12 August 2014

ಯಾವ ರೀತಿಯಿಂದ ನೋಡಿದರೂ ನಾನೊಬ್ಬ ಹೊಸಬ

ಅಧ್ಯಾ ಹದಿನಾರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಹದಿನೆಂಟನೇ ಕಂತು

ಮರುದಿನ ಬೆಳಗ್ಗೆ ಮಿ. ವಿಕ್ಫೀಲ್ಡರೇ  ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಿ ದಾಕಲು ಮಾಡಿಸಿದರು. ಕೇಂಟರ್ಬರಿಯಲ್ಲಿ ಶಾಲೆಯಿದ್ದ ವಠಾರವೇ ಗೌಜುಗಲಭೆಯಿಲ್ಲದಿದ್ದ – ಜನನಿಬಿಡವಾಗಿರದಿದ್ದ – ಬಹು ಶಾಂತ ವಾತಾವರಣದ್ದಾಗಿದ್ದಿತು. ಶಾಲಾ ಕಂಪೌಂಡು ಬಹು ವಿಶಾಲವಾಗಿತ್ತು. ಶಾಲಾ ಕಟ್ಟಡವು ಎತ್ತರವಾಗಿದ್ದು ಭವ್ಯವಾಗಿ ತೋರುತ್ತಿತ್ತು. ಶಾಲೆಯ ಒಂದು ಬದಿಯಲ್ಲಿ ಚೆನ್ನಾಗಿ ಬೆಳೆಸಿ ಕಾಪಾಡಿಕೊಂಡು ಬಂದಿದ್ದ ಚಂದದ ಹೂದೋಟ, ಇತರ ಎಲ್ಲ ಬದಿಗಳಲ್ಲೂ ಆಟದ ಅಥವಾ ತಿರುಗಾಡಲಿದ್ದ ಮೈದಾನಗಳಿದ್ದುವು. ಮೈದಾನಗಳ ಅಂಚಿನಲ್ಲಿ ತಿರುಗಾಡಲು ರಸ್ತೆಯನ್ನು ಮಧ್ಯದಲ್ಲಿಟ್ಟುಕೊಂಡು, ಎರಡೂ ಬದಿಗಳಲ್ಲಿ ಸಾಲಾಗಿ ನೆಟ್ಟಿದ್ದ ಮರಗಳ ಸಾಲುಗಳು ಇದ್ದವು. ಈ ಬಹು ಎತ್ತರವಾದ ಮರಗಳ ಹಸುರೆಲೆಯ ತಂಪು ಆ ವಠಾರಕ್ಕೆಲ್ಲ ಹರಡಿ ಬರುತ್ತಿತ್ತು. ಇನ್ನು ಶಾಲಾ ಕಂಪೌಂಡನ್ನೆಲ್ಲ ಆವರಿಸಿ ಬಂದಿದ್ದ ಆವರಣ ಗೋಡೆಯೂ ಆ ಗೋಡೆಗೆ ಒಂದೇ ದೂರದಲ್ಲಿ ಎದ್ದು ಬಂದಿದ್ದ ಬಲವಾದ ಚಂದದ ಸ್ತಂಭಗಳೂ ಇದ್ದು ಆವರಣವೂ ಬಹು ಅಲಂಕಾರವಾಗಿಯೇ ಇತ್ತು.


ನನ್ನನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಡಾಕ್ಟರ್ ಸ್ಟ್ರಾಂಗರವರ ಸಮಕ್ಷಮಕ್ಕೇ ಕರೆದುಕೊಂಡು ಹೋಗಿ ದಾಕ್ಲೆ ಮಾಡಿಸಿದ್ದುದರಿಂದ ನನಗೆ ಆ ದಿನವೇ ಅವರ ಪರಿಚಯ ದೊರಕಿತು.

ಡಾ. ಸ್ಟ್ರಾಂಗರು ನಡುಪ್ರಾಯ ದಾಟಿ ಕೆಲವು ವರ್ಷ ಆಗಿದ್ದವರು. ಅವರ ತಲೆಗೂದಲನ್ನು ಇಟ್ಟುಕೊಂಡಿದ್ದ ಕ್ರಮದಿಂದ ಪ್ರಾರಂಭಿಸಿ ಅವರ ಸಮಸ್ತ ವಸ್ತುಗಳನ್ನು ನೋಡಿದರೂ ಕಂಡುಬರುವುದೆಲ್ಲ ಅನಾಡಂಬರವೇ ಆಗಿತ್ತು. ಅವರು ಅನಾಡಂಬರವನ್ನೂ ದಾಟಿ, ಅಲಕ್ಷ್ಯದವರೆಗೂ ತಲುಪಿದ್ದರೆಂದರೂ ತಪ್ಪಾಗಲಾರದೆಂಬಷ್ಟರವರೆಗೆ ಹರಡಿ ಬಿದ್ದಿರುತ್ತಿದ್ದ ಅವರ ನರೆತ ತಲೆಗೂದಲೇ ಹೇಳುತ್ತಿತ್ತು. ಅವರ ಆಫೀಸಿಗೇ ನಾವು ಹೋಗಿ ಸ್ವಲ್ಪ ಹೊತ್ತು ಕುಳಿತಿದ್ದುದರಿಂದ ಅಲ್ಲಿನ ಏರ್ಪಾಡುಗಳನ್ನು ನಾನು ನೋಡಿ ತಿಳಿದೆನು. ಕುರ್ಚಿ, ಮೇಜು, ಪುಸ್ತಕಗಳೆಲ್ಲವೂ ಅವರ ಇತರ ಸ್ವಭಾವಕ್ಕನುಗುಣವಾಗಿದ್ದುವು – ಇಡಲಾಗಿದ್ದುವು – ಎಂದು ಮಾತ್ರ ನಾನು ಹೇಳಬಲ್ಲೆನು. ನಾವು ಅವರನ್ನು ಕಾಣಲು ಅವರ ಆಫೀಸಿಗೆ ನುಗ್ಗುತ್ತಿದ್ದಾಗ ಅಲ್ಲೊಬ್ಬ ತರುಣಿ ಅವರ ಕಾಲುಗಳಿಗೆ ಬೂಟ್ಸನ್ನು ತೊಡಿಸುತ್ತಿದ್ದಳು. ತರುಣಿ ಬಹು ಸುಂದರಿಯಾಗಿದ್ದಳು – ಬಾಲಿಕಾ ಅವಸ್ಥೆಯನ್ನು ಸದ್ಯ ದಾಟಿದವಳಂತಿದ್ದಳು. ಅವಳನ್ನು ಬಹು ವಾತ್ಸಲ್ಯದಿಂದ ಡಾ. ಸ್ಟ್ರಾಂಗರು `ಅನ್ನಿ’ ಎಂದು ಕರೆದು ಮಾತಾಡುತ್ತಿದ್ದಾಗ ಅವಳು ಡಾಕ್ಟರರ ಮಗಳೇ ಆಗಿರಬೇಕೆಂದು ಊಹಿಸಿದೆನು.

ನನ್ನನ್ನು ದಾಕಲು ಮಾಡಲು ಹೋಗಿದ್ದ ಸಮಯದಲ್ಲೇ ಇತರ ಯಾವುದೋ ವಕೀಲ ವೃತ್ತಿಗೆ – ಲೋಕ ಅಥವಾ ಸಾಂಸಾರಿಕ – ವ್ಯವಹಾರಕ್ಕೆ – ಸಂಬಂಧಿಸಿದ ಮಾತುಗಳನ್ನು ಆಡಿ ಪೂರೈಸಿಕೊಳ್ಳುವುದೂ ಉತ್ತಮವೆಂದು ಗ್ರಹಿಸಿ ಮಾತಾಡುತ್ತಿದ್ದವರಂತೆ ಮಿ. ವಿಕ್ಫೀಲ್ಡರೂ ಡಾಕ್ಟರ್ ಸ್ಟ್ರಾಂಗರೂ ತಮ್ಮೊಳಗೆ ಮಾತಾಡಿಕೊಂಡರು. ಹೇಗೂ ಕೆಲಸವಿಲ್ಲದೆ ಕುಳಿತಿದ್ದ ನಾನು ಆ ಮಾತುಗಳನ್ನು ಕೇಳಿ ಅರ್ಥಮಾಡಿಕೊಂಡ ಅಂಶ ಸಾಧಾರಣ ಈ ಮುಂದಿನಂತಿತ್ತು.

ಡಾಕ್ಟರು ಸ್ಟ್ರಾಂಗರ ಮಗಳೆಂದು ನಾನು ಗ್ರಹಿಸಿದ್ದ ಅನ್ನಿಯು ಅವರ ಪತ್ನಿ. ಎಳೆ ಪ್ರಾಯದ ಅನ್ನಿಯನ್ನು ಡಾಕ್ಟರರು ಮದುವೆಯಾಗಲು ಡಾಕ್ಟರರ ಸದ್ಗುಣಗಳೂ ಅವರ ಐಶ್ವರ್ಯವೂ ಮಾತ್ರ ಕಾರಣವಾಗಿದ್ದುವೇ ಹೊರತು ಅವರ ಪ್ರಾಯವಾಗಲೀ ಅಥವಾ ತರುಣ ತರುಣಿಯರೊಳಗೆ ಇರಬೇಕಾಗಿದ್ದ ಸ್ವಾಭಾವಿಕವಾದ ಪ್ರೇಮವಾಗಲೀ ಕಾರಣವಾಗಿರಲಿಲ್ಲ. ಅನ್ನಿಯನ್ನು ಮದುವೆಯಾಗಲು ಐಶ್ವರ್ಯ ಒಂದು ಹೊರತು ಮತ್ತೆಲ್ಲದರಲ್ಲೂ – ಅಂದರೆ, ಪ್ರಾಯ, ರೂಪ, ಸಂಬಂಧದಲ್ಲಿ – ಯೋಗ್ಯನೂ ಹಕ್ಕುದಾರನೂ ಆಗಿದ್ದವನು ಅನ್ನಿಯ ದೊಡ್ಡ ತಂಗಿಯ ಮಗ ಜಾಕ್ ಮಾಲ್ಡನ್ ಎಂಬವನಾಗಿದ್ದನು. ಡಾಕ್ಟರ್ ಅನ್ನಿಯನ್ನು ಮಗಳಂತೆ ಬಹು ಪ್ರೀತಿ ಸಲಿಗೆಗಳಿಂದ ಕಾಣುತ್ತಿದ್ದುದರಿಂದಲೂ ಅನ್ನಿಗೆ ಮದುವೆಯ ಕಾಲದಲ್ಲಿ ಪತಿ ಪತ್ನಿಯರ ಅನುರಾಗಕ್ಕೂ ತಂದೆ ಮಗಳಂದಿರ ಅನುರಾಗಕ್ಕೂ ಇರುವ ತಾರತಮ್ಯದ ಅರಿವು ಇದ್ದಿಲ್ಲವಾದುದರಿಂದಲೂ ಅನ್ನಿಯ ತಾಯಿಗೆ ಮಗಳ ಸುಖಕ್ಕಿಂತಲೂ ಹೆಚ್ಚಾಗಿ, ಬಡವಳಾದ ತನ್ನ ಸುಖದ ಕಡೆಗೇ ಗಮನವಿದ್ದು, ಈ ವೃದ್ಧ ಮತ್ತು ತರುಣಿಯರ ಸಂಬಂಧದಿಂದ ಅಂಥ ಸುಖ ದೊರಕುವ ಸಂಭವದ ಕಾರಣವಾಗಿಯೂ, ಈ ದಾಂಪತ್ಯ ನಡೆದುಹೋಗಿತ್ತು. ಆದರೆ, ಈ ದಾಂಪತ್ಯದ ಪ್ರತಿಫಲವಾಗಿ ಡಾಕ್ಟರ್ ಸ್ಟ್ರಾಂಗರು ಜಾಕ್ ಮಾಲ್ಡನ್ನನಿಗೆ ತನ್ನ ಪ್ರಯತ್ನ ಮತ್ತೂ ಖರ್ಚುಗಳಿಂದ ಜೀವನಕ್ಕೆ ತಕ್ಕದಾದ ವೃತ್ತಿಯನ್ನೂ ಒದಗಿಸುವ ಜವಾಬ್ದಾರಿಯನ್ನು ಹೊತ್ತಿದ್ದರು. ಅಂದು ನನ್ನೆದುರು ಅವರೊಳಗೆ ನಡೆದ ಮಾತುಕಥೆಗಳಲ್ಲಿ – ಕೆಲವು ಚರ್ಚೆಗಳಲ್ಲಿ – ಮಿ. ವಿಕ್ಫೀಲ್ಡರು ಡಾಕ್ಟರ್ ಸ್ಟ್ರಾಂಗರಿಗೋಸ್ಕರ, ಅವರ ಪ್ರತಿನಿಧಿಯಾಗಿ, ಜಾಕ್ ಮಾಲ್ಡನ್ನನಿಗೆ ಎಂದು ವೃತ್ತಿ – ಯಾವ ಊರಿನಲ್ಲಿ – ಸ್ವದೇಶದಲ್ಲೀ ಪರದೇಶಗಳಲ್ಲೀ ಎಂಬುದನ್ನು ನಿಶ್ಚೈಸಲು ಪ್ರಯತ್ನಿಸುತ್ತಿದ್ದರು.

“ವೃತ್ತಿಯಿಲ್ಲದವನು ಸೈತಾನನ ಆಳಾಗಿ ಅನ್ಯಾಯ ಗೈಯ್ಯುವನು” – “ನಿರುದ್ಯೋಗಿ ದುರುದ್ಯೋಗಿಯಾಗುವನು” – ಎಂಬಿತ್ಯಾದಿ ಗಾದೆಗಳನ್ನು ಡಾಕ್ಟರರು ವಿವರಿಸುತ್ತಾ ಈ  ಗಾದೆಗಳನ್ನು ನಾನು ತಿಳಿದಿರುವೆನೇ ಎಂದು ನನ್ನನ್ನು ತಮಾಷೆಯಾಗಿಯೂ ಬುದ್ಧಿಗಾಗಿಯೂ ವಿಚಾರಿಸುತ್ತಾ ಮಿ. ವಿಕ್ಫೀಲ್ಡರ ಪ್ರಶ್ನೆಗೆ ನೇರವಾದ – ಸ್ಪಷ್ಟವಾದ – ಉತ್ತರವನ್ನು ಕೊಡುತ್ತಿರಲಿಲ್ಲ. ಆ ದಿನದ ಮಾತುಗಳಿಂದ ನಾನು ತಿಳಿದದ್ಧು ಅಷ್ಟೆ.

ಆದರೆ ಅಂದೇ ನಾವು ಮಿ. ವಿಕ್ಫೀಲ್ಡರ ಮನೆಯಲ್ಲಿ ಊಟಮಾಡುತ್ತಿದ್ದಾಗ ಸಣ್ಣದೊಂದು ಸಂಗತಿ ನಡೆಯಿತು. ನಮ್ಮ ಊಟದ ಕೊಠಡಿಯ ಹೊರಗೆ ನಿಂತು, ತನ್ನ ತಲೆ ನುಗ್ಗುವಷ್ಟು ಮಾತ್ರ ಬಾಗಿಲು ತೆಗೆದು ಉರೆಯನು ಮಿ. ವಿಕ್ಫೀಲ್ಡರೊಡನೆ ಕೆಲವು ಮಾತುಗಳನ್ನಾಡಿದನು. ಆಮೆ ತನ್ನ ಚಿಪ್ಪಿನೊಳಗಿಂದ ತಲೆ ಹೊರಹಾಕಿದಂತೆ ಉರೆಯನ ತಲೆ ಒಳಗೆ ಬಂದು ಮಾತಾಡುತ್ತಿದ್ದಾಗ – ಮಾತುಗಳು ಜಾಕ್ ಮಾಲ್ಡನ್ ಪುನಃ ಮಿ. ವಿಕ್ಫೀಲ್ಡರ ಭೇಟಿಯನ್ನು ಬಯಸಿದ್ದಾನೆಂಬುದನ್ನು ಕುರಿತಾಗಿ ಇದ್ದಿದ್ದರೂ – ಅವನ ದೃಷ್ಟಿಯೆಲ್ಲ ನಮ್ಮ ಊಟ, ಕೂಟ, ಸುಖ, ಇವುಗಳ ಕಡೆಗೇ ಇದ್ದು, ನಮ್ಮನ್ನು ಕುರಿತು ಮತ್ಸರಪಡುತ್ತಿದ್ದಂತೆ ತೋರಿತು. ಉರೆಯನು ಅಷ್ಟು ಮಾತಾಡುತ್ತಿದ್ದ ಹಾಗೆಯೇ ಜಾಕ್ ಮಾಲ್ಡನನೇ ಬಂದು ಉರೆಯನನ್ನು ಹಿಂದೆಳೆದು ತಾನೇ ಮಾತಾಡತೊಡಗಿದನು. ಅನ್ನಿಯನ್ನು ಡಾಕ್ಟರ್ ಸ್ಟ್ರಾಂಗರು ಮದುವೆಯಾಗುವ ಮೊದಲು ಅವರು ಕೊಟ್ಟಿದ್ದ ವಚನಗಳನ್ನು ಪಾಲಿಸುವುದು ಅವರ ಕರ್ತವ್ಯವಾಗಿತ್ತೆಂದೂ ಆ ಕರ್ತವ್ಯ ಪಾಲನೆಯಲ್ಲಿ ಆಗ ಲೋಪವಾಗಿತ್ತೆಂದೂ ಜಾಕ್ ಮಾಲ್ಡನ್ನನು ಜರೆದನು. ಮಿ. ವಿಕ್ಫೀಲ್ಡರು ಸ್ವಲ್ಪ ಕಠಿಣವಾಗಿಯೇ ಉತ್ತರವಿತ್ತರು. ತಾನು ಡಾಕ್ಟರರ ಹಿತಕ್ಕಾಗಿ, ಸಂದರ್ಭಗಳ ಔಚಿತ್ಯವನ್ನು ಗ್ರಹಿಸಿ, ನ್ಯಾಯವಿದ್ದಷ್ಟು ಕೆಲಸ ಮಾಡುವುದಾಗಿಯೂ ವಿಶೇಷ ಚರ್ಚೆಗಳು ತನ್ನಲ್ಲಿ ಅನಗತ್ಯವೆಂದೂ ತಿಳಿಸಿದರು. ಜಾಕ್ ಮಾಲ್ಡನ್ ಕೋಪಿಸಿಕೊಂಡೇ ಅಲ್ಲಿಂದ ಹೋದನು.

ನಾನು ಮಿ. ವಿಕ್ಫೀಲ್ಡರ ಮನೆಯಲ್ಲಿ ಊಟ ವಸತಿಗಳನ್ನು  ಮಾಡಿಕೊಂಡು ಶಾಲೆಗೆ ಹೋಗುತ್ತಾ ದಿನಗಳು ಕಳೆಯುತ್ತ ಬಂದ ಹಾಗೆಲ್ಲ ಅನೇಕ ವಿಷಯಗಳು ನನಗೆ ಗೊತ್ತಾದವು. ವೃದ್ಧ ವಕೀಲರೂ ಅವರ ಮಗಳು ಬಾಲಕಿ ಏಗ್ನೆಸ್ಸಳೂ ನನ್ನನ್ನು ತಮ್ಮ ಮನೆಯವರಂತೆಯೇ ನೋಡಿಕೊಂಡು ಬರುತ್ತಿದ್ದರು.

ಮಿ. ವಿಕ್ಫೀಲ್ಡರು ಊಟವಾದನಂತರ ಪ್ರತಿದಿನವೂ ತುಂಬಾ ವೈನ್ ಕುಡಿಯುತ್ತಿದ್ದರು. ಮಿ. ವಿಕ್ಫೀಲ್ಡರಿಗೆ ಏನೋ ಒಂದು ಅಂತರಂಗದ ದುಃಖವಿರಬೇಕೆಂದೂ ಅದನ್ನು ಮರೆಯಲೋಸ್ಕರ ಹೀಗೆ ವೈನು ಕುಡಿಯುತ್ತಿದ್ದರೆಂದೂ ಮತ್ತು ಮಗಳ ಕೈಯ್ಯಿಂದ ಪಿಯಾನವನ್ನು ಬಾರಿಸಿ, ಬಾಯಿಯಿಂದ ಹಾಡಿಸಿ ಸಂತೋಷಪಟ್ಟುಕೊಳ್ಳುತ್ತಿದ್ದರೆಂದೂ ಊಹಿಸಲು ಬೇಕಾದಷ್ಟು ಕಾರಣಗಳು ನನಗೆ ಸಿಕ್ಕುತ್ತಿದ್ದುವು.

ಏಗ್ನೆಸಳ ಗುಣಗಳನ್ನು ನಾನು ವರ್ಣಿಸಿ ಪೂರೈಸಲಾರೆ. ಅವಳು ಶಾಲೆಗೆ ಹೋಗದಿದ್ದರೂ ಮನೆಯಲ್ಲೇ ತುಂಬಾ ಓದುತ್ತಿದ್ದು ಒಳ್ಳೆ ವಿದ್ಯಾವಂತೆಯೇ ಆಗಿದ್ದಳು. ಆ ಮನೆಯಲ್ಲಿ ನಾನಿದ್ದು, ಅವಳ ಸಹವಾಸದಿಂದ ನನ್ನ ಜೀವನವೇ – ನನಗೆ ಅರಿಯದೆಯೇ – ಸಂಸ್ಕೃತಿ ಹೊಂದುತ್ತಿತ್ತು. ಅವಳ ಸ್ವರ, ಮಾತುಗಳು, ಭಾವನೆಗಳು – ಎಲ್ಲವೂ – ಬಹು ಮೃದು ಮಧುರವಾಗಿದ್ದುವು. ಅವಳ ಸುಂದರಮೂರ್ತಿ, ಸೌಮ್ಯವಾದ ನಡೆನುಡಿ, ಹಿರಿಯರಿಗಿರಬೇಕಾದಂಥ ಶಾಂತಚಿತ್ತ ಪ್ರವೃತ್ತಿ, ಔದಾರ್ಯಗುಣ – ಎಲ್ಲವೂ ಅವಳನ್ನು ಆ ಮನೆಯ ದಿವ್ಯ, ಮಂಗಳ ಜ್ಯೋತಿಯನ್ನಾಗಿ ಬೆಳಗಿದ್ದುವು. ನಾನು ಎಮಿಲಿಯನ್ನು ಪ್ರೀತಿಸುತ್ತಿದ್ದೆನು – ಮತ್ತೂ ಏಗ್ನೆಸ್ಸಳನ್ನು ಪ್ರೀತಿಸುತ್ತಿದ್ದೆನು. ಆದರೆ ನನ್ನ ಈ ಇಬ್ಬರನ್ನು ಕುರಿತಾದ ಎರಡು ಭಾವನೆಗಳನ್ನು ಒಂದೇ ಶಬ್ದ ಪ್ರಯೋಗದಿಂದ ವಿವರಿಸಿದರೆ ಸರಿಯಾಗದೆಂದು ನನಗೆ ಭಾಸವಾಗುತ್ತಿದೆ. ಏಗ್ನೆಸ್ಸಳ ದಿವ್ಯ ಸನ್ನಿಧಿಯಲ್ಲಿ ಶಾಂತಿ, ಸುಖ, ನೆಮ್ಮದಿಗಳು ಶಾಶ್ವತವಾಗಿ ನೆಲಸಿರುವುವೆಂದೇ ನನ್ನ ನಂಬಿಕೆ.

ನಾನು ಆ ಮನೆಯಲ್ಲಿದ್ದಾಗ ಉರೆಯನ ಪರಿಚಯವೂ ಕ್ರಮೇಣವಾಗಿ ಆಗತೊಡಗಿತು. ಅವನು ಕಡುಬಡವ, ಕಡು ದೀನ, ಪಾಮರನೆಂದು ಸದಾ ಹೇಳಿಕೊಳ್ಳುತ್ತಿದ್ದನು. ಮಾತ್ರವಲ್ಲದೆ, ಹಾಗೆಯೇ ನಟಿಸುತ್ತಿದ್ದನು. ಆದರೆ, ತಾನು ಇತರರಂತೆ ಸಿರಿವಂತನೂ ಅಧಿಕಾರಾಪನ್ನನೂ ಆಗಿ ಮೆರೆಯಬೇಕೆಂಬ ಲವಲವಿಕೆಯೂ ಅವನಲ್ಲಿತ್ತು. ಆದರೆ, ಅಂಥ ಉತ್ತಮ ಸ್ಥಿತಿಗೆ ತಲುಪಲಿರುವ ಮಾರ್ಗವು ಕುತಂತ್ರ, ಕುತರ್ಕ, ಮತ್ಸರ, ನಟನೆ, ಎಂದೇ ಅವನು ತಿಳಿದಿದ್ದುದು ಅವನಿಗರಿಯದೇ ಹೊರಬೀಳುತ್ತಿತ್ತು. ಅವನು ಎಂದಾದರೊಂದು ದಿನ ಮಿ. ವಿಕ್ಫೀಲ್ಡರಂತೆಯೇ ತಾನೂ ಧನಿಕನೂ ಹತ್ತು ಜನರಿಂದ ಗೌರವಿಸಲ್ಪಡುವವನೂ ಆಗಬೇಕೆಂದೇ ಕೆಲವು ಕಾನೂನು ಪುಸ್ತಕಗಳನ್ನೂ ಓದುತ್ತಲೂ ಇತರ ಕಾರ್ಯಾಚರಣೆ ನಡೆಸುತ್ತಲೂ ಬರುತ್ತಿದ್ದನು. ಸದ್ಯ ಈಚೆಗೆ ಆ ಮನೆಗೆ ಬಂದು ಸೇರಿದ್ದ ನಾನು ಆ ಮನೆಯವನೇ ಆಗಿದ್ದು, ಅವನು ಮಾತ್ರ ಮೊದಲಿನ ಗುಮಾಸ್ತನೇ ಆಗಿರುವ ವಿಷಯದಲ್ಲಿ ಅವನಿಗೆ ನನ್ನನ್ನು ಕುರಿತು ಹೊಟ್ಟೆಕಿಚ್ಚೂ ಸ್ವಲ್ಪ ದ್ವೇಷವೂ ಇತ್ತೆಂದು ನಾನು ತಿಳಿದುಕೊಂಡೆನು. ಆದರೆ ಬಹಿರಂಗವಾಗಿ ಅವನು ದೀನನೆಂದೂ ಹೀನಕುಲದವನೆಂದೂ ಅನಗತ್ಯವಾಗಿ ಸಹ ಆಗಿಂದಾಗ್ಗೆ ತಿಳಿಸುತ್ತಾ ತನ್ನ ಹೀನ ಅಂತರಂಗವನ್ನು ಬಚ್ಚಿಡುತ್ತಿದ್ದನು.

ಇನ್ನು ನನ್ನ ಶಾಲಾ ಸಂಬಂಧವಾದ ಕೆಲವು ವಿಷಯಗಳನ್ನು ತಿಳಿಸುವುದು ಉಚಿತವಿದೆ. ಡಾಕ್ಟರ್ ಸ್ಟ್ರಾಂಗರ ಶಾಲೆಯೆಂದರೆ ವಿದ್ಯಾರ್ಥಿಗಳದೇ ಆಗಿದ್ದ ಸಾಮೂಹಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ಸಾಧಿಸಿ ಬರುತ್ತಿದ್ದ, ಒಂದು ಪವಿತ್ರ ಕ್ಷೇತ್ರವಾಗಿತ್ತು. ನಾವು ವಿದ್ಯಾರ್ಜನೆಗೈದು, ವಿದ್ಯಾವಂತರೂ ಸನ್ಮಾರ್ಗ ಪ್ರವರ್ತಕರೂ ಆದರ್ಶ ಪುರುಷರೂ ಆಗಿ ನಮ್ಮ ಶಾಲೆಯ ಹೆಸರನ್ನು ಪ್ರಖ್ಯಾತಿಗೊಳಿಸುವ ಜವಾಬ್ದಾರಿ ತಮ್ಮದಾಗಿರುವುದಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳದೇ ಆಗಿದೆಯೆಂದು ಡಾಕ್ಟರ್ ಸ್ಟ್ರಾಂಗರು ನಮಗೆ ಬೋಧಿಸುತ್ತಿದ್ದರು. ನಾವೆಲ್ಲರೂ ಯೋಗ್ಯರೂ ಶಿಸ್ತುನಿಯಮಪಾಲಕರೂ ಎಂದು ಗ್ರಹಿಸಿ ನಮ್ಮೊಡನೆ ವರ್ತಿಸುವುದೇ ಅವರ ಅಧಿಕಾರ ಚಲಾವಣೆಯ ಮುಖ್ಯ ತತ್ವ – ತಳಹದಿ – ಆಗಿತ್ತು. ನಾನು ಅವರ ಸಂಪರ್ಕದಿಂದ ಶಿಸ್ತು, ಮರ್ಯಾದೆಗಳನ್ನು ಅಭ್ಯಸಿಸಿದೆನು. ಶ್ರಮಪಟ್ಟು ಓದಿ ಕ್ರಮವಾಗಿ ತರಗತಿಗಳಲ್ಲಿ ಉತ್ತೀರ್ಣನಾಗತೊಡಗಿದೆನು. ಹೀಗೆ ಕ್ರಮೇಣವಾಗಿ ನಾನು ನಮ್ಮ ಶಾಲಾಪ್ರಪಂಚದಲ್ಲಿ – ಮುಖ್ಯವಾಗಿ, ವಿದ್ಯಾರ್ಥಿಗಳ ಪ್ರಪಂಚದಲ್ಲಿ – ಇತರ ಯಾರಿಗೂ ಎರಡನೆಯ ಸ್ಥಾನದವನಲ್ಲವೆಂದು ಪರಿಗಣಿಸಲ್ಪಟ್ಟೆನು.

ಮೇಲ್ತರಗತಿಯ ವಿದ್ಯಾರ್ಥಿಗಳು ಕೆಲವರು ಡಾಕ್ಟರ್ ಸ್ಟ್ರಾಂಗರ ಮನೆಯಲ್ಲೇ ತಮ್ಮ ಊಟ ವಸತಿಗಳನ್ನು ಮಾಡಿಕೊಂಡಿದ್ದರು. ಈ ವಿದ್ಯಾರ್ಥಿಗಳಿಗೂ ನನಗೂ ತುಂಬಾ ಸ್ನೇಹಪರಿಚಯಗಳಿದ್ದುದರಿಂದ, ಅವರು – ಅವಕ್ಕನುಗುಣವಾಗಿಯೂ ಡಾಕ್ಟರ್ ಸ್ಟ್ರಾಂಗರ ಸದ್ಗುಣಗಳ ಪ್ರಶಂಸೆಗಳಿಗಾಗಿಯೂ ಅವರ ದಿನಚರಿ, ಜೀವನ ಚರಿತ್ರೆ, ಸಂಸಾರದ ಕುರಿತೂ ಕೆಲವು ವಿಷಯಗಳನ್ನು ಹೇಳಿದರು.  ಡಾಕ್ಟರ್ ಸ್ಟ್ರಾಂಗರ ಜೀವನವು ಪವಿತ್ರವಾಗಿದ್ದಿತು.  ಅವರ ಜೀವನ ಚರಿತ್ರೆ ಸ್ವಾರಸ್ಯವುಳ್ಳದ್ದೂ ಆಗಿದ್ದಿತು. ಅನ್ನಿಯನ್ನು ಅವರು ಮದುವೆಯಾಗಿದ್ದುದು ಅವಳ ಸೌಂದರ್ಯಕ್ಕಾಗಿ ಆಗಿರಲಿಲ್ಲ ಅಥವಾ ಸ್ತ್ರೀ ವ್ಯಾಮೋಹದಿಂದಲೂ ಆಗಿರಲಿಲ್ಲ. ಅನ್ನಿಯ ಚಿಕ್ಕ ಪ್ರಾಯಕ್ಕಾಗಿ, ಬಾಲಕಿಯ ಮೇಲಿನ ವಾತ್ಸಲ್ಯದಿಂದ, ಅತ್ತೆಯ ಒತ್ತಾಯಕ್ಕೆ ಒಲಿದು ಮದುವೆಯಾಗಿದ್ದುದಂತೆ. ಒಪ್ಪತ್ತು ಊಟಕ್ಕೆ ಸಹ ಅನುಕೂಲವಿರದಿದ್ದ ಅನ್ನಿಯ ತವರು ಮನೆಯವರ ಮೇಲೆ ಕನಿಕರಪಟ್ಟು ಮದುವೆಯಾಗಿದ್ದುದಂತೆ. ಈ ಮದುವೆಯ ಕಾರಣವಾಗಿ ಅನ್ನಿಯ ತಾಯಿಯನ್ನೂ ತಾಯಿಯ ಕಡೆಯವರನ್ನೂ ಸಾಕುವ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದರು.

ಡಾಕ್ಟರ್ ಸ್ಟ್ರಾಂಗರು ಅವರಿಗೆ ಶಾಲೆಯಲ್ಲಿ ಕೆಲಸ ಮಾಡಬೇಕಾದ ಸಮಯದಲ್ಲಿ ಹೊರತಾಗಿ, ಇತರ ಬಿಡು ಸಮಯದಲ್ಲಿ ತನ್ನ ಸ್ವಂತ ವ್ಯಾಸಂಗಗಳಲ್ಲೇ ಕಾಲ ಕಳೆಯುತ್ತಿದ್ದರು. ಕೆಲವು ನವೀನ ಶೋಧನೆಗಳಿಗಾಗಿ ಅವರು ಕೆಲವೊಮ್ಮೆ ತುಂಬಾ ಆಲೋಚನಾಮಗ್ನರಾಗಿರುತ್ತಿದ್ದರು. ಅವರು ವನಸ್ಪತಿ ಶಾಸ್ತ್ರವನ್ನು ಬರೆಯುತ್ತಿರಬೇಕೆಂದು ನಾನೊಮ್ಮೆ ಗ್ರಹಿಸಿದುದುಂಟು. ಅವರೊಮ್ಮೆ ನೆಲವನ್ನೇ ನೋಡುತ್ತಾ ಶಾಲೆಯ ಮೈದಾನದಲ್ಲಿ ತಿರುಗುತ್ತಿದ್ದರು. ಸಮೀಪದ ಮರಗಳಲ್ಲಿ ವಾಸಿಸುತ್ತಿದ್ದ ರೂಕ್ ಪಕ್ಷಿಗಳು ತಮ್ಮ ನೀಳವಾದ ಕತ್ತುಗಳನ್ನು ನೀಡಿ ಡಾಕ್ಟರರನ್ನು ಮುಟ್ಟಲು ಪ್ರಯತ್ನಿಸುತ್ತಿದ್ದುದನ್ನು ಸಹ ಗಮನಕ್ಕೆ ತರದೆ ನೆಲವನ್ನೇ ನೋಡುತ್ತಾ ನಡೆಯುತ್ತಿದ್ದದ್ದರಿಂದ ಅವರು ಒಂದು ಅಪೂರ್ವ ಗಿಡವನ್ನೋ ಬೇರನ್ನೋ ಹುಡುಕುತ್ತಿರಬೇಕೆಂದು ನಾನು ಗ್ರಹಿಸಿದೆನು. ಆದರೆ, ಅನಂತರ ವಿಚಾರಿಸಿ ತಿಳಿದ ಪ್ರಕಾರ ಅವರು ಹುಡುಕುತ್ತಿದ್ದುದು ವನಸ್ಪತಿಗಳ ಮೂಲವನ್ನಲ್ಲ – ಗ್ರೀಕ್ ಮತ್ತು ಇಂಗ್ಲಿಷ್ ಶಬ್ದಗಳ ಮೂಲವನ್ನು. ಇವರು ಒಂದು ಮಹಾ ಶಬ್ದಕೋಶವನ್ನು (ನಿಘಂಟು) ತಯಾರಿಸುತ್ತಿದ್ದರು. ಇವರು ಮಹಾ ಕರುಣಾಳುಗಳು. ಪಾತ್ರಾಪಾತ್ರ ಜ್ಞಾನವಿಲ್ಲದೆ ದಾನಮಾಡುತ್ತಿದ್ದುದನ್ನು ಕಂಡು ವಿದ್ಯಾರ್ಥಿಗಳು, ಡಾಕ್ಟರರಿಗೆ ತಿಳಿಯದಂತೇ ಭಿಕ್ಷುಕರು ಅವರೆದುರು ಬರದಂತೆ ಮಾಡುತ್ತಿದ್ದರು. ಒಮ್ಮೆ ಓರ್ವ ಭಿಕ್ಷುಕನಿಗೆ ಕರುಣೆಯಿಂದ ತನ್ನ ಕಾಲಿನ ಎರಡೂ ಗೈಟರ್ಸನ್ನೇ ದಾನಮಾಡಿದ್ದರಂತೆ. ಒಂದು ದಿನ ಅವರು ಒಂದು ಅಂಗಡಿಯ ಬದಿಯಲ್ಲಿ ಹೋಗುತ್ತಿದ್ದಾಗ, ಅವೇ ಎರಡು ಗೈಟರ್ಸನ್ನು ಕಂಡು, ಅವುಗಳನ್ನು ಬಹುವಾಗಿ ಪರೀಕ್ಷಿಸಿ, ಅಷ್ಟು ಉತ್ತಮವಾದವುಗಳನ್ನು ಆ ಮೊದಲು ಅವರು ಎಲ್ಲೂ ಕಂಡಿರಲಿಲ್ಲವೆಂದಂದುಕೊಂಡು, ಅವುಗಳನ್ನು ಕ್ರಯಕ್ಕೆ ಪಡೆದುಕೊಂಡಿದ್ದರಂತೆ.

ಅನ್ನಿಯನ್ನು ಡಾಕ್ಟರರು ತನ್ನ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದರು. ಅನ್ನಿಯೂ ಸಹ ತಂದೆಯನ್ನು ಕಾಣುವಷ್ಟೇ ಪ್ರೀತಿಯಿಂದಲೂ ಗೌರವದಿಂದಲೂ ಡಾಕ್ಟರರನ್ನು ಕಾಣುತ್ತಿದ್ದಳು. ಈ ದಂಪತಿಗಳಲ್ಲಿ ಪ್ರಣಯಭಾವದ ಯಾವ ವರ್ತನೆಗಳೂ ಇರಲಿಲ್ಲ. ಅವರ ಪ್ರಾಯದ ಅಂತರ ಮಾತ್ರ ಇದಕ್ಕೆ ಕಾರಣವಾಗಿರಲಿಲ್ಲ – ಅವರ ಮಾನಸಿಕ – ಬೌದ್ಧಿಕ- ಬೆಳವಣಿಗೆ, ಅಥವಾ ಪರಿಸ್ಥಿತಿಗಳೇ ಇದಕ್ಕೆ ಕಾರಣವಾಗಿದ್ದುವು.

ಅನ್ನಿ ನನ್ನನ್ನು ಬಹು ಪ್ರೀತಿಯಿಂದ ಕಾಣುತ್ತಿದ್ದಳು. ಹಾಗೆಯೇ ಅವಳು ಏಗ್ನೆಸ್ಸಳನ್ನೂ ಪ್ರೀತಿಸುತ್ತಿದ್ದಳು. ಅನ್ನಿಯು ನಮ್ಮ ಮನೆಗೆ ಆಮಂತ್ರಿತಳಾಗಿ ಬರುವುದೂ ನಾವು ಆಮಂತ್ರಿತರಾಗಿ ಅವರ ಮನೆಗೆ ಹೋಗುವುದೂ ಇತ್ತು. ನಮ್ಮ ನಮ್ಮೊಳಗೇ ಎಷ್ಟೇ ಸ್ನೇಹ ಸಲಿಗೆಗಳಿದ್ದರೂ ಅನ್ನಿ ಮಿ. ವಿಕ್ಫೀಲ್ಡರನ್ನು ಸಲಿಗೆಯಿಂದ ಕಾಣುತ್ತಿರಲಿಲ್ಲ. ಅವರನ್ನು ಕಂಡರೆ ಅವಳಿಗೆ ಅಂಜಿಕೆಯೇ ಇತ್ತೆಂದು ತೋರುತ್ತದೆ. ಅವರ ಎದುರು ಇರುವುದನ್ನೇ ಆದಷ್ಟು ತಪ್ಪಿಸಿಕೊಳ್ಳುತ್ತಿದ್ದಳೆಂದರೂ ಸರಿಯಾಗಬಹುದು.

ಅನ್ನಿಯ ತಾಯಿಯ ಹೆಸರು ಮಿಸೆಸ್ ಮಾರ್ತಲ್ ಹೇಮ್, ಎಂದು. ನಮ್ಮ ಶಾಲೆಯ ವಿದ್ಯಾರ್ಥಿಗಳು ಅವಳನ್ನು `ಮುದಿ ಸಿಪಾಯಿ’ ಎಂದು ಕರೆಯುತ್ತಿದ್ದರು. ಅವಳು ಡಾಕ್ಟರ್ ಸ್ಟ್ರಾಂಗರ ಕರುಣೆಯನ್ನು ದುರುಪಯೋಗಪಡಿಸಿಕೊಂಡು ಅವರಿಂದ ತುಂಬಾ ಹಣ ಸುಲಿಯುತ್ತಿದ್ದಳಂತೆ.

ನಾನು ಶಾಲೆಗೆ ಸೇರಿ ಮೂರು ನಾಲ್ಕು ತಿಂಗಳು ಕಳೆಯುವುದರೊಳಗೆ, ಮಿ. ವಿಕ್ಫೀಲ್ಡರು ಏರ್ಪಾಡಿನ ಪ್ರಕಾರ ಜಾಕ್ ಮಾಲ್ಡನ್ನನು ಪರದೇಶಕ್ಕೆ ಹೋಗಲು ಅನುಕೂಲವಾಯಿತು. ಅವನನ್ನು ಕಳುಹಿಸಿಕೊಡುವ ದಿನ ಬಂತು. ಆ ದಿನವೇ ಡಾಕ್ಟರ್ ಸ್ಟ್ರಾಂಗರ ಜನ್ಮ ದಿನ ಸಹ ಬಂದದ್ದರಿಂದ ಡಾ. ಸ್ಟ್ರಾಂಗರ ಮನೆಯಲ್ಲಿ ಒಂದು ಔತಣ ಸಮಾರಂಭವೇ ಜರುಗಿತು. ಈ ಔತಣದ ಮಟ್ಟಿಗೆ ವಿದ್ಯಾರ್ಥಿಗಳ ಪೈಕಿ ಏಡೇಮನೂ ನಾನೂ ಮಾತ್ರ ಆಮಂತ್ರಿತರಾಗಿದ್ದೆವು. ಈ ಔತಣ ಮುಖ್ಯವಾಗಿ ಜಾಕ್ ಮಾಲ್ಡನ್ನನ ಸಂಬಂಧವಾಗಿದ್ದುದರಿಂದಲೂ ಡಾಕ್ಟರರ ಜನ್ಮದಿನೋತ್ಸವವವೆಲ್ಲ ಸಂಜೆಯ ಮೊದಲೇ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳ ಕೂಡುವಿಕೆಯಿಂದ ನಡೆದು ಮುಗಿದಿತ್ತಾದ್ದರಿಂದಲೂ ಇತರ ವಿದ್ಯಾರ್ಥಿಗಳಿಗೆ ಆಮಂತ್ರಣವಿರಲಿಲ್ಲ. ಮಿ. ವಿಕ್ಫೀಲ್ಡರೂ ಏಗ್ನೆಸ್ಸಳೂ ಆಮಂತ್ರಿತರಾಗಿ ಔತಣಕ್ಕೆ ಬಂದಿದ್ದರು.

ಔತಣ ಜರುಗಿದ್ದು ರಾತ್ರಿ. ಡಾ. ಸ್ಟ್ರಾಂಗರು ಹಸನ್ಮುಖರಾಗಿ ಕುಳಿತು ಅವರದೇ ಒಂದು ವೈಶಿಷ್ಟ್ಯವಾಗಿದ್ದ ಸರಳ ಕ್ರಮದಿಂದ ನಮ್ಮೆಲ್ಲರನ್ನು ಮಾತಾಡಿಸಿ ಸಂತೋಷಪಡಿಸುತ್ತಿದ್ದರು. ಡಾಕ್ಟರರ ಪತ್ನಿ ಬಿಳಿ ಲಂಗವನ್ನುಟ್ಟು, ಕತ್ತಿಗೂ ಎದೆಗೂ ಕೆಂಪು ರಿಬ್ಬನ್ನುಗಳನ್ನು ಬಹು ನಾಜೂಕಾಗಿ ಕಟ್ಟಿಕೊಂಡಿದ್ದಳು. ಗಲ್ಲದ ಅಡಿಯಲ್ಲೇ ಎದೆಯಲ್ಲಿ ಎದ್ದು ತೋರುವಂತೆ ವಸ್ತ್ರದಿಂದ ತಯಾರಿಸಿದ್ದ ಚಂದದ ಒಂದು ಕೆಂಪು ಹೂವನ್ನು ತೂಗಿಬಿಟ್ಟಿದ್ದಳು. ಅನ್ನಿ ಅಂದಿನ ದಿನ ಬಹು ಸುಂದರಿಯಾಗಿ ರಂಜಿಸುತ್ತಿದ್ದಳು. ಅನ್ನಿಯ ತಾಯಿಗೆ ಅಂದು ತನ್ನ ಮಗಳ ರೂಪ ಲಾವಣ್ಯ, ಕಲಾ ನೈಪುಣ್ಯಗಳನ್ನೆಲ್ಲ ಪ್ರದರ್ಶಿಸಬೇಕೆಂದು ಬಹುವಾದ ಆಸೆಯಿದ್ದಿತು. ಅನ್ನಿ ಬೇಡವೆಂದು ಹಟ ಹಿಡಿದರೂ ಬಿಡದೆ, ಒತ್ತಾಯಿಸಿ, ಅನ್ನಿ ಪಿಯಾನ ಬಾರಿಸುವಂತೆ ಮಾಡಿದಳು. ಅನ್ನಿ ನಿರ್ವಾಹವಿಲ್ಲದೆ ಪಿಯಾನ ಬಾರಿಸುವಾಗ ಸಂಗೀತದ ಪುಸ್ತಕದ ಹಾಳೆಗಳನ್ನು ಜಾಕ್ ಮಾಲ್ಡನ್ನನು ಅವಳ ಬೆನ್ನ ಹಿಂದುಗಡೆಯೇ ನಿಂತು, ಅವಳಿಗೆ ಬೇಕಾದಂತೆ ಮಗುಚಿಕೊಡುತ್ತಿದ್ದನು. ಸಂಗೀತ ನಿಂತನಂತರ – ಎಲ್ಲರೂ ಬೇಡವೆಂದರೂ – ಬಹು ಒತ್ತಾಯದಿಂದಲೇ, ಮಿಸೆಸ್ ಮಾರ್ತಲ್ ಹೇಮಳು ಒಂದು ಭಾಷಣವನ್ನು ಮಾಡತೊಡಗಿದಳು.

ಅಂದಿನ ಸಮಾರಂಭದ ಮುಖ್ಯ ವ್ಯಕ್ತಿಗಳಾಗಿದ್ದ ಡಾಕ್ಟರ್ ಸ್ಟ್ರಾಂಗರಂಥವರಿಗೇ ಅತ್ತೆಯಾಗಿದ್ದ ಅವಳ ಸ್ಥಾನ ಗೌರವ ಮಿಸೆಸ್ ಮಾರ್ತಲ್ ಹೇಮಳಾ ಮಾತಿನಲ್ಲಿ ಎದ್ದು ತೋರುತ್ತಿತ್ತು. ಅವಳ ಭಾಷಣ ಸಾಧಾರಣ ಈ ತೆರನಾಗಿತ್ತು:

“ಇಂಥ ಸಮಾರಂಭದಲ್ಲಿ ಬಡವರಾದ ನಾವು ನಾಲ್ಕು ಮಾತುಗಳನ್ನಾದರೂ ನಜರಾಗಿ ಒಪ್ಪಿಸುವುದು ನಮ್ಮ ಕರ್ತವ್ಯ. ನನ್ನ ಕರ್ತವ್ಯಜ್ಞಾನ ನನಗೆ ಸ್ಪಷ್ಟವಾಗಿರುವಷ್ಟೇ ಸ್ಪಷ್ಟವಾಗಿ ಡಾಕ್ಟರ್ ಸ್ಟ್ರಾಂಗರ ಹೃದಯದ ಸೌಂದರ್ಯವನ್ನೆಲ್ಲ ನಾನು ತಿಳಿದಿದ್ದೇನೆ. ನಮ್ಮ ಶಕ್ತಿಗೆ ಮೀರಿದ ಲೌಕಿಕ ನಜರುಗಳಿಗಿಂತ ಹೃತ್ಪೂರ್ವಕವಾದ ಪ್ರೀತಿ, ಆದರ, ಗೌರವದ ಮಾತಿನ ನಜರೇ ಮೇಲೆಂದು ಡಾಕ್ಟರರ ಅಭಿಮತ. ಡಾಕ್ಟರರು ಪ್ರಾಯದಲ್ಲಿ ನಮಗೆಲ್ಲರಿಗಿಂತಲೂ ಹಿರಿಯರೆಂಬುದು ನಿಜವಾದರೂ ಅವರು ಅನ್ನಿಗೆ ಇನಿಯರಾಗಿಯೂ ನನಗೆ ಅಳಿಯನಾಗಿಯೂ ಇರುವುದರಿಂದ, ತಾತ್ವಿಕ ದೃಷ್ಟಿಯಲ್ಲಿ ನನಗೆ ಅವರು ಚಿಕ್ಕವರು” ಎಂದು ಉದ್ದುದ್ದವಾಗಿ ಮಾತಾಡತೊಡಗಿದಳು.

ಆಗ, ತಾವು ಅತ್ತೆಗೆ ಹೊಸಬರಲ್ಲವಾದುದರಿಂದ ಮತ್ತು ಅಲ್ಲಿ ಕೂಡಿದವರೆಲ್ಲರೂ ಹಳೆಯ ಪರಿಚಿತರೇ ಆಗಿರುವುದರಿಂದ, ಆ ರೀತಿಯ ಉಪಚಾರಗಳನ್ನು ಮಾಡಬಾರದಾಗಿ ಡಾಕ್ಟರ್ ಸ್ಟ್ರಾಂಗರೂ ಅವರ ಪತ್ನಿಯೂ ಕೇಳಿಕೊಂಡರು. ಈ ಕೇಳೋಣವೆ `ಮುದಿ ಸಿಪಾಯಿ’ಯನ್ನು ಕೆರಳಿಸಿತು. ಅವಳು ಭಾಷಣವನ್ನು ಮುಂದುವರಿಸತೊಡಗಿದಳು.

“ನಾನು ವಿಶೇಷವೇನನ್ನೂ ಮಾತಾಡಿ ನಿಮ್ಮನ್ನು ಬೇಸರಿಸುವುದಿಲ್ಲ. ಅನ್ನಿಯ ಮದುವೆಯ ಸವಿನೆನಪುಗಳನ್ನು ಇಂಥ ಸಂದರ್ಭಗಳಲ್ಲಿ ಮಾಡಿಕೊಂಡರೆ  ಸಮಾರಂಭವೇ ಬೆಳಗುವುದೆಂದು ಭಾವಿಸಿದರೆ ತಪ್ಪಾಗಲಾರದಷ್ಟೆ. ಅಂದು ಡಾಕ್ಟರರು – ನನ್ನಳಿಯ – ಬಂದು ಅನ್ನಿಯನ್ನು ಮದುವೆಯಾಗುವ ಬಯಕೆಯನ್ನು ತಿಳಿಸಿದಾಗ ನಮಗಾದ ಆಶ್ಚರ್ಯ, ಮತ್ತು ಸಂತೋಷವನ್ನು ಕುರಿತಾಗಿ ಮಾತ್ರ ಎರಡು ಮಾತುಗಳನ್ನು ಹೇಳುತ್ತೇನೆ.

“ಆ ಪ್ರಸ್ತಾಪ ಬಂದೊಡನೆ ನಾನು ಅನ್ನಿಯನ್ನು ಕರೆದು `ಅನ್ನಿ ಡಾಕ್ಟರರಂಥ ಧನಿಕರೂ ಯೋಗ್ಯರೂ ನಿನ್ನನ್ನು ಕೈಹಿಡಿಯಲು ಬಯಸುತ್ತಾರೆ. ನಿನ್ನ ಹೃದಯ ಪರೀಕ್ಷಿಸಿ ನೋಡು – ಅದರಲ್ಲೇನಾದರೂ ಸ್ಥಳ ಅವರಿಗಿದೆಯೇ?’ ಎಂದು ಕೇಳಿದೆ. ಆಗ ಒತ್ತಾಯ ಮಾಡಿದ್ದೇನೆಯೇ? ಅನ್ನಿ – ಹೇಳು. ಆಗ ಅನ್ನಿ ಅಂದಳು – ಆಶ್ಚರ್ಯದಿಂದಲೂ ಆನಂದದಿಂದಲೂ ಇರಬಹುದು. ಸ್ವಲ್ಪ ಅಳುತ್ತಾ - `ನನಗೆ ಅನುಭವವಿಲ್ಲ ಅಮ್ಮಾ. ಹೃದಯಾಂದರೆ ಏನೂಂತ ಗೊತ್ತಿಲ್ಲ ಅಮ್ಮಾ. ಕೈ ಹಿಡಿಯುವುದೂ ಅಂದರೆ ಏನೂಂತ ಗೊತ್ತಿಲ್ಲ’ ಎಂದು. ಆಗ ನನಗೆ ಸಂತೋಷವಾಯಿತು, ಸಮಾಧಾನವಾಯಿತು. ನಾನಂದೆ – ‘ನಿನ್ನ ಹೃದಯದಲ್ಲಿ ಬೇರೆ ಯಾರೂ ಇಲ್ಲದಿದ್ದ ಮೇಲೆ ಸ್ಥಳ ಹೇಗೂ ಉಂಟು ಎಂದಾಯಿತಷ್ಟೆ. ಭಾವರಹಿತವಾದ ಹೃದಯದಲ್ಲಿ ಪ್ರೇಮದ ಅಂಕುರವನ್ನು ಊರಿದರೆ ಮುಂದೆ ನೀವು ಪ್ರೇಮಮಯ ದಂಪತಿಗಳಾಗಿ ಬೆಳೆದು ಬಾಳುವಿರಿ. ಡಾಕ್ಟರರು ನಿನ್ನ ಪತಿಯಾಗುವ ಭಾಗ್ಯ ಮಾತ್ರವಲ್ಲ, ನಮಗೆಲ್ಲರಿಗೂ ನಿನ್ನ ಪಿತನಂತೆ ಆಶ್ರಯದಾತರಾಗುವ ಭಾಗ್ಯವೂ ನಮ್ಮದು’ ಎಂದು. ಅಲ್ಲಿಂದಲೇ ನಿಮ್ಮ ಮದುವೆಯು ಪ್ರಾರಂಭವಾಗಿ, ಇಂದು ಈ ಸಂತೋಷ ಸಮಾರಂಭದಲ್ಲಿ ಭಾಗಿಗಳಾಗಿದ್ದೇವೆ” ಹೀಗೆ, ಇನ್ನೂ ಇಂಥಾ ತುಂಬಾ ಮಾತುಗಳನ್ನು ಮುದಿಸಿಪಾಯಿ ಮಾತಾಡಿದನಂತರ ಸಭೆ ವಿಸರ್ಜನೆಯಾಯಿತು.

ಅನಂತರ ನಾವೆಲ್ಲಾ ಸೇರಿ ಜೈಕಾರ ಮಾಡಿ, ನಮಸ್ಕರಿಸಿ, ಆಶೀರ್ವದಿಸಿ, ಜಾಕ್ ಮಾಲ್ಡನ್ನನನ್ನು ಬಂಡಿಯಲ್ಲಿ ಕುಳ್ಳಿರಿಸಿ ಅವನ ಮುಂದಿನ ಪಯಣಕ್ಕಾಗಿ ಕಳುಹಿಸಿಕೊಟ್ಟೆವು. ಅನ್ನಿ ಬಹು ದುಃಖದಿಂದ ಸೊರಗಿದ್ದಳು. ಜಾಕ್ ಮಾಲ್ಡನ್ನನು ನಮಗೆಲ್ಲರಿಗೂ ನಮಸ್ಕರಿಸಿಯೇ ಹೋದನು. ಅವನೂ ವಿಶೇಷ ಉತ್ಸಾಹದಿಂದ ಇದ್ದವನಂತೆ ತೋರುತ್ತಿರಲಿಲ್ಲ. ಅವನು ನಮಗೆ ನಮಸ್ಕರಿಸುತ್ತಿದ್ದಾಗ ಅವನ ಕೈಯ್ಯಲ್ಲಿ ಒಂದು ಕೆಂಪು ಹೂವೋ ಬಟ್ಟೆಯೋ – ಏನೋ ಇತ್ತು.

ಬಂಡಿ ಹೋದಮೇಲೆ ನಾವು ಡಾಕ್ಟರರ ಮನೆಗೆ ಬಂದು ನೋಡುವಾಗ ಅನ್ನಿ ಮುಖ್ಯ ಬೈಠಖಾನೆಯಲ್ಲಿ  ಸ್ಮೃತಿ ತಪ್ಪಿ ಬಿದ್ದಿದ್ದಳು. ನಾವೆಲ್ಲರೂ ಕೂಡಿ, ಅವಳನ್ನು ಉಪಚರಿಸಿ, ಎತ್ತಿ ಹಾಸಿಗೆಯಲ್ಲಿ ಮಲಗಿಸಿದೆವು. ಆಗ ಅವಳ ಗಲ್ಲದ ಅಡಿಯಲ್ಲಿ ಮೊದಲು ಇದ್ದ ಆ ಕೆಂಪು ಹೂ ಇರಲಿಲ್ಲ.

ಮಿ. ವಿಕ್ಫೀಲ್ಡರು, ಏಗ್ನೆಸ್, ಮತ್ತು ನಾನು ನಮ್ಮ ಮನೆಗೆ ಹೊರಟೆವು. ಅಷ್ಟರಲ್ಲೇ ಏಗ್ನೆಸ್ಸಳು ಡಾಕ್ಟರರ ಮನೆಯಲ್ಲಿ ತನ್ನ ಕೈಚೀಲವನ್ನು ಮರೆತು ಬಂದಿರುವುದಾಗಿ ತಿಳಿಸಿದಳು. ಆ ಕೈ ಚೀಲವನ್ನು ತರಲೆಂದು ನಾನು ಡಾಕ್ಟರರ ಮನೆಗೆ ಬಂದು, ಡಾಕ್ಟರರ ಕೊಠಡಿಯಲ್ಲಿ  ಬೆಳಕಿದ್ದುದರಿಂದ, ಅವರೊಡನೆ ವಿಚಾರಿಸಲೆಂದು ಒಳನುಗ್ಗುವ ಸಂದರ್ಭದಲ್ಲಿ ಒಳಗಿನ ದೃಶ್ಯ, ಅಲ್ಲಿಂದ ನಾನು ಕೇಳಿದ ಮಾತುಗಳೂ ನನ್ನ ನೆನಪಿನಲ್ಲಿ ಸದಾ ಉಳಿದಿವೆ. ನಾನು ನೋಡಿದ್ದಾಗಲೀ ಕೇಳಿದ್ದಾಗಲೀ ಅಡಗಿ ಮಾಡಿದ್ದಲ್ಲ – ಹೇಗೋ ನಡೆದು ಹೋದ ಸಂದರ್ಭ ಮಾತ್ರ ಅವು.

ನಾನು ಒಳನುಗ್ಗುವಾಗ ಡಾಕ್ಟರರು ಅನ್ನಿಯ ತಲೆಯನ್ನು ಸವರುತ್ತಾ ಅವಳು ನಿದ್ರೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಅನ್ನಿ ಬಹು ಆರ್ತತೆಯಿಂದ “ನನ್ನನ್ನು ನಂಬುವಿರಾ – ನನ್ನ ಮೇಲೆ ಸಂಶಯವಿದೆಯೇ” ಎಂದು ಕೇಳುತ್ತಿದ್ದಳು. ಡಾಕ್ಟರರು ಏನೋ ಆಶ್ವಾಸನೆ ಕೊಟ್ಟ ನಂತರ ಅನ್ನಿ ತನ್ನೆರಡೂ ಕೈಗಳನ್ನು ಎತ್ತಿಕೊಂಡು – ಇಗರ್ಜಿಯಲ್ಲಿ ನಾವು ದೇವರಿಗೆ ನಮಸ್ಕರಿಸುವಂತೆ – ಪತಿಗೆ ನಮಸ್ಕರಿಸುತ್ತಿದ್ದಳು.

ಈ ಒಂದು ಸನ್ನಿವೇಶ ನನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿ ಉಳಿದಿದೆ. ಇದು ನನ್ನ ಮೇಲೆಯೇ ತುಂಬಾ ಪರಿಣಾಮವನ್ನುಂಟು ಮಾಡಿದೆ. ಮುಂದೆ ಇದೇ ಚರಿತ್ರೆಯಲ್ಲಿ ಈ ಸಂಬಂಧವಾಗಿ ಪ್ರಸ್ತಾಪಿಸಲಿರುವೆನು.(ಮುಂದುವರಿಯಲಿದೆ)

No comments:

Post a Comment