17 April 2015

ಎಸ್ಸಾರೆಸ್ ಮತ್ತು ಶಿವಗಂಗೆ ಎರಡು ಶಿಲಾಶಿಖರಗಳು

ಅಭಯ ಸಂಚಿ ಟ್ರಸ್ಟಿನ ಜ್ಞಾನಯಜ್ಞಕ್ಕೆ ಕರೆಕೊಟ್ಟಿದ್ದ. (ಮೊದಲ ಭಾಷಣ – ಡಾ| ಉಲ್ಲಾಸಕಾರಂತರದು) ಅದನ್ನು ನಾವು ಅತಿ-ಸಾಂಪ್ರದಾಯಿಕ ಸ್ತರದಲ್ಲಿ ಬಳಸುವವರಂತೆ, ಎರಡು ದಿನ ಮುಂಚಿತವಾಗಿಯೇ ಬೆಂಗಳೂರು ಸೇರಿದ್ದೆವು. ಆದರೆ ಅಲ್ಲಿನ ವಾತಾವರಣ ಬೇರೆಯೇ ಇತ್ತು. ಅಭಯ ವಾರ್ತಾ ಇಲಾಖೆಯ ವತಿಯಿಂದ ದೂರದರ್ಶನಕ್ಕೆ ಐವತ್ತು ವಿಜ್ಞಾನ ಪ್ರಯೋಗಗಳ, ಇಪ್ಪತ್ತು ಸರಣಿಯನ್ನು ತಯಾರು ಮಾಡಲು ಒಂದು ಕೈ, ಎನ್ನೆಫ್ಡಿಸಿ ಮಾನ್ಯತೆ ನೀಡಿದ ಈತನದೇ ಚಿತ್ರಕತೆಯೊಂದನ್ನು ಪುಣೆಯಲ್ಲಿ ನಡೆಯಲಿದ್ದ ಮೂರನೇ ಕಮ್ಮಟಕ್ಕೆ ಪರಿಷ್ಕರಿಸುವಲ್ಲಿ ಇನ್ನೊಂದು ಕೈ, ನೀನಾಸಂನಲ್ಲಿ ಐದು ದಿನಗಳ ಕಿರುಚಿತ್ರ ಕಮ್ಮಟ ಮುಗಿಸಿ ಬಂದದ್ದರ ಉತ್ತರಕ್ರಿಯೆಯಲ್ಲಿ ಮತ್ತೊಂದು ಕೈ, ಯಾವುದೋ ಬ್ಯಾಂಕಿನವರ ಯೋಜನಾ ಯಶಸ್ಸನ್ನು ಸಾರುವ ಸಾಕ್ಷ್ಯಚಿತ್ರದಲ್ಲಿ ಮಗುದೊಂದು ಕೈ ಎಂದೆಲ್ಲಾ ಸಿಕ್ಕಿಸಿಕೊಂಡು, ನಿಜದಲ್ಲಿ ತನಗೆಷ್ಟು ಕೈ ಎಂದೇ ಕಳೆದುಹೋಗಿದ್ದ. (ಖಂಡಿತವಾಗಿಯೂ ಪುರಾಣದಲ್ಲಿ ಬರುವಂತೆ ಸಹಸ್ರಬಾಹುವಲ್ಲ!) ಬೆಳಿಗ್ಗೆ ಎದ್ದ ಕೂಡಲೇ ರಾತ್ರಿಯುದ್ದಕ್ಕೆ ಮಿನುಗುತ್ತಲೇ ಇದ್ದ ಲ್ಯಾಪ್ಟಾಪನ್ನು ನೇವರಿಸಬೇಕು, ನಿತ್ಯ ಕೆಲಸಗಳ ನಡುವೆಯೂ ಅದನ್ನು ತಡವಬೇಕು, ಎಡೆ ಎಡೆಯಲ್ಲಿ ಕುಟ್ಟಬೇಕು. ಎಂಟೂವರೆಗೆ ಅದನ್ನು ಬೆನ್ನಚೀಲಕ್ಕೆ ತುಂಬಿ ಮನೆ ಬಿಟ್ಟೋಡಿದ ಎಂದರೆ ಮತ್ತೆ ಕತ್ತಲಾದ ಮೇಲೇ ದರ್ಶನ. ನಮ್ಮ ಕುರಿತು ಅಕ್ಕರೆ, ಮಾತು ಇಲ್ಲವೆಂದಲ್ಲ – ಕೆಲಸದ ಒತ್ತಡದಲ್ಲಿ ಎಲ್ಲ ಅಸಂಗತ ನಾಟಕದ ಸಂಭಾಷಣೆಗಳೇ ಆಗುತ್ತಿದ್ದುವು. ಗಣಕ ಕೆಲಸದ ಸೆಳೆತ, ಅಪ್ಪಮ್ಮನ ಪ್ರೀತಿಯ ಒಲೆತ – ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ, ಎನ್ನುವುದರ ಹೊಸರೂಪ! ನಾನು ಬರೆಯುತ್ತಿರುವುದು ಆರೋಪಪಟ್ಟಿಯಲ್ಲ, ಅವನ ಮೂಗಿನವರೆಗೆ ಮುಳುಗಿದ ಸ್ಥಿತಿಯ ಸಾನುಕಂಪ ವರದಿ ಮಾತ್ರ.


ರಶ್ಮಿ – ನಮ್ಮ ಸೊಸೆ, ಅವಳಾದರೂ ಈಗ ಸುಧಾರಿಸಿಯಾಳು ಅಂದುಕೊಂಡಿದ್ದೆವು. (ಮತ್ತೆ ಅಪಾರ್ಥ ಗ್ರಹಿಸಬೇಡಿ – ನಮ್ಮೊಡನೆ ಹರಟುವ ಬಿಡುವಿನ ಬಗ್ಗೆ ಮಾತ್ರ ನಾನು ಹೇಳುತ್ತಿದ್ದೇನೆ!) ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ ಹೊಸತರಲ್ಲಿ, ತಾನು ಗೃಹದಲ್ಲೇ ಇರುವವಳು (ಗೃಹಿಣಿ) ಎಂಬುದು ಆಕೆಯದೇ ಆಯ್ಕೆ, ನಿರ್ಧಾರವೂ ಆಗಿತ್ತು. ಆಕೆಗೆ ಮೊದಲೇ ಚೂರುಪಾರು ಸಾಹಿತ್ಯ, ರಂಗಾಸಕ್ತಿಯಿತ್ತು. ಪರಿಚಯಸ್ಥರು ಕೇವಲ ಬಿಡುವೇಳೆಯ ಹವ್ಯಾಸ ಎಂಬಂತೆ ಕರೆದಾಗ ಟೀವೀ ನಟನೆಗಿಳಿದಳು. ಆದರೆ ಆ ಚಕ್ರಸುಳಿಯಿಂದ ಬಲವಂತವಾಗಿ ಕಳಚಿಕೊಳ್ಳಬೇಕಾದರೆ ನಾಲ್ಕೈದು ವರ್ಷಗಳೇ ಸಂದುಹೋಗಿದ್ದವು. ನಮ್ಮಮ್ಮ ಶಾರದೆ (ಸುಚಿತ್ರ), ರಾಧ (ರೋಸ್), ನಾಗಮಣಿ (ಕಾವೇರಿ), ಪುಣ್ಯಕೋಟಿ (ಬಿಂದು), ಚಕ್ರತೀರ್ಥ (ನೀತಿ), ಅಳಗುಳಿ ಮನೆ (ಸೌಜನ್ಯ), ಮಹಾಭಾರತ (ಗಂಗೆ), ಪಲ್ಲವಿ ಅನುಪಲ್ಲವಿ (ನಂದಿನಿ), ಮೀರಾಮಾಧವ (ಅನುರಾಧ) ಟೀವೀ ಕಥಾಸರಣಿಗಳು ಇವಳನ್ನು ಯಶಸ್ವಿಯಾಗಿಯೇ ಗುರುತಿಸಿದುವು. ಕಿರುತೆರೆಯಲ್ಲೇ ದೇಗುಲ ದರ್ಶನ, ಹೆಲ್ತ್ ಪ್ಲಸ್ ಮುಂತಾದ ಸಂದರ್ಶನಾಧಾರಿತ ಕಲಾಪಗಳ ನಿರ್ವಹಣೆ, ಗಿರೀಶ ಕಾಸರವಳ್ಳಿಯವರ `ಗಾಂಧಿ’ಯೂ ಸೇರಿದಂತೆ ಒಂದೆರಡು ಬೆಳ್ಳಿತೆರೆಯ ಚಿತ್ರಗಳೂ ರಶ್ಮಿಯನ್ನು ಇನ್ನಷ್ಟು ಮತ್ತಷ್ಟು ಜನಪ್ರಿಯಗೊಳಿಸಿತ್ತು. ಅವೆಲ್ಲ ಮರೆತು, ಇನ್ನು ಗಟ್ಟಿ ಮನೆಯಲ್ಲೇ ಕುಳಿತು, ನಿಜಾರ್ಥದಲ್ಲಿ `ಮನೆಕಟ್ಟ’ಬೇಕು (ಹೋಮ್ ಮೇಕರ್!) ಎಂದುಕೊಂಡಳು. ಆದರೆ ದೃಶ್ಯ ಮಾಧ್ಯಮದ ಈ ಗಾಢ ಅನುಭವ ಆಕೆಯಲ್ಲಿ ಸಹಜವಾಗಿದ್ದ ಸಾಹಿತ್ಯ ಪ್ರೀತಿಯೊಡನೆ ಬೆರೆತು ಹೊಸ ಆಮಿಷವನ್ನು ಒಡ್ಡಿತ್ತು.

ಟೀವೀ ವಲಯದಲ್ಲಿ ಪಳಗಿದ ಬರಹಗಾರರ ಕೊರತೆ ತೀವ್ರವಿದೆ. ಮತ್ತೆ ಮಿತ್ರಬಳಗ ಒತ್ತಾಯ ತಂದಾಗ, ಮನೆಯಲ್ಲೇ ಕುಳಿತು ಮಾಡುವ ಸಾಹಿತ್ಯ ಸೇವೆ ಎಂದು ತೊಡಗಿಕೊಂಡಳು. ಒಂದು ಟೀವಿ ಸರಣಿಯ, ದಿನದ ಇಪ್ಪತ್ತು ಮಿನಿಟಿನ ಪ್ರದರ್ಶನಕ್ಕೆ ಬೇಕಾದ ಸಾಹಿತ್ಯ – ಕತೆ ಮತ್ತು ಸಂಭಾಷಣೆ, ಈಕೆಯದು. ವಿವಿಧ ಶೂಟಿಂಗ್ ತಾಣಗಳಿಗೋಡುವ, ವೇಷಕಟ್ಟುವ, ಸರದಿ ಕಾಯುವ, ಕಸರತ್ತು ಮಾಡುವ, ಯಾರದೋ ಮಾತು ಮತ್ತು ಭಾವಕ್ಕೆ ಮುಖವಾಗುವ, ತಂಡ ಎಲ್ಲ ಸೌಕರ್ಯ ಕೊಟ್ಟರೂ ಸ್ವಂತಕ್ಕೆ ಎನ್ನುವ ಸಮಯವೇ ಉಳಿಯದ ನಟೀತ್ವದ ಹಾಗಲ್ಲ ಇದು ಎನ್ನುವ ಕುಶಿ. ವಾರಗಟ್ಟಳೆ ಮುಂಚಿತವಾಗಿಯೇ ಅಬ್ಬಬ್ಬಾ ಅಂದರೆ ಒಂದು ಗಂಟೆಯೊಳಗೇ ಗಣಕದಲ್ಲಿ ಕುಟ್ಟಿ, ಮಿಂಚಂಚೆಯಲ್ಲಿ ರವಾನಿಸಿ ಮುಗಿಸಬಹುದಾದ ಕೆಲಸ. ಯೋಚನೆ ಸರಿಯೇ ಇತ್ತು, ಆದರೆ ವಾಸ್ತವದಲ್ಲಿ ಬುಟ್ಟಿ ಮಣ್ಣು ಹೊರಲು ಹೋದವಳ ತಲೆಮೇಲೆ ಗುಡ್ಡೆಯೇ ಕಳಚಿ ಬಿದ್ದ ಹಾಗಾಗಿದೆ! ಈಗ ಸುವರ್ಣಟೀವಿಯ ಅನುರೂಪ ಮತ್ತು ಮಿಲನ ಎಂಬೆರಡು  ಟೀವಿ ಧಾರಾವಾಹಿಗಳು ಇವಳ ದಿನದ ಇಪ್ಪತ್ತಾರು ಗಂಟೆಯನ್ನು ಕೇಳುತ್ತಿವೆ! (ಟೀವಿ ಸಾಹಿತ್ಯದ ವಿವರಗಳನ್ನು ಚರ್ಚೆ ಮಾಡಲು ಜನ ನಾನಲ್ಲ ಮತ್ತೆ ವೇದಿಕೆಯೂ ಇದಲ್ಲ) ಅಭಯ ಬಿಝಿ ಎಂದರೆ ಈಕೆ ಬಿಝಿಯರ್ರು! ಮತ್ತೆ ಗಣ್ಯ ಓದುಗರು ಗಮನಿಸಬೇಕಾದ ಮಾತು, ಈ ಎಲ್ಲ ಮಾತುಗಳು ರಶ್ಮಿಯ ವಿರುದ್ಧದ ನಮ್ಮ ಅಸಮಾಧಾನದ ಹೊಯ್ಲು ಖಂಡಿತಾ ಅಲ್ಲ! ಅಂಥಲ್ಲಿ ನಮ್ಮ ಹೊತ್ತು ಹೋಗುವುದಾದರೂ ಹೇಗೆಂಬ ವಿಚಾರಕ್ಕೆ ವಿವರಣೆ. ಇನ್ನೂ ಸರಿಯಾಗಿ ಹೇಳುವುದಿದ್ದರೆ ಈ ಸಲದ ಬೆಂಗಳೂರು ಭೇಟಿಯಲ್ಲಿ ನಾವು ನಡೆಸಿದ `ಅಪರಾಧ’ಗಳಿಗೆ ಮೊದಲೇ ನಿಮ್ಮ ಸಹಾನುಭೂತಿ ಗಳಿಸುವ ತಂತ್ರ! ಹಿಂದೆ ಬೆಂಗಳೂರು ಸುತ್ತಿಸಿದ, ನಂದಿಬೆಟ್ಟ ಹತ್ತಿಸಿದ, ತಿರುಪತಿಗೂ ಓಡಿಸಿದ ಕಥನ ಕಡತಕ್ಕೆ ಹೊಸತೊಂದು ಅಧ್ಯಾಯ ಸೇರಿಸಲು ಉದಾತ್ತ  ನೆಪ. ರಾಮನಗರದ ಬಂಡೆಗಳು ಪ್ರಥಮಾದ್ಯತೆಯಲ್ಲಿ ಕಾಣಿಸಿದುವು.
ಮೈಸೂರಿನ ನನ್ನ ವಿದ್ಯಾರ್ಥಿ ದೆಸೆಯಿಂದಲೇ ನನಗೆ ರಾಮನಗರದ ಬಂಡೆಗಳ ಮೇಲೆ ಕಣ್ಣಿತ್ತು. ನಾನು ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ಸದಸ್ಯ. ಸಂಸ್ಥೆ ನಾನು ಸೇರುವುದಕ್ಕೂ ಮೊದಲೊಮ್ಮೆ ಮಾತ್ರ ರಾಮನಗರಕ್ಕೆ ಲಗ್ಗೆ ಹಾಕಿದ್ದರಂತೆ. ಆ ಕತೆಯನ್ನು ಅವರು ರಂಗುಕಟ್ಟಿ ಹೇಳುವಾಗ ಕರುಬಿದ್ದೆ. ಸಂಸ್ಥೆ ಇನ್ನೊಮ್ಮೆ ಹೋದೀತು ಎಂಬ ನನ್ನಾಸೆಗೆ ಅರಳುವ ಭಾಗ್ಯ ಬರಲೇ ಇಲ್ಲ.
ಬೆಂಗಳೂರಿಗೆ ರಾಮನಗರ ನೆರೆಮನೆ. ಹಾಗಾಗಿ ಅಭಯನ ಕಾರು ಹಿಡಿದುಕೊಂಡು “ಮಧ್ಯಾಹ್ನದೂಟಕ್ಕೆ ಬರುತ್ತೇವೆ” ಎಂದು ತಿಳಿಸಿಯೇ ನಾನು, ದೇವಕಿ ಮೈಸೂರು ದಾರಿ ಹಿಡಿದೆವು. ಬಿಡದಿಯಿಂದಲೇ ವೈವಿಧ್ಯಮಯ ಬಂಡೆ ಬೆಟ್ಟಗಳು ದಾರಿಯ ಎರಡೂ ಬದಿಗೆ ಕಾಣಿಸುತ್ತವೆ. ಎಲ್ಲ ಹತ್ತಿಳಿಯುವುದೆಂದರೆ ತಿಂಗಳ ಕಾಲವೂ ಸಾಕಾಗದು. ಇನ್ನು ದೂರನೋಟಕ್ಕೆ ಆಕರ್ಷಿಸಿದವೆಲ್ಲ ನಮ್ಮ ಆಸಕ್ತಿಗೆ ಅಥವಾ ಮಿತಿಗಳಿಗೆ ಒಡ್ಡಿಕೊಂಡಾವೇ ಎಂಬ ಮಾಹಿತಿಯೂ ನಮ್ಮಲ್ಲಿರಲಿಲ್ಲ. ಉದಾಹರಣೆಗೆ, ಅಲ್ಲಿ ನಮ್ಮನ್ನು ದೋಚುವವರಿರಬಹುದು, ಅಪಾಯಕಾರೀ ವನ್ಯಪ್ರಾಣಿಗಳಿರಬಹುದು, ಹಿಂದೆ ಬಿಟ್ಟು ಹೋಗುವ ವಾಹನದ ಭದ್ರತೆ ಕಷ್ಟವಿರಬಹುದು ಇತ್ಯಾದಿ ಒಂದು ಬಗೆ. ಸಾಂಪ್ರದಾಯಿಕ ಜಾಡು, ನೀರು, ನೆರಳು ಇರಬಹುದೇ ಇತ್ಯಾದಿ ಇನ್ನೊಂದು. ನೇರ ರಾಮನಗರ ಪೇಟೆಗೇ ನುಗ್ಗಿ ಒಬ್ಬ ಕಾಲೇಜು ಹುಡುಗನನ್ನು ವಿಚಾರಿಸಿದೆವು. ಅವನು ಸಟ್ಟಂತ ಹೇಳಿದ “ರಾಮನಗರದಲ್ಲಿ ಎರಡು ಬಂಡೆ ಫೇಮಸ್ಸು. ಫಸ್ಟಿಗೆ ರಾಮ್ದೇವ್ರ ಬೆಟ್ಟ. ಅದಕ್ಕೋಗೋ ದಾರೀನಾ ನೀವು ಹಿಂದೆ ರೈಟ್ಸೈಡಿಗೆ ಬಿಟ್ಟು ಬಂದಿದ್ದೀರಿ. ಅದೇ ಬೇಕಾದ್ರೆ ಮುಂದಿನ ಸಿಗ್ನಲ್ಲಿನಲ್ಲಿ ಯೂ ಟರ್ನ್ ತಕ್ಕೊಂಡ್ ಬರ್ಬೇಕಾಯ್ತದೆ. ಇಲ್ಲಾ ಹೀಗೇ ಮುಂದೋದ್ರೆ ಲೆಫ್ಟಿಗೆ ಕನಕಪುರ ರೋಡ್ ಸಿಕ್ಕುತ್ತೆ. ಅದರಲ್ಲಿ ವಿಚಾರಿಸ್ಕೊಂಡು ಹೋಗಿ - ಎಸ್ಸಾರೆಸ್ ಬೆಟ್ಟ, ಇನ್ನೊಂದು ಫೇಮಸ್ ಬೆಟ್ಟ.” ಹೇಗೂ ಮುಂದೆ ಬಂದಾಯ್ತಲ್ಲಾಂತ ಅದೇನು ಎಸ್ಸಾರೆಸ್ ಎಂದು, ಮೊದಲು ಅಲ್ಲಿಗೇ ಹೊರಟೆವು. ಸುಮಾರು ಎರಡು ಕಿಮೀಯಲ್ಲಿ – ಕನಕಪುರ ದಾರಿಗೆ ಹೊರಳಿದೆವು.


ಅವರಿವರ ಸೂಚನೆಯಂತೆ ಬಲ ಕವಲಿಗೆ ಸಿಗುವ ಮಹಾದ್ವಾರದ ನಿರೀಕ್ಷೆಯಲ್ಲಿ ಸುಮಾರು ಹತ್ತು ಕಿಮೀ ಸವೆದೆವು. ಹಾಗೆ ಸಿಕ್ಕ ಮಜಬೂತಾದ ಅಮ್ಮಿನಳ್ಳಿದ್ವಾರ ಎಸ್ಸಾರೆಸ್ ಹೆಸರಿನ ವಿಸ್ತರಣೆಯನ್ನೇ ಶಿರಸ್ಸಿನಲ್ಲಿ ಹೊತ್ತಿತ್ತು – ಶ್ರೀ ರೇವಣಸಿದ್ಧೇಶ್ವರ ಸ್ವಾಮಿ ಬೆಟ್ಟಕ್ಕೆ ಸ್ವಾಗತ! ಮೊದಲಲ್ಲೇ ಸಿಗುವ ಅಂಕಾಡೊಂಕು ಸಪುರ ಹಳ್ಳಿಯ ಕಾಂಕ್ರೀಟ್ ಗಲ್ಲಿಗಳು, ಅನಂತರ ಸಾಗುವ ಅಪ್ಪಟ ಹಳ್ಳಿಗಾಡಿನ ಡಾಮರು ದಾರಿ ತುಸು ನಿರುತ್ತೇಜಕವಾಗಿದ್ದರೂ ಅನತಿದೂರದಲ್ಲಿ (ಕವಲಿನಿಂದ ಸುಮಾರು ಮೂರು ಕಿಮೀ ಮಾತ್ರ) ಕಂಗೊಳಿಸುವ ಬಂಡೆಬೆಟ್ಟ ಗಮನ ಸೆಳೆಯುತ್ತದೆ. ಬೆಟ್ಟದ ತಪ್ಪಲಿನಲ್ಲಿ ವ್ಯವಸ್ಥಿತ ಮಾವಿನ ಕೃಷಿ ನಡೆಸಿದ್ದರು. ಮುಂದುವರಿದಂತೆ ಪುಡಿ ಬಂಡೆ, ವಿರಳ ಪೊದರು, ಮರಗಳ ಪರಿವಾರದ ನಡುವೆ ದೊಡ್ಡೊಟ್ಟೆ ಬಿಟ್ಟು ಕುಳಿತ ಶ್ರೀಮಂತನಂತಿತ್ತು ಈ ಬೆಟ್ಟ. ಅದರ ಸೊಂಟ ಬಳಸಿದ ಅಡ್ಡಪಟ್ಟಿಯಂತೆಯೂ ಹೆಗಲಿನ ಎತ್ತರಕ್ಕೆ ಏರಿದ ಶಲ್ಯದಂತೆಯೂ ಅದೇನೋ ನೀಲಿ ಹಾಸು ಕಾಣುತ್ತಿತ್ತು. ಅದೇನಿರಬಹುದೆಂಬ ನಮ್ಮ ಊಹೆಗೆ ಉತ್ತರ ಮತ್ತೆ ಅದನ್ನು ಆ ಎತ್ತರದಲ್ಲಿ ಸಮೀಪಿಸುವವರೆಗೂ ಹೊಳೆಯಲೇ ಇಲ್ಲ!

ಬೆಟ್ಟದ ವಲಯಕ್ಕೂ ಒಂದು ಭರ್ಜರಿ ಮಹಾದ್ವಾರವಿತ್ತು. ಒಳಭಾಗದಲ್ಲಿ ಸುವಿಸ್ತಾರ ಅಂಗಳ ಚೊಕ್ಕ ಡಾಮರಾಗಿ, ಸುತ್ತುವರಿದಂತೆ ಮುಖ್ಯವಾಗಿ ತೀರ್ಥಕ್ಷೇತ್ರಾವಶ್ಯ ಸಾಮಗ್ರಿಗಳ ಮಳಿಗೆಗಳು, ಅಚ್ಚುಕಟ್ಟಾಗಿತ್ತು. ಬಹುಶಃ ಹೆಚ್ಚುಗಟ್ಟಳೆಯ ದಿನಗಳಲ್ಲಿ ಜನಸಂದಣಿ ತತ್ಕಾಲೀನ ಮಳಿಗೆಗಳು ಹರಡಿಕೊಳ್ಳುವುದಿರಬಹುದು ಅಥವಾ ದೊಡ್ಡ ವಾಹನಗಳ ತಂಗುದಾಣವೂ ಇರಬಹುದು. ಗ್ರಾಮ ಪಂಚಾಯತಿಗೆ ಪ್ರವೇಶ ಹಾಸಲು ಕೊಟ್ಟು, ನಾವು ಕಾರನ್ನು ಮತ್ತೂ ಸುಮಾರು ಅರ್ಧ ಕಿಮೀಯಷ್ಟು ಮುಂದೊಯ್ದೆವು. ಇದು ನೇರ ಬೆಟ್ಟವನ್ನೇರುವ ದಾರಿ. ಅಲ್ಲಿ ಭಾರೀ ಬಂಡೆಯ ನೆರಳಿನಲ್ಲಿ ಕಾರುಬೈಕಾದಿಗಳಿಗೆ ತಂಗುದಾಣವಿತ್ತು. ಮತ್ತೇನಿದ್ದರೂ ಜೈ ಚಾರಣ.


ವಾಹನ ವಿರಾಮಗಟ್ಟೆಯ ಒತ್ತಿನಲ್ಲೇ ಬೇರೊಂದು ಭಾರೀ ಬಂಡೆಯ ಮುಂಚಾಚಿಗೇ ಗೋಡೆ, ಗೋಪುರ, ಕಿಟಕಿ ಬಾಗಿಲುಗಳ ರಚನೆ ಕೊಟ್ಟು ಕಾಣುವಂತೆ ಸಾಕಷ್ಟು ದೊಡ್ಡದೇ ಆರಾಧನಾ ಮಂದಿರ ಮಾಡಿದ್ದಾರೆ. ಮುಂಚಾಚಿನ ಅಂಚಿನಿಂದ ಮಳೆಗಾಲದ ನೀರು ದೇವಳದ ಒಳಕ್ಕೆ ಜಾರಿ ಬರದಂತೆ ಆ ಎತ್ತರದಲ್ಲೂ ಪುಟ್ಟ ಚಡಿ ಮಾಡಿಕೊಟ್ಟಿದ್ದರು. ಅಷ್ಟಾಗಿ ಗುಡಿಗೆ ದಕ್ಕಿದ ಗುಹೆ ಅರ್ಥಾತ್ ಗರ್ಭಗುಡಿ ಎಷ್ಟಿರಬಹುದು ಎಂಬ ನಮ್ಮ ಕುತೂಹಲವನ್ನು ಮುಚ್ಚಿದ ಬಾಗಿಲು ಹಣಿಯಿತು. ಆ ಗುಡಿಬಂಡೆಯ ಹಿಂದಿನ್ನೊಂದು ಬಂಡೆ ಒರಗಿ ಉಂಟಾದ ಗುಹೆಯ ನೆಲ ಸಾಕಷ್ಟು ತಗ್ಗಿದ್ದಿರಬೇಕು. ಸಹಜವಾಗಿ ಅಲ್ಲಿ ಸಂಗ್ರಹವಾದ ಮಳೆಗಾಲದ ನೀರು ಇಂದು ಪುಟ್ಟ ಪುಷ್ಕರಣಿಯೇ ಆಗಿದೆ. ಅದರ ಶುದ್ಧವನ್ನು ಕಾಪಾಡಿಕೊಳ್ಳಲು ಸಣ್ಣ ಕಣ್ಣಿನ ಎರಡಾಳೆತ್ತರದ ಭಾರೀ ಕಬ್ಬಿಣದ ಬೇಲಿ, ಬೀಗ, ಬೋರ್ಡು ಎಲ್ಲಾ ಹಾಕಿದ್ದಾರೆ. ಆದರೂ ನೀರಿನಲ್ಲಿ ತೇಲುತ್ತಿದ್ದ ಪ್ಲ್ಯಾಸ್ಟಿಕ್ ಬಾಟಲ್ ನಮ್ಮ ಸಾರ್ವಜನಿಕ ಮನೋಸ್ಥಿತಿಯ ಅನಾರೋಗ್ಯದ ಲಕ್ಷಣವಾಗಿಯೇ ತೋರುತ್ತಿತ್ತು.

ಬೆಟ್ಟ ಅಖಂಡ ಏಕಶಿಲಾ ರಚನೆಯೇ ಸರಿ. ಆದರೆ ಕಾಲಶಿಲ್ಪಿಯ ಮಾಯದಲ್ಲಿ ಭಾರೀ ಒಡಕುಗಳೂ ಕಳಚಿದ ಹಳಕುಗಳೂ ಸವಕಳಿಯಲ್ಲಿ ಎಲ್ಲೆಲ್ಲೋ ಮೂಡಿದ ತಗ್ಗೂ ಒಂದಿದ ಮಣ್ಣೂ ಎಲ್ಲದರಲ್ಲಿ ಅನ್ವೇಷಕ ಬೇರುಗಳನ್ನು ಬಿಟ್ಟು ಪಸರಿಸಿದ ಸಸ್ಯವೈವಿಧ್ಯಗಳೂ ನಿಸ್ಸಂದೇಹವಾಗಿ ಬೆಟ್ಟಕ್ಕೊಂದು ವಿಶಿಷ್ಟ ದರ್ಶನೀಯತೆಯನ್ನು ಕೊಟ್ಟಿವೆ. ಸರ್ವಂಕಷವಾದ ಮನುಷ್ಯ ಕುತೂಹಲ ಇಲ್ಲಿನ ಪ್ರಾಕೃತಿಕ ಸವಲತ್ತುಗಳನ್ನೇ ಮೂಲದಲ್ಲಿ ಅನುಸರಿಸಿ ಶಿಖರ ಸಾಧಿಸಿದ್ದಿರಬೇಕು. ಕಾಲಾನುಕ್ರಮದಲ್ಲಿ ಎಲ್ಲ ಪ್ರಾಕೃತಿಕ ವೈಶಿಷ್ಟ್ಯಗಳಲ್ಲಿ ದೈವಿಕವಾದ್ದನ್ನು ಕಾಣುವ ಮನಸ್ಸು ಇದನ್ನು ಭಕ್ತಿಕೇಂದ್ರವಾಗಿಸಿಕೊಂಡಿರಬೇಕು. ಸಹಜವಾಗಿ ಜಾಡಿನ ಪರಿಷ್ಕರಣೆ ಕಾಲಕಾಲಕ್ಕೆ ನಡೆಸುತ್ತಲೇ ಬಂದಿರಬೇಕು. 

`ಸ್ವಾಗತ ಗುಡಿ’ಯ ಬಂಡೆಯ ಎದುರಿನ ಸಣ್ಣ ಕೊಳ್ಳಕ್ಕೆ ಇಳಿಯಲು ಆಧುನಿಕ ವಿಸ್ತಾರ ಕಾಂಕ್ರೀಟ್ ಸೋಪಾನಗಳಾಗಿವೆ. ಇವಕ್ಕೆ ಅಂಚಿನಲ್ಲಿ ಆಕರ್ಷಕ ರಕ್ಷಣಾ ಬೇಲಿಯೂ ಇದೆ. ಉಳಿದಂತೆ ಬೆಟ್ಟದ ಇನ್ನೊಂದು ಮಗ್ಗುಲಿಗೆ ಸರಿದು, ಶಿಖರ ಸಾಧಿಸುವ ಮೆಟ್ಟಿಲುಗಳ ಉದ್ದಕ್ಕೂ ಕಚ್ಚಾ ಕಬ್ಬಿಣದ ಗೂಟಗಳನ್ನು ಬಂಡೆಗಳ ಮೇಲೆ ಕೂರಿಸಿ, ಅಡ್ಡ ಸರಳುಗಳನ್ನು ಬೆಸೆದು ಯಾತ್ರಿಕರಿಗೆ ರಕ್ಷಣಾಧಾರಗಳನ್ನು ಕಲ್ಪಿಸಿದ್ದಾರೆ.

ಹಾಗೇ ಯಾತ್ರಿಕರನ್ನು ಮಳೆಬಿಸಿಲುಗಳು ಕಾಡದಂತೆ ಉದ್ದಕ್ಕೂ ನೀಲ ತಗಡಿನ ಮಾಡೂ ಕೊಟ್ಟಿದ್ದಾರೆ. ಈ ನೀಲಮಾಡೇ ನಮಗೆ ದೂರನೋಟಕ್ಕೆ ಬೆಟ್ಟದ ಸೊಂಟಕ್ಕೆ ಅಡ್ಡಪಟ್ಟಿಯಂತೆಯೂ, ಭುಜಕ್ಕೆ ಶಲ್ಯದಂತೆಯೂ ಕಾಣಿಸಿದ್ದಾಗಿತ್ತು.

ಬಂಡೆ ಹಾಸು ಸವಕಳಿಯಲ್ಲಿ ನುಣುಪುಗೊಂಡಲ್ಲಿ ಅಡ್ಡಗೀಟುಗಳನ್ನು ಕಡಿದಿದ್ದಾರೆ. ತಿರುವೇರುಗಳಲ್ಲಿ ದೃಢ ಮೆಟ್ಟಿಲುಗಳನ್ನೇ ಕೆತ್ತಿದ್ದಾರೆ. ಕೊರಕಲುಗಳ ಸಂದಿಯಲ್ಲಿ ತುಂಡುಕಲ್ಲುಗಳನ್ನು ಜೋಡಿಸಿಯೋ ಸರಿಯಾದ ಸೈಜುಕಲ್ಲುಗಳನ್ನೇ ಸಿಮೆಂಟ್ ಜೋಡಣೆಯಲ್ಲಿ ಕೂರಿಸಿಯೋ ಕಟ್ಟಿದ ಮೆಟ್ಟಿಲುಗಳೂ ಧಾರಾಳವಿವೆ. ತಿರುಮಲೆಗೇರುವ ಮೆಟ್ಟಿಲುಗಳ ಅಚ್ಚುಕಟ್ಟು, ಸೌಕರ್ಯ ಇಲ್ಲಿ ಕಾಲಕಾಲಕ್ಕೆ ಲಭಿಸುವ ಅನುದಾನ, ಸೇವೆಗಳಿಗೆ ಆದರ್ಶ ಕಲ್ಪಿಸಲಿ ಎಂದು ಹಾರೈಸಿದೆವು. ಅದೇನೇ ಇದ್ದರೂ ಎತ್ತರ ಬಿತ್ತರಗಳಲ್ಲಿ ತಿರುಪತಿಗೆ ತುಂಬಾ ಹಿಂದಿರುವುದರಿಂದ ಎಸ್ಸಾರೆಸ್ ಬೆಟ್ಟ ಇಂದಿನ ಸವಲತ್ತುಗಳಲ್ಲೇ ಸಾಮಾನ್ಯ ಎದೆಗಾರಿಕೆಯವರಿಗೂ, ಅಲ್ಪಬಲವುಳ್ಳವರಿಗೂ ಸಾಧಿಸಬಹುದಾದ ಶಿಲಾಕ್ಷೇತ್ರ.

ನಾವು ಹೋದಂದು ಎಲ್ಲೂ ನೀರು, ಆಹಾರಗಳ ವ್ಯವಸ್ಥೆ ಕಾಣಿಸಲಿಲ್ಲ. ಆದರೆ ಜನಸಂದಣಿ ನೋಡಿಕೊಂಡು ಕಿರುತಿನಿಸು, ಪಾನೀಯಗಳ ಜೋಪಡಿಗಳು ಏಳುವುದರ ಲಕ್ಷಣಗಳು (ಎರಡು ದಿನಗಳಲ್ಲಿ ಶಿವರಾತ್ರಿ ಬರುವುದಿತ್ತು) ಧಾರಾಳ ಇದ್ದುವು.
ಬಂಡವಾಳ ಬೇಕಿಲ್ಲದ ಬಿಕ್ಷುಕರು, ಅಮಾಯಕರನ್ನು ಲೂಟಿಯೇ ಮಾಡಬಲ್ಲ ವಾನರಪಡೆಯಂತೂ ಧಾರಾಳ ಇತ್ತು. ಬೆಟ್ಟದ ಮಗ್ಗುಲು ಬದಲಿದಂತೆ, ಮೆಟ್ಟಿಲುಗಳ ಲೆಕ್ಕ ಏರಿದಂತೆ ದೃಶ್ಯ ವೈಭವ ವಿಸ್ತರಿಸುತ್ತ ಹೋಯ್ತು. ತಪ್ಪಲಿನಲ್ಲಿ ವರ್ಣಮಯ ಚಿಗುರೆಲೆಗಳನ್ನು ಮುಡಿದ ಮಾವಿನ ತೋಪು, ನೀಲ ಬಾನನ್ನೇ ತನ್ನೊಳಗಡಗಿಸಿಕೊಂಡ ವಿಸ್ತಾರ ಕೆರೆ, ವಿಸ್ತಾರ ದಿಗಂತದವರೆಗೂ ಬೋಳು ಮೈದಾನಕ್ಕೆ ಅಲಂಕಾರಕ್ಕಿಟ್ಟ ಕಲಾತ್ಮಕ ಕುಸುರಿಗಳಂತೆ ವಿರಳವಾಗಿ ಹರಡಿದ ಅನ್ಯ - ಎಷ್ಟೋ ಅನಾಮಧೇಯ,  ಶಿಲಾಶಿಖರಗಳು ನಮ್ಮನ್ನು ರಮಿಸುತ್ತಲೇ ಇದ್ದುವು.

ಶುದ್ಧ ಬಂಡೆ ಎನ್ನುವಲ್ಲೂ ಕೆಲವು ಕಳ್ಳಿಗಿಡಗಳು ಸಾಕಷ್ಟು ಬಲವಾಗಿಯೇ ಬಂಡೆ ಸಂದುಗಳಲ್ಲಿ ಬೇರು ಬಿಟ್ಟು ನಿಂತಿದ್ದವು. ಮೆಟ್ಟಿಲ ಅಂಚಿನ ಕಲ್ಲ ಕಟ್ಟೆಯ ಆಚೆ ಕೆಲವು ಕಾಡು ಗಿಡಗಳೂ ಇದ್ದುವು. ಅವುಗಳ ಮೈಯಲ್ಲೆಲ್ಲಾ ಏನೋ ಹುದುಗಿಸಿಕೊಂಡ ಸಣ್ಣ ಸಣ್ಣ ಪ್ಲ್ಯಾಸ್ಟಿಕ್ ಗಂಟುಗಳು ನೇತುಬಿದ್ದಿದ್ದುವು. ತಿರುಮಲೆಗೇರುವಾಗ ಹೀಗೆ ಕಟ್ಟುಗಳನ್ನೂ ಕಾಡುಕಲ್ಲುಗಳನ್ನು ಜೋಡಿಸಿಟ್ಟ ಪುಟ್ಟ ಗೋಪುರಗಳನ್ನೂ ನೋಡಿದ್ದು ನೆನಪಿಗೆ ಬಂತು. ವಿವಿಧ ಹರಕೆಗಳ ಸಲುವಾಗಿ ಒಳಗೆ ಮಂಗಳದ್ರವ್ಯಗಳು, ಚಿಲ್ಲರೆ ಕಾಸು ಇರುತ್ತದೆಂದೂ ನಾವಲ್ಲಿ ಕೇಳಿದ್ದೆವು. ಆದರೆ ವಿಚಾರಿಸಿದಾಗ, ಇಲ್ಲಿನದು ಯಾವುದೋ ಶಾಲಾ ಮಕ್ಕಳ ಕುಹಕವಂತೆ. ಉತ್ತರಕೊಟ್ಟ ಬಿಕ್ಷುಕನೊಬ್ಬ ನಿರಾಶೆಯಲ್ಲಿ “ಅದ್ರೊಳ್ಗೇನೈತೆ, ಬರೀ ಕಲ್ಲೂ” ಎಂದ.
ಸುಮಾರು ಹದಿನೈದು - ಇಪ್ಪತ್ತು ಮಿನಿಟಿನ ಏರೋಣದಲ್ಲೇ ನಾವು ಶಿಖರವಲಯವನ್ನು ತಲಪಿದ್ದೆವು. ಅಲ್ಲಿ ಕೆಳಗೆ ದಾರಿಯಿಂದಲೂ ದರ್ಶನಕೊಟ್ಟ ಬಿಳಿಯ ಪುಟ್ಟ ಗೋಪುರದ, ಖಾಲಿ ಮಂಟಪ ಮಾತ್ರವಿತ್ತು.
 ಆ ಸಣ್ಣ ವಠಾರದಲ್ಲೂ ಕೊಳ್ಳ ಇಣುಕುವವರ ರಕ್ಷಣೆಗೆ ಅಂಚುಗಳಲ್ಲಿ ಬೇಲಿ ರಚಿಸಿದ್ದರು. ನಾವೇರಿ ಬಂದ ಎದುರು ದಿಕ್ಕಿನಂಚಿನಲ್ಲಿ, ಅಂದರೆ ನಾವು ಕಾರಿಟ್ಟು ಬಂದ ದೊಡ್ಡ ಶಿಲಾಮುಖದತ್ತವೇ ಸಣ್ಣ ಮೆಟ್ಟಿಲ ಸಾಲು ಇಳಿದಿತ್ತು.
ಆ ಕೊನೆಯಲ್ಲಿ ಬಂಡೆಯ ಪ್ರಾಕೃತಿಯ ಒಳಸುಳಿ, ತಗ್ಗು ಹಾಗೂ ಗುಹೆಯಾಗಿಯೂ ರೂಪುಗೊಂಡಿತ್ತು. ಅದಕ್ಕೆ ತುಸು ಮನುಷ್ಯ ರಚನೆಗಳನ್ನು ಸೇರಿಸಿ ಶ್ರೀ ರೇವಣಸಿದ್ಧೇಶ್ವರರ ಆರಾಧನಾ ಮಂದಿರ ಮಾಡಿದ್ದರು. ಅಲ್ಲಿನೆರಡು ತಗ್ಗುಗಳಲ್ಲಿ ಮಳೆನೀರು
ನಿಂತದ್ದಿತ್ತು. ಆದರೆ ಬಳಕೆಗೆ ಯೋಗ್ಯವಲ್ಲ ಎಂದು ಅದರ ಬಣ್ಣವೇ ಸಾರುತ್ತಿತ್ತು. ಬೆಟ್ಟದ ಕೆಳಗಿನಿಂದಲೇ ಹೆಚ್ಚು ಕಡಿಮೆ ಮೆಟ್ಟಿಲ ದಾರಿಗೆ ಸಮನಾಗಿ ಬಂದಿದ್ದ ನೀರಿನ ಕೊಳವೆ ಸಾಲು ಭಕ್ತಾದಿಗಳ ತೃಷೆಯನ್ನೂ ವಿದ್ಯುತ್ ಸಂಪರ್ಕ ಗುಹಾಗುಡಿಯೊಳಗಿನ ಕತ್ತಲೆಯನ್ನೂ ವಾತಾಯನವನ್ನೂ ನಿರ್ವಹಿಸುತ್ತಿದ್ದುವು.

ಬೆಟ್ಟದ ಬುಡದಲ್ಲೇ ಭಿಕ್ಷುಕನೊಬ್ಬ ತುಸು ಅಧಿಕಾರವಾಣಿಯಲ್ಲೇ  “ಚಪ್ಪಲಿ ಇಲ್ಲೇ ಬಿಟ್ಟೋಗಿ” ಎಂದಿದ್ದ. ನಾವು “ಬೋರ್ಡೇನೂ ಇಲ್ಲವಲ್ಲಾ” ಎಂದು ಆತನ ಮಾತನ್ನು ತೇಲಿಸಿ ಮೇಲೆ ಬಂದಿದ್ದೆವು. ವಾಸ್ತವದಲ್ಲಿ ಬಹುತೇಕ ಮಂದಿಯೂ ಹಾಗೇ ಮಾಡಿದ್ದರು. ಆದರೆ ಗುಹಾವಠಾರದ ಹೊಸ್ತಿಲಿನಲ್ಲಿ (ಇಲ್ಲೂ ಬೋರ್ಡಿರಲಿಲ್ಲವಾದರೂ) ನಾವಾಗಿಯೇ ಕಳಚಿಟ್ಟೆವು. ಆ ವಠಾರ ಹಾಗೂ ಗುಡಿಯೊಳಗಿನ ಶುಚಿಗೂ ದೇವರ ಮಡಿಗೂ
ಸಂಬಂಧವೇನೂ ಇದ್ದಂತಿರಲಿಲ್ಲ. ಗುಹೆಯೊಳಗಿನ ಮೊದಲ ಅಂಕಣದಲ್ಲಿ ಯಾವುದೋ ಸಂಸಾರ ತಮ್ಮ ಬುತ್ತಿಯೂಟವನ್ನು ಸಂಭ್ರಮದಲ್ಲಿ ನಡೆಸಿತ್ತು. ಮತ್ತೂ ಒಳಗಿನಂಕಣದ ಕಿಷ್ಕಿಂಧೆ, ಸ್ವಾಭಾವಿಕ ಕತ್ತಲು ಮತ್ತು ವಾತಾಯನದ ಕೊರತೆಯಲ್ಲೂ ಎರಡು ಆಯಾಮದ ವ್ಯವಸ್ಥೆಯಿತ್ತು. ತುಸು ಏರಿದ ದಿಬ್ಬದ ಮೇಲೆ ಗರ್ಭಗುಡಿ. ಅದನ್ನಾವರಿಸಿದಂತೆ ಗೋಡೆ ಮಾಡಿ ಸಣ್ಣ ಪ್ರದಕ್ಷಿಣಾ ಪಥ. ಅದರಲ್ಲೂ ಒಂದು ಪುಟ್ಟ ಮಾಟೆಯಲ್ಲಿ ನೀರಿತ್ತು. ಅದೇನು ಅಲ್ಲಿನ ನಂಬಿಕೆಯೋ ಭಕ್ತಾದಿಗಳು ಅದರಂಚಿನಲ್ಲಿ ಮಲಗಿ, ಒಳಗೆ ಕೈಚಾಚಿ ನೀರು ಮೊಗೆದು, ಬಹುಶಃ ತೀರ್ಥವಾಗಿಯೇ ಪರಿಗ್ರಹಿಸಿ ಧನ್ಯರಾಗುತ್ತಿದ್ದರು. ಬೆಳಕಿನ ಕೊರತೆ, ಸೆಕೆ, ಅಸಮ ನೆಲ, ತಲೆ ಮೈಗೆ ಒರೆಸುವ ಬಂಡೆ ಸಾಲದೆಂಬಂತೆ ನೀರು ಮೊಗೆಮೊಗೆದು ಹಿಡಿದ ಪಾಚಿಯ ಜಾರಿಕೆ. ಹೆಚ್ಚುವರಿ ದಿನಗಳಲ್ಲಿ ಅಲ್ಲೇರ್ಪಡುವ ಗೊಂದಲ, ಅಪಾಯಕರ ಸ್ಥಿತಿಗಳನ್ನು ನೆನೆಸಿಯೇ ಆತಂಕಿಸುತ್ತಾ ನಾವು ದೇವ ಬಿಂಬವನ್ನು ನೋಡುವ ಅಥವಾ ಆರತಿ ತೀರ್ಥಗಳಿಗೆ ಕೈಯೊಡ್ಡುವ ಸಾಹಸ ಮಾಡದೆ ಹೊರಬಂದು ದೊಡ್ಡ ಉಸಿರು ತೆಗೆದುಕೊಂಡೆವು. ಹಿಂದಿನವರು ಆ ಪ್ರಾಕೃತಿಕ ಮೌಲ್ಯಗಳಲ್ಲಿ ದೇವರನ್ನು ಕಂಡದ್ದಿರಬೇಕು. ಆ ಗಹನತೆ ಗ್ರಹಿಸಲಾಗದ ಹಿಂ`ಬಾಲಕ’ರು ಕ್ಷುಲ್ಲಕ ಆಚರಣೆಗಳಲ್ಲಿ ಕಳೆದುಹೋಗಿ, ಪ್ರಾಕೃತಿಕ ಸತ್ಯಗಳನ್ನು (ಅವಕ್ಕಿರುವ ಮಿತಿಯನ್ನರಿಯದೆ) ಅಪಮೌಲ್ಯಗೊಳಿಸುತ್ತಿರುವ ಪರಿ ನಿಜಕ್ಕೂ ವಿಷಾದಕರ.

ಗುಹಾಲಯದ ಯಾವುದೇ ಅಂಕಣಕ್ಕೆ ಮಂಗಗಳು ನುಗ್ಗದಂತೆ ಸಣ್ಣ ಕಣ್ಣಿನ ಬಲೆಯ ಬಂದೋಬಸ್ತು ಮಾಡಿದ್ದರು. ಅಲ್ಲೇ ಮೇಲಂಚಿನಲ್ಲೊಂದು ಬಲವಾದ ಫ್ಯಾನ್ ಜೋಡಿಸಿ ಗುಹಾಲಯಕ್ಕೆ ಗಾಳಿಯೂಡುವ ವ್ಯವಸ್ಥೆಯನ್ನೂ ಮಾಡಿದ್ದರು. ಆದರೂ ಫ್ಯಾನ್, ಬಲೆಗಳ ಮಿತಿಯನ್ನರಿತ ಪರಿಣತರಂತೆ ಮಂಗಗಳು ಎಲ್ಲೆಲ್ಲೂ ಠಳಾಯಿಸಿದ್ದುವು. ಅವು ಕೇವಲ ಹೊಟ್ಟೆಪಾಡಿನ ಹೊಂಚಿಕೆಯಲ್ಲಿ ಬಂಡೆಯಂಚಿನಲ್ಲೂ ಸಹಜವಾಗಿ ನಡೆಸುವ ಹಾರಾಟಗಳನ್ನು ನನ್ನೊಳಗಿನ ಶಿಲಾರೋಹಿಯೂ ನೋಡಿ ಹೆದರಿಬಿಟ್ಟಿದ್ದ! ಗುಹಾಲಯದ ಹೊರ ಅಂಚಿನ ನೇರ ಪ್ರಪಾತದಲ್ಲೇ ನಮ್ಮ ಕಾರು ನಿಂತದ್ದು ಕಾಣುತ್ತಿತ್ತು.

ಭೂಮಿಯನ್ನು ಸನ್ನೆಗೋಲಿನಲ್ಲಿ ಸ್ಥಳಾಂತರಿಸುವ ಮಾತಾಡಿದ ಮಹಾವಿಜ್ಞಾನಿಯಂತೆ ನಾನು “ಆ ತಳ ಮುಟ್ಟುವ ಉದ್ದದ ಹಗ್ಗಗಳನ್ನು ಕೊಟ್ಟರೆ ನೇರ ಇಳಿದು (ರ್ಯಾಪೆಲ್ಲಿಂಗ್ ತಂತ್ರ) ತೋರಿಸಿಯೇನು. ಹೆಚ್ಚೇನು, ಪ್ರಪಾತಕ್ಕೆ ಮುಖಮಾಡಿ, ಗಾಯಾಳುವನ್ನು ಹೊರುವಂತೆ ನಿನ್ನನ್ನು ಬೆನ್ನಿಗಿಟ್ಟುಕೊಂಡೂ ಇಳಿದೇನು” ಎಂದು ದೇವಕಿಯಲ್ಲಿ ಜಂಭ ಹೊಡೆದು ಮೀಸೆ ಮೇಲೆತ್ತಿಕೊಂಡೆ. ವಾಸ್ತವದಲ್ಲಿ ಬಂದ ದಾರಿಯನ್ನೇ ಮರ್ಯಾದೆಯಲ್ಲಿ ಅನುಸರಿಸಿ, ಸಾವಕಾಶವಾಗಿಯೇ ಇಳಿದು ಕಾರೇರಿದೆವು. ಊಟದ ಹೊತ್ತಾಗಲೇ ಮೀರಿದ್ದುದರಿಂದ ರಾಮ್ದೇವ್ರ ಬೆಟ್ಟವನ್ನು “ಮುಂದೆಂದಾರೂ” ಎಂದು ಭಾವಿಸಿ ಅ(ಭಯ)ರ(ಶ್ಮಿಯರ)ಮನೆಗೆ ಮರಳಿದೆವು.


***         *** 

ಬೆಂಗಳೂರು ವಾಸದ ಇನ್ನೊಂದು ದಿನ, ತುಮಕೂರು ದಾರಿಯಲ್ಲಿ "ಸಿದ್ಧಗಂಗೇ, ಶಿವಗಂಗೇ" ಎಂದು ಜಪಿಸುತ್ತ ಬಸ್ಸೇರಿದೆವು. ಕ್ಯಾತಮಾರನಹಳ್ಳಿ, ಅಂದರೆ ಹೆಚ್ಚು ಕಡಿಮೆ ತುಮಕೂರಿನ ಹೊರವಲಯದಲ್ಲೇ ಇಳಿದರೆ ಬಲದ ನೇರ ದಾರಿ ಹೋಗುವುದೇ ಸಿದ್ಧಗಂಗಾ ವಲಯಕ್ಕೆ. ವಿಸ್ತಾರ ಬೀದಿಯ ಎರಡೂ ಬದಿಗೆ ಶಿವರಾತ್ರಿ ಜಾತ್ರೆಯ ಸಿದ್ಧತೆಗಳು ಭರ್ಜರಿಯಾಗಿತ್ತು. ತತ್ಕಾಲೀನ ಗುಡಾರಗಳಲ್ಲಿ ಪೇರಿಸಿಟ್ಟ ಉಜ್ವಲ ರಂಗಿನ ಸಿಹಿರಾಶಿ ದೂಳು, ನೊಣ, ಕೊನೆಗೆ ಜನರನ್ನೂ ಆಕರ್ಷಿಸುತ್ತಿದ್ದಿರಬೇಕು.


ನಮಗಾದರೋ ಎದುರಿನ ದೇವಳದ ಹಿತ್ತಲಿನ ಬೆಟ್ಟ, ಆಜೂಬಾಜಿನ ಇತರ ಬೆಟ್ಟಗಳ ಮೇಲೇ ಹುಡುಕುನೋಟ ಹರಿದಿತ್ತು. ಗಂಟೆ ಒಂದೂವರೆ ಸಮೀಪಿಸಿತ್ತು. ಸುಮಾರು ಅರ್ಧ ಕಿಮೀ ರಾಜಬೀದಿ ಅಥವಾ ರಥಬೀದಿಯ ಕೊನೆಯಲ್ಲಿನ `ದಾಸೋಹ ಭವನ’ ಕರೆಯಿತು, ನುಗ್ಗಿದೆವು.

ಹಳೆಗಾಲದ ಭಾರೀ ಮನೆಯ ಒಳಗಿನಿಂದ ಹಾಯ್ದು, ಹಿತ್ತಲಿನಲ್ಲಿ ಆಧುನಿಕ ದೊಡ್ಡ ಕೋಣೆ ಹೊಕ್ಕೆವು. ಸರಳ ವ್ಯವಸ್ಥೆ, ಕಡಪ ಕಲ್ಲಿನ ನೆಲದಲ್ಲಿ ಸಾಲುಗಟ್ಟಿ ಜನ ಕೂರುತ್ತಿದ್ದರು. ಬಹುಶಃ ಮಠದ ಪ್ರೌಢಶಾಲಾ ವಿದ್ಯಾರ್ಥಿಗಳು, ಸ್ವಯಂಸೇವಕರಾಗಿ ಎಲೆ, ನೀರು ಕೊಟ್ಟು ಬಡಿಸುತ್ತಿದ್ದರು. ನಾವೂ ಸಾಲು ಹಿಡಿದು ಕುಳಿತೆವು. ಅನ್ನ ಸಾಂಬಾರು ಬರುವವರೆಗೂ ರಾಗಿಮುದ್ದೇ ಬಯಸುವವರಿಗೆ ಪಕ್ಕದ ಕೋಣೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆಯೆಂದು ನಮಗೆ ತಿಳಿಯದೇ ಹೋಯ್ತು. 


ಹಾಗೆ ನಮ್ಮದಲ್ಲದ ಮುದ್ದೆ, ಸಾರನ್ನು ಅದರ ತಾಜಾ ನೆಲೆಯಲ್ಲಿ ಸವಿಯುವ ಅವಕಾಶ ತಪ್ಪಿಹೋಯ್ತು ಎಂಬ ಸಣ್ಣ ಕೊರಗು ಉಳಿಯಿತು. ಅದಲ್ಲವಾದರೆ, ಹುಡುಗರು ಪುಟಪುಟಿಯುತ್ತ ಬಡಿಸಿದ ಅನ್ನ, ಸಾಂಬಾರು, ಮಜ್ಜಿಗೆನೀರು ನಮಗೆ ಧಾರಾಳವಾಯ್ತು.


ರಥಬೀದಿಯ ಕೊನೆಯಲ್ಲಿ ಕಲ್ಲಗುಡ್ಡೆಯ ಐವತ್ತು-ನೂರು ಮೆಟ್ಟಿಲುಗಳ ಎತ್ತರದಲ್ಲಿ ದೇವಳವಿತ್ತು. ಅಲ್ಲಿಗೇರಿ ಒಂದು ಸುತ್ತು ಹಾಕಿ ಹೊರಬಿದ್ದೆವು. ಅದರ ಹಿತ್ತಲಿನಲ್ಲಿ ಇನ್ನೂ ಏರಲು ಬೆಟ್ಟವೇನೋ ಇತ್ತು. ಆದರದು ಈ ವಲಯದ ಭಾರೀ ಬಂಡೆ, ಮಣ್ಣು ಕುರುಚಲು ಕಾಡುಗಳ ಪ್ರಾಕೃತಿಕ ಸ್ಥಿತಿಯಲ್ಲೇ ಇದ್ದಂತಿತ್ತು. ಒಟ್ಟಾರೆ ಸಾರ್ವಜನಿಕರು ಅದನ್ನೇರಲು ಹೋಗಿ ತಂದುಕೊಳ್ಳುವ ಅಪಾಯವನ್ನು ಅಧಿಕಾರಿಗಳು ಮುಂಗಂಡು ಬೆಟ್ಟ ಹತ್ತುವುದನ್ನು ನಿಷೇಧಿಸಿ ಬೋರ್ಡುಗಳನ್ನು ಹಾಕಿದ್ದರು. ಬೆಟ್ಟ ನನ್ನ ದೃಷ್ಟಿಯಲ್ಲಿ  ದೊಡ್ಡ ಸವಾಲು, ಅದ್ಭುತ ದೃಶ್ಯ ಕೊಡುವ ಹಾಗೆ ಕಾಣಿಸಲೂ ಇಲ್ಲ. ಹಾಗಾಗಿ ನಾವು ಶಿವಗಂಗೆಯನ್ನು ಪ್ರಯತ್ನಿಸುವ ಯೋಚನೆ ಮಾಡಿ ಮತ್ತೆ ಹೆದ್ದಾರಿಗೇ ಮರಳಿದೆವು. ಒಂದು ಊಟ, ನೂರೇಳು ವರ್ಷ ಪ್ರಾಯದಲ್ಲೂ ಜಗ್ಗದ ಸಾಧಕ-ಸ್ವಾಮಿಯ ಪ್ರಧಾನ ಕಾರ್ಯ ಕ್ಷೇತ್ರದ ತೀರಾ ಹೊರನೋಟ ಪಡೆದದ್ದಷ್ಟೇ ನಮ್ಮ ಸಿದ್ಧಗಂಗೆಯ ಸಿದ್ಧಿ ಎಂದುಕೊಂಡೆವು.

ಬೆಂಗಳೂರಿನದೇ ದಾರಿಯಲ್ಲೇ ಡಾಬಸ್ ಪೇಟೆಯವರೆಗೆ ವಾಪಾಸು ಹೋದೆವು. ಅಲ್ಲಿಂದ ಸಣ್ಣ ಸಾವ್ಕಾರೀ ಬಸ್ಸು. ಅದು ಮತ್ತೈದೋ ಆರೋ ಕಿಮೀ ಸುತ್ತಾಡಿಸಿ, ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಇಳಿಸಿತು. ಅಲ್ಲಿಂದ ತೋರುವಂತೆ ಬೆಟ್ಟ ಭಾರೀ ಬಂಡೆಗಳ ಒಟ್ಟಣೆ. ಅದರಲ್ಲಿ ಕೆಳ ಅರೆವಾಸಿ ಅಂತರದವರೆಗೂ ಸಾಕಷ್ಟು ಮಣ್ಣಿನ ಅಂಶ ಇದ್ದಂತಿತ್ತು. ಅದರಲ್ಲಿ ಹಸಿರು, ಮರ ತುಂಬಿ ರೂಕ್ಷತೆಗೆ ಮಾರ್ದವದ ಸ್ಪರ್ಷ ಸಿಕ್ಕಿತ್ತು. ಮೇಲಿನರ್ಧದ ಪೂರ್ತಿ ಬಂಡೆಗೂ ಮೋಹಕ ಎತ್ತುಗಡೆ ದಕ್ಕಿತ್ತು.

ಮುಖ್ಯದಾರಿ (ಬಸ್ಸೂ) ಇನ್ಯಾವುದೋ ಊರಿಗೆ ಮುಂದುವರಿದಿತ್ತು. ಬಲಗವಲು ಹಳಗಾಲದ ಗೋಪುರ ಸಹಿತ ಪುಟ್ಟ ದ್ವಾರವನ್ನೇ ಹೊಕ್ಕು ಹೊರಟು ಶಿವಗಂಗೆ ಪೇಟೆಗೆ (ಹಳ್ಳಿ ಅಂದ್ರೂ ತಪ್ಪಲ್ಲ) ಲಂಬಿಸಿತ್ತು. ಹೀಗೇ ಹಳೆಕೋಟೆಯ ಕಿರಿದಾದ ದ್ವಾರ ಶ್ರೀರಂಗಪಟ್ಟಣದಲ್ಲೂ ಇದ್ದದ್ದು ನನಗೆ ನೆನಪಿಗೆ ಬಂತು. ಅಲ್ಲಿನಂತೇ ಇಲ್ಲೂ ದೊಡ್ಡ ವಾಹನಗಳಿಗೆ ಬೇರೊಂದು ದ್ವಾರವಿರಬಹುದು. ಪುಟ್ಟ ಒಂದೇ ದಾರಿಯುದ್ದದ ಊರಿನಲ್ಲಿ ಮುಖ್ಯವಾಗಿ ಮನೆಸಾಲು. ಮನೆಯದ್ದೇ ವಿಸ್ತರಣೆಯಂತೆ ಒಂದೆರಡು ಅಂಗಡಿ, ಒಂದೆರಡು ನಾಮಕಾವಸ್ಥೆ ಹೋಟೆಲು. ನಾವು ಹೋಗುವಾಗ ಒಂದು ಹಣ್ಣುಕಾಯಿ ಅಂಗಡಿಯಲ್ಲಿ ನಮಗೆ ತಿನ್ನಲೆಂದು ಒಂದು ಚಿಪ್ಪು ಬಾಳೆ ಹಣ್ಣು ಕೊಂಡೆವು. ಅಂಗಡಿಯಾಕೆ ಅಲ್ಲಿ ಠಳಾಯಿಸಿದ್ದ ಮಂಗಗಳನ್ನು ತೋರಿಸಿ “ಹುಶಾರು, ಹಣ್ಣು ತಿಂಡಿಗಾಗಿ ಬ್ಯಾಗೂ ಪರ್ಸೂ ಕಿತ್ಕಂಬುಡ್ತವೆ” ಎಂದಿದ್ದಳು. ಹಣ್ಣನ್ನು ನಾನು ಬಟ್ಟೆ ಚೀಲದಲ್ಲಿ ಹಾಕಿ ಭದ್ರವಾಗಿಯೇ ಹಿಡಿದುಕೊಂಡೆ.

ಪೇಟೆಯ ಕೊನೆಯಲ್ಲಿ ಎಡಕ್ಕೆ ಬೆಟ್ಟವೇರಲು ಮೆಟ್ಟಿಲ ಸಾಲು. ಭರ್ಜರಿ ಸ್ವಾಗತ ತೋರಣ, ವಿಸ್ತಾರ ಸೋಪಾನಗಳು, ಬಿಸಿಲಿಗೆ ಮಾಡು, ದಾಸೋಹಭವನವೆಲ್ಲ ಕಾಣುತ್ತಿದ್ದಂತೆ ತಿರುಪತಿಗೇರಿದ ನೆನಪಾಗದಿರಲಿಲ್ಲ. ಆದರೆ ಇಲ್ಲಿನದು ನೂರಿನ್ನೂರು ಏರುಮೆಟ್ಟಿಲ ಕೊನೆಯ ದೇವಳವೊಂದಕ್ಕೆ ಮುಗಿದಿತ್ತು. ನಮಗೆ ದೇವಳದಲ್ಲೇನೂ ಆಸಕ್ತಿಯಿರಲಿಲ್ಲವಾದ್ದರಿಂದ ಮೊದಲೇ ನೇರ ಬೆಟ್ಟವೇರಲು ಹೋಗುತ್ತಿದ್ದ ಎಡದ ಕವಲು ಆಯ್ದುಕೊಂಡೆವು. ಇಲ್ಲಿಂದ ಮುಂದೆ ಎಲ್ಲಾ ಕಚ್ಚಾ ಸ್ಥಿತಿ.

ಶಿವಗಂಗೆಯ ಶಿಖರ ಎಸ್ಸಾರೆಸ್ಸಿನ ನೆತ್ತಿಯಂತೆ ಆರಾಧನಾ ಪ್ರಾಮುಖ್ಯ ಗಳಿಸಿಲ್ಲವೆಂದೋ ಏನೋ ಸಾರ್ವಜನಿಕ ಹಿತ ದೃಷ್ಟಿಯ ಅಭಿವೃದ್ಧಿಗಳು ದುಸ್ಥಿತಿಯಲ್ಲಿವೆ.   

ಅರಸರ ಕಾಲದ ಯಾತ್ರೀ ತಂಗುದಾಣ, ವಿಶ್ರಾಂತಿಕಟ್ಟೆ, ಮಂಟಪವೇ ಮೊದಲಾದ ರಚನೆಗಳು, ಸೇವಾಶಾಸನಗಳು ಕೆಲವಿವೆ. ಆದರೆ ಆ ಪ್ರಾಕೃತಿಕ ಪರಿಸರಕ್ಕೆ ಹೊಂದುವ ಅಥವಾ ಉತ್ಸವಾದಿ ದಿನಗಳಲ್ಲಿ ಅಲ್ಲಿ ಸೇರುವ ಜನಸಾಗರದ ಕಲ್ಪನೆಯೊಡನೆ, ದೊಡ್ಡ ಯೋಜನೆಯ ಭಾಗವಾಗಿ ಯಾವವೂ ವಿಕಾಸಗೊಂಡಂತಿರಲಿಲ್ಲ. ತೀರಾ ಹೊಸತನ್ನುಳಿದು ಎಲ್ಲ ರಚನೆಗಳೂ ಹಾಳು ಸುರಿಯುತ್ತಿತ್ತು. ಜೊತೆಗೆ ಕಸ ಸೇರಿಸುವ ನಮ್ಮವರ ಸ್ವಾತ್ರಂತ್ರ್ಯ ಅಬಾಧಿತವಾಗಿ ಇಡಿಯ ಬೆಟ್ಟವನ್ನು ಬೇಕಾಬಿಟ್ಟಿ ಮಲಿನವೂಗೊಳಿಸಿತ್ತು. 

ಬಂಡೆ ಬೆಟ್ಟಗಳಿಗೆ ಸಹಜವಾಗಿ ಇಲ್ಲೂ ಕೆಲವು ತಗ್ಗುಗಳಲ್ಲಿ, ಬಂಡೆಯಡಿಯ ಮಾಟೆಗಳಲ್ಲಿ ಮಳೆನೀರ ಸಂಗ್ರಹವಿದೆ. ಒಳಕಲ್ಲು, ಕುಂಭ, ಗಂಗೆ ಇತ್ಯಾದಿ ತೀರ್ಥಗಳ ಹೆಸರಿನಲ್ಲಿ ಕೆಲವಕ್ಕೆ ಚೌಕಟ್ಟು ಹಾಕಿ ಪೂಜಾ ಪಾವಿತ್ರ್ಯವನ್ನೂ ಕಲ್ಪಿಸಿದ್ದಾರೆ. ತಪ್ಪಿಲ್ಲ, ಆದರೆ ವಿಚಾರವಿಲ್ಲದ ಭಕ್ತಿ ಅವುಗಳ ಪ್ರಾಕೃತಿಕ ಪಾವಿತ್ರ್ಯವನ್ನು ಕೆಡಿಸಿರುವುದು ಏನೇನು ಸರಿಯಲ್ಲ. ಒಳಕಲ್ಲು ತೀರ್ಥ ಸಂದರ್ಶನಕ್ಕೆ
ಪ್ರವೇಶಧನ ಬೇರೆ ಕೇಡು. ಅಲ್ಲಿ ಕುರ್ಚಿ ಹಾಕಿ ಗಟ್ಟಿ ಕುಳಿತ ಟಿಕೇಟಿನವ ತನ್ನ ಎಂಜಲು ಹಚ್ಚಿ ಟಿಕೇಟ್ ಕೊಟ್ಟ. ದೇವಕಿ ನಿರಾಕರಿಸಿ ಶುದ್ಧ ಟಿಕೇಟ್ ಕೇಳಿದ್ದಕ್ಕೆ “ನನಗ್ ಹತ್ರುಪಾಯಿ ಲಾಸು” ಅಂತ ಗೊಣಗಿಕೊಂಡು ಬೇರೆ ಕೊಟ್ಟ! ಆ `ತೀರ್ಥ’ಗಳನ್ನು ಭಕ್ತಿಭಾವದಿಂದ ಬಾಯಿಗೆ ಹಾಕಿಕೊಳ್ಳುವವರನ್ನು ಶಿವನೇ ಕಾಪಾಡಬೇಕು! ಅಲ್ಲಿ ಇನ್ಯಾವುದೋ ತೀರ್ಥದಿಂದ ತುಸು ಕೆಳಕ್ಕಿದ್ದ ಆಧುನಿಕ ಟ್ಯಾಂಕೊಂದಕ್ಕೆ ಕೊಳವೆ ಹಾಕಿದ್ದು ಕಾಣುತ್ತಿತ್ತು. ಇದು ಪ್ರಾಕೃತಿಕ ನೀರನ್ನು ಇತರ ಉಪಯೋಗಗಳಿಗೆ ಬಳಸುವ ತಂತ್ರವೋ `ತೀರ್ಥ’ವನ್ನು ಊರ್ಜಿತದಲ್ಲಿಡಲು ಕೆಳಗಿನಿಂದ ಪಂಪ್ ಮಾಡುವ ತಂತ್ರವೋ ನನಗೆ ತಿಳಿಯಲಿಲ್ಲ.


ಅಲ್ಲಲ್ಲಿ ಶೀಟ್ ಹಾಕಿಯೋ, ಜೋಪಡಿ ಮಾಡಿಯೋ ಸಣ್ಣಪುಟ್ಟ ತಿನಿಸು ಪಾನೀಯಗಳ ಮಳಿಗೆ ಮಾಡಿಕೊಂಡಿದ್ದರು. ಬರಲಿರುವ ಶಿವರಾತ್ರಿ ಲೆಕ್ಕ ಹಾಕಿ ಇನ್ನೂ ಕೆಲವು ಹೊಸತಾಗಿ ಸಜ್ಜುಗೊಳ್ಳುತ್ತಿರುವುದೂ ಕಾಣಿಸಿತು. ಜಾತ್ರೆ ತರಬಹುದಾದ ಹೆಚ್ಚಿನ ಕೊಳೆಯ ಲೆಕ್ಕ ಹಾಕಿ, “ಜಾತ್ರೆಗೂ ಮೊದಲೆ ಬಂದ ನಾವು ಪುಣ್ಯವಂತರು” ಎಂದುಕೊಂಡೆವು. ತನ್ನ ಚಾ-ಜೋಪಡಿಯ ಉರುವಲಿಗೆಂಬಂತೆ ಒಬ್ಬ ಪೊದರು ಕಡಿಯುತ್ತಿದ್ದ. ನಾನು ತಿಳಿದೂ ಅದರ ಕುರಿತು ವಿಚಾರಿಸಿದ್ದಕ್ಕೆ ಆತ ಕೊಟ್ಟ ದುರುದುರು ದೃಷ್ಠಿ ನನಗೆ ಸಾಕಾಯ್ತು! ಇನ್ನೊಂದು ಜೋಪಡಿ ಅಂಗಡಿಯಾಕೆ ಅಲ್ಲಿದ್ದ ಬಿಲ್ವಪತ್ರೆ ಮರಕ್ಕೊಬ್ಬ ಹುಡುಗನನ್ನು ಹತ್ತಿಸಿ ಕಾಯಿ ಸಂಗ್ರಹ ನಡೆಸಿದ್ದಳು. 

ಆತ ಕೊಕ್ಕೆ ಕತ್ತಿಗಳಿಂದ ಸಜ್ಜಾಗದೇ ಏರಿ, ಕಾಯಿಗೊಂದು ರೆಂಬೆ ಕೊಂಬೆಯನ್ನೇ ಮುರಿದು ಕೆಳ ಹಾಕುತ್ತಿದ್ದ. ಸವಲತ್ತುಗಳ ವ್ಯವಸ್ಥೆಯೇ ಸರಿಯಿಲ್ಲದಲ್ಲಿ ಉಪದೇಶದ ಬಾಯಿಗಳು, ನಿಷೇಧದ ಕಟ್ಟುಗಳು ಪರಿಸರವನ್ನು ಉಳಿಸಲಾರವು. ನಾವು ಕುಡಿಯಲು ನೀರೇನೋ ಧಾರಾಳ ಒಯ್ದಿದ್ದೆವು. ಆದರೂ ಒಂದೆಡೆ ಜೋಪಡಿ ಅಡ್ಡೆಯಲ್ಲಿ ಕತ್ತರಿಸಿಟ್ಟ ಸೌತೆ, ಫಲಾಮೃತದ ಪುಟ್ಟ ಲೋಟಗಳು ನೋಡಿದಾಗ ಆಸೆ ಹತ್ತಿಕ್ಕಲಾಗಲಿಲ್ಲ. “ಇವೆಲ್ಲ ಬೇಡ, ಹೊಸತು ಸಿಪ್ಪೆ ಸವರಿ, ಕತ್ತರಿಸಿ ಕೊಡ್ತೀರಾ” ಎಂದದ್ದಕ್ಕೆ ಆಕೆ ಸಂತೋಷದಲ್ಲೇ ಮುಂದಾದಳು. ಅವಳು ಸಿಪ್ಪೆ ಕೆತ್ತುತ್ತಿದ್ದಾಗ, ಅಯಾಚಿತವಾಗಿ ನಾವು ಕಸದ ಬಗ್ಗೆ ಅವಳಿಗೆ ಸಣ್ಣ ಪಾಠಮಾಡಿದೆವು. 


ಅವಳು ಬಹು ವಿನಯದಿಂದ ಅದನ್ನೊಪ್ಪಿಕೊಳ್ಳುತ್ತಾ ತನ್ನಂಗಡಿಯ ಕಸವನ್ನು ಸಂಗ್ರಹಿಸುವ ಡಬ್ಬಿ ತೋರಿದಳು. ಏತನ್ಮಧ್ಯೆ ಆಕೆ ಸಿಪ್ಪೆ ಕೆತ್ತಿ ಮುಗಿದಂತೆ ಅದರ ಹೊರಮೈಯ್ಯ ಕಹಿ ನಮ್ಮನ್ನು ಬಾಧಿಸಬಾರದೆನ್ನುವ ಸದುದ್ದೇಶದಿಂದಲೇ ಅವಳಲ್ಲಿದ್ದ ಏಕೈಕ ನೀರ ಸಂಗ್ರಹಕ್ಕೆ – ಒಂದು ಬಾಲ್ದಿ, ಮುಳುಗಿಸಿ ತೊಳೆದು ಬಿಟ್ಟಳು. ನಮ್ಮ ಹೊಟ್ಟೆಯೊಳಗಿನ ತೊಳಸು ತಡೆದುಕೊಂಡು, ಸೌತೇಕಾಯಿ ಪಡೆಯಲು ಕೈಚಾಚಿದೆವು. ಆದರಾಕೆ ಅಷ್ಟಕ್ಕೆ ಬಿಡದೇ ವೃತ್ತಿಪರ ಚುರುಕಿನಲ್ಲಿ ಉದ್ದಕ್ಕೆ ನಾಲ್ಕು ಸಿಗಿದು, ಎರಡು ಮಸಿಮಯ ಹಳೆಪತ್ರಿಕೆಯ ತುಂಡುಗಳಲ್ಲಿಟ್ಟು, ಎಡೆಯಲ್ಲಿ ಉಪ್ಪುಮೆಣಸಿನ ಪುಡಿಯನ್ನಷ್ಟು ಸವರಿಯೇ ಕೊಟ್ಟಳು. `ಬಂದದ್ದೆಲ್ಲಾ ಬರಲಿ’ ಎಂದು ನಮ್ಮಷ್ಟಕ್ಕೇ ಗೊಣಗಿಕೊಂಡು, ನಮ್ಮ ಕೈಯಕೊಳೆಯನ್ನೇ ಹೆಚ್ಚು ನೆಚ್ಚಿ ಪತ್ರಿಕೆಯ ತುಂಡನ್ನು ಆಕೆಗೆ ಮರಳಿಸಿ ಮುಂದುವರಿದೆವು. ಹಿಂದೆ ಬರುವ ದಾರಿಯಲ್ಲಿ ಆಕೆ ದೂರದಿಂದ ನಮ್ಮನ್ನು ಕಂಡೋ ಏನೋ ಹಿಡಿಸೂಡಿ ಹಿಡಿದು ದಾರಿಯನ್ನಷ್ಟು ಗುಡಿಸಿ ಶುದ್ಧ ಮಾಡತೊಡಗಿದ್ದಳು! ಸೋತ ಕಾಲುಗಳನ್ನು ಎಳೆಯುತ್ತಾ ನಮಗೆ ಗಂಟುಬಿದ್ದಿದ್ದ ಇನ್ನೊಬ್ಬ ಯಾತ್ರಿ “ಯಮ್ಮೋ ಬರೀ ದೂಳೆಬ್ಬುಸ್ತಿಯಲ್ಲಾ. ವಸೀ ನೀರಾಕ್ಕೋ” ಸಲಹೆ ಕೊಟ್ಟ. ಅವಳಿಗ್ಗೊತ್ತು ಮತ್ತೆ ಅಷ್ಟರಲ್ಲಿ ಸ್ವಲ್ಪ ನಮಗೂ ಗೊತ್ತಾಗಿತ್ತು – ವ್ಯವಸ್ಥೆಯಲ್ಲಿ, ಆಕೆಯೇ ಬೆಳಿಗ್ಗೆ ಬೆಟ್ಟದ ಬುಡದಿಂದ ಹೊತ್ತು ತಂದಿದ್ದ ಒಂದು ಬಾಲ್ದಿ ನೀರಿನಲ್ಲಿ ಏನೆಲ್ಲಾ ಮಾಡಬಹುದು!

ಬೆಟ್ಟದ ಶುದ್ಧ ಬಂಡೆಭಾಗ ತೊಡಗುವ ಸುಮಾರಿಗೆ ಜಾಡಿಗಡ್ಡವಾಗಿ  ಒಂದು ಆಧುನಿಕ ಗುಡಿ ಹೊಡೆದು ತೋರುತ್ತಿತ್ತು. ಅಲ್ಲಿನ ಸಿಮೆಂಟ್ ವಿಗ್ರಹಗಳು, ಟೈಲ್ಸ್ ಮತ್ತು ವಿಪರೀತ ಬಣ್ಣದ ಸಂಯೋಜನೆಗಳು ಭಕ್ತಿಗಿಂತಲೂ ಸೇವಾಕರ್ತರ ಪ್ರದರ್ಶನದ ತೆವಲು ಕಾಣಿಸುವಂತಿತ್ತು. ಏರುವ ದಾರಿಯಲ್ಲಿ ಅದರ ಗರ್ಭ ಗುಡಿಯಂಥ ಎಡಭಾಗ ಮುಚ್ಚಿಕೊಂಡಿತ್ತು. ಮೇಲೇರುವವರೆಲ್ಲ ಬಲಕ್ಕಿದ್ದ ಸಣ್ಣ ದ್ವಾರ ಬಳಸುವ ಅನಿವಾರ್ಯತೆ ಮಾಡಿಟ್ಟಿದ್ದರು. ಹಿಂದೆ ಬರುವ ದಾರಿಯಲ್ಲಿ ಆ ರಚನೆಯ ಯಜಮಾನನೋ ಏಜಂಟನೋ ಬಾಗಿಲು ತೆರೆದು, ಆರೆಂಟು ಮಂದಿ ಪ್ರವಾಸಿಗಳಿಗೆ ಸ್ಥಳಪುರಾಣವನ್ನು ಕೊರೆಯುತ್ತಿದ್ದ. ಅದನ್ನು ದಾಟುವುದೆಂದರೆ ಕೈಲಾಸ ದ್ವಾರವನ್ನು ದಾಟಿದಂತೆ – ಪಾಪನಾಶೀ, ಧನಕನಕಾದಿ ಐಶ್ವರ್ಯದಾಯೀ, ಪುಣ್ಯಪ್ರದ, ಮೋಕ್ಷಪ್ರದ ಇತ್ಯಾದಿ ರೈಲು ಬಿಡುತ್ತಿದ್ದ! ಏರುದಾರಿಯಲ್ಲಿ ಅದನ್ನು ತಪ್ಪಿಸಿಕೊಂಡ ನಾವು – ಪಾಪಿಗಳು, ಇಳಿದಾರಿಯಲ್ಲಾದರೂ ಪುಣ್ಯಸಂಚಯನದ ಮನಸ್ಸು ಮಾಡಿಯೇವೇ ಎಂಬುದವನ ಏರು ಧ್ವನಿಯ ನಿರೂಪಣೆಯ ಗುಟ್ಟಿದ್ದಿರಬೇಕು. ನಾವು ಕನಿಷ್ಠ ಕುತೂಹಲವನ್ನೂ ತೋರಿಸದೆ ಇಳಿದು ಬಂದೆವು!.
ಉರಿ ಉರಿ ಬಿಸಿಲು, ಕೆಂಪಾದ ಬಂಡೆಗಳೆಡೆಯಲ್ಲಿ ಏರಿದ್ದೆವು. ಸವಕಲು ಜಾಡು, ಅಲ್ಲಲ್ಲಿ ಕಚ್ಚಾ ಮೆಟ್ಟಿಲು. ಒಂದೆರಡು ಕಡೆ ಹಾಸು ಬಂಡೆಯೇ ಬಂದಲ್ಲಿ ಪಾದಕ್ಕೆ ಆಧಾರ ಎನ್ನುವಷ್ಟೇ ಒರಟಾಗಿ ಕೆತ್ತಿದ ಮೆಟ್ಟಿಲುಗಳೂ ಕಬ್ಬಿಣದ ಸಲಾಕಿಗಳ ಕೈಯಾಧಾರಗಳೂ ಇದ್ದವು. ಅವೇನಿದ್ದರೂ ಹಳಗಾಲದ ಅನಿವಾರ್ಯತೆಯ ರಚನೆಗಳು. ಭಾರೀ ಬಂಡೆಯ ಮೇಲೆ ಬಂಡೆ ಹೇರಿದಂತೇ ಇರುವುದರಿಂದ ಸುಲಭ ಜಾಡು ನಿರ್ಧರಿಸಲು ಮತ್ತು ಸಾಮಾನ್ಯರಿಗೆ ಕನಿಷ್ಠ  ಸಂಚಾರ ಭದ್ರತೆ ಕಲ್ಪಿಸಲು ಜನಪದ ಕುಶಲಿಗಳು ತುಂಬ ತಿಣುಕಿದ್ದಾರೆ. ಕೆಲವೆಡೆ ಬಂಡೆಗುಂಡಿನ ತಲೆಯೊಂದರಿಂದ ಇನ್ನೊಂದಕ್ಕೇರಲು ಬದಿಯ ಸರಳು ಜಗ್ಗಿಯೇ ಹೋಗುವ ಸ್ಥಿತಿ; ನಡುವೆ ಮೆಟ್ಟಲು ಕೊಟ್ಟೇ ಇಲ್ಲ. 

ಹೀಗೆ ಒಂದೆಡೆ ಏರುವಲ್ಲಿ ದೇವಕಿ ಮುಂದಿದ್ದಳು. ದೊಡ್ಡ ಬಂಡೆಯ ಮಂಡೆ ಮೆಟ್ಟಿ ಸಾವರಿಸಿಕೊಳ್ಳುತ್ತಿದ್ದಂತೆ ಎದುರಿನಿಂದ ಒಂದು ಗಡವ ಕೋತಿ ಸಮೀಪಿಸಿ ಟರ್ರ್ ಎಂದು ಹಲ್ಲು ಕಿಸಿಯಿತು. ಇವಳು “ಮಂಗ, ಹೋಗು...” ಎಂದು ಅರ್ಧ ಗಾಬರಿ ಅರ್ಧ ಜೋರಿನಲ್ಲಿ ಹೇಳಿದ್ದು ಅದು ಲೆಕ್ಕಕ್ಕಿಟ್ಟುಕೊಳ್ಳಲೇ ಇಲ್ಲ. ಇವಳನ್ನು ಮೊಣಕಾಲಿನ ಮೇಲೊಂದು ಕೈ ಊರಿ, ರೆಕ್ಸಿನ್ನಿನ ಬಗಲಚೀಲಕ್ಕೆ ಕೈ ಹಾಕಿ ಎಳೆಯಲು ಪ್ರಯತ್ನಿಸಿತು. 

ಅವಳು ಚೀಲವನ್ನು ಕಂಕುಳಲ್ಲೇ ಅಮರಿಸಿ, ಮಂಗನ ಕೈ ಕೊಸರಿದ್ದಕ್ಕೆ ಅದು ಒಮ್ಮೆ ಹಿಂದೆ ಸರಿಯಿತು. ನಾನು ದೊಡ್ಡ ಧ್ವನಿ ತೆಗೆದು ಮೇಲೇರುವಷ್ಟರಲ್ಲಿ ಅದು ಪೂರ್ಣ ದೂರ ಸರಿದಿತ್ತು. ವಾಸ್ತವವಾಗಿ ಮಂಗಕ್ಕೆ ಬೇಕಾದ ಹಣ್ಣು ನನ್ನ ಚೀಲದಲ್ಲಿತ್ತು. ದೇವಕಿಯ ಕೈಚೀಲವೆಲ್ಲಾದರೂ ಹೋಗಿದ್ದರೆ ಹಣ, ಮನೆಯ ಬೀಗದ ಕೈ ಮುಂತಾದ ಮಂಗಕ್ಕೆ ಪೂರ್ಣ ನಿರುಪಯುಕ್ತವಾದ, ಆದರೆ ನಮ್ಮ ಬಹುಸಂಕಟಕ್ಕೆ ಕಾರಣವಾದ ಸರಕುಗಳಷ್ಟೂ ಕಳೆದು ಹೋಗುತ್ತಿತ್ತು. ಆ ಜಾಣ ಮಂಗ ಲಿಂಗಬೇಧ ಮಾಡಿತೋ ನನ್ನನ್ನು ಹೆಚ್ಚು ಅಪಾಯಕಾರಿ ಎಂದು ಗ್ರಹಿಸಿತೋ ಅಂತೂ ನನ್ನತ್ತ ಸುಳಿಯಲೇ ಇಲ್ಲ. ಲಿಂಗಬೇಧವಂತೂ ಅಲ್ಲ ಎನ್ನುವುದಕ್ಕೆ ಮುಂದೆ ಶಿಖರದ ಬಳಿ ನಮಗೆ ಪುರಾವೆ ಸಿಕ್ಕಿತು!

ಸುತ್ತಿ ಬಳಸಿ, ಬಂಡೆಗಳ ಸಂದು ಹಿಡಿದು ಶಿಖರ ಪ್ರದೇಶಕ್ಕೆ ತಲಪುವಲ್ಲಿ ಎಡಕ್ಕೊಂದು ಕೋಡುಗಲ್ಲಿನ ಮೇಲೆ ನಂದಿ ವಿಗ್ರಹ ಮೂಡಿಸಿದ್ದರು. ಅದರ ಎತ್ತರಕ್ಕೇರಿ, ಸ್ಪರ್ಷಿಸಿ, ಆರಾಧಿಸುವ ಸಲುವಾಗಿ ಅಲ್ಲೂ ಒರಟು ಮೆಟ್ಟಿಲು, ಭದ್ರ ಸರಳುಗಳ ಕೈಯಾಸರೆ ಇತ್ತು. ಪೂರ್ಣ ಶಿಲಾವಲಯದ ಎತ್ತರಕ್ಕೆ ಬರುತ್ತಿದ್ದಂತೇ ಬೀಸುಗಾಳಿಯ ಸಾಂತ್ವನ ನಮಗೆ ಧಾರಾಳ ಸಿಕ್ಕತೊಡಗಿತ್ತು. ಈ ಕೋಡುಗಲ್ಲ ಮೇಲಿನ ನಂದಿಗೆ ಹತ್ತುವಾಗಂತೂ ಗಾಳಿಯೇ ನಮ್ಮನ್ನು ಮೇಲಕ್ಕೊಯ್ಯುವಷ್ಟು ಅಪ್ಪಳಿಸುತ್ತಿತ್ತು! ಕೋಡುಗಲ್ಲ ನೆತ್ತಿಯ ಹರಹನ್ನು ಪೂರ್ಣ ತುಂಬಿದಂತೆ ನಂದಿ ಕೆತ್ತಿದ್ದರು. ಅದಕ್ಕೆ ಪ್ರದಕ್ಷಿಣೆ ಬರಲು ಎಡಬಲದಲ್ಲಿ ತುಸು ಕಲ್ಲಿನಂಶ ಸಿಕ್ಕಿತ್ತು, ಜಾಡು ಕೆತ್ತಿ, ಬೇಲಿಕಟ್ಟಿದ್ದರು. ಹಿಮ್ಮೈಯಲ್ಲಿ ಬಂಡೆ ಅವಕಾಶ ಕೊಡಲಿಲ್ಲವೆಂದು ಕೈಚೆಲ್ಲಿರಲಿಲ್ಲ. ಸುಮಾರು ಎಂಟಡಿ ಅಂತರಕ್ಕೆ ಬಂಡೆಗೆ ಹೊಟ್ಟೆಗೇ ಕಬ್ಬಿಣದ ಸರಳುಗಳನ್ನು ತೂರಿಸಿ, ಪರಸ್ಪರ ಸಂಪರ್ಕ ಪಟ್ಟಿಗಳನ್ನು ಬೆಸೆದು, ಹಲಿಗೆ ಹಾಕಿ ಪಕ್ಕಾ ಅಟ್ಟಳಿಗೆ, ಬೇಲಿ ಒದಗಿಸಿದ್ದರು. ಬೆಟ್ಟದ ಬುಡದಿಂದಲೂ ಕಂಡ ಒಟ್ಟಾರೆ ರಚನೆಗಳದೇ ಒರಟು ಮುಂದರಿಕೆ ಇಲ್ಲೂ ಕಾಣುತ್ತಿದ್ದುದರಿಂದ ದೇವಕಿ ಆಚೆ ನೋಡುವ, ಸುತ್ತು ಬರುವ ಪ್ರಯತ್ನವನ್ನೂ ಮಾಡಲಿಲ್ಲ. 

ನಾನು ಅದೊಂದು ಕೊರತೆಯಾಗಬಾರದೆಂದು, ಅಟ್ಟಳಿಗೆಯ ಭದ್ರತೆಯನ್ನು ಎರಡೆರಡು ಬಾರಿ ಪರೀಕ್ಷಿಸಿಯೇ ಸುತ್ತು ಹಾಕಿ ಬಂದೆ. ನಂದಿಯ ಎತ್ತರದಿಂದ ನಮ್ಮ ಬೆಟ್ಟದ ಉಳಿದ ಶಿಖರ ಪ್ರದೇಶದ ಪೂರ್ಣ ದರ್ಶನ ಸಿಗುತ್ತಿತ್ತು. ನಂದಿಯಿಂದ ಮರಳಿ ಬಂಡೆಯ ಸಂದಿಗಿಳಿದು, ಬಲ ಮೆಟ್ಟಿಲುಗಳನ್ನೇರಿ ಸಾಕಷ್ಟು ಮಟ್ಟವಾಗಿಯೂ ವಿಸ್ತಾರವಾಗಿಯೂ ಹರಡಿದ್ದ ಶಿಖರವನ್ನು ಸೇರಿದೆವು. ಅಲ್ಲಿ ಕೇಂದ್ರದಲ್ಲಿ ಎನ್ನುವಂತೆ ಒಂದು ಪುಟ್ಟ ವೀರಭದ್ರನ ಗುಡಿ, ಮುಚ್ಚಿಕೊಂಡಿತ್ತು. ಎದುರಂಚಿನಲ್ಲಿ ಹಳಗಾಲದಲ್ಲೇ ಕಲ್ಲಿನಲ್ಲಿ ಕಟ್ಟಿದ್ದ ನಿರಾಕರ್ಷಕ, ತಗ್ಗು ಮಾಡಿನ ಸಣ್ಣ ರಚನೆ ಕಾಣಿಸಿತು. ಗುಡಿಯ ಪೂಜಾರಯ್ಯನ ವಾಸ್ತವ್ಯವೋ ಸಣ್ಣ ಮಠವೋ ಇರಬೇಕು. 


ಅಲ್ಲಿ ಯಾರೋ ಕಾವೀಧಾರಿಯ ಓಡಾಟವನ್ನೂ ಗಮನಿಸಿದೆವು. ಬಲಭಾಗಕ್ಕೆ ಇನ್ನೊಂದೇ ಸುವಿಸ್ತಾರ ಬಂಡೆ. ಅದರಂಚಿನಲ್ಲಿ ಬಲವಾದ ಬೇಲಿ ಕೊಟ್ಟು ಸುತ್ತಣ ಮೂರೂ ದಿಕ್ಕಿನ ಕೊಳ್ಳ ಸ್ಪಷ್ಟವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು. 

ಅದರ ನಡುವೆಯೊಂದು ಸಣ್ಣ ಕಲ್ಲಿನ ಸ್ತಂಭ ಊರಿ, ಅದರಲ್ಲೇ ಪುಟ್ಟ ಪೊಟರೆ ಕೊರೆದು, ಎಣ್ಣೆ ದೀಪ ಉರಿಸಲು ಅವಕಾಶ ಮಾಡಿದ್ದರು. ಅಲ್ಲಿ ಭಕ್ತಾದಿಗಳ ನೂರಾರು ವರ್ಷಗಳ ಸೇವೆಯ ಫಲವಾಗಿ ಆ ಭಾಗದ ಬಂಡೆಯ ನೆತ್ತಿಯಲ್ಲೆಲ್ಲ ಎಣ್ಣೆಯ ಜಿಡ್ಡು, ದೀಪದ ಕರಿಕರಿ ಕಲೆ. ಬಂಡೆಯ ಅಂಚಿನುದ್ದಕ್ಕೂ ಓಡಾಡಿ `ಸುತ್ತಿದಷ್ಟೂ ಮುಗಿಯದ ಅಮ್ಮ ಕೊಟ್ಟ ಚಿತ್ರವತ್ತಾದ ಚಾಪೆ’ಯನ್ನು ಧಾರಾಳ ಮನದುಂಬಿಕೊಂಡೆವು.

ಏರಿ ಬರುವಾಗ ಮಣ್ಣವಲಯ ಮುಗಿದಲ್ಲೇ ಎದುರಾಗಿತ್ತೊಂದು ತರುಣರ ಪಡೆ. ಅಲ್ಲೊಬ್ಬ ನಮ್ಮ ಪ್ರಾಯದ ಮೇಲಿನ ಅಪಾರ ಕರುಣೆಯಿಂದ ಕೇಳಿದ್ದ “ತಾತಾ ಈ ಒತ್ಗ್ ಓಯ್ತೀರಾ? ಹಿಂದ್ ಬರದೂ?” ನಾನು ಸಣ್ಣ ನಗೆ ಮಾತ್ರ ತೋರಿಸಿದ್ದೆ. ಹಾಗೆಂದು ನಾವು ಶಿಖರವಲಯದಲ್ಲಿ ವಿಪರೀತ ಬುದ್ಧಿಯೇನೂ ತೋರದೇ ಚುರುಕಾಗಿಯೇ ಅಡ್ಡಾಡಿದೆವು. ಎಲ್ಲ ನಿರ್ಜನ. ಅಂದಿಗೆ ನಮ್ಮದೇ ಕೊನೆಯಭೇಟಿ ಅಂದುಕೊಂಡು ಬೇಗನೇ ವಾಪಾಸು ಹೊರಟೆವು. ಆದರೆ ನಂದಿಯತ್ತ ಬರುವಾಗ ಒಂದು ಯುವದಂಪತಿ ಎದುರು ಸಿಕ್ಕಿತು. ಆ ತರುಣ ನಮ್ಮನ್ನು ನೋಡಿದ್ದೇ ತನ್ನ ಕೈಯಲ್ಲಿದ್ದ ಕಾಡುಕೋಲೊಂದರಿಂದ ತುಂಡು ಮುರಿದು ಕೊಟ್ಟ. “ಹಿಡ್ಕೊಂಡು ಹೋಗಿ ಸಾರ್, ಕೆಳಗೆ ಗಡವ ಮಂಗ ಜೋರಿದೆ” ಎಂದು ಹೇಳಿದ.  ನಾನು ಇರಲೀಂತ ಹಿಡ್ಕೊಂಡು, “ಹೂಂ ನಮ್ಮನ್ನೂ ಹೆದರಿಸಿದ್ದ” ಅಂದೆ.

ಆತ “ಅಯ್ಯೋ ನನ್ನ ಕೈನಲ್ಲಿದ್ದ ಇಡೀ ಹಣ್ಣಿನ ಚೀಲಾನೇ ಕಸ್ಗೊಂಡು ಓಡಿಬಿಟ್ಟ!” ಆಗ ನನಗೆ ಕಪಿರಾಯನಿಗೆ ಲಿಂಗಬೇಧವೇನೂ ಇಲ್ಲ ಎನ್ನುವ ಅರಿವಿನೊಡನೆ ನನ್ನ ಕೈಯಲ್ಲೇ ಇದ್ದ ಬಾಳೇ ಹಣ್ಣೂ ನೆನಪಿಗೆ ಬಂತು. ಅದರಲ್ಲಿ ಎರಡನ್ನು ಆ ಯುವದಂಪತಿಗೆ ಕೊಟ್ಟು, ಉಳಿದವನ್ನು ನಾವು ಅಲ್ಲೇ ಮುಗಿಸಿ, ನಿರುಮ್ಮಳವಾಗಿ ಕೋಲು ಬೀಸಿಕೊಂಡು ಕೆಳಗಿಳಿದೆವು. ಶಿವಗಂಗೆ ಪೇಟೆಯ ಹೋಟೆಲ್ಲಿಗೆ ನುಗ್ಗಿ ಎರಡು ಚಾ ಹಾಕಿದೆವು. ಮತ್ತೆ ದಾರಿ ಬದಿಯಲ್ಲಿ ಸಿಕ್ಕ ಟಂಟಂ ಸರ್ವೀಸಿನಲ್ಲಿ ಆರಕ್ಕೆ ಎರಡಾಗಿ ಸೇರಿ ಡಾಬಸ್ ಪೇಟೆ. ಸಾವ್ಕಾರೀ ಬಸ್ಸೇರಿ ಬೆಂಗಳೂರು, ಶೀಟೀ ಬಸ್ಸೇರಿ (ಹೂಂ, ನಿರ್ವಾಹಕ ಶೀಟೀ ಹೊಡೀತಿದ್ದ!) ಅ(ಭಯ)ರ(ಶ್ಮಿಯರ)ಮನೆ ಸೇರಿಕೊಂಡೆವು.

6 comments:

 1. ದಂಪತಿ, ಎಸ್ಸಾರೆಸ್ ಮತ್ತು ಶಿವಗಂಗೆ ಶಿಖರ ಏರಿದ ಕಥನ ಚೆನ್ನಾಗಿದೆ... ನೀವಿಬ್ಬರೂ ಯುವ ಜೋಡಿಗಳಿಗೆ ಮಾದರಿ ಮತ್ತು ಸ್ಫೂರ್ತಿ ...

  ReplyDelete
 2. ಇನ್ನೂ ಸುಮಾರು ಬೆಟ್ಟಗಳಿವೆ. ಯಾವಾಗ ಬೆಂಗಳೂರಿಗೆ? ಬೆಟ್ಟಗಳು ಕರೆಯುತ್ತಿವೆ.
  ಮಾಲಾ

  ReplyDelete
 3. ಎಸ್ಸಾರೆಸ್...... ಹೌದು ಹಲವು ಹೆಸರುಗಳು ಹೀಗೆಯೇ ಕಿರಿದಾಗಿ ಮೂಲ ಹೆಸರೇ ಮಾಯವಾಗಿ ಬಿಟ್ಟಿರುತ್ತದೆ.

  ಗಿರೀಶ್, ಬಜಪೆ.

  ReplyDelete
 4. ಪ್ರಿಯ ಅಶೋಕವರ್ಧನ್
  ಬರಹ ಇಷ್ಟವಾಯಿತು. ಒಳ್ಳೆಯ ಸಂಗೀತ ಕೇಳಿದಾಗ ನಮ್ಮೊಳಗನ್ನೇ ನೋಡಿಕೊಳ್ಳುವಂತೆ ನಿಮ್ಮ ಬರಹ ಓದಿದಾಗಲೂ ಆಯಿತು. ರೇವಣಸಿದ್ದೇಶ್ವರ ಬೆಟ್ಟಕ್ಕೆ ನಮ್ಮ ಅಪ್ಪನ ಜೊತೆಯಲ್ಲಿ ಹೋಗಿದ್ದು 1966ರ ಸುಮಾರಿನಲ್ಲಿ. ಶಿವಗಂಗೆ ಮೊದಲು ಏರಿದ್ದು 80ರ ದಶಕದ ಕೊನೆಯಲ್ಲಿ. ಆಗ ಇನ್ನೂ ಒಳಕಲ್ಲು ತೀರ್ಥಕ್ಕೆ ಟಿಕೇಟು ಇತ್ಯಾದಿ ಇರಲಿಲ್ಲ. ಅಂದ ಹಾಗೆ ಮೇಲಿನ ಕುಂಭಿಯಲ್ಲಿ ನಂದಿಯನ್ನು ನೋಡಿ ಇಳಿಯುವಾಗ, ಶೇ. 25-30 ಭಾಗ ಕ್ರಮಿಸಿದ ಮೇಲೆ ಎಡಕ್ಕೆ ತಿರುಗಿ ನಾವು ಹತ್ತಿದ ದಾರಿಗಿಂತ ಬೇರೆಯದೇ ದಾರಿಯಲ್ಲಿ ಇಳಿದಿದ್ದೆವು. ಬೆಟ್ಟದ ತಪ್ಪಲಿನಲ್ಲಿ ಒಳ್ಳೆಯದೊಂದು ತೋಪು ಇತ್ತು. ಶಿವಲಿಂಗಕ್ಕೆ ತುಪ್ಪ ಸವರಿದರೆ ಬೆಣ್ಣೆಯಾಗುವುದನ್ನು ನೋಡಿದ್ದೆ. ಈಗ, ಆರೋಗ್ಯ ಸರಿ ಇಲ್ಲದಿರುವಾಗ ಇನ್ನುಮುಂದೆ ಬೆಟ್ಟಹತ್ತುವುದು ಅಸಾಧ್ಯವೇ ಸರಿ. ನಿಮ್ಮ ಬರಹ ಓದುತ್ತ ನನ್ನ ವಯಸ್ಸು ಅರ್ಧದಷ್ಟು ಕಡಮೆಯಾಯಿತು. ಥ್ಯಾಂಕ್ಸ್.

  ReplyDelete
 5. ಲಕ್ಷ್ಮೀನಾರಾಯಣ ಭಟ್ ಪಿ.23 April, 2015 12:01

  ಪ್ರೀತಿಯ ಅಶೋಕವರ್ಧನರಿಗೆ ನಮಸ್ಕಾರಗಳು. ಸುಮಾರು ಮೂವತ್ತು ವರ್ಷಗಳ ಹಿಂದೆ ಶಿವಗಂಗೆ ಬೆಟ್ಟಕ್ಕೆ ಹೋಗಿದ್ದೆ. ಈಗ ಮತ್ತೊಮ್ಮೆ ಹೋದಂತೆ ಆಯಿತು. ನಿಮ್ಮ ಬೆಟ್ಟ-ಚಾರಣಕ್ಕೆ ಜೈ.

  ReplyDelete
 6. ನಾನು ಅಮೇರಿಕದಲ್ಲಿ ವಾಟ್‌ಕಿನ್ಸ್ ಗ್ಲೆನ್ ಎಂಬ ಜಾಗಕ್ಕೆ ಹೋಗಿದ್ದೆಬಹಳ ಸುಂದರ ಜಾಗಬಾರೀ ಬಂಡೆಗಳು ದೊಡ್ಡ ಕೊರಕಲನ್ನು ಸ್ರುಸ್ಥಿ ಮಾಡಿದೆ. ಆಳದಲ್ಲಿ ಹರಿಯುತ್ತಿರುವ ಹೊಳೆ ಅಲ್ಲಲ್ಲಿ ಜಲಪಾತ ಹಾಗೂ ಸುಂದರ ಗುಹೆಗಳನ್ನು ಮಾಡಿಡೆಸಾವಿರಾರು ಜನ ಓಡಡುತಿದ್ದರು ಹುಡುಕಿದರೂ ಒಂದು ಕಸ ಪ್ಲಾಸ್ಟಿಕ್ ಕಾಣಲಿಲ್ಲ. ನಮ್ಮಲ್ಲಾಗಿದ್ದಾರೆ ಖಂಡಿತ ದೇವರನ್ನು ಇಟ್ಟು ಅರಸಿನ ಕುಂಕುಮ ಹಚ್ಚಿ ಎಣ್ಣೆ ಸುರಿದು ಊದುಕಡ್ಡಿಯ ಪ್ಲಾಸ್ಟಿಕ್ ,ಬೂದಿ ಹಾಕಿರುತ್ತಿದ್ದರು ಎಂಬ ಯೋಚನೆ ಬಂತು. ಅಲ್ಲಿ ನಿಸರ್ಗಕ್ಕೆ ಸ್ವಲ್ಪವೂ ಧಕ್ಕೆ ಬರದಂತೆ ಪರಿಸರ ಕಾಪಾಡಿದ್ದಾರೆ.

  ReplyDelete