03 June 2014

ನನ್ನ ಪರಿಚಯ ಕ್ಷೇತ್ರವನ್ನು ವಿಸ್ತರಿಸಿಕೊಂಡೆನು

ಅಧ್ಯಾಯ ಆರು
[ಡೇವಿಡ್ ಕಾಪರ್ಫೀಲ್ಡ್ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ .ಪಿ. ಸುಬ್ಬಯ್ಯ]

ವಿ-ಧಾರಾವಾಹಿಯ ಎಂಟನೇ ಕಂತು

ರೀತಿ ಮಿ. ಮೆಲ್ ಮತ್ತು ನಾನು ಶಾಲಾ ಕಟ್ಟಡದಲ್ಲೇ ಮನೆ ಮಾಡಿಕೊಂಡು ಸಾಧಾರಣ ಒಂದು ತಿಂಗಳಾಗುವಾಗ ಮರದ ಕಾಲಿನವನು ಕಸಬರಿಗೆ ಮತ್ತು ನೀರಿನ ಬಾಲ್ದಿಗಳನ್ನು ಹಿಡಿದುಕೊಂಡು ನಮ್ಮ ಶಾಲಾ ವಠಾರದಲ್ಲಿ ಅತ್ತಿತ್ತ ಹೋಗುತ್ತಿದ್ದುದ್ದನ್ನು ಕಂಡೆನು. ಸದ್ಯವೇ ಮಿ. ಕ್ರೀಕಲ್ ರವರೂ, ವಿದ್ಯಾರ್ಥಿಗಳೂ ಬರುವರೆಂದೂ, ಶಾಲೆ ಕ್ರಮಪ್ರಕಾರವಾಗಿ ಪ್ರಾರಂಭವಾಗುವುದೆಂದೂ ತಿಳಿದೆನು. ನಮ್ಮ ಶಾಲೆಯ ಕಟ್ಟಡವನ್ನು  ಇಬ್ಬರು ಹೆಂಗುಸರೂ, ಆ ಮರದ ಕಾಲಿನವನೂ ಗುಡಿಸಿ ತೊಳೆಯಲು ಪ್ರಾರಂಭಿಸಿದರು. ಇದಕ್ಕಾಗಿ ನಾವಿಬ್ಬರೂ ನಮ್ಮ ಕೋಣೆಯನ್ನು ಬಿಟ್ಟು ಕೊಡಬೇಕಾಯಿತು. ಆ ದಿನ ನಾವು ಸೀನಿದಷ್ಟು ಸೀನು ಮುಂದೆ ಎಂದೂ ಸೀನಲಿಲ್ಲ. ಅವರು ಗುಡಿಸಿ ಧೂಳೆಬ್ಬಿಸಿದಾಗ ನಮ್ಮ ಶಾಲೆಯ ಕಟ್ಟಡವೇ ಇಂದು ನಸ್ಯದ ಡಬ್ಬಿಯಂತಾಗಿ ಎಲ್ಲರೂ ಸೀನುವಂತೆ ಮಾಡಿತು.

ಒಂದು ದಿನ ಸಾಯಂಕಾಲ ಮಿ. ಕ್ರೀಕಲರೂ ಅವರ ಸಂಸಾರದ ಇತರರೂ ಸೆಲಂ ಶಾಲೆಗೆ ಬಂದರು – ಅಂದರೆ, ಶಾಲಾವಠಾರದಲ್ಲಿದ್ದ ಅವರ ಮನೆಗೆ ಬಂದರು. ಮಿ. ಕ್ರೀಕಲರ ಮನೆಯೂ ಅದಕ್ಕೆ ಸಂಬಂಧಿಸಿದ ಚಿಕ್ಕ ಹೂದೋಟವೂ ಬಹು ಚೆನ್ನಾಗಿ ಇಡಲಾಗಿದ್ದುವು. ಆದರೆ, ನಮ್ಮ ಶಾಲೆಯ ಆಟದ ಮೈದಾನ ಮಾತ್ರ ಮರುಭೂಮಿಯಂತಿತ್ತು – ಆ ಮೈದಾನ ಒಂಟೆಗೆ ಬಹು ಸಂತೋಷಪ್ರದವಾದ ಸ್ಥಳವಾಗಬಹುದೆಂದು ನಾನು ಗ್ರಹಿಸುತ್ತಿದ್ದೆನು.


ಮಿ. ಕ್ರೀಕಲರು ಅವರ ಮನೆಗೆ ಬಂದ ಕೂಡಲೇ ಮರದ ಕಾಲಿನವನು ನನ್ನನ್ನು ಕರೆದುಕೊಂಡು ಹೋಗಿ ಮಿ. ಕ್ರೀಕಲರ ಎದುರು ನಿಲ್ಲಿಸಿದನು ಮತ್ತು ಅವನು ಅವರ ಬಹು ಸಮೀಪದಲ್ಲಿ ಕುಳಿತುಕೊಂಡನು. ಮಿ. ಕ್ರೀಕಲರ ಎಡಬದಿಯಲ್ಲಿ ಅವರ ಹೆಂಡತಿಯೂ ಮಗಳೂ ಕುಳಿತಿದ್ದರು.

ಮಿ. ಕ್ರೀಕಲರು ಸ್ಥೂಲದೇಹಿಗಳು. ಅವರ ತಲೆಯಲ್ಲಿ ಕೂದಲು ಸ್ವಲ್ಪ ಕಡಿಮೆಯೇ ಇತ್ತು. ಆದರೆ ಆ ಇದ್ದ ಕೂದಲನ್ನೇ ಇಲ್ಲದಿದ್ದ ಭಾಗಕ್ಕೆ ಬಾಚಿ ಬರಮಾಡಿಕೊಂಡು, ತಲೆಯಲ್ಲಿ ತಕ್ಕ ಮಟ್ಟಿಗೆ ಕೂದಲಿದ್ದವರಂತೆಯೇ ತೋರಿಸಿಕೊಳ್ಳುತ್ತಿದ್ದರು. ಅವರ ಹಣೆಯ ಮೇಲೂ ಮೇಲ್ಕೆನ್ನೆಗಳ ಮೇಲೂ ದಪ್ಪದ ರಕ್ತನಾಳಗಳು ಎದ್ದು ತೋರುತ್ತಿದ್ದುವು. ಕಣ್ಣುಗಳೆರಡು ಚಿಕ್ಕದಾಗಿದ್ದು, ಅವೂ ಸಹ ಗುಂಡಿಯಲ್ಲಿದ್ದುದರಿಂದ ಅವರ ಚಿಕ್ಕದಾದ ಮೂಗು ಎತ್ತಿ ಇಟ್ಟಂತೆ ತೋರುತ್ತಿತ್ತು. ಅವರ ಕುರಿತಾದ ಬಹು ವಿಶೇಷದ ಒಂದು ಸಂಗತಿಯೆಂದರೆ ಅವರ ಸ್ವರ. ಅದು ಬಹು ಸಣ್ಣ ಸ್ವರ – ಸಾಧಾರಣ ಏನೂ ಕೇಳಿಸದಷ್ಟು ಸಣ್ಣ ಸ್ವರ. ಸ್ವಲ್ಪ ಜೋರಾಗಿ ಮಾತಾಡಿದಾಗಲಂತೂ ಅದು ಬಹು ಕೀರುಧ್ವನಿಯದೇ ಆಗಿ ಹೋಗುತ್ತಿತ್ತು. ಅವರ ಮುಖ ಸದಾ ಉರಿಯುತ್ತಿರುವಂತೆ ತೋರುತ್ತಿತ್ತು ಮಾತ್ರವಲ್ಲದೆ, ಆ ಉರಿ ತೇಜಸ್ಸನ್ನು ಕಂಡವರೂ ಸಹ ಉರಿದು ಹೋಗಿಬಿಡುವಷ್ಟು ಕಠಿಣವಾಗಿತ್ತು. ಅವರು ನನ್ನನ್ನು ನೋಡಿ –
“ಇವನೇಯೋ ಹಲ್ಲು ಹರಿತದವನು – ತನ್ನ ಹಲ್ಲಿಗೆ ಅರ ಹಾಕಿಸಿಕೊಳ್ಳಲು ಬಂದವನು?” ಅಂದರು.
ಸಮೀಪದಲ್ಲಿದ್ದ ಮರದ ಕಾಲಿನವನಂದನು –
“. . .ಅರ ಹಾಕಿಸಿಕೊಳ್ಳಲು ಬಂದವನು?”
“ತಿರುಗು, ನೋಡೋಣ” ಅಂದರು ಮಿ. ಕ್ರೀಕಲರು.
ಮರದ ಕಾಲಿನವನು ನನ್ನನ್ನು ತಿರುಗಿಸಿ, ಬೆನ್ನಿನಲ್ಲಿದ್ದ ರಟ್ಟು ಮತ್ತು ಅದರಲ್ಲಿ ಬರೆದಿದ್ದುದನ್ನು ಅವರು ನೋಡಿ ಓದುವಂತೆ ನಿಲ್ಲಿಸಿದನು. ಅನಂತರ ನನ್ನನ್ನು ಕರೆದುಕೊಂಡು ಹೋಗಿ ಮಿ. ಕ್ರೀಕಲರ ಬಹು ಸಮೀಪದಲ್ಲಿ ನಿಲ್ಲಿಸಿದನು. ಅವರು ನನ್ನ ಎಡಕಿವಿಯನ್ನು ಹಿಡಿದು ಜಿಗುಟುತ್ತಲೂ ತಿರುವುತ್ತಲೂ ಕೆಲವು ಬೆದರಿಕೆಯ ಮಾತುಗಳನ್ನಾಡತೊಡಗಿದರು. ಅವರು ಹೇಳ ತೊಡಗಿದರು –
“ನಾನು ಯಾರು ಗೊತ್ತಿದೆಯೇ?”
ಮರದ ಕಾಲಿನವನು ಪ್ರತಿಧ್ವನಿಯಂತೆ ನುಡಿದನು –
“ನಾನು ಯಾರು ಗೊತ್ತಿದೆಯೇ?”
“ನಾನೊಬ್ಬ ರಾಕ್ಷಸ – ಮಿ. ಮರ್ಡ್ಸ್ಟನ್ನರು ನನ್ನ ಸ್ನೇಹಿತರು” ಅಂದರು ಮಿ. ಕ್ರೀಕಲರು.
ಮರದ ಕಾಲಿನವನು –
“. . .ರಾಕ್ಷಸ. .  ಸ್ನೇಹಿತರು” ಎಂದಂದನು.
ಪುನಃ ಮಿ. ಕ್ರೀಕಲರು –
“ನಾನು ಯಾರಿಗೂ ದಾಕ್ಷಿಣ್ಯ ತೋರಿಸುವವನಲ್ಲ – ನಾನು ಯಾರಿಗೂ ಬಗ್ಗುವವನಲ್ಲ – ನನ್ನ ಮನೆಯವರನ್ನೇ ಆದರೂ ಬಿಡುವವನಲ್ಲ – ಕೆಲಸಗಳೆಲ್ಲಾ ನನ್ನ ಇಚ್ಛೆಯಂತೆಯೇ ನಡೆಯಬೇಕು. ಮಿ. ಮರ್ಡ್ಸ್ಟನ್ನರೂ ನಾನೂ ಆಲೋಚಿಸಿದುದನ್ನೆಲ್ಲಾ ಸಾಧಿಸಿಯೇ ಸಾಧಿಸುವೆವು – ಮಾಡಿಸಿಯೇ ಮಾಡಿಸುವೆವು. ಶಿಸ್ತು, ಕ್ರಮಗಳನ್ನು ನಾವು ನಿರ್ದಾಕ್ಷಿಣ್ಯವಾಗಿ ಜಾರಿಗೊಳಿಸಿಯೇಗೊಳಿಸುವೆವು” ಅಂದರು.
ಪ್ರತಿಧ್ವನಿಯೂ ಹಾಗೆಯೇ ನುಡಿಯಿತು.
ಈ ಸ್ವಸ್ತಿವಾಚನ ನಡೆಯುತ್ತಿದ್ದ ಹಾಗೆಯೇ ಮಿ. ಕ್ರೀಕಲರು ನನ್ನ ಕಿವಿಯನ್ನು ಹಿಂಡುತ್ತಲೇ ಇದ್ದರು. ನನ್ನ ಕಿವಿ ಮುಖಗಳು ಕೆಂಪೇರುತ್ತಿದ್ದ ಹಾಗೆಯೇ ನನ್ನ ಕಣ್ಣುಗಳಲ್ಲಿ ನೀರು ತುಂಬತೊಡಗಿತು. ಇದೇ ಸಮಯದಲ್ಲಿ ಹಿಂಡಿದ ಕಿವಿ ನನ್ನದಾದರೂ ಸಿಟ್ಟಿನ ಮುಖ ಅವರದಾಗಿದ್ದುದರಿಂದ, ಅವರ ಮುಖ ಮೊದಲಿಗಿಂತಲೂ ಅಧಿಕವಾಗಿ ಕೆಂಪಾಗುತ್ತಾ ಸ್ವರ ತಾರಕಕ್ಕೆ ಏರಿತು. ಅರ್ಥಾತ್, ಪರಿಪೂರ್ಣ ಕೀರುಧ್ವನಿಗೆ ಮುಟ್ಟಿತು. ಕೀರು ಸ್ವರದ ಮಿ. ಕ್ರೀಕಲರಿಗೆ ಈಗಲಂತೂ ಮರದ ಕಾಲಿನವನ ಧ್ವನಿಯ ಮೇಳ ಅತ್ಯಗತ್ಯವಾಗಿತ್ತು. ಈತನು ಮಿ. ಕ್ರೀಕಲರ ಎಲ್ಲಾ ಭಾಷಣಗಳಲ್ಲೂ ಧ್ವನಿವರ್ಧಕ ಮೇಳವಾಗಿ ಸಹಕರಿಸುತ್ತಿದ್ದನು.
”ಈಗ ಅವನನ್ನು ಇಲ್ಲಿಂದ ಕರೆದುಕೊಂಡು ಹೋಗು – ಮತ್ತೆ ನೋಡುತ್ತೇನೆ” ಅಂದರು, ಮಿ. ಕ್ರೀಕಲರು.

ಈ ಸಮಯದ ನನ್ನ ದುಃಖ, ನಾಚಿಕೆಗೇಡು, ವೇದನೆಗಳಿಗೆಲ್ಲ ಹೆಚ್ಚಾಗಿ ನನಗಿದ್ದ ಇನ್ನೊಂದು ದುಃಖವನ್ನು ಅವರೊಡನೆ ಈಗಲೇ ಹೇಳಿಕೊಂಡರೆ – ಈಗಲೇ ಅವರಿಗೆ ಸಾಕಷ್ಟು ಬಲಿ ನನ್ನ ಕಡೆಯಿಂದ ಸಂದಿದ್ದುದರಿಂದ – ಮುಂದೆ ಸೌಮ್ಯದ ಅಭಯ ದೊರಕಬಹುದೆಂದು ಊಹಿಸಿ, ಧೈರ್ಯ ಮಾಡಿಕೊಂಡು –
“ಸರ್, ಸಿಟ್ಟು ಮಾಡಬೇಡಿ, ಕೇಳದೇ ನಿರ್ವಾಹವಿಲ್ಲ – ಕ್ಷಮಿಸಬೇಕು ಸರ್. ಎಲ್ಲಾ ಹುಡುಗರು ಬರುವ ಮೊದಲೇ ಈ ರಟ್ಟನ್ನು ಬಿಚ್ಚಿದರೆ ಆಗದೆ?” ಎಂದು ಕೇಳಿಯೇ ಬಿಟ್ಟೆ.

ನಾನು ಮಾತಾಡಲು ಪ್ರಾರಂಭಿಸುವಾಗಲೇ ಏಳಲು ಪ್ರಾರಂಭಿಸಿದ್ದ ಮಿ. ಕ್ರೀಕಲರು, ನನ್ನ ಮಾತು ಪೂರೈಸುವಷ್ಟರಲ್ಲಿ ತನ್ನ ಕುರ್ಚಿಯಿಂದ ಸಂಪೂರ್ಣ ಎದ್ದು, ಒಂದು ಹೆಜ್ಜೆ ಮುಂದಿಟ್ಟರು. ಈ ಕ್ರಮಗಳನ್ನೆಲ್ಲ ಕಂಡು ನಾನು, ಫಕ್ಕನೆ, ನಿಂತಲ್ಲಿಂದ ಹಾರಿ, ಓಡಿಕೊಂಡೇ ಹೋಗಿ ನನ್ನ ಕೋಣೆಯನ್ನು ಸೇರಿದೆನು. ದೇವರ ದಯೆಯಿಂದ ನನ್ನನ್ನು ಹಿಂಬಾಲಿಸಿ ಯಾರೂ ಬರಲಿಲ್ಲ.

ಶಾಲೆ ಪ್ರಾರಂಭವಾಗುವ ಮೊದಲು ವಿದ್ಯಾರ್ಥಿಗಳು ಪರಸ್ಪರ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವ ಕ್ರಮವಿತ್ತು. ಎಲ್ಲ ವಿದ್ಯಾರ್ಥಿಗಳಿಗಿಂತ ಮೊದಲು ಬಂದವನು ಟೋಮಿಟ್ರೇಡಲ್ಸ್. ಅವನು ನನ್ನ ಬೆನ್ನ ಮೇಲಿದ್ದ ರಟ್ಟಿನ ಮುನ್ನೆಚ್ಚರಿಕೆಯನ್ನು ಓದಿ, ಮೊದಲು, ಬಿದ್ದು ಬಿದ್ದು ನಗಾಡಿದನು. ಅನಂತರ ನನ್ನನ್ನು ಕಂಡು ಹೆದರಿದವನಂತೆ ನಟಿಸಿ ಹಾಸ್ಯ ಮಾಡಿದನು. ಮತ್ತೆ ಏನೇನೋ ಅನ್ನುತ್ತ ತುಂಬಾ ಕುಚೇಷ್ಟೆ ಹಾಸ್ಯಗಳನ್ನೆಲ್ಲ ಮಾಡಿ, ಮುಂದೆ ಬರುವವರು ಮಾಡಿದ ಹಾಸ್ಯ, ಕುಚೇಷ್ಟೆಗಳನ್ನು ಸಹಿಸಲು ಬೇಕಾದಷ್ಟು ಅನುಭವವನ್ನೂ ಮೊಂಡುತನವನ್ನೂ ನನಗೆ ಕಲಿಸಿಕೊಟ್ಟನು. ಆದರೆ ಮತ್ತೆ ಬಂದ ಬಾಲಕರಲ್ಲಿ ಬಹು ಹೆಚ್ಚು ಮಂದಿಗೆಲ್ಲ ಅವರವರದೇ ವಿವಿಧ ರೂಪದ ದುಃಖಗಳಿದ್ದುದರಿಂದ, ನಾನು ಊಹಿಸಿದಷ್ಟು ಬಾಲಕರು ನನ್ನನ್ನು ಹಾಸ್ಯ ಮಾಡಲಿಲ್ಲ. ಕೊನೆಗೆ ಜೆ. ಸ್ಟಿಯರ್ಫೋರ್ತ್ ಬಂದನು.

ಸ್ಟಿಯರ್ಫೋರ್ತನು ನಮ್ಮೆಲ್ಲರಿಗಿಂತ ದೊಡ್ಡವನಾಗಿದ್ದನು. ನಮ್ಮೆಲ್ಲರಿಗಿಂತ ಸುಂದರನೂ ಬುದ್ಧಿವಂತನೂ ಮಾತುಗಾರಿಕೆಯವನೂ ಆಗಿದ್ದನು. ಅವನು ನಮ್ಮ ಮಧ್ಯಕ್ಕೆ ಬರುವಾಗಲೇ ಈ ವಿಷಯವನ್ನು ನಾವು ತಿಳಿಯಬಹುದಿತ್ತು. ಅವನು ಮಾತುಕಥೆ, ನಡೆನುಡಿಗಳಲ್ಲಿ ಚೆನ್ನಾಗಿ ನುರಿತವನಾಗಿದ್ದನು. ಬರುತ್ತಲೇ ಅವನು ನಮ್ಮೆಲ್ಲರ ಮುಖಂಡನಾದನು. ನಮ್ಮೆಲ್ಲರನ್ನು ಪರಸ್ಪರವಾಗಿ ವಿಚಾರಿಸಿ, ಪರಿಚಯ ಮಾಡಿಕೊಟ್ಟನು. ಅವನ ಮಾತುಗಾರಿಕೆಯ ಎದುರು ನನ್ನ ಅಂಜಿಕೆ, ನಾಚಿಕೆಗಳೆಲ್ಲ ಮಾಯವಾದವು. ಸರಳವಾದ, ಪ್ರೇಮಮಯ ಮಾತುಗಳಿಂದ ನನ್ನ ಮನೆ, ಕುಟುಂಬ, ಜೀವನದ ಕಥೆಗಳನ್ನೆಲ್ಲ ಆಗಲೇ ವಿಚಾರಿಸಿ ನನ್ನಿಂದ ಬಹು ಸುಲಭವಾಗಿ, ನನಗೆ ಸಂತೋಷವಾಗುವ ಕ್ರಮದಲ್ಲಿ, ತಿಳಿದುಕೊಂಡನು. ಸ್ವಲ್ಪ ಸಮಯದಲ್ಲೇ ನಮ್ಮ ಮುಖಂಡ ಸ್ಟಿಯರ್ಫೋರ್ತನು ನನ್ನ ಕಡೆಯವನೇ ಆಗಿ, ನಾನು ಯಾರಿಗೂ ಹೆದರುವ ಅಗತ್ಯವಿಲ್ಲವೆಂದೂ ನನಗೆ ಭರವಸೆ ದೊರಕಿತು.

ಹೀಗೆಲ್ಲಾ ನಾವು ಆ ದಿನ ಮಾತಾಡುತ್ತಾ, ಸ್ಟಿಯರ್ಫೋರ್ತನು ನನ್ನನ್ನು ನೋಡಿ,
“ಕಾಪರ್ ಫೀಲ್ಡ್, ನಿನ್ನ ಹತ್ತಿರ ಹಣವಿದ್ದರೆ ಇತ್ತ ಕೊಡು, ನಾನು ಜೋಪಾನವಾಗಿಟ್ಟುಕೊಳ್ಳುತ್ತೇನೆ” ಎಂದನ್ನುತ್ತಾ ತನ್ನ ಇಜಾರದ ಜೇಬಿನೊಳಗೆ ಕೈಯ್ಯನ್ನಿಟ್ಟುಕೊಂಡು ನನ್ನ ಹತ್ತಿರ ಬಂದು ನಿಂತನು.
“ಸ್ವಲ್ಪ ಹಣವಿದೆ – ಏಳು ಶಿಲ್ಲಿಂಗ್” ಎಂದು ನಾನಂದೆ.
“ಹಾಗಾದರೆ ಇತ್ತ ಕೊಡು” ಎಂದನ್ನುತ್ತಾ ಕೈ ನೀಡಿದನು. ನಾನು ನನ್ನಲ್ಲಿದ್ದ ಆ ಹಣವನ್ನೆಲ್ಲ ಅವನಿಗೆ ಕೊಟ್ಟೆನು.
ಅವನು ಅಷ್ಟಕ್ಕೇ ತೃಪ್ತನಾಗದೆ ನನ್ನ ಅಭೀಷ್ಟಗಳನ್ನು ನೆರವೇರಿಸುವ ಸೌಜನ್ಯದಿಂದ –
“ಅಲ್ಲ, ಕಾಪರ್ಫೀಲ್ಡ್, ನಿನಗೆ ಏನಾದರೂ ತಿಂಡಿಯೋ, ಪಾನೀಯವೋ ಬೇಕೆಂದಾದರೆ ತಿಳಿಸು, ದಾಕ್ಷಿಣ್ಯ ಮಾಡಬೇಡ” ಎಂದಂದನು.

ಇಷ್ಟರಲ್ಲೇ ನನ್ನ ಹಣವನ್ನು ಕೈಬಿಟ್ಟು ಇನ್ನೊಬ್ಬರ ವಶಕ್ಕೆ ಕೊಟ್ಟೆನಲ್ಲಾ ಎಂದು ನನಗೆ ಸ್ವಲ್ಪ ಬೇಸರವೂ ಆಗ ತೊಡಗಿತು. ಆ ಬೇಸರದಿಂದಲೇ ನಾನಂದೆ –
“ಏನೂ ಬೇಡ.”
“ದಾಕ್ಷಿಣ್ಯ ಮಾಡಬೇಡ – ಇಂಥ ಪ್ರಾರಂಭದ ದಿನದಲ್ಲಿ, ಊಟವಾದ ನಂತರ ಕರ್ರೆಂಟು ವೈನನ್ನು ತರಿಸಿ ಎಲ್ಲರೂ ಸಂತೋಷದಿಂದ ಕುಡಿಯುವ ಕ್ರಮ ಲಾಗಾಯ್ತಿನಿಂದ ಇಲ್ಲಿ ಇದೆ – ಅದರ ಅನುಭವ ನಿನಗೆ ಇರಲು ಕಾರಣವಿಲ್ಲವಷ್ಟೆ? ಸ್ವಲ್ಪ ತರಿಸಲೇ?” ಅಂದನು ಸ್ಟಿಯರ್ಫೋರ್ತ್.
“ಆ ಕ್ರಮವಿದೆಯೆಂದು ನನಗೆ ಗೊತ್ತಿಲ್ಲ – ಹಾಗಾದರೆ ತರಿಸು” ಎಂದು ನಾನು ಸಮ್ಮತಿಯಿತ್ತೆ. ನನ್ನ ಹೆಡ್ಡುತನಕ್ಕೇ ನಾನು ನಾಚಿಕೊಳ್ಳುತ್ತಾ ಸ್ಟಿಯರ್ಫೋರ್‍ತನ ಸರಳತೆ, ಚಟುವಟಿಕೆ ಮೊದಲಾದ ಮಹಾ ಗುಣಗಳಿಗಾಗಿ ನಾನು ಸಂತೋಷಪಟ್ಟೆನು.
“ಬರೀ ಪಾನೀಯಗಳಿಂದ ಸಂತೋಷದ ಕೂಟ ಪೂರ್ಣವಾಗದು. ಕೂಟದ ಲಕ್ಷಣಕ್ಕಾಗಿ ತಿಂಡಿಗಳೂ ಜತೆಗೆ ಇರಲಿ. ನಮಗೆ ಸಂತೋಷಪಡಲು ಎಡೆಯಿದ್ದಾಗ, ಮತ್ತು ಅನುಕೂಲವಿದ್ದಾಗ, ನಾವು ಅದನ್ನು ಕಳೆದುಕೊಳ್ಳಬಾರದು,. ಅದರಲ್ಲೂ ಶಾಲಾ ಪ್ರಾರಂಭದ ಈ ದುಃಖದ ಸಮಯದಲ್ಲಿ ಇಂಥ ಸಂತೋಷಗಳು ಅತ್ಯಗತ್ಯ” ಎಂದಂದನು ಸ್ಟಿಯರ್ಫೋರ್ತ್.
“ಎಲ್ಲವನ್ನೂ ನಿನಗೊಪ್ಪಿಸಿದ್ದೇನೆ” ಎಂದಷ್ಟು ಮಾತ್ರ ನಾನು ಉತ್ತರವಿತ್ತು ಮುಂದಿನ ಕಾರ್ಯಗಳನ್ನು ಅವನಿಗೆ ವಹಿಸಿದೆ. ಸ್ಟಿಯರ್ಫೋರ್ತನ ಪರೋಪಕಾರ ಬುದ್ಧಿ, ದುರ್ಬಲರನ್ನು ಕುರಿತು ಶಕ್ತಿವಂತರಿಗಿರಬೇಕಾಗಿದ್ದ ಹಿರಿತನದ ಬುದ್ಧಿ, ಮುಂದಾಳುತನದ ಬುದ್ಧಿ, ಇವನ್ನೆಲ್ಲ ಕಂಡು ಅವನ ವ್ಯಕ್ತಿತ್ವಕ್ಕೆ ನಾನು ಮರುಳಾಗಿಹೋದೆ.

ತನ್ನ ಮಾತಿಗೆ ಅನುಗುಣವಾಗಿ ಸ್ಟಿಯರ್ಫೋರ್ತನು ಆ ದಿನ ರಾತ್ರಿ ತಿಂಡಿ ಪಾನೀಯಗಳನ್ನು ತರಿಸಿ, ನಮ್ಮ ಊಟವಾದನಂತರ, ಈ ಗುಟ್ಟಿನ ಕೂಟವನ್ನು ಏರ್ಪಡಿಸಿದನು. ಅಷ್ಟೊಂದು ಬಂದೋಬಸ್ತಿನ ಶಾಲಾ ಕಂಪೌಂಡಿನ ಒಳಕ್ಕೆ ಹೊರಗಡೆಯಿಂದ ಆ ವೈನ್, ತಿಂಡಿ ಮೊದಲಾದವುಗಳನ್ನು ಹೇಗೆ ತರಿಸಿದನೋ ನಾನರಿಯೆ! ಅಂದಿನ ಕೂಟದ ಖರ್ಚೆಲ್ಲ ನನ್ನ ಬಂಡುವಾಳದಿಂದ ನಡೆದಿದ್ದುದರಿಂದ ನಾನೇ ಕೂಟದ ಅಧ್ಯಕ್ಷನಾಗಬೇಕೆಂದು ಸ್ಟಿಯರ್ಫೋರ್ತನು ಸೂಚಿಸಿದುದಕ್ಕೆ ನಾನು ಸಮ್ಮತಿಸಲಿಲ್ಲ. ಸ್ಟಿಯರ್ಫೋರ್ತನಂಥಾ ಅನುಭವಸ್ಥನೂ ದಕ್ಷನೂ ಗೌರವಾನ್ವಿತನೂ ವಿಶಿಷ್ಟಗುಣಸಂಪನ್ನನೂ ಇರುವಲ್ಲಿ ನಾನು ಅಧ್ಯಕ್ಷನಾಗಲು ಹೆದರಿ, ನಾನೇ ಅವನನ್ನು ಅಧ್ಯಕ್ಷನಾಗಬೇಕೆಂದು ಕೇಳಿಕೊಂಡೆ. ಸಂತೋಷ ಸಮಾರಂಭಗಳಲ್ಲಿ ಯಾರ ಮನಸ್ಸನ್ನೂ ನೋಯಿಸಲೊಲ್ಲದ ಸ್ಟಿಯರ್ಫೋರ್ತನು ನಮ್ಮ ಅಂದಿನ ರಾತ್ರಿಯ ಕೂಟಕ್ಕೆ ಅಧ್ಯಕ್ಷನಾಗಿ ಕುಳಿತು, ತಿಂಡಿ ಪಾನೀಯಗಳನ್ನು ಕ್ರಮವಾಗಿ ಹಂಚಿ, ಕೂಟದ ಕಾರ್ಯವನ್ನು ಯಶಸ್ವಿಗೊಳಿಸಿದನು.

ಆ ಕೂಟದ  ಅಂಗವಾಗಿ ನಾವೆಲ್ಲರೂ ಅವರವರಿಗೆ ತಿಳಿದ ವರ್ತಮಾನಗಳನ್ನೂ ಚರಿತ್ರೆಗಳನ್ನೂ ಸಭೆಗೆ ತಿಳಿಸಿದೆವು. ನಾನು ಆ ಶಾಲೆಯ ಶಿಕ್ಷಕರ, ಮತ್ತು ಇತರ ಅನೇಕ ವಿಷಯಗಳ ಕುರಿತಾಗಿ ಚರಿತ್ರೆಯನ್ನೂ ಹೇಳಿಕೆಗಳನ್ನೂ ಕೇಳಿ ತಿಳಿದುಕೊಂಡೆನು.

ಮರದ ಕಾಲಿನವನ ಚರಿತ್ರೆ, ಮಿ. ಕ್ರೀಕಲರ ಚರಿತ್ರೆ, ಮಿ. ಮೆಲ್ಲರ ಚರಿತ್ರೆ ಮೊದಲಾದುವುವನ್ನು ನಾವು ಕೇಳಿ ತಿಳಿದುಕೊಂಡೆವು. ಮಿ.ಕ್ರೀಕಲರು ಈ ವಿದ್ಯಾಸಂಸ್ಥೆಯ ಅತ್ಯಂತ ಮೇಲಿನ ಅಧಿಕಾರಿ ಮತ್ತು ಸಮಸ್ತ ವಿಷಯಗಳ ಯಜಮಾನ. ವಿದ್ಯಾ ವಿಭಾಗದಲ್ಲಿ ಮಿ. ಶಾರ್ಪರು ಮುಖ್ಯೋಪಾಧ್ಯಾಯರಾಗಿದ್ದಾರೆ. ಮಿ. ಕ್ರೀಕಲರೂ ಮರದ ಕಾಲಿನ ಟಂಗೆಯೂ ಜತೆ ಸೇರಿ, ಮಿ. ಕ್ರೀಕಲರ ಪತ್ನಿಯ ಸ್ವಂತ ಹಣವನ್ನು ಜತೆ ಸೇರಿಸಿಕೊಂಡು ಕಾಡು ಉತ್ಪತ್ತಿಗಳ ಸಂಗ್ರಹ ಮತ್ತು ಮಾರಾಟದ ವ್ಯಾಪಾರ ನಡೆಸಿದ್ದರಂತೆ. ಆದರೆ ಆ ವೈವಾಟದಲ್ಲಿ ಅವರೀರ್ವರೂ ದಿವಾಳಿಯಾದುದು ಮಾತ್ರವಲ್ಲದೆ, ಕ್ರಿಮಿನಲ್  ಜೈಲಿನಿಂದ ಪಾರಾಗಲೇ ಬಹಳ ಕಷ್ಟವಾಗಿತ್ತಂತೆ. ಆಗ ಜೈಲನ್ನು ತಪ್ಪಿಸಿಕೊಳ್ಳಲು ಟಂಗೆ ತಯಾರಿಸಿಕೊಟ್ಟ ಕೃತಕ ರಿಕಾರ್ಡುಗಳು ಬಹುಮಟ್ಟಿಗೆ ಸಹಾಯವಾದುವಂತೆ. ಅಂಥಾ ಆಪತ್ಕಾಲದ ಸ್ನೇಹಿತನಾದ ಟಂಗೆಯನ್ನು ಬಿಡಲಾರದೆ, ಇಂದು ಮಿ. ಕ್ರೀಕಲರು ಟಂಗೆಗೆ ಈ ಶಾಲೆಯಲ್ಲಿ ಒಂದು ಕೆಲಸಕೊಟ್ಟು ಸಾಕುತ್ತಿರುವುದಂತೆ.

ಮಿ. ಕ್ರೀಕಲರ ನಿಯಮ ನಿಷ್ಠೆ, ಶಿಸ್ತುಗಳೆಲ್ಲ ಒಂದು ಪಂಥದಿಂದ ಹೊರಟವುಗಳಂತೆ. ಆ ಪಂಥದ ಶಿಸ್ತು, ನಿಯಮಗಳ ಕಾರಣವಾಗಿ ಮಿ. ಕ್ರೀಕಲರ ಪತ್ನೀ ಪುತ್ರಿಯರೂ ಸಹ, ಅವರ ಸ್ವಂತ ಮನೆಯಲ್ಲಾದರೂ ಮಿ. ಕ್ರೀಕಲರಿಗೆ ಸದಾ ಹೆದರಿಕೊಂಡೇ ಇರುತ್ತಿದ್ದರಂತೆ. ಮಿ. ಕ್ರೀಕಲರ ಏಕಮಾತ್ರ ಪ್ರಾಯಪ್ರಬುದ್ಧ ಮಗ ತಂದೆಯ ಶಿಸ್ತನ್ನು ಉಲ್ಲಂಘಿಸಿದುದಕ್ಕಾಗಿ ಮನೆಯಿಂದಲೂ ಊರಿನಿಂದಲೂ ಗಡಿಪಾರು ಮಾಡಲ್ಪಟ್ಟಿದ್ದನೆಂದು ತಿಳಿಯಿತು.

ಮಿ. ಶಾರ್ಪರೂ ಮತ್ತು ಮಿ. ಮೆಲ್ಲರೂ ವಿದ್ಯಾವಂತರಾಗಿದ್ದು ಶಾಲೆಯ ವಿದ್ಯಾ ವಿಭಾಗದ ವಿಶಿಷ್ಟ ಕೆಲಸಗಳನ್ನು ನಡೆಸುತ್ತಿದ್ದರು. ಮಿ. ಕ್ರೀಕಲರಿಗೆ ನಮ್ಮ ಶಾಲೆಯ ಒಂದನೆಯ ದರ್ಜೆಯ ಬಾಲಕರಷ್ಟೂ ವಿದ್ಯೆ ಬರುತ್ತಿರಲಿಲ್ಲವೆಂದು ನಮ್ಮ ಪೈಕಿ ಕೆಲವರು ಗುಟ್ಟಾಗಿ ತಿಳಿಸಿದರು. ಮಿ. ಶಾರ್ಪ್ ಮತ್ತು ಮಿ. ಮೆಲ್ಲರಿಗೆ ಹೇರಳ ಸಂಬಳ ಸಲ್ಲುತ್ತಿರುವುದಾಗಿ ವಿದ್ಯಾರ್ಥಿಗಳ ಹಿರಿಯರಲ್ಲಿ ನಂಬಿಕೆಯನ್ನುಂಟುಮಾಡಿ, ಅವರಿಂದ ಹೇರಳ ಹಣ ಪಡೆದು, ಈ ಇಬ್ಬರಿಗೆ ಬಹು ಕಡಿಮೆ ಸಂಬಳ ಕೊಟ್ಟು ಮಿ. ಕ್ರೀಕಲರು ಕೆಲಸ ಮಾಡಿಸುತ್ತಿದರೆಂದೂ ಕೇಳಿದೆ. ಮಿ. ಶಾರ್ಪರು ಕಾಣಲು ಬಹು ಜೋರಿನವರಂತೆ ಕಂಡರೂ, ನಿಜವಾಗಿಯೂ ಜೋರಿನವರಲ್ಲವೆಂದೂ ಅವರು ಧರಿಸಿದ್ದ ತಲೆ ಕೂದಲಿನ ಕವಚದ ಕಾರಣವಾಗಿ ಆತ ಹಾಗೆ ಕಾಣುತ್ತಿದ್ದರೆಂದೂ ಅವರು ಸಾಧಾರಣ ಮಿ. ಮೆಲ್ಲರಷ್ಟೇ ಸಾಧುಗಳೆಂದೂ ತಿಳಿದೆ.

ಮಿ. ಕ್ರೀಕಲರ ಜತೆಯಲ್ಲಿ ಭೋಜನ ಮಾಡುವ ಗೌರವ ಸ್ಟಿಯರ್ಫೋರ್ತಿಗೂ ಮಿ. ಶಾರ್ಪರಿಗೂ ಮಾತ್ರವಿತ್ತಂತೆ. ಸ್ಟಿಯರ್ಫೋರ್ತನನ್ನು ಯಾರೂ ಎಂದೂ ಗದರಿಸಿದ್ದಾಗಲೀ ಬೈದದ್ದಾಗಲೀ ಇಲ್ಲವಂತೆ. ಅವನಿಗೂ ಮಿ. ಕ್ರೀಕಲರ ಮಗಳಿಗೂ `ಒಳ್ಳೆಯದು’ ಇತ್ತಂತೆ. ಇನ್ನೂ ಇಂಥ ವಿಷಯಗಳನ್ನೆಲ್ಲ ಮಾತಾಡಿದೆವು. ಕೆಲವು ಸಂದರ್ಭಗಳಲ್ಲಿ ಸ್ಟಿಯರ್ಫೋರ್ತನೆ ಅದೆಲ್ಲ ನಿಜವೆಂದೂ ಒಪ್ಪುತ್ತಿದ್ದ. ಮಿ. ಕ್ರೀಕಲರ ಜತೆಗೆ ಭೋಜನದಲ್ಲಿ ಉತ್ತಮತರದ್ದನ್ನೆಲ್ಲ ಅವರಿಗೂ ಮತ್ತು ಸ್ಟಿಯರ್ಫೋರ್ತನಿಗೆ ಮಾತ್ರ ಬಡಿಸಿ, ಸ್ವಲ್ಪ ಕೆಳತರದ ಆಹಾರ ವಸ್ತುಗಳನ್ನು ಮಿ. ಶಾರ್ಪರಿಗೆ ಬಡಿಸುತ್ತಿದ್ದರಂತೆ.

ಆ ದಿನದ ಸಮಾರಂಭ ನಿರ್ವಿಘ್ನವಾಗಿ ಕಳೆಯಿತು. ನಾನು ಅಲ್ಲಿನ ಹುಡುಗರಲ್ಲಿ ಒಬ್ಬ ಗಣನೀಯನೇ ಆಗಿಹೋದೆನು. ಸ್ಟಿಯರ್ಫೋರ್ತನ ಅನುಗ್ರಹದ ಕಾರಣವಾಗಿ ಇತರ ಬಾಲಕರು ನನ್ನನ್ನು ಹಾಸ್ಯಮಾಡದೆ, ಹಿಂಸಿಸದೆ ಬಿಟ್ಟರು. ನನ್ನ ತಾಯಿ ಕೊಟ್ಟಿದ್ದ ಹಣ ಪೂರ್ತಿ ಖರ್ಚಾಗಿದ್ದರೂ, ಆ ಕಾರಣದಿಂದ ನನ್ನ ಜೀವನ ಸುಖವಾಗಿ ಸಾಗುವ ಮಾರ್ಗವನ್ನು ಕಂಡೆನು.

ಅಂದಿನಿಂದಲೇ ಸ್ಟಿಯರ್ಫೋರ್ತನು ನನ್ನ ಸ್ನೇಹಿತನಾಗಿ, ರಕ್ಷಕನಾಗಿ, ಮಾರ್ಗದರ್ಶಕನಾಗಿ ಮೆರೆದನು, ನನಗೆ ಅಕ್ಕ ತಂಗಿಯಂದಿರಿದ್ದಿದ್ದರೆ  ಅವರು ಸ್ಫುರದ್ರೂಪಿಗಳಾಗಿರುತ್ತಿದ್ದರೆಂದು ನಮ್ಮ ಮನೆಯವರನ್ನೇ ಪ್ರಶಂಸಿಸಿದನು. ಅಂದಿನ ಕೂಟ ವಿಸರ್ಜನೆಯಾದನಂತರ ನಾವು ಮಲಗಿ ನಿದ್ರಿಸಿದೆವು. ತನ್ನ ತೋಳಿನ ಮೇಲೆ ತಲೆಯನ್ನಿಟ್ಟುಕೊಂಡು ಮಲಗಿ ನಿದ್ರಿಸುತ್ತಿದ್ದ ಸ್ಟಿಯರ್ಫೋರ್ತನ ಮೇಲೆ ಕಿಟಕಿಗಾಗಿ ಬೆಳುದಿಂಗಳು ನುಗ್ಗಿ ಬಿದ್ದಿತ್ತು. ನಾನು ಅವನ ಸಮೀಪದಲ್ಲೇ ಮಲಗಿದೆನು. ನನ್ನ ನಿದ್ರೆ ಸ್ವಪ್ನಗಳಿಂದ ಬಾಧಿತವಾಗಿತ್ತು. ಅಂಥ ಸ್ವಪ್ನಗಳಲ್ಲಿ ಒಂದು ಆಶ್ಚರ್ಯಕರವಾದ ಸ್ವಪ್ನವೂ ಇತ್ತು. ಸ್ಟಿಯರ್ಫೋರ್ತನಿಗೆ ಈ ಪ್ರಪಂಚದಲ್ಲಿ ಮಾಡಿ ಪೂರೈಸಲಿದ್ದ ಕೆಲಸಗಳು ಅಪಾರವಾಗಿದ್ದುದರಿಂದ ಅವನು ನಿದ್ರಿಸದೆ, ನಮ್ಮ ಶಾಲಾ ಕಂಪೌಂಡಿನಲ್ಲಿ, ರಾತ್ರಿ ಸಹ ತುಂಬಾ ಕೆಲಸಗಳಲ್ಲಿ ಮಗ್ನನಾಗಿದ್ದಂತೆ ಒಂದು ಸ್ವಪ್ನ ಕಂಡೆನು. ಸ್ವಪ್ನವು ಆಶ್ಚರ್ಯಕರವಾಗಿ ತೋರಿ ಎಚ್ಚತ್ತು ಅದು ನಿಜವೇ ಎಂದು ಸುತ್ತಲೂ ನೋಡಿದಾಗ ಪಕ್ಕದಲ್ಲೇ ಮಲಗಿದ್ದ ಸ್ಟಿಯರ್ಫೋರ್ಥನನ್ನೇ ಕಂಡೆನು. ಅವನ ಸುಂದರ ರೂಪ ಮೊದಲಿನಂತೆಯೇ ಇದ್ದು, ಅವನು ತನ್ನ ತೋಳಿನ ಮೇಲೆ ತಲೆಯನ್ನಿಟ್ಟುಕೊಂಡು ಮಲಗಿ ನಿದ್ರಿಸುತ್ತಿದ್ದನು.

(ಮುಂದುವರಿಯಲಿದೆ)1 comment:

  1. NANU ODBEKADDE ILLA HOSASDONDU AVISHKARA ON AADA TAKSHANA NIMMA MATU KELTE

    ReplyDelete