09 January 2015

ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ

“ಎತ್ತಿನ ಹೊಳೆ ನೇತ್ರಾವತಿ ಅಲ್ಲ” -  ಸದಾನಂದ ಗೌಡರ ಸುಳ್ಳಿಗೆ ಈಚಿನ ಹಿರಿ ಸುಳ್ಳು ವಿನಯಕುಮಾರ್ ಸೊರಕೆಯವರದು – “ನದಿ ತಿರುವು ನೇತ್ರಾವತಿಯದ್ದೇ ಅಲ್ಲ, ಕುಮಾರಧಾರೆಯದ್ದು.” “ಜೈಶ್ರೀರಾಮ್” ಎನ್ನುತ್ತಲೇ ಬಂದವರು ಅಧಿಕಾರದ ಮದದಲ್ಲಿ, ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಇನ್ನೂರು ಮೆಗಾ ವಿದ್ಯುತ್ ಯೋಜನೆಯ ಅತ್ಯಾಚಾರಕ್ಕೆ ಇಳಿದಿದ್ದರು. (ಬಲಾತ್ಕಾರದಲ್ಲೇ ಅಡಿಗಲ್ಲು ಹಾಕಿದ್ದರು.) ದಿಲ್ಲಿಯಿಂದ ಜೈರಾಮ್ (ರಮೇಶ್) ಘೋಷ ಕೇಳಿದ್ದೇ ಹಸುರು ಸೆರಗನ್ನು ಬಿಟ್ಟು, ಕಲ್ಲು-ಕಿತ್ತೋಡಿದ್ದರು. ಆದರೆ ಇಂದು ನೇತ್ರಾವತಿಯ ಮೇಲಿನ ಕೆಟ್ಟ ದಿಟ್ಟಿಗೆ ಪಕ್ಷಾತೀತ ರಾಜಕೀಯದ ರೋಗವೇ ಬಡಿದಿದೆ. ಮುಕ್ಕಿಯಾ (?) ಮಂತ್ರಿ ಇನ್ನೂರು ಕೋಟಿ ಹರಿಸಿದ್ದು, ಸ್ವಂತ ಮಗ ಸಂಸತ್ಸ-ದಸ್ಯು (!) ಫಲಾನುಭವಿಯಾದದ್ದು – ನದಿ ತಿರುವಿನ ಹೆಸರಿನಲ್ಲೇ. ಚುನಾವಣಾ ಬನಾವಣೆಗಾಗಿ ವಿರೋಧಪಕ್ಷಿ ಮೊಯಿಲಿ ಚಿಕ್ಕಬಳ್ಳಾಪುರದಲ್ಲಿ (ಹುಟ್ಟದ ಮಗುವಿಗೆ ಕುಲಾವಿ ಹೊಲಿದಷ್ಟೇ ಜಾಣತನದಲ್ಲಿ) ಸಮೃದ್ಧ ನೀರಿನ `ಸ್ವಾಗತ ವ್ಯವಸ್ಥೆ’ಗೆ ಅಡಿಗಲ್ಲು ಹಾಕಿದ್ದೂ ಎತ್ತಿನಹೊಳೆ ಹೆಸರಿನಲ್ಲೇ.

ಪಕ್ಷ ರಾಜಕೀಯದಲ್ಲಿ ಚುನಾವಣೆಗಳ ಪಶ್ಚಾತ್-ಕಂಪನ ಇದ್ದದ್ದೇ. ಹಾಗೇ ಎತ್ತಿನಹೊಳೆಯ ಕುರಿತೂ ಖಂಡನೆ, ಮಂಡನೆಗಳು ನಡೆದಿದ್ದಂತೇ ಕೆಲಸ ನಿಧಾನಕ್ಕೆ ಶುರುವಾಗಿದೆ ಎಂಬ ಸುದ್ದಿ ಘಟ್ಟದ ಕೆಳಗಿನ ನಮ್ಮ ಕಿವಿಗೂ ಬಿತ್ತು. ಗುಂಡ್ಯ ೨೦೦ ಮೆಗಾವಾಟ್ ವಿದ್ಯುಚ್ಛಕ್ತಿ ಯೋಜನಾ ಕಾಲದಿಂದ ಬಹಳ ವ್ಯವಸ್ಥಿತವಾದ, ಕಾನೂನುಬದ್ಧವಾದ ಹೋರಾಟವನ್ನು ಸಂಘಟಿಸುತ್ತಾ ಬಂದಿರುವವರು ಹೊಂಗಡಳ್ಳ ಮೂಲದ, ಪ್ರಸ್ತುತ ಹಾಸನದಲ್ಲಿ ವಕೀಲ ವೃತ್ತಿ ನಿರತರಾಗಿರುವ ಕಿಶೋರ್ ಕುಮಾರ್. ಇವರು ಮಲ್ನಾಡು ಜನಪರ ಹೋರಾಟ ವೇದಿಕೆ ಹೆಸರಿನಲ್ಲಿ, ಸ್ವಂತ ಸಮಯ, ಖರ್ಚು ಹಾಕಿಕೊಂಡು ಊರಿನ ಮನೆಮನೆಗೆ ಸಾಲದೆಂಬಂತೆ, ನಿದ್ರೆಯಲ್ಲಿರುವ ಬೆಂಗಳೂರಿನಿಂದ ಮಂಗಳೂರಿನ ತನಕ ಓಡಾಡಿ ಅನ್ಯಾಯದ ವಿರುದ್ಧ ಜಾಗೃತಿ ನಡೆಸಿಯೇ ಇದ್ದಾರೆ. ಕಿಶೋರ್ ಕೂಡಾ “ಬನ್ನಿ, ಅಣೆಕಟ್ಟುಗಳ ನಿವೇಶನವನ್ನೂ ನಡೆದಿರುವ ಕೆಲಸವನ್ನೂ ಸ್ಪಷ್ಟವಾಗಿ ದಾಖಲಿಸೋಣ” ಎಂದರು.

ಬೆಳಿಗ್ಗೆ ಎಂಟೂವರೆ ಗಂಟೆಗೇ ನಾನು ಸುಂದರರಾವ್ ಬೈಕೇರಿ ಮಾರನಹಳ್ಳಿ ತಲಪಿದ್ದೆವು. ಹಾಸನದಿಂದ ಬರಲಿದ್ದ ಕಿಶೋರ್ ಮತ್ತವರ ವ್ಯವಸ್ಥೆಯನ್ನು, ರಾತ್ರಿ ಬಸ್ಸುಗಳಲ್ಲಿ ಬೆಂಗಳೂರಿನಿಂದ ವಿವೇಕ್ ಮತ್ತು ಸಂದೀಪ್, ಮಂಗಳೂರಿನಿಂದ (ಸುತ್ತು ದಾರಿಯಲ್ಲಿ) ದೀಪಿಕಾ ಬಂದು ಸಕಲೇಶಪುರದಲ್ಲಿ ಸೇರಿಕೊಳ್ಳಬೇಕಿತ್ತು. ಚರವಾಣಿಸಿದಾಗ ಅವರು ಇನ್ನೂ ತಡ ಎಂದುದರಿಂದ ನಾವು ಹೆದ್ದಾರಿಯಲ್ಲೇ ಆಲುವಳ್ಳಿಗೆ ಮುಂದುವರಿದೆವು. ಅಲ್ಲಿ ಬಲಕ್ಕೆ ಹೋದಾಗ ಸಿಗುವ  ಮೂರು ಅಣೆಕಟ್ಟು ಜಾಗಗಳನ್ನು ನಾವು ಹಿಂದೆ ಸರಿಯಾಗಿಯೇ ಗುರುತಿಸಿದ್ದೆವು. ಈಗ ಅವುಗಳ ಕಾರ್ಯಪ್ರಗತಿಯನ್ನಷ್ಟೇ ನೋಡುವುದು ಸುಲಭವೆಂದು ಬೈಕೋಡಿಸಿದೆವು.

ಆ ದಾರಿ ಮಳೆಗಾಲದಲ್ಲಿ ಕೊರಕಲು ಬಿದ್ದು, ಗೊಸರು ತುಂಬಿ ಜೀಪಿಗೂ ಅಸಾಧ್ಯವಾಗಿತ್ತು. ವಾರದ ಹಿಂದಷ್ಟೇ ಬೇರೊಂದಿಬ್ಬರ ಜತೆ ಭೇಟಿ ಕೊಟ್ಟಿದ್ದ ಸುಂದರರಾಯರು “ಅದೆಲ್ಲಾ ಈಗ ಫಸ್ಟ್ ಕ್ಲಾಸ್ ಆಗಿದೇರೀ” ಎಂದದ್ದು ನನಗೆ ಹೆಚ್ಚಿನ ಧೈರ್ಯ ಕೊಟ್ಟಿತ್ತು. ಯೋಜನೆಯ ಕಂತ್ರಾಟುದಾರ ದಾರಿಯನ್ನು ಕಾಡುಕಲ್ಲು ಜಡಿದು ಬಿಗಿಗೊಳಿಸಿ, ಅಂಚಿನ ಚರಂಡಿ ಶುದ್ಧಮಾಡಿ ಅಕಾಲಿಕ ಮಳೆಗೂ ಜಗ್ಗದಂತೆ ಮಾಡಿದ್ದ. ಮೊದಲ ನಿವೇಶನ ರೈಲ್ವೇ ಸೇತುವೆ ಕಳೆದದ್ದೇ ಸಿಗುವ ಹೊಳೆಯ ದೊಡ್ಡ ಎಡ ತಿರುವಿನಿಂದ (ಮೂರನೇ ಕಿಮೀ ಕಲ್ಲು) ಸ್ವಲ್ಪ ಮೇಲಂತೆ. ಹಿಂದೆ ಅಲ್ಲಿದ್ದ ಭಾರೀ ಸಿಮೆಂಟ್ ಕೊಳವೆಗಳ ಸಂಗ್ರಹ ಈಗ ಹೆಚ್ಚಾಗಿತ್ತು. ಆ ತಿರುವಿನಿಂದ ಹೊಸದಾಗಿ ಮರ ಪೊದರುಗಳನ್ನು ಮಟ್ಟ ಹಾಕಿ ಹೊಳೆ ಪಾತ್ರೆಗೆ ದಾರಿ ಇಳಿಸಿದ್ದರು. 

ಪುಟ್ಟ ತೊರೆಗೆ ಕೊಳವೆ ಹಾಕಿ, ದರೆ ತೋಡಿ, ರೈಲ್ವೇ ಸೇತುವೆಯ ಬುಡದವರೆಗೂ ದಾರಿ ಕೆಲಸ ನಡೆದಿತ್ತು. ಇಲ್ಲುರುಳಿದ ಮರಗಳ ಲೆಕ್ಕಕ್ಕೆ ಅರಣ್ಯ ಇಲಾಖೆಯ ಪರವಾನಗಿ ಇದೆಯೇ? ಹೊಳೆ ಪಾತ್ರೆಯಲ್ಲಿ ಕಾಮಗಾರಿ ಮತ್ತು  ಕಿರುತೊರೆಗಳಿಗೆ ಕೊಳವೆ ಕೊಟ್ಟು ದಂಡೆ ಕೊರೆಯಲು ನದಿ ಸಂರಕ್ಷಣಾ ಇಲಾಖೆಯ ಒಪ್ಪಿಗೆ ಇದೆಯೇ? ಎಲ್ಲಕ್ಕೂ ಮುಖ್ಯವಾಗಿ ಹೊಳೆಪಾತ್ರೆಯಲ್ಲೇ ಇರುವ ಸೇತುವೆಯ ಒಂದು ಭಾರೀ ಕುಂದದ ಬುಡದದವರೆಗೆ ಬಂಡೆ ಮಗುಚಿ, ಮರಳು ತೋಡುವಾಗ ರೈಲ್ವೇ ಭದ್ರತೆಯ ಪ್ರಶ್ನೆ ಇರಲಿ, ಸಾಮಾನ್ಯ ಜ್ಞಾನವಾದರೂ ಬೇಡವೇ? ಹೀಗೆ ಸುಂದರರಾಯರಿಗೇಳುತ್ತಿದ್ದ ಸರಣಿ ಪ್ರಶ್ನೆಗಳಿಗೆ ಉತ್ತರ ಹೇಳಲು ಅಲ್ಲಿ ಹಾಳುಬಿದ್ದ ಎರಡು ಯಂತ್ರಗಳು ಮಾತ್ರ ಇದ್ದವು, ಜನ ಇರಲಿಲ್ಲ. ಮುಂದುವರಿದೆವು.

ಕಡಗರಳ್ಳಿ ಬಳಿ ಇನ್ನೊಂದು ಅಣೆಕಟ್ಟೆ. ಹೊಳೆ ತಲಪುವ ಮುನ್ನ ಎಡ ಬದಿಯ ತಗ್ಗಿನ ವಿಸ್ತಾರ ಗದ್ದೆಯ ಪಾರ್ಶ್ವವನ್ನು ಎತ್ತರಕ್ಕೆ ತುಂಬಿ, ಆಚಿನ ಗುಡ್ಡದ ಮನೆಯವರೆಗೆ ಹೊಸಾ ದಾರಿಯಾಗಿತ್ತು. ಆ ಗುಡ್ಡದ ಮೇಲೆ ರಕ್ಕಸ ಯಂತ್ರಗಳು, ಲಾರಿಗಳು, ಜನ ಹರಿದಾಡುತ್ತಿದ್ದರು. ಹೊಳೆಪಾತ್ರೆಯಲ್ಲೇನೂ ಕೆಲಸ ಶುರುವಾಗಿರಲಿಲ್ಲ. ನಾವು ಗುಡ್ಡೆ ದಾರಿಯನ್ನು ಅನುಸರಿಸಿದೆವು. ಗುಡ್ಡದ ಬಲ ಓರೆಯಲ್ಲಿ ಸ್ಥಳದ ಯಜಮಾನನ ಸಾಂಪ್ರದಾಯಿಕ ಹಳ್ಳಿ ಮನೆಯಿತ್ತು. ಹಿಂದಿನ ವಾರವಷ್ಟೇ ಆ ಯಜಮಾನರನ್ನು ಮಾತಾಡಿಸಿದ್ದ ರಾಯರಿಗೆ ಹೊಸದಾಗಿ ಕೇಳಲೇನೂ ಇರಲಿಲ್ಲ. ಯಜಮಾನರು, ತೆಲುಗು ಕಂತ್ರಾಟುದಾರನ ಪೂರ್ವ ಪರಿಚಯ, ವಿಶ್ವಾಸಾರ್ಹತೆ, ಕೊನೆಗೆ ಕಾನೂನಾತ್ಮಕವಾಗಿಯೂ ಸಂದೇಹ ಪಡಲೇ ಇಲ್ಲವಂತೆ. ಕಂತ್ರಾಟುದಾರ ಮೊದಲ ವರ್ಷದ ಬಾಡಿಗೆಯೆಂದು ಕೊಟ್ಟ ಮೂವತ್ತುಸಾವಿರ ಪಡೆದು, ಕರಾರುಪತ್ರ ರುಜು ಮಾಡಿದ್ದಾರೆ. ಯಜಮಾನ ಕುಷಿಯಲ್ಲಿದ್ದಾರೆ. ಒಪ್ಪಂದ ಮೂರು ವರ್ಷಕ್ಕೆ. ನಿರುಪಯುಕ್ತ ಗುಡ್ಡೆಯಲ್ಲಿ ತತ್ಕಾಲೀನ ವಸತಿ ರಚನೆಗಳು, ಕಟ್ಟಡ ಸಾಮಾಗ್ರಿಗಗಳನ್ನು ಪೇರಿಸ್ತಾರೆ, ಅಣೆಕಟ್ಟೆಯ ಕೆಲಸ ಪೂರೈಸಿದಂದು ಖಾಲೀ ಮಾಡ್ತಾರೆ. ಇನ್ನೂ ದೊಡ್ಡ ಲಾಭ - ಸಾವಿರಾರು ರೂಪಾಯಿ ಖರ್ಚು ಮಾಡಿದ್ರೂ ಸಿಗದ ಒಳ್ಳೆ ರಸ್ತೆ ಮನೆವರೆಗೆ ಅವರ ಲೆಕ್ಕದಲ್ಲೇ ಆಗುತ್ತದೆ (ಈಗಾಗಲೇ ಆಗಿದೆ). ಹಾಗೂ ಮುಂದೆ, ಜಾಗ ಖಾಯಂ ಬೇಕಾದರೆ ಎಲ್ಲಾ ಸರ್ಕಾರೀ ವಶೀಕರಣ ನಿಯಮಗಳಂತೆ ಪರಿಹಾರವೂ ಸಿಗುತ್ತದೆ ಎಂಬ ಧೈರ್ಯ. ಕರಾರು ಪತ್ರದಲ್ಲಿ ನೀರಾವರಿ ನಿಗಮದ ಅಧಿಕಾರಿಯೋರ್ವನ ಭಾಗೀದಾರಿಕೆಯೂ ಇದೆಯಂತೆ. ಸುಂದರರಾಯರ ಚಿಂತೆಗೆ ಕೊನೆಯೇ ಇಲ್ಲ. “ಕಂತ್ರಾಟುದಾರನ ಯೋಗ್ಯತೆ, ನೀರಾವರಿ ನಿಗಮದ ಅಧಿಕಾರಿಯ ಭಾಗೀದಾರಿಕೆ, ಎರಡು ಮೂರನೇ ವರ್ಷಗಳ ಬಾಡಿಗೆ ಖಾತ್ರಿ, ಎಲ್ಲಕ್ಕೂ ಮಿಗಿಲಾಗಿ ನೆಲವನ್ನೇ ಮರಳಿ ಪಡೆಯಲು ಕಾನೂನುಕ್ರಮದ ಅನಿವಾರ್ಯತೆ ಮುಂತಾದವೆಲ್ಲ ಬಡ ಹಳ್ಳಿಗರಿಗೆ ತಿಳಿಯುವುದೇ ಇಲ್ಲ.”

ಗುಡ್ಡದ ತಲೆಯನ್ನು ಮಟ್ಟಸ ಮೈದಾನ ಮಾಡಿದ್ದರು. ಅದರ ಮಗ್ಗುಲುಗಳಲ್ಲಿ ಏನೋ ಕಟ್ಟಡಗಳ ರಚನೆ ನಡೆದಿತ್ತು. ಗುಡ್ಡದ ಒತ್ತಿನ ನೆಲಗಳಿಂದ ಕೂಲಿಯಾಳುಗಳು ಅಡುಗೆ ಮುಂತಾದವಕ್ಕೆ ಸೌದೆ ಸಂಗ್ರಹ ನಡೆಸಿದ್ದರು. ಪುಟ್ಟ ತೊರೆ ನೀರಂತೂ ಸಾರ್ವಜನಿಕ ಸೊತ್ತೇ ಅಲ್ಲವೇ. ಊರ ದನಗಳು ದೂರದ ಗೋಮಾಳ ಹುಡುಕಿಕೊಂಡು ಹೋಗಿರಬೇಕು. ಮೂರನೇ ಅಣೆಕಟ್ಟು ಪ್ರದೇಶ – ಹೊಂಗಡಳ್ಳ, ಅಲ್ಲಿ ಇನ್ನೂ ಕೆಲಸವೇನೂ ಶುರುವಾಗಿಲ್ಲ ಎಂದು ತಿಳಿದುದರಿಂದ, ಅತ್ತ ಹೊರಳದೆ ನಾವು ಮಾರನ ಹಳ್ಳಿಗೆ ಮರಳಿದೆವು.

ಮಾರನ ಹಳ್ಳಿಯಿಂದ ಕಾಡ್ಮನೆ, ಹಾನುಬಾಳಿನತ್ತದ ಶೋಧವನ್ನು ನಾವು ಮೊದಲ ಭೇಟಿಯಲ್ಲೇ ಪ್ರಯತ್ನಿಸಿದ್ದು ನಿಮಗೆ ತಿಳಿದೇ ಇದೆ (ಚಿಟಿಕಿಸಿ ಓದಿ: ಎತ್ತಿನ ಹೊಳೆ ಮತ್ತು ಸಂಶೋಧನೆ). ಅಂದು ನಾವು ಕೊನೆಯ ಭೇಟಿಕೊಟ್ಟದ್ದು ಟಸ್ಕ್ ಅಂಡ್ ಡಾನ್ ಎಂಬ ರಿಸಾರ್ಟಿಗೆ. ಅದರ ಮಾಲಿಕ ಎಸ್ಸೆಮ್ ವಿಕ್ರಂ ಜಮೀನುದಾರನೂ ಹೌದು, ಪರಮ ಸಾಹಸಿಯೂ ಹೌದು. ಇವರ ರಿಸಾರ್ಟಿನ ಪಕ್ಕದಲ್ಲೆ ಕಣ್ತುಂಬುವಂತೆ ಕಾಣುತ್ತಿತ್ತೊಂದು ಮಹಾಬೆಟ್ಟ. ಅದರ ಅಮರಗರ್ಭದಿಂದ ಹುಟ್ಟುವ ಐದು ತೊರೆಗಳಲ್ಲಿನ ಪ್ರಧಾನ ತೊರೆಯೇ ಎತ್ತಿನಹೊಳೆ. ಆ ವಲಯವನ್ನು ಎರಡು ಮೂರು ಗಂಟೆಗಳ ಕಾಲ ಸ್ವತಃ ವಿಕ್ರಂ ನಮ್ಮನ್ನು ಸುತ್ತಿಸಿ ತೋರಿಸಿದ್ದರು. ಜತೆಗೆ ಪರೋಕ್ಷವಾಗಿ ಅವರೆಂಥ ಉತ್ಸಾಹಿ ಎನುವುದನ್ನೂ ಮನದಟ್ಟು ಮಾಡಿದ್ದರು. ಅಲ್ಲಿನ ಇತರ ತೊರೆಗಳೂ ಸೇರಿದಂತೆ ಒಟ್ಟಾರೆ ಪ್ರಾಕೃತಿಕ ತಿಳುವಳಿಕೆಗಳು, ಅದನ್ನು ಅನುಷ್ಠಾನದಲ್ಲಿ ಒಪ್ಪಿಕೊಳ್ಳದ ಅರಣ್ಯ ಇಲಾಖೆಯ ಮೂರ್ಖ ವ್ಯವಹಾರಗಳನ್ನೂ ವಿಕ್ರಂ ತೋರಿಸಿದ್ದರು. ವಿಕ್ರಂಗೆ ತುಸು ರಾಜಕೀಯ ಆಸಕ್ತಿಯೂ ಇದ್ದುದರಿಂದ ಈ ವಲಯದಲ್ಲಿ ಪರಿಚಯವಿರದ ಜನರಿಲ್ಲ, ನೋಡದ ಹಳ್ಳಿಯಿಲ್ಲ, ತಿರುಗದ ಕಾಡಿಲ್ಲ ಎನ್ನುವಷ್ಟು ಆಪ್ತತೆ . ಪೂರಕವಾಗಿ ಜನಪದ, ಸಾಹಿತ್ಯ ಸಂಗ್ರಹ ಮತ್ತು ಅಧ್ಯಯನವೂ ಅವರಲ್ಲಿ ಸಾಕಷ್ಟಿವೆ. ಸಹಜವಾಗಿ ನಮ್ಮ ಸದ್ಯದ ಸ್ಥಳವೀಕ್ಷಣೆಗೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ವಿಕ್ರಂ ತಮ್ಮದೇ ಕಾರಿನೊಡನೆ ಬಂದಿದ್ದರು. ವಿಕ್ರಂ ಜೊತೆಗೆ ಕಿಶೋರ್ ಕುಮಾರ್, ಸಂದೀಪ್, ಸುಂದರರಾವ್ ಮತ್ತು ನಾನು. ಅವರ ಗೆಳೆಯ ಸುಭಾಷ್ ಜೀಪಿನಲ್ಲಿ ಇತರರೆಂದು ಹಂಚಿಕೊಂಡೆವು. ನಾವು ಮಾರನಹಳ್ಳಿ ಕವಲಿನಿಂದ ಗುಡಾಣ ಕೆರೆ, ಕಾಡುಮನೆ ಎಸ್ಟೇಟಿನತ್ತ ಮುಂದುವರಿದೆವು. ಸುಭಾಶ್ ಬಳಗ ಕಡಗರಳ್ಳಿ, ಹೊಂಗಡಳ್ಳದತ್ತ ಸಾಗಿತು.
ಗಾಯಾಳುವಾದ ಸಲಗ – ಕುಂಟಾನೆ, ಈಗ ಹೇಗೆ ತನ್ನ ಸುತ್ತಾಟದ ವಲಯವನ್ನು ಸೀಮಿತಗೊಳಿಸಿದೆ ಎಂದೂ ಬೆಟ್ಟ ಕಣಿವೆಗಳ ಇಂಚಿಂಚು ವಿವರವನ್ನು ಹೇಳಿ, ಒಮ್ಮೆಗೇ ಇಲಾಖೆಯ ಮನುಷ್ಯನ ಮೇಗೆ ರೇಗಿದರು.“ಅಲ್ಲೋ ಮಾರಾಯಾ ನೀವ್ಯಾಕೆ ಪಟಾಕಿ ಹೊಡೀತೀರಿ. ಆ ಕುಂಟ ನೋವು ತಿನ್ನುತ್ತಾ ಇಲ್ಲಿಂದ ಓಡಿ ಇನ್ನೊಂದು ಕಡೆ ಮುಗ್ದ ಕೃಶಿಕನೊಬ್ಬನ ಮೇಲೆ ಸೇಡು ತಿರ್ಸುತ್ತೆ. ನೀವು ಮತ್ತೆ ಅಲ್ಲಿ ಪರಿಹಾರಂತೆಲ್ಲ ಮತ್ತೆ ಪಟಾಕಿ ಹೊಡೀತೀರಿ. ನಿಮ್ಗೆ ಬೇರೆ ಕೆಲಸವಿಲ್ವಾ...”

ಕಾಡುಮನೆ ಟೀ ಎಸ್ಟೇಟಿನ ಮ್ಯಾನೇಜರ್ ಕಾರ್ಯಪ್ಪನವರನ್ನು ಅಪರಾಹ್ನ ಅವರ ಕಛೇರಿಯಲ್ಲೇ ಭೇಟಿಯಾಗಿದ್ದೆವು. ಅಲ್ಲಿ, ಕಡಗರವಳ್ಳಿಯ  ಯಜಮಾನನಿಗೆ ಬೇರೇನೂ ತಿಳಿಸದೆ, ನೇರ ಕರಾರು ಪತ್ರ ಕೊಟ್ಟ ಇಲಾಖೆ, ಇಲ್ಲಿ ಎಸ್ಟೇಟಿನ ಘನಸ್ಥಿಕೆ ತಿಳಿದಂತೆ ಮನವಿ ಕಳಿಸಿತ್ತು, ವಿಚಾರವಿನಿಮಯ ಸಭೆಗೆ ಆಹ್ವಾನಿಸಿತ್ತು. ಪತ್ರದಲ್ಲೂ ಮರಸಿನ ಹಿಂದಿನ ಕತ್ತಿಯ ಸುಳುಹು ಹತ್ತದಂತೆ ಜಾಣತನ ಮೆರೆದಿತ್ತು. ಕುಡಿಯುವ ನೀರಿನ ಯೋಜನೆ, ವರ್ಷದಲ್ಲಿ ಮೂರೇ ತಿಂಗಳು ಕಾರ್ಯಾಚರಣೆ, ಅದೂ ಕೊಳವೆ ಸಾಲು ಹಾಕಿ ಅಲ್ಪ ಶಕ್ತಿಯಲ್ಲಿ ಪಂಪ್ ಮಾಡುವುದು ಎಂದಿತ್ಯಾದಿ. ಒಕ್ಕಣೆ ಕಿಶೋರರ ಚಾಣಾಕ್ಷ ಕಣ್ಣಿಗೆ ಕಾಣದಿರಲಿಲ್ಲ. ಅವರು ವಿಶ್ಲೇಷಣೆಗಿಳಿದಾಗ, ಸ್ವತಃ ಅಸಂಖ್ಯ ಮೋಟಾರ್ ಚಲಾಯಿಸಿ ಚಾ ತೋಟಕ್ಕೆ ನೀರು ಚಿಮುಕಿಸುವ ಕಾರ್ಯಪ್ಪನವರಿಗೆ ಇಲಾಖೆಯ ಹುನ್ನಾರಗಳು ಅರ್ಥವಾಯ್ತು.

ಮೂರು ತಿಂಗಳೇ ಆದರೂ ಮುಳುಗಡೆಯ ವ್ಯಾಪ್ತಿ ಮತ್ತದರಿಂದ ಎಸ್ಟೇಟಿನ ಮುಳುಗಡೆಯಿಂದ ತೊಡಗಿ ಇತರ ಪರಿಣಾಮಗಳು ಏನು? ವರ್ಷಪೂರ್ತಿ ಕಟ್ಟೆ, ಯಂತ್ರಗಳ ಸ್ಥಿತಿ ಕಾಪಾಡುವ ಸಿಬ್ಬಂದಿ, ಜತೆಗೆ ಮಳೆಗಾಲದ ಹೆಚ್ಚುವರಿ ಸಿಬ್ಬಂದಿಗೆ ವಸತಿಯಿಂದ ಹಿಡಿದು ಎಲ್ಲಾ ನಾಗರಿಕೆ ಸೌಲಭ್ಯಗಳು ಹೇಗೆ? ಅಸಾಧ್ಯ ನೀರ ಹರಿವನ್ನು ಎತ್ತುಗಡೆ ಮಾಡಲು ಬೇಕಾದ ಅಸಾಮಾನ್ಯ ಶಕ್ತಿಗೆ ಹೊಸ ವಿದ್ಯುಚ್ಛಕ್ತಿ ಎಲ್ಲಿದೆ? ಅದು ಏನಾದರಾಗಲಿ, ಅದನ್ನು ತರುವ ಭಾರೀ ಸ್ತಂಭಗಳು ಹಾಗೂ ಆ ತಂತಿಯ ನೆರಳಿನ ಸ್ಥಳಗಳೆಲ್ಲ ಮತ್ತೆ ಎಸ್ಟೇಟಿನದ್ದೇ ಅಲ್ಲವೇ? ನೀರನ್ನು ಹೊತ್ತ ಭಾರೀ ಕೊಳವೆ ಸಾಲು ಮತ್ತದರ ಆರೈಕೆಗೆ ಅದರಗುಂಟ ದಾರಿ ಇತ್ಯಾದಿಯೂ ಎಸ್ಟೇಟಿನದೇ ನೆಲವಲ್ಲವೇ? ವಿಸ್ತೃತ ನೆಲದಲ್ಲಿ ಏಕಬೆಳೆಯಾಗಿ ಮಾತ್ರ ಯಶಸ್ವಿಯಾಗಬಲ್ಲ ಚಾ ತೋಟದೊಳಗೆ ಈ ಎಲ್ಲ ರಚನೆಗಳು, ಚಟುವಟಿಕೆಗಳು ಕಂಪೆನಿಗೆ ಸಹ್ಯವೇ? ಕುಡಿವ ನೀರೆಂದು ಹೇಳಿಕೊಂಡರೂ ಹೇಳಿಕೆ ಕೊಡುವವರು ನಿರಾವರಿ ಸಚಿವರೇಕೆ? ಕಿಶೋರ್ ಕೆದಕುತ್ತಿದ್ದರು, ಕಾರ್ಯಪ್ಪರಾದಿ ನಾವು ಮೂಕವಿಸ್ಮಿತರಾಗುಳಿದೆವು.


ಕಾಡುಮನೆಗೆ ಹೋಗುತ್ತಿದ್ದಾಗಲೇ ಅರ್ಧ ದಾರಿಯಲ್ಲಿ - ಗುಡಾಣಕೆರೆ ಎಂಬಲ್ಲಿ ಚಂದ್ರೇಗೌಡರು ನಮಗೆ ಸಿಕ್ಕಿದ್ದರು. ಅವರು ಕಿಶೋರ್, ವಿಕ್ರಂರಿಗೆ ಪೂರ್ವ ಪರಿಚಿತರು. ಚಂದ್ರೇಗೌಡ ಮತ್ತು ಅವರ ನೆರೆ ತೋಟದ ಕುರುವಿಲ್ಲಾ ಎಂಬವರಿಗೆ ಸೇರಿದ ಜಾಗಗಳಲ್ಲೂ ಎತ್ತಿನಹೊಳೆ ಯೋಜನೆಯ ವಿಷವೃಕ್ಷ ನೆಲೆಯೂರಲಿತ್ತು. ಕಾಡುಮನೆಯಿಂದ ಮರಳುವ ದಾರಿಯಲ್ಲಿ ನಾವು ಚಂದ್ರೇಗೌಡರನ್ನು ಚರವಾಣಿಯಲ್ಲಿ ಸಂಪರ್ಕಿಸಿ ಅವರ ತೋಟಕ್ಕೆ ಹೋಗಿದ್ದೆವು. ಕಾಡುಮನೆ – ಮಾರನಹಳ್ಳಿ ಮುಖ್ಯ ರಸ್ತೆಯಿಂದ ಸುಮಾರು ಎರಡು ಕಿಮೀ ಉದ್ದಕ್ಕೆ ಕುರುವಿಲ್ಲರಿಗೆ ಸೇರಿದ ದಟ್ಟ ಕಾಡನ್ನು ಸೀಳಿ ಯೋಜನೆಯ ಕಂತ್ರಾಟುದಾರ ಹೊಸ ದಾರಿ ಮಾಡಿಯಾಗಿತ್ತು. ಅಲ್ಲಿಂದ ಮುಂದೆ ಚಂದ್ರೇಗೌಡರ ತೋಟದೊಳಗೇ ಬರಲಿದ್ದ ಅಣೆಕಟ್ಟಿನ ನಿವೇಶನ, ಅಂದರೆ ತೊರೆ ಪಾತ್ರೆಗಿಳಿಯಲು ರಾತೋರಾತ್ರಿ ಜೆಸಿಬಿ ಚಲಾಯಿಸಿದ್ದರಂತೆ. ಈ ಸಂಬಂಧ ಕುರುವಿಲ್ಲರ ನೌಕರರ ಮೇಲೆ ಕಂತ್ರಾಟುದಾರನ ಜನಗಳು ಕೈ ಮಾಡುವುದಕ್ಕೂ ಹೇಸಿಲ್ಲವಂತೆ. ಸಂತ್ರಸ್ತರಿಬ್ಬರೂ ಗಡವ ನಾಯಿಯೆದುರು ಮೂಲೆಗೆ ಬಿದ್ದ ಬೆಕ್ಕಿನಂತೆ ಕೂಡಲೇ ನ್ಯಾಯಿಕ ಮೊರೆಹೋಗಿ ತತ್ಕಾಲೀನ ತಡೆಯಾಜ್ಞೆ ತಂದಿದ್ದಾರೆ. 

ಸಾರ್ವಜನಿಕ ಸಭೆಗಳಲ್ಲಿ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಹೇಳಿದ್ದೇ ಹೇಳಿದ್ದು “ಜನಗಳನ್ನು ಒಲಿಸಿಕೊಂಡು ನಡೆಯುವ, ಮುಳುಗಡೆ ಮರುವಸತಿಯ ಸಮಸ್ಯೆಯೇ ಉದ್ಭವಿಸದ ಯೋಜನೆಯಿದು.” ಯೋಜನೆಯ ಮೊಳಕೆಯಲ್ಲೇ ಹೀಗಾದರೆ ಮುಂದೆ ಹೇಗೋ ಎಂಬ ಚಿಂತೆಯನ್ನು ಕಾರ್ಯಪ್ಪ, ಚಂದ್ರೇಗೌಡ, ಕುರುವಿಲ್ಲರ ಜತೆ ನಾವೆಲ್ಲಾ ತಲೆತುಂಬಾ ತುಂಬಿಕೊಂಡು ಮರಳಿದೆವು.

ಎತ್ತಿನ ಹೊಳೆಯ ಈ ಸುಳ್ಳಿನ ಪ್ರವಾಹ ಜನರನ್ನು, ಸಾರ್ವಜನಿಕ ಹಣವನ್ನು, ಪಾರಿಸರಿಕ ಸಮತೋಲನವನ್ನು ಇನ್ನಿಲ್ಲದಂತೆ ಮುಳುಗಿಸುವುದಂತೂ ಖಾತ್ರಿ.


1 comment:

  1. ಸಾವಿರ ಸುಳ್ಳು ಹೇಳಿ ನೇತ್ರಾವತಿಯನ್ನು ತಿರುಗಿಸುವ ರಾಜಕಾರಣಿಗಳ ತಂತ್ರ ಖಂಡಿತವಾಗಿಯೂ ಸಾರ್ವಜನಿಕ ಹಣವನ್ನು, ಪಾರಿಸರಿಕ ಸಮತೋಲನವನ್ನು ಹದಗೆಡುಸುತ್ತದೆ. ಇದಕ್ಕೆಲ್ಲಾ ಮೌನದಿಂದ ವಿರೋದ ವ್ಯಕ್ತ ಪಡಿಸದ ಜನಸಾಮಾನ್ಯರೇ ಹೊಣೆ. ಇನ್ನಾದರೂ ಎಚ್ಹೆತ್ತು ಹೋರಾಡಿ ಎಂದು ಆಶಿಸುವ.

    ReplyDelete