15 July 2014

ಜೀವನದಲ್ಲಿ ಸುಖ ಕಾಣದೆ ಮಹತ್ತರವಾದ ಒಂದು ನಿರ್ಧಾರವನ್ನು ಮಾಡುತ್ತೇನೆ.

ಅಧ್ಯಾಯ ಹನ್ನೆರಡು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]

ವಿ-ಧಾರಾವಾಹಿಯ ಹದಿನಾಲ್ಕನೇ ಕಂತು

ಮಿ. ಮೈಕಾಬರರ ದಿವಾಳಿ ಅರ್ಜಿ ತನಿಕೆ ನಡೆದು ಅವರು ಜೈಲಿನಿಂದ ಬಿಡುಗಡೆ ಹೊಂದಿದರು. ಇದಕ್ಕಾಗಿ ಕೈದಿಗಳೆಲ್ಲ ಸೇರಿ, ಹೋಟೆಲು ಸರಬರಾಯಿಗಳಿಂದ, ಅವರ ಸನ್ಮಾನಾರ್ಥವಾಗಿ ಒಂದು ಔತಣವನ್ನು ಕೊಟ್ಟರು. ಮಿ. ಮೈಕಾಬರರು ಆ ಸಂತೋಷದ ಔತಣ ಪಡೆಯುವಾಗ ಮನೆಯವರು ಸಹ ಪಡೆಯಬೇಕೆಂದು ಮಿ. ಮೈಕಾಬರರ ಪತ್ನಿ ಮತ್ತು ನಾನೂ ಸೇರಿ, ನಮ್ಮ ಮನೆಯಲ್ಲೇ ಒಂದು ವಿಶೇಷ ಭೋಜನವನ್ನೇರ್ಪಡಿಸಿಕೊಂಡೆವು.

ನಮ್ಮ ಕೂಟದಲ್ಲೂ ಸಂತೋಷಕ್ಕೆ ಏನೂ ಕೊರತೆಯಿರಲಿಲ್ಲ. ಮಿಸೆಸ್ ಮೈಕಾಬರರು ಹೇಗೂ ತುಂಬಾ ಮಾತಾಡುವವರು. ಆ ದಿನವಂತೂ ಅವರು ಅವರ `ಕುಟುಂಬ’ದವರ ಗುಣಗಳನ್ನು ಹೊಗಳತೊಡಗಿದರು. ಅವರ ಬಾಲ್ಯದ ಅನುಭವಗಳನ್ನೂ ತಾಯಿ ಮೃತಪಟ್ಟದ್ದೂ ತಂದೆ ಮೃತಪಟ್ಟದ್ದೂ ಗಂಡನ ಸಾಲಗಳು ಏರುತ್ತ ಬಂದದ್ದೂ ಇಂಥ ಅನೇಕ ಸಂಗತಿಗಳನ್ನು ಹೇಳಿದರು. ಅವರ ಕುಟುಂಬವೆಂದರೆ ತಾಯಿಯ ಮನೆಕಡೆಯವರು ಮಾತ್ರವೆಂಬಂತೆ, ತಾಯಿಯ ಕಡೆಯವರನ್ನೇ ಬಹು ಹೆಚ್ಚಾಗಿ ಹೊಗಳುವುದು ಅವರ ಅಭ್ಯಾಸವಾಗಿತ್ತು.

ಇಂಥ ಸಂತೋಷ ಕೂಟದಲ್ಲಿ ನಾನೂ ಸಹ ಸ್ವಲ್ಪವಾದರೂ ಮಾತಾಡುವುದು ಮರ್ಯಾದೆಯೆಂದು ಕೆಲವು ವಿಷಯಗಳನ್ನು ಮಾತಾಡಿದೆ. ಈ ಮಾತುಗಳಲ್ಲಿ, ಮುಂದೆ ಮಿ. ಮೈಕಾಬರರು ಜೈಲಿನಿಂದ ಹೊರಬಂದ ನಂತರ, ಅವರ ಕುಟುಂಬ ಯಾವ ಕಸಬನ್ನು ಕೈಕೊಳ್ಳುವುದೆಂದು ಸ್ವಾಭಾವಿಕವಾಗಿ ಕೇಳಿದೆ. ಅದಕ್ಕೆ ಮಿಸೆಸ್ ಮೈಕಾಬರರು ಬಹು ಉತ್ಸಾಹದಿಂದಲೇ ಉತ್ತರವಿತ್ತರು.

“ನಮ್ಮ ಮುಂದಿನ ಮಾರ್ಗ ಈಗಲೇ ನಿರ್ಣೀತವಾಗಿದೆ. ನಮ್ಮ ಕುಟುಂಬದವರ ಅಭಿಪ್ರಾಯ ಪ್ರಕಾರ, ನನ್ನ ಪತಿಯವರ ಉತ್ತಮ ಯೋಗ್ಯತೆಗೆ ತಕ್ಕಂಥ ಕೆಲಸ ಪ್ಲಿಮತ್ತಿನಲ್ಲಿದೆ, ಅಲ್ಲಿ ಸುಂಕದ ಇಲಾಖೆಯಲ್ಲಿ ಅವರಿಗೆ ಕೆಲಸ ಸಿಕ್ಕುವುದು” ಎಂದು ತಿಳಿಸಿದರು.
“ಹಾಗಾದರೆ, ಅವರು ಅಲ್ಲಿಗೆ ಸದ್ಯವೇ ಹೋಗಲಿದೆಯೇ ಅಥವಾ ನೀವೆಲ್ಲರೂ ಒಟ್ಟಾಗಿಯೇ ಹೋಗುವಿರೋ?” ಎಂದು ನಾನು ಕೇಳಿದೆ.
“ಸದ್ಯವೇ ಹೋಗಬಹುದು” ಎಂದರು ಮಿಸೆಸ್ ಮೈಕಾಬರರು. ನಾನು ಕುತೂಹಲದಿಂದ ಮತ್ತೂ ವಿಚಾರಿಸಿದೆ – “ಪ್ರಕೃತ ಅವರೊಬ್ಬರೇ ಹೋಗಿ, ಹಿಂದಿನಿಂದ ನೀವು ಹೋಗುವುದೋ ಅಥವಾ ನೀವೆಲ್ಲರೂ ಒಟ್ಟಾಗಿಯೇ ಹೋಗುವಿರೋ?”

ನನ್ನ ಈ ಸ್ವಾಭಾವಿಕವಾದ ಪ್ರಶ್ನೆ ಅವರ ಮನಸ್ಸಿನಲ್ಲಿ ಮಾತ್ರ ಸ್ವಲ್ಪ ಕಳವಳವನ್ನೇ ಎಬ್ಬಿಸಿತು. ಪತಿಪತ್ನಿಯರ ಅಗಲುವಿಕೆಗೆ ಸಂಬಂಧಪಟ್ಟು ಅವರು ಏನೇನೋ ವಿಚಿತ್ರವಾದ ಕಲ್ಪನೆಯನ್ನು ಮಾಡಿಕೊಂಡು, ಸ್ವಲ್ಪ ಮನಸ್ಸಿನ ವಿಕಲ್ಪವನ್ನೇ ತಂದುಕೊಂಡು ಅಳತೊಡಗಿದರು. ನಮ್ಮ ಊಟದ ಮಧ್ಯೆ ಮಧ್ಯೆ ಅವರು ಸೇವಿಸುತ್ತಿದ್ದ ಪಾನೀಯದ ಪ್ರಭಾವವೂ ಕೂಡಿಕೊಂಡು ಪೂರ್ಣ ಮತಿ ಕೆಟ್ಟವರಂತೆ ಏನೇನೋ ಮಾತಾಡುತ್ತಾ, ಪತಿ ಪತ್ನಿಯರ ಅಗಲುವಿಕೆ, ವೈಧವ್ಯ, ಇತ್ಯಾದಿಗಳನ್ನೆಲ್ಲ ಕಲ್ಪಿಸಿಕೊಂಡು ಸ್ಮೃತಿಯೇ ತಪ್ಪಬಹುದಾದಷ್ಟು ಬಲವಾಗಿ ದುಃಖದಿಂದ ರೋದಿಸತೊಡಗಿದರು. ಇಂಥ ಹದಗೆಟ್ಟ ಪರಿಸ್ಥಿತಿಯನ್ನು ಮಿ. ಮೈಕಾಬರರಿಗೆ ತಿಳಿಸದೆ ನಿರ್ವಾಹವಿಲ್ಲವೆಂದು ನಾನು ಆ ಕೂಡಲೇ ಜೈಲಿಗೆ ಓಡಿದೆನು.

ಜೈಲಿನ ಕ್ಲಬ್ಬಿನಲ್ಲಿ ಅವರೆಲ್ಲರ ಔತಣ ಸಮಾರಂಭ ನಡೆಯುತ್ತಿತ್ತು. ಉದ್ದವಾದ ಮೇಜಿನ ತುದಿಯಲ್ಲಿ ಮಿ. ಮೈಕಾಬರರೂ ಸಭಾಧ್ಯಕ್ಷರಾಗಿ ಕುಳಿತು, ತುಂಬಿದ್ದ ಒಂದು ವೈನ್ ಗ್ಲಾಸನ್ನು ಕೈಯ್ಯಲ್ಲಿ ಹಿಡಿದುಕೊಂಡು –
“ಕಷ್ಟವೆಲ್ಲ ಪಾರಾಯ್ತು, ಇಷ್ಟವೆಲ್ಲ ದೊರಕ್‍ಹೋಯ್ತು,
ಚದುರೇಯ  ಜತೆಗೂಡಿ ಕುದುರೆ ಹತ್ತಿ ಓಡಿರೋ ಓಡಿರೋ!” ಎಂದು ಒಂದು ಪದವನ್ನು ಹೇಳುತ್ತಿದ್ದರು. ಸಭಿಕರೆಲ್ಲ ಆ ಪದವನ್ನು ಮೇಳೈಸಿ ಹಾಡುತ್ತಿದ್ದರು. ನಾನು ಅವರ ಸಮೀಪಕ್ಕೆ ಹೋಗಿ ನಮ್ಮಲ್ಲಿ ನಡೆದ ಸಂಗತಿಯನ್ನು ಸೂಕ್ಷ್ಮವಾಗಿ ತಿಳಿಸಿದೆನು. ಸಂತೋಷ ಶಿಖರದಲ್ಲಿದ್ದ ಮಿ. ಮೈಕಾಬರರು ಏಕಾಏಕಿ ದುಃಖದ ಕೂಪಕ್ಕೇ ಧುಮುಕಿದರು – ತಮ್ಮ ಕೈಯ್ಯಲ್ಲಿದ್ದ ಗ್ಲಾಸನ್ನು ಕೆಳಗಿಟ್ಟು, ಎದುರಿದ್ದ ಒಂದೆರಡು ತಿಂಡಿಗಳನ್ನು ಅವು ಏನೆಂದು ಗಣನೆಯಿಲ್ಲದೆ ಜೇಬಿನಲ್ಲಿ ತುರುಕಿಕೊಂಡು, ಸೀದಾ ನಮ್ಮ ಕೋಣೆಗೆ ಓಡಿಬಂದರು. ಬಂದದ್ದೇ ಹೆಂಡತಿಯನ್ನು ಎತ್ತಿ ಹಿಡಿದುಕೊಂಡು –
“ಏನು ಎಮ್ಮಾ, ನನ್ನ ಮುದ್ದು, ಏನಾಯಿತೇ ನಿನಗೆ?” ಎಂದು ಕೇಳಿದರು.
“ನಿಮ್ಮನ್ನು ನಾನೆಂದೂ ಬಿಟ್ಟಿರಲಾರೆನು” ಎಂದರು ಮಿಸೆಸ್ ಎಮ್ಮಾ ಮೈಕಾಬರರು.
“ಅದು ನನಗೆ ಗೊತ್ತಿದೆ ಕಣೇ” ಎಂದನ್ನುತ್ತಾ ಮಿ. ಮೈಕಾಬರರು ಪತ್ನಿಯನ್ನು ಅಪ್ಪಿಕೊಂಡರು.
“ನೀವು ನನ್ನ ಮಕ್ಕಳ ತಂದೆ – ನಮ್ಮ ಅವಳಿ ಮಕ್ಕಳ ಪ್ರೀತಿಯ ತಂದೆ – ನನ್ನ ಪ್ರೇಮದ ಸೇವೆಯನ್ನು ಸ್ವೀಕಸಿರುವ ಒಲವಿನ ಗಂಡ” ಎಂದನ್ನುತ್ತಾ ಚೀರುತ್ತಾ ದುಃಖಾವೇಶದಲ್ಲಿ ಬಳುಕಿ ಬೀಳುತ್ತಾ ಬೀಳುವುದನ್ನು ತಡೆದು ಚೇತರಿಸಿಕೊಳ್ಳುವುದಕ್ಕಾಗಿ ಶ್ರಮಪಟ್ಟು ಕಷ್ಟದ ಉಸಿರು ಬಿಡುತ್ತಾ ತನ್ನ ದುಃಖದ ಭರದಲ್ಲಿ ಪುನಃ –
“ನಾನೆಂದೆಂದಿಗೂ ಮಿ. ಮೈಕಾಬರರನ್ನು ಬಿಡೆನು – ಬಿಟ್ಟು ದೂರವಿರಲಾರೆ – ಇರಲಾರೆನಪ್ಪಾ” ಎಂದು ಬಹು ಕೀರು ಧ್ವನಿಯಿಂದ ಮತ್ತಷ್ಟು ಉದ್ದವಾಗಿ ಅತ್ತರು.

ಇದನ್ನೆಲ್ಲ ಕಂಡು ಮಿ. ಮೈಕಾಬರರು ಗಾಬರಿಗೊಂಡರು. ಕೊನೆಗೆ ಈ ಪ್ರಸಂಗ ಉದ್ಭವಿಸಿದ್ದು ಹೇಗೆ – ಎಮ್ಮನ ಕೋಮಲ ಹೃದಯದಲ್ಲಿ ಪತಿಯಿಂದ ಅಗಲುವುದೆಂಬ ಕೂರಲಗನ್ನು ಇರಿದವರು ಯಾರು – ಇತ್ಯಾದಿಯಾಗಿ, ಕಾದಂಬರಿಗಳಲ್ಲಿ ಕವಿಗಳು ಮಾತುಗಳನ್ನು ಪೋಣಿಸುವ ವಿಧಾನದಲ್ಲಿ, ಮಿ. ಮೈಕಾಬರರು ಪ್ರಶ್ನಿಸುತ್ತಾ ತಾವೂ ಅಳತೊಡಗಿದರು. ಇಷ್ಟರಲ್ಲಿ ಮಿಸೆಸ್ ಮೈಕಾಬರರು ದುಃಖದಿಂದ ಮೂರ್ಛಿತರೇ ಆಗಿದ್ದರು. ಇದನ್ನೆಲ್ಲಾ ಕಂಡೂ ಕೇಳಿಯೂ ನಾನೂ ಅಳತೊಡಗಿದೆನು. ಅಲ್ಲೇ ನಾನಿದ್ದರೆ ನನ್ನ ಅಳುವು ನಿಲ್ಲಲಾರದೆಂದು ತಿಳಿದು ನಾನು ಅಲ್ಲಿಂದ ಹೊರಗೆ ಹೋದೆನು.
ಸ್ವಲ್ಪ ಹೊತ್ತಿನಲ್ಲಿ ಮಿ. ಮೈಕಾಬರರು ಹೆಂಡತಿಯನ್ನು ಸಮಾಧಾನಪಡಿಸಿ ತಮ್ಮ ಕ್ಲಬ್ಬಿಗೆ ಹೊರಟುಹೋದರು.

ಈ ಸಂಗತಿಗಳು ನಡೆದು ಒಂದು ವಾರದಲ್ಲಿ ಅವರು ಸಂಸಾರ ಸಮೇತರಾಗಿ ಪ್ಲಿಮತ್ತಿಗೆ ಹೋಗುವ ದಿನ ಬಂತು. ಅವರು ಬಂಡಿಯನ್ನೇರುವ ಮೊದಲು, ಪ್ಲಿಮತ್ತಿನ ಒಬ್ಬ ದೊಡ್ಡ – ಗೌರವಾನ್ವಿತ – ಸರಕಾರದ ಅಧಿಕಾರಿಯ ಠೀವಿಯಿಂದ, ನನ್ನ ಭವಿಷ್ಯದ ಪ್ರಯೋಜನಕ್ಕೆಂದು ಈ ಮುಂದಿನಂತೆ ಕೆಲವು ಮಾತನ್ನಾಡಿದರು –
“ಮಿ. ಕಾಪರ್ಫೀಲ್ಡ್, ನಿಮಗೆ ಸ್ನೇಹಿತರಲ್ಲಿ, ಅನಾಥರಲ್ಲಿ – ಅರ್ಥಾತ್, ಸಮಾಜದ ದೀನ ದರಿದ್ರರಲ್ಲಿ – ಕರುಣವೂ, ಪ್ರೇಮವೂ ತುಂಬಾ ಇದೆ. ಈ ಗುಣಗಳ ಕಾರಣವಾಗಿ ನೀವು ದುಃಖದ ಕರ್ಮೋಡಗಳಲ್ಲಿ ಸಿಕ್ಕಿ ಬೆಳಕಿಗೆ ಬರಲಾರದ ಅಶಕ್ತ ಸ್ನೇಹಿತರನ್ನು ರಕ್ಷಿಸಿ, ಉದ್ಧರಿಸಿ, ಬೆಳಕಿಗೆ ತರಲು ಶಕ್ತರಾಗಿದ್ದೀರಿ. ನೀವು ಪ್ರಾಯದಲ್ಲಿ ಚಿಕ್ಕವರೂ ಜ್ಞಾನ ವ್ಯವಹಾರ ಕೌಶಲಗಳಲ್ಲಿ ಅನುಭವವೃದ್ಧರೂ ಆಗಿರುವಿರಿ. ಆದರೆ ನಾನು ಜ್ಞಾನವೃದ್ಧನೂ ವಯೋವೃದ್ಧನೂ – ಎರಡೂ – ಆಗಿರುವುದರಿಂದ, ಮತ್ತು ನಮ್ಮೀರ್ವರೊಳಗಿನ ಈವರೆಗಿನ ಪ್ರೇಮದ ಸಲಿಗೆಯಿಂದ – ನಿಮ್ಮ ಭಾವೀ ಅಭ್ಯುದಯಕ್ಕಾಗಿ ಎರಡು ಬುದ್ಧಿ ವಚನಗಳನ್ನು ಹೇಳಬಯಸುತ್ತೇನೆ. ಅಂದರೆ, ಯಾವ ವಿಷಯವನ್ನು ನಾನು ಪರಿಪೂರ್ಣವಾಗಿ ಅರಿತಿದ್ದರೂ ಅದನ್ನು ಅನುಷ್ಠಾನಕ್ಕೆ ತರದೆ ಇಂದು ಒಂದು ಜೀವಚ್ಛವವಾಗಿ ನಿಮ್ಮೆದುರು ನಿಂತಿದ್ದೇನೋ ಅಂಥಾ ಅರಿವಿನ ಮರ್ಮವನ್ನು ನಿಮಗೆ ತಿಳಿಸುವೆನು –
“ಮೈಗಳ್ಳನೇ ಸಮಯಗಳ್ಳ – ಅರ್ಥಾತ್, ವಿಲಂಬವೇ ಸರ್ವನಾಶ. ಇಂದು ಮಾಡಬೇಕಾದುದನ್ನು ನಾಳೆಗೆ ಎಂದು ಇಡಬೇಡಿ. ಇಂದೇ ಮಾಡಿ ಮುಗಿಸಿಬಿಡಿ. ಈ ತತ್ವಾನುಷ್ಠಾನವೇ ನಿಮ್ಮ ಅಭ್ಯುದಯಕ್ಕೆ ಬೇಕಾದ ಮಾರ್ಗ” ಅಂದರು ಮಿ. ಮೈಕಾಬರರು.
ಅಷ್ಟರಲ್ಲೇ – “ನಮ್ಮ ಕುಟುಂಬದಲ್ಲಿ ತಂದೆಯವರನ್ನುತ್ತಿದ್ದುದೂ ಇದನ್ನೇ” ಎಂದು ಮಿಸೆಸ್ ಮೈಕಾಬರರೆಂದರು.
“ನಿಜ, ನಿಜ – ನಿನ್ನ ತಂದೆಯವರ ಅಭಿಪ್ರಾಯವೂ ಹಾಗಿತ್ತು. ಅವರು ಮಹಾಜ್ಞಾನಿ. ಹಾಗಾಗಿ, ನಾಳೆ ಆಗಬೇಕಾದುದನ್ನು ಈ ಹೊತ್ತೇ ಮಾಡುವುದು ಉತ್ತಮವೆಂದೇ, ಸ್ವಲ್ಪ ಹಿಂದಿನಿಂದ ಆಗಬೇಕಾಗಿದ್ದ ನಮ್ಮಿಬ್ಬರ ಮದುವೆಯನ್ನು ಅಷ್ಟೊಂದು ಎಳೆ ಪ್ರಾಯದಲ್ಲೇ ಮಾಡಿಸಿದರು” ಹೀಗೆಂದು, ಮರುಕ್ಷಣ, ಈ ಮಾತುಗಳಿಂದ ತನ್ನ ಮಾವನನ್ನು ತಿಳಿಯದೇ ಹೀಯಾಳಿಸಿದಂತಾಯ್ತೆಂದು, ಪುನಃ ಅನ್ನತೊಡಗಿದರು –
“ಎಳೆ ಪ್ರಾಯದ ನನ್ನ ಮದುವೆಯ ಸಾಲವು ಇನ್ನೂ ಬಾಕಿಯಿರುವುದಾದರೂ ಆ ಬಡತನವೇ ನನ್ನನ್ನು ಇಂದು ಪ್ಲಿಮತ್ತಿನ ಮಾರ್ಗದಲ್ಲಿ ನಿಲ್ಲಿಸಿದೆಯಷ್ಟೆ? ಇಂದಿನ ಸ್ಥಿತಿ ಮುಂದಿನ ಪರಿಸ್ಥಿತಿಗೆ ಕಾರಣವೆಂಬ ತತ್ವವನ್ನೇ ವಿಚಾರಪೂರ್ವಕ ನೋಡಿದ್ದಾದರೆ, ಮುಂದಿನ ಏಳಿಗೆಗಳಿಂದ ಹಿಂದಿನ ಸಂದರ್ಭಗಳಿಗೆ ಬೆಲೆ ಕಟ್ಟಬಹುದಷ್ಟೆ. ನೋಡಿ, ಪ್ಲಿಮತ್ತಿನ ಸುಂಕದ ಇಲಾಖಾಧಿಕಾರದ ಸರ್ವತೋಮುಖವಾದ ಅಭ್ಯುದಯವನ್ನು ಗ್ರಹಿಸುವಾಗ – ಇದಕ್ಕೆಲ್ಲಾ ಕಾರಣವಾದ – ನಮ್ಮ ಮಾವನವರ ಮುಂಜಾಗ್ರತೆಗೆ ನಾವು ಋಣಿಗಳಾಗಿರಬೇಕು. ಅರ್ಥಾತ್, ವಿವೇಚನೆ ಬೇಕು- ಮನುಷ್ಯನಿಗೆ – ನನ್ನ ಹಿಂದಿನ ಮಾತುಗಳನ್ನು ನೆನಪಿನಲ್ಲಿಡಿ. ಇಪ್ಪತ್ತು ಪೌಂಡು ಉತ್ಪತ್ತಿ – ಹತ್ತೊಂಬತ್ತೂ ಮುಕ್ಕಾಲು ಪೌಂಡು ಖರ್ಚು – ಪರಿಣಾಮ: ಶಾಂತಿ, ಸುಖ. ಅದರ ಬದಲು ಇಪ್ಪತ್ತು ಪೌಂಡು ಉತ್ಪತ್ತಿ, ಖರ್ಚು ಇಪ್ಪತ್ತು ಪೌಂಡು ಒಂದು ಪೆನ್ನಿ – ಪರಿಣಾಮ: ದುರವಸ್ಥೆ, ದುಃಖ – ದುಃಖ ಮಾತ್ರವಲ್ಲ, ಜೀವನ ಲತೆಯೇ ಬಾಡಿ, ಮುದುಡಿ ನಶಿಸುವುದು. ಮನಸ್ಸಿನೆದುರು ಮರುಭೂಮಿಯ ಶೂನ್ಯತೆ, ಅಂಧಕಾರ – ಅರ್ಥಾತ್, ನಾನು ಇಂದು ಆಗಿರುವಂತೆ ನಿರ್ವೀರ್ಯ, ನಿಶ್ಶಕ್ತ, ನಿರ್ಜೀವ ಜಂತು!”

ಇಷ್ಟು ಹೇಳಿ, ದುಃಖಪಟ್ಟು, ದುಃಖಶಮನಕ್ಕಾಗಿ ಸ್ವಲ್ಪ ಬ್ರಾಂದಿಯನ್ನು ಕುಡಿದು ಬಂಡಿಯನ್ನೇರಿದರು. ಬಂಡಿಯನ್ನೇರಿ ಕುಳಿತ ಸಂತೋಷ – ಪ್ಲಿಮತ್ತಿನ ಮುಂದಿನ ಸಂಪದಭಿವೃದ್ಧಿ ಚಿತ್ರಗಳನ್ನೆಲ್ಲ ಗ್ರಹಿಸಿ – ಹರ್ಷಚಿತ್ತದಿಂದ ಕೊನೆಯ ನಾಲ್ಕು ಮಾತುಗಳನ್ನೂ ಆಡಿದರು –
“ಮಿ. ಕಾಪರ್ಫೀಲ್ಡ್ ನಿಮಗೆ ಅತ್ಯಂತ ಶುಭವೂ ಅಭಿವೃದ್ಧಿಯೂ ಆಗಲೆಂದು ದೇವರನ್ನು ಪ್ರಾರ್ಥಿಸುತ್ತೇನೆ. ಕಾಲಚಕ್ರದ ಸೆರೆಯಲ್ಲಿ ಸಿಕ್ಕಿ ಬದುಕಬೇಕಾದ ನಿಮ್ಮ ಜೀವನಕ್ಕೆ ನನ್ನ ಜೀವನವು ಮಾರ್ಗದರ್ಶಕವಾಗಲಿ!” ಎಂದಂದು ಬಂಡಿಯನ್ನು ಹೋಗಗೊಡಿಸಿದರು.

ಒಂದೇ ಕುಟುಂಬದವರಂತೆ ಕಷ್ಟ ಸುಖಗಳಲ್ಲಿ ಭಾಗಿಗಳಾಗಿ ಬಂದಿದ್ದ ನಾವು ಈ ದಿನ ಬೇರೆಯಾಗುವಾಗ ನನಗೆ ಬಹು ದುಃಖವೇ ಆಯಿತು. ನಮ್ಮ ಮನೆಕೆಲಸದ ಅನಾಥ ಬಾಲಕಿಯು ಅಂದೇ ಅನಾಥಾಲಯಕ್ಕೆ ಹೋದಳು.  ನನ್ನ ಜತೆಗಾರರ ಸಹವಾಸ ನನಗೆ ಎಳ್ಳಷ್ಟು ಮೆಚ್ಚುತ್ತಿರಲಿಲ್ಲ. ಮಿ. ಮೈಕಾಬರರು ದೂರವಾದನಂತರ ಪ್ರಪಂಚದಲ್ಲಿ ನನ್ನ ಸಂಬಂಧಿಕರೆಂದು ಯಾರಾದರೂ ಇದ್ದರೆ, ನನ್ನ ಅತ್ತೆ ಮಾತ್ರ ಎಂದು ತಿಳಿಯತೊಡಗಿದೆನು. ಕೊನೆಗೆ ಹೇಗಾದರೂ ಮಾಡಿ ಅತ್ತೆಯ ಮನೆಯನ್ನು ಸೇರಲೇಬೇಕೆಂದು ನಿರ್ಧರಿಸಿದೆ. ನಾನು ಹುಟ್ಟಿದ ದಿನ ಅತ್ತೆಗೂ ನನ್ನ ತಾಯಿಗೂ ನಡೆದಿದ್ದ ಸಂಭಾಷಣೆಗಳನ್ನೆಲ್ಲ ತಾಯಿಯೂ ಪೆಗಟಿಯೂ ನನಗೆ ತಿಳಿಸಿದ್ದರು. ಅತ್ತೆಯ ಕೆಲವು ಮಾತುಗಳನ್ನೂ ನನ್ನ ತಾಯಿಯ ಮೃದುಗೂದಲನ್ನೂ ಸವರುತ್ತಾ ಅವಳನ್ನು ಸಂತೈಸಿದ ಕಾರ್ಯವನ್ನೂ ತಿಳಿದು ಅತ್ತೆ ಮೃದುಸ್ವಭಾವದವಳೇ ಆಗಿರಬೇಕೆಂದು ಊಹಿಸಿದೆ. ಏನೇ ಇದ್ದರೂ, ನನ್ನ ಈ ವರೆಗಿನ ಜೀವನದ ಪರಿಸ್ಥಿತಿಗಿಂಥ ಅತ್ತೆಯ ಸಮೀಪದ ಪರಿಸ್ಥಿತಿ ಹಾಳಾಗಲಾರದೆಂದು ಊಹಿಸಿದೆ. ಯಾವುದೋ ಸಂದರ್ಭಕ್ಕಾಗಿ ಅತ್ತೆಯ ವಿಳಾಸವನ್ನು ತರಿಸಿಟ್ಟುಕೊಂಡೆ. ಅಲ್ಲದೆ, ಪೆಗಟಿಯಿಂದ ಅರ್ಧಗಿನಿ ಸಾಲವನ್ನೂ ತರಿಸಿಕೊಂಡೆ. ಪೆಗಟಿ ಕೊಟ್ಟ ಅತ್ತೆಯ ವಿಳಾಸ ಸಾಕಷ್ಟು ವಿವರವನ್ನೊಳಗೊಂಡಿರಲಿಲ್ಲ – ಡೋವರಿನಲ್ಲಿದ್ದಾಳೆಂದು ಮಾತ್ರ ಅವಳು ತಿಳಿಸಿದ್ದಳು.

ನಾನು ಯಾರಿಗೂ ತಿಳಿಸದೇ ಊರುಬಿಟ್ಟು ಹೋಗಬೇಕೆಂದು ನಿರ್ಧರಿಸಿಕೊಂಡಿದ್ದೆ. ಆದರೆ ನನ್ನ ಹೆಸರು ಹಾಳಾಗಬಾರದೆಂದು ಪ್ರತಿ ವಾರವೂ ವಾರದ ಪ್ರಾರಂಭದಲ್ಲೇ ಸಿಕ್ಕುತ್ತಿದ್ದ ಸಂಬಳದ ಕೆಲಸ ಪೂರ್ತಿಯಾದನಂತರ ಮಾತ್ರ ಊರು ಬಿಡಬೇಕೆಂದು ನಿಶ್ಚೈಸಿಕೊಂಡೆ. ಹಾಗಾಗಿ ಹೊಸ ವಾರದ ಪ್ರಾರಂಭದ ದಿನ ಸಂಬಳ ಬಟುವಾಡೆಯಾಗುವಾಗ ನಾನು ಹಾಜರಾಗಲಿಲ್ಲ.

ನನ್ನ ಬಟ್ಟೆ ಬರಿ ಮೊದಲಾದ ಸಾಮಾನುಗಳನ್ನು ಒಂದು ಪೆಟ್ಟಿಗೆಗೆ ತುಂಬಿ ಅದನ್ನು ನಮ್ಮ ಕಾರ್ಖಾನೆ ವಠಾರದಿಂದ ಸ್ವಲ್ಪ ದೂರ ಸಾಗಿಸಿದನಂತರ ಆ ಪೆಟ್ಟಿಗೆಯ ಮೇಲೆ ನನ್ನ ಹೆಸರು, ವಿಳಾಸಗಳನ್ನು – ಅಂದರೆ, ಡೋವರಿನ ಬಂಡಿ ನಿಲ್ದಾಣದಲ್ಲಿ ನಾನು ಕೇಳುವವರೆಗೆ ಕಾದಿಡಬೇಕೆಂದೆನ್ನುವ ಪತ್ರವನ್ನು – ಬರೆದಿಡಬೇಕೆಂದು ನಿಶ್ಚೈಸಿಕೊಂಡು, ಅಂಥಾ ಒಂದು ಪತ್ರವನ್ನು ಬರೆದು ಜೇಬಿನಲ್ಲಿಟ್ಟುಕೊಂಡು, ಬಾಡಿಗೆ ಬಂಡಿಯನ್ನು ಹುಡುಕುತ್ತಾ ಹೋದೆ.

ಸ್ವಲ್ಪ ದೂರ ಹೋಗುವುದರೊಳಗೆ ಒಬ್ಬ ಬಂಡಿಯವನನ್ನು ಕಂಡೆ. ಅವನನ್ನು ಕಾಣುವಾಗಲೇ ನನಗೆ ಭಯವಾಯಿತು. ನಾನು ಅವನ ಸಮೀಪಕ್ಕೆ ಹೋಗುವುದರ ಮೊದಲೇ, ನನ್ನನ್ನು ನೋಡುತ್ತಾ –
“ಮೂರುಪೆನ್ನಿ ಕ್ರಯದ ಎಳೇ ಕೋತಿ ಮುಖ ನೋಡಿ! ಆ ನಿಂಬೆ ಗಾತ್ರದ ಮುಖವನ್ನು ಎಲ್ಲಿ ಕಂಡರೂ ನಾನು ಗುರುತಿಸಿಯೇನು” ಎಂದು ಚೇಷ್ಟೆ ಮಾಡಿದನು. ಆದರೆ, ಅವನ ಸಹಾಯ ಅಗತ್ಯವಾಗಿದ್ದುದರಿಂದ, ಧೈರ್ಯ ತಂದುಕೊಂಡು ನಾನಂದೆ-
“ಸರ್, ನಮ್ಮ ಮನೆಯ ಒಂದು ಪೆಟ್ಟಿಗೆಯನ್ನು ಡೋವರ್ ಬಂಡಿ ನಿಲ್ದಾಣಕ್ಕೆ ಸಾಗಿಸಿಕೊಡುವ ಉಪಕಾರ ಮಾಡಬಹುದೆ?”
ಈ ಪ್ರಾರ್ಥನೆಗೆ ಅವನು ಒಲಿದನು. ಆರು ಪೆನ್ಸ್ ಬಾಡಿಗೆ ಕೊಡಬೇಕೆಂದು ನಿಶ್ಚಯವಾಯಿತು. ಅವನು ನಮ್ಮ ಮನೆಗೆ ಬಂದು ಪೆಟ್ಟಿಗೆಯನ್ನು ತಾನೇ ಎತ್ತಿ ಬಂಡಿಯಲ್ಲಿಟ್ಟುಕೊಂಡು ಹೊರಟನು. ಅದಕ್ಕೆ ಅಂಟಿಸಬೇಕಾಗಿದ್ದ ಹೆಸರು, ವಿಳಾಸ ಚೀಟಿಯನ್ನು ಜೈಲು ಪಾಗಾರ ಗೋಡೆಯ ಹೊರಬದಿಯವರೆಗೆ ಬಂಡಿ ತಲಪಿದಾಗ ಅಂಟಿಸುವೆನೆಂದೂ ಅವನಿಗೆ ತಿಳಿಸಿದೆ. ಬಂಡಿಯು ಹುಚ್ಚುಚ್ಚಾಗಿ ಓಡತೊಡಗಿತು. ನಾನೂ ಓಡಿದೆ. ಕೊನೆಗೆ ಜೈಲು ಬದಿ ಬಂಡಿ ನಿಂತಿತು.

ನಾನು ಜೇಬಿನಿಂದ ಚೀಟಿಯನ್ನು ಎಳೆದು ತೆಗೆಯುವಾಗ ಜೇಬಿನಲ್ಲಿದ್ದ ಅರ್ಧ ಗಿನಿಯ ನಾಣ್ಯ ಹೊರಬಿತ್ತು. ಆ ನಾಣ್ಯವನ್ನು ನಾನು ಬಾಯಲ್ಲಿಟ್ಟುಕೊಂಡು, ಪೆಟ್ಟಿಗೆಗೆ ಚೀಟಿಯನ್ನು ಅಂಟಿಸತೊಡಗಿದೆ. ಈ ಕೆಲಸವನ್ನು ನಾನು ಮಾಡುತ್ತಿದ್ದಾಗಲೇ ನನ್ನ ಹಿಂದಿನಿಂದ ಯಾರೋ ಬಂದು ನನ್ನ ದವಡೆಗಳನ್ನು ಒತ್ತಿ, ಅರ್ಧ ಗಿನಿ ನಾಣ್ಯವನ್ನು ತೆಗೆದರು. ಹಾಗೆ ತೆಗೆದವರು ಯಾರೆಂದು ಹಿಂತಿರುಗಿ ನೋಡುವಾಗ, ಆ ಬಂಡಿಯವನು ಆ ನಾಣ್ಯವನ್ನು ತನ್ನ ಕೈಯ್ಯಲ್ಲಿ ಹಿಡಿದುಕೊಂಡು, ಸೂಕ್ಷ್ಮವಾಗಿ ಅದನ್ನು ಪರೀಕ್ಷಿಸುತ್ತಾ-
“ಓಹೋ, ಇದು ಪೋಲಿಸ್ ಕೇಸು – ಕಳ್ಳ ನಾಣ್ಯ! ಕಳ್ಳ! ಬಾ ನಿನ್ನನ್ನು ಪೋಲಿಸಿಗೆ ಕೊಡುತ್ತೇನೆ” ಎಂದನ್ನುತ್ತಾ, ನನ್ನನ್ನು ದರದರನೆ ಎಳೆದುಕೊಂಡು ತನ್ನ ಬಂಡಿಯ ಕತ್ತೆಯ ಸಮೀಪಕ್ಕೆ ಹೋಗುತ್ತಾ – ಮೆಜಿಸ್ಟ್ರೇಟರಿಗೂ ಆ ಕತ್ತೆಗೂ ಸಂಬಂಧವಿದ್ದಂತೆ – ಅದನ್ನು ತೋರಿಸುತ್ತಾ ತನ್ನ ಬಂಡಿಯನ್ನೇರಿ, ಬಂಡಿಯನ್ನು ಓಡಿಸಿಕೊಂಡು ಹೋದನು.

“ಸರ್, ನನ್ನ ಹಣವನ್ನು ಕೊಟ್ಟು ಬಿಡಿ, ಪೆಟ್ಟಿಗೆಯನ್ನು ಕೊಡಿ” ಎಂದೆನ್ನುತ್ತ ನಾನು ಎಷ್ಟೇ ಗೋಳಿಟ್ಟು ಬಂಡಿಯನ್ನು ಹಿಂಬಾಲಿಸಿದರೂ ಬಂಡಿಯು ಓಡಿಯೇ ಹೋಯಿತು. “ಹಣ ಕೊಡಿರಿ, ದಮ್ಮಯ್ಯಾ” ಎಂದಂದುಕೊಳ್ಳುತ್ತಾ ಓಡುತ್ತಾ ಜಾರುತ್ತಾ ದಾರಿಯಲ್ಲಿ ಬಂದವರ ಮೈ ಒರಸಿ ಬೈಸಿಕೊಳ್ಳುತ್ತಾ ಕೆಲವು ಜಟಕದವರ ಬಾರುಕೋಲಿನ ಪೆಟ್ಟನ್ನು ತಿನ್ನುತ್ತಾ ನಾನು ಓಡಿ, ಓಡಿ ಕೊನೆಗೆ ಡೋವರ್ ರಸ್ತೆಯ ಮಧ್ಯದಲ್ಲಿ ಬಚ್ಚಿ ನಿಂತುಬಿಟ್ಟೆ. ನನ್ನ ಪೆಟ್ಟಿಗೆಯಿದ್ದ ಬಂಡಿಯೂ ಹಣವೂ ಮಾಯವಾದುವು.

ನಾನು ಈ ಲೋಕಕ್ಕೆ ಪ್ರಥಮವಾಗಿ ಕಾಲಿಟ್ಟು ನನ್ನತ್ತೆಗೆ ಸಿಟ್ಟು ಬರಿಸಿದ್ದ ಕಾಲದಲ್ಲಿ ನನ್ನಲ್ಲಿದ್ದ ವಸ್ತುಗಳಿಗಿಂತ ವಿಶೇಷ ಏನೂ ವಸ್ತುಗಳಿಲ್ಲದೆ, ಪ್ರಪಂಚದ ಸಮಸ್ತ ಜನರೆದುರು, ನಿರ್ಗತಿಕನಾಗಿ, ಮಾರ್ಗ ಮಧ್ಯದಲ್ಲಿ ನಾನು ನಿಂತುಬಿಟ್ಟೆ.

(ಮುಂದುವರಿಯಲಿದೆ)

1 comment:

  1. ನಮಗೆ ಪದವಿ ತರಗತಿಯಲ್ಲಿ ಡೇವಿಡ್ ಕಾಪರ್ ಫೀ಼ಲ್ಡ್ ಪಠ್ಯವಾಗಿತ್ತು (ಸಂಗ್ರಹ). ಕೆ. ಕೃಷ್ಣ ಅಯ್ಯಂಗಾರ್ ಅದನ್ನು ಪಾಠ ಮಾಡಿದ್ದರು. ಪ್ರತಿ ಅಧ್ಯಾಯ ಮುಗಿದ ಮೇಲೆ ಅದರ ಸಾರಾಂಶವನ್ನು ಬರೆಸುತ್ತಿದ್ದರು. ಪರೀಕ್ಷೆಯಲ್ಲಿ ಬರೆಯಲು ಉಪಯುಕ್ತವಾಗುತ್ತಿತ್ತು. ಈಗ ಸಮಗ್ರ ಕೃತಿಯನ್ನು ಕೇಳುವ ಅವಕಾಶ ಒದಗಿಸಿದ್ದೀರು. ನಿಮಗೆ ಧನ್ಯವಾದಗಳು.

    ReplyDelete