
ಸಾಲಿಗ್ರಾಮದ ಮಂಜುನಾಥ ಮತ್ತು ವೆಂಕಟ್ರಮಣ ಉಪಾಧ್ಯರ `ಉಪಾಧ್ಯ ಬ್ರದರ್ಸ್’ - ಅಸಂಖ್ಯ ಸರಕುಗಳ ಮಳಿಗೆ. ಸುಮಾರು ಏಳೆಂಟು ವರ್ಷಗಳ ಹಿಂದಿನವರೆಗೆ ಎಲ್ಲ ಅಂಗಡಿಗಳಂತೆ ಅಲ್ಲೂ ಮಾಮೂಲೀ ಆಚಾರಿಗಳು ಮಾಡಿದ ತೆಂಗಿನಕಾಯಿ ಹೆರೆಮಣೆಗಳನ್ನು (ಕೆರೆಮಣೆ) ಮಾರುತ್ತಿದ್ದರು. ಆ ಸುಮಾರಿಗೆ ವೆಂಕಟ್ರಮಣ
– ಜನ ಗುರುತಿಸುವಂತೆ ಪಿ.ವಿ. ಉಪಾಧ್ಯ, ಮಂಗಳೂರಿನ ಯಾವುದೋ ಮಳಿಗೆಯಲ್ಲಿ ಮೇಜಿನ ಮೇಲುಪಯೋಗಿಸುವ ತೆಂಗಿನಕಾಯಿ ಹೆರೆಮಣೆ ಕಂಡರು. ತೀರಾ ಒರಟಾಗಿತ್ತು. ಇಂಥದ್ದೂ ಒಂದು ಬೇಕಾದೀತೇ ಎಂಬ ಕುತೂಹಲದಲ್ಲಿ ಒಂದನ್ನು ಕೊಂಡು ತಂದು, ತಮ್ಮಂಗಡಿಯ ಸಂತೆಗೆ ಸೇರಿಸಿದ್ದರಂತೆ. ಅದು ಐದಾರು ತಿಂಗಳ ಧೂಳು ತಿನ್ನುತ್ತ ಮೂಲೆಯಲ್ಲಿ ಬಿದ್ದಿತ್ತು. ಆಗ ಯಾರೋ ಗಿರಾಕಿ ಅದನ್ನು ಅರೆಮನಸ್ಕನಾಗಿಯೇ ಕೊಂಡರಂತೆ. ಆದರೆ ಆಶ್ಚರ್ಯಕರವಾಗಿ ಕೆಲವೇ ದಿನಗಳಲ್ಲಿ ಆ ಗಿರಾಕಿ ಮತ್ತೆ ಬಂದು, “ಇನ್ನೊಂದೆರಡು ಕೊಡ್ತಿರ್ಯಾ?” ಎಂದರಂತೆ. ಇನ್ನಷ್ಟು ಉತ್ತಮ ಗುಣಮಟ್ಟದ್ದಿದರೆ ಹಣ ಹೆಚ್ಚು ಕೊಡುವ ಮಾತೂ ಆಡಿದರಂತೆ. ಆಗ ಪಿ.ವಿ.ಉಪಾಧ್ಯರ ಸಂಶೋಧನಾ ಬುದ್ಧಿ ಹೆರೆಮಣೆಯತ್ತ ಪಲ್ಲವಿಸತೊಡಗಿತ್ತು.
ಉಪಾಧ್ಯರ ಇಂಥ ಉದಾಹರಣೆಗಳನ್ನು ನನ್ನ
ಹಳೆಯ ಎಷ್ಟೂ ಲೇಖನಗಳಲ್ಲಿ ನೀವು ನೋಡಬಹುದು. ಗಮನಿಸಿ, ಈ ಬೆರಗಿನ ಭಾವಕ್ಕೇ ನಾನು `ರಂಗನಾಥ ವಿಜಯ’ದಲ್ಲಿ ತಿಳಿಹಾಸ್ಯದ ಲೇಪ ಕೊಟ್ಟಿದ್ದೇನೆ. (ಸಂಶೋಧನ ಸಂಖ್ಯೆ ಸಾವಿರದ ಒಂದು, ಎರಡು..)
ಸಾಂಪ್ರದಾಯಿಕ ಹೆರೆಮಣೆಗಳ ಹಲ್ಲು ಕೇವಲ ಚೂಪಾಗಿರುತ್ತಿದ್ದುವು. ಅವು ಕಾಯಿಯ ಮೇಲೆ ಗೀರು ಮಾಡುತ್ತಿದ್ದುವು. ಬೇಗ ಆಗಬೇಕು, ಒಮ್ಮೆಗೆ ತುಂಬ ಸುಳಿ ತೆಗೆಯಬೇಕು ಎಂದು ಕಾಯಿಕಡಿಯ ಮೇಲೆ ಒತ್ತಡ ಹೆಚ್ಚು ಹಾಕಿದರೆ ಮುಗಿದೇ ಹೋಯ್ತು. ಇಡಿ ಗಿಟಕೇ ಕರಟ ಕಳಚಿಕೊಳ್ಳುತ್ತಿತ್ತು. ವಾಸ್ತವವಾಗಿ ಅಲ್ಲಿ, ಗೀರುಗಳ ಮರುಕಳಿಕೆಯಲ್ಲಿ ಧಾರೆಗಳು ತುಂಡಾಗಿ ಹೆರೆಯುವ ಶ್ರಮ ಅನಾವಶ್ಯಕವಾಗಿ ಹೆಚ್ಚಿರುತ್ತಿತ್ತು. ಆದರೆ ಉಪಾಧ್ಯರು ಹೆರೆಹಲ್ಲುಗಳನ್ನೇ ರೂಪಿಸಿದರು. ಆ ಹಲ್ಲುಗಳನ್ನು ಎದುರಿನಿಂದ ಮುಟ್ಟಿದರೆ ಸಾಂಪ್ರದಾಯಿಕ ಹೆರೆಮಣೆಯ ಮೊನಚು ಅನುಭವಕ್ಕೆ ಬರುವುದಿಲ್ಲ. ಆದರೆ ಅದನ್ನೇ ಕಾಯಿಕಡಿಯ ಒಳಗೆ ಹಗುರವಾಗಿ ಉಜ್ಜಿದರೂ ಸಾಕು, ಮರಕ್ಕೆ ಹಾಕುವ ಕೀಸುಳಿಯ ಅಲಗಿನಂತೇ ಕೆಲಸ ಮಾಡುತ್ತದೆ. ಇವು ಕಾಯಿಕಡಿಯ ಪ್ರತಿ ಚಲನೆಗೂ ಹಗುರ ಒತ್ತಡಕ್ಕೂ ಸ್ಪಷ್ಟ ಸುಳಿಗಳನ್ನೇ ಕೊಡುತ್ತವೆ. ಉಪಾಧ್ಯರು ತನ್ನ ಸಲಕರಣೆ ಖರೀದಿಸುವವರಿಗೆ ಮತ್ತೆ ಮತ್ತೆ ಹೇಳುತ್ತಿರುತ್ತಾರೆ.
“ಕಾಯಿ ಹೆರೆಯುವಲ್ಲಿ ತುಂಬ ಶಕ್ತಿ (ಒತ್ತಡ) ಹಾಕಬೇಡಿ. ಹಾಕಿದರೆ ಹೆರೆಮಣೆಯ ತಂತ್ರ ಸೋಲುತ್ತದೆ. ಕಾಯಿ ಗಿಟಕೆದ್ದರೆ ಆಶ್ಚರ್ಯವಿಲ್ಲ.
ಎಲ್ಲಕ್ಕೂ ಮುಖ್ಯವಾಗಿ ಮೇಜಿನ ಮೇಲಿನ ಹೆರೆಮಣೆಯ ಅರ್ಥ, ಆಯುಷ್ಯ ಎರಡೂ ವ್ಯರ್ಥವಾಗುತ್ತವೆ!” ಒಮ್ಮೊಮ್ಮೆ ಉಪಾಧ್ಯರು ಆಶ್ಚರ್ಯಕರವಾಗಿ ಉದ್ಗರಿಸುವುದುಂಟು “ಹೊಸಗಾಲದ
ಗೃಹಿಣಿಯರಿಗೆ (ಹೆರೆಮಣೆ ಬಳಸುವವರಿಗೆ) ಕಾಯಿ ಹೆರೆಯುವುದನ್ನೂ ನಾವು ಕಲಿಸುಕ್ಕುಂಟಾ ಮಾರಾಯ್ರೆ!!”
ಉಪಾಧ್ಯರದ್ದು ಉದ್ಯಮದ ಉಮೇದಲ್ಲ, ಉಪಜ್ಞೆಯ ಉತ್ಸಾಹ, ಉಪಯುಕ್ತತೆಯ ಉಲ್ಲೋಲ! ದೊಡ್ಡ ಮಾರುಕಟ್ಟೆ, ವಿತರಣಾ ಜಾಲ ಹುಡುಕಲಿಲ್ಲ. ಅವರ ಅಂಗಡಿ ಮತ್ತು ನನ್ನಂಥವರ ಗೆಳೆತನದ ಜಾಲವಷ್ಟೇ ಬಳಸಿದರು. ಆದರೂ ಇವರ
ಹೆರೆಮಣೆಗೆ ನೂರು ಇನ್ನೂರು ಎಂದು ಬೇಡಿಕೆ ಹೆಚ್ಚುತ್ತಲೇ ಇತ್ತು. ಹಾಗೆಂದು ಒಂದು ಹೆರೆಮಣೆಯೂ ಮುಕ್ತಾಯದ
ಸ್ಪರ್ಷ, ನೇರ ಪರೀಕ್ಷೆಗೆ ಒಳಪಡದೇ ಹೊರಗೆ ಹೋದುದಿಲ್ಲ. ಮಾಡಿದಷ್ಟೂ ಮಾರಿ ಹೋಗಿ, ಖರ್ಚು ಮಾಡಿದ ದುಡ್ಡು ಬಂತೆಂದು ಇವರು ತೃಪ್ತರಾಗಿ ಕೂರಲಿಲ್ಲ. ಹೆರೆಮಣೆಯ ಕುರಿತ ಇವರ ಮನದ ಕುದಿ ತಣಿಯಲೇ ಇಲ್ಲ.
ಉಪಯೋಗಿಗಳ ಯಾವುದೇ ಕೊರತೆಗೆ ಉಪಾಧ್ಯರಲ್ಲಿ ಪೂರ್ಣ ತಾಳ್ಮೆಯ ಕೇಳ್ಮೆ ಇದೆ. ಅದು ವೈಯಕ್ತಿಕ ಸಮಸ್ಯೆಯಾದರೆ ಇವರಲ್ಲಿ ಸಮಾಧಾನವಿದೆ. ಈ ಕುರಿತು ಇವರಲ್ಲಿ ಹೇಳಿದಷ್ಟೂ ಮುಗಿಯದ ಸ್ವಾರಸ್ಯಕರ ಕತೆಗಳಿವೆ.
ಎರಡನ್ನಷ್ಟೇ ಇಲ್ಲಿ ವಿಸ್ತರಿಸುತ್ತೇನೆ. ಕಂಪ್ಲಾಪುರದ ಕನಕಮ್ಮ (ಮರೆಸು ಹೆಸರು) ಉಪಾಧ್ಯರನ್ನು ಚರವಾಣಿಯಲ್ಲಿ ಸಂಪರ್ಕಿಸಿ, ಸೂಚನೆಯಂತೆ ಬ್ಯಾಂಕಿಗೆ
ಮುಂಗಡ ಹಣ ಕಟ್ಟಿ, ಕೊರಿಯರ್ ಮೂಲಕ ಮೂರು ಹೆರೆಮಣೆ ತರಿಸಿಕೊಂಡರು. ನಾಲ್ಕು ದಿನ ಬಿಟ್ಟು ಉಪಾಧ್ಯರಿಗೆ
ಕನಕಮ್ಮನ ಯಜಮಾನರ ಬೆದರಿಕೆ ಧ್ವನಿಯಲ್ಲಿ ಚರವಾಣಿ ಕರೆ. ಏನೋ ಮಾರ್ಕೆಟಿಂಗ್ ತಂತ್ರದಲ್ಲಿ ಮುಗ್ದೆಗೆ
ಮೂರು ಹೆರೆಮಣೆ ಹಿಡಿಸಿದ ಆರೋಪ. ಹಿನ್ನೆಲೆಯಲ್ಲಿ ಕಮಲಮ್ಮನ ಅಸಹಾಯಕ ಧ್ವನಿ ದಮ್ಮಯ್ಯಗುಡ್ಡೆ ಹಾಕುತ್ತಿದ್ದದ್ದು
ಕೇಳುತ್ತಲೇ ಇತ್ತಂತೆ. ಇಂಥಲ್ಲೆಲ್ಲ ಉಪಾಧ್ಯ ಆಶ್ಚರ್ಯಕರವಾಗಿ ಪ್ರತಿವಾದ ಹೂಡಿದವರೇ ಅಲ್ಲ. “ಅಯ್ಯೋ
ನೀವು ಮೂರನ್ನೂ ಬೇಕಾದರೆ ಹಿಂದಿರುಗಿಸಿ. ನಿಮ್ಮ ಬ್ಯಾಂಕ್ ವಿವರ ಕೊಡಿ, ಅವು ತಲಪಿದ್ದೇ ನಿಮ್ಮ ಪೂರ್ತಿ
ಹಣ ನಾನು ತುಂಬುತ್ತೇನೆ.” ಒಂದೋ ಎರಡೋ ಮಣೆ ವಾಪಾಸು ಬಂತು, ಇವರು ಹಣ ಕಟ್ಟಿದರು, ನಿರುಮ್ಮಳವಾಗಿದ್ದರು.
ಲೆಕ್ಕ ಮುಗಿಯಿತೇ? ಇಲ್ಲ, ಮತ್ತೆ ಮೂರನೇ ದಿನ ಅದೇ ಯಜಮಾನರ ಕರೆ, ಈ ಬಾರಿ ಅನುನಯದ ಧ್ವನಿ. “ನಾನು
ಗ್ರಹಿಸಿದ್ದು ತಪ್ಪಾಯ್ತು. ನಿಮ್ಮ ಹೆರೆಮಣೆ ನಿಜವಾಗಿಯೂ ನಮ್ಮ ಮಗಳು, ಸೊಸೆಯರಿಗೆ ಬೇಕೇ ಬೇಕಂತೆ...”
ಉಪಾಧ್ಯರು ಮೊದಲು ಅವಮಾನ ಎಂದು ಕುಗ್ಗಿರಲಿಲ್ಲ, ಈಗ ಸಮ್ಮಾನಾಂತ ಹಿಗ್ಗಲೂ ಇಲ್ಲ. ಮತ್ತೆ ಹಣ ಕಟ್ಟಿಸಿಕೊಂಡರು,
ಹೆರೆಮಣೆ ಕಳಿಸಿಕೊಟ್ಟರು!
ಕೋಟ ಮೂಲದ ಮುಂಬೈವಾಸಿ ಸುಮನಾ ಕಾಮತ್ ಉಪಾಧ್ಯರ ಹೆರೆಮಣೆಯ ಹಳೇ
ಗಿರಾಕಿ. ಈ ಸಲ ರಜೆಯಲ್ಲಿ ಬಂದಾಗ ಮೂವರು ಗೆಳತಿಯರನ್ನು ಕಟ್ಟಿಕೊಂಡೇ ಉಪಾಧ್ಯರಂಗಡಿಗೆ ದಾಳಿ ಮಾಡಿದರಂತೆ.
ಸುಮನಾ ಗೆಳತಿಯರಿಗೆ ಹೆರೆಮಣೆ ಶಿಫಾರಸು ಮಾತ್ರ ಮಾಡಿದರು. ಮಹಿಳಾಮಣಿಗಳು ಹೆರೆಮಣೆ ನೋಡಲು ಆತುರಪಟ್ಟರು.
ಏನುಂಟು ಏನಿಲ್ಲ ಎನ್ನುವಂತೆ ಸಾಮಾನು ತುಂಬಿದ ಹಳೆಗಾಲದ ಅಂಗಡಿ. ದಗಳೆ ಚಡ್ಡಿ, ಬರಿಮೈ, ನರೆಗಡ್ಡ
ಜುಟ್ಟಿನ ವೆಂಕಟ್ರಮಣ ಉಪಾಧ್ಯರೊಬ್ಬರೇ ಇದ್ದರು. ಶೋಕೇಸು, ಅಚ್ಚುಕಟ್ಟಿನ ಗಲ್ಲಾ, ನಾಲ್ಕೆಂಟು ಹುಡುಗರು, ಕೂರಲು ಭರ್ಜರಿ ಆಸನ್, ಮೇಲೆ ಸುತ್ತುವ ಪಂಖ, ಕೈಗೆ ಹಿಡಿಸುವ ಕೋಲ್ಡೂ... ಒಟ್ಟಾರೆ ಉಪಚಾರ, ದೆಖಾವೆಗಳೇನೂ ಇಲ್ಲ. ಮೊದಲು ಬಂದ ಗಿರಾಕಿಗಳ ಪಟ್ಟಿಯನ್ನು ಕ್ರಮವಾಗಿ ಪೂರೈಸುವಲ್ಲಿ ನೌಕರ, ಹಣ ಪಡೆಯುವಲ್ಲಿ ಯಜಮಾನನಾಗಿ ನಿರ್ಭಾವದಿಂದ
ಉಪಾಧ್ಯ ಓಡಾಡುತ್ತಲೇ ಇದ್ದರು. ಸರದಿ ಬಂದಾಗ ಮಹಿಳಾಮಣಿಗಳನ್ನು ವಿಚಾರಿಸಿದರು, ನೋಡಬಯಸಿದಂತೆ ಒಂದು
ಹೆರೆಮಣೆ ಎದುರಿಟ್ಟರು. ಬೆಲೆ ವಿಚಾರಿಸಿದರು, ಇವರು ಹೇಳಿದರು. ಮುಂಬೈ ಮಹಾನಗರಿಯ ಗಾಳಿ ಕುಡಿದವರಿಗೆ
ಒಂದೇ ಮಾತಿನಲ್ಲಿ ವ್ಯವಹರಿಸಿ ತಿಳಿದಂತಿರಲಿಲ್ಲ. “ಹೆಚ್ಚಾಯ್ತು, ನಮಗೆ ತುಂಬಾ ಬೇಕು, ಕಡಿಮೆ ಮಾಡಿ,
ಇಷ್ಟು ಕೊಡ್ತೇವೆ...” ತರಹೇವಾರಿ ಚೌಕಾಸಿ ಮಾತುಗಳು ಬಂದವು. ಇವರು ಹೆರೆಮಣೆ ಒಳಗಿಟ್ಟರು, ಮುಂದಿನ
ಗಿರಾಕಿ ಮಾತಾಡಿಸಿದರು. ಮಹಿಳಾಮಣಿಗಳು ದುಸುಮುಸು ಮಾಡಿ, ಅಂಗಡಿ ಬಿಟ್ಟು ಹೊರ ನಡೆದದ್ದೂ ಆಯ್ತು.
ಸುಮನಾ ಕಾಮತ್ ಹೊರಗೆ ಉಪಾಧ್ಯರ ಧೋರಣೆಗಳನ್ನು ತಡವಾಗಿ ಪರಿಚಯಿಸಿರಬೇಕು. ಐದು ಮಿನಿಟು ಬಿಟ್ಟು, ತಣ್ಣಗೆ
ಅಷ್ಟೂ ಮಂದಿ ಒಳ ಬಂದು ಒಂದೊಂದು ಹೆರೆಮಣೆ ಮಾತಿಲ್ಲದೆ ಕೊಂಡು ಹೋದರಂತೆ! ಅವರಿಗೇನು ಗೊತ್ತು, ಉಪಾಧ್ಯರ
ಗುಣಪಟ್ಟಿಯಲ್ಲಿ ನ್ಯಾಯಬೆಲೆಯೂ (ನಿಜದಲ್ಲಿ ಅದು ಸುಲಭಬೆಲೆಯೇ) ತುಂಬ ಮುಖ್ಯ ಅಂಶ.
ಬಿಡಿ, ಇಂಥ ಆಖ್ಯಾನಗಳು ಉಪಾಧ್ಯರ ಸಂಗ್ರಹದಲ್ಲಿ ಎಷ್ಟೂ ಇವೆ. ಕೇವಲ
ಮನುಷ್ಯ ಮನಸ್ಸಿನ ವಿಚಿತ್ರಗಳನ್ನು ನಿರೂಪಿಸಲಷ್ಟೇ ಅವರು ಅಂಥವನ್ನು ಆಗೀಗ ಆತ್ಮೀಯರಲ್ಲಿ ಹಂಚಿಕೊಳ್ಳುತ್ತಾರೆಯೇ
ವಿನಾ ತನ್ನ ದೊಡ್ಡಸ್ತಿಕೆ ಸಾರಲು ಅಲ್ಲ. ಇನ್ನು ನಿಜವಾಗಿ ತಾನು ತಯಾರಿಸಿದ (ಅಥವಾ ಮಾರಿದ) ಸಲಕರಣೆಗಳದ್ದೇ
ಸಮಸ್ಯೆಯಾದರೆ ಅದನ್ನು ಪರಿಹರಿಸುವಲ್ಲಿ ಇವರ ಶೋಧ ಅವಶ್ಯ ಮುಂದುವರಿಯುತ್ತದೆ.
ಉದಾಹರಣೆಗೆ ನೋಡಿ - ಮೇಜಿನಂಚು ಕಚ್ಚಿಕೊಳ್ಳುವ ಗಟ್ಟಿ ರಬ್ಬರ್ ಪುಡಿಯಾಗಬಾರದು. ನಿರಂತರ ಕಾಯಿಕಡಿಗಳ ಅದುರುವಿಕೆಯಲ್ಲಿ ಮುಂಗಾಲು ದೃಢವಾಗಿ ನಿಲ್ಲಬೇಕು. ಸಂದುಗಳು ಸಡಿಲಬಾರದು. ಕೆಲವು ಬಳಕೆದಾರರು ಅನನುಭವದಲ್ಲಿ ಅಲಗಿನ ಲೋಹಕ್ಕೆ ಅನಾವಶ್ಯಕ ಒತ್ತಡ ಮಾತ್ರವಲ್ಲ, ಕರಟ ಕೆರೆತವನ್ನೂ ಕೊಡುತ್ತಾರೆ. ಇದಕ್ಕಾಗಿ ಮಣೆ, ಅಲಗಿನ ಲೋಹ, ದಪ್ಪ, ರೂಪ, ಭಂಗಿ, ಬಾಳ್ತನ ಎಂದು ಒಂದೊಂದನ್ನೂ ಪರಿಷ್ಕರಿಸುತ್ತಲೇ ಬಂದರು. ಅಕೇಸಿಯಾ ಮರದಲ್ಲಿ ಕೆಲಸ ಮಾಡುವಾಗ ಅದರ ಹುಡಿ ಉಪಾಧ್ಯರಿಗೇ ಮೈಗೆ ಒಗ್ಗದಿಕೆಯ
(ಅಲರ್ಜಿ) ಸಮಸ್ಯೆ ತಂದಿತು. ಇವರು ಪೂರ್ಣ ಲೋಹ, ಫೈಬರ್ ಅಚ್ಚಿನಲ್ಲೆಲ್ಲ ಮಣೆಗಳನ್ನು ಮಾಡಿ ನೋಡಿದರು. ಮಣೆಯುದ್ದಕ್ಕೆ ಹಿಂದೆ ಜಾರುವ ಕಾಯಿಸುಳಿ ಕಂಡರು, ತಡೆಗಟ್ಟೆ ರೂಪಿಸಿದರು. ತಟ್ಟೆಯೊಳಗೇ ಊರಿದ ಮುಂಗಾಲು ಅಡ್ಡ ಮಲಗದಂತೆ ಕಿಸಗಾಲು ಇಟ್ಟರು. ಹೆರಮಣೆಯಷ್ಟೇ ಸಾಲದು ಎಂದವರಿಗೆ, ಬದಲಿಸಿ ಬಳಸಲು ಕತ್ತಿಬಾಯಿಯನ್ನೂ ಕೊಟ್ಟರು. ದೊಡ್ಡ ಸಂಖ್ಯೆಯಲ್ಲಿ ಬೇಡಿಕೆ ನಿರಂತರವಾದಾಗ ಹೊರಗಿನ ಉಡ್ ಲೇತ್, ಫೌಂಡ್ರಿಗಳನ್ನು ಬಳಸಿಕೊಂಡು ಬಿಡಿಭಾಗಗಳನ್ನು ಧಾರಾಳ ಮಾಡಿಕೊಂಡರು. ಆದರೆ ಜೋಡಣೆ ಮತ್ತು ಸೂಕ್ಷ್ಮ ಹೊಂದಾಣಿಕೆಗಳ ಕೆಲಸದಲ್ಲಿ ಅವರು ತನ್ನನ್ನು ಮೀರಿ ಇನ್ನೊಬ್ಬರನ್ನು ನೆಚ್ಚಿದವರಲ್ಲ. ನೂರು ಸಾವಿರ ಸಂಖ್ಯೆಗಳಲ್ಲಿ ಮಾರಿಹೋಗುತ್ತಿತ್ತು, ಮೆಚ್ಚುಗೆಯ ಮಹಾಪೂರ ಹರಿಯುತ್ತಿತ್ತು. ಆದರೂ ಉಪಾಧ್ಯರಿಗೆ ತೃಪ್ತಿಯಿಲ್ಲ.
ಉದಾಹರಣೆಗೆ ನೋಡಿ - ಮೇಜಿನಂಚು ಕಚ್ಚಿಕೊಳ್ಳುವ ಗಟ್ಟಿ ರಬ್ಬರ್ ಪುಡಿಯಾಗಬಾರದು. ನಿರಂತರ ಕಾಯಿಕಡಿಗಳ ಅದುರುವಿಕೆಯಲ್ಲಿ ಮುಂಗಾಲು ದೃಢವಾಗಿ ನಿಲ್ಲಬೇಕು. ಸಂದುಗಳು ಸಡಿಲಬಾರದು. ಕೆಲವು ಬಳಕೆದಾರರು ಅನನುಭವದಲ್ಲಿ ಅಲಗಿನ ಲೋಹಕ್ಕೆ ಅನಾವಶ್ಯಕ ಒತ್ತಡ ಮಾತ್ರವಲ್ಲ, ಕರಟ ಕೆರೆತವನ್ನೂ ಕೊಡುತ್ತಾರೆ. ಇದಕ್ಕಾಗಿ ಮಣೆ, ಅಲಗಿನ ಲೋಹ, ದಪ್ಪ, ರೂಪ, ಭಂಗಿ, ಬಾಳ್ತನ ಎಂದು ಒಂದೊಂದನ್ನೂ ಪರಿಷ್ಕರಿಸುತ್ತಲೇ ಬಂದರು. ಅಕೇಸಿಯಾ ಮರದಲ್ಲಿ ಕೆಲಸ ಮಾಡುವಾಗ ಅದರ ಹುಡಿ ಉಪಾಧ್ಯರಿಗೇ ಮೈಗೆ ಒಗ್ಗದಿಕೆಯ
(ಅಲರ್ಜಿ) ಸಮಸ್ಯೆ ತಂದಿತು. ಇವರು ಪೂರ್ಣ ಲೋಹ, ಫೈಬರ್ ಅಚ್ಚಿನಲ್ಲೆಲ್ಲ ಮಣೆಗಳನ್ನು ಮಾಡಿ ನೋಡಿದರು. ಮಣೆಯುದ್ದಕ್ಕೆ ಹಿಂದೆ ಜಾರುವ ಕಾಯಿಸುಳಿ ಕಂಡರು, ತಡೆಗಟ್ಟೆ ರೂಪಿಸಿದರು. ತಟ್ಟೆಯೊಳಗೇ ಊರಿದ ಮುಂಗಾಲು ಅಡ್ಡ ಮಲಗದಂತೆ ಕಿಸಗಾಲು ಇಟ್ಟರು. ಹೆರಮಣೆಯಷ್ಟೇ ಸಾಲದು ಎಂದವರಿಗೆ, ಬದಲಿಸಿ ಬಳಸಲು ಕತ್ತಿಬಾಯಿಯನ್ನೂ ಕೊಟ್ಟರು. ದೊಡ್ಡ ಸಂಖ್ಯೆಯಲ್ಲಿ ಬೇಡಿಕೆ ನಿರಂತರವಾದಾಗ ಹೊರಗಿನ ಉಡ್ ಲೇತ್, ಫೌಂಡ್ರಿಗಳನ್ನು ಬಳಸಿಕೊಂಡು ಬಿಡಿಭಾಗಗಳನ್ನು ಧಾರಾಳ ಮಾಡಿಕೊಂಡರು. ಆದರೆ ಜೋಡಣೆ ಮತ್ತು ಸೂಕ್ಷ್ಮ ಹೊಂದಾಣಿಕೆಗಳ ಕೆಲಸದಲ್ಲಿ ಅವರು ತನ್ನನ್ನು ಮೀರಿ ಇನ್ನೊಬ್ಬರನ್ನು ನೆಚ್ಚಿದವರಲ್ಲ. ನೂರು ಸಾವಿರ ಸಂಖ್ಯೆಗಳಲ್ಲಿ ಮಾರಿಹೋಗುತ್ತಿತ್ತು, ಮೆಚ್ಚುಗೆಯ ಮಹಾಪೂರ ಹರಿಯುತ್ತಿತ್ತು. ಆದರೂ ಉಪಾಧ್ಯರಿಗೆ ತೃಪ್ತಿಯಿಲ್ಲ.
ಹಳೆ ಮಾದರಿ ಬಳಕೆಗಾಗುವಾಗ ಮಾತ್ರ ಮೇಜಿನಂಚಿನಲ್ಲಿ ಓರೆಯಾಗಿ ನಿಲ್ಲಬೇಕಾಗುತಿತ್ತು. ಉಳಿದಂತೆ ಮರೆತೂ ತೊಡೆಯ ಒತ್ತು ಕಡಿಮೆಯಾದರೆ ಕಾಯಿಕಡಿ ಒತುವಾಗ ಸಲಕರಣೆ ಮುಗ್ಗರಿಸುತ್ತಿತ್ತು. ಕಾಯಿ ಹೆರೆಯುತ್ತಿದ್ದಂತೆ “ಓಹ್, ಹಾಲುಕ್ಕಿತು” ಎಂದು ಅತ್ತ ಓಡಿದರೆ ಹೆರೆಮಣೆ ನೆಲಕ್ಕೆ ಬಿದ್ದು ರಂಪವಾಗುತ್ತಿತ್ತು. ಇವನ್ನೂ ನಿವಾರಿಸುವ ವಿಚಾರ ಮಂಥನದ ಅರೆಗಳಲ್ಲಿ ನುಲಿನುಲಿದು ಈಗ ೨೦೧೫ ಕ್ಕೆ ಮೂಡಿದ ನವನೀತ - ಅವರೇ ಹೆಸರಿಸಿದಂತೆ ಮ್ಯಾಜಿಕ್ ಕೊಕೊನಟ್ ಗ್ರೇಟರ್ (ಮಾಯಾ ಹೆರೆಮಣೆ)
ಉಪಾಧ್ಯ ಹೆರೆಮಣೆ - ೨೦೧೫ ಕ್ಕೆ ಕಾಲುಗಳೇ ಇಲ್ಲ. ಈ ಚಪ್ಪಟೆ ಮಣೆಯನ್ನ ಮೇಜು ಅಥವಾ ಕಟ್ಟೆಯ ಅಂಚಿನಲ್ಲಿ ಕೂರಿಸಿದರೆ ಸಾಕು. ಇದರಲ್ಲಿ ಹಿಂಗಾಲಿನಂತೆ ತೋರುವ ಎರಡು ಕುಟ್ಟಿಗಳು ಕಾಯಿ ಹೆರೆಯುವ ಕಾಲದಲ್ಲಿ ಮಣೆ ಮುಂದೆ ಜಾರದಂತೆ ಹಿಡಿದಿಡುವ ತಡೆಗಳು ಮಾತ್ರ. ಇವಕ್ಕೆ ಹೆರೆಗಾರರ ಹಗುರ ತೊಡೆಯ ಒತ್ತಷ್ಟೇ ಸಾಕು. ಸಹಜವಾಗಿ ಕೆಲಸ ನಿಲ್ಲಿಸಿದ ಯಾವ ಹಂತದಲ್ಲೂ ಈ ಸಲಕರಣೆ ಹಿಂಜಾರಿ ಬೀಳುವುದಿಲ್ಲ.
ಹೆಚ್ಚೇನು, ಒಂದು ಸಾಮಾನ್ಯ ಮಣೆಯನ್ನು ನೆಲದ ಮೇಲಿಟ್ಟು, ಅದರ ಅಂಚಿನಲ್ಲಿ ಇದನ್ನು ಕೂರಿಸಿದರೆ ಸಾಂಪ್ರದಾಯಿಕ
ರೀತಿಯಲ್ಲಿ ನೆಲದ ಮೇಲೇ ಕುಳಿತು ಕಾಯಿ ಹೆರೆಯುವುದಕ್ಕೂ ಇದು ಒಡ್ಡಿಕೊಳ್ಳುತ್ತದೆ.
ಉಪಾಧ್ಯ ಹೆರೆಮಣೆಯ ವಿಕಾಸದ ದಾರಿಯಲ್ಲಿ ಮುಂಗಾಲು ಕಾಯಿತುರಿ ತುಂಬಿಕೊಳ್ಳುವ ಬಟ್ಟಲಿನ ನಡುವೆ ಊರುವುದಿದ್ದಾಗ ಅಶುಚಿ ಅನ್ನಿಸಿತ್ತು. (ಪ್ರತಿ ಬಾರಿಯೂ ಬಳಸುವ ಮುನ್ನ ಅದರ ಕಾಲಿನ ಧೂಳು, ಕಸ ಗಮನಿಸಬೇಕಾಗುತ್ತಿತ್ತು.) ಮುಂಗಾಲಿನ ಹೊರಗೆ ತಟ್ಟೆ ಕೂರುವಂತೆ ಮಾಡಿದಾಗ, ಹೆರೆದು ಹಿಂಜಾರುವ ಕಾಯಿಸುಳಿ ತಟ್ಟೆಯಿಂದ ಹೊರಗೂ ಬೀಳುವ ಅನಾನುಕೂಲವಿತ್ತು.
ಮುಂದುವರಿದು ಹೆರೆಹಲ್ಲಿನ ಕತ್ತಿಗೆ ಪುಟ್ಟ ತಡೆಗಟ್ಟೆ ಇಟ್ಟರೂ ಪೂರ್ಣ ತೃಪ್ತಿಯಿರಲಿಲ್ಲ. ಹೆರೆಕ್ರಿಯೆಯಲ್ಲಿನ ಕಂಪನ, ಆಗೀಗ ತಡೆಯೊತ್ತು ತಪ್ಪಿ ಮಣೆ ಮುಗ್ಗುರಿಸಿದರೆ ತುರಿತುಂಬುವ ತಟ್ಟೆ ಮುಂದೆ ಜರುಗಿ ರಗಳೆಯಾಗುತ್ತಿತ್ತು. ಹೊಸ ಮಾದರಿಯಲ್ಲಿ ಇವೆಲ್ಲದರೆ ನಿವಾರಣೆಯಾಗಿದೆ. ಇಲ್ಲಿ ತಟ್ಟೆಯನ್ನು ಮಣೆಯೇ ಒಳಗೊಳ್ಳುತ್ತದೆ. ಮತ್ತದು ಒಳಮುಖಿಯಾಗಿಯೇ ಉಳಿಯುವಂತೆ ಎದುರೆರಡು ಪುಟ್ಟ ರಬ್ಬರ್ ಅಡಿ ಒತ್ತೂ ಇದೆ. ಇನ್ನೂ ಮುಖ್ಯವಾದದ್ದು ಈ ಹೆರೆಮಣೆ ಮುಗ್ಗರಿಸುವುದೇ ಇಲ್ಲ. ಇಲ್ಲಿ ಹೆರೆಹಲ್ಲಿನ ಭದ್ರತೆಗೆ ಇರುವ ಎರಡು (ಕಾಲು) ಆಧಾರಗಳೂ ಒಟ್ಟಾರೆ ಮಣೆಯ ಹಿಂದಿನ ಕೊನೆಯಲ್ಲಿವೆ. ಕೆಳಗಿನ ಮಣೆ ಮೇಲಿನ ಹಲ್ಲನ್ನೂ ಮೀರಿ ಮುಂಚಾಚಿದೆ. ಇಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಹೇಳುವುದಿದ್ದರೆ ಬಲವಾದ ಉಕ್ಕಿನ ಹೆರೆಹಲ್ಲಿನ ಭಾಗ ಮುರಿದರೂ ಒಟ್ಟು ಸಲಕರಣೆ ಮುಗ್ಗರಿಸುವುದು ಅಸಾಧ್ಯ!
ಉಪಾಧ್ಯರು ಇಲ್ಲಿ ಮಣೆಗೆ ಸೂಬಾಬುಲ್ ಮರವನ್ನು ಬಳಸಿದ್ದಾರೆ. ಅದರ ಗಾತ್ರ, ರೂಪ ಮತ್ತು ಸೌಂದರ್ಯವೂ ಸೇರಿದಂತೆ ಒಟ್ಟು ಹೆರೆಮಣೆಯೊಂದನ್ನು ಹೊರಡಿಸಲು ಹನ್ನೆರಡು ಗಂಟೆಗೂ ಮಿಕ್ಕಿ ಶ್ರಮ ಹಾಕಿದ್ದಾರೆ! ಹಾಗೆ ಮೊದಲ ಮಾದರಿಗಳನ್ನು ಹೊರಹಾಕಿದಾಗ ಇವರೇ ನಿಗದಿಸಿದ ಬೆಲೆ ರೂ ಒಂದು ಸಾವಿರ. ಅವು ಅರೆಚಣದಲ್ಲಿ ಎಂಬಂತೆ ಮುಗಿದುಹೋಯ್ತು. ಅದರ ತಯಾರಿಯ ವಿವರಗಳನ್ನು ವಿರಾಮದಲ್ಲಿ ಪರಿಭಾವಿಸಿ, ಇಂದು ಅವರೇ ಪರಿಷ್ಕರಿಸಿ ನಿಗದಿಸಿದ ಹೊಸ ಮಾರುಬೆಲೆ ರೂ. ಸಾವಿರದಿನ್ನೂರು ಖಂಡಿತವಾಗಿ ಹೆಚ್ಚನ್ನಿಸುವುದಿಲ್ಲ.
ಹೆರೆಮಣೆ - ೨೦೧೫ ಪಿ.ವಿ. ಉಪಾಧ್ಯರ ನಿರಂತರ ಹುಡುಕು ಬುದ್ಧಿಯ ಸಾಧನಾ ಸರಣಿಯಲ್ಲಿ ಸದ್ಯಕ್ಕೆ ಅತ್ಯುನ್ನತ ಮಜಲು. ಹಾಗೆಂದು ಬೆಲೆ ನಿಗದಿಯಲ್ಲಿ ತನ್ನದು ಏಕಸ್ವಾಮ್ಯ ಎಂಬ ಭಾವ ಯಾರಿಗೂ ಬರಬಾರದು ಎನ್ನುತ್ತಾರೆ ಉಪಾಧ್ಯ. ಅವರು ಎಂದಿನ `ಉಪಾಧ್ಯ ಸಹಜತೆ’ಯಲ್ಲಿ ಇದನ್ನೂ ತಮ್ಮಿಂದ ಕೊಂಡು ಬಳಸುವವರಿಗೂ ನಕಲು ಮಾಡುವವರಿಗೂ ಮುಕ್ತವಾಗಿರಿಸಿದ್ದಾರೆ. ಅಂದರೆ ಕಾನೂನಾತ್ಮಕವಾಗಿ ಈ ಮಾದರಿಯ ಸ್ವಾಮ್ಯವನ್ನು ತನ್ನಲ್ಲಿ ಕಾಯ್ದಿಟ್ಟುಕೊಂಡಿಲ್ಲ.
ಹೆರೆಮಣೆ - ೨೦೧೫ ಪಿ.ವಿ. ಉಪಾಧ್ಯರ ನಿರಂತರ ಹುಡುಕು ಬುದ್ಧಿಯ ಸಾಧನಾ ಸರಣಿಯಲ್ಲಿ ಸದ್ಯಕ್ಕೆ ಅತ್ಯುನ್ನತ ಮಜಲು. ಹಾಗೆಂದು ಬೆಲೆ ನಿಗದಿಯಲ್ಲಿ ತನ್ನದು ಏಕಸ್ವಾಮ್ಯ ಎಂಬ ಭಾವ ಯಾರಿಗೂ ಬರಬಾರದು ಎನ್ನುತ್ತಾರೆ ಉಪಾಧ್ಯ. ಅವರು ಎಂದಿನ `ಉಪಾಧ್ಯ ಸಹಜತೆ’ಯಲ್ಲಿ ಇದನ್ನೂ ತಮ್ಮಿಂದ ಕೊಂಡು ಬಳಸುವವರಿಗೂ ನಕಲು ಮಾಡುವವರಿಗೂ ಮುಕ್ತವಾಗಿರಿಸಿದ್ದಾರೆ. ಅಂದರೆ ಕಾನೂನಾತ್ಮಕವಾಗಿ ಈ ಮಾದರಿಯ ಸ್ವಾಮ್ಯವನ್ನು ತನ್ನಲ್ಲಿ ಕಾಯ್ದಿಟ್ಟುಕೊಂಡಿಲ್ಲ.
ಯಾರೂ ಇದನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸಿ, ಇನ್ನಷ್ಟು ಕಡಿಮೆ
ಬೆಲೆಯಲ್ಲಿ ಕೊಡುವುದು ಸಾಧ್ಯವಾಗಲಿ ಎಂದೇ ಇವರು ಆಶಿಸುತ್ತಾರೆ. ಆದರೆ ತನ್ನ ಸಂಶೋಧನೆ ಯಾವುದೇ ಒಬ್ಬ ವ್ಯಕ್ತಿಯ ಅಥವಾ ಒಂದು ಸಂಸ್ಥೆಯ ಸ್ವಾಮ್ಯಕ್ಕೊಳಪಡದಂತೆ (ಏಕಸ್ವಾಮ್ಯದ ಹಕ್ಕಾಗದಂತೆ) ಎಚ್ಚರವನ್ನು ಮಾತ್ರ ಇವರು ಬಿಟ್ಟುಕೊಡುವುದಿಲ್ಲ.
ಸಹಜವಾಗಿ ಉಪಾಧ್ಯ ಹೆರೆಮಣೆ - ೨೦೧೫, ಸದ್ಯ ಅವರೇ ಮಾಡಿ ಮಾರುತ್ತಿದ್ದಾರೆ. ಅವರಣ್ಣ ಮಂಜುನಾಥ ಉಪಾಧ್ಯ ಸೇರಿದಂತೆ ಅವರೇ ನಡೆಸುತ್ತಿರುವ ಉಪಾಧ್ಯ ಬ್ರದರ್ಸ್ ಸರ್ವಸರಕಿನ ಮಳಿಗೆಯಲ್ಲಷ್ಟೇ
ಸಿಗುತ್ತಿದೆ. ಸಾಧ್ಯವಾದರೆ ಅನ್ಯರಿಂದ ಇನ್ನೂ ಉತ್ತಮ ಗುಣಮಟ್ಟದಲ್ಲಿ ಮತ್ತು ಸುಲಭ ಬೆಲೆಯಲ್ಲಿ ಇದರ ನಕಲು ಬರಲಿ ಎಂದು ಉಪಾಧ್ಯರು ಪ್ರಾಮಾಣಿಕವಾಗಿ
ಆಶಿಸುತ್ತಾರೆ.
‘ಉಪಾಧ್ಯ ಹೆರೆಮಣೆ – ೨೦೧೫’ ವಾಣಿಜ್ಯ ಅಥವಾ ಕೀರ್ತಿಕಾಮನೆಯ ಸಂಕೇತವಲ್ಲ, ಪಿ.ವಿ. ಉಪಾಧ್ಯರ ಆತ್ಮತೃಪ್ತಿಯ ನಿಶಾನಿ ಮಾತ್ರ.
(ಪಿ.ವಿ. ಉಪಾಧ್ಯರ ಸಂಪರ್ಕ ಸಂಖ್ಯೆ: ೯೭೩೯೫ ೨೪೨೬೦)
(ಪಿ.ವಿ. ಉಪಾಧ್ಯರ ಸಂಪರ್ಕ ಸಂಖ್ಯೆ: ೯೭೩೯೫ ೨೪೨೬೦)
Nijavada paryaya chintane atthu kriyatmaka shodhane Upadhyayariguu nimaguu abhinandane
ReplyDeleteಉಪಾಧ್ಯಾಯರ ಕುರಿತು ಕೇಳಿದ್ದೆ. ಅವರ ಕುರಿತು ಇಷ್ಟು ವಿವರ ನೀಡಿದ್ದಕ್ಕೆ ಧನ್ಯವಾದಗಳು ಅಶೋಕ ವರ್ಧನರವರೇ. ವಿಶ್ವ ಪರಿಸರ ದಿನದ ದೊಡ್ಡ ಕೊಡುಗೆ ನಿಮ್ಮ ಲೇಖನ
ReplyDeleteಉಪಾಧ್ಯರನ್ನು ಒಂದು ಬೇಸಗೆಯ ದಿನ ನಿಮ್ಮ ಅಂಗಡಿಯಲ್ಲಿ ನೋಡಿದಾಗ ಅವರು ಒಂದು ಪಾಣಿಪಂಚೆ ಉಟ್ಟಿದ್ದರು. ಹೆಗಲಿಗೊಂದು ಟವೆಲ್ ಹಾಕಿಕೊಂಡಿದ್ದರು ಎಂದು ನೆನಪು. ಅಂಗಿ, ಬನಿಯನ್ನು ಏನೂ ಇಲ್ಲ! ಒಂದು ಕ್ಷಣ ನನಗೆ ಮಾತು ಬರಲಿಲ್ಲ! ಮತ್ತೆ ಸುಧಾರಿಸಿಕೊಂಡು ಮಾತು ಶುರು ಮಾಡಿದೆ.
ReplyDeleteNice article Sir
ReplyDeleteA beautiful & innovative "Make in India" product for both the Corporates & the Common man!
ReplyDeleteCongrats & Best wishes Sri Upadhya & Sri Ashok Vardahn for your creative mindset! Jai Gurudev.
ಉತ್ತಮ ಲೇಖನ.. ಉಪಾದ್ಯ ರನ್ನು ಸಂರ್ಕಿಸಿಯೂ ಆಯಿತು....
ReplyDeleteತುಂಬಾ ದಿನದಿಂದ ತರಿಸೋದು ಬಾಕಿ ಉಳಿದಿತ್ತು .. ಅದ್ಭುತವಾಗಿದೆ .. ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸರ್ .. ��
ReplyDelete