10 April 2015

ಬೆಂಗಳೂರು ಇನ್ನು ಹತ್ತಿರ

(ಸೈಕಲ್ ಮಹಾಯಾನದ ಎರಡನೇ ಮತ್ತು ಅಂತಿಮ ಭಾಗ)

ಮಹಾಯಾನ ಹೊರಡುವ ಹಿಂದಿನ ದಿನ ನನ್ನ ಚರವಾಣಿ `ಇನ್ಫಿ ಸಂದೀಪ್’ ಎಂದು ರಿಂಗಣಿಸಿತ್ತು. ಸಂದೀಪ್ ಇನ್ಫೋಸಿಸ್ಸಿನ ಮಂಗಳೂರು ಶಾಖೆಯಲ್ಲಿದ್ದಾಗ ನನಗೆ ಪರಿಚಯಕ್ಕೆ ಸಿಕ್ಕಿದವರು. ಐಟಿ ಅಂದರೆ ಹಣ, `ಮಝಾ’ ಎಂಬೆಲ್ಲ ಭ್ರಾಂತರಿಂದ ಈ ವ್ಯಕ್ತಿ ಭಿನ್ನ. ನಮ್ಮೊಟ್ಟಿಗೆ ಚಾರಣಕ್ಕೆ ಬಂದರು, ಅವರದೇ ಮೆರಥಾನ್ ಓಟ ಬಿಡಲಿಲ್ಲ, ವನ್ಯಗಣತಿಯಲ್ಲಿ ತೊಡಗಿಕೊಂಡರು, ಸಮಯ ಸಿಕ್ಕಾಗ ಸ್ಪರ್ಧಾತ್ಮಕ ಟ್ರಯತ್ಲಾನಿನಲ್ಲಿ ದ್ವಿತೀಯರಾಗಿ ಹೊರಬಿದ್ದರು, ಕಪ್ಪೆ ಶಿಬಿರದ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ನಿಂತರು, ಮಂಗಳೂರು ಸೈಕಲ್ಲಿಗರ ಸಂಘ ಸಿಕ್ಕಾಗ ಅನುಭವೀ ನಾಯಕನಾಗಿಯೇ ಗುರುತಿಸಿಕೊಂಡರು, ಬಿಡು ಸಮಯದಲ್ಲಿ ವನ್ಯ ಸಂರಕ್ಷಣೆಗಾಗಿ ಗುಮಾಸ್ತಗಿರಿಗೂ ಸೈ ಎಂದರು. ಇವರು ಕಂಪೆನಿ ಬದಲಿಸಿ ಬೆಂಗಳೂರಿಸಿದರೂ ಒಲವಿನ ಸ್ನೇಹಾಚಾರಕ್ಕಾಗಿ ಮಂಗಳೂರು ಮರೆತಿರಲಿಲ್ಲ. ಹಾಗೆ ಮಹಾಯಾನದ ಸುದ್ದಿ ಸಿಕ್ಕ ಕೂಡಲೇ ಅನಿಲ್ ಶೇಟ್'ರನ್ನು ಸಂಪರ್ಕಿಸಿದ್ದರು. ಸಂದೀಪ್ ಐದು ದಿನದ ದುಡಿಮೆಯ ವಾರ ಅನುಭವಿಸುವವರಾದ್ದರಿಂದ, ಒಂಟಿಯಾಗಿಯೇ ಬೆಂಗಳೂರಿನಿಂದ ಸೈಕಲ್ಲೇರಿ ಬಂದು ಅರ್ಧ ದಾರಿಯಲ್ಲಿ ಸೇರಿಕೊಳ್ಳುವುದಾಗಿ ತಿಳಿಸಿದ್ದರು. ಕೊನೆಗಳಿಗೆಯ ಖಚಿತ ಮಾಹಿತಿಗಾಗಿ ನನ್ನನ್ನು ಸಂಪರ್ಕಿಸಿದ್ದರು. ನಾವು ಶಿರಾಡಿ ಹಿಡಿಯುವವರಲ್ಲ, ಸಕಲೇಶಪುರ ಅಥವಾ ಹಾಸನದಲ್ಲೂ ನಿಲ್ಲುವವರಲ್ಲ ಎಂದು ಗಟ್ಟಿ ಮಾಡಿಕೊಂಡರು. ಅನಂತರ ನಾವತ್ತ ಮಂಗಳೂರು ಬೆಳ್ತಂಗಡಿಗಳ ನಡುವೆ ಇದ್ದ ವೇಳೆಯಲ್ಲಿ, ಅಂದರೆ ಸುಮಾರು ಆರು ಗಂಟೆಗೆ ಇವರಿತ್ತ ಚನ್ನರಾಯಪಟ್ಟಣ ಚಲೋ ಅಂದಿದ್ದಾರೆ. ಅವರ ಸೈಕಲ್ ಚಕ್ರ ಬಲು ಸಪುರ ಮತ್ತು ನುಣ್ಣಗೆ. ಮಿಂಚಿನ ಹಾಗೆ (ಗಂಟೆಗೆ ಮೂವತ್ತು ಕಿಮೀ ಸರಾಸರಿಯಲ್ಲಿ) ಹನ್ನೊಂದು ಗಂಟೆಯ ಸುಮಾರಿಗೇ ಚನ್ನರಾಯಪಟ್ಟಣ ಸೇರಿದ್ದರು. ಅಂಗೈಬ್ರಹ್ಮಾಂಡ – ಚರವಾಣಿ, ಹಿಡಿದು ಅದೆಲ್ಲೋ ಕುಳಿತು, ಒಂದು ಗಂಟೆ ವಿಶ್ವಕಪ್ಪಿನಲ್ಲಿ ಮುಳುಗಿದರಂತೆ. ಭಾರತ ಸತತ ಆರನೇ ಜಯದೆಡೆಗೆ ಎಂದು ಖಚಿತ ಪಡಿಸಿಕೊಂಡರು. 

ಅನಂತರ ಆರಾಮವಾಗಿಯೇ ಊಟ ಮಾಡಿ, ಇಲ್ಲಿದ್ದು ಇನ್ನೇನು ಮಾಡ್ಲೀಂತಂದುಕೊಂಡು ಮತ್ತೆ ಸೈಕಲ್ಲೇರಿದ್ದರು. ಹಾಸನದೆಡೆಗೆ ಬರಬರುತ್ತ ಉದಯಪುರದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕಿನವರು ಮಿಕ್ಕಿ ಮೌಸ್ ವೇಶದೊಡನೆ ನಮ್ಮ ಗೌರವಾರ್ಥ “ಡಂಕು ಢಕ್ಕಾ” ಬಾರಿಸುವಾಗ, ಕಿಶನ್ ಕುಮಾರ್ ಸೈಕಲ್ ಅತ್ತ ನೂಕಿ ಉತ್ಸಾಹದಲ್ಲಿ ಎರಡು ಹೆಜ್ಜೆ ಹಾಕುವಾಗ, ಎದುರು ಬದಿಯಿಂದ ಸಂದೀಪ ಹಾಜರ್! ಅದುವರೆಗೆ ಹದಿನೆಂಟಿದ್ದ ತಂಡದ ಬಲ ಹತ್ತೊಂಬತ್ತಕ್ಕೇರಿತ್ತು.

ಔಪಚಾರಿಕ ಕಟ್ಟಳೆಗಳು ನಮ್ಮ ಸಮಾಜದಲ್ಲಿ ರೂಢಿಸಿಹೋಗಿ ಔಚಿತ್ಯದ ಗಡಿರೇಖೆ ಎಷ್ಟೋ ಬಾರಿ ಅಳಿಸಿಯೇ ಹೋಗಿರುತ್ತದೆ. ಮಹಾಯಾನ ಗಂಟೆಗೆ ೧೮-೨೦ಕಿಮೀ ವೇಗದಲ್ಲಿ ಸಾಗುತ್ತದೆ. ಒಂದೂವರೆ ದಿನದವಧಿಯಲ್ಲಿ ಅದು ಬೆಂಗಳೂರು ತಲಪಲೇ ಬೇಕು. ಇವೆಲ್ಲ ಆತಿಥ್ಯವಹಿಸಿಕೊಂಡ ಪೆಟ್ರೋಲ್ ಬಂಕುಗಳಿಗೆ ಮುಂದಾಗಿ ತಿಳಿಸಿಯಾಗಿತ್ತು. ಆದರೂ ಕೆಲವರು ವಿರಾಮದ, ಮತ್ತೆ ಅವರಿಗೂ ನಮಗೂ ಹೊರೆಯಾಗುವ ವಿವರಗಳಲ್ಲಿ, ಉಪಚಾರ ಹಮ್ಮಿಕೊಂಡಿದ್ದರು. ಬೆಳಗ್ಗೆ ಬೆಳ್ತಂಗಡಿಯಲ್ಲಿ ಶಾಲಾಮಕ್ಕಳನ್ನು ಕಂಡಾಗಲೇ ನಮಗೆ “ಅಯ್ಯೋ” ಅನ್ನಿಸಿತ್ತು. ಉದಯಪುರದವರು ಪೆಟ್ರೋಲ್ ಬಂಕಿಗೂ ಅರ್ಧ ಕಿಮೀ ಮೊದಲೇ ನಮ್ಮನ್ನು ಹೊಂಚಿದ್ದರು! ಮತ್ತಲ್ಲಿಂದ ಢಂಕುಟಕ್ಕದೊಡನೆ, ಊರ ಹಲವು ಮಂದಿಯೊಡನೆ ನಾವು ನಿಧಾನಕ್ಕೆ ಸೈಕಲ್ ಚಲಾಯಿಸುತ್ತ ಪೆಟ್ರೋಲ್ ಬಂಕಿನ ಶಾಮಿಯಾನದವೆರೆಗೆ ಮೆರವಣಿಗೆ ನಡೆಸಬೇಕೆಂದು ಅವರ ಅಂದಾಜು. ಹೌದೇನೋ ಎಂದು ಒಮ್ಮೆ ನಮ್ಮ ಓಟ ತಡವರಿಸಿತು. ಮತ್ತೆ ಸರಿ ಹೋಗದೆ ಸೀದಾ ಬಂಕಿಗೆ ಹೋಗಿದ್ದೆವು. ತಮ್ಮಿಂದ ಅಪರಾಧವಾಯ್ತೇನೋ ಎಂಬಂತೆ ಮೆರವಣಿಗೆ ಓಡಿ ಬಂತು. ಬಂಕಿನ ಯಜಮಾನರು ಢಂಕುಟಕ್ಕದೊಡನೆ ನಾವು ಸ್ವಲ್ಪ ನಲಿದು ಮನಸ್ಸು ಹಗುರ ಮಾಡಿಕೊಳ್ಳಬೇಕೆಂದೂ ವಿನಂತಿಸಿಕೊಂಡರು. ಅವರ ಕಾಳಜಿಗೆ ತುಸುವಾದರೂ ಸ್ಪಂದಿಸುವ ಉತ್ಸಾಹದಲ್ಲಿ ಕಿಶನ್ ಕುಮಾರ್ ನಾಲ್ಕು ಹೆಜ್ಜೆ ಕುಣಿದೂ ಕುಣಿದರೇ. ವಾಸ್ತವದಲ್ಲಿ ಇದು ಸಾಧುವೇ?


ಹೆದ್ದಾರಿಗಳಲ್ಲಿ ನಡೆಯುವ ಕಾರು, ಬೈಕು ಮಹಾಯಾನಗಳಲ್ಲಿ ದೇಹಕ್ಕಿಂತ  ಮನಸ್ಸಿನ ಬಳಲಿಕೆ ಹೆಚ್ಚೇ ಇರುತ್ತದೆ. ಅಲ್ಲಿ ವಿಶ್ರಾಂತಿ ಘಟ್ಟಗಳಲ್ಲಿ ಮೋಜು, ಕುಣಿತ ಸರಿಬರಬಹುದೋ ಏನೋ. ಇಲ್ಲಿನ ಪರಿಸ್ಥಿತಿ ತಲೆಕೆಳಗು. ನಿರಂತರ ಪೆಡಲೊತ್ತಿ ಕಾಲಿನ ಬೆರಳ ತುದಿಯಿಂದ ಸೊಂಟದವರೆಗೆ ಮಾಂಸಖಂಡಗಳ ಸೆಟೆತ (ಮಸಲ್ ಕ್ಯಾಚ್) ಎಲ್ಲೂ ಕಾಡುವ ಸ್ಥಿತಿ ಇರುತ್ತದೆ. ಹಿಂದೆಲ್ಲೋ ಜಯಪ್ರಸಾದ್ ಬಸ್ಸೊಂದರ ಅರಬ್ಬಾಯಿಗೆ ಬೆದರಿ ಫಕ್ಕನೆ ದಾರಿ ಬಿಟ್ಟಿಳಿದಿದ್ದರಂತೆ. ಆಗ ಮೊಣಕಾಲು ತಿರುಚಿದ ಅನುಭವವಾಗಿ ಹೆದರಿ ಹೋಗಿದ್ದರಂತೆ. ಅದೃಷ್ಟವಶಾತ್ ಹಾಗೆ ತೀವ್ರವಾದ್ದೇನು ಆಗದಿದ್ದರೂ ಸುಧಾರಿಸಿಕೊಳ್ಳಲು ಐದು ಮಿನಿಟೇ ವಿಶ್ರಮಿಸಬೇಕಾಯ್ತು. ಮಧ್ಯಾಹ್ನ ಹಾಸನ ಪೇಟೆಯಲ್ಲಿ ಸಿಗ್ನಲ್ಲಿಗೆಂದು ನಾನು ತುದಿಗಾಲಲ್ಲಿ ನಿಂತೆ. ಒಮ್ಮೆಲೆ ನನ್ನ ಕಣಕಾಲು ನಡುಕ ಶುರುವಾಗಿತ್ತು. ನಾನು ಸೈಕಲ್ಲಿಳಿದು ಸುಧಾರಿಸಿಕೊಳ್ಳಲು  ಎರಡು ಮಿನಿಟು ತೆಗೆದುಕೊಂಡಿದ್ದೆ. ಇನ್ನು ಸವಾರಿ ಹೋಗುತ್ತಿದ್ದಂತೆ ಕೈಯಲ್ಲಿ ಗಾಳಿಗುದ್ದುವವರು, ಕತ್ತು ತಿರುಟುವವರು, ಸೈಕಲ್ ಇಳಿದಲ್ಲೆಲ್ಲ ಭಸ್ಕಿಯೋ ಸೊಂಟ ತಿರುಚೋ ಕಸರತ್ತೋ ಮಾಡುವವರು ಎಲ್ಲ ದೈಹಿಕ ಏಕತಾನತೆಯ ಬಳಲಿಕೆಗೆ ಬದಲಿ ಹುಡುಕುತ್ತಲೇ ಇರುತ್ತಾರೆ. ಮುಂಬಾಗಿ ಸೊಂಟ ನೋಯುವುದು, ಹ್ಯಾಂಡಲ್ಲಿನ ಮೇಲೆ ಭಾರ ಹಾಕಿ ಅಂಗೈಗಳು ಜೋಮುಗಟ್ಟುವುದು, ಭುಜದಲ್ಲಿ ಛಳಕು ಮೂಡುವುದು, ಕತ್ತು ಹಿಡಿದುಕೊಳ್ಳುವುದು, ಅಂಗುಳ ಒಣಗುವುದು, ಕಣ್ಣಿಗೆ ಬೆವರಿಳಿದು ಉರಿಯುವುದು ಇತ್ಯಾದಿ ಪಟ್ಟಿ ಮಾಡಿದಷ್ಟೂ ಮುಗಿಯದ್ದಿತ್ತು. ಇವೆಲ್ಲಕ್ಕೂ ಸೂಕ್ಷ್ಮದ್ದು, ಸಾರ್ವಜನಿಕದಲ್ಲಿ ಹೇಳಿಕೊಳ್ಳಲು ಮುಜುಗರವಾಗುವಂಥದ್ದು - ಅಂಡು. ಸೈಕಲ್ ವಿಜ್ಞಾನಿಗಳು ಪೆಡಲೊತ್ತುವುದಕ್ಕೆ ಸಪುರ ಮತ್ತು ಗಟ್ಟಿ ಆಸನಗಳನ್ನು ಉತ್ತಮವೆಂದೇ ರೂಪಿಸಿದ್ದಾರೆ. ಸೀಟಿನ ಎತ್ತರವಾದರೋ ನಿಂತ ಸವಾರನ ಸೊಂಟದ ಮೂಳೆಗೆ ಸಮನಾಗಿರಬೇಕು. ತಪ್ಪು ಕಲ್ಪನೆಯಲ್ಲಿ ಸೀಟು ತಗ್ಗಾದರೆ ಶ್ರಮ ವ್ಯರ್ಥ, ಪೂರ್ಣ ಕಾಲಿನ ಬಲದ ಬದಲು ಮೊಣಕಾಲು ಬಲವೂಡಿ, ಅದರ ನೋವು ಸಿದ್ಧಿಸುವುದು ಖಾತ್ರಿ. ಸೀಟು ಹೆಚ್ಚು ಮೇಲಾದರಂತೂ ನಡುಪಾದದ ಒತ್ತಡದ ಬದಲು ತುದಿಗಾಲು ಬಳಸಿ ಕಣಕಾಲು ನೋವು ಖಂದಿತ. ಈ ಎಲ್ಲ ಸಂಶೋಧನೆ ಮತ್ತು ಪರಿಹಾರಗಳ ಕೊನೆಯಲ್ಲಿ ಬಳಲುವುದು ಅಂಡು; ಸಿಗಿದು ಹೋದಷ್ಟು ಉರಿ, ಜೋಮುಗಟ್ಟುವ ಭಯ. (ಕ್ರೀಡಾ ಸೈಕಲ್ಲಿಗರು ಇದಕ್ಕಾಗಿ ವಿಶೇಷ ಪ್ಯಾಡಿಂಗಿರುವ ಚಡ್ಡಿಯನ್ನೇ ಧರಿಸುತ್ತಾರಂತೆ. ನಮ್ಮ ತಂಡದಲ್ಲೂ ತುಂಬಾ ಜನ ಅದನ್ನು ಬಳಸುವವರಿದ್ದರು.) ಇಳಿಜಾರುಗಳಲ್ಲಿ ಪೆಡಲೊತ್ತುವುದರಿಂದ ಸ್ವಲ್ಪ ಬಿಡುವು ಸಿಕ್ಕರೂ ಸೀಟಿನ ಮೇಲೇ ಅಡ್ಡಕ್ಕೆ ಜಾರಿ ತೊಡೆ ಸವಾರಿ ನಡೆಸುವವರು, ಪೆಡಲುಗಳ ಮೇಲೆ ನಿಟಾರನೆ ನಿಂತು `ಸ್ಟೈಲು’ ಹೊಡೆಯುವವರು, ಭಾರೀ ವೇಗ ಹೆಚ್ಚಿಸುವವರಂತೆ ಇಡಿಯ ದೇಹಭಾರವನ್ನೇ ಪೆಡಲುಗಳ ಮೇಲೆ ಹೇರಿ ಅತ್ತಿತ್ತ ಓಲಾಡುವವರೆಲ್ಲ ಬಹುತೇಕ ಅಂಡನ್ನು ಸಮಾಧಾನಿಸುತ್ತಿರುತ್ತಾರೆ! ನಾನಂತೂ ಬೆಂಗಳೂರು ತಲಪಿದ ಮೇಲೆ ಮನವಿಪತ್ರದಲ್ಲಿ ಮಾಮೂಲೀ ಶೈಲಿ – `ಫ್ರಂ ದ ಬಾಟಮ್ ಆಫ್ ಮೈ ಹಾರ್ಟ್’ (ಹೃದಯಾಂತರಾಳದಿಂದ) ಎನ್ನುವುದನ್ನು ಸೈಕಲ್ ಸವಾರಿಗೆ ಹೆಚ್ಚು ನಿಷ್ಠವಾಗಿ `ಫ್ರಂ ದ ಬಾಟಮ್ ಆಫ್ ಮೈ ಬಟ್ಸ್’ (ತಳಸ್ಪರ್ಷೀ ?) ಎಂದೇ ತಿದ್ದಬೇಕೆಂದು ಯೋಚಿಸಿದ್ದೆ!   

ಹೆದ್ದಾರಿಯಲ್ಲಿ ನಾವು ಕಾಣುವ ಚನ್ನರಾಯಪಟ್ಟಣ ನಿಜದಲ್ಲಿ ಬರಿಯ ಕೈಕಂಬದ ಸುತ್ತ ಬೆಳೆದ ಪೇಟೆ. ಬಲದಾರಿಯಲ್ಲಿ (ದಕ್ಷಿಣ) ಸುಮಾರು ಮೂರು ಕಿಮೀ ಸಾಗಿದಾಗ ಸಿಗುವ ನಿಜ ಚನ್ನರಾಯಪಟ್ಟಣದ ಹೋಟೆಲೊಂದರಲ್ಲಿ ನಮಗೆ ವ್ಯವಸ್ಥೆಯಾಗಿತ್ತು. ೧೭೮ ಕಿಮೀ ಉದ್ದದ ಸೈಕಲ್ ತುಳಿತಕ್ಕೊಂದು ರಾತ್ರಿಯ ವಿಶ್ರಾಂತಿ ದಕ್ಕಿತ್ತು. ಅಲ್ಲಿ ಕಿಶನ್ ಕುಮಾರ್ (ನೆನಪಿರಲಿ, ಇವರು ಅನೇಕ ಪ್ರಶಸ್ತಿ ವಿಜೇತ, ಖ್ಯಾತ ದೇಹದಾರ್ಢ್ಯಪಟು) ಆಸಕ್ತರಿಗೆ ಕೆಲವು ವ್ಯಾಯಾಮಗಳನ್ನು ಹೇಳಿಕೊಟ್ಟರು. ಇವು ಸೈಕಲ್ ಸವಾರಿಯ ಏಕರೂಪೀ ಕಸರತ್ತಿನಿಂದುಂಟಾಗುವ ಬಳಲಿಕೆಯನ್ನು ದೂರ ಮಾಡುತ್ತದಂತೆ. (ನಾನು ಕಸರತ್ತು ರಹಿತ ವಿಶ್ರಾಂತಿ ನೆಚ್ಚುವವನು, ಭಾಗವಹಿಸಲಿಲ್ಲ) ರಾತ್ರಿಯಲ್ಲಿ ಸೈಕಲ್ ಮೇಲೆ ಕಳ್ಳಕಣ್ಣು ಬೀಳದಂತೆ ವ್ಯವಸ್ಥೆ ಮಾಡಿದ್ದೂ ಆಯ್ತು. ಮತ್ತೆ ಎಲ್ಲರೂ ಸ್ನಾನ, ಊಟವನ್ನು ಕ್ಷಣಾರ್ಧದಲ್ಲಿ ಎನ್ನುವಂತೆ ಮುಗಿಸಿ ಹಾಸಿಗೆಗೆ ಮೈಯೊಪ್ಪಿಸಿದ್ದಷ್ಟೇ ಗೊತ್ತು.


ನನ್ನ ಮತ್ತು ಸಂದೀಪರ ಚರವಾಣಿಗಳ ಜಂಟಿ ಮೊಳಗಲ್ಲದಿದ್ದರೆ ಮತ್ತೆ ಅಪರಾತ್ರಿ ಮೂರು ಗಂಟೆಗೆ ನಾವಂತೂ ಏಳುತ್ತಿರಲಿಲ್ಲ. ಬೆಡ್ಟೀ, ತಿಂಡಿ, ನಾಲ್ಕು ಹೆಜ್ಜೆ ವ್ಯಾಯಾಮ ಯಾವುದಕ್ಕೂ ಅಲ್ಲಿ ಸಮಯವೇ ಇರಲಿಲ್ಲ. ಅವಶ್ಯ ಪ್ರಾತರ್ವಿಧಿಗಳನ್ನಷ್ಟೇ ಕಾಲದ ಒತ್ತಡಕ್ಕೆ ಒಪ್ಪಿಸಿ, ನಾಲ್ಕು ಗಂಟೆಗೆ ಸರಿಯಾಗಿ ಮಹಾಯಾನದ ಎರಡನೇ ಅಥವಾ ಅಂತಿಮ ದಿನದ ಸವಾರಿಗಿಳಿದಿದ್ದೆವು. ೧೯ ಸೈಕಲ್, ಒಂದು ಕಾರು, ಒಂದು ಲಾರಿ ಚೆನ್ನರಾಯಪಟ್ಟಣದ ಪೇಟೆರಸ್ತೆಗಳನ್ನು ಕಳೆದು ಮತ್ತೆ ಬೆಂಗಳೂರು ರಸ್ತೆಯನ್ನು ಅಳೆಯುತ್ತಿದ್ದವು.

ಹಿಂದಿನ ದಿನ ಹಾಸನದ ಪೆಟ್ರೋಲ್ ಬಂಕಿನಲ್ಲಿ, ಯಾರೋ ಹಿತೈಷಿಗಳು, ಸ್ವತಃ ಎಂದೂ ದೀರ್ಘ ಸೈಕಲ್ ಬಿಟ್ಟೋ ನಡೆದೋ ಅನುಭವವಿಲ್ಲದಿದ್ದರೂ ನಮಗೆ ಧೈರ್ಯದ ನುಡಿ ಕೊಟ್ಟಿದ್ದರು “ಬಿಡಿ ಸಾರ್, ಚೆನ್ರಾಯಪಟ್ನಾ ಬಿಟ್ಮೇಲೆ ಫುಲ್ಲು ಡೌನೇ.” ಕೆಲವು ದೂರ ನಮಗೆ ಅದು ನಿಜವೇ ಅನ್ನಿಸುವಂತೇ ಓಡಿದೆವು. ನಂನಮ್ಮ ದೀಪದ ಕೋಲಿನ ವ್ಯಾಪ್ತಿ, ರಾತ್ರಿಯ ತಂಪು, ಅಷ್ಟು ದೂರ ಬಂದಾಗಿದೆ ಎಂಬ ವಿಶ್ವಾಸ, ಇನ್ನೇನು ಬೆಂಗಳೂರು ಬಂತೆನ್ನುವ ಭಾವಲಹರಿಯಲ್ಲಿ ವಾಸ್ತವದ ನೂರೈವತ್ತು ಕಿಮೀ ಅಂತರವನ್ನು ಮರೆತೇ ಸಾಗಿದ್ದೆವು. ಹೆದ್ದಾರಿಯ ಖಾಯಂ ನಿಶಾಚರಿಗಳು (ರಾತ್ರಿ ಬಸ್ಸುಗಳನ್ನುಳಿದು) ಹೆಚ್ಚಾಗಿ ಸಂಚಾರವನ್ನು ನಿವಾರಿಸುವ ಸಮಯವೂ ಅದಾಗಿದ್ದುದರಿಂದಲೋ ಏನೋ ವಾಹನ ಸಂಚಾರ ಬಹಳ ವಿರಳವಾಗಿಯೇ ಇತ್ತು. ಇದರಿಂದ ನಾನಂತೂ ದಾರಿ ಬದಿಯಲ್ಲಿ ಹಿಂದೆ ಸರಿಯುತ್ತಿದ್ದ ಕಿಲೋ ಕಲ್ಲುಗಳನ್ನು, ನನ್ನ ಹಿಂದು ಮುಂದಿನ ಸಹಯಾನಿಗಳನ್ನು ಗುರುತಿಸುವ ಯೋಚನೆಯನ್ನು ಬಿಟ್ಟು ಮುಕ್ತನಾಗಿ ನುಗ್ಗಿದ್ದೆ. ಒಂದೆಡೆ ಹೆದ್ದಾರಿಯನ್ನು ಭಾರೀ ಎತ್ತರಿಸುವ ಕೆಲಸ ನಡೆಯುತ್ತಿದ್ದಲ್ಲಿ ಬದಲಿ ದಾರಿ ಸೂಚಿಸಿದ್ದು ಅಸ್ಪಷ್ಟವಿತ್ತು. ಆಗ ನನಗೆ ಭರವಸೆ ಕೊಟ್ಟದ್ದು, ಎದುರು ಬಹುದೂರದಲ್ಲಿ ಸಾಗುತ್ತಿದ್ದ ನಮ್ಮಲ್ಲೇ ಒಬ್ಬರ ಹಿಂದಿನ ಕೆಂಪು ಮಿನುಗು. ಸುಮಾರು ಒಂದು ಗಂಟೆ ಕಳೆದಲ್ಲಿ ಮಾರ್ಗದಾಚೆಯ ಯಾವುದೋ ಹಳ್ಳಿಯಲ್ಲಿ ಭರ್ಜರಿ ನಾಟಕ ನಡೆದಂತಿತ್ತು. ನೀರವ ಕತ್ತಲನ್ನು ನಿಷ್ಕರುಣೆಯಿಂದ ಮೈಕಾಸುರ ಸೀಳುತ್ತಿದ್ದ. ಬಹುಶಃ ಅದಕ್ಕೆ ಸಂವಾದಿಯಾಗಿ ಹೆದ್ದಾರಿ ಪಕ್ಕದ ಗೂಡು ಹೋಟೆಲ್  ಚುರುಕಾಗಿತ್ತು. ನಾವೂ ಅಲ್ಲಿ ಚಾ, ಬನ್ನು ಸೇವೆ ನಡೆಸಿ ನೂಕುಬಲ ಉಜ್ವಲಗೊಳಿಸಿ ಮಹಾಯಾನ ಮುಂದುವರಿಸಿದೆವು.

ಹಿಂದಿನ ದಿನದ ಕೊನೆಯಲ್ಲಿ ಬಹುಶಃ ತಂಡದ ಎಲ್ಲರಿಗೂ ತಂತಮ್ಮ ಶಕ್ತಿ, ಕೊರತೆಗಳ ಅರಿವು ಸ್ಪಷ್ಟವಾಗಿರಬೇಕು. ದಾರಿ ಸಮತಳದ್ದಿರಲಿ, ಏರಿರಲಿ ಪೆಡಲಿನ ಆವರ್ತನೆ (ಮಿನಿಟಿಗೆ ಇಷ್ಟು ಸುತ್ತು) ಒಂದೇ ಆಗಿರಬೇಕು ಎನ್ನುವುದನ್ನು ಗೇರ್ ಸೈಕಲ್ ಏರಿದವರೆಲ್ಲ ತಿಳಿದೇ ಇರುತ್ತಾರೆ. ಬಹುಶಃ ಆ ಸಂಖ್ಯೆಯ ಲೆಕ್ಕ ಹಿಡಿದದ್ದೇ ಆದರೆ ನಾನು ತಂಡದಲ್ಲಿ ೧೯ನೆಯವನಾಗುತ್ತಿದ್ದಿರಬೇಕು. ಆದರೆ ನಿಂತಲ್ಲಿಂದ ಹೊರಡುವಲ್ಲಿ, ರಸ್ತೆ ಬದಿಯ ಆಮಿಷಗಳನ್ನು ಹತ್ತಿಕ್ಕುವಲ್ಲಿ ನಾನು ಸ್ವಲ್ಪ ಹಠವಾದಿಯೇ ಆದ್ದರಿಂದ ಎಲ್ಲೂ ಕೊನೆಯವನಾಗಿ ಕಾಣಿಸಲಿಲ್ಲ. ನೀರು ಕುಡಿಯಲೆಂದೋ ಚಾಕ್ಲೇಟ್ ಬಿಡಿಸಲೆಂದೋ ನಿಂತವರನ್ನು ನಾನು ವಿಚಾರಿಸಿಕೊಳ್ಳುತ್ತಿದ್ದರೂ ನಿಲ್ಲುತ್ತಿರಲಿಲ್ಲ. ಗುಂಪಿನಲ್ಲೇ ಹೋಗಬೇಕೆಂಬ ತಾಕೀತು ಹೇಗೂ  ಇರಲಿಲ್ಲ. ಹಾಗಾಗಿ ಆತಿಥ್ಯ ಒಡ್ಡುವ ಕೇಂದ್ರಗಳಲ್ಲೂ ನನ್ನ ಆವಶ್ಯಕತೆಗಳನ್ನು ಚುರುಕಾಗಿ ಮುಗಿಸಿಕೊಂಡು, ಅವರಿವರಿಗೆ ತಿಳಿಸಿ, ಎಲ್ಲರಿಗೂ ಮೊದಲು ಹೊರಟುಬಿಡುತ್ತಿದ್ದೆ. ಮತ್ತೆ ಯಾವ್ಯಾವಾಗಲೋ ಅವರೂ ಇವರೂ ಹಿಂದಿಕ್ಕುವುದು, ಪುನಃ ನಿಲ್ಲುವುದು ನಡೆದಾಗೆಲ್ಲಾ ನನ್ನ ಪೆಡಲ್ ಆವರ್ತನೆ ಬಹುತೇಕ ಏಕರೂಪಿನಲ್ಲೇ ಸಾಗಿತ್ತು. ಆಮೆ ಮೊಲದ ಓಟದ ಸ್ಪರ್ಧೆಯ ಕತೆಗೆ ನಾನು ಜೀವಂತ ನಿದರ್ಶನ!

ಆದಿತ್ಯನ ಕಾಲಪಟ್ಟಿಯಲ್ಲಿ ಆದಿತ್ಯವಾರಕ್ಕೂ ಕೆಂಪು ಶಾಯಿ ಇಲ್ಲ. ನಿರಭ್ರ ಕತ್ತಲು ಕಳೆದು ದಿಗಂತಲ್ಲಿ ಬೆಳಕ ಒಸರು ಕಾಣುವಾಗ ತುಸು ಮಂಜು ಮುಸುಕಿದ ಅನುಭವವಾಯ್ತು. ಒಂದೊಂದೇ ಕಾಣಿಸತೊಡಗಿದ ಬೈಕ್ ಸ್ಕೂಟರಿನ ಸವಾರರುಗಳೆಲ್ಲ ಜರ್ಕಿನ್, ಸ್ವೆಟ್ಟರ್ರು, ಮಫ್ಲರ್ರುಗಳಲ್ಲಿ ಹುದುಗಿಕೊಂಡಿರುವುದು ಕಾಣುವಾಗ ಬೆವರೊರೆಸಿಕೊಳ್ಳುವ ನಮಗೆ ಮೋಜಾಗುತ್ತಿತ್ತು. ದಿನದೊಡನೆ ಮಾಡಿದ ಒಪ್ಪಂದಕ್ಕೆ ಕಿಂಚಿತ್ತೂ ತಪ್ಪದಂತೆ ಸೂರ್ಯ ಬಂದ. ಅರುಣರಾಗವನ್ನು ಬಲುಬೇಗನೆ ಮೋಡಗಳ ಕರವಸ್ತ್ರದಲ್ಲಿ ಕಳೆದೊಗೆಯುವುದರಲ್ಲಿದ್ದ. ಅದರ ವೈಭವವನ್ನು ನೋಡುತ್ತೇವೆಂದುಕೊಳ್ಳುವಲ್ಲಿ, ಬೆಳ್ಳೂರುಕ್ರಾಸಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಂದಿತ್ತು. ಅಲ್ಲಿ ನಮ್ಮನ್ನು ಬಿಸಿಬಿಸಿ ಉಪಾಹಾರ ಕಾದಿತ್ತು. ಅದುವರೆಗೆ ಸುಮಾರು ನಲ್ವತ್ತೈದು ಕಿಮೀ ಅಂತರವನ್ನು ಎರಡೂಕಾಲು ಗಂಟೆಯಲ್ಲಿ ಕಳೆದಿದ್ದೆವು. ಅದು ಸಾಮಾನ್ಯವೇನೂ ಅಲ್ಲ. ಮತ್ತೆ ಹಾಗೇ ಮುಂದುವರಿದಲ್ಲಿ, "ಮಧ್ಯಾಹ್ನ ಊಟಕ್ಕೆ ಬೆಂಗಳೂರು" ಎಂಬ ಸರಳ ಘೋಷಣೆಯಂತೂ ಎಲ್ಲರ ಉಮೇದನ್ನು ಹೆಚ್ಚಿಸಿತ್ತು. ನಾನು ಅವಕ್ಕೆಲ್ಲ ತಲೆ ಕೊಡದೆ, ಚುರುಕಾಗಿ ಲಘು ಉಪಾಹಾರ ಹೊಟ್ಟೆಗೆ ಹಾಕಿ, ನನ್ನ ವೇಗದ ಪೂರ್ಣ ಅರಿವಿನೊಡನೆ, ಮೊದಲಿಗನಾಗಿಯೇ ಮತ್ತೆ ದಾರಿಗಿಳಿದಿದ್ದೆ!

ಬಯಲು ಸೀಮೆ, ಹಾಸನದ ಹಿತೈಷಿಯ ಹೇಳಿಕೆ, ತಗ್ಗು ತುಂಬಿಕೊಟ್ಟು, ಪುಟ್ಟ ಮೋರಿಗೂ ಎತ್ತರದ ಸೇತುಯಿಟ್ಟು ಮಾಡಿದ ಹೆದ್ದಾರಿ ಎಂದೆಲ್ಲ ಏನೇ ಆದರೂ ಒಂದು ಮಿತಿಯ ಏರು ಬಿಟ್ಟಿರಲಿಲ್ಲ. ಎಲ್ಲೋ ತುಸು ಇಳಿಜಾರಿನ ಅನುಭವ ಬಂತೆಂದು, ಪೆಡಲೇರಿ ನಿಂತು ತಳತಂಪು ಮಾಡಿಕೊಳ್ಳುತ್ತ ಉಸ್ಸೆನ್ನುವುದರೊಳಗೆ ಸೈಕಲ್ ನಿಧಾನವಾಗುತ್ತಿತ್ತು. ಪೆಡಲ್ ತುಳಿಯುತ್ತಿದ್ದಂತೆ ಭಾರ ಹೆಚ್ಚುತ್ತಿತ್ತು – ದಾರಿ ನಿಧಾನಕ್ಕೆ ಏರುವುದು ಅನುಭವಕ್ಕೆ ಬರುತ್ತಿತ್ತು. ಸಹಜವಾಗಿ ಬಲ ಹೆಬ್ಬೆರಳು ಹಿಂದಿನ ಗೇರನ್ನು ಏಳರಿಂದ ಆರು, ಐದಕ್ಕೆ ಇಳಿಸುತ್ತಿತ್ತು. ಮತ್ತೂ ಎನ್ನುವಾಗ ಎಡ ತೋರುಬೆರಳು ಮುಂದಿನ ಗೇರನ್ನು ಮೂರರಿಂದ ಎರಡಕ್ಕಿಳಿಸುತ್ತಿತ್ತು. (ನನ್ನ ಸೈಕಲ್ಲಿಗೆ ಹಿಂದೆ ಏಳು, ಮುಂದೆ ಮೂರು ಗೇರು. ಸಂಖ್ಯೆ ಇಳಿದಷ್ಟೂ ವೇಗ ಕಡಿಮೆಯಾದರೂ ತುಳಿಯುವ ಶಕ್ತಿ ಕಡಿಮೆ ಕಡಿಮೆ ಸಾಕಾಗುತ್ತದೆ.) ಆದರೆ ಈ ದಾರಿಯದು ಒಂದೇ ಗುಣ – ಗೇರುಗಳು ಎಲ್ಲೂ ಹಿಂದೆ ಮೂರು, ಮುಂದೆ ಎರಡರಿಂದ ಕಡಿಮೆ ಇಳಿಸಬೇಕಾಗಲೇ ಇಲ್ಲ. ಏರು ತೀವ್ರವಲ್ಲ, ಇಳಿಜಾರು ಅಪಾಯಕಾರಿಯೂ ಅಲ್ಲ. 

ಆದಿಚುಂಚನಗಿರಿ, ಎಡಿಯೂರುಗಳನ್ನೆಲ್ಲ ಹಿಂದಿಕ್ಕುತ್ತಾ ಸಾಗಿದಂತೆ ನಮಗೆ ಏರುದಾರಿ ಹೆಚ್ಚು ಸಿಕ್ಕಿತೋ ಬಿಸಿಲ ಹೊಡೆತ ಏರಿದ್ದೋ ಎರಡು ದಿನದ ಬಳಲಿಕೆ ಕಾಡಿದ್ದೋ ತಿಳಿಯಲಿಲ್ಲ - ಮಹಾಯಾನದ ಒಟ್ಟಾರೆ ಗತಿ ನಿಧಾನವಾಗಿತ್ತು. ಸೈಕಲ್ ಸಂಘದ ಸದಸ್ಯರು ಒಮ್ಮೊಮ್ಮೆ ನಾಲ್ಕೈದು ಮಂದಿ ಚಿತ್ರವತ್ತಾಗಿ, ಬೆಳಗುಬೈಗುಗಳಲ್ಲಿ ಆಗಸದೆತ್ತರದಲ್ಲಿ ಸಾಗುವ ಬೆಳ್ಳಕ್ಕಿ ಹಿಂಡಿನಂತೆ ಸಾಲು ಹಿಡಿದು, ಬಹು ವೇಗದಲ್ಲೇ ಮುಂದೆ ಹೋಗುವುದಿತ್ತು. ಬಿಡಿಬಿಡಿಯಾಗಿ  ಪ್ರಸನ್ನ, ಕಿಶನ್, ಅಂಚಲ್, ರಾಯ್ಕರ್, ಮಹೇಶ್ವರಿ ಎಂದಿತ್ಯಾದಿ ನನ್ನನ್ನು ಹಿಂದಿಕ್ಕುವುದಿತ್ತು. ಪ್ರಾಯದ ಹಿರಿತನದಲ್ಲಿ ನನ್ನಿಂದ ಆರೇ ವರ್ಷ ಹಿಂದಿದ್ದ ಜಗನ್ನಾಥ ರೈಗಳು (೫೭ವರ್ಷ) ಬಿಟ್ಟ ಬಾಣದಂತೆ ಹೋಗಬಲ್ಲರು. ಆದರೆ ಸ್ವಭಾವತಃ ಎಲ್ಲರಿಗಿಂತ ಕಿರಿಯ ಎಂಬಷ್ಟು ವಿನಯಿ, ಹಾಗಾಗಿ ನಿಧಾನಿ. ಅವರೂ ದಾಟಿದರು ಇನ್ನೇನು ನಾನು ಕೊನೆಯ-ಬಂಡಿ ಎಂದು ಯೋಚಿಸುವುದರೊಳಗೆ ನಮ್ಮವರೇ ಯಾರೋ ದಾರಿ ಬದಿಯ ಅಪರೂಪದ ತುಂಡು ನೆರಳಿನಲ್ಲಿ ನೀರುಕುಡಿಯುತ್ತ ನಿಂತದ್ದು, ಮುಂದೆಲ್ಲೋ ಒಂದು ಸೈಕಲ್ ಬೊಂಡದವನ ಬಳಿ ಚೌಕಾಸಿ ನಡೆಸುವುದೂ ಕಾಣುತ್ತಿತ್ತು. ಮಹೇಶ್ ಅಲ್ಲಲ್ಲಿ ಕಾರು ನಿಲ್ಲಿಸಿ ನಮ್ಮವರಿಗೆ ನೀರೂಡುತ್ತಿದ್ದುದೂ ಇತ್ತು. ನಾನಿಂಥವನ್ನೆಲ್ಲ ನಿರಾಕರಿಸಿ ಸಾಗಿದ್ದೆ. ಪರ್ವತಾರೋಹಿಯಾಗಿ ಬೆಟ್ಟ ಹತ್ತುವಾಗ ದೀರ್ಘ ಶ್ವಾಸೋಚ್ಛ್ವಾಸಕ್ಕೆ ಹೆಜ್ಜೆಯನ್ನು ಹೊಂದಿಸುತ್ತೇನೆ. ಆ ಅಭ್ಯಾಸ ಇಲ್ಲೂ ಅನುಕೂಲಕ್ಕೆ ಒದಗಿದಂತಿತ್ತು. ಕೊನೆಯಲ್ಲಿ ಕಿಶೋರ್ ನನ್ನ ಸವಾರಿಯನ್ನು ವಿಮರ್ಶಿಸಿದ ಪರಿ, ವಾಸ್ತವದಲ್ಲಿ ತುಸು ಹೆಚ್ಚುಕಮ್ಮಿ ಎಲ್ಲರ ಸವಾರಿಯ ವಿಮರ್ಶೆಯೇ ಆಗಿತ್ತು.

ಕಿಶನ್ ಮಾತು “ನಾನು ಅವರನ್ನು ಹಿಂಬಾಲಿಸುತ್ತಿದ್ದೆ. ಅವರ ಪೆಡಲಿಂಗ್ ಆರ್ಪೀಯಂ ಕಡಿಮೆಯದ್ದು. ಅವರು ಈಗ ನಿಲ್ಲಿಸುತ್ತಾರೆ, ಈಗ ನಿಲ್ಲಿಸುತ್ತಾರೆ ಎಂದು ನಾನು ಆಶಿಸಿದ್ದೇ ಬಂತು; ನಿಲ್ಲಿಸುತ್ತಲೇ ಇರಲಿಲ್ಲ. ಸರಿ, ನಾನೇ ತುಸು ದಮ್ಮು ಕಟ್ಟಿ ಅವರ ಜತೆ ಜತೆ ಸಾಗಿ ಮತ್ತೆ ಮುಂದೂ ಹೋದೆ. ಅವರದು ನಗು ಮಾತ್ರ. ನನ್ನ ವೇಗಕ್ಕೆ ಏರಿಸುವುದಿಲ್ಲ. ಹಾಗೆಂದು ನಿಲ್ಲಿಸಲೂ ಇಲ್ಲ, ನಿರಂತರ ಸಾಗಿರುತ್ತಾರೆ.” ಪ್ರತಿ ಮುಂದಿನವನೂ ಈಗ ಸೋಲುತ್ತಾನೆ, ನಾನು ಮುಂದುವರಿಯುತ್ತೇನೆ ಎಂಬ ಸ್ಪರ್ಧೆಯಿಲ್ಲದ ಭಾವ ಅಥವಾ ಮುಂದೆ ಹೋಗುವುದು ಒಂದು ಸವಾಲು, ಹಿಂದೆ ಕಳೆದದ್ದು ವಿಜಯದ ಮೆಟ್ಟಿಲು ಎಂದು ಸ್ಪಷ್ಟಗೊಳ್ಳದ ಮನೋಸ್ಥಿತಿಯೇ ಬಹುಶಃ ಎಲ್ಲರನ್ನೂ ದೃಢವಾಗಿ ಲಕ್ಷ್ಯದತ್ತ ಒಯ್ದಿತ್ತು. ಇದನ್ನೇ ಉದಾತ್ತವಾಗಿ ಯೂಥಸ್ಫೂರ್ತಿ (ಟೀಂ ಸ್ಪಿರಿಟ್) ಎಂದು ಕರೆಯುತ್ತಾರೋ ಏನೋ! ಬಹಳ ಜನ ತಪ್ಪು ತಿಳಿದಂತೆ, ಅಂತರ್ದಹನ ಯಂತ್ರಯುಕ್ತ ವಾಹನಗಳಲ್ಲಿ ಗೇರ್ ಎನ್ನುವುದು ಮಾಯಾದಂಡವಲ್ಲ. ವಾಸ್ತವದಲ್ಲಿ ಅಲ್ಲಿ ಯಂತ್ರಶಕ್ತಿಯಿದ್ದಂತೆ, ಇಲ್ಲಿ ನಮ್ಮ ದೇಹಶಕ್ತಿಯ ಮಿತವ್ಯಯದಲ್ಲಿ ಹೆಚ್ಚು ಸಾಧನೆಯನ್ನು ಕೊಡುವ ಸೌಕರ್ಯ ಮಾತ್ರ ಗೇರ್. ಶ್ರಮ, ಮನೋಬಲವಿಲ್ಲದೆ ಗೇರ್ ಸೈಕಲ್ಲಲ್ಲಾದರೂ ಮಹಾಯಾನ ಅಸಾಧ್ಯ!  

ಕಿಲೋಮೀಟರ್ ಹಿಂದಿನಿಂದಲೇ ಭೋರ್ಗರೆಯುತ್ತಾ ಬಂದು ಮಿಂಚಿನಂತೆ ಹಾದು ಹೋಗುವ ಭಾರೀ ಚಕ್ರದ ಮೋಟಾರ್ ಸೈಕಲ್ಲುಗಳನ್ನು ಕಂಡಾಗ ಬೆಂಗಳೂರಿಗರ ಆದಿತ್ಯವಾರದ ಮೋಜಿನೋಟದ ಕೂಟವಿರಬೇಕು ಅಂದುಕೊಂಡೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ಅಂದರೆ ದಾರಿ ಈಗಿನ ಸುಸ್ಥಿತಿಯಲ್ಲಿಲ್ಲದಾಗಲೂ ಆರೇ ಗಂಟೆಯಲ್ಲಿ ಮಂಗಳೂರು-ಬೆಂಗಳೂರು ಮೋಟಾರ್ ಸೈಕಲ್ ಓಡಿಸಿದ ನನ್ನ ನೆನಪು ಯಾವ ಕ್ರೀಡಾ ಸಮ್ಮಾನಕ್ಕೆ ಕಡಿಮೆಯದಲ್ಲ. ಹೆದ್ದಾರಿಯಲ್ಲಿ ಇತರ ವಾಹನಗಳ ಓಟದ ಪರಿ ಏನೂ ಕಡಿಮೆಯದ್ದಿರಲಿಲ್ಲ. ಕೆಲವಂತೂ ಎಲ್ಲ ಬಿಡಿಭಾಗಗಳೂ `ಸ್ವತಂತ್ರ-ಸಂಗೀತ’ ಕೊಡುವಷ್ಟು ವೇಗವಾಗಿಯೇ ಧಾವಿಸುತ್ತಿದ್ದವು. ಎರಡು ವರ್ಷದ ಹಿಂದೆ ಇಲ್ಲಿ ನನ್ನ ಕಾರಿನ ಸ್ಪೀಡೋಮೀಟರ್ ಅತ್ಯಧಿಕದಲ್ಲಿ ೧೨೦ಕಿಮೀ ಸಂಖ್ಯೆಗೆ ನಿರಂತರ ತಗುಲಿಕೊಳ್ಳುತ್ತಿದ್ದುದೂ ನೆನಪಾಗದಿರಲಿಲ್ಲ. ಆದರೆ ಸದ್ಯ ಅವುಗಳನ್ನು ನಿರಾಕರಿಸಿ ಸೈಕಲ್ ಮೆಟ್ಟುತ್ತಿರುವ ಬಗ್ಗೆ ನನ್ನೊಳಗೆ ಗರ್ವ ಬರುತ್ತಿತ್ತು. ಮರುಗಳಿಗೆಯಲ್ಲಿ ಶ್ರಮ, ಸೆಕೆ. ದಾಹ ಪೀಡಿಸುತ್ತಿತ್ತು. ಆಗ ಇತರ ವಾಹನಗಳ ಕೇವಲ ಗಾಳಿಯೊತ್ತಡ ನನಗೆ ಒದಗಿದರೂ ಸಾಕು, ಒಂದಾದರೂ ಏರು ಸುಧಾರಿಸಿಕೊಳ್ಳುತ್ತಿದ್ದೆ ಎಂದನ್ನಿಸುವುದಿತ್ತು. ಐದಾರು ದಶಕಗಳ ಹಿಂದೆ ಸೈನ್ಯದಲ್ಲಿದ್ದ ನನ್ನ ಚಿಕ್ಕಪ್ಪ – ಈಶ್ವರ (ನೋಡಿ: ಛಲದೊಳ್ ದುರ್ಯೋದನಂ) ಸೈಕಲ್ಲೇರಿ ನಿಧಾನಗತಿಯ ಲಾರಿಗಳ ಹಿಂದೆ ಒಂದು ಕೈಯ ಆಸರೆ ಪಡೆದು ಮೈಲುಗಟ್ಟಳೆ ಬಿಟ್ಟಿ ಸವಾರಿ ಅನುಭವಿಸುತ್ತಿದ್ದ ಸಾಹಸ ಕೊಚ್ಚಿಕೊಳ್ಳುತ್ತಿದ್ದ. ಹಾಗೆ ನಾನೂ ಯಾಕೆ ಇಲ್ಲಿ ತುಸು ನಿಧಾನಿಗಳಾದ ಗೂಡ್ಸ್ ಟೆಂಪೋ ಅಥವಾ ಟ್ರ್ಯಾಕ್ಟರುಗಳ ಹಿಂದಿನ ಸರಪಣಿಗೆ ಜೋತುಬೀಳಬಾರದು ಎಂದು ಅನ್ನಿಸಿದ್ದಿತ್ತು.

ಮರುಗಳಿಗೆಯಲ್ಲಿ ನಾನು ಯಾರದೋ ಹರಿಕೆಗೆ ಸವಾರಿ ಹೊರಟವನಲ್ಲ. ನಮ್ಮ ಉದ್ದೇಶ - ಪೆಟ್ರೋಲ್ ಉಳಿಸಿ, ಪರಿಸರ ವರ್ಧಿಸಿ, ಆರೋಗ್ಯ ಹೆಚ್ಚಿಸಿ ಎಂಬುದಕ್ಕೇನು ಮರ್ಯಾದೆ ಎಂದು ಯೋಚನೆ ಬಂದು ನಾಚಿಕೆಯೂ ಆಗುವುದಿತ್ತು. ಹೀಗೆ ಸಾರ್ವಜನಿಕಕ್ಕೆ ಒಂದು ತಂಡವಾಗಿ ಕಂಡರೂ ಎಲ್ಲ ಅವರವರದೇ  ಮನೋದೈಹಿಕ ವ್ಯಾಪಾರಗಳ ಮೊತ್ತವಾಗಿ ಬೆಂಗಳೂರನ್ನು ಸಮೀಪಿಸುತ್ತಿದ್ದೆವು. ಪ್ರಸನ್ನ ಎಲ್ಲರಿಗೂ ಸ್ಪಷ್ಟ ಸಂದೇಶ ರವಾನಿಸಿದ್ದ. "ಬೆಂಗಳೂರಿನ ಹೊರ ಅಂಚಾದ ನೆಲಮಂಗಲದ ಸುಂಕದ ಕಟ್ಟೆಯಲ್ಲಿ ಎಲ್ಲರೂ ಸೇರಬೇಕು. ಮುಂದೆ ಹತ್ತೊಂಬತ್ತೂ ಮಂದಿ ಒಂದು ತಂಡವಾಗಿ ಕಾಣುವಂತೆಯೇ ವಿಧಾನಸೌಧಕ್ಕೆ ಸಾಗಬೇಕು.”

ನೆಲಮಂಗಲ ಸುಂಕದ ಕಟ್ಟೆಯನ್ನು ನಾನೇನೋ ಹತ್ತೋ ಹನ್ನೆರಡನೆಯವನೋ ಆಗಿ ತಲಪಿದ್ದೆ. ಐದೋ ಹತ್ತೋ ಮಿನಿಟಿಗೊಬ್ಬರಂತೆ ಉಳಿದವರೂ ಬಂದು ಸೇರುತ್ತಿದ್ದರು. ಅಷ್ಟರಲ್ಲಿ ಎಲ್ಲ ಖಚಿತಗೊಳಿಸುವಂತೆ ಇನ್ನೂ ಕಿಮೀ ಹಿಂದೆಲ್ಲೋ ಬರುತ್ತಿದ್ದ ಪ್ರಸನ್ನ ಚರವಾಣಿ  ಸಂದೇಶ ಕಳಿಸಿದ: “ರಾಜೇಶ್ ಸೇಟ್ ಸೈಕಲ್ಲಿನ ರಿಮ್ ಬಿರಿದಿದೆ. ಆತ ಸೈಕಲ್ ಲಾರಿಗೇರಿಸಿ, ಮಹೇಶ್ ಜತೆ ಕಾರಿನಲ್ಲಿದ್ದಾನೆ. ಶ್ಯಾಮಣ್ಣನ ಸೈಕಲ್ ಪಂಚೇರಾಗಿತ್ತು. ಲಾರಿ ಅಲ್ಲಿಗೆ ಮುಟ್ಟಿ, ಪೀರ್ ಅದನ್ನು ಸರಿಪಡಿಸಿ ಕೊಟ್ಟಿದ್ದಾರೆ. ಎಲ್ಲ ಇನ್ನೇನು ಹತ್ತು - ಹದಿನೈದು ಮಿನಿಟಿನಲ್ಲಿ ಸೇರಲಿದ್ದಾರೆ.”

ಗಂಟೆ ಒಂದು ಕಳೆದಿತ್ತು. ಬಿಸಿಲು, ಹಸಿವು, ಬಾಯಾರಿಕೆ, ಕೊನೆಯದಾಗಿ ಬಳಲಿಕೆ ಎಲ್ಲರಿಗೂ ಸಮಸ್ಯೆಯೇ ಆಗಿ ಕಾಣುತ್ತಿತ್ತು. ಮೇಲೆ ಬೆಂಗಳೂರ ವಾಹನ ಸಮ್ಮರ್ದದ ನಡುವೆ ನಾವು ಒಂದು ತಂಡವಾಗಿ ಸಾಗಬೇಕು ಎನ್ನುವಾಗ ನನಗೆ ಹಗುರ ಪೆಡಲಿಂಗಿನಿಂದ ನಾನು ತಂಡವನ್ನು ನಿಧಾನಿಸುವುದು ತಪ್ಪು ಎಂದು ಅನಿಸಿತು. ಹಾಗೆಂದು ಆ ಹಂತದಲ್ಲಿ ಅದನ್ನು ಮೀರಿ ತುಳಿಯುವುದು ನನ್ನಿಂದ ಅಸಾಧ್ಯವೂ ಇತ್ತು. ಆಗ ಸಹಜವಾಗಿ ಕಾಣಿಸಿದ ಬದಲಿ ವ್ಯವಸ್ಥೆ - ಯುವಕ ರಾಜೇಶ್ ಸೇಟ್. ಕಾರು ಬಂದ ಕೂಡಲೇ ರಾಜೇಶಿಗೆ ಸೂಚನೆ ಕೊಟ್ಟೆ. ಆತ ಬಹಳ ಸಂತೋಷದಿಂದ ಒಪ್ಪಿಕೊಂಡ. ವಿವರ ಇಷ್ಟೇ: ರಾಜೇಶ್ ಸೈಕಲ್ ಹಾಳಾಗುವವರೆಗೆ ನಿಸ್ಸಂದೇಹವಾಗಿ ಗಟ್ಟಿ ಸವಾರಿ ಮಾಡಿದ್ದ. ಈಗ ತಾರುಣ್ಯ ಸಹಜವಾಗಿ, ಕೊನೆಯ ಹಂತದ ಸವಾರಿ ತಪ್ಪಿಹೋಗುವ ನಿರಾಶೆಯಲ್ಲಿದ್ದ. ಅದೇ ನನಗೆ, ಉಳಿದ ಇಪ್ಪತ್ತೆಂಟು ಕಿಮೀ ಸೈಕಲ್ ಮೆಟ್ಟಿ ದಾಖಲೆ ಸರಿಯಿಟ್ಟುಕೊಳ್ಳುವ ಚಪಲವೇನೂ ಇರಲಿಲ್ಲ. ಅಲ್ಲಿಂದ ಮುಂದಕ್ಕೆ ರಾಜೇಶಿಗೆ ನನ್ನ ಸೈಕಲ್ ಒಪ್ಪಿಸಿ, ನಾನು ಮಹೇಶ್ ಜತೆ ಕಾರು ಸೇರಿಕೊಂಡೆ.

ಎಲ್ಲ ಎಣಿಸಿದಂತೇ ಆಯ್ತು. ಒಂದು ದೀರ್ಘ ಮೇಲ್ದಾರಿ ಕಳೆಯುವುದರೊಳಗೇ ತಂಡದ ಹಲವು ಸದಸ್ಯರಿಗೆ `ಸ್ವಲ್ಪದರಲ್ಲಿ ಬಚಾವ್’ ಅನುಭವಗಳು, ಆತಂಕಗಳು ದಕ್ಕಿದ್ದವು! ಆ ಮೇಲ್ದಾರಿಯನ್ನು ಮುಂದಾಗಿ ದಾಟಿ, ಎಲ್ಲ ಚರವಾಣಿಯಲ್ಲಿ ಕೇಳಿಸಿಕೊಳ್ಳುತ್ತಿದ್ದ ಮಹೇಶ್, ತಂಡಕ್ಕೆ ತುರ್ತಾಗಿ ಏನಾದರೂ ಸ್ವಲ್ಪ ತಿನ್ನಲು ಕೊಡೋಣವೆಂದುಕೊಂಡರು. ಆದರದು ಏನೂ ಸಿಗದ ಪರಿಸರ. (ಮೇಲ್ದಾರಿ ಇಳಿಯುವಲ್ಲಿ ಮೆಟ್ರೋ ರೈಲಿನ ಕೆಲಸ ನಡೆಯುತ್ತಿದ್ದುದರಿಂದ ಒಂದು ಗೂಡಂಗಡಿಯೂ ಇರಲಿಲ್ಲ). ಕಾಲರ್ಧ ಗಂಟೆ ಬಿಟ್ಟು ತಂಡ 

ಏದುಸಿರು ಬಿಟ್ಟುಕೊಂಡು ಬಂದಾಗ ಧಾರಾಳ ನೀರನ್ನು ಮಾತ್ರ ಕೊಟ್ಟೆವು. ಮೊದಲೇ ಮೊಣಕಾಲ ತಿರಿಚಿನಿಂದ ಕಷ್ಟಪಡುತ್ತಿದ್ದ ಜಯಪ್ರಸಾದ್ ಕೂಡಾ ಅಲ್ಲಿಗೆ ಸವಾರಿ ಸಾಕೆನ್ನಿಸಿದರು. ಸೈಕಲ್ಲನ್ನು ಲಾರಿಗೇರಿಸಿ ಕಾರು ಸೇರಿಕೊಂಡರು. ಅದೃಷ್ಟವಶಾತ್ ತಂಡ ಮುಂದೆಯೂ ಯಾವುದೆ ದುರ್ಘಟನೆಗೆ ಸಿಕ್ಕಿಕೊಳ್ಳದೆ, ಮೂರು ಗಂಟೆಗೆ ವಿಧಾನಸೌಧವನ್ನು ತಲಪಿತು.

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮತ್ತು ಸರ್ವೋ ಪ್ರಾಯೋಜಿಸಿದ ಮಂಗಳೂರು ಸೈಕಲ್ಲಿಗರ ಸಂಘ ನಡೆಸಿದ (ಎಂ.ಎ.ಸಿ.ಸಿ) ಮಂಗಳೂರು ಬೆಂಗಳೂರು ಸೈಕಲ್ ಮಹಾಯಾನ ಅದ್ಭುತ ಯಶಸ್ಸನ್ನು ಕಂಡಿತ್ತು. ಹತ್ತೊಂಬತ್ತು ಸದಸ್ಯರು ಸೈಕಲ್ಲಿನ ಮಹತ್ತ್ವವನ್ನು ಸಾರುವುದಕ್ಕಾಗಿ ಸುಮಾರು ಇಪ್ಪತ್ನಾಲ್ಕು ಗಂಟೆಯ ಸವಾರಿಯಲ್ಲಿ ಸುಮಾರು ಮುನ್ನೂರಮುವತ್ತು ಕಿಮೀ ಅಂತರವನ್ನು ಕ್ರಮಿಸಿದ್ದರು. 

ಇದನ್ನು ಸರಕಾರದ ನೆಲೆಯಲ್ಲಿ ದಾಖಲಿಸುವುದಕ್ಕಾಗಿ ಮೊದಲೇ ಯೋಜಿಸಿದ್ದಂತೆ ಆರೋಗ್ಯ ಸಚಿವರ ಕಾರ್ಯದರ್ಶಿ ವಿಧಾನ ಸೌಧದೆದುರು ನಮ್ಮನ್ನು ಕಾದು ಅಧಿಕೃತ ಮನವಿಪತ್ರವನ್ನು ಸ್ವೀಕರಿಸಿದರು.  ಮನವಿಪತ್ರದ ಪೂರ್ಣ ಪಾಠ ಹೀಗಿದೆ:
ಶ್ರೀ ಯು.ಟಿ. ಖಾದರ್ ಅವರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ಕರ್ನಾಟಕ ರಾಜ್ಯ ಸರಕಾರ. 
ಮಾನ್ಯರೇ, 
ವಿಷಯ: ಪರಿಸರ ಮಾಲಿನ್ಯದ ವಿರುದ್ಧ ಸೈಕಲ್ ಸವಾರಿಯನ್ನು ಹೆಚ್ಚಿಸಲು ಸರಳ ಸಲಹೆಗಳು, ಮನವಿ ಮತ್ತು ಒತ್ತಾಯ. 
ತಂತ್ರಜ್ಞಾನ ಅಭಿವೃದ್ಧಿಗಳ ರಭಸದಲ್ಲಿ ನಾವಿಂದು ಪಳೆಯುಳಿಕೆ ಮೂಲವಾದ (ಫಾಸಿಲ್ ಫ್ಯೂಯೆಲ್ – ಪೆಟ್ರೋಲ್, ಡೀಸೆಲ್ ಇತ್ಯಾದಿ) ಇಂಧನವನ್ನು ವಿಪರೀತ ಅವಲಂಬಿಸಿದ್ದೇವೆ. ಎಲ್ಲರಿಗೂ ತಿಳಿದಂತೆ ಇದು ನಮ್ಮ ಯಾವ ಪ್ರಯತ್ನವೂ ಇಲ್ಲದೇ ಲಕ್ಷಾಂತರ ವರ್ಷಗಳ ಹಿಂದಿನ ಪ್ರಾಕೃತಿಕ ಕ್ರಿಯೆ. ಅದಕ್ಕೊಂದು ಮಿತಿಯೂ ಇದೆ. ಹಾಗೂ ಅದನ್ನು ಬಳಸುವುದರಿಂದ ಉತ್ಪತ್ತಿಯಾಗುವ ಮುಖ್ಯವಾಗಿ ಇಂಗಾಲ ಅಥವಾ ಕಾರ್ಬನ್ ಸಂಯುಕ್ತಗಳು ನಮ್ಮ ಪರಿಸರದ ಮೇಲೆ ಬೀರುವ ಕೆಟ್ಟ ಪರಿಣಾಮವೂ ಎಲ್ಲರಿಗೂ ತಿಳಿದ ಸತ್ಯವೇ ಇದೆ. ಇದನ್ನು ಪರಿಣಾಮಕಾರಿಯಾಗಿ ಎದುರಿಸುವ ಕ್ರಮವನ್ನು ಸೂತ್ರ ರೂಪವಾಗಿ ಹೇಳುವುದಾದಲ್ಲಿ ಮೂರು-ಉ ಸೂತ್ರ’ ಎಂದೇ ಹೇಳಬಹುದು. 
ಮೊದಲನೇ `ಉ’ ಅಂದರೆ ಉಳಿತಾಯ. ಎಲ್ಲಾ ಪೆಟ್ರೋಲ್ ಉತ್ಪನ್ನಗಳ ಬಳಕೆಯನ್ನು ಕಡಿತಗೊಳಿಸುವುದು. ಎರಡನೇ `ಉ’ ಅಂದರೆ ಜೀವ ಪರಿಸರದ ಉತ್ತಮಿಕೆ. ಕಾರ್ಬನ್ ಸಂಯುಕ್ತಗಳ ಬಿಡುಗಡೆ ಕಡಿಮೆಯಾದಷ್ಟೂ ಜೀವಯೋಗ್ಯ ಪರಿಸರ ಉತ್ತಮಗೊಳ್ಳುತ್ತದೆ. ಮೂರನೇ `ಉ’ ಅಂದರೆ ಸಾಮಾಜಿಕ ಸ್ವಾಸ್ಥ್ಯಮಟ್ಟದ ಉತ್ಥಾನ, ಅರ್ಥಾತ್ ಎತ್ತರಿಸುವುದು. ಅಭಿವೃದ್ಧಿಯ ಪಥ ಬದಲಿಸದೆ, ಮೂರು ಉ ಸೂತ್ರವನ್ನು ಜನಪ್ರಿಯಗೊಳಿಸುವಲ್ಲಿ ಸೈಕಲ್ ಬಹಳ ದೊಡ್ಡ ಸಾಧನವೆಂದೇ ನಾವು ಹೇಳಲಿಚ್ಛಿಸುತ್ತೇವೆ. ತೀರಾ ದೀರ್ಘವಲ್ಲದ ಎಲ್ಲಾ ಓಡಾಟಗಳಿಗೂ ಯಾವ ಇಂಧನವನ್ನೂ ಬಯಸದೇ ಬಳಕೆಯಾಗುವ ಸಂಗಾತಿ ಸೈಕಲ್. ಸೈಕಲ್ ಬಳಕೆಗೆ ಸೂಕ್ತವಾದ ಪರಿಸರ ನಿರ್ಮಾಣವಾದಲ್ಲಿ ಇಂದು ಆರ್ಥಿಕ ದುರ್ಬಲವರ್ಗಗಳು ಹೆಚ್ಚು ದೃಢವಾಗುವುದು ಖಂಡಿತ. ಆ ವರ್ಗ ಇಂದು ಅನಿವಾರ್ಯವಾಗಿ ಬಳಸುತ್ತಿರುವ ಮೊಪೆಡ್, ಸ್ಕೂಟರ್, ಬೈಕಾದಿ ವಾಹನಗಳ ಖರೀದಿ ಮತ್ತು ಚಾಲನೆಗೆ ಸುರಿಯುವ ಅಪಾರ ಹಣ ಅವರ ಇತರ ಜೀವನಾವಶ್ಯಕತೆಗಳಿಗೆ ಒದಗಿ ಬರುತ್ತದೆ. ಇದು ನೇರ ವಾಯು ಮಾಲಿನ್ಯದ ಪ್ರಮಾಣವನ್ನೂಕಡಿತಗೊಳಿಸುತ್ತದೆ. ಕೆಲಸದ ಒತ್ತಡ, ಆಹಾರಕ್ರಮದ ಬದಲಾವಣೆ, ಎಲ್ಲಕ್ಕೂ ಮುಖ್ಯವಾಗಿ ಸರ್ವಾಂಗೀಣ ವ್ಯಾಯಾಮದ ಕೊರತೆ ಇಂದು ಸಾಮಾಜಿಕ ಅನಾರೋಗ್ಯದ ಬಹುದೊಡ್ಡ ಕಾರಣ. ಹೆಚ್ಚಿನೆಲ್ಲ ದೈಹಿಕ ಅನಾರೋಗ್ಯಗಳು – ಉದಾಹರಣೆಗೆ: ಬೊಜ್ಜು, ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆಗಳು, ಹೃದಯ ಸಮಸ್ಯೆಗಳು, ಅಜೀರ್ಣ, ಹಲವು ವಿಧದ ಮೂಳೆ ನೋವುಗಳಿಗೆಲ್ಲ ವೈದ್ಯರು ತತ್ಕಾಲೀನ ಚಿಕಿತ್ಸೆ ಕೊಡುವುದಿರಬಹುದು. ಆದರೆ ರೋಗ ಗುಣಪಡಿಸುವುದಕ್ಕಿಂತ ಬಾರದಂತೆ ತಡೆಯುವುದು ಹೆಚ್ಚಿನ ಆವಶ್ಯಕತೆ. ಇದನ್ನು ಮನದಲ್ಲಿಟ್ಟುಕೊಂಡು ಎಲ್ಲಾ ವೈದ್ಯರೂ ಕೊಡುವ ಸಲಹೆ ಒಂದೇ “ನಡೆಯಿರಿ ಅಥವಾ ಸೈಕಲ್ ಹೊಡೆಯಿರಿ.” ಹೆಚ್ಚುತ್ತಿರುವ ಹೆಲ್ತ್ ಕ್ಲಬ್ಬುಗಳೂ, ವ್ಯಾಯಾಮಶಾಲೆಗಳೂ ಶಿಫಾರಸು ಮಾಡುವ ಪ್ರಾಥಮಿಕ ವ್ಯಾಯಾಮವಾದರೂ ಸ್ಥಾವರ ಸೈಕಲ್ ಮೆಟ್ಟುವುದೇ ಎನ್ನುವುದನ್ನು ಮರೆಯುವಂತೆಯೇ ಇಲ್ಲ.
ಬಹುಶ್ರುತರಾದ ನೀವು ಮೇಲ್ಕಾಣಿಸಿದ ವಿಷಯಗಳನ್ನು ಪರಿಗಣಿಸಿ, ಸಚಿವಸ್ಥಾನದ ಗೌರವ ಇನ್ನಷ್ಟು ಹೆಚ್ಚುವಂತೆ, ಕರ್ನಾಟಕ ಘನ ಸರಕಾರ ರಾಜ್ಯಾದ್ಯಂತ ಸೈಕಲ್ ಸವಾರಿಯನ್ನು ವಿಶೇಷವಾಗಿ ಪ್ರೋತ್ಸಾಹಿಸುವಂಥ ಶೀಘ್ರ ಕ್ರಮಕೈಗೊಳ್ಳಬೇಕಾಗಿ ಕೋರುತ್ತೇವೆ. ಈಗಾಗಲೇ ಬೆಂಗಳೂರು ಮತ್ತು ಮೈಸೂರಿನ ಕೆಲ ಭಾಗಗಳಲ್ಲಿ ಸೈಕಲ್ ಓಣಿಗಳನ್ನು ಗುರುತಿಸಿರುವ ಬಗ್ಗೆ ನಾವು ತಿಳಿದಿದ್ದೇವೆ. ಆ ನಿಟ್ಟಿನಲ್ಲಿ ಕನಿಷ್ಠ ಮಂಗಳೂರಿನ ವಲಯದಲ್ಲಾದರೂ ನೀವು ಸೈಕಲ್ ಪರವಾಗಿ ಕೈಗೊಳ್ಳಬಹುದಾದ ಕೆಲವು ಸಲಹೆಗಳನ್ನು ನಾವು ಸೂತ್ರ ರೂಪದಲ್ಲಿ ಕೊಡಲು ಬಯಸುತ್ತೇವೆ. 
೧. ಕೆಲವು ತಿಂಗಳ ಹಿಂದೆ ಕದ್ರಿಪದವಿನಲ್ಲಿ ಹಿಂದೆ ಜಿಂಕೆಗಳ ಉದ್ಯಾನವಾಗಿದ್ದ ಸ್ಥಳವನ್ನು `ಸೈಕಲ್ ಪಾರ್ಕ್’ ಎಂದೇ ಸರಕಾರ ಘೋಷಿಸಿ, ಸೂಕ್ತ ಕಾಮಗಾರಿಗೆ ಪ್ರಥಮ ಶಿಲೆಯನ್ನೂ ಇಡಲಾಗಿತ್ತು. ಆದರೆ ಅದು ಮುಂದುವರಿಯದೇ ಮರವೆಗೆ ಸಂದ ಸ್ಥಿತಿಯಲ್ಲಿದೆ. ಆ ಸಣ್ಣ ವಠಾರದೊಳಗಾದರೂ ಮಕ್ಕಳು, ಕಲಿಕೆಯವರು ಮುಕ್ತವಾಗಿ ಸೈಕಲ್ ಚಲಾಯಿಸಲು ಬೇಕಾದ ಪರಿಸರವನ್ನು ಸಜ್ಜುಗೊಳಿಸಬೇಕು. 
೨. ಸಾಂಪ್ರದಾಯಿಕ ನಗರವಾದ ಮಂಗಳೂರಿನ ದಾರಿಗಳಲ್ಲಿ ಆಧುನಿಕ ವಾಹನಗಳ ಸಂಖ್ಯೆ ಮತ್ತು ಆವಶ್ಯಕ ಸಂಚಾರಕ್ಕೇ ಸ್ಥಳದ ಕೊರತೆ ಕಾಡುತ್ತದೆ. ಹಾಗಾಗಿ ಅವಕಾಶವಿರುವ ಆಯ್ದ ಕೆಲವು ದಾರಿಗಳಲ್ಲಾದರೂ ದೀರ್ಘ ಸೈಕಲ್ ಓಣಿಗಳನ್ನು ಹೆಸರಿಸಿ, ಪ್ರತ್ಯೇಕಿಸಿಕೊಡುವುದು ಆಗಬೇಕು. ಉದಾಹರಣೆಗೆ: ಶಿವರಾಮ ಕಾರಂತರಸ್ತೆ, ಮಹಾತ್ಮಗಾಂಧಿ ರಸ್ತೆ, ಮಣ್ಣಗುಡ್ಡೆ ವೃತ್ತದಿಂದ ತೊಡಗಿದಂತೆ ಉಡುಪಿಯತ್ತಣ ಹೆದ್ದಾರಿಯವರೆಗಿನ ರಸ್ತೆಗಳಲ್ಲೆಲ್ಲ ಸೈಕಲ್ ಓಣಿಗಳನ್ನು ಸುಲಭವಾಗಿ ಪ್ರತ್ಯೇಕಿಸಬಹುದು. ತಣ್ಣೀರುಬಾವಿ-ಬೆಂಗ್ರೆ ರಸ್ತೆಯಂತೂ ಈಗಾಗಲೇ ಹಲವು ಸೈಕಲ್ ರ್‍ಯಾಲಿಗಳನ್ನೂ ಕಂಡವೇ ಇವೆ. ಇಂದು ಮಕ್ಕಳಲ್ಲಿ ಅನಾರೋಗ್ಯಕರ ಬೊಜ್ಜು ಬೆಳೆಯುತ್ತಿರುವುದು ಭಾರೀ ಜಾಗತಿಕ ಸಮಸ್ಯೆಯೇ ಆಗಿದೆ. ನಿರಪಾಯ ಸೈಕಲ್ ಓಣಿಗಳು ಬರುವುದರಿಂದ ಮಕ್ಕಳು ಶಾಲೆಗೆ ಸೈಕಲ್ಲುಗಳನ್ನು ನಿತ್ಯ ಬಳಸುವಂತಾಗಿ ಬೊಜ್ಜು ಕರಗುವುದರಲ್ಲಿ ಯಾವ ಸಂದೇಹವೂ ಇಲ್ಲ. 
೩. ಕಳೆದ ಹಲವು ತಿಂಗಳುಗಳಿಂದ ಅನೌಪಚಾರಿಕವಾಗಿ `ಮಂಗಳೂರು ಸೈಕ್ಲಿಸ್ಟ್ ಕ್ಲಬ್’ (ಎಂಎಸಿಸಿ) ಎಂಬ ಸಂಘಟನೆ ತರುಣರಲ್ಲಿ ದೀರ್ಘ ಸೈಕಲ್ ಸವಾರಿಯನ್ನು ರೂಢಿಸುತ್ತಾ ಇದೆ. ಇಂಥಾ ಚಟುವಟಿಕೆಗಳಿಗೆ ನಗರದೊಳಗಿನ ಸಣ್ಣ ಅಂತರಗಳು, ಹಲವು ಇತರ ಕ್ರೀಡೆಗಳಲ್ಲಿ ಕಳೆದು ಹೋಗಿರುವ ಯಾವುದೇ ಮೈದಾನಗಳು ಸಾಕಾಗುವುದಿಲ್ಲ. ಹೆದ್ದಾರಿಗಳ ಅಗಲೀಕರಣದಲ್ಲಿ ಊರೂರಿನ ನಡುವಣ ಸಂಪರ್ಕ ದಾರಿಗಳು ಒಳ್ಳೆಯ ವ್ಯವಸ್ಥೆಯನ್ನು ಕಾಣುತ್ತಿರುವಾಗ ಅಲ್ಲಿ ಕೇವಲ ಒಂದೆರಡು ಮೀಟರ್ ಅಗಲದ ಸೈಕಲ್ ಓಣಿ ಕಲ್ಪಿಸುವುದು ಖಂಡಿತಕ್ಕೂ ಸರಕಾರಕ್ಕೆ ಹೊರೆಯಾಗದು. 
೪. ಅಮೆರಿಕೆಯಂಥಾ ಮುಂದುವರಿದ ದೇಶಗಳಲ್ಲಿ ನೂರು ಸಾವಿರ ಕಿಮೀ ದೀರ್ಘ ಸ್ವತಂತ್ರ (ಹೆದ್ದಾರಿಗಳ ಭಾಗವಾಗಿ ಗುರುತಿಸಿದ್ದಲ್ಲ, ಪ್ರತ್ಯೇಕ ವ್ಯವಸ್ಥೆಯಾಗಿಯೇ) ಸೈಕಲ್ ಓಣಿಗಳು ರೂಪುಗೊಂಡಿರುವುದನ್ನು ಕಾಣುತ್ತಿದ್ದೇವೆ. ಅಂಥವರಿಗೆ ಸೂಕ್ತ ಅಂತರಗಳಲ್ಲಿ ತಿನಿಸು, ಪಾನೀಯಗಳ ವ್ಯವಸ್ಥೆಯಿರಲಿ, ಸ್ನಾನ ಸಹಿತ ವಿಶ್ರಾಂತಿ ತಾಣಗಳೂ ರೂಪುಗೊಂಡಿರುವುದೂ ನಿಮಗೆ ತಿಳಿಯದ್ದೇನೂ ಅಲ್ಲ. ಅದೇ ಅಲ್ಲದಿದ್ದರೂ ಆ ಆದರ್ಶಕ್ಕೆ ದುಡಿಯುವಂತಾ ಸೈಕಲ್ ಓಣಿಗಳನ್ನು ಹೆದ್ದಾರಿಗಳ ಅಂಚಿನಲ್ಲೂ ರೂಪಿಸುವಂತಾಗಬೇಕು. 
೫. ವಿಶ್ವ ಸೈಕಲ್ ತಂತ್ರಜ್ಞಾನ ಇಂದು ಬಹಳ ಮುಂದುವರಿದಿದೆ. ಆದರೆ ಭಾರತೀಯ ಸೈಕಲ್ ತಯಾರಕರು ಇನ್ನೂ ಹಳೆಗಾಲದ ಮಾದರಿಗಳನ್ನೇ ದೂಡುವ ಅಲ್ಪ ತೃಪ್ತಿಯಲ್ಲಿದ್ದಾರೆ. ಇಂದು ನಗರಗಳ ಯಾವುದೇ ಸೈಕಲ್ ಮಳಿಗೆ ನೋಡಿದರೆ ತಲಾ ಲಕ್ಷಾಂತರ ರೂಪಾಯಿ ಮೌಲ್ಯಗಳ ವಿದೇಶೀ ಸೈಕಲ್ಲುಗಳು ಶೋಭಿಸುತ್ತಿವೆ ಮತ್ತು ಮಾರಾಟವೂ ಆಗುತ್ತಿವೆ. ಅಮೂಲ್ಯ ವಿದೇಶೀ ವಿನಿಮಯವನ್ನು ಉಳಿಸುವಂತೆಯೂ ದೇಶೀ ಉತ್ಪಾದಕತೆಯ ಮೌಲ್ಯವರ್ಧಿಸುವಂತೆಯೂ ಬಹುಮಾದರಿಯ ಸೈಕಲ್ ತಯಾರಿಕೆಯನ್ನು ಪ್ರೋತ್ಸಾಹಿಸಬೇಕು. 
ಮಂಗಳೂರಿನ ದೂರದಿಂದ ರಾಜ್ಯದ ರಾಜಧಾನಿ ಬೆಂಗಳೂರಿನವರೆಗೆ ಸೈಕಲ್ಲುಗಳನ್ನೇ ಸವಾರಿ ಮಾಡಿಕೊಂಡು ಬಂದು ಮನವಿ ಕೊಡುತ್ತಿರುವ ನಮ್ಮ ಸಂಖ್ಯೆ ಸಣ್ಣದಿರಬಹುದು. ಆದರೆ ಖಂಡಿತವಾಗಿಯೂ ಈ ಮನವಿಯನ್ನು ಪುರಸ್ಕರಿಸುವುದರಲ್ಲಿ ರಾಜ್ಯದ ಎಲ್ಲಾ ಜನತೆಯ ಮತ್ತು ಪರಿಸರದ ಹಿತವಿದೆ ಎಂದು ಗುರುತಿಸುವ ಹೃದಯವಂತಿಕೆ ನಿಮ್ಮಲ್ಲಿದೆ ಎಂದು ನಾವು ನಂಬಿದ್ದೇವೆ. 
ವಂದನೆಗಳೊಂದಿಗೆ ನಿಮ್ಮ ವಿಶ್ವಾಸಿಗಳು, ಮಂಗಳೂರಿನ ಸೈಕಲ್ ಸಂಘದ ಸದಸ್ಯರು.

ವಿಧಾನಸೌಧದೆದುರು ಹಲವು ಪತ್ರಕರ್ತ ಗೆಳೆಯರೂ ನಮ್ಮನ್ನು ಸ್ವಾಗತಿಸಿದರು. ಮುಖ್ಯವಾಗಿ ಉಲ್ಲೇಖಿಸಲೇ ಬೇಕಾದವರು ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕರಾದ ಶಿವಸುಬ್ರಹ್ಮಣ್ಯ. ಮೂರೂವರೆ ಗಂಟೆಯ ಸುಮಾರಿಗೆ, ಔಪಚಾರಿಕತೆಗಳೆಲ್ಲವನ್ನು ಚುರುಕಾಗಿ ಮುಗಿಸಿಕೊಂಡು ನಾವು ಬಳಿಯ ನೃಪತುಂಗ ರಸ್ತೆಯ ಪೆಟ್ರೋಲ್ ಬಂಕಿಗೆ ಹೋದೆವು. ಅಲ್ಲಿನ ಭರ್ಜರಿ ಆತಿಥ್ಯಕ್ಕೆ (ಊಟ ಸಹಿತ) ಮನಸೋಲದವರಿಲ್ಲ.

ಇಂದು ಬೆಂಗಳೂರು ರಾಜ್ಯದ ಎಲ್ಲ ಮಂದಿಗಳಿಗೂ `ಸಂಬಂಧಿ’ಕರ ಬೀಡೂ ಆಗಿದೆ. ಸಹಜವಾಗಿ ಎಲ್ಲ ಸೈಕಲ್ಲುಗಳನ್ನು ಲಾರಿಗೊಪ್ಪಿಸಿ ತಂಡ ಚದುರಿತು. ಮನೆಗಳ ಅನುಕೂಲ ಮತ್ತು ಖಾಸಗಿ ಮರುಪಯಣದ ವ್ಯವಸ್ಥೆ ಇಲ್ಲದವರಿಗಾಗಿ ಬಳಿಯ ಹೋಟೆಲಿನಲ್ಲಿ ವಿರಾಮ ಕೊಠಡಿ ಹಾಗೂ ರಾತ್ರಿ ಬಸ್ಸಿನ ಟಿಕೆಟ್ಟುಗಳನ್ನೂ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಕಾಯ್ದಿರಿಸಿತ್ತು.

ಹೀಗೆ ಶನಿವಾರ ಆದಿತ್ಯವಾರದ ರಜೆಗಳನ್ನು ಸಾರ್ಥಕಗೊಳಿಸಿದ ಹುರುಪಿನೊಡನೆ ಎಲ್ಲರೂ ಮಂಗಳೂರಿನಲ್ಲಿ ಸೋಮವಾರದಂದು ಅವರವರ ನಿತ್ಯ ಕೆಲಸಗಳಲ್ಲಿ ನಿರತರಾಗಿದ್ದುದು ಸೈಕಲ್ಲಿನ ಸರಳತೆಗೂ ಅಪಾರ ಸಾಮರ್ಥ್ಯಕ್ಕೂ ಸಾಕ್ಷಿ ಎನ್ನಲೇಬೇಕು. ಒಕ್ಕೊರಲಿನ ಘೋಷದಲ್ಲಿ “ಜೈ ಸೈಕಲ್!” ಹೇಳಲೇಬೇಕು. ಹಾಗೇ ಇದನ್ನು ಉದಾರವಾಗಿ ಪೂರ್ಣ ಪ್ರಾಯೋಜಿಸಿದ ಇಂಡಿಯನ್ ಆಯಿಲ್ ಕಾರ್ಪೊರೇಶನ್ನಿನ ಮಂಗಳೂರು ಪ್ರಾದೇಶಿಕ ಕಛೇರಿ ಹಾಗೂ ಅಷ್ಟೇ ಮುತುವರ್ಜಿಯಿಂದ ಪ್ರತಿನಿಧಿಗಳಾಗಿಯೂ ಭಾಗಿಗಳಾಗಿಯೂ ಜೊತೆಗೊಟ್ಟು ಕೊನೆಮುಟ್ಟಿಸಿದ ಮಹೇಶ್ ಮತ್ತು ಪ್ರಸನ್ನರಿಗಂತೂ ಏರು ಕಂಠದಲ್ಲಿ ಹಾಕಲೇಬೇಕು “ಜೈ, ಜೈ, ಜೈ.”
[ಇತ್ತ ಸಂಘಟಕನಾಗಿಯೂ ಅತ್ತ ಸಾಹಸ ಭಾಗಿಯಾಗಿಯೂ ಪಾತ್ರವಹಿಸಿದ ಪ್ರಸನ್ನನಿಗೆ ಒಟ್ಟು ಕಲಾಪವನ್ನು ದಾಖಲೀಕರಣಗೊಳಿಸುವ ಕ್ರಮ ಪೂರೈಸಲಾಗಲಿಲ್ಲ. (ಈ ಕುರಿತು ಅವನಿಗೆ ವಿಷಾದವಿದೆ) ಹಾಗಾಗಿ ಮಹೇಶ್ ಕ್ಯಾಮರಾ, ಪ್ರಸನ್ನನದೇ ಚರವಾಣಿ ದಾಖಲೀಕರಣಗಳು ಯಾವ ಯೋಜನೆಯೂ ಇಲ್ಲದೆ ಬಳಲಿವೆ. ಆ ಚೂರುಪಾರು ಚಿತ್ರ, ವಿಡಿಯೋ ತುಣುಕುಗಳನ್ನು ಸಂಕಲಿಸಿದ ಒಂದು ಪುಟ್ಟ ಚಲನಚಿತ್ರ ನೋಡಿ..]

15 comments:

 1. Thank you sir for your nice narration,photos & videos.In my opinion this type of cycling has nothing to do with environment / simplicity. It is just a another kind of sports / to keep fit.I never used or could not use my bicycle for any small household purchases or for commute..using only MOTORbike or MOTOR...!!!

  ReplyDelete
  Replies
  1. ಪ್ರಿಯ ರೈಗಳೇ ಇಲ್ಲ, ನೀವು ಹಾಗೆ ತಿಳಿಯಬೇಕಾಗಿಲ್ಲ. ಇದು ಮನುಷ್ಯ ದೇಹಕ್ಕೆ ಸಂಬಂಧಪಟ್ಟಂತೆ ಸೈಕಲ್ಲಿನ ಗರಿಷ್ಠ ಸಾಧ್ಯತೆಯನ್ನು ತೋರಿಸುವ ಪ್ರಯತ್ನ ಮಾತ್ರ. ಆಗ ಸಾಮಾನ್ಯರು ಉಪ-ಉಪಯೋಗಗಳ ಕುರಿತು ಯೋಚಿಸುತ್ತಾರೆ, ಸರಳ ಸಾಧನಗಳನ್ನೂ ತರುತ್ತಾರೆ. (ಇನೋಳಿಯಲ್ಲೊಬ್ಬ ನನ್ನ ಸೈಕಲ್ ನೋಡಿ "ಉಂದ್ ಕಣಕ್ ತುಂಬ್ಯಾರ ಆವಾಂದ್" ಎಂದು ಹೇಳಿದ್ದೂ ಗಮನಾರ್ಹವೇ!) ನನ್ನ ನಿತ್ಯದ ಸೈಕಲ್ ಸರ್ಕೀಟ್ ಅದಕ್ಕೇ ಸೈಕಲ್ ಮೂಲಕ ಅನ್ಯ ವಿಚಾರಗಳನ್ನೇ ಹೆಚ್ಚು ಚಿಂತಿಸುವಂತೆ ರೂಪಿಸುತ್ತಿರುತ್ತೇನೆ - ಪರಿಸರ, ಸಂಬಂಧಗಳ ಪೋಷಣೆ, ಸಂದೇಶ ರವಾನೆ, ನಗರ ಸಮಸ್ಯೆ ಇತ್ಯಾದಿ. ಅಂಥದ್ದೇ ಒಂದಾದ ನಮ್ಮ ಬಿಸಿಲೆ ಯಾನ ಬಾಕಿಯೇ ಉಳಿದಿದೆ, ನಾನು ಮರೆತಿಲ್ಲ :-)

   Delete
  2. Sir, you are Mangalurs Johan Eliasch [referring your purchase of a few acres of land at Bisle Ghat for the sole reason for its preservation ] Sir you cycle with "Open Eyes".I never mean peddling is purely materialistic...when go for a long ride...when there is synchronisation of body & mind ...feeling of oneness with Nature.. is this called meditation cycling sir ?.. a great feeling not to miss..so not to miss cycling.

   Delete


 2. I sometimes feel whatever we are doing is for a lost cause. Cycling long distance, seeing places, testing our own endurance is for self gratification thats all. But, when I use cycle for commuting to work, the cab which was supposed to take me to office will still ply around. Its just that my seat in the cab will be taken by someone else. So, that leads to a question of where are we saving the fuel? Unless and until this becomes mass movement nothing will change. For that there is a host of things that should happen, people must start beleiving that cycling to work is a viable option. The cost of cycles is too much, sadly with Indian made cycles you cannot be comfortable or ride long. So, cycles must be subsidized in my opnion. Will all these happen in our life times? Thats something which leaves us searching for answers.

  ReplyDelete
  Replies
  1. ಮಹಾಯಾನದ ಕೊನೆಯಲ್ಲಿ ಮಂತ್ರಿಗೆ ಕೊಟ್ಟ ಮನವಿಪತ್ರ ನನ್ನ ಲೇಖನದಲ್ಲಿ ಲಗತ್ತಿಸಿದ್ದೇನೆ. ಅದರಲ್ಲಿ ಪ್ರಾಥಮಿಕ ಆಶಯಗಳ ಸ್ಪಷ್ಟ ಉಲ್ಲೇಖಗಳಿವೆ. ಯಾವುದೇ ಪ್ರಾಮಾಣಿಕ ಪ್ರಯತ್ನಗಳಿಗೆ ದೀರ್ಘ ಓಟದಲ್ಲಿ ಅರ್ಥಪೂರ್ಣ ಪ್ರಭಾವ ಇದ್ದೇ ಇದೆ ಎನ್ನುವುದಕ್ಕೆ ನಾನೇ ಸಾಕ್ಷಿ. ನಾಲ್ಕು ದಶಕಗಳ ಹಿಂದೆ ಕೇವಲ ವ್ಯಾಯಾಮಕ್ಕಾಗಿ ಹೆಚ್ಚು ಕಡಿಮೆ ಒಂಟಿಯಾಗಿ ಬೆಟ್ಟ ಹತ್ತುತ್ತಿದ್ದ ನಾನು ಇಂದು ಇಷ್ಟೊಂದು ಹಾವು, ಹಕ್ಕಿ, ನೀರು, ಕಾಡು, ಗಾಳಿ ಎಂದಿತ್ಯಾದಿ ಹೋರಾಡುವ ಮಂದಿಯಿಂದ ಸುತ್ತುವರಿದಿರುವುದು, ಎಲ್ಲಕ್ಕೂ ಮಿಕ್ಕು ಸಂದೀಪ್ ನೀವೇ ನನ್ನೊಡನಿರುವುದು ಖಂಡಿತಕ್ಕೂ ಸಣ್ಣ ಮಾತಲ್ಲ. ನಡೆ ಮುಂದೆ ನಡೆ ಮುಂದೆ..... :-)

   Delete
 3. ಅಶೋಕ್ ಅಂಕಲ್,

  ಈ ನಿಮ್ಮ ಮಂಗಳೂರು-ಬೆಂಗಳೂರು ಸೈಕಲ್ ಮಹಾಯನವನ್ನು ಪ್ರತೀ ಹಂತದಲ್ಲೂ ತುಂಬಾ ವಿವರವಾಗಿ ವಿವರಿಸಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು!

  ಹಾಗೂ ಸೈಕಲ್ ತಂಡದ ಎಲ್ಲಾ ಸದಸ್ಯರಿಗೂ ಹಾರ್ದಿಕ ಅಭಿನಂದನೆಗಳು!!!

  ReplyDelete
 4. ಶ್ರೀ ಅಶೋಕ ವರ್ಧನ ಅವರೇ, ಮೊದಲಿಗೆ ನಿಮಗೆ ಹಾಗೂ ''ನಿಮ್ಮ ಸೈಕಲ್ ವೀರರಿಗೆ'' ಅಭಿನಂದನೆಗಳು.
  ಕಣ್ಣಿಗೆ ಕಟ್ಟುವಂತಿದೆ ನಿಮ್ಮೆಲ್ಲರ ಸೈಕಲ್ ಯಾನದ ವರ್ಣನೆ.ನಡುನಡುವೆ ವಿಡಿಯೋ ಗಳು 123 ಡ್ಯಾನ್ಸ್ ಮಾಡಿದ 'ಮಿಕ್ಕಿ' ಒಳ್ಳೆ ಸ್ಪೂರ್ತಿ ನೀಡಿರಬೇಕಲ್ಲವೇ? ಸೂರ್ಯನ ಅಸ್ತಮ/ಉದಯ? ದ ಫೋಟೋಗಳು ಚೆನ್ನಾಗಿದೆ.ಹೆದ್ದಾರಿ ಯಲ್ಲಿ ಸರತಿಯ ಸಾಲಿನಂತೆ ಬೇರೆ ವಾಹನಗಳಿರುವಾಗ,ಒಂದೇ ಬದಿಯಲ್ಲಿ ಸೈಕಲ್ ಓಡಿಸಿರುವ ನಿಮ್ಮೆಲ್ಲರ ನೈಪುಣ್ಯತೆ ವಿಶೇಷವೇ. ನಿಮ್ಮ ಸೈಕಲ್ ಸಾಹಸಗಾಥೆ ಯನ್ನು ಓದುವುದಕ್ಕೆ ಲಿಖಿತ ರೂಪ ಕೊಟ್ಟ ನಿಮಗೆ ವಂದನೆಗಳು.

  ReplyDelete
 5. How come what ever comment I put never comes. Agraja you must be filtering me!! Grrrrrrrrrrrr :(

  ReplyDelete
  Replies
  1. ವರದ ಹಸ್ತ ಬಂದಾಗ ಕುಂಭಕರ್ಣ ಗಾಢ ನಿದ್ರೆ ಕೇಳಿದ ಹಾಗಾಯ್ತಲ್ಲಯ್ಯಾ ನಿನ್ನ ಕತೆ :-) ಹೀಗೇ ನಿನ್ನ ಟೀಕೆ ಇನ್ನೊಮ್ಮೆ ಕುಟ್ಟು, ಹಾಕು ತಮ್ಮಣ್ಣಾ

   Delete
 6. ನಿಮಗೂ ನಿಮ್ಮ ಸೈಕಲ್ ತಂಡದ ಎಲ್ಲಾ ಸದಸ್ಯರಿಗೂ ಹಾರ್ದಿಕ ಅಭಿನಂದನೆಗಳು.

  ಮಂಗಳೂರಿಗೆ ಬಂದಾಗ ಒಂಟಿ ಪಯಣಿಸುವಾಗ ನಾನು ಸೈಕಲನ್ನೆ ಬಳಸುವೆ. ಮಂಗಳೂರಿನಲ್ಲಿ ಮುಂಬರುವ ದಿನಗಳಲ್ಲಿ ಸೈಕಲ್ ಯಾನಿಗಳಿಗೆ ಉತ್ತಮ ಹಾಗೂ ಸುರಕ್ಷಿತ ಮಾರ್ಗ ಸರಕಾರದ ವತಿಯಿಂದ ತಯಾರಾದರೆ ಅದರ ಶ್ರೇಯ ನಿಮ್ಮ ತಂಡಕ್ಕೆ ಸಲ್ಲತಕ್ಕದ್ದು. ಉತ್ತಮ ಚಿತ್ರ-ವಿಡೀಯೊ ಸಹಿತ ನಿಮ್ಮ ಲೇಖನದಲ್ಲಿ ಸರಳವಾಗಿ ನಿಮ್ಮ ಮಂಗಳೂರು-ಬೆಂಗಳೂರು ಸೈಕಲ್ ಯಾನ ವಿವರಿಸಿದ್ದೀರಿ. ಧನ್ಯವಾದಗಳು.

  ReplyDelete
 7. ಗೇರುಗಳು ಸೈಕಲಿಗೆ ಅದ್ಬುತ ಅವಿಷ್ಕಾರ. ನಮ್ಮವರಿಗೆ ಈ ಬಗೆಗೆ ಅರಿವಿನ ಕೊರತೆ ಇರುವುದೂ ಬೇಸರದ ವಿಚಾರ. ದೀರ್ಘಪ್ರವಾಸಕ್ಕೆ ಬೇಕಾದ ಕಿವಿಮಾತುಗಳ ಅಲ್ಲಲ್ಲಿ ಬರೆದಿದ್ದೀರಿ. ಓದಲು ಸಂತಸವಾಯಿತು. Cadence / RPM ನಾವು ಸೈಕಲು ತುಳಿಯುವ ಕಾಲಕ್ಕೆ ಸುಮಾರು ಅರುವತ್ತಿದ್ದರೆ ಈಗ ಎಂಬತ್ತಕ್ಕೇರಿದೆ. ಅದುದರಿಂದ ಇಂದಿನವರಿಗೆ ಹೆಚ್ಚು ವೇಗ ಸಾಧಿಸಲು ಸಾದ್ಯವಾಗುವುದು ಗುಣಾತ್ಮಕ ವಿಚಾರ. ನಿಮಗೆ ಅದನ್ನು ತಲಪಲು ಸಾದ್ಯವಾಗದಿರುವುದೂ ಸ್ವಾಭಾವಿಕ. ಒಳ್ಳೆಯ ಪ್ರಾರಂಬದ ಬಗೆಗೆ ನನಗೆ ಕುಶಿಯಿದೆ. ಮುಂದೆ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲೆಂದು ಹಾರೈಸುವೆ - ಆದರೆ ದಾರಿಯುದ್ದಕ್ಕೂ ಗುಂಪು ಪೋಟೊ / “ಡಂಕು ಢಕ್ಕಾ” ಗಳ ಒತ್ತಡ ಕಡಿಮೆಯಾಗಲಿ.

  ReplyDelete
 8. ಎಂದಿನಂತೆ ಉತ್ತಮ ನಿರೂಪಣೆ. ಯಾವುದೂ ಅಸಾಧ್ಯವಲ್ಲ ಎನ್ನುವ ಸರಳ ಸಂದೇಶ. ಎಲ್ಲರಲ್ಲೂ ಹುರುಪು ತುಂಬಬಲ್ಲ ಸಾಹಸ ನಿಮ್ಮೀ ಯಾತ್ರೆ. ಸಂಪೂರ್ಣ ತಂಡಕ್ಕೆ ಅಭಿನಂದನೆಗಳು.

  ಗಿರೀಶ್, ಬಜಪೆ

  ReplyDelete
 9. ಇವತ್ತು ಶನಿವಾರ ಆರಾಮವಾಗಿ ಕೂತು ಇಡೀ ಓದಿದೆ. ನಮ್ಮ ಮೈಸೂರು - ಪಾ೦ಡವಪುರ ಸೈಕಲ್ ದಿನಗಳ ನೆನಪಾಯಿತು. ನಾನು ನೀನು ೮ ಗ೦ಟೆಯಲ್ಲಿ ಮೈಸೂರಿನಿ೦ದ ಮಡಿಕೇರಿಗೆ ಹೋಗುತ್ತಿದ್ದೆವು ಅ೦ದರೆ ೧೨೦/೮=೧೫ಕಿ.ಮಿ./ಗ೦ಟೆಗೆ ಸರಾಸರಿ ಅದು ಆಗಿನ ಕಾಲದ ಕಬ್ಬಿಣದ ತೂಕದ ಸೈಕಲಿನಲ್ಲಿ. ನೀವು ೩೩೦/೨೪ ಹೆಚ್ಚುಕಮ್ಮಿ ಗ೦ಟೆಗೆ ಸರಾಸರಿ ೧೫ಕಿ.ಮಿ. ಪರವಾಗಿಲ್ಲ ಕಣೋ ನೀವೆಲ್ಲ ಗಟ್ಟೀಗರು ತು೦ಬಾ ಕಷ್ಟ, ಅಬ್ಯಾಸ ಬೇಕು ಇಲ್ಲದಿದ್ದರೆ ಆಸನ ಬೇನೆ ಆಗುತ್ತದೆ. ಭಯ೦ಕರ ಸಾಹಸ ಭೇಷ ಆಗ್ರಜ ಮತ್ತು ತ೦ಡ!! ನಿನ್ನ ಬರವಣಿಗೆಗೆ ಶಿಪಾರಸ್ ಕೊಡುವ ಯೋಗ್ಯತೆ ನನಗಿಲ್ಲ ಆದರೆ ತಿಳಿ ಹಾಸ್ಯ, ಅಲ್ಲೊ೦ದು ಇಲ್ಲೊ೦ದು ಡೋಸು ಕೊಟ್ಟುಕೊ೦ಡು ಲಾಯಕದಲ್ಲಿ ಓದಿಸಿಕೊ೦ಡು ಹೋವುತ್ತು ಕತೆ. ಅಲ್ಲಲ್ಲಿ ಆಗೊ೦ದು ಈಗೊ೦ದು ತಾತ್ವಿಕ ಚಿ೦ತನೆಯ ತುಣುಕು ಹಾಕಿದರೆ ಇನ್ನೂ ಅರ್ಥಗರ್ಬಿತವಾದೀತು ನಿಮ್ಮ ಆಕಾ೦ಕ್ಶೇಗಳು ಅಲ್ಲದ? ಇರಲಿ, ಶ್ರೀ ಜಗನಾಥ ರೈಗಳು ಮತ್ತು ಇನ್ನೆ ಕೆಲವರು ಈ ತರಹ ಸೈಕಲ್ ಮಾಡಿದರೆ ಪ್ರಕೄತಿ ಉಳಿವಿಗೆ ಹೇಗೆ ಸಹಾಯ ಎ೦ದು ಸ೦ಶಯ ಪಟ್ಟಿದ್ದಾರೆ. ನನ್ನ ಅನುಭವದ ಒ೦ದು ಘಟನೆ ಹ೦ಚಿಕೊಳ್ಳುತ್ತೇನೆ. ದಯವಿಟ್ಟೂ ಇಲ್ಲಿ ಚಿಟಕಿ ಹೊಡೆಯಿರಿ: http://www.oregonstateparks.org/index.cfm?do=parkPage.dsp_parkPage&parkId=104 . ಒ೦ದಾನೊ೦ದು ಕಾಲದಲ್ಲಿ ಮರದ ದಿಮ್ಮಿ ಸಾಗಿಸಲೆ೦ದು ಬ್ರಿಟಿಶ್ರ ಕಾಲದಲ್ಲಿ ಹಾಕಿದ ರೈಲು ದಾರಿ ಇತ್ತು. ಕಾಲ ಕ್ರಮದಲ್ಲಿ ರೈಲು ಮುಚ್ಚಿ ಆ ದಾರಿ ಜನರ ನಡುಗೆ ರಸ್ತೆ ಆಗಿತ್ತು. ಅ೦ದರೆ hiking trail ದಾನೆ? ಸರಕಾರ ಆ ಕಾಡನ್ನು ಬೇಸಾಯ ಮಾಡಲು ಅನುಮತಿ ಕೊಟ್ಟಿತು. ಜನ ಅಕ್ಷೇಪ ಎತ್ತಿದರು. ಸರಕಾರ ಹೇಳಿತು ಈ ಜಾಗವನ್ನು ಜನರು ಉಪಯೋಗಿಸುತ್ತಾರೆ ಎ೦ದು ನಮಗೆ ನಿಗದಿ ಪಡಿಸಿದ ಸಮಯದಲ್ಲಿ ಖಾತ್ರಿ ಗೊಳಿಸಿದರೆ ನಾವು ಬೇಸಾಯ ಮಾಡುವ ಆಲೋಚನೆ ಬಗ್ಗೆ ಅಭಿಪ್ರಾಯ ಬದಲಾಯಿಸಬಹುದು ಎ೦ದು. ರೈಗಳೆ ನೋಡಿ ರಾತೋರಾತ್ರಿ ಕಾಡಿನ ರಸ್ತೆಯಲ್ಲಿ ಸೈಕಲ್ ಮಾಡಲು ಕಾಡನ್ನು ಊಳಿಸಲು ಜನ ಬನ್ನೀ ಎ೦ದರೆ ಎಲ್ಲಿ೦ದ ಬ೦ದಾರು ಸ್ವಾಮಿ ನೀವೇ ಹೇಳಿ. ನನ್ನ ಆಗ್ರಜನ ಹಾಗೆ ಜನರನ್ನು ಹುರಿದು೦ಬಿಸಿ ಸೈಕಲ್ ಮೇಟ್ಟುತ್ತಾ ಇದ್ದರೆ, ದ್ರೌಪದಿಯ ಕರೆಗೆ ಕೈಕೊಟ್ಟ ಅಲ್ಲ ಓಕೊಟ್ಟ ಶೀ ಕೃಷ್ಣ ನ೦ತೆ ಜನರು ಬರುತ್ತಾರೆ ಪಾಲು ಗೊಳ್ಳುತ್ತಾರೆ ಅಲ್ವೊ? ಹಾಗೆ ನಮ್ಮಲ್ಲಿ ಸರಕಾರ ಸವಾಲನ್ನು ಓಡ್ಡಿತು ಜನರು ವಾರ, ವಾರಾ೦ತ್ಯ ಎ೦ದು ನಡುಗೆ, ಸೈಕಲ್, ಕುದರೆ ಎಲ್ಲಾರಿತಿಯಲ್ಲಿ ಬ೦ದು ಸರಕಾರದ ಮಸ್ಸನ್ನು ಬದಲಾಯಿಸಿಭಿಟ್ಟರು. ಈಗ ಸರಕಾರ ಇಡೀರಸ್ತೆಗೆ ಡಾಮಾರ್ ಹಾಕಿ ಸೈಕಲ್, ಕುದುರೆ, ಬಡುಗೆ, Roller blade ಮು೦ತ ಯ೦ತ್ರರಹಿತ ಸವಾರಿಗೆ ಅನುಕೂಲ ಮಾಡಿಕೊಟ್ಟರು. ಕಾಡು ಕಡೆಯುವುದನ್ನು ಬಿಟ್ಟೂ ಅದ್ನ್ನು ಉದ್ದಾರ ಮಾಡಿದರು. ಹೀಗೆ ಸೈಕಲ್ ಬಿಟ್ಟು ಕಾಡು ಊಳಿಸಬಹುದು. ಪ್ರಾಮಾಣಿಕ ಜನ, ಪ್ರಾಮಾಣಿಕ ಸರಕಾರ ಸ೦ಮ್ಮಿಶ್ರಣದ ಪ್ರಾಮಾಣಿಕ ಪ್ರಯತ್ನ ಪ್ರಕೃತಿಯ ಕಾಯುವುದಯ್ಯ ಕೂಡಲಸ೦ಗಮ ದೇವಯ್ಯ

  ReplyDelete
 10. Saikaligarannu bhadisuva secret samasye "andu bene"mattu parihaara margagalannu bahiranga golisiddakke dhanyavaada.Idarinda mukthi padeyalu naanondu gel seat cover kondu swalpa mattina nemmadi padediddene.

  ReplyDelete
 11. ನಿಮ್ಮ ಲೇಖನ ಓದುತ್ತಾ ಒಮ್ಮೆಗೇ ಸೈಕಲ್ ಮಹಾಯಾನ ಮರುಯಾನವಾಯ್ತು. ಹಿಂದಿನ ದಿನವಷ್ಟೇ ಪರಿಚಯವಾಗಿದ್ದ ಜಗನ್ನಾಥ ರೈಗಳ ಸಹೃದಯತೆಯ, ಸರಳತೆಯ ಸಾಕ್ಷಾತ್ ಅನುಭವ ಈ ಮಹಾಯಾನದಲ್ಲಿ ನನಗಾಗಿದೆ. ಜಾಲಳ್ಳಿ ಕ್ರ‍ಾಸ್ ನಲ್ಲಿ ದೈತ್ಯ ಹಾಗೂ ವೇಗಿಗಳ ಭರಾಟೆಗೆ, ಮೊದಲೇ ಮಂಡಿನೋವು ಹಾಗೂ ಬಳಲಿಕೆಯಿಂದ ತತ್ತರಿಸುತ್ತಿದ್ದ (ಅಂಡುರಿ ಕೂಡಾ!) ನನಗೆ ಜೊತೆಯ ವೇಗಿ ಸೈಕಲ್ ಸವಾರರೊಂದಿಗೆ ಪೆಡಲ್ ಮಾಡುವುದು ಸಾಧ್ಯವಾಗದೇ ಸಿಗ್ನಲ್ ನಲ್ಲಿ ಹಿಂದೆ ಬಿದ್ದೆ. ಬಸ್ಸು ಹಾಗೂ ರಿಕ್ಷಾಗಳ ಓಟದ ಮಧ್ಯೆ ಅಡಕತ್ತರಿಯ ಮಧ್ಯದ ಅಡಕೆಯಂತಾದ ನಾನು ಅದೃಷ್ಟವಶಾತ್ ಕತ್ತರಿಸಲ್ಪಡದೇ ನುಗ್ಗಿ ಮುಂದೆ ಬಂದಾಗ ಜತೆಯವರು ಇನ್ನೊಂದು ಸಿಗ್ನಲ್ ದಾಟಿ ಆಗಿತ್ತು. ನಾನು ಒಂಟಿಯಾಗಿ ಈ ಸಾಗರದಲ್ಲಿ ಹೇಗೆ ಮುಂದುವರಿಯಲೆಂಬ ಯೋಚನೆಯಲ್ಲಿದ್ದಾಗ ನಾನು ಹಿಂದೆ ಬಿದ್ದದ್ದನ್ನು ಗಮನಿಸುತ್ತಿದ್ದ ಜಗನ್ನಾಥ ರೈಗಳು ಜೊತೆಯ ಸವಾರರೊಂದಿಗೆ ಚಲಿಸದೇ ನನಗಾಗಿ ಕಾದು ನಿಂತಿದ್ದು ನನಗೆ ಹುರಿದುಂಬಿಸಿ ನನ್ನ ಜೊತೆಗೇ ಬಂದರು....ನಾನು ಧನ್ಯವಾದ ತಿಳಿಸಿದಾಗ ನಕ್ಕು ಇದೆಲ್ಲಾ ಸಹಜ, ಜೊತೆಯಾಗಿಯೇ ಹೋಗೋಣ ಎಂದು ಆಸರೆಯಾದರು. ನನಗೆ ನಿಜವಾಗಿಯೂ ಹೃದಯ ತುಂಬಿ ಬಂದಿತ್ತು...
  ಈ ಮಹಾಯಾನದಲ್ಲಿ ಹಲವಾರು ವಿಷಯಗಳನ್ನು ನಾನು ಕಲಿತಿದ್ದೇನೆ. ಸೈಕಲ್ ಬಗ್ಗೆಯೇ ನನಗೆ ಅದೆಷ್ಟು ಮಾಹಿತಿಗಳು ದೊರೆತಿದೆ! ಆದರೆ ಬರಿಯ ಪೆಡಲ್ ಮತ್ತು ಪೆಡಲಿಂಗ್ ಮಾತ್ರ ಗುರಿಯಾಗಿದ್ದದ್ದು ಸೈಕಲ್ ಸವಾರಿಯ ಸಂದರ್ಭ ಮಾತ್ರ ದೊರೆಯುವ ಹಲವಾರು ಅನುಭವಗಳಿಂದ(ಪರಿಸರ, ಜನ, ಪ್ರಕೃತಿ, ಅಲ್ಲದೇ ಬಳಲಿಕೆಯ ಮಧ್ಯೆ ದೊರೆಯುವ ವಿಶ್ರಾಂತಿಯ ಚೇತೋಹಾರಿ ಅನುಭವ ಕೂಡಾ) ವಂಚಿತರಾಗಿದ್ದೇವೆಯೋ ಅನ್ನಿಸುತ್ತದೆ(ನನ್ನ ದೈನಂದಿನ ಹಾಗೂ ವಾರಾಂತ್ಯದ ಸೈಕ್ಲಿಂಗ್ ಗಳಲ್ಲಿ ಇವುಗಳಿಗೆ ತುಂಬಾ ಮಹತ್ವ ಇದೆ). ಯಾಕೆಂದರೆ ಸೈಕ್ಲಿಂಗ್ ಬರಿಯ ವ್ಯಾಯಾಮಕ್ಕಾಗಿ ಮಾತ್ರ ಸೀಮಿತವಾಗಬಾರದು, ಪರಿಸರದೊಂದಿಗಿನ ಒಡನಾಟವೂ ಆಗಬೇಕೆಂಬುದು ನನ್ನ ಅನಿಸಿಕೆ.

  ReplyDelete