17 March 2015

ಮಾರ್ಥಾ

ಅಧ್ಯಾ ನಲ್ವತ್ತೇಳು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತೊಂಬತ್ತನೇ ಕಂತು
ಆದರೆ, ಅವಳ ನಡಿಗೆಯನ್ನೂ ಅವಳು ಹೋಗುತ್ತಿದ್ದ ಸ್ಥಳವನ್ನೂ ಗ್ರಹಿಸಿ ಆಗಲೇ ಅವಳನ್ನು ಮಾತಾಡಿಸದಿದ್ದು, ಅವಳು ಎಲ್ಲಿಯವರೆಗೆ ಹೋಗಬಹುದೆಂದು ತಿಳಿಯಲೋಸ್ಕರವೇ ನಾವು ಅವಳನ್ನು ಮತ್ತೂ ಹಿಂಬಾಲಿಸ ತೊಡಗಿದೆವು. ಮಾರ್ಥಾಳು ಕೆಲವು ಸರ್ತಿ ಬೆಳಕಿನಲ್ಲೂ ಕೆಲವು ಸರ್ತಿ ಕತ್ತಲಲ್ಲೂ ದಾಟಿ, ಮುಂದುವರಿಸುತ್ತಾ ನದಿಗೆ ಸಮೀಪವಾಗತೊಡಗಿದಳು. ಇಷ್ಟರಲ್ಲೇ ಅವಳಿಗೆ ನಮ್ಮ ಕಾಲಸಪ್ಪಳ ಕೇಳಿರಬೇಕು. ಅವಳು ಹಠಾತ್ತಾಗಿ ಚುರುಕಾಗಿ ನಡೆಯುತ್ತಾ ನದಿಯ ಅಂಚಿನವರೆಗೂ ತಲುಪಿ, ಅಲ್ಲಿನ ಒಂದು ಬಂಡೆಯನ್ನೇರಿ ನಿಂತಳು. ಈ ಸಂದರ್ಭಗಳನ್ನು ನೋಡುವಾಗ ಅವಳು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ತೊಡಗಿದ್ದಂತೆಯೂ ತನ್ನೆದುರಿದ್ದ ನದಿಗೆ ಧುಮುಕುವವಳಾಗಿಯೂ ತೋರಿತು. ಅಷ್ಟರಲ್ಲೇ ನಾನು ಒಂದು ಕಡೆಯಿಂದಲೂ ಮತ್ತೊಂದು ಕಡೆಯಿಂದ ಮಿ. ಪೆಗಟಿಯೂ ಅವಳ ಪಕ್ಕಕ್ಕೆ ಹಾರಿ ಹೋಗಿ ಅವಳ ಒಂದೊಂದು ಕೈಯನ್ನು ಬಲವಾಗಿ ಹಿಡಿದುಕೊಂಡೆವು. ನಾನು “ಮಾರ್ಥಾ” ಎಂದು ಕರೆದದ್ದಕ್ಕೆ ಉತ್ತರ ಕೊಡದೆ ಶೂನ್ಯ ದೃಷ್ಟಿಯಿಂದ ಸುತ್ತಲೂ ನೋಡಿದಳು. ಅವಳಿಗೆ ತಾನೆಲ್ಲಿದ್ದೇನೆಂಬ ಪ್ರಜ್ಞೆಯೇ ಇಲ್ಲದಿತ್ತು. ಪುನಃ “ಮಾರ್ಥಾ” ಎಂದು ಕರೆದೆನು.

“ನನ್ನನ್ನೇಕೆ ತಡೆದು ನಿಲ್ಲಿಸಿದಿರಿ – ನಾನು ಬದುಕಿ ಪ್ರಯೋಜನವಿಲ್ಲ” ಎಂದನ್ನುತ್ತಾ ನಮ್ಮ ಗುರುತನ್ನು ಸ್ಪಷ್ಟಪಡಿಸಿಕೊಂಡಳು.
“ನೀನು ಹಾಗೆ ಗ್ರಹಿಸಬಾರದು, ಮಾರ್ಥಾ. ನಿನಗೆ ದುಃಖಗಳಿರಬಹುದು, ಆದರೆ ಆತ್ಮಹತ್ಯೆಯು ಅನ್ಯಾಯವಲ್ಲವೇ? ಮನುಷ್ಯರೆಲ್ಲರಿಂದಲೂ ಪ್ರಯೋಜನವಿದೆ. ನಿನ್ನಿಂದ ಸ್ವಲ್ಪ ಉಪಕಾರವನ್ನು ಬಯಸಿಯೇ ನಿನ್ನನ್ನು ಹುಡುಕುತ್ತಾ ನಾವು ಬಂದಿರುತ್ತೇವೆ. ನೀನು ಬದುಕಿರುವುದರಿಂದ ಜನರಿಗೆ ಪ್ರಯೋಜನವಿದೆ” ಎಂದು ನಾನು ಅವಳಿಗೆ ಸಮಾಧಾನ ಹೇಳಿದೆನು.
“ನನ್ನಿಂದ ಯಾರಿಗೂ ಪ್ರಯೋಜನವಿಲ್ಲ. ನಾನು ಯಾರಿಗೂ ಬೇಡವಾದವಳು. ಸಮಾಜಕ್ಕೇ ಹೇಯವಾದವಳು” ಎಂದು ಅವಳು ದುಃಖದಿಂದ ಹೇಳಿಕೊಂಡಳು.
“ಹಾಗೆ ಗ್ರಹಿಸಬಾರದು. ನಮ್ಮ ಎಮಿಲಿಯು ನಿನ್ನನ್ನು ಪ್ರೀತಿಸುತ್ತಿದ್ದಳಷ್ಟೆ. ಅವಳನ್ನು ಕುರಿತಾದ ಸ್ವಲ್ಪ ಕೆಲಸ ನಿನ್ನಿಂದಾಗಬೇಕಾಗಿದೆ, ಮಾರ್ಥಾ” ಎಂದು ಹೇಳುತ್ತಾ ನಾವು ಅವಳನ್ನು ಹುಡುಕಿದ ಕಾರಣವನ್ನು ಹೇಳಲು ಪ್ರಾರಂಭಿಸಿದೆನು.
“ಎಮಿಲಿಯು ನನ್ನನ್ನು ಪ್ರೀತಿಸುತ್ತಿದ್ದಳು ನಿಜ. ಆದರೆ, ಅವಳನ್ನು ಅಪಹರಿಸಿದುದರಲ್ಲಿ ನನಗೇನೂ ಕೈ ಇಲ್ಲವೆಂದು ಪ್ರಮಾಣ ಮಾಡಿ ಹೇಳುತ್ತೇನೆ. ಈಗ ನನ್ನಿಂದಾಗಬೇಕಾದುದೇನು?”

ಲಿಟ್ಮರನಿಂದ ನಾನು ತಿಳಿದಿದ್ದ ಸಂಗತಿಗಳನ್ನು ಅವಳಿಗೆ ಸೂಕ್ಷ್ಮವಾಗಿ ತಿಳಿಸಿ, ಅನಂತರ ಮುಂದುವರಿಯುತ್ತಾ ಅಂದೆ –
“ಮಾರ್ಥಾ, ಎಮಿಲಿಯು ತನ್ನ ಮಾವನ ಮನೆಯಿಂದ ಹೇಳದೇ ಹೋದ್ದರಿಂದ ತಾನಾಗಿಯೇ ಮರಳಿ ಬರಲು ಅಂಜಬಹುದು. ಆದ್ದರಿಂದ ಈಗ ಅವಳು ಲಂಡನ್ನಿನಲ್ಲೇ ಇರಬೇಕೆಂದು ಊಹಿಸುತ್ತೇವೆ. ಎಮಿಲಿಯನ್ನು ನೀನು ದಯಮಾಡಿ ಹುಡುಕಿಕೊಡಬೇಕು. ಇಷ್ಟನ್ನೇ ನಿನ್ನಿಂದ ನಾವು ಬಯಸುವುದು.”
“ಆಗಬಹುದು. ಎಮಿಲಿಯು ನನ್ನ ಸ್ನೇಹಿತೆಯಾದ್ದರಿಂದ ನನ್ನನ್ನು ಕಂಡು ಹೆದರಳು. ಅವಳನ್ನು ಹುಡುಕಿ ಹಿಡಿದು ನಿಮಗೆ ತಿಳಿಸುತ್ತೇನೆ” ಅಂದಳು.

ಈ ಹುಡುಕುವ ಖರ್ಚಿನ ಬಗ್ಗೆ ನಾನು ಸ್ವಲ್ಪ ಹಣ ಕೊಡಲು ಹೋದಾಗ ಹಣ ಬೇಡವೆಂದಳು. ಎಮಿಲಿಯ ಮೇಲಿನ ಅವಳ ಪ್ರೇಮವೇ ಅವಳ ಕಾರ್ಯಗಳ ಪ್ರತಿಫಲವೆಂದುಕೊಂಡು ನಮ್ಮನ್ನು ಬಿಟ್ಟು ತನ್ನ ದಾರಿಯಲ್ಲಿ ಹೊರಟು ಹೋದಳು.

ನಾನು ನಮ್ಮ ಮನೆಗೆ ತಲುಪುವಾಗ ಸಾಧಾರಣ ಮಧ್ಯ ರಾತ್ರಿಯಾಗಿತ್ತು. ಅತ್ತೆ ಮನೆ ಕಡೆಯಿಂದ ತುಂಬಾ ಬೆಳಕನ್ನು ಕಂಡು ನಾನು ಅತ್ತ ಕಡೆ ಹೋದೆನು. ಅತ್ತೆಯ ಮನೆ ಬಾಗಿಲು ತೆರೆದಿತ್ತು. ಒಳಗಿನ ಬೆಳಕು ರಸ್ತೆಗೆ ಬೀಳುತ್ತಿತ್ತು. ನಾನು ಅವಳ ಮನೆಗೆ ಸಮೀಪವಾಗುವಾಗ ರಸ್ತೆಯ ಕರೆಯಲ್ಲೊಬ್ಬನು ನಿಂತುಕೊಂಡು ಒಂದು ಬಾಟ್ಲಿಯಿಂದ ಏನೋ ಕುಡಿಯುತ್ತಿದ್ದನು. ಅವನು ಯಾರಿರಬಹುದೆಂದು ನಾನು ಅಡಗಿ ನಿಂತು ನೋಡುತ್ತಿದ್ದಾಗಲೇ ಅತ್ತೆಯು ಮನೆಯೊಳಗಿನಿಂದ ಬಂದಳು. ನಾನು ಮತ್ತಷ್ಟು ಅಡಗಿ ನಿಂತೆನು. ಅತ್ತೆಯು ಬಹು ಗಾಬರಿಗೊಂಡಂತೆ ಇದ್ದುದರಿಂದ ನಾನು ಅವಳ ಮನಸ್ಸು ನೋಯಿಸಬಾರದೆಂದು ಅಡಗಿ, ಅಗತ್ಯ ಬಿದ್ದರೆ, ಅವಳ ಸಹಾಯವೆಸಗಲು ಸಿದ್ಧನಾದೆ. ಬಂದಿದ್ದ ಮನುಷ್ಯನನ್ನು ಬೇಗ ಅಲ್ಲಿಂದ ಕಳುಹಿಸಬೇಕೆಂದು ತೋರುವಂತೆ ಅತ್ತೆಯು ಸ್ವಲ್ಪ ಹಣವನ್ನು ಲೆಕ್ಕ ಮಾಡಿ ಅವನಿಗೆ ಕೊಟ್ಟಳು. ಹಣ ಬಹಳ ಕಡಿಮೆಯಾಯ್ತೆಂದು ಅವನು ಆಕ್ಷೇಪಿಸಿದನು. ಅತ್ತೆಯ ಅಂದಿನ ಸ್ಥಿತಿಯಲ್ಲಿ ಅದಕ್ಕಿಂತ ಹೆಚ್ಚು ಕೊಡಲಾರಳೆಂದು ಅತ್ತೆ ತಿಳಿಸಿದಳು. ಆ ವ್ಯಕ್ತಿಯು ಕೋಪದಿಂದ –
“ಹಾಗಾದರೆ ನಿನ್ನ ಹಣವೇ ಬೇಡ. ನೀನೇ ತೆಗೆದುಕೋ, ಅದನ್ನು” ಎಂದಂದನು.
“ನನ್ನ ಹಣದ ಹೆಚ್ಚಿನ ಅಂಶವೆಲ್ಲ ಕಳೆದು ಹೋಗಿದೆ. ಅದಕ್ಕೂ ಮೊದಲು ನೀನೂ ನನಗೆ ಹೇರಳವಾದ ನಷ್ಟವನ್ನು ಒದಗಿಸಿರುತ್ತೀ. ನನ್ನನ್ನು ನೀನು ಹಿಂಸಿಸಿದೆ, ಅಪಮಾನಮಾಡಿದೆ. ಇನ್ನೂ ಸಹ ನೀನು ನನ್ನೆದುರು ಹೀಗೆ ನಿಂತು ಹಿಂಸೆ ಕೊಡಬೇಕಾದರೆ ನಿನ್ನ ಮನಸ್ಸು ಎಷ್ಟು ಕಠಿಣವಿರಬೇಕಪ್ಪಾ!” ಎಂದಂದಳು ಅತ್ತೆ.
“ಅಂತರಂಗ ಬಹಿರಂಗಗಳಲ್ಲೂ ನಾನು ಹೀನನಾಗಿದ್ದೇನೆಂದು ತಿಳಿದಲ್ಲವೇ ನೀನು ಇಷ್ಟೊಂದು ಹೀನೈಸಿ ಮಾತಾಡುವುದು? ಹಗಲು ಪೂರಾ ಅಡಗಿ ಕುಳಿತು, ರಾತ್ರಿ ಗೂಬೆಯಂತೆ ಜೀವಿಸುವ ನನ್ನ ಸ್ಥಿತಿಯನ್ನರಿತಲ್ಲವೇ ನೀನು ಹೀಗನ್ನುವುದು?” ಎಂದು ಅವನು ಪ್ರಶ್ನಿಸಿದನು.
“ನನ್ನ ಆಸ್ತಿ ಪಾಸ್ತಿಗಳ ಹೆಚ್ಚಂಶವನ್ನು ಹಾಳುಮಾಡಿ, ನಾನು ಪ್ರಪಂಚದಲ್ಲಿ ಯಾರನ್ನೂ ನಂಬದಂತೆ ನನ್ನ ಮನಸ್ಸನ್ನು ಕಲ್ಲಾಗಿಸಿ, ನೀನು ವಿಶ್ವಾಸಘಾತುಕನಾಗಿ, ಕೃತಘ್ನನಾಗಿ ಪುನಃ ಪುನಃ ಈ ರೀತಿ ಹಿಂಸೆ ಕೊಡುವ ಬದಲು, ಏಕಾಂತದಲ್ಲಿ ಪಶ್ಚಾತ್ತಾಪಪಡುತ್ತಾ ನಿನ್ನನ್ನು ನೀನೇ ಉದ್ಧರಿಸಿಕೊಳ್ಳುವ ಪ್ರಯತ್ನವನ್ನೇಕೆ ಮಾಡಬಾರದು? ಗುಣವಾಗುತ್ತ ಬರುತ್ತಿರುವ ನನ್ನ ಗಾಯಗಳನ್ನು ಕೆದರಿಸಬೇಡ” ಎಂದು ಅತ್ತೆ ದುಃಖ, ಕನಿಕರಗಳಿಂದ ಹೇಳಿಕೊಂಡಳು.
ಆತನು ಕೋಪಿಸಿಕೊಂಡು ಅಲ್ಲಿಂದ ಹೊರಟು ಹೋದನು. ನನಗವನು ದಾರಿಯಲ್ಲಿ ಎದುರು ಸಿಕ್ಕಿ ನಾವು ಒಬ್ಬರನ್ನೊಬ್ಬರು ನೋಡಿಕೊಂಡೆವು.

ಅನಂತರ ನಾನು ಉಪಾಯವಿಲ್ಲದೆ ಅತ್ತೆಯ ಎದುರಿಗೇ ಹೋದೆನು. ನನ್ನನ್ನು ಕಂಡಕೂಡಲೇ ಅತ್ತೆ ಅಂದಳು –
“ಟ್ರಾಟ್, ಅವನು ನನ್ನ ಗಂಡ.”
“ನಿನ್ನ ಗಂಡ ಜೀವಂತನಾಗಿಲ್ಲವೆಂದು ಗ್ರಹಿಸಿದ್ದೆನು!”
“ನನ್ನ ಮಟ್ಟಿಗೆ ಅವನು ಸತ್ತಿರುವಂತೆಯೇ – ನಿಜ.”
ಯಾವ ಮಾತನ್ನೂ ಆಡದೆ ನಾನು ಮೌನಿಯಾಗಿದ್ದೆ.
“ಟ್ರಾಟ್, ಕೇಳು – ನಿನ್ನೊಡನೆ ಹೇಳದಿರುವ ವಿಷಯವಿಲ್ಲ...” ಎಂದು ಹೇಳಿ ಅತ್ತೆ ಸ್ವಲ್ಪ ಸುಧಾರಿಸಿಕೊಂಡು, ಯಾವುದೋ ಒಂದು ವಿಷಯದಲ್ಲಿ ತನ್ನ ಆಖೈರು ನಿರ್ಧಾರವನ್ನು ಹೇಳುತ್ತಿರುವವಳಂತೆ ಹೇಳಿದಳು -
“ಅವನು ಸುಂದರನಾಗಿದ್ದ. ನಾನವನನ್ನು ಬಹುವಾಗಿ ಪ್ರೀತಿಸಿಯೇ ಮದುವೆಯಾದೆ. ನನ್ನ ಪ್ರೇಮದ ಪೂರ್ಣ ಸೇವೆಯೆಂದು ನನ್ನ ಸರ್ವಸ್ವವನ್ನು ಅವನಿಗೆ ಅರ್ಪಿಸಿದೆ. ಆದರೆ ಅವನು ಸ್ವೇಚ್ಛಾವರ್ತನೆಯಿಂದ ಜುಗಾರಿ, ಕುಡಿತ, ವ್ಯಭಿಚಾರಗಳಲ್ಲಿ ಬಿದ್ದು ಆಸ್ತಿ, ಮತ್ತು ಹಣವನ್ನೆಲ್ಲಾ ಕಳೆದುಕೊಂಡ. ನನ್ನನ್ನಲ್ಲದೆ ಇನ್ನೊಬ್ಬಳನ್ನೂ ಅವನು ವಂಚಿಸಿ ಮದುವೆಯಾಗಿದ್ದಾನೆಂದೂ ತಿಳಿದೆ. ಸರಕಾರ ಅವನ ಅನೇಕ ಅಪರಾಧಗಳಿಗಾಗಿ ಅವನನ್ನು ಹುಡುಕುತ್ತಾ ಇದೆ. ಆದ್ದರಿಂದ ಅವನು ಹಗಲೆಲ್ಲಾ ಅಡಗಿಯೇ ಜೀವಿಸುತ್ತಿದ್ದಾನೆ. ಅವನ ರಕ್ಷಣೆಗೆಂದು ನಾನು ಯಾವ ಕೆಲಸವನ್ನೂ ಮಾಡುತ್ತಿಲ್ಲ. ಅವನೇ ಅದನ್ನು ನೋಡಿಕೊಳ್ಳುತ್ತಾನೆ. ಆದರೆ ಅವನು ನನ್ನ ಅಪಾರವಾದ ಪ್ರೇಮದ ಒಂದು ಕುರುಹು ಆಗಿ ಉಳಿದಿರುವನಾದ್ದರಿಂದ ಅವನಿಗೆ ಶಿಕ್ಷೆ ಅಥವಾ ಅಪಮಾನವಾಗುವ ಪ್ರಸಂಗಗಳಿಂದ ತಪ್ಪಿಸಲು ನಾನು ಸದಾ ತಯಾರಿದ್ದೇನೆ. ನನ್ನ ತಾರುಣ್ಯದಲ್ಲಿ ನಾನು ಕಟ್ಟಿದ ಪ್ರೇಮಮಂದಿರವು ನನ್ನ ಮನೋರಾಜ್ಯದಲ್ಲಾದರೂ ಪರಿಶುದ್ಧವಾಗಿ ಉಳಿಯಲೆಂದು, ನಾನು ಅವನಿಗೆ ಬಾಹ್ಯದಲ್ಲಿ ಬಹು ಕಠೋರಳಾಗಿ ತೋರಿಸಿಕೊಳ್ಳುತ್ತಾ ಅಂತರಂಗದಲ್ಲಿ ಬಹು ಮೃದುವಾಗಿದ್ದೇನೆ. ನನ್ನ ಜೀವಮಾನದಲ್ಲೇ ಇದಕ್ಕಿಂತ ಹೆಚ್ಚಾದ – ಬೇರಾದ, ಯಾವ ಗುಟ್ಟು ನನ್ನಲ್ಲಿಲ್ಲ. ಇನ್ನು ನಾವು ಈ ವಿಷಯವನ್ನು ಎಂದೂ ಮಾತಾಡಕೂಡದು.”
(ಮುಂದುವರಿಯಲಿದೆ)

No comments:

Post a Comment