10 July 2015

ಜಲನಿಧಿಯ ಅವಹೇಳನ – ದಾಲ್ ಸರೋವರ

(ಜಮ್ಮು ಕಾಶ್ಮೀರ ಪ್ರವಾಸ ಕಥನ)
ಅಪರಾಹ್ನ ದಾಲ್ ಲೇಕ್ ದರ್ಶನ. ಅಂತರಜಾಲದ ವಿಶ್ವಕೋಶವೇ ಆಗಿರುವ ವಿಕಿಪೀಡಿಯಾ ದಾಲ್ ಲೇಕನ್ನು ರಾಜ್ಯದ ಎರಡನೇ ದೊಡ್ಡ ನಾಗರಿಕ ಸರೋವರ ಎಂದೇ ಗುರುತಿಸುತ್ತದೆ. ಮಹಿಮೆಯನ್ನು ಕೀರ್ತಿಸುವಾಗ, ಸುಮಾರು ಹದಿನೈದೂವರೆ ಕಿಮೀ ಸುತ್ತಳತೆ, ಹದಿನೆಂಟು ಚದರ ಕಿಮೀ ವಿಸ್ತೀರ್ಣ, ತೋರವಾಗಿ ಗುರುತಿಸಬಹುದಾದಂತೆ ನಾಲ್ಕು ನಾಲೆಗಳ, ಹಲವು ನಡುಗಡ್ಡೆ ಹಾಗೂ ತೇಲುದ್ವೀಪಗಳ (ರಾಡ್), ಚಳಿಗಾಲದಲ್ಲಿ -೧೧ ಡಿಗ್ರಿ ಶೈತ್ಯಕ್ಕೂ ಇಳಿದು ಹೆಪ್ಪುಗಟ್ಟುವ, ಶ್ರೀನಗರ ಜನಜೀವನದ ಹಾಗೂ ಆರ್ಥಿಕತೆಯ (ಮುಖ್ಯವಾಗಿ ಪ್ರವಾಸೋದ್ಯಮ) ಪರಮಾಧಾರವೇ ದಾಲ್ ಲೇಕ್ ಎನ್ನುತ್ತದೆ.

ದಾಲ್ ಸರೋವರ ವಿಹಾರಕ್ಕೆ ಎಷ್ಟು ಪ್ರವೇಶಗಳಿವೆಯೋ ನಮಗೆ ತಿಳಿದಿಲ್ಲ. ಗಿರೀಶ್ ನಮ್ಮನ್ನು ಜನಪ್ರಿಯ ಎನ್ನುವ ಒಂದು ಕಟ್ಟೆಗೆ ಮುಟ್ಟಿಸಿ, ದೋಣಿ ವಿಹಾರದ ಆಯ್ಕೆ ಮತ್ತು ಪಾವತಿ ವ್ಯವಸ್ಥೆಯನ್ನು ನಮಗೇ ಬಿಟ್ಟರು. ವೀಕ್ಷಣಾತಾಣಗಳ ವಿವರ, ತಿರುಗಾಟದ ಅವಧಿ, ನ್ಯಾಯದರಗಳ ಹಿನ್ನೆಲೆ, ಭಾಷಾ ಸೌಲಭ್ಯ ಕೊನೆಗೆ ನಾಯಕತ್ವವೂ ಇಲ್ಲದೆ ನಾವು ಚೌಕಾಸಿಗಿಳಿಯುವಂಥ ಪರಿಸ್ಥಿತಿ. ಹೀಗೇ ಮುಂದೆ ಕುದುರೆ, ಜೀಪು, ಹಿಮನಡಿಗೆಗೆ ದಿರುಸು ಮುಂತಾದ ಸಂದರ್ಭಗಳಲ್ಲೂ ಗಿರೀಶ್ ನಮ್ಮನ್ನು ಶೋಷಣೆಗೆ ತೆರೆದು ಬಿಟ್ಟದ್ದು ಶುದ್ಧ ತಪ್ಪು. ಇಂಥಲ್ಲೆಲ್ಲ ತನ್ನ ಗಿರಾಕಿಯ ಹಣ ಮತ್ತು ಹಿತ ಕಾಯದಿದ್ದರೆ ಟ್ರಾವೆಲ್ಸಿನ ವಿಶ್ವಾಸಾರ್ಹತೆಗೇನು ಬೆಲೆ? ಪ್ರತಿನಿಧಿ ಗಿರೀಶ್ ಅಂಥ ಸ್ಥಳಗಳಿಗೂ ಮೊದಲೇ ನಮಗೆ ಕೊಡುತ್ತಿದ್ದ ಸಲಹೆ ಮತ್ತು ಸೂಚಿಸಿದ ದರಗಳೂ ನಮ್ಮ ಪರವಾಗಿಲ್ಲದಿದ್ದುದು ಅನುಭವಕ್ಕೆ ಬಂದಾಗ ಅಪ್ರಾಮಾಣಿಕ ಎಂದೇ ಅನ್ನಿಸಿತು.


ನಾವು ಸುಮಾರು ಒಂದೂವರೆ ಗಂಟೆಯ ದೋಣಿ ವಿಹಾರಕ್ಕೆ ವ್ಯಕ್ತಿಯೊಬ್ಬನಿಗೆ ಇನ್ನೂರೈವತ್ತು ರೂಪಾಯಿಯ ಬಾಡಿಗೆ ನಿಗದಿಸಿಕೊಂಡೆವು. ನಮ್ಮ ತಂಡವನ್ನು ದೋಣಿಯವರೇ ಮೂರು ನಾಲ್ಕು ದೋಣಿಗಳಿಗೆ ಹಂಚಿಕೊಂಡು ಒಯ್ದರು.
ಇದು ಯಂತ್ರಾಧಾರಿತ ವೇಗದ ಸವಾರಿಯಲ್ಲ, ಅಲಂಕೃತ ಮಾಡಿನಡಿಯ ಸುಪ್ಪತ್ತಿಗೆಯಲ್ಲಿ, ದೋಣಿಯೊಂದಕ್ಕೆ ಹೆಚ್ಚೆಂದರೆ ನಾಲ್ಕು ಜನರು ಕುಳಿತಿದ್ದಂತೆ, ನಾವಿಕ ನಿಧಾನಕ್ಕೆ ಹುಟ್ಟು ಹಾಕುತ್ತಾ ಒಯ್ಯುವ ಉತ್ಸವ! ಹಾಗೆ ಒದಗಿದ ನಮ್ಮ ದೋಣಿ ಫ್ಲೆಮಿಂಗೋದ ನಾವಿಕ ಖಯ್ಯೂಂ ಹೆಚ್ಚು ತಿಳುವಳಿಕಸ್ಥ, ನಾಲ್ಕು ಇಂಗ್ಲಿಷೂ ಬಿಡಬಲ್ಲವ. ಅವನು ತಿಳಿಸಿದಂತೆ, ಸುಮಾರು ಎರಡು ಲಕ್ಷಕ್ಕೂ ಮಿಕ್ಕು ಜನ ದಾಲ್ ಸರೋವರವನ್ನು ಉದ್ದಿಮೆಯೊಡನೆ ನೇರ ವಸತಿಗೂ ಬಳಸುತ್ತಾರಂತೆ. ಇದರಲ್ಲಿ ಎಲ್ಲ ನೇರ ಪ್ರವಾಸೋದ್ಯಮವನ್ನು ಅವಲಂಬಿಸಿದವರೂ ಅಲ್ಲವಂತೆ.

ಮೀನುಗಾರಿಕೆಕೃಷಿಯೇ ಮೊದಲಾದ ಅನ್ಯವೃತ್ತಿಯವರಿದ್ದಾರೆ. ಬಡಗಿ, ಕಮ್ಮಾರ, ದರ್ಜಿ, ಕ್ಷೌರಿಕರಂಥ ಉಪವೃತ್ತಿಗಳವರೂ ಇದ್ದಾರೆ. ಪೂರ್ಣ ಜಲಮುಖೇನ ಸಂಪರ್ಕವಷ್ಟೇ ಸಾಧ್ಯವಾಗಬಹುದಾದ ವಿವಿಧ ವ್ಯಾಪಾರೀ ಮಳಿಗೆಗಳೂ ವಸತಿಗಳೂ ಸರೋವರದಲ್ಲಿ ಎಷ್ಟೂ ಇವೆ. ದೋಣಿಯ ಅಥವಾ ನೀರಿನಲ್ಲಿ ನೆಲೆಸಿದ ತೋರಿಕೆಗಳನ್ನಷ್ಟೇ ಉಳಿಸಿಕೊಂಡು ನೇರ ನೆಲಕ್ಕೇ ಅಡಿಪಾಯ ಬೆಸೆದ ರಚನೆಗಳೂ ಸರೋವರದ ಪರಿಧಿಯೊಳಗೆ ಅನೇಕ ಇವೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಜನ ಇದನ್ನು ಕುಡಿಯುವುದರಿಂದ ಬಿಡುವುದರವರೆಗೆ ಅರ್ಥಾತ್ ತೀರ್ಥದಿಂದ ಮೂತ್ರದವರೆಗೆ ಎಲ್ಲಕ್ಕೂ ಬಳಸುತ್ತಾರೆ

ಗಂಗೆ - ಹಿಮನದಿಗಳ ಬಹುದೊಡ್ಡ ಕೂಡಾವಳಿಯಿಂದ ಹೊರಟು, ಬಹು ವಿಸ್ತಾರದಲ್ಲಿ ನಿರಂತರ ಹರಿಯುತ್ತ ಎಲ್ಲವನ್ನೂ ಕೊಚ್ಚಿ ಕೊರೆದು ಒಯ್ಯಬಲ್ಲ ಶಕ್ತಿ. ಅದನ್ನೇ ನಿರಂತರ ವಿಷಮಯವನ್ನಾಗಿ ಉಳಿಸಬಲ್ಲ ಮನುಷ್ಯ, ಹರಿವಿಲ್ಲದ, ಹೋಲಿಕೆಯಲ್ಲಿ ಬಹು ಸಣ್ಣದಾದ, ದಾಲ್ ಸರೋವರವನ್ನು ಏನು ಮಾಡಿರಬಹುದೆಂಬ ಅಂದಾಜು ನೀವೇ ಮಾಡಿಕೊಳ್ಳಿ. ಹಳೆಗಾಲದಲ್ಲಾದರೋ ತಾವರೆಯೇ ಮುಂತಾದ ಸಸ್ಯವರ್ಗ, ಮತ್ಸ್ಯ ಹಕ್ಕಿಗಳಾದಿ ಜೀವವರ್ಗ, ಋತುಮಾನಗಳ ಬದಲಾವಣೆ ಸರೋವರದ ನೀರನ್ನು ಶುದ್ಧವಾಗಿಸುತ್ತಿದ್ದಿರಬೇಕು. ಆದರೆ ಇಂದಿನ ಸಂದಣಿ, ಉದ್ದಿಮೆಯ ಒತ್ತಡ ಹಾಗೂ ಪ್ರಾಕೃತಿಕವಾಗಿ ವಿಷಕಾರಿಯಾದ ಮತ್ತು ಸುಲಭ ಜೀರ್ಣವಾಗದ ಕಸದ ಪೇರಿಕೆಯಲ್ಲಿ ಸರೋವರ ನಿಸ್ಸಂದೇಹವಾಗಿ ಮರಣೋನ್ಮುಖವಾಗಿದೆ. ನೀರಿನ ಬಣ್ಣ, ವಾಸನೆ ಅಸಹ್ಯವಾಗಿದೆ.


ಕೆರೆಗಳನ್ನೇ ನುಂಗಿಬಿಡುವ ಕಳೆ ಸಸ್ಯಗಳ ಹಾವಳಿ ವಿಪರೀತವಿದೆ. ಪ್ರವಾಸಿಗಳಿಗೆ ಎದ್ದು ತೋರುವ ಮುಖ್ಯ ದಾರಿಯಂಚಿನಲ್ಲಿ ಜನ, ದೋಣಿ ಮತ್ತು ಬುಲ್ಡೋಜರ್ಗಳನ್ನು ಉಪಯೋಗಿಸಿ ಲಾರಿಗಟ್ಟಳೆ ಕಳೆ ನಿವಾರಣೆಯೇನೋ ಮಾಡುತ್ತಾರೆ. ಆದರೆ ನಾವು ಬೆಳಗ್ಗಿನ ನಡಿಗೆಗಳಲ್ಲಿ ಕಂಡ ನಾಲೆಗಳ ಮತ್ತು ದೋಣಿ ಏರಿ ವಿಹಾರ ಹೋದಾಗ ಸರೋವರದ ಒಳಭಾಗಗಳ, ಇದರ ಜಲಾನಯನದ ಕೆಲಸ ಮಾಡುವ ಊರ ಚರಂಡಿ ಕೊಚ್ಚೆ ಕೊಳವೆಗಳಲ್ಲಿ ಬಿಡಿಯಾಗಿ ಹಾಗೂ ದಪ್ಪಕ್ಕೆ ಕೆನೆಗಟ್ಟಿ ಕಾಣುವ ಕಸ ಕೊಳೆ, ಕಾಣದ ನೀರಾಳದ ಮಡ್ಡಿಯ ಲೆಕ್ಕದಲ್ಲಿ ಹೇಳುವುದಿದ್ದರೆ ಹಿಮಗಡ್ಡೆಯ ತುದಿ. (ಟಿಪ್ ಆಫ್ ಐಸ್ಬರ್ಗ್)


ನಮ್ಮ ದೋಣಿಗಳು ಹೊರಟ ಕೂಡಲೇ ಅದೆಲ್ಲೆಲ್ಲಿಂದಲೋ ಒಂದೊಂದೇ ವ್ಯಾಪಾರೀ ದೋಣಿಗಳು ಬಂದು ತಗುಲಿಕೊಳ್ಳತೊಡಗಿದವು. ಮಾಲು ಮತ್ತದೇಶಾಲು, ಸ್ವೆಟ್ಟರ್, ಕರಕುಶಲ ಕಸಗಳು ಇತ್ಯಾದಿ


ನಮ್ಮೆಲ್ಲ ನಿರಾಕರಣವನ್ನೂ ಲೆಕ್ಕಿಸದೆ, ಕ್ಯಾಮರಾದಲ್ಲಿ ನೆನಪಿಗೊಂದೆರಡು `ಸುಂದರಚೌಕಟ್ಟು ಹಿಡಿಯೋಣವೆಂದರೆ ಕಣ್ಣಿಗೆ ಬಿದ್ದ ಕಸದಂತೆ ಕಾಡುತ್ತಲೇ ಇದ್ದರು. ಕೊನೆಗೆ ನಮ್ಮ ನಾವಿಕನಿಗೇ ಸಾಕಾಯ್ತೋ ಏನೋ (ಅವರಿಗೆ ಕಾಶ್ಮೀರೀಯಲ್ಲಿ ಹೇಳಿದ್ದನ್ನು ಅನಂತರ ನಮಗೆ ಹಿಂಗ್ಲಿಷಿನಲ್ಲಿ ಹೇಳಿದಂತೆ) “ಪ್ರಯತ್ನ ಮಾಡಿ, ಹಿಂಸೆಯಲ್ಲ.” ಅವರು ಖಯ್ಯೂಂನನ್ನು ಒಂದು ಲೆಕ್ಕದಲ್ಲಿ ಬಯ್ದುಕೊಂಡೇ ಕಳಚಿದ ಮೇಲೆ ಸರೋವರದಲ್ಲಿ ತುಸು ಮುಂದುವರಿದೆವು.

ಇತರ ದೋಣಿ ಮತ್ತು ಸುತ್ತುವರಿದ ನಗರದ ಸೋಂಕಿಲ್ಲದೇ ದೂರದ ಬೆಟ್ಟಗಳು ನೀರೊಳಗೆ ಮೂಡುವಂತೆ ತುಸು ಸುಳಿದು, ನಡುಗಡ್ಡೆಗಳ ಓಣಿಯತ್ತ ಸಾಗಿದೆವು. ಕಳೆ, ಕಸಕುಪ್ಪೆಗಳದೇ ರಾಶಿಯಂಥ ನಡುಗಡ್ಡೆಗಳ ಅಂಚಿನಲ್ಲಿ ಲಂಗರು ಹಾಕಿದಂತೆ ಭಾರೀ ದೋಣಿಮನೆಗಳ ಸರಣಿ; ಕೆಲವೆಲ್ಲ ಬರಿಯ ಮನೆಯಲ್ಲಅರಮನೆ! ಖಯ್ಯೂಂ ಹೇಳಿದಂತೆ ಕಳೆದ ವರ್ಷದ ಮಳೆ ಸರೋವರದ ನೀರನ್ನು ಇಂದಿನ ಪಾತಳಿಯಿಂದ ಹದಿನಾಲ್ಕು ಅಡಿಗೂ ಮೇಲೇರಿಸಿತ್ತಂತೆ. ಅಂದು ಮುಳುಗಡೆಯಾದ ಅದಕ್ಕೂ ಮಿಗಿಲಾಗಿ ಜಖಂಗೊಂಡ ದೋಣಿಮನೆಗಳು, ಒಟ್ಟಾರೆ ಸರೋವರದ ವಹಿವಾಟು ಇನ್ನೂ ಚೇತರಿಸಿಕೊಂಡಿಲ್ಲವಂತೆ. ಪ್ರಾಕೃತಿಕ ಅಸ್ಥಿರತೆಯನುಸರಿಸಿ ಪ್ರವಾಸೀ ಋತು ಕೂಡಾ ಬಿದ್ದುಹೋಗಿರುವುದರಿಂದ (ಬಟ್ಟೆಯಂಗಡಿಯವನು ಹೇಳಿದ್ದು ನೆನಪಿದೆಯಲ್ಲಾಶೇಕಡಾ ಹತ್ತೂ ವ್ಯಾಪಾರವಿಲ್ಲ!) ದೋಣಿ ಮನೆ/ಅರಮನೆಗಳು ಬಹುತೇಕ ಬಳಕೆಯ ಯೋಗ್ಯತೆಯನ್ನೇ ಕಳೆದುಕೊಂಡಿದ್ದವು.

ಸುಸ್ಥಿತಿಯಲ್ಲಿದ್ದವೂ ಗಿರಾಕಿ ಕೊರತೆಯಲ್ಲಿ ಚುಕ್ಕಾಣಿಯಿಲ್ಲದೇ ದೀರ್ಘಯಾನಕ್ಕಿಳಿದಂತಿದ್ದವು. ಒಳಗಿನ ನಾಲೆಗಳಲ್ಲಿ ಸರೋವರದ ನಿಜಪೇಟೆ, ಸಾಮಾನ್ಯ ಜನಜೀವನದ ದೃಶ್ಯಗಳು ಒಂದೊಂದೇ ಅನಾವರಣಗೊಳ್ಳುತ್ತಿತ್ತು. ಭದ್ರವಾದ ಕಂಭ ಮತ್ತು ಚೌಕಟ್ಟಿನ ಮೇಲೆ ಬಹುತರದ ವ್ಯಾಪಾರೀ ಮಳಿಗೆಗಳು ಕುದುರಿದ್ದವು. ಇವಕ್ಕೆಲ್ಲ ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಭೂಮಿಯಿಂದಲೇ ಬಂದಿತ್ತು. ನಗರದ ಕುಡಿಯುವ ನೀರಿನ ಸಂಪರ್ಕಗಳೂ ಇದ್ದರೆ ಆಶ್ಚರ್ಯವಿಲ್ಲ. ನಿಜಕ್ಕೂ ತೇಲಿಯೇ ಹೋಗುವ ದೋಣಿಮನೆಗಳು ಬೆಳಕು, ನೀರಿನ ವ್ಯವಸ್ಥೆಗೆ ಏನು ಮಾಡುತ್ತವೋ ಎಷ್ಟು ಆರೋಗ್ಯಪೂರ್ಣವಿರುತ್ತದೋ ನಿರ್ದುಷ್ಟವಾಗಿ ಹೇಳುವಂತಿಲ್ಲ. ಏನೇ ಇರಲಿ, ಎಲ್ಲ ಮಳಿಗೆಗಳು ವಹಿವಾಟಿನ ಲೆಕ್ಕದಲ್ಲಂತೂ ಜಲಮಾರ್ಗವೊಂದನ್ನೇ ಅವಲಂಬಿಸಿದ್ದವು. ಉದಾಹರಣೆಯಂತೆ, ಅಲ್ಲೊಬ್ಬ ತನ್ನ ಪುಟ್ಟ ದೋಣಿಯನ್ನು ಜಿನಸಿ ಅಂಗಡಿಯ ಗೂಟಕ್ಕೆ ಕಟ್ಟಿ ಏನೋ ಅವಸರದ ಖರೀದಿ ನಡೆಸಿದ್ದ

ಒಂಟಿ ಮಹಿಳೆಯೊಬ್ಬಳು ಖಚಿತವಾಗಿ ಹುಟ್ಟು ಹಾಕುತ್ತ ಸರಿದಾಗ ಹಂಪನಕಟ್ಟೆಯಲ್ಲಿ ರವಿಕೆ ಕಣ ೫೦%” ಖರೀದಿಗೆ ಹೊರಟಿರಬೇಕು ಎಂದೇ ಅನ್ನಿಸಿತು. ಕ್ಷೌರಿಕನ ಅಂಗಡಿಯ ಹೊರಗೆ ಸಣ್ಣ ಹುಡುಗನನ್ನು ದೋಣಿಯಲ್ಲಿ ಕೂರಿಸಿಕೊಂಡಿದ್ದ ಅಮ್ಮ ಒಳಗೆ ಕುರ್ಚಿ ಖಾಲಿಯಾಗುವುದನ್ನು ಕಾದಂತಿತ್ತು. ಇತ್ತ ಶಾಲೆಯ ಜಗಳವನ್ನು ಮನೆಯ ದಾರಿಯಲ್ಲೂ ಮುಂದುವರಿಸಿದ್ದ ಸಮವಸ್ತ್ರಧಾರೀ ಅಕ್ಕ ತಮ್ಮರನ್ನುನಿಮ್ಮದು ಮುಗಿಯುದಿಲ್ವಲ್ಲಾಎಂದು ಅಮ್ಮ ಗದರುತ್ತ ದೋಣಿಯ ಹುಟ್ಟನ್ನು ನೀರಿನಲ್ಲಿ ತೊಳಸುತ್ತಲೇ ಇದ್ದಳು

ಅಬಲಸ್ಥ ಮಾವಯ್ಯನ ಕಿರಿಕ್ಕಿಗೆ ಎಲ್ಲಿಗೋ ಒಯ್ಯಲು ಹೊರಟಿದ್ದ ಸೊಸೆಗೆ, ಎದುರು ದೋಣಿಯಲ್ಲಿ ಬಂದ ಗೆಳತಿಯಲ್ಲಿ ಮಾತು ಬೆಳೆಸಲು ಸಂಕೋಚ. ತರಕಾರೀ ಮಂಡಿಯೊಂದು ಗಲ್ಲಿ ಗಲ್ಲಿ ಎಂಬಂತೆ ನಾಲೆ ನಾಲೆ ಅಲೆದಿತ್ತು. ಹೀಗೆ ನೋಡಿದಷ್ಟೂ ಮುಗಿಯದ ನೀರ-ಬಜಾರಿನಲ್ಲಿ ನಮ್ಮನ್ನು ನಿಧಾನಕ್ಕೆ ತೇಲಿಸುತ್ತಾ ತಂದು ಖಯ್ಯೂಂ ಒಂದು ಭಾರೀ ಜವಳಿ ಅಂಗಡಿಯ ಕಟ್ಟೆಯಲ್ಲಿ ವಿರಾಮ ಘೋಷಿಸಿದ.

ದೋಣಿಯ ತೇಲವಧಿಯ ನಿರ್ಬಂಧಕ್ಕೆ ಜವಳಿ ಅಂಗಡಿಯ ವ್ಯಾಪಾರೀ ವಿರಾಮದಿಂದ ಪೂರ್ಣ ವಿನಾಯಿತಿ ಇದೆ ಎಂದೂ ಖಯ್ಯೂಂ ತಿಳಿಸಿದ್ದ. ನಾವೆಲ್ಲ ಹುಳಿ ನಗೆ ಬೀರುತ್ತಜವಳಿಯ ರೇಟಿನಲ್ಲಿ ದೋಣಿಯವರ ಕಮೀಶನ್ ಸೇರಿಯೇ ಇರುತ್ತೆ”  ಎಂದು ಪರಸ್ಪರ ಹೇಳಿಕೊಂಡೇ ದೋಣಿಯಿಳಿದೆವು. ಕ್ಷಣಿಕ ವೈರಾಗ್ಯದಲ್ಲಿ ಎಲ್ಲರೂ ಏನೂ ಕೊಳ್ಳದ ನಿರ್ಧಾರದಲ್ಲಿದ್ದಂತಿತ್ತು. ಪೂರ್ಣ ಮರದಲ್ಲೇ ಮಾಡಿದ, ಒಂದು ಮಾಳಿಗೆಯ ದೋಣಿಮನೆಯಲ್ಲಿ ಮಾರಾಟದ ಅಡ್ಡೆ ಉಪ್ಪರಿಗೆಯಲ್ಲಿತ್ತು.

ನಾವು ಕೇವಲ ಪ್ರದರ್ಶನ ಒಂದನ್ನು ನೋಡುವ `ಬುದ್ಧಿವಂತರಗತ್ತಿನಲ್ಲೇ ಮೆಟ್ಟಿಲೇರಿ ಒಳ ಹೊಕ್ಕಿದ್ದೆವು. ಆದರೆ ಅರ್ಧ ಮುಕ್ಕಾಲು ಗಂಟೆಯ ಕೊನೆಯಲ್ಲಿ ನಮ್ಮಲ್ಲಿ ಹಲವರು ಐನೂರು, ಸಾವಿರದ ನೋಟುಗಳನ್ನು ಎಣಿಸುತ್ತಿದ್ದಾಗ ನಾನು - ಪಿಸಿದ ಕಾಲರಿನ, ನೂಲುಕಿತ್ತ ಕೈಯ ಜುಬ್ಬಾಧಾರೀ ನಿಜಕ್ಕೂ ಏಕಾಂಗಿಯಾಗಿದ್ದೆ!

ಹಿಂದಿನ ದಿನದ ನಿದ್ರೆ, ಬಳಲಿಕೆ ಲೆಕ್ಕ ಹಾಕಿ ದಾಲ್ ಲೇಕಿನಿಂದ ಎಲ್ಲ ಹೋಟೆಲಿಗೆ ಮರಳಿದೆವು. ಜತೆಗೆ ಸ್ವಲ್ಪ ಹೊತ್ತು ಚಿರಿಪಿರಿ ಮಳೆಯೂ ಬಂದದ್ದರಿಂದ ನಮಗಿಬ್ಬರಿಗೆ ಇನ್ನೊಂದಷ್ಟು ಬೀದಿ ಸುತ್ತಲು ಅವಕಾಶ ತಪ್ಪಿತಲ್ಲ ಎನ್ನುವ ಭಾವ ಮೊದಲು ಬಂತು. ಆದರೆ ಶ್ರೀನಗರ ಗಿರಿನಗರವೂ ಹೌದು ಎನ್ನುವ ನಿಜ ಕಾಣಿಸುವಂತೆ, ಸಣ್ಣ ಮಳೆಗೂ ವಾತಾವರಣ ಒಮ್ಮೆಲೆ ಚಳಿಯೇರಿಸಿಕೊಂಡಾಗ ಉಳಿದ ಉಮೇದೂ ತಣ್ಣಗಾಯಿತು. ಹೋಟೆಲಿನೊಳಗಿದ್ದೇ ಏನಾದರೂ ಮಾಡಿ ಬೇಗ ನಿದ್ರೆಗೆ ಜಾರುವ ಯೋಚನೆಗೆ ಬಲ ಬಂತು.

ನನ್ನ ಪ್ರವಾಸದ ಕಲ್ಪನೆಯಲ್ಲಿ ಅನ್ಯ ಪರಿಸರದ ವೀಕ್ಷಣೆಯಷ್ಟೇ ಅಲ್ಲಿನ ಸದ್ದುಗಳಿಗೂ ತೆರೆದುಕೊಳ್ಳುವುದು ಮುಖ್ಯವಾಗುತ್ತದೆ. ಅದಕ್ಕಾಗಿ ನಾನು ಪ್ರಯಾಣಕ್ಕೆ ಆವೃತ್ತ ಪರಿಸರವನ್ನು ಕೊಡುವ ಕಾರು, ಬಸ್ಸುಗಳಿಗಿಂತಲೂ ಬೈಕನ್ನು ಹೆಚ್ಚು ಬಳಸುತ್ತೇನೆ. ಅನಿವಾರ್ಯವಾಗಿ ದೊಡ್ಡವನ್ನು ಬಳಸಿದಾಗಲೂ ನಮ್ಮೊಳಗಿನ ಪಟ್ಟಾಂಗದಿಂದ ತೊಡಗಿ, ಆಡಿಯೋ ವಿಡಿಯೋಗಳನ್ನು ತಪ್ಪಿಸಲು ನೋಡುತ್ತೇನೆ. (ನಾನು ವರ್ಸಾ ಕಾರು ಕೊಳ್ಳುವ ಕಾಲಕ್ಕೆ ಅಭಯನ ಕೋರಿಕೆಯ ಮೇರೆಗೆ ಸಂಗೀತ ವ್ಯವಸ್ಥೆ ಜೋಡಿಸಿದ್ದೆ. ಆದರೆ ಇಂದಿನ ವ್ಯಾಗ್ನರಿಗೆ ಬದಲುವ ಕಾಲದಲ್ಲಿ ಅದನ್ನು ಸ್ಪಷ್ಟವಾಗಿ ನಿರಾಕರಿಸಿದೆ.) ಆದರೆ ಬಾಡಿಗೆಗೇ ನಡೆಯುವ ವಾಹನಗಳ ಲೆಕ್ಕದಲ್ಲಿ ಏಸಿ, ಆಡಿಯೋ, ವಿಡಿಯೋಗಳೆಲ್ಲ ದರ ನಿಗದಿಯಲ್ಲಿ ಮೇಲುಗೈ ಸಾಧಿಸುತ್ತವೆ. ಅವು ಇದ್ದ ಮೇಲೆ ಔಚಿತ್ಯದ ಮಿತಿ ಶಿಥಿಲವಾಗಿ ಎಷ್ಟೋ ಬಾರಿ ನಿರಂತರ ಗದ್ದಲ ಅನುಭವಿಸುವುದು ನಮ್ಮ ಹಕ್ಕಾಗಿಬಿಡುತ್ತದೆ. ನಮ್ಮ ವ್ಯಾನ್ ಜಮ್ಮುವಿನಲ್ಲಿ ಹೊರಟ ಕ್ಷಣದಿಂದ ಬಶೀರ್ ಬಹು ಕಾಳಜಿಯಿಂದ ಅವಿರತ ಹಿಂದಿ ಸಿನಿ ಹಾಡುಗಳನ್ನು ಗುದ್ದಿಸುತ್ತಿದ್ದ. ಧನಂಜಯರು ಹಲವು ಉದ್ದೇಶಗಳಿಗಾಗಿ ತಮ್ಮ ಲ್ಯಾಪ್ ಟಾಪ್ ತಂದಿದ್ದರು. ಮತ್ತು ಅದರಲ್ಲಿ ಅವರ ಬಹಳ ದೊಡ್ಡ ಕನ್ನಡ ಭಾವಗೀತೆಗಳ ಸಂಗ್ರಹವೂ ಇತ್ತು.


ಅವರು ಸಹಜವಾಗಿ ಹಿಂದಿಗೆ ತಡೆ ಹಾಕಿದರು. ಮತ್ತೆ  ತಮ್ಮ ಗಣಕದ ಸಂಗ್ರಹವನ್ನು ಪೆನ್-ಡ್ರೈವ್ ಮೂಲಕ ತೆಗೆದು ಸಂಘಾತವನ್ನು ಸ್ವಲ್ಪ ಸಹ್ಯವನ್ನಾಗಿಸಿದರು. ಆದರೆ ಯತ್ನದಲ್ಲಿ ಸುವರ್ಣರಿಗೆ ಅವರ ಭಾವಗೀತೆಗಳ ಸಂಗ್ರಹದ ಮೇಲೆ ಮೋಹ ಬೆಳೆಯಿತು. ನನಗೋ ಅವರ ಲ್ಯಾಪ್ ಟಾಪಿನ ಅನ್ಯ ಉಪಯುಕ್ತತೆಯ ಬಗ್ಗೆ ಆಸೆ ಮೊಳೆಯಿತು. ಸುಮಾರು ಹದಿನೈದು ದಿನಗಳ ಪ್ರವಾಸದಲ್ಲಿ ಅಸಂಖ್ಯ ಚಿತ್ರಗಳನ್ನು ನಾನು ಹಿಡಿಯುವುದು ನಿಜ. ಆದರೆ ಪುಟ್ಟ ಕ್ಯಾಮರಾದ ಮಿತಿಗೆ ಅಷ್ಟನ್ನೂ ಒಂದೇ ಸ್ಮೃತಿಯಲ್ಲಿರಿಸಿಕೊಳ್ಳುವುದು ಅಸಾಧ್ಯ. ಹಾಗಾಗಿ ಅಭಯ ಮುಂದಾಲೋಚನೆ ಮಾಡಿ ಹೆಚ್ಚು ಶಕ್ತಿಯುತವಾದ ಪೆನ್ ಡ್ರೈವ್ ಒಂದನ್ನು ನನಗೆ ಕೊಟ್ಟಿದ್ದ. ಮತ್ತು ಪ್ರತಿ ದಿನದ ಕೊನೆಯಲ್ಲಿ ಸಾರ್ವಜನಿಕ ಸೈಬರ್ ಸೆಂಟರಿನ ಸಹಾಯದಲ್ಲಿ ಕ್ಯಾಮರಾವನ್ನು ಅದಕ್ಕೆ ಖಾಲಿ ಮಾಡಿಕೊಳ್ಳುವ ಅಂದಾಜಿನಲ್ಲಿದ್ದೆ

ಸ್ವತಃ ಧನಂಜಯರು ಲ್ಯಾಪ್ ಟಾಪ್ ತರುವಲ್ಲಿ ಇದನ್ನೇ ಕಂಡುಕೊಂಡಿದ್ದರು. ಅವರು ಅದರಿಂದ ಮುಂದುವರಿದು ಮೊದಲ ದಿನವೇ ತನ್ನ ಗಣಕ ಸೇವೆಯನ್ನು ತಂಡದ ಎಲ್ಲರಿಗೂ ಉಚಿತವಾಗಿ ತೆರೆದಿಟ್ಟದ್ದು ದೊಡ್ಡ ಔದಾರ್ಯವೇ ಸರಿ. ಹಾಗಾಗಿ ಅಂದು ತೊಡಗಿ ನಾಲ್ಕು ಕಂತುಗಳಲ್ಲಿ  ನಾನು ನಿರ್ಯೋಚನೆಯಿಂದ ಅವರ ಸೇವೆಯನ್ನು ಬಳಸಿಕೊಂಡೆ. ಅವುಗಳಲ್ಲಿ ತಪ್ಪು ಕ್ಲಿಕ್ಕುಗಳು, ಅನಾವಶ್ಯಕ ಪ್ರತಿಗಳೆಲ್ಲವನ್ನು ಕಿತ್ತೆಸೆದೂ ಸುಮಾರು ನಾನೂರೈವತ್ತಕ್ಕೂ ಮಿಕ್ಕು ಸ್ಥಿರ ಹಾಗೂ ಹತ್ತರಷ್ಟು ಚಲಚಿತ್ರ ಇಂದು ನನ್ನ ಬರವಣಿಗೆಗೆ ಸಹಕಾರಿಗಳಾಗಿವೆ. (ಎಲ್ಲವನ್ನೂ ಲೇಖನದ ಬಂಧದಲ್ಲಿ ತರುವುದು ಅನಗತ್ಯ ಹೊರೆ ಎಂದನ್ನಿಸಿ ಬಳಸಿಲ್ಲ.)

ಪ್ರಯಾಣದಲ್ಲಿ ಮಿತ ಹೊರೆಯೊಡನೆ ಸುಧಾರಿಸುವುದೆಂದರೆ, ನಿತ್ಯ ಬಟ್ಟೆ ತೊಳೆದು ಒಣಗಿಸಿಕೊಳ್ಳುವುದು ಎಂದೇ ಅರ್ಥ. ಹೋಟೆಲಿನವರು ದೋಬಿಯ ವ್ಯವಸ್ಥೆ ಇದೆಯೆಂದೇ ಹೇಳಿದ್ದರು. ಆದರೆ ಸಂಜೆ ಸಮಯದ ಸದುಪಯೋಗದಲ್ಲಿ ನಾವು ನಮ್ಮ ಕೊಳೆ ಬಟ್ಟೆಗಳನ್ನು ಬಚ್ಚಲಿನಲ್ಲೇ ಒಗೆದು ಶುದ್ಧ ಮಾಡಿದೆವು. ಮತ್ತೆ ಇದ್ದೊಂದು ತುಂಡು ಹಗ್ಗವನ್ನು ಬಾಲ್ಕನಿಯ ಕಟ್ಟೆಯಿಂದ ಕಟ್ಟೆಗೆ ಕಟ್ಟಿ ಒಣಹಾಕಿದೆವು. ಮುಂದೆ ಕ್ರಮ ಅಲ್ಲಿದ್ದಷ್ಟೂ ದಿನ ನಾವು ತಪ್ಪದೇ ನಡೆಸಿದ್ದೆವು. ಇದರಲ್ಲೊಂದು ತಮಾಷೆಯೂ ಆಯ್ತು. ಎರಡನೇ ದಿನ ಮಧ್ಯಾಹ್ನದ ಹೊತ್ತಿಗೆ ಬೀಸಿದ ಗಾಳಿಗೆ ನನ್ನ ಬನಿಯನ್ ಹಾರಿ ಪಕ್ಕದ ವಠಾರದ ಜಿಂಕ್ ಶೀಟ್ ಮಹಡಿನ ಬಿದ್ದಿತ್ತು. ಮತ್ತಿದ್ದಷ್ಟೂ ದಿನ ಹೋಟೆಲಿನ ನೌಕರರು ನಮ್ಮನ್ನು ಕಂಡಾಗಲೆಲ್ಲ `ಬನಿಯನ್ ಈಗ ತೆಕ್ಕೊಡ್ತೇನೆ, ನಾಳೆ ತೆಕ್ಕೊಡ್ತೇನೆಎಂದು ಆಶ್ವಾಸನೆ ಕೊಡುತ್ತಿದ್ದರು. ಕೊನೇ ದಿನ ನಮ್ಮ ವ್ಯಾನ್ ಹೊರಡುವ ಹೊತ್ತಿಗೆ ಅಂತೂ ಒಬ್ಬ ಮಾಣಿ ಅದನ್ನು ತೆಗೆದು ತಂದು ಕೊಟ್ಟು, ನಮ್ಮ ಚುನಾಯಿತ ಪ್ರಜಾಪ್ರತಿನಿಧಿಗಳಿಗಿಂತ ವಿಶ್ವಾಸಾರ್ಹನಾದ!

ಉಳಿದಂತೆ ಸಮಯದ ಹೊರೆಗೆ ನಮ್ಮಲ್ಲಿದ್ದ ಏಕೈಕ ವೃತ್ತಪತ್ರಿಕೆಯ ಜಾಹೀರಾತುಗಳ ನಡುವೆ ಸುದ್ದಿ ಹುಡುಕುವುದು, ಡೈರಿ ಬರೆಯುವುದು, ಚಾ ಕುಡಿಯುವುದು ಸಾಕಾಗಲಿಲ್ಲ. ಪ್ರತಿ ಕೋಣೆಗೂ ಟೀವಿಯ ಸೌಕರ್ಯವೇನೋ ಇತ್ತು. ಆದರೆ ಹೋಟೆಲಿನ ಮಿತಿಯಲ್ಲಿ ನಮಗಲ್ಲಿ ಸಿಗುತ್ತಿದ್ದುದು ಸೀಮಿತ ನಾಲ್ಕೈದು ಚಾನೆಲ್ಲುಗಳು. ಮತ್ತವೂ ಹೆಚ್ಚು ಹೊತ್ತು ಸ್ಥಿರವಾಗಿ ನಡೆಯದಂತೆ ಆವರಿಸುತ್ತಿದ್ದ ಅದೇನೋ ಮಂಕು! ಆದರೆ ಟೀವಿಯನ್ನು ಪಳಗಿಸಲು ಹೆಣಗುವುದೂ ಒಂದು ಸಮಯ ಕಳೆಯುವ ವಿಧಾನವೆಂಬಂತೆ ಕಾಣುವ ಸಮಯಕ್ಕೆ ನಮಗೆ ಊಟದ ಕರೆ ಬಂತು. ನಾವು ಸ್ವಂತ ಮನೆಗಳಲ್ಲಿ ಸ್ವಲ್ಪ ಆಚೆ ಈಚೆ - ಟೀವಿ ಪರಿಣತಿ ಸಾಧಿಸಿದ್ದೇವೆಂಬ ಭ್ರಮೆಯಲ್ಲಿ ನಾವೇ ಕಳೆದುಹೋಗುತ್ತೇವೆ! ಅದೇನೇ ಇರಲಿ, ಶ್ರೀನಗರದಲ್ಲಿ ಅಂದೂ ಮುಂದೂ ನಾವು ಮುಗಿಸುವುದರೊಡನೆ ದಿನ ಮುಗಿಸಿದೆವು.

[ನೀವಿದಕ್ಕೆ ಪ್ರತಿಕ್ರಿಯಿಸದೆ ಪುಟ ಮುಗಿಸಬೇಡಿ ಮುಂದಿನ ದಿನಗಳ ರೋಚಕತೆಯನ್ನು ಹೊಸ ಉತ್ಸಾಹದೊಡನೆ ಮುಂದಿನ ಶುಕ್ರವಾರ ನಿರೂಪಿಸುತ್ತೇನೆ. ನಿಮ್ಮ ಪ್ರವಾಸೀ ಪರಿಕಲ್ಪನೆ ಮತ್ತದರ ಬೆಳಕಿನಲ್ಲಿ ನನ್ನ ಅನುಭವದ ಮೌಲ್ಯಮಾಪನವನ್ನು ಪ್ರತಿಕ್ರಿಯಾ ಅಂಕಣದಲ್ಲಿ ಅವಶ್ಯ ತುಂಬುವಿರಾಗಿ ನಂಬಿದ್ದೇನೆ]

9 comments:

 1. ನಾನು ಶ್ರೀನಗರಕ್ಕೆ ಹೋಗಿದ್ದಾಗ ದಾಲ್ ರುಚಿ ನೋಡಲಾಗಲಿಲ್ಲ.
  ನಿಮ್ಮ ಅನುಭವದಿಂದ ಆ ಕೊರತೆ ತುಂಬಿದಂತಾಯಿತು.
  ಅದನ್ನು ತೀರ್ಥವಾಗಿ ಬಳಸುವುದನ್ನು ಹೇಗೆ ಕಲ್ಪಿಸಿಕೊಂಡಿರಿ!
  ಪಂಡಿತಾರಾಧ್ಯ ಮೈಸೂರು

  ReplyDelete
 2. I really liked your write up sir on your journey to Dal Lake..

  ReplyDelete
 3. ಜನಜಂಗುಳಿಯಿರುವ ಪ್ರವಾಸೀ ಸ್ಥಳಗಳ (ಎಂದರೆ -- ಇಂದಿನ ದಿನಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಪ್ರವಾಸೀ ಸ್ಥಳಗಳ) ನಿಜ ಅನುಭವ -- ದೂರದ ಬೆಟ್ಟ ನುಣ್ಣಗೆ ಎಂಬ ಸತ್ಯದ ಅರಿವು ಮಾಡಿಸಿದ್ದೀರಿ :).

  ReplyDelete
 4. Do you have photos of news papers from kashmir?

  I buy and read local papers where ever I go but i don't have the habit of keeping them or record my trips.!

  ReplyDelete
  Replies
  1. ಹಿಂದಿನ ಕಂತಿನಲ್ಲೇ ಹೇಳಿದ್ದೇನಲ್ಲಾ - ಅಲ್ಲಿದ್ದ ಮೂರು ಬೆಳಿಗ್ಗೆ ಅಲ್ಲಿನ ಇಂಗ್ಲಿಶ್ ಪತ್ರಿಕೆ ಕೊಂಡಿದ್ದೇನೆ, ಓದಿದ್ದೇನೆ, ರಾತ್ರಿ ಸಮಯ ಕಳೆಯಲು ಜಾಹೀರಾತುಗಳನ್ನೂ ಓದಿ `ಕನಸು' ಕಟ್ಟಿದ್ದೇನೆ, ಇಲ್ಲಿಗೂ ತಂದಿದ್ದೇನೆ :-) (ಈಗ ಗಝೆಟ್ಟಿಗೆ ಹಾಕಿದ್ದೇನೆ - ನಿಂಗೆ ಬೇಕಾ?)

   Delete
 5. ತುಂಬಾ ಸುಂದರವಾಗಿ ಅನುಭವಿಸಿದ್ದಿರಿ ಹಾಗು ನಮಗೂ ಉಣ ಬಡಿಸಿದ್ದಿರಿ , ಧನ್ಯವಾದಗಳು

  ReplyDelete
 6. ಅಲ್ಲಿಗೆ ಹೋದರೂ ಹಂಪನಕಟ್ಟೆಯದೇ ನೆನಪು ?!!!.. ... ತೀರ್ಥದಿಂದ....... ಹ್ಹಹ್ಹಹ್ಹಾ .... ಈ ನುಡಿಗಟ್ಟನ್ನು ಮೊದಲ ಬಾರಿ ಓದಿದ್ದು...😊

  ReplyDelete
 7. ಒಳ್ಳೆಯ ಆಹಾರಗಳನ್ನು ನೀಡುತ್ತಿದ್ದೀರಾ. ಧನ್ಯವಾದಗಳು.

  ReplyDelete