24 October 2014

ಗಿರಿಧಾಮ ಮೂನಾರ್

(ಚಕ್ರವರ್ತಿಗಳು – ೨೯, ದಕ್ಷಿಣಾಪಥದಲ್ಲಿ… – ೬)

ಮೂನಾರ್ ದಕ್ಷಿಣ  ಭಾರತದ ವಿರಳ ಪರಿಚಿತ ಗಿರಿಧಾಮವೆಂದೇ ನನ್ನ ಕಾಲೇಜು ದಿನಗಳಲ್ಲಿ ಯಾವುದೋ ಪತ್ರಿಕೆಯಲ್ಲಿ ಓದಿದ್ದೆ. ಅಣೈಮುಡಿ, ದಕ್ಷಿಣ ಭಾರತದಲ್ಲೇ ಅತ್ಯುನ್ನತ ಶಿಖರವೂ ಅಲ್ಲೇ ಇದೆ ಎಂಬ ಅಂಶ ನನ್ನನ್ನು ಮುಖ್ಯವಾಗಿ ಆಕರ್ಷಿಸಿತ್ತು. ಪತ್ರಿಕಾ ಕಛೇರಿಯಿಂದ ಅದರ ಲೇಖಕರ ವಿಳಾಸ ಪಡೆದು ಹೆಚ್ಚಿನ ವಿವರ ಕೋರಿ ಪತ್ರಿಸಿದ್ದೆ. ಆ ಹಿರಿಯರು (ನನ್ನ ನೆನಪು ಸರಿಯಾದರೆ – ರಾಮಕೃಷ್ಣನ್ ಎಂದವರ ಹೆಸರು), ಅಪ್ಪಟ ಮಲೆಯಾಳಿಯಾದರೂ ಕನ್ನಡಿತಿ ಹೆಂಡತಿಯ ಸಹಾಯದಿಂದ ನನ್ನ ಪತ್ರ ಓದಿಸಿಕೊಂಡು, ಮಾರ್ಗ ಮಾಹಿತಿಗಳ ಕುರಿತು ನನಗೆ ಇಂಗ್ಲಿಷಿನಲ್ಲಿ ಉತ್ತರ ಬರೆದಿದ್ದರು. ಪ್ರಸ್ತುತ ಪ್ರವಾಸ ಯೋಚಿಸಿದಾಗ ನನ್ನ ಆದ್ಯತೆಯ ಪಟ್ಟಿಯಲ್ಲಿ ದೊಡ್ಡ ಹೆಸರು – ಮೂನಾರ್ ಮತ್ತು ಅಣೈಮುಡಿ. ಈ ಕಾಲಕ್ಕೆ ಕಾಲಧರ್ಮದಲ್ಲಿ ಅಣೈಮುಡಿ ಒಂದು ವನಧಾಮದ ಭಾಗವಾಗಿತ್ತು. ಹಾಗಾಗಿ ಆ ಶಿಖರ ಸಾಧನೆಗೆ ನಾನು ವನ್ಯ ಸಂಶೋಧಕ ಗೆಳೆಯ ಉಲ್ಲಾಸ ಕಾರಂತರ ಸಹಾಯ ಕೋರಿದೆ. ಅವರು ಮೂನಾರಿನ ಗೆಳೆಯ ಅಯ್ಯಮ್ಮರನ್ನು ಪರಿಚಯಿಸಿದ್ದರು. ಅಯ್ಯಮ್ಮರೊಡನೆ ಬೆಳೆದ ಪತ್ರವ್ಯವಹಾರದ ಫಲವಾಗಿ ನಾವಂದು ಅಪರಾಹ್ನ ಎರಡು ಗಂಟೆಯ ಸುಮಾರಿಗೆ, ನಿಶ್ಚಿಂತೆಯಿಂದ ಮೂನಾರ್ ಪ್ರವೇಶಿಸಿದ್ದೆವು.


ಮೂನಾರ್ ಒಂದು ಸ್ವತಂತ್ರ ಊರೇ ಅಲ್ಲ ಎನ್ನುವಷ್ಟು ಟಾಟಾ ಟೀ ಕಂಪೆನಿ ಅಲ್ಲಿ ವ್ಯಾಪಿಸಿತ್ತು (ಕಂಪೆನಿ ಸರಕಾರ?). ರಾಜ್ಯ ಸರಕಾರದ ವಿದ್ಯುತ್, ಕೇಂದ್ರ ಸರಕಾರದ ದೂರವಾಣಿ, ನೆಲ, ಜಲ ಎಲ್ಲಕ್ಕೂ ಅಲ್ಲಿ ಸಗಟು ಗಿರಾಕಿ ಟಾಟಾ. (ಈಗ ಯೋಚಿಸಿದರೆ ವನ್ಯ ಪರಿಸರಕ್ಕೆ ಪೂರ್ಣ ಟಾಟಾ ಬೈಬೈ!) ಅಲ್ಲಿನ ನಾಗರಿಕ ರಚನೆಗಳ ಹಿತ್ತಿಲು, ಮುಂತಿಲೂ ಬಿಡದಂತೆ ವ್ಯಾಪಿಸಿದ್ದ ಬೆಳೆ ಚಾ, ಚಾ! ಅಲ್ಲಿನ ನಾಮಕಾವಸ್ಥೆ ಪೇಟೆಯಿಂದ ಹತ್ತು ಕಿಮೀ ದೂರದ ಒಂದು ವಿಭಾಗ – ನೇಮಕ್ಕಾಡ್. ಅಯ್ಯಮ್ಮ ಅದರ ಮ್ಯಾನೇಜರ್. ಇವರು ಕನ್ನಡಿಗ, ಕೊಡಗಿನ ಸುಪುತ್ರ. ಮೂನಾರಿನಲ್ಲಿ ನಾವು ಮಾಡಿದ ಮೊದಲ ಕೆಲಸ, ಅಲ್ಲಿನ ಕಂಪೆನಿಯದೇ ಪುಟ್ಟ ದೂರವಾಣಿ ವಿನಿಮಯ ಕೇಂದ್ರಕ್ಕೆ ಹೋಗಿ  ಅಯ್ಯಮ್ಮನವರಿಗೆ ಫೋನ್. (ನೆನಪಿರಲಿ, ಆ ಕಾಲದಲ್ಲಿ ಕರತಳದ ಚರವಾಣಿ, ಸಾರ್ವಜನಿಕ ಕರೆ-ಕೇಂದ್ರಗಳ ಕಲ್ಪನೆ ಸಾರ್ವಜನಿಕದಲ್ಲಿ ಇರಲೇ ಇಲ್ಲ!) ಮತ್ತೆ ಸಿಕ್ಕ ಒಂದು ಸಾಮಾನ್ಯ ಹೋಟೆಲಿನಲ್ಲಿ ಊಟದ ಶಾಸ್ತ್ರ ಮುಗಿಸಿ, ಕಣ್ಣನ್ ದೇವನ್ ಹೆಲ್ತ್ ಕ್ಲಬ್ಬಿನ (ಇದು ಟಾಟಾ ಬಳಗದ್ದೇ) ವಠಾರ ಸೇರಿದೆವು.

ಊರಿನ  ಒಂದು ಅಂಚಿನ ಪುಟ್ಟ ಗುಡ್ಡೆಯ ಮೇಲಿನ ಹೆಲ್ತ್ ಕ್ಲಬ್ ಬ್ರಿಟಿಷ್ ಕಾಲದ ಒಂದು ಐಶಾರಾಮಿ ಬಂಗ್ಲೆಯೇ ಇದ್ದಿರಬೇಕು. ಅಲ್ಲಿನ ಹಕ್ಕಿನೋಟಕ್ಕೆ ತಪ್ಪಲಿನ ಆಟದ ಮೈದಾನ, ಅತ್ತಣ ಪೇಟೆಯೆಲ್ಲ ರಮ್ಯವಾಗಿಯೇ ತೋರುತ್ತಿತ್ತು. ಕ್ಲಬ್ ಆ ವಲಯದ ಎಲ್ಲಾ ಚಾ ತೋಟಗಳ ಉನ್ನತಾಧಿಕಾರಿಗಳ ಮನರಂಜನಾ ಕೇಂದ್ರವಿರಬೇಕು. ಅದಕ್ಕೆ ಸೇರಿದಂತೆ ಒಂದು ಪುಟ್ಟ ಅತಿಥಿಗೃಹವೂ ಇತ್ತು. ಅಲ್ಲೊಬ್ಬ ಮೇಟಿ, ಧಾರಾಳ ನೀರು, ಸ್ವಚ್ಛ ಶೌಚ, ಬೆಚ್ಚನ್ನ ಹಾಸಿಗೆ ಇತ್ಯಾದಿ ಸವಲತ್ತುಗಳಂತೂ ನಮಗೆ ಅಪ್ಯಾಯಮಾನವಾಗಿ ಹೊಂದಿತು. ಊಟ ತಿಂಡಿಗೆ ಮಾತ್ರ ಮೂನಾರ್ ಪೇಟೆಗೆ ಇಳಿಯುವುದು ನಮ್ಮ ಲೆಕ್ಕಕ್ಕೆ ವಿಹಾರವೇ ಅನ್ನಿಸಿತು. ಅಯ್ಯಮ್ಮ ಇವೆಲ್ಲವನ್ನೂ ನಮಗೆ ಅತ್ಯಂತ ಕಡಿಮೆ ದರದಲ್ಲೇ (ದಿನಕ್ಕೆ ಹತ್ತು ರೂಪಾಯಿ ಇದ್ದಿರಬೇಕು) ಒದಗಿಸಿದ್ದರು. ನಾಲ್ಕು ಗಂಟೆಯ ಸುಮಾರಿಗೆ ಸ್ವತಃ ಅಯ್ಯಮ್ಮನವರೇ ಅಲ್ಲಿಗೇ ಬಂದು (ನಮ್ಮದು ಪ್ರಥಮ ದರ್ಶನವಾದರೂ) ಬಹಳ ಹಳೆಯ ಸ್ನೇಹಿತನಂತೆ ಧಾರಾಳ ಮಾತಾಡಿಸಿದರು. ಮತ್ತೆ ಮರುದಿನದ ಶಿಖರಾರೋಹಣದಿಂದ ಹಿಡಿದು ನಮ್ಮೆಲ್ಲ ಉದ್ದೇಶಗಳಿಗೆ ಸಮಯ, ಸ್ಥಳ ಮತ್ತು ಸೌಕರ್ಯಗಳ ವಿವರವನ್ನೂ ಕೊಟ್ಟು ನಿರ್ಗಮಿಸಿದರು.

ಸಂಜೆ ಸಣ್ಣದಾಗಿ ಪೇಟೆಯೊಳಗೆ ಕಾಲಾಡಿಸಿದೆವು. ಕ್ಲಬ್ ಜಗಲಿ ಏರಿ ಸುತ್ತ ದೃಷ್ಟಿ ಹರಿಸಿದಾಗ ನನಗೋ ಬಾಲ್ಯದಲ್ಲಿ ಕಂಡ ಮಡಿಕೇರಿಯದೇ ನೆನಪು (೧೯೬೦ರ ದಶಕದ್ದು). ಪಾಪ್ಯುಲರ್ ರೆಸ್ಟುರಾದ ಪಕ್ಕದ ಹರಕು ಮೆಟ್ಟಿಲ ಸಾಲಿನಲ್ಲಿ ನಿಂತು ಕೊಹಿನೂರು ಮೈದಾನದ ಮೇಲೆ ನೋಟ ಹರಿದಿತ್ತು. ಅಲ್ಲಿಲ್ಲಿ - ಗೊಸರು ಭೂಮಿ, ಅದು ಗಟ್ಟಿಗೊಂಡಲ್ಲಿ, ಹಸಿರು ಹುಲ್ಲಿನ ಆವರಣಗಳಲ್ಲಿ, ಕಬಡ್ಡಿ, ಗೋಲಿ, ಬುಗುರಿಯಾಟದ ಕೂಟಗಳು ನಡೆದಿತ್ತು. ಬೀಡಾಡಿ ಕತ್ತೆ, ಜಾನುವಾರುಗಳು ದಿನದ ಚರಾವು ವಿರಾಮದಲ್ಲಿ ಮುಗಿಸಿ ಮನೆಯತ್ತವೋ ಅಲ್ಲೇ ಮೆಲುಕಾಡಿಸುವ ಠಾವು ಅರಸುತ್ತಲೋ ಸಾಗಿದ್ದುವು. ಜಳಜಳ ಹರಿಯುವ ತೋಡು ಮೈದಾನದ ಅಂಚು ನಿರ್ಧರಿಸಿ ನಿರಂತರ ಗೆರೆ ಎಳೆಯುತ್ತಲೇ ಇತ್ತು. (ಇದೇ ಮುಂದೆ ಖ್ಯಾತ ಅಬ್ಬಿಫಾಲ್ಸ್ ಹೆಸರಿನ ಜಲಪಾತವಾಗುತ್ತದೆ. ಹಾಗೇ ಇಂದಿನ ಸ್ವಚ್ಛ ಭಾರತ ಅಭಿಯಾನಕ್ಕೆ ಅತಿ ತುಚ್ಚ ಕಾರ್ಯಕ್ಷೇತ್ರವಾಗಿಯೂ ಒದಗುತ್ತಿರುವುದನ್ನೂ ನಾನಿಲ್ಲಿ ನೋವಿನಿಂದ ದಾಖಲಿಸಬೇಕಾಗಿದೆ. ಇಂದು ಅಬ್ಬಿ ಫಾಲ್ಸಿಗೆ ಹೋಗುವವರಿಗೆಲ್ಲ ನಾನು ತಪ್ಪದೇ ಎಚ್ಚರಿಸುತ್ತೇನೆ – ಅಲ್ಲಿನ ನೀರು ಮುಟ್ಟಿಸಿಕೊಳ್ಳಬೇಡಿ, ಕಾಯಿಲೆ ಬಂದೀತು!) ತೋಡು(ಡಿ!)-ರಾಗದ ಕಟ್ಟಾಭಿಮಾನಿಯಂತೆ ಆ ತೊರೆಯ ಅಂಚುಗಟ್ಟಿ ತೊನೆಯುತ್ತಿದ್ದ ದಟ್ಟ ಹಸುರಿನ ಪರಿಮಳ, ನಡುವೆ ಕಹಳೆ ಮುಖದಂತೆ ತೋರುತ್ತಿದ್ದ ದತ್ತೂರದ ಬಿಳಿ ಹೂ, ಭಿನ್ನಮತೀಯನಂತೆ ಕೆಂಪು ಕೋಳಿಜುಟ್ಟು (ಒಂದು ಸಸ್ಯ). ಎಲ್ಲ ಶೀತಲ ಕತ್ತಲ ಹೊದಿಕೆಯೊಳಗೆ ಜಾರುತ್ತಿದ್ದಂತೆ, ಶತಮಾನಗಳಿಂದ ಉಳಿದು ಬಂದಂತಿದ್ದ ಕೊಹಿನೂರ್ ಟೂರಿಂಗ್ ಟಾಕೀಸ್ - ತಟ್ಟಿ, ಜಿಂಕ್ಶೀಟಿನ ದೊಡ್ಡ ಗುಡಾರ, ದಿನದ ಪ್ರಥಮ ದೆಖಾವೆಗೆ “ನಮೋ ವೆಂಕಟೇಶಾಆಆ ನಮೋ...” ಸ್ವರ ತೆಗೆಯುತ್ತಿತ್ತು...

ಮಡಿಕೇರಿ ನೆನಪು ಹರಿದು, ಕಳೆದ ನಾಲ್ಕು ದಿನಗಳಲ್ಲಿ ಮೊದಲ ಬಾರಿಗೆ ನಾವು ನಾಲ್ವರು ಆರಾಮ ಕೂತು ಧಾರಾಳ ಹರಟೆ ಕೊಚ್ಚಿದ್ದೆವು. ಮುಳುಗು-ಸೂರ್ಯನ ಕಿರಣಗಳಿಂದ ಹೊಳೆದುತೋರುತ್ತಿದ್ದ ಶಿವನಮಲೈ ಶಿಖರಗಳು (ಸುದೂರದಲ್ಲಿ ಊರನ್ನು ಆವರಿಸಿದ ಗಿರಿಶ್ರೇಣಿ) ಮಸಕಾಗುತ್ತಿದ್ದಂತೆ, ಕೆಳ ಮೈದಾನದ ಆಟೋಟಗಳು ಪರದಾಟದಲ್ಲಿ ಮುಗಿಯುತ್ತಿದ್ದಂತೆ, ಪೇಟೆ ದೀಪ ಮಂಜುಗಳಿಂದ ಮಂದವಾಗುತ್ತಿದ್ದಂತೆ, ಕ್ಲಬ್ ಆವರಣದ ಸುಂದರ ಗುಲಾಬಿ ಡೇಲಿಯಾಗಳು ಸಂಜೆಗೆ ತುಸು ಮುನ್ನ ಬಂದ ಹನಿಮಳೆಯ ಸವಿಮುತ್ತುಗಳನ್ನು ಹೊತ್ತು ನಾಚಿ ಮರೆಗೆ ಸರಿಯುತ್ತಿದ್ದಂತೆ, ಇರುಳು ಎವೆ ಮುಚ್ಚಿತು. ನಾವು ವಿರಾಮದಲ್ಲಿ ಕಾಲೆಸೆಯುತ್ತ ಹೋಟೆಲಿಗೆ ಹೋಗಿ ಊಟ ಮಾಡಿ ಬಂದು, ದಪ್ಪ ಹಾಸಿಗೆಯ ಬೆಚ್ಚನೆ ರಗ್ಗುಗಳ ಬಸಿರು ಸೇರಿ, ಸುಂದರ ದೃಶ್ಯಗಳ ಕನಸಿಗೆ ಸಂದೆವು.

ಬೆಳ್ಳನೇ ಬೆಳಗಾಗಲಿಲ್ಲ; ಮನದ ಗಡಿಯಾರ ಜಾಗೃತವಾಗಿಟ್ಟದ್ದಕ್ಕೆ ಬೆಳಗ್ಗೆ ಕತ್ತಲು ಹರಿಯುವ ಮುನ್ನವೇ ಎದ್ದೆವು. (ಉತ್ತಿಷ್ಠ ನರ ಶಾರ್ದೂಲ!) ಪ್ರಾತರ್ವಿಧಿಗಳನ್ನು ಬೇಗನೇ ಪೂರೈಸಿ ಹೋಟೆಲಿನವನಿಗೆ ಉದಯರಾಗ ಹಾಡಿದೆವು. ನಮ್ಮ ಅದೃಷ್ಟಕ್ಕೆ ದೊಡ್ಡ ಬೋಗುಣಿಯಲ್ಲಿ ಬಂದ ಉಪ್ಪಿಟ್ಟು ಅದೇ ತಾನೇ ಕೊಳಕು ಕನ್ನಡಿ ಕಪಾಟಿನಲ್ಲಿ ಕುಳಿತು, ಹಬೆಯಲೆಯಲ್ಲಿ ಸುವಾಸನಾವಾರ್ತೆಗಳನ್ನು ಪ್ರಸರಿಸುತ್ತಿತ್ತು. ನಾಲ್ಕು ಕುಪ್ಪಿ ಲೋಟದ ಕುಡಿ-ನೀರಿಗೆ ತನ್ನ ಬೆರಳದ್ದಿ ತಂದು ಕುಕ್ಕಿದ ಮಾಸಲು ಪಂಚೆಯ ಮಾಣಿ (ನಿಜದಲ್ಲಿ ನಡು ಹರಯದ ಅರೆ ಮುದುಕ), ಮುಗುಮ್ಮಾಗಿ ಬಾಯಿ ಆಡಿಸುತ್ತ “ಏನಾಗಬೇಕು” ಎನ್ನುವ ಅರ್ಥದ ಹೂಂಕಾರ ಹೊರಡಿಸಿದ. ಇನ್ನೇನು, ಉಪ್ಪಿಟ್ಟೇ ಹೇಳಿದೆವು. ಆತ ಕನ್ನಡಿ ಕಪಾಟಿನ ಹಿಂದಕ್ಕೆ ಸರಿದು, ನಾಲ್ಕು ತಟ್ಟೆಗಳಿಗೆ ಅಳತೆ ಸೌಟಿನಲ್ಲಿ ಉಪ್ಪಿಟ್ಟು ಮುದ್ದೆಗಳನ್ನೊತ್ತಿ ಹೊರಡುವವನಿದ್ದ. ಅವನ ಅದೃಷ್ಟಕ್ಕೆ ಗಲ್ಲಾದ ಮೇಲಿದ್ದ ಯಜಮಾನನ ದೃಷ್ಟಿ ಹೊರ ಬೀದಿಯತ್ತ ಕೀಲಿಸಿತ್ತು. ಆದರೆ ಆತನ ದುರದೃಷ್ಟಕ್ಕೆ ನಮ್ಮ ಹಸಿದ ನೋಟ ಉಪ್ಪಿಟ್ಟಿನತ್ತವೇ ಇತ್ತು. ಮಾಣಿ ಸರಕ್ಕನೆ ಬೋಗುಣಿಯಿಂದ ಒಂದು ದೊಡ್ಡ ತುತ್ತು ಉಪ್ಪಿಟ್ಟು ಬರಿಗೈಯಲ್ಲೇ ಬರಗಿ, ತನ್ನ ಬಾಯಿಗೆ ತುಂಬಿ, ಕೈ ಪಂಚೆಗೆ ಒರಸಿಕೊಳ್ಳುತ್ತ ಬಂದ. ಕೂಡಲೇ ನಾವು ಸಿಡಿದೆವು. ಕೊಳಕನ ಎಂಜಲು ತಿನ್ನುವ ಮುಲಾಜು ನಮಗೇನೂ ಇಲ್ಲವೆಂದು ರೇಗಾಡಿದೆವು. ಯಜಮಾನ ಮಾಣಿ-ಸಹಸ್ರ ನಾಮದೊಡನೆ, ನಮ್ಮನ್ನು ಪ್ರಸನ್ನೀಕರಿಸಲು (ಗಿರಾಕಿ ದೇವೋ ಭವ?) ಭಜನೆಯನ್ನೂ ಶುರು ಹಚ್ಚಿದ. ಇನ್ನು ಆ ಬೆಳಿಗ್ಗೆ ಬದಲಿ ಹೋಟೆಲನ್ನು ಹುಡುಕಿಕೊಂಡು, ನಮ್ಮ ಮುಖ್ಯ ಕಾರ್ಯಕ್ರಮ ಹಾಳು ಮಾಡಿಕೊಳ್ಳಲು ನಾವಾದರೂ ಸಿದ್ಧರಿರಲಿಲ್ಲ. ಮಾಣಿ ಎಂಜಲು ಮಾಡದ ತುದಿಯಿಂದ ನಮ್ಮ ತಟ್ಟೆಗೆ ಉಪ್ಪಿಟ್ಟು ಹಾಕಿದ್ದ ಎಂದು ಸಮಾಧಾನಪಟ್ಟುಕೊಂಡು ತಿಂದೆವು. ಮತ್ತೆ ಮಾಣಿ-ಸಹಸ್ರನಾಮದ ಫಲಗಳನ್ನು ಕೇಳಲು ನಿಲ್ಲದೆ, ಕಾಫಿಗೆ ವಿದಾಯ ಹೇಳಿ, ದುರ್ದಾನ ಕೊಟ್ಟಂತೆ ಬಿಲ್ಲಿನ ಮೊತ್ತ ಬಿಸಾಡಿ, ನೇಮಕಾಡಿನತ್ತ ಬೈಕೋಡಿಸಿದೆವು.

ಅಣೈಮುಡಿ ಶಿಖರ: ಮಂಗನತೊಪ್ಪಿಯ ಮೇಲಿಟ್ಟ ಹೆಲ್ಮೆಟ್ಟು, ಜರ್ಕಿನ್ನಿನ ಒಳ ತೊಟ್ಟ ಸ್ವೆಟ್ಟರ್ ಮೀರಿ ವಾತಾವರಣದ ಮಂಜು ಕೊರೆಯುತ್ತಿತ್ತು. ಆದರೆ ಸುದೂರದಲ್ಲಿ ಸುತ್ತುಗಟ್ಟಿದಂತೆ ನಿಂತು ಹಿನ್ನೆಲೆಯ ಬಾಂದಳದ ಕಲಾಪಗಳಲ್ಲಿ ಮತ್ತೆ ರಂಗೇರಿಸಿಕೊಳ್ಳುತ್ತಿದ್ದ ಬೆಟ್ಟ ಸಾಲು, ನಡುವಣ ಹಸುರು ಜಮಖಾನೆಯ ಶುಚಿಗೆ ಅಲ್ಲಲ್ಲಿ ರಾಶಿ  ಅರಳೆ ಹರಡಿಟ್ಟಂತ ಪರಿಸರದಲ್ಲಿ ಹೀಗೆ ಸುತ್ತಿ, ಹಾಗೆ ಬಳುಕಿನ ಓಟದ ಮುದ ಚಳಿ ಮರೆಸಿತ್ತು. ಮೊದಲೇ ನಿಗದಿಸಿದಂತೆ ಏಳು ಗಂಟೆಗೆ ನಾವು ನೇಮಕ್ಕಾಡಿನಲ್ಲಿ ಹಾಜರೊಪ್ಪಿಸಿದೆವು.

ಅಯ್ಯಮ್ಮ ಬಿಸಿ ಚಾ ಕೊಟ್ಟರು. ಅನಂತರ ಅವರೊಬ್ಬ ನಂಬಿಕೆಯಾಳನ್ನು ಜೊತೆ ಮಾಡಿ ಬಿಟ್ಟರು. ಆ ಮಾರ್ಗದರ್ಶಿಯನ್ನು ಅರವಿಂದರ ಬೆನ್ನಿಗೆ ಎರಡನೆಯವನಾಗಿ ಸೇರಿಸಿಕೊಂಡು  ಮತ್ತೆರಡು ಕಿಮೀ ಚಾ ತೋಟದೊಳಗಿನ ಏರುದಾರಿಯಲ್ಲೇ ಮುಂದುವರಿದೆವು. ಮುಂದೆ ಹೆಚ್ಚಿದ ಔನ್ನತ್ಯಕ್ಕೋ ಗಾಳಿ ಮಳೆಗಳ ನೇರ ಹತಿಗೊದಗುವ ಮೈಯೆಂದೋ ಚಾ ತೋಟ ಮುಗಿದಲ್ಲಿಗೆ ಬೈಕ್ ಬಿಟ್ಟೆವು. ನೀರು ಮತ್ತು ಕುರುಕಲಿನ ಪುಟ್ಟ ಚೀಲ ಹಿಡಿದು ಬೆಟ್ಟ ಏರತೊಡಗಿದೆವು. ಅದು ಎರುವಿಮಲೈ ವನಧಾಮ. ಮಾರ್ಗದರ್ಶಿ ಅಪ್ಪಟ ತಮಿಳನಾಗಿ ನಮಗೆ ವಿಶೇಷ ಮಾತಿನ ರಸವೇನೂ ಒಸರಲಿಲ್ಲ. ಆದರೂ ಅಲ್ಲೇ ಎಲ್ಲೋ ಆತ ಹುಲಿ ಕಡವೆ ಹೊಡೆದ ಕತೆ, ಆನೆ ಗಸ್ತು ಹಾಕಿ ಬಂದ ವಿವರಣೆ ಕೇಳುತ್ತಿದ್ದಂತೆ ಏರು ತೀವ್ರತೆ ಮೀರಿ ನಮ್ಮೆದೆಯ ಕುಟ್ಟಣ ಹೆಚ್ಚಿತ್ತು. ಆದರೆ ನಮ್ಮ ಸವಕಲು ಜಾಡು, ಸುದೂರದಲ್ಲಿ ಕಾಣುತ್ತಿದ್ದ ಶಿಖರವೆಲ್ಲ ವಿರಳ ಕುರುಚಲು ಹಾಗೂ ಕಲ್ಲಿನದೇ ಹರಹಾಗಿತ್ತು. ಏನು ಬಂದರೂ ಸಾಕಷ್ಟು ಮೊದಲೇ ಸೂಚನೆ ಸಿಕ್ಕೀತೆಂಬ ವಿಶ್ವಾಸದಲ್ಲಿ ಆತಂಕ ಕಡಿಮೆ ಮಾಡಿಕೊಂಡೆವು. ಶಿಖರದ ನೇರ ಮೈಯನ್ನು ತಪ್ಪಿಸಿ, ತುಸು ಬಲಕ್ಕೆ ಓರೆಯಲ್ಲಿ ಸಾಗಿ, ಬಲಭುಜದಲ್ಲೇ ಮುಂದುವರಿದು ಸುಮಾರು ಎರಡೇ ಗಂಟೆಯಲ್ಲಿ ಶಿಖರ ಸಾಧಿಸಿದೆವು. “ಪೇಟೆಯವರು” ಎಂಬ ಮಾರ್ಗದರ್ಶಿಯ ರಿಯಾಯ್ತಿಯನ್ನು ಒಪ್ಪಿಕೊಳ್ಳದೆ ನಾವು ಸಾಕಷ್ಟು ಚುರುಕಾಗಿಯೇ ಅಣೈಮುಡಿ (ಸ.ಮ ೨೬೯೫ ಮೀಟರ್) ಮು(ಮೆ)ಟ್ಟಿದ್ದೆವು! ತಲೆ ಎತ್ತಿದರೆ ನೀಲಾಕಾಶ. ಸುತ್ತ ಕಣ್ಣೆಟಕುವವರೆಗೆ ಅಸಂಖ್ಯ ಶಿಖರ ಚೂಪುಗಳು. ಅವುಗಳೆತ್ತರಕ್ಕೆ ಪ್ರಕೃತಿ ಮುಡಿಸಿದ ಮೋಡದ ಮೊಗ್ಗಿನ ದಂಡೆ ಮೋಹಕವಾಗಿತ್ತು. ಶೀತಲ ಗಾಳಿಗೋ ಅಲ್ಲೆಲ್ಲ ನಮ್ಮನ್ನು ಹಾರಿಸಿಕೊಂಡೊಯ್ದು ತೋರುವ ತವಕ. ಆದರೆ ಕಾಲಮಿತಿಯ ಕಟ್ಟುಪಾಡಿಗೊಳಪಟ್ಟು ಇಳಿದಾರಿ ಹಿಡಿಯುವುದು ಅನಿವಾರ್ಯವಿತ್ತು.

ಏರುದಾರಿಯಲ್ಲಿನ ನಮ್ಮ ಹೆಜ್ಜೆಯ ದೃಢತೆ ಮಾರ್ಗದರ್ಶಿಯ ಮನಸ್ಸಿಗೆ ಹಿಡಿಸಿದಂತಿತ್ತು. ಹಾಗಾಗಿ ಮರಳುವಲ್ಲಿ ಒಳದಾರಿ ಆಯ್ದುಕೊಂಡ. ಇದು ನಾವು ಬೈಕ್ ಬಿಟ್ಟಲ್ಲಿಂದ ಕಾಣುತ್ತಿದ್ದ ಕಡಿದಾದ, ಹೆಚ್ಚು ಕಡಿಮೆ ಬಂಡೆಯದೇ ಮೈ. ಪುಡಿಗಲ್ಲ ರಾಶಿಯಂತೇ ಇದ್ದ ಎಡಭುಜದಲ್ಲಿ ಸ್ವಲ್ಪ ದೂರ ಇಳಿದೆವು. ಹಾಗೇ ದಿನ್ನೆಯೊಂದರ ಅಂಚಿಗೆ ಬಂದಾಗ ಫಕ್ಕನೆ ಕೆಳಗೆ ನೂರಿನ್ನೂರು ಅಡಿ ದೂರದಲ್ಲಿ ಬೆಟ್ಟದಾಡುಗಳ (ನೀಲಗಿರಿ ಥಾರ್) ದೊಡ್ಡ ಹಿಂಡು ಕಾಣಿಸಿತು. ಅಳಿವಿನಂಚಿನ ಪ್ರಾಣಿ ಪಟ್ಟಿಯಲ್ಲಿರುವ ಇವುಗಳ ಕುರಿತು ಸ್ಯಾಂಕ್ಚುರಿ ನಿಯತಕಾಲಿಕದಲ್ಲಿ ಓದಿದ್ದೂ ನೆನಪಾಗದಿರಲಿಲ್ಲ. ನಮ್ಮ ಪಿಸು ಮಾತುಗಳೂ, ಅಡಿ ತಪ್ಪಿ ಉರುಳಿದ ಸಣ್ಣಪುಟ್ಟ ಕಲ್ಲ ಹರಳೂ ಅವಕ್ಕೆ ಸಾಕು. ಗಣರಾಜ್ಯೋತ್ಸವದ ಕವಾಯತಿನಲ್ಲಿ ರಾಷ್ಠ್ರಪತಿ ನಿಂತ ವಲಯಕ್ಕೆ ಪದಾರ್ಪಣೆ ಮಾಡುವ ಭಾರೀ ಸೈನ್ಯ ಪಡೆಯ ಬೂಟಿನ ಹಿಮ್ಮಡಿಯಂಚು ನೆಲಗುದ್ದಿದ ಕ್ಷಣದಲ್ಲಿ ಎಲ್ಲ ಯೋಧರ ಕತ್ತು ರಪಕ್ಕನೆ ಬಲ ಹೊರಳಿದಂತೆ ಒಮ್ಮೆಲೆ ಎಲ್ಲ ಥಾರ್ಗಳೂ ಕಿವಿ ಕುತ್ತ ಮಾಡಿ, ಗೋಣನ್ನು ನಮ್ಮತ್ತ ಟಕ್ಕಂಥ ಕೀಲಿಸಿತ್ತು! ಕ್ಷಣಾರ್ಧದ ದೃಶ್ಯ. ಅದ್ಯಾವ ಮಾಯಾಮಂತ್ರವೋ ಮುಂದಿನ ಅರೆಗಳಿಗೆಯಲ್ಲಿ ಅತ್ತಣ ಪಾತಾಳಕ್ಕೇ ಬಿದ್ದು ಹೋದವೋ ಎಂಬಂತೆ ಹಿಂದಿಗೆ ಹಿಂಡೇ ಮಾಯ. ಮತ್ತಷ್ಟೇ ಚುರುಕಾಗಿ ಕೆಳಗಿನ ಕಿರು ಕಣಿವೆಯ ತುಸು ಹಸಿರನ್ನೂ ಉತ್ತರಿಸಿ, ಒತ್ತಿನ ಇನ್ನೊಂದೇ ಕಿರುಶಿಖರದಲ್ಲಿ ಕೇವಲ ಐದಾರು ಥಾರ್ಗಳು ಪ್ರತ್ಯಕ್ಷವಾದವು. ಹೊನ್ನ ಜಿಂಕೆಯ ಬಿನ್ನಾಣ ತೋರುತ್ತ, ಅವು ನಮ್ಮನ್ನು ಮುಖ್ಯ ಹಿಂಡಿನ ಜಾಡಿನಿಂದ ದೂರಕ್ಕೆಳೆಯುವ ಹಂಚಿಕೆ ಹಾಕಿದಂತಿತ್ತು. ಕುತೂಹಲದ ಕಣ್ಣಿಗೂ ಕೊಲೆಗಡುಕ ನೋಟಕ್ಕೂ ವ್ಯತ್ಯಾಸ ತಿಳಿದು ಅವಕ್ಕೇನೂ ಆಗಬೇಕಿಲ್ಲ; ಏನಿದ್ದರೂ ಮನುಷ್ಯರಲ್ಲವೇ! ಅವುಗಳ ಚಟುಲತೆಗೆ ಬೆರಗುಪಡುತ್ತ, ನಮ್ಮ ದಡ್ಡತನಕ್ಕೆ ನಾಚುತ್ತ, ಸಿಕ್ಕ ಕಲ್ಲು ಹುಲ್ಲೆಂದು ನೋಡದೆ ಆಧರಿಸುತ್ತ, ನೇರಜಾಡಿನಲ್ಲಿ ಇಳಿದೆವು. ನಡುವೆ ಸಿಕ್ಕ ಬೈಕೇರಿ ಬಂಗ್ಲೆ ಸೇರಿದಾಗ ಗಂಟೆ ೧೨.೩೦.

ಅಯ್ಯಮ್ಮ ದಂಪತಿ ನಮ್ಮ ಪ್ರೀತ್ಯರ್ಥ ಅಡುಗೆ ಮಾಡಿ ಕಾದಿದ್ದರು. ಸಂಭ್ರಮ ಹೆಚ್ಚಿಸುವಂತೆ ಸಮೀಪದ ಇನ್ನೊಂದೇ ಚಾ ವಿಭಾಗದ ಮ್ಯಾನೇಜರ್ – ಕೊಡವ-ಕನ್ನಡಿಗ, ಚಂಗಪ್ಪನವರನ್ನೂ ಆಹ್ವಾನಿಸಿದ್ದರು. ಬಂಗಲೆಯೊಳಗಿನ ನಮ್ಮ ನಲ್ಮೆಯ ಊಟ ನಡೆದಂತೆ, ಒಮ್ಮೆಗೆ ಹೊರಗೆ ಕದನಿ ಸಿಡಿದ ಹಾಗೆ ಕೇಳಿತು. ಇದೂ ಅಯ್ಯಮ್ಮನವರ ಅತಿಥಿ ಸತ್ಕಾರದ ಅಂಗವೇ ಎಂದು ಅರೆ-ಬೆರಗಿನಿಂದಲೇ ಹೊರಗೆ ನೋಡುತ್ತೇವೆ. ಅದ್ಯಾವ ಮಾಯೆಯೋ ಭಾರೀ ಮೋಡ ಕಟ್ಟಿತ್ತು. ಹಿಂಬಾಲಿಸಿದಂತೆ ಬಾನು ಬಿರಿದು, ಅಕ್ಷರಶಃ ಆಕಾಶದ ಪುಡಿಯುದುರಿದಂತೆ ಮೊದಲು ಆಲಿಕಲ್ಲಿನದೇ ಎರಚಾಟ. ಬೆಂಬತ್ತಿ ಜೋಗವೇ ಇತ್ತ ತಿರುಗಿತೋ ಎನ್ನುವ ಮಳೆ. ಬಂಗ್ಲೆಯ ಕಿಟಕಿ, ಪೋರ್ಟಿಕೋಗಳಿಂದ ಇಣಿಕಿದವರಿಗೆ ಮೈ ನಡುಗುವ ದೃಶ್ಯ. ಸ್ವಲ್ಪೇ ಸಮಯದ ಹಿಂದೆ ನಾವು ಒಳದಾರಿಯೆಂದು ಅನುಸರಿಸಿದ್ದ ಕೊರಕಲ ಜಾಡಿನಲ್ಲಿ ಸೊಕ್ಕಿನ ಜಲಪಾತವೇ ಏರ್ಪಟ್ಟಿತ್ತು. ಒಂದೇ ಸಮಾಧಾನ ಈಗ ನಾವಲ್ಲಿರಲಿಲ್ಲ!

ಮಳೆ ಎರಡು ಗಂಟೆಯನ್ನೇ ಕಬಳಿಸಿತು. ಅಯ್ಯಮ್ಮಾದಿಗಳ ಪ್ರೀತಿ, ವಿಶ್ವಾಸಕ್ಕೆ ಬಾಯ್ತುಂಬ ಧನ್ಯವಾದವನ್ನಷ್ಟೇ ಹೇಳಬಲ್ಲ ನಮ್ಮ `ಬಡತನ’ಕ್ಕೆ ನಾಚುತ್ತ, ಅವಸರವಸರವಾಗಿ ಮತ್ತೆ ಮೂನಾರಿಗೆ ಧಾವಿಸಿದೆವು. ಗಂಟು ಗದಡಿ ಬೈಕಿಗೇರಿಸಿ, ಅತಿಥಿಗೃಹದ ಮಾಲಿಗೂ ತುರ್ತು ವಂದನಾರ್ಪಣೆ ಮಾಡಿ ಮೂನಾರಿಗೆ ವಿದಾಯ ಹೇಳಿದೆವು.

ಮೂನಾರಿನ ಚಾ ವಲಯ ಮೀರಿದ ಉತ್ತರಕ್ಕೆಲ್ಲ ಇಂದಿಗೂ ದಟ್ಟ ಕಾಡು, ದುರ್ಗಮ ಜಾಡು; ಅಷ್ಟೇನೂ ಜನಪ್ರಿಯವಲ್ಲದ್ದೇ ಬೀಡು. ಆದರೂ ಭೂಪಟಗಳ ಅಂದಾಜಿನಲ್ಲಿ ತುಸು ಉತ್ತರ-ಪೂರ್ವಕ್ಕೆ ಸಾಗುವ ಕಚ್ಚಾ ಮಾರ್ಗಗಳ ಜಿಡುಕು ಬಿಡಿಸಿದರೆ, ಸುಮಾರು ಒಂದುನೂರು ಕಿಮೀ ಅಂತರದೊಳಗೆ ಕೊಡೈಕೆನಾಲ್ ಗಿರಿಧಾಮ (ಜನಪ್ರಿಯ ಹೃಸ್ವರೂಪ – ಕೋಡಿ)  ಸೇರಬಹುದು ಎಂದು ಕಂಡುಕೊಂಡಿದ್ದೆ. ಅಯ್ಯಮ್ಮ, ಚಂಗಪ್ಪರೂ ದಾರಿಯ ಇರವನ್ನು ಖಾತ್ರಿ ಪಡಿಸಿದರು. ತಾವು ಅದನ್ನು ಅಪೂರ್ವಕ್ಕೆ ಬಳಸಿದ ವಿವರಗಳನ್ನೆಲ್ಲ ಹೇಳಿ, ನಮಗೆ ಧೈರ್ಯ ತುಂಬಿದ್ದರು. ಆದರೆ ಇದು ಸಾಮಾನ್ಯ ಓಡಾಟದ ಯಾವ ವಾಹನ ಸಂಚಾರವೂ ಇಲ್ಲದ ಹಾಳು ದಾರಿ. ನಡುವಿನ ಸುಮಾರು ೧೫-೨೦ ಕಿಮೀ ಅಂತರದಲ್ಲಂತೂ ಕಾಡಾನೆಗಳ ಹೆಚ್ಚಿನ ಓಡಾಟವಿರುವ ಕುರಿತು ಎಚ್ಚರಿಕೆ ಹೇಳಲು ಮರೆಯಲಿಲ್ಲ. ಸಂಜೆ ಐದು ಗಂಟೆಗೆ ಮುನ್ನ ನಾವು ಅದನ್ನು ಪಾರಾಗಲೇ ಬೇಕೆಂಬ ತರಾತುರಿ ನಮ್ಮದು.

ಮುಚ್ಚಿದ ವಾಹನಗಳ ಪ್ರಯಾಣ ನಮ್ಮನ್ನು ಸುತ್ತಣ ವಾತಾವರಣಕ್ಕೆ ಎರವಾಗಿಸುವುದರೊಡನೆ ದೃಶ್ಯದಿಂದಲೂ ವಂಚಿಸುತ್ತದೆಂದೇ ನಾವು ಬೈಕ್ ಯಾನ ನಂಬಿದ್ದೆವು. ಆದರಂದು ದಾರಿಯ ಕೆಲಬಲಗಳನ್ನು ನೋಡುವುದು, ಅಲ್ಲಿಲ್ಲಿ ನಿಂತು ವಿವರಗಳನ್ನು ಗ್ರಹಿಸುವುದೆಲ್ಲ ಬಿಟ್ಟು ಮಾರ್ಗಕ್ರಮಣ ಒಂದೇ ಮಂತ್ರವಾಗಿತ್ತು. ಬಹುಶಃ ಈ ಧಾವಂತ ಪ್ರಕೃತಿಗೆ ಹಿಡಿಸಲಿಲ್ಲ. ನೇಮಕ್ಕಾಡಿನಲ್ಲಿ ನಾವು ಬಂಗ್ಲೆ ಸೇರುವುದನ್ನು ಖಾತ್ರಿಪಡಿಸಿಕೊಂಡು ಕೇವಲ ಎಚ್ಚರಿಕೆಯ ಹುಯ್ಯೋಣ ನಡೆಸಿದ್ದ ಮಳೆ ಈಗ ಚಿರಿಪಿರಿಗುಟ್ಟತೊಡಗಿತು. ಮತ್ತದು ಧೋ ಎಂದು ಅ(ಆ)ಳತೊಡಗಿದಾಗ, ಇನ್ನೂ ಹತ್ತೇ ಕಿಮೀ ಕ್ರಮಿಸಿದ್ದೆವು. ನಾವು  ಋತುಮಾನದ ಖಾತ್ರಿಯಲ್ಲಿ ಮಳೇಕೋಟು ಒಯ್ದಿರಲಿಲ್ಲ. ಹಾಗಾಗಿ ಅವಸರದ ಆಶ್ರಯ ಹುಡುಕಿದ ಅದೃಷ್ಟಕ್ಕೆ ಸಮೀಪದಲ್ಲೇ ಆ ವಲಯದ ದೂರವಾಣಿ ವಿನಿಮಯ ಕೇಂದ್ರವೇ ಸಿಕ್ಕಿತು. ಆದರೆ ಮಳೆಯ ವರಸೆ ಈಗ ಬದಲಿತ್ತು; ದಪ್ಪ ದಪ್ಪ ಹನಿಗಳ ವಿಲಂಬಿತ ನಡೆ. ಆಗಸದ ಸೋರಿಕೆಯಿಂದೇನೋ ತಪ್ಪಿಸಿಕೊಂಡಿದ್ದೆವು. ಆದರೆ ಮುಂದುವರಿಯುವ ನಮ್ಮ ಆಸೆಯನ್ನು ಅಂದಿಗೆ ಸಮಯದ ಸೋರಿಕೆಯಿಂದ ಉಳಿಸಲಾಗಲಿಲ್ಲ. ಅನಿವಾರ್ಯತೆಯನ್ನು ವಿವರಿಸಿ ಮತ್ತೆ ಅಯ್ಯಮ್ಮನವರಿಗೆ ಕಾ(ಟ?)ಲ್ ಕೊಟ್ಟೆವು. ಅವರು ಮೂನಾರಿಗೇ ಮರಳುವುದನ್ನು ಶಿಫಾರಸು ಮಾಡಿದರು. “ಬೆಟ್ಟದಾ ಮೇಲೊಂದು ಗುಡಾರ ಹೂಡಿ ಮಳೆ ಮೃಗಗಳಿಗಂಜಿದೊಡೆಂತಯ್ಯಾ” ಎಂಬುದೆಲ್ಲಾ ಉಪದೇಶಕ್ಕಾದೀತು. ಸ್ವಲ್ಪ ಕಾದು, ಮಳೆ ವಿರಳವಾಯ್ತೆಂದು ಬಂದ ದಾರಿಯಲ್ಲೇ ವಾಪಾಸು ಹೊರಟೆವು. ತಿರುವಿನಾಚೆ ಮರೆಸಿ ಕೂತಂತೆ ಮಳೆ ಮತ್ತೆ ಅಟಕಾಯಿಸಿತು. ಎದುರು ಹಾಸಿದ ಚಾಚಾಪೆಯಲ್ಲಿ ಇನ್ನು ಮರೆಯಿಲ್ಲದ ಎಂದು ಕಂಡ ಮೇಲೆ, “ಬಂದದ್ದೆಲ್ಲಾ ಬರಲಿ” ಜಪಿಸುತ್ತಾ ಧಾರಾವರ್ಷಕ್ಕೆ ಒದ್ದೆಮುದ್ದೆಯಾಗಿ, ಗದಗುಟ್ಟುತ್ತಾ ಕಣ್ಣನ್ ದೇವನ್ ಅತಿಥಿಗೃಹ ಸೇರುವಾಗ ಮಳೆಯೂ ನಿಂತಿತ್ತು, ಮತ್ತೆ ಸಂಜೆಯಾಗಿತ್ತು.

ಪ್ರಥಮಾದ್ಯತೆಯಲ್ಲಿ ಚಂಡಿ ಬಟ್ಟೆ ಬದಲಿಸಬೇಕೆಂದು ಗಂಟುಮೂಟೆಯೇನೋ ಬಿಚ್ಚಿದೆವು. ಆದರೆ ಜಡಿ ಮಳೆಯ ಪ್ರಭಾವದಲ್ಲಿ ಚೀಲದೊಳಗಿನ ಬಟ್ಟೆ ಬರೆಯೂ ನೀರು ಸುರಿಯುತ್ತಿತ್ತು! ಇನ್ನು ರಾತ್ರಿ ಕಳೆಯುವುದರೊಳಗೆ ಅಲ್ಲಿನ ಶೀತಲ ವಾತಾವರಣದಲ್ಲಿ ಕನಿಷ್ಠ ಒಂದು ಕರವಸ್ತ್ರ ಒಣಗಬೇಕಾದರೂ ಪವಾಡವೇ ಘಟಿಸಬೇಕು. ಆದರೂ “ಅಹಹ ಉಹುಹು” ಹೇಳುತ್ತ (ಇದೇನೋ ಸಿನಿಮಾ ಪಲಕುಗಳೆಂದು ಭ್ರಮಿಸಬೇಡಿ, ಚಳಿಯ ಗದಗುದಿಕೆ!) ಎಲ್ಲ ಬಟ್ಟೆಗಳನ್ನೂ ಹಿಂಡಿ, ಅತಿಥಿಗೃಹದ ಉದ್ದಗಲಕ್ಕೆ (ಅಲ್ಲಿ ಅನ್ಯ ಅತಿಥಿಗಳಿರಲಿಲ್ಲ) ಸಿಕ್ಕಲ್ಲೆಲ್ಲಾ ನೇಲಿಸಿ, ಹಗ್ಗ ಕಟ್ಟಿ ಹರಹಿದೆವು. ಧರಿಸಿದ್ದ ಒದ್ದೆ ಬಟ್ಟೆಯನ್ನೂ ಕೂಡಿತಾದಷ್ಟು ಚುರುಕಾಗಿ ಕಳಚಿ, ಕನಿಷ್ಠವಷ್ಟೇ ಉಳಿಸಿಕೊಂಡು, ಉಳಿದವನ್ನೂ ಹಿಂಡಿ ಹರಹಿ ಬಿಟ್ಟೆವು. ಮತ್ತೆ ವಾತಾರಾವಣ ಪೂರ್ಣ ತಿಳಿಯಾದರೂ ಸಮಯದ ಹಂಗು ಹರಿದಿದ್ದರೂ ದಮ್ಮಿಲ್ಲದೆ, ಅತಿಥಿ ಗೃಹದ ರಗ್ಗುಗಳ ಗುಡ್ಡೆಯಲ್ಲಿ ಬಿಲ ತೋಡಿ ಹುಗಿದುಕೊಂಡೆವು. ಹಿಂದಿನ ದಿನವಷ್ಟೇ “ಇವನ್ನೇ ಹಿಂದೆ, ಯಾರೆಲ್ಲಾ ಹೇಗೆಲ್ಲಾ ಬಳಸಿದ್ದರೋ” ಎಂದು ಮಾಮೂಲೀ `ಮಡಿವಂತಿಕೆ’ ಸಾರಿದ್ದೆಲ್ಲ ಮರೆತೇ ಹೋಗಿತ್ತು. ಕೆಳ ಮೈದಾನದ ಕಲರವ, ಶಿಖರಸಾಲಿನ ವರ್ಣವೈಭವವೆಲ್ಲಾ ಬಿಡಿ, ಕೊನೆಗೆ ಕನಿಕರಿಸಿದ ಮೇಟಿಯ “ಚುಡು-ಕಾಪಿ, ಶಾಪಾಟ್”ಗೂ ಗಹ್ವರದಾಳದಿಂದ “ಊಹೂಂ, ಈ ಸುಖ ಬಿಟ್ಟ ಸಗ್ಗಕ್ಕೂ ಕಿಚ್ಚು ಹಚ್ಚು” ಎನ್ನುವುದೊಂದೇ (ಶೊಲ್ಲು) ಸೊಲ್ಲು!

6 comments:

 1. ನೀವು ಬಹಳ ಹಿಂದೆ ಹೋಗಿದ್ದಿರಿ..ನಾನು ಎರಡು ವರ್ಷ ಮೊದಲು ಮೂನಾರಿಗೆ ಹೋದಾಗ ಆನೈಮುಡಿ ಕಂಡೆ. ಅದನ್ನೇರುವ ಬಗ್ಗೆ ಅಲ್ಲಿನವರಲ್ಲಿ ವಿಚಾರಿಸಿದಾಗ ಈಗ ಯಾವ ಕಾರಣಕ್ಕೂ ಅಲ್ಲಿ ಚಾರಣಕ್ಕೆ ಅವಕಾಶ ಕೊಡೋದಿಲ್ಲ ಎಂದೇ ಹೇಳಿದರು. ಅಂತರ್ಜಾಲದಲ್ಲೂ ಅದೇ ಮಾಹಿತಿ ಇದೆ..ಹಾಗಾಗಿ ನನ್ನ ಆ ಕನಸು ಹಾಗೇ ಉಳಿದುಕೊಂಡಿದೆ...ನೀವೇ ಭಾಗ್ಯವಂತರು!

  ReplyDelete
 2. bahala chennagitu thamma kathana odi santhoshavayithu.you both are really lucky to be there together on any expedition...thank you..

  ReplyDelete
 3. ಹೌದು,ಅಣೈಮುಡಿಯಲ್ಲಿ ಈಗ ಚಾರಣಕ್ಕೆ ಅವಕಾಶವಿಲ್ಲ. ಆದರೆ ಜೀಪ್ ನಲ್ಲಿ ಕಾಡಿನ ಮೂಲಕ ಸಾಗಿ ಮೇಲೆ ತಲುಪಲು ಅವಕಾಶವಿದೆ. ಅಲ್ಲಿ ವಾಚ್ ಟವರ್ ಹಾಗೂ ಅರಣ್ಯಾಧಿಕಾರಿಗಳ ಓಂದು ಸಣ್ಣ ಆಫೀಸ್ ಇದೆ.

  ReplyDelete
 4. Sir, excellent narration could feel the excitement and experience in your story. wonderful.. :-)

  ReplyDelete
 5. ಮೂನಾರಿನ ಪಯಣ ಬಹಳ ಚೆನ್ನಾಗಿ ವರ್ಣಿಸಲ್ಪಟ್ಟಿದೆ. ಅಯ್ಯಮ್ಮ ಏನೇನೆಲ್ಲ ಅಡುಗೆ ಮಾಡಿದ್ದರೋ ಅದನ್ನು ಉಂಡವರೂ ಹೇಳ್ಳಿಲ್ಲ...ಬಹುಶಃ ಸಿಡಿಲು ಮಳೆಯ ಭಯ ...!!! ಸುಂದರ ಅನುಭವ..ಹಾಗೆ ಒದ್ದೆಯಾದ್ದರಿಂದಲೇ ಮುಕ್ತಾಯ ಚೆನ್ನಾಗಿ ಆಯಿತು.'ಮಡಿವಂತಿಕೆ' ಅಲ್ಲಿ ಬಂತು.��

  ReplyDelete