15 May 2015

ನೋಡಲು ಆರು ಓಡಲು ಅರುವತ್ತು

(ಚಕ್ರವರ್ತಿಗಳು೩೧, ದಕ್ಷಿಣಾಪಥದಲ್ಲಿ… – )

ಕೋಡಿ- ಪಳನಿ ರಸ್ತೆ ಉನ್ನತ ಪರ್ವತ ಶ್ರೇಣಿಯ ವಿಸ್ತಾರ ಮೈಯ್ಯ ಮೇಲೆ ಹರಿದಿದೆ. ಬೆಟ್ಟದ ಓರೆಯ ಬಾಳೇ ತೋಟ ಮಳೆಯಿಲ್ಲದೇ `ಮದದಾನೆ ಹೊಕ್ಕಂದದಲಿಹಾಳು ಸುರಿದಿತ್ತು. ಹೀಗಾಗಿ ದಾರಿ ತುಂಬ ಮುನ್ನೋಟಕ್ಕೆ ಒಡ್ಡಿಕೊಳ್ಳುತ್ತದೆ. ಇಳಿದಿಳಿದು ಸ್ವಲ್ಪ ಏರಿ ಬೆಟ್ಟ ಸಾಲುಗಳ ಮಗ್ಗಲು ಬದಲಿಸಿತು. ಈಗ ದೃಶ್ಯ ಬೇರೆ: ಬೆಟ್ಟದ ಬುಡ ಬಿಟ್ಟಲ್ಲಿಂದ ದಿಗಂತದವರೆಗೂ ಮಟ್ಟಸ ಭೂಮಿ. ಎಲ್ಲೋ ದೂರಕ್ಕೆ ಒಂದೊಂದು ಸಣ್ಣ ಕಲ್ಲು ಗುಡ್ಡಗಳುನುಣುಪು ಕದಪಿನ ಮೇಲೆ ಮೊಡವೆ ಬಿದ್ದಂತೆ. ಅವುಗಳಲ್ಲೇ ಸಮೀಪದ್ದೊಂದು ಅಂದರೆ ಕಣ್ಣಳವಿಯಲ್ಲಿ ಸುಮಾರು ಐದಾರು ಕಿಮೀ ದೂರದ್ದು ಪಳನಿ ಗುಡ್ಡೆ.


ಆದರೆ ದಾರಿ ಮಾತ್ರ ೩೮ ಕಿಮೀ ದೀರ್ಘ. ಹಾಗಾಗಿ ನಿಂತರೂ ಬೆಟ್ಟದೇಣುಗಳನ್ನು ಮುರಿಯುತ್ತ ಹೋದರೂ ದೃಶ್ಯ ಅದದೇ ಆಗಿ, ಉಳಿದದ್ದು ಪಳನಿ ನಾಮಜಪದೊಂದನೆ ಕಿಮೀ ಕಲ್ಲುಗಳೊಡನೆ ಸ್ಫರ್ಧೆಯೊಂದೇ. ಘಟ್ಟ ಇಳಿದಂತೆಲ್ಲ ಹವೆಯ ತಣ್ಪು ತಗ್ಗಿ ಬಿಸಿಯೇರುತ್ತಿತ್ತು. (ನಮ್ಮಲ್ಲಿನ ಮಡಿಕೇರಿಯಿಂದ ಸಂಪಾಜೆಗಿಳಿಯುವಾಗ, ಆಗುಂಬೆಯಿಂದ ಸೋಮೇಶ್ವರಕ್ಕಿಳಿಯುವಾಗ, ಕೊಟ್ಟಿಗೆಹಾರದಿಂದ ಚಾರ್ಮಾಡಿಗಿಳಿಯುವಾಗ... ಇತ್ಯಾದಿಗಳ ಹಾಗೇ.)  ಪಳನಿ ತಲಪಿದಾಗ ಸಂಜೆಯಾಗಿತ್ತು. ನಮ್ಮ ಅದೃಷ್ಟಕ್ಕೆ ಕಡಿಮೆ ದರದಲ್ಲೇ ಸುವಿಸ್ತಾರ ಕೋಣೆಯ ಒಳ್ಳೆ ಹೋಟೆಲ್ಲೇ ಸಿಕ್ಕಿತು. ಹಾಗೆಂದು ನಮ್ಮ ಪ್ರವಾಸೀ ಶಿಸ್ತಿನಲ್ಲಿ ವಿರಾಮ/ವಿಶ್ರಾಂತಿ ಎಂದೂ ಮುಂದಿನ ಪಙ್ಕ್ತಿಯಲ್ಲಿ ಬಂದದ್ದಿಲ್ಲ. ಗಂಟುಮೂಟೆ ಮತ್ತು ಬೈಕನ್ನೂ ಅಲ್ಲೇ ಬಿಟ್ಟು, ಊರಿನ ವಿಶೇಷ ನೋಡಲು ಹೊರಟೆವು.


ಇಕ್ಕೆಲಗಳಲ್ಲಿ ಕಲ್ಲುಗುಡ್ಡೆಗಳನ್ನು ಇಟ್ಟುಕೊಂಡು ಪಳನಿಪೇಟೆ ವಿಸ್ತರಿಸಿದೆ. ದೊಡ್ಡ ಗುಡ್ಡೆಯಲ್ಲಿ ಪಳನಿಯಪ್ಪನೆಂದೇ ಖ್ಯಾತವಾದ ಷಣ್ಮುಖನ ಗುಡಿ ಇದೆ. ನಾವು ಜಟಕಾ ಹಿಡಿದು ಆ ಗುಡ್ಡದ ಬುಡ ಸೇರಿದೆವು. ಗುಡ್ಡೆಗೆ ಪ್ರಾಚೀನ ಕಾಲದಿಂದಲೇ ಬಂದ ಎರಡು
ಸಾಲು ಮೆಟ್ಟಿಲುಗಳು ಸುವ್ಯವಸ್ಥಿತವಾಗಿಯೇ ಇತ್ತು. ಆದರೆ ಜೊತೆಗೆ ಕುಡಿದ ನೀರೂ ತುಳುಕದಂತೆ ಗುಡ್ಡೆಯ ನೆತ್ತಿ ಕಾಣಿಸಿ, ಕರೆತರಲು ಎರಡು ವಿಂಚ್ ಅಥವಾ ಎಳೆ-ತೊಟ್ಟಿಲ ದಾರಿಗಳೂ ಇದ್ದುವು. ಬೆಟ್ಟದ ೭೦-೮೦ ಡಿಗ್ರಿಯ ಇಳಿಮೈಯಲ್ಲಿ ಕೂರಿಸಿದ ಹಳಿಗಳ ಮೇಲೆ ನೆತ್ತಿಯ ಎರಡು ವಿದ್ಯುತ್ ಮೋಟಾರುಗಳು ಉಕ್ಕಿನ ಮಿಣಿಗಳ ಸಹಾಯದಲ್ಲಿ ಸಣ್ಣ ಗಾಡಿಯನ್ನು ಮೇಲೆ ಏರಿಸಿ, ಇಳಿಸಿ ಮಾಡುತ್ತಿತ್ತು. ಸ್ವಲ್ಪ ಬಾಲಬುದ್ಧಿ, ಹಿಂದೆ ಜೋಗದಲ್ಲಿ ಹೋದ ನೆನಪು ಮತ್ತು ಚುರುಕಾಗಿ ಮುಗಿಸಿಬಿಡುತ್ತೇವೆ ಎಂಬ ಯೋಚನೆ ಸೇರಿ ಎಳೆ-ತೊಟ್ಟಿಲಿನ ಸರದಿ ಸಾಲಿಗೆ ಹೋಗಿ ಸೇರಿಕೊಂಡೆವು. ಇದು ಬಹುತೇಕ ಎಲ್ಲರೂ ಮಾಡುವ ತಪ್ಪು. ಅಲ್ಲಿನ ಅಸಾಧ್ಯ ಜನರಾಶಿಗೆ ಎಳೆತೊಟ್ಟಿಲ ಸೇವೆ ಪರ್ಯಾಪ್ತವಾಗಿರಲಿಲ್ಲ; ತುಂಬ ನಿಧಾನಿ

ನಾವು ಸರದಿಯ ಸಾಲಿನಲ್ಲೇ ಎರಡು ಗಂಟೆ ಕಳೆದುಕೊಳ್ಳಬೇಕಾಯ್ತು! ಮೇಲೆ ಎಲ್ಲ ದೇವಾಲಯಗಳಂತೆ ದುಡ್ಡು ಸುರಿದಷ್ಟು ಚುರುಕಾಗಿ ದೇವದರ್ಶನ ಸೌಲಭ್ಯ ಇತ್ತು. ಸಾಮಾನ್ಯ ಸರದಿ ಸಾಲಿನಲ್ಲಿ ಹೋದರೂ ಭಕ್ತಸಾಕ್ಷಾತ್ ಕುಚೇಲನೇ ಆದರೂ ಗಂಟು ಹೊನ್ನಿನದೇ ಇರಬೇಕೆಂಬ ಜುಲುಮೆ ನೋಡಿ ಹೇಸಿಗೆಯಾಯ್ತು. ಯಾವುದೇ ಭಕ್ತಿ ಕೇಂದ್ರಗಳಲ್ಲಿ ಒಮ್ಮೆಯಾದರೂ ಒಳಗಿನ ವ್ಯವಸ್ಥೆಗಳನ್ನು ನೋಡುವ ಕುತೂಹಲವೇ ಮಾತ್ರ ನಮ್ಮದು. (ದೇವದರ್ಶನದ ಭ್ರಮೆ ನಮಗಿಲ್ಲ!) ನಾವು ದೇವಳದ ಹೊರವಲಯದಲ್ಲಿ ಅಡ್ಡಾಡಿದೆವು. ಅಲ್ಲಿ ಭಕ್ತಗಡಣಕ್ಕೆ ಸಾಕಷ್ಟು ನೆಲ, ನೀರು, ನೆರಳು ಕೊಟ್ಟು ಸುಧಾರಿಸುವಂಥ ಆಧುನೀಕರಣ ಮೆಚ್ಚುವಂತಿತ್ತು. ಆ ಜನಪ್ರವಾಹ, ಹಸುರಿನ ಹೆಸರೇ ಮಾಸಿದ್ದ ಪರಿಸರದ ನಡುವೆಯೂ ಗುಡಿಯ ಮೇಲಾಡುತ್ತಿದ್ದ ನವಿಲು ಮತ್ತೊಂದು ವಿಸ್ಮಯ. ನೋಡನೋಡುತ್ತಿದ್ದಂತೆ ದೀಪಮಾಲೆಗಳು ಮೆರೆಯಲು ಅನುಕೂಲವಾಗುವಂತೆ ಸೂರ್ಯ ಕಂತಿದ. ಆಗಸದ ವರ್ಣವೈಭವ, ಅದರ ಅಣಕದಂತೆ ಭುವಿಯ ದೀಪರಾಜಿಯ ಬೆಡಗು ಎರಡೂ ಕುಶಿ ಕೊಟ್ಟವು; ಪ್ರಕೃತಿಯ ವೈಭವಕ್ಕೆ (ಎಂದೂ ಮುಗಿಯದ) ಬೆರಗು, ಅದರದೇ ಒಂದು ಯಃಕಶ್ಚಿತ್ ತುಣುಕುಮನುಷ್ಯ, ಅದನ್ನು ಅನುಕರಿಸಲು ಪಟ್ಟ ಶ್ರಮಕ್ಕೆ!


ಇಳಿಯಲು ಎರಡು ಯೋಚನೆ ಮಾಡದೆ ಮೆಟ್ಟಲ ಸಾಲು ಹಿಡಿದೆವು. ಮೆಟ್ಟಲಿನ ಇಬ್ಬದಿಯ ಸಂತೆ, ಪುಟ್ಟ ಗುಡಿಗಳನ್ನು ನೋಡುತ್ತ ಇಳಿದೆವು. ಆರಾಮವಾಗಿ ಹೋಟೆಲಿಗೂ ನಡೆದೇ ಹೋದೆವು. ಅಲ್ಲಿ ಎಲ್ಲಾ ಬಟ್ಟೆಗಳನ್ನು ಚೊಕ್ಕ ಒಗೆದು, ಮೂರು ದಿನಗಳ ಮುಗ್ಗುಲು ಕಳಚಿಕೊಂಡೆವು. ಊರಿನ ವಾತಾವರಣದ ಬಿಸಿ ಮತ್ತು ಫ್ಯಾನಿನ ಗಾಳಿ ಎಲ್ಲವನ್ನೂ ಚೆನ್ನಾಗಿಯೇ ಒಣಗಿಸಿ, ಮಾರಣೇ ದಿನದ ನಮ್ಮ  ಮುಂದಿನ ಪಯಣಕ್ಕೆ ಶುಭವನ್ನೇ ಕೋರಿತು. ತಮಿಳುನಾಡಿನ (ಮುಖ್ಯವಾಗಿ ಕೇರಳದಂತಲ್ಲ) ಹೋಟೆಲುಗಳ ತಿನಿಸಿನ ಸಂಸ್ಕೃತಿ ಚೆನ್ನಾಗಿರುವುದನ್ನು ಕೇಳಿದ್ದೆವು. ಅದನ್ನು ಪಳನಿಯಲ್ಲಿ ಪ್ರಥಮ ಬಾರಿಗೆ ಎನ್ನುವಂತೆ, ಭರ್ಜರಿ ಊಟದೊಡನೆ ಅನುಭವಿಸಿದೆವು. ಇನ್ನು ನಿದ್ರೆಯೂ ಧಾರಾಳವಾಯ್ತು, ಮರುದಿನದ ಯಾನ ಮುಂದುವರಿಕೆಗೆ ಮಹಾಚೇತನವೇ ಕೂಡಿಬಂತು ಎಂದು ಪ್ರತ್ಯೇಕ ಹೇಳಬೇಕೆ.

ಮರುಬೆಳಗ್ಗೆ ಪಕ್ಕದ ಬೋಳು (ಬಂಡೆ)ಗುಡ್ಡೆಯನ್ನು ಬಾಕಿಯುಳಿಸಲಿಲ್ಲ. ಅದರ ಮೇಲೆ ಒಂದೆರಡು ಪುಡಿ ಬಂಡೆಗಳನ್ನು ಬಿಟ್ಟು ಬೇರೇನೂ ಇಲ್ಲದಿದ್ದರೂ ನೆತ್ತಿಯವರೆಗೆ ವಿಸ್ತಾರ ಸೋಪಾನಗಳನ್ನು ರಚಿಸಿದ್ದಾರೆ. ಬಹುಶಃ ಉತ್ಸವ ಕಾಲಗಳಲ್ಲಿ ಭಕ್ತಾದಿಗಳು ಅದನ್ನು ಏರಿ ದೇವಳ ಗುಡ್ಡದ ಸಮಗ್ರ ದರ್ಶನ ಮಾಡಿ ಪುಳಕಿತರಾಗುತ್ತಾರೆ, ಸಾರ್ಥಕ್ಯ ಗಳಿಸುತ್ತಾರೆ.

ನೀಲಗಿರಿಗೆ: ಪಳನಿಯಲ್ಲಿ ನಮಗಿನ್ನೇನೂ ನೋಡುವುದುಳಿದಿರಲಿಲ್ಲ. ಒಂಬತ್ತು ಗಂಟೆಗೆ ನೀಲಗಿರಿ ದಾರಿ ಹಿಡಿದೆವು. ಮಟ್ಟಸ ಬಯಲು, ಸರಳ ರೇಖೆಯಂಥಾ ದಾರಿ. ಉದ್ದಕ್ಕೂ ಮಾವಿನ ತೋಪು ನಮ್ಮ ರಸನೆಗಳನ್ನು ಕೆರಳಿಸುತ್ತಿತ್ತಾದರೂ ಮರೆಯಲ್ಲಿದ್ದಿರಬಹುದಾದ ಕಾವಲುಗಣ್ಣಿಗೆ ಮರ್ಯಾದೆ ಕೊಟ್ಟು ಬಾಲಬುದ್ಧಿಗಿಳಿಯಲಿಲ್ಲ. ಮುಖ್ಯ ಊರುಗಳಾದಧಾರಾಪುರ, ತಿರ್ಪೂರು, ಅವನಾಶಿಗಳಲ್ಲೆಲ್ಲೋ ಒಮ್ಮೆ ಕಾಫಿಗೆ ನಿಂತದ್ದು ಬಿಟ್ಟರೆ ಮೆಟ್ಟುಪಾಳ್ಯದವರೆಗೂ ಆಕ್ಸಿಲರೇಟರ್ ತಿರುಚಿ ಹಿಡಿದ
ನಮ್ಮ ಹಿಡಿತ ಸಡಿಲಲಿಲ್ಲ, ದಾರಿಯೂ ದಿಗಂತ ಬಿಟ್ಟು ಬೇರೆ ತಿರುಗಿದ್ದು ಗೊತ್ತಾಗಲಿಲ್ಲ! ನಮ್ಮ ಅಂದಿನ ಯೆಜ್ದಿ ಬೈಕಿನಲ್ಲಿ ಸರಾಸರಿ ವೇಗ ಗಂಟೆಗೆ ೭೦ ಕಿಮೀ ಸಾಧಿಸಿದ್ದರೂ ಯಾವ ಗಳಿಗೆಯಲ್ಲು ದಾರಿ ಆತಂಕ ಮೂಡಿಸಲಿಲ್ಲ. ಮೆಟ್ಟುಪಾಳ್ಯಮ್ ಸಮೀಪಿಸುತ್ತಿದ್ದಂತೆ ಎದುರು ಬಾನ ಭಿತ್ತಿಯಲ್ಲಿ ಮೂಡಿದ ಹೊಸಚಿತ್ರ ನೀಲಗಿರಿ ಶ್ರೇಣಿಗಳು.

ಉತ್ತರಕ್ಕೆ ಗುಜರಾತ್, ಮಹಾರಾಷ್ಟ್ರದಿಂದ ಸಪುರಕ್ಕೆ ತೊಡಗಿದ ಪಶ್ಚಿಮಘಟ್ಟ ದಕ್ಷಿಣದ ಕೊನೆಗಾಗುವಾಗ, ಅಂದರೆ ತಮಿಳ್ನಾಡು, ಕೇರಳಗಳಲ್ಲಿ ತನ್ನ ಹರಹನ್ನು ತುಂಬಾ ಹೆಚ್ಚಿಸಿಕೊಂಡಿದೆ. ಈ ವಿಸ್ತಾರದಲ್ಲೂ ಪಾಲಕ್ಕಾಡಿನ ಬಳಿ ಒಮ್ಮೆಗೆ ಘಟ್ಟ ಮಾಲೆ ಸುಮಾರು ಮೂವತ್ತು ಕಿಮೀ ಅಂತರದಷ್ಟು ಸಾತತ್ಯವನ್ನೇ ಕಡಿದುಕೊಂಡಿದೆ. ಆ ಸಂದಿನಲ್ಲಿ ಹೆಚ್ಚು ಕಡಿಮೆ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಯೆಡೆಗೆ ಮಟ್ಟಸ ನೆಲ ಉಳಿಸಿರುವುದು (ಸಮುದ್ರ ಮಟ್ಟದಿಂದ ಸರಾಸರಿ ಔನ್ನತ್ಯ ೪೫೦ ಅಡಿ ಮಾತ್ರ) ದೊಡ್ಡ ಪ್ರಾಕೃತಿಕ ಚೋದ್ಯ. ಇದನ್ನು ಪಾಲಕ್ಕಾಡ್ ಗ್ಯಾಪ್ ಎಂದೇ ಗುರುತಿಸುತ್ತಾರೆ. ಈ ಸಂದು ಒಳನಾಡಿನತ್ತ ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. ಇದರ ಹೆಚ್ಚು ಕಡಿಮೆ ಗರಿಷ್ಠ ಒಳಕೊನೆಗಳ ಸ್ಥಾನದಲ್ಲಿ ದಕ್ಷಿಣಕ್ಕೆ ಕೊಡೈಕೆನಾಲಿದ್ದರೆ ಉತ್ತರದ ಕೊನೆ ನೀಲಗಿರಿ ಪರ್ವತಗಳು. ಅಲ್ಲಿನ ಮೂವತ್ತು ಕಿಮೀ ಅಂತರ ಇಲ್ಲಿ ಸುಮಾರು ಇನ್ನೂರು ಕಿಮೀ ಆಗಿದೆ. ಮೆಟ್ಟುಪಾಳ್ಯಮ್ ಎಂದರೆ ನೀಲಗಿರಿ ಶ್ರೇಣಿಗೇರುವವರಿಗೆ ಮೆಟ್ಟುಗಲ್ಲೇ ಸರಿ ಎಂದು ಕೇಳಿದ್ದೆವು. “ಹೊಟ್ಟೆ ಗಟ್ಟಿಯಿಲ್ಲದೆ ಘಟ್ಟ ಎದುರಿಸಬೇಡಎಂಬ ಆರ್ಷ ವಾಕ್ಯವನ್ನು ಮನನ ಮಾಡುತ್ತ ನಾವು ಹೋಟೆಲ್ ಹೊಕ್ಕೆವು.


ನೀಲಗಿರಿ ಪರ್ವತಗಳ ಕೇಂದ್ರವೆಂದರೆ ಉದಕಮಂಡಲ ಅಥವಾ ಊಟಿ. ಹಿಮಾಲಯದಲ್ಲಿ ಜಲಪೈಗುರಿಯಿಂದ ಡಾರ್ಜಿಲಿಂಗಿಗೇರುವ ನ್ಯಾರೋಗೇಜ್ ರೈಲಿನಂತೆ ಇಲ್ಲೂ ಒಂದು ಪುಟಾಣಿ ರೈಲು ಮೆಟ್ಟುಪಾಳ್ಯ ಊಟಿಗಳ ನಡುವಣ ನಲ್ವತ್ತು ಕಿಮೀ ಓಡುತ್ತದೆ ಮತ್ತು ಬಹಳ ಜನಪ್ರಿಯವೂ ಇದೆ. ಆದರೆ ಬರಿಯ ಒಮ್ಮುಖ ಓಟಕ್ಕೆ ಅದು  ಸುಮಾರು ಐದು ಗಂಟೆಯನ್ನೇ ಕಳೆಯುತ್ತದೆ, ಎಂದು ನಾವದನ್ನು ಒಪ್ಪಿಕೊಳ್ಳಲಿಲ್ಲ. ಈ ಪರ್ವತಾಗ್ರ ವಲಯ (ಕೋಡಿಯಂತಲ್ಲದೆ) ಕೂನೂರು, ಕೋತಗೇರಿ ಎಂಬ ಇನ್ನೆರಡು ಮುಖ್ಯ ಪೇಟೆಗಳೊಡನೆ ಸಾಕಷ್ಟು ವಿಸ್ತಾರವಾಗಿಯೂ ಇದೆ. ನಮ್ಮ ಪ್ರವಾಸದ ಮೊದಲ ಹಂತದಲ್ಲೇ (ತ್ರಿಚೂರು) ಹೇಳಿದಂತೆ, ಇಲ್ಲಿ ಗೆಳೆಯ ಬಿಕೆ ವರ್ಮ ಕೋತಗೇರಿಯ ತನ್ನ ಭವ್ಯ `ತಿರುವಾಂಕೂರು ಮನೆಯಲ್ಲಿ ನಮ್ಮನ್ನು ಕಾದಿದ್ದರು. ಆತ ಆ ವಲಯದ ನಮ್ಮೆಲ್ಲ ಅಗತ್ಯಗಳನ್ನು ಪೂರೈಸಲು ವರ್ಮರಿಗೆ ಮುಂದಾಗಿ ಸೂಚಿಸಿದ್ದಲ್ಲದೆ, ಕಲಾಪಪಟ್ಟಿಯನ್ನು ಕೋತಗೇರಿ ಕೇಂದ್ರವಾಗಿ ರೂಪಿಸಲೂ ಕೇಳಿಕೊಂಡಿದ್ದೆ. ಹಾಗಾಗಿ ಮೆಟ್ಟುಪಾಳ್ಯದಿಂದ  ತುಸು ಮೇಲೇರುವಲ್ಲೇ ನಾವು ಕೂನೂರುಊಟಿಯ ಮುಖ್ಯದಾರಿ ಬಿಟ್ಟು, ಬಲಗವಲು ಹಿಡಿದೆವು. ಈ ಘಟ್ಟ ದಾರಿ ಕಳೆದೇಳು ದಿನಗಳಲ್ಲಿ ನಾವು ಕಾಣದ ಹೊಸ ಅನುಭವವೇನೂ ಕೊಡಲಿಲ್ಲ.

ವಾತಾವರಣದ ದೃಷ್ಟಿಯಿಂದ ಕೋಡಿ-ಪಳನಿ ದಾರಿಯ ಅನುಭವ ಇಲ್ಲಿ ತಿರುಗಾ ಮುರುಗಾ (ಮುರುಘಾ ಅಲ್ಲ!). ಘಟ್ಟ ಏರೇರುತ್ತಾ ಸೂರ್ಯ ತನ್ನ ಬಿರುಗಣ್ಣಿಗೆ ತಂಪುಗನ್ನಡಿ ಹಾಕಿದಂತಾಯ್ತು! ಹಾಗೇ ಸುಮಾರು ದಾರಿ ಸವೆಸಿದ ಮೇಲೆ ಸಿಕ್ಕ ಪಳನಿ ದಾರಿಯಂತೆ ಇಲ್ಲೂ ಕಣ್ಣೋಟಕ್ಕೆಮೆಟ್ಟುಪಾಳ್ಯಮ್ ನೋಡಿಎನ್ನುವ ಬೋರ್ಡು ಸಿಕ್ಕಿತು. ಕಷ್ಟದಲ್ಲಿ ಬಾಳೆಬೆಳೆಯನ್ನು ಕಾಣಿಸಿದ ಕೋಡಿಯ ಉತ್ತರಮೈ ವಿಸ್ತಾರವಿದ್ದಂತಿಲ್ಲ. ಅದೇ ನೀಲಗಿರಿ ಶ್ರೇಣಿಯ ವಿಸ್ತಾರಕ್ಕೆ ತಕ್ಕಂತೆ ಇಲ್ಲಿ ಚಾ ತೋಟ ನಳನಳಿಸುತ್ತಿತ್ತು. ಅಪರಾಹ್ನ ಎರಡು ಗಂಟೆಯ ಸುಮಾರಿಗೆ ಕೋತಗೇರಿಯ ಮಿತ್ರನ ಮನೆ ಸೇರಿದೆವು.

`ಟ್ರಾವಾಂಕೂರ್ ಹೌಸ್ಬ್ರಿಟಿಷರ ಕಾಲದ ಭಾರೀ ವಠಾರದೊಳಗಿನ ದೊಡ್ಡ ಬಂಗ್ಲೆ. ಹಳಗಾಲದ ವಾಸ್ತವಿಕ ವಾಸ್ತುವಿನಂತೆ ಮಳೆಗಾಳಿಯಿಂದ ರಕ್ಷಿಸುವ, ಚಳಿಯಿಂದ ಬೆಚ್ಚಗಿಡುವ ಭವ್ಯ ರಚನೆ. ವರ್ಮ ತನ್ನ ವಿಸ್ತಾರ ಓದು,  ವಿಚಿತ್ರ ಆಸಕ್ತಿಗನುಸಾರವಾಗಿ ಮಡದಿ ಶೋಭಾ ಮತ್ತು ಪುಟ್ಟ ಮಗಳು ಸ್ಯಾಲಿಯೊಡನೆ ಆ ಮನೆಯನ್ನು ಮುದದಿಂದ ವ್ಯಾಪಿಸಿದ್ದರು! ಬ್ರಿಟಿಶ್ ಸಾಮ್ರಾಜ್ಯಶಾಹಿಯ ಭವ್ಯತೆ, ತಿರುವಾಂಕೂರು ರಾಜತ್ವದ ಸ್ಪರ್ಷ, ಗೆಳೆತನದ ಬಿಸುಪು, ವೈಯಕ್ತಿಕ ಆಸಕ್ತಿಯ ಓದಿನ ಫಲ, ಬಾಲಕೃಷ್ಣ ವರ್ಮರ ಸೃಜನಶೀಲ ಬುದ್ಧಿಯ ಬಲ ಸೇರಿ ನಮ್ಮ ಅಲ್ಲಿನ ಊಟ, ವಾಸ, ತಿರುಗಾಟಗಳೆಲ್ಲ ನಿಸ್ಸಂದೇಹವಾಗಿ ಮಧುರ ಅನುಭವಗಳು. ಆದರೆ ಅಂದು೧೯೯೦, ಅಂದರೆ ಚಕ್ರವರ್ತಿಗಳು ಪ್ರಕಟವಾದ ಕಾಲಕ್ಕೆ, ಮುದ್ರಣ ಮಾಧ್ಯಮದಲ್ಲಿ ನಾನು ಹಾಕಿಕೊಂಡ ಔಚಿತ್ಯ ಬಂಧಗಳು ತುಸು ಬಿಗಿಯಾಗಿದ್ದುದರಿಂದ ವಿವರಗಳನ್ನು ಪುಸ್ತಕದಲ್ಲಿ ಕಾಣಿಸದಾದೆ. ಇಂದು೨೦೧೫, ಅಂದರೆ ಈ ಹೊಸ ಮಾಧ್ಯಮದ (ವಿದ್ಯುನ್ಮಾನ ಪ್ರಕಟಣೆ) ಮುಕ್ತತೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುವ ಉತ್ಸಾಹದಲ್ಲಿ ಅವನ್ನು ವಿಸ್ತರಿಸಿ ಮರುಜೀವಿಸಲು ಪ್ರಯತ್ನಿಸುವಾಗ ವಿವರಗಳು ಕಲಸಿಹೋಗುತ್ತಿವೆ. ಕಾಲಾಯ ತಸ್ಮೈ ನಮಃ!

ಕ್ಯಾಥರೀನ್: ವಿಶ್ರಾಂತಿ ಎನ್ನುವುದು ಎಷ್ಟೋ ಬಾರಿ ಕೇವಲ ಮನಃಸ್ಥಿತಿ. ದೀರ್ಘ ಬೈಕ್ ಸವಾರಿಯ ಏಕತಾನತೆಯನ್ನು ಸ್ಥಳವೀಕ್ಷಣೆಯ ಬದಲಿ ಕೆಲಸದಲ್ಲಿ ಕಳೆದುಕೊಳ್ಳುವಂತೆ ಅಂದೇ ಅಪರಾಹ್ನ ನಮ್ಮ ಸವಾರಿ ಹೊರಟಿತು. ಕೋತಗೇರಿಯಿಂದ ಸುಮಾರು ೬ ಕಿಮೀ ದೂರದ ಒಂದು ಜಲಪಾತ - ಕ್ಯಾಥರೀನ್. ಕಳ್ಳರ್ ನದಿಯ ಒಂದು ತೊರೆ `ಗೆದ್ದೆಹಾದ ಹಳ್ಳ’, ಸುಮಾರು ಇನ್ನೂರೈವತ್ತು ಅಡಿಗಳ ಕಣಿವೆಗೆ ಧುಮುಕುವ ಚಂದ ಇಲ್ಲಿದೆ. ಬ್ರಿಟಿಷ್ ಕಾಲದಲ್ಲಿ ನೀಲಗಿರಿ ವಲಯಕ್ಕೆ ಕಾಫಿ ಗಿಡಗಳನ್ನು ಪರಿಚಯಿಸಿದ ಅಧಿಕಾರಿಯೋರ್ವನ ಪತ್ನಿಯ ಗೌರವಕ್ಕೆ ಇದು ಅಧಿಕೃತ ದಾಖಲೆಗಳಲ್ಲಿ ಕ್ಯಾಥರೀನ್ ಅಬ್ಬಿಯಾಗಿದೆ. ಇದರ ಸಮಗ್ರ ದರ್ಶನಕ್ಕೆ ದೂರದ ಡಾಲ್ಫಿನ್ ನೋಸ್ ವೀಕ್ಷಣಾ ಕಟ್ಟೆ ಪ್ರಶಸ್ತವಂತೆ. ಆದರೆ ಸಮೀಪ ದರ್ಶನದ, ಸುಲಭದಲ್ಲಿ ದಕ್ಕುವುದಿದ್ದರೆ ನಖಶಿಖಾಂತ ಓಡಾಡಿ ನೋಡುವ, ಅನುಕೂಲವಿದ್ದರೆ ತಲೆಕೊಟ್ಟು ಮಿಂದೂ ಅನುಭವಿಸುವ ಉತ್ಸಾಹ ನಮ್ಮದು. ವರ್ಮರ ಕುಟುಂಬ ಬುಲೆಟ್ ಬೈಕಿನಲ್ಲಿ ಮಾರ್ಗದರ್ಶನ ಮಾಡಿದಂತೆ ನಾವು ಚಾ ತೋಟ ಒಂದರ ಒಳಗೆ ಈ ಹೊಳೆಯ `ವಿಹಾರದ ಜಾಡನ್ನು ಹಿಡಿದೆವು. ಜಲಧಾರೆಯನ್ನು ಬೈಕೇರಿ ಅನುಸರಿಸಲು ಅಸಾಧ್ಯವಾದಲ್ಲಿಗೆ ಬೈಕ್ ಬಿಟ್ಟು ಸ್ವಲ್ಪದೂರ ಸವಕಲು ಜಾಡನ್ನೂ ಅನುಸರಿಸಿದೆವು. ಮತ್ತೆ ಹೊಳೆ ಕಂದರಕ್ಕುರುಳುವ ಸನ್ನಿವೇಶ, ಮೇಲುಳಿವ ನಮ್ಮನದು ದಟ್ಟ ಕಾನನದಲ್ಲಿ ಕಣ್ಣು ತಪ್ಪಿಸುವ ವಿವರಗಳನ್ನೆಲ್ಲ ಕುತೂಹಲದಲ್ಲೇ ವೀಕ್ಷಿಸಿದೆವು. ಋತುಮಾನದ ನಿಯತಿಯಂತೆ ಬೆಟ್ಟದ ಮೇಲಿನ ಕಲ್ಲುಗಿಡಿದ ಪಾತ್ರೆಯಲ್ಲಿ ಅದು ಹರಿದು ಬರುವಾಗಿನ ಮೊರೆತ, ಸೀರ್ಪನಿ ಗಾಳಿಗಳ ಸಂಚಲನ, ಒಲಿದು ನಲಿವ ಹೆಚ್ಚಿನ ಹಸುರಿನ ವೈಭವ, ಪಾತಾಳಕ್ಕದು ಕೆಡೆದು ಅಬ್ಬರಿಸುವ ಪರಿ, ಅಲ್ಲೂ ನೊರೆಯುಗುಳಿ ಕಾರುವ ನೀರಹೊಗೆಗಳನ್ನೆಲ್ಲ ನಾವು ಕೇವಲ ಬಗೆಗಣ್ಣುಗಳಲ್ಲಷ್ಟೇ ಅನುಭವಿಸಬೇಕಾಯ್ತು! ಬೇಸಗೆಯ ಬವಣೆ, ಮಳೆಯ ಕೊರತೆಗಳಲ್ಲಿ ನದಿ ಸೊರಗಿ, ಧಾರೆ ಮುಲುಕುತ್ತ ಬಂದು, ಸುಂಯ್ಗುಟ್ಟಿ ಬಿದ್ದು, ಕಲ್ಲುಗುಂಡುಗಳ ಎಡೆಯಲ್ಲಿ ನಾಚಿ ಮರೆಯಾಗುತ್ತಿತ್ತು. (ಅಂತರ್ಜಾಲದಲ್ಲಿರುವ ಇದರ ಎಷ್ಟು ಚಿತ್ರಗಳಲ್ಲೊಂದನ್ನು ಇಲ್ಲಿ ಉದ್ಧರಿಸಿದ್ದೇನೆ. ಇದು ನಮ್ಮ ಆಗುಂಬೆ ತಪ್ಪಲಿನ ಬರ್ಕಣ ಅಬ್ಬಿಯನ್ನೇ ಹೋಲುತ್ತದೆ.)


ರಂಗನಾಥ ಸ್ತಂಭ:
ನನ್ನ ಶಿಲಾರೋಹಣದ ಮಾತೃ ಸಂಸ್ಥೆ ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆ. ನಾನು ಮೈಸೂರು ಬಿಟ್ಟು, ವೃತ್ತಿಪರವಾಗಿ ಮಂಗಳೂರಿನಲ್ಲಿ ನೆಲೆಸಿದ ಹೊಸತರಲ್ಲೇ ಅದು ಊಟಿಯಲ್ಲಿನ ಒಂದು ಅಗಾಧ ಕೋಡುಗಲ್ಲುರಂಗನಾಥಸ್ತಂಭ, ಅದನ್ನು ಏರಿದ ಸಾಹಸದ ಕತೆ ನನ್ನ ಮನೋಭಿತ್ತಿಯಲ್ಲಿ ಗಾಢವಾಗಿತ್ತು. ಅದರಲ್ಲಿ ಶಿಖರ ಸಾಧಿಸಿದ ಎರಡೇ ಸದಸ್ಯರಲ್ಲಿ ನನ್ನ ತಮ್ಮ ಆನಂದನೂ ಒಬ್ಬನೆಂದ ಮೇಲೆ ನನ್ನಲ್ಲಿ ಹೆಮ್ಮೆಯಷ್ಟೇ ಈರ್ಷ್ಯೆಮೂಲದ ಜಿದ್ದು (–ನಾನೇನು ಕಡಿಮೆ?) ಬೆಳೆದದ್ದಿರಬೇಕು. ಈ ದಕ್ಷಿಣ ಭಾರತದ ಬೈಕ್ ಯಾನದ ನಕ್ಷೆ ಎಳೆಯುವ ಕಾಲಕ್ಕೆ ಸರಿಯಾಗಿ (೧೪-೧೨-೧೯೮೬) ಮತ್ತದರ ಕುರಿತು ಪ್ರಜಾವಾಣಿ ಸಾಪ್ತಾಹಿಕದಲ್ಲೊಂದು ಲೇಖನವೂ ಬಂದು ನನ್ನ ನೆನಪನ್ನು ಹಸುರಾಗಿಸಿತ್ತು. ಹಾಗಾಗಿ ಕೋತಗೇರಿಯ ಎರಡನೇ ದಿನದ ಮುಖ್ಯ ಕಾರ್ಯಕ್ರಮವೇ ರಂಗನಾಥ ಸ್ತಂಭ.

ಕೀಲುಕೋತಗೇರಿ ಎಂಬ ಹಳ್ಳಿಗೆ ಬೈಕ್ ಸವಾರಿ. ಕೋತ ಜನಾಂಗದವರು ಮೂಲತಃ ಕನ್ನಡಿಗರೇ ಆದರೂ ಭಾಷಾವಾರು ವಿಂಗಡಣೆಯಲ್ಲಿ ಊಟಿ ತಮಿಳ್ನಾಡಿಗೆ ಸೇರಿಹೋದರು. ಮತ್ತೆ ರಾಜ್ಯಭಾಷೆಯ ಒತ್ತಡದಲ್ಲಿ ತಮಿಳು ಮೆರೆಯುವುದಕ್ಕೆ ಸರಿಯಾಗಿ ಇವರೂ ಸಾರ್ವಜನಿಕದಲ್ಲಿ ಕನ್ನಡ ಮರೆಯುತ್ತಿದ್ದಾರೆ. ಆದರೆ ವರ್ಮ ಅಲ್ಲಿನ ಕೂಲಿಯಾಳುಗಳಲ್ಲಿ ಒಬ್ಬನನ್ನು ಮಾರ್ಗದರ್ಶಿಯಾಗಿ ಒಪ್ಪಿಸುವಲ್ಲಿ ಯಶಸ್ವಿಯಾದರು. ಆತ ಸ್ವಲ್ಪ ಟೀ ತೋಟಗಳ ನಡುವೆ, ಅನಂತರ ಒಂದೆರಡು ಬೋಳುಗುಡ್ಡೆಯ ಸವಕಲು ಜಾಡುಗಳಲ್ಲಿ ನಮ್ಮನ್ನು ನಡೆಸಿ ಮಹಾ ಬಂಡೆಯ ಸಾನ್ನಿಧ್ಯಕ್ಕೆ ಒಯ್ದ.

ಎದುರು ಆಳದ ಕಣಿವೆ. ಅದರ ನಮ್ಮ ಅಂಚಿನಲ್ಲೇ ಹುದುಗಿಯೂ ತುಸು ಬೇರ್ಪಟ್ಟು ನಿಂತಿದೆ ರಂಗನಾಥ ಸ್ತಂಭ. ಅದರ ನೆತ್ತಿ ನಾವು ನಿಂತ ನೆಲಕ್ಕೂ ಹೆಚ್ಚು ಎತ್ತರದಿಂದ ಮೇಘ ಸಂದೇಶ ಬಿತ್ತರಿಸುವಂತಿತ್ತು. ಅದರ ಕಾವ್ಯಾಲಾಪ ಕೇಳಲು, ನೆತ್ತಿ ಅಡರಲು ನಾವು ಸಜ್ಜಾದೆವು. ಅಲ್ಲಿವರೆಗೆ ನಮಗೆ ಜೊತೆ ಕೊಟ್ಟಿದ್ದ ವರ್ಮರ ಕುಟುಂಬ ಆ ಮಹಾಶಿಲೆಯ ದರ್ಶನ ಮಾತ್ರದಿಂದ ಕೃತಾರ್ಥರಾಗಿದ್ದರು. ಏರುವ ಪ್ರಯತ್ನ ಮಾಡುವ ಮಾತನ್ನೂ ಆಡದೆ ಹಿಂದುಳಿದು, ನಮ್ಮ ವಿಜಯ ಪತಾಕೆ ಶಿಖರದಲ್ಲಿ ಹಾರುವುದನ್ನು ಅಲ್ಲೇ ಕಾದು, ಕಂಡು, ಅಭಿನಂದನೆ ಹೇಳಲು ಕುಳಿತರು. ಹಿಮಶಿಖರಗಳ ಕುರಿತಂತೆ ದಿನಗಟ್ಟಳೆ ನಡೆಯುವ ಮಹಾಸಾಹಸ ಯಾನಗಳ ಭಾಷೆಯಲ್ಲಿ ಹೇಳುವುದಾದರೆ ವರ್ಮರ ಕುಟುಂಬ ತಳಶಿಬಿರಾಧಿಪತ್ಯ ನಡೆಸಿತು.

ಸ್ತಂಭ ನಮ್ಮ ಬೆಟ್ಟದ್ದೇ ಭಾಗ. ಅಂದರೆ ಇತ್ತಣಿಂದ ಕಡಿದಾದ ಸಡಿಲ ಮಣ್ಣು, ಬಂಡೆ, ಮುಳ್ಳು, ಬಳ್ಳಿಗಳನ್ನು ಬಿಡಿಸಿಕೊಂಡು ಇಳಿದರೆ ನೂರಿನ್ನೂರು ಮೀಟರ್ ಆಳದಲ್ಲೆಲ್ಲೋ ಅದನ್ನು ಸಂಪರ್ಕಿಸಬಹುದಿತ್ತು. ಅದರ ಇನ್ನೊಂದೇ ಮೈ ಭವಾನಿ ನದಿಗೆ  ತೆರೆದುಕೊಂಡದ್ದರ ಬುಡ ಅಗೋಚರಆರ್ನೂರು ಏಳ್ನೂರು ಮೀಟರ್ ಆಳದಲ್ಲೇ ಇದ್ದಿರಬೇಕು. (ಎರಡು ಸಾವಿರ ಅಡಿ ಎಂದು ದಖ್ಖಣ ಪರ್ವತಾರೋಹಣ ಸಂಸ್ಥೆ ಅಂದಾಜಿಸಿತ್ತು.) ನಾವು ಆದಷ್ಟು ಅಪಾಯಕಾರಿ ಮಣ್ಣದರೆ, ಬಂಡೆಗಳನ್ನು ನಿವಾರಿಸಿ ಮುಳ್ಳು ಕಡಿದು, ಪೊದರು ನುರಿದು ಕೆಳಗಿಳಿದೆವು. ಬಂಡೆ ಮುಟ್ಟಿದ್ದೇ ಸಿಕ್ಕ ಕೊರಕಲಲ್ಲಿ ಅರವಿಂದ, ಬಾಲಕೃಷ್ಣ ಹತ್ತತೊಡಗಿದರು. ಇಷ್ಟರಲ್ಲೇ ಮಾರ್ಗದರ್ಶಿ ಮಹಾ ಕುಡುಕ, ವಾಚಾಳಿ, ಅನಿವಾರ್ಯತೆಯ ಶ್ರಮಜೀವಿಯೇ ಹೊರತು ಬಂಡೆ ಏರುವ ಉಮೇದಿನವನಲ್ಲ ಎಂದು ನಮಗೆ ಅರಿವಾಗಿತ್ತು. ಆದರೂ ಅವನ ಮುಂದಾಳ್ತನದಲ್ಲಿ ನಾನು ದೇವಕಿ ಬಂಡೆ ಏರಲು ಇನ್ನೂ ಏನಾದರೂ ಸುಲಭ ಸಾಧ್ಯತೆ ಇದೆಯೇ ಎಂದು ಶೋಧ ನಡೆಸಿದೆವು. ಬಂಡೆಯ ವಿಸ್ತಾರ ತಳದ ಎರಡೂ ಪಕ್ಕಗಳಲ್ಲಿ ಸವಕಲು ಜಾಡಿತ್ತು. ನಾವು ಬಲದ್ದನ್ನು ಅನುಸರಿಸಿದೆವು. ಸಡಿಲ ಮಣ್ಣು ಕಲ್ಲು, ತರಗೆಲೆ ರಾಶಿ, ಜಾಡು ಜಾರುಗುಪ್ಪೆ. ಬಳ್ಳಿ ಬೇರುಗಳ ಆಧಾರ ಇಟ್ಟುಕೊಂಡೇ ಜಾರುತ್ತ ಇಳಿದೆವು. ಸುಮಾರು ೬೦ ಮೀಟರ್ ಸರಿದರೂ ಹೊಸ ಆಶಯಗಳೇನೂ ಕಾಣಲಿಲ್ಲ. ಬದಲಿಗೆ, ಎದುರಿನ ಹಸುರಿನೆಡೆಯಿಂದ ಸಿಕ್ಕ ಅಸಾಮಾನ್ಯ ಕೊಳ್ಳದ ಇಣುಕು ನೋಟ ನಮ್ಮನ್ನು ಹಿಂತಳ್ಳಿತು. ಅರವಿಂದ ಬಾಲರು ಹೊರಟ ಸ್ಥಳವನ್ನೇ ಸೇರಿಕೊಂಡೆವು.

ಅರವಿಂದ ಬಾಲಕೃಷ್ಣ ತೋರಬಳ್ಳಿ ತುಳಿದು, ಬಂಡೆ ಚಪ್ಪಡಿಗಳ ಅಂಚು ಹಿಡಿದು ಸ್ತಂಭದ ಮೈ ಅಡರಿದ್ದರು. ಮೊದಲು ಎಡಕ್ಕೆ ಸರಿದು ನೋಡಿದ್ದರು. ಅಲ್ಲಿ ಸ್ವಲ್ಪ ಮೇಲೆ ಅವಕಾಶ ಮುಗಿದಂತಿತ್ತು. ಹತ್ತು ಹೆಜ್ಜೆ ಹಿಂದೆ ಸರಿದು ಬಲಕ್ಕೆ ನೇರ ಮೇಲೇರುವ ನೀರ ಜಾಡು  ಅನುಸರಿಸಿದರು. ಸುಮಾರು ೧೮೦ ಮೀಟರ್ ಕಳೆದ ಮೇಲೆ ತೆಳು ಮಣ್ಣು ಹರಡಿದ ಸ್ವಲ್ಪ ಮಟ್ಟಸ ನೆಲ ಸಿಕ್ಕಿತು. ಅಲ್ಲಿನ ಕುರುಚಲು, ಹುಲ್ಲಿನ ನಡುವೆ ಎಚ್ಚರದಲ್ಲಿ ಜಾಡು ಬಿಡಿಸಿಕೊಂಡು ನಡೆದರು. ಈಗ ಮೋಟು ಗೋಡೆಯಂಥ ಬಂಡೆಯಿಂದ ಅಡ್ಡಿ. ಪರಸ್ಪರ ಎತ್ತಿ, ಎಳೆದು ಅದನ್ನುತ್ತರಿಸಿದರು. ಮತ್ತೂ ಮುಂದುವರಿಯುವ ಮುನ್ನ ನಮ್ಮನ್ನು ಕಾದು ಕುಳಿತರು.

ನಾವಾದರೋ ಆಗಷ್ಟೇ ಅವರ ಆರಂಭ ಬಿಂದು ತಲಪಿದ್ದೆವು. ಬಳ್ಳಿಯ ಆಸರೆ, ಬಂಡೆಯ ಹಿಡಿಕೆ, ನೀರಜಾಡಿನ ಅನುಸರಣೆ ಎಲ್ಲ ನಮಗೂ ಒದಗಿತು. ಆದರೆ ಅದುವರೆಗೆ ಮರೆಯಾಗಿದ್ದ ಕೊಳ್ಳದ ದೃಶ್ಯ ಒಮ್ಮೆಗೆ ತೆರೆದುಕೊಂಡಾಗ ದೇವಕಿಗೆ ಭಯ ಕಾಡಿತು. `ಆಳದ ಭಯ’, ಇಂಗ್ಲಿಷಿನಲ್ಲಿ ಹೇಳುವಂತೆ ವರ್ಟಿಗೋ ಕೆಲವರಿಗೆ ಪ್ರಕೃತಿ ಸಹಜವಾದದ್ದು, ಬುದ್ಧಿಯ ನಿಯಂತ್ರಣ ಮೀರಿದ್ದು. ದೇವಕಿಯನ್ನು ಹಿಂದುಳಿಸಿ ನಾನು ಮುಂದುವರಿಯುವುದಕ್ಕೆ ಮಾರ್ಗದರ್ಶಿಯೇ ಕಂಟಕನಾಗಿ ಕಾಣಿಸಿದ. ಅದುವರೆಗಿನ ವರ್ತನೆಯಲ್ಲಿ ಶುಭಗನಾಗಿ ಕಾಣದ, ಮಹಾಕುಡುಕನೊಡನೆ ದೇವಕಿಯನ್ನು ಕಗ್ಗಾಡ ಕೊಳ್ಳದಲ್ಲಿ ಅನಿರ್ದಿಷ್ಟ ಸಮಯಕ್ಕೆ ಬಿಡುವುದು ಸರಿಕಾಣದೆ ನಾನೂ ಹಿಂದುಳಿದೆ. ಅರವಿಂದ ಬಾಲರನ್ನು ಕೂಗಿನಲ್ಲೇ ಮುಂದುವರಿಯಲು ಸೂಚಿಸಿ, ಶುಭ ಹಾರೈಕೆಗಳನ್ನು ಮನದಲ್ಲಿಟ್ಟುಕೊಂಡು ಅಲ್ಲೇ ಕಾದು ಕುಳಿತೆವು.

ಆರೋಹಿಗಳು ಬಲಕ್ಕೆ ಸರಿಯುತ್ತ ನೇರ ಭವಾನಿ ಕೊಳ್ಳದ ಮೇಲೆ ಬಂದರು. ಇತ್ತ ನೂರಾರು ಮೀಟರ್ ಆಳದ ಕಮರಿ, ಅತ್ತ ಹತ್ತಿದಷ್ಟು ಲಂಬಿಸುವ ಶುದ್ಧ ಬಂಡೆಗೋಡೆ! ತಳವಿಲ್ಲದ ಆಳದಿಂದ ಕೊಡಿಯಿಲ್ಲದ ಎತ್ತರಕ್ಕೇರುವ ಅನುಭವ. ಅಲ್ಲಿ ಅವರ ಅನುಕೂಲಕ್ಕೆ ಭಾರೀ ಬಂಡೆ ಸೀಳೊಂದು ಕಾಣಿಸಿತು. ೯೦-೧೦೦ ಸೆಮೀ ಅಗಲದ ಆ ಸಂದು ಕಾರ್ಖಾನೆ ಚಿಮಣಿಯೊಳಗಿನ
ರಚನೆಯನ್ನೇ ಹೋಲುತ್ತಿತ್ತು. (ಹಾಗಾಗಿ ಶಿಲಾರೋಹಣದ ಪರಿಭಾಷೆಯಲ್ಲಿ ಅದನ್ನು ಚಿಮಣಿ ಎಂದೇ ಗುರುತಿಸುತ್ತಾರೆ. ಅದನ್ನೇರುವ ವಿಶಿಷ್ಟ ಕ್ರಮಚಿಮಣಿ ಕ್ಲೈಂಬಿಂಗ್.) ಇಂಥ ಮೂರು ಚಿಮಣಿಯನ್ನು ಸರಣಿಯಲ್ಲಿ ಹತ್ತಿ ತಲುಪಿದರು ನೆತ್ತಿ. ಸಾಧಕನಿಗೆ ಪ್ರಕೃತಿ ಉದಾರಿ. ಕೃತಕ ಪರಿಸರದಲ್ಲಿ ಕುಳಿತು ಬರಿದೆ ಪೂಜಿಸುವವನಿಗೋ ಬೈದು ಭಂಗಿಸುವವನಿಗೋ ರಂಗನಾಥ ಸ್ತಂಭ ಬರಿಯ ಭ್ರಮೆ. ಅವರಿವರ ಮಾತನ್ನೇ ಸಂಗ್ರಹಿಸಿ ತಮ್ಮ ಪುಕ್ಕಲನ್ನೋ ಸೋಮಾರಿತನವನ್ನೋ ಸಾಮಾನ್ಯೀಕರಿಸುವವರಿಗೆ ರಂಗನಾಥ ಸ್ತಂಭದ ನೆತ್ತಿ ಆರು ಮೀಟರ್ ಉದ್ದಗಲದ ಒರಟು, ಬರಡು ಬಂಡೆ. ಎತ್ತರದ ಸಾಧನೆ ಮತ್ತು ಅಲ್ಲಿಂದ ಸಿಕ್ಕುವ ವಿಸ್ತೃತ ಲೋಕದೃಶ್ಯ ಕಂಡವ ಇವೆಲ್ಲವನ್ನೂ ಮರೆತು ಆನಂದಲೋಕದಲ್ಲಿ ವಿಹರಿಸುತ್ತಾನೆ. ಕೇಳಿಲ್ಲವೇ ಮಾತುಬಲ್ಲವನೇ ಬಲ್ಲ ಬೆಲ್ಲದ ಸವಿಯ, ಬೆಟ್ಟದ ಮೇಲಿಂದ ಕಾಣುವ ಭುವಿಯ ಸೊಬಗ! (ರಂಗನಾಥ ಸ್ತಂಭ ವಿಜಯ - ಏಳು ಕಂತುಗಳ ವಿಸ್ತೃತ ಕಥನದ ಓದಿನ ನಾಂದಿಗೆ ಹೊಡೆಯಿರಿ ಇಲ್ಲಿ ಚಿಟಿಕೆ.)


ಹತ್ತಲು ಒಂದು ಗಂಟೆ ಇಪ್ಪತ್ತು ಮಿನಿಟುತಿರುಗಿ ನಮ್ಮನ್ನು ಸೇರಲು ಕೇವಲ ಇಪ್ಪತ್ತು ಮಿನಿಟು. ನ್ಯೂಟನ್ ಮಹಾಶಯನ ಔದಾರ್ಯವನ್ನು ಮನ್ನಿಸುವುದೇ ಒಂದು ಸಾಹಸಗಂಗಾವತರಣ ನೆನೆಸಿಕೊಳ್ಳಿ. ಮತ್ತಿಪ್ಪತ್ತು ಮಿನಿಟುಗಳಲ್ಲಿ ಮೂಲ ಗುಡ್ಡದ ನೆತ್ತಿ. ನಮ್ಮ ವಿಜಯೋತ್ಸವವನ್ನು ಆಗಸ ಕುಶಾಲು ತೋಪುಗಳೋಪಾದಿಯಲ್ಲಿ ಗುಡುಗಿಟ್ಟು, ಹೂವೆರಚಿದಂತೆ ಮಳೆ ಹನಿಸಿ ಆಚರಿಸಿತು. ಹೀಗೆ ಪರೋಕ್ಷವಾಗಿ ಬೆವರು ಬಳಲಿಕೆಗಳನ್ನು ನಾವು ಕಳೆದು ಧನ್ಯಾತ್ಮರಾಗಿ ಬೈಕುಗಳಿಗೆ ಮರಳಿದೆವು.

(ಮುಂದುವರಿಯುವುದು)

No comments:

Post a Comment