ಕುದುರೆಮುಖದಾಸುಪಾಸು
– ೮
“ಬರುವಾಗ ಆದಿತ್ಯವಾರ ತಡ ರಾತ್ರಿಯಾದೀತು,
ಎಂದಿದ್ದ ಸಮೀರ. ಅದು ಬಿಟ್ಟು ಇವತ್ತಿನ (ಸೋಮವಾರ) ಮೊದಲ ಬಸ್ಸುಗಳು ಬಂದ ಮೇಲೂ ಗಂಟೆ ಹನ್ನೊಂದಾದರೂ
ತಂಡ ಯಾಕೆ ಬರಲಿಲ್ಲ?” ವಿಠಲ ರಾಯರ ಪ್ರಶ್ನೆ. ಎಂಟೂವರೆಯಿಂದಲೇ ಅಂಗಡಿ ತೆರೆಯಲು ಕಾದಿದ್ದ ಪ್ರಕಾಶ (ನನ್ನ ಅಂದಿನ ಸಹಾಯಕ)
ಆಕಾಶ ನೋಡಿದ. [ಅವನಿಗೇನು ಗೊತ್ತು - ಕಾಲಗರ್ಭದಲ್ಲಿ ಮುಂದೊಂದು ದಿನ ತನಗೂ ಇಂಥದ್ದೇ ಸನ್ನಿವೇಶ ಬಂದೀತೆಂದು!
ನೋಡಿ: ಬೆಳ್ಳಿಧಾರೆಯಗುಂಟ ಇಳಿಯುವ ನಂಟೇ?] ವಿಠಲರಾಯರು
ವಿಚಾರಣೆ ಮುಂದುವರಿಸಿದಾಗ, ತಂಡ ಕುದುರೆಮುಖದಾಸುಪಾಸು ಎಲ್ಲೋ ಹೋಗಿರುವುದು, ಹೆಚ್ಚಿನ ವಿವರಗಳು ನನಗೆ
ನಕ್ಷೆ ತೋರಿಸಿದ ಭೂ-ವಿಜ್ಞಾನಿಗೆ ಗೊತ್ತಿರಬಹುದು ಎಂದೆರಡು ಸುಳುಹು ಸಿಕ್ಕಿತು. ಇವರು ಆ ಅಧಿಕಾರಿಯನ್ನು
ಕಚೇರಿಯಲ್ಲಿ ಸಂಪರ್ಕಿಸಿ, ಚರ್ಚಿಸಿ ಮಧ್ಯಾಹ್ನ ಒಂದು ಗಂಟೆಗೆ ಹೆಚ್ಚಿನ ಸಿದ್ಧತೆಗಳೊಡನೆ ಸೇರಲು ನಿಶ್ಚಯಿಸಿದರು.
ಆ ಪ್ರಕಾರ ವಿಠಲರಾಯರು, ಭೂ ವಿಜ್ಞಾನಿ, ಪ್ರಕಾಶ ಮತ್ತಿನ್ಯಾರಾದರೂ ಆಸಕ್ತರು ಸೇರಿದ ತಂಡ, ಬೆಳ್ತಂಗಡಿಗೆ
ಹೋಗಿ ತನಿಖೆಗಿಳಿಯುವುದೆಂದಿತ್ತು.
ಹೌದೇ, ನಾವು ಕಳೆದು ಹೋಗಿದ್ದೆವೇ? ಹಿಂದಿನ
ಅಪರಾತ್ರಿಯಲ್ಲಿ, ದಿಕ್ಕರಿಯದ ಕಗ್ಗಾಡಿನಲ್ಲಿ, ಭೋರ್ಗರೆವ ಜಲಪಾತ್ರೆಯಲ್ಲಿ, ತಿನ್ನಲೇನೂ ಉಳಿದಿಲ್ಲ,
ಶ್ರಮ-ನಿದ್ದೆಗಳ ಹೊಯ್ಲಿನಲ್ಲಿ, ವಿಶ್ರಾಂತ್ರಿಗೆ ನೆಚ್ಚುವ ಠಾವಿಲ್ಲ ಎನ್ನುವ ಸ್ಥಿತಿಯಲ್ಲಿ ನಮಗೂ
ಹಾಗನ್ನಿಸಿತ್ತು. ಆದರೆ ಅದೇ ಬೆಳಗ್ಗೆ ಹಿರಿಮರುದುಪ್ಪೆ ಜಯಿಸಿ, ಬಂಗಾರುಬಳಿಗ ಮೆಟ್ಟಿ, ಉಪ್ಪಿನಗುಡ್ಡ
ಅಡರುವವರೆಗೆ ಇದ್ದ ಧೈರ್ಯ ಎಲ್ಲಿ ಕಳೆದುಹೋಯ್ತೆಂದು ನಾವೂ ಹುಡುಕೋಣ ಬನ್ನಿ.
ದರೆಯ ಅಂಚಿನಲ್ಲಿ ಹುಡುಕುನೋಟ ಬೀರುತ್ತಾ
ನಡೆದಿದ್ದ ನಮ್ಮಿಬ್ಬ ಶೋಧಕರಿಗೆ ಅಲ್ಲೊಂದು ಸುಳುಹು ಕಾಣಿಸಿತು. ಎಲ್ಲೋ ಶತಮಾನದ ಹಿಂದೆ ಆ ಜಾಗದಲ್ಲಿ
ಉಪ್ಪಿನಗುಡ್ಡೆಯ ಗೋಡೆಮೈಯಲ್ಲಿ ಒಂದು ದೊಡ್ಡ ಅಂಶ ಜರಿದು ಬಿದ್ದಿರಬೇಕು. ಆ ಹಳಕು ಋತುಮಾನಗಳ ಶುಶ್ರೂಷೆಯಲ್ಲಿ ಗಾಯ ಮಾಸಿ,
ಸ್ಥಿರಗೊಂಡು, ಶಿಖರಸಾಲಿನಿಂದ ತಕ್ಷಣದ ಕೊಳ್ಳಕ್ಕೊಂದು ತೀವ್ರ ಇಳುಕಲಿನ ಸೇತುವಾಗಿಯೇ ರೂಪುಗೊಂಡಿತ್ತು.
ನಮಗೆ ಕುಸಿತದ ಅಂಶ ಕಳೆದ ಮೇಲಿನ ನೆಲ ಅಸ್ಪಷ್ಟ ಇಣುಕುನೋಟಕ್ಕೆ ದಕ್ಕಿತ್ತು. ಅಲ್ಲಿ ಹುಲ್ಲ ಹರಹಿನ
ತೀವ್ರ ಇಳಿಜಾರೇ ಕಾಣಿಸಿದ್ದರಿಂದ ನಾವು ಇಳಿಯುವ ನಿರ್ಧಾರ ಮಾಡಿದೆವು. ಸೇತುವನ್ನು ವನ್ಯ ಜಾನುವಾರುಗಳು
ಬಳಸಿದ ಲಕ್ಷಣವಿರಲಿಲ್ಲ. ಹಾಗಾಗಿ ಕೊರಕಲು, ಅಸ್ಥಿರ ಬಂಡೆಗುಂಡುಗಳನ್ನು ದಟ್ಟ ಹುಲ್ಲು, ಪೊದರು ಆವರಿಸಿತ್ತು.
ಆಳೆತ್ತರದ ಹುಲ್ಲನ್ನು ಕೈಯಲ್ಲಿ ಬಗಿದು, ಕುರುಚಲು ಪೊದರುಗಳನ್ನು ಕಾಲಲ್ಲಿ ಮೆಟ್ಟಿ, ಮುಳ್ಳಿಲ್ಲದಲ್ಲಿ
ಭುಜಕೊಟ್ಟು ನುಗ್ಗುನುರಿ ಮಾಡಿ, ಅನಿವಾರ್ಯವಾದಲ್ಲಿ ಕತ್ತಿಯನ್ನೂ ಪ್ರಯೋಗಿಸಿ ಬಲು ಎಚ್ಚರದಿಂದ ಇಳಿದೆವು.
ಪ್ರತಿ ಮುಂದಿನ ಹೆಜ್ಜೆಯನ್ನು ಅನಿರೀಕ್ಷಿತಕ್ಕೆ ಮುಕ್ತವಾಗಿಟ್ಟು, ದೃಢಗೊಂಡ ಮೇಲೇ ಹಿಂದಿನದನ್ನು
ಕಳಚುತ್ತಿದ್ದೆವು. ಎಷ್ಟೋ ಬಾರಿ ಏಣಿ ಇಳಿಯುವವರಂತೆ, ಭದ್ರ ಹುಲ್ಲೋ ಹೊದರೋ ಆಧರಿಸಿ ಹಿಮ್ಮುಖದಲ್ಲಿ
ಜಾರಿ ಕಾಲೂರುವ ನೆಲೆ ಕಂಡುಕೊಂಡದ್ದೂ ಇತ್ತು. ಸುತ್ತುವರಿದ ಮರೆಯೇನಿದ್ದರೂ ಅನಿಶ್ಚಿತ ಪ್ರಪಾತದಾಳಕ್ಕಿಳಿಯುವ
ಮನೋಸ್ಥಿತಿ ನಮ್ಮಲ್ಲಿ ಅನೇಕರನ್ನು, ಅನಗತ್ಯ ದುರ್ಬಲರನ್ನಾಗಿಸಿತ್ತು. ಅವರನ್ನು ಬಗೆತರದಲ್ಲಿ ಒಲಿಸಿಕೊಂಡು,
ಹೆಚ್ಚಿನ ಆಧಾರ ಒದಗಿಸಿಕೊಂಡು ಕುಸಿತದ ಅಂಶ ಕಳೆದು ನಿಜ ನೆಲವನ್ನು ತಲಪುವಾಗ ಅಪರಾಹ್ನ ಎರಡೂವರೆ ಗಂಟೆಯೇ
ಆಗಿತ್ತು.
ಎಲ್ಲರ ಬಳಿಯೂ ನೀರು ಖಾಲಿಯಾಗಿತ್ತು. ಬಾಯಾರಿಕೆ,
ಬಳಲಿಕೆ, ತರಚಲು ಗಾಯಗಳ ಪಟ್ಟಿಗೆ ಹಸಿವೂ ಸೇರಿಕೊಂಡಿತ್ತು. ಉಪ್ಪಿನಗುಡ್ಡೆಯ ಶಿಖರ ಸಾಲು ಈಗ ನಮ್ಮ
ಕಣ್ಣಿಗೆ ಎಟುಕದಷ್ಟು ಎತ್ತರದಲ್ಲಿತ್ತು. ಬಲು ಆಳದ ಜಾರು ಮೈಯ ಕೊನೆಯಲ್ಲೆಲ್ಲೋ ಎಂಬಂತೆ ಕಾಡು, ಅರ್ಥಾತ್
ನೀರಾಶ್ರಯವಿರುವ ನೆಲೆ ಕಾಣಿಸುತ್ತಿತ್ತು. ಆದರೂ ಅದೃಷ್ಟ ಪೂರ್ತಿ ನಮ್ಮ ಕೈ ಬಿಟ್ಟಿರಲಿಲ್ಲ. ಅಲ್ಲೇ
ಶಿಖರದಂಚಿನಿಂದ ಒಂದು ಸಪುರ ನೀರಧಾರೆ ಕೆಳ ಬೀಳುತ್ತಿದ್ದುದನ್ನು ಗುರುತಿಸಿದೆವು. ಅದು ಗಾಳಿಯಾಟಕ್ಕೆ
ಸಿಕ್ಕು, ಚದುರಿ ವಿರಳ ಹನಿಗಳಷ್ಟೇ ನಮ್ಮನ್ನು ತಟ್ಟುತ್ತಿತ್ತು. ಆದರೆ ಆಕಾಶಗಂಗೆಯನ್ನು ಜಟಾಜೂಟದಲ್ಲಿ
ಧರಿಸಿದ ಮಹಾಶಿವನಂತೆ ಅಲ್ಲೊಂದು ಭಾರೀ ಮರ ಈ ಜಲಧಾರೆಯನ್ನು ಹಿಡಿಯುತ್ತಿತ್ತು. ನೀರು ಮರದ ಬೀಳಲು,
ಜೊಂಡುಗಳಗುಂಟ ಅಲ್ಲಿಲ್ಲಿ ತೊಟ್ಟಿಕ್ಕಿ, ಕೆಲವೆಡೆ ನಿಶ್ಶಬ್ದ ಧಾರೆಯಾಗಿ ಭುವಿಗಿಳಿದು ಮಾಯವಾಗುತ್ತಿತ್ತು.
ನಾವು ಇದ್ದುದರಲ್ಲಿ ಉತ್ತಮ ಧಾರೆಯ ಬೀಳಲೊಂದರ ಬುಡದಲ್ಲಿ ನಮ್ಮ ಪಾತ್ರೆಯನ್ನು ನೀರ ಸಂಗ್ರಹಕ್ಕೆ ಇಟ್ಟು,
ಹುಡಿ ಅವಲಕ್ಕಿ ಮುಕ್ಕಿದೆವು. ಮತ್ತೆ ಒಲೆ ಹೂಡಿ, ನೀರು ಕಾಯಿಸಿ ಬಿಸಿ ಕೊಕ್ಕೋ ಮಾಡಿ ಕುಡಿದು ಶಕ್ತಿ
ಸಂಚಯಿಸಿದೆವು. ಹೆಚ್ಚು ವೇಳೆಗಳೆಯದೆ ನಮ್ಮ ನೀರಂಡೆಗಳಲ್ಲೂ ತುಸು ನೀರು ಸಂಗ್ರಹಿಸಿಕೊಂಡು ಇಳಿದಾರಿಯಲ್ಲಿ
ಗಂಭೀರವಾಗಿ ತೊಡಗಿದೆವು.
ನಕ್ಷೆ ಪ್ರಕಾರ ಇನ್ನೇನು ಮೂರೂವರೆ ಮೈಲು
ದೂರದ ಕಿಲ್ಲೂರಿಗೆ ಕತ್ತಲಾಗುವ ಮುನ್ನ, ಅಂದರೆ ಸುಮಾರು ಎರಡೂವರೆ ಗಂಟೆಯಲ್ಲಿ ತಲುಪುವುದಷ್ಟೇ ನಮ್ಮ
ಗುರಿ. ಆ ಭಾಗ ಸ್ಪಷ್ಟವಾಗಿ ಜನಸಂಪರ್ಕ ಮತ್ತು ದೊಡ್ಡ ವನ್ಯ ಜಾನುವಾರುಗಳ ಓಡಾಟವೂ ಇಲ್ಲದ್ದು. ಯಾವುದೇ
ಜಾಡು ಇರಲಿಲ್ಲ. ಶ್ರೇಣಿಯ ಮೇಲಿನಿಂದ ವರ್ಷಾನುಗಟ್ಟಳೆ ಉದುರಿದ ಕಲ್ಲು, ಮಣ್ಣುಗಳ ಸಡಿಲ ರಾಶಿ ಅದು.
ನಮ್ಮ ಹೆಜ್ಜೆ ಯಾವಾಗಲೂ ಅಸ್ಥಿರ. ಸದಾ ಮುಗ್ಗರಿಸುವ ಹೆದರಿಕೆ ಮೂಡಿಸುವ ಇಳುಕಲು. ಹುಲ್ಲು, ಭಾರೀ
ಬಂಡೆಗಳ ಆಧಾರ ಸಿಕ್ಕುತ್ತಿದ್ದರೂ ಎರಡು ಕಾಲ ಬಲ ನೆಚ್ಚುವುದಕ್ಕಿಂತ ಅಂಡೂರಿ ಜಾರಿದವರೇ ಹೆಚ್ಚು.
(ಮನೆಗೆ ಮರಳಿದ ಮೇಲೆ ಕೆಲವರು ಅಂದಿನ ಪ್ಯಾಂಟನ್ನು ಹಿರಿಮರುದುಪ್ಪೆಯ ಸ್ಮರಣೆಗಷ್ಟೇ ಉಳಿಸಿಕೊಂಡರಂತೆ!)
ಚುರುಕಿನವರನ್ನೂ ನಿಧಾನಿಗಳನ್ನೂ ಸುಧಾರಿಸಿಕೊಂಡು, ಕಣ್ಣಳವಿಯಲ್ಲೇ ಕಾಡುತ್ತಿದ್ದ ಕಿಲ್ಲೂರನ್ನು ಜಪಿಸುತ್ತ
ಇಳಿದೆವು. ಆದರೆ ಇಳಿದಷ್ಟೂ ತಪ್ಪಲಿನ ಕಾಡು ಆಳಕ್ಕೆ ಜಾರುತ್ತಿದ್ದಂತೆಯೂ ವಿಸ್ತಾರ ಹೆಚ್ಚಿಸಿಕೊಳ್ಳುತ್ತಾ
ಆಚಿನ ಊರನ್ನು ದೂರಕ್ಕೆ ತಳ್ಳುತ್ತಿರುವಂತೆಯೂ ಭಾಸವಾಗತೊಡಗಿತು. ಒಂದು ಹಂತದಲ್ಲಿ ಊರು ಕಣ್ಮರೆಯೇ
ಆಯ್ತು. ಸೂರ್ಯ ನಮ್ಮ ಹಿಂದಣ ಶ್ರೇಣಿಯ ಮರೆಗೆ ಸರಿದ ಪ್ರಭಾವ ದಟ್ಟವಾಗತೊಡಗಿತು. ಇಳಿಜಾರು ತುಸು ಹಗುರಾಗುತ್ತಿದ್ದಂತೆ
ಪೊದರು, ವಿರಳ ಮರಗಳ ವಲಯ ತೊಡಗಿತು. ಎರಡು ಕಾಲಿನ ಮೇಲೇ ಧೈರ್ಯದ ಇಳಿನಡೆ ಸಾಧ್ಯವಾಯ್ತು. ಇನ್ನೇನು
ಮಟ್ಟಸ ಭೂಮಿ ಬಂತೆಂದೂ ದಾಪುಗಾಲಿಕ್ಕುತ್ತಿದ್ದಂತೆ ಧುತ್ತೆಂದು ಎದುರಾಯ್ತೊಂದು ಕೊಳ್ಳ. ಕನಿಷ್ಠ ಎಪತ್ತೆಂಬತ್ತಡಿ
ಆಳ ಕಾಣಿಸುತ್ತಿದ್ದ ಇನ್ನೊಂದೇ ಸಹಜ ಗೋಡೆಸಾಲು.
ಲಂಬಕೋನ ಮೀರಿದ, ಇಳಿಯಲಾಗದ ಆಳವದು. ಎಡಬಲದಲ್ಲಿ ಕಣ್ಣೆಟಕುವರೆಗೂ ಬಿಡುಗಡೆಯ
ಅವಕಾಶಗಳು ಕಾಣಿಸಲಿಲ್ಲ. ಬಲಬದಿಯ ಏಣು ಕಳೆದಾಚೆ ಕಣಿವೆಯಿಂದೆಲ್ಲೋ ನೀರಿನಬ್ಬರದ ಸದ್ದು ಕೇಳುತ್ತಿತ್ತು.
ಝರಿಪಾತ್ರೆಯಲ್ಲಿ ಇಳಿ-ಜಾಡರಸುವುದು ಸುಲಭವಾಗಬಹುದೆಂದು, ಪೊದರು ಬೇಧಿಸಿ ಅತ್ತ ಸರಿದೆವು. ನಮ್ಮ ಅಂದಾಜು
ತಪ್ಪಿತ್ತು – ಅದೊಂದು ಪಕ್ಕಾ ಜಲಪಾತ, ಸವಾಲು ಇನ್ನೂ ಕಠಿಣವಾಗಿತ್ತು. ಅನಿವಾರ್ಯವಾಗಿ ಬಲು ಎಚ್ಚರದಿಂದ
ಮೇಲಂಚಿನಲ್ಲೆ ತೊರೆಯನ್ನು ದಾಟಿ, ಮುಂದಿನ ಏಣುಗಳನ್ನು ಉತ್ತರಿಸುತ್ತ ಮುಂದುವರಿದೆವು. ಉಪ್ಪಿನಗುಡ್ಡದ
ಪ್ರಪಾತದಂಚಿನಲ್ಲಿ ಇಳಿಜಾಡು ಹುಡುಕಿದಂತೆ ಇಲ್ಲೂ ಏನಾದರೂ ಅವಕಾಶ ಸಿಕ್ಕೀತೆಂಬ ಆಸೆಯೇ ನಮ್ಮ ಕೈದೀವಿಗೆ.
ಎರಡೆರಡು ಏಣು, ಕಣಿವೆ, ತೊರೆ, ಪೊದರಜಾಲ ಎಂದು ಸುಧಾರಿಸುವಲ್ಲಿ ಹೇಗೋ ಪ್ರಪಾತದ ತಳ ಸೇರಿದ್ದೆವು.
ಹಾಗೆ ದಟ್ಟಾರಣ್ಯವನ್ನು ಸೇರುವುದರೊಡನೆ ಗಾಢಾಂಧಕಾರ ಕವಿಯುವುದೂ ಪೂರ್ಣಗೊಂಡಿತ್ತು.
ತೆರೆಮೈಯಲ್ಲಿ ಪೂರ್ಣ ಚಂದ್ರನ ಸಹಕಾರವಿತ್ತು,
ಕಾಡಿನೊಳಗೆ ಇಲ್ಲ. ನಮ್ಮ ಮಿಣುಕು ಟಾರ್ಚ್ ಕುರುಚಲು, ತರಗೆಲೆಗಳ ಮರೆಯ ಅಪಾಯವನ್ನು ಸ್ಪಷ್ಟಪಡಿಸುವಲ್ಲಿ
ಸೋಲುತ್ತಿದ್ದುವು. ಒಂದು ಕೈಯಲ್ಲಿ ಟಾರ್ಚ್ ಮತ್ತೊಂದು ಕೈಯಲ್ಲಿ ಕತ್ತಿ ಸಾವರಿಸಬೇಕು. ಆಕಸ್ಮಿಕಗಳಲ್ಲಿ
ಆಧರಿಸಿಕೊಳ್ಳಲು ಕೈ ಬಿಡುವಿಲ್ಲ, ತುಸು ಓಲಾಡಿದರೂ ತೂರಾಡಿಸುವ ಬೆನ್ನಹೊರೆ ಬೇರೆ. ಪ್ರತಿ ಎದುರು
ಹೆಜ್ಜೆಗೂ ಸ್ಥಿರತೆ ಇದ್ದರಷ್ಟೇ ಹಿಂದಿನದು ಕೀಳುವ ಎಚ್ಚರ ವಹಿಸಿದ್ದೆವು. ದಿನದ ಬಳಲಿಕೆಗೆ ಮನಗೊಟ್ಟು
ತಪ್ಪು ಹೆಜ್ಜೆಯಿಡದಂತೆ, ಪರಿಸರದ ಸದ್ದುಗಳಲ್ಲಿ ವ್ಯತ್ಯಾಸ ಗಮನಿಸುತ್ತ ಮುಂದುವರಿದೆವು. ಹಗಲು ಬೆಟ್ಟದ
ತೆರೆಮೈಗಳಲ್ಲಿ ಮೇಯುವ ಎಲ್ಲಾ ವನ್ಯ ಜಾನುವಾರು ವಿಶ್ರಾಂತಿಗೆ ದಟ್ಟ ಕಾಡು ನುಗ್ಗುವುದು ನಮಗೆ ತಿಳಿದಿತ್ತು.
ಅಲ್ಲಿ ಅವುಗಳ ಶ್ರವಣ ಮತ್ತು ಗ್ರಹಣ ಸಾಮರ್ಥ್ಯ ಎಷ್ಟೆಂಬ ಅರಿವೇನೂ ಇಲ್ಲದ ಹುಂಬರು ನಾವು. ಹಾಗಾಗಿ
ನಮ್ಮ ಬರೋಣ ಅಂಥವಕ್ಕೇನಾದರೂ ಅನಿರೀಕ್ಷಿತವಾದರೆ, ಮತ್ತವು ಧಾಳಿಯಿಟ್ಟರೆ ಎಂಬ ಭಯ ನಮ್ಮದು. ವಾಸ್ತವದಲ್ಲಿ
ನಾವು ಮೌನವಾಗಿದ್ದರೂ ನಮ್ಮ ಜೀವಚಟುವಟಿಕೆಯನ್ನು (ಏದುಸಿರು, ಕೆಮ್ಮು, ಪೊದರು ನುರಿಯುವ, ಒಣಕಡ್ಡಿ
ಮೆಟ್ಟುವ, ನಡೆಯ ದಡಬಡ, ದೇಹವಾಸನೆ ಇತ್ಯಾದಿ) ಅವು ಬಹಳ ಮೊದಲೇ ಗ್ರಹಿಸಿ, ಹೆಚ್ಚಿನ ಸನ್ನಿವೇಶಗಳಲ್ಲಿ
ಜಾಗ ಖಾಲಿ ಮಾಡುತ್ತವೆ. ಆದರೆ ನಾವು ಆ ಕಾಲದ ಅನುಭವದ ಮಿತಿಯಲ್ಲಿ ಹುಯ್ಲು, ಇದ್ದೊಂದೆರಡು ಪಟಾಕಿ
ಸುಡುವುದು ನಡೆಸಿಯೇ ಸಾಗಿದ್ದೆವು. ಹಗಲು ಆಸುಪಾಸಿನ ಶಿಖರಗಳನ್ನು ನೋಡಿ, ನಕ್ಷೆ ಹೊಂದಿಸಿ ನಡೆ ನಿರ್ಧರಿಸಬಹುದಿತ್ತು.
ಕಾಡೊಳಗಿನ ಗಾಢಾಂಧಕಾರದಲ್ಲಿ ಐಸ್ಕಾಂತೀಯ ದಿಕ್ಸೂಚಿಯೊಂದೇ ನಮಗಿದ್ದ ಭರವಸೆ. ಬಹುಶಃ ಅದೂ ಇಲ್ಲವಾಗಿದ್ದರೆ
ಜಾಡರಸುವ ಗಡಿಬಿಡಿಯಲ್ಲಿ ನಮ್ಮ ಪ್ರಗತಿ ಸೊನ್ನೆ ಸುತ್ತುತ್ತಿತ್ತೋ ಏನೋ! ಅಲ್ಲಲ್ಲಿ ಅಡ್ಡವಾಗುವ ತೊರೆ,
ಗೊಸರು, ವಾಟೆ ಹಳು, ಸಮೃದ್ಧ ತರಗೆಲೆ ದಾಟುವಾಗೆಲ್ಲ ನಮಗೆ ಹರಿದಾಡುವ ಜಂತುಗಳ ಭಯವೂ ಕಾಡುತ್ತಿತ್ತು.
ಅವೆಲ್ಲ ಕಳೆದು ಅಷ್ಟೇನೂ ಕಡಿದಾಗಿಲ್ಲದ ದೊಡ್ಡದೊಂದು ಝರಿ ಪಾತ್ರೆ ಸೇರಿದೆವು. ಇಲ್ಲೊಂದು ಸಣ್ಣ ಉಪಕಥೆ.
ಏರಿಕಲ್ಲಿನ
ತಪ್ಪಲಲ್ಲಿ… ಪ್ರಸ್ತುತ ಹಿರಿಮರುದುಪ್ಪೆ ಅನುಭವಕ್ಕೂ ಕೆಲವು ವರ್ಷಗಳ ಹಿಂದಿನ ಅನುಭವವಿದು.
ಡಾ| ರಾಘವೇಂದ್ರ ಉರಾಳರೊಡನೆ ಕಾರೇರಿ ನಾವು - ಪಂಡಿತಾರಾಧ್ಯ, ಜನಾರ್ದನ ಪೈ ಮತ್ತು ಯೇತಡ್ಕ ಸುಬ್ರಹ್ಮಣ್ಯ
ಭಟ್, ಚಾರ್ಮಾಡಿ ಘಾಟಿಗೆ ಹೋಗಿದ್ದೆವು. ಎಂಟನೇ ಹಿಮ್ಮುರಿ ತಿರುವಿನಲ್ಲಿ ಕಾರಿಳಿದು, ಸುಮಾರು ಐವತ್ತಡಿ
ಆಳದ ತೊರೆ ದಾಟಿ, ಒಂದೆರಡು ಗಂಟೆಯ ಆರೋಹಣದಲ್ಲಿ `ಏರಿಕಲ್ಲು’ ಜಯಿಸಿ, ಸಂಜೆಗೆ ಮರಳುವ ಅಂದಾಜು ನಮ್ಮದು.
ಆದರೆ ಏರೋಣ ಕಠಿಣವಾಗಿ, ಇಳಿಯುವಲ್ಲಿ ದಾರಿ ತಪ್ಪಿ ವಿಳಂಬವಾಗಿ, ಕಗ್ಗತ್ತಲೆಯಲ್ಲಿ ಸಿಕ್ಕಿಬಿದ್ದೆವು.
ಯಾರೂ ಟಾರ್ಚ್ ಒಯ್ದಿರಲಿಲ್ಲ. ನಮ್ಮಲ್ಲಿ ದೂಮಪಾನಿಗಳೂ ಇರಲಿಲ್ಲ. ಆದರೆ ರಸಾಯನ ಶಾಸ್ತ್ರ ಪಂಡಿತ
- ಜನಾರ್ದನ ಪೈ, ಹಿಂದಿನ ದಿನ ಪ್ರಯೋಗಾಲಯದಲ್ಲಿ ಮರೆತು ಜೇಬಿಗಿಳಿಸಿದ್ದ ಬೆಂಕಿಪೊಟ್ಟಣವೇನೋ ನೆನಪಿಗೆ
ಬಂತು. ಆದರೆ ಕಡ್ಡಿಗಳು ಕೆಲವೇ ಇವೆ ಎಂದೂ ತಿಳಿಯಿತು.
ಅದನ್ನು ತುರ್ತು ಪರಿಸ್ಥಿತಿಗುಳಿಸಿಕೊಂಡು
ದಾರಿಸೇರಲು ಹೊಳಹು ಹಾಕಿದೆವು. ಕಿವಿ ಹರಿತ ಮಾಡಿ, ತೊರೆಯ ಸದ್ದು ಗ್ರಹಿಸಿ ಅತ್ತ ಸರಿಯ ತೊಡಗಿದೆವು.
ಮುಂದಾಳಾಗಿ ನಾನು ಕೈಯಲ್ಲೊಂದು ಕಾಡ ಬಡಿಗೆ ಹಿಡಿದಿದ್ದೆ. ದಿಕ್ಕಂದಾಜಿಸಿ, ಅಕ್ಷರಶಃ ಕಣ್ಣಿಲ್ಲದವರಂತೇ
ಕೋಲಾಡಿಸಿ, ಅಡ್ಡಿಯಿಲ್ಲವೆಂದು ಕಂಡುಕೊಳ್ಳುತ್ತಿದ್ದೆ. ಮತ್ತೆ ಅದೇ ದಿಶೆಯಲ್ಲಿ ನೆಲ ಕುಟ್ಟಿ, ದಿಬ್ಬ
ಗುಂಡಿ ಕೊರಕಲು ನಮ್ಮನ್ನು ನುಂಗದಂತೆ ಎಚ್ಚರವಹಿಸಿದೆ. ಹಿಂಬಾಲಿಸುವವರೆಲ್ಲ ಪರಸ್ಪರ ಕೈ ಹಿಡಿದುಕೊಂಡೇ
ಅನುಸರಿಸಿದ್ದರು. ತೊರೆ ದಾಟುವ ಹಂತಕ್ಕೇ ಬಂದಿದ್ದೆವು. ಅದೊಂದು ಜಾಗ ಕೋಲು ಎದುರು, ಆಚೆ, ಈಚೆ ಎಲ್ಲೂ
ನೆಲ ಸೋಕಲಿಲ್ಲ. ಪೈಗಳ ಬೆಂಕಿಪೊಟ್ಟಣ ಗೀರಿ, ಕಿಸೆಯಲ್ಲಿದ್ದ ಯಾವುದೋ ಕಾಗದದ ತುಂಡನ್ನು ತತ್ಕಾಲೀನ
ದೀವಟಿಗೆ ಮಾಡಿ ನೋಡಿದರೆ, ನಾನು ಆಳದ ಕಮರಿಯ ಮೇಲೆ ಚಾಚಿಕೊಂಡಿದ್ದ ಕಲ್ಲಿನ ಅಂಚಿನಲ್ಲಿದ್ದೆ. ಎಲ್ಲ
ಹಾಗೇ ಹಿಂದೆ ಸರಿದೆವು. ಅದೃಷ್ಟವಶಾತ್ ಅದೇ ಬೆಳಕಿನಲ್ಲಿ ಬೆಳಿಗ್ಗೆ ತೊರೆ ದಾಟಿದ್ದ ಜಾಡು ಕಾಣಿಸಿತು,
ಬಚಾವಾದೆವು. ಆದರೆ…
ಉಪ್ಪಿನಗುಡ್ಡದ ಕೊಳ್ಳದ ನೆಲ ನಮಗೆ ಪೂರ್ವ
ಪರಿಚಯವಿಲ್ಲದ್ದು, ತಲಪಬಹುದಾದ ನಾಗರಿಕ ನೆಲೆ ಅಥವಾ ಅಂತರವೂ ಅನಿಶ್ಚಿತವಾದ್ದು. ಆದರೂ ಆಶಾವಾದಿಗಳಾಗಿ
ಕಾಲೆಳೆದದ್ದಕ್ಕೆ ಝರಿ ಪಾತ್ರೆ ಸೇರುವಾಗ ಗಂಟೆ ರಾತ್ರಿಯ ಹನ್ನೊಂದು. ಹಿಂದಿನ ರಾತ್ರಿಯ ನಿದ್ದೆಗೇಡಿನಿಂದ
ಹಿಡಿದು, ದಿನದ ಶ್ರಮವೆಲ್ಲಾ ಸೇರಿ, ಹೊಟ್ಟೆಯಲ್ಲಿ ಹಸಿವನ್ನು ಹಸಿವೇ ತಿನ್ನುವ ಪರಿಸ್ಥಿತಿ. ಅಲ್ಲಿನ
ವಿಸ್ತಾರ, ಒಣ ಹಾಸುಗಲ್ಲಿನ ಮೇಲೆ ಹೊರೆ ಇಳಿಸಿ ವಿಶ್ರಮಿಸಿದೆವು. ನಮ್ಮಲ್ಲಿ
ಗಟ್ಟಿಯಾಗಿ ತಿನ್ನುವಂತದ್ದೂ ಏನೂ ಉಳಿದಿರಲಿಲ್ಲ. ಒಂದೆರಡು ಪ್ಯಾಕೇಟ್ ಬಿಸ್ಕೆಟ್ಟನ್ನು ತುರ್ತು ಪರಿಸ್ಥಿತಿಗೆಂದು
ಕಾಯ್ದಿರಿಸಿದೆವು. ಉಳಿದ ಸ್ವಲ್ಪ ಅವಲಕ್ಕಿ, ಸಕ್ಕರೆ, ಚೂರು ಉಪ್ಪು, ಧಾರಾಳ ನೀರು ಪಾತ್ರೆಗೆ ಹಾಕಿ,
ಒಂದು ಕುದಿ ಬರಿಸಿ ಹೊಸಪಾಕ ಮಾಡಿದೆವು. ಎಲ್ಲ ಸಮಪಾಲು ಮಾಡಿ ಕುಡಿದದ್ದನ್ನು ಸಂಜೆಯ ಕಾಫಿ, ರಾತ್ರಿಯ
ಊಟ ಎಂದೇ ಭಾವಿಸುವುದಾಯ್ತು! ಮಳೆಗಾಲದಲ್ಲಿ ವಿಸ್ತಾರ ಪಾತ್ರೆ ತುಂಬ ಮೊರೆಯಬಹುದಾದ ಝರಿ ಆಗ ನಡುವಿನ
ನಾಲೆಯಲ್ಲಷ್ಟೇ ಗದ್ದಲ ನಡೆಸಿತ್ತು. ಅದನ್ನು ಜೋಗುಳ ಮಾಡಿ, ಬಿಸುಪೂಡುವ ಬಂಡೆಗೆ ಮೈಚಾಚಲು ಪ್ರತಿಯೊಬ್ಬರ
ಮನವೆಳೆಯುತ್ತಿತ್ತು. ಜತೆಗೇ ಜನವಸತಿ ಸೇರಲಿಲ್ಲ, ಮನೆಗಳಲ್ಲಿನವರ ಆತಂಕ ಏನೋ ಎಂಬ ಆತಂಕ ಮುಂದೂಡುತ್ತಲೂ
ಇತ್ತು. ನಾನಂತೂ ಉದ್ದೇಶ ಸಾಧನೆಯಲ್ಲಿ ತತ್ಕಾಲೀನ ದೌರ್ಬಲ್ಯಗಳನ್ನು ಮೀರುವುದೇ ಸಾಹಸವೆಂದು ಎಲ್ಲರನ್ನು
ಹುರಿದುಂಬಿಸಿದೆ. ಆಮೆಗತಿಗೂ ವಿಜಯವುಂಟೆಂಬ ಬಾಲಕಥೆಯ ಬೆಳಕಿನಲ್ಲಿ ಮುಂದುವರಿಯಲು ಒತ್ತಾಯಿಸಿ, ಮುಂದಾಳಾದೆ.
ಝರಿಪಾತ್ರೆಯಲ್ಲಿ ಮರಮುಚ್ಚಿಗೆ ಕಡಿಮೆಯಿದ್ದು, ಚಂದ್ರನ ಬೆಳಕು ಸಾಕಷ್ಟು ಸಹಕಾರಿಯೇ ಇತ್ತು. ಘಟ್ಟದಲ್ಲಿ
ಬಹುತೇಕ ತೊರೆಗಳು ನೇರ ದಾರಿಯನ್ನು, ಅಲ್ಲದಿದ್ದರೂ (ಜಲಪಾತವಲ್ಲದಿದ್ದರೆ) ಸುಲಭ ದಾರಿಯನ್ನೇ ತೋರುತ್ತವೆ.
ನಾವು ಕಂಡುಕೊಂಡ ಝರಿಯ ಗಾತ್ರದಲ್ಲಿ, ಇದು ಸೇರಲಿರುವ ಬಂಗಾಡಿ ಹೊಳೆ - ಅಂದರೆ ಜನವಸತಿ ಪ್ರದೇಶ, ಹೆಚ್ಚು
ದೂರವಿರಲಾರದೆಂಬ ಭರವಸೆಯೂ ನನಗಿತ್ತು. ಇವನ್ನೆಲ್ಲ ಗಟ್ಟಿ ಧ್ವನಿಯಲ್ಲೇ ಸಾರುತ್ತ ಕೆಳಕೆಳಗೆ ಇಳಿದೆ.
ಆದರೆ ನೂರಿನ್ನೂರಡಿ ಕಳೆದು ಕಿವಿಗೊಡುವಾಗ, ಹಿಂದಿನಿಂದ ವನ್ಯವಲ್ಲದೆ ಇತರ ಸದ್ದಿಲ್ಲ. ತಿರುಗಿ ನೋಡಿದರೆ
ತುಸು ದೂರದಲ್ಲಿ ಸಮೀರನನ್ನು ಮಾತ್ರ ಕಂಡೆ. ಅರೆ ಮುನಿಸಿನಲ್ಲೆ ಬೆನ್ನ ಹೊರೆ ಇಳಿಸಿಟ್ಟು, ಎಲ್ಲರಿಗು
ಕೆಣಕು ನುಡಿಗಳನ್ನು ಕೊಡುತ್ತ ತಿರುಗಿ ಮೇಲೇರಿದೆ. ನೋಡುವುದೇನು, ಮಹಾಭಾರತದ ಯಕ್ಷಪ್ರಶ್ನೆ ಪ್ರಸಂಗದ
ಪ್ರತಿರೂಪವೇ ಅನಾವರಣಗೊಂಡಿತ್ತು. ವಿವಿಧ ಹಂತಗಳಲ್ಲಿ ಕಲ್ಲ ತಗ್ಗು, ವಿಸ್ತಾರ ಹಾಸು, ತರಗೆಲೆ ಮೊತ್ತ
ಎಂದೆಲ್ಲಾ ಅನುಕೂಲವೊದಗಿದಂತೆ ಸದಸ್ಯರೆಲ್ಲ ನಿಶ್ಚೇಷ್ಟಿತರಾಗಿ ಬಿದ್ದಿದ್ದರು (ತಪ್ಪು ತಿಳಿಯಬೇಡಿ,
ಮಲಗಿದ್ದರು); ಮೌನ ಬಂಡಾಯ! ಆಂತರ್ಯದಲ್ಲಿ ನನಗೆ ಬೇಕಾದ್ದೂ ಅದೇ – ಎಲ್ಲರಿಗೂ ಇದ್ದುದರಲ್ಲಿ ಭದ್ರವಾಗಿರಲು
ಸೂಚಿಸಿ, ನಾನೂ ಒಂದು ಕಲ್ಲ ಅರೆ ಆಯ್ದುಕೊಂಡು ಮುರುಟಿದ್ದೇ ಗೊತ್ತು. ಶಿಬಿರಾಗ್ನಿ, ಸರದಿಯ ಪಹರೆಗಳ
ಯೋಚನೆ ಬಿಡಿ. ಹುಲಿ ಬಂದು ಕಚ್ಚಿಕೊಂಡು ಹೋದರೆ ಅದರ ಹೊಟ್ಟೆಯೊಳಗೆದ್ದೇವೆಂಬ ವಿಶ್ವಾಸದ ಗಾಢನಿದ್ರೆ.
ಸುಮಾರು ಮೂರು ನಾಲ್ಕು ಗಂಟೆಯ ನಿದ್ರೆ ಕಳೆದಾಗ,
ಚಳಿಯ ಅನುಭವದೊಡನೆ ಒಬ್ಬೊಬ್ಬರೇ ಎದ್ದೆವು. ಚಂದ್ರ ಘಟ್ಟ ಸಾಲಿನ ಹಿಂದೆ ಸರಿದು, ನಮ್ಮನ್ನು ಕತ್ತಲ
ಸಾಮ್ರಾಜ್ಯದಲ್ಲಿ ಬಿಟ್ಟಿದ್ದ. ಟಾರ್ಚ್ ಬೆಳಕಿನಲ್ಲಿ ಚುರುಕಾಗಿ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡೆವು.
ಕುಂಭಕರ್ಣ ಹಸಿವಿಗೆ ತಲಾ ಒಂದೋ ಎರಡೋ ಬಿಡಿ ಬಿಸ್ಕೆಟ್ ಮತ್ತೆ ಹೊಟ್ಟೆ ಬಿರಿಯುವಷ್ಟೂ ಶುದ್ಧ ನೀರಾಹಾರ.
ಘಟ್ಟದ ಪೂರ್ವ ದಿಶೆಗಿದ್ದ ಬಲದಲ್ಲಿ, ಮೊದಲ ಬೆಳಕನ್ನು ಕಾದು, ನಡಿಗೆಗಿಳಿದೆವು. ತೊರೆ ಬಲುಬೇಗನೆ
ಝರಿಪಾತ್ರೆ ಕಳಚಿ, ಮಟ್ಟಸಭೂಮಿಯಲ್ಲಿ ಹೊಳೆಯಾಯ್ತು. ಅಷ್ಟೇ ಬೇಗನೆ ಅದರ ಒಂದು ದಂಡೆಯಲ್ಲಿ ಸ್ಪಷ್ಟ
ನಾಗರಿಕ ಸವಕಲು ಜಾಡು ಸಿಕ್ಕಿದ ಮೇಲಂತೂ ನಮ್ಮ ಉತ್ಸಾಹದ ಹಾಯಿಗೆ ಬೀಸುಗಾಳಿ ಸಿಕ್ಕಂತಾಯ್ತು. ಆದರೂ
ಒಂಬತ್ತೂವರೆಯವರೆಗೆ, ಅಂದರೆ ಆ ವಲಯದ ಮುಖ್ಯ ಕೇಂದ್ರ ಕಿಲ್ಲೂರು ಮುಟ್ಟುವವರೆಗೆ ನಡೆಯಲೇ ಬೇಕಾಯ್ತು.
ಬೆಳ್ತಂಗಡಿಯಿಂದ ಸುಮಾರು ಹದಿನೈದಿಪ್ಪತ್ತು ಮೈಲು ದೂರದ ಕಿಲ್ಲೂರಿಗೆ ಆ ದಿನಗಳಲ್ಲಿ ಬಸ್ ಸಂಚಾರ ಬಿಡಿ,
ಸರಿಯಾದ ದಾರಿಯೂ ಇರಲಿಲ್ಲ. ವಿರಳ ಅಂಬಾಸಿಡರ್ ಕಾರುಗಳು, ಒಮ್ಮೆಗೆ ತಲಾ ಇಪ್ಪತ್ತು ಜನ ಮತ್ತವರ ಖಾಸಗಿ
ಹೊರೆಯನ್ನು ಒಯ್ಯುವ ಪವಾಡ ನಡೆಸಿದ್ದರು. ನಮ್ಮ ದುರದೃಷ್ಟಕ್ಕೆ ಅಂದು ಬೆಳ್ತಂಗಡಿಯಲ್ಲೋ ಅಥವಾ ಹತ್ತಿರದಲ್ಲೆಲ್ಲೋ
ವಾರದ ಸಂತೆ. ಅತ್ತಣಿಂದ ಬಂದೊಂದು ಕಾರಿಗೆ ಐವತ್ತು ಜನ ತರಕಾರಿ, ಕೋಳಿ, ಬುಟ್ಟಿ ಸಹಿತ ಮುಗಿಬಿದ್ದರು.
ನಾವು ವೀರಾವೇಶ ತಂದುಕೊಳ್ಳದೆ ಮೊದಲು ಹೊಟ್ಟೆಪಾಡಿನ ಯೋಚನೆ ಮಾಡಿದೆವು. ಅಲ್ಲಿದ್ದದ್ದೊಂದೇ ಫೋರ್
ಸ್ಟಾರ್ – ಅರ್ಥಾತ್, ನಾಲ್ಕೇ ತಡಿಕೆಯ ಕಾಕಾ ಹೋಟೆಲ್. ಅವನಲ್ಲಿದ್ದ ಏಕಮಾತ್ರ ತಿನಿಸು – ದಪ್ಪ ದೋಸೆ,
ಕೋಳಿ ಸಾರು. ನಮ್ಮಲ್ಲಿ ಬಹುತೇಕರು ಅಪ್ಪಟ ಪುಳಿಚಾರುಗಳು. ಆದರೇನು, ಆಪತ್ಕಾಲದಲ್ಲಿ ಮಹಾಬ್ರಾಹ್ಮಣನಾದ
ವಿಶ್ವಾಮಿತ್ರ ನಾಯಿ ಮಾಂಸ ತಿಂದದ್ದಕ್ಕಿಂತ ಉತ್ತಮವೆಂದುಕೊಳ್ಳುತ್ತ, ಬರಿಯ ದೋಸೆಯನ್ನು ಸಕ್ಕರೆ ಹಾಕಿಕೊಂಡು
ತಿಂದದ್ದು, ಚಾಯೆಂಬ ಸುಡು-ಸಕ್ಕರೆಪಾನಕವನ್ನು ಕುಡಿದದ್ದರ ರುಚಿ ಇಂದಿಗೂ ಮರೆಯಲಾರೆ (ಅನ್ನ ಹಳಸಿತ್ತು,
ನಾಯಿ ಹಸಿದಿತ್ತು)! ಅಷ್ಟಾಗಿಯೂ ಕಾಕ ಸಂತೆಯ ದಿನವೆಂದು ಹೆಚ್ಚೇ ಕಡೆದಿಟ್ಟುಕೊಂಡ ಹಿಟ್ಟು, ನಮ್ಮ
ಬರಗೇಡಿ ಹೊಟ್ಟೆಗೆ ಜೀವಕೊಡುವಷ್ಟೇ ಇತ್ತು. ಬಹುಶಃ ಆತ ನಮ್ಮ ಬೆನ್ನಿಗೇ ‘ಸೋಲ್ಡ್ ಔಟ್’ ಬೋರ್ಡ್ ಹಾಕಿ,
ಹೋಟೆಲ್ ಮುಚ್ಚಿ ಮನೆಗೆ ಹೋಗಿರಬೇಕು.
ತುಸು ಹೊತ್ತೇರಿದಾಗ ಅಂತೂ ಒಂದು ಕಾರಿನಲ್ಲಿ
ನಮ್ಮ ತಂಡ ಮೇಲುಗೈ ಸಾಧಿಸಿತು. ಡಿಕ್ಕಿಯ ಬಾನೆಟ್ಟು ಆಕಾಶಕ್ಕೆ ಕಿಸಿದು ಸಂತೆಯ ಸಾಮಾನುಗಳೊಡನೆ ನಮ್ಮ
ಬೆನ್ನುಚೀಲಗಳನ್ನೂ ಉದಾರವಾಗಿ ತುಂಬಿಸಿಕೊಂಡಿತು. ಪವಾಡಪುರುಷ ಚಾಲಕ, ಅದರಿಂದೇನೂ ಉದುರದಂತೆ ಇಂಡಿಯನ್
ರೋಪ್ ಟ್ರಿಕ್ ಸಾಧಿಸಿದ್ದ. ನಾವೆಂಟು ಜನ ನಮ್ಮದೇ ಹೊಗೆ, ಮೂರುದಿನಗಳ ಕೊಳೆಯೊಡನೆ ಇತರ ಹದಿನಾಲ್ಕು
ಹಳ್ಳಿಗರ ಬೆವರು, ಜಿಡ್ಡು, ಹೆಂಡವೇ ಮೊದಲಾದ ವಿವಿಧ ಪರಿಮಳಗಳೊಡನೆ ಕಾರಿನೊಳಗೆ ಬೆಸೆದುಕೊಂಡ ಚಂದ
ವಿವರಿಸುವಲ್ಲಿ ನನ್ನ ಪದಗಳು ಸೋಲುತ್ತವೆ. ಅದ್ಯಾವ ಮಾಯೆಯಲ್ಲೋ ಪವಾಡಪುರುಷ ನಮ್ಮನ್ನೆಲ್ಲ `ದುಂಬು,
ಪಿರ, ಮೊಟ್ಟೆಡ್, ಇಡೇಟ್’ ಮಂತ್ರ ಪಠಿಸಿ ಗಿಡಿದ ಮೇಲೆ, ಮೂರೂ ಬಾಗಿಲು ಜಡಿದು, ತಾನು ಅಕ್ಷರಶಃ ಬಾಗಿಲೊಳಗಿನ
ಟೊಳ್ಳಿನಲ್ಲಿ ವಿಸ್ತರಿಸಿಕೊಂಡವನಂತೆ ಸೇರಿಕೊಂಡು ತನ್ನ ಬಾಗಿಲನ್ನೂ ಎಳೆದುಕೊಂಡ. ಮತ್ತೆ ಸುಮಾರು
ಒಂದು ಗಂಟೆಯ ದಡಬಡ, ದೂಳು, ಸೆಕೆಗಳ ಕೊನೆಯಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣ ಬಂದಾಗ ನಾವು ಬೆನ್ನಚೀಲಗಳನ್ನು
ಮಾತ್ರವಲ್ಲ, ಸ್ವಂತ ಕೈಕಾಲು ಸೊಂಟಗಳ ಸ್ವಾಧೀನ ಮಾಡಿಕೊಳ್ಳಲೂ ಐದು ಹತ್ತು ಮಿನಿಟೇ ಬೇಕಾಯ್ತು. ಆ
ಕಾಲದಲ್ಲಿ ಬೆಳ್ತಂಗಡಿ-ಮಂಗಳೂರ ನಡುವೆ ಸಾರ್ವಜನಿಕ ಬಸ್ಸುಗಳಾದರೂ ಕಡಿಮೆಯೇ ಇದ್ದುವು. ಸಹಜವಾಗಿ ನಿಲ್ದಾಣದಲ್ಲಿಲ್ಲದ
ಬಸ್ಸನ್ನು ಕಾಯುವ ಅವಧಿಯಲ್ಲಿ, ಅಲ್ಲಿನ ಹೋಟೆಲನ್ನು ತುಸು ಉದ್ಧಾರ ಮಾಡಿದೆವು. ನಮ್ಮ ಹೊಟ್ಟೆಗೆ ಕಿಲ್ಲೂರಿನಲ್ಲಾದ
ಅನ್ಯಾಯವನ್ನು ಸರಿಪಡಿಸಿಕೊಂಡೆವು.
ಇಂದಿನ ದಿನಮಾನದ ಅತಿ-ಸಂಪರ್ಕ (ಚರವಾಣಿ,
ಸ್ಕೈಪ್ ಇತ್ಯಾದಿ) ದೋಷದ ಮುನ್ನೆಲೆಯಲ್ಲಿ ಇಲ್ಲಿ ನಾನೊಂದು ಮಾತು ಸೇರಿಸಲೇ ಬೇಕು. ಊರಿನಲ್ಲಿ ಎಲ್ಲರೂ
ಆತಂಕಿತರಾಗಿರುತ್ತಾರೆ ಎಂಬ ಪೂರ್ಣ ಅರಿವು ನಮಗಿತ್ತು. ಆದರೆ ಪರಿಹರಿಸಲು ನಮ್ಮಲ್ಲಿದ್ದದ್ದು ಒಂದೇ
ದುರ್ಬಲ ದಾರಿ - ಅಂಚೆ ಕಛೇರಿಗೆ ಹೋಗಿ ಮಂಗಳೂರಿಗೆ ಟ್ರಂಕಾಲ್ ಬುಕ್ ಮಾಡುವುದು; ಮಾಡಲಿಲ್ಲ. ಯಾಕೆಂದರೆ
ಮೊದಲನೆಯದಾಗಿ, ಅತ್ತ ಪಡೆಯಲು ನಮ್ಮ ಯಾವ ಮನೆಗಳಿಗೂ ದೂರವಾಣಿ ಸಂಪರ್ಕವೇ ಇರಲಿಲ್ಲ. (ನನ್ನಂಗಡಿಗೇನೋ
ಇತ್ತು, ಆದರೆ ಅದು ಬಾಗಿಲು ಹಾಕಿತ್ತಲ್ಲ.) ಎರಡನೆಯದಾಗಿ ಫೋನೋಗ್ರಾಮ್. (ಮಂಗಳೂರು ಅಂಚೆಕಚೇರಿಗೇ
ಸುದ್ದಿ ಕಳಿಸುವುದು. ಅವರದನ್ನು ಬರವಣಿಗೆಯಲ್ಲಿ ವಿಶೇಷ ಅಂಚೆಯಣ್ಣನ ಮೂಲಕ ವಿಳಾಸಕ್ಕೆ ಮುಟ್ಟಿಸುವ
ವ್ಯವಸ್ಥೆ.) ಅದಾದರೂ ಒಂದೆರಡು ಗಂಟೆಯ ಅವಧಿಯಲ್ಲಿ, ಅಂದರೆ ಖುದ್ದು ನಾವೇ ಮನೆ ತಲಪುವುದರೊಳಗೆ ಲೈನ್
ಸಿಕ್ಕಿ, ಎಲ್ಲರನ್ನು ಸಮಾಧಾನಿಸೀತು ಎಂಬ ವಿಶ್ವಾಸ ನಮಗಿರಲಿಲ್ಲ. ಅತ್ತ ವಿಠಲರಾಯರ ಬಳಗ ಅಪರಾಹ್ನದ
ಬೈಠಕ್ಕಿನಲ್ಲಿ, ಬೆಳ್ತಂಗಡಿ ಬಸ್ ವೇಳಾಪಟ್ಟಿ (ಹೆಚ್ಚೇನೂ ನಮೂದುಗಳಿರಲಿಲ್ಲ ಬಿಡಿ) ನೋಡಿ ಮಾರಣೇ
ದಿನ ಮೊದಲ ಬಸ್ಸಿನಲ್ಲಿ ಹೋಗುವುದೆಂದು ನಿರ್ಧರಿಸಿದ್ದರು. ಸಂಜೆ ನಾವೆಲ್ಲ ಆರೋಗ್ಯವಾಗಿಯೇ ಮನೆಸೇರಿಕೊಂಡೆವು.
* * * * *
ಹಿರಿಮದುಪ್ಪೆಯೆಂದು
ಪ್ರವಾಹಕ್ಕೆ ಬಿದ್ದವರು
೧೯೯೨ರ ದೀಪಾವಳಿಗೆ ನಾನು ಪೂರ್ಣ ಹೊಸತೇ ತಂಡದೊಡನೆ,
ಮತ್ತೆ ಹಿರಿಮರುದುಪ್ಪೆಯ ಯೋಜನೆ ಹಾಕಿದೆ. ಆದರೆ ಹೇವಳದಿಂದಲೇ ಏರಿ, ಹೇವಳಕ್ಕೇ ಇಳಿಯಬೇಕು. ಹಿರಿಮರುದುಪ್ಪೆಯ
ತಪ್ಪಲಲ್ಲೇ ಹೆಚ್ಚು ಪ್ರಶಸ್ತವಾದ ಜಾಗದಲ್ಲಿ, ಗುಡಾರ ಹಾಕಿ, ಎರಡು ಶಿಬಿರವಾಸದ ಅನುಭವ ಕೂಡಿಸಿಕೊಳ್ಳುವ
ಸೌಮ್ಯ ಕಾರ್ಯಕ್ರಮ. (ಹಿಂದೆ ಕುದುರೆಮುಖ ಶಿಖರದ ನೆಪದಲ್ಲಿ ಒಂಟಿಮರದಬುಡದಲ್ಲಿ ಪಾಯಸ ಕುಡಿದ
ಮಧುರ ನೆನಪು ನವೀಕರಿಸುವ ಆಸೆ) ಬಾಲಕೃಷ್ಣ (ಬಾಲಣ್ಣ) ಮತ್ತು ಕೃಷ್ಣಮೋಹನ್ ಪ್ರಭು (ಕೃಶಿ) ವಿದೇಶದಿಂದ
ವಿಶೇಷ ಪರ್ವತಾರೋಹಣದ ಗುಡಾರಗಳನ್ನು ತರಿಸಿಕೊಂಡಿದ್ದರು. ಅವರಿಗೆ ಹರೀಶಾಚಾರ್, ಗಿಳಿಯಾಲು ಪ್ರಕಾಶ,
ಅರವಿಂದರಾವ್ ಮತ್ತು ಪ್ರಸನ್ನ ಗುಡಾರ-ಮೇಟ್ಸ್ ಆದರು. ಹಾರೋಹುಚ್ಚಿನ (ಹ್ಯಾಂಗ್ ಗ್ಲೈಡಿಂಗ್) ನೆವಿಲ್
ರಾಡ್ರಿಗಸ್, ಎಚ್.ಡಿ.ಪಿ.ಇ ಬಳಸಿ ತಾನೇ ಗುಡಾರ ಒಂದನ್ನು ಸಿದ್ಧಪಡಿಸಿದ್ದ. ಅವನಿಗೆ ಸಹವಾಸಿಗಳು ಸಿಗಲಿಲ್ಲ.
ನನ್ನ ಹಳೆಯ. ಪುಟಾಣಿ ಗುಡಾರಕ್ಕಂತೂ ಖಾಯಂ ನಿವಾಸಿಗಳಾದ – ದೇವಕಿ, ಅಭಯರಿದ್ದರು.
ಮಾರ್ಗಕ್ರಮಣದಲ್ಲಿ ವಿಳಂಬ ತಪ್ಪಿಸಲು ಬೆಳಗ್ಗೆ
ಐದು ಗಂಟೆಗೇ ಮ್ಯಾಟಡೋರ್ ನಿಗದಿಸಿಕೊಂಡಿದ್ದೆವು. ನಾವೂರಿನಲ್ಲಿ ಏಳು ಗಂಟೆಗೇ ನಡಿಗೆಗಿಳಿದಿದ್ದೆವು.
ಹೊರೆ ಸಾಕಷ್ಟಿದ್ದುದರಿಂದ ಆರಾಮವಾಗಿಯೇ ಏರಿದೆವು. ಒಂಬತ್ತು ಗಂಟೆಯ ಸುಮಾರಿಗೆ ಗುಂಡಲ್ಪಾದೆಯಲ್ಲಿ
ಬೆಳಗ್ಗಿನ ತಿಂಡಿ (ಬುತ್ತಿ), ಮತ್ತೊಂದೂವರೆ ಗಂಟೆಯಂತರದಲ್ಲಿ ಚಾ, ಮಧ್ಯಾಹ್ನ ಒಂದೂವರೆಗೆ ಬುತ್ತಿಯೂಟವೆಲ್ಲಾ
ಯೋಚಿಸಿದಂತೆಯೇ ಚೆನ್ನಾಗಿಯೇ ನಡೆದವು. ಮೂರು ಗಂಟೆಯ ಸುಮಾರಿಗೆ ಹೇವಳ ತಲಪಿದ್ದೆವು. ಆ ಕಾಲಕ್ಕೆ ಹೇವಳದ
ಕಣಿವೆಯಲ್ಲಿ ಒಂದೇ (ಲೋಬೋ) ಕುಟುಂಬದವರು ಪಾಲಾಗಿ ಅಲ್ಲೇ ಎರಡೋ ಮೂರೋ ಮೂಲೆಗಳಲ್ಲಿ ಸ್ವತಂತ್ರ ಮನೆ
ಮಾಡಿಕೊಂಡಿದ್ದರು.
ನಾವೂರು ಜಾಡಿಗೆ
ಸಮೀಪಸ್ಥವಾದ ಮನೆಯೊಂದರ ಸುಮಾರು ಐನೂರಡಿ ಅಂತದರಲ್ಲಿ, ಒಂದು ಮಟ್ಟಸ ಹುಲ್ಲುಗಾವಲಿನಲ್ಲೇ ಶಿಬಿರ ಹೂಡಿದೆವು.
ಮನೆಗೂ ಶಿಬಿರಕ್ಕೂ ನಡುವೆ ಒಂದು ಕಾಡತೊರೆ ಹರಿದಿತ್ತು. ಅದು ಕೃಷಿಭೂಮಿಯ ಹೊರಗಿನ ಬೆಟ್ಟದಿಂದ ಬರುತ್ತಿದ್ದುದರಿಂದ
ಸ್ಫಟಿಕ ನಿರ್ಮಲವಿತ್ತು, ನಿಸ್ಸಂದೇಹವಾಗಿ ನಮ್ಮೆಲ್ಲಾ ಬಳಕೆಗೆ ಒಗ್ಗುವಂತೆಯೂ ಇತ್ತು. ಶಿಬಿರತಾಣದ
ಸಮೀಪವೇ ಲೋಬೋ ಕುಟುಂಬದ ಒಂದು ಸಮಾಧಿಯಿತ್ತು. ಆ ಲೆಕ್ಕದಲ್ಲಿ ಅವರ ನಿರಾಕ್ಷೇಪಣವನ್ನಷ್ಟೇ ಪಡೆದು
ನಾವು ಸ್ವತಂತ್ರವಾಗಿ ಶಿಬಿರ ಕಲಾಪಗಳಲ್ಲಿ ತೊಡಗಿಕೊಂಡೆವು.
ನಾಲ್ಕೂ ಗುಡಾರಗಳನ್ನು ಬಿಡಿಸಿ ವಿಮರ್ಶೆ,
ವೈಭವ, ಸಂಜೆಯ ಕಾಫಿ, ರಾತ್ರಿಯೂಟದ ತಯಾರಿ, ಹಾಸ್ಯ ಗದ್ದಲಗಳೆಲ್ಲ ನಡೆದಿದ್ದಂತೆ, ಸೂರ್ಯ ರಂಗ ತೊರೆಯುವ
ಸಮಯ ಬರುತ್ತಿತ್ತು. ಗೋವಳಿಗರು ಸುತ್ತಣ ಗುಡ್ಡೆಗೆ ಮೇಯಲು ಹೋದ ಜಾನುವಾರುಗಳನ್ನು ಒಟ್ಟು ಮಾಡಿ ಕೊಟ್ಟಿಗೆಗೆ
ಹೊಡೆಯುತ್ತಿದ್ದಂತೆ, ಆಗಸದಲ್ಲಿ ವರುಣನೂ ಎಲ್ಲೆಲ್ಲೋ ಚದುರಿದ್ದ ಮೋಡಗಳನ್ನು ನಮ್ಮ ಮೇಲೆ ಒಟ್ಟೈಸತೊಡಗಿದ್ದ. ಧಾವಿಸಿ ಬಂದ ಶ್ರಮಕ್ಕೆ
ಮೋಡ ಬೆವರಿದಂತೆ ದಪ್ಪ ಹನಿಗಳಷ್ಟೇ ತಟಪಟಕ್ಕೆನ್ನತೊಡಗಿದಾಗ ನಾವು ಬೆಂಕಿಯೊಂದನ್ನುಳಿದು ಎಲ್ಲವನ್ನೂ
ಎಳೆದುಕೊಂಡು ಗುಡಾರ ಸೇರಿಕೊಂಡೆವು. ಶಿಬಿರಾಗ್ನಿ ಇಲ್ಲದಿದ್ದರೇನು, ಪರಸ್ಪರ ಮುಖ ಕಾಣದಿದ್ದರೇನು,
ರಾತ್ರಿಯೂಟಕ್ಕೆ ಉಪ್ಪಿಟ್ಟು ಸಿದ್ಧವಾಗಿತ್ತು. ಮಳೆ ಅಕಾಲಿಕವಾದ್ದರಿಂದ ಸಣ್ಣದರಲ್ಲೇ ಬಿಟ್ಟೀತು ಮತ್ತು
ಸದ್ಯಕ್ಕೆ ನಮ್ಮಲ್ಲಿ ಗುಡಾರವಿಲ್ಲವೇ ಎಂಬ ವಿಶ್ವಾಸ ನಮ್ಮದು. ಅನಂತರವೂ ನಿದ್ದೆಗೆ ಹೆಚ್ಚಿನವರ ಬಳಿ
ಮಲಗುವ ಚೀಲಗಳಿದ್ದದ್ದೂ ನಮಗೆ ಹೆಚ್ಚಿನ ಧೈರ್ಯ ಕೊಟ್ಟಿತ್ತು. ಸಮಯ ಸಂದಂತೆ ಉಪ್ಪಿಟ್ಟು, ಕುರುಕಲು
ತಿಂದೆವು, ಗುಡಾರಗಳು ಹಾರಿಹೋಗುವಂತೆ ತಮಾಷೆ ನಡೆಸಿದೆವು. ವರುಣಾನಾಟ ನಿಲ್ಲಲಿಲ್ಲ.
ಒಂದೇ ಪದರದ, ಆಗಲೇ ಸಾಕಷ್ಟು ಬಳಕೆಯಾಗಿ ಬಳಲಿದ
ಪುಟ್ಟ ಗುಡಾರ ನನ್ನದು. ವಾಸ್ತವವಾಗಿ ಅದು ಬೇಸಗೆ ದಿನಗಳಲ್ಲಿ ಯಾರಿಗಾದರೂ ಆಕಾಶವನ್ನೇ ಹೊದ್ದುಕೊಳ್ಳುವ
ಬದಲಷ್ಟೇ ಬಳಕೆಗೆ ಯೋಗ್ಯವಾದ ಗುಡಾರ. ನೀರು ಅದರ ಪಕ್ಕೆಗಳ ಮೇಲೆ ಜಾರಿಳಿದರೂ ನೆಲದಲ್ಲಿ ಪಸರಿಸಿ,
ನಾವಾಗಲೇ ಬಿಡಿಸಿಕೊಂಡಿದ್ದ ಮಲಗುಚೀಲದ ಅಂಚುಗಳಲ್ಲಿ ಚಳಿ ಮುಟ್ಟಿಸಿ ನಮ್ಮನ್ನೆಚ್ಚರಿಸತೊಡಗಿತ್ತು.
ಅತ್ತ ಬಹುಶಃ ಬಾಲಣ್ಣನ ಗುಡಾರ, ಸಾಕಷ್ಟು ಮಜಬೂತಾಗಿಯೇ ಕಾಣಿಸಿದರೂ ಸೋರಿಕೆಯ ದೂರು ಗಹನವಾಗತೊಡಗಿತು.
ಅಂತಿಮವಾಗಿ ನಡುರಾತ್ರಿಗಾಗುವಾಗ ನಮ್ಮ ತಾಳ್ಮೆಯ ಕಟ್ಟೆ
ಹರಿಯಿತು. ಅವಶ್ಯ ಸಾಮಗ್ರಿಗಳನ್ನಷ್ಟೇ ಗಂಟುಕಟ್ಟಿ ಹೊತ್ತು, ನಾವು ಮೂವರು ಒಂದೇ ಮಿಣುಕು ಟಾರ್ಚ್ ಬೆಳಗಿಕೊಂಡು ವಲಸೆ ಹೊರಟೆವು.
ನೆವಿಲ್ಲನ ಪ್ರಯೋಗವೇನೋ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿತ್ತು. ಆದರೆ ತೇವದ ಸಾಮೀಪ್ಯದಿಂದ ನೆವಿಲ್ಲಿಗಿದ್ದ
ಆನುವಂಶಿಕ ಗೂರಲು ಕೆರಳಿಕೊಂಡದ್ದಕ್ಕೆ ಅವನೂ ನಮ್ಮನ್ನು ಹಿಂಬಾಲಿಸಿದ. ಬಾಲನ ಗುಡಾರದ ಇಬ್ಬರು ಆ ಗುಡಾರ
ಸೇರಿಕೊಂಡರು. ಮತ್ತೊಬ್ಬ – ಬಹುಶಃ ಪ್ರಕಾಶ್, ನಮ್ಮ ಬಾಲ ಹಿಡಿದ. ಕೃಶಿ ಗುಡಾರದವರು ಇದ್ದಲ್ಲೇ ಸುಧಾರಿಸಿಕೊಳ್ಳುವ
ಉತ್ಸಾಹದಲ್ಲಿತ್ತು. ಧಾರಾಕಾರ ಮಳೆಗೆ ಅರೆಬರೆ ಪ್ಲ್ಯಾಸ್ಟಿಕ್ ಹಾಳೆ ಹೊದ್ದುಕೊಂಡು, ಮುಟ್ಟಲು ಸಿಗುತ್ತದೋ
ಎನ್ನುವಂಥ ಕತ್ತಲೆಯನ್ನು ಮಿಣುಕು ಟಾರ್ಚಿನಲ್ಲಿ ಕಷ್ಟದಲ್ಲಿ ಸೀಳುತ್ತ, ಒಬ್ಬರನ್ನೊಬ್ಬರು ತಪ್ಪಿಸಿಕೊಳ್ಳದಂತೆ
ಕೈಸರಪಳಿ ಮಾಡಿ ತೊರೆಯತ್ತ ನಡೆದೆವು. ಅದೃಷ್ಟವಶಾತ್ ಮಳೆಯಿಂದ ತೊರೆ ಸೊಕ್ಕಿರಲಿಲ್ಲ. ಆದರೂ ಅಂಚುಗಳ
ಗೊಸರು, ತುಂಡು ಕಲ್ಲುಗಿಡಿದ ಅದರ ಪಾತ್ರೆ ದಾಟಿ ಲೋಬೋ ಮನೆ ಸೇರಬೇಕಾದರೆ ಸಾಕಷ್ಟು ತೊಯ್ದಿದ್ದೆವು.
ಮನೆಯವರನ್ನು ಅಕಾಲದಲ್ಲಿ ಎಬ್ಬಿಸಿ, ಸಂಜೆ ಅವರನ್ನು ವಿಶೇಷ ಕಾಣಲೂ ಮನಸ್ಸು ಮಾಡದ ತಪ್ಪಿಗೆ ಪರಿಮಾರ್ಜನೆಯೆಂಬಂತೆ
ಆಶ್ರಯ ಕೇಳಿದೆವು. ಅವರೋ ಸರಳ ಹಳ್ಳಿಗರು – ನಿರ್ಯೋಚನೆಯಿಂದ ಎದುರು ಚಾವಡಿಯಲ್ಲಿ ನಮಗೆ ಚಾಪೆ ಹಾಕಿ
ಅವಕಾಶ ಮಾಡಿಕೊಟ್ಟರು. ಅದುವರೆಗೆ ಸತಾಯಿಸಿದ ಮಳೆ ಜೋಗುಳವಾಯ್ತು, ನೀರು ಹೀರಿಕೊಳ್ಳದ ಮಲಗುಚೀಲದ ಗುಣದಿಂದ
ಚಳಿಯೂ ದೂರವಾಗಿ ಸುಖನಿದ್ರೆ ನಮ್ಮದಾಯ್ತು.
ನಿರ್ಮಲ ಬೆಳಗ್ಗೆ ನಮಗೆ ಶುಭಕೋರಿತು. ಲೋಬೋ
ಮನೆಯವರಿಗೆ ಕೃತಜ್ಞತೆ ಹೇಳಿ ಮತ್ತೆ ಶಿಬಿರತಾಣದಲ್ಲಿ ಎಲ್ಲ ಒಂದಾದೆವು. ಯೋಜನೆಯಂತೇ ಪ್ರಾತರ್ವಿಧಿಯಿಂದ
ತೊಡಗಿ ಕಾಫಿ, ತಿಂಡಿಯಾಗುವಾಗ ಹಿರಿಮರುದುಪ್ಪೆ ಶಿಖರದ ಹುಲ್ಲ ಎಸಳುಗಳು ಮುತ್ತು ಮುಡಿದು ನಮ್ಮನ್ನು
ಕರೆದಿದ್ದುವು. ಗುಡಾರ ಸೇರಿದಂತೆ ಅನಾವಶ್ಯಕ ಹೊರೆಗಳನ್ನೆಲ್ಲ ಅಲ್ಲೇ ಒಂದೆಡೆ ಕಟ್ಟಿಟ್ಟು (ಅಲ್ಲೆಲ್ಲ
ಕಳ್ಳತನದ ಯೋಚನೆಯೂ ನಿಷಿದ್ಧ!), ಎಂಟೂವರೆಗೆ ಬೆಟ್ಟವೇರತೊಡಗಿದೆವು.
ಮನೋಹರವಾದ ಆರೋಹಣ. ಸುಮಾರು ಅರ್ಧಾಂತರದಲ್ಲಿ
ತೀವ್ರ ಏರಿನ ಒಂದು ಸ್ತರ ಮುಗಿಯುತ್ತದೆ. ಅಲ್ಲಿ ಎಲ್ಲ ತುಸು ವಿಶ್ರಾಂತಿಗೆಂದು ಕುಳಿತೆವು. ಅದುವರೆಗೆ
ಹೆಚ್ಚಿನವರು ಕೇವಲ ನೆಲ ನೋಟಕರಾಗಿ ಏರಿದ್ದಕ್ಕೋ ಏನೋ ಬಂದ ದಾರಿ ನೋಡಿ ಹರ್ಷೋದ್ಗಾರ ನಡೆಸಿದ್ದರು.
ಆದರೆ ಪ್ರಕಾಶ್
ಬಂದ ದಾರಿ, ಅಂದರೆ ಭಾರೀ ಆಳವನ್ನು ನೋಡುತ್ತಲೆ, ಒಮ್ಮೆಗೆ ಹೆದರಿ ನಡುಗುತ್ತ, ಮುಖ ತಿರುಗಿಸಿ ಅಂಗಾತ
ಮಲಗಿ, ಜೀವಭಯದಲ್ಲಿ ಗೋಳಾಡಿದರು. ಔನ್ನತ್ಯದ ಭೀತಿ ಅಥವಾ ವರ್ಟಿಗೋ ಎಂಬ ಮನೋಸ್ಥಿತಿಯಿದೆ ಎಂದು ನಮಗೆಲ್ಲ
ತಿಳಿದಿತ್ತು. ಆದರೆ ಅನುಭವಕ್ಕೆ ದಕ್ಕಿದ್ದು ಅದೇ ಮೊದಲು. ನಾವೆಲ್ಲ ಬಗೆ ತರದಲ್ಲಿ ಅವರನ್ನು ಸಮಾಧಾನಿಸಿ
ಮತ್ತೆ ಕೊಳ್ಳ ದೃಷ್ಟಿಸದಂತೆ ಎಚ್ಚರಿಸಿ, ಕಾಲಮೇಲೆ ತಂದೆವು. ಆದರೆ ವಿಶ್ರಾಂತಿ ಮುಗಿಸಿ ಮರಳಿ ಏರುವ
ಸಮಯಕ್ಕೆ, ಪ್ರಕಾಶರಿಗೆ ನಮ್ಮ ಮಾತಿನ ಮೋಡಿಯೇನೂ ಬೇಕಿಲ್ಲ ಎಂಬಂತೆ ಮೋಡದ ಸೈನ್ಯ ಮರಳಿ ಮುಸುಕತೊಡಗಿತು.
ಹತ್ತು ಗಂಟೆಗೆ ನಾವು ಶಿಖರ ಮುಟ್ಟಿದೆವು. ಸಂಭ್ರಮ ಒಂದೇ - ಪೌರಾಣಿಕ ಸಿನಿಮಾಗಳಲ್ಲಿ ದೇವಲೋಕವೆಂದೇ
ಬಿಂಬಿಸುವ ಮೋಡಗಳ ರಾಜ್ಯಕ್ಕೇ ಲಗ್ಗೆ ಹಾಕಿದ್ದೆವು. ಯಾರಿಗೂ ಏನೂ ಕಾಣದಂತೆ ಎಲ್ಲವನ್ನೂ ಮೋಡ ಕಬಳಿಸಿತ್ತು.
ಪಾನಕ, ಕುರುಕಲು,
ಆಚೀಚೆ ಓಡಾಟ, ಎಂದು ಏನೇನೋ ತಿಣುಕಿ ಸುಮಾರು ಒಂದು ಗಂಟೆ ಸಮಯ ಕಳೆದದ್ದಷ್ಟೇ ಲಾಭ. ಹೇವಳದ ಬೋಗುಣಿ,
ಕಿಲ್ಲೂರಿನ ಕೊಳ್ಳಗಳೆಲ್ಲ ಮಾತಿನ ವೈಭವಗಳು. ಹತ್ತಡಿಯಾಚಿನ ಹುಲ್ಲ ಗರಿಕೆ ಕಾಣದ ಸ್ಥಿತಿ. ಮತ್ತೆ
ಮಳೆಯೇ ಅವತರಿಸಿದರೆ ಎಂಬ ಸಣ್ಣ ಅಳುಕಿನೊಡನೇ ಬಂದ ದಾರಿಯಲ್ಲೇ ಇಳಿಯತೊಡಗಿದೆವು. ಕೊಳ್ಳಕಾಣದ ಧೈರ್ಯದಲ್ಲಿ
ಪ್ರಕಾಶರೊಬ್ಬರೆ ಉಜ್ವಲ, ಉಳಿದವರೆಲ್ಲ ದೃಶ್ಯವಂಚಿತರಾಗಿ ಮಂಕೋ ಮಂಕು.
ಮಳೆಯ ಭಯದಲ್ಲಿ ಎರಡನೇ ರಾತ್ರಿಯನ್ನೂ ಹಿರಿಮರುದುಪ್ಪೆಯ
ತಪ್ಪಲಿನಲ್ಲಿ ಕಳೆಯುವ ಯೋಚನೆಯನ್ನು ರದ್ದುಪಡಿಸಿದೆವು. ಉಳಿದಂತೆ ಮೂಲ ಯೋಜನೆಯ ಹಾಗೇ ಆದಷ್ಟು ಬೇಗನೆ
ಸಂಸೆ ಸೇರಿ, ಬಸ್ಸು ಹಿಡಿದು, ಮಂಗಳೂರಿಗೆ ಮರಳುವುದೆಂದೇ ನಡೆಯತೊಡಗಿದೆವು. ಒಂದೂವರೆ
ಗಂಟೆಯ ಸುಮಾರಿಗೆ ಒಂಟಿಮರದ ಬಳಿ ತೊರೆ ದಂಡೆಯಲ್ಲಿ ಒಲೆ ಹೂಡಿ ಸಿದ್ಧ-ಶ್ಯಾವಿಗೆ ಬೇಯಿಸಿ ಚೆನ್ನಾಗಿಯೇ
ತಿಂದೆವು. ಅದರೆ ನಮ್ಮ ಆರಾಮ ಮಳೆಗೆ ಸಹಿಸಲಿಲ್ಲ – ಬಲು ದೀರ್ಘವಾಗಿ ಮತ್ತು ಭರ್ಜರಿಯಾಗಿಯೇ ಧರೆಗಿಳಿದು ಬಂತು. ಅದೃಷ್ಟವಶಾತ್ ನಮಗೆ ಸಕಾಲದಲ್ಲಿ ಯಾವುದೋ
ಶಾಲೆಯ ಜಗುಲಿ ಸಿಕ್ಕಿದ್ದರಿಂದ ಬಯಲು `ಸ್ನಾನ’ವೊಂದಾಗಲಿಲ್ಲ. ಹೊತ್ತುಗಳೆಯುತ್ತಿದ್ದಂತೆ ನಮ್ಮ ಮಂಗಳೂರ
ಯೋಜನೆ ಬಿದ್ದುಹೋಯ್ತು. ಶಾಲಾ ಜಗುಲಿ ತೀರಾ ಸಣ್ಣದು ಮತ್ತು ರಾತ್ರಿ ಕಳೆಯಲು ಹೇಳಿಸಿದ್ದೇ ಅಲ್ಲ.
ಮಳೆ ಬಿಡುವ ಸಮಯಕ್ಕೆ ವಾತಾವರಣದ ಮಂಕನ್ನು ಕತ್ತಲೆ ಆಕ್ರಮಿಸಿತ್ತು. ಹಾಗೇ ಸಿಕ್ಕೊಬ್ಬ ಹಳ್ಳಿಗನಿಂದ
ನಮ್ಮ ಮುಂದಿನ ಸಹಜ ದಾರಿಯೂ ದುರ್ಗಮವಾಗಿರುವ ಸುದ್ದಿ ಬಂತು. ನಮ್ಮ ದಾರಿಗಡ್ಡಲಾಗಿ ಹರಿಯುತ್ತಿದ್ದ
ಭಾರೀ ಸಂಸೆ ಹೊಳೆಗೆ ಆ ಕಾಲದಲ್ಲಿ ಸೇತುವೆಯಿರಲಿಲ್ಲ. ಜನ ಮಳೆ ದೂರವಾದ ದಿನಗಳಲ್ಲಿ ನೀರಿಗಿಳಿದೇ ದಾಟುತ್ತಿದ್ದರು.
ಹಿಂದಿನ ದಿನದವರೆಗೂ ಆ ಕಡವು ಮುಕ್ತವಾಗಿಯೇ ಇತ್ತಂತೆ. ಆದರೆ ಅಂದು, ಅಕಾಲ ಮಳೆಯ ಪ್ರಭಾವದಲ್ಲಿ ಭೀಕರವಾಗಿ
ಭೋರ್ಗರೆಯುತ್ತಿತ್ತಂತೆ. ಆತ ಸಣ್ಣ ಆಶಾದೀಪ ತೋರಿದ. “ಇನ್ನೂ ಕೆಳದಂಡೆಯಲ್ಲೊಂದು ತೂಗು ಸೇತುವೆಯೇನೋ
ಇದೆ. ಸದ್ಯ ಅದು ಊರ್ಜಿತದಲ್ಲಿದ್ದರೆ ಪ್ರಯತ್ನ ಮಾಡಬಹುದು”
ಎಂದ. ಅವೇಳೆಯಲ್ಲಾದರೂ ನಮ್ಮ ಮೇಲಿನ ಕನಿಕರದಲ್ಲಿ ಆತ ನಮಗೆ ತೂಗುಸೇತುವೆಯತ್ತ ಮಾರ್ಗದರ್ಶಿಯೂ ಆದ.
ಕತ್ತಲು ಪೂರ್ಣಗೊಂಡಿತ್ತು. ಮಳೆಯ ಪ್ರಭಾವದಲ್ಲಿ ಕಾಫಿ, ಏಲಕ್ಕಿ ತೋಟಗಳ ನಡುವಣ ನಮ್ಮ ಕಾಲುದಾರಿಯುದ್ದಕ್ಕೂ
ಸಣ್ಣಪುಟ್ಟ ಚರಂಡಿ, ತೊರೆಗಳೆಲ್ಲ ಸೊಕ್ಕಿದ್ದುವು. ಮತ್ತೆ ಜಾರಿಕೆ, ಕೆಸರು, ಅಡ್ಡ ಬಿದ್ದ ಕೊಂಬೆ,
ಕಸ, ಬೇಲಿ, ತಡಮೆ ಪ್ರತಿಯೊಂದೂ ಮಿಣುಕು ಟಾರ್ಚಿನ ಬೆಳಕಲ್ಲಿ ಭೂತಾಕಾರ ತಾಳಿ ಕಾಡುತ್ತಿದ್ದುವು. ನಮಗೆ
ಚುರುಕಾಗಿ ದಾರಿ ತೋರಿಸಿ ಮನೆಗೆ ಮರಳಬೇಕೆಂಬ ಅವಸರದಲ್ಲಿದ್ದ ಹಳ್ಳಿಗನಿಗಾದರೋ ನಿತ್ಯ ಬಳಕೆಯ ದಾರಿ.
ಎರಡು ಮೂರು ಬಾರಿ ನಮ್ಮ ಸಾಲು ತುಂಡಾಗಿ ಪರದಾಡಿ ಬೆಸೆಯುವುದಾಯ್ತು. ಅಂತೂ ತೂಗು ಸೇತುವೆ ತಲಪಿದಾಗ
ಗಂಟೆ ರಾತ್ರಿ ಎಂಟಾಗಿತ್ತು. ಹೊಳೆ ಅಬ್ಬರಿಸುತ್ತಿತ್ತು, ಸೇತುವೆ ಜೀರ್ಣವಾಗಿತ್ತು. ಆದರೂ ಸ್ಥಳೀಯರು
ಒಮ್ಮೆಗೆ ಒಬ್ಬಿಬ್ಬರಂತೆ ದಾಟಲಡ್ಡಿಯಿಲ್ಲ ಎಂದು ಕೊಟ್ಟ ಆಶ್ವಾಸನೆಯನ್ನು ನೆಚ್ಚಿದೆವು. ಅಲ್ಲಿ ಅದೃಷ್ಟ
ನಮ್ಮ ಜತೆಗಿದ್ದುದರಿಂದ ಸುಮಾರು ಅರ್ಧ ಗಂಟೆಯಲ್ಲಿ ಎಲ್ಲ ಎದುರು ದಂಡೆಯ ವಿಸ್ತಾರ ಜೈನ ಛತ್ರ ಸೇರಿಕೊಂಡೆವು.
ಛತ್ರಕ್ಕೆ ಗೋಡೆಗಳಿರಲಿಲ್ಲ. ಬಲವಾದ ಎತ್ತರದ
ಕಂಬಗಳ ಮೇಲೆ ನಿಂತ ಛತ್ರಿ, ಮತ್ತು ಶುದ್ಧ ಸಾರಣೆ ಮಾಡಿದ ನೆಲ ಮಾತ್ರ. ಬಹುಶಃ ಪರ್ವ ಕಾಲಗಳಲ್ಲಿ ಬರುವ
ಯಾತ್ರಿಗಳನ್ನು ಸುಧಾರಿಸಲಷ್ಟೇ ಸಿಬ್ಬಂದಿಯಿರುತ್ತಾರೋ ಏನೋ. ಅಂದು ನಿರ್ಜನ. ವಾಸ್ತವದಲ್ಲಿ ನಮ್ಮ
ಯೋಜನೆಯ ಕಲಾಪಗಳೆಲ್ಲ ಮುಗಿಯಿತೆನ್ನುವ ಹಂತದಲ್ಲಿ ನಾವು ನಿಜ ಶಿಬಿರವಾಸದ ಸಂತೋಷ ಅನುಭವಿಸಿದೆವು.
ಅದು ವನ್ಯದ ಏಕಾಂತವನ್ನೂ ಹಳ್ಳಿಯ ರಕ್ಷಣೆಯನ್ನೂ ಕೊಡುವಂತ ಸ್ಥಳ. ಹಿಂದಿನ ರಾತ್ರಿಯ ಮಳೆಯಲ್ಲಿ ನೆನೆದ ಗುಡಾರಾದಿ ಅಲ್ಲಿಗೆ ನಿರುಪಯುಕ್ತ ಎಲ್ಲವನ್ನೂ ಗಾಳಿಯಾಡಲು
ಬಿಡಿಸಿ ಹಾಕಿದೆವು. ಜಗುಲಿಯ ಅಂಚಿನಲ್ಲಿ ಸೌದೆ ಧಾರಾಳ ಸಿಕ್ಕಿದ್ದರಿಂದ ನಮ್ಮ ಸಾಮಗ್ರಿಗಳ ಮಿತಿಯೊಳಗೆ
ಅಡುಗೆಯ ವೈಭವನ್ನೂ ಅನುಭವಿಸಿದೆವು. ಸಮಯ ಒಂಬತ್ತು ಗಂಟೆಯೊಳಗೇ ಇದ್ದುದರಿಂದ ಮತ್ತು ಮಾರಣೇ ದಿನ ಸಂಜೆಯಷ್ಟೇ
ನಾವು ಮನೆಗೆ ಮರಳುವ ವಿರಾಮವೂ ಇದ್ದುದರಿಂದ ಮಲಗುವ ತರಾತುರಿ, ಬೆಳಗ್ಗೆ ಬೇಗವೇ ಏಳಬೇಕೆಂಬ ಒತ್ತಡವೂ
ಇರಲಿಲ್ಲ. ಕನಿಷ್ಠ ಗುಡಾರಗಳ ವಿಭಾಗೀಕರಣವೂ ಇಲ್ಲದೆ ಇಡಿಯ ತಂಡ ಒಂದು ಕುಟುಂಬದಂತೆ ಕಳೆದದ್ದನ್ನು
ನೆನೆಸುವಾಗ ಆ ಇಡೀ ಸಾಹಸ ಯಾತ್ರೆಯಲ್ಲಿ ಮಧುರ ಸ್ಮರಣೀಯವಾಗುವುದು ಅಯೋಜಿತ ಛತ್ರ ವಾಸವೊಂದೇ ಎನ್ನುವುದು
ನಿಜಕ್ಕೂ ಆಶ್ಚರ್ಯ. ನಿರ್ಯೋಚನೆಯಲ್ಲಿ ಮಲಗಿ, ಬೆಳಗ್ಗೆ ಮತ್ತೆ ನಮ್ಮ ಪಾಕದಲ್ಲೇ ಹೊಟ್ಟೆ ಗಟ್ಟಿ ಮಾಡಿ,
ಸಿಕ್ಕ ಬಸ್ಸಿನಲ್ಲಿ ಮಂಗಳೂರಿಗೆ ಮರಳಿದೆವು.
(ಮುಂದುವರಿಯಲಿದೆ)
[ಅದೆಲ್ಲಾ
ಸರಿ, ಜಗನ್ನಾಥ ರೈಗಳ ಬೈಕೇನಾಯ್ತು? ಮರೆತ ಸಂಗತಿಗಳ ವಿವರಣೆಯ ತಿಣುಕಾಟ ಬಿಟ್ಟು ಕುದುರೆಮುಖಕ್ಕೆ
ಸಂಬಂಧಿಸಿದಂತೆ ಅತ್ಯಂತ ಹೊಸ ಅನುಭವದ ವಾಪಾಸು ಯಾನ ಏನಾಯ್ತೆಂದು ಖಂಡಿತವಾಗಿಯೂ ಮುಂದಿನ ಕಂತಿನಲ್ಲಿ
ತಿಳಿಸುತ್ತೇನೆ. ಅದುವರೆಗೆ ನಿಮ್ಮ ಪ್ರತಿಕ್ರಿಯೆ ಯಾಕೆ ಮೌನವಾಗಿರಬೇಕು – ತುಂಬಿ, ಕೆಳಗಿನ ಟಿಪ್ಪಣಿ
ಅಂಕಣ.]
ಈ ಹಿರಿ ಗಾತ್ರದವನನ್ನು ಹಿರಿಮರದುಪ್ಪೆಗೆ ಕೊಂಡು ಹೋದದ್ದು ಮಾತ್ರವಲ್ಲ, ಇಂದು ನೀವು ಆ ನೆನಪುಗಳ ಸರಮಾಲೆಯನ್ನು ಪೋಣಿಸಿ, ಆ ಸಾಹಸ ಯಾತ್ರೆಯ ಮಧುರ ಕ್ಷಣಗಳನೆಲ್ಲ ಸ್ಮರಿಸಿ, ನನಗೆ ಮತ್ತೊಮ್ಮೆ ಹತ್ತಿ ಬಂದಂತೆ ಮಾಡಿದಕ್ಕಾಗಿ ವಂದನೆಗಳು.
ReplyDeleteಮತ್ತೊಮ್ಮೆ... ಬಾಲಣ್ಣನ.. ಟೆಂಟಿನ ನಂಟನ್ನ ನೆನಪಿಸಿ... ಅಂದಿನ ಸಾಹಸ ಯಾತ್ರೆಯ ಸೊಗಡನ್ನ ಮನಪಟಲದ ಮುಂದೆ ತಂದಿರಿಸಿದ ಮೀಸೇ ಮಾಮ.. ಅಶೋಕರಿಗೆ ನಮನಗಳು... ಜಂಕೂಸ್ ಅರವಿಂದ ರಾವ್
ReplyDeleteಇತ್ತೀಚೆಗೆ ನಾವು ಎಡಕುಮೇರಿ (ಸುಬ್ರಹ್ಮಣ್ಯ ಕಾಡು) ಚಾರಣಕ್ಕೆ (ವ್ಯವಸ್ಥಿತ) ಹೋಗಿದ್ದಾಗ ನಮ್ಮ ಸಹೋದ್ಯೋಗಿಯೋರ್ವರು ಹಿಂದೊಮ್ಮೆ ಅವರ ಚಾರಣತಂಡ ಕಾಡಿನಲ್ಲಿ ಕಳೆದು ಹೋದ ಕಥೆಯನ್ನು ಸ್ವಾರಸ್ಯಕರವಾಗಿ ವಿವರಿಸಿದ್ದರು. ನಿಮ್ಮ ಅನುಭವ ಇನ್ನೂ ರೋಚಕವಾಗಿದೆ.
ReplyDeleteಗಿರೀಶ್, ಬಜ್ಪೆ
ಶ್ರೀ ಅತ್ರಿಯವರೇ , ನಿಮ್ಮ ಈ ಲೇಖನದಲ್ಲಿ ನಾನು ಸುಳ್ಯದಲ್ಲಿರುವಾಗ ನಿಮ್ಮೊಡನೆ ಹಿರಿಮರುದುಪ್ಪೆ ಗೆ ಪಯಣಿಸಿದ
ReplyDeleteಸಮಯದ ಗ್ರೂಪ್ ಫೋಟೋ ನೋಡಿ ತುಂಬಾ ಖುಷಿಪಟ್ಟೆ . ಇದರಲ್ಲಿ ಮಂಗಳೋರಿನ ಯಜ್ಞ ಅವರೂ ಇದ್ದರು.
೧೯೮೦ -೮೪ ರ ನಡುವಿನದ್ದಗಿರುತ್ತದೆ.