವಟಿಗೆ ಹಿಡಿದ – ಗಾದೆ ಮಾತು!), ಸಾಮಾಜಿಕ ಭದ್ರತೆಯ ಹೆಸರಿನಲ್ಲಿ ರಾತ್ರಿಯ ಸಹಜ ಕತ್ತಲನ್ನು ನಿವಾರಿಸುವ ಹುಚ್ಚಿಗೆ ಬಿದ್ದಿದ್ದೇವೆ. ಇದು ಒಟ್ಟಾರೆ ಜೀವಪರಿಸರದಲ್ಲಿ ಉಂಟು ಮಾಡುತ್ತಿರುವ ಭಾರೀ ಏರುಪೇರು ವಿಜ್ಞಾನದ ಕಡತಗಳಲ್ಲೇ ಉಳಿದುಹೋಗಿರುವುದು ನಿಜಕ್ಕೂ ಚಿಂತಾಜನಕ.

ಬೆಳ್ಳಿಯ ಫಲಕಗಳನ್ನು ಹೊದೆಸಿಕೊಂಡು ಸೂರ್ಯರಶ್ಮಿಯಲ್ಲಿ ಥಳಥಳಿಸುತ್ತಿದ್ದ ಶಿಖರಸಾಲು ಸಮೀಪಿಸುತ್ತಿದ್ದಂತೆ, ಹತ್ತೂವರೆ ಗಂಟೆಯ ಸುಮಾರಿಗೆ ತನ್ಮಾರ್ಗ್ ಎಂಬ ಪುಟ್ಟ ಪೇಟೆಯಲ್ಲಿ ನಾವು ಚಾ ಕುಡಿಯಲು ನಿಂತೆವು. ಮುಂದೆ ಹಿಮದ ಚಳಿ ತಡೆಯಲು, ಅದರ ಮೇಲೆ ನಡೆಯಲು ಬೇಕಾದ ಉಡುಪು ತೊಡಪುಗಳು ಬೇಕಾದವರು ಅಲ್ಲೇ ಬಾಡಿಗೆಗೆ ಪಡೆಯಬಹುದೆಂದೂ ಗಿರೀಶ್ ಸೂಚಿಸಿದರು. ನಾವಿಬ್ಬರು ಕೇವಲ ಗಂಬೂಟುಗಳನ್ನಷ್ಟೇ ತಲಾ ನೂರು ರೂಪಾಯಿ ಬಾಡಿಗೆಗೆ ಪಡೆದುಕೊಂಡೆವು. ಗಿರೀಶ್ ಸೂಚಿಸಿದ ದರ ನೂರೆಂಬತ್ತು! (ಮುಂದೆ ಗುಲ್ಮಾರ್ಗಿನಲ್ಲಿ ಇವೆಲ್ಲವನ್ನೂ ಇನ್ನೂ ಕಡಿಮೆ ದರಗಳಲ್ಲಿ ಕೊಡುವವರು ಎಷ್ಟೂ ಇದ್ದರು. ಹಿಮರಾಶಿಯ ಅಂಚಿನಲ್ಲಿ ಗಂಬೂಟ್ ಗುಡ್ಡೆ ಹಾಕಿಕೊಂಡವನು ಜೋಡಿಗೆ ರೂ ಇಪ್ಪತ್ತು ಎಂದೇ ಗಿರಾಕಿ ಕರೆಯುತ್ತಿದ್ದ!!)

ತನ್ಮಾರ್ಗಿನಿಂದ ಮುಂದೆ ಸುಮಾರು ಹದಿನೈದು ಮಿನಿಟು ಪಕ್ಕಾ ಘಾಟೀದಾರಿ ಕಳೆದು, ಗುಲ್ಮಾರ್ಗ್ ಟ್ಯಾಕ್ಸೀ ಸ್ಟ್ಯಾಂಡ್
ತಲಪಿದೆವು. ಇಲ್ಲೆಲ್ಲ ಟ್ಯಾಕ್ಸೀಸ್ಟ್ಯಾಂಡಿನಿಂದ ಮುಂದೆ ನೇರ ವೀಕ್ಷಣಾ ತಾಣಗಳಿಗೆ ಖಾಸಗಿ ವಾಹನಗಳನ್ನು ಓಡಿಸಲು ಅವಕಾಶ ಕೊಡುವುದಿಲ್ಲ. ಇದರಲ್ಲಿ ಸ್ಥಳೀಯ ಉದ್ದಿಮೆದಾರರ (ಜೀಪು, ಕುದುರೆ ಇತ್ಯಾದಿ) ಸ್ವಾರ್ಥ, ಪ್ರವಾಸಿಗಳ ಶೋಷಣೆಯಂತೂ ನಿಶ್ಚಯ. (ಹಿಂದಿನ ದಿನದ ದೋಣಿಯಿಂದ ಹಿಡಿದು ಮುಂದಿನ ದಿನಗಳಲ್ಲೂ ಮೂರ್ನಾಲ್ಕು ಕೇಂದ್ರಗಳಲ್ಲಿ ನಾವಿದನ್ನು ಅನುಭವಿಸಿದೆವು) ಈ ಕುದುರೆ ಅಥವಾ ಜೀಪುವಾಲರು ಒಂದಕ್ಕೆ ನಾಲ್ಕು ಹೇಳುವುದರಲ್ಲಿ ಮತ್ತೆ ಒಳದಾರಿ ಹುಡುಕಿ ಜಗಳ ಕಾಯುವುದರಲ್ಲೂ ಪ್ರವೀಣರು. ಗುಲ್ಮಾರ್ಗಿನಲ್ಲಿ ಕೇವಲ ಕುದುರೆಯವರು ಮುತ್ತಿಗೆ ಹಾಕಿದ್ದರು. ಗಿರೀಶ್ ಇಂಥಲ್ಲಿ ಕನಿಷ್ಠ ವೀಕ್ಷಣಾ ತಾಣಗಳ (ಅಲ್ಲಿನವರು ಪಾಯಿಂಟ್ಸ್ ಎಂದೇ ಗುರುತಿಸುತ್ತಾರೆ) ಔಚಿತ್ಯ ಮತ್ತು ಅಂತರದ ಲೆಕ್ಕವನ್ನಾದರೂ ಕೊಟ್ಟಿದ್ದರೆ ನಮಗೆ ಹಣಕಾಸು ಹಾಗೂ ಸೌಕರ್ಯದ ಬಳಕೆಯ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗುತ್ತಿತ್ತು. ಕುದುರೆಯವರು ಐದಾರು ಕಿಮೀ ನಡಿಗೆಯೆಂದೇ ಬಿಂಬಿಸಿದರು. ಅವರು ಸ್ಕೇಟಿಂಗ್, ಐಸ್ ಹಾಕಿ, ಗೊಂಡೋಲಾ ಎಂದೆಲ್ಲ ಹೆಸರು ಹೇಳಿದರು. ನಾನೂರರಿಂದ ಇನ್ನೂರರವರೆಗೂ ಚೌಕಾಸಿ ನಡೆಸಿ ಕಾಡಿದರು. ಅದೃಷ್ಟಕ್ಕೆ ನಾವು ಬಹುಜನ ಮತ್ತು ಕುದುರೆಗಳೂ ಹೋಗುತ್ತಿದ್ದ ಹರಕುಮುರುಕು ಡಾಮರು ರಸ್ತೆಯಲ್ಲಿ ನಡೆದೇ ಬಿಟ್ಟೆವು.

ಗುಲ್ಮಾರ್ಗಿನಲ್ಲಿ ಹತ್ತು ಹದಿನೈದು ದಿನಗಳ ಹಿಂದೆಲ್ಲೋ ಹಿಮ ಬಿದ್ದಿರಬೇಕು. ಉಪಾಧ್ಯ ಬಳಗಕ್ಕೆ ಅದನ್ನು ಅನುಭವಿಸುವ ಅವಕಾಶವೂ ಒದಗಿತ್ತು. ಆದರೆ ನಮಗೆ ಕಾಣ ಸಿಕ್ಕಿದ್ದು ಎಲ್ಲೋ ಮನೆ ನೆರಳಿನಲ್ಲಿ, ಚರಂಡಿಯ ಒತ್ತಿನಲ್ಲಿ ಕೇವಲ ಮಣ್ಣು ಕಲಸಿಹೋದ, ನಿರಾಕರ್ಷಕ ಹಿಮದಿಣ್ಣೆಗಳ ರೂಪದಲ್ಲಿ. ದಾರಿ ಪಕ್ಕದಲ್ಲೇ ಇದ್ದ ಒಂದು ದೊಡ್ಡ ಚಪ್ಪರದಡಿಯ ನೀರ ಹೊಂಡ
ಐಸ್ ಹಾಕಿಯಾಟದ ನೆಲವಂತೆ. ಮತ್ತಾಚಿನ ಹುಲ್ಲ ಹಾಸು ಹಿಮಜಾರು ತಾಣವಂತೆ. ಇದನ್ನು ತಿಳಿಸಿದವರೇ “ಎಲ್ಲ ಹಿಮವಿದ್ದಾಗ” ಎಂದು ಸೇರಿಸಲು ಮಾತ್ರ ಮರೆಯಲಿಲ್ಲ. (ಮಣ್ಣ ಬಯಲು ತೋರಿ “ಹುಲ್ಲುಗಾವಲಿನಲ್ಲಿ ಕುರಿಗಳು” ಬುದ್ಧಿವಂತ ಉದ್ಗರಿಸಿದನಂತೆ. ಅನುನಾಯಿಗಳು “ಎಲ್ಲಿ, ಎಲ್ಲಿ” ಎಂದು ಪಿಳಿಪಿಳಿ ಕಣ್ಣು ಬಿಟ್ಟರಂತೆ. “ಹುಲ್ಲನ್ನು ಕುರಿ ಮೇಯ್ದಿತು. ಬಯಲು
ಮಣ್ಣಾದ ಮೇಲೆ ಕುರಿ ಹೋಯ್ತು”!) ಯಾವುದೋ ಒಂದು ದೇವಳ, ಇನ್ನೊಂದು ಪ್ರವಾಸಿ ಬಂಗ್ಲೆಯಂಥ ರಚನೆ, ಸೌರವಿದ್ಯುತ್ತಿನ ರಾಶಿ ಫಲಕಗಳು, ಜೋಪಡಿಯಂಥ ಆಧುನಿಕ ರಚನೆಗಳು ಹೀಗೇ ಕಣಿವೆಯ ಬಯಲೆಲ್ಲ ಸರಕಾರೀ ಅಭಿವೃದ್ಧಿ
ಕಾಮಗಾರಿಗಳ ಮೆಘಾಸೀರಿಯಲ್ಲೇ ನಡೆದಿತ್ತು. ಮತ್ತು ಇವೇ ಕುದುರೆಯವರು ಹೇಳುತ್ತಿದ್ದ ಪಾಯಿಂಟ್ಸ್! ಈ ಕೆಲಸಗಳಿಗಾಗಿ ಓಡಾಡುವ ಲಾರಿ, ಜೀಪುಗಳು ಹಿಮಕರಗಿ ಎದ್ದ ಕೆಸರಿಗೆ ಸಮಪ್ರಮಾಣದಲ್ಲಿ ಕುದುರೆ ಲದ್ದಿ, ಮೂತ್ರ ಸೇರಿಸಿ ಅದ್ಭುತ ಪಾಕ ರಸಾಯನವನ್ನೇ ಮಾಡಿತ್ತು. ಅದೃಷ್ಟಕ್ಕೆ ನಾವೆಲ್ಲ ಗಂಬೂಟು ಧರಿಸಿದ್ದೆವು ಮತ್ತು ಹೆಜ್ಜೆ ಕೀಳಲಾಗದ ಗೊಸರಿನಲ್ಲಿ ಅಡಿಯಿಡಲಿಲ್ಲ! ಅಂತೂ ಸುಮಾರು ಒಂದು ಕಿಮೀ ಅಂತರದೊಳಗೆ ಗೋಳುಮಾರ್ಗದ ಗೊಂದಲ (ತತ್ಸಮ – ಗುಲ್ಮಾರ್ಗ್ ಗೊಂಡೋಲ) ವಲಯ ಮುಟ್ಟಿದ್ದೆವು!

ನಾವೀಗ ಮುಖ್ಯ ಶ್ರೇಣಿಯ ನೇರ ಬುಡದಲ್ಲಿದ್ದೆವು. ಅಲ್ಲಿನ ರಚನೆಗಳೆಲ್ಲ ಶಿಖರದೆತ್ತರಕ್ಕೆ ಜನರನ್ನೊಯ್ಯುವ ಹಗ್ಗದ ತೊಟ್ಟಿಲು – ಗೊಂಡೋಲ, ಇದಕ್ಕೆ ಪೂರಕ. ಆಡಳಿತ ಕಛೇರಿ, ಟಿಕೆಟ್ ಬೂತ್, ಹಿಮಕರಗಿ ಹರಿವ ತೋಡು, ಅದಕ್ಕೊಂದು ಸೇತುವೆ. 

ಆಚೆ ಬೆಟ್ಟ ಏರುವ ಎತ್ತೆತ್ತರದ ಪೈನ್ ಮರಗಳ ಮುನ್ನೆಲೆಯಲ್ಲಿ ನಿಂತ ಭಾರೀ ಕಟ್ಟಡ ಗೊಂಡೋಲಾ ಉಡಾವಣಾ ನೆಲೆ! ಎಲ್ಲ ಕೆಲಸಗಳೂ ಅವ್ಯವಸ್ಥೆಯ ವಿವಿಧ ಹಂತಗಳಲ್ಲಿದ್ದುವು. ಟಿಕೇಟಿಗೆ ಮುಕುರಿದ್ದ ಸಂದಣಿ, ಆಚಿನ ಸರದಿ ಸಾಲು ನಮ್ಮಲ್ಲೂ ಸ್ವಲ್ಪ ಸಂಭ್ರಮ ಮೂಡಿಸಿತು. ಗೊಂಡೋಲಾ ಸವಾರಿ ಎರಡು ಹಂತಗಳಲ್ಲಿತ್ತು. ಪ್ರಾಥಮಿಕ ಹಂತಕ್ಕೆ ತಲಾ ಆರ್ನೂರು
ರೂಪಾಯಿಯಾದರೆ ಮುಂದಿನದ್ದಕ್ಕೆ ಎಂಟ್ನೂರು. ಉಪಾಧ್ಯ ದಂಪತಿ ಬಂದಾಗ ಎರಡನೆಯ ಹಂತ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿತ್ತಂತೆ. “ನೀವಾದರೂ ಎರಡನೆಯದನ್ನು ಅವಶ್ಯ ನೋಡಿ ಮಾರಾಯ್ರೇ” ಎಂಬ ಅವರ ಒತ್ತಾಯ ನಮ್ಮ ಮೇಲಿತ್ತು. ಆದರೆ ನಮ್ಮ ಸಮಯ ಪರಿಪಾಲನೆಯ ಅಶಿಸ್ತಿನಲ್ಲಿ ಆಗಲೇ ಮಧ್ಯಾಹ್ನ ಸಮೀಪಿಸಿತ್ತು. ಸಾಲದ್ದಕ್ಕೆ ಗಿರೀಶ್ ನಿರಾತಂಕವಾಗಿ “ಮೂರು ಗಂಟೆಯೊಳಗೆ ಬನ್ನಿ. ಮತ್ತೆ ಊಟ ಮಾಡಬೇಕಲ್ಲಾ” ಎಂದಷ್ಟೇ ಹೇಳಿ ಹಿಂದುಳಿದರು. ನಮ್ಮ ತಂಡದಲ್ಲಿ ಕೆಲವರಷ್ಟೇ ಅದೂ ಎಲ್ಲ ಪ್ರಥಮ ಹಂತದ ಟಿಕೆಟ್ ಮಾತ್ರ ಕೊಂಡು ಮುಂದುವರಿದೆವು. ಕಟ್ಟಡದ ಮೊದಲ ಮಾಳಿಗೆ ತೊಟ್ಟಿಲುಗಳ ನೆಲೆ, ಹಿತ್ತಿಲಿಗೆ ತೆರೆದಂತೆ ಅದರ ಜಾಡು.


ನಿಯತ ಅಂತರದಲ್ಲಿ ಒಂದು ಬದಿಯಿಂದ ಇಳಿದು ಬರುವ ತೊಟ್ಟಿಲುಗಳನ್ನು ನಿಲುಗಡೆಗೆ ತಂದು, ಜನ ಇಳಿಸಿ, ಹೊಸಬರನ್ನು ಹತ್ತಿಸಿ ಕಳಿಸಲು ಸಿಬ್ಬಂದಿಗಳಿದ್ದರು. ಸುತ್ತೂ ಪಾರದರ್ಶಕ ಆವರಣ ಇರುವ ತೊಟ್ಟಿಲುಗಳಲ್ಲಿ ನಡುವೆ ಬೆನ್ನಿಗೆ ಬೆನ್ನು ಅಂಟಿಸಿದ ಆಸನ ವ್ಯವಸ್ಥೆಯಲ್ಲಿ ಸುಮಾರು ನಾಲ್ಕರಿಂದ ಆರು ಜನ ಕೂರಬಹುದು. ಏರು ದಾರಿಯಲ್ಲಿ ನಾವು ಹಿಮ್ಮುಖರಾಗಿ ಕುಳಿತು ವಿಸ್ತರಿಸುವ ಆಳ ನೋಡಿದರೆ, ಇಳಿದಾರಿಯಲ್ಲಿ ಮುಮ್ಮುಖರಾಗಿ ಕುಳಿತು ಕೊಳ್ಳ ಧುಮುಕಿದ್ದೆವು. ಭಾರೀ ಉಕ್ಕಿನ ಸ್ತಂಭದಿಂದ
ಸ್ತಂಭಕ್ಕೆ ಸರಿಯುವ ದೀರ್ಘ ಉಕ್ಕಿನ ಮಿಣಿಗೆ ಸಿಕ್ಕ ತೊಟ್ಟಿಲ ಸವಾರಿ ಕೇವಲ ಐದಾರು ಮಿನಿಟಿನ ಆಟ. ಉಳಿದಂತೆ ಏನಿದ್ದರೂ ಮಾತಿನ ಬಣ್ಣ ಮಾತ್ರ! ಬಾಲ್ಯದಲ್ಲಿ ಪುತ್ತೂರ ಜಾತ್ರೆಯಲ್ಲಿ ಹತ್ತು ಪೈಸೆಗೆ ಇಪ್ಪತ್ತು ಸುತ್ತು ಹಾಕಿದ ಡೊಂಬರ ತೊಟ್ಟಿಲು, ಸುಭಾಷ್ ನಗರದ ಮೈದಾನಿನ ಕಾಂಗ್ರೆಸ್ ಎಕ್ಸಿಬಿಷನ್ನಿನಲ್ಲಿ ಜೀಕಿದ ಜಯಂಟ್ ವೀಲ್, ಬಹುಮಹಡಿ ಕಟ್ಟಡದ ಲಿಫ್ಟು, ಮುಂದುವರಿದಂತೆ ಜೋಗದ ವಿದ್ಯುದಾಗರ ಮತ್ತು ಪಳನಿಯಪ್ಪನ ಗುಡ್ಡೆಗಳಲ್ಲಿ ರೈಲ್ವೇ ಪಟ್ಟಿಯ ಮೇಲೆ ಗಡಗಡ ಎಳೆಸಿಕೊಂಡ ತೊಟ್ಟಿಲು, ಪ್ರಥಮ ವಿಮಾನ ಉಡ್ಡಯನ, ಮಸ್ಸೂರಿಯಲ್ಲಿ ಇಂಥದ್ದೇ ತೂಗು ತೊಟ್ಟಿಲಲ್ಲೇ ಬೆಟ್ಟವೇರಿಳಿದ ನೆನಪುಗಳ ಮಾಲೆಯಲ್ಲಿ ಇದು ತೀರಾ ಚಪ್ಪೆ. ತೊಟ್ಟಿಲ ಜಾಡು ಬೆಟ್ಟದ ಲಂಬ ಕಣಿವೆಯ ರಕ್ಷಣೆಯಲ್ಲೇ ಸರಿದಿದೆ.

ಅಲ್ಲಿನ ಸಹಜ ಪೈನ್ ಮರಗಳನ್ನು, ಪ್ರಾಕೃತಿಕ ವೈಪರೀತ್ಯಗಳಲ್ಲಿ ಮಗುಚಿದರೂ ತೊಟ್ಟಿಲ ಸಾಲು ತಲಪದಷ್ಟು ಅಂತರಕ್ಕೆ ಕಡಿದು ತೆಗೆದಿದ್ದಾರೆ. ಉಪಾಧ್ಯರ ಬಳಗ ಬಂದಾಗ ಇಲ್ಲೆಲ್ಲ ನೆಲ ಹಿಮದ ಹೊದ್ದಿಕೆಯಲ್ಲಿತ್ತು. ಆ ಸ್ಥಿತಿ ಖಾಯಂ ಉಳಿಯುವ ಋತುಗಳಲ್ಲಿ ಈ ಜಾಡು ಬೆಟ್ಟದ ನೆತ್ತಿಯಿಂದ ಬುಡದವರೆಗೆ ಕಾಲಿಗೆ ಜಾರುಮೆಟ್ಟು (ಸ್ಕೀ) ಹಾಕಿ ಕ್ರೀಡಿಸುವವರಿಗೆ ಒದಗುವುದೂ ಇರಬಹುದು. ನಮಗೆ ಕೊಚ್ಚೆ ಕೆಸರಿನ ಸವಕಲು ಜಾಡು, ತೊಟ್ಟಿಲ ಸಾಲಿನ ಉಸ್ತುವಾರಿಯ ಒಂದೆರಡು ಕಟ್ಟಡಗಳು, ಒಂದಷ್ಟು ಚಾರಣಿಗರು ಕಾಣ ಸಿಕ್ಕರು. ಉಳಿದಂತೆ ಬೆಟ್ಟದ ಈ ಮರಸಿನಲ್ಲಿ ಸಿಗುವ ಅಲ್ಪ ದೃಶ್ಯಕ್ಕೆ ಆರ್ನೂರು ರೂಪಾಯಿ ದುಬಾರಿ ಆಟವೇ ಸರಿ. ನೆಲ ಮಟ್ಟದ ಬರಿಗಣ್ಣಿಗೂ ಸಿಗುವ ಈ ದೃಶ್ಯವನ್ನು ನಡೆದೇ ಸಾಧಿಸಿದ್ದರೆ ಖಂಡಿತವಾಗಿಯೂ ಹೆಚ್ಚಿನ ಧನ್ಯತೆ ದಕ್ಕುತ್ತಿತ್ತು.

ಬೆಟ್ಟದ ಸುಮಾರು ಅರ್ಧಭಾಗದಲ್ಲಿ ಪ್ರಾಕೃತಿಕವಾಗಿಯೇ ಒದಗಿದ ವಿಸ್ತಾರ ತಟ್ಟಿನಲ್ಲಿ ಗೊಂಡೋಲಾದ ಪ್ರಾಥಮಿಕ ನಿಲುಗಡೆಯಿತ್ತು. ಅಲ್ಲಿಂದ ಮೇಲಕ್ಕೆ ಎರಡನೇ ಹಂತದ ಸವಾರಿ ಕೊಡುವ ಸ್ತಂಭರಾಜಿ ಬೆಟ್ಟದ ಹೆಚ್ಚು ತೆರೆಮೈಯಲ್ಲೂ ಇತ್ತು, ಇನ್ನೂ ಪೂರ್ಣ ಹಿಮಾವೃತವೂ ಆಗಿತ್ತು. ಆದರೆ ಅದು ಅಂದೂ ಕಾರ್ಯನಿರತವಾಗಿರಲಿಲ್ಲ. ನಾವು ಗೊಂಡೋಲಾ ಇಳಿದ ಹಂತ ಸುಮಾರಿಗೆ ವಿಸ್ತಾರ ಮೈದಾನದಂತೇ ಇತ್ತು. ಇಳಿದಾಣದ ದೊಡ್ಡ ಕಟ್ಟಡವಲ್ಲದೆ ಸಮೀಪದಲ್ಲಿ ಇನ್ನೂ ಕೆಲವು ಸಣ್ಣ ಪುಟ್ಟ ಮನೆ ಮಾಡುಗಳು, ಕೆಲಸಗಳ ಉಳಿಕೆಯ ಅವ್ಯವಸ್ಥೆಗಳು ಹರಡಿಬಿದ್ದಿದ್ದವು. 

ಅವನ್ನು ಬಿಟ್ಟು ಅಲ್ಲೇ ನೂರಿನ್ನೂರು ಮೀಟರ್ ಆಚಿನ ಒಂದು ಪಾರ್ಶ್ವದಲ್ಲಿ ಸಾಕಷ್ಟು ಹಿಮದ ಹೊದಿಕೆ ಹೊದ್ದ ದಿಬ್ಬ ಕಾಣಿಸುತ್ತಿತ್ತು.  ಸಹಜವಾಗಿ ಆ ದಿಕ್ಕಿಗೆ ಕಾಂಕ್ರೀಟ್ ಪುಟ್ಟಪಥವನ್ನೇ ಮಾಡಿದ್ದರು, ಇಲ್ಲವಾದರೂ ಸಾಕಷ್ಟು ಸವಕಲು ಜಾಡುಗಳೂ ಸಾಗಿದ್ದುವು. ಅಲ್ಲಲ್ಲಿ ಗುಡಾರ ಹಾಕಿ ತಿಂಡಿ ತೀರ್ಥದ ಮಳಿಗೆಗಳೂ ನಡೆದಿದ್ದುವು. ಆದರೆ ಹೆಚ್ಚಿನ ಜನ ಹಾಗೂ `ಜಾತ್ರೆ’ ಹಿಮದ ದಿಬ್ಬದ ಮೇಲೇ ನೆರೆದಿತ್ತು. ತಡ ಮಾಡದೆ  ನಾವೂ ಅತ್ತ ಮುಂದುವರಿದೆವು. ನೆಲದ ಮೇಲೆ ಕುದುರೆ, ಜೀಪೆಂದು ಕಾಡುವ ಜನ ಇಲ್ಲಿ ಹಿಮ ನಿರೋಧದ ಸಾಮಗ್ರಿ ಹಿಡಿಸಲು ಹಾಗೂ ಜಾರುಕ್ರೀಡೆಗಳಲ್ಲಿ ನೆಲೆಸಲು ಜುಲುಮೆ ಮಾಡುತ್ತಾರೆ. ಉಡುಪು ತೊಡವುಗಳಲ್ಲಿ ನಾವು ಸ್ವಯಂಪೂರ್ಣರಿದ್ದುದರಿಂದ ಅಷ್ಟು ಬಚಾವ್!

ದೇವರಿಗಿಂತ ದೇವಭಯ ದೊಡ್ಡದು. ಹಿಮ ನೋಡಿ, ಸಮೀಪಿಸಿ, ಉರುಡಿ, ಚಳಿ ಅನ್ನಿಸುವ ಮೊದಲೇ ನಾವು ಸಜ್ಜಾಗಿಬಿಟ್ಟಿದ್ದೆವು. ಉಣ್ಣೆಯ ಕಾಲ್ಚೀಲದ ಮೇಲೆ ಗಂಬೂಟು ಮೊದಲೇ ಇತ್ತು. ಸ್ವೆಟ್ಟರ್ ಮತ್ತು ಮಂಗನಟೊಪ್ಪಿ ಪ್ರಾಥಮಿಕ ಸ್ತರ. ಮೇಲೆ ಉಪಾಧ್ಯ ದಂಪತಿ ಕೊಟ್ಟ ಭಾರೀ ಕೋಟುಗಳನ್ನೇರಿಸಿ, ತಲೆಯ ಅಂಶವನ್ನೂ ಬಿಗಿದುಕೊಂಡೆವು. ಕೈಮರಗಟ್ಟದಂತೆ ಗವುಸು, ಹಿಮಗುರುಡು ಬಾರದಂತೆ ಕನ್ನಡಕಗಳ ಮೇಲೆ ತಂಪುಗನ್ನಡಿಯ ರೆಪ್ಪೆ ಮುಚ್ಚಿಕೊಂಡದ್ದೂ ಆಯ್ತು. ಕಾಲುಗಳಿಗೆ ಪ್ಯಾಂಟಿನ ಒಳಗೂ ಬಿಗಿಯ ಉಣ್ಣೆಪ್ಯಾಂಟೇನೋ (ಥರ್ಮಲ್ಸ್ ಎಂದೇ ಅಭಯ ಕೊಟ್ಟದ್ದೂ) ತಂದಿದ್ದೆವು. ಸಾರ್ವಜನಿಕದಲ್ಲಿ ಬದಲಿಸಲಾಗದ ಕಷ್ಟಕ್ಕೆ ಚೀಲದೊಳಗೇ ಉಳಿದಿತ್ತು. ಹಿಮದ ರಾಶಿ ಬಲು ನುಣುಪಿನ ಗಟ್ಟಿ ನೆಲದ ಭಾವನೆಯನ್ನೇ ಕೊಡುತ್ತಿತ್ತು. 

ಮಟ್ಟಸ ಹೆಜ್ಜೆಯಿಟ್ಟಲ್ಲಿ ನಮ್ಮ ತೂಕ ಮತ್ತು ಬೂಟಿನಡಿಯ ಚಡಿಗಳು ಸಾಲದೇ ಜಾರಿಬೀಳುವುದು ಖಾತ್ರಿಯಿತ್ತು. ಓದು ಹಾಗೂ ಸಿನಿಮಾಗಳಲ್ಲಿ ನೋಡಿದ ಅನುಭವದಲ್ಲಿ ನಾವು ತುದಿಗಾಲಲ್ಲಿ ಒಂದೆರಡು ಬಾರಿ ಹಿಮ ಕೆತ್ತಿ, ಮೆಟ್ಟಿಲು ಮಾಡಿಕೊಂಡು ನಿಧಾನಕ್ಕೆ ಏರಿ ಮುಂದುವರಿದೆವು. ಅದೇ ಇಳಿಯುವಲ್ಲಿ ಹಿಮ್ಮಡಿ ಹುಗಿದು ಸಮತೋಲನ ಕಾಪಾಡಿಕೊಳ್ಳಬೇಕಾಯ್ತು. ಹಿಮಪದರ ತೆಳ್ಳಗಾಗುತ್ತಿದ್ದುದ್ದರಿಂದ ಅಲ್ಲಲ್ಲಿ ಕಂಡಿ ಬಿದ್ದು ಕೆಳಗಿನ ಕಲ್ಲು, ಮಣ್ಣು, ಗಿಡ, ಪೊದರುಗಳೂ ಕಾಣುತ್ತಿದ್ದುವು. ಆಗಿಂದಾಗ ಹಿಮಬಂಡಿ ಜಾರಿ ಅಥವಾ ಅನ್ಯಮಂದಿ ನಡೆದು ನುಸುಲಾದ ಜಾಡುಗಳನ್ನು ಅನುಸರಿಸುವುದು ಸುಲಭವಿತ್ತು. 

ಇಲ್ಲೆಲ್ಲ ಏರುವಲ್ಲಿ ಎಡವಟ್ಟು ಮಾಡಿಕೊಂಡು ಸಣ್ಣದಾಗಿ ಜಾರಿ ಬರುವ, ಉರುಳುವ ಜನರನ್ನೇನೋ ಸುಧಾರಿಸಿಕೊಳ್ಳಬಹುದು. ಆದರೆ ಉದ್ದೇಶಪೂರ್ವಕವಾಗಿಯೇ ಜಾರಿ ಬರುವ, ಫಕ್ಕನೆ ನಿಲುಗಡೆಗೆ ಬರುವ ವ್ಯವಸ್ಥೆಗಳಿಲ್ಲದ ಹಿಮ ಬಂಡಿಗಳನ್ನಲ್ಲ. ಬರಿಯ ಹಲಗೆ, ಪಕಾಸುಗಳನ್ನು ಬೆಸೆದ ಬಂಡಿಗಳು ಇಳಿಜಾರಿನಲ್ಲಷ್ಟೇ ಹೆದರಿಸುತ್ತಿದ್ದುವು.


ಧೈರ್ಯಸ್ಥರು ಸಾಮಾನ್ಯ ಇಳುಕಲುಗಳಲ್ಲಿ ಇವನ್ನು ಸ್ವತಂತ್ರವಾಗಿಯೂ ಬಳಸುತ್ತಿದ್ದರು. ಕೆಲವರು ಏರುಮುಖದಲ್ಲೂ ಈ ಹಲಿಗೆ ಜೋಡಣೆಯಲ್ಲಿ ಕುಳಿತು, ಕೂಲಿಕೊಟ್ಟು ಎಳೆಸಿಕೊಳ್ಳುತ್ತಿದ್ದರು. ಅಂಥಲ್ಲಿ ಕೂತವರ ಪುಕ್ಕಲು ಅಥವಾ ಜಿಪುಣತನಕ್ಕಿಂಥ ಹೆಚ್ಚಿಗೆ ನನಗೆ ಎಳೆಯುವವನ ಆರ್ಥಿಕ ದೌರ್ಬಲ್ಯ ಕಾಡುತ್ತಿತ್ತು. (ಕೊಲ್ಕತ್ತಾದಲ್ಲಿನ್ನೂ ಮನುಷ್ಯರೇ ಎಳೆಯುವ ರಿಕ್ಷಾಗಳಿವೆಯೋ ಗೊತ್ತಿಲ್ಲ. ಆದರೆ ದಿಲ್ಲಿಯಲ್ಲಿ ಕಂಡ ಸೈಕಲ್ ರಿಕ್ಷಾ ಹೀಗೇ ಅಲ್ಲವೇ?) ಹಿಮ ಬಂಡಿಯಲ್ಲಿ ತುಸು ದೊಡ್ಡದು, ಯಾಂತ್ರೀಕೃತವಾದವುಗಳು ಇಲ್ಲಿ ಧಾರಾಳ ಇದ್ದವು. ದೃಢ ಫೈಬರ್ ರಚನೆಯ ಬಂಡಿಗೆ ಬುಲ್ಡೋಜರಿನಂತೇ ಸರಪಳಿಗಳ ಚಕ್ರ, (ನಾಡ ದೋಣಿಗಳಲ್ಲಿ ಬಳಸುವ ಔಟ್‍ಬೋರ್ಡ್) ಯಮಹಾ ಇಂಜಿನ್.

ಇವು ಬರಿಯ ಹಿಮವಲ್ಲ ತೆರೆದು ಬಿದ್ದ ಮಣ್ಣು, ಹಾಸುಗಲ್ಲು, ಸಣ್ಣಪುಟ್ಟ ಗಿಡ ಪೊದರುಗಳನ್ನೂ ಗಣಿಸದ, ಏರಿಳಿತಗಳ ಲೆಕ್ಕವಿಲ್ಲದ ಸರ್ವಸಂಚಾರಿಗಳು. ನಾವು ತಪ್ಪಡಿಗಳನ್ನು ಇಟ್ಟು, ನಾಲ್ಕು ಪಲ್ಟಿ ಹೊಡೆದು, ಅಡ್ಡಾತಿಡ್ಡಾ ಜಾರಿದರೂ ತೊಂದರೆಯಿಲ್ಲ. ಬಂಡಿಗಳ ಜಾಡಿನಲ್ಲಿ ಮಾತ್ರ ಸಿಕ್ಕಿಬೀಳಬಾರದು. ನಾವೆಲ್ಲ ಯಥಾನುಶಕ್ತಿ ಪ್ರಯೋಗ ಮಾಡಿ, ಕೆಲವರು ಅಡ್ಡ ದಿಣ್ಣೆಯ ತಲೆಯನ್ನೂ ತಲಪಿದ್ದಾಯ್ತು. ನಮಗಿಂಥ ಮೊದಲೇ ಬಂದವರಲ್ಲಿ ತೀರಾ ಕೆಲವರು ಹಾಗೇ ಮುಂದುವರಿದು ಮುಖ್ಯ ಬೆಟ್ಟದ ಮೈಯಲ್ಲೂ ಸುಮಾರು ಮೇಲೇರಿದ್ದು ಕಾಣುತ್ತಿತ್ತು. ಸಮಯದ ಮಿತಿ, ಆಗೀಗ ಆಗಸ ಎಳೆಯುತ್ತಿದ್ದ ಮುಸುಕು ಇನ್ನೆಲ್ಲಿ ದುಃಖದ ಕೋಡಿಯಾಗುತ್ತದೋ ಎಂಬ ಭಯ ಸೇರಿ ಹಿಂದೆ ಹೊರಟೆವು. ತಂಪುಗನ್ನಡಿಯನ್ನು ನಿತ್ಯದಲ್ಲಿ ಬಳಸದ ನನಗೆ `ರೋಗ’ಕ್ಕಿಂಥ `ಮದ್ದೇ’ ಕಾಟಕೊಟ್ಟಿತು. ನಾವಿಬ್ಬರೂ ಒಂದೆರಡು ಪಲ್ಟಿಯ ಮೇಲೆ ತಂಪುಗನ್ನಡಿಯನ್ನೇ ನಿವಾರಿಸಿ
ನಿರಾಳರಾದೆವು! 


ಎಲ್ಲೆಲ್ಲೂ ಹಿಮ, ಅದರಲ್ಲೂ ನಿರಂತರ ಸೂರ್ಯಬಿಂಬದ ಪ್ರತಿಫಲನ ನೋಡಿದರಷ್ಟೇ ಹಿಮಗುರುಡುತನ ಕಾಡುತ್ತದೆ. ಆ ದಿನದ ಮಂಕು, ಅರ್ಧ ಒಂದು ಗಂಟೆಯ ಆಟದಲ್ಲಿ ನಿಜಕ್ಕೂ ತಂಪುಗನ್ನಡಿಯ ಅಗತ್ಯವಿರಲಿಲ್ಲ. ಒಂದು ಪಲ್ಟಿಯಲ್ಲಿ ನನ್ನ ಗಂಬೂಟೊಳಗೆ ಸ್ವಲ್ಪ ಹಿಮದ ಹುಡಿ ಸೇರಿಕೊಂಡಿತ್ತು. ಮನೆಯ ಫ್ರಿಜ್ಜಿನ ಹಿಮ ಆಗೀಗ ಚರಪರ ಪುಡಿ ಮಾಡಿದ ನೆನಪಿನಲ್ಲಿ ಸುಮ್ಮನಿದ್ದೆ. ಕಾಲಿನ ಬಿಸಿಗೆ ಕರಗಿ, ತುಸು ತಚಪಿಚ ಆಗಬಹುದೆಂದುಕೊಂಡೆ. ಆದರೆ ಆ ಪರಿಸರದ ಪ್ರಭಾವದಲ್ಲಿ ಅದು ಕರಗದೇ ಉಳಿದು, ಕಾಲಿಗೆ ಮರಳು,  ಮುಳ್ಳಿನಂತೆಯೇ ಕಾಡಿತು. ಅನಿವಾರ್ಯವಾಗಿ ಹಿಮದ ಮೇಲೇ ಕುಳಿತು, ಬೂಟು ಕಳಚಿ, ಶುದ್ಧಮಾಡಿಕೊಂಡೆ!


ನಮ್ಮ ತಂಡದಲ್ಲಿ ಸುವರ್ಣ, ರೇಖಾ ಮತ್ತು ವಿದ್ಯಾರಣ್ಯ ಗಿರೀಶರೊಟ್ಟಿಗೆ ಹಿಂದುಳಿದಿದ್ದರು. ಗೊಂಡೋಲಾ ಏರಿದ ನಾವಾದರೂ ಗುಂಪಿನಲ್ಲೇ ನಡೆಯುವ ಹಂಗೇನೂ ಇಟ್ಟುಕೊಳ್ಳದೆ ಓಡಾಡಿದ್ದೆವು. ಹೀಗಾಗಿ ಟಿಕೆಟ್ ಗೂಡಿನಲ್ಲಿ, ಸರದಿ ಸಾಲಿನಲ್ಲಿ ಮತ್ತೆ
ತೊಟ್ಟಿಲಿನಲ್ಲೂ ನಮಗೆ ಕೆಲವು ಕನ್ನಡಿಗರು ಸಿಕ್ಕಿದ್ದರು. 

ಅದರಲ್ಲೂ ಮಾತಿನೊಡನೆ ಬೆಳೆದ ಉಡುಪಿಯ ಕುಟುಂಬದೊಡನೆ ಪೂರ್ವಪರಿಚಯದ ಕೆಲವು ಎಳೆಗಳೂ ಬೆಸೆದುಕೊಂಡದ್ದು ಹೆಚ್ಚಿನ ಕುಶಿ ಕೊಟ್ಟಿತು. ಸುಮಾರು ಕಾಲರ್ಧ ಗಂಟೆಗಳ ವ್ಯತ್ಯಾಸದಲ್ಲಿ ನಾವೆಲ್ಲ ಮತ್ತೆ ಗೊಂಡೋಲಾ ಹಿಡಿದಿದ್ದೆವು. ಕೆಳಗಿಳಿದ ಮೇಲೆ ಧನಂಜಯರ ಮಕ್ಕಳು ಮಾತ್ರ ಸವಾರಿಯ ಸಂತೋಷಕ್ಕಾಗಿ ಸ್ವಲ್ಪ ಕುದುರೆಯನ್ನೇರಿದ್ದು ಬಿಟ್ಟರೆ ನಾವೆಲ್ಲ ತಿರುಗಿ ನಡೆದೇ ವ್ಯಾನು ಸೇರಿಕೊಂಡೆವು. ತನ್ಮಾರ್ಗ್ ಸೇರಿ, ಬಾಡಿಗೆ ವಸ್ತುಗಳನ್ನು ಮರಳಿಸಿ, ಊಟ ಮುಗಿಸುವಾಗ ಗಂಟೆ ನಾಲ್ಕೂವರೆ ಕಳೆದಿತ್ತು.

ಪ್ರವಾಸೀ ಕಲಾಪ ಪಟ್ಟಿಯಲ್ಲಿ ರೆಸ್ಟ್ ಮತ್ತು ಮಾರ್ಕೆಟಿಂಗ್ ಎನ್ನುವ ಪದಗಳು ನನಗೆಂದೂ ಹಿಡಿಸಿದ್ದಿಲ್ಲ. ಕೆಲಸದ ಬದಲಾವಣೆಯೇ ವಿಶ್ರಾಂತಿ ಎನ್ನುವ ತತ್ತ್ವ ನನ್ನದು. ಸಮಯ, ಹಣವನ್ನು ವಿನಿಯೋಗಿಸಿ ಪರಸ್ಥಳ, ಹೊಸ ಅನುಭವ ಎಂದೇ ಪ್ರವಾಸ ಹೊರಟ ಮೇಲೆ ದೈಹಿಕ ತೊಂದರೆಯಲ್ಲದೆ ಸುಮ್ಮನುಳಿಯುವುದು ನನಗೆಂದೂ ಪಥ್ಯವಾಗಿಲ್ಲ. ಇನ್ನು ಪ್ರವಾಸದಲ್ಲಿ ಅನುಭವಕ್ಕೆ ಸಹಕಾರಿಯಾಗಿ, ವೀಕ್ಷಣೆಯಲ್ಲಿ ಒಲವು ಮೂಡಿದ್ದನ್ನು ಖರೀದಿಸಿದ್ದಿರಬಹುದು. ಆದರೆ ಪ್ರವಾಸದ ನಡುವೆ ಖರೀದಿಗಾಗಿಯೇ ಮಳಿಗೆ ಹುಡುಕಿಕೊಂಡು ಹೋಗುವುದು, ಸಮಯ ಕಳೆಯುವುದು ತಪ್ಪು. 

ಗುಲ್ಮಾರ್ಗಿನಿಂದ ಮರಳುವ ದಾರಿಯಲ್ಲಿ ಗಿರೀಶ್ ಶುದ್ಧ ಖರೀದಿದಾರರಿಗಾಗಿ ಒಂದು ಮಳಿಗೆಗೊಯ್ದಿದ್ದರು. ದಾಲ್ ಸರೋವರದ ಬಟ್ಟೆ ಮಳಿಗೆಗೆ ಇನ್ನೊಂದಷ್ಟು ಜವಳಿಯನ್ನೂ ಒತ್ತಿಗೆ ಒಂದಷ್ಟು ಕರಕುಶಲ ಸಾಮಗ್ರಿಗಳನ್ನೂ ಪೇರಿಸಿದ್ದರು. ಮೂವತ್ತಾರು ವರ್ಷಗಳ ಮಾರಾಟಗಾರನ ಪಾತ್ರದಲ್ಲಿ ನಾನೆಂದೂ ಬಳಸದ ಥಳಕಿನ ಮಾತು, ದರ ಜಗ್ಗಾಟಗಳು ನಡೆದಿದ್ದಾಗ ನಾನು ಮೌನವೀಕ್ಷಕನಾಗಿದ್ದೆ. ಮತ್ತೆ ತಟಪಟ ಹನಿಯಪ್ಪನೊಡನೆ ಶ್ರೀನಗರಕ್ಕೆ ಮರಳಿದೆವು. ಹೊಟೆಲಿನ ಬಳಿಯಲ್ಲಿ ಸಂಜೆಯ ಮಳೆಯೊಡನೆ ಬಂದ ಗಾಳಿಗೊಂದು ದೊಡ್ಡ ಮರ ಮಗುಚಿತ್ತು. ಹಾಗೆ ತುಸು ಬಳಸು ದಾರಿಯನ್ನು ಹಿಡಿದು ಹೋಟೆಲ್ ತಲಪಿದ ಮೇಲೆ ನಮಗುಳಿದ ಎರಡು ಘನ ಕೆಲಸ, ರಾತ್ರಿಯ ಊಟ ಮತ್ತೆ ನಿಜದ ನಿದ್ರಾಭಾಗ್ಯ![ಕ್ಷಣಮಾತ್ರದಲ್ಲಿ ಕಳೆದ ತೊಟ್ಟಿಲ ಸಂಭ್ರಮ (ಗೊಂಡೋಲಾ ಯಾನ) ಕೊಡದ ನಿದ್ರಾಭಾಗ್ಯವನ್ನು ವಾರಪೂರ್ತಿ ಅನುಭವಿಸುತ್ತ ಕಥನವನ್ನು ಮುಂದಿನವಾರಕ್ಕೆ ಜೀಕುತ್ತೇನೆ. ಪ್ರತಿಕ್ರಿಯಾ ಅಂಕಣದಲ್ಲಿ ಬೀಳುವ ನಿಮ್ಮ ಪ್ರತಿ ಗುನುಗೂ (ಗೊಣಗೂ) ನನಗೆ ಮಧುರ ಗೀತೆಗಳೇ ಎಂದು ಮರೆಯಬೇಡಿ]

5 comments:

 1. Congrats . Brilliant photographs and illustrations, useful guide for future travelers. Thank you sri Ashok vardhana. Regards

  ReplyDelete
 2. Thank you for the credibility of tour manager

  ReplyDelete
  Replies
  1. ನಮ್ಮ ಅನುಭವದ ಮುನ್ನೆಲೆಯಲ್ಲಿ ನಿಮ್ಮ `ಉಪಕಾರ ಸ್ಮರಣೆ' ಏನೋ ವ್ಯಂಗ್ಯವನ್ನು ಸಾರುತ್ತಿದೆ. ಜನಾರ್ದನ ಪೈಗಳೇ ನಿಮ್ಮ ಅನುಭವವನ್ನು ವಿಸ್ತರಿಸಬೇಕಾಗಿ ಕೇಳಿಕೊಳ್ಳುತ್ತೇನೆ.

   Delete
 3. ಪ್ರವಾಸ ಹೇಗಿತ್ತು ಹಾಗೂ ಹೇಗಿರಬೇಕಿತ್ತು ಅನ್ನೋದನ್ನ ನಿಮ್ಮದೇ ಶೈಲಿಯಲ್ಲಿ ದಾಖಲಿಸಿದ್ದೀರಿ... ಓದೋದಕ್ಕೆ ಖುಷಿಯಾಗುತ್ತೆ.

  ReplyDelete
 4. ಎಪ್ರಿಲ್ ನ ಗುಲ್ಮಾರ್ಗ್ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದಂತಾಯಿತು....

  ReplyDelete