10 March 2015

ಸುದ್ದಿ

ಅಧ್ಯಾ ನಲ್ವತ್ತಾರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತೆಂಟನೇ ಕಂತು
ನನ್ನ ಮದುವೆಯಾಗಿ ಸಾಧಾರಣ ಒಂದು ವರ್ಷ ಕಳೆದಿರಬೇಕು. ಆಗ ಒಂದು ದಿನ ಸಂಜೆಯಲ್ಲಿ ನನ್ನ ಕೆಲಸ ಪೂರೈಸಿ ತಿರುಗಾಡುತ್ತಾ ಬರುವಾಗ ಸ್ಟೀಯರ್ಫೋರ್ತನ ಮನೆಯ ಸಮೀಪದ ರಸ್ತೆಯಲ್ಲೇ ಬಂದೆನು. ಹೆಚ್ಚಾಗಿ ನಾನು ಬೇರೆ ರಸ್ತೆಯಲ್ಲೇ ಹೋಗುತ್ತಿದ್ದರೂ ಆ ದಿನ ಮಾತ್ರ ಅಲ್ಲೆ ಬಂದೆನು. ಸ್ಟೀಯರ್ಫೋರ್ತನ ಮನೆಯಲ್ಲಾಗಲೀ ಮನೆ ಕಂಪೌಂಡಿನಲ್ಲಾಗಲೀ ಎಲ್ಲೂ ಜನರಿರಲಿಲ್ಲ. ಆ ವಠಾರವೇ ಹಾಳುಬಿದ್ದಂತೆ ತೋರುತ್ತಿತ್ತು. ಆ ಮನೆಯ ಕಿಟಕಿ ಬಾಗಿಲುಗಳೆಲ್ಲ ಮುಚ್ಚಿದ್ದುವು. ಆ ಮನೆಯ ಪರಿಚಯವಿಲ್ಲದಿದ್ದವರು ಅದನ್ನು ಹೊರಗಿನಿಂದ ನೋಡಿದ್ದರೆ ಮನೆಯ ಯಜಮಾನ ಮಕ್ಕಳು ಮರಿ ಸಂತಾನಗಳಿಲ್ಲದೆ ಒಬ್ಬನೇ ಇರುತ್ತಿದ್ದು, ಆತನೂ ಸಹ ಯಾರಿಗೂ ತಿಳಿಯದೆ ಸತ್ತು ಆ ಮನೆಯೊಳಗೆ ಅವನ ಹೆಣ ಬಿದ್ದು ಕೆಲವು ಕಾಲವಾಗಿದ್ದಂತೆ ತೋರಿ ಬರುತ್ತಿತ್ತು.

ನಾನು ಆ ಮನೆಯನ್ನು ನೋಡುತ್ತ ದಾಟಿ ಸ್ವಲ್ಪ ದೂರ ಹೋಗುವುದರೊಳಗೆ ಹಿಂದಿನಿಂದ ಯಾರೋ ನನ್ನನ್ನು ಕರೆಯುತ್ತಿದ್ದಂತೆ ಕೇಳಿ ನಾನು ಹಿಂತಿರುಗಿ ನೋಡುವಾಗ ಸ್ಟೀಯರ್ಫೋರ್ತನ ಮನೆ ಕೆಲಸದ ಹೆಂಗುಸು ಓಡಿ ಬರುವುದನ್ನು ಕಂಡೆನು. ನಾನು ನಿಂತು ಅವಳನ್ನು ವಿಚಾರಿಸಿದಾಗ ನನ್ನನ್ನು ಕಂಡರೆ ಒಂದಾವೃತ್ತಿ ಆ ಮನೆಗೆ ಬಂದು ಹೋಗಲು ತಿಳಿಸಬೇಕಾಗಿ ತನ್ನ ಯಜಮಾನಿ ಅವಳಿಗೆ ಅಪ್ಪಣೆಯಿತ್ತಿದ್ದಳೆಂದೂ ಹಾಗಾಗಿ ನನ್ನನ್ನು ಹೆಚ್ಚಾಗಿ ಕಾದೇ ಕುಳಿತಿರುತ್ತಿದ್ದಳೆಂದೂ ತಿಳಿಸಿದಳು. ಅವಳ ಮಾತನ್ನು ಅಂಗೀಕರಿಸಿ ನಾನು ಅವಳ ಹಿಂದೆಯೇ ಹೋದೆನು.

ಸ್ಟೀಯರ್ಫೋರ್ತನ ಮನೆ ಉನ್ನತವಾದ ಗುಡ್ಡೆಯ ಮೇಲಿದ್ದು, ಮನೆಯಿಂದಲೇ ಲಂಡನ್ ನಗರವನ್ನು ನೋಡಬಹುದಾದಂಥ ಸ್ಥಳದಲ್ಲಿತ್ತು. ಮನೆಯ ಸುತ್ತಲಿನ ಹೂದೋಟದ ಒಂದು ಮೂಲೆಯಲ್ಲಿ ಸುಂದರವಾದ ಒಂದು ಎತ್ತರದ ಮಂಟಪದ ಬೋಳುಪ್ಪರಿಗೆಯ ಮೇಲೆ ಮಿಸ್ ಡಾರ್ಟಲ್ಲಳು ಕುಳಿತು ಲಂಡನ್ ನಗರವನ್ನು ನೋಡುತ್ತಿದ್ದಳು. ಅದು ಎತ್ತರದ್ದೂ ಬೋಳೂ ಆಗಿದ್ದ ಮಂಟಪವಾಗಿದ್ದುದರಿಂದ ನಾನು ಮಿಸ್ ಡಾರ್ಟಲ್ಲಳನ್ನು ದೂರದಿಂದಲೇ ಕಾಣುತ್ತಿದ್ದೆನು. ಸೂರ್ಯ ಆಗ ತಾನೇ ಅಸ್ತಮಿಸಿದ್ದುದರಿಂದ ಪಶ್ಚಿಮ ದಿಗಂತ ಮತ್ತೂ ಸಾಧಾರಣ ನಡು ಆಕಾಶ ಸಹ ರಕ್ತ ವರ್ಣದ ಪ್ರಭೆಯಿಂದ ಆವೃತವಾಗಿತ್ತು. ಅಸ್ತಮಿಸಿದ್ದ ಸೂರ್ಯನಿಗೂ ನನಗೂ ನಡುವೆ ಮಿಸ್ ಡಾರ್ಟಲ್ಲಳು ಇದ್ದುದರಿಂದ ಆ ಮಂಟಪವೂ ಮಿಸ್ ಡಾರ್ಟಲ್ಲಳೂ ಆ ರಕ್ತ ಕೆಂಪಿನಲ್ಲಿ ಮುಳುಗಿದ್ದಂತೆ ತೋರುತ್ತಿದ್ದರು. ನನ್ನ ಕಾಲ ಸಪ್ಪಳವನ್ನು ಕೇಳಿ ಮಿಸ್ ಡಾರ್ಟಲ್ಲಳು ಹಿಂತಿರುಗಿ ನೋಡಿ ನನ್ನನ್ನು ಸ್ವಾಗತಿಸಲು ಎದ್ದು ನಿಂತಳು. ರೌದ್ರ ಕೆಂಪಿನ ಪ್ರಭೆಯಿಂದ ಆವೃತಳಾಗಿದ್ದ ಮಿಸ್ ಡಾರ್ಟಲ್ಲಳು ಆಗ ಮನುಷ್ಯಳಂತೆ  ತೋರಲಿಲ್ಲ – ಒಂದು ಭಯಂಕರ ಮೂರ್ತಿಯಂತೆ ತೋರಿದಳು. ಆಶಾಭಂಗ, ದ್ವೇಷ, ಹಠಗಳನ್ನು ಮಿಶ್ರ ಮಾಡಿ ಎರಕ ಹೊಯ್ದಿದ್ದ ಮಾರಣದೇವತೆಯ ಒಂದು ಮೂರ್ತಿಯಂತೆ ಇದ್ದಳು. ಲಂಡನ್ ನಗರದಲ್ಲಿನ ಸುಖ ಸಂತೋಷಗಳನ್ನೆಲ್ಲ ಗ್ರಹಿಸಿ ಅಸೂಯೆಪಟ್ಟು, ದ್ವೇಷ, ರೋಷದಿಂದ ಕುದಿಯುತ್ತಿದ್ದ ಭೀಕರ ಭಾವನೆಗಳು ಅವಳ ಮುಖದಲ್ಲಿ ತೋರುತ್ತಿದ್ದುವು.

ಸಾಂಪ್ರದಾಯಿಕವಾದ ಕುಶಲ ಪ್ರಶ್ನೆಗಳು ನಮ್ಮೊಡನೆ ನಡೆದನಂತರ ಅವಳ ಕಾರ್ಯ ನಿಮಿತ್ತವಾದ ಮಾತುಗಳನ್ನಾಡಲಾರಂಭಿಸಿದಳು. ಆದರೂ ಆ ಮಾತಿನ ಮಟ್ಟಿನಲ್ಲಿ ತಾತ್ಸಾರ, ಗರ್ವಗಳು ತುಂಬಿದ್ದುವು. ಹಠಾತ್ತಾಗಿ ಅವಳ ಮುಖ್ಯ ಉದ್ದೇಶವನ್ನೇ ಉದ್ದೇಶಿಸಿ –
“ಆ ಹುಡುಗಿ ಸಿಕ್ಕಿದಳೂ?” ಎಂದು ಕೇಳಿದಳು.
ಅವಳು ವಿಚಾರಿಸಿದ್ದು ಎಮಿಲಿಯನ್ನೆಂದು ನನಗೆ ಗೊತ್ತಿತ್ತು. ಹಾಗಾಗಿ ಸೂಕ್ಷ್ಮವಾಗಿಯೇ ನಾನಂದೆ –
“ಇಲ್ಲ” ಎಂದು.
“ಓಡಿ ಹೋದ ಕ್ರಮದಲ್ಲಿ ಮರಳಿ ಬರಬೇಕಾಗಿತ್ತಷ್ಟೆ!”
“ಇಲ್ಲ, ಬರಲಿಲ್ಲ” ನನ್ನ ಉತ್ತರ.
“ಅಂದರೆ ಮನೆ ಮಠ, ಸಾಕಿದವರು ಎಂದು ಗ್ರಹಿಸದೆ ಓಡಿದ ಹುಡುಗಿ ಅವನ ಜತೆಯಿಂದಲೂ ಓಡಿ ಬರಬೇಕಿದ್ದಿತಷ್ಟೆ.”
“ಅವಳು ಓಡಿ ಹೋದುದಲ್ಲ. ಅವಳನ್ನು ಓಡಿಸಿಕೊಂಡು ಹೋದುದು” ಎಂದು ನಾನಂದೆ.
“ಹಾಗಾದರೆ ಅವಳು ಸತ್ತಿರಬಹುದು” ಎಂದು ಮಿಸ್ ಡಾರ್ಟಲ್ಲಳು ಸಿಟ್ಟಿನಿಂದಲೇ ಹೇಳಿದಳು. ನನಗೆ ಸುಮ್ಮನಿರಲು ಮನಸ್ಸು ಬರದೆ ನಾನಂದೆ –
“ಸಾಯುವುದಿದ್ದರೆ ಅದೊಂದು ಅನುಗ್ರಹವೇ ಸರಿ ಅವಳಿಗೆ. ಅವಳು ಮರಣವನ್ನೇ ನಿರೀಕ್ಷಿಸುತ್ತಿರಬಹುದು.”
ಅವಳು ಸ್ವಲ್ಪ ಸಿಟ್ಟುಗೊಂಡಿದ್ದರೂ –
“ಇರಲಿ, ನಿನಗೊಂದು ಸುದ್ದಿ ಕೊಡಿಸುತ್ತೇನೆ. ಆದರೆ ಸುದ್ದಿ ತಂದವರೊಡನೆ ಕಾದಾಡಬೇಡ” ಎಂದಂದುಕೊಂಡು ನನ್ನನ್ನು ಸ್ವಲ್ಪ ದೂರ ಆ ಕಂಪೌಂಡಿನಲ್ಲೇ ಕರೆದು ಹೋಗಿ, ಅಲ್ಲಿದ್ದ ಲಿಟ್ಮರನನ್ನು ಕರೆದು, ಅವನಿಗೆ ಗೊತ್ತಿದ್ದಷ್ಟು ಸಂಗತಿಯನ್ನು ಹೇಳುವಂತೆ ಅಪ್ಪಣೆಯಿತ್ತಳು.
ಅವನು ತನ್ನ ಪೂರ್ವದ ಗಾಂಭೀರ್ಯದಿಂದ –
“ತಾಯಿ, ಮಿ. ಜೇಮ್ಸ್ ಸ್ಟೀಯರ್ಫೋರ್ತರು...” ಎಂದು ಪ್ರಾರಂಭಿಸುವಾಗಲೇ ಮಿಸ್ ಡಾರ್ಟಲ್ಲಳು...
“ಆ ವರ್ತಮಾನ ನನಗೆ ಅಗತ್ಯವಿಲ್ಲ.”
“ಸರ್, ಮಿ. ಜೇಮ್ಸ್ ಸ್ಟೀಯರ್ಫೋರ್ತರೂ ನಾನೂ ಅವಳ ಸಮೇತ ಅನೇಕ ದೇಶಗಳಲ್ಲಿ ತಿರುಗಾಡಿದೆವು. ಫ್ರಾನ್ಸ್, ಸ್ವಿಟ್ಸರ್ ಲೇಂಡ್, ಜರ್ಮನಿ, ಇಟಲಿ ಮೊದಲಾದ ದೇಶಗಳಲ್ಲಿ ತಿರುಗಾಡಿದೆವು. ನಾವು ಹೋದಲ್ಲೆಲ್ಲ ಅವಳ ಜನ್ಮಸಿದ್ಧವಾದ ಸೌಂದರ್ಯದ ಪ್ರಭಾವದಿಂದಲೂ ನಮ್ಮ ಯಜಮಾನರ ಸಂಸರ್ಗದಿಂದ ಉಂಟಾಗಿದ್ದ ಸಂಸ್ಕೃತಿಯಿಂದಲೂ ಅವಳು ಬಹು ಜನರನ್ನು ಆಕರ್ಷಿಸುತ್ತಿದ್ದಳು. ಅವಳು ಬಹು ಸುಂದರಿಯೆಂದೂ ಅಂಥ ಸುಂದರಿಯು ಬಹು ದುರ್ಲಭವೆಂದೂ ಅವಳನ್ನು ಪಡೆದವನೇ ಭಾಗ್ಯವಂತನೂ ಪ್ರತಿಭಾವಂತನೂ ಎಂದೂ ಜನರು ಮಾತಾಡಿಕೊಳ್ಳುತ್ತಿದ್ದರು. ಈ ರೀತಿ ಅವಳು ಜನರ ಪ್ರಶಂಸೆಗೂ ಗುಪ್ತಕಾಂಕ್ಷೆಗೂ ಭಾಗಿಯಾದಳು” ಎಂದು ಲಿಟ್ಮರನು ಗಂಭೀರವಾಗಿ. ಮಿಸ್ ಡಾರ್ಟಲ್ಲಳ ಆಸನವನ್ನು ಮಾತ್ರ ನೋಡುತ್ತಾ ಅದನ್ನು ಮಾತ್ರ ಉದ್ದೇಶಿಸಿ ಹೇಳುವವನಂತೆ ಹೇಳಿದನು. ಎಮಿಲಿಯ ಪ್ರಶಂಸೆಗಳನ್ನು ಕೇಳುತ್ತಿದ್ದ ಹಾಗೆ ಅವಳ ಮುಖದಲ್ಲಿ ಕ್ರೋಧ ಎದ್ದು ನಲಿಯುತ್ತಿತ್ತು. ಲಿಟ್ಮರನು ಮುಂದುವರಿಸುತ್ತಾ –
“ದಿನಗಳು ದಾಟಿದಂತೆ ಮಿ. ಜೇಮ್ಸರಿಗೆ ಬೇಸರ ಪ್ರಾರಂಭವಾಯಿತು. ಅವಳಿಗೂ ಹಾಗೆಯೇ ಆಗತೊಡಗಿರಬೇಕು. ಮಿ. ಜೇಮ್ಸರು ಎಂಥ ಹುಡುಗಿಯನ್ನೇ ಕುರಿತಾಗಿಯಾದರೂ ಹೆಚ್ಚು ದಿನ ಅನುರಕ್ತರಾಗಿರುವುದು ಕಡಿಮೆಯೇ ಆಗಿದ್ದರೂ ಇವಳ ಮಟ್ಟಿಗೆ ಹೆಚ್ಚಿನ ಸಹನೆ ತೆಗೆದುಕೊಳ್ಳುತ್ತಿದ್ದರು. ಅವಳು ಕೋಪಿಸಿಕೊಂಡಾಗ ಅದನ್ನು ಅವರು ಸಹಿಸಿ, ಅವಳನ್ನು ಶಾಂತಗೊಳಿಸಿ, ಅವಳ ಜತೆಯನ್ನು ಬಿಡದೆ ಇರುತ್ತಿದ್ದರಾದರೂ ಅವಳು ದುಃಖಿಸಿ ಬೇಸತ್ತಿದ್ದಾಗ ಅವರು ಅವಳನ್ನು ಬಿಟ್ಟು ಕೆಲವು ದಿನ ಬೇರೆ ಕಡೆಗಳಲ್ಲಿ ಸುಖವಾಗಿ ಮೆರೆದಿರುತ್ತಿದ್ದರು. ನಮ್ಮ ಯಜಮಾನರು ಈ ರೀತಿ ತಾಳ್ಮೆಯಿಂದ ವರ್ತಿಸಿ, ಅವಳನ್ನು ಸಾಕುತ್ತಾ ಬರುವಾಗಲೇ ಅವಳ ಹುಟ್ಟುಗುಣ ಬಿಡದೆ, ನಾವು ಸಮುದ್ರ ಕರಾವಳಿಗಳಿಗೆ ಹೋಗಬೇಕೆಂದು ಒತ್ತಾಯಿಸಿ, ನಾವು ಕೆಲವೊಮ್ಮೆ ಸಮುದ್ರ ಕರಾವಳಿಗೆ ಹೋಗಿ ಕೆಲವು ದಿನ ಅಲ್ಲಿರುವಂತೆಯೂ ಮಾಡುತ್ತಿದ್ದಳು. ಆದರೆ ಯಜಮಾನರ ಈ ಔದಾರ್ಯವನ್ನು ದುರುಪಯೋಗ ಪಡಿಸಿಕೊಂಡು ಅವಳು ಆ ಕರಾವಳೀ ಪ್ರದೇಶದ ದರಿದ್ರ ಜನರ ಸಂಪರ್ಕ ಬೆಳೆಸುತ್ತಲೂ ಅವರಂತೆಯೇ ತಾನಿರುತ್ತಲೂ ಕೊನೆ ಕೊನೆಗೆ ಯಜಮಾನರ ಜೀವನವನ್ನೇ ಅಪಹಾಸ್ಯಕರವಾಗಿಯೂ ದುಃಖದ ಒಂದು ಕಥೆಯಂತೆಯೂ ಮಾಡಿಬಿಟ್ಟಳು” ಎಂದು ಹೇಳಿದನು.

ಈ ಮಾತುಗಳು ನಡೆಯುತ್ತಿದ್ದ ಹಾಗೆಯೇ ದೀನ ದರಿದ್ರರು ಕುಲೀನ ಸಂಸ್ಕೃತರಿಗೆ ಕೊಡುತ್ತಿರುವ ಬಾಧೆಗಳನ್ನು ಗ್ರಹಿಸಿ ಗ್ರಹಿಸಿ ಮಿಸ್ ಡಾರ್ಟಲ್ಲಳು ತನ್ನ ಮುಖದ ಭಾವನೆಗಳಿಂದ ಕೋಪಾಗ್ನಿಯನ್ನು ಹೊರಹಾಕುತ್ತಿದ್ದಳು. ಲಿಟ್ಮರನು ಮತ್ತೂ ಹೇಳತೊಡಗಿದನು –
“ಅವಳ ಈ ವಿಧದ ದುರ್ವತನೆಯನ್ನು ಯಜಮಾನರು ಕೊನೆಗೆ ಸಹಿಸಲಾರದೆ ಅವಳನ್ನು ನೇಪಲ್ಸಿನ ಒಂದು ಹೋಟೆಲಿನಲ್ಲಿ ನನ್ನ ವಶಕ್ಕೆ ಒಪ್ಪಿಸಿ – ತಾನು ಒಂದೆರಡು ದಿನಗಳಲ್ಲೇ ಬರುವುದಾಗಿ ಅವಳಿಗೆ ಹೇಳಿ ನಂಬಿಸಿ, ಅಲ್ಲಿಂದ ಹೊರಟು ಹೋದರು. ಯಜಮಾನರು ಅವಳನ್ನು ನನಗೆ ಒಪ್ಪಿಸುವಾಗಲೇ ಅವಳಿಗೆ ಇಷ್ಟವಿದ್ದರೆ ಬೇರೆಯವರನ್ನು ಕೂಡಿಕೊಂಡು ಹೋಗುವುದಕ್ಕೆ ತನ್ನ ಆಕ್ಷೇಪ ಇಲ್ಲವೆಂದು ಅವಳಿಗೆ ತಿಳಿಸಬೇಕೆಂದೂ ನನಗೆ ಅಪ್ಪಣೆಯಿತ್ತರು. ಯಜಮಾನರು ಹೋದನಂತರ, ಅವರು ಹಿಂತಿರುಗಿ ಬರುವುದಿಲ್ಲವೆಂಬಷ್ಟನ್ನು ಮಾತ್ರ ಅವಳಿಗೆ ತಿಳಿಸಿದೆ. ಅವಳು ಅದನ್ನು ಕೇಳಿ ಮೊದಲು ಕೋಪಗೊಂಡಳು. ಅನಂತರ ದುಃಖಿಸಿ, ಅತ್ತಳು. ಕೊನೆಗೆ ಅತ್ತೂ ಅತ್ತೂ ಅವಳಿಗೆ ಹುಚ್ಚೇ ಹಿಡಿಯಿತು. ಹುಚ್ಚಿನಿಂದ ಪ್ರಾಣ ಕಳೆದುಕೊಳ್ಳುವುದರಲ್ಲೇ ಇದ್ದಳು. ಆಗ್ಗೆ ನಾನು ಅವಳನ್ನು ಮೂರು ದಿನ ಒಂದು ಕೋಣೆಯಲ್ಲಿ ಕೂಡಿಟ್ಟಿದ್ದೆ.”

ಈ ಮಾತುಗಳನ್ನು ಕೇಳುತ್ತಾ ಮಿಸ್ ಡಾರ್ಟಲ್ಲಳು ಸ್ವಲ್ಪ ಸಮಾಧಾನಕ್ಕೆ ಬಂದಿದ್ದವಳಂತೆ ತೋರಿದಳು. ಲಿಟ್ಮರನು ಮತ್ತೂ ಹೇಳತೊಡಗಿದನು –
“ಅವಳ ಹುಚ್ಚು ಇಳಿದ ಮೇಲೆ ಯಜಮಾನರು ಹೇಳಿದ್ದ ಮಾತುಗಳನ್ನು ಪೂರ್ಣವಾಗಿ ತಿಳಿಸಿದೆ. ಈ ಸಮಯದಲ್ಲೇ ಅವಳ ಪೂರ್ವ ಚರಿತ್ರೆ ಏನೇ ಇದ್ದರೂ ಅವಳ ಕೈ ಹಿಡಿಯಲು ತಯಾರಾಗಿ ಮುಂದೆ ಬಂದಿದ್ದ ಶ್ರೀಮಂತ ಜನರೇ ತುಂಬಾ ಇದ್ದರು. ಆ ಮಾರ್ಗವನ್ನು ನಮ್ಮ ಯಜಮಾನರು ಸೂಚಿಸಿದ್ದುದರಲ್ಲಿ ಅವರ ಔದಾರ್ಯ ಕಂಡು ಬರುತ್ತಿದೆ. ಆ ಮಾರ್ಗವು ಅವಳಿಗೂ ಯೋಗ್ಯವಿತ್ತು. ಆದರೆ, ಅವಳು ತನ್ನ ಹೀನ ಕುಟುಂಬದ ಒರಟುತನಕ್ಕೆ ಸರಿಯಾಗಿ ಆರ್ಭಟೆ ಕೊಟ್ಟು, ನನ್ನನ್ನು ಬೈದು, ಸಾಧ್ಯವಿದ್ದಿದ್ದರೆ ನನ್ನ ರಕ್ತವನ್ನೇ ಹೀರಿಬಿಡುವಂತೆ ಗದ್ದಲವೆಬ್ಬಿಸಿದಳು.” ಇದನ್ನೆಲ್ಲ ಲಿಟ್ಮರನು ಬಹು ನಿರುದ್ವಿಗ್ನತೆಯಿಂದ, ತನಗೆ ಇದರಲ್ಲಿ ಯಾವ ಸಂಬಂಧವೂ ಇಲ್ಲದವನಂತೆ, ನಿಧಾನವಾಗಿ ಹೇಳಿದನು. ಈ ಮಾತುಗಳನ್ನು ಕೇಳಿ –
“ಅವಳ ಉತ್ತಮ ಗುಣಗಳೆಷ್ಟಿವೆಯೆಂದು ಇದರಲ್ಲೇ ಕಾಣುತ್ತದಷ್ಟೆ.” ಎಂದು ನಾನು – ಬಹ್ವಂಶ ಸ್ವಗತವಾಗಿಯೇ, ಅಂದೆನು. ಲಿಟ್ಮರನು ಈ ಸ್ವಗತ ಮಾತುಗಳಿಗೆ ಉತ್ತರ ಕೊಡದಿದ್ದರೂ ತನ್ನ ಗಂಭೀರತೆಯ ದೃಷ್ಟಿಯಿಂದಲೇ –
“ಹಾಗೋ! ನಿಮ್ಮಂಥವರಿಗೇನು ಗೊತ್ತು – ಮೀಸೆ ಬರದಿದ್ದ ಹುಡುಗರಿಗೆ!” ಎಂದನ್ನುವಂತೆ ಕಾಣಿಸಿಕೊಂಡನು.

ಲಿಟ್ಮರನ ವರದಿ ಮತ್ತೂ ಇತ್ತು. ಅವನು ಅಂದನು –
“ಇಂಥ ಸಂದರ್ಭದಲ್ಲಿ ಅವಳನ್ನೇನು ಮಾಡುವುದೆಂದು ತಿಳಿಯದೆ, ಪುನಃ ಕೋಣೆಯಲ್ಲಿ ಬಂಧಿಸಿಟ್ಟೆ. ಆದರೆ, ಹಾಗೆ ಬಂಧಿಸಿದ ದಿನ ರಾತ್ರಿಯೇ ಅವಳು ತನ್ನ ಕೋಣೆಯ ಕಿಟಕಿಯಿಂದ ಕಿಟಕಿಯ ಬದಿಯ ದ್ರಾಕ್ಷೆ ಚಪ್ಪರಕ್ಕಾಗಿ, ನನ್ನನ್ನು ತಪ್ಪಿಸಿ ಓಡಿ ಹೋದಳು.”
“ಹೀಗಲ್ಲದೆ ಮತ್ತೇನು ತಾನೆ ಮಾಡುವಳು, ವಿಶ್ವಾಸಘಾತಕಿ!” ಎಂದಂದಳು ಮಿಸ್ ಡಾರ್ಟಲ್ಲಳು. ಲಿಟ್ಮರನು ಮುಂದುವರಿಸಿದನು –
“ಅನಂತರ ನಾನು ಈ ಎಲ್ಲಾ ಸಂಗತಿಗಳನ್ನೂ ಮಿ. ಜೇಮ್ಸರಿಗೆ ತಿಳಿಸಿದೆನು. ಅವರು ನನ್ನ ಶ್ರಮಗಳಿಗಾಗಿ ನನ್ನನ್ನು ಪ್ರಶಂಸಿಸುವ ಬದಲು ಬೈದರು – ಅಪಮಾನಪಡಿಸಿದರು. ಅದಕ್ಕಾಗಿ ನಾನು ಅವರನ್ನು ಬಿಟ್ಟು ಹೊರಟಿದ್ದೇನೆ. ನಾನು ಉಂಡು ತಿಂದು ಇದ್ದ ಮನೆ, ಎಂದು ಇಲ್ಲಿಗೆ ಸದ್ಯ ಬಂದಿದ್ದೇನೆ. ಅಗತ್ಯವಿದ್ದವರಲ್ಲಿ ಕೆಲಸಕ್ಕೆ ಸೇರಲು ತಯಾರಿದ್ದೇನೆ” ಎಂದು ಹೇಳಿ ಮೌನವಾಗಿ ನಿಂತನು.

ಲಿಟ್ಮರನ ಹತ್ತಿರ ಮಾತಾಡಬಾರದೆಂದೇ ನಾನು ಮೊದಲು ಗ್ರಹಿಸಿದ್ದರೂ ಈಗ ಎರಡು ಪ್ರಶ್ನೆ ಕೇಳಿಬಿಡೋಣವೆಂದು ತೋರಿತು. ಹಾಗಾಗಿ ನಾನು ಕೇಳಿದೆ –
“ನಮ್ಮ ಕಡೆಯ ಕೆಲವು ಪತ್ರಗಳು ಬರಲಿಲ್ಲವೇ?”
ಲಿಟ್ಮರನು ಗಂಭೀರವಾಗಿ ನುಡಿದನು –
“ಯಜಮಾನ-ಸೇವಕರ ಸಂಬಂಧದಲ್ಲಿ ಪತ್ರ ವ್ಯವಹಾರಗಳನ್ನು ಕುರಿತು ಹೇಳುವುದೂ ಕೇಳುವುದೂ ಅನುಚಿತವು. ಅವರ ಸರ್ವಸಾಮಾನ್ಯವಾದ ಧೋರಣೆಯನ್ನು ಮಾತ್ರ ಹೇಳಬಹುದು. ಅವಳ ಊರಿನ ಕಡೆಯ ಪತ್ರಗಳು ಅವಳ ಮನಸ್ಸಿನ ಶಾಂತಿಗೆ ಭಂಗ ತರುವುವೆಂಬ ಅಭಿಪ್ರಾಯ ಅವರದು.”
“ಇನ್ನೇನೂ ವಿಚಾರಿಸತಕ್ಕದ್ದಿಲ್ಲವಷ್ಟೆ?” ಎಂದು ಮಿಸ್ ಡಾರ್ಟಲ್ಲಳು ನನ್ನನ್ನು ಕೇಳಿದಳು.
“ವಿಶೇಷವೇನೂ ಇಲ್ಲ. ಆದರೆ, ಈತ ಮಹಾ ಪೋಲಿ, ಈ ಅನ್ಯಾಯ ಕಾರ್ಯಗಳಲ್ಲೆಲ್ಲ ಸಹಕರಿಸಿದ ಅನ್ಯಾಯ ಸಹಭಾಗಿ. ಈ ಅನ್ಯಾಯಗಳನ್ನೆಲ್ಲ ನಾನು ಮಿ. ಪೆಗಟಿಗೆ ತಿಳಿಸಬೇಕಾಗಿದೆ. ಇವನು ಎಮಿಲಿಯ ಬಂಧುಗಳ ಸಮೀಪ ಹೋಗದಿರುವುದು ಒಳ್ಳೆಯದೆಂದು ಮಾತ್ರ ತಿಳಿಸಬೇಕಾಗಿದೆ” ಎಂದು ನಾನು ತಿಳಿಸಿದೆನು.  

ಲಿಟ್ಮರನು ಹಠಾತ್ತಾಗಿ ಚುರುಕಾದನು. ಅವನ ಗಾಂಭೀರ್ಯ ನಮ್ರತೆಗಳಿಗೆ ಭಂಗ ಬರದ ಕ್ರಮದಿಂದ ಉತ್ತರವಿತ್ತನು –
“ತಮ್ಮ ಹಿತಚಿಂತನೆಯ ಬಗ್ಗೆ ನನ್ನ ವಂದನೆಗಳು, ಸರ್. ಆದರೆ ತಮಗೇ ಗೊತ್ತಿರಬಹುದು, ಸರ್. ಈ ದೇಶದಲ್ಲಿ ಗುಲಾಮರೂ ಗುಲಾಮರ ಮೇಸ್ತ್ರಿಗಳೂ ಇಲ್ಲವೆಂಬುದು! ಮತ್ತು ಸರ್, ಸರಕಾರವೇ ಕೈಕೊಳ್ಳಬೇಕಾದ ಕಾರ್ಯವನ್ನು ಜನ ಕೈಕೊಂಡದ್ದಾದರೆ ಅಂಥವರು ತಮ್ಮ ಮೈ ಕೈ ಮುರಿಸಿಕೊಳ್ಳಬೇಕಾದೀತು – ಅಲ್ಲವೇ ಸರ್?”
ಇಷ್ಟು ಮಾತಾಡಿ ಲಿಟ್ಮರನು ಮೆಲ್ಲಗೆ ಮಾಯವಾದನು.

ಲಿಟ್ಮರನು ಹೋದನಂತರ ಮಿಸೆಸ್ ಸ್ಟೀಯರ್ಫೋರ್ತಳ ಭೇಟಿಯಾಯಿತು. ಅವಳ ಮುಖ ಬಹಳ ಸೊರಗಿ ಹೋಗಿತ್ತು. ಅವಳ ತಲೆ ಕೂದಲು ಮೊದಲಿಗಿಂತ ಹೆಚ್ಚು ನರೆದಿತ್ತು. ಆದರೂ ಶ್ರೀಮಂತಿಕೆ, ಕುಲೀನತೆಯ ಪ್ರಭೆ ಮೊದಲಿನಂತೆಯೇ ಕಂಡು ಬರುತ್ತಿತ್ತು. ಅವಳೂ ಸಹ ಮಾತುಗಳನ್ನೆಲ್ಲ ಬಹು ಕಡಿಮೆ ಮಾಡಿಕೊಂಡಿದ್ದಳು. ನನ್ನನ್ನು ಕೇಳಿದಳು –
“ಆ ಹೆಣ್ಣು ಈಗ ಎಲ್ಲಿದೆ?”
“ಎಲ್ಲಿದ್ದಾಳೆಂದು ಗೊತ್ತಿಲ್ಲ. ಲಿಟ್ಮರನು ಹೇಳಿದ್ದಕ್ಕಿಂತ ಹೆಚ್ಚಿನದೇನೂ ನನಗೆ ಗೊತ್ತಿಲ್ಲ.”
“ಅವಳು ಸತ್ತಿರಬಹುದೆಂದು ಊಹಿಸಲೂಬಹುದು. ಆದರೆ ಅಂಥವರು ಸಾಯುವುದೇ ಅಪರೂಪ. ಅವಳ ಕಪ್ಪು ಕಣ್ಣು, ಚಂದದ ಮುಖ ಇವೆಲ್ಲ ಇನ್ನೊಬ್ಬರನ್ನು ಹಾಳುಮಾಡುವುದಕ್ಕಾಗಿಯೇ ಇರುವಂಥವು. ನನ್ನ ಮಗನನ್ನು ತನ್ನ ಬಲೆಯಲ್ಲಿ ಹಾಕಿಕೊಂಡು ತಾಯಿ ಮಕ್ಕಳನ್ನು ಬೇರೆ ಮಾಡಿದ ವಿಷ ಜಂತುವೇ ಅದು. ಇನ್ನಾದರೂ ಅವಳು ನನ್ನ ಮಗನ ದೃಷ್ಟಿಗೆ ಬೀಳದಿದ್ದರೆ ಸಾಕಿತ್ತು.”

ಆಗ ನಾನು ಸ್ವಲ್ಪ ವಿವರವಾಗಿ ಉತ್ತರವೀಯಬೇಕಾಯಿತು.
“ಅಮ್ಮಾ ನೀವು ತಾಯಿ-ಮಕ್ಕಳ ಅಗಲುವಿಕೆಯ ದುಃಖವನ್ನು ನಾನು ಅರಿತಿರುವೆನು. ನಾನೂ ಅದರಲ್ಲಿ ದುಃಖಿಸುವೆನು. ಇತರ ವಿಷಯಗಳ ಮಟ್ಟಿಗೆ ನನಗೂ ನಿಮಗೂ ತುಂಬಾ ಅಭಿಪ್ರಾಯ ಬೇಧವಿದೆ. ನನ್ನಿಂದ ನಿಮಗೇನಾದರೂ ಕೆಲಸವಾಗಬೇಕಿದ್ದರೆ ತಿಳಿಸಿ” ಎಂದಂದೆನು.
“ನಿನ್ನಿಂದಾಗಬೇಕಾದುದು ವಿಶೇಷ ಏನೂ ಇಲ್ಲ. ಆದರೆ, ಆ ಹುಡುಗಿಯ ತಂದೆಯೋ ಮಾವನೋ ಯಾರೋ ಒಬ್ಬ ಒರಟ ಇಲ್ಲಿಗೆ ಬಂದಿದ್ದನಲ್ಲಾ – ನೀನು ಕರೆದುಕೊಂಡು ಬಂದಿದ್ದೆಯಲ್ಲಾ, ಅವನನ್ನು ಕಂಡರೆ, ಅವನು ಪುನಃ ನನ್ನ ಮಗನನ್ನು ಹಾಳುಮಾಡದಂತೆ ನೀನು ದಯಮಾಡಿ ನೋಡಿಕೊಳ್ಳಬೇಕೆಂದು ಕೇಳಿಕೊಳ್ಳಬೇಕಾಗಿದೆ” ಎಂದು ಮಿಸೆಸ್ ಸ್ಟೀಯರ್ಫೋರ್ತಳು ಅಂದಳು.      

ಈ ಮಾತುಗಳಿಗೆ ವಿಶೇಷ ಉತ್ತರ ಕೊಡದೆ,
“ಆ ಹೆದರಿಕೆ ನಿಮಗೆ ಬೇಡಮ್ಮಾ. ನಿಮ್ಮ ಮಗನ ಬಾಂಧವ್ಯದ ಸಂಬಂಧ ಹಾಗಿರಲಿ, ನಿಮ್ಮ ಕೈಯ್ಯಿಂದ ಒಂದು ಗ್ಲಾಸು ನೀರನ್ನು ಸಹ ಆ ಸಂಸಾರದವರು ಮುಟ್ಟರು” ಎಂದಷ್ಟೆ ಹೇಳಿದೆನು. ಇದರಿಂದ ಮಿಸೆಸ್ ಸ್ಟೀಯರ್ಫೋರ್ತಳು ಸಿಟ್ಟುಗೊಳ್ಳಲಿಲ್ಲ. ಅವಳ ಜೀವನದ ಕ್ರಮಗಳಿಗನುಸಾರವಾಗಿ, ನನ್ನ ಮದುವೆ, ನನ್ನ ಕಾದಂಬರಿಗಳನ್ನೂ ಮತ್ತಿತರ ಸರ್ವಸಾಮಾನ್ಯ ವಿಷಯವನ್ನು ಕುರಿತು ಕೆಲವು ಮಾತುಗಳನ್ನಾಡಿ ನನ್ನನ್ನು ಕಳುಹಿಸಿಕೊಟ್ಟಳು.

ನಾನು ಒಂದೆರಡು ದಿನಗಳಲ್ಲೇ ಮಿ. ಪೆಗಟಿಯನ್ನು ಹುಡುಕಿ ಹಿಡಿದೆನು. ಮಿ. ಪೆಗಟಿ ಎಮಿಲಿಯನ್ನು ಹುಡುಕಿ ಬಚ್ಚಿ ಬೇಸತ್ತಾಗ ಕುಳಿತು ವಿಶ್ರಮಿಸಿಕೊಳ್ಳಲೋಸ್ಕರ ಒಂದು ಕೋಣೆಯನ್ನು ಲಂಡನ್ನಿನಲ್ಲೇ ಬಾಡಿಗೆಗೆ ಮಾಡಿಕೊಂಡಿದ್ದರು. ಅಲ್ಲಿ ಅವರೊಡಣೆ, ಅವರಿಗೆ ಸಿಟ್ಟು ಬರದ ರೀತಿಯಲ್ಲಿ ನಾನು ತಿಳಿದ ವರ್ತಮಾನಗಳನ್ನೆಲ್ಲ ತಿಳಿಸಿದೆನು. ಅವರು ಸ್ವಲ್ಪ ಸಂತೋಷಪಡುತ್ತಾ -

“ಹಾಗಾದರೆ ಎಮಿಲಿಯು ಜೀವಂತಳಾಗಿದ್ದಾಳೆಂಬುದು ನಿಜ. ಹೆದರಿಯೂ ನಾಚಿಕೆಪಡುತ್ತಲೂ ದಾರಿ ಸಿಗದೆಯೂ ಅವಳು ಕಷ್ಟ ಪಡುತ್ತಿರಬೇಕು, ಅಲ್ಲವೇ ಮಾಸ್ಟರ್ ಡೇವಿ?” ಎಂದು ಕೇಳಿದರು.
“ಹೌದು, ಅವಳು ಲಂಡನ್ನಿಗೆ ಬಂದು, ಎಲ್ಲೋ ನಿಂತು, ಮುಂದೆ ದಾರಿ ತೋಚದೆ ಕಷ್ಟಪಡುತ್ತಿರಬಹುದು” ಎಂದು ನಾನುತ್ತರವಿತ್ತೆ.
“ಹಾಗಾದರೆ ನಾವು ಅವಳನ್ನು ಹುಡುಕುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು.
ಮಾರ್ಥಾಳು ಯಾರ್ಮತ್ತನ್ನು ಬಿಟ್ಟು ಲಂಡನ್ನಿನಲ್ಲಿದ್ದಾಳೆಂಬುದು ನಮಗಿಬ್ಬರಿಗೂ ಗೊತ್ತಿತ್ತು. ಅವಳಿರುವ ಸ್ಥಳವನ್ನೂ ನಾವು ಸ್ವಲ್ಪ ಮಟ್ಟಿಗೆ ಅಂದಾಜು ಮಾಡಿದ್ದೆವು. ಹಾಗಾಗಿ ನಾನಂದೆ –
“ನಾವು ಹುಡುಕಬೇಕು – ಅದೂ ಶೀಘ್ರದಲ್ಲೇ ಆಗಬೇಕು. ಎಮಿಲಿಯ ಪ್ರೀತಿಗೆ ಪಾತ್ರಳಾದ ಮಾರ್ಥಾಳನ್ನು ನಾವು ಮೊದಲು ಹುಡುಕಿ ಹಿಡಿಯೋಣ. ಅವಳ ಮುಖಾಂತರ ನಾವು ಮುಂದಿನ ಕೆಲಸಗಳನ್ನು ಮಾಡಬಹುದು.”

ನಮ್ಮೊಳಗೆ ಇಷ್ಟು ಮಾತು ನಡೆಯುವಾಗ ರಾತ್ರಿಯಾಗಿತ್ತು. ನಾವು ಆಗ ರಾತ್ರಿಯೆಂದು ಸುಮ್ಮನಿರದೆ ಮಾರ್ಥಾಳನ್ನು ಹುಡುಕುತ್ತಾ ಹೊರಟೆವು. ಹಾಗೆ ರಾತ್ರಿ ಜನರು ಕಡಿಮೆಯಿದ್ದ, ದೀನ ದರಿದ್ರರು ಹೆಚ್ಚಾಗಿ ವಾಸಿಸುತ್ತಿದ್ದ ಕೆಲವು ಸ್ಥಳಗಳಲ್ಲಿ ಅವಳನ್ನು ಹುಡುಕುತ್ತಾ ಅಲ್ಲಲ್ಲಿ  ನಿಂತು ದಾರಿಗರನ್ನು ದೃಷ್ಟಿಸಿ ನೋಡುತ್ತಾ ಬಂದಾಗ, ದೂರದಲ್ಲಿ ಒಂದು ಕಡೆ ನಾವು ಮಾರ್ಥಾಳನ್ನು ಕಂಡೆವು. ಅವಳೊಡನೆ ಜನರಿರುವಲ್ಲಿ ಮಾತಾಡಬಾರದೆಂದೇ ಅವಳನ್ನು ಹಿಂಬಾಲಿಸುತ್ತಾ ನಾವು ನಡೆದೆವು. ಅವಳು ರಾಜ ರಸ್ತೆಗಳನ್ನು ಬಿಟ್ಟು ಅಡ್ಡ ರಸ್ತೆಗಳಿಗಾಗಿ ನದಿಯ ಕಡೆಗೆ ಹೋಗತೊಡಗಿದಳು. ನಾವು ಅವಳನ್ನು ಹಿಂಬಾಲಿಸಿ ನಡೆದೆವು. ಇಲ್ಲಿ ಜನಸಂದಣಿಯೂ ವಾಹನ ಚಲಾವಣೆಯೂ ಬಹು ಕಡಿಮೆಯಾಗಿತ್ತು. ರಸ್ತೆಯ ಅಗಲ ಕಡಿಮೆಯಾಗಿದ್ದುದರಿಂದಲೂ ರಸ್ತೆಯ ಇಬ್ಬದಿಗಳಲ್ಲೂ ಎತ್ತರದ ಕಟ್ಟಡಗಳಿದ್ದುದರಿಂದಲೂ ಇಲ್ಲಿ ಇತರ ಕಡೆಗಳಿಗಿಂತ ಹೆಚ್ಚು ಕತ್ತಲೆಯಾಗಿತ್ತು. ಇಂಥ ಸ್ಥಳದಲ್ಲೇ ನಾವು ಮಾರ್ಥಾಳನ್ನು ಮಾತಾಡಿಸಲು ಅನುಕೂಲವಾದ ಒಂದು ಸ್ಥಳವನ್ನು ಕಂಡುಕೊಂಡೆವು.
(ಮುಂದುವರಿಯಲಿದೆ)

No comments:

Post a Comment