09 September 2014

ಸ್ಟೀಯರ್ಫೋರ್ತನ ಮನೆ

ಅಧ್ಯಾ ಇಪ್ಪತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ತೆರಡನೇ ಕಂತು
ಮರುದಿನ ಮಧ್ಯಾಹ್ನಾನಂತರ ನಾವು ಸ್ಟೀಯರ್ಫೋರ್ತನ ಮನೆಗೆ ಜತೆಯಾಗಿ ಹೋದೆವು. ಅವನ ಮನೆಯಿದ್ದುದು ಹೈಗೇತಿನಲ್ಲಿ – ಒಂದು ಎತ್ತರದ ಪ್ರದೇಶದಲ್ಲಿ. ಆ ಮನೆಯ ಕೊಠಡಿಗಳಲ್ಲಿ ಕುಳಿತು ಹೊರಗೆ ನೋಡಿದ್ದಾದರೆ ಲಂಡನ್ ನಗರದ ಬಹುಭಾಗವೆಲ್ಲ ಕಾಣಿಸುತ್ತಿತ್ತು.

ನಾವು ಮನೆಯ ಜಗುಲಿಯನ್ನು ಹತ್ತುವಾಗಲೇ ಒಳಗಿನಿಂದ ಒಬ್ಬ ಬಹು ಗಂಭೀರ ಮುಖಮುದ್ರೆಯ ಸ್ತ್ರೀ ನಮ್ಮೆದುರು ಬಂದು ನಮ್ಮನ್ನು ಸ್ವಾಗತಿಸಿದಳು. ಅವಳು ತನ್ನ ತಾಯಿಯೆಂದನ್ನುತ್ತಾ ಸ್ಟೀಯರ್ಫೋರ್ತನು ಅವಳ ಪರಿಚಯ ಮಾಡಿಕೊಟ್ಟನು. ತಾಯಿ ಪ್ರಾಯಕಾಲದಲ್ಲಿ ಬಹುರೂಪವತಿಯಾಗಿದ್ದಿರಬೇಕೆನ್ನುವಷ್ಟು ಲಕ್ಷಣವಾಗಿ ಇದ್ದಳು. ಅವಳು ಮಗನನ್ನು ಕಂಡೊಡನೆ ಅಪ್ಪಿಕೊಂಡು, ನಮ್ಮನ್ನು ಮನೆಯ ಮುಖ್ಯ ಬೈಠಖಾನೆಗೆ ಕರೆದುಕೊಂಡು ಹೋದಳು.

ಆ ದಿನ ರಾತ್ರಿ ಊಟವಾದನಂತರ ನಾವೆಲ್ಲರೂ ಬೈಠಖಾನೆಯಲ್ಲಿ ಕುಳಿತು ಮಾತಾಡುತ್ತಲೂ ಪಗಡೆಯಾಟವಾಡುತ್ತಲೂ ಸ್ವಲ್ಪ ಸಮಯ ಕಳೆದೆವು. ಸ್ಟೀಯರ್ಫೋರ್ತನ ತಾಯಿ ಮಿಸ್ ಡಾರ್ಟಲ್ ಎಂಬವಳನ್ನು ಅವಳ ಬಾಲ್ಯದಿಂದಲೇ ಸಾಕುತ್ತಿದ್ದಳು. ಮಿಸ್ ಡಾರ್ಟಲಳು ನಮ್ಮ ಜತೆಯಲ್ಲಿ ಆಟಕ್ಕೆ ಸೇರುತ್ತಿದಳು. ಅವಳು ಸ್ಟೀಯರ್ಫೋರ್ತನಿಗಿಂತ ಪ್ರಾಯದಲ್ಲಿ ಸ್ವಲ್ಪ ಚಿಕ್ಕವಳಾಗಿ ತೋರುತ್ತಿದ್ದಳು. ಅವಳು ಸುಂದರಿಯಾಗಿದ್ದಳು. ಆದರೆ, ಸ್ವಲ್ಪ ಕೃಶದೇಹಿಯಾಗಿದ್ದುದರಿಂದಲೂ ಅವಳ ಮುಖದಲ್ಲಿದ್ದ ಬಲವಾದ ಒಂದು ಹಳೆಗಾಯದ ಗುರುತಿನಿಂದಲೂ ಅವಳ ಸೌಂದರ್ಯ ಗಮನವಿಟ್ಟರೆ ಮಾತ್ರ ಗೊತ್ತಾಗುತ್ತಿದ್ದಿತೇ ಹೊರತು, ಒಮ್ಮೆ ನೋಡಿದ ಮಾತ್ರಕ್ಕೆ ಗೋಚರಿಸುತ್ತಿರಲಿಲ್ಲ. ಗಾಯ ಕೆನ್ನೆಯಿಂದ ಪ್ರಾರಂಭಿಸಿ ಕೆಳತುಟಿಯವರೆಗೆ ಇಳಿದಿತ್ತು. ನಮ್ಮ ಪಗಡೆ ಆಟದ ಮಧ್ಯೆ ಮಧ್ಯೆ ನನ್ನ ದೇಶ ಸಂಚಾರವನ್ನು ಕುರಿತಾಗಿಯೂ ಮತಾಡುತ್ತಿದ್ದೆವು. ನಾನು ಸಫೊಕ್ಕಿಗೆ ಹೋಗುವುದಾಗಿಯೂ ಯಾರ್ಮತ್ತಿನಲ್ಲಿ ಪೆಗಟಿ, ಹೇಮ್ ಮೊದಲಾದವರನ್ನು ನೋಡಿ ಬರುವುದಾಗಿಯೂ ತಿಳಿಸಿದೆನು. ಈ ಸಂದರ್ಭದಲ್ಲಿ ಸ್ಟೀಯರ್ಫೋರ್ತನು “ಪೆಗಟಿ: ಅಂದರೆ ಆ ಒರಟು ಮನುಷ್ಯ ತಾನೆ? ಹೇಮ್ ಅಂದರೆ ಮಗನಷ್ಟೇ?” ಎಂದಂದನು. ಆಗ ನಾನು ಸ್ವಲ್ಪ ಬೇಸರಿಸಿಕೊಂಡು ಮಿ. ಪೆಗಟಿಯ ಮತ್ತೂ ಅಲ್ಲಿನ ಎಲ್ಲವರ ಗುಣ, ನಡತೆಗಳನ್ನು ವರ್ಣನೆ ಮಾಡಿ ಪ್ರಶಂಸಿಸಿದೆನು. ಪೆಗಟಿಯ ದಯಾಳುತನ, ಅತಿಥಿ ಸತ್ಕಾರ ಬುದ್ಧಿ, ದೀನ ಅನಾಥರ ಕುರಿತಾದ ಕರುಣೆ ಇವನ್ನೆಲ್ಲ ವರ್ಣಿಸಿ ಜನರ ಗುಣಗಳನ್ನು ತಿಳಿಯಬೇಕಾದರೆ ಒಡನಾಟದಿಂದ ಮಾತ್ರ ಸಾಧ್ಯವೆಂದಂದೆ. ಅಲ್ಲದೆ, ಸ್ಟೀಯರ್ಫೋರ್ತನು ಸಹ ಅವರೊಡನೆ ಒಡನಾಡಿ ನೋಡಿದರೆ ನನ್ನಂತೆಯೇ ಅವರನ್ನು ಕುರಿತು ಅಭಿಪ್ರಾಯ ಪಡುವುದು ಖಂಡಿತವೆಂದೂ ಹೇಳಿದೆ. ಇದರಿಂದ ಸ್ಟೀಯರ್ಫೋರ್ತನು ಉತ್ಸಾಹಭರಿತನಾಗಿ –
“ಹಾಗಾದ್ರೆ ನೋಡೋಣ – ನಿನ್ನ ಮಾತು ಸುಳ್ಳಾಗಿರಲಾರದೆಂದು ಒಪ್ಪುತ್ತೇನೆ. ಆ ನಮೂನೆಯ ಜನರನ್ನು ನೋಡಿದ ಹಾಗಾಯಿತು ಮತ್ತು ನಿನ್ನ ಜತೆಯಲ್ಲಿದ್ದ ಹಾಗೂ ಆಯಿತು” ಎಂದು ಹೇಳಿದನು.


ಮಿಸ್ ಡಾರ್ಟಲಳು ನಮ್ಮ ಮಾತುಗಳೆಲ್ಲವನ್ನು ಕೇಳುತ್ತಿದ್ದಳು ಮಾತ್ರವಲ್ಲದೆ, ಕೇಳಿ ಜೀರ್ಣಿಸಿ, ಅದರಿಂದ ಏನೇನೋ ಪರಿಣಾಮ ಹೊಂದುತ್ತಿರುವಳಂತೆಯೂ ತೋರುತ್ತಿದ್ದಳು. ಅವಳು ಸ್ಟೀಯರ್ಫೋರ್ತನ ಮಾತನ್ನು ಮುಂದುವರಿಸಿ –
“ಅವರು ಎಂಥವರು – ಯಾವ `ನಮೂನೆ’ಯವರು?” ಎಂದು ಕೇಳಿದಳು.
ಸ್ಟೀಯರ್ಫೋರ್ತನಿಗೆ ಈ ಪ್ರಶ್ನೆ ಅಧಿಕಪ್ರಸಂಗವೆಂದು ತೋರಿರಬೇಕು. ಅವನು ಮಿಸ್ ಡಾರ್ಟಲಳನ್ನು ಬಾಯಿ ಮುಚ್ಚಿಸಲೋಸ್ಕರವೇ ಎಂಬಂತೆ –
“ಯಾರು? ಎಂಥಾದ್ದು?” ಎಂದು ಒರಟಾಗಿ ಕೇಳಿದನು.
ಮಿಸ್ ಡಾರ್ಟಲಳು ಸುಮ್ಮನಾಗಲಿಲ್ಲ – ಹಟವಾದಿಯಂತೆ,
“ನೀನೇ ಅಂದೆ `ಆ ನಮೂನೆ’ ಜನರೂಂತ ಹಾಗಾಗಿ ಮಾತ್ರ ನಾನು ವಿಚಾರಿಸಿದ್ದು. `ನಮೂನೆ’ಯವರಾಗಲು ಅವರೂ ನಮ್ಮ ಹಾಗೆ ಮನುಷ್ಯರಲ್ಲವೋ ಅಥವಾ ಮೃಗಗಳೋ ಅಥವಾ ಮರಗಳೋ” ಎಂದು ಕೋಪಾವಿಷ್ಟಳಾಗಿಯೇ ಕೇಳಿದಳು.

ಈ ಸಮಯದಲ್ಲಿ ಅವಳ ಮುಖದಲ್ಲಿದ್ದ ಗಾಯವು ಕೆಂಪಗೆ ಎದ್ದು ಕಾಣಿಸುತ್ತಿತ್ತು. ಸ್ಟೀಯರ್ಫೋರ್ತನು ನನಗೆ ಅನಂತರ ತಿಳಿಸಿದ ಪ್ರಕಾರ, ಆ ಗಾಯವನ್ನು ಸ್ಟೀಯರ್ಫೋರ್ತನೇ ಇಬ್ಬರೂ ಚಿಕ್ಕವರಾಗಿದ್ದಾಗ ಉರುಡಾಡಿಕೊಂಡು, ಮಾದಿದ್ದುದಂತೆ. ಜಗಳದ ಕೋಪದಲ್ಲಿ ತನ್ನ ಕೈಯಲ್ಲಿದ್ದ ಸುತ್ತಿಗೆಯನ್ನು ಅವಳ ಮುಖಕ್ಕೆ ಎಸೆದುದರಲ್ಲಿ ಆ ಗಾಯವಾಗಿತ್ತಂತೆ. ಮಿಸ್ ಡಾರ್ಟಲಳು ಬಹು ಕೋಪಿಷ್ಟೆ, ಮತ್ಸರಿ ಎಂದು ಮೊದಲಾಗಿಯೂ ಸ್ಟೀಯರ್ಫೋರ್ತನು ತಿಳಿಸಿದನು. ಅವಳಿಗೆ ಸಿಟ್ಟು ಬಂದಾಗ ಗಾಯದ ಮೇಲಿದ್ದ ತೆಳು ಚರ್ಮ ಮಾತ್ರ ಇತರ ಭಾಗಕ್ಕಿಂತ ಹೆಚ್ಚು ಕೆಂಪಾಗಿ, ಸಿಟ್ಟು ತಣಿದಾಗ ಗಾಯ ಅಸ್ಪಷ್ಟವಾಗಿ ಉಳಿಯುತ್ತದೆಂದೂ ಅವಳ ಕೋಪ, ಮತ್ಸರದಿಂದಲೇ ಅವಳು ಆ ರೀತಿ ಕೃಶವಾಗುತ್ತಿರುವುದಾಗಿಯೂ ಹೇಳಿದನು.

ಸ್ಟೀಯರ್ಫೋರ್ತನು ಡಾರ್ಟಲಳ ಪ್ರಶ್ನೆಗೆ ಶೀಘ್ರವಾಗಿಯೇ ಉತ್ತರವಿತ್ತನು. ಅವನಿಗೆ ಸಿಟ್ಟು ಬಂದಿದ್ದುದರಿಂದ ಆ ರೀತಿ ಉತ್ತರವಿತ್ತನೋ ಅಥವಾ ಅವನ ಸ್ಪಷ್ಟವಾದ ಅಭಿಪ್ರಾಯವೇ ಹಾಗಿತ್ತೋ ಎಂಬುದನ್ನು ನಾನು ಅರಿಯೆ. ಅವನ ಉತ್ತರ ಮಾತ್ರ ಈ ತೆರನಾಗಿತ್ತು:
“ನಮಗೂ ಅವರಿಗೂ ಬಹು ಭೇದಗಳಿವೆ. ಅವರು ನಮ್ಮಷ್ಟು ಸೂಕ್ಷ್ಮ ಬುದ್ಧಿಯವರಲ್ಲ – ನಯ, ವಿನಯವಂತರಲ್ಲ – ಒಂದು ವಿಧದ ಅಸಂಸ್ಕೃತ ಒರಟರು. ಹಾಸ್ಯ, ಅಪಹಾಸ್ಯ, ವಿನೋದಗಳನ್ನು ಶೀಘ್ರವಾಗಿ ಅರ್ಥಮಾಡಲಾರದವರು. ಒಂದು ವೇಳೆ ಕೆಲವು ವಿಷಯಗಳು ಒಮ್ಮೆಗೆ ಅರ್ಥವಾದರೂ ಅವುಗಳನ್ನು ಮನಸ್ಸಿಗೆ ಅಂಟಿಸಿಕೊಳ್ಳುವವರಲ್ಲ. ಅವರು ಒರಟರಾದುದರಿಂದಲೇ ಬಹು ನಿಷ್ಠಾವಂತರೆಂದು ಕೆಲವರಿಗೆ ಕಾಣುವುದುಂಟು. ತಮ್ಮ ಸಂಸಾರದೊಳಗೆ ನೆಂಟಸ್ಥಿಕೆ ನಡೆಸುವುದರಲ್ಲೂ ಬಳಸುವುದರಲ್ಲೂ ಬಹು ಎಚ್ಚರದಿಂದಿರುವರೆಂದೂ – ನಡತೆಯ ಪರಿಶುದ್ಧತೆಯುಳ್ಳವರೆಂದೂ – ಅವರನ್ನು ಕುರಿತಾಗಿ ಹೇಳುವವರಿದ್ದಾರೆ. ಒಟ್ಟಿನ ಮೇಲೆ ಅವರ ಒರಟು ಚರ್ಮದಂತೆಯೇ ಅವರ ಮನಸ್ಸು, ವ್ಯವಹಾರಗಳೆಲ್ಲ ಒರಟು ಆಗಿರುವುವು ಮಾತ್ರವಲ್ಲದೆ, ಜೀವನದಲ್ಲಿನ ಅಪಮಾನಗಳನ್ನೂ ಸಹ ಅಂಟಿಸಿಕೊಳ್ಳಲಾರದಷ್ಟರ ಒರಟರು ಅವರು.”

ನಮ್ಮ ಈ ಮಾತುಗಳಾಗುತ್ತಿದ್ದಾಗ ಸ್ಟೀಯರ್ಫೋರ್ತನ ತಾಯಿ ನಮ್ಮ ಜತೆಯಲ್ಲೇ ಕುಳಿತಿದ್ದಳು. ಅವಳಿಗೆ ತನ್ನ ಮಗನಲ್ಲಿದ್ದ ಗುಣಗಳೆಲ್ಲಾ ಸದ್ಗುಣಗಳೇ ಆಗಿದ್ದುವು. ಅವಳು ಮಾತಾಡುವಾಗ – ಅದರಲ್ಲೂ ಮಗನಿಗೆ ಸಂಬಂಧಿಸಿ ಮಾತಾಡುವಾಗ – ಅವನನ್ನು ಎಷ್ಟು ಹೊಗಳಿದರೂ ಅವಳಿಗೆ ತೃಪ್ತಿಯಿರಲಿಲ್ಲ. ಅವನ ರೂಪ, ದೇಹ, ತೇಜಸ್ಸು, ಪ್ರತಿಭೆ, ಪ್ರಭಾವ, ಮನೆತನದ ಹಿರಿಮೆ, ಎಲ್ಲವೂ ಪರಮೋತ್ಕೃಷ್ಟತರದ್ದೆಂದು ಅವಳು ಹೇಳಿ ಸಂತೋಷಿಸುತ್ತಿದ್ದಳು. ಶಿಸ್ತು, ಶಿಕ್ಷೆ ಎಂಬುದೆಲ್ಲ ಬಾಲಕರ ಜನ್ಮ ಸಿದ್ಧವಾದ ಶಕ್ತಿಗಳನ್ನೆಲ್ಲ ಕುಂಠಿತಗೊಳಿಸುವವೆಂಬುದೇ ಅವಳ ಅಭಿಪ್ರಾಯ. ಇಷ್ಟೆಲ್ಲ ಗ್ರಹಿಸಿಯೇ – ಸ್ಟೀಯರ್ಫೋರ್ತನ ಕುಟುಂಬ ಗೌರವ, ಸ್ವಸಾಮರ್ಥ್ಯ, ಸ್ವಾತಂತ್ರ್ಯಗಳಿಗೆ ಧಕ್ಕೆ ಬಾರದಂಥ ಶಾಲೆ ತನ್ನ ಮಗನಿಗೆ ಸಿಗಬೇಕೆಂದೇ – ಸ್ಟೀಯರ್ಫೋರ್ತನ ತಾಯಿ ವಿಚಾರಿಸಿ, ಹುಡುಕಿ, ಮಗನನ್ನು ಮಿ. ಕ್ರೀಕಲರ ಶಾಲೆಗೆ ಕಳುಹಿಸಿದ್ದಳೆಂಬುದನ್ನು ನಾನು ಅಲ್ಲಿದ್ದಾಗ ಅವಳ ಮಾತುಗಳಿಂದ ತಿಳಿದೆನು.

“ಮನಸ್ಸು ಮಾಡಿದರೆ ನನ್ನ ಮಗನು ಯಾರನ್ನೂ ಯಾವ ವಿದ್ಯೆಯಲ್ಲೂ ಸೋಲಿಸಬಲ್ಲ. ಪ್ರಪಂಚವೇ ತನ್ನನ್ನು ಹಿಂಬಾಲಿಸಿ ಬರುವಂತೆ ಮಾಡಿಕೊಳ್ಳತಕ್ಕಷ್ಟರ ಮುಂದಾಳುತನ ಅವನಿಗಿದೆ” ಎಂದು ಅವನ ತಾಯಿ ನನ್ನೊಡನೆ ಹೇಳಿದಳು.

ಅಲ್ಲಿನ ಊಟೋಪಚಾರಗಳೂ ಮಲಗುವ ಕೋಣೆ, ಉದ್ಯಾನವನ, ಮನೆ, ವಠಾರ – ಎಲ್ಲವೂ ಬಹು ಉತ್ತಮತರದ್ದಾಗಿತ್ತು. ಘನಸ್ಥಿಕೆಯದ್ದಾಗಿತ್ತು. ಕಥೆಗಳಲ್ಲಿ ಮಾತ್ರ ಕೇಳಿದ್ದ ವೈಭವದ ವರ್ಣನೆಗಳನ್ನು ಮೀರಿಸಬಲ್ಲಂಥ ಸುಂದರ, ಸಾಂಪತ್ತಿಕ, ಸಾಂಸ್ಕೃತಿಕ, ಸೌಖ್ಯದ ಉಪಕರಣಗಳೂ ಅಲಂಕಾರಗಳೂ ಆನುಕೂಲ್ಯಗಳೂ ಅವನ ಮಲಗುವ ಕೋಣೆಯಲ್ಲಿದ್ದುವು. ಅವುಗಳನ್ನು ನಾನು ವರ್ಣಿಸಲೇ ಶಕ್ತನಲ್ಲ. ಆ ಕೋಣೆಯಲ್ಲೇ ಬಹು ತೇಜಸ್ವಿಯಾದ ತೈಲ ಚಿತ್ರವೊಂದೂ ಇತ್ತು. ಅದು ಸ್ಟೀಯರ್ಫೋರ್ತನ ತಾಯಿಯದಾಗಿತ್ತು. ಅದು ಹತ್ತಾರು ವರ್ಷಗಳ ಹಿಂದಿನದಾಗಿರಬೇಕೆಂದು ನಾನು ಊಹಿಸಿದೆ.

ಆ ದಿನದ ನನ್ನ ಹೊಸ ಪರಿಚಯ, ಹೊಸ ಸನ್ನಿವೇಶಗಳೆಲ್ಲ ನನ್ನ ಮನಸ್ಸಿನಲ್ಲಿ ನಾನಾ ಭಾವನೆಗಳನ್ನೆಬ್ಬಿಸಿದುವು. ತಾಯಿಯ ಮಹತ್ತರವಾದ ಪ್ರೇಮ, ಅಭಿಮಾನ – ಸ್ಟೀಯರ್ಫೋರ್ತನ ಸಕಲ ಸದ್ಗುಣಗಳ ನಡುವೆ ಕುರೂಪವಾಗಿ ಅಡಗಿ ತೋರುವ ಸ್ವೇಚ್ಛಾವರ್ತನ, ಮತ್ತೂ ಆ ಸ್ವೇಚ್ಛಾವರ್ತನೆಯಲ್ಲೂ ಮೆರೆದು ಎದ್ದು ನಿಲ್ಲುವ ಅವನ ವ್ಯಕ್ತಿತ್ವ – ಮಿಸ್ ಡಾರ್ಟಲಳ ಸೂಕ್ಷ್ಮ ಬುದ್ಧಿ, ಸಂಶಯ, ಅಸಂತುಷ್ಟಿ, ಮತ್ಸರ, ಕ್ರೋಧ – ಈ ಎಲ್ಲಾ ವಿಧದ ಸ್ವಭಾವವಿದ್ದ ಜನರು ಅಲ್ಲಿ ಒಂದೇ ಮನೆಯಲ್ಲಿ ಸಂಸಾರ ಸಾಗಿಸುತ್ತಿದ್ದುದೊಂದು ಆಶ್ಚರ್ಯದ ಸಮಸ್ಯೆಯಾಗಿಯೇ ನನಗೆ ತೋರುತ್ತಾ ಅದನ್ನೇ ಪುನಃ ತರ್ಕಗಳಿಂದ ವಿಮರ್ಶಿಸುತ್ತಾ ನಾನು ನಿದ್ರೆ ಮಾಡಿದೆನು.


(ಮುಂದುವರಿಯಲಿದೆ)

1 comment:

  1. ನಿಮ್ಮ ಧ್ವನಿಯಲ್ಲಿ ಕೆೇಳಿ ಸಂತೊೋಷವಾಯಿತು

    ReplyDelete