27 January 2015

ದುಃಖಿತನಾದ ದೇಶಸಂಚಾರಿ

ಅಧ್ಯಾ ನಲ್ವತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತೆರಡನೇ ಕಂತು

ಆ ರಾತ್ರಿ ನಾವು ಮಲಗುವಾಗ ಬಹಳ ಹೊತ್ತಾಗಿತ್ತು. ಮಿ. ವಿಕ್ಫೀಲ್ಡರ ಮನೆಯಲ್ಲಿ ನಡೆದ ಸಂಗತಿಗಳನ್ನೆಲ್ಲಾ ಅತ್ತೆಗೆ ತಿಳಿಸಿದೆನು. ಅತ್ತೆಗೆ ಅದನ್ನೆಲ್ಲಾ ಕೇಳಿ ಬಹಳ ಅಸಮಾಧಾನವಾಯಿತು. ತನ್ನ ಅಸಮಾಧಾನವನ್ನು ಸಹಿಸಲಾರದೆ ಅವಳು ತನ್ನ ಎರಡೂ ಕೈಗಳನ್ನು ಎದೆಗೆ ಅಡ್ಡವಾಗಿಟ್ಟುಕೊಂಡು ನಮ್ಮ ಕೋಣೆಯಲ್ಲಿ ಅತ್ತಿತ್ತ ತಿರುಗಾಡಿದಳು. ಅವಳ ಮನಸ್ಸಿನಲ್ಲಿ ತಳಮಳವೆದ್ದಾಗಲೆಲ್ಲಾ ಅವಳು ಇದೇ ರೀತಿ ತಿರುಗುವುದು ಅವಳ ಅಭ್ಯಾಸ. ಈ ಹೊತ್ತಿನ ಅಸಮಾಧಾನ ಬಲವಾದದ್ದೇ ಎಂಬುದನ್ನು ಅವಳು ತಿರುಗಿದ ಸ್ಥಳ ಮತ್ತು ಸಮಯದಿಂದ ತಿಳಿಯಬಹುದಿತ್ತು. ಇಂದು ಅವಳು ಎಂದಿನ ಕೋಣೆ ಮಾತ್ರವಲ್ಲದೆ ಅದರಿಂದಲೂ ಮುಂದುವರಿದು ಮತ್ತೊಂದು ಕೋಣೆಯನ್ನು ಈ ರೀತಿಯ ನಡಿಗೆಗೆ ಉಪಯೋಗಿಸಿಕೊಂಡಳು. ಈ ರೀತಿ ಅವಳು ಸಾಧಾರಣ ಎರಡು ಘಂಟೆ ಕಾಲ ತಿರುಗಾಡಿದಳು. ಮಲಗುವ ಮೊದಲು ಅತ್ತೆ ಯಾವಾಗಲೂ ಸೇವಿಸುತ್ತಿದ್ದ ಪಾನೀಯ ಬೆಳಗ್ಗೆ ನೋಡುವಾಗಲೂ ಮೇಜಿನ ಮೇಲೆ ಇಟ್ಟಂತೆಯೇ ಇತ್ತು. ಆ ಮರುದಿನ ನಾನು ಅನೇಕ ವಿಧದಿಂದ ಆಲೋಚಿಸಿ ಮಿಸ್ ಸ್ಪೆನ್ಲೋ ಸಹೋದರಿಯವರಿಗೆ ಒಂದು ಪತ್ರವನ್ನು ಬರೆದೆನು.


ಈ ಸಮಯದಲ್ಲಿ ಒಂದು ದಿನ ನಾನು ಡಾ| ಸ್ಟ್ರಾಂಗರ ಮನೆಯಿಂದ ಬರುವಾಗ ರಾತ್ರಿಯಾಗಿತ್ತು. ರಸ್ತೆ, ಮನೆ, ಮೈದಾನ ಎಲ್ಲಾ ಕಡೆಗಳಲ್ಲೂ ಹಿಮ ಬಿದ್ದು, ರಸ್ತೆಯೇ ಬಹ್ವಂಶ ತೋರದಂತೆ ಆಗಿತ್ತು. ಜನರ ನಡಿಗೆಯ, ಅಥವ ವಾಹನ ಚಲಾವಣೆಯ ಯಾವ ಶಬ್ದವೂ ಕೇಳಿಸುತ್ತಿರಲಿಲ್ಲ. ಹೀಗಾಗಿ ನಾನು ಆದಷ್ಟು ಸಮೀಪದ ರಸ್ತೆಗಾಗಿ ಮನೆಗೆ ಬರುವುದು ಒಳ್ಳೆಯದೆಂದು ಸೈಂಟ್ ಮಾರ್ಟಿನ್ ಇಗರ್ಜಿ ಎದುರಿನ ರಸ್ತೆಯಲ್ಲೇ ಮನೆ ಕಡೆ ನಡೆಯತೊಡಗಿದೆನು.

ಆಗಲೇ ನನ್ನ ಸಮಸಮಕ್ಕೆ ರಸ್ತೆಯ ಇನ್ನೊಂದು ಕರೆಯಲ್ಲಿ ಇಗರ್ಜಿ ಕಡೆಗೆ ಒಬ್ಬ ವ್ಯಕ್ತಿ ನಡೆದು ಹೋಗುತ್ತಿದ್ದುದನ್ನು ಕಂಡೆನು. ಆ ವ್ಯಕ್ತಿಯನ್ನು ಗುರುತಿಸಬೇಕೋ ಗುರುತಿಸಿದರೆ ಆಗಬಹುದೋ ಕರೆಯಬಹುದೋ ಎಂದು ಯೋಚಿಸುತ್ತಿರುವಾಗಲೇ ಆ ವ್ಯಕ್ತಿ ಮಾಯವಾಯಿತು. ಅಷ್ಟರಲ್ಲೇ ಆ ವ್ಯಕ್ತಿಯನ್ನೇ ಹುಡುಕುತ್ತಾ ಹಿಂಬಾಲಿಸಿ ಬಂದಿರಬೇಕೆನ್ನುವಷ್ಟು ಕ್ಷಿಪ್ರದಲ್ಲೇ ಮತ್ತೊಂದು ವ್ಯಕ್ತಿ ಬಂದು ನನ್ನನ್ನು ದಾಟಿ ಹೋಗಿ ಇಗರ್ಜಿ ಮೆಟ್ಟಲಲ್ಲಿ ನಿಂತಿತು. ಈ ಎರಡನೇ ವ್ಯಕ್ತಿಯ ಸಮೀಪಕ್ಕೆ ನಾನು ತಲುಪುವಾಗ ಅದು ಮಿ. ಪೆಗಟಿಯವರೆಂದು ಗೊತ್ತಾಯಿತು. ಇವರನ್ನು ಗುರುತು ಹಚ್ಚಿದುದರ ಮೂಲಕ, ಮನಸ್ಸಿನ ಚಮತ್ಕಾರದಿಂದ ಅಥವಾ ಬುದ್ಧಿಗೂ ಮಿಕ್ಕಿದ ಇಂಗಿತದಿಂದ, ಮೊದಲಿನ ವ್ಯಕ್ತಿ ಹೆಣ್ಣು ಎಂದೂ ಅವಳು ಮಾರ್ಥಾ ಎಂದೂ ನಿಶ್ಚೈಸಿದೆನು.

ನಾನು ಮಿ. ಪೆಗಟಿಯವರನ್ನು ಕಂಡು ಸಂತೋಷಪಡುತ್ತಾ ಅವರಿಗೆ ಹಸ್ತಲಾಘವವನ್ನಿತ್ತೆನು. ನನ್ನನ್ನು ಕಂಡು ಅವರೂ ತುಂಬಾ ಸಂತೋಷಪಟ್ಟರು. ಅವರಿಗೆ ನನ್ನೊಡನೆ ಮಾತಾಡುವ ಸಂಗತಿ ತುಂಬಾ ಇರಬೇಕೆಂದು ಊಹಿಸಿ, ಸಮೀಪದಲ್ಲಿ ಬೆಂಕಿ ಹೊತ್ತಿಸಿಕೊಂಡು ಬೆಚ್ಚಗಿದ್ದ ಒಂದು ಕುದುರೆ ಲಾಯಕ್ಕೆ ಅವರನ್ನು ಕರೆದುಕೊಂಡು ಹೋದೆನು. ಅಲ್ಲಿ ಬೆಂಕಿ ಉರಿಸಿಟ್ಟು, ಆ ಲಾಯಕ್ಕೆ ಸಂಬಂಧಪಟ್ಟವರು ಎಲ್ಲಿಗೋ ಹೋಗಿದ್ದುದರಿಂದ ನಮಗೆ ಮಾತಾಡಲು ಬಹಳ ಅನುಕೂಲವಾಯಿತು. ಅಲ್ಲಿ ನಾವು ತುಂಬಾ ಮಾತಾಡಿದೆವು. ಮಿ. ಪೆಗಟಿಯ ತಲೆಗೂದಲು ಮೊದಲಿಗಿಂತಲೂ ಹೆಚ್ಚು ನರೆದಿತ್ತು. ಅವರ ಗಡ್ಡಮೀಸೆಗಳು ಬೆಳೆದು ಅವರನ್ನು ಎದುರೆದುರೇ ನೋಡಿದರೂ ಗುರುತಿಸುವುದು ಕಷ್ಟವಾಗುವಂತೆ ತೋರುತ್ತಿದ್ದರು. ಮುಖದಲ್ಲಿ ನೆರಿಗೆಗಳು ಹೆಚ್ಚಿದ್ದುವು. ಅವರು ಕೃಶರಾಗುತ್ತಾ ಬಾಡಿ ಕುಗ್ಗಿದ್ದರು. ಅವರ ದೇಹವು ಈ ತೆರನಾಗಿದ್ದರೂ ಎಮಿಲಿಯನ್ನು ಕುರಿತು ಮಾತಾಡುವಾಗ ಅವರ ಹಿಂದಿನ ಪರಿಪೂರ್ಣ ಶಕ್ತಿ, ಧೈರ್ಯ, ಹಟ, ಪ್ರೇಮ ಎದ್ದು ಬರುತ್ತಿದ್ದುವು. ಆವರೆಗೆ ಅವರು ಎಮಿಲಿಯನ್ನು ದೇಶವಿದೇಶಗಳಲ್ಲಿ ಹುಡುಕಿದ ಕಥೆಯನ್ನು ಬಹು ಸಮಾಧಾನವಾಗಿ, ಪ್ರೇಮಮಯ ಕಾತುರತೆಯಿಂದ, ದುಃಖ ಮಿಶ್ರಿತವಾಗಿ ಹೇಳಿದರು.

“ಮಾಸ್ಟರ್ ಡೇವೀ ನಾನು ಎಮಿಲಿಯನ್ನು ಎಲ್ಲೆಲ್ಲಿ ಹುಡುಕಿದ್ದೆನೆಂಬುದನ್ನು ಕೇಳು – ಪರವೂರ ಬಂದರುಗಳು, ದೊಡ್ಡ ದೊಡ್ಡ ನಗರಗಳು, ಬಿಸಿಲು ಚೆನ್ನಾಗಿದ್ದು ದೇಹ ಮನಸ್ಸುಗಳಿಗೆ ಹುರುಪು ಕೊಡುವಂಥ ಸ್ಥಳಗಳೆಲ್ಲ ಎಮಿಲಿಗೆ ಪ್ರಿಯವಾದುವೆಂದು ನಾನು ಅವಳ ಒಡನಾಟದಿಂದ ತಿಳಿದಿದ್ದುದರಿಂದ, ಅಂಥ ಅನೇಕ ಸ್ಥಳಗಳಿಗೆ ಹೋಗಿ ಹುಡುಕಿದೆನು. ಫ್ರಾನ್ಸಿನಿಂದ ಸ್ವಿಟ್ಸರ್ಲೇಂಡಿನವರೆಗೂ ಹುಡುಕಿದೆ. ನನ್ನ ಚರಿತ್ರೆಯನ್ನು ಕೇಳಿದವರೆಲ್ಲ ನನ್ನಲ್ಲಿ ತುಂಬಾ ಸಹಾನುಭೂತಿಯನ್ನು ತೋರಿಸಿದರು. ಅನೇಕ ಕಡೆಗಳಲ್ಲಿ ನನಗೆ ಸಹಾಯವನ್ನೂ ಆಶ್ರಯವನ್ನೂ ಕೊಟ್ಟರು. ನನ್ನ ದುಃಖವನ್ನು ಅವರ ದುಃಖವೆಂದೇ ಆ ಜನರು ತಿಳಿಯುತ್ತಾ ಕೆಲವು ಕಡೆ ನನ್ನ ಜತೆಯಲ್ಲಿ ಗುಂಪಾಗಿ ಬಂದು, ಬಹುದೂರದವರೆಗೂ ಬಂದು ನನ್ನನ್ನು ಕಳುಹಿಸಿಕೊಟ್ಟದ್ದೂ ಉಂಟು. ಸ್ವಿಟ್ಸರ್ಲೇಂಡಿನಲ್ಲೊಂದು ಕಡೆ ಅವರು ಇದ್ದ ಕುರುಹು ಬಹು ಸ್ಪಷ್ಟವಾಗಿ ಸಿಕ್ಕಿತು. ಆ ಕೂಡಲೇ ಎಮಿಲಿಗೆ ಕೊಟ್ಟು ಕರತರಲೋಸ್ಕರ, ಅವಳಿಗೆ ಅನುಕೂಲವಾದ ಉಡಿಗೆ ತೊಡಿಗೆಗಳನ್ನು ತಯಾರಿಸಿಕೊಂಡು ನಾನು ಆ ಸ್ಥಳಕ್ಕೆ ಹೋಗುವಾಗ ಸ್ವಲ್ಪ ತಡವಾಗಿ ಹೋಯಿತು – ನಾನು ಅಲ್ಲಿಗೆ ತಲುಪುವ ಮೊದಲೇ ಅವರು ಅಲ್ಲಿಂದ ಹೋಗಿಬಿಟ್ಟಿದ್ದರು.

“ಒಂದು ಪತ್ರವನ್ನು ಸಹ ಎಮಿಲಿಯು ನನಗೆ ಬರೆದಿದ್ದಾಳೆ. ಅದರಲ್ಲಿ ತನ್ನ ತಪ್ಪನ್ನೊಪ್ಪಿಕೊಂಡು ನನ್ನ ಕ್ಷಮೆಯನ್ನು ಬೇಡಿರುತ್ತಾಳೆ. ಆ ಪತ್ರ ಇಲ್ಲಿದೆ – ನೋಡು, ಡೇವೀ” ಎಂದಂದು ಅದನ್ನು ಓದಲೋಸ್ಕರ ನನಗೆ ಕೊಟ್ಟರು. ಪತ್ರವು ಮಿಸೆಸ್ ಗಮ್ಮಿಜ್ಜರಿಗೆ ಬರೆದದ್ದಾಗಿತ್ತು. ಪತ್ರವು ಹೀಗಿತ್ತು:

“ಓ! ಈ ಪತ್ರದಲ್ಲಿ ನನ್ನ ಕೈಬರಹವನ್ನು ಕಂಡು ನೀವು ಏನಂದುಕೊಳ್ಳುವಿರೆಂದು ನಾನು ಊಹಿಸಲಾರೆ! ಆದರೆ, ನನಗಾಗಿ ನೀವು ದಯಮಾಡಿ ಎರಡು ಮಿನಿಟಾದರೂ ಕ್ಷಮಾಭಾವನೆಯನ್ನು ತಂದುಕೊಂಡು ಪತ್ರವನ್ನು ಪ್ರಿಯ ಮಾವನಿಗೆ ಓದಿ ಹೇಳಿ. ನೀವು ನನಗೆ ಒಂದು ಚಿಕ್ಕ ಪತ್ರವನ್ನಾದರೂ ಬರೆಯಬೇಕು. ಮಾವ ನನ್ನನ್ನು ಬೈದನೆ, ನನಗಾಗಿ ದುಃಖಿಸಿದನೆ, ನಾನು ಯಾವತ್ತೂ ಮನೆಗೆ ಬರುತ್ತಿದ್ದ ದಾರಿಯನ್ನು ಈಗಲೂ ಅವನು ತನ್ನ ಕಿಟಕಿಯಿಂದ ನೋಡುತ್ತಾ ನನಗಾಗಿ ಕಾಯುತ್ತಿರುವನೇ? ನೀವೆಲ್ಲರೂ ಮೊದಲಿನಂತೆಯೇ ಇರುವಿರೇ? ಹೇಮ್ ಹೇಗಿದ್ದಾನೆ? ನಾನು ಮಾಡಿರುವ ಅಪರಾಧ ಸಣ್ಣದಲ್ಲವೆಂದೂ ಯಾವ ಕಠಿಣ ಶಿಕ್ಷೆಯೂ ನನ್ನ ಅಪರಾಧಕ್ಕೆ ಅಲ್ಪತರದ್ದೇ ಆಗುವುದೆಂದೂ ನನಗೆ ಗೊತ್ತಿದೆ. ಆದರೆ, ನನ್ನ ದುಃಖವೇ ನನಗೆ  ಸಾಕಷ್ಟು ಶಿಕ್ಷೆಯಷ್ಟೇ ಬಲವಾಗಿದೆ. ಇನ್ನು ಯಾವ ಶಿಕ್ಷೆಯೂ ಈ ದುಃಖದ ಶಿಕ್ಷೆಗಿಂತ ಕಠಿಣವಾಗಲಾರದು. ನನ್ನ ಎಡೆಬಿಡದ ದುಃಖದ ಒಂದು ನಿಮಿಷದಷ್ಟರ ಶಮನಕ್ಕಾಗಿಯೇ ಆದರೂ ನನಗೊಂದು ಪತ್ರ ಬರೆಯಿರಿ.”

ಆ ಪತ್ರದಲ್ಲಿ ಅವಳ ಹಂಗಾಮಿ ವಿಳಾಸವೂ ಇತ್ತು. ನಾನದನ್ನು ಮಿ. ಪೆಗಟಿವೆ ವಾಪಾಸು ಕೊಟ್ಟೆನು. ಮಿ.ಪೆಗಟಿ ಪತ್ರವನ್ನು ಭದ್ರವಾಗಿ ಅಂಗಿಯ ಜೇಬಲ್ಲಿಟ್ಟು, ಐವತ್ತು ಪೌಂಡಿನದೊಂದು ಮತ್ತು ಹತ್ತು ಪೌಂಡಿನದೊಂದು – ಹೀಗೆ ಎರಡು ಚೆಕ್ಕುಗಳನ್ನು ಜೇಬಿನಿಂದ ತೆಗೆದು ತೋರಿಸಿದರು. ಆಗಲೇ –
“ಈ ಹಣವನ್ನು ಎಮಿಲಿಯು ನನಗಾಗಿ ಕಳುಹಿಸಿದ್ದು. ಆದರೆ, ಮಾಸ್ಟರ್ ಡೇವೀ ನಾನು ಎಂಥ ಅಪಮಾನವನ್ನು ಸಹಿಸಬಹುದಾದರೂ ಅವನ ಹಣವನ್ನು ಮುಟ್ಟುವಷ್ಟರ ಅಪಮಾನವನ್ನು ಸಹಿಸಲಾರೆನು. ಈ ಹಣವನ್ನು ಎಂದಾದರೂ ಎಷ್ಟೇ ಕಷ್ಟವಾದರೂ ನಾನು ಅವನಿಗೆ ವಾಪಾಸು ತಲುಪಿಸಿಯೇ ತಲುಪಿಸುವೆನು” ಎಂದು ಹೇಳುತ್ತಾ ಅವುಗಳನ್ನು ಪುನಃ ಕಾಗದದಲ್ಲಿ ಸುತ್ತಿ ತನ್ನ ಒಳ ಅಂಗಿ ಜೇಬಿನಲ್ಲಿ ಭದ್ರವಾಗಿರಿಸಿಕೊಂಡರು.

ಇಷ್ಟು ಮಾತಾದನಂತರ ಮಿ. ಪೆಗಟಿ ಅವರು ಗೊತ್ತುಮಾಡಿಕೊಂಡಿದ್ದ ಹೋಟೆಲಿಗೆ ಹೋದರು. ನಾನು ನಮ್ಮ ಮನೆ ಕಡೆಗೆ ನಡೆಯತೊಡಗಿದೆ. ಹಿಮಮುಚ್ಚಿದ್ದ ರಸ್ತೆಯಲ್ಲಿ  ಯಾರ ಹೆಜ್ಜೆಯ ಕುರುಹೂ ಕಾಣದೆ ಎಲ್ಲವೂ ಬಿಳಿದಾಗಿ ತೋರುತ್ತಿತ್ತು. ಜನಸಂದಣಿಯಿರದ ರಾತ್ರಿಯಲ್ಲಿ, ಯಾವ ಶಬ್ದವನ್ನೂ ಕೇಳದೆ, ಯಾವ ನೋಟವನ್ನೂ ಕಾಣದೆ, ಏಕಾಂಗಿಯಾಗಿ ನಡೆದು ಬರುವಾಗ ಆವರೆಗೆ ನಡೆದುದೆಲ್ಲಾ ಕೇವಲ ಭ್ರಮೆ ಮಾತ್ರವಾಗಿದ್ದಂತೆ ನನಗೆ ತೋರುತ್ತಿತ್ತು.
(ಮುಂದುವರಿಯಲಿದೆ)

No comments:

Post a Comment