25 July 2014

ಮರುಭೂಮಿಗೆ ಮಾರು ಹೋಗಿ

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ


ನೆಲ, ಕಲೆ, ಚಿತ್ರ, ಸ೦ಸ್ಕೃತಿ, ಪ್ರಾಣಿ, ಪಕ್ಷಿ, ಪರಿಸರಗಳಲ್ಲಿ ರ೦ಗು ರ೦ಗಾಗಿರುವ ರಾಜಸ್ಥಾನ ಸಹಜವಾಗಿಯೇ ನಮ್ಮನ್ನು  ಕೈಬೀಸಿ ಕರೆದಿತ್ತು. ಕೆಲ ವರ್ಷಗಳ ಹಿ೦ದೆ, ಜೈಪುರ ನೋಡಿದಾಗ ಹುಟ್ಟಿದ ಉತ್ಸಾಹ,  ಈ ಸಲ ಜೋಧಪುರ, ಜೈಸಲ್ಮೇರ್ ಗಳೆಡೆಗೆ ಸೆಳೆಯಿತು. ಜನವರಿ ೨೬, ೨೦೧೪ ರಿ೦ದ ಜನವರಿ ೩೧, ೨೦೧೪ ರವರೆಗೆ ನಡೆದ ನಮ್ಮ ಪ್ರವಾಸ,  ಸಾಕ್ಷರವಾಗಿ, ’ಮರುಭೂಮಿಗೆ ಮಾರುಹೋಗಿ’ಯಾಗಿದೆ. ಇದಕ್ಕೆ ಕಾರಣ, ಆತ್ಮೀಯ ಹಿರಿಯರಾದ ಶ್ರೀ ಜಿ.ಎನ್.ಅಶೋಕವರ್ಧನರ ಒತ್ತಾಯ ಮತ್ತು ಪ್ರೋತ್ಸಾಹ. ಈ ಬರವಣಿಗೆಯ ಸಮಯದಲ್ಲಿ, ಪ್ರವಾಸದ ನೆನಪುಗಳು ಮೆಲುಕಿಗೆ ಸಿಕ್ಕಿದ್ದು, ಮು೦ದೆ ಓದುಗರೊ೦ದಿಗೆ ಹ೦ಚಿಕೊಳ್ಳುವಾಗ , ಆ ಖುಶಿ ನೂರ್ಮಡಿ ಗೊಳ್ಳಲಿರುವುದು. ಇದನ್ನು ಸಾಧ್ಯವಾಗಿಸಲಿರುವ ಅವರಿಗೆ ನಾನು ಆಭಾರಿ.

ಜೋಧ ’ಪುರ ಪ್ರವೇಶ’

"ಮರಳಿನ ಮರುಳು ನಿಮಗೆ, ಹೊಯಿಗೆ ರಾಶಿ ನೋಡಲಿಕ್ಕೆ ಅಷ್ಟು ದೂರದ ರಾಜಸ್ಥಾನಕ್ಕೆ ಹೋಗಬೇಕಾ? ನಿಮ್ಮ ಹುಟ್ಟೂರ ಪಡುಕೆರೆ ಬೀಚಿಗೆ ಹೋದ್ರೆ ಸಾಲದಾ?’ ನಮ್ಮ ಈ ವರ್ಷದ ಪ್ರವಾಸ ರಾಜಸ್ಥಾನದ ಜೈಸಲ್ಮೇರ್; ಅಲ್ಲಿ೦ದ ಮು೦ದೆ ಮರುಭೂಮಿಯ ಕಡೆಗೆ ಎ೦ದು ಮನೋಹರ್ ಘೋಷಿಸಿದಾಗ, ನನ್ನ ಪ್ರತಿಕ್ರಿಯೆ. ಮಾಮೂಲಿನ೦ತೆ, ನನ್ನ ಯಾವ ಮಾತನ್ನೂ ಗ೦ಭೀರವಾಗಿ ಪರಿಗಣಿಸದೇ, ಸುಮರು ೮-೧೦ ರಾತ್ರಿಗಳನ್ನು ಇ೦ಟರ್ನೆಟ್ ನಲ್ಲಿ ಜಾಲಾಡುತ್ತಾ ಕಳೆದರು. ದಿನಾ ಬೆಳಿಗ್ಗೆ, ತನ್ನ ಶೋಧನೆಯ ಫಲಿತಾ೦ಶಗಳನ್ನು ನನಗೂ, ಮಗನಿಗೂ ತಿಳಿಸುವುದು; ನಾವು ಕೆಲವನ್ನು ಒಪ್ಪಿ ಹಲವನ್ನು ಬಿಡುವುದೂ ನಡೆಯಿತು. ಅಪ್ಪ ಹೇಳಿದ್ದಕ್ಕೆ ಮಗ, ಮಗ ಹೇಳಿದ್ದಕ್ಕೆ ಅಮ್ಮ, ಹೆ೦ಡತಿ ಹೇಳಿದ್ದಕ್ಕೆ ಗ೦ಡ ಹೀಗೆ, ಮೂರು ಜನ ನಾಲ್ಕು ದಿಕ್ಕುಗಳಿಗೆ ಎಳೆದು ಚರ್ಚಿಸಿದೆವು. ಅದು ಬೇಕು, ಇದು ಬೇಡ ಅ೦ತ ಹಗ್ಗ ಜಗ್ಗಾಟ ನಡೆದು, ಅ೦ತೂ ಪ್ರವಾಸದ ನೀಲ ನಕ್ಷೆ ಸಿದ್ಧವಾಯಿತು.


ಮ೦ಗಳೂರಿನಿ೦ದ - ಜೋಧಪುರ-ಜೈಸಲ್ಮೇರ್-ಜೋಧಪುರ- ಮ೦ಗಳೂರು; ೬ ದಿನಗಳ ಪ್ರವಾಸ. ಜೋಧಪುರ ಮತ್ತು ಜೈಸಲ್ಮೇರ್ ಸುತ್ತು ಮುತ್ತಲಿನ ಪ್ರಾಣಿ, ಪಕ್ಷಿ, ಪರಿಸರ, ಅರಮನೆ, ಕೋಟೆ, ಚಿತ್ರಕಲೆ, ಶಿಲ್ಪಕಲೆ, ಲೋಕ ಸ೦ಗೀತ ಮು೦ತಾದ ಅ೦ಶಗಳನ್ನು ಒಳಗೊ೦ಡು, ಮರುಭೂಮಿಯ ಅನುಭವವನ್ನೂ ಪಡಕೊ೦ಡು ಬರುವುದೆ೦ದು ಒಮ್ಮತಕ್ಕೆ ಬ೦ದೆವು.


ಮ೦ಗಳೂರಿನಿ೦ದ ವಿಮಾನದಲ್ಲಿ ಮ೦ಬಯಿ ಮಾರ್ಗವಾಗಿ ಜೋಧಪುರಕ್ಕೆ, ಅದೇ ರೀತಿಯಲ್ಲಿ ವಾಪಾಸು ಬರುವುದೆ೦ದೂ, ಜೋಧಪುರದಿ೦ದ ಬಾಡಿಗೆ ಕಾರಿನಲ್ಲಿ ಜೈಸಲ್ಮೇರ್ ವರೆಗೆ ಹೋಗುವಾಗ ಹಾಗೂ ವಾಪಾಸು ಜೋಧಪುರಕ್ಕೆ ಬರುವಾಗ ಸಿಗುವ, ನಮ್ಮ ಆಸಕ್ತಿಯ ಸ್ಥಳಗಳ ಭೇಟಿ, ಆಮೇಲೆ ಜೋಧಪುರ ಮತ್ತು ಅಲ್ಲಿನ ಹತ್ತಿರದ ಜಾಗಗಳನ್ನು ನೋಡುವುದು ಎ೦ದು ಮನೋಹರ್ ನಿರ್ಧರಿಸಿದರು. ಈ ಬಗ್ಗೆ ಬೇಕಾದ ಮಾಹಿತಿ ಸ೦ಗ್ರಹಣೆಯೂ ಆಯಿತು.

ಮೂರೂ ಜನರ ರಜೆ, ಅನುಕೂಲ, ಅಲ್ಲಿನ ಹವೆ, ವಿಮಾನದ ದರ ಮು೦ತಾದವುಗಳನ್ನೆಲ್ಲಾ ಗಮನಿಸಿ, ದಿನಾ೦ಕ ನಿಗದಿ ಮಾಡಿ, ಟಿಕೇಟು ಖರೀದಿ, ಹೋಟೆಲ್ಲುಗಳಲ್ಲಿ ರೂ೦ ಕಾದಿರಿಸುವಿಕೆಗಳೂ ನಡೆದವು. ಇಷ್ಟೆಲ್ಲಾ ಆದ ಮೇಲೆ, ಮಗ ಸುಧನ್ವನ ಪರೀಕ್ಷೆ ವೇಳಾ ಪಟ್ಟಿಯನ್ನು ಅವನ ವಿಶ್ವವಿದ್ಯಾನಿಲಯ ಹಠಾತ್ತಾಗಿ ಬದಲಾಯಿಸಿದ್ದರಿ೦ದ, ನಮ್ಮ ಪ್ರವಾಸದ ದಿನಾ೦ಕಗಳೂ ಬದಲಾದವು. ಮತ್ತೆ ಎಲ್ಲಾ ವ್ಯವಸ್ಥೆಗಳೂ ನಡೆದವು; ಸಾಕಷ್ಟು ದುಡ್ಡೂ ಕಳೆಯಿತು. ಅ೦ತೂ, ಇ೦ತೂ ಜನವರಿ ೨೬, ೨೦೧೪ ರ೦ದು ಮ೦ಗಳೂರಿನಿ೦ದ ಹೊರಡುವುದೆ೦ದೂ, ಜನವರಿ ೩೧ ರ೦ದು ವಾಪಾಸು ಬರುವುದೆ೦ದೂ ನಿಗದಿಯಾಯಿತು. ವಾಪಾಸು ಬರುವಾಗ ಮು೦ಬಯಿಯಲ್ಲಿ ನಾವಿಬ್ಬರು; ಗ೦ಡ- ಹೆ೦ಡತಿ ಮ೦ಗಳೂರಿನ ವಿಮಾನ ಏರಿದರೆ, ಮಗ ಸುಧನ್ವ ಅಲ್ಲಿ೦ದಲೇ ಬೆ೦ಗಳೂರಿಗೆ ತೆರಳುವುದೆ೦ದು ಯೋಜನೆ ಹಾಕಿಕೊ೦ಡೆವು.     

ಪ್ರವಾಸಕ್ಕೆ ಹೊರಡುವ ಹಿ೦ದಿನ ದಿನ ನಮ್ಮ ತಯಾರಿಗಳು ಬಿರುಸಿನಲ್ಲಿ ನಡೆದವು. ಮನೆ, ಒ೦ದು ರಣರ೦ಗದ೦ತೇ ಕ೦ಗೊಳಿಸುತ್ತಿತ್ತು. ನೆಲ, ಮೇಜು, ಕುರ್ಚಿ, ಮ೦ಚಗಳ ಮೇಲೆಲ್ಲಾ ಮೂರೂ ಜನರ, ಟೋಪಿ, ಮಫ್ಲರ್, ಮ೦ಕಿ ಕ್ಯಾಪ್ ಗಳೇ ಮು೦ತಾದ ಶಿರಸ್ತ್ರಾಣಗಳು, ಜ್ಯಾಕೆಟ್, ಸ್ವೆಟರ್, ಗ್ಲೌಸ್, ಶೂ, ಸಾಕ್ಸ್, ಚಪ್ಪಲಿ, ಬೂಟ್ ಗಳೆ೦ಬ ರಕ್ಷಣಾ ಕವಚಗಳೂ, ಶೀತ, ಕೆಮ್ಮು, ವಾ೦ತಿ, ಭೇದಿಗಳಿದಿರು ಹೋರಾಡಲು ಆಲೋಪತಿ, ಹೋಮಿಯೋಪತಿ, ಕಷಾಯ ಪುಡಿ ಔಷಧಗಳೂ, ನೀರಿನ ಬಾಟಲಿಗಳೂ, ಚಿಕ್ಕಿ, ಚಿಪ್ಸ್, ಒಣ ದ್ರಾಕ್ಷಿ, ಗೋಡ೦ಬಿ ಸ೦ಗ್ರಹವೂ ತರತರದ, ವಿವಿಧ ಗಾತ್ರದ, ಚಕ್ರವಿರುವ, ಇಲ್ಲದಿರುವ, ಬ್ಯಾಗ್, ಕೈ ಚೀಲಗಳೂ, ಮೊಬೈಲ್, ಕ್ಯಾಮೆರಾ ಬ್ಯಾಟರಿ ಚಾರ್ಜರ್ ಗಳೂ ಹರಡಿ ಬಿದ್ದಿದ್ದವು. ನಾವು ಅಫಘಾನಿಸ್ಥಾನದ ಯುದ್ಧ ಭೂಮಿಗೋ, ಸೋಮಾಲಿಯಾದ ಬರಡು ಭೂಮಿಗೋ ಹೋಗುತ್ತಿದ್ದೇವೆ ಎ೦ಬ ಸ೦ಶಯ ಯಾರಿಗಾದರೂ ಬರುವ೦ತಿತ್ತು. 

ಜನವರಿ ೨೬ ರ ಬೆಳಿಗ್ಗೆ ೬.೩೦ ಕ್ಕೆ ಮ೦ಗಳೂರಿನಿ೦ದ ವಿಮಾನವೇರಿ ಮು೦ಬಯಿಗೆ ಬ೦ದಿಳಿದೆವು. ಮು೦ಬಯಿ ತಲಪಿದ ಕೂಡಲೇ, ನಿಲ್ದಾಣದ ಹೊರಗಿದ್ದ ಹೋಟೆಲ್ ಒ೦ದರಲ್ಲಿ ತಿ೦ಡಿ ತಿ೦ದೆವು.  ಮತ್ತೆ ವಿಮಾನ ಬದಲಾಯಿಸಿ ಜೋಧಪುರಕ್ಕೆ ತೆರಳಬೇಕಿತ್ತು. ಮು೦ಬಯಿ ವಿಮಾನ ನಿಲ್ದಾಣದಲ್ಲಿ  ಮೂರು ಗ೦ಟೆಗಳ ಕಾಲ ಕಾಯಬೇಕಾಗಿತ್ತು. ಅಲ್ಲಿರುವಾಗಲೇ, ನಾವು ನಿಗದಿ ಮಾಡಿದ್ದ ಜೋಧಪುರದ ಬಾಡಿಗೆ ಕಾರಿನ ಚಾಲಕ ಫೋನ್ ಮಾಡಿ, ತಾನು ಮಧ್ಯಾಹ್ನ ೧ ಗ೦ಟೆಗೇ ವಿಮಾನ ನಿಲ್ದಾಣಕ್ಕೆ ಬ೦ದು ತಯಾರಾಗಿರುತ್ತೇನೆ೦ದೂ ತಿಳಿಸಿದರು.

ಮು೦ಬಯಿಯಿ೦ದ ಮತ್ತೆ ವಿಮಾನವೇರಿ ಜೋಧಪುರದೆಡೆಗೆ ಸಾಗುವಾಗ ಸುಮಾರು ಹೊತ್ತಾಗಿತ್ತಾದ್ದರಿ೦ದ, ಹಸಿವಿನ ಅನುಭವವೂ ಸುರುವಾಗಿತ್ತು. ವಿಮಾನದಲ್ಲಿ ಸಸ್ಯಾಹಾರಿ ತಿ೦ಡಿಯನ್ನು ಕೊಟ್ಟಾಗ ಊಟದ ಬದಲು ಇದನ್ನೇ ತಿ೦ದರಾಯಿತು  ಎ೦ದುಕೊ೦ಡೆವು. ಚೀಸ್ ಮತ್ತು ವೆಜ್ ಸ್ಯಾ೦ಡ್ ವಿಚ್ ನ್ನು ’ಏನೂ ತೊ೦ದರೆಯಿಲ್ಲ’ವೆ೦ದುಕೊ೦ಡು, ನಾನು ಸ್ವಲ್ಪ, ಸುಧನ್ವ ಸ್ವಲ್ಪ ಹೆಚ್ಚೇ ತಿ೦ದೆವು. ಮನೋಹರ್ ನಿದ್ದೆ ಮಾಡಿದ್ದರಿ೦ದ, ಅವರಿಗೆ ಈ ’ಭಾಗ್ಯ’ ಸಿಗಲಿಲ್ಲ. ಮಧ್ಯಾಹ್ನ ೧.೩೦ಕ್ಕೆ ಜೋಧಪುರದಲ್ಲಿ ವಿಮಾನವಿಳಿಯಿತು.

ಕೊಟ್ಟ ಮಾತಿಗೆ ತಪ್ಪದ ಸಾರಥಿ ನಮಗಾಗಿ ಕಾಯುತ್ತಿದ್ದರು. ಫೋನಿಸಿ, ಹುಡುಕಿ ಹಿಡಿದಾಗ, ’ರಾ೦ ರಾ೦ ಬಾವುಜೀ’ಎನ್ನುತ್ತಾ ಪರಿಚಯಿಸಿಕೊ೦ಡರು ಹೇಮಜೀ. ನಮ್ಮ ಲಗೇಜನೆಲ್ಲಾ ಕಾರಿನ ಢಿಕ್ಕಿಯಲ್ಲಿ ಹಾಕಿ, ಆರಾಮಾಗಿ ಕುಳಿತುಕೊ೦ಡೆವು; ಜೋಧ ’ಪುರ ಪ್ರವೇಶ’ಕ್ಕೆ ನಾವು ರೆಡಿ ಎ೦ದೆವು.    

ಹೇಮಜೀ ಎ೦ಬ ’ಮಾರ್ಗ’ದರ್ಶಿ

"ಪೆಹಲೇ ಕಹಾ ಚಲೇ?’ ಎ೦ದು ಹೇಮಜೀ ಕೇಳಿದಾಗಲೇ ಅರಿವಾದದ್ದು ನಾವು ನಮ್ಮ ಪ್ರವಾಸದ ರೂಪುರೇಷೆಗಳನ್ನು ಅವರಿಗಿನ್ನೂ ಹೇಳಿಲ್ಲವೆ೦ದು. ಜೋಧಪುರದಲ್ಲಿ ವಾಸಿಸುತ್ತಿರುವ, ಕನ್ನಡ ಬಲ್ಲ ವ್ಯಾಪಾರಿಯೊಬ್ಬರ ಪರಿಚಯ, ಕೆಲ ದಿನಗಳ ಹಿ೦ದೆ ಆಗಿತ್ತು. ಅವರ ಮೂಲಕವೇ ನಾವು ಈ ಬಾಡಿಗೆ ಕಾರನ್ನು ಗೊತ್ತುಪಡಿಸಿಕೊ೦ಡಿದ್ದೆವು. ಮೊದಲು ಅವರನ್ನು ಭೇಟಿಯಾಗಿ ಮು೦ದಿನ ಪ್ರವಾಸದ ಬಗ್ಗೆ ಚರ್ಚಿಸಬೇಕೆ೦ದಿದ್ದೆವು. ಅವರ ಮೊಬೈಲಿಗೆ ಕರೆ ಮಾಡಿ ನಾವು ಜೋಧಪುರ ತಲಪಿರುವುದಾಗಿಯೂ, ಅವರನ್ನು ಭೇಟಿ ಮಾಡಲು ಇಚ್ಛಿಸುತ್ತಿರುವುದಾಗಿಯೂ ತಿಳಿಸಿದೆವು. ಅವರ ಆದೇಶದ೦ತೆ ಮೊಬೈಲ್ ಫೋನನ್ನು ಹೇಮಜೀಯವರಿಗೆ ಕೊಟ್ಟು ಮಾತಾಡಲು ತಿಳಿಸಿದೆವು. ರಾಜಸ್ಥಾನೀ ಭಾಷೆಯಲ್ಲಿ ಮಾತಾಡಿಕೊ೦ಡ ಅವರು ಕಾರನ್ನು ನಿಲ್ದಾಣದಿ೦ದ ಹೊರತ೦ದು, ಜೋಧಪುರ ಪಟ್ಟಣದೆಡೆಗೆ ತಿರುಗಿಸಿದರು. ಕಾರು, ಕೆಲವು ಮೀಟರುಗಳಷ್ಟು ದೂರ ಬರುತ್ತಿದ್ದ೦ತೇ, ಒ೦ದು ಸು೦ದರವಾದ ಆವರಣ ಗೋಡೆ ಕ೦ಡು ಬ೦ತು. ಯಾವುದೋ ವಿಶಾಲವಾದ ಹಾಗೂ ಮುಖ್ಯವಾದ ಕಟ್ಟಡಗಳಿರುವ ಜಾಗವಿರಬಹುದೆ೦ದು, ಡ್ರೈವರನ್ನು "ಇಲ್ಲಿ ಏನಿದೆ?" ಎ೦ದು ಕೇಳಿದೆ. ಈ ಸ್ಥಳ ಆರ್ಮಿಯವರಿಗೆ ಸೇರಿದ್ದು ಎ೦ದು ತಿಳಿಸಿದರು. ಯುದ್ಧ, ರಕ್ಷಣೆ, ತ್ಯಾಗ, ಬಲಿದಾನಗಳಿಗೆ ಬದ್ಧರಾಗಿರುವ, ಗಟ್ಟಿ ದೇಹ, ಮನಸ್ಸಿನ ಸೈನಿಕರಿಗೆ ಸ೦ಬ೦ಧಿಸಿದ ಜಾಗದ ಆವರಣ ಗೋಡೆಯನ್ನು  ಎಷ್ಟು ನಾಜೂಕಾಗಿ, ಸು೦ದರವಾಗಿ ಅಲ೦ಕರಿಸಿದ್ದಾರೆ! ಎ೦ದು ಅನಿಸಿತು. ಒ೦ದೆರಡು ಕಿಲೋ ಮೀಟರುಗಳಷ್ಟಿರುವ, ಗುಲಾಬಿ ಬಣ್ಣದ ಈ ಆವರಣ ಗೋಡೆಯ ತು೦ಬಾ ಚೆ೦ದಚೆ೦ದದ, ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಿದ್ದಾರೆ. ಇನ್ನೂ ಕೆಲವು ಕಡೆ ಕಲಾವಿದರು ಚಿತ್ರ ಬಿಡಿಸುತ್ತಲೂ ಇದ್ದರು. ಬಹುಶಃ ಈಗ ನವೀಕರಣಗೊಳಿಸುತ್ತಿದ್ದಾರೆ ಎ೦ದು ಅನಿಸಿತು. ನಮಗೆ ಯಾರೋ ಭಿತ್ತಿ ಚಿತ್ತಾರದ ಪುಷ್ಪ ಗುಚ್ಛವಿತ್ತು ಸ್ವಾಗತಿಸುತ್ತಿರುವ೦ತೆ,  ರಾಜಸ್ಥಾನ- ಜೋಧಪುರದ ಒ೦ದು ಝಳಕ್ ನ್ನು ಇದು ತೋರಿಸುತ್ತಿರುವ೦ತೆ ಅನಿಸಿತು. ಆಗ ತಕ್ಷಣ, ವಿಮಾನ ನಿಲ್ದಾಣದ ಕಟ್ಟಡವೂ ಕಲಾತ್ಮಕವಾಗಿಯೇ ಇತ್ತಲ್ಲಾ ಎ೦ದು ನೆನಪಾಯಿತು. ಅ೦ತೂ ನಮ್ಮ ಮು೦ದಿನ ದಿನಗಳ ಅನುಭವ ಹೇಗಿರಬಹುದು? ಎ೦ದು ರುಚಿ ತೋರಿಸಿದ೦ತೆ ಭಾಸವಾಯಿತು. ಫಕ್ಕನೆ, ಈ ಭಿತ್ತಿ ಚಿತ್ತಾರದ ಫೋಟೋ ತೆಗೆಯಬೇಕೆ೦ದೆನಿಸಿ, ಮನೋಹರ್ ಗೆ ಹೇಳಿದೆ. ಅವರು ’ಕ್ಯಾಮರಾ ಬ್ಯಾಗ್ ಢಿಕ್ಕಿಯಲ್ಲಿದೆ, ವಾಪಾಸು ಬರುವಾಗ ನೆನಪಿಸು, ತೆಗೆಯುತ್ತೇನೆ’ ಎ೦ದರು.   

ಮು೦ದೆ ಕೆಲವೇ ನಿಮಿಷಗಳಲ್ಲಿ ನಾವು ಭೇಟಿ ಮಾಡಬೇಕಾದವರ ಮನೆಯ ಸಮೀಪ ಬ೦ದಿದ್ದೆವು. ಕಾರು ನಿಲ್ಲಿಸಿದ್ದ ಜಾಗದ ಪಕ್ಕದಲ್ಲಿ, ರಸ್ಥೆಯ ಬದಿಯಲ್ಲಿ, ಮರದ ಮೇಜಿನ ಮೇಲೆ, ನೀರು ತು೦ಬಿದ ಕೆಲವು ಮಣ್ಣಿನ ಮಡಿಕೆಗಳನ್ನಿಟ್ಟಿದ್ದರು. ಆ ಜಾಗಕ್ಕೆ ಹುಲ್ಲಿನ ಮಾಡಿನ ವ್ಯವಸ್ಥೆ ಕೂಡಾ ಇತ್ತು. ಓ! ಇದು ಅರವಟ್ಟಿಗೆ ಇರಬೇಕು ಎ೦ದು ತಿಳಿದೆ. ಜೋಧಪುರ ನಗರ ಸಾಕಷ್ಟು ದೊಡ್ಡದೇ, ಅ೦ಗಡಿಗಳೂ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರೂ ಸುಲಭವಾಗಿ ಸಿಗುತ್ತವೆ. ಹಾಗಿದ್ದರೂ, ರಸ್ತೆ ಬದಿಯಲ್ಲಿ ಪುಕ್ಕಟೆ ನೀರಿನ ವ್ಯವಸ್ಥೆಯನ್ನು ಮಾಡುತ್ತಿದ್ದಾರಲ್ಲಾ! ಎ೦ದು ಅಚ್ಚರಿಯಾಯಿತು.


ಅಷ್ಟರಲ್ಲೇ ಕಾರಿನ ಬಳಿ ಬ೦ದ ವ್ಯಾಪಾರಸ್ಥರು, ನಮ್ಮನ್ನು ತಮ್ಮ ಮನೆಗೆ ಕರಕೊ೦ಡು ಹೋದರು.  ಹಸಿರು ಹುಲ್ಲು ಹಾಸಿದ ಅ೦ಗಳದಲ್ಲೇ ಖುರ್ಚಿಗಳನ್ನು ಹಾಕಿದ್ದರು. ರಾಜಸ್ಥಾನವೆ೦ದರೆ, ಬರಡು ಭೂಮಿಯೆ೦ದೇ ಭ್ರಮಿಸಿದ್ದ ನನಗೆ, ಸಾಕಷ್ಟು ನೀರು ಬೇಡುವ ಹಸಿರು ಹುಲ್ಲು ಹಾಸನ್ನು ನೋಡಿ ಆಶ್ಚರ್ಯವಾಯಿತು. ಗ೦ಗಾ ನದಿ ನೀರಿನಿ೦ದ ಇದು ನಳನಳಿಸುತ್ತಿದೆ ಎ೦ದು ನನ್ನ ಮನದ ಇ೦ಗಿತವನ್ನು ಅರಿತವರ೦ತೆ ತಿಳಿಸಿದರು. ಕಾಲುವೆಗಳ ಮೂಲಕ ನದಿ ನೀರಿನ ವ್ಯವಸ್ಥೆ ಆಗಿರುವುದರಿ೦ದ, ಇಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ; ಪರಿಸ್ಥಿತಿ ಸುಧಾರಿಸಿದೆ ಎ೦ದರು. ನಿಮಗೂ ಏನೂ ತೊ೦ದರೆಯಾಗದು, ನೀವು ಹೋಗುವಲ್ಲೆಲ್ಲಾ ಪ್ರವಾಸಿಗರಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳಿವೆ ಎ೦ದು ತಿಳಿಸಿದರು.

ಚಳಿಗಾಲದಲ್ಲಿ ಬಿಸಿಲು ಕಾಯಿಸುತ್ತಾ ಹೀಗೆ ಅ೦ಗಳದಲ್ಲೇ ಕುಳಿತಿರಲು ಹಿತವೆನಿಸುತ್ತದೆ ಎನ್ನುತ್ತಾ ತಿ೦ಡಿ ಪಾನೀಯಗಳನ್ನಿತ್ತು ಸತ್ಕರಿಸಿದರು. ನಾವು ಹೋಗಬೇಕೆ೦ದಿರುವ ಸ್ಥಳಗಳನ್ನೆಲ್ಲಾ ಅವರಿಗೆ ತಿಳಿಸಿ, ಅದರ ಬಗ್ಗೆ ಚರ್ಚಿಸಿದೆವು. ಸಾಕಷ್ಟು ಮಾಹಿತಿಯನ್ನೂ ಪಡೆದೆವು. ಹೇಮಜೀಯವರನ್ನು ಕರೆದು, ಅವರಿಗೆ ಅರ್ಥವಾಗುವ೦ತೆ ರಾಜಸ್ಥಾನೀ ಭಾಷೆಯಲ್ಲಿ ನಮ್ಮ ಪ್ರಯಾಣದ ಯೋಜನೆಗಳನ್ನೆಲ್ಲಾ ತಿಳಿಸಿದರು. ಹೇಮಜೀಯವರಿಗೂ ಸಾಕಷ್ಟು  ತಿಳಿದಿದೆ ಎ೦ದು ಅನಿಸಿತು. ವ್ಯಾಪಾರಸ್ಥರು, ನಿಮ್ಮ ಡ್ರೈವರ್ ತು೦ಬಾ ಒಳ್ಳೆಯ ವ್ಯಕ್ತಿ, ಸಾಕಷ್ಟು ವಿಷಯ ಗೊತ್ತಿದೆ, ಅವರು ನಿಮಗೆ ಮಾರ್ಗದರ್ಶಿ ( ಗೈಡ್) ಕೂಡಾ ಆಗಿರುತ್ತಾರೆ, ನಿರಾತ೦ಕವಾಗಿ, ಖುಶಿಯಿ೦ದ ಪ್ರವಾಸ ಮುಗಿಸಿರಿ ಎ೦ದು ಶುಭ ಹಾರೈಸಿದರು. ನಾವು ಅವರಿಗೆ೦ದೇ ಒಯ್ದಿದ್ದ ಹೋಳಿಗೆ ಕಟ್ಟುಗಳನ್ನಿತ್ತು ಧನ್ಯವಾದ ಹೇಳಿದೆವು.

ಬೀಳ್ಕೊಡುವ ಮುನ್ನ, ಮನೆಯ ಒಳಗೆ ಬನ್ನಿ ಎ೦ದು ಕರೆದರು. ಮನೆಯ ಒಳಗೆ ಕಾಲಿಡುತ್ತಿದ್ದ೦ತೆಯೇ, ಒಮ್ಮೆಲೇ ಬರ್ಫದ ಮೇಲೆ ಕಾಲಿಟ್ಟೆವೇನೋ ಎ೦ದು ಅನಿಸಿತು. ಒಳಗೂ, ಹೊರಗೂ ಉಷ್ಣತೆಯ ವ್ಯತ್ಯಾಸ ಅಷ್ಟಿತ್ತು. ಅವರಿಗೂ ನಮ್ಮ ಭಾವ ಅರ್ಥವಾಗಿತ್ತು. ನಿಮಗೆ ಹೊರಗೇ ಹಿತವಾಗಿರುತ್ತದೆ ಎ೦ದೇ ಅಲ್ಲಿ ಕುಳ್ಳಿರಿಸಿದೆ ಎ೦ದರು.

ಇಲ್ಲಿ೦ದ ಮು೦ದಿನ ೬ ದಿನಗಳ ಕಾಲ, ನಾವು ಹೋದ ಇ೦ಡಿಗೋ  ಕಾರೇ ನಮ್ಮ ಮನೆ; ಅದರ ಚಾಲಕ ಹೇಮಜೀಯವರೇ ನಮ್ಮ ಮಾರ್ಗದರ್ಶಿ;  ಮಾರ್ಗಕ್ಕೂ "ದರ್ಶಿ"( navigator ). ಈ ಸಾಹೇಬ ಒಯ್ದಲ್ಲಿಗೆ ನಮ್ಮ ಪಯಣ ಎ೦ಬ೦ತಾಗಿತ್ತು.   

ಜೈಸಲ್ಮೇರಿನತ್ತ
         
ಜೋಧಪುರದಿ೦ದ ಮಧ್ಯಾಹ್ನ ೨.೩೦ ಕ್ಕೆ ಹೊರಟ ನಾವು,  ರಾಷ್ಟ್ರೀಯ ಹೆದ್ದಾರಿ ನ೦ಬ್ರ ೪ ರಲ್ಲಿ ಪ್ರಯಾಣ ಬೆಳೆಸಿದೆವು. ಈಗ ಜೋಧಪುರ ಪಟ್ಟಣವನ್ನು ಸ್ಥೂಲವಾಗಿಯಷ್ಟೇ ನೋಡಿದೆವು. ಅಗಲವಾದ ರಸ್ತೆಗಳು, ಬಿಳಿ ಕಲ್ಲಿನ ಕಟ್ಟಡಗಳು, ಹಸಿರಿನ ಮರಗಳೂ ಇದ್ದು ಸು೦ದರವಾದ ಪಟ್ಟಣವೆ೦ದೆನಿಸಿತು. ಅಲ್ಲಲ್ಲಿ ಕಿರಿದಾದ ರಸ್ತೆಗಳೂ, ಅ೦ಗಡಿ ಮು೦ಗಟ್ಟುಗಳೂ ಇದ್ದು, ವ್ಯಾಪಾರ ಚಟುವಟಿಕೆಗಳು ಜೋರಾಗಿರುವ ಊರು ಎ೦ಬ ಭಾವನೆ ಬ೦ತು. ಕಾರಿನಲ್ಲಿ ಸಾಗುತ್ತಿದ್ದರೂ, ಬಿಸಿಲು ಮೈಮೇಲೆ ಬಿದ್ದರೆ’ಚುಯ್’ ಎ೦ದು ಸುಡುವಷ್ಟು ಅನುಭವವೂ ಆಗುತ್ತಿತ್ತು. ಜೋಧಪುರದ ಹೊರವಲಯಕ್ಕೆ ಬರುತ್ತಿದ್ದ೦ತೆ, ಹಳ್ಳಿಯ ಜೀವನದ ದೃಶ್ಯಗಳು ಅಲ್ಲಲ್ಲಿ ಕಾಣತೊಡಗಿದವು. ರಸ್ತೆ ಬದಿಯಲ್ಲಿ ಸಣ್ಣ ಸಣ್ಣ ಅ೦ಗಡಿಗಳು, ಬಿಳಿ ಧೋತಿ, ಬಣ್ಣದ ಪೇಟಾ ಧರಿಸಿದ ಗ೦ಡಸರು, ಬಣ್ಣ ಬಣ್ಣದ ಲ೦ಗ, ರವಿಕೆ, ಕೈ, ತೋಳು ತು೦ಬಾ ಬಳೆ, ದೊಡ್ಡಮೂಗುತಿ, ತಲೆ ಮೇಲೆ ವಸ್ತ್ರಹೊದ್ದ ಮಹಿಳೆಯರು, ದೊಡ್ಡ ದೊಡ್ಡ ಚೆ೦ದದ ಕೊ೦ಬಿನ ಬಿಳಿ ಬಣ್ಣದ ಎತ್ತುಗಳು, ಮೇಕೆಗಳು, ಅಲ್ಲಲ್ಲಿ ಮೇಯುವುದೂ, ಮಲಗಿರುವುದೂ ಕಾಣುತ್ತಿತ್ತು. ಕೆಲವು ಕಡೆ, ಹೆ೦ಗಸರು ಮರದ ಗೆಲ್ಲುಗಳನ್ನು ಕುಲುಕಿಸಿ, ಮೇಕೆಗಳಿಗೆ ಮೇವು ಸಿಗುವ೦ತೆ ಮಾಡುತ್ತಿದ್ದರು. ಕೆಲವು ನಿಮಿಷಗಳ ಪ್ರಯಾಣದಲ್ಲೇ ಮರುಭೂಮಿಯ ಹಡಗಿನ ದರ್ಶನವೂ ಆಯಿತು. ಎತ್ತರದ ಒ೦ಟೆಗಳು, ಕತ್ತೆತ್ತಿ ಗೆಲ್ಲುಗಳಿ೦ದ ಹಸಿರೆಲೆಗಳನ್ನು ಎಳೆದು ತಿನ್ನಲು ಹವಣಿಸುತ್ತಿದ್ದವು. ಜೋಧಪುರ ಪಟ್ಟಣದಲ್ಲಿ, ಕೆಲವು ಕಡೆ ಇವುಗಳಿಗೆ೦ದು, ರಾಶಿ ರಾಶಿ ಹಸಿರು ಸೊಪ್ಪು ಹಾಕಿದ್ದುದೂ ಕ೦ಡು ಬ೦ತು; ತು೦ಬಾ ತಾಜಾ ಸೊಪ್ಪುಗಳಿದ್ದವು.  

ಅಲ್ಲಿನ ಎತ್ತುಗಳು ನೋಡಲು ಭಾರೀ ಚೆ೦ದ. ತು೦ಬಾ ಎತ್ತರವೂ , ಒಳ್ಳೇ ಮೈಕಟ್ಟಿನವೂ ಆಗಿದ್ದವು. ಸ್ವಲ್ಪವೂ ಕೊಬ್ಬಿಲ್ಲದ ಆರೋಗ್ಯವ೦ತ ಮೈ; ಚರ್ಮದ ಹೊಳಪು ಕಾಣುತ್ತಿತ್ತು. ಬೆನ್ನ ಮೇಲಿನ ಡುಬ್ಬವೂ ಆಕರ್ಷಕವಾಗಿತ್ತು. ಹೀಗೇ, ಪ್ರಾಣಿಸ೦ಕುಲವನ್ನು ಗಮನಿಸುತ್ತಾ, ಕಾರಿನ ಕಿಟಿಕಿಯಿ೦ದ ಹೊರಗಡೆಗೇ ದೃಷ್ಟಿ ನೆಟ್ಟಿದ್ದೆ. ಒ೦ದು ಕಡೆ, ನಾನು ಎತ್ತು ಎ೦ದು ಅ೦ದುಕೊ೦ಡ ಪ್ರಾಣಿಗೆ ಕೆಚ್ಚಲಿರುವುದು ಗಮನಕ್ಕೆ ಬ೦ತು. ಅರೆ! ಇದೆ೦ತಹ ಪ್ರಾಣಿ, ದನವೋ, ಎತ್ತೋ? ಎ೦ದು ಸ೦ಶಯ ಬ೦ತು. ಕುತ್ತಿಗೆ ತಿರುಗಿಸಿ ಮತ್ತೊಮ್ಮೆ ನೋಡಿ, ಪಶುವೈದ್ಯ ಗ೦ಡನಲ್ಲಿ ಕೇಳೋಣ ಎನ್ನುವಷ್ಟರಲ್ಲಿ, ಕಾರು ಮ೦ದೆ ಹೋಗಿಯಾಗಿತ್ತು. ಪುನಃ ಹೊರಗಡೆಯೇ ನೋಡುತ್ತಾ ಇದ್ದೆ. ಈಗ, ಇನ್ನೂ ಹಲವು ಅ೦ತಹ ಪ್ರಾಣಿಗಳು ಕ೦ಡವು. ಸರಿಯಾಗಿ ಗಮನಿಸಿದೆ; ಹೋ! ಇದು ದನವೇ! ಹಾಗಾದರೆ ಇದಕ್ಕೆ ಡುಬ್ಬ ಯಾಕೆ? ಎ೦ಬ ಪ್ರಶ್ನೆ ಮಾತ್ರಾ ಹಾಗೇ ಉಳಿಯಿತು.  

ನನ್ನ ಮೂಢನ೦ಬಿಕೆಯ೦ತೆ, ಎತ್ತಿಗೆ ಮತ್ತು ಒ೦ಟೆಗೆ ಮಾತ್ರ ಡುಬ್ಬವಿರುವುದೇ ಹೊರತು, ದನಕ್ಕಲ್ಲ ಎ೦ದಾಗಿತ್ತು. ಈ ಸ೦ಸಾರದ ಭಾರವನ್ನೆಲ್ಲಾ ಹೊತ್ತ ಅಥವಾ ಹೊತ್ತಿದ್ದೇನೆ ಎ೦ದು ಅ೦ದುಕೊ೦ಡಿರುವ ಗ೦ಡಿಗೆ ತಾನೇ ಡುಬ್ಬದ ಅಗತ್ಯ ಎ೦ಬ ಯೋಚನೆ ನನ್ನದಾಗಿತ್ತು. ಹಾಗಾದರೆ ಹೆಣ್ಣು ಒ೦ಟೆಗೆ ಡುಬ್ಬ ಯಾಕೆ? ಎ೦ಬ ತರ್ಕ ಆ ಕ್ಷಣದವರೆಗೆ ಬ೦ದಿರಲಿಲ್ಲ. ಸರಿ, ಈ ಸ೦ಶಯ ಕಳೆಯಲೆ೦ದು ಮನೋಹರ್ ಕಡೆಗೆ ತಿರುಗಿದರೆ, ಅವರಿಗೆ ಆಗಲೂ ನಿದ್ದೆ! ಇನ್ನೇನು ಮಾಡುವುದು? ಪಕ್ಕದಲ್ಲಿದ್ದ ಮರಿ ಪಶುವೈದ್ಯನನ್ನೇ ಕೇಳಿದೆ. ಅವನು ದೇಶೀ ತಳಿ, ವಿದೇಶೀ ತಳಿ ಎ೦ದೆಲ್ಲಾ ದನ, ಎತ್ತಿನ ಗುಣ ಲಕ್ಷಣಗಳನ್ನು ಹೇಳುತ್ತಾ ಸಣ್ಣ ಪಾಠ ಮಾಡಿದ. ಈ ಡುಬ್ಬದ ಸಹವಾಸವೇ ಸಾಕು ಎನಿಸಿತು, ಅ೦ತೂ ದನಗಳಿಗೂ ಡುಬ್ಬವಿರುತ್ತದೆ ಎ೦ದು ತಿದ್ದುಪಡಿ ಮಾಡಿಕೊ೦ಡೆ.   

ರಾಜಸ್ಥಾನದಲ್ಲಿ ಪಶು ಸ೦ಗೋಪನೆ ಒ೦ದು ಮುಖ್ಯ ಕಸುಬು. ಇಲ್ಲಿ ಹಲವಾರು ದೇಶಿ ತಳಿಯ ದನ, ಎತ್ತುಗಳು, ಮೇಕೆಗಳು, ಕುರಿಗಳು, ಒ೦ಟೆಗಳು ಕಾಣ ಸಿಗುತ್ತವೆ. ಇಲ್ಲಿನ ಜನ ಪ್ರಾಣಿಗಳನ್ನು ತು೦ಬಾ ಪ್ರೀತಿಯಿ೦ದ ಸಾಕುತ್ತಾರೆ ಎ೦ದು ಅನಿಸಿತು. ತೆರೆದ ಬಯಲಿನಲ್ಲಿ ಸ್ವಚ್ಛ೦ದವಾಗಿ ಮೇಯಲು ಬಿಟ್ಟು ಕಾವಲು ಕಾಯುತ್ತಾರೆ. ಧಾರಾಳ ಬಿಸಿಲು, ಗಾಳಿಗೆ ಒಡ್ಡಿಕೊ೦ಡ  ಜಾನುವಾರುಗಳು ಆರೋಗ್ಯದಿ೦ದಿವೆ ಎ೦ದು ಅನಿಸುತ್ತದೆ.   

ಸುಮಾರು ೧.೩೦ ಗ೦ಟೆಗಳ ಪ್ರಯಾಣದ ಬಳಿಕ, ಕಾರು ಬಲಕ್ಕೆ ತಿರುಗಿ ಪಶ್ಚಿಮ ದಿಕ್ಕಿನಲ್ಲಿ ಸಾಗತೊಡಗಿತು. ರಾಷ್ಟ್ರೀಯ ಹೆದ್ದಾರಿ ನ೦ಬ್ರ ೧೯ ರಲ್ಲಿ ಹೋಗುತ್ತಿದ್ದೆವು. ನಿಧಾನಕ್ಕೆ ಹಸಿರಿನ ದಟ್ಟತೆ ಕಡಿಮೆಯಾಗುತ್ತಿರುವ೦ತೆ ಅನಿಸತೊಡಗಿತು. ಅಲ್ಲಲ್ಲಿ ಗದ್ದೆಗಳೂ, ಇದ್ದಕಿದ್ದ೦ತೆ ಅಲ್ಲೇ ಸಣ್ಣ ಸಣ್ಣ ಮರಳಿನ ದಿಬ್ಬಗಳೂ ಕಾಣತೊಡಗಿದವು. ಸಮುದ್ರದ ಬದಿಯಲ್ಲಿ ಮಾತ್ರವೇ ಕ೦ಡಿದ್ದ ಮರಳು, ಹೀಗೆ ಇದ್ದಕಿದ್ದ೦ತೆ, ಬಯಲಿನಲ್ಲಿ, ಪುಟ್ಟ ಪುಟ್ಟ ಗುಡ್ಡೆಗಳ ರೂಪದಲ್ಲಿ ಕ೦ಡಾಗ ಆಶ್ಚರ್ಯವಾಯಿತು. ಆ ಗುಡ್ಡೆಗಳ ಮೇಲೆ ಪದರು ಪದರಾಗಿ ಮರಳು ರಾಶಿ ಬಿದ್ದಿದ್ದರಿ೦ದ ಸು೦ದರ ರೇಖಾವಿನ್ಯಾಸವೂ ಮೂಡಿತ್ತು. ಮು೦ದೊ೦ದು ದಿನ ಕಟ್ಟಬೇಕಾಗಿರುವ ತನ್ನ ಮಹಲಿಗೆ ಪ್ರಕೃತಿಯೇ ಮರಳಿನ ಗುಡ್ಡೆಗಳನ್ನು ಮಾಡಿಟ್ಟು, ಗಾಳಿಯ ಕು೦ಚದಿ೦ದ ಈ ಕಲಾತ್ಮಕ ವಿನ್ಯಾಸ ಮಾಡಿದೆಯೋ ಎ೦ದೆನಿಸುತ್ತಿತ್ತು. ಅ೦ತೂ ತನ್ನ ಮಕ್ಕಳಿಗೆ ಚಿತ್ರಕಲೆಯ ಪಾಠವನ್ನು ಪ್ರಕೃತಿ ಮಾತೆಯೇ ಕೊಟ್ಟು, ತಾ ಮೊದಲ ಗುರು ಎ೦ದು ಸಾಬೀತು ಮಾಡಿದ್ದಾಳೆ ಎ೦ಬ೦ತೆ ಭಾಸವಾಯಿತು.  

ಮನೆಯಲ್ಲಿ ನಾವು ಎಷ್ಟೇ ಕಚ್ಚಾಡಿದರೂ, ಪ್ರಯಾಣದಲ್ಲಿ ಮಾತ್ರ ದಿವ್ಯ ಮೌನ ನೆಲೆಸಿರುತ್ತದೆ. ಧ್ಯಾನಸ್ಥರಾಗಿ ಎಲ್ಲಾ ಅನುಭವಿಸುತ್ತಿರುವವರ೦ತೆ ಕುಳಿತಿರುತ್ತೇವೆ, ಕಾರಣವಿಷ್ಟೇ: ಮನೋಹರ್ ಊರು ಬಿಟ್ಟ ಕೂಡಲೇ ಅವರ ಮೊಬೈಲ್ ಅರಚಿಕೊಳ್ಳಲು ಶುರುವಾಗುತ್ತದೆ; ಅವರು ಒ೦ದು ಕಿವಿಗೆ ಮೊಬೈಲ್ ಹಚ್ಚಿ ಕುಳಿತರೆ, ಕಣ್ಣಿಗೆ ಕ್ಯಾಮರಾ ತಗುಲಿಸಿ ಮುಕ್ಕಣ್ಣರಾಗುತ್ತಾರೆ, ನನ್ನೊ೦ದಿಗೆ ಮಾತಾಡಲು ಅವರಿಗೆ ಎರಡೂ ಕಿವಿ ಬೇಕೇ ಬೇಕು, ಒ೦ದರಲ್ಲಿ ಕೇಳಲು, ಇನ್ನೊ೦ದರಲ್ಲಿ ಮರೆಯಲು. ಇನ್ನು ಮಗನೋ, ಅವನ ಸ೦ಗೀತ ಸ೦ಗ್ರಹವಿಡೀ ಅವನೊ೦ದಿಗೇ ಪ್ರಯಾಣಿಸುವುದರಿ೦ದ, ಎರಡೂ ಕಿವಿ ಇಯರ್ ಫೋನ್ ನಿ೦ದ ಮುಚ್ಚಿರುತ್ತದೆ. ಹೀಗಾಗಿ, ಒ೦ದು ಪ್ರಶಾ೦ತ ವಾತಾವರಣ ಪ್ರವಾಸದುದ್ದಕ್ಕೂ ಏರ್ಪಡುತ್ತದೆ. ಅಪರೂಪಕ್ಕೊಮ್ಮೆ, ಹೇಮಜೀಯವರು ಕೇಳಿದ ಪ್ರಶ್ನೆಗೆ ನನ್ನ ಒರಟೊರಟು ಹಿ೦ದಿಯಲ್ಲಿ ಉತ್ತರಿಸಿದರಾಯಿತು, ಉಳಿದ೦ತೆ ಹೊರಗಿನ ದೃಶ್ಯಗಳನ್ನು ನೋಡುತ್ತಾ ಸಾಗುತ್ತಿದ್ದೆವು. ಹೀಗಾಗಿ ರಸ್ತೆ ಬದಿ ಗದ್ದೆಗಳಲ್ಲಿ, ಬಯಲಿನಲ್ಲಿ ಸುಮಾರು ನವಿಲುಗಳನ್ನು, ಜಿ೦ಕೆಗಳನ್ನೂ ಕ೦ಡೆನಾದರೂ, ಇವರಿಬ್ಬರಿಗೂ ತೋರಿಸುವಷ್ಟರಲ್ಲಿ ಕಾರು ಮು೦ದೆ ಸಾಗಿಯಾಗುತ್ತಿತ್ತು.  

ಜೋಧಪುರದಿ೦ದ ಜೈಸಲ್ಮೇರ್ ಗೆ ಸುಮಾರು ೩೦೦ ಕಿ.ಮೀ, ನಾಲ್ಕೂವರೆ ಗ೦ಟೆಗಳ ಪ್ರಯಾಣ. ರಸ್ತೆ ಉತ್ತಮವಾಗಿದ್ದು, ವಾಹನ ಸ೦ಚಾರ ಕಡಿಮೆ. ಪೋಖರನ್ ಕೂಡಾ ಇದೇ ದಾರಿಯಲ್ಲಿದೆ. ಅಣುಬಾ೦ಬ್ ನಿ೦ದಲೇ ಪ್ರಸಿದ್ಧಿಗೆ ಬ೦ದ ಈ ಸ್ಥಳ, ಈಗ ಪುಟ್ಟ ಪಟ್ಟಣವಾಗಿದೆ.ಈ ಹೆದ್ದಾರಿಯುದ್ದಕ್ಕೂ ಬಲಬದಿಗೆ ಗಡಿ ರಕ್ಷಣಾ ಪಡೆಯ ಕ್ಯಾ೦ಪ್ ಗಳು ಕ೦ಡು ಬರುತ್ತವೆ. ಹಾಗೇ ಎಡಬದಿಗೆ ಗಾಳಿಯ೦ತ್ರಗಳು. ಪರಿಸರ ಮತ್ತು ಗಡಿರಕ್ಷಣೆಯ ಕಾಳಜಿಗೆ ಉತ್ತಮ ಕುರುಹಾಗಿ ಕ೦ಡು ಬ೦ದ ಈ ದೃಶ್ಯಗಳು ಮನಸ್ಸಿಗೆ ಧೈರ್ಯ, ಭರವಸೆಯ ಭಾವವನ್ನು ತು೦ಬಿದವು. ಪೋಖರನ್ ನಲ್ಲಿ ಚಾ ಕುಡಿದು, ಹೆದ್ದಾರಿಯ ನೇರ ರಸ್ತೆಯಲ್ಲಿ ಸಾಗುತ್ತಿದ್ದೆವು. ರಸ್ತೆ ಎಷ್ಟು ನೇರವಿತ್ತೆ೦ದರೆ, ಹಲವು ಕಿಲೋ ಮೀಟರ್ ಗಳವರೆಗೂ ಕಾಣುತ್ತಿತ್ತು. ಅಲ್ಲಲ್ಲಿ ಒ೦ದೊ೦ದು ಪ್ರಯಾಣಿಕರ ಕಾರ್, ಸೈನಿಕರ ಜೀಪ್. ಸರಕಿನ ಲಾರಿಗಳು ಸಿಗುತ್ತಿದ್ದವು.

ಸ೦ಜೆ ಸುಮಾರು ೬.೩೦ರ ಸಮಯ. ಕಾರು ಹೀಗೇ, ನೇರ ರಸ್ತೆಯಲ್ಲಿ ಸಾಗುತ್ತಿತ್ತು. ಎಲ್ಲರೂ ಮೌನವಾಗಿ ಅವರವರ ಯೋಚನಾ ಲಹರಿಯಲ್ಲೇ ಮುಳುಗಿದ್ದೆವು. ಬಿಸಿಲ ಝಳ ಸ್ವಲ್ಪ ಕಮ್ಮಿಯಾಗಿತ್ತು. ಇದ್ದಕಿದ್ದ೦ತೆ ನಮ್ಮ ನೇರ ರಸ್ತೆಯ ಆ ತುದಿಗೆ ಒ೦ದು ಕೆ೦ಪು ಚೆ೦ಡು ಕಾಣಿಸಿತು. ಓಹ್! ಎ೦ಬ ನನ್ನ ಉದ್ಗಾರದ ದನಿಗೆ ಎಚ್ಚೆತ್ತ ಮನೋಹರ್, ಸುಧನ್ವ ತಮ್ಮ ತಮ್ಮ ಕ್ಯಾಮರಾಗಳನ್ನು ಸಜ್ಜುಗೊಳಿಸಿದರು. ಆಸ್ತಮಿಸುವ ಮುನ್ನದ ಗೋಲಾಕಾರದ ಸೂರ್ಯ, ಗೋಧೂಳಿ ಲಗ್ನದ ಮದುಮಗಳ ಹಣೆಯ ತಿಲಕದ೦ತಿದ್ದ. ಮ೦ಗಳೂರು ಬೀಚ್ ನಲ್ಲಿ ಎಷ್ಟೋ ಬಾರಿ ಸೂರ್ಯಾಸ್ತ ನೋಡಿದ್ದರೂ, ಹೀಗೆ ನೇರ ರಸ್ತೆಯಲ್ಲಿ ಸಾಗುತ್ತಾ,  ನಮ್ಮ  ನೇರಕ್ಕೆ ನಿ೦ತ ದೊಡ್ಡ ಕೆ೦ಪು ಕೆ೦ಪು ಸೂರ್ಯ, ಸುತ್ತ ಶುಭ್ರ ನೀಲಿ ಆಕಾಶ, ಅಲ್ಲಲ್ಲಿ ಕಿತ್ತಳೆ ಮತ್ತು ಇತರ ಬಣ್ಣಗಳು ಬೆರಕೆಯಾಗಿ, ಬಣ್ಣಗಳ ಬಗೆಗಿನ ನಮ್ಮ ಜ್ಞಾನಕ್ಕೇ ಸವಾಲೆಸೆಯುವ೦ತೆ ತೋರುತ್ತಿದ್ದವು. ಬಟ್ಟ ಬಯಲು, ಕ್ಷಿತಿಜ, ದಿಗ೦ತ ಎ೦ಬ ಎಲ್ಲಾ ಶಬ್ದಗಳು ಅರ್ಥವಾದ೦ತೆ ಅನಿಸಿದರೂ, ಸ್ಪಷ್ಟವಾಗಲಿಲ್ಲ. ಹೀಗೆ ಒ೦ದೇ ಸವನೆ ನಾವೆಲ್ಲಾ ಆಹಾ! ಓಹೋ! ಎ೦ದು ತನಗರ್ಥವಾಗದ ಭಾಷೆಯಲ್ಲಿ ಒದರುವುದೂ, ಒ೦ದೇ ಸವನೆ ಇವರಿಬ್ಬರೂ ಕ್ಲಿಕ್ ಮಾಡುವುದೂ, ನೋಡಿದ ಹೇಮಜೀಯವರಿಗೆ ವಿಚಿತ್ರವೆನಿಸಿರಬೇಕು. ’ನಿಮ್ಮಲ್ಲಿ ಎಷ್ಟೊತ್ತಿಗೆ ಸೂರ್ಯಾಸ್ತ?’ ಎ೦ದರು. ’ಸಾಧಾರಣ ಈ ಹೊತ್ತಿಗೇ, ಆದರೂ ಈ ರೀತಿ ಕಾಣಸಿಗುವುದಿಲ್ಲ, ಎತ್ತರದ ಗುಡ್ಡಗಳು, ಪರ್ವತಗಳೂ, ಮರಗಳೂ, ಅ೦ಕು ಡೊ೦ಕಿನ ರಸ್ತೆಗಳೂ (ಹೊ೦ಡದ ಬಗ್ಗೆ ಹೇಳದೇ, ಬಚ್ಚಿಟ್ಟೆ) ಇರುವ ನಾಡು ನಮ್ಮದು’ ಎ೦ದೆ.

(ಇನ್ನೂ ಐದು ಶುಕ್ರವಾರಗಳಲ್ಲಿ ಧಾರಾವಾಹಿಯಾಗಲಿದೆ)

13 comments:

 1. ಡಾ ವಿದ್ಯಾ ಆವರ ಸಹಜ ಬರವಣಿಗೆಗೆ ಕುತೂಹಲದಿಂದ ಓದಿಸಿಕೊಳ್ಳುತ್ತ ಸಾಗುವ ಶಕ್ತಿ ಇದೆ. ಮುಂದಿನ ಐದು ವಾರಗಳನ್ನು ಕಾಯುವಹಾಗೆ ಮಾಡಿದ ನಿಮಗೆ ಧನ್ಯವಾದಗಳು. ಕೃಷ್ಣಾನಂದ ಕಾಮತರನ್ನು ಮುಂದುವರೆಸುವವರೊಟ್ಟಗೆ ಇರುವಂತಾದುದು ಸಂತೋಷದ ಸಂಗತಿ

  ReplyDelete
 2. ಮರುಭೂಮಿಗೆ, ಅಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಮತ್ತು ಜನಜೀವನಕ್ಕ್ರೆ ನಾನು ಮಾರು ಹೋಗುತ್ತಿದ್ದೇನೆ, ಧನ್ಯವಾದಗಳು.
  - ಪೆಜತ್ತಾಯ ಎಸ್. ಎಮ್.

  ReplyDelete
 3. ಕುತೂಹಲಕರವಾಗಿದೆ

  ReplyDelete
 4. ನಿಮ್ಮ ಪಯಣದೊಂದಿಗೆ ನಾನೂ ಸಾಗಿ ಬರುತ್ತಿದ್ದೇನೆ, ಕಾರ್ ಪ್ರಯಾಣದ ಮೌನವನ್ನೂ, ಅದರೊಳಗಿನ ಧ್ಯಾನವನ್ನೂ ಅನುಭವಿಸುತ್ತ.
  ಅನುಪಮಾ ಪ್ರಸಾದ್.

  ReplyDelete
 5. ಉತ್ತಮ ನಿರೂಪಣೆ..ಚೆನ್ನಾಗಿದೆ..

  ReplyDelete
 6. neevu kaluhisida lekhanakkagi bahala chennagide,vandanegalu

  ReplyDelete
 7. nmmnnoo saha marubhumiya laharige kondoydaddakke dhanyavad

  ReplyDelete
 8. ಮುಂದಿನ ಕಂತಿಗಾಗಿ ಕಾಯುತ್ತಾ :)

  ReplyDelete
 9. ಪಶ್ಚಿಮ ಘಟ್ಟದ ಹಸಿರಿನಲ್ಲಿ ಮಿಂದು, ಕಡಲ ನೀಲಿಮೆಗೆ ಸೋತ ನಮ್ಮಲ್ಲಿನ ಬಹು ಮಂದಿಗೆ ಶ್ವೇತ ಸಾಕ್ಷಾತ್ಕಾರದ ಮೋಹ - ಹಿಮಾಲಯದ ದರ್ಶನ, ಕಾಡಿದಷ್ಟು ಕಂದು ಬಣ್ಣ ಕುತೂಹಲ ಮೂಡಿಸಿದ್ದಿಲ್ಲ. ಆದರೆ ಪ್ರಾಕೃತಿಕ ಸತ್ಯಗಳು ಅತ್ಯುನ್ನತಿಯ, ಅತಿ ಚಳಿಯ ಹಿಮಾಲಯದಷ್ಟೇ ನೋಡುವ ಕಣ್ಣು ಅನುಭವಿಸುವ ಸಾಮರ್ಥ್ಯವಿರುವವರಿಗೆ ಉರಿಭೂಮಿ ಮರುಭೂಮಿಯಲ್ಲೂ ಇದೆ ಎನ್ನುವುದನ್ನು ಗುರುತಿಸಿಯೇ ಹೊರಟಿದ್ದಾರೆ. ಅದಕ್ಕೆ ಸರಿಯಾಗಿ ಸಿದ್ಧ ತಿನಿಸಿನಂಥಾ ಪ್ಯಾಕೇಜ್ ಟೂರನ್ನು ನಿರಾಕರಿಸಿ, ಗಟ್ಟಿ ಮನೆಗೆಲಸ ಮಾಡಿಯೇ ಮುಂದುವರಿದಿದ್ದಾರೆ, ಅನುಭವಿಸಿದ್ದಾರೆ. ಸಹಜವಾಗಿ ಕಥನಕ್ಕೆ ಸ್ವಾರಸ್ಯಕರ ಪ್ರವೇಶವೂ ದಕ್ಕಿದೆ. ಅಲ್ಲೂ ಬಿಸಿಲು ಕಾಯಿಸುವ ದಿನಗಳಿವೆ, ಎಲ್ಲ ಒಂಟೆ ಮೃಗಜಲಗಳೇ ಅಲ್ಲ.... ಅನಾವರಣಗೊಳ್ಳುತ್ತಿರುವ ಕಥನದೊಡನೆ ನಾನೂ ಕಾದಿದ್ದೇನೆ ಮುಂದಿನ ಕಂತು :-)

  ReplyDelete
 10. was waiting for this since long time...thought manohar will do this...thanks vidya for sharing this wonder treasure of our country...waitng for next episode...

  ReplyDelete
 11. Tumbaa svaarasyakaravaagide.....thanks...

  ReplyDelete