11 November 2014

ನಾನು ಸ್ಟೀಯರ್ಫೋರ್ತನ ಮನೆಗೆ ಪುನಃ ಹೋದುದು

ಅಧ್ಯಾ ಇಪ್ಪತ್ತೊಂಬತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತೊಂದನೇ ಕಂತು
ಸ್ಟೀಯರ್ಫೋರ್ತನ ಮನೆಗೆ ಹೋಗಲು ಮತ್ತು ಅಲ್ಲಿಂದ ಯಾರ್ಮತ್ತಿಗೆ ಹೋಗಲು ಸಹ, ಒಂದೆರಡು ದಿನ ರಜೆ ಪಡೆದುಕೊಂಡೆನು. ಸ್ಪೆನ್ಲೋ ಮತ್ತು ಜಾರ್ಕಿನ್ಸ್ ಒಕ್ಕೂಟದಲ್ಲಿ ನನಗೆ ಸಂಬಳವೆಂದು ಹಣ ಸಲ್ಲತಕ್ಕದ್ದಿಲ್ಲದಿದ್ದುದರಿಂದ ರಜೆ ಸುಲಭವಾಗಿ ಸಿಕ್ಕಿತು. ರಜ ಕೇಳಲು ಮಿ. ಸ್ಪೆನ್ಲೋರವರ ಸಮಕ್ಷಮಕ್ಕೆ ಹೋಗಿದ್ದಾಗ ಮಿಸ್ ಸ್ಪೆನ್ಲೋಳು ಕ್ಷೇಮದಲ್ಲಿದ್ದಾಳೆಯೇ ಎಂದು ವಿಚಾರಿಸಿದೆನು. ಹಾಗೆ ವಿಚಾರಿಸುವಾಗಲೇ ನನ್ನ ಗಂಟಲು ಕಟ್ಟತೊಡಗಿತು. ಮತ್ತು ಕಣ್ಣು ದೃಷ್ಟಿ ಮಸುಕಾಗತೊಡಗಿತ್ತು. ಆದರೆ ನನ್ನ ಮನಸ್ಸಿನ ಪರಿಸ್ಥಿತಿ ಹಾಗಿದ್ದರೂ ಮಿ. ಸ್ಪೆನ್ಲೋರವರು ನಾನು ಯಾರೋ ಒಬ್ಬ ಅಗಣ್ಯ ವ್ಯಕ್ತಿಯನ್ನು ಕುರಿತು ಕೇವಲ ಸಾಂಪ್ರದಾಯಿಕವಾಗಿ ವಿಚಾರಿಸಿದವನೆಂಬಂತೆ ಗ್ರಹಿಸಿ, ಅವಳು ಕ್ಷೇಮವಾಗಿದ್ದಾಳೆಂದು ತಿಳಿಸಿದರು.

ಈ ಸರ್ತಿ ನಾನು ಸ್ಟೀಯರ್ಫೋರ್ತನ ಮನೆಗೆ ಹೋದಾಗ ಅಲ್ಲಿ ಲಿಟ್ಮರನಿರಲಿಲ್ಲ. ಅವನ ಸ್ಥಾನದಲ್ಲೊಬ್ಬ ಸೌಮ್ಯವದನೆ ಹುಡುಗಿಯಿದ್ದಳು.

ಊಟವಾದನಂತರ ನಾವೆಲ್ಲರೂ ಜತೆಯಲ್ಲಿ ಕುಳಿತು ತುಂಬಾ ಮಾತಾಡುತ್ತಾ ಸ್ವಲ್ಪ ಸಮಯ ಕಳೆದೆವು. ಸ್ಟೀಯರ್ಫೋರ್ತನೂ ಅವನ ತಾಯಿಯೂ ಅವರ ಪೂರ್ವಕ್ರಮದಲ್ಲಿ ಬಹು ಪ್ರೀತಿಯಿಂದ ಮಾತಾಡುತ್ತಿದ್ದರೂ ಮಿಸ್ ಡಾರ್ಟಲಳ ಸ್ವಭಾವವೋ ವರ್ತನೆಯೋ ಸ್ವಲ್ಪ ಬದಲಾಗಿತ್ತು. ಅವಳು ಸ್ವಲ್ಪ ವಿಚಾರಮಗ್ನಳಾಗಿರುವಂತೆ, ಮತ್ತು ನಮ್ಮೆಲ್ಲರನ್ನೂ ಯಾವುದೋ ಒಂದು ಶೋಧನೆಗಾಗಿ ಪರೀಕ್ಷಿಸುತ್ತಿರುವಂತೆ, ಮೌನವಾಗಿಯೂ ಬಹು ಸೂಕ್ಷ್ಮವಾಗಿ ಅಲ್ಲಿನ ಎಲ್ಲಾ ನಡೆನುಡಿಗಳನ್ನು ಗ್ರಹಿಸುತ್ತಲೂ ಕುಳಿತಿದ್ದಳು. ಸ್ವಲ್ಪ ಹೊತ್ತು ಹೀಗೆ ಕಾಲ ಕಳೆದನಂತರ ಸ್ಟೀಯರ್ಫೋರ್ತನೂ ಅವನ ತಾಯಿಯೂ ಮಾತಾಡುತ್ತಾ ಮನೆಯ ಹೊರಗೆ ಹೋಗಿ ಹೂವಿನ ತೋಟದಲ್ಲಿ ತಿರುಗಾಡುತ್ತಿದ್ದರು.

ಅವರಿಬ್ಬರು ಹೊರಗಿದ್ದಾಗ ಮಿಸ್ ಡಾರ್ಟಲ್ಲಳೂ ನಾನೂ ಒಳಗೇ ಕುಳಿತು ಮಾತಾಡುತ್ತಿದ್ದೆವು. ತನ್ನ ಸಂಶಯ ನಿವೃತ್ತಿಗಾಗಿ ಎಂದು ತೋರುವಂತೆ – ಆದರೂ ತನ್ನ ನಿಶ್ಚಿತಾಭಿಪ್ರಾಯದ ಸಮರ್ಥನೆ ದೊರಕಬಹುದೆಂಬ ಉತ್ತರ ದೊರಕುವ ನಿರೀಕ್ಷಣೆಯಿಂದ – ಮಿಸ್ ಡಾರ್ಟಲ್ಲಳು ಸ್ಟೀಯರ್ಫೋರ್ತನ ಕಾರ್ಯಭಾರಗಳನ್ನು ಕುರಿತಾಗಿ ತುಂಬಾ ವಿಚಾರಿಸಿದಳು. ನನಗೆ ತಿಳಿದಷ್ಟು ಅವಳಿಗೆ ನಿಸ್ಸಂಕೋಚವಾಗಿ ತಿಳಿಸುವಾಗ ಅವಳ ಸಂಶಯ ಮೊದಲಿನಂತೆಯೇ ಉಳಿದಿರುವಂತೆ ಅವಳ ಮುಖದಿಂದ ಮತ್ತು ಕೆಲವು ಮಾತುಗಳಿಂದ ತೋರಿಬಂತು.

ಆ ರಾತ್ರಿ ಸ್ಟೀಯರ್ಫೋರ್ತನು ಬಹು ಜಾಣ್ಮೆಯಿಂದ ವರ್ತಿಸಿ ಮಿಸ್ ಡಾರ್ಟಲ್ಲಳನ್ನು ಬಹು ಶಾಂತಭಾವಕ್ಕೆ ತಂದಿದ್ದನು. ಯಾವುದೋ – ಅವಳಿಗೆ ಮಾತ್ರ ತಿಳಿದಿದ್ದ ಕಾರಣಗಳಿಂದಲೋ ಅಥವಾ ಅವಳ ಸ್ವಭಾವವೇ ಹಾಗಿದ್ದ ಕಾರಣದಿಂದಲೋ ಸದಾ ಅತೃಪ್ತಿ, ಸಂಶಯ, ಅಸಂತುಷ್ಟಿ, ಸಿಟ್ಟಿನಿಂದಿರುತ್ತಿದ್ದವಳು ಆ ರಾತ್ರಿ ಬಹು ಸೌಮ್ಯತೆಯನ್ನು ಪಡೆದಿದ್ದಳು. ಸ್ಟೀಯರ್ಫೋರ್ತನ ಅಪೇಕ್ಷೆ ಮೇರೆಗೆ ಅವಳು ಪಿಯಾನವನ್ನು ಬಾರಿಸುತ್ತಾ ಒಂದು ಸುಂದರವಾದ ಪದವನ್ನು ಹಾಡಿದಳು.  ಅವಳ ಹಾಡು ಉದ್ವೇಗಪೂರಿತವಾಗಿ, ಭಾವಪ್ರದವಾಗಿ, ಸುಶ್ರಾವ್ಯವಾಗಿ, ದೇವ ಗಂಧರ್ವರ ಗಾನವೇ ಎಂಬಷ್ಟು ಮನೋಹರವಾಗಿ ಹಾಡಲಾಗಿತ್ತು. ಸ್ಟೀಯರ್ಫೋರ್ತನು ತನ್ನ ವಾಕ್ಚಾತುರ್ಯ, ಪ್ರತಿಭೆ, ಚಮತ್ಕಾರ, ವ್ಯಕ್ತಿತ್ವದಿಂದ ಒಲಿಸಿಕೊಂಡು ಈ ಸ್ಥಿತಿಗೆ ತಂದಿದ್ದ. ಮಿಸ್ ಡಾರ್ಟಾಲ್ಲಳನ್ನು ಒಮ್ಮೆ ಮೈಮುಟ್ಟಿ ಮಾತಾಡಿಸಿಬಿಡೋಣವೆಂದು ಅವನು ಪ್ರಯತ್ನಿಸಿದಾಗ ಮಾತ್ರ ಮಿಸ್ ಡಾರ್ಟಲ್ಲಳು ಸಿಟ್ಟುಗೊಂಡ ಬೆಕ್ಕಿನಂತೆ ಹಠಾತ್ತಾಗಿ ಕ್ರೋಧ ತಾಳಿ, ಕುಳಿದಲ್ಲಿಂದ ಹಾರಿ ಮಾಯವಾದಳು.

ನಾವು ಮಲಗುವ ಮೊದಲು ನಾವಿಬ್ಬರು ಮಾತ್ರ ಒಟ್ಟಿಗೆ ಕುಳಿತು ಸ್ವಲ್ಪ ಮಾತಾಡಿದೆವು. ಆಗ ಸ್ಟೀಯರ್ಫೋರ್ತನು ತಮಾಷೆಗಾಗಿ –
“ಇಲ್ಲ ಡೆಯ್ಯಿ, ನಾನು ನಿನ್ನನ್ನು ಡೆಯ್ಯಿ ಎಂದು ಕರೆಯುವಾಗ, ನೀನು ನಿಷ್ಕಪಟಿ, ಪರಿಶುದ್ಧನು ಎಂಬ ಅರ್ಥದ ಹೆಸರನ್ನು ಪ್ರಯೋಗಿಸುತ್ತಿದ್ದೇನಷ್ಟೆ. ಹಾಗೆಯೇ ನೀನು ನನ್ನನ್ನು ನಿಷ್ಕಪಟಿ ಎಂದು ಸಂಬೋಧಿಸಬಲ್ಲೆಯೇನು?” ಎಂದು ಕೇಳಿದನು.
“ಖಂಡಿತವಾಗಿಯೂ ಹಾಗೆ ಸಂಬೋಧಿಸಬಲ್ಲೆ. ನಿನ್ನ ಗುಣಗಳನ್ನು ಮೆಚ್ಚಿ ತಾನೆ ನಾನು ನಿನ್ನ ಸ್ನೇಹಿತನಾದುದು?” ಎಂದು ನಾನಂದೆ.
ನನ್ನ ಈ ಉತ್ತರವನ್ನು ಕೇಳಿ ಸ್ವಲ್ಪ ಹೊತ್ತು ಅವನು ಸುಮ್ಮನೆ ಕುಳಿತನು. ಅನಂತರ, ಸ್ವಲ್ಪ ಅಂಜುತ್ತಿದ್ದವನಂತೆಯೂ ಹಿಂಜರಿಯುತ್ತಿದ್ದವನಂತೆಯೂ ತೋರುತ್ತ, ಅವನ ಸ್ವಭಾವ ಸಿದ್ಧವಾದ ಧೈರ್ಯ ಮತ್ತು ಚಾತುರ್ಯದಿಂದ, ನಗಾಡುತ್ತಾ ಅಂದನು –
“ನೋಡು ಡೆಯ್ಯಿ, ಏನಾದರೂ ಕಾರಣಗಳಿಂದ ನಾವು ಪರಸ್ಪರವಾಗಿ ಕಾಣದಿರುವ ಸಂದರ್ಭ ಬಂದರೆ ನನ್ನನ್ನು ನನ್ನ ಉತ್ತಮ ಗುಣಗಳಿಂದ ಮಾತ್ರ ಗಣಿಸಿ ನೆನೆಯಬಲ್ಲೆಯೇನು?”
“ನಿನ್ನನ್ನು ಕಂಡಾಗಲೂ ಕಾಣದಿರುವಾಗಲೂ ನಾನು ಗ್ರಹಿಸುವುದೇ ನಿನ್ನ ಗುಣಗಳನ್ನು, ಆ ಗುಣಗಳೆಲ್ಲ ಅತ್ಯುತ್ತಮವಾದವುಗಳೇ ತಾನೆ?” ಅಂದೆನು ನಾನು.
“ನನ್ನ ಉತ್ತಮ ಗುಣಗಳಿಂದ ಮಾತ್ರ ಗಣಿಸಿ ನೆನೆಯುವುದಾಗಿ ಅಭಯ ಕೊಡಬಲ್ಲೆಯಾ?” ಎಂದೂ ಕೇಳಿದನು. ಈ ಪ್ರಶ್ನೆಯಲ್ಲಿ ಸ್ವಲ್ಪ ದುಃಖದ ಛಾಯೆಯಿದ್ದಂತೆ ತೋರಿತು.
ನಾನಂದೆ-
“ನೀನು ಸರ್ವತ್ರ – ಸದಾ – ಉತ್ತಮನೇ ಆಗಿರುತ್ತೀ. ನಾನು ನಿನ್ನನ್ನು ನಿನ್ನ ಉತ್ತಮಗುಣಗಳಿಂದ ಮಾತ್ರ ಗ್ರಹಿಸಬಲ್ಲೆನು ಮತ್ತು ಗ್ರಹಿಸುವೆನು.”

ಮರುದಿನ ಬೆಳಗ್ಗೆ ಸ್ಟೀಯರ್ಫೋರ್ತನು ಏಳುವ ಮೊದಲೇ ನಾನು ಅಲ್ಲಿಂದ ಹೊರಹೋಗುವುದಾಗಿ ಹೇಳಿ, ಅವನಿಗೆ ಹಸ್ತಲಾಘವವನ್ನಿತ್ತು ನನ್ನ ಕೋಣೆಗೆ ಬಂದು ಮಲಗಿದೆನು. ನನ್ನ ಏರ್ಪಾಡಿನಂತೆ ನಾನು ಬೆಳಗ್ಗೆ ಎದ್ದು ಆ ಮನೆಯಿಂದ ಹೊರಟೆನು. ಹಾಗೆ ಹೋಗುವಾಗ, ನನ್ನ ಪಕ್ಕದ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದ ಸ್ಟೀಯರ್ಫೋರ್ತನನ್ನು ಒಮ್ಮೆ ನೋಡಿದೆನು.

ಸ್ಟೀಯರ್ಫೋರ್ತನು ಶಾಲೆಯಲ್ಲಿದ್ದಾಗ ಮಲಗಿ ನಿದ್ರಿಸುತ್ತಿದ್ದ ಕ್ರಮದಲ್ಲೇ ತನ್ನ ತೋಳಿನ ಮೇಲೆ ತಲೆಯನ್ನಿಟ್ಟುಕೊಂಡು ಸುಖವಾಗಿ ನಿದ್ರಿಸುತ್ತಿದ್ದನು. ಆ ದಿನ ಅರುಣೋದಯದಲ್ಲಿ ನಾನು ಸ್ಟೀಯರ್ಫೋರ್ತನನ್ನು ನೋಡಿದ ನಂತರ ಮತ್ತೆಂದೂ ನೋಡಲಿಲ್ಲವೆಂಬುದನ್ನು ಗ್ರಹಿಸಿದಾಗಲೆಲ್ಲ ನನಗೆ ದುಃಖವಾಗುತ್ತದೆ. ತನ್ನ ಜೀವನದ ಸ್ಫೂರ್ತಿಯಲ್ಲಿ ನನ್ನ ಕೈಯ್ಯನ್ನು ಕುಲುಕಿದ ಕೈಯ್ಯನ್ನು ಪುನಃ ಅದೇ ರೀತಿ ಕುಲುಕಿ ಕುಲಕಿಸಿಕೊಳ್ಳುವ ಯೋಗ ಮತ್ತೆ ದೊರಕಲಿಲ್ಲವೆಂಬುದು ಬಹು ದುಃಖದ ಸಂಗತಿ. ಪ್ರಪಂಚ ಜೀವನದಲ್ಲಿ – ಸೂಕ್ಷ್ಮವಾಗಿ ವಿಚಾರಿಸಿದರೆ – ಮನುಷ್ಯನ ಕೈ ಎಷ್ಟು ಸ್ವಲ್ಪ ಮಾತ್ರವಿದೆ! ಎಲ್ಲವೂ ಆ ಅಪಾರ ಮಹಿಮ ದೇವರ ಕೈಯ್ಯಲ್ಲಿ ಮಾತ್ರವಿದೆ! ದೇವರು ಅವನನ್ನು ರಕ್ಷಿಸಲಿ!


(ಮುಂದುವರಿಯಲಿದೆ)

No comments:

Post a Comment