21 April 2015

ಆಸ್ಫೋಟನದಲ್ಲಿ ನಾನು ಸಹಾಯಕನಾಗುತ್ತೇನೆ

ಅಧ್ಯಾ ಐವತ್ತೆರಡು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತನಾಲ್ಕನೇ ಕಂತು

ಮಿ. ಮೈಕಾಬರರು ಗೊತ್ತುಮಾಡಿದ್ದ ದಿನ ಬಂತೇ ಬಂತು. ಮಿ. ಡಿಕ್ಕರು ಮತ್ತು ನಾನೂ ಮಾತ್ರ ಕೇಂಟರ್ಬರಿಗೆ ಹೋಗುವುದೆಂದು ಮೊದಲು ನಿಶ್ಚಯ ಮಾಡಿದ್ದರೂ ಡೋರಾಳ ಒತ್ತಾಯಕ್ಕಾಗಿ ಅತ್ತೆಯೂ ನಮ್ಮ ಜತೆಯಲ್ಲಿ ಕೇಂಟರ್ಬರಿಗೆ ಬಂದಳು. ಡೋರಾಳಿಂದ ಇನ್ನೇನೂ ನಮಗೆ ಸಹಾಯ ಮಾಡಲು ಅನುಕೂಲವಿಲ್ಲದೆ ಆಗಿದ್ದುದರಿಂದ ಅತ್ತೆಯನ್ನು ಅವಳ ಒತ್ತಾಯದಿಂದಲಾದರೂ ಕಳುಹಿಸಿದರೆ ನಮಗೆ ಉಪಕಾರವಾಗಬಹುದೆಂದು ಅವಳು ಹಾಗೊಂದು ಒತ್ತಾಯ ಮಾಡಿದಳು. ಎಂದಿಗಿಂತಲೂ ತಾನು ಎಷ್ಟೆಷ್ಟೋ ಹುಷಾರಾಗಿರುವುದಾಗಿ ಹೇಳಿ, ನಾವು ಸ್ವಲ್ಪ ಹಿಂಜರಿಯುವುದನ್ನು ನೋಡಿ ಅವಳು ಅಳಲು ಪ್ರಾರಂಭಿಸಿದಳು. ಹಾಗಾಗಿ ನಾವು ಮೂವರು ನಮ್ಮ ಮನೆಯಿಂದಲೂ ಟ್ರೇಡಲ್ಸನು ಅವನ ಮನೆಯಿಂದಲೂ ಹೊರಟು ಕ್ಲುಪ್ತ ಸಮಯದಲ್ಲಿ ಕೇಂಟರ್ಬರಿ ಹೋಟೆಲಿಗೆ ತಲಪಿದೆವು.


ಮಿ. ಮೈಕಾಬರರು ನಮ್ಮನ್ನು ಬಹು ಗೌರವದಿಂದ ಸ್ವಾಗತಿಸಿ, ಮಿ. ಡಿಕ್ಕರನ್ನು ಪ್ರತ್ಯೇಕವಾಗಿ “ಹೇಗಿದ್ದೀರಿ ಮಿ. ಡಿಕ್ಸನ್” ಎಂದು ಕೇಳಿದರು.
ಮಿ. ಡಿಕ್ಕರಿಗೆ ಬಹಳ ಸಂತೋಷವಾಯಿತು. ಮಿ. ಮೈಕಾಬರರ ಕೈ ಕುಲುಕುತ್ತಾ –
“ನಿಮಗೆ ಊಟವಾಗಿದೆಯೇ ಮಿ. ಮೈಕಾಬರ್” ಎಂದು ಗಂಭೀರವಾಗಿ ವಿಚಾರಿಸಿದರು. ಹಿಂದಿನ ಒಂದು ದಿನ ಮಿ.ಮೈಕಾಬರ್ ಉರೆಯನ ವಿಷಯದಲ್ಲಿ ತಾನು `ಆ ಒಂದು ಕೆಲಸವಾಗದೆ’ ಏನನ್ನು ಮುಟ್ಟೆನು ಎಂದು ಹೇಳಿ ನಮ್ಮಮನೆಯಿಂದ ಊಟಮಾಡದೇ ಹೋಗಿದ್ದ ಕಾರಣ ಅವರು ಹಾಗೆ ಕೇಳಿರಬಹುದು. ಆದರೆ ಅತ್ತೆ ಸ್ವಲ್ಪ ಓರೆಯಲ್ಲಿ ಮಿ. ಡಿಕ್ಕರನ್ನು ಗದರಿಸಿದ್ದರಿಂದ ಅವರು ಮೌನವಾದರು.

ಮಿ.ಮೈಕಾಬರರಂತೂ ಉತ್ತರವನ್ನು ಕೊಟ್ಟರು –
“ಪ್ರಪಂಚವನ್ನೇ ನನಗೆ ಬಹುಮಾನವಾಗಿ ಕೊಟ್ಟು `ಊಟ ಮಾಡಯ್ಯ’ ಅಂದರೂ ನಾನು ಊಟಮಾಡಲಾರೆ. ಹಸಿವೆಗೂ ನನಗೂ ಪರಿಚಯ ಮರೆತು ಅನೇಕ ದಿನಗಳಾದುವು” ಎಂದಂದರು.

ಅನಂತರ ಟ್ರೇಡಲ್ಸನೂ ಅವರೂ ಹೋಟೆಲಿನ ಒಂದು ಕೋಣೆಯೊಳಗೆ ಹೋಗಿ ಮುಂದಿನ ಕಾರ್ಯಗಳನ್ನು ಕುರಿತು ಗುಟ್ಟಾಗಿ ಮಾತಾಡಿಕೊಂಡರು. ಅನಂತರ ಮಿ. ಮೈಕಾಬರರು ಅವರ ಆಫೀಸಿಗೆ ಹೋದರು. ಅವರು ಹೋಗಿ ಐದು ಮಿನಿಟುಗಳನಂತರ ನಾವು ಅವರ ಆಫೀಸಿಗೆ ಹೋಗಬೇಕೆಂದು ನಮ್ಮೊಳಗೆ ಏರ್ಪಾಡಿಸಿಕೊಂಡಿದ್ದೆವು. ನಾವು ನಾಲ್ವರೂ ಕ್ಲುಪ್ತ ಸಮಯಕ್ಕೆ ಮಿ. ವಿಕ್ಫೀಲ್ಡರ ಮನೆಗೆ ತಲುಪಿದೆವು.

ಮಿ. ವಿಕ್ಫೀಲ್ಡರ ಮನೆಯಲ್ಲೇ ಅವರ ವಕೀಲಿ ಆಫೀಸೂ ಇದ್ದುದರಿಂದ, ಎದುರಿನ ಕೋಣೆಯಲ್ಲಿ ಮಿ. ಮೈಕಾಬರರು ಕುಳಿತುಕೊಂಡು ಏನನ್ನೋ ಬರೆಯುತ್ತಿದ್ದರು. ಅವರು ನಮ್ಮನ್ನು ನೋಡಿಯೂ ಕಾಣದವರಂತೆ ನಟಿಸಿ ಕುಳಿತಿದ್ದರೆಂದು ನನಗೆ ಗೊತ್ತಿತ್ತು. ಅವರ ಆಫೀಸ್ ಕೆಲಸ ಕಾಲದಲ್ಲಿ ರೂಲ್ ದೊಣ್ಣೆಯೊಂದು, ಅವರ ಎದೆಯಲ್ಲಿ ಇರಿದಿದ್ದ ಕಠಾರಿಯ ಹಿಡಿಯಂತೆ ಸ್ವಲ್ಪಾಂಶ ಕಾಣುವ ಯಾವತ್ತಿನ ಕ್ರಮದಂತೆ, ಇಂದೂ ಆ ರೂಲ್ ದೊಣ್ಣೆಯು ಕಾಣುತ್ತಿತ್ತು. ನಾವು ಪ್ರಥಮವಾಗಿ ಅವರ ಆಫೀಸಿಗಾಗಿ ದಾಟಬೇಕಾಗಿದ್ದುದರಿಂದ, ಅವರ ಸಮೀಪವಾದಾಗ ಅವರನ್ನು ಕಂಡು, ನಾನು –
“ನಮಸ್ಕಾರ, ಮಿ. ಮೈಕಾಬರ್, ಸೌಖ್ಯವೇ? ಎಂದು ಕೇಳಿದೆ.
“ಕ್ಷೇಮ, ಥೇಂಕ್ಸ್. ನೀವೂ ಕ್ಷೇಮ ತಾನೆ?” ಅಂದರು ಅವರು.
“ಮಿಸ್ ವಿಕ್ಫೀಲ್ಡರು ಮನೆಯಲ್ಲಿದ್ದಾರೇನು?”
“ಇರಬೇಕು – ಅವರ ತಂದೆಯವರು ವಾತರೋಗದಿಂದ ಮಲಗಿದ್ದಾರೆ. ಅವರ ಸಮೀಪ ಮಗಳು ಇರಬೇಕು” ಎಂದಂದು, ನಮ್ಮನ್ನು ಕರೆದು, ಮಿ. ವಿಕ್ಫೀಲ್ಡರ ಮನೆ ಬೈಠಖಾನೆಗೆ ಕರೆದುಕೊಂಡು ಹೋಗಿ ಅಲ್ಲಿ ನಮ್ಮನ್ನು ಆಸನಗಳಲ್ಲಿ ಕೂರಿಸಿದರು. ಅನಂತರ ಒಳಗಿನವರಿಗೆ ಕೇಳುವಷ್ಟು ದೊಡ್ಡ ಮತ್ತು ಗಂಭೀರ ಸ್ವರದಿಂದ –
“ಮಿಸ್ ಟ್ರಾಟೂಡ್, ಮಿ. ಡೇವಿಡ್ ಕಾಪರ್ಫೀಲ್ದ್, ಮಿ.ಥಾಮಸ್ ಟ್ರೇಡಲ್ಸ್ ಮತ್ತು ಮಿ. ಡಿಕ್ಸನ್ನರವರು ಭೇಟಿಗಾಗಿ ದಯಮಾಡಿಸಿದ್ದಾರೆ” ಎಂದು ಹೇಳಿದರು.

ಒಳಗಿನಿಂದ ಏಗ್ನೆಸ್ಸಳು ಬಂದು ನಮ್ಮನ್ನು ನೋಡಿ, ಸಂತೋಷದಿಂದ ಸ್ವಾಗತಿಸಿ ಮಾತಾಡುತ್ತಾ ಕುಳಿತಳು. ಅಷ್ಟು ಹೊತ್ತಿಗೆ ಉರೆಯನೂ ಅಲ್ಲಿಗೆ ಬಂದನು. ಅವನಿಗೂ ನಮಗೂ ಸಾಂಪ್ರದಾಯಿಕ ಕುಶಲ ಪ್ರಶ್ನೆಗಳು ನಡೆದುವು. ಏಗ್ನೆಸ್ಸಳು ನಮ್ಮ ಜತೆಯಲ್ಲಿದ್ದದ್ದನ್ನು ನೋಡಿಯೋ ಏನೋ ಉರೆಯ ಮಿ. ಮೈಕಾಬರರನ್ನು ನೋಡಿ ಏಕವಚನದಿಂದ –
“ಮೈಕಾಬರ್, ನೀನು ಹೋಗಿ ನನ್ನ ತಾಯಿಯನ್ನು ಕರೆದುಕೊಂಡು ಬಾ. ಇಷ್ಟು ಜನ ಸ್ನೇಹಿತರು ಬಂದಿರುವಾಗ ಅವಳೂ ಸಂತೋಷಪಡಲಿ” ಎಂದು ಆಜ್ಞಾಪಿಸಿದನು.

ಮಿ. ಮೈಕಾಬರರು ಯಾವ ಉತ್ತರವನ್ನೂ ಕೊಡದೆ, ಅಲುಗದೆ, ಬಾಗಿಲ ಬದಿಯಲ್ಲಿ ನಿಂತಿದ್ದರು. ಏಗ್ನೆಸ್ಸಳೂ ಅತ್ತೆಯೂ ಒಂದು ಕಡೆಯೂ ನಾನೂ ಟ್ರೇಡಲ್ಸನೂ ಇನ್ನೊಂದು ಕಡೆಯೂ ಕುಳಿತಿದ್ದೆವು. ಅಲ್ಲಿನ ಕೆಲ ಸಂದರ್ಭಗಳಿಂದ ಉರೆಯನಿಗೂ ಟ್ರೇಡಲ್ಸನಿಗೂ ಪರಿಚಯ ಮಾಡಿಕೊಡಲಾಯಿತು. ಉರೆಯ ಟ್ರೇಡಲ್ಸನೊಡನೆ ಬಹು ದೀನತನದಿಂದ ತನ್ನ ಜೀವನ ಚರಿತ್ರೆಯ ಅಭಿವೃದ್ಧಿ ಭಾಗವನ್ನು ಹೇಳಿಕೊಳ್ಳುತ್ತಿದ್ದನು. ಇಷ್ಟರಲ್ಲೇ ಮೈಕಾಬರರು ಅವರ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋದರು. ಹೋದವರು ತಿರುಗಿ ಬರುವಾಗ ಒಬ್ಬರೇ ಬಂದದ್ದನ್ನು ಕಂಡು –
“ಏನು ಮೈಕಾಬರ್, ಕೇಳಿಸಲಿಲ್ಲವೇನು? ಹೋಗಿ ತಾಯಿಯನ್ನು ಕರೆದುಕೊಂಡು ಬಾ” ಎಂದು ಗದರಿಸಿದನು, ಉರೆಯ.
“ಕೇಳಿಸಿದೆ” ಎಂದಷ್ಟು ಮಾತ್ರ ಮಿ. ಮೈಕಾಬರರು ಉತ್ತರವಿತ್ತರು.
“ಹಾಗಾದರೆ ಗೋಡೆ ಹಾಗೆ ನಿಂತದ್ದು ಏಕೆ?” ಅಂದನು ಉರೆಯ.
“ಏಕೆ, ಅಂದರೆ – ನನ್ನ ಕುಶಿ. ನಿನ್ನಂಥ ನರಾಧಮನ ಜತೆ ಸೇರಿ ಗೋಡೆ ಹಾಗೆ ಆಗಿರುವುದು ಹೌದು. ಆದರೆ, ಈಗ ಮನುಷ್ಯ ಆಗಿದ್ದೇನೆ” ಅಂದರು ಮಿ. ಮೈಕಾಬರ್.
“ಸದ್ಯ ಹೇಳಿದಂತೆ ಕೇಳು. ನಿನ್ನ ನಾಲಿಗೆ, ಮತ್ತೆ ಅದಕ್ಕೆ ತಕ್ಕಂಥ ಬುದ್ಧಿ, ಈ ಎರಡು ನಿನ್ನ ವೈರಿ! ನಿನಗೆ ನಾನು ಸಲಿಗೆ ಕೊಟ್ಟದ್ದು ಹೆಚ್ಚಾಯಿತು. ಬುದ್ಧಿ ಕಲಿಸುತ್ತೇನೆ ಮತ್ತೆ. ಈಗ ನಾನು ಹೇಳಿದಂತೆ ಮಾಡು” ಹೀಗೆ ಪುನಃ ಗದರಿಸಿದ ಉರೆಯ.

ಉರೆಯನ ಮಾತಿಗೆ ಸೀದಾ ಉತ್ತರ ಕೊಡುವುದರ ಬದಲು, ಸಿಟ್ಟಿನ ಉದ್ವೇಗದಿಂದ ಸಾಧಾರಣ ಆರ್ಭಟಿಸಿದಂತೆಯೇ ಮಿ. ಮೈಕಾಬರರು ಅಂದರು –
“ಇಡೀ ಲೋಕದಲ್ಲಿರುವ ನರಾಧಮರಿಗಿಂತೆಲ್ಲ ಅತ್ಯಂತ ಹೀನ ನರಾಧಮನನ್ನು ನೋಡಬೇಕಾದರೆ, ನೋಡಬೇಕು ಈ ಹೀಪನನ್ನು. ಯಾವ ನರಾಧಮನು ನನ್ನನ್ನು ಹಾಳು ಮಾಡಿ, ಅವನ ಸಹವಾಸದಿಂದ ಈಗ ನನಗೆ ಬುದ್ಧಿ ಬಂದಿದೆಯೋ ಆ ನರಾಧಮನೇ ಈ ಹೀಪ್” ಎಂದು. ಇವರು `ಹೀಪ್’ ಎಂಬ ಶಬ್ದವನ್ನು ಉಚ್ಚರಿಸುವಾಗಲೆಲ್ಲ `ಹೀ’ ಎಂಬ ಅಕ್ಷರವನ್ನು ಬಹು ಗಟ್ಟಿಯಾಗಿ ಉಚ್ಚರಿಸುತ್ತಾ ಆ `ಹೀ’ಯ ಭಾರದಿಂದಲೇ ಉರೆಯನ ತಲೆಯನ್ನು ಪುಡಿಗೈವ ಪ್ರಯತ್ನದಲ್ಲಿದ್ದಂತೆ ತೋರುತ್ತಿದ್ದರು.

ಉರೆಯನಿಗೆ ಸಿಟ್ಟು ಏರಿತು. ನನ್ನನ್ನು ನೋಡಿ ಕಿಡಿಕಿಡಿಯಾಗಿ –
“ಕಾಪರ್ಫೀಲ್ಡ್, ಎಚ್ಚರಿಕೆ! ನಮ್ಮ ಮನೆಗೆ ಬಂದು, ನಮ್ಮ ನೌಕರರಿಗೆ ಲಂಚ ಕೊಟ್ಟು ನಿಮ್ಮ ಕಡೆ ಮಾಡಿಕೊಂಡು, ನಮ್ಮ ಆಫೀಸಿನಲ್ಲಿ ಈ ತರದ ಮಸಲತ್ತು ಮಾಡುವುದರಲ್ಲಿ ಏನಿದೆ ಗೊತ್ತಿದೆಯೇ?” ಅಂದನು.

ಈ ಸಮಯದಲ್ಲೇ ಸ್ವಲ್ಪ ಮೊದಲೇ ಹೊರಗೆ ಹೋಗಿದ್ದ ಟ್ರೇಡಲ್ಸನು ಉರೆಯನ ತಾಯಿಯನ್ನು ಬೈಠಖಾನೆಯ ಒಳಗೆ ಕರೆದುಕೊಂಡು ಬಂದನು.
“ಇಗೋ ಉರೆಯಾ. ನಿನ್ನ ತಾಯಿಯ ಪರಿಚಯವನ್ನು ಮಾಡಿಕೊಂಡು ನಾನು ಅವರನ್ನು ಕರೆದುಕೊಂಡು ಬಂದಿದ್ದೇನೆ” ಅಂದನು ಟ್ರೇಡಲ್ಸ್.

ಟ್ರೇಡಲ್ಸನು ಉರೆಯನ ತಾಯಿಯನ್ನು ಮನೆ ಒಳಗೇ ಕಂಡು, ಏನೋ ಕೆಲವು ವಿಷಯ ಮಾತಾಡಿ, ಇಲ್ಲಿಗೆ ಕರೆದುಕೊಂಡು ಬಂದದ್ದಿರಬೇಕು – ಏಕೆಂದರೆ, ಅವಳು ಒಳಗೆ ಬಂದ ಹಾಗೆಯೇ ತನ್ನ ಮಗನನ್ನು ಬಹು ಪ್ರೀತಿಯಿಂದಲೂ ನಮ್ಮನ್ನೆಲ್ಲ ಬಹು ವಿನಯದಿಂದ ನೋಡುತ್ತಾ –
“ಅಪ್ಪಾ ಉರೀ ರಾಜಿ ಮಾಡಿಕೋ. ತಗ್ಗಿ ನಡಿ, ಬಗ್ಗಿ ನಡಿ. ಅವಸರ ಮಾಡಬೇಡ ಮಗನೇ” ಎಂದು ಅಂದಳು.
“ಏನು ಮಾಡುತ್ತಿದ್ದೀಯಾ ಅಮ್ಮಾ! ಬಾಯಿ ಮುಚ್ಚಿ ಕುಳಿತುಕೋ. ನೀನೇ ಹೀಗೆಲ್ಲ ಮಾತಾಡಿದರೆ ನಮ್ಮ ಶತ್ರುಗಳಿಗೆ ಆಗುವ ಸಂತೋಷ ಎಷ್ಟು ಗೊತ್ತಿದೆಯೇ? ನಿನ್ನ ಇಂಥ ಒಂದೊಂದು ಮಾತಿಗೆ ಕಾಪರ್ಫೀಲ್ದ್ ನೂರು ನೂರು ಪೌಂಡು ಕೊಟ್ಟಾನು! ನಿನಗೆ ಬೇಡಾ ಈ ಕೆಲಸ” ಎಂದು ತನ್ನ ತಾಯಿಯನ್ನು ಗದರಿಸಿ ಟ್ರೇಡಲ್ಸನನ್ನು ಸಿಟ್ಟಿನಿಂದ ನೋಡುತ್ತಾ –
“ನಮ್ಮ ಮನೆಯಲ್ಲಿ ನಿಮಗೆ ಕೆಲಸವೇನು? ನಿಮಗಿಲ್ಲಿ ಪ್ರವೇಶಕ್ಕೆ ಅಧಿಕಾರ ಕೊಟ್ಟವರ್ಯಾರು?” ಎಂದು ಕೇಳಿದನು.

ಟ್ರೇಡಲ್ಸನು ಸ್ವಲ್ಪವೂ ಸಿಟ್ಟುಗೊಳ್ಳಲಿಲ್ಲ. ಆ ದಿನದ ಟ್ರೇಡಲ್ಸನ ಎಲ್ಲಾ ಕಾರ್ಯಗಳಲ್ಲೂ ನಿರುದ್ವಿಗ್ನತೆ, ಕೆಲಸಗಳಲ್ಲಿ ಹಟ, ಪರಿಷ್ಕಾರತೆ,  ಕಂಡು ಬರುತ್ತಿದ್ದುವು. ಅವನಲ್ಲಿದ್ದ ಈ ಗುಣಗಳ ಉಪಯೋಗ ಅಂದು ನಮಗೆಲ್ಲರಿಗೂ ತುಂಬಾ ಉಪಕಾರ ಮಾಡಿದೆ. ಯಾವ ಚಮತ್ಕಾರ, ಗುಟ್ಟುಗಳ ಪ್ರಯೋಗದಿಂದಲೂ ಉರೆಯನನ್ನು ಹಿಡಿದಿರುವಂತೆ ತೋರಿಸಿಕೊಳ್ಳದೆ, ಸ್ವಲ್ಪವೂ ಗಾಬರಿಗೊಳ್ಳದೆ, ಅವನು ಅಂದನು –
“ನಾನು ಮಿ. ವಿಕ್ಫೀಲ್ಡರ ಮಿತ್ರನು ಮತ್ತು ಕಾನೂನು ಪ್ರಕಾರ ಅಧಿಕಾರ ಹೊಂದಿರುವ ಏಜಂಟನು. ಮಿ. ವಿಕ್ಫೀಲ್ಡರಿಗೆ ಸಂಬಂಧಪಡುವ ಎಲ್ಲಾ ವ್ಯವಹಾರಗಳಲ್ಲಿ ಅವರ ಬದಲಿಗೆ ವರ್ತಿಸುವ ಸಂಪೂರ್ಣ ಅಧಿಕಾರವನ್ನು ರಿಜಿಸ್ಟರ್ಡ್ ರಿಕಾರ್ಡು ಮೂಲಕ ನಾನು ಪಡೆದಿರುತ್ತೇನೆ. ಈ ಅಧಿಕಾರ ಪತ್ರ ಇಲ್ಲೇ ನನ್ನ ಜೇಬಿನಲ್ಲಿ ಇದೆ. ಆದ್ದರಿಂದ ನೀನು ನನ್ನ ಸಮಕ್ಷಮದಲ್ಲಿ ಮಿ. ಮೈಕಾಬರರ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನನ್ನನ್ನು ಸಮಾಧಾನಪಡಿಸಲು ಬದ್ಧನಾಗಿರುತ್ತೀ.”

ಟ್ರೇಡಲ್ಸನು ಹೀಗೆಂದು, ಮಿ. ಮೈಕಾಬರರನ್ನು ನೋಡಿ –
“ಮಿ. ಮೈಕಾಬರರೇ ನಿಮ್ಮ ಕಡೆ ಮುಂದರಿಸೋಣಾಗಲಿ” ಅಂದನು.
ಈ ಮಧ್ಯೆ ಉರೆಯ ಹೇಳಿದನು –
“ಆ ಮುದಿ ಕತ್ತೆ, ತನ್ನ ಮುದಿತನದ ಜತೆಗೆ ಅಮಲನ್ನು ಸೇವಿಸಿ, ನೀವು ಬರೆದುಕೊಟ್ಟದ್ದೆಲ್ಲಕ್ಕೂ ದಸ್ಕತ್ತು ಮಾಡಿರಬೇಕು.  ಆ ಅಧಿಕಾರ ಪತ್ರ ಸಿಂಧುವಾಗತಕ್ಕದ್ದಲ್ಲ. ಅದನ್ನು ಒಳಸಂಚು, ಮೋಸ, ಬಲಾತ್ಕಾರಗಳಿಂದ ಪಡೆದಿರುತ್ತೀರಿ!”
“ಹೌದು, ಈ ಕ್ರಮಗಳೆಲ್ಲ ನಡೆದಿದೆ – ಆದರೆ, ಅದು ನಡೆದದ್ದು ನಿನ್ನ ಕಡೆಯ ಅನುಭವದಲ್ಲಿ ತಾನೆ? ನೀನು ಮಿ. ವಿಕ್ಫೀಲ್ಡರವರೊಡನೆ ನಡೆಸಿರುವ ಈ ವರೆಗಿನ ವಹಿವಾಟಗಳೆಲ್ಲಾ ಒಳಸಂಚು, ಮೋಸ, ಬಲಾತ್ಕಾರಗಳಿಂದ ನಡೆದಿವೆ. ನೀನು ಮಿ. ವಿಕ್ಫೀಲ್ಡರಿಂದ ತುಂಬಾ ಹಣವನ್ನು ಅಕ್ರಮದಿಂದ ಎಳೆದು ತೆಗೆದಿರುತ್ತೀ ಎಂಬುದೇ ನಮ್ಮ ಆರೋಪ, ನಿನ್ನ ಮೇಲೆ. ನೀನು ಆ ವಿಷಯದಲ್ಲಿ ನಮ್ಮನ್ನು ಸಮಾಧಾನಪಡಿಸಬೇಕು...” ಎಂದು ಟ್ರೇಡಲ್ಸನು ಹೇಳಿ ಪೂರೈಸುವುದರೊಳಗೆ ಉರೆಯನ ತಾಯಿ ಮಗನನ್ನು ನೋಡಿ –
“ಉರೀ ಮಗನೇ...” ಎಂದಂದಳು. ಅಷ್ಟಕ್ಕೆ ಉರೆಯಾ –
“ಬಾಯಿಮುಚ್ಚು, ನಾಲಿಗೆ ಕತ್ತರಿಸುತ್ತೇನೆ” ಎಂದು ಗದರಿಸಿದ.
ಈ ಸಮಯದಲ್ಲಿ ಮಿ. ಮೈಕಾಬರರು ನಮಗೆಲ್ಲ ಕೇಳಿಸುವಂತೆ – ಆದರೆ, ಆ ಶಬ್ದವನ್ನು ಪೂರ್ಣ ಪ್ರಯೋಗಿಸುವುದು ಸಭ್ಯತೆಯಲ್ಲವೆಂದು ಅಂಜುತ್ತಾ - `ಸ್ಕೌಂಡ್’ (ಸ್ಕೌಂಡ್ರಲ್ = ವಂಚಕ) ಎಂದು ಮಾತ್ರ ಹೇಳುತ್ತಿದ್ದರು. ತಾಯಿ-ಮಗನ ಚರ್ಚೆ ಪೂರಯಿಸಿದ ಮರುಕ್ಷಣದಲ್ಲಿ, ಮಿ. ಮೈಕಾಬರರು ತಮ್ಮ ರೂಲ್ ದೊಣ್ಣೆಯನ್ನು ಬಲಗೈಯ್ಯಲ್ಲಿ ಮೇಲೆತ್ತಿ ಹಿಡಿದುಕೊಂಡು, ನೋಡುವವರಿಗೆ ಇತರರನ್ನು ಹೆದರಿಸುವಂತೆ ತೋರುತ್ತಾ – ನಿಜವಾಗಿಯೂ ತಮ್ಮ ಆತ್ಮರಕ್ಷಣೆಗಾಗಿ ಮಾತ್ರ ಹಿಡಿದಿದ್ದು, ಎಡಗೈಯಲ್ಲಿ ತುಂಬಾ ಬರಹದ ಒಂದು ಪತ್ರದ ಕಟ್ಟನ್ನು ಹಿಡಿದುಕೊಂಡು, ಅದರಿಂದ, ಟ್ರೇಡಲ್ಸನ ಅಪ್ಪಣೆ ಪ್ರಕಾರ ಓದತೊಡಗಿದರು.
“ಶ್ರೀಮತಿ ಟ್ರಾಟೂಡರೆ ಮತ್ತು ಇತರ ಮಹನೀಯರುಗಳೇ
“ಪ್ರಪಂಚದಲ್ಲಿ ಈವರೆಗೆ ಜನಿಸಿರಬಹುದಾದ ಪಾಪಿಗಳಲ್ಲಿ ಅಗ್ರಗಣ್ಯನಾದ ಮಹಾಪಾಪಿಯನ್ನು ನಾನು ತಮ್ಮೆಲ್ಲರ ಸಮ್ಮುಖದಲ್ಲಿ ಆಪಾದಿಸಲಿರುವೆನು. ಈ ಆಪಾದನೆಯ ಉದ್ದೇಶದಲ್ಲಿ ಯಾವ ಸ್ವಾರ್ಥವೂ ಇಲ್ಲವೆಂಬುದನ್ನು ಮೊದಲಾಗಿ ವಿಜ್ಞಾಪಿಸಿಕೊಳ್ಳುವೆನು. ಕಡುವಾದ ಬಡತನವು ನನ್ನನ್ನು ನನ್ನ ತೊಟ್ಟಿಲಿನಿಂದಲೇ ಹಿಂಬಾಲಿಸಿ, ಮನುಷ್ಯತ್ವವನ್ನೇ ಮುರಿದು, ಜೀವವೇ ಭಾರವಾಗಿ ತೋರುವಂತೆಯೂ ಮಾಡಿದ್ದಿದೆ. ಅಪಮಾನಾಸ್ಪದವಾದ ಪ್ರಸಂಗಗಳಲ್ಲಿ ಸಿಕ್ಕಿಬಿದ್ದು, ಬಳಲಿ, ಹುಚ್ಚೇ ಹಿಡಿಯಬೇಕಾಗಿದ್ದಷ್ಟೂ ಕಷ್ಟ ಪರಂಪರೆಗಳನ್ನು ಅನುಭವಿಸಿದ್ದೆನು. ಅನುಭವಗಳಿಂದ ಪಳಗಿದ್ದೇನೆ. ನನ್ನ ಜೀವನದ ಪರಿಸ್ಥಿತಿ ಹೀಗಿದ್ದರು ಯಾವ ಸ್ವಾರ್ಥವೂ ಇಲ್ಲದೆ ಈ ಕಾರ್ಯ ಕೈಗೊಳ್ಳುತ್ತಿದ್ದೇನೆ.

“ನನ್ನ ಇಂಥ ಬಡತನದ ಅತ್ಯಂತ ಹೀನ ಪರಿಸ್ಥಿತಿಯಲ್ಲಿದ್ದಾಗಲೇ ವಿಕ್ಫೀಲ್ಡ್ ಮತ್ತು ಹೀಪ್ ಸಂಸ್ಥೆ ಎಂದನ್ನಲೇ, ಸಂಘ ಎಂದನ್ನಲೇ ಬ್ಯೂರೋ ಎಂದನ್ನಲೇ ಅಂತೂ ಈ ಆಫೀಸಿಗೆ ಕೆಲಸಕ್ಕಾಗಿ ಸೇರಿದೆನು. ಘನವಂತ ಮಿ. ವಿಕ್ಫೀಲ್ಡರ ಹೆಸರು ಈ ಸಂಘಕ್ಕೆ ಇರುವುದಾದರು ಇದರ ಮುಖ್ಯ ಚಾಲಕನು ಈ, ಆ ಮಹಾವಂಚಕ, ಫೋರ್ಜರೀಕೋರ ಹೀಪ್ ಮಾತ್ರವೆಂಬುದನ್ನು ತಾವೆಲ್ಲಾ ಜ್ಞಾಪಕದಲ್ಲಿಡಬೇಕು.”

ಮಿ. ಮೈಕಾಬರರು ಹೀಗೆ ಓದುತ್ತಿದ್ದಾಗ ಉರೆಯ ಅವರ ಹತ್ತಿರ ಬಂದು ಅವರು ಓದುತ್ತಿದ್ದ ಕಾಗದವನ್ನು ಎಳೆದುಬಿಡಲು ಪ್ರಯತ್ನಿಸಿದನು. ಆದರೆ, ಮಿ. ಮೈಕಾಬರರು ಕಾಗದವನ್ನು ಅವನಿಗೆ ಸಿಕ್ಕದಂತೆ ಹಿಂದೆಳೆದು, ಮುಂದೆ ಬಂದಿದ್ದ ಉರೆಯನ ಹಸ್ತಕ್ಕೆ ತನ್ನ ಕೈಯ್ಯಲ್ಲಿದ್ದ ರೂಲ್ ದೊಣ್ಣೆಯಿಂದ ಬಲವಾಗಿ ಒಂದು ಪೆಟ್ಟನ್ನು ಕೊಟ್ಟರು. ಉರೆಯ ಕೈಯ್ಯನ್ನು ಉಜ್ಜಿಕೊಳ್ಳುತ್ತಾ ದೂರ ಸರಿದು ನಿಂತನು. ಮಿ. ಮೈಕಾಬರರು ಉರೆಯನನ್ನು ಪ್ರತ್ಯೇಕ ಗದರಿಸಿ, ಪುನಃ ಆ ಪತ್ರವನ್ನು ಓದಲಾರಂಭಿಸಿದರು –
“ನನ್ನ ಸಂಬಳವೆಷ್ಟೆಂಬುದನ್ನು ನಾವು ಮೊದಲಾಗಿ ನಿಶ್ಚೈಸಿಕೊಳ್ಳಲಿಲ್ಲ. ಕಡಿಮೆ ಪಕ್ಷದಲ್ಲಿ ವಾರಕ್ಕೆ ಎರಡುವರೆ ಶಿಲಿಂಗ್ ಸಲ್ಲತಕ್ಕದ್ದೆಂಬುದನ್ನು ಮಾತ್ರ ನಿಶ್ಚೈಸಿಕೊಂದು, ಅನಂತರ ನಾನು ಮಾಡಬೇಕಾದ ಕಾರ್ಯಗಳ ವೈಶಿಷ್ಟ್ಯ, ಗಡುತರ, ಬಾಹುಳ್ಯ ಇತ್ಯಾದಿಗಳನ್ನು ಅನುಸರಿಸಿ, ಸಂಬಳವನ್ನು ಏರಿಸಬೇಕು, ಏರಿಸಬಹುದು ಎಂದು ನಿಶ್ಚೈಸಿಕೊಂಡಿದ್ದೆವು. ಆದರೆ ಸಂಬಳ ಹೆಚ್ಚುವರಿಯಲು ಬೇಕಾದ ಈ ವಿಧದ ಮೂರು ಯೋಗ್ಯತೆಗಳ ಸಮಗ್ರ ಯೋಗ್ಯತೆ ಏನಾಗಿತ್ತೆಂದು ಹೇಳಬೇಕೇ? ನನ್ನ ದಾರಿದ್ರ್ಯ ಹೆಚ್ಚಿ, ನನ್ನ ಹಣದ ಅಭಿಲಾಷೆ ಹೆಚ್ಚಿ, ನನ್ನ ಮನುಷ್ಯತ್ವವನ್ನು ಕಳೆದುಕೊಂಡು – ಅರ್ಥಾತ್, ಈ ಮಹಾವಂಚಕ, ಕ್ರೂರಿ, ಕೃತಘ್ನ ಹೀಪನ ಪಾಪ ಕೃತ್ಯಗಳಲ್ಲಿ ನಾನು ಸಹಕರಿಸಿ, ಅವನ ಪಾಪದ ಮಟ್ಟಕ್ಕೆ ನಾನು ಎಷ್ಟೆಷ್ಟು ನನ್ನ ನೌಕರಿ, ಕೆಲಸಗಳಿಂದ ಏರುವೆನೋ ಅಷ್ಟೆಲ್ಲ ನನ್ನ ಯೋಗ್ಯತೆಯು (ಹೆಚ್ಚು ಸಂಬಳ ಪಡೆಯಲು) ಏರುತ್ತದೆಂಬುದೇ ಆಗಿತ್ತು. ಈ ತೆರನಾಗಿ ಈ ನರಾಧಮನು ನನ್ನ ಮತ್ತು ನನ್ನ ಕುಟುಂಬದ ಸುತ್ತಲೂ ಒಂದು ವಿಧದ ಬಲೆಯನ್ನೇ ಒಡ್ಡಿದನು. ಆದರೂ ಉರೆಯನ ಕೈಯ್ಯಿಂದ ಕೆಲವು ಸಾಲಗಳನ್ನೂ ಪಡೆಯಬೇಕಾಗಿ ಬರುತ್ತಿತ್ತು. ಅಂಥಾ ಸಾಲಗಳ ಬಗ್ಗೆ ಪ್ರೋನೋಟು ಬರಕೊಟ್ಟು ನಾನು ಆ ರೀತಿಯಲ್ಲೂ ಉರೆಯನ ಬಲೆಯೊಳಗೆ ಬಂಧಿತನಾದೆನು.”

ಮಿ. ಮೈಕಾಬರರು ಉರೆಯನ ಕೈಕೆಳಗೆ ತುಂಬಾ ಕಷ್ಟಪಟ್ಟಿರಬೇಕೆಂಬುದೂ ಅವರ ಸಂಬಳಕ್ಕೆ ಮೀರಿದಷ್ಟು ಜವಾಬ್ದಾರಿಯುತ ಕೆಲಸಗಳನ್ನು ಮಾಡಿ ಹಿಂಸೆಗೆ ಒಳಗಾಗಿರಬೇಕೆಂಬುದೂ ನಿರ್ವಿವಾದ. ಆದರೆ, ಅಂದಿನ ಕಷ್ಟ ಮತ್ತು ಹಿಂಸೆಗಳನ್ನೆಲ್ಲ ಮರೆಸಿಬಿಡುವಷ್ಟರ ಪ್ರತಿಫಲವೇ ಅವರ ಇಂದಿನ ಆಪಾದನೆಯಲ್ಲು, ಆಪಾದನೆಯನ್ನು ಓದಿ ಹೇಳುವುದರಲ್ಲೂ ಇದೆಯೆಂಬಷ್ಟು ಸಂತೋಷ, ತೃಪ್ತಿಗಳಿಂದ ಮಿ. ಮೈಕಾಬರರು ಆ ಪತ್ರವನ್ನು ಓದಿದರು. ಸಾಧಾರಣ ಒಂದು ಪಾರ್ಲಿಮೆಂಟು ಭಾಷಣವಾದರೂ ಇಷ್ಟೊಂದು ಗಂಭೀರತೆಯಿಂದ ಆಗಲಿಲ್ಲವೆಂಬಂತೆ ಅವರು ಓದಿದರು. ಮತ್ತು ಮುಂದುವರಿಸಿ ಓದಿದರು –

“ನನ್ನ ಆರ್ಥಿಕ ಅಧೋಗತಿಯು ಹೆಚ್ಚಿದಾಗಲೇ ಉರೆಯ ತನ್ನ ವಂಚಕತನದ ರಿಕಾರ್ಡುಗಳನ್ನು ಸ್ವಲ್ಪ ಸ್ವಲ್ಪವಾಗಿ  ನನ್ನಿಂದ ಮಾಡಿಸಿಕೊಳ್ಳುತ್ತಿದ್ದನು. ಮೊದಮೊದಲು ಅವನು ನನಗೆ ಕೊಡುವ ಅನುಭವಗಳು ಅರ್ಥವಾಗುತ್ತಿರಲಿಲ್ಲ. ನನ್ನ ಜವಾಬ್ದಾರಿಯ ಅರಿವೂ ನನಗೆ ಆಗಿರಲಿಲ್ಲ. ಆದರೆ, ಕ್ರಮೇಣವಾಗಿ – ಬಹ್ವಂಶ ಕಾರ್ಯ ನನ್ನ ಸಹಕಾರದಿಂದ ನಡೆದುಹೋದ ಮೇಲೆ ನನಗೆ ಅರ್ಥವಾಯಿತು. ಉರೆಯನ ಪಾಪ ಕೃತ್ಯಗಳ ರಾಶಿಯಿಂದ ಕೆಲವನ್ನು ಮಾತ್ರ ಹೆಕ್ಕಿ ತೆಗೆದು ತಮ್ಮೆದುರು ಇಡಲು ಇಚ್ಛಿಸುತ್ತೇನೆ. ದಯಮಾಡಿ ಕೇಳಬೇಕು.”

ಇಷ್ಟು ಓದುವಾಗಲೇ ಉರೆಯನ ತಾಯಿಯು ಬಹು ವಿನಯದಿಂದ –
“ಮಹನೀಯರೇ ಬೇಸರಿಸಬೇಡಿರಿ. ಉರೆಯನು ಉಗ್ರ ಸ್ವಭಾವದವನಲ್ಲ. ಅವನು ದೀನನು, ತಮ್ಮ ಕ್ಷಮಾಯಾಚನೆ ಮಾಡುವವನು” ಎಂದು ಹೇಳಿ, ಮಗನನ್ನು ನೋಡಿ –
“ಉರೀ ಬಗ್ಗಿ ನಡೆದುದರಲ್ಲಿ ಅಪಕೀರ್ತಿಯಿಲ್ಲ ಮಗನೆ – ಕ್ಷಮೆಯನ್ನು ಬೇಡು” ಎಂದು, ಬಹುಮಟ್ಟಿಗೆ ರೋದಿಸಿದಂತೆಯೇ ಹೇಳಿದಳು.
“ಸುಮ್ಮನೆ ಇರಮ್ಮಾ – ತಪ್ಪು ಮಾಡಿದ್ದರೆ ತಾನೆ ಕ್ಷಮೆ ಬೇಡುವುದು?” ಎಂದು ಉರೆಯ ತಾಯಿಗೆ ಗದರಿಸಿದಂತೆ ಉತ್ತರವಿತ್ತನು.

ಮಿ.ಮೈಕಾಬರರು ಓದಿದರು –
“ನಾನು ವಿಷಯಗಳನ್ನು ಇಲ್ಲಿ ಸೂಕ್ಷ್ಮವಾಗಿ ಮಾತ್ರ ಹೇಳುವೆನು. ಮುಂದೆ ಕೋರ್ಟುಗಳಲ್ಲಿ ಇನ್ನೂ ಸೂಕ್ಷ್ಮದ ವಿವರಗಳನ್ನು ವಿಚಾರಿಸಿ ಹೊರಹಾಕಲಿದೆ. ಪ್ರಕೃತ, ಸಾರಾಂಶ ರೂಪದಲ್ಲಿ ಅವನ ತಪ್ಪುಗಳು ಹೀಗಿವೆ –
“ಒಂದನೆಯದು –
“ಮಿ. ವಿಕ್ಫೀಲ್ಡರು ದೇಹ ಮತ್ತು ಮನಸ್ಸಿನಲ್ಲಿ ಅಶಕ್ತರಾಗಿದ್ದಾಗ, ಅಥವಾ ಮನಸ್ಸು ಪಲ್ಲಟವಾಗಿದ್ದಾಗ ಅಥವಾ ಅಂಥ ಸಮಯಗಳಿಗಾಗಿ ಕಾದು ಕುಳಿತು, ಅವು ದೊರಕಿದಾಗ ಮಾತ್ರ, ಉರೆಯನು ಈ ಸಂಘದ ಬಹು ಜವಾಬ್ದಾರೀ ಕಾರ್ಯಗಳ ರಿಕಾರ್ಡುಗಳನ್ನು ತಯಾರಿಸಿರುತ್ತಾನೆ. ಅವರ ದಸ್ಕತ್ತುಗಳನ್ನು ರಿಕಾರ್ಡುಗಳನ್ನು ಹಾಕಿಸಿದ್ದೂ ಅಂಥ ಸಮಯದಲ್ಲಿ ಮಾತ್ರ. ಮಿ. ವಿಕ್ಫೀಲ್ಡರು ಮಾತ್ರ ಆಡಳಿತದಾರರಾಗಿ ಇರತಕ್ಕದ್ದೆಂದು ಇಡಲಾಗಿದ್ದ ಒಂದು ಸಂಚಯದ ನಿಧಿಯನ್ನು ಅವರೇ ಪಡೆದು ಖರ್ಚು ಮಾಡಿರುವಂತೆ ರಿಕಾರ್ಡು ತಯಾರಿಸಿ, ಅಂಥ ಹಣವನ್ನು ಬೇಂಕಿನಿಂದ ತಾನು ಪಡೆದುಕೊಂಡಿದ್ದಾನೆ. ಈ ಸಂಬಂಧದ ಹಣವು ಹನ್ನೆರಡು ಸಾವಿರದ ಆರನೂರ ಹದಿನಾಲ್ಕು ಪೌಂಡು, ಎರಡು ಶಿಲಿಂಗು, ಒಂಭತ್ತು ಪೆನ್ಸ್.
“ಉರೆಯನು ಕಳ್ಳ ಡೈರಿ ಬರೆದಿಡುತ್ತಿದ್ದನು. ತನ್ನ ಈ ಒಳಸಂಚಿನ ಡೈರಿಯು ಕೊನೆಗೆ ಏನಾಯಿತು? ಸುಟ್ಟು ಬೂದಿಯಾಯಿತೇ ಎಂದು ವಿಚಾರಿಸತಕ್ಕದ್ದಿದೆ.

“ಇನ್ನು ಎರಡನೆಯದು –
“ಆಪಾದನೆ ಒಂದರಲ್ಲಿನ ಹಣವನ್ನು ಪೂರಾ ಉರೆಯನು ತನ್ನ ಸ್ವಂತ ಲೆಕ್ಕದಲ್ಲಿ ಬೇಂಕಿನಲ್ಲಿಟ್ಟಿದ್ದಾನೆ. ಮಿ. ವಿಕ್ಫೀಲ್ಡರಿಂದ ತೆಗೆದ ಹಣವನ್ನೇ ಅವರಿಗೆ ಸಾಲ ಕೊಟ್ಟಂತೆಯೂ ಮಾಡಿ, ಅಂಥ ಸಾಲದ ರಿಕಾರ್ಡುಗಳಿಗೆ ನನ್ನ ಸಾಕ್ಷಿಯನ್ನು ಹಾಕಿಸಿರುತ್ತಾನೆ.”

ಇಷ್ಟು ಹೇಳುವಾಗ ಉರೆಯನು ತನ್ನ ಜೇಬಿನಿಂದ ಬೀಗದ ಕೈಗಳನ್ನು ತೆಗೆದುಕೊಂಡು ಪಕ್ಕದ ಒಂದು ಕಪಾಟಿನ ಬಾಗಿಲು ತೆರೆಯಲು ಹೊರಟನು. ಅಷ್ಟರಲ್ಲೇ ಮಿ.ಮೈಕಾಬರರು ಅಂದರು –
“ಗಾಬರಿಯಿಲ್ಲ – ಎಲ್ಲಾ ಸರಿಯಾಗಿದೆ. ಬೆಳಿಗ್ಗೆ ಆಫೀಸು ಕೆಲಸಕ್ಕೆ ರಿಕಾರ್ಡುಗಳನ್ನು ಹೊರಗಿಡಲು ನನ್ನನ್ನು ಬಿಟ್ಟಾಗ ಆ ಫೋರ್ಜರಿ ರಿಕಾರ್ಡನ್ನು ನಾನು ತೆಗೆದುಕೊಂಡು ಬಂದೋಬಸ್ತಾಗಿ ಇಟ್ಟಿದ್ದೇನೆ.” ಅನಂತರ ನಮ್ಮನ್ನೆಲ್ಲ ನೋಡಿ ಅವರು ಹೇಳತೊಡಗಿದರು –
“ಈಗಲೇ ಡೈರಿಯ ವಿಷಯವನ್ನೂ ಹೇಳಿಬಿಡುತ್ತೇನೆ – ಅದರಲ್ಲಿ ಸ್ವಲ್ಪ ಸ್ವಾರಸ್ಯವಿದೆ. ಆ ಡೈರಿಯನ್ನು ನಮ್ಮ ಕುಟುಂಬದ ಸುಖ ಸಂತೋಷಗಳನ್ನು ನಾಶಪಡಿಸಿದ ಈ ಉರೆಯನ ನಾಶಕ್ಕಾಗಿ ಮಿಸೆಸ್ ಮೈಕಾಬರಳು (ಅವಳ ಕುಟುಂಬದಿಂದ ಬಂದ ಉತ್ತಮ ಗುಣಗಳಲ್ಲಿ ಒಂದಾದ ರಿಕಾರ್ಡುಗಳನ್ನು ಕುರಿತಾದ ಎಚ್ಚರಿಕೆಯ ದೃಷ್ಟಿಯಿಂದ) ಕಾಪಾಡಿ ಇಟ್ಟಿರುವಳು. ನಾವು ಉರೆಯನ ಮನೆಯಲ್ಲಿ ಬಿಡಾರ ಬಿಟ್ಟನಂತರ ಬೂದಿ ರಾಶಿಯಲ್ಲಿ ಅದನ್ನು ಕಂಡು ಅದರಲ್ಲಿ ನೂರಾರು ಒಂದೇ ನಮೂನೆಯ ದಸ್ಕತ್ತುಗಳನ್ನು ಕಂಡು ಅವಳು ಆಶ್ಚರ್ಯದಿಂದ ತೆಗೆದಿಟ್ಟಿರುವಳು. ಅನಂತರ ಕೆಲವು ದಿನದ ಮೇಲೆ ನೋಡುವಾಗ ಆ ದಸ್ಕತ್ತುಗಳೆಲ್ಲಾ ಇತರರ ದಸ್ಕತ್ತುಗಳನ್ನು ಅನುಕರಣ ಮಾಡಿದ ಪ್ರಯತ್ನಗಳೆಂದು ತಿಳಿದೆವು” ಎಂದಿಷ್ಟು ಹೇಳಿ ಮಿ. ಮೈಕಾಬರರು ತಮ್ಮ ಎದೆ ಮುಂದೆ ಮಾಡಿ ಮಹಾ ವೀರಾವೇಶದ ಜರ್ಬಿನಲ್ಲಿ ನಿಂತರು. ಆಗ ಟ್ರೇಡಲ್ಸನು ಅಂದನು –
“ಹೌದು, ಆ ಡೈರಿಯ ವರ್ತಮಾನ ತಿಳಿದು ನಾನು ಅದನ್ನು ಮಿಸೆಸ್ ಮೈಕಾಬರಳಿಂದ ಕೇಳಿ ತೆಗೆದುಕೊಂಡಿದ್ದೇನೆ.”

“ಇನ್ನು ಮೂರನೆಯ ಆರೋಪ:” ಅಂದರು ಮಿ. ಮೈಕಾಬರರು –
“ಮೂರನೆಯದು ಮೊದಲಿನವುಗಳಿಗಿಂತೆಲ್ಲ ದೊಡ್ಡ ಅಪರಾಧ. ಪರ್ವತ ಶ್ರೇಣಿಗೊಂದು ಶಿಖರ, ಜ್ವಾಲಾಮುಖಿಗೆ ಒಂದು ಬಾಯಿ ಇರುವಂತೆ ಹೀಪನ ಪಾಪಕೃತ್ಯಗಳ ಶಿಖರಪ್ರಾಯವಾಗಿ ಮೂರನೆಯ ವಿಷಯವಿದೆ. ಯಾವ ಮಹಾತ್ಮನ ಸಹಾಯದಿಂದ ತನ್ನ ಜೀವನ ನಡೆಸಿ, ಯಾವ ಹೆಸರಿನ ಆಶ್ರಯ ದೊರಕಿದ್ದರಿಂದ ತಾನೊಬ್ಬ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟಿದ್ದನೋ ಆ ವಯೋವೃದ್ಧ, ಜ್ಞಾನವೃದ್ಧ ಮಿ. ವಿಕ್ಫೀಲ್ಡರ ಆರ್ಥಿಕ ಅಧಃಪತನವನ್ನು ತನ್ನ ಕೈಯಿಂದಲೇ ತಂದಿಟ್ಟು, ಅವರ ಅಂತರಂಗಕ್ಕೆ ಪ್ರವೇಶಿಸಿ, ಅವರ ಮನಸ್ಸನ್ನೇ ತನ್ನ ಮುಷ್ಟಿಯೊಳಗಿಟ್ಟುಕೊಂಡು, ಮಿ. ವಿಕ್ಫೀಲ್ಡಳನ್ನು ತನ್ನ ಸಹಧರ್ಮಿಣಿಯನ್ನಾಗಿ ಮಾಡಿಕೊಳ್ಳುವ ಮಹಾ ಕುತಂತ್ರವನ್ನು ಈ ಹೀಪ್ ನಡೆಸುತ್ತಿದ್ದಾನೆ. ದಾಂಪತ್ಯ, ಅನುರಾಗ ಮೊದಲಾದ ವಿಷಯಗಳು ಇಲ್ಲಿ ಒಂದು ದೃಷ್ಟಿಯಿಂದ ಅಪ್ರಾಸಂಗಿಕವೆಂದು ತೋರಿದರೂ ಮತ್ತೊಂದು ದೃಷ್ಟಿಯಿಂದ ಅದು ಉಚಿತವೂ ಹೌದೆಂದು ನಾನು ಅಭಿಪ್ರಾಯಪಡುತ್ತೇನೆ. ಮುಂದೆ ಹೀಪ್ ಮದುವೆಯಾಗಿ ಮನೆಮಾಡುವ ದೃಷ್ಟಿಯಿಂದಲೇ ಈ ಹಣದ ವಹಿವಾಟುಗಳೆಲ್ಲ ನಡೆದಿವೆ.” ಇಷ್ಟು ಹೇಳಿ ಮುಂದಿನ ವಿವರಣೆಗಳಿಗೋಸ್ಕರ ಸ್ವಲ್ಪ ಆಲೋಚಿಸಿ, ಕೊನೆಗೆ ಹೇಳತೊಡಗಿದರು.

“ಮಿ. ವಿಕ್ಫೀಲ್ಡ್ , ಮಿಸ್ ಏಗ್ನೆಸ್ ವಿಕ್ಫೀಲ್ಡ್ ಮತ್ತು ಇವರ ಸ್ಥಿರ ಚರ ಆಸ್ತಿಗಳಿಗೂ ಒಡ್ಡಿದ ಬಲೆಯಲ್ಲಿ ಮಿಸ್ ಏಗ್ನೆಸ್ ವಿಕ್ಫೀಲ್ಡಳು ಸಿಕ್ಕದೆ ಹೋದರೆ, ಬಾಕಿ ಉಳಿದವುಗಳನ್ನೆಲ್ಲ ತನ್ನದಾಗಿ ಮಾಡಿಕೊಳ್ಳುವ ತಂತ್ರವನ್ನು ಹೂಡಿರುತ್ತಾನೆ. ಅಂದರೆ, ಈ ಮನೆ, ಮನೆಯಲ್ಲಿರುವ ಮರಮುಟ್ಟು, ಪಾತ್ರ ಪದಾರ್ಥ, ಮಿ. ಮತ್ತು ಮಿಸ್ ವಿಕ್ಫೀಲ್ಡರ ಹೆಸರಿನಲ್ಲಿದ್ದ ಕಂಪೆನಿ, ಬೇಂಕು ಮೊದಲಾದ ಸಂಸ್ಥೆಗಳ ಪಾಲುಗಳನ್ನು ಹಣಗಳನ್ನು ಕ್ರಮವಾಗಿ ಕ್ರಯಸಾಧನವಾದಂತೆ ಮಿ. ವಿಕ್ಫೀಲ್ದರ ದಸ್ಕತ್ತಿಗೆಲ್ಲ ಮಿ. ಮೈಕಾಬರರ ಸಾಕ್ಷಿ ಹಾಕಿ ರಿಕಾರ್ಡುಗಳನ್ನು ತಯಾರಿಸಿಟ್ಟಿದ್ದಾನೆ. 

“ಇಂಥ ಮಹಾಪಾಪಿ ಹೀಪನಿಗೂ ಒಂದು ಧರ್ಮಬುದ್ಧಿ ಬಂದಿದೆ ನೋಡಿ – ಯಾವ ಮಹಾತ್ಮನ ಹಣದಿಂದ ತಾನು ಉಂಡು, ತಿಂದು, ಮೆರೆದು ಮನುಷ್ಯನಾಗಿ ನಿಂತಿರುವನೋ ಅಂಥವನ ಜೀವಮಾನಪರ್ಯಂತ ಅವರಿಗೆ ವರ್ಷಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ಜೀವನಾಂಶ ಹಣ ಕೊಡುವ ಉದಾರ ವ್ಯವಸ್ಥೆಯನ್ನೂ ಇವನು ಮಾಡಿರುತ್ತಾನೆ.

“ಇನ್ನು ಈ ಆಪಾದನೆಯ ಉಪಸಂಹಾರದ ಅಂಶ ಮಾತ್ರ ಬಾಕಿಯಿದೆ ಮತ್ತು ಆಪಾದನೆಯನ್ನು ರುಜುಮಾಡುವ ಕರ್ತವ್ಯವೂ ಬಾಕಿಯಿದೆ. ಈ ಎರಡು ಕೆಲಸಗಳನ್ನು ಪೂರೈಸಿದನಂತರ ಈವರೆಗೆ ಭೂಭಾರವಾಗಿ ಬದುಕಿರುವ ಈ ಬಡ ಕುಟುಂಬವು ಭೂಮಿಯಿಂದಲೇ ಮಾಯವಾಗಲಿದೆ. ತಮ್ಮೆದುರಿಗಿಟ್ಟಿರುವ ವಿಷಯಗಳನ್ನು ಸಂಗ್ರಹಿಸಲು ನನಗೆ ಬೇಕಾದ ಸಮಯ, ಆಗ ನಾನು ಅನುಭವಿಸಿದ ಕಷ್ಟ, ಇವನ್ನೆಲ್ಲ ನಾನು ತಮ್ಮೆದುರು ವಿವರಿಸಿ ತಮಗೆ ಜಿಗುಪ್ಸೆಯನ್ನುಂಟು ಮಾಡುವುದಿಲ್ಲ. ಈ ನನ್ನ ನಿಃಸ್ವಾರ್ಥ ಪ್ರಯತ್ನಗಳಿಗೆ ತಕ್ಕಂತೆ ಮಾತ್ರ ತಾವೆಲ್ಲರೂ ನನ್ನನ್ನು ತಮ್ಮ ಅಮೋಘ ನೆನಪಿನಲ್ಲಿ ಇಟ್ಟುಕೊಂಡರೆ ನನ್ನ ಈ ಎಲ್ಲ ಪರಿಶ್ರಮಗಳೂ ಸಾರ್ಥಕವೆಂದು ನಾನು ನಂಬುತ್ತೇನೆ. ನಾನು ದೇಶಪ್ರೇಮ, ಸಮಾಜಪ್ರೇಮ, ಕಲಾಪ್ರೇಮಕ್ಕಾಗಿ ಈ ಕೆಲಸ ಮಾಡಿರುತ್ತೇನೆಂಬುದನ್ನು ಮಹಾಜನರು ತಿಳಿದ ಪಕ್ಷಕ್ಕೆ ನನಗೆ ಸಂಪೂರ್ಣ ತೃಪ್ತಿ ಸಮಾಧಾನವಾಗಲಿದೆ.
ತಮ್ಮವನಾದ,
ವಿಲ್ಕಿನ್ಸ್ ಮೈಕಾಬರ್”

ಈ ಮಾತುಗಳನ್ನೆಲ್ಲ ಕೇಳುತ್ತ ಕುಳಿತಿದ್ದ ನಮ್ಮ ಅತ್ತೆ ಮಿ. ಮೈಕಾಬರರು ಓದುವುದನ್ನು ಮುಗಿಸಿದ ಕೂಡಲೇ ಎದ್ದು ಹೋಗಿ ಉರೆಯನ ಶರ್ಟಿನ ಕಾಲರ್ ಹಿಡಿದು ಎಳೆದು –
“ರಾಕ್ಷಸಾ ಪಾಪೀ ನನ್ನ ಆಸ್ತಿಯನ್ನು ಮಾರಿ ಹಣ ಗಳಿಸಿದವನು ನೀನಲ್ಲವೇ! ಮಿ. ವಿಕ್ಫೀಲ್ಡರ ಅಜಾಗ್ರತೆಯಿಂದ ಹಾಗಾಯಿತೆಂದು ನಂಬಿ, ಅವರ ಹೆಸರು ಹಾಳಾಗಬಾರದೆಂದು ನಾನು ಈವರೆಗೆ ಆ ನಷ್ಟವನ್ನೆಲ್ಲಾ ನಾನೇ ವಹಿವಾಟ ನಡೆಸಿ ತಂದುಕೊಂಡದ್ದೆಂದು ಹೇಳಿಕೊಂಡು ಬಂದಿರುವೆನು. ಈಗ ನಿಜ ತಿಳಿಯಿತು, ದ್ರೋಹೀ” ಎಂದು ಬೈದಳು.

ಇಷ್ಟಾದನಂತರ ನಾವು ಮಿ. ಮೈಕಾಬರರ ಮನೆಗೆ ಹೋದೆವು. ಅಲ್ಲಿ ನಾವು ಅನೇಕ ವಿಷಯಗಳನ್ನು ಮಾತಾಡುತ್ತಾ ಕುಳಿತಿದ್ದೆವು. ಟ್ರೇಡಲ್ಸನು ನಮ್ಮ ಜತೆ ಸೇರಲು ಸ್ವಲ್ಪ ಸಮಯ ಬೇಕಾಗಿದ್ದುದರಿಂದ ನಾವು ಏನೇನೋ ಹರಟೆ ಹೊಡೆಯುತ್ತಾ ಕುಳಿತೆವು. ಅತ್ತೆಗೆ ಮಿ. ಮೈಕಾಬರರನ್ನು ಕುರಿತು ಬಹುವಾದ ಸಂತೋಷವಾಗಿ, ಅವರ ಮುಂದಿನ ಜೀವನ ವೃತ್ತಿಯನ್ನು ಕುರಿತೂ ಸಹ ಆಲೋಚಿಸಿದಳು. ಆಗಲೇ ಅವಳಿಗೊಂದು ಆಲೋಚನೆ ಸ್ಫುರಿಸಿ, ಸ್ವಾವಲಂಬಿಗಳಾಗಿ ಬದುಕಬೇಕಾದ ಸ್ವಾಭಿಮಾನವುಳ್ಳ ಜನರು ಅನೇಕ ವೇಳೆ ಸ್ವದೇಶವನ್ನೇ ಬಿಟ್ಟು ಹೋಗುವ ಕ್ರಮವಿದೆಯೆಂದು ಅಂದಳು. ಈ ಅಭಿಪ್ರಾಯವನ್ನು ನಾವು ಚರ್ಚಿಸುತ್ತಾ ಆಸ್ಟ್ರೇಲಿಯವು ಹೊಸಬರಿಗೆ ಸಾಕಷ್ಟು ಆನುಕೂಲ್ಯಗಳನ್ನು ಒದಗಿಸಬಲ್ಲ ಭೂ ಸಂಪತ್ ಸಮೃದ್ಧಿಯ ಸ್ಥಳವೆಂದೂ ಹೇಳಿದೆವು. ಮಿ. ಮೈಕಾಬರರಿಗೆ ಈ ಆಲೋಚನೆ ಬಹು ಉತ್ತಮವೆಂದು ತೋರಿ, ತಾವು ತಮ್ಮ ಭವಿಷ್ಯದ ಅಭಿವೃದ್ಧಿಗಾಗಿ ಆಸ್ಟ್ರೇಲಿಯಕ್ಕೆ ಸಂಸಾರ ಸಮೇತರಾಗಿ ಹೋಗುವುದೆಂದು ನಿರ್ಧರಿಸಿದರು. ಅಷ್ಟೂ ಅಲ್ಲದೆ ಆಸ್ಟ್ರೇಲಿಯದಲ್ಲಿನ ಸುಂದರ ದೃಶ್ಯಗಳನ್ನೂ ಸಂಪದಭಿವೃದ್ಧಿಯಿಂದ ತಾವು ಮೆರೆಯುವ ಸಂದರ್ಭಗಳನ್ನೂ ಮಾತುಗಳಿಂದ ಚಿತ್ರಿಸಿ ಆನಂದಿಸತೊಡಗಿದರು.

ಉರೆಯನನ್ನು ಪೋಲೀಸರ ವಶಕ್ಕೆ ಒಪ್ಪಿಸಿ, ರಿಕಾರ್ಡುಗಳನ್ನು ಭದ್ರಪಡಿಸಿಟ್ಟು ಟ್ರೇಡಲ್ಸನೂ ಸ್ವಲ್ಪ ಹೊತ್ತಿನಲ್ಲಿ ನಮ್ಮ ಜತೆಗೆ ಬಂದು ಸೇರಿದನು. ಆ ದಿನವೇ ನಾವು ನಾಲ್ವರೂ ಕೇಂಟರ್ಬರಿಯಿಂದ ಲಂಡನ್ನಿಗೆ ಬಂದೆವು.

ಮಿ. ಮೈಕಾಬರರು ನಮ್ಮನ್ನು ಕಳುಹಿಸಿಕೊಡುವುದಕ್ಕಾಗಿ ನಮ್ಮ ಜತೆಯಲ್ಲೇ ಕೇಂಟರ್ಬರಿಯಲ್ಲಿ ಸ್ವಲ್ಪ ದೂರ ಬಂದರು. ಅಂದಿನ ನಮ್ಮ ಕೆಲಸ ಅಷ್ಟೊಂದು ಪರಿಷ್ಕಾರವಾಗಿ ಜರುಗಿದ, ಮತ್ತು ಮುಂದೆ ಅವರ ಕುಟುಂಬ ಆಸ್ಟ್ರೇಲಿಯದಲ್ಲಿ ಅಭಿವೃದ್ಧಿ ಹೊಂದುವ, ಸಂತೋಷಕ್ಕಾಗಿ ಅವರ ಪತ್ನಿಯೂ ಸಹ, ಆಸ್ಟ್ರೇಲಿಯದ ಕೃಷಿಕನ ಪತ್ನಿ ಗಂಡನೊಡನೆ ಮಾತಾಡುವ ಕ್ರಮಗಳಿಂದ ಮಾತಾಡುತ್ತಾ ಬಂದರು. ಅವರಿಬ್ಬರ ಅಂದಿನ ಉತ್ಸಾಹ, ಸಂತೃಪ್ತಿಗಳನ್ನು ನಾನೆಂದಿಗೂ ಮರೆಯೆನು.

ಕಂಗರೂ ಪ್ರಾಣಿ ಆಸ್ಟ್ರೇಲಿಯದ ಮರುಭೂಮಿಯಲ್ಲಿ ಜೀವಿಸುವ ಕ್ರಮವನ್ನು ಮಿಸೆಸ್ ಮೈಕಾಬರಳು ನಮ್ಮೆಲ್ಲರ ಅನುಭವಕ್ಕಾಗಿ ವಿವರಿಸುತ್ತಾ ಬರುತ್ತಿದ್ದಾಗಲೇ ಇಂಗ್ಲೆಂಡಿನ ಎತ್ತುಗಳನ್ನು ಆಸ್ಟ್ರೇಲಿಯದ ಕೃಷಿಕನು ಪರಿಶೋಧನಾ ದೃಷ್ಟಿಯಿಂದ ನೋಡಬಹುದಾದಂತೆ ಮಿ. ಮೈಕಾಬರರು ಸಂತೆಯಲ್ಲಿ ಕೂಡಿದ್ದ ಎತ್ತುಗಳನ್ನು ನೋಡುತ್ತ ನಮ್ಮ ಜತೆಯಲ್ಲಿ ಬರುತ್ತಿದ್ದುದನ್ನು ನಾನೆಂದಿಗೂ ಮರೆಯೆನು.
(ಮುಂದುವರಿಯಲಿದೆ)

1 comment:

  1. ಧನ್ಯವಾದಗಳು.
    ದಿಂಜ ಕುಸಿ ಆಂಡ್!

    ReplyDelete