15 August 2014

ಮರುಭೂಮಿಗೆ ಮಾರು ಹೋಗಿ - ಭಾಗ ೪

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ
ರಾಮ್ದೇವ್ರಾ
ಪೋಖರನ್ ನಿ೦ದ ಸುಮಾರು ೨೦ಕಿ.ಮೀ ದೂರದಲ್ಲಿ ಒ೦ದು ಪ್ರಸಿದ್ಧ ಯಾತ್ರಾ ಸ್ಥಳವಿರುವುದನ್ನು ಹೇಮ್ ಜೀಯವರು ಬರುವಾಗಲೇ ತಿಳಿಸಿದ್ದರು. ನಾವು ಅಷ್ಟಾಗಿ ಕುತೂಹಲ ತೋರಿಸಿರಲಿಲ್ಲ. ಈಗ ವಾಪಾಸು ತೆರಳುವಾಗ ಮತ್ತೆ ಆ ಜಾಗವನ್ನು ನೆನಪಿಸಿದರು. ನಾವು ಹೋಗುವ ಹಾದಿಯಲ್ಲೇ, ಕೇವಲ ೭ಕಿ.ಮೀ ದೂರದಲ್ಲಿ ಸಿಗುವುದಾದ್ದರಿ೦ದ, ಹೂ೦ ಎ೦ದೆವು. ಅಲ್ಲಿ ಏನಿದೆ? ಏನು ಮಾಡಬೇಕು? ಎ೦ದು ಒ೦ದೂ ಗೊತ್ತಿರಲಿಲ್ಲ.

ಕಾರಿಳಿದು ನಡೆದು ಬರುವಾಗ, ಸಾಮಾನ್ಯವಾಗಿ ದೇವಸ್ಥಾನಗಳ ಬಳಿ ಕಾಣುವ೦ತಹ, ಅ೦ಗಡಿಗಳು ಸಾಲು ಸಾಲು ಇದ್ದವು. ದೇವಸ್ಥಾನ ಪ್ರವೇಶಿಸಿದರೆ, ಜನರು ಸಾಲು ಸಾಲುಗಳಲ್ಲಿ ಶಿಸ್ತಿನಿ೦ದ ನಿ೦ತಿದ್ದರು. ಎಲ್ಲಿ೦ದ ಹೋಗುವುದು, ಎಲ್ಲಿ೦ದ ಹೊರಬರುವುದು ಒ೦ದೂ ತಿಳಿಯಲಿಲ್ಲ. ಸಾಲಿನಲ್ಲಿ ನಿ೦ತರೆ ನಮ್ಮ ಮು೦ದಿನ ಯೋಜನೆಗಳೆಲ್ಲಾ ಹಾಳಾಗುವುದು ಖಚಿತ, ಹೀಗಾಗಿ ಸಾಲಿನಲ್ಲಿ ನಿಲ್ಲದೇ, ಸುಮ್ಮನೆ ಒ೦ದು ಸುತ್ತು ಹಾಕಿ ಬ೦ದೆವು. ಮುಸಲ್ಮಾನರ ದರ್ಗಾದ ರೀತಿ ಕಾಣಿಸಿತು. ಅಲ್ಲಿನ ಸ೦ಪ್ರದಾಯಗಳೂ ಹಾಗೇ ಕ೦ಡವು. ಗಡಿ ರಕ್ಷಣಾದಳದ ಸೈನಿಕರು ತು೦ಬಾ ಜನ ಬ೦ದಿದ್ದರು. ಕೇವಲ ೧೦ ನಿಮಿಷಗಳಲ್ಲೇ ವಾಪಾಸು ಬ೦ದ ನಮ್ಮನ್ನು ನೋಡಿ ಹೇಮ್ ಜೀಯವರಿಗೆ ಆಶ್ಚರ್ಯ. ನೀರಿನ ಬಾವಿ ನೋಡಿದಿರಾ? ಎ೦ದು ಕೇಳಿದರು. ನಿಜಕ್ಕಾದರೆ, ನಮಗೆ ಅಲ್ಲಿ ಜನರ ಸಾಲು ಕ೦ಡೇ ಭಯವಾಗಿತ್ತುನಾವು ಸುಮ್ಮನೇ, ಹೌದೌದು ಎ೦ದಷ್ಟೇ ಹೇಳಿ ತೆಪ್ಪಗೆ ಕುಳಿತೆವು.


ವಾಪಾಸು ಬ೦ದ ಮೇಲೆ ಇ೦ಟರ್ನೆಟ್ ನಲ್ಲಿ ಜಾಲಾಡಿಸಿದಾಗ, ನಾವು ಭೇಟಿ ಕೊಟ್ಟ ಜಾಗ, ರಾಮ್ದೇವ್ರಾ ಎ೦ದೂ, ಸ೦ತ ಬಾಬಾ ರಾಮ್ ದೇವ್ ಎ೦ಬವರ ಸಮಾಧಿಯೂ, ಅಲ್ಲಿಯೇ ಅವರಿಗಾಗಿ ನಿರ್ಮಿಸಿದ ದೇವಾಲಯ ಎ೦ದೂ ತಿಳಿಯಿತು. ಹಿ೦ದೂಗಳನ್ನೂ, ಮುಸ್ಲಿಮರನ್ನೂ, ದಲಿತರನ್ನೂ, ಬಡವ ಬಲ್ಲಿದರನ್ನೂ ಸಮಾನವಾಗಿ ಕ೦ಡ ಅವರು ನಿಜ ಅರ್ಥದಲ್ಲಿ ಜಾತ್ಯಾತೀತ, ಮಾನವತೆಯ ಸ೦ಕೇತವಾಗಿ ಸ್ಥಾಪಿತವಾಗಿದ್ದಾರೆ೦ದು ಅನಿಸಿತು

ಕೀಶನ್
ಇ೦ಟರ್ನೆಟ್ ನಲ್ಲಿ, ಜೋಧಪುರ, ಜೈಸಲ್ಮೇರ್ ಗಳ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಹುಡುಕಾಟದಲ್ಲಿದ್ದಾಗ, ಕೀಶನ್ ಎ೦ಬ ಪಕ್ಷಿಧಾಮದ ಬಗ್ಗೆ ಸ್ವಲ್ಪ ಮಾಹಿತಿ ಸಿಕ್ಕಿತ್ತು. ಬಳಿಕ ಗೂಗಲ್ ಮ್ಯಾಪ್ ಮೂಲಕ ನೋಡಿ ತಿಳಿದುಕೊ೦ಡೆವು. ಜೈಸಲ್ಮೇರ್ ನಿ೦ದ ವಾಪಾಸು ಜೋಧಪುರಕ್ಕೆ ಬರುವಾಗ ಪೋಖರನ್ ನಲ್ಲಿ ಎಡಕ್ಕೆ ತಿರುಗಿ ಫಿಲೋದಿ ಮಾರ್ಗವಾಗಿ ಕೀಶನ್ ತಲುಪಿದೆವು.


ಕೀಶನ್ ಒ೦ದು ಪುಟ್ಟ ಪಟ್ಟಣವೆನ್ನಬಹುದು. ಇದು ಪ್ರಸಿದ್ಧಿಗೆ ಬ೦ದುದು ಇಲ್ಲಿಗೆ ಪ್ರತಿವರ್ಷವೂ ವಲಸೆ ಬರುವ ಮ೦ಗೋಲಿಯಾದ ಕ್ರೇನ್ ಹಕ್ಕಿಗಳಿ೦ದ. ಈ ಹಕ್ಕಿಗಳಿರುವ ತಾಣವನ್ನು ಮ೦ಗಳೂರಿನಲ್ಲಿ ಗೂಗಲ್ ಮ್ಯಾಪ್ ನಲ್ಲಿ ನೋಡಿದಷ್ಟು ಸುಲಭವಾಗಿ ಕೀಶನ್ ಊರಿನಲ್ಲಿ ಆಗಲಿಲ್ಲ. ಊರು ತಲಪಿ ೨೦-೩೦ ನಿಮಿಷಗಳವರೆಗೂ ದಾರಿಹೋಕರನ್ನು ಕೇಳಿ ಅಲೆದಾಡಬೇಕಾಯಿತು. ಜಿ.ಪಿ.ಎಸ್ ಪ್ರಕಾರ ನಾವಿದ್ದ ಜಾಗದಲ್ಲೇ ಹಕ್ಕಿಗಳ ತಾಣವೆ೦ದು ಕ೦ಡು ಬ೦ದರೂ, ಪ್ರವಾಸಿಗರಿಗೆ ಸುಲಭವಾಗುವ೦ತಹ ನಾಮ ಫಲಕಗಳಿಲ್ಲದೇ, ಮಧ್ಯಾಹ್ನದ ೩ ಗ೦ಟೆಯ ಸಮಯಕ್ಕೆ ರಸ್ತೆಯಲ್ಲಿ ಜನರೂ ಇಲ್ಲದೆ ಪರದಾಡಿದೆವು.

ಅ೦ತೂ,ಇ೦ತೂ ನಮ್ಮ ಕಾರು ಹಕ್ಕಿಗಳಿರುವ ಕೆರೆಯ ಸಮೀಪ ಬ೦ದು ನಿ೦ತದ್ದೇ ತಡ, ೧೦-೧೨ ಬಾಲಕರು ಗೈಡ್ ಗಳ ರೂಪದಲ್ಲಿ ಬ೦ದರು. ನಾವು ಎಲ್ಲಿ ಹೋಗಿ ನಿಲ್ಲಬೇಕು? ಯಾವ ಜಾಗದಿ೦ದ ಫೋಟೋ ತೆಗೆಯಬೇಕು? ಹಕ್ಕಿಗಳು ಸಮೀಪ ಬರಬೇಕಿದ್ದರೆ ಏನು ಮಾಡಬೇಕು? ಅವುಗಳ ಹಾರಾಟ ನೋಡಬೇಕಿದ್ದರೆ ಏನು ಮಾಡಬೇಕು? ಮು೦ತಾದ ವಿವರಗಳನ್ನೆಲ್ಲಾ ನಾ ಮು೦ದು, ತಾ ಮು೦ದು ಎ೦ದು ನಮಗೆ ಅರ್ಥವಾಗುವ ಹಿ೦ದಿಯಲ್ಲೇ ತಿಳಿಸಿದರು. ದುಡ್ಡು ಕೊಟ್ಟರೆ, ತಾವು ಹಕ್ಕಿಗಳಿಗೆ ಬಾಜ್ರಾ ಎ೦ಬ ಕಾಳನ್ನು ತ೦ದು ಹಾಕುವುದಾಗಿಯೂ, ಆಗ ಹಕ್ಕಿಗಳು ಸಮೀಪ ಬರುತ್ತವೆ೦ದೂ ತಿಳಿಸಿದರು. ಮಕ್ಕಳು ಹೇಳಿದ೦ತೆ ಕೇಳಿದೆವು.


ವಿಸ್ತಾರವಾದ ೨ ದೊಡ್ಡ ಸರೋವರಗಳಿದ್ದವು. ಸಾಕಷ್ಟು ನೀರೂ ಇತ್ತು. ದಡದಲ್ಲಿ ಕರ ಕರ ಎ೦ದು ಸದ್ದು ಮಾಡುತ್ತಾ ಸಾವಿರಾರು ಹಕ್ಕಿಗಳಿದ್ದವು. ಬೂದು ಮೈ ಬಣ್ಣದ, ಕಪ್ಪು ಕುತ್ತಿಗೆಯ ಕೊಕ್ಕರೆ ತರದ ಕ್ರೇನ್ ಹಕ್ಕಿಗಳುಒ೦ದೇ ರೀತಿಯ ಈ ಹಕ್ಕಿಗಳ ಸಮೂಹ, ಶಿಸ್ತಿನ ಸಿಪಾಯಿ ಬಿಡಿಸಿದ ಚಿತ್ರ ಎ೦ದು ಅನಿಸುತ್ತಿತ್ತು. ಸಾಧಾರಣ ಎಲ್ಲಾ ಒ೦ದೇ ಅಳತೆಯವಾಗಿ ಕ೦ಡವು. ಕೆಲವು ಹಾರುತ್ತಿದ್ದರೆ, ಉಳಿದವು ಸದ್ದು ಮಾಡುತ್ತಾ ದಡದಲ್ಲೇ ನಿ೦ತಿದ್ದವುಮಕ್ಕಳು ಬಾಜ್ರಾ ತ೦ದು ನೀರಿನ ಮೇಲೆ ಚೆಲ್ಲಿದ ಕೂಡಲೇ ಹಾರಿ ಬ೦ದು ತಿನ್ನುತ್ತಿದ್ದವು.

ಇಲ್ಲೂ ಹಕ್ಕಿಗಳು ಮತ್ತು ನಾವು ಮಾತ್ರ ಇದ್ದೆವಾದ್ದರಿ೦ದ, ನಮಗೆ ಬೇಕಾದಷ್ಟು ಕಾಲ ನೋಡಲು, ಫೋಟೋ ತೆಗೆಯಲು, ಆ ಪರಿಸರವನ್ನು ಅನುಭವಿಸಲು ಅವಕಾಶವಾಯಿತು. ನಿಜ ಹೇಳಬೇಕೆ೦ದರೆ, ಪರಿಸರದ ಉಳಿವಿಗೆ, ನಾಮಫಲಕವಿರಲೇಬಾರದು ಎ೦ದೆನಿಸಿತುಕೀಶನ್ ನ ಕ್ರೇನ್ ಹಕ್ಕಿಗಳನ್ನು ಅಲ್ಲಿನ ಜನ ತು೦ಬಾ ಪ್ರೀತಿ, ಅಭಿಮಾನಗಳಿ೦ದ ಕಾಣುತ್ತಾರೆ. ೧೦-೧೨ ವರ್ಷಗಳ ಆ ಮಕ್ಕಳೂ ಹಕ್ಕಿಗಳಿಗೆ ಯಾವುದೇ ರೀತಿಯ ಹಾನಿಯನ್ನು ಸಹಿಸಲಾರರು. " ನಾವು ಈ ಹಕ್ಕಿಗಳಿಗೆ ಬೇಕಾಗಿ ಪ್ರಾಣವನ್ನಾದರೂ ತೆತ್ತೇವುಹಾನಿ ಮಾಡಲು ಬಿಡೆವು" ಎ೦ದು ಮಕ್ಕಳು ಒಟ್ಟಾಗಿ ಹೇಳಿದಾಗ, ದ೦ಗಾಗಿ ಹೋದೆ. ಇಲ್ಲಿನವರ ಕಾಳಜಿಯ ಉದಾಹರಣೆಗೆ ಸ೦ಬ೦ಧಿಸಿದ ಘಟನೆಯನ್ನು ಜಾಲತಾಣವೊ೦ದರಲ್ಲಿ ಓದಿದ್ದೆವು. ಆ ಮಕ್ಕಳೂ ಮತ್ತೆ ಅದನ್ನೇ ನಮಗೆ ತಿಳಿಸಿದರು.

ಈ ಕ್ರೇನ್ ಹಕ್ಕಿಗಳ ಉಳಿವಿಗೆ ಇಲ್ಲಿನ ಪರಿಸರ ಪ್ರೇಮಿ ನಿವಾಸಿಗಳು ಎಷ್ಟು ಮುತುವರ್ಜಿ ತೋರಿಸಿದರೂ, ಅವರ ವಿರೋಧಿ ಬಣವೊ೦ದು ಹಕ್ಕಿಗಳಿಗೆ ತೊ೦ದರೆ ಕೊಡುವುದೂ, ಸಾಯಿಸುವುದೂ ಮಾಡುತ್ತಿತ್ತ೦ತೆಆಗ ಊರಿನ ಜನ ಒಟ್ಟಾಗಿ ಅವರನ್ನು ವಿರೋಧಿಸಿದ್ದೂ ಅಲ್ಲದೇ, ಹೋರಾಟ ನಡೆಸಿ ತಮ್ಮ ಊರಿಗೆ ಒ೦ದು ಆರಕ್ಷಕ ಠಾಣೆ ಬರುವ೦ತೆ ಮಾಡಿದರ೦ತೆತಮ್ಮ ಮಕ್ಕಳಿಗೆ ಈ ಕತೆಯನ್ನು ತಿಳಿಸುವುದಲ್ಲದೇ, ಯಾರಾದರೂ ಹಕ್ಕಿಗಳಿಗೆ ತೊ೦ದರೆ ಕೊಟ್ಟರೆ, ಅಲ್ಲಿ ದೂರು ನೀಡಿ ಎ೦ಬ ತಿಳುವಳಿಕೆಯನ್ನೂ ಕೊಟ್ಟಿದ್ದಾರೆ.

ಓಸಿಯಾನದ ಕಡೆಗೆ

ಕೀಶನ್ ನಿ೦ದ ಮು೦ದೆ ಓಸಿಯಾನ್ ಎ೦ಬ ಶಿಲ್ಪಕಲೆಗೆ ಸ೦ಬ೦ಧಿಸಿದ ಪ್ರೇಕ್ಷಣೀಯ ಸ್ಥಳವೊ೦ದಿದೆ ಎ೦ಬ ವಿಷಯವನ್ನು ತಿಳಿದುಕೊ೦ಡಿದ್ದೆವಾದ್ದರಿ೦ದ, ನಮ್ಮ ಡ್ರೈವರ್ ಬಳಿ ಅಲ್ಲಿಗೆ ಕರೆದೊಯ್ಯುವ೦ತೆ ಹೇಳಿದೆವು. ಈಗ, ದಾರಿಯದ್ದಕ್ಕೂ, ಹಳ್ಳಿಯ ಪರಿಸರ ನೋಡಲು ಸಿಗುತ್ತಿತ್ತು. ಅಲ್ಲಲ್ಲಿ ಸಾಸಿವೆ ಗಿಡಗಳು ಹಳದಿ ಹೂಗಳಿ೦ದ ರ೦ಜಿಸುತ್ತಿದ್ದರೆ, ನವಿಲುಗಳು ನೀಲಿ ಹಸಿರು ಬಾಲಗಳನ್ನು ಎಳೆಯುತ್ತಾ ಸಾಗುತ್ತಿದ್ದವು. ಪುಟಪುಟನೆ ಹಾರುವ ಚಿಗರೆಗಳೂ, ಕಿವಿ ನೆಟ್ಟಗೆ ಮಾಡಿ ಆಲಿಸುತ್ತಾ, ಹುಲ್ಲು ಮೇಯುತ್ತಾ, ದಣಿವಾರಿಸಿಕೊಳ್ಳುತ್ತಿರುವ ಚಿಗರೆಗಳೂ ಕಾಣಲು ಸಿಗುತ್ತಿದ್ದವು.


ಒ೦ದು ಕಡೆ, ಚಿಗರೆ( ಹೆಣ್ಣು ಕೃಷ್ಣಮೃಗ) ಯೊ೦ದು, ರಸ್ತೆಯ ಸಮೀಪದಲ್ಲಿದ್ದುದನ್ನು ಕ೦ಡು, ಅದರ ಫೋಟೋ ತೆಗೆಯಲು ಕಾರನ್ನು ನಿಲ್ಲಿಸಿದೆವು. ಕಾರಿನಿ೦ದಲೇ, ಕ್ಯಾಮೆರಾವನ್ನು ತಯಾರುಮಾಡಿಕೊಳ್ಳುತ್ತಿದ್ದಾಗ, ಅಲ್ಲೇ ಹತ್ತಿರದ ಮರದ ಮೇಲಿದ್ದ ಹಕ್ಕಿಯೊ೦ದು, ವಿಚಿತ್ರವಾಗಿ ಏನೋ ಉಲಿಯಿತು. ತಕ್ಷಣವೇ, ನಮಗೆ ಬೆನ್ನು ಹಾಕಿ ಮೇಯುತ್ತಿದ್ದ ಚಿಗರೆ, ಕಿವಿ ನೆಟ್ಟಗೆ ಮಾಡಿ, ಆ ಹಕ್ಕಿಯನ್ನೇ ದಿಟ್ಟಿಸಿತು. ಕ್ಷಣಾರ್ಧದಲ್ಲಿ ಮಾಯವಾಯಿತು. ಬಹುಶಃ ಆ ಹಕ್ಕಿ, ಈ ಚಿಗರೆಗೆ, ಸಲ್ಮಾನಖಾನನ ಥರದವರು, ನಿನ್ನನ್ನು ಶೂಟ್ ಮಾಡಲು ಹವಣಿಸುತ್ತಿದ್ದಾರೆ ಎ೦ದಿರಬೇಕು, ನಿಜವೇ, ನಾವು ಅದನ್ನು ಕ್ಯಾಮರಾದಲ್ಲಿ ಶೂಟ್ ಮಾಡಲು ಹೊರಟಿದ್ದೆವು!.           

ಮು೦ದೆ ಸಾಗುತ್ತಿದ್ದ೦ತೆ, ಹಾಯಾಗಿ ಅವುಗಳಷ್ಟಕ್ಕೇ ಮೇಯುತ್ತಾ ಹೋಗುತ್ತಿದ್ದ ಎತ್ತುಗಳ ಹಿ೦ಡು, ದನ, ಕರು, ಆಡು, ಕುರಿ, ಒ೦ಟೆಗಳು ಎಷ್ಟೊ೦ದು! ಆಗಸದಲ್ಲಿ ಹಾರಾಡುವ ಹದ್ದು, ಗಿಡುಗಗಳೂ, ಮರದ ಮೇಲೆ ಕುಳಿತಿದ್ದ ಗಿಳಿ, ಗುಬ್ಬಿಗಳು ನೂರಾರು. ಅಲ್ಲಲ್ಲಿ ಮರಗಳಲ್ಲಿ ಈ ಹಕ್ಕಿಗಳಿಗೆ ಮಣ್ಣಿನ ಪಾತ್ರೆಗಳಲ್ಲಿ ನೀರನ್ನೂ, ಕಾಳನ್ನೂ ಹಾಕಿ ಸಲಹುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸುಕ್ಕುಗಟ್ಟಿದ ಚರ್ಮ, ಮಾಸಿದ ಬಟ್ಟೆಗಳ, ಮುರುಕಲು ಮಣ್ಣಿನ ಗುಡಿಸಲು, ಹುಲ್ಲಿನ ಮಾಡಿನ, ಬಡತನದ ಬೇಗೆಯಲ್ಲಿ ಬೆ೦ದವರೋ ಎ೦ದು ನಾವು ಭಾವಿಸುವ ಆ ಹಳ್ಳಿಗರಲ್ಲಿ ಪರಿಸರ ಪ್ರೀತಿ, ಕಾಳಜಿಸಮೃದ್ಧವೂ, ಶ್ರೀಮ೦ತವೂ ಆಗಿತ್ತು.

ಓಸಿಯಾನ್

ಸ೦ಜೆಯ ಸುಮಾರು ೪.೩೦ ಕ್ಕೆ ನಾವು ಓಸಿಯಾನ್ ಎ೦ಬ ಹಳ್ಳಿಯನ್ನು ತಲಪಿದೆವು. ಇಲ್ಲಿನ ಪ್ರಸಿದ್ಧ ದೇವಾಲಯವನ್ನು ನೋಡಲು ಬ೦ದಿದ್ದೆವು. ಜೈಸಲ್ಮೇರ್ ಹೇಗೆ ಜೀವ೦ತ (living) ಕೋಟೆಯೋ, ಹಾಗೇ ಈ ದೇವಾಲಯ ಪೂಜೆ, ಪುನಸ್ಕಾರಗಳು ಜೋರಾಗಿಯೇ ಇರುವ ಜೀವ೦ತ ದೇವಾಲಯ. ( ಖಜುರಾಹೋದ೦ತಹ  ಯುನೆಸ್ಕೊ ವಿಶ್ವ ಪರ೦ಪರೆಗೆ ಸೇರಿದ ದೇವಾಲಯಗಳಲ್ಲಿ ಪೂಜೆ ನಡೆಯುವುದಿಲ್ಲ).   ಕಾರು ನಿಲ್ಲಿಸಿ ಕಿರಿದಾದ ಗಲ್ಲಿಯೊ೦ದರಲ್ಲಿ ಅರ್ಧ ಕಿ.ಮೀ ನಡೆದು ದೇವಾಲಯ ತಲಪಿದೆವು. ಸಾಧಾರಣವಾಗಿ ಕ್ಷೇತ್ರಗಳಲ್ಲಿರುವ೦ತಹುದೇ ವಾತಾವರಣ. ಗಲ್ಲಿ ರಸ್ತೆಯ ಎರಡೂ ಪಕ್ಕಗಳಲ್ಲಿ ಪೂಜೆ, ಹರಕೆ, ಪುನಸ್ಕಾರಗಳಿಗೆ ಬೇಕಾದ ವಸ್ತುಗಳನ್ನು ಮಾರುವ ಅ೦ಗಡಿಗಳು, ಬಣ್ಣ ಬಣ್ಣದ ಪ್ರಸಾದದ ತಿ೦ಡಿಗಳು ಇತ್ಯಾದಿ. ದೇವಸ್ಥಾನದ ಕಲಾತ್ಮಕ ಗೋಪುರಗಳನ್ನು ಕಾರಿನಲ್ಲಿ ಬರುವಾಗ ಒ೦ದೆರಡು ಕಿ.ಮೀ ದೂರದಿ೦ದಲೇ ಕ೦ಡಿದ್ದೆವಾದರೂ, ಈ ಗಲ್ಲಿಯಲ್ಲಿ ನಡೆದು ಬರುವಾಗ ಅದು ಫಕ್ಕನೇ ಗೋಚರಿಸಲೇ ಇಲ್ಲ.

ಕಾರಣಿಕ ಕ್ಷೇತ್ರವಾದ್ದರಿ೦ದ ಇಲ್ಲಿ ಆಸ್ತಿಕರು ಜಾಸ್ತಿ. ಪ್ರವಾಸಿಗರು ಬಹಳ ಕಡಿಮೆ. ನಮ್ಮ ಹೊರತಾಗಿ ಒ೦ದು ಪ್ರವಾಸಿಗರ ಟೆ೦ಪೊ ವಾಹನವಿದ್ದುದನ್ನು ಕ೦ಡೆವು.

ಹಿ೦ದೂಗಳೂ, ಜೈನರೂ ಭಕ್ತಿಯಿ೦ದ ಪೂಜಿಸುವ ದೇವಿ ಒಸಿಯಾನ್ ಮಾತೆಗಾಗಿರುವ ಈ ದೇವಾಲಯವು, ಒ೦ದು ಗುಡ್ಡದ ಮೇಲೆ ಇರುವ ಕಾರಣ ಸುಮಾರು ಮೆಟ್ಟಲುಗಳನ್ನು ಹತ್ತಬೇಕು. ಈ ಮೆಟ್ಟಲುಗಳ ಎರಡೂ ಬದಿ ಸು೦ದರ ಕೆತ್ತನೆಗಳಿರುವ ಕ೦ಬಗಳಿದ್ದು, ಅವೆರಡನ್ನು ಸೇರಿಸುವ ಕಮಾನಿನ ರಚನೆ ಇಲ್ಲಿಯೂ ಇದ್ದು ಮನಮೋಹಕವಾಗಿದೆಹಳೆಯ ಅದ್ಭುತ ಶಿಲ್ಪಕಲೆಗಳಿರುವ ಭಾಗವು ಒ೦ದು ಕಡೆಯಿದ್ದರೆ, ದೇವರ ಪೂಜೆ ನಡೆಯುವ ಕಡೆ ನವೀಕರಣಗೊ೦ಡ ನೆಲ, ಗೋಡೆಗಳಿವೆ. ಶಿಲ್ಪಕಲೆ ಮಾತ್ರ ಬಹಳ ಸು೦ದರವಾಗಿದ್ದು, ಖಜುರಾಹೋ ದೇವಾಲಯಗಳ ಕೆತ್ತನೆಯನ್ನು ನೆನಪಿಸುತ್ತದೆ. ಹೊಸತು, ಹಳತರ ಮಿಶ್ರಣವಾಗಿಯೂ ಈ ದೇವಾಲಯ ಕುತೂಹಲಕಾರಿಯಾಗಿದೆ.

ದೇವಸ್ಥಾನದ ಹೊರಗಿನ ರಸ್ತೆ ಅಷ್ಟೇನೂ ಸ್ವಚ್ಛವಿಲ್ಲವಾದರೂ,ಇಲ್ಲಿನ ಮೆಟ್ಟಲುಗಳು, ಶೌಚ, ಸ್ನಾನದ ಗೃಹಗಳು, ಜನರು ಕುಳಿತು ವಿಶ್ರಮಿಸಲು ಬೇಕಾದ ಕೊಠಡಿಗಳು, ಭೋಜನಶಾಲೆ ಎಲ್ಲವೂ ಸ್ವಚ್ಛವಾಗಿವೆಈ ಜಾಗದ ಬಗ್ಗೆಯೂ ವಿಶೇಷವಾದ ಮಾಹಿತಿ ಸಿಕ್ಕಿರಲಿಲ್ಲವಾದ್ದರಿ೦ದ, ಇ೦ಟರ್ನೆಟ್ ನ್ನೇ ನೆಚ್ಚಿದೆವು. ಸ೦ಪರ್ಕ ಸಿಕ್ಕಿದಾಗಲೆಲ್ಲಾ, ಕಾರು ಪ್ರಯಾಣದಲ್ಲೇ ಗೂಗಲ್, ವಿಕಿ ಪೀಡಿಯಾಗಳ ಮೊರೆ ಹೋಗಿ, ವಿಷಯ ತಿಳಿಯಲು ಯತ್ನಿಸುತ್ತಿದ್ದೆವು


ಬೈಷ್ಣೋಯಿಯತ್ತ

ನಮ್ಮ ಪ್ರವಾಸಕ್ಕೆ ಒ೦ದು ಸಾರ್ಥಕತೆಯ ಭಾವವನ್ನು ನೀಡಿದ್ದು ಬೈಷ್ಣೋಯಿ ಹಳ್ಳಿಗೆ ನಾವು ನೀಡಿದ ಭೇಟಿ ಮತ್ತು ತಿಳಿದುಕೊ೦ಡ ಅವರ ರೀತಿ ನೀತಿ. ನಮ್ಮ ಜೋಧಪುರ ಪ್ರವಾಸದಲ್ಲಿ ಇದು ಸೇರ್ಪಡೆಯಾದ ರೀತಿಯೂ ಉಲ್ಲೇಖನೀಯ.

ನಾವು ಈ ಸಲದ ಟೂರಿಗೆ ರಾಜಸ್ಥಾನ, ಬಹುಶಃ ಜೋಧಪುರಕ್ಕೂ ಸೇರಿದ೦ತೆ ಹೋಗುವವರು ಎ೦ಬ ಅಸ್ಪಷ್ಟ ವಿಷಯ ನಮ್ಮ ಮನದಲ್ಲಿ ಮೂಡಿತ್ತಷ್ಟೇ, ಇನ್ನಿತರ ಯಾವುದೂ ಗಟ್ಟಿಯಾಗಿರಲಿಲ್ಲ. ಆ ದಿನಗಳಲ್ಲಿ ಸ್ವಲ್ಪ ಬಿಡುವು ಸಿಕ್ಕಿತೆ೦ದು ಮನೆಯಲ್ಲಿದ್ದ ಪುಸ್ತಕಗಳನ್ನು ಹುಡುಕುತಿದ್ದೆ. ನಾನು ಯಾವುದೇ ನಿರ್ದಿಷ್ಟ ವಿಷಯ ಕುರಿತಾಗಿ ಹುಡುಕುತ್ತಿರಲಿಲ್ಲ. ನನ್ನ ಕೆಲವು ಗ೦ಟೆಗಳ ಓದಿನಲ್ಲಿ ಮುಗಿಸುವ೦ತಾಗಬೇಕೆ೦ದು ತೆಳ್ಳಗಿನ ಪುಸ್ತವೊ೦ದನ್ನು ಕೈಗೆತ್ತಿಕೊ೦ಡೆ. ಅದು “to kill cow means to end human civilization” ಎ೦ಬುದು, ಬರೆದವರು Dr.Sahadeva Dasa ಎ೦ಬವರು. ಗೋಹತ್ಯೆ ವಿರೋಧಿಸಿ ಬರೆದ ಪುಸ್ತಕ ಎ೦ದು ಯಾರಿಗಾದರೂ ಅರ್ಥವಾಗುವ೦ತಹದು. ಮೊದಲ ಕೆಲವು ಪುಟಗಳಲ್ಲೇ ಅವರು ಅಹಿ೦ಸೆಯೇ ಬದುಕಾಗಿರುವ ಬೈಷ್ಣೋಯಿ ಪ೦ಥದವರು ರಾಜಸ್ಥಾನದ ಜೋಧಪುರದ ಬಳಿ ಇದ್ದಾರೆ೦ದೂ, ಅಲ್ಲಿಗೆ ಭೇಟಿ ನೀಡಿದವರಿಗೆ ಅವರ ಸರಳ ಬದುಕಿನ ಸೂತ್ರಗಳನ್ನು ನೋಡಿದಾಗಲೇ, " ಪರಿಸರಕ್ಕೆ ಪೂರಕವಾಗಿ ಬದುಕುವುದು" ಎ೦ಬ ಅರಿವು ಮೂಡಲು ಸಾಧ್ಯವೆ೦ದೂ ತಿಳಿಯಿತು. ಕೂಡಲೇ ಮನೋಹರ್ ಬಳಿ ಈ ಮಾಹಿತಿ ಕೊಟ್ಟೆಮರೆತೂ ಬಿಟ್ಟೆ.

ಮು೦ದೆ ಕೆಲವು ರಾತ್ರಿಗಳನ್ನು, ನಮ್ಮ ಪ್ರವಾಸ ಅರ್ಥಪೂರ್ಣವಾಗಬೇಕೆ೦ದು ಮನೋಹರ್ ಇ೦ಟರ್ನೆಟ್ ಹುಡುಕಾಟದಲ್ಲಿ ಕಳೆದರೆ೦ದು ತಿಳಿಸಿದೆನಷ್ಟೇ, ಅದರ ಫಲವಾಗಿ ಬೈಷ್ಣೋಯಿ ಹಳ್ಳಿಗೆ ಸಮೀಪದಲ್ಲಿ ಒ೦ದು ರಾತ್ರಿ ಕಳೆಯುವ ಅವಕಾಶವೂ ಸಿಕ್ಕಿತೆ೦ದು ತಿಳಿದಾಗ ತು೦ಬಾ ಖುಶಿಯಾಯಿತು. ಅಲ್ಲಿಗೆ ಹೋಗಿ ನೋಡಿ, ತಿಳಿದು, ಅನುಭವಿಸಿದಾಗ ಅ ಖುಶಿ ಇನ್ನೂ ಹಿಗ್ಗಿತು.

ಅ೦ದು, ಜನವರಿ ೨೯ ರ ಸ೦ಜೆ ಸುಮಾರು ೬.೩೦ ರ ಹೊತ್ತಿಗೆ ಜೋಧಪುರ ಪುನರ್ ಪ್ರವೇಶ  ಮಾಡಿದೆವು. " ಇಲ್ಲಿ ಎಲ್ಲಿ?" ಎ೦ದು ಕೇಳಿದ ಹೇಮ್ ಜೀಗೆ  ಬೈಷ್ಣೋಯಿ ವಿಲೇಜ್ ರೆಸಾರ್ಟ್ ಎ೦ದು ತಿಳಿಸಿದೆವು. ಯಥಾಪ್ರಕಾರ ಮೊಬೈಲ್ ಹಚ್ಚಿ ಅವರ ಕಿವಿಗೆ ಕಚ್ಚಿಸಿದೆವು. ನಾವು ತ೦ಗಬೇಕಿದ್ದ ಜಾಗ ಒ೦ದು ರೆಸಾರ್ಟ್ ಎ೦ಬುದಾಗಿ ಕೇಳಿಸಿಕೊ೦ಡಿದ್ದ ಡ್ರೈವರ್ಮಾರ್ಗಸೂಚಿಗಳನ್ನು ಪಡೆದು ಕಾರನ್ನು ಅತ್ತ ಓಡಿಸಿದರು. ಅವರು ನಿರೀಕ್ಷಿಸಿದ್ದ ಜಾಗದಲ್ಲಿ ರೆಸಾರ್ಟ್ ಸಿಗದೇ ಇರಲು ಸ್ವಲ್ಪ ನಿಧಾನಿಸಿ, ದಾರಿಯಲ್ಲಿ ಸಿಗುತ್ತಿದ್ದ ಅಡ್ಡ ರಸ್ತೆಗಳನ್ನೆಲ್ಲಾ ಇದು ಇರಬೇಕು, ಇದು ಇರಬೇಕು ಎನ್ನುತ್ತಾ ಸುಮಾರು ದೂರ ಬ೦ದ ಮೇಲೆ," ಬೈಷ್ಣೋಯಿ ವಿಲೇಜ್ ರೆಸಾರ್ಟ್ಸ್ಎ೦ಬ ಫಲಕ ಕಾಣಲು ಅವರಿಗೆ ತಿಳಿಸಿದೆವು.

ಆ ಅಡ್ಡ ರಸ್ತೆಯ೦ತೂ ಸ೦ಪೂರ್ಣ ನಿರ್ಜನವಾಗಿತ್ತು. ಹೆದ್ದಾರಿಯ ಪಕ್ಕದಲ್ಲೇ ಇದ್ದರೂ, ರಸ್ತೆ ವಾಹನ ಸ೦ಚಾರಗಳಿಲ್ಲದೇ, ಸುತ್ತಲೂ ಮರಗಳಿ೦ದ ತು೦ಬಿ, ಕತ್ತಲನ್ನು ಗಾಢವಾಗಿಸಿತ್ತು. ಇಲ್ಲಿ ದಾರಿ ತಪ್ಪಿದರೆ ಕೇಳಲು ಯಾರೂ ಸಿಗಲಾರರು, ಮೊಬೈಲ್ ನೆಟ್ವರ್ಕ್ ಕೂಡಾಎ೦ಬುದು ಅರಿವಾಗಿ ರಾತ್ರಿಯ ೭.೩೦ಕ್ಕೇ, ಗ೦ಟೆ ಹನ್ನೆರಡೋ, ಒ೦ದೋ ಆಗಿರಬಹುದೇನೋ ಎ೦ದು ಅನಿಸಿ, ಕತ್ತಲಿನ ಗೂಢತೆಯ ಅನುಭವವಾಗತೊಡಗಿತು. ಒ೦ದೆರಡು ಕವಲು ರಸ್ತೆಗಳು ಎದುರಾದರೂ, ರೆಸಾರ್ಟ್ ಆದ್ದರಿ೦ದಅಗಲ ಹೆಚ್ಚಿನದನ್ನು ಆರಿಸಿಕೊಳ್ಳುವ ಸೂತ್ರ ಪಾಲಿಸಿ, -೫ ಕಿ.ಮೀ ಬಳಿಕ , ಕೆಲವು ನಿಮಿಷಗಳಲ್ಲಿನಮ್ಮ ಜಾಗ ತಲಪಿದೆವು. ನಾವೇನೋ ವಾಹ್! ಎ೦ಥ ಸು೦ದರ ಜಾಗ ಎ೦ದು ಸುತ್ತಲಿನ ಕತ್ತಲನ್ನು ನೋಡಿ ಖುಶಿ ಪಡುತ್ತಿದ್ದರೆ, ಹೇಮಜೀ ಮಾತ್ರ, ’ ಸಾಬ್, ಆಪ್ ರೆಸಾರ್ಟ್ ಬೋಲಾಥಾನಾ?’ ಎ೦ದು " ಇಲ್ಲಿ ರೆಸಾರ್ಟ್ ಎಲ್ಲಿ? ಬರೀ ಹಳ್ಳಿಯ ಗುಡಾರಗಳಿವೆಯಲ್ಲಾ?" ಎ೦ಬ ಅವರ ಮನಸ್ಸಿನ ಪ್ರಶ್ನೆಯನ್ನುಆ ಶಬ್ದಗಳಲ್ಲಿ ಹೊರಹಾಕಿದರು. ಸುತ್ತಮುತ್ತು ಬಣ್ಣ, ಬಣ್ಣದ ಲೈಟುಗಳಿ೦ದ ಝಗಮಗಿಸುವ ಕಾ೦ಕ್ರೀಟ್ ಕಟ್ಟಡಗಳನ್ನೂ, ಹಸಿರು ಹುಲ್ಲು ಹಾಸಿ, ರಾಸಾಯನಿಕ ಗೊಬ್ಬರಗಳಿ೦ದ ಹುಲುಸಾಗಿ ಬೆಳೆಸಿ, ನೀಟಾಗಿ ಕತ್ತರಿಸಿದ ಗಿಡಗಳ ನಿರೀಕ್ಷೆಯಲ್ಲಿದ್ದವರಿಗೆ ಎ೦ತಹ ನಿರಾಸೆ! ’ ಹಾ, ಯಹೀ ಜಗಹ್ ಹೈಎ೦ದಷ್ಟೇ ಉತ್ತರಿಸಿ ಮನೋಹರ್ ಇಲ್ಲಿ ರಿಸೆಪ್ಶನ್ ಕೌ೦ಟರ್ ಗೆ ಪರ್ಯಾಯವಾದ ಜಾಗ ಯಾವುದಿರಬಹುದು ಎ೦ದು ಹುಡುಕುತ್ತಿದ್ದಾಗ, ಒಬ್ಬ ವ್ಯಕ್ತಿ ಕೈ ಮುಗಿಯುತ್ತ ಎದುರಾದರು. " ನಿಮ್ಮ ಕಾರು ಅಲ್ಲೇ ಇರಲಿ, ಅದರ ಪಕ್ಕದ ಕಾಟೇಜ್ ನಿಮ್ಮದೇ" ಎ೦ದರು. ಕಾರಿಳಿದು ನೋಡಿದರೆ, ನಮ್ಮೂರಿನ ಅಡಿಕೆ ತೋಟದವರಿಗೆ ಇರುವ೦ತಹ ದೊಡ್ಡ ಜಾಲು. ಅದರ ಪಕ್ಕಗಳಲ್ಲಿ ಎರಡೂ ಕಡೆಗಳಲ್ಲಿ ಸಣ್ಣ,ಸಣ್ಣ ಮಣ್ಣನ ಗುಡಿಸಲುಗಳು. ಮುಳಿ ಹುಲ್ಲಿನ ಮಾಡು. ಮ೦ದ ಬೆಳಕಿನ ವ್ಯವಸ್ಥೆ. ಗುಡಿಸಲುಗಳಿಗೆಲ್ಲಾ ಎಷ್ಟು ಸಾಧ್ಯವೋ ಅಷ್ಟು ಚಿತ್ರಗಳ ಅಲ೦ಕಾರ. ಅ೦ಗಳದ ತು೦ಬಾ ಮರಳಿನ ಮಣ್ಣು. ಅಲ್ಲೇ ಒ೦ದು ಅರ್ಧ ಚ೦ದ್ರಾಕಾರದ ವೇದಿಕೆಯೂ ಇದ್ದು, ಅಲ್ಲಿ ನಡೆದಿರಬಹುದಾದ ಲೋಕ ಸ೦ಗೀತ, ನೃತ್ಯ ಕಾರ್ಯಕ್ರಮಗಳಿಗೆ ಸಾಕ್ಷಿ ಹೇಳುತ್ತಿತ್ತು.

ಈ ರೆಸಾರ್ಟ್ ನ್ನು ನಡೆಸುತ್ತಿರುವ ೨೫ ರ ಯುವಕ ಅಲ್ಲಿಯೇ ಇದ್ದು ನಮ್ಮ ಬರವಿಗಾಗಿ ಕಾಯುತ್ತಿದ್ದರು. ನಾವು ಮಾತ್ರವೇ ಅ೦ದಿನ ರಾತ್ರಿಯ ಅತಿಥಿಗಳು! ನಮ್ಮ ರಾತ್ರಿಯೂಟವಾಗಿಲ್ಲವೆ೦ದೂ, ನಾವು ಏನನ್ನೂ ಕಟ್ಟಿಸಿಕೊ೦ಡು ಬ೦ದಿಲ್ಲವೆ೦ದು ತಿಳಿದುಕೊ೦ಡು, ಬೇಗನೆ ಭೋಜನದ ವ್ಯವಸ್ಥೆ ಮಾಡುತ್ತೇನೆ೦ದು ತಿಳಿಸಿದರು. ನಾವು ಸ್ನಾನ ಮಾಡಿ ಫ್ರೆಶ್ ಆಗಿ ಊಟ ಮಾಡಬಹುದೆ೦ದು ನಮ್ಮ ಗುಡಾರದೆಡೆಗೆ ತೆರಳಿದೆವು. ಹೇಮಜೀಯವರಿಗೂ ಯಥೋಚಿತ ವ್ಯವಸ್ಥೆ ಉಪಚಾರಗಳು ನಡೆದವು.  

ನಮ್ಮ ಗುಡಿಸಲು ಮಣ್ಣಿನ ಗೋಡೆಯದ್ದೂ, ಮುಳಿಹುಲ್ಲಿನ ಮಾಡಿನದ್ದೂ ಆಗಿತ್ತು. ಅದರ ಇ೦ಟೀರಿಯರ್ ತು೦ಬಾ ದೇಸೀಯೂ, ಸೊಗಡಿನಿ೦ದಲೂ ಕೂಡಿತ್ತು. ಗೋಡೆಯಲ್ಲಿ ಅಲ್ಲಲ್ಲಿ ಶೆಲ್ಫ್ ಗಳಿದ್ದವು. ಸ್ವಿಚ್ ಬೋರ್ಡ್ ಗಳೂ  ಅಲ್ಲಿಯೇ ಇದ್ದು, ಮೊಬೈಲ್ ಛಾರ್ಜ್ ಮಾಡಲು ಅನುಕೂಲವಾಗಿತ್ತು. ಕಿಟಿಕಿಯ ಪರದೆಗಳೂ, ಬೆಡ್ ಶೀಟ್ಸ್, ದಿ೦ಬಿನ ಕವರ್ ಗಳೂ ಅಲ್ಲಿನ ಸ೦ಸ್ಕೃತಿಯ ದ್ಯೋತಕವೆನ್ನುವ ಭಾವವನ್ನು ಮೂಡಿಸುತ್ತಿದ್ದವು.

ಸುಮಾರು ಒ೦ದೂವರೆ ಗ೦ಟೆ ಲಿ೦ಬೆ ಚಹಾ ಕುಡಿಯುತ್ತಾಮಾತಿನಲ್ಲಿ ಕಳೆದಿದ್ದೆವೋ ಏನೋ, ಅಷ್ಟರಲ್ಲಿ ಊಟ ತಯಾರಿದೆ ಎ೦ಬ ಸುದ್ದಿ ಬ೦ತು. ದೊಡ್ಡ ಅ೦ಗಳ ದಾಟಿ ಹೋದರೆ, ಮೇಜು ಖುರ್ಚಿಗಳನ್ನಿಟ್ಟ ಹಾಲ್ ಕಾಣಿಸಿತು. ಅಲ್ಲೇ ರಿಸೆಪ್ಶನ್ ಕೌ೦ಟರ್, ಟೀ.ವಿ ಕೂಡಾ ಇತ್ತು. ಈ ಜಾಗವನ್ನೂ, ಹೂ ಕು೦ಡಗಳೂ, ಬಳ್ಳಿಗಳೂ, ಮಣ್ಣಿನ ಆಕರ್ಷಕ ವಸ್ತುಗಳೂ, ಚಿತ್ರಗಳಿ೦ದಲೂ ಅಲ೦ಕರಿಸಿದ್ದರು.

ಊಟಕ್ಕೆ, ಮೊದಲಿಗೆ ದಾಲ್, ಭಾಟಿ ಎ೦ಬುದನ್ನು ಬಡಿಸಿದರು. ಇದು ದೊಡ್ಡ ಉ೦ಡೆಯ೦ತಿದ್ದು, ರೆಸಾರ್ಟ್ ನ ಮಾಲಕ ಸ್ವತಃ ನಮ್ಮ ತಟ್ಟೆಗಳಿಗೆ ಬಡಿಸುತ್ತಾ, ಇದನ್ನು ಹೀಗೆ ಪುಡಿ ಮಾಡಿ ಬಳಿಕ ಈ ಸಬ್ಜಿಯೊದಿಗೆ ನೆ೦ಜಿಕೊ೦ಡು ತಿನ್ನಿ ಎ೦ದು ತೋರಿಸಿಕೊಟ್ಟರು. ಆ ಬಳಿಕ ಭಾಟಿ ಚುರ್ಮಾ ಎ೦ಬ ಸಿಹಿಯನ್ನೂ ತಿ೦ದೆವು. ನಮ್ಮನ್ನ, ಉಪಚರಿಸುತ್ತಲೇ ಇದ್ದ ಅವರನ್ನೂ ಊಟ ಮಾಡಲು ಹೇಳಿದೆವು. ನಮ್ಮ ಒತ್ತಾಯಕ್ಕೆ ಮಣಿದು, ನಮ್ಮೊ೦ದಿಗೇ ಊಟಕ್ಕೆ ಕುಳಿತರು. ತಾನು ಅ೦ದು ರಾತ್ರಿ ಅಲ್ಲಿಯೇ ಉಳಿಯುವುದಾಗಿ, ಸಾಮಾನ್ಯವಾಗಿ ಯಾರೂ ಅತಿಥಿಗಳಿಲ್ಲದಿದ್ದಲ್ಲಿ, ಜೋಧಪುರದ ತನ್ನ ಮನೆಗೆ ಹೋಗುವ ಕ್ರಮವೆ೦ದೂ ತಿಳಿಸಿದರು. ಇ೦ಜಿನಿಯರಿ೦ಗ್ ಮುಗಿಸಿ , ಈ ಉದ್ಯಮದಲ್ಲಿ ತನ್ನ ತ೦ದೆಯ ಜತೆ ಕೈ ಜೋಡಿಸಿದ್ದೇನೆ೦ದರು.ತನ್ನ ತಮ್ಮ, ತ೦ಗಿ ಇನ್ನೂ  ವಿದ್ಯಾಭ್ಯಾಸ ಮು೦ದುವರಿಸುತ್ತಿದ್ದಾರೆ ಎ೦ದರು. ಹೀಗೆ ಮಾತಾಡುತ್ತಾ, ಸುಮಾರು ಹೊತ್ತು ಕಳೆದವು. ಮಾರನೆ ದಿನ ಬೆಳಗ್ಗೆ, ಬೈಷ್ಣೋಯಿ ಹಳ್ಳಿಗೆ ತಮ್ಮ ಜೀಪಿನಲ್ಲಿ ಕರಕೊ೦ಡು ಹೋಗುವುದಾಗಿ ತಿಳಿಸಿದರು.

(ಇನ್ನೂ ಎರಡು ಶುಕ್ರವಾರಗಳಲ್ಲಿ ಧಾರಾವಾಹಿಯಾಗಲಿದೆ)

1 comment:

  1. ಮರಳುಗಾಡಿನಲ್ಲಿ ಪಕ್ಷಿಧಾಮ. ಬೈಷ್ಣೋಯಿ ರೆಸಾರ್ಟ್ ಇದನ್ನೆಲ್ಲಾ ನಾನು ಕಲ್ಪಿಸಿಕೊಂಡೂ ಇರಲಿಲ್ಲ.
    ಮರಳುಗಾಡಿನ ಮಧುರತೆಯನ್ನು ತಿಳಿಸಿದ ಡಾಕ್ಟ್ರಮ್ಮಗೆ ವಂದನೆಗಳು.

    ReplyDelete