07 March 2014

ಆಹಾರ, ಪರಂಪರೆ ಮತ್ತು ಆರೋಗ್ಯ

ಆರೋಗ್ಯದ ಪ್ರಶ್ನೆ ಗಹನವಾಗುತ್ತಿರುವ ದಿನಗಳಲ್ಲಿ ವೈಜ್ಞಾನಿಕ ಆಧುನಿಕತೆಗೆ ತೆರೆದುಕೊಂಡ ವೈದ್ಯರೊಬ್ಬರು ಔಷಧಗಳು ಬೇಡ, ಆಹಾರ ಸರಿ ಮಾಡಿ ಎನ್ನುತ್ತಾರೆ. ಆತ ಆಡಿದ್ದನ್ನು ಮಾಡಿ, ‘ಉಪದೇಶ ಅನುಷ್ಠಾನದಿಂದ ಸ್ವಾಸ್ಥ್ಯ ಮರುಕಳಿಸಿದ ಸ್ಪಷ್ಟ ಸಾಕ್ಷಿಗಳನ್ನೂ ಒದಗಿಸುತ್ತಾರೆ. ಈಗ ಮುಂದುವರಿದು ಆಹಾರ ದಾರಿ ತಪ್ಪಲು ಕಾರಣವಾದ ಪರಂಪರೆಯನ್ನು ವಿಮರ್ಶಿಸಿಕೊಳ್ಳಲು, ಅನ್ಯ ದೃಷ್ಟಿಕೋನಗಳ ಸಹಿತ ವಿಚಾರ ಸಂಕಿರಣ, ಸಂವಾದವನ್ನೇ ಮುಂದೆ ಮಾಡುತ್ತಾರೆ. ಇಂಥ ಅಪೂರ್ವ ಸನ್ನಿವೇಶ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲ್ಪಟ್ಟಆಹಾರ, ಪರಂಪರೆ ಮತ್ತು ಆರೋಗ್ಯ. (೨೩--೨೦೧೪)


ಇದು ಡಾ| ಶ್ರೀನಿವಾಸ ಕಕ್ಕಿಲ್ಲಾಯರ ಸಾಮಾಜಿಕ ಕಾಳಜಿಯ ಕೊಡುಗೆ. ಅವರು ವೃತ್ತಿಪರ ಸೇವೆಯ ಉದ್ದಕ್ಕೂ ಒಂದು ಚಿಕಿತ್ಸೆ ಬಯಸಿ ಬಂದವರಿಗೆ, ಪೂರಕ ಹಲವು ಸಲಹೆಗಳನ್ನು ಕೊಡುತ್ತಲೇ ಬಂದಿದ್ದಾರೆ. ಹೆಚ್ಚಿನ ಸಾರ್ವಜನಿಕವನ್ನು ಮುಟ್ಟುವಂತೆ, ವಿಜಯ ಕರ್ನಾಟಕದ ಅಂಕಣ ಬರಹದಲ್ಲಿ ಜಾಹೀರಾತು ಭಾಷೆ ಬಿಟ್ಟು, ಬರಹಗಳನ್ನೂ ಕೊಡುತ್ತ ಬಂದಿದ್ದಾರೆ. (ನನ್ನಲ್ಲಿಗೆ ಬನ್ನಿ ಎಂದಲ್ಲ, ವಿಚಾರಪರರಾಗಿ ಎಂದೇ! ೫-೩-೧೪ರ ಒಂದು ಮಾದರಿಯನ್ನಷ್ಟೇ ಓದಲು ಇಲ್ಲಿ ಚಿಟಿಕೆ ಹೊಡೆಯಿರಿ.) ಬಿದ್ದು ಗಾಯವಾಗಿದ್ದರೆ, ಸದ್ಯ ಮದ್ದು ಹಚ್ಚುವುದಕ್ಕಿಂತ ಬೀಳುವಂತೆ ನೂಕಿದವರು ಯಾರೆಂದು ತೋರಿಸುತ್ತಾರೆ. ಮುಂದೆ ಅಂಥವುಗಳಿಂದ ಪಾರುಗಾಣುವ ದಾರಿಯನ್ನೂ ಸೂಚಿಸುತ್ತಾರೆ!  ಅಂಥವಲ್ಲಿ ಒಂದು ವಿಚಾರಕ್ಕೆ, ಅಂದರೆ ಆರೋಗ್ಯಕರ ಆಹಾರಕ್ಕೆ, ಚೂಪು ಕೊಟ್ಟು ಸಂಘಟಿಸಿದ ಸಂವಾದ ವೇದಿಕೆ ಇದು. ಸಿದ್ಧನಗೌಡ ಪಾಟೀಲ್, ದೇವನೂರ ಮಹಾದೇವ ಮತ್ತು ದು. ಸರಸ್ವತಿ ವಿಚಾರದಲ್ಲಿ ತಮ್ಮ ಲೋಕಾನುಭವಗಳನ್ನು ವೇದಿಕೆಯ ಮೇಲಿದ್ದು ಹಂಚಿಕೊಂಡರು. (ಕೊನೆಯ ಸಂವಾದ ಅವಧಿಯಲ್ಲಿ ಸಭಾಸದರ ಪಾಲ್ಗೊಳ್ಳುವಿಕೆ ಮಾತ್ರ ನಿರಾಶಾದಾಯಕವಾಗಿತ್ತು.) ಇದರ ಆಯೋಜನೆಯಲ್ಲಿ ಉಳಿದಂತೆ ಪಾಲುಗೊಂಡವರು ಹೊಸತು ಮಾಸ ಪತ್ರಿಕೆ, ವಿವಿನಿಲಯ ಕಾಲೇಜು ಮತ್ತು ಸಮದರ್ಶಿ ವೇದಿಕೆ.

ಸಿದ್ಧನಗೌಡ ಪಾಟೀಲ, ಸಾಮಾಜಿಕ ಸ್ವಾಸ್ಥ್ಯ ಕೆಟ್ಟಲ್ಲಿಂದಲೇ ಆಹಾರ ಪರಂಪರೆಯ ಹುಳುಕುಗಳನ್ನು ಎತ್ತಿ ಆಡಿದರು. ಹುಟ್ಟಿನಿಂದ ಶ್ರೇಷ್ಠ ಕನಿಷ್ಠ ಎಂದು ತೊಡಗಿದ ಸಾಮಾನ್ಯ ಮನುಷ್ಯರ ಭಾವ-ವಿಕಾರ ಮುಂದುವರಿದು, ಅವರ ಸಂಪರ್ಕಕ್ಕೆ ಬರುವ ಎಲ್ಲ ಚರಾಚರಗಳಿಗೂ ವ್ಯಾಪಿಸಿದ್ದನ್ನು ಮೊದಲು ವಿಶದಪಡಿಸಿದರು. ಪ್ರಕೃತಿ ಜೀವವೈವಿಧ್ಯವನ್ನು ಪ್ರದರ್ಶಿಸಿದರೆ, ಮನುಷ್ಯ ತನ್ನ ಉಪಯೋಗ ಕೇಂದ್ರಿತವಾಗಿ ತರತಮವನ್ನೇ ಕಾಣುತ್ತ ಬಂದ. ಅದು ಕಾಲಾತೀತ ಸತ್ಯ - ಪರಂಪರೆ, ಎಂದೇ ನಂಬಿಕೊಂಡ. ಶ್ರೇಷ್ಠ -  ಕನಿಷ್ಠ, ಪವಿತ್ರ - ಅಪವಿತ್ರ, ಪೂಜನೀಯ - ವರ್ಜನೀಯ ಎಂದಿತ್ಯಾದಿ ಪ್ರಾಣಿ, ಪಕ್ಷಿ, ಗಿಡ, ಮರ, ಲೋಹ, ಕಲ್ಲು ಮುಂತಾದವನ್ನು ಗುರುತಿಸಿ, ತದನುಗುಣವಾಗಿ ಪೋಷಿಸುತ್ತಿರುವುದು ವಾಸ್ತವದಲ್ಲಿ ಪ್ರಾಕೃತಿಕ ಅಸಮತೋಲನವೇ ಆಗಿದೆ. ವಿಕಲ್ಪ ನಮ್ಮ ಆಹಾರ ಪರಂಪರೆಯನ್ನೂ ಕಲುಷಿತಗೊಳಿಸಿ, ನಿಜ ಅರ್ಥದಲ್ಲಿ ಅಪವಿತ್ರಗೊಳಿಸಿ, ಆರೋಗ್ಯವನ್ನೇ ನಾಶ ಮಾಡುತ್ತಿರುವುದನ್ನು ವಿಶ್ಲೇಷಿಸಿದರು. ಪಾರಂಪರಿಕ ಆಹಾರದಲ್ಲಿ ಜೀವಸತ್ತ್ವದ ಕೊರತೆ ಅನುಭವಿಸುತ್ತಿದ್ದ ರೋಗಿಯೊಬ್ಬಪವಿತ್ರ’ ಸಸ್ಯಾಹಾರಿಯಾಗಿದ್ದ. ಆತ ವೈದ್ಯಕೀಯ ಸಲಹೆ ಮೇರೆಗೆಅಪವಿತ್ರ’ ಮೊಟ್ಟೆಯನ್ನು ತಿನ್ನಲೇಬೇಕಾದಾಗ, ಆತನ ಮನೋಸ್ವಾಸ್ಥ್ಯಕ್ಕಾಗಿ ಮೊಟ್ಟೆಗೆ ವಿಭೂತಿಯ ನಾಮ ಹಾಕಿ ಪವಿತ್ರ’ಗೊಳಿಸಿದ ಉದಾಹರಣೆ ನಿರೂಪಿಸಿದರು! ಇದರ ವಿಸ್ತರಣೆಯಾಗಿ ಮತ್ತು ಇನ್ನೊಂದೇ ಮುಖವನ್ನು ನನ್ನ ತಂದೆಯ (ಜಿಟಿನಾ) ನೆನಪಿನೊಡನೆ ಇಲ್ಲಿ ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ.

ನಮ್ಮ ಕುಟುಂಬ ಪಾರಂಪರಿಕವಾಗಿ ಸಸ್ಯಾಹಾರದ್ದು. ತಂದೆಗೆ ರೂಢಿಯನ್ನು ಸುಮಾರು ೭೮ ವರ್ಷದುದ್ದಕ್ಕೂ ಬದಲಿಸುವ ಆವಶ್ಯಕತೆ ಬಂದೇ ಇರಲಿಲ್ಲ. ಆದರೆ ಘಟ್ಟದಲ್ಲಿ ಅವರು ಓರ್ವ ವೈದ್ಯ ಮಾಡಿದ ತಪ್ಪಿನಿಂದ ಕ್ಷಯಪೀಡಿತರಾಗಿ, ಯುಕ್ತ ಚಿಕಿತ್ಸೆಯೊಡನೆ ಗುಣಮುಖರಾಗಿ ಚೇತರಿಸಿಕೊಳ್ಳುವ ಅನಿವಾರ್ಯತೆ ಬಂತು. ಆಗ ತಂದೆಯ ಪ್ರಾಯ, ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನೆಲ್ಲ ಮೀರಲು ಬರಿಯ ಸಸ್ಯಾಹಾರ ಸಾಕಾಗುವುದಿಲ್ಲ ಎಂದು ವಿಚಾರವಂತ ವೈದ್ಯಕೀಯ ಸಲಹೆ ಬಂತು. ಸಸ್ಯಾಹಾರಕ್ಕೂ ಮೀರಿದ ಪ್ರೋಟೀನ್ದಾಯಿ ಮತ್ತು ಸುಲಭ ಜೀರ್ಣಕಾರಿಯಾದ ಮೊಟ್ಟೆಯನ್ನಾದರೂ ಸೇವಿಸುವುದು ಅವಶ್ಯ. ಆದರೆ ಮಾತ್ರೆ, ಟಾನಿಕ್ಕುಗಳ ಮರಸಿನಲ್ಲಿ ಹಲವು ಪ್ರಾಣಿ ಭಾಗಗಳನ್ನು ಧಾರಾಳ ಜೀರ್ಣಿಸಿಕೊಂಡರೂಆಚಾರ ಉಳಿದಿದೆ ಎಂದು ಭ್ರಮಿಸಿದವರೂ ಸೇರಿದಂತೆ ಕೆಲವರು ತಂದೆಯನ್ನು ನಿರುತ್ತೇಜನಗೊಳಿಸಲು ಪ್ರಯತ್ನಿಸಿದರು. ತಂದೆಯ ವೈಚಾರಿಕತೆ  ಅವೆಲ್ಲವನ್ನು ಮೀರಿ ನಿಂತದ್ದಕ್ಕೆ, ನಿಯಮಿತವಾಗಿ ಮೊಟ್ಟೆ ತಿಂದು ಶೀಘ್ರ ಚೇತರಿಕೆ ಕಂಡರು.

ಬುದ್ಧ ಶಿಷ್ಯನೊಡನೆ ನಡೆಸಿದ ಸಂವಾದವನ್ನು ನನ್ನ ತಂದೆ ಆಗಾಗ ನೆನೆಸಿಕೊಳ್ಳುತ್ತಿದರು: ಬುದ್ಧ ಹೊಸ ವಿಚಾರವೊಂದನ್ನು ಬಿತ್ತಿದ. ಕೂಡಲೇ ಶಿಷ್ಯ ಪ್ರತಿಕ್ರಿಯಿಸಿದ, ನಿಮ್ಮ ನಡೆ ಶಾಸ್ತ್ರದಲ್ಲಿಲ್ಲ.
ಬುದ್ಧ ಹೇಳಿದ “ಸೇರಿಸು.
ಶಿಷ್ಯ ಅದು ಶಾಸ್ತ್ರವಿರೋಧಿಯಾಗುತ್ತದೆ.
ಬುದ್ಧ ಶಾಸ್ತ್ರವನ್ನೇ ತಿದ್ದು.
ಪರಂಪರೆಯ ಲಿಖಿತ ರೂಪವೇ ಶಾಸ್ತ್ರ, ಅದು ಕಾಲಾತೀತವಲ್ಲ. ತಂದೆ ಇದನ್ನು ಅರ್ಥೈಸಿಕೊಂಡು ಅನುಷ್ಠಾನದಲ್ಲಿ ಅಳವಡಿಸಿದ್ದರು!

ಸಿದ್ಧನಗೌಡರು ಹೆಚ್ಚಿನ ಉದಾಹರಣೆಯಾಗಿ ತಮ್ಮ ಆತ್ಮಕಥನವನ್ನೇ ಸೂಕ್ಷ್ಮವಾಗಿ ಬಿಡಿಸಿಟ್ಟರು:
ಸುಮಾರು ಏಳು ವರ್ಷಗಳ ಹಿಂದೆ ಅವರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಬಹುದೊಡ್ಡ ರೋಗಿಯಾಗಿದ್ದರು. ಹೋರಾಟದಲ್ಲಿ ತರಹೇವಾರಿ ಮದ್ದು ಹಾಗೂ ಚಿಕಿತ್ಸೆಗಳಿದ್ದೂ ಆಯುಷ್ಯ ಬತ್ತುತ್ತಿರುವುದನ್ನು ಅಸಹಾಯಕವಾಗಿ ನೋಡುತ್ತಲೇ ಇದ್ದರು. ಆಗ ಸಿಕ್ಕ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯರ ಸಲಹೆ ಮೇರೆಗೆ ಇವರು ಕೇವಲ ಆಹಾರದ  ಅರ್ಥಪೂರ್ಣ ಬಳಕೆಗಿಳಿದರಂತೆ. ಈಚಿನ ಏಳು ವರ್ಷಗಳಲ್ಲಿ ಇವರು ಔಷಧಗಳನ್ನು ಪೂರ್ತಿ ದೂರಮಾಡಿ, ಸ್ವಸ್ಥ ಜೀವನ ನಡೆಸುತ್ತಿದ್ದಾರೆ! ಮೊದಲು ಹಸಿವಿಗಾಗಿ ಪರಂಪರೆಯ ಆಹಾರವನ್ನು (ಅವರೇ ಹೇಳಿದಂತೆ – ಸಿಕ್ಕಿದ್ದನ್ನು) ತಿನ್ನುತ್ತಿದ್ದವರು, ಈಗ ಆರೋಗ್ಯಕ್ಕಾಗಿ ವಿಚಾರಪೂರ್ಣ ಆಹಾರವನ್ನು ತಿನ್ನುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು, ಇದು ಯಾವುದೇ ಔಷಧೀಯ ಎಂದು ಬಿರುದಾಂಕಿತ ಪದಾರ್ಥವನ್ನೋ ಅಥವಾ ಅಂಥವುಗಳ ಪರಿಷ್ಕೃತ ರೂಪವನ್ನೋ (ಕಷಾಯ, ಲೇಹ್ಯ ಇತ್ಯಾದಿ) ಬಲವಂತವಾಗಿ ಸೇವಿಸುವುದಲ್ಲ. ನಮ್ಮದೇ ಪರಿಸರದಲ್ಲಿ ಲಭ್ಯವಾದ ಪರಿಕರಗಳಲ್ಲಿ ಅವಗಣನೆಗೀಡಾದ ಆಹಾರ ಸಂಪತ್ತನ್ನು ಎತ್ತಿ ಬಳಸುವ ಕ್ರಿಯೆ. ಉದಾ: ಕೋಸುಂಬರಿ, ವೈವಿಧ್ಯಮಯ ಪಲ್ಯಗಳು, ಹಸಿ ತರಕಾರಿಯ ಸಲಡ್ಗಳು (ಕೊಚ್ಚು ಸಳ್ಳಿ), ಪಿಷ್ಟ ಪ್ರಧಾನವಾದ (ಅಕ್ಕಿ, ಗೋಧಿ, ರಾಗಿ, ಜೋಳ ಇತ್ಯಾದಿ) ಧಾನ್ಯಗಳನ್ನುಳಿದ ಕಾಳುಬೇಳೆಗಳ ದೋಸೆ, ಇಡ್ಲಿ ಇತ್ಯಾದಿ. ಬೆರಗಿನ ಭಾಷೆಯಲ್ಲಿ ಹೇಳುವುದಿದ್ದರೆ ಇದು ಪವಾಡವನ್ನೇ ಸಾಧಿಸುತ್ತದೆ! ಸಿದ್ಧನಗೌಡ ಪಾಟೀಲ ಹೃದಯ ತುಂಬಿ ಇನ್ನೂ ಕನಿಷ್ಠ ಇಪ್ಪತ್ತೈದು ವರ್ಷ ಬಾಳುವ ಭರವಸೆ ಹೊಂದಿದ್ದೇನೆ” ಎಂದ ಮಾತು, ನೂರು ವಿವರಣೆಗಳಿಗೆ ಮಿಗಿಲಾದ  ತೂಕ ಕೊಟ್ಟಿತು, ಸಭೆಗೆ ಯುಕ್ತ ಪ್ರಾಸ್ತಾವಿಕವನ್ನೇ ಸಾರಿತು.

ಆರೆಂಟು ತಿಂಗಳ ಹಿಂದೆ ಇಲ್ಲೇ ನಾನು ಕ್ಯಾರಟ್ಸ್ ಭಿನ್ನ ಸ್ವರೂಪದ, ಆರೋಗ್ಯಕರ ಆಹಾರ ಕೇಂದ್ರ, ಪರಿಚಯಿಸಿದ್ದೆ. ಅದು ವೀಗನಿಸಂ ಎಂದೇ ಪ್ರಸಿದ್ಧವಾದ, ಹಿಂಸಾ ವಿರೋಧಿ ತತ್ತ್ವಾಧಾರಿತ ಹೋಟೆಲ್. ಮತ ಸಾಂಪ್ರದಾಯಿಕ ಸಸ್ಯಾಹಾರಿಗಳು ಅಂಗೀಕರಿಸುವ ಹಾಲು, ಜೇನು ಮುಂತಾದ ಪ್ರಾಣಿಜನ್ಯ ಆಹಾರ ಪದಾರ್ಥಗಳನ್ನು ಬಹಿಷ್ಕರಿಸುತ್ತದೆ. ಕ್ಯಾರಟ್ಸ್ ಸಸ್ಯಾಹಾರದ ಶುದ್ಧಾಶುದ್ಧಗಳ ಅರಿವು ಹೆಚ್ಚಿಸಿಕೊಳ್ಳುತ್ತ, ಜೀವಪೋಷಕ ಮೌಲ್ಯಗಳ ಮಾಪನ ಹಾಗೂ ಗುಣವರ್ಧನೆಯನ್ನು ಮಾಡುವುದಂತೂ ನಿಜಕ್ಕೂ ದೊಡ್ಡ ಕೊಡುಗೆಯೇ ಸರಿ. ಆದರೆ ತಾತ್ತ್ವಿಕವಾಗಿ ಇದರ ಸೋಲಿರುವುದು ಹಿಂಸೆಯ ಪರಿಕಲ್ಪನೆಯಲ್ಲಿ. ಸಸ್ಯವರ್ಗವೂ ಜೀವಿ, ಅದರ ಬಳಕೆಯೂ ಹಿಂಸೆ ಎನ್ನುವಲ್ಲಿ ಇದು ಅನಿವಾರ್ಯವಾಗಿ ಅನುಕೂಲಶಾಸ್ತ್ರವಾಗುತ್ತದೆ. ನಮ್ಮಲ್ಲಿ ಪರಂಪರೆಯಿಂದ ಸಸ್ಯಾಹಾರ ರೂಢಿಸಿರುವ ಮಂದಿಯಿರುವವರೆಗೆ (ಸ್ವತಃ ನಾನೇ ಇದ್ದೇನೆ!) ವೀಗನ್ ತತ್ತ್ವಗಳಿಗೆ ಆಂಶಿಕ ಬೆಂಬಲ ಕಡಿಮೆಯಾಗದು, ಆದರೆಅಹಿಂಸಾ ವಾದದೊಡನೆಯೇ ಮತಗಟ್ಟೆಗಿಳಿದರೆ ಸೋಲು ಖಚಿತ. ಪ್ರಸ್ತುತ ವಿಚಾರ ಸಂಕಿರಣದಲ್ಲಿ ಹಿಂಸಾಹಿಂಸೆಗಳ ವಾದವನ್ನು ಪ್ರಸ್ತಾವಿಸಿ, ನಾಜೂಕಾಗಿ ನಿಭಾಯಿಸಿದವರು ದೇವನೂರು ಮಹಾದೇವ - ಇನ್ನೋರ್ವ ಸಂಪನ್ಮೂಲ ವ್ಯಕ್ತಿ.

ಮಹಾದೇವ ಮಾಂಸಾಹಾರಿಗಳು ಹಿಂಸಾವಾದಿಗಳು ಎನ್ನುವ ಉಗ್ರ ಆರೋಪವನ್ನು ಸೌಮ್ಯವಾಗಿ ಅಲ್ಲಗಳೆದರು. ಒಟ್ಟಾರೆ ಪ್ರಾಣಿವರ್ಗಕ್ಕಾಗುವುದು ನಮಗೆ ಗೋಚರಿಸುವ ಹಿಂಸೆಯಾದರೆ, ಜೀವಿಗಳೇ ಆದ ಸಸ್ಯ ವರ್ಗಕ್ಕಾಗುವುದು ಅಗೋಚರ ಹಿಂಸೆ ಎಂದು ಎಚ್ಚರಿಸಿದರು. ವಾದಕ್ಕಾಗಿಯೇ ಹೇಳುವುದಿದ್ದರೆ ಮಾಂಸಾಹಾರದ ಹಿಂಸೆ ದೊಡ್ಡದಾಗಿ ಕಂಡು, ಸಸ್ಯಹಿಂಸೆಯ ಬಗ್ಗೆ ಅಸೂಕ್ಷ್ಮರಾಗುವುದು ಸರಿಯಾದೀತೇ ಎಂದು ತಮಾಷೆ ಮಾಡಿದರು. ಪ್ರಾಕೃತಿಕವಾಗಿ ಮನುಷ್ಯ ಸೇರಿದಂತೆ ಎಲ್ಲಾ ಪ್ರಾಣಿಜೀವಿಗಳೂ ಜೀವಿಭಕ್ಷಕಗಳೇ ಆಗುವುದು ಅನಿವಾರ್ಯ. ಪ್ರಾಣಿವರ್ಗದಲ್ಲಿ ಪ್ರಾಕೃತಿಕವಾಗಿ ಸಸ್ಯಾಹಾರಿ (ಜಿಂಕೆ, ಕಡವೆ, ಆನೆ ಇತ್ಯಾದಿ), ಮಾಂಸಾಹಾರಿ (ಹುಲಿ, ಚಿರತೆ ಇತ್ಯಾದಿ) ಮಿಶ್ರಾಹಾರಿಗಳೂ (ಕರಡಿ, ಮಂಗ, ಮನುಷ್ಯ ಇತ್ಯಾದಿ) ಇರಬಹುದು. ಆದರೆ ನಿರ್ಜೀವಾಹಾರಿಗಳಿಲ್ಲ! (ಕಲ್ಲು, ಮಣ್ಣು, ಸೂರ್ಯನ ಬೆಳಕು, ನೀರು ಇತ್ಯಾದಿ)

ದೇವನೂರು ಉಪದೇಶ ಉತ್ಸಾಹಿಯಾಗಲಿಲ್ಲ, ವಿಚಾರ ಪ್ರಚೋದಕ ಉದಾಹರಣೆಗಳನ್ನೇ ಮುಖ್ಯವಾಗಿ ಸಂಕಲಿಸಿ ಮಾತು ಬೆಳೆಸಿದ್ದು ತುಂಬ ಆತ್ಮೀಯವಾಗಿತ್ತು. ಆಹಾರ ಆಯ್ಕೆಯ ತತ್ತ್ವಗಳ ರೂಪಣೆಯಲ್ಲಿ ಪ್ರಾದೇಶಿಕ ಔಚಿತ್ಯವನ್ನು ಮರೆಯದಂತೆ ಸೂಚಿಸಿದರು. ಹಾವು ತಿನ್ನುವವರ ಊರಿನಲ್ಲಿ ಪ್ರಾಣಿದಯೆ ಮಾಡಿದವನೊಬ್ಬ ಎದುರಿಸಿದ ಮುಜುಗರ,  ಚುರುಗುಟ್ಟುವ ಬಿಸಿಲು ಮತ್ತು ಮರಳು ರಾಚುವ ಅರಬ್ ದೇಶಗಳಲ್ಲಿ ಮೈಮುಖ ಸರಿಯಾಗಿ ರಕ್ಷಿಸದ ಭಾರತೀಯ ಉಡುಪು-ಪರಂಪರೆಯನ್ನು ಅನುಸರಿಸಿದರಾಗುವ ಹಿಂಸೆಯೇ (ಮರುಭೂಮಿಗೆ ಅರಬರ ಗೋಷಾ ಸಮರ್ಥನೀಯ ಉಡುಪು, ಪಂಚೆ ಸೀರೆಯಲ್ಲ!) ಮುಂತಾದ ಆಖ್ಯಾಯಿಕೆಗಳು ಸರಳ ಸತ್ಯ ದರ್ಶನ ಮಾಡಿಸಿದವು. ಉತ್ತರ ಭಾರತದ ಯಾವುದೋ ಆದಿವಾಸಿ ಜನಗಳಿಗೆ ಗೋಮಾಂಸ ಭಕ್ಷಣೆ ಅವರ ಪರಂಪರೆಯ ಅಂಗ. ರಾಶಿ ಸೊಪ್ಪು ತಿಂದರೂ ಗಳಿಸಲಾಗದಷ್ಟು ಹೆಚ್ಚಿನ ಜೀವಸತ್ತ್ವಗಳ ಪೂರೈಕೆ ಅವರಿಗೆ ಕನಿಷ್ಠ ಖರ್ಚಿನಲ್ಲಿ ಗೋಮಾಂಸ ಒದಗಿಸುತ್ತಿತ್ತು. ಅದನ್ನು ಕೇವಲ ರಾಜಕೀಯ ಪ್ರಣಾಳಿಕೆಯ ಅಂಗವಾಗಿ ಕಂಡ ವಿಶ್ವಹಿಂದೂಪರಿಷತ್ತಿನ ಅಂಗಸಂಸ್ಥೆಯೊಂದರ ಸ್ವಘೋಷಿತ ಗೋರಕ್ಷಕರು ಒಪ್ಪಲಿಲ್ಲ. ಅವರು ಆದಿವಾಸಿಗಳ ಮೇಲೆ ಧರ್ಮವಿರೋಧೀ ಆರೋಪ ಹೊರಿಸಿ ಕಗ್ಗೊಲೆ ನಡೆಸಿದ್ದನ್ನು ತೀವ್ರ ವಿಷಾದದಲ್ಲಿ ಉಲ್ಲೇಖಿಸಿದರು. ಆಹಾರದ ನೆಲೆಯಲ್ಲಿ ಪಾಪದ ಭೀತಿಯನ್ನುಂಟು ಮಾಡುವುದಾಗಲೀ ಪುಣ್ಯದ ಆಮಿಷ ಒಡ್ಡುವುದನ್ನಾಗಲೀ ದೇವನೂರು ಸ್ಪಷ್ಟ ನಿರಾಕರಿಸಿದರು. ಆಹಾರಧರ್ಮವಾಗಿ ಗೋಮಾಂಸ ತಿಂದವರನ್ನು ಬಲಿಹಾಕಿದವರಿಗೆ ಪ್ರತಿಭಟನೆಯಾಗಿ ದೇವನೂರು, ಗೋಮಾಂಸ ಭಕ್ಷಣೆಯನ್ನು ಸಾರ್ವಜನಿಕವಾಗಿ ಘೋಷಿಸಿ, ವ್ರತವಾಗಿಯೇ ಸ್ವೀಕರಿಸಿದ ಪ್ರಸಂಗ ಮನಕಲಕುವಂತಿತ್ತು. ಇಲ್ಲಿ ಮತಾಂಧತೆಯನ್ನೂ ಮಹಾದೇವ ನಿಸ್ಸಂದಿಗ್ಧ ಮಾತುಗಳಲ್ಲಿ ಬಿಡಿಸಿಟ್ಟು ಜಾಗೃತಿ ಮೂಡಿಸಿದರು. ಮನುಷ್ಯತ್ವ ಮೀರಿದ ಧರ್ಮ ಆಹಾರವನ್ನು ವಿಷಮಯ ಮಾಡಿ, ಸಾಮಾಜಿಕ ಆರೋಗ್ಯ ಕೆಡಿಸುವುದರ ಕುರಿತು ಗಂಭೀರ ಎಚ್ಚರಿಕೆಯೂ ಇಲ್ಲಿತ್ತು.

ದೇವನೂರು ಕೊಟ್ಟ ಇನ್ನೊಂದೇ ಉದಾಹರಣೆ ಐತಿಹಾಸಿಕ ದಿನಗಳದ್ದು. ಆಗಿನ ಯಾವುದೋ ಮಹಾಯುದ್ಧವೊಂದರ ಎಡೆಯಲ್ಲಿ, ನರಭಕ್ಷಣೆಗೆ ಪ್ರಯತ್ನಪಟ್ಟ ಒಬ್ಬನನ್ನು ಭಟರು ವಿಜಯೀ ಚಕ್ರವರ್ತಿ ಎದುರು ಅಪರಾಧಿಯಂತೆ ತಂದರಂತೆ. ಬಡಪಾಯಿ ಸೆರೆಯಾಳು ಅಂದಿನ ಹೊಟ್ಟೆಪಾಡಿಗಷ್ಟೇ ಒಂದು ಹೆಣ ಬಯಸಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡ. ಮುಂದುವರಿದು, ಸಾವಿರಾರು (ವೈರಿ ಸೈನಿಕ) ಜನರನ್ನು ಕಡಿದಿಕ್ಕಿದ ಚಕ್ರವರ್ತಿಯ ಹಸಿವು ಅದೆಷ್ಟು ಅಪಾರ ಎಂದೂ ಬೆರಗುಪಟ್ಟ! ಆಹಾರದ ಆಯಾಮವನ್ನು ಮೀರಿದ್ದು ನಿಜವಾದ ಹಿಂಸೆ ಎಂಬ ಸರಳ ಸತ್ಯ ಇಲ್ಲಿ ಹೊರಹೊಮ್ಮಿದ್ದು ಮಾರ್ಮಿಕವಾಗಿತ್ತು. (ಸುಲಭ ಹಣಕ್ಕಾಗಿ ಕಾಡು ಬೋಳಿಸುವವರಿಗೆ ಇದು ಅರ್ಧವಾದೀತೇ?)

ಮೈಸೂರಿನ ದು. ಸರಸ್ವತಿ, ಭಂಗಿ ಸಮಾಜದ (ತೋಟಿಗಳು ಅಥವಾ ಹೇಲು ಗೋಚುವವರು) ಕುರಿತು ಮತ್ತು ಆಹಾರ ಬಳಕೆಯ ವೈವಿಧ್ಯಗಳ ಕುರಿತು ಅಧ್ಯಯನಕ್ಕಾಗಿ ಪ್ರತ್ಯೇಕವಾಗಿ ಎರಡು ಬಾರಿ ಭಾರತ ತಿರುಗಿದವರು. ಅವರಿಗೆ ದಕ್ಕಿದ ವಿಶಿಷ್ಟ ಅನುಭವ, ಅಂದರೆ ಆಹಾರ ವಸ್ತುವಿನ ಸ್ವೀಕಾರ ಮತ್ತು ವಿಸರ್ಜನೆಯ ಮುಖಗಳ ತಿಳುವಳಿಕೆಯೇ ಮಾತುಗಳಾಗಿ, ಪ್ರಸ್ತುತ ಸಂಕಿರಣಕ್ಕೆ ಹೆಚ್ಚಿನ ತೂಕ ತಂದುಕೊಟ್ಟಿತು.

ಸಿದ್ಧನಗೌಡರು ಕೊಟ್ಟ ಆಹಾರ ವೈವಿಧ್ಯದಲ್ಲಿ ನಡೆಯುವ ಸಾಮಾಜಿಕ ಅಸಮತೋಲನದ ಋಣಾತ್ಮಕ ಚಿತ್ರವನ್ನು ಸರಸ್ವತಿ ನಿರಾಕರಿಸಲಿಲ್ಲ. ಆದರೆ ಅಂಥ ಸನ್ನಿವೇಶ ಶೋಧಿಸಿ ರೂಢಿಸಿದ ಧನಾತ್ಮಕ ಅಂಶವನ್ನು ಬಿಡಿಸಿಟ್ಟರು. ಸಾಮಾನ್ಯ ವೈದ್ಯಕೀಯ ಸಲಹೆಗಳಲ್ಲಿ ಗರ್ಭಿಣಿಯಾದವಳಿಗೆ ಪೌಷ್ಟಿಕ ಆಹಾರವನ್ನು ವಿಶೇಷವಾಗಿ ಹೇಳುವುದಿದೆ. ಹಾಗೆ ಹಾಲು, ಹಣ್ಣು, ಬಾದಾಮಿ, ಗೋಡಂಬಿ ಮುಂತಾದ ಶಿಷ್ಟ ಸುವಸ್ತುಗಳ ಪಟ್ಟಿ ಬೆಳೆಸುವಾಗ ಬಹುಸಂಖ್ಯಾತರ ಆರ್ಥಿಕ ದೌರ್ಬಲ್ಯ ಗಣನೆಗೇ ಬರುವುದಿಲ್ಲ. ಆದರೆ ವಾಸ್ತವದಲ್ಲಿ ಗಣನೆಗೆ ನಿಲುಕದ ಪ್ರಾಕೃತಿಕ ಆಹಾರ ಸಂಪತ್ತನ್ನು ಗುರುತಿಸಿ ಬಳಸುವಲ್ಲಿ ತಳ ಸಮುದಾಯಗಳು ಪರಂಪರೆ ಪರಿಣತವೇ ಇದೆ. ಶಿಷ್ಟ ಬೇಡಿಕೆಯ ಪಟ್ಟಿಯಿಂದ ಹೊರಗಿನ, ಆದರೆ ಪೌಷ್ಟಿಕತೆಗೇನೂ ಕೊರತೆಯಾಗದಂತೆ ಆಹಾರವಾಗಬಲ್ಲ ಬಲುದೊಡ್ಡ ಪ್ರಾಣಿ ಸಂಪತ್ತಿನ ಜ್ಞಾನ ಇವರ ಸೊತ್ತು. (ಇರುವೆ, ಇಲಿ, ಕಪ್ಪೆ, ವೈವಿಧ್ಯಮಯ ಹಕ್ಕಿ, ಹಕ್ಕಿಮೊಟ್ಟೆ, ಮೀನು ಏಡಿ ಇತ್ಯಾದಿ.) ಹಾಗೇ ಪ್ರಾಕೃತಿಕವಾಗಿ ಒದಗುವ (ಕೃಷಿ ಮಾಡದ), ಆದರೆ ಶಿಷ್ಟವರ್ಗ ಕಾಡೆಂದು ಬೀಳ್ಗಳೆಯುವ ನೂರೆಂಟು ಚಿಗುರು, ಸೊಪ್ಪು, ಹೂವು, ಕಾಯಿ, ಬೇರು ಮುಂತಾದವು ಇವರ ಊಟದ ಪಟ್ಟಿಗೆ ಜೀವಸತ್ತ್ವ ಪೂರೈಸುವುದನ್ನೂ ಸರಸ್ವತಿ ದಾಖಲಿಸುತ್ತಾರೆ. ಆಹಾರ ಪರಂಪರೆ, ಅದರಲ್ಲೂ ಮುಖ್ಯವಾಗಿ ಮಾಂಸಾಹಾರ ಕುರಿತಂತೆ ಇತರರು ಹೇಳುವುದಕ್ಕಿಂಥ ಹೆಚ್ಚಿಗೆ ಸ್ವತಃ ಮಾಂಸಾಹಾರಿಗಳಿಗೇ ಇರುವ ಕೀಳರಿಮೆಯನ್ನೂ ಸರಸ್ವತಿ ಸಖೇದ ಗುರುತಿಸುತ್ತಾರೆ.

ಅತಿ ಸಿರಿವಂತ ಜೈನ ಸಮುದಾಯವೇ ಇದ್ದ ಅದೊಂದು ಊರಿನಲ್ಲಿ ಪಾಯಖಾನೆಗಳೇ ಇಲ್ಲ ಎಂದು ಸರಸ್ವತಿ ಮುಂದುವರಿದರು. ಅಲ್ಲಿ ಇಂದಿಗೂ ತೋಟಿಗಳು ಕೈಯಾರೆ ಮಲ ಬಾಚಿ ವಿಲೇವಾರಿ ನಡೆಸುತ್ತಿರುವುದು ಕಂಡು ಇವರು ಬೆರಗಿನಲ್ಲೇ ಕಾರಣ ಕೆದಕಿದರು. ಆಗ ಆ ಸಮಾಜ ಮತಾಚಾರದ ಜೀವ ಕಾರುಣ್ಯದಲ್ಲಿ ತಮ್ಮ ಹೇಲಿನಲ್ಲಿನ ಹುಳುಗಳಿಗೆ ಹಿಂಸೆಯಾಗಬಾರದೆಂಬ ಎಚ್ಚರವಹಿಸಿದ್ದು ತಿಳಿಯಿತು. ಅವರ ಅಹಿಂಸೆಯ ಪರಿಕಲ್ಪನೆಯಲ್ಲಿ ಮಾನವಗೌರವಕ್ಕೆ ಬೆಲೆಯೇ ಇಲ್ಲದ್ದು ಜುಗುಪ್ಸೆ ತರುವಂಥದ್ದು; ಪರಂಪರೆಯ ಪೊಳ್ಳನ್ನು ಎತ್ತಿ ತೋರಿಸುವಂಥದ್ದು!

ಹಿಂಸೆ ಬಗ್ಗೆ ಮಾತಾಡುತ್ತಾ ಸವಿತಾ ನಾಗಭೂಷಣರ ಪದ್ಯವನ್ನು ದು. ಸರಸ್ವತಿ ಉದ್ಧರಿಸಿದರು. ಆಗ ಇದೇ ನಿಟ್ಟಿನಲ್ಲಿ ನಾನು ಸುಮಾರು ಎರಡೋ ಮೂರೋ ದಶಕಗಳ ಹಿಂದೆ ಉದಯವಾಣಿಯಲ್ಲಿ ಬರೆದ ಪತ್ರ ನೆನಪಿಗೆ ಬಂತು. ಆಗ ಬೆಂಗಳೂರಿನಲ್ಲಿ ಆಧುನಿಕ ಕಸಾಯಿಖಾನೆ ಬರುವುದಿತ್ತು. ಅದನ್ನು ಹಿಂಸೆಯ ನೆಪವೊಡ್ಡಿ ಮಾಧ್ಯಮಗಳಲ್ಲಿ ಉಡುಪಿಯ ಮಠವೂ ಸೇರಿದಂತೆ ಹಲವರು ಬಲವಾಗಿ ಪ್ರತಿಭಟಿಸಿದರು. ನಾನು ರೂಢಿಯಲ್ಲಿ ಸಸ್ಯಾಹಾರಿಯೇ ಆದರೂ ಅನ್ಯರ ಆಹಾರ ಸ್ವಾತಂತ್ರ್ಯವನ್ನು ಅವಮಾನಿಸಬಾರದೆಂದು ಪ್ರತಿಕ್ರಿಯಿಸಿದ್ದೆ. ಸಸ್ಯಾಹಾರದಲ್ಲೂ ನಡೆಯುವುದು ಜೀವಹಿಂಸೆಯೇ ಅಲ್ಲವೇ ಎಂದು ಎಂದು ವ್ಯಂಗ್ಯವಾಡಿದ್ದೆ. ಅದಕ್ಕೆ ಉದಾಹರಣೆಯಾಗಿ ಚಕ್ಕುಲಿ ಮಾಡುವ ಕ್ರಮವನ್ನೇ ವಿಸ್ತರಿಸಿ ಗೇಲಿ ಮಾಡಿದ್ದು ಹೀಗಿತ್ತು. ಭತ್ತ, ಉದ್ದಿನಮೊಟ್ಟೆಗಳನ್ನು ಬಡಿದುತಾಯಿಯಿಂದ ಬೇರ್ಪಡಿಸಿ, ಸಿಪ್ಪೆ ಸುಲಿದು, ನೀರಿನಲ್ಲಿ ನೆನೆಸಿ, ಬಿಸಿಲಲ್ಲಿ ಒಣಗಿಸಿ, ಬಾಣಲೆಯಲ್ಲಿ ಹುರಿದು, ಕಲ್ಲಿನಲ್ಲಿ ಕುಟ್ಟಿ, ಇತರ ಪರಿಕರಗಳೊಡನೆ ನಾದಿ, ಒರಳಲ್ಲಿ ಒತ್ತಿ, ಎಣ್ಣೆಯಲ್ಲಿ ಕರಿದು. . .

ಕೊನೆಯಲ್ಲಿ ಮಾತಾಡಿದರು ಶ್ರೀನಿವಾಸ ಕಕ್ಕಿಲ್ಲಾಯತನ್ನ ವೈದ್ಯಕೀಯ ಕಲಿಕೆಯ ಕಾಲದಿಂದ ತೊಡಗಿದಂತೆ ಸುಮಾರು ಇಪ್ಪತ್ತೈದು ವರ್ಷಗಳ ಸೇವಾ ಅನುಭವದ ಉದ್ದಕ್ಕೆ ಕಾಯಿಲೆಗಳ ಸ್ವರೂಪ ಹಾಗೂ ವೈದ್ಯಕೀಯ ಸಂಶೋಧನೆಗಳ ವಿಕಾಸವನ್ನು ಸರಳ ಅಂಕಿಸಂಕಿಗಳ ಸಹಿತ ಮೊದಲು ಬಿಡಿಸಿಟ್ಟರು. ಹರಯ ನಲ್ವತ್ತರ ಮೇಲೆ ಕಾಣುವ ಮಧುಮೇಹಕ್ಕೆ ಅನಿವಾರ್ಯತೆಯೆಂದೂ ಕೆಳಗಿನವನ್ನು ಆನುವಂಶಿಕತೆಯೆಂದೂ ವರ್ಗೀಕರಿಸಿ ಚಿಕಿತ್ಸೆ ಸೂಚಿಸುವ ಕ್ರಮ ಇತ್ತಂತೆ. ಆದರೆ ಈಚಿನ ಹದಿನೈದಿಪ್ಪತ್ತು ವರ್ಷಗಳ ಅಂತರದಲ್ಲಿ ಸಾಧಾರಣೀಕರಣವನ್ನು ಹುಸಿಮಾಡುತ್ತ ಎಂಟು ಹತ್ತರ ಬಾಲಪ್ರಾಯಗಳಲ್ಲೂ ಮಧುಮೇಹ ಕಾಣಿಸುತ್ತಿರುವಾಗ ಹೊಸ ಸತ್ಯ ಅನಾವರಣಗೊಂಡಿದೆ; ಆಹಾರ ಪರಂಪರೆಯಲ್ಲೇ ಕೊರತೆಯಾಗಿದೆ!  ಲಕ್ಷಾಂತರ ವರ್ಷಗಳಲ್ಲಿ ವಿಕಸಿಸಿದ ಮಾನವ ಜೀವ ಕೇವಲ ಹತ್ತು ಸಾವಿರ ವರ್ಷಗಳ ಈಚೆಗೆ ಬಂದ ಕೃಷಿಯ ಮೂಲಕ ತನ್ನ ವೈವಿಧ್ಯಮಯ ಆಹಾರ ಪದ್ಧತಿಯನ್ನು ಸುಲಭದ ಏಕರೂಪಕ್ಕೆ (ಅಕ್ಕಿ, ಗೋಧಿ, ರಾಗಿ ಮುಂತಾದ ಪಿಷ್ಟ ಪ್ರಧಾನ ಧಾನ್ಯಗಳಿಗೆ ಪ್ರಾಶಸ್ತ್ಯ) ಬಲಿಗೊಟ್ಟದ್ದೇ ಮುಖ್ಯ ಕಾರಣ. ಇದರ ದುಷ್ಪ್ರಭಾವದ ವಿಕಸನದಲ್ಲಿ ಹಲ್ಲು ತೂತುಬೀಳುವುದು, ರಕ್ತನಾಳಗಳ ಪೆಡಸು, ರಕ್ತದೊತ್ತಡ ಏರುವಿಕೆ, ಹೃತ್ಸಂಬಂಧೀ ಕಾಯಿಲೆಗಳು, ಬೊಜ್ಜು, ಮಧುಮೇಹ, ಕ್ಯಾನ್ಸರ್ ಇತ್ಯಾದಿ ಹೆಸರಿಸಿದಷ್ಟು ಹೆಚ್ಚುತ್ತಲೇ ಇದೆ. ‘ನಾನು ಎಂಬ ಬುದ್ಧಿನನ್ನ ದೇಹವೆಂಬ ಕೋಟ್ಯಂತರ ಉಪಜೀವಿಗಳ ವಸತಿ ವ್ಯವಸ್ಥೆಯ ನಿರ್ವಾಹಕ ಮಾತ್ರ. ನಿರ್ವಹಣಾ ದೋಷದ ಫಲ ಕಾಯಿಲೆಗಳು. ಅದಕ್ಕೆ ಮದ್ದು ಮಾಡುವ ಬದಲು ಹೊಟ್ಟೆ ತುಂಬುವ ಕನಿಷ್ಠ ಕಾರ್ಯಕ್ರಮವನ್ನು, ಅರ್ಥಾತ್ ದಾರಿ ತಪ್ಪಿದ ಆಹಾರ ಪರಂಪರೆಯನ್ನು ವಿಮರ್ಶಿಸಿ, ಸರಿಪಡಿಸಿಕೊಳ್ಳಬೇಕಾದ್ದನ್ನು ಉದಾಹರಣೆಗಳ ಮುನ್ನೆಲೆಯಲ್ಲಿ ಶ್ರೀನಿವಾಸ್ ಶಕ್ತಿಯುತವಾಗಿಯೇ ಮಾಡಿದರು.

ಬಹು ಕಾಯಿಲೆ ಮೂಲ ಹಾಗೂ ಪೋಷಣ ಕೊರತೆಗಳಿಗೆ ನಮ್ಮ ಆಹಾರ ಪರಂಪರೆ ದಾರಿ ತಪ್ಪಿರುವುದೇ ಕಾರಣ ಎನ್ನುವುದು ಆಧುನಿಕ ವೈದ್ಯ ಜಗತ್ತಿನ ಅರಿವಿನಲ್ಲಿದೆ. ಆದರೆ ಅದನ್ನು ಬಹುಸಂಖ್ಯಾತವಾದ ಸಾಮಾನ್ಯ ಜನರಿಗೆ ಒಪ್ಪಿಸುವಲ್ಲಿ ಸೋತಿದ್ದಾರೆ ಅಥವಾ ಅಪ್ರಿಯತೆ ಗಳಿಸುವ ಭಯದಲ್ಲಿ ಹಿಂಜರಿಯುತ್ತಾರೆ ಎಂಬ ಅರ್ಥದಲ್ಲಿ ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು. ರಾಶಿ ಸೊಪ್ಪು ತಿಂದು, ಅರಗಿಸಿಕೊಂಡು ಜೀವಸತ್ವ ಗಳಿಸುವುದಕ್ಕಿಂತ ಸಾಕ್ಷಾತ್ ಜೀವಸತ್ವ ಅರ್ಥಾತ್ ಮಾಂಸಾಹಾರ ಯಾಕೆ ಬೇಡ ಎನ್ನುವುದಿವರ ಪ್ರಶ್ನೆ.  ಫಲಿಸದ ಮೊಟ್ಟೆ ಸೇವನೆ ಜೀವಹಿಂಸೆಗೆ ಸಮನಲ್ಲ, ಪ್ರಾದೇಶಿಕ ನಂಬಿಕೆಗಳಲ್ಲಿ ಮೀನು ಮಾಂಸಾಹಾರವಲ್ಲ (ದು. ಸರಸ್ವತಿ ಹೇಳಿದಂತೆ ಬಂಗಾಳದಲ್ಲಿ ಮೀನು - ಗಂಗಾಫಲ) - ಕಡಲ ತರಕಾರಿ ಎಂದಿತ್ಯಾದಿ ಸಮಜಾಯಿಷಿಗಳನ್ನೂ ಶ್ರೀನಿವಾಸ್ ಕೊಟ್ಟರು. 

ಭಾಷಣಕ್ಕಿಂತ ಸಂವಾದ ಹೆಚ್ಚು ಮನಸ್ಸುಗಳನ್ನು ಮುಟ್ಟಬಹುದೆಂಬ ಭಾವದಲ್ಲಿ ಪ್ರಶ್ನೋತ್ತರಗಳಿಗೆ ಸಾಕಷ್ಟು ಸಮಯವನ್ನೇ ಕೊಟ್ಟಿದ್ದರು. ಆದರೆ ಸಂದೇಹಗಳು ಕಾಡಬೇಕಾದಲ್ಲಿ ನಮ್ಮ ಬಹುತೇಕ ಸಂವಾದ ಕೂಟಗಳಂತೆ ಪ್ರದರ್ಶನಪ್ರಿಯರ ಲಹರಿಗಳು ಕಾಡಿದವು. ಅಭಿಷೇಕಗಳ ಹೆಸರಿನಲ್ಲಿ ಆಹಾರವಸ್ತುಗಳ ಪೋಲು (ಸಹಸ್ರ ನಾರೀಕೇಳ ಅಭಿಷೇಕ), ಒಂದೆರಡು ಶತಮಾನದೀಚಿನ ಸಂತನ (ತಿರುವಳ್ಳುವರ್) ಅಧ್ಯಾತ್ಮಿಕ ಉಪದೇಶಕ್ಕೆ ಸುಮಾರು ಹತ್ತು ಸಹಸ್ರಮಾನದಲ್ಲಿ ತಪ್ಪಿದ ಶುದ್ಧ ಲೌಕಿಕ ರೂಢಿಯನ್ನು, ಅರ್ಥಾತ್ ಆಹಾರಪರಂಪರೆಯನ್ನು ಹೊಂದಿಸುವ ಗೊಂದಲ, ಆಹಾರದ ಜೀವಪೋಷಣ ಗುಣಗಳ ಚರ್ಚೆಯನ್ನುಮಾಂಸಾಹಾರ ಪ್ರಚಾರ ವೇದಿಕೆ’ಯೆಂಬ ತಪ್ಪುಗ್ರಹಿಕೆ ಮುಂತಾದವು ಸಭಿಕರಿಂದ ಧಾರಾಳ ಬಂದವು. ಅವನ್ನು ಸೌಜನ್ಯಕ್ಕಾದರೂ ಉತ್ತರಿಸುವುದೆಂದರೆ ಚರ್ಚೆಯ ಮುಖವನ್ನು ಪೂರ್ಣ ತಪ್ಪಿಸುವ ಮತ್ತು ಎಂದೂ ಸಮಯದ ಮಿತಿಯೊಳಗೆ ಹಿಡಿದಿಡಲಾಗದ ಗೋಠಾಳೆ ಎನ್ನುವ ಸ್ಪಷ್ಟ ತಿಳುವಳಿಕೆ ವೇದಿಕೆಯ ಮೇಲಿನವರಿಗೆ ಇತ್ತು; ಜಾಣತನದಲ್ಲಿ ನಿವಾರಿಸಿದರು. ಮತ್ತೆಷ್ಟೋ ಮಾತುಗಳು ವೇದಿಕೆಯ ಮೇಲಿನಿಂದ ಬಂದ ಮಾತಿನ ವ್ಯಾಪ್ತಿಗೆ ಅನಾವಶ್ಯಕ ಮತ್ತು ಎಷ್ಟೋ ಬಾರಿ ನಿರರ್ಥಕವೂ ಆದ ವಿವರಣೆಯೇ ಆಗುತ್ತಿತ್ತು! ದೇವನೂರು ಮಹಾದೇವ ಹೇಳಿದಂತೆ ನೀವು ಕೇಳುತ್ತಿರುವುದಲ್ಲ, ನಾವು ಉತ್ತರಿಸುವುದೂ ಇಲ್ಲ!

ವೈಚಾರಿಕ ನಿಕಷಕ್ಕೆ ಒಡ್ಡಿಕೊಳ್ಳದ ನಮ್ಮ ಆಹಾರ ಪರಂಪರೆ ಶಿಥಿಲವಾಗಿದೆ, ನಮ್ಮನ್ನು ಕಾಯಿಲೆಯ ಶಿಖರೋನ್ಮುಖಿಯಾಗಿಸಿದೆ. ಅವನ್ನು ಸದುದ್ದೇಶದಲ್ಲೇ ತಿದ್ದುವುದಕ್ಕೆ ಮುಂದಾದರೆ ಮತೀಯ ಹಿತಾಸಕ್ತಿಗಳು ಚಿಕಿತ್ಸಾ ಚಾಕುವನ್ನು ಕೊಲೆಯ ಹತ್ಯಾರಿನಂತೆ ಬಿಂಬಿಸುವುದೂ ನಡೆದಿದೆ. ಮತೀಯ ನಂಬಿಕೆಗಳನ್ನು ಮೀರಿದ ವೈಜ್ಞಾನಿಕ ಮನೋಧರ್ಮ ನಮ್ಮ ಪರಂಪರೆಯಾಗಬೇಕು. ಮತೀಯ ನಂಬಿಕೆಗಳ ಅತಿರೇಕದಲ್ಲಿ ನಿಮ್ಮ ವಿಜ್ಞಾನ ಹುಸಿಯಾದದ್ದಿಲ್ಲವೇ ಎಂಬ ಗೇಲಿಯ ಮಾತುಗಳು ಎಷ್ಟೂ ಬರುತ್ತವೆ. ಇಲ್ಲಿ ಮೊದಲನೆಯದಾಗಿ ವಿಜ್ಞಾನಕ್ಕೆ ನಿಮ್ಮ, ನಮ್ಮ ಎಂಬ ಪಕ್ಷಬೇಧ ಆರೋಪಿಸುವುದೇ ತಪ್ಪು. ಅತ್ಯಂತ ದೈವೀಕರಿಗೂ ದೃಷ್ಟಿದೋಷಕ್ಕೆ ಕನ್ನಡಕ, ಕಾಲಗಣನೆಗೆ ಗಡಿಯಾರ, ಕಿವಿಕಚ್ಚಿದ ಚರವಾಣಿ, ಓಡಾಡುವ ವಾಹನ ಮುಂತಾದ ವಿಜ್ಞಾನದ ಫಲಗಳು ಮೈಲಿಗೆಯಾಗುವುದಿಲ್ಲ! ಇಂದು ವಿಜ್ಞಾನವನ್ನು ನಿರಾಕರಿಸಿದವನಿಗೆ ಬಾಳ್ವೆಯೇ ಇಲ್ಲ.

ವಿಜ್ಞಾನ ಎಂದೂ ತನ್ನದು ಅಂತಿಮ ಸತ್ಯ ಎಂದು ಸಾಧಿಸುತ್ತ ಭೂತ ಕಾಲಕ್ಕೆ ಸೇರುವುದಿಲ್ಲ. ಕಾಲಬಂಧದಲ್ಲಿ ಲಭ್ಯ ಕಾರ್ಯಕಾರಣಗಳ ಬಲದಲ್ಲಿ ಇದುವರೆಗೆ ಕಂಡ ಸತ್ಯ ಇದು ಎನ್ನುತ್ತ ಸದಾ ವರ್ತಮಾನದಲ್ಲೇ ಇರುತ್ತದೆ. ವೈಫಲ್ಯಗಳನ್ನು, ಕಾಲಸಂದ ಸತ್ಯಗಳನ್ನು ಮೆಟ್ಟಿಲು ಮಾಡಿಕೊಂಡು ಸದಾ ಶಿಖರಗಾಮಿಯಾಗಿಯೇ ನಡೆಯುತ್ತದೆ. ಪ್ರಸ್ತುತ ಸಂವಾದ ಕೂಟ ನಮ್ಮ ಆಹಾರ ಪರಂಪರೆಯನ್ನು ವಿಶ್ಲೇಷಿಸಿ, ಸಮರ್ಥ ಪರ್ಯಾಯಕ್ಕೆ, ಆರೋಗ್ಯದ ಶಿಖರಕ್ಕೆ ದೃಢ ಕೈಕಂಬವನ್ನೇ ಕೊಟ್ಟಿದೆ. ಇದು ಹಚ್ಚಿದ ಚಿಂತನ ಕಿರಣ,  ಪರಂಪರೆಯ ಕಿಲುಬನ್ನು ತೊಡೆದು ಸಾಮಾಜಿಕ ಆರೋಗ್ಯದ ದೀಪವನ್ನು ದೊಡ್ಡದಾಗಿ ಬೆಳಗಲಿ.

ವಿಸೂ: ಸಭೆಗೆ ಬರಲಾಗದೇ ಕೊರಗುವವರ ತೃಪ್ತಿಗಾಗಿ ಇಡಿಯ ಕಲಾಪದ ವಿಡಿಯೋ ದಾಖಲೀಕರಣವನ್ನು ಆಸಕ್ತರು ಇಲ್ಲಿ ಚಿಟಿಕೆ ಹೊಡೆದು  ಅನುಭವಿಸಬಹುದು

9 comments:

 1. “ ಔಷಧಗಳು ಬೇಡ, ಆಹಾರ ಸರಿ ಮಾಡಿ ” ಇದನ್ನು ಓದುವಾಗ ೮೦ ವರುಷದ ಕಳೆದ ೪೦ ವರುಷಗಳಿಂದ ಇದೇ ತತ್ವವನ್ನು ತಮ್ಮ ದೈನಂದಿಕ ಜೀವನದಲ್ಲಿ ಅಳವಡಿಕೆಗೆ ತಂದ ಡಾ. ವಿಜಯಾ ವೆಂಕಟ್ ಇವರ ನೆನಪಾಯಿತು. www.youtube.com/watch?v=Ml4Oqa0pMgQ

  ಆಹಾರ, ಪರಂಪರೆ ಮತ್ತು ಆರೋಗ್ಯ ಮತ್ತು ಸಸ್ಯಾಹಾರ, ಮಾಂಸಾಹಾರ, ವೇಗನ್ ಆಹಾರ ಇವುಗಳ ಬಗ್ಗೆ ಸವಿವರವಾಗಿ ನಿಮ್ಮ ಲೇಖನವನ್ನು ಓದುಗರ ಮುಂದೆ ಇಟ್ಟಿರುವಿರಿ. ಧನ್ಯವಾದಗಳು.

  ReplyDelete
 2. ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಜಗೆ ರೋಗವಿಲ್ಲ ಎಂಬ ಹಿರಿಯರ ಮಾತು ಆನುಭವ ಪೂರ್ವಕವಾದುದು. ೨೦೦೦ದ ವರ್ಷ ಅಮೆರಿಕದಲ್ಲಿ ನಡೆದ ದ್ವಿಸಹಸ್ರಮಾನ ಕನ್ನಡ ಸಮ್ಮೇಳನಕ್ಕೆ ಹ್ಯೂಸ್ಟನ್ನಿಗೆ ಹೊಗಿದ್ದೆ ಸಮ್ಮೇಳನದ ಅನಂತರ ಲಾಸ್ ಏಂಜಲಿಸ್ ಗೆ ವಿಮಾನದಲ್ಲಿ ಹೋಗುವಾಗ ಟಿಕೆಟಿನಲ್ಲಿ ನಾನು ಸಸ್ಯಾಹಾರಿ ಎಂದು ನಮೂದಿಸಿರಲಿಲ್ಲ. ಸಾಕಷ್ಟು ದೀರ್ಘ ಪ್ರಯಾಣವಾಗಿದ್ದರಿಂದ ಅಹಾರ ವಿತರಿಸಿದಾಗ ನನ್ನ ಜೊತೆಯಲ್ಲಿದ್ದ ನನ್ನ ಗುರುಗಳಾದ ಜಿ.ಎಚ್. ನಾಯಕರು ಮತ್ತು ಅವರ ಶ್ರೀಮತಿ ಮೀರಾ ನಾಯಕರಿಗೆ ಸಮಸ್ಯೆಯಾಗಲಿಲ್ಲ. ತಮಗೆ ಬಡಿಸಿದ ಆಹಾರದ ವಿಮರ್ಶೆ ಮಾಡುತ್ತ ತಿನ್ನತೊಡಗಿದರು. ನನ್ನ ಅಹಾರ ಅಭ್ಯಾಸ ಬಲ್ಲ ಮೀರಾ ನನಗೆ ತಂದುಕೊಟ್ಟಿರುವುದು ಸಸ್ಯಾಹಾರವಲ್ಲ ಎಂದು ಕೂಡಲೆ ತಿಳಿಸಿದರು. ದೀರ್ಘಕಾಲ ನಾನು ಅವರ ಮನೆಗೆ ಹೋಗುತ್ತಿದ್ದರೂ, ಕೆಲವು ದಿನ , ಈವತ್ತು ನಿಮಗೆ ಕೊಡಲು ಏನೂ ಇಲ್ಲ ಎನ್ನುತ್ತಿದ್ದರು. ನನಗೆ ಸಸ್ಯಾಹಾರ ಬೇಕೆಂದು ಗಗನಸಖಿಯವರನ್ನು ಕೇಳಿದೆ. ಅದನ್ನು ಟಿಕೆಟ್ ಪಡೆಯುವಾಗ ನಮೂದಿಸಿಲ್ಲದಿರುವುದರಿಂದ ಈಗ ನೀಡಲು ಇಲ್ಲ ಎಂದು ನನ್ನ ಮುಂದಿದ್ದ ತಟ್ಟೆಯನ್ನು ಹಿಂದಕ್ಕೆ ತೆಗೆದುಕೊಂಡು ಹೋದರು. ವಿಮಾನದಲ್ಲಿ ಲಭ್ಯವಿದ್ದ ಸೊಪ್ಪು, ಎಲೆ ಇತ್ಯಾದಿ ಸಸ್ಯದ ತುಣುಕುಗಳನ್ನು ಒಂದು ತಟ್ಟೆಯಲ್ಲಿ ಹಾಕಿ ತಂದಿರಿಸಿದರು. ಕರುಣೆಯಿಂದ ಆಗಾಗ ಹಣ್ಣಿನ ರಸವನ್ನು ಧಾರಾಳವಾಗಿ ತಂದು ತಂದು ಕೊಡುತ್ತಿದ್ದರು. ಹಣ್ಣಿನ ರಸ ಕುಡಿದು ಸಾಕೆನಿಸಿ ಕಾಫಿ಼ಯನ್ನು ಕೇಳಿದೆ. ಹಾಲು ಬೆರೆಸದ ಕಪ್ಪು ಕಾಫಿಯನ್ನು ತಂದುಕೊಟ್ಟರು. ಕಾಫಿಗೆ ಹಾಲು ಬೇಕೆಂದಾಗ ಅಕೆ ಅಶ್ಚರ್ಯದಿಂದ ನೀವು ಸಸ್ಯಾಹಾರಿಯಲ್ಲವೇ? ಎಂದು ಕೇಳಿದರು. ಭಾರತದಲ್ಲಿ ಹಾಲು ಸಸ್ಯಾಹಾರ ಎಂದು ಅಕೆಗೆ ಹೇಳುವಾಗ ನನ್ನ ಮಾತಿನ ಅಸಂಗತಿ ನನ್ನ ಮುಖಕ್ಕೆ ರಾಚಿತು. ಆಮೇಲಿಂದ ನಾನು ಸಸ್ಯಾಹಾರಿ ಎಂದು ಹೇಳಿಕೊಳ್ಳುವುದಿಲ್ಲ. ಹಾಗೆಂದು ವೆಗನಿಸಂ ಅನುಯಾಯಿಯಾಗಲೂ ಇಲ್ಲ. ನಾನು ಹುಟ್ಟುತ್ತ ಮಾಂಸಾಹಾರಿ. ಹಲ್ಲು ಬಂದಮೇಲೆ ಸಸ್ಯಾಹಾರಿ, ಕಾಫಿಗೆ ಹಾಲು, ಊಟಕ್ಕೆ ಮೊಸರು ಬಿಟ್ಟು ಎಂದು ವಿವರಣೆಯನ್ನೂ ಕೊಡುವುದಿದೆ

  ReplyDelete
 3. ಪ್ರಿಯ ಅಶೊಕ ವರ್ಧನ ಅವರಿಗೆ
  ನಮಸ್ಕಾರ ನಿಮ್ಮ ವರದಿ ಓದಿದೆ, ತುಂಬ ಚೆನ್ನಾಗಿದೆ... ಒಂದು ಕಾರ್ಯಕ್ರಮದ ವರದಿ ಹೆಗೆ ಮಾಡಬೇಕು ಎಂಬುದನ್ನು ಹೇಳಿಕೊಡಲು ಪತ್ರಕರ್ತರನ್ನು ನಿಮ್ಮ ಬಳಿಗೆ ತರಬೇತಿಗೆ ಕಳಿಸಬೇಕು.

  ಅಭಿನವದ ಒಂದು ಸನ್ಚಿಕೆಯನ್ನು ಅಹಾರದ ಬಗೆಗೆ ತರುತ್ತಿರುವುದರಿಂದ ನಿಮ್ಮ ಸಹಕಾರ ಬಯಸುವೆ.ಮತ್ತೆ ಬರೆವೆ
  ವನ್ದನೆಗಳು

  ReplyDelete
 4. good article ,,thanks for providing link to program

  ReplyDelete
 5. ನಾನು ಹಲ್ಳಿಯಲ್ಲಿ ಬೆಳೆದವಳು. ಮೀನು ಮತ್ತು ಕೋಳಿ ತಿನ್ನುವ ಜಾತಿಯವಳು.( ಆದರೆ ನನ್ನ ದೇಹಕ್ಕೆ ಈ ಎರಡೂ ಆಹಾವೂ ಒಗ್ಗುತ್ತಿರಲಿಲ್ಲ. ಹೀಗಾಗಿ ಈ ಎರಡೂ ಆಹಾರವನ್ನು ನಾನು ಸೇವಿಸುತ್ತಿರಲಿಲ್ಲ. ನಮ್ಮ ಹಳ್ಳಿಯಲ್ಲಿ ವಿವಿಧ ಜಾತಿಯ ಜನರು ವಿವಿದ ಾಹಾರವನ್ನು ಸೇವಿಸುತ್ತಿದದ್ರು. ಇವರೆಲ್ಲರೂ ಹಿಂದೂಗಳು. ಕಾಡು ಹಂದಿ, ಮೊಲ, ಜಿಂಕೆ, ಹೆಗ್ಗಣ.ವಿಭಿನ್ನ ಜಾತಿಯ ಕಪ್ಪೆ ಚಿಪ್ಪು, ವಿಭಿನ್ನ ಜಾತಿಯ ಪಕ್ಷಿಗಳು, ಹಸು ಕೋಣ.....ಇತ್ಯಾದಿ. ಆ ದಿನಗಳಲ್ಲಿ ಈ ವಿಷಯವನ್ನು ಚರ್ಚಿಸುತ್ತಿದ್ದರೇ ವಿನಃ ಅವರವರ ಅಹಾರ ಸೇವನೆ ತಪ್ಪು ಎನ್ನುತ್ತಿರಲಿಲ್ಲ. ಈಗಲೂ ನನ್ಹನ ಳ್ಳಿಯ ವಾತಾವರಣ ಹಾಗೆಯೇ ಇದೆ....಻

  ReplyDelete
  Replies
  1. ಮಾಂಸಾಹಾರ ಗೋಚರ ಮತ್ತು ಸಸ್ಯಾಹಾರ ಅಗೋಚರ ಹಿಂಸೆಯೆನ್ನುವ ದೇವನೂರ ರವರ ವಾದ ತರ್ಕಬದ್ದವಾದುದಲ್ಲ. ಮಾಂಸವು ಒಂದು ಪ್ರಾಣಿಯ ಹತ್ಯೆಯ ನಂತರದ ಉತ್ಪನ್ನವಾದರೆ ತರಕಾರಿಗಳು ಸಸ್ಯಗಳ ಜೀವಿತಾವಧಿಯ ಉತ್ಪನ್ನಗಳು. ಉದಾ. ಕೆಲವು ಸೊಪ್ಪುಗಳನ್ನು ಕತ್ತರಿಸಿದಾಗಲೇ ಮರು ಬೆಳವಣಿಗೆಯಾಗುತ್ತವೆ.

   Delete
  2. ನಿಮ್ಮ ತರ್ಕ ಒಪ್ಪುವುದಿದ್ದರೆ ಸಸ್ಯಗಳಿಗೆ ನಾವು ಕಸಾಯಿ ಮಾಡದಿದ್ದರೆ ಜೀವನವೇ ಇಲ್ಲ ಎಂದಾಗುವುದಿಲ್ಲವೇ? ಪ್ರತಿ ಬೆಳಿಗ್ಗೆ ತರಕಾರಿ ಮಾರುವವರ ಬುಟ್ಟಿಗಳಲ್ಲಿ ಬರುವ ಎಳೇ ಕಂದಮ್ಮಗಳಂತ ಹರಿವೆ, ಮೆಂತೆ, ಕೊತ್ತಂಬರಿ, ಪುದಿನ ಮುಂತಾದವುಗಳಿಗೆ ಎಲ್ಲಿದೆ ಮರುಜೀವನ?

   Delete