01 May 2015

ಸ್ವಚ್ಛ ಭಾರತದಲ್ಲಿ ನಮ್ಮ ಹೊಳೆಗಳಿಲ್ಲವೇ?

(ಇದುವರೆಗಿನ ದೋಣಿಯಾನದ ಟಿಪ್ಪಣಿಗಳ ಮೊದಲ ಸಂಕಲನ)
ಇಂದು ರಸ್ತೆ ನಿರ್ಮಾಣ (ಮತ್ತದಕ್ಕೆ ಬಳಸುವ ಯಂತ್ರ ಸಾಮರ್ಥ್ಯವೂ) ಅದ್ಭುತ ಉನ್ನತಿಯಲ್ಲಿದೆ. ಸಹಜವಾಗಿ ದಿಬ್ಬಗಳು ಮಟ್ಟವಾಗುವುದು, ತಿರುವುಗಳು ನೇರವಾಗುವುದು, ಆಳಗಳು ತುಂಬಿಬರುವುದು, ವಿಸ್ತಾರಗಳು ಸುಲಭಸಂಧಿಸುವುದು, ಕಗ್ಗಲ್ಲು ಕರಗುವುದು, ಜವುಗು ಘನವಾಗುವುದೆಲ್ಲ ಆಗುತ್ತಿದೆ; ಒಳ್ಳೆಯದೇ. ಆದರೆ ಜತೆಗೆ ಸೇವಾನಿವೃತ್ತವಾದ ಹಳೆಯ ಮನುಷ್ಯ ರಚನೆಗಳನ್ನು ಕಳಚಿ ಪ್ರಾಕೃತಿಕ ಶಕ್ತಿಗಳನ್ನು ಗೌರವಿಸುವುದು ತೀರಾ ಅಲಕ್ಷಿತವಾಗಿದೆ. ಹೊಟ್ಟು ತೂತುಬಾವಿಗಳನ್ನು ನಿರ್ಲಕ್ಷಿಸಿ ನಡೆದ ಮಕ್ಕಳ ದುರ್ಮರಣ, ಕಲ್ಲಕೋರೆಗಳನ್ನು ಉಪೇಕ್ಷಿಸಿ ಮುಳುಗಿ ಸತ್ತವರ ಲೆಕ್ಕ, ಶಿಥಿಲ ಕಟ್ಟಡಗಳ ವಾಸಯೋಗ್ಯತೆಯನ್ನು ಒರೆಗೆ ಹಚ್ಚದೆ ನಡೆದ ಜೀವ ಸೊತ್ತು ಹಾನಿ, ದುರ್ಬಲ ಸೇತುಗಳನ್ನು ಮುರಿಬೀಳುವವರೆಗೆ ಬಳಸಿ ಸಂಭವಿಸಿದ ಅಪಘಾತಗಳಾದಿ ನಮಗೆ ಕೊಟ್ಟ ಪಾಠ ಸಾಲದೇ? ಆ ಬೆಳಕಿನಲ್ಲಿ, ನಾನು ಮತ್ತು ದೇವಕಿ ಈಚೆಗೆ ನಡೆಸಿದ ದೋಣಿಯಾನದ (ಕಯಾಕ್) ಅನುಭವಗಳ ಕೆಲವು ಟಿಪ್ಪಣಿಗಳನ್ನು ಇಲ್ಲಿ ಸಂಕಲಿಸಿದ್ದೇನೆ.ಸದ್ಯ ನಮ್ಮದೇ ನೌಕಾಚಲಾವಣೆಯಲ್ಲಿ ಭೇಟಿ ಕೊಟ್ಟಲ್ಲೆಲ್ಲ ಶಿಥಿಲಗೊಂಡ ಹಾಗೂ ಪೂರ್ಣ ನಿರುಪಯುಕ್ತವಾದ ಸೇತುವೆಗಳು, ದೋಣಿಗಟ್ಟೆಗಳು, ದಂಡೆಗೋಡೆಗಳು, ನೀರಾವರಿ ರಚನೆಗಳು ಅಸಂಖ್ಯವಿವೆ. ಇವು ಮಳೆಗಾಲದ ದಿನಗಳಲ್ಲಿ ದಂಡೆ ಕೊರೆಯುವುದಕ್ಕೂ ಕೃತಕ ನೆರೆ ಬರುವುದಕ್ಕೂ ಕಾರಣವಾಗುತ್ತಿವೆ. ಸರಕಾರಗಳು ಒಳನಾಡಿನ ಜಲಸಾರಿಗೆ ಮೂಲಕ ಹೆಚ್ಚು ಪರಿಸರಸ್ನೇಹೀಯಾಗುವ ಮಾತನ್ನು ತೇಲಿಬಿಡುತ್ತಿದೆ. ಒಂದು ಕಾಲದಲ್ಲಿ ಸಾರಿಗೆಯೂ ಸೇರಿದಂತೆ ಮೀನು, ಚಿಪ್ಪು, ಮರಳು ಎಂದೆಲ್ಲಾ ಹೊಳೆಗಳನ್ನು ಅವಲಂಬಿಸಿದ ಬಲು ದೊಡ್ಡ, ಆದರೆ ಅತ್ಯಂತ ಕೆಳಧ್ವನಿಯ ವರ್ಗವಿತ್ತು. ಸೇತುವೆಗಳು ಜಲಸಾರಿಗೆಯನ್ನು ನಿರರ್ಥಕಗೊಳಿಸಿದಂತೆ, ಉಳಿದ ಚಟುವಟಿಕೆಗಳನ್ನೂ ದೊಡ್ಡ ಹಣದ ಉದ್ಯಮಿಗಳು (ಯಂತ್ರಗಳು) ನಿರುತ್ತೇಜನಗೊಳಿಸುತ್ತಲೇ ಬಂದಿದ್ದಾರೆ.
[ಈ ನಿಟ್ಟಿನಲ್ಲಿ ಕೆಲವು ನಿದರ್ಶನಗಳನ್ನು ಹೆಸರಿಸುವುದು ಅಪ್ರಸ್ತುತವಲ್ಲ ಎಂದು ಭಾವಿಸುತ್ತೇನೆ. ಸರಕಾರವೇ ತಾರ್ಕಿಕ ಅನೈತಿಕತೆಯಲ್ಲಿ ಸಗಟು ಖರೀದಿ ಒಪ್ಪಿಕೊಂಡಮೇಲೆ (ಅದರೊಳಗಿನ ವಶೀಲಿ, ಲಂಚ ಪ್ರತ್ಯೇಕ. ನಾನು ಅದರ ಬಗ್ಗೆ ಹೇಳುತ್ತಿಲ್ಲ) ಪುಸ್ತಕ ಆವಶ್ಯಕತೆಯಿಂದ ಉದ್ಯಮದೆಡೆಗೆ ಅಂದರೆ ಪೂರ್ಣ ಹಿಮ್ಮುರಿ ತಿರುವು ತೆಗೆದುಕೊಂಡದ್ದನ್ನು ಮೂವತ್ತಾರು ವರ್ಷಗಳ ಉದ್ದಕ್ಕೆ ಕಾಣುತ್ತಲೇ ಬಂದವನು ನಾನು. ಸಹಜವಾಗಿ ಓದುಗರಿಗೆ ಪುಸ್ತಕ ಮಾರಿ ಬದುಕುತ್ತೇನೆ ಎನ್ನುವ ಉತ್ಸಾಹದಿಂದ ವ್ಯಾಪಾರಕ್ಕಿಳಿದವನು, ಪ್ರಕಾಶನವನ್ನೂ ನಡೆಸಿದವನು. ಆದರಿದಕ್ಕೆ ಹಣಕ್ಕೋಸ್ಕರ `ಹೇಗಾದರು, ಏನಾದರು ಮಾರು’ ಎನ್ನುವ ಸೋಕು ಬಡಿದದ್ದು ಸರಕಾರದ ಸಗಟು ಖರೀದಿಯೊಡನೆ.

ಈ ಖಾಯಿಲೆ ಉಲ್ಬಣಗೊಂಡದ್ದು ಪ್ಲಿಪ್ ಕಾರ್ಟ್ ಮುಂತಾದ ನೇರ ಗಿರಾಕಿ ಹಿಡಿಯುವ ವ್ಯವಸ್ಥೆಯೊಡನೆ. ಮಾಲ್ ಬಂದು ಬಿಡಿ ವ್ಯಾಪಾರಿಗಳನ್ನು, ಮಲ್ಟಿಪ್ಲೆಕ್ಸ್ ಬಂದು ಥಿಯೇಟರುಗಳನ್ನು, ವೈಶೇಷಿಕ ಆಸ್ಪತ್ರೆಗಳು ಬಂದು ಕುಟುಂಬವೈದ್ಯರನ್ನು, ಡೈರಿ ಬಂದು ಮನೆಹಾಲನ್ನು, ನಲ್ಲಿ ಬಂದು ಹಿತ್ತಲಿನ ಬಾವಿಗಳನ್ನು, ತೂತುಬಾವಿಗಳು ಬಂದು ಕೆರೆಗಳನ್ನು... ಅಪ್ರಸ್ತುತ ಮಾಡಿದ್ದು ಸಾಲದೇ? ಈ ಪಟ್ಟಿಯನ್ನು ಸ್ವಾಸ್ಥ್ಯ-ಗುಣಾತ್ಮಕತೆಯನ್ನು ಬದಿಗೊತ್ತಿ, ಕೇವಲ ಉದ್ಯಮದ ಸ್ತರದಲ್ಲೇ ಬೆಳೆಸುವುದಿದ್ದರೆ ಸಾಫ್ಟ್ ಡ್ರಿಂಕ್ಸ್ ಕಂಪೆನಿಗಳ ಒತ್ತಡಕ್ಕೆ ಸೋಡಾಶರಬತ್ತುಗಳನ್ನು, ಸಿಗರೇಟು ಬಂದು ಬೀಡಿ ಚುಟ್ಟಾಗಳನ್ನು, ಗುಟ್ಖಾ ಬಂದು ಪಾನ್ವಾಲಾಗಳನ್ನು, ಭಾರೀ ಡಿಸ್ಟಿಲರಿಗಳು ಬಂದು ಶೇಂದಿ ಶರಾಬುಗಳನ್ನು ಒರೆಸಿ ಹಾಕಿದ್ದೂ ಮರೆಯುವಂತದ್ದಲ್ಲ. ಇದೇ ರೀತಿಯಲ್ಲಿ ಸೇತು, ಅಣೆಕಟ್ಟೆ, ನೆಲದ ದೃಢತೆ ಎಂದೆಲ್ಲ ಆವರಿಸಿದವರು ಮಾಡಿದ ದೊಡ್ಡ ತಪ್ಪು - ನೀರನ್ನು ಸಹಜವಾಗಿ ಪಳಗಿಸಿದ (ಮೇಲೆ ಹೇಳಿದ) ಅಸಂಘಟಿತ ಸಣ್ಣವರನ್ನೇ!]
ಹೊಳೆನದಿಗಳ ನೀರು ಎತ್ತುವ ಜಲಮಂಡಳಿ, ಸೇತುವೆ ಕಟ್ಟಿಸುವ ಸಾರಿಗೆ ಇಲಾಖೆ, ಅಣೆಕಟ್ಟು ಎಬ್ಬಿಸುವ ನೀರಾವರಿ ಇಲಾಖೆ, ದಕ್ಕೆಗಳನ್ನು ನಿಲ್ಲಿಸುವ ಮೀನುಗಾರಿಕೆ ಮತ್ತು ಬಂದರು ಇಲಾಖೆ, ಕಸ ಕೊಳಚೆಗಳಿಗೆ ರಹದಾರಿ ಕೊಟ್ಟ ಸ್ಥಳೀಯ ಆಡಳಿತಗಳೇ ಮುಂತಾದವು `ನೀರ ಮೇಲೆ ಸವಾರಿ’ಗೆ ಮುನ್ನ ಮೇಲೆ ಹೇಳಿದ ಸಾಂಪ್ರದಾಯಿಕ ಬಳಕೆದಾರರನ್ನು ಕೇಳಿದ್ದೇ ಇಲ್ಲ. ಇಂದು ಜಲಸಾರಿಗೆಯ ಹೆಸರಿನಲ್ಲಿ ಸಿಬ್ಬಂದಿ ಸವಲತ್ತು ಸಹಿತ ಪ್ರತ್ಯೇಕ ಕಚೇರಿ, ದಕ್ಕೆಗಳ ರಚನೆ, ದೋಣಿ ಖರೀದಿ ಇತ್ಯಾದಿ ಭಾರೀ ಹಣಕಾಸಿನ, ನಿಜದಲ್ಲಿ ಪೂರ್ಣ ಅನುತ್ಪಾದಕ ವ್ಯವಸ್ಥೆಗಳಿಗಿಳಿಯುವುದಲ್ಲ. ಮೊದಲು ಜಲಮೂಲಗಳು ಕೆಡಲು ಕಾರಣವಾದ ಇಲಾಖೆಗಳಿಗೆ ತಮ್ಮ ವ್ಯರ್ಥ `ಹೂಡಿಕೆ’ಗಳನ್ನು ಪರಿಷ್ಕರಿಸಿಕೊಳ್ಳುವಂತೆ ಅಥವಾ ಪೂರ್ಣ ಹಿಂದೆಗೆಯುವಂತೆ ಮಾಡುವುದಾಗಬೇಕು.
ನೆಲ, ಜಲ ಮತ್ತು ವಾಯು ಎಂಬ ಮೂರು ಆಯಾಮಗಳಲ್ಲಿ ನಿಸ್ಸಂದೇಹವಾಗಿ ನೆಲ ನಮ್ಮ ನೆಲೆ. ಇಲ್ಲಿನ ಪ್ರತಿ ಅಂಗುಲಕ್ಕೂ ಸ್ಪಷ್ಟ ಯಜಮಾನಿಕೆ ಇದೆ. ಇಲ್ಲಿನ ಯಾವುದೇ ಕಾರ್ಯ ಅಥವಾ ಅದರ ಪರಿಣಾಮ ಸಾರ್ವಜನಿಕರ ನೇರ ಗ್ರಹಿಕೆಗೆ ಲಭ್ಯ. ಅನಂತರದಲ್ಲಿ ಹೆಚ್ಚು ಬಳಕೆಗೆ ಸಿಕ್ಕುವ ಆಯಾಮ ನೀರಿನದು. ಜಲಮೂಲಗಳ ಸಿದ್ಧಿ, ಶುದ್ಧಿಗಳೇ ನಾಗರಿಕತೆಯ ಸಮೃದ್ಧಿ, ಶಕ್ತಿ. ಸಹಜವಾಗಿ ಜಲಮೂಲಗಳೆಲ್ಲ ತೀರ್ಥ ಎನ್ನುವ ಭಾವ ಅರ್ಥಪೂರ್ಣವಾಗಿ ರೂಢಿಸಿತ್ತು. ಇಂದು ಅವೆಲ್ಲ ಅರ್ಥಹೀನ ಆಚರಣೆಗಳಲ್ಲಿ ಕಳೆದುಹೋಗಿವೆ. ರೈಲ್ವೇ ಕಿಟಕಿಯಿಂದ ಭಕ್ತಿಭಾವದೊಡನೆ ನದಿಗೆ ಬೀಳುವ ಕಾಣಿಕೆಗಳಿಗಿಂತ (ಒಂದೆರಡು ನಾಣ್ಯ) ಎಷ್ಟೋ ಅಧಿಕ ಪಾಲು ಕಸ, ನೇರ ಮಲಮೂತ್ರಾದಿಗಳನ್ನುಸೇರಿಸುತ್ತಿದ್ದೇವೆ. ಅಪರಕರ್ಮಗಳ ಕೊಳಕು, ಗಣೇಶ-ದುರ್ಗಾರಾಧನೆಗಳ ವಿಸರ್ಜನೆ, ಪುಟ್ಕೋಸಿ ಪುಡಾರಿಯಿಂದ ಪ್ರಧಾನಿಯವರೆಗೂ `ಬಾಗಿನ’ ಎಸೆಯುವುದು ಎಂದೆಲ್ಲಾ ಕಾಲಕಾಲಕ್ಕೆ ಜಲನಿಧಿಗಳನ್ನು ಒಂದು ಲೆಕ್ಕದಲ್ಲಿ ಜನ್ಮಸಿದ್ಧ ಹಕ್ಕಿನಂತೆ ಅವಹೇಳನ ಮಾಡುವುದು ಹೆಚ್ಚಾಗಿದೆ. ಇನ್ನೂ ದೊಡ್ಡ ಆಯಾಮದಲ್ಲಿ ಮತ್ತು ಯಾವುದೇ ಕಾಲಮಾನ ಕಟ್ಟಳೆಯಿಲ್ಲದೆ ಇಂದು ಜಲಮೂಲಗಳು  ಕಾರ್ಖಾನೆ ಮತ್ತು ಊರೂರಿನ ಕೊಳಚೆ ನೀರಿನ ಪರಂಧಾಮಗಳಾಗುತ್ತಿವೆ. ಕೆರೆ ಹೊಳೆಗಳ ಜಲಾನಯನ ಪ್ರದೇಶಗಳೆಲ್ಲವನ್ನು ಮನುಷ್ಯ ರಚನೆಗಳು ಆಕ್ರಮಿಸುತ್ತ ಶುದ್ಧ ಹೊಸನೀರಿನ ಸಾಧ್ಯತೆಗಳನ್ನೇ ನಾಶಮಾಡಿವೆ. ಅಷ್ಟು ಸಾಲದೆಂಬಂತೆ ಘನ ಕಸದ ಮೂಟೆಗಳೂ ಇಂದು ದೊಡ್ಡ ಲೆಕ್ಕದಲ್ಲಿ ಮೋಕ್ಷ ಕಾಣುತ್ತಿರುವುದು ಸೇತುವೆಗಳಾಚೆ! ನೇತ್ರಾವತಿಯ ಮೇಲೆ ಎರಡನೇ
ಸೇತುವೆ ಕೆಲಸ ಶುರುವಾದಾಗ ಹಳೇ ಸೇತುವೆಯ ಉದ್ದಕ್ಕೂ ಬೋರ್ಡು ಹಾಕಿ, ಕೆಲವೊಮ್ಮೆ ಕಾವಲುಗಾರ ನಿಂತು ಸಾರ್ವಜನಿಕರನ್ನು ಎಚ್ಚರಿಸಬೇಕಾಗಿತ್ತು – “ಸೇತುವೆಯಿಂದಾಚೆ ಏನೂ ಎಸೆಯಬೇಡಿ, (ನೀರು ಪವಿತ್ರವೆಂದಲ್ಲ) ಜನ ಕೆಲಸ ಮಾಡುತ್ತಿದ್ದಾರೆ!” ಇಂದು ಎಲ್ಲ ಸೇತುವೆಗಳ ಪರಿಸರದಲ್ಲೂ ಈ ಜಾಗೃತಿಯನ್ನು ತರಬೇಕು, ನಿರಂತರ ಕಾಪಿಟ್ಟುಕೊಳ್ಳಬೇಕು. ಹಾಗೇ ಜಲಮಾರ್ಗವನ್ನೇ ಬಂದು ಮಾಡುವ, ಎಂದೂ ಅಡಿಯಲ್ಲಿ ನುಸಿಯುವ ಅಂಬಿಗನ ತಲೆಯ ಮೇಲೇ ಕುಸಿದು ಬೀಳಬಹುದಾದ ಹಳೆ ಸೇತುವೆಯ ಸ್ತಂಭ ತೊಲೆಗಳನ್ನೂ ನಿವಾರಿಸಬೇಕು.
ಹಳೆಯಂಗಡಿಯಿಂದ ಪಶ್ಚಿಮಕ್ಕೆ ಸರಿಯುವ ಕಾಂಕ್ರೀಟ್ ರಸ್ತೆ ಗದ್ದೆ ತೋಟಗಳ ನಡುವಣ ವಿಹಾರ. ಇಲ್ಲಿ ಒಂದೆರಡು ಕಿಮೀ ಅಂತರದಲ್ಲೇ ಸಿಕ್ಕುವ ಏಕೈಕ ದೊಡ್ಡ ಸೇತುವೆ ನಂದಿನಿ ನದಿಯ ಒಂದು ಸಣ್ಣ ಹಿನ್ನೀರ ಕವಲನ್ನು ಉತ್ತರಿಸಿ, ಕೊಳುವೈಲು ಎಂಬ ನದಿ-ದ್ವೀಪವನ್ನು (ಕುದುರು) ಸಾರ್ವಕಾಲಿಕವಾಗಿ ಮುಖ್ಯ ಭೂಮಿಗೆ ಸಂಪರ್ಕಿಸಿದೆ. ನಾವು ಕುದುರಿನ ಪಶ್ಚಿಮ ಅಂಚಿನ ಶೀಲಾ ಕರ್ಕಡ ಅವರ ಮನೆಯ ಹಿತ್ತಿಲನ್ನು ಆಯ್ದುಕೊಂಡಿದ್ದೆವು (೨೫-೧೧-೨೦೧೪). ಶೀಲಾ ಅವರ ಪತಿ, ಮಂಗಳೂರಿನಲ್ಲಿ ಸಣ್ಣ ಉದ್ಯಮಿಯಾಗಿದ್ದವರು, ಈಚೆಗೆ ತೀರಿಕೊಂಡಿದ್ದರು. ಅವರ ಜಾಗದ ಪಶ್ಚಿಮ ಗಡಿರೇಖೆಯಂತೆ ನಂದಿನಿ ನದಿಯ ಮುಖ್ಯ ಹಿನ್ನೀರ ಹರಹು ಬಿದ್ದಿತ್ತು. ಕರ್ಕಡ ಕುಟುಂಬ ತಮ್ಮ ದಂಡೆಯನ್ನು ತುಸು ಬಿಗುಮಾಡಿ, ನೀರಿಗಿಳಿಯಲು ನಾಲ್ಕು ಮೆಟ್ಟಿಲುಗಳ ಅವಕಾಶವನ್ನಷ್ಟೆ ಉಳಿಸಿಕೊಂಡಿದ್ದರು. ಸೇತುವೆಗೂ ಮೊದಲ ಕಾಲದಲ್ಲಿ ಅದೊಂದು ಆವಶ್ಯಕತೆಯೇ ಆಗಿದ್ದಿರಬೇಕು. ಈಚಿನ ದಿನಗಳಲ್ಲಿ ಅದು ಉಪೇಕ್ಷೆಗೊಳಗಾದಂತಿತ್ತು. ಯಾರದೋ ಒಡಕು ದೋಣಿಯೊಂದು ಅದರ
ಅಂಚಿನಲ್ಲಿ ಕವುಚಿ ಬಿದ್ದುಕೊಂಡಿತ್ತು. ನಾವು ನೀರಿಗಿಳಿಯುವ ಕಾಲಕ್ಕೆ ಸಮುದ್ರದ ಭರತದ ಪರಿಣಾಮ ಇಲ್ಲೂ ಕಾಣುತ್ತಿದ್ದುದರಿಂದ ಆ ಒಡಕುದೋಣಿ ಮೆಟ್ಟಿಯೇ ಸುಧಾರಿಸಿದ್ದೆವು. ಆದರೆ ಅಂದಿನ ಸುಮಾರು ಎರಡೂವರೆ ಗಂಟೆಯ (ಬೆಳಿಗ್ಗೆ ಎಂಟೂವರೆಯಿಂದ ಹನ್ನೊಂದು) ಸುತ್ತಾಟ ಮುಗಿಸಿ ಮರಳಿದಾಗ, ಸಮುದ್ರ ಇಳಿತದಲ್ಲಿದ್ದಾಗ ರಗಳೆಯನ್ನೇ ಮಾಡಿತ್ತು. ನಮ್ಮ ದೋಣಿಯಿಂದೆದ್ದು ಒಡಕು ದೋಣಿಯನ್ನೇರುವ ಹಂತದಲ್ಲಿ ದೇವಕಿ ಜಾರಿ ಸಚೇಲ ಸ್ನಾನ ಮಾಡುವಂತಾಗಿತ್ತು. ಅಲ್ಲಿ ನದಿಪಾತ್ರೆ ಆಳವಿರಲಿಲ್ಲ, ನೀರಿಗೆ ಸೆಳವಿರಲಿಲ್ಲ, ಎಲ್ಲಕ್ಕೂ ಹೆಚ್ಚಾಗಿ ದೇವಕಿ ತೇಲಂಗಿ ಹಾಕಿದ್ದುದರಿಂದ ಮುಳುಗುಭೀತಿ ಏನೇನೂ ಇರಲಿಲ್ಲ. ಹಾಗೆಂದು ಒಡಕುದೋಣಿಗೆ ಖಾಯಂನೆಲೆ ನದಿಪಾತ್ರೆಯೇ?
ನಮ್ಮ ಸವಾರಿ ನದಿಯ ಹರಿವಿನ ದಿಕ್ಕಿನಲ್ಲೇ (ಬಲಕ್ಕೆ) ಸಾಗಿತು. ಕರ್ಕಡ ಮನೆಯ ಎದುರಿನ ದಂಡೆ ಎಂದರೆ ಸಸಿಹಿತ್ತಲಿನ ಭಾಗ. ಅದಕ್ಕೆ ವಾಹನಯೋಗ್ಯ ಮಾರ್ಗ ಮುಕ್ಕದಿಂದಷ್ಟೇ ಬರುತ್ತದೆ. ಸದ್ಯ  ಅಲ್ಲಿ ನಮಗೆ ಕಾಣುವಂತೆಯೇ ಜಾರ್ಖಂಡ್ ಮೂಲದ ಮರಳುಗಾರರ ದೊಡ್ಡ ಬಳಗ ತತ್ಕಾಲೀನ ದೋಣಿಗಟ್ಟೆಯೊಡನೆ ಶಿಬಿರ ಹೂಡಿದ್ದಾರೆ. ಆದರೆ ಕೊಳುವೈಲಿನವರಿಗೆ ಆ ದಿಕ್ಕಿನಲ್ಲಿ ನೀರುಪಾರುಗಾಣುವುದಿದ್ದರೆ ಅವರು ಅಥವಾ ಇನ್ಯಾವ ದೋಣಿ ಸೌಕರ್ಯವೂ ಒದಗುವುದಿಲ್ಲ. ಇದನ್ನು ಸರಿಪಡಿಸುವಂತೆ ಸರಕಾರ...
ಶೀಲಾ ಕರ್ಕಡರ ಪಶ್ಚಿಮ ಮೂಲೆಯಲ್ಲಿ ಕುದುರಿನಿಂದ ಕರಾವಳಿಯ ಅಂಚನ್ನು ಸಂಪರ್ಕಿಸುವಂತೆ ತೂಗುಸೇತುವೆ ಮಂಜೂರು ಮಾಡಿತ್ತಂತೆ. ಹಾಗೆ ನಿಂತ ಮೂರು ಭಾರೀ ಕಾಂಕ್ರೀಟ್ ಸ್ತಂಭ ರಚನೆಗಳು ಈಗಲೂ ಕಾಣಸಿಗುತ್ತವೆ. ಈ ಸ್ತಂಭಗಳು ಎಷ್ಟೋ ಜನರ ಕನಸಿನ ಕೂಸಾಗಿ ಪೂರ್ಣಗೊಂಡು, ಇನ್ನೇನು ಉಕ್ಕಿನ ಮಿಣಿ ಎಳೆಯುವುದೆನ್ನುವಾಗ, ಎಲ್ಲರಿಗು ಜ್ಞಾನೋದಯವಾಯ್ತಂತೆ. ವಾಸ್ತವದಲ್ಲಿ ಸೇತುವೆಯನ್ನು ಅಳವಡಿಸಲು ಎರಡೂ ದಂಡೆಗಳಲ್ಲಿ ಎಷ್ಟೂ ನಿರ್ಜನ ಭೂಮಿಯಿತ್ತು. ಆದರೆ ಯೋಜನಾ ಬ್ರಹ್ಮರ ಬುದ್ಧಿವಂತಿಕೆಯಲ್ಲಿ ಅತ್ತಣ ಇಳಿದಾಣ ಆ ದಂಡೆಯಲ್ಲಿದ್ದ ಏಕೈಕ ಮನೆಯ ಮುಖಮಂಟಪಕ್ಕೆ ಬರುವಂತಾಗಿತ್ತು! ಇನ್ನೇನು, ತಡೆಯಾಜ್ಞೆ ಬಂತು. ಸೇತು ಸೌಕರ್ಯ ಹೇಗೂ ಆಗಲಿಲ್ಲ, ಇಂದು ಶಿಥಿಲಗೊಳ್ಳುತ್ತಿರುವ ಆ ಸ್ತಂಭರಚನೆಗಳನ್ನು ಕಳಚುವ ಕ್ರಿಯೆಯೂ ನಡೆಸುವವರಿಲ್ಲ.
ಶಿಥಿಲ ಸ್ತಂಭಗಳನ್ನು ದಾಟಿ ಮುಂದುವರಿದಂತೆ ನದಿಪಾತ್ರೆ ಕುದುರು ಬಳಸಿ ಬರುತ್ತಿದ್ದ ಬಲಗವಲನ್ನು ಕೂಡಿಕೊಂಡು ವಿಸ್ತಾರಗೊಂಡಿತು. ನಾವು ಮುಖಜ ಭೂಮಿಯನ್ನು ಸಮೀಪಿಸಲಿಚ್ಛಿಸದೆ ಬಲಗವಲಿನಲ್ಲೇ ತಿರುಗಿ ಸಾಗಿದೆವು. ದಂಡೆಯ ಹುಲ್ಲು ಹೊದರುಗಳಲ್ಲಿ ನಾಗರಿಕ ಕೊಳಕು ಆಗೀಗ ಕಾಣಸಿಗುತ್ತಿದ್ದರೂ ನಗರ ದೂರವಿದ್ದ ಕಾರಣಕ್ಕೆ ನೀರು ಸಾಕಷ್ಟು ತಿಳಿಯಾಗಿಯೇ ತೋರುತ್ತಿತ್ತು. ಈ ಮೈಯಲ್ಲಿ ಕೊಳುವೈಲಿನ ಏಕೈಕ ಸಂಪರ್ಕ ಸೇತುವನ್ನೇ ಸಮೀಪಿಸಿದೆವು. ಇಂದಿನ ಸಂಕದ ಪಕ್ಕದಲ್ಲೇ ಹಳೆಯ ಸಂಕದ ಅವಶೇಷ ನದಿಯ ಅರ್ಧ ಪಾತ್ರೆಯನ್ನೇ ನಿರ್ಬಂಧಿಸಿ ಬಿದ್ದುಕೊಂಡಿತ್ತು. 

ಹೊಸ ಸೇತುವೆಯ ಸುಮಾರು ಎಂಟು ಕಮಾನುಗಳಲ್ಲಿ ಆರು ಅವಕಾಶಗಳನ್ನು ಇದು ನಮಗೆ ನಿರಾಕರಿಸಿತ್ತು. ಮಳೆಗಾಲದ ಪ್ರವಾಹದಲ್ಲಿ ಇದರಿಂದ ಉಂಟಾಗುವ ಸುಳಿ ಹೊಸ ಸೇತುವೆಯ ಸ್ತಂಭಗಳ ಬುಡಕ್ಕೆ ಹಾನಿಯಾಗದೇ? ಇವು ತಡೆಯುವ ತೇಲುಮರ, ಕಸಕಡ್ಡಿಗಳ ಅಡ್ಡಿಯಲ್ಲಿ ಉಕ್ಕುವ ನೀರು ನೆಲ ನುಂಗದೇ, ಏನಲ್ಲದಿದ್ದರೂ ದಂಡೆ ಕೊರೆಯದೇ?
ಸೇತುವೆಗೂ ಮುಂಚೆ ಪೂರ್ವ ದಂಡೆಯಲ್ಲೆ ಸಾಕಷ್ಟು ದೊಡ್ಡದೇ ಆದ ಒಂದು ಅಣೆಕಟ್ಟನ್ನು ಕಂಡೆವು. ಬಹುಶಃ ಮೂಲದಲ್ಲಿ ಅದು ಈ ಹಿನ್ನೀರ ಜಾಲದ ಒಂದು ಒಳ ಕವಲೇ ಇದ್ದಿರಬೇಕು ಮತ್ತು ಸಾಕಷ್ಟು ಉದ್ದವೂ ಇದ್ದಂತಿತ್ತು. ಭರತ ಕಾಲದಲ್ಲಿ ಅದರಲ್ಲೂ ಉಪ್ಪು ನೀರು ಏರಿ ಒಳನಾಡಿನ ಕೃಷಿ ಕಾರ್ಯಗಳ ನೀರಾವರಿ ಕೆಡದ ವ್ಯವಸ್ಥೆ ಆ ಅಣೆಕಟ್ಟೆಯದ್ದಿರಬೇಕು. ದೋಣಿಗೆ ಅದನ್ನುತ್ತರಿಸಲು ದಂಡೆಗೇರುವುದೊಂದೇ ದಾರಿ. ನಾವು ಅದನ್ನು ಹಾಗೇ ಬಿಟ್ಟು, ಸೇತುವೆಯಡಿ ಹಾಯ್ದು ಮುಂದುವರಿದೆವು.


ಮುಖ್ಯ ದ್ವೀಪದ ಮತ್ತು ಎದುರಿನ ದಂಡೆಗಳು ಬಹುತೇಕ ಕಾಂಡ್ಲಾಗಿಡಗಳ ಪ್ರಾಕೃತಿಕ ರಕ್ಷಣೆಯನ್ನು ಕಳಚಿಕೊಂಡಿವೆ. ಕೆಲವೆಡೆಗಳಲ್ಲಿ ಖಾಸಗಿ ಭೂ ಮಾಲೀಕರು ತಮ್ಮ ಮಿತಿಯಲ್ಲಿ ಕಲ್ಲು ಕಟ್ಟಿಸಿಕೊಂಡ ದಂಡೆಗಳೂ ಭಾರಿ ಯಶಸ್ಸನ್ನು ಕಂಡಂತಿರಲಿಲ್ಲ. ಮುಂದೆ ಈ ಕವಲು ನದಿಯ ಮುಖ್ಯಧಾರೆ ಸಂಪರ್ಕಿಸುವಲ್ಲಿ ಮಾತ್ರ ಚದುರಿದಂತೆ ಕಾಂಡ್ಲಾವನಗಳಿವೆ. ಅವುಗಳೆಡೆಯ ಕಂಡಿಯಲ್ಲಿ ನುಸುಳಿ ದಾಟಿದೆವು. ಅತ್ತಣ ನದಿಯ ಹರಹು ವಿಸ್ತಾರವಿತ್ತು. ನಮ್ಮ ಸವಾರಿಯನ್ನು ಹರಿವಿನ ಎದುರು ಮುಂದುವರಿಸಿ, ಪಾವಂಜೆಯ ಜೋಡು ಸೇತುವೆಯನ್ನುತ್ತರಿಸಿದೆವು. ಬಿಸಿಲಿನ ಝಳ ಹೆಚ್ಚಿದ್ದರಿಂದ ಮುಂದೆ ದಂಡೆಯಲ್ಲಿ ಕಾಣುತ್ತಿದ್ದ ಖಂಡಿಗದ ಅಂಗನವಾಡಿಯ ತಿರುವಿನ ಬಳಿ ನದಿಗೆ ಚಾಚಿಕೊಂಡಿದ್ದ ಮರದ ನೆರಳಿನಲ್ಲಿ ತುಸು ವಿಶ್ರಮಿಸಿದೆವು. ಅಲ್ಲೂ ಹಿನ್ನೀರಿನ ಇನ್ನೊಂದೇ ಒಳಕವಲಿಗೆ ಉಪ್ಪುನೀರಿನ ತಡೆಯ ಅಣೆಕಟ್ಟು ಇತ್ತು. ಯಾರೋ ಖಾಸಗಿ ದೋಣಿಗಟ್ಟೆ ಕಟ್ಟಿ ಹಾಳು ಬಿಟ್ಟಂತೆಯೂ ಕಾಣಿಸಿತು. ಅಂಗನವಾಡಿಯ ದಂಡೆ ಬಲು ಎತ್ತರದಲ್ಲಿದ್ದು ಬರಿಯ ಬೇಲಿಯಷ್ಟೇ ರಚಿಸಿದ್ದು ನಮಗಂತೂ ಸರಿ ಕಾಣಲಿಲ್ಲ. ಕುತೂಹಲವೇ ಮೂರ್ತೀಭವಿಸಿದಂತ ಪುಟ್ಟವರ ಯಾವುದೇ ತಪ್ಪು ಹೆಜ್ಜೆಗಳು ಜೀವಹಾನಿ ತಾರದಿರಲಿ ಎಂದು ಹಾರೈಸುವುದಷ್ಟೇ ನಮಗುಳಿಯಿತು.
ಇನ್ನೂ ಮೇಲ್ಪಾತ್ರೆಯ ದೋಣಿ ಸವಾರಿಯ ಅವಕಾಶವನ್ನು ಅಂದಿಗೆ ನಾವು ನಿರಾಕರಿಸಿ, ಹಿಮ್ಮುಖರಾದೆವು. ನಾವು ಕಾಂಡ್ಲಾವನದಲ್ಲಿ ನುಸುಳಿ ಬಂದ ಜಾಡು ಬಿಟ್ಟು ಮುಖ್ಯ ಧಾರೆಯಲ್ಲೇ ಮುಂದುವರಿದೆವು. ಅಲ್ಲಿ ನದಿಯ ಮಧ್ಯೆದಲ್ಲೇ ಮರಳುಗಾರರ ದೊಡ್ಡ ದೋಣಿ ಲಂಗರು ಹಾಕಿ ನಿಂತಿತ್ತು. ಅದರ ಎರಡು ಪಕ್ಕದ ಎರಡು ಜೋಡಿ ಮರಳು ತೆಗೆಯುತ್ತಿದ್ದ ಕ್ರಮ ಆಕರ್ಷಕವಾಗಿತ್ತು. ಕೊಳುವೈಲಿನ ನೀರ ಪ್ರದಕ್ಷಿಣೆ ಪೂರ್ಣಗೊಳಿಸಿ ಮತ್ತೆ ಶೀಲಾ ಕರ್ಕಡರ ದೋಣಿಗಟ್ಟೆ ಸೇರಿಕೊಂಡೆವು, ಮನೆಗೆ ಮರಳಿದೆವು.
***            ***
“ಜಂಟಿ ಸೈಕಲ್ಲೇ ವಿಚಿತ್ರ, ಇನ್ನೀಗ ದೋಣಿಯಂತೆ!” ಈ ಅಕ್ಕ ಭಾವನ ತಮಾಷೆ ನೋಡಿಯೇ ಬಿಡೋಣವೆಂಬಂತೆ ದೇವಕಿಯ ಎರಡು ತಂಗಿಯರು – (ನೂಜಿಲ) ವತ್ಸಲ ಮತ್ತು (ಕೊಣನೂರು) ಮನೋರಮಾ, ಅಕ್ಕನ (ಮುನಿಯಂಗಳ ಸರಸ್ವತಿ) ಮಗಳಾದ (ಬೆಂಗಳೂರು) ನಯನ ಹಾಗೂ ಅವಳೆರಡು ಮಕ್ಕಳು – ಅಭಿಜ್ಞ ಮತ್ತು ಅನುಜ್ಞ ನಿನ್ನೆ (೨೬-೪-೧೫) ನಮ್ಮನೆಗೆ ಬಂದರು. ನಮ್ಮನುಕೂಲದಲ್ಲಿ ಸದಭಿರುಚಿಗಳಿಗೆ ಪ್ರೇರಣೆ, ಪ್ರಚಾರ ಕೊಡುವ ಕಾರ್ಯವನ್ನು ನಾವೆಂದೂ ನಿರಾಕರಿಸಿದವರಲ್ಲ. ಕೂಡಲೇ ಕಯಾಕನ್ನೂ ಅವರೆಲ್ಲರೊಡನೆ ಕಾರಿಗೇರಿಸಿ ಉಚ್ಚಿಲ ಬಟಪಾಡಿಗೋಡಿಸಿದೆ.

ನಡು ಬೇಸಗೆಗೆ ಸರಿಯಾಗಿ ಭೂಬಂಧಿಯಾದ ಉಚ್ಚಿಲ, ತಲಪಾಡಿ ಮತ್ತು ಕುಂಜತ್ತೂರು ಹೊಳೆಗಳ ತ್ರಿವೇಣೀ ಸಂಗಮ ಕ್ಷೇತ್ರ ಕೊಳೆತು ನಾರುತ್ತಿತ್ತು. ಮರಳ ದಿಬ್ಬದಾಚೆ ಭೋರ್ಗರೆವ ಸಮುದ್ರ, ನವಚೇತನ ಕೊಡುವ ಬೀಸುಗಾಳಿ ಏನೋ ಇತ್ತು. ಆದರೆ ಅನನುಭವಿಗಳು, ಮಕ್ಕಳೂ ಇದ್ದ ತಂಡಕ್ಕೆ ಅಲೆ, ಹರಿವು ಇಲ್ಲದ ತ್ರಿವೇಣಿ ಸಂಗಮವೇ ಪ್ರಶಸ್ತ. ಮೂಗನ್ನು ಸಾಯಿಸಿ, ಆದಷ್ಟು ನೀರನ್ನು ಸ್ಪರ್ಷಿಸದೇ ಅನುಭವಿಸುವ ಸಂಕಟದಲ್ಲೂ ಈ ಸರಸಿ ಅದೆಷ್ಟು ಚಂದ. ವಿಸ್ತಾರ ನೀರಹರಹು, ಅಂಚುಗಟ್ಟಿದ ದಟ್ಟ ಹಸುರಿನ ಕಾಂಡ್ಲಾ ವನ, ಕೆಲವು ಕಿಮೀ ಉದ್ದಕ್ಕೂ ವಿಹಾರದೋಟದಲ್ಲಿ ಸಾಗಬಹುದಾದ ಅಂಕಾಡೊಂಕಿ ನೀರೋಣಿ, ಅಲ್ಲಲ್ಲಿ ಕುದುರುಗಳು (ನದಿ-ದ್ವೀಪ), ಕಾಂಡ್ಲಾವನದ ನಡುವಣ ಗುಹಾ ಓಣಿಗಳ ನಡುವೆ ನುಸುಳಿ ಸಾಗುವುದೆಂದರೆ ನನಗಂತು ಪ್ರತಿಬಾರಿಯೂ ಹೊಸ ಅನುಭವ.

ಕಾಂಡ್ಲಾ ಗಿಡಗಳು ನುಗ್ಗೆಕಾಯಿಯಂತೆ ತೋರುವ ಉದ್ದುದ್ದ ಕಾಯಿ ಬಿಟ್ಟಿದ್ದುವು. ಅವು ಬಲಿತು, ನೀರಿನ ಇಳಿತದ ಸಮಯದಲ್ಲಿ ನೇರ ಉದುರಿ, ಗೊಸರಿನಲ್ಲಿ ಭರ್ಚಿಯಂತೆ ಹೂತು ಕೊಳ್ಳುತ್ತವಂತೆ. ಅವು ಮತ್ತಲ್ಲೇ ಬೇರುಬಿಟ್ಟು, ಚಿಗುರರಳಿಸಿ ಹೊಸ ಜೀವನಕ್ಕಿಳಿಯುವ ಮತ್ತು ಅಷ್ಟಷ್ಟೇ `ನೆಲ ಗಳಿಸುವ’ ಜಾಣ್ಮೆಯೆಲ್ಲಾ ಕೇಳಿದ್ದು ನೆನಪಾಯ್ತು. ಒಂದು ಕುದುರಂಚಿನ ಬೇರೊಂದೇ ಮರ – ಬಿಳಿ ಬಿಳಿ ಹೂ ಬಿಟ್ಟು, ಮೋಸುಂಬಿ ಗಾತ್ರದ ಹಸುರು ಕಾಯಿ ಬಿಟ್ಟಿತ್ತು. (ನನ್ನ ಸಹಯಾನಿಗಳೆಲ್ಲ ಹೊಸಬರೇ ಆದ್ದರಿಂದ ನಾನು ಮಾದರಿ ಸಂಗ್ರಹಿಸುವ ಸಾಹಸ ಮಾಡಲಿಲ್ಲ) ನೀರಿಣುಕುವ ಯಾವುದೋ ಹಳೆ ಮರದ ಕೊರಡಿನ ಮೇಲೆ ಕುಳಿತ ಒಂದೋ ಎರಡೋ ಹೆಚ್ಚಾಗಿ ನೀಳ ಕತ್ತಿನ ಕಪ್ಪು ಹಕ್ಕಿ (ಕೆಲವು ಬಿಳಿಯವೂ ಇರುತ್ತವೆ) ಗರಿಗಳ ಜಿಡ್ಡು ಕಳೆಯುವುದೋ ರೆಕ್ಕೆಯ ಹಸಿಯಾರಿಸುವುದೋ ಬಲಿಯನ್ನರಸುವುದೋ ವೈರಿಯನ್ನು ಪ್ರತೀಕ್ಷಿಸುವುದೋ – ಇತ್ಯಾದಿ ಅವುಗಳ ಸಹಜ ದೇಹವಿನ್ಯಾಸಗಳಲ್ಲೂ ನಮಗೆ ನಾಟ್ಯ ಭಂಗಿಗಳನ್ನೇ ಕೊಟ್ಟು ಮುದ ನೀಡಿದುವು. ಎಲ್ಲ ಬಣ್ಣವನ್ನೂ ಮಸಿ ನುಂಗಿದ ಹಾಗೆ, ಬೃಹತ್ ಕೊಳದ ಪುಟ್ಟ ಪುಟ್ಟ ಕುರುಡು-ಕವಲುಗಳಲ್ಲಿ ದಪ್ಪನಾಗಿ ಕೆನೆಗಟ್ಟಿದ ನಾಗರಿಕ ಕೊಳಕು ನಮ್ಮನ್ನು ಹೆದರಿಸುತ್ತಿತ್ತು. ಉಳಿದಂತೆಯೂ ಹುಟ್ಟು ಹಾಕುವಾಗ ನೀರ ಮೇಲ್ಮೈಯಲ್ಲೇ ತುಂಡು ಕೊಳೆಮುದ್ದೆಗಳು ತೇಲಿ ಬರುತ್ತಲೇ ಇದ್ದವು. ನೀರ ಆಳ ಕಡಿಮೆಯಿದ್ದಲ್ಲಿ ನಮ್ಮ ಹುಟ್ಟು ತೊಳಸಿದಾಗ (ಹೊಟ್ಟೆ ತೊಳಸಿದಾಗ?) ನೆಲ ಕೆದರಿ ಏಳುವ ಕಪ್ಪನೆ ರಾಡಿ, ತೀವ್ರವಾಗುವ ದರಿದ್ರ ನಾತ ನಮ್ಮನ್ನು ಬಲು ಬೇಗನೆ ವಾಪಾಸು ಹೊರಡಿಸಿಯೇಬಿಟ್ಟಿತು.

ಪಿಲಿಕುಳದಲ್ಲೋ ಇನ್ನೂ ದೊಡ್ಡ ಪ್ರವಾಸೀ ಕೇಂದ್ರಗಳಲ್ಲೋ ಇರುವ `ವಾಟರ್ ಪಾರ್ಕ್’ಗಳೋ ಕೋಟ್ಯಂತರ ರೂಪಾಯಿಯ ಹೂಡಿಕೆಗಳು. ಮತ್ತೆ ಕೃಷಿ, ನಾಗರಿಕ ಅಗತ್ಯಗಳನ್ನು (ಹೆಚ್ಚಾಗಿ) ವಂಚಿಸಿ ಬೆಳೆಸಿದ ತೀರಾ ಸಂಕುಚಿತ ಕಲ್ಪನಾಲೋಕಗಳು. ಅಲ್ಲಿ `ಮಝಾ’ ಅಂದರೆ ಒಬ್ಬೊಬ್ಬ ವ್ಯಕ್ತಿಗೂ ನೂರಾರು, ಸಾವಿರಾರು ರೂಪಾಯಿ ಕೊಟ್ಟು ಕೊಳ್ಳುವ ಮಾಲು. ಇಲ್ಲಿ, ಉಚ್ಚಿಲ-ಬಟಪಾಡಿಯಲ್ಲಿ  ಅದರಜ್ಜನಂಥದ್ದು ಯಾವ ಹೂಡಿಕೆಯೂ ಇಲ್ಲದೆ, ಬೇಡಿಕೆಯೂ ಹಾಕದೆ, ನಿತ್ಯ ನೂತನ ವೈವಿಧ್ಯದೊಡನೆ ಪ್ರಕೃತಿ ಕೊಟ್ಟು ಯುಗಗಳೇ ಕಳೆದಿವೆ. 

ಇದು ಯಾವುದೋ ನಿಗೂಢ ವನಾಂತರದಲ್ಲಿ, ಘನ ಗಿರಿಯ ಉನ್ನತಿಕೆಯಲ್ಲಿ ಇಲ್ಲ. ಇದರ ಸುತ್ತೂ ಮಾರ್ಗಗಳಿವೆ, ದಂಡೆಯ ಪ್ರತಿ ಇಂಚೂ ನಾಗರಿಕ ಸುಪರ್ದಿಯಲ್ಲೇ ಇದೆ. ಆದರೆ ಅದನ್ನು ನಾವು ಬಳಸಿಕೊಳ್ಳುತ್ತಿರುವ ಬಗೆ ಹೇಗೆ? ಈ ದಂಡೆ, ಆ ದಂಡೆಯೆಂದು ಟೀವಿಯ ಕೇಬಲ್ಲುಗಳು, ಕುಡಿನೀರಿನ ನಲ್ಲಿಗಳು, ವಿದ್ಯುತ್ ತಂತಿಗಳು ಕುಶಿವಾಸಿ ಅಡ್ಡ ಹಾಯುವುದನ್ನು ಕಾಣುತ್ತೇವೆ. 

ಇನ್ನೂ ಅವಹೇಳನಕಾರಿಯಾಗಿ ತಮ್ಮೆಲ್ಲ ಕಸನಿವಾರಣೆಗೆ ಇದನ್ನು `ಗುಂಡಿ’ ಮಾಡುತ್ತಾರೆ, ಪಾಯಖಾನೆ ಸೇರಿ ಹಿತ್ತಲಿನ ಚರಂಡಿಯ ವಿಸ್ತರಣೆಯನ್ನಾಗಿ ಧಾರಾಳ ಬಳಸುತ್ತಾರೆ. ನಾವು ದೋಣಿ ವಿಹಾರ ನಡೆಸಿದ್ದಂತೆ ಯಾವುದೋ ಮನೆಯಲ್ಲಿ ಏನೋ ಮಂಗಳ ಕಾರ್ಯದ ಧ್ವನಿ ವಾತಾವರಣದಲ್ಲಿ ಮೊಳಗುತ್ತಿತ್ತು. ಅಂಥ ವಿಶೇಷ ಸಂದರ್ಭದಲ್ಲೂ ನಿತ್ಯದ ಬಳಕೆಯಲ್ಲೂ “ಇದು ನಮ್ಮ ಮನೆಯಂಗಳದ ವಿಸ್ತರಣೆ, ನಮ್ಮ ಆರೋಗ್ಯಧಾಮ” ಎಂಬಂತೆ ಕಂಡ ಒಂದೂ ನಿದರ್ಶನ ಸಿಕ್ಕಲೇ ಇಲ್ಲ. ಅದನ್ನು ಚಂದವಾಗಿ ನೋಡುವ, ಆರೋಗ್ಯಪೂರ್ಣವಾಗಿ ಬಳಸುವ, ಕನಿಷ್ಠ ಶುದ್ಧವಾಗಿ ಉಳಿಸುವ ಬುದ್ಧಿ ಸಾರ್ವಜನಿಕರಲ್ಲಿ, ಆಡಳಿತದಲ್ಲಿ ಎಂದು ಬಂದೀತೋ ಎಂದು ಕೊರಗುತ್ತ ಮರಳಿದೆವು.

(ಮುಂದುವರಿಯಲಿದೆ)
(ನೇತ್ರಾವತಿ ಯಾನ ಕಥನ ಮುಂದಿನ ವಾರ)

1 comment:

  1. ಲಕ್ಷ್ಮೀನಾರಾಯಣ ಭಟ್ ಪಿ.03 May, 2015 09:54

    ಕಯಾಕ್ ಸಾಗಲಿ ಮುಂದೆ ಹೋಗಲಿ | ದೂರ ತೀರವ ಸೇರಲಿ || ನೀರ ಮೇಲಿನ ನಿಮ್ಮ ಪಯಣವು ಸುಗಮವಾಗಿ ಸಾಗಲಿ || ನಮಗೆ ರಸದೌತಣವ ಬಡಿಸಿರಿ ಕಾಲಕಾಲಕೆ ಪ್ರೀತಿಲಿ||

    ReplyDelete