14 January 2014

ನಿವೃತ್ತ ಜೀವನದಲ್ಲಿ ತಯಾರಿಸಿದ ಅನುಭವದಡುಗೆ

ಜಿಟಿನಾರಾಯಣ ರಾಯರಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಮೂವತ್ತೆಂಟು
ಅಧ್ಯಾಯ ೮೪  (ಮೂಲದಲ್ಲಿ ೫೬)

ಸೆಪ್ಟೆಂಬರ್ ೧೪, ೧೯೮೬ರಂದು ನನಗೆ ಅಧಿಕೃತವಾಗಿ ವಯಸ್ಸು ೬೦ ತುಂಬಿದುದರಿಂದ (ವಾಸ್ತವವಾಗಿ ಈ ದಿನಾಂಕ ೩೦--೧೯೮೬ ಆಗಬೇಕು) ನಾನು ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ಸೆಪ್ಟೆಂಬರ್ ೩೦ರಂದು ವೃತ್ತಿಯಿಂದ ನಿವೃತ್ತನಾದೆ. ಆರೋಗ್ಯ, ಅನುಭವ, ಉತ್ಸಾಹ, ಗೃಹಸ್ಥಿತಿಗತಿ ಮತ್ತು ಕಾರ್ಯೋಲ್ಲಾಸ ಎಲ್ಲವೂ ಗರಿಷ್ಠ ಮಟ್ಟದಲ್ಲಿದ್ದಾಗ, ವಿಶ್ವಕೋಶ ನಿರ್ಮಾಣಕಾರ್ಯ ಇನ್ನೂ ಪೂರ್ಣವಾಗಿರದಿದ್ದಾಗ (೧೪ ಸಂಪುಟಗಳ ಯೋಜನೆಯಲ್ಲಿ ೧೨ ಮಾತ್ರ ಆ ವೇಳೆಗೆ ಮುಗಿದಿದ್ದುವು), ಇದನ್ನು ಪೂರೈಸಲು ಸಮರ್ಥ ವಿಜ್ಞಾನ ಸಂಪಾದಕ ಅಲಭ್ಯವಾಗಿದ್ದಾಗ ಮತ್ತು ಕನ್ನಡದ ಈ ಕರ್ತವ್ಯ ನಿರ್ವಹಿಸಲು ನಾನು ಸಿದ್ಧನಾಗಿದ್ದಾಗ ವಿಶ್ವವಿದ್ಯಾನಿಲಯ ಕೇವಲ ಅಂಧ ಧೇನುಕ ನಿಯಮಗಳಿಗೆ ಶರಣಾಗಿ ನನ್ನ ನಿವೃತ್ತಿಯನ್ನು ಮನ್ನಣೆ ಮಾಡಿತು.

ಮುಂದೇನು ದಾರಿ ನನ್ನೆದುರು? ಯಾವುದೇ ಬಗೆಯ ತಾಬೆದಾರಿಗೆ, ಎಷ್ಟೇ ಆಕರ್ಷಣೀಯವಾಗಿದ್ದರೂ ಒಪ್ಪಿಕೊಳ್ಳತಕ್ಕದ್ದಲ್ಲ ಎಂಬುದು ನನ್ನ ದೃಢ ನಿಲವು. ಒಮ್ಮೆ ರಾಜನಾಗಿದ್ದ ಕಾನನಕ್ಕೆ ಮತ್ತೆ ಪ್ರವೇಶಿಸತಕ್ಕದ್ದಲ್ಲ, ಅಲ್ಲವೇ?
ದಾರಿಗಾ! ನಿನಗೊಂದು ಪಥ ದತ್ತವಾಗಿಲ್ಲ
ನೀರಿಗಿಳಿ, ಅಂಜದೆಯೆ ಅಳುಕದೆಯೆ ಈಸುತಿರು
ನೀ ರೂಪಿಸುವೆ ಹೊಸತು ಮಾರ್ಗವನು, ಬದುಕಿನಲಿ
ಸಾರ್ಥಕ್ಯ ಗಳಿಸಲಿಹ ಮಾರ್ಗವಿದು ಅತ್ರಿಸೂನು


ಹೀಗೆ ೧೯೮೬-೨೦೦೨ ಅವಧಿಯಲ್ಲಿ ನಾನು ನನ್ನ ತೃಪ್ತ್ಯರ್ಥ ರಚಿಸಿದ ಜಾಡುಗಳಲ್ಲಿ ಮೂರನ್ನು ಮಾತ್ರ ಇಲ್ಲಿ ಸಂಕ್ಷೇಪವಾಗಿ ನಿರೂಪಿಸುತ್ತೇನೆ: ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಕೃತಿಗಳ ರಚನೆ, ಗಾನಭಾರತೀ (ರಿಜಿಸ್ಟರ್ಡ್) ಸಂಗೀತ ಸಂಸ್ಥೆಯ (ಸ್ಥಾಪನೆ ೧೯೭೮) ಕನಸಾದ ವೀಣೆ ಶೇಷಣ್ಣ ಭವನದ ನಿರ್ಮಾಣಕ್ಕೆ ಸೇವಾ ಕೈಂಕರ್ಯ ಮತ್ತು ನೊಬೆಲ್ ಪಾರಿತೋಷಿಕ ಪುರಸ್ಕೃತ ಅಮೆರಿಕ ನಿವಾಸಿ ಸುಬ್ರಹ್ಮಣ್ಯನ್ ಚಂದ್ರಶೇಖರ್ (೧೯೧೦-೯೫) ಇವರ ಸಂದರ್ಶನ.

ನನ್ನ ಎಲ್ಲ ಪುಸ್ತಕಗಳನ್ನು ಪ್ರಕಾಶಿಸುವ ಹೊಣೆಯನ್ನು ಮಗ ಅಶೋಕ (ಅತ್ರಿ ಬುಕ್ ಸೆಂಟರ್, ಮಂಗಳೂರು) ಪ್ರೀತಿ ಮತ್ತು ಬದ್ಧತೆ ಸಹಿತ ವಹಿಸಿಕೊಂಡದ್ದರಿಂದ ಆ ದಿನಗಳಲ್ಲಿ - ಕೃಷ್ಣವಿವರಗಳು, ರಾಮಾನುಜನ್ ಬಾಳಿದರಿಲ್ಲಿ, ಕೊಪರ್ನಿಕಸ್ ಕ್ರಾಂತಿ, ಐನ್ಸ್ಟೈನ್ ಬಾಳಿದರಿಲ್ಲಿ, ಎನ್ಸಿಸಿ ದಿನಗಳು, ಸುಬ್ರಹ್ಮಣ್ಯನ್ ಚಂದ್ರಶೇಖರ್, ಸಪ್ತಸಾಗರದಾಚೆಯೆಲ್ಲೋ. . .  ಮುಂತಾದ ಕೃತಿಗಳು ಬೆಳಕು ಕಂಡುವು. ನವಕರ್ನಾಟಕ ಪ್ರಕಾಶನದ ಆರ್. ಎಸ್. ರಾಜಾರಾಮ್ ಅವರ ಸೂಚನೆ ಮೇರೆಗೆನವಕರ್ನಾಟಕ ವಿಜ್ಞಾನ ಪದವಿವರಣ ಕೋಶದ ಪ್ರಧಾನ ಸಂಪಾದಕನಾಗಿ ಅದನ್ನು ಯಶಸ್ವಿಯಾಗಿ ಪೂರೈಸಿಕೊಟ್ಟೆ. ಇನ್ನು ಬಿಡಿ ಲೇಖನಗಳು, ಉಪನ್ಯಾಸಗಳು, ವಿಜ್ಞಾನ ಕಮ್ಮಟಗಳು ಮುಂತಾದವು ಮೇಳೈಸಿ ನನ್ನ ನಿವೃತ್ತ ಜೀವನ ವೃತ್ತಿ ಜೀವನಕ್ಕಿಂತ ಅಧಿಕ ಪ್ರವೃತ್ತವಾಯಿತೆಂಬುದು ಸಮಾಧಾನದ ಸಂಗತಿ. ಏಕೆಂದರೆ ಈ ಬದುಕೊಂದು ಸಾಲ, ನಿಸರ್ಗವಿಲ್ಲಿ ಸಾಲಿಗ, ಇದನ್ನು ಪ್ರಾಮಾಣಿಕ ಮತ್ತು ಸಮಾಜೋಪಯುಕ್ತ ಮಾರ್ಗದಲ್ಲಿ ಬಡ್ಡಿ ಸಹಿತ ತೀರಿಸಬೇಕಾದದ್ದು ವ್ಯಕ್ತಿಯ ನೈತಿಕ ಹೊಣೆ.

ದಿನಾಂಕ ೨೬-೧೦-೧೯೯೧ರಂದು ವೀಣೆ ಶೇಷಣ್ಣ ಭವನದ ಉದ್ಘಾಟನೆ ಆಯಿತು. ‘ಸವಾಲನ್ನು ಎದುರಿಸುವ ಛಲ ಎಂಬ ಪುಸ್ತಕದಲ್ಲಿ ಇದರ ಕಥೆ ಬರೆದಿದ್ದೇನೆ. ‘ಸಂಗೀತ ರಸನಿಮಿಷಗಳು ಎಂಬ ಕೃತಿಯಲ್ಲಿ ಕೂಡ ಇದು ಸೇರಿದೆ. [ಕೆಲವೇ ಪ್ರತಿಗಳು ಲಭ್ಯವಿವೆ: ಬೆಲೆ ರೂ ೬೦, ಅಂಚೆ ಉಚಿತ - ಅವ] ಇನ್ನು ಸಂಗೀತ, ಭರತನಾಟ್ಯ, ನಾಟಕ, ಯಕ್ಷಗಾನ ಮುಂತಾದ ಕಲೆಗಳ ವ್ಯವಸ್ಥಾಪನೆ, ಪ್ರಚಾರ ಮತ್ತು ವಿಮರ್ಶನ ರಂಗದಲ್ಲಿ ದುಡಿಮೆ ನನ್ನ ಪ್ರೀತಿಯ ಹವ್ಯಾಸ.

ಅಮೆರಿಕ ನಿವಾಸಿಗಳಾಗಿರುವ ಜಯಶ್ರೀ-ಆನಂದರ ನಲುಮೆಯ ಒತ್ತಾಯದ ಮೇರೆಗೆ ಲಕ್ಷ್ಮಿಯೂ ನಾನೂ ೧೯೯೫ರಲ್ಲಿ ಅಮೆರಿಕಯಾನ ಕೈಗೊಂಡೆವು. ನನ್ನ ಬಾಳಿನ ಕನಸಾದ ಚಂದ್ರಶೇಖರ್-ದರ್ಶನ-ಸಂದರ್ಶನ ಆಗ ಒದಗಿದ್ದೊಂದು ಅಪೂರ್ವ ಅವಿಸ್ಮರಣೀಯ ಅನನ್ಯ ಅನುಭವ. ‘ಸಪ್ತಸಾಗರದಾಚೆಯೆಲ್ಲೋ. . .’ Crossing the Dateline ಮತ್ತು With the Great Minds ಕೃತಿಗಳಲ್ಲಿ ವಿವರಗಳನ್ನು ನಿರೂಪಿಸಿದ್ದೇನೆ.

ಹೀಗೆ ನನ್ನ ಯೋಚನೆ, ಯೋಜನೆ, ನಿರೀಕ್ಷೆ ಏನೂ ಇಲ್ಲದೆ ಬದುಕು ನನ್ನೆದುರು ಅಸಂಖ್ಯ ಅವಕಾಶಗಳನ್ನೂ ಸವಾಲುಗಳನ್ನೂ ಒಡ್ಡಿದೆ, ಒಡ್ಡುತ್ತಲೂ ಇದೆ. ಹಾಗಾದರೆ ಇದರಲ್ಲಿ ನನ್ನ ಪಾತ್ರವೇನೆಂದು ಆತ್ಮವಿಮರ್ಶೆ ಮಾಡಿಕೊಂಡಾಗ ಮತ್ತೆ ಮತ್ತೆ ಎದ್ದು ಕಾಣುವುದು ಸ್ವಭಾವಧರ್ಮ: ಮೊದಲು ಕಾರ್ಯ ಮತ್ತೆ ವಿಮರ್ಶೆ. ಸರಳವಾಗಿ, ಲಾಗ ಹೊಡೆದು ಜಾಗ ನೋಡುವುದು! ಹೀಗೆ ಮಾಡುವಾಗ ನಾನು ಮೊದಲು ಸ್ವಸಾಮರ್ಥ್ಯವನ್ನು ವಿವೇಚಿಸಿ ಬಳಿಕ ಸದಾ ಪಂಚಶೀಲ ಬದ್ಧನಾಗಿರುತ್ತೇನೆ: ನೈತಿಕತೆ, ಮಗ್ನತೆ, ಉತ್ಕೃಷ್ಟತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ (ethics, involvement, excellence, transparency and accountability). ನಡೆದಂತೆ ಹೊಸ ಹಾದಿ ಕಡಿದಿದ್ದೇನೆ, ಹೊಸ ಹರವು ಕಂಡಿದ್ದೇನೆ, ಹೊಸಬನೇ ಆಗಿದ್ದೇನೆ.

ಜನ್ಮತಃ ಈ ಹನುಮಂತ ಕುತೂಹಲ ಪ್ರತಿಯೊಬ್ಬನಲ್ಲಿಯೂ ನಿಹಿತವಾಗಿರುವುದು. ಇದನ್ನು ಉದ್ದೀಪನಗೊಳಿಸಲು ಆತನಿಗೆ ಎಳವೆಯಲ್ಲೇ ಯುಕ್ತ ಜಾಂಬವಂತ ಪ್ರೋತ್ಸಾಹ (ರಾಮಾಯಣದಲ್ಲಿ ಸಾಗರೋಲ್ಲಂಘನಪೂರ್ವದ ಸನ್ನಿವೇಶ ನೆನಪಿಸಿಕೊಳ್ಳಿ) ದೊರೆಯಬೇಕು - ಇದು ನನಗೆ ಸಮೃದ್ಧವಾಗಿ ದೊರೆತಿರುವುದು ನನ್ನ ಭಾಗ್ಯ, ಸೌಭಾಗ್ಯ. ಈ ತೆರೆನಾಗಿ ನಾನು ನಡೆದಂತೆ ಅಸಂಖ್ಯ ಮಹಾಮಹಿಮರ ನಿಕಟ ಸಂಪರ್ಕ ಲಾಭ ನನಗೆ ಒದಗಿದೆ. ಕೇವಲ ಕೆಲವು ಮಾರ್ಗಪ್ರವರ್ತಕರ ಹೆಸರುಗಳನ್ನು ಉಲ್ಲೇಖಿಸುವುದಾದರೆ ಅವರು ಮುಳಿಯ, ಸೇಡಿಯಾಪು, ಕಡೆಂಗೋಡ್ಲು, ಕಾರಂತ, ಪಾವೆಂ, ಮಾಸ್ತಿ, ಡಿವಿಜಿ, ಸಿಎನೆಸ್, ದೇಜಗೌ, ಕುವೆಂಪು (ನೋಡಿ: ಕುವೆಂಪು ದರ್ಶನ ಸಂದರ್ಶನ - ಕೆಲವೇ ಪ್ರತಿಗಳು ಲಭ್ಯ ರೂ ೪೫), ಮೂರ್ತಿ ರಾವ್, ಸಿಡಿಎನ್ ಮೊದಲಾದ ಪ್ರಾತಃಸ್ಮರಣೀಯರು.
ನಾದನಾವೆಯನೇರಿ ಋತಚಿದ್ರಸಾಬ್ಧಿಯಲಿ
ವೇದಪುರುಷನ ತಾಣವರಸುತ್ತ ತೇಲಿದೆನು
ಮೋದಪ್ರಮೋದಗಳ ನಾಡಿಂದ ಜಿಗಿದಂತೆ
ವೇದವೇ ನಾವೆಯಲಿ ಲೀನಿಸಿತು ಅತ್ರಿಸೂನು ||

ಸರ್ಕಾರೀ ಕೃಪಾಪೋಷಿತ ಸಂಸ್ಥೆಗಳ ಸದಸ್ಯನಾಗಿ
ಅಧ್ಯಾಯ ೮೫ (ಮೂಲದಲ್ಲಿ ೫೭)

ಕನ್ನಡದ ಬಗೆಗಿನ ಸಂಪೂರ್ಣ ಬದ್ಧತೆಯಿಂದ ನಿಷ್ಕಾಮ ಕಾರ್ಯಮಗ್ನನಾಗಿರುವಾತನಿಗೆ ಯಾಚಿಸದೆ ಮತ್ತು ಯೋಚಿಸದೆ ಎಂಥೆಂಥ ಮಾಯಾಮೃಗಾಮಿಷಗಳು ಎದುರಾಗುತ್ತವೆ ಎಂಬುದಕ್ಕೆ ಕೇವಲ ಮೂರು ನಿದರ್ಶನಗಳನ್ನು ಉಲ್ಲೇಖಿಸುತ್ತೇನೆ.
      ಮೊದಲನೆಯದು, ಸಗಟು ಪುಸ್ತಕ ಖರೀದಿ ಸಮಿತಿಯ ಸದಸ್ಯತ್ವ. ಒಂದು ಶುಭ ಮುಂಜಾನೆ ಈ ಆದೇಶ ನನಗೆ ಸರ್ಕಾರದಿಂದ ಬಂತು. ನಾನೇನು ಮಾಡಬೇಕೆಂದು ನಮ್ಮ ನಿರ್ದೇಶಕ ಹಾಮಾ ನಾಯಕರನ್ನು ಕೇಳಿದೆ. ಇದೊಂದು ಗೌರವ ಸ್ವಾಮೀ. ನಿಮ್ಮ ನಿಷ್ಠಾವಂತ ಕನ್ನಡ ಸೇವೆಗೆ ಅಯಾಚಿತವಾಗಿ ಲಭಿಸಿರುವ ಮನ್ನಣೆ. ಒಪ್ಪಿಕೊಂಡು ಯಾವುದೇ ವಶೀಲಿ ದಾಕ್ಷಿಣ್ಯಗಳಿಗೊಳಗಾಗದೇ ಮುಂದುವರಿಯಿರಿ ಎಂದರು.
      ಆ ತರುಣದಲ್ಲೇ ನನ್ನ ಮನೆಗೆ ಅನೇಕ ಹೊಸ ಮುಖಗಳು ಹೂಹಾರ, ನಿಂಬೆಹಣ್ಣು ಮುಂತಾದ ಶುಭಸೂಚಕಗಳ ಸಹಿತ ಬಂದು ನನ್ನನ್ನು (ವಿನಾ ಕಾರಣ) ಪ್ರಶಂಸಿಸಿ ತಮ್ಮ ಪ್ರವರಗಳನ್ನು ನಿವೇದಿಸಿಕೊಂಡವು ಮಾತ್ರವಲ್ಲ, ನನ್ನ ಕೃತಿಗಳನ್ನು ಪ್ರಕಟಿಸಿ ನನಗೆ ಸಮೃದ್ಧ ರಾಯಧನ ಪಾವತಿಸುವ ಆಶ್ವಾಸನೆಯನ್ನೂ ನೀಡಿದವು! ಗುಂಡಿಗೆ ಕೆಡೆಯದಿರು ಮನವೇ, ಎಚ್ಚರೆಚ್ಚರ ಎಂದಿತು ಅಂತರ್ವಾಣಿ.

ಅದು ಸುಮಾರು ಹತ್ತು ಮಂದಿ ನಾಮಕರಣಗೊಂಡ ಸದಸ್ಯರ ಸಮಿತಿ. ಎಲ್ಲರೂ ಕನ್ನಡದ ಡಿಂಗರಿಗರೇ, ಪುಸ್ತಕ ಪ್ರೇಮಿಗಳೇ. ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಾವು ಪುಸ್ತಕ ಆಯ್ಕೆಯ ಸೂತ್ರಗಳನ್ನು ರಚಿಸಲು ಮುಂದಾದೆವು. ಸರಕಾರದ ಮಾರ್ಗದರ್ಶೀ ಸೂಚನಾನುಸಾರ ಸಮಿತಿ ಬಹುಮತದಿಂದ ತಳೆದ ಖರೀದಿ ನೀತಿ ನನ್ನಲ್ಲಿ ಅಸಹ್ಯ ಭಾವನೆ ಮೂಡಿಸಿತು: ಪುಸ್ತಕದ ಗುಣಮಟ್ಟ ಅಥವಾ ಯೋಗ್ಯತೆಯೊಂದನ್ನು ಬಿಟ್ಟು ಮಿಕ್ಕೆಲ್ಲ ಅಂಶಗಳಿಗೂ ಇದರಲ್ಲಿ ಪ್ರಾಮುಖ್ಯ ಲಭಿಸಿತ್ತು. ಲೇಖಕರ ಪ್ರಾದೇಶಿಕತೆ, ಜಾತಿ, ಆರ್ಥಿಕ ಸ್ಥಿತಿ, ಪ್ರಕಾಶಕರ ಹಿರಿಮೆ, ಸಾಮಾಜಿಕ ನ್ಯಾಯ ಮುಂತಾದವೇ ಅಲ್ಲಿ ಚರ್ಚೆಯ ಪ್ರಧಾನ ವಿಷಯಗಳಾಗಿದ್ದುವು. ಈ ಅಶೈಕ್ಷಣಿಕ ಮತ್ತು ರಾಜಕೀಯ ಹವೆಯಲ್ಲಿ ನನ್ನ ಉಸಿರುಗಟ್ಟಿತು.

ಬಂದಿದ್ದ ಪುಸ್ತಕಗಳ ಪೈಕಿ ಒಂದು ಶೀರ್ಷಿಕೆ ನನ್ನ ವಿಶೇಷ ಲಕ್ಷ್ಯ ಸೆಳೆಯಿತು: ‘ಸೂರ್ಯನ ಸಂಸಾರ. ಈ ವಿಜ್ಞಾನ ಪುಸ್ತಕವನ್ನು ತೆರೆದು ನೋಡಿದೆ. ನಾನೇ ಎಂದೋ ಬರೆದಿದ್ದ ಪಾಠ, ಆದರೆ ಇದರ ಲೇಖಕ ಇನ್ನಾರೂ ಅಲ್ಲ, ನನ್ನ ಒಬ್ಬ ಮಾಜೀ ಶಿಷ್ಯ! ನೇರ ಕೃತಿಚೌರ್ಯ. ಬೆಂಗಳೂರಿನಲ್ಲೇ ಆತ ಒಂದು ಪ್ರಭಾವಶಾಲಿ ಸ್ಥಾನದಲ್ಲಿದ್ದ. ಅವನಿಗೆ ಒಡನೆ ಬುಲಾವು ಕಳಿಸಿ ಅಲ್ಲಿಗೆ ಕರೆಸಿದೆ. ಅನಿರೀಕ್ಷಿತವಾಗಿ ನನ್ನನ್ನು ಕಂಡು ಸತ್ಯದ ನಗ್ನ ಚಿತ್ರ ಎದುರಾದಾಗ ನನ್ನ ಕಾಲಿಗೆ ಬಿದ್ದು, ಇದರ ಎಲ್ಲ ಹಣವನ್ನೂ ನಿಮಗೇ ಒಪ್ಪಿಸಿಬಿಡುತ್ತೇನೆ ಗುರುಗಳೇ. ಇದು ಮುದ್ರಣಾಲಯದಲ್ಲಿ ನನ್ನ ಅರಿವಿಗೆ ಬರದೇ ಆದ ತಪ್ಪು, ನನ್ನನ್ನು ಕ್ಷಮಿಸಿ ಎಂದು ಮುಂತಾಗಿ ಗೋಗರೆದು ಹಲುಬಿದ. ಒಬ್ಬ ವ್ಯಕ್ತಿ ಇಂಥ ಹೀನ ಮತ್ತು ದೀನ ಸ್ಥಿತಿಗೆ ಕೆಡೆಯುತ್ತಾನೆ ಎಂಬ ಕಲ್ಪನೆಯೇ ಇರದಿದ್ದ ನಾನು ಅವನಿಗೆ ಛೀಮಾರಿ ಹಾಕಿ ಆ ಪುಸ್ತಕದ ಖರೀದಿಯನ್ನು ರದ್ದುಗೊಳಿಸಿದೆ.

ನನ್ನೊಳಗೆ ತುಮುಲ ಶುರುವಾಯಿತು. ‘ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದು ಮಿಡಿದರು ಬಸವಣ್ಣ. ಮತ್ತೆರಡು ತಿಂಗಳು ಸಂದಾಗ ಇನ್ನಷ್ಟು ಉಲ್ಬಣಿಸಿದ ಪರಿಸ್ಥಿತಿ ನನ್ನ ಉಸಿರು ಕಟ್ಟಿಸಿತು. ಸಮಿತಿಗೆ ರಾಜೀನಾಮೆ ನೀಡಿ ಹೊರಬಂದೆ. ಇದು ಪಲಾಯನವಾದವೇ? ಒಳಗಿದ್ದು ಕೊಳೆ ತೊಳೆದು ಒಳ್ಳೆ ಬೆಳೆಗೆ ಅವಕಾಶ ಮಾಡಿಕೊಡದೆ ಹೊರಬಂದು ನೀನು ಸಾಧಿಸಿದ್ದೇನು - ಅಪ್ರಾಮಾಣಿಕ ವ್ಯವಹಾರಗಳಿಗೆ ಹುಲುಸು ಹೊಲಸು ಹೊಲವನ್ನು ಸುಲಭವಾಗಿ ಬಿಟ್ಟುಕೊಟ್ಟುದರ ಹೊರತಾಗಿ ಎಂದು ಪ್ರಶ್ನಿಸಿತು ಮನಸ್ಸಾಕ್ಷಿ. ಆದರೆ ನಾನೇನು ಮಾಡಲಿ ಬಡವನಯ್ಯಾ!

ಎರಡನೆಯದು, ಮೊದಲು ಸಗಟು ಖರೀದಿಯಾಗಿ ಕಾಡಿದ ಮಾಯೆ ಈಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಾಮಕರಣಗೊಂಡ ಒಬ್ಬ ಸದಸ್ಯನಾಗಿ ಪೀಡಿಸತೊಡಗಿತು. ನನ್ನ ಸಾಮರ್ಥ್ಯ ಮಿತಿಯೊಳಗಿರುವ ಇಂಥ ಯಾವುದೇ ಹೊಣೆ ಅಪ್ರಾರ್ಥಿತವಾಗಿ ಬಂದಾಗ ಅದನ್ನು ವಿನಯಪೂರ್ವಕ ಒಪ್ಪಿ ಅದರ ನಿರ್ವಹಣೆಗೆ ಪ್ರಾಮಾಣಿಕ ಪ್ರಯತ್ನ ಹೂಡುವುದು ನನ್ನ ಜಾಯಮಾನ. ಇಲ್ಲದ ಸಮಸ್ಯೆಗಳನ್ನು ಊಹಿಸುತ್ತ ಸಲ್ಲದ ಕಾರಣಗಳನ್ನು ಮುಂದೊಡ್ಡುತ್ತ, ಹೊಣೆ ತಪ್ಪಿಸಿಕೊಳ್ಳುವುದು ಎಂದೂ ಅಲ್ಲ. ಮೊದಲು ನಡೆ, ಭ್ರಮನಿರಸನವಾದರೆ ಅಲ್ಲಿಂದ ಕಾಲ್ತೆಗೆ, ನಿಷೇಧಾತ್ಮಕ ಅನುಭವವೂ ಒಂದು ಲಾಭವಲ್ಲವೇ - ಇದು ನನ್ನ ನೀತಿ.

ಕನ್ನಡ ನಾಡಿನ ಹಿರಿ ಚೇತನಗಳ ಈ ಶೃಂಗ ಸಭೆಗೆ ಅಧ್ಯಕ್ಷರು ನಮ್ಮ ಹಾಮಾನಾ. ಇತರ ಕೆಲವು ಸದಸ್ಯರು ಹಂಪನಾ, ಕಣವಿ, ಲಕ್ಷ್ಮೀನಾರಾಯಣ ಭಟ್ಟ, ಅಕಬರ ಅಲಿ ಮೊದಲಾದವರು. ನಾಯಕರು ಸಭೆಗಳನ್ನು ಅತ್ಯಂತ ನಯ ನಾಜೂಕು ನವುರಾಗಿ ನಡೆಸುತ್ತಿದ್ದರು. ತುಂಬ ಖುಶಿಯಿಂದಲೇ ನಾನೂ ನನ್ನ ಕೈಂಕರ್ಯ ಒಪ್ಪಿಸುತ್ತಿದ್ದೆ. ಎರಡು ವಿಶಿಷ್ಟ ಸನ್ನಿವೇಶಗಳಲ್ಲಿ ಇಲ್ಲಾದರೂ ವೈಯಕ್ತಿಕ - ಕನ್ನಡದ ಅಲ್ಲ - ಹಿತಾಸಕ್ತಿಗಳು ಮುಂಚೂಣಿಗೆ ನೆಗೆದದ್ದು ಕಂಡು ಮತ್ತೆ ಖತಿಗೊಂಡೆ.

ಮೊದಲನೆಯದು ಗಮಕ ಅಥವಾ ತತ್ಸಮಾನ ಸಾಹಿತ್ಯ ಪ್ರಸಾರಕ್ಕಾಗಿ ಸೇವೆ ಸಲ್ಲಿಸಿದ ಹಿರಿಯರೊಬ್ಬರ ಆಯ್ಕೆ. ಪ್ರತಿಯೊಬ್ಬ ಸದಸ್ಯನೂ ಇಂಥ ಒಬ್ಬರ ಹೆಸರನ್ನು ಸೂಚಿಸಬಹುದಿತ್ತು. ನಾನೂ ಒಬ್ಬರ ಹೆಸರನ್ನು ಶಿಫಾರಸು ಮಾಡಿದ್ದೆ. ಅಂತಿಮ ಆಯ್ಕೆಗೆ ಸಭೆ ಸೇರಿತು. ಇಂಥಲ್ಲೆಲ್ಲ ಹೇಗೆ filibuster technique (ಬೊಬ್ಬೆ ಸಹಿತ ವಾಗ್ದಾಳಿ) ಫಲಕಾರಿಯಾಗುವುದೆಂದು ಕಂಡು ರೋಸಿಹೋಗಿದ್ದೇನೆ. ಕನ್ನಡ ಪ್ರಾಧ್ಯಾಪಕ-ಕವಿಯೊಬ್ಬರು ಮೈಸೂರು ಅನಂತಸ್ವಾಮಿಯವರಿಗೆ (ಆಗ ಇವರು ಜೀವಂತವಾಗಿದ್ದರು) ಈ ಪ್ರಶಸ್ತಿಯನ್ನು ಕೊಡಬೇಕೆಂದು ಸಾಕಷ್ಟು ಕೊರೆದರು. ಇನ್ನೊಬ್ಬ ಸದಸ್ಯರು ಗಮಕಿ ರಾಘವೇಂದ್ರರಾಯರ ಅರ್ಹತೆ ಕುರಿತು ವಿವರಣೆ ನೀಡಿದರು. ಒಡನೆ ನಾನು ನನ್ನ ಪೂರ್ವಸೂಚನೆಯನ್ನು ಹಿಂದೆ ತೆಗೆದುಕೊಂಡು ರಾಯರ ಹೆಸರನ್ನು ಅನುಮೋದಿಸಿದೆ.
      ಪ್ರಾಧ್ಯಾಪಕ-ಕವಿ, ಈ ರಾಯರು ಮನೆಮನೆಗೆ ಹೋಗಿ ಲಜ್ಜೆಗೆಟ್ಟು ತಮಗೆ ಪ್ರಶಸ್ತಿ ದಯಪಾಲಿಸಬೇಕೆಂದು ಯಾಚಿಸುತ್ತ ಬಂದಿದ್ದಾರೆ. ಹೀಗಲ್ಲದೇ ಅನಂತಸ್ವಾಮಿ ಸುಗಮ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ನಿಷ್ಕಾಮಸೇವೆ. . . .
      ನಾನು ಗಟ್ಟಿಯಾಗಿ ಒದರಿದೆ, ಇಲ್ಲಿ ಚರ್ಚೆಗಿರುವ ವಿಷಯ ಗಮಕ, ಸುಗಮಸಂಗೀತ ಅಲ್ಲ. ಇನ್ನು ರಾಯರು ಅವರ ಈ ಇಳಿವಯಸ್ಸಿನಲ್ಲಿ ಸದಸ್ಯರ ಮನೆಗಳಿಗೆ ಹೋಗಿ ತಮ್ಮ ಬೇಡಿಕೆ ಸಲ್ಲಿಸಿದರೆಂದರೆ ಅದು ಅವರ ಅಪರಾಧವಲ್ಲ, ಅಂಥ ದೀನ ಸ್ಥಿತಿಗೆ ಅವರನ್ನು ತಳ್ಳಿದ ಸಮಾಜದ ತಪ್ಪು. ಈ ಕಾರಣದಿಂದಲೂ ಅವರಿಗೆ ಪ್ರಶಸ್ತಿ ಕೊಡಲೇಬೇಕು.
      ಇನ್ನಷ್ಟು ತಾರಶ್ರುತಿಯಲ್ಲಿ ಅವರು ಅರಚಿದರು, ಸುಗಮ ಸಂಗೀತವನ್ನು ಕೂಡ ಗಮಕದ ಒಂದು ಪ್ರಕಾರವೆಂದು ಭಾವಿಸುವುದು ಸಾಧುವಾಗಿದೆ. ನಿಮಗೇನು ಗೊತ್ತು ಅನಂತಸ್ವಾಮಿಯವರ ಸೇವೆ. . .
      ನಾನು ಸೌಮ್ಯವಾಗಿ, ನಿಮ್ಮ ಈ ಅತಾರ್ಕಿಕ ವಾದ ಏಕೆಂಬುದು ನನಗೆ ಚೆನ್ನಾಗಿ ಗೊತ್ತಿದೆ: ಅನಂತಸ್ವಾಮಿಯವರು ನಿಮ್ಮ ಅನೇಕ ಕವನಗಳನ್ನು ಹಾಡಿ ಜನಪ್ರಿಯಗೊಳಿಸಿ ಧ್ವನಿಸುರುಳಿಗಳನ್ನು ಮುದ್ರಿಸಿ ನಿಮಗೆ ಅಪಾರ ಕೀರ್ತಿ, ಧನ ಮತ್ತು ಪ್ರತಿಷ್ಠೆ ತಂದುಕೊಟ್ಟಿದ್ದಾರೆ, ನಿಜ. ಇದಕ್ಕಾಗಿ ಅವರನ್ನೂ ನಿಮ್ಮನ್ನೂ ಅಭಿನಂದಿಸುತ್ತೇನೆ. ಆದರೆ ಪ್ರಸ್ತುತ ವಿಷಯ ಇದು ಯಾವುದೂ ಅಲ್ಲ. ಸುಗಮ ಸಂಗೀತವೆಂದೂ ಗಮಕವಾಗದು. ರಾಘವೇಂದ್ರ ರಾಯರಿಗೇ ಈ ಪ್ರಶಸ್ತಿ ಸಲ್ಲತಕ್ಕದ್ದು. ಅನಂತಸ್ವಾಮಿಯವರಿಗೆ ನಿಧಿ ಸಮರ್ಪಿಸಲು ನೀವೇ ಖಾಸಗಿಯಾಗಿ ಏಕೆ ಮುಂದಾಗಬಾರದು? ನನ್ನ ದೇಣಿಗೆ ಈಗಲೇ ಪಾವತಿಸಲು ಸಿದ್ಧ. Not that I love sugam sangeet less but I love at the moment gamaka more ಎಂದೆ. ಅಲ್ಲಿಗೆ ರಾಯರ ಹೆಸರೇ ಮಂಜೂರಾಯಿತು.

ಮರುವರ್ಷದಘರ್ಷಣೆ ಎರಡನೆಯ ಅನುಭವ. ಹಿರಿಯ ಕನ್ನಡ ಚೇತನವೊಂದರ ಆಯ್ಕೆ. ಪಾವೆಂ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಪಾ.ವೆಂ ಆಚಾರ್ಯರ ಹೆಸರನ್ನು ನಿಯಮ ಪ್ರಕಾರ ನಾನು ಮೊದಲೇ ಸೂಚಿಸಿದ್ದೆ. ಸಭೆಯಲ್ಲಿ ಹಂಪನಾ ಕೊಡಗಿನ ಬಿ.ಡಿ. ಗಣಪತಿಯವರಿಗೇ ಈ ವರ್ಷ ಪ್ರಶಸ್ತಿ ಕೊಡತಕ್ಕದ್ದೆಂದು ಪಟ್ಟುಹಿಡಿದರು. ಅವರಿತ್ತ ಮೂರು ಘನ ಕಾರಣಗಳು: ತತ್ಪೂರ್ವ ಮಡಿಕೇರಿಯಲ್ಲಿ ಜರಗಿದ ಕನ್ನಡ ಸಾಹಿತ್ಯ ಸಮ್ಮೇಳನದ ವ್ಯವಸ್ಥಾಪಕರಾಗಿ ಗಣಪತಿಯವರು ಸಲ್ಲಿಸಿದ ಸೇವೆ ಅನನ್ಯವಾದದ್ದು; ಅವರು ಅಲ್ಪಸಂಖ್ಯಾತ ಕೋಮಿನವರು; ಸ್ವತಃ ಅವರು ಉತ್ತಮ ಸಾಹಿತಿಗಳು.
      ನಾನೆಂದೆ, ಗಣಪತಿಯವರ ಹಿರಿಮೆ ಏನೆಂಬುದು ಕೊಡಗಿನವನಾದ ನನಗೆ ಚೆನ್ನಾಗಿ ತಿಳಿದಿದೆ: ಕನ್ನಡಕ್ಕೆ ಅಷ್ಟೇನೂ ಮನ್ನಣೆ ಇರದ ನನ್ನ ನಾಡಿನಲ್ಲಿ ಅವರು ಕನ್ನಡದ ಹಣತೆಯನ್ನು ಹಚ್ಚಿ ಬೆಳಗಿಸುತ್ತಿದಾರೆ; ಅಲ್ಲದೇ ನಾನು ಶಾಲಾ ವಿದ್ಯಾರ್ಥಿಯಾಗಿದ್ದಾಗ ನನ್ನ ಬರೆಹಗಳಿಗೆ ಅವರ ಪತ್ರಿಕೆಯಲ್ಲಿ ಸಾಕಷ್ಟು ಪ್ರೋತ್ಸಾಹವನ್ನೂ ನೀಡಿ ಉಪಕರಿಸಿದ್ದಾರೆಆದರೆ ಪ್ರಸ್ತುತ ಚರ್ಚೆ ಇರುವುದು ಸಮಗ್ರ ವಾಙ್ಮಯ ಸೇವೆಯಲ್ಲಿ ಯಾರದು ಗುಣ-ಗಾತ್ರಗಳಲ್ಲಿ ಹೆಚ್ಚಿನದು? ವಯಸ್ಸಿನಲ್ಲಿ ಯಾರು ಹಿರಿಯರು? ಇಲ್ಲಿ ಪಾವೆಂ ಅವರಿಗೇ ಮನ್ನಣೆ ಸಲ್ಲುತ್ತದೆ.
      ಹಂಪನಾ ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರೆಂಬುದನ್ನು ಮರೆಯದಿರೋಣ. ನಮ್ಮ ವಾದ ಸಂವಾದ ವಾಗ್ವಾದಗಳು ತಾರಕ್ಕೇರಿದಾಗ ಹಾಮಾನಾ ಅಕಾಡೆಮಿಯ ಹಿರಿ ಸದಸ್ಯ ಮತ್ತು ಆ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚನ್ನವೀರ ಕಣವಿಯವರನ್ನು ಅಂತಿಮ ನಿರ್ಣಯ ನೀಡಬೇಕೆಂದು ಕೋರಿದರು. ನಾಡಿನ ನಾಡಿಮಿಡಿತ ಬಲ್ಲ ಈ ಹಿರಿಯರು ಪಾವೆಂ ಹೆಸರನ್ನು ಸೂಚಿಸಿ ಈ ವ್ಯರ್ಥ ವಾಗ್ವಿಲಾಪಕ್ಕೆ ತೆರೆ ಎಳೆದರು.

ಮೂರನೆಯದು, ಆಗ (೧೯೯೦ರ ದಶಕಾರಂಭ, ನಾನು ೧೯೮೬ರಲ್ಲಿ ವೃತ್ತಿ ನಿವೃತ್ತನಾಗಿದ್ದೆ) ಕರ್ನಾಟಕ ಸರ್ಕಾರದ ವತಿಯಿಂದ ಪ್ರಾರಂಭವಾಗಲಿದ್ದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ನನ್ನನ್ನು ಒಬ್ಬ ಸದಸ್ಯನಾಗಿ ಬಂಧಿಸಿದ ಶೈಲಿ. ಆ ಸಂಜೆ ನಾನು ಯಾವುದೋ ಒಂದು ಸಭೆಯಲ್ಲಿದ್ದೆ. ಅಲ್ಲಿಗೇ ಬಂತು ರಾಜ್ಯದ ಮುಖ್ಯ ಮಂತ್ರಿಯವರಿಂದ (ವೀರಪ್ಪ ಮೊಯಿಲಿ) ಬುಲಾವ್. ಅವರ ಆಪ್ತ ಕಾರ್ಯದರ್ಶಿ ಕೆ.ಆರ್. ಕಮಲೇಶ್ ಮಾತಾಡಿದರು, ಕನ್ನಡ ಪುಸ್ತಕ ಪ್ರಾಧಿಕಾರದ ಒಬ್ಬ ಸದಸ್ಯರಾಗಿರಲು ನಿಮ್ಮನ್ನು ಒಪ್ಪಿಸಬೇಕೆಂದು ಸಾಹೇಬರು ಹೇಳಿದ್ದಾರೆ. ನಾಳೆ ಮುಂಜಾನೆ ಈ ಒಟ್ಟು ಯಾದಿ ಪ್ರಕಟವಾಗಲಿದೆ. ದಯವಿಟ್ಟು ನಿಮ್ಮ ಸಮ್ಮತಿ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.
ಅಧ್ಯಕ್ಷರು ಯಾರು?
ಎಲ್.ಎಸ್ ಶೇಷಗಿರಿ ರಾವ್.
ಒಪ್ಪಿದ್ದೇನೆ.

ನನಗೆ ಸಹಜವಾಗಿ ಆಶ್ಚರ್ಯವಾಯಿತು. ಏಕೆಂದರೆ ನನಗೆ ಯಾವುದೇ ಬಗೆಯ ರಾಜಕೀಯ, ಸಾಹಿತ್ಯಕ, ಆರ್ಥಿಕ ಅಥವಾ ಜಾತೀಯ ಪ್ರಭಾವವಾಗಲೀ ಇಲ್ಲ, ಆಸಕ್ತಿಯೂ ಇಲ್ಲ. ಅಲ್ಲದೇ ಇಂಥ ಒಂದು ಸಂಸ್ಥೆಯ ಬಗೆಗಿನ ಕಲ್ಪನೆಯೇ ಇರಲಿಲ್ಲ. ಇನ್ನು ಮೊಯಿಲಿಯವರಿಗೆ ನಾನು ಪರಿಚಿತನೂ ಅಲ್ಲ. ಹೀಗಿರುವಾಗ ಈ ಹೊಸ ಗುರುತರ ಹೊಣೆ ಹೇಗೆ ನನ್ನ ಪಾಲಿಗೆ ಬಂತು? ಕುವೆಂಪು ವಾಣಿ ನೆನಪಾಯಿತು, ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಶೇಶಗಿರಿರಾಯರೇ ನನ್ನ ಹೆಸರನ್ನು ಸೂಚಿಸಿರಬೇಕು, ಅವರೂ ನಾನೂ ಮಡಿಕೇರಿಯಲ್ಲಿ ನಿಕಟ ಸಹೋದ್ಯೋಗಿಗಳಾಗಿದ್ದೆವು.

ಪ್ರಾಧಿಕಾರದ ಮೊದಲ ಸಭೆ ಬೆಂಗಳೂರಿನಲ್ಲಿ ಸೇರಿದಾಗಲೇ ನನಗೆ ಉಳಿದ ಸದಸ್ಯರ ಗುರುತಾದದ್ದು: ಅಧ್ಯಕ್ಷ ಶೇಷಗಿರಿರಾವ್ ಮತ್ತು ಸದಸ್ಯ ಎಂ.ಎಚ್. ಕೃಷ್ಣಯ್ಯ ಇಬ್ಬರ ಹೊರತಾಗಿ ಉಳಿದವರೆಲ್ಲರೂ ನನಗೆ ಹೊಸ ಮುಖಗಳೇ, ಆದರೆ ಪರಿಚಿತ ಹೆಸರುಗಳೇ. ಅದೊಂದು ಶುದ್ಧ ಸಾಹಿತ್ಯಕ ಮಂಡಳಿ ಆಗಿತ್ತು. ಅದರಲ್ಲಿ ವಿಜ್ಞಾನ ವಾಙ್ಮಯ ಪ್ರತಿನಿಧಿಯಾಗಿ ನಾನೊಬ್ಬನೇ ಇದ್ದುದಾಗಿತ್ತು. ಸ್ವತಃ ಸಾಹಿತಿಯಾಗಿದ್ದ ಮೊಯಿಲಿಯವರ ದೂರದರ್ಶಿತ್ವ ಕುರಿತು ಗೌರವ ಮೂಡಿತು.

ಇಂಥ ಸಭ್ಯ ಸುಸಂಸ್ಕೃತ ರಾಜಕೀಯರಹಿತ ಸಾಹಿತ್ಯಬದ್ಧ ಸದಸ್ಯರಿಂದ ಕೂಡಿದ ಪ್ರಾಧಿಕಾರ ಅಂದು ಕೈಗೊಂಡು ಮುಂದಿಟ್ಟ ಪ್ರಾಯೋಗಿಕ ಹೆಜ್ಜೆಗಳು ನಿಜಕ್ಕೂ ವಿನೂತನವಾಗಿದ್ದುವು. ಸಗಟು ಖರೀದಿಯಲ್ಲಿ ಪಾರದರ್ಶಕತೆ, ಪ್ರಕಟಣ ಕ್ಷೇತ್ರದಲ್ಲಿ ನಾವೀನ್ಯ, ಮಾರಾಟ ರಂಗದಲ್ಲಿ ನೂತನ ವಿಧಾನಾನ್ವೇಷಣೆ, ಕನ್ನಡ ಅಭಿಜಾತ ಆದರೆ ಸದ್ಯ ಅಲಭ್ಯ ಕೃತಿಗಳ ಸಂಪಾದನೆ ಮತ್ತು ಪುನರ್ಮುದ್ರಣ, ಪ್ರತಿಭಾ ಪುರಸ್ಕಾರ - ಒಂದೇ ಎರಡೇ? ಆದರೆ ಇನ್ನೇನು ಬಿತ್ತಿದ ಈ ಎಲ್ಲ ಬೀಜಗಳೂ ಅಂಕುರಿಸಿ ಸಸಿಗಳು ನಳನಳಿಸಿ ಕನ್ನಡದ ಕಂಪು ಪಸರಿಸುತ್ತಿದೆ ಎನ್ನುವಷ್ಟರಲ್ಲಿ ಮೊಯಿಲಿ ಸರ್ಕಾರ ಬಿತ್ತು, ಬಂದ ಹೊಸ ಸರ್ಕಾರ ಒಂದಿಷ್ಟೂ ಅಳುಕು ಆತಂಕ ವಿಚಾರವಿಲ್ಲದೆ ನಮ್ಮೆಲ್ಲರ ರಾಜಿನಾಮೆ ಪತ್ರಗಳನ್ನು ಕೋರಿ ಪಡೆದು ಹೊಸ ಸಮಿತಿಯನ್ನು ನಾಮಕರಿಸಿತು!

ಇವೆಲ್ಲ ಅನುಭವಗಳ ಸಾರವೀ ನಿಯಮ: ಯಾವುದೇ ಸರ್ಕಾರೀ ಕೃಪಾಪೋಷಿತ ವ್ಯವಸ್ಥಾಪನೆಯಲ್ಲಿ ಖುದ್ದು ಅದರ ಉದ್ದೇಶವೇ ಮೊದಲ ಬಲಿ. ಸ್ವತಂತ್ರ ಭಾರತದ ತಿರುಳಿಗೆ ತಾಗಿ ಅದರ ಸತ್ತ್ವ, ಸ್ವತ್ವಗಳನ್ನು ಶೋಷಿಸುತ್ತಿರುವ ಕ್ಷಯರೋಗವಿದು. ಬಸವಣ್ಣನವರ ಅಮರವಾಣಿ -
ಇವನಾರವ, ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ
ಕೂಡಲ ಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ
-     ಎಂದಾದರೂ ನಮ್ಮ ದೇಶದಲ್ಲಿ ಪ್ರತ್ಯಕ್ಷ ಆಚರಣೆಯಲ್ಲಿ ಮೈವಡೆದೀತೇ?

ಪ್ರತಿಭಾನ್ವಿತರ ಅನ್ವೇಷಣೆಯಲ್ಲಿ
ಅಧ್ಯಾಯ ೮೬  (ಮೂಲದಲ್ಲಿ ೫೮)

ವಿಶ್ವಕೋಶದ ದೈನಂದಿನ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದಾಗ ದೇಜಗೌ ನಮ್ಮ ಜೊತೆ ಹಿರಿಯಣ್ಣನಂತೆ ಆತ್ಮೀಯವಾಗಿ ವರ್ತಿಸುತ್ತ ಕನ್ನಡದ ಕೆಲಸವನ್ನು ನಾವು ಪ್ರತಿಯೊಬ್ಬರೂ ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆ ನೀಡುತ್ತಿದ್ದ ಒಂದು ಆಪ್ತ ಸಲಹೆ ಇದು: ಸ್ವತಃ ನೀವು ಆರೋಹಿಸುತ್ತಿರುವುದರ ಜೊತೆಗೆ ಇತರರನ್ನೂ ಅರಸಿ ತಂದು ಈ ಕಾರ್ಯಕ್ಕೆ ಆವಾಹಿಸಬೇಕು. ಇದೊಂದು ನಿರಂತರವಾಗಿ ನಡೆಯುತ್ತಿರಬೇಕಾದ ಯಜ್ಞ. ಅವರ ಸುದೀರ್ಘ ಜೀವನವೇ ಈ ತತ್ತ್ವಕ್ಕೆ ಬರೆದಿರುವ ಭಾಷ್ಯ.

ಇದೇ ತತ್ತ್ವ ನನ್ನ ಬದುಕನ್ನು ಕೂಡ ರೂಪಿಸಿದೆಯಾಗಿ ಅವರ ಸಲಹೆ ನನಗೆ ಬಲು ಪ್ರಿಯವಾಯಿತು. ಅಲ್ಲದೇ ನನ್ನ ವೃತ್ತಿ (ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕತ್ವ) ಸದಾ ಹೊಸ ಲೇಖಕರ ಅನ್ವೇಷಣೆಯನ್ನು ಅನಿವಾರ್ಯವಾಗಿಸಿತ್ತು. ಇನ್ನು ನನ್ನ ಸಾಮರ್ಥ್ಯವಾದರೂ ಏನು? ತೀರ ಸಾಮಾನ್ಯ ಅನಾಮಧೇಯನಾದ ನನ್ನಲ್ಲಿ ಪಾವೆಂ, ಸಿಎನೆಸ್, ದೇಜಗೌ ಮೊದಲಾದ ಮಹಾಮಹಿಮರು ವಿಶೇಷ ಗುಣ ಕಂಡು ಪ್ರೋತ್ಸಾಹ ನೀಡಿ ಮುಂದಕ್ಕೆ ತಂದಿದ್ದರೆಂಬುದು ಸದಾ ನನ್ನ ನೆನಪಿನಲ್ಲಿತ್ತು. ಆದ್ದರಿಂದ ಇದೇ ಕೈಂಕರ್ಯವನ್ನು ಮುಂದುವರಿಸಿಕೊಂಡು ಹೋಗುವುದೇ ನಾನು ಈ ಎಲ್ಲ ಹಿರಿ ಚೇತನಗಳಿಗೂ ಮಿಗಿಲಾಗಿ ಭಾರತೀಯ ಪರಂಪರೆಗೂ ಸಲ್ಲಿಸಬಹುದಾದಗುರುದಕ್ಷಿಣೆ ಪುರಂದರದಾಸರು ಹೇಳಿರುವಂತೆ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯುವ ಕೃತಾರ್ಥತೆ ಇದು.

ಈ ಅನ್ವೇಷಣ ಮಾರ್ಗದಲ್ಲಿ ಮುನ್ನಡೆದಂತೆ ನನಗೆ ಲಭಿಸಿದ ಅನುಭವಗಳು ಅಸಂಖ್ಯ. ಸಂತೃಪ್ತಿ ಅವರ್ಣನೀಯ ಮತ್ತು ಬೆಳಕಿಗೆ ಬಂದ ಪ್ರತಿಭೆಗಳು “Full many a gem of purest ray serene the dark unfathomed caves of the ocean bear” (ಹುದುಗಿಹವು ಸಾಗರದ ಗಹನ ಗಹ್ವರಗಳಲಿ ಪರಿಶುದ್ಧ ಕಾಂತಿಯುತ ರತ್ನಗಳು). ಆಯ್ದ ಕೆಲವು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.

ಕಗ್ಗತ್ತಲ ನಾಡು ಆಫ್ರಿಕಾದಿಂದ ಹೊಮ್ಮಿದ ಬೆಳಕು
ಸುಧಾ ವಾರಪತ್ರಿಕೆಯ ಎಂ.ಬಿ. ಸಿಂಗ್ ಮೊದಲು ನನ್ನನ್ನು ಪತ್ತೆ ಹಚ್ಚಿ ಪ್ರೋತ್ಸಾಹಿಸಿದ ಒಬ್ಬ ದಕ್ಷ, ಉದಾರಿ, ಕೃತಿನಿಷ್ಠ ಸಂಪಾದಕ. ಕ್ರಮೇಣ ಇದೊಂದು ಗಾಢ ವೈಯಕ್ತಿಕ ಸ್ನೇಹವಾಗಿ (ಪಾವೆಂ ಸಂದರ್ಭದಲ್ಲಿಯಂತೆ) ಮಾರ್ಪಟ್ಟುದು ನನ್ನ ಬದುಕಿನ ಒಂದು ಅತ್ಯಂತ ಸುಂದರ ಅಧ್ಯಾಯ. ಒಂದು ದಿನ ಇವರಿಂದ ನನಗೊಂದು ಕೋರಿಕೆ ಬಂತು: ಆಫ್ರಿಕಾದಲ್ಲಿರುವ ನಳಿನಿಮೂರ್ತಿ ಎನ್ನುವ ಕನ್ನಡ ಲೇಖಕಿಗೆ ಗಣಕ ಕುರಿತಂತೆ ಹಲವಾರು ತಾಂತ್ರಿಕ ಪದಗಳ ಶಿಷ್ಟ ಕನ್ನಡ ರೂಪಗಳು ಬೇಕಾಗಿವೆ. ಇವನ್ನು ನೀವು ಒದಗಿಸಬಹುದೇ? ಸುಮಾರು ಹದಿನೈದು ಇಂಗ್ಲಿಷ್ ಪದಗಳಿದ್ದ ಪಟ್ಟಿಯನ್ನು ಅವರು ಲಗತ್ತಿಸಿದ್ದರು. ತುಂಬ ಖುಷಿಯಿಂದ ಇದನ್ನು ಮುಗಿಸಿ (ನನಗೆ ಕೇವಲ ೫ ಮಿನಿಟುಗಳ ಪ್ರೀತಿಯ ಕೆಲಸ) ಆ ವಿಷಯಕ್ಕೆ ಹೊಂದುವ ಇನ್ನೊಂದಿಷ್ಟು ಇಂಗ್ಲಿಷ್-ಕನ್ನಡ ಪದಗಳನ್ನೂ ಅದಕ್ಕೆ ಸೇರಿಸಿ ನೇರ ನಳಿನಿಯವರಿಗೆ ಅಂಚೆ ಮೂಲಕ ರವಾನಿಸಿಬಿಟ್ಟೆ ಮತ್ತು ಎಂಬಿಯವರಿಗೆ ವರದಿ ಮಾಡಿದೆ ಕೂಡ.

ಹಲವು ತಿಂಗಳು ಸಂದುವು. ಆಷಾಢದ ಒಂದು ಮುಸ್ಸಂಜೆ. ಕಾರ್ಮೋಡ ಕವಿದು ಜಡಿಮಳೆ ಕೆಡೆಯುತ್ತಿದ್ದಾಗ ಕಾರೊಂದು ನಮ್ಮ ಮನೆ ಅರಸಿ ಬಂತು, ಅದರಿಂದ ಇಬ್ಬರು ಅಪರಿಚಿತರು ಇಳಿದರು. ನಾನು ನಳಿನಿಮೂರ್ತಿ, ಇವರು ನನ್ನ ಪತಿ ನರಸಿಂಹಮೂರ್ತಿ ಎಂದು ಅವರು ತಮ್ಮ ಪ್ರವರ ಹೇಳಿದರು. ನಮ್ಮ ತವರು ಬೆಂಗಳೂರಿಗೆ ರಜೆಯ ಮೇಲೆ ನಿನ್ನೆ ಮರಳಿದೆವು. ನಿಮ್ಮನ್ನು ಪ್ರತ್ಯಕ್ಷ ನೋಡಿ ಕೃತಜ್ಞತೆ ಸಲ್ಲಿಸಬೇಕೆಂದು ಬಂದಿದ್ದೇವೆ. ಈ ದಂಪತಿಗಳು ತತ್ಪೂರ್ವ ಸಿಎನೆಸ್ ಅವರ ಶಿಷ್ಯರೂ ಆಗಿದ್ದರಂತೆ. ಹೀಗೆ ನಮ್ಮ ಬಾಂಧವ್ಯ ಇನ್ನಷ್ಟು ದೃಢವಾಗಿ ಬೆಸುಗೆಗೊಂಡಿತು. ಫಲ: ಕನ್ನಡದಲ್ಲಿ ನಳಿನಿಯವರ ಹಲವಾರು ಜನಪ್ರಿಯ ವಿಜ್ಞಾನ ಲೇಖನಗಳ ಮತ್ತು ಕೃತಿಗಳ ಪ್ರಕಟಣೆ! ಅಂದು (೧೯೮೦ರ ದಶಕ) ಅವರು ಬರೆದಗಣಕದ ಕಥೆ ಕನ್ನಡದಲ್ಲಿ ಪ್ರಥಮವಾಗಿ ಬಂದ ಒಂದು ಪ್ರಬುದ್ಧ ಜನಪ್ರಿಯ ಗ್ರಂಥ. ಈಗ ಅವರಿಲ್ಲ, ಆದರೆ ಅವರ ಕನ್ನಡ ಕೈಂಕರ್ಯ ಸದಾ ಸ್ಮರಣೀಯ.

ಪುಸ್ತಕ ಪ್ರಪಂಚದ ಆಡುಂಬೊಲದಲ್ಲಿ
ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ವತಿಯಿಂದ ಪ್ರಕಟವಾಗುತ್ತಿದ್ದಪುಸ್ತಕ ಪ್ರಪಂಚ ಎಂಬ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾಗಿದ್ದರು ನಮ್ಮ ದೇಜಗೌ (೧೯೮೦ರ ದಶಕ). ಜಗತ್ಪ್ರಸಿದ್ಧ ಇಂಗ್ಲಿಷ್ ಮಾಸಿಕ ರೀಡರ್ಸ್ ಡೈಜೆಸ್ಟಿನಲ್ಲಿ ಮುದ್ರಣವಾದ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲುಪುಸ್ತಕ ಪ್ರಪಂಚಕ್ಕೆ ಮುಕ್ತ ಪರವಾನಿಗೆ ದೊರೆತಿತ್ತು. ಹೀಗೆ ಪ್ರಕಟವಾದ ಲೇಖನಗಳಿಗೆ ಆಗಾಗಲೇ ಯುಕ್ತ ಸಂಭಾವನೆಯನ್ನೂ ಪಾವತಿಸಲಾಗುತ್ತಿತ್ತು. ಅನರ್ಘ್ಯ ಮತ್ತು ಅಮೂಲ್ಯ ವಸ್ತು ಅಲ್ಲಿದೆ, ಅದರ ಕನ್ನಡ ಅವತರಣಿಕೆಯನ್ನು ಓದುಗರಿಗೆ ಅರ್ಪಿಸಲು ವೇದಿಕೆ ಇಲ್ಲಿದೆ. ಈ ಕನ್ನಡ ಸೇವೆಗೆ ಯೋಗ್ಯ ಸಂಭಾವನೆಯೂ ಇದೆ. ಆದರೆ ಇಂಥ ಸಾಂಸ್ಕೃತಿಕ ರಾಯಭಾರಿತ್ವ ನಿರ್ವಹಿಸಬಲ್ಲ ತಜ್ಞರು ಎಲ್ಲಿದ್ದಾರೆ? ದೇಜಗೌ ಚುಕ್ಕಾಣಿ ಹಿಡಿದಾಗ ಎದುರಾದ ನಿಜ ಸಮಸ್ಯೆ ಇದು,
ಪ್ರಣಿತೆಯೂ ಇದೆ ಬತ್ತಿಯೂ ಇದೆ -
ಜ್ಯೋತಿಯ ಬೆಳಗುವಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ?!
ಗುರುವಿದೆ ಲಿಂಗವಿದೆ -
ಶಿಷ್ಯನ ಸುಜ್ಞಾನವಂಕುರಿಸದನ್ನಕ್ಕರ ಭಕ್ತಿಯೆಲ್ಲಿಯದೋ?!
ಸೋಹಮೆಂಬುದ ಕೇಳಿ, ದಾಸೋಹವ ಮಾಡದಿದ್ದರೆ
ಅತಿಗಳೆದನು ಗುಹೇಶ್ವರ

ಪುಸ್ತಕ ಪ್ರಪಂಚದ ಸಂಪಾದಕ ಮಂಡಳಿಗೆಹೊಸ ನೆತ್ತರು ಪೂರಣ ಮಾಡುವುದೊಂದೇ ಸರಿಯಾದ ಮಾರ್ಗವೆಂದು ದೇಜಗೌ ತೀರ್ಮಾನಿಸಿ ಈ ಹೊಸಬರ ಪೈಕಿ ನನ್ನನ್ನೂ ಸೇರಿಸಿದರು. ಹೀಗೆ ನನಗಿಲ್ಲಿಕನ್ನಡ ಡಿಂಡಿಮ ಬಾರಿಸಲು ಹೊಸತೊಂದು ಅವಕಾಶ ಅಯಾಚಿತವಾಗಿ ಲಭಿಸಿತು. ‘ಪುಸ್ತಕ ಪ್ರಪಂಚಕ್ಕೆ ಆಗ ಬರೆಯುತ್ತಿದ್ದ ಹೆಚ್ಚಿನ ಲೇಖಕರು ಕುಂಟುತ್ತ ತೆವಳುತ್ತ ಸಾಗುತ್ತಿದ್ದ ಅಪ್ರಬುದ್ಧರಾಗಿದ್ದರು. ಈ ಲೇಖನಗಳಿಗೆ ನಮ್ಮ ವಿಶ್ವಕೋಶ ಲೇಖನಗಳ ಶಿಷ್ಟತೆ ತರುವುದು ಸಾಧ್ಯವೇ? ಇದು ನನ್ನೆದುರಿಗಿದ್ದ ಸವಾಲು. ಇಂಥ ಎಲ್ಲ ಸಂದರ್ಭಗಳಲ್ಲಿಯೂ ಪ್ರತ್ಯಕ್ಷ ಪ್ರಯೋಗದಿಂದ ನಾನೊಂದು ಸೂತ್ರ ಕಂಡುಕೊಂಡಿದ್ದೇನೆ: ನಮ್ಮ ಬಹುಸಂಖ್ಯಾತ ಗೃಹಿಣಿಯರನ್ನು ನೇರ ಸಂಪರ್ಕಿಸಿ ಅವರಿಗೆ ಕುಮ್ಮಕ್ಕು ಕೊಟ್ಟು ಈ ಕೆಲಸ ಮಾಡಿಸುವುದು. ತೊಟ್ಟಿಲು ಮತ್ತು ಮನೆಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಈ ಚೇತನಗಳು ಸಾಹಿತ್ಯವನ್ನೂ ಅದೇ ದಕ್ಷತೆಯಿಂದ ನಿಭಾಯಿಸಬಲ್ಲವೆಂಬುದು ನನ್ನ ದೃಢ ನಂಬಿಕೆ. ಕುವೆಂಪು ನುಡಿದಿರುವಂತೆ ಮನೆ ಮನೆಯಲಿ ನೀನಾಗಿಹೆ ಗೃಹಶ್ರೀ ಪೆಸರಿಲ್ಲದ ಪೆಸರಿದೆ ನಿನಗದು ಗೃಹಸ್ತ್ರೀ ಅಲ್ಲವೇ?
ಕುಮ್ಮಕ್ಕು ಕೊಟ್ಟಾಗ ಕಪಿ ಕಡಲ ಜಿಗಿಯುವುದು
ಕಿಮ್ಮತ್ತು ಹೂಡದೇ ಯಶವಿಲ್ಲ, ಕೆಲಸದಲಿ
ಗಮ್ಮತ್ತು ಗಳಿಸುವುದೆ ನಿಜ ತೃಪ್ತಿ - ಚಿಂತಿಸುತ
ಸುಮ್ಮನೆಯೆ ಕಾಲವನು ಕಳೆಯದಿರು ಅತ್ರಿಸೂನು

ಕ್ರಮೇಣ ಅನುವಾದಗಳ ಮಹಾಪೂರವೇ ಹರಿದುಬರತೊಡಗಿತು. ಅವನ್ನೆಲ್ಲ ಓದಿ ಒಪ್ಪವಿತ್ತು ಮುದ್ರಣಕ್ಕೆ ಅಳವಡಿಸುವ ಪ್ರೀತಿಯ ಸೇವೆಯನ್ನು ಮಂಡಳಿಯ ನಾವೆಲ್ಲರೂ ಉತ್ಸಾಹದಿಂದ ಸಲ್ಲಿಸಿದೆವು. ಸ್ವಾತಂತ್ರ್ಯ ಬಂದ ತರುಣದಲ್ಲಿ ಜವಾಹರಲಾಲ್ ನೆಹ್ರು ಮತ್ತೆ ಮತ್ತೆ ಉಚ್ಚರಿಸುತ್ತಿದ್ದ ಮಾತಿನ ಸಾರ್ಥಕತೆ ನಮ್ಮೆಲ್ಲರ ಅರಿವಿಗೆ ಬಂತು! “the exhilararating experience of building a new and resurgent India” (ನವೀನ ಮತ್ತು ಪುನರುತ್ಥಾಪಿತ ಭಾರತವನ್ನು ನಿರ್ಮಿಸುವ ಉತ್ತಾರಕ ಅನುಭವ). ಆಗ ಕನ್ನಡಕ್ಕೆ ಎಷ್ಟೊಂದು ಮಂದಿ ನುರಿತ ಲೇಖಕ ಲೇಖಕಿಯರು ಲಭಿಸಿ ಇವರ ಪೈಕಿ ಅವೆಷ್ಟು ಮಂದಿ ವೃತ್ತಿ ಬರೆಹಗಾರರೇ ಆದರೆಂಬುದನ್ನು ಗಮನಿಸುವಾಗ ನಾಡಿನ ಅಂತೆಯೇ ಭಾಷೆಯ ಅಂತಸ್ಸತ್ತ್ವ ಕುರಿತು ಅಭಿಮಾನ ಮೂಡುತ್ತದೆ.

ಆದರೆ ೫೦ ವರ್ಷಗಳಿಗೂ ಮಿಕ್ಕಿ ಚೆನ್ನಾಗಿ ನಡೆದ ಈ ಸಂಸ್ಥೆ ಪ್ರಜಾಪ್ರಭುಗಳ ಸ್ವಾರ್ಥದ ಹತಿಗೆ ಸಿಕ್ಕಿ ಶಾಶ್ವತವಾಗಿ ಮುಚ್ಚಿಯೇ ಹೋಯಿತು: ಹುತ್ತ ಕಟ್ಟುವವರು ಯಾರೋ ಅದರ ಒಡೆತನ ಸ್ಥಾಪಿಸುವವರು ಇನ್ನಾರೋ ಎಂಬಂಥ ಪರಿಸ್ಥಿತಿ. ದೇಶದ ಸರಾಸರಿ ಶೀಲ - ವರಮಾನ ಅಲ್ಲ - ವರ್ಧಿಸಿದ ವಿನಾ ಎಂಥ ರಚನಾತ್ಮಕ ಕಾರ್ಯವೂ ದೀರ್ಘ ಕಾಲ ಉಳಿದು ಒಂದು ಭವ್ಯ ಪರಂಪರೆಯನ್ನು ಸ್ಥಾಪಿಸದೆಂಬುದಕ್ಕೆ ವಯಸ್ಕರ ಶಿಕ್ಷಣ ಸಮಿತಿಯ ಶೋಚನೀಯ ನಿಧನ ಇನ್ನೂ ಒಂದು ನಿದರ್ಶನ.

ಕುವೆಂಪು ನಾಡಿನ ನವೀನ ಇಂಚರ
ವಿಶ್ವಕೋಶದ ಕಛೇರಿಯಲ್ಲಿ ಒಂದು ಅಪರಾಹ್ಣ, ಭೋಜನ ವಿರಾಮದ ವೇಳೆ. ನನ್ನ ಕೊಠಡಿಯ ಹೊರಗೆ ಅಪರಿಚಿತ ಗಣ್ಯರೊಬ್ಬರು ಯಾರನ್ನೋ ಅರಸುತ್ತ ಅಡ್ಡಾಡುತ್ತಿದ್ದುದನ್ನು ಕಂಡೆ. ನಾನೇ ಹೋಗಿ ಅವರ ಯೋಗಕ್ಷೇಮ ವಿಚಾರಿಸಿದೆ. ಅವರು ಶಿವಮೊಗ್ಗದ ಡಾಕ್ಟರ್ ಎಚ್.ಡಿ. ಚಂದ್ರಪ್ಪ ಗೌಡ, ನಮ್ಮ ಸಂಸ್ಥೆಯ ನಿರ್ದೇಶಕ ಹಾಮಾ ನಾಯಕರನ್ನು ಯಾವುದೋ ಕಾರ್ಯನಿಮಿತ್ತ ನೋಡಲು ಬಂದಿದ್ದರು.
      ಇನ್ನೇನು ಅವರು ಬರುವ ಹೊತ್ತಾಯಿತು. ಅಲ್ಲಿಯ ತನಕ ನನ್ನ ಕೊಠಡಿಯಲ್ಲೇ ಕುಳಿತಿರಿ. ಅಂದ ಹಾಗೆ ಕುವೆಂಪು ಪರಿಸರದವರಾದ ನೀವು ಕನ್ನಡದಲ್ಲಿ ಖಂಡಿತ ಬಲು ಗಟ್ಟಿ ಇರಲೇಬೇಕು. ವೈದ್ಯಕೀಯದ ಬಗ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆದಿರುವಿರೇ? ಬರೆಯಬಲ್ಲಿರೇ?
      ಬಲು ವಿರಳವಾಗಿ ಬರೆದುದುಂಟು. ಆದರೆ ಯಾರು ತಾನೆ ನನ್ನ ಲೇಖನಗಳನ್ನು ಪ್ರಕಟಿಸುತ್ತಾರೆ ನೀವೆ ಹೇಳಿ ಎನ್ನುತ್ತ ವಿಷಾದದ ನಗು ಸೂಸಿದರು. ಪುಸ್ತಕ ಪ್ರಪಂಚವೆಂಬ ಮಾಸಿಕದ ಹೆಸರು ಕೇಳಿರುವಿರಾ?
      ಹೌದು, ಬಲು ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ಅದರ ಸಂಚಿಕೆಗಳನ್ನು ಅತ್ಯಂತ ಆಸಕ್ತಿಯಿಂದ ಓದಿ ಪ್ರಭಾವಿತನಾದದ್ದುಂಟು.
      ನನ್ನ ಕೋರಿಕೆಯನ್ನು ಮನ್ನಿಸಿ ಚಂದ್ರಪ್ಪಗೌಡರು ಈ ಮಾಸಿಕಕ್ಕೆ ಲೇಖನ ಕಳಿಸಲು ಒಪ್ಪಿ ಆ ಪ್ರಕಾರ ನಡೆದುಕೊಂಡರು. ಮುಂದೆ ಇವರೊಬ್ಬ ಕನ್ನಡದ ಮುಂಚೂಣಿ ಜನಪ್ರಿಯ ವಿಜ್ಞಾನಗ್ರಂಥಕರ್ತೃವಾಗಿ ಅರಳಿದರೆಂಬುದು ಈಗ ಇತಿಹಾಸ. ೨೦-೨೧ನೆಯ ಶತಮಾನಗಳ ಕನ್ನಡ ವಿಜ್ಞಾನ ವಾಙ್ಮಯದ ಇತಿಹಾಸದಲ್ಲಿ ಎಚ್ಡಿಸಿಯವರದು ಹಿರಿ ಹೆಸರು.

ಪಟ್ಟೋಲೆ ಪಳಮೆ ಪ್ರಕಟಣೆ
      ಇನ್ನೊಂದು ಅಪರಾಹ್ಣ. ಸ್ಥಳ ವಿಶ್ವಕೋಶದಲ್ಲಿಯ ನನ್ನ ಕೊಠಡಿ. ಹೊರಗೆ ಬಿಸಿಲ ಝಳ. ಒಳಗೆ ಪಂಖದಡಿ ಕುಳಿತು ಕಾರ್ಯಮಗ್ನನಾಗಿದ್ದೆ. ವಯೋವೃದ್ಧರೊಬ್ಬರು (ವಯಸ್ಸು ೮೦ ದಾಟಿರಬಹುದು) ನನ್ನನ್ನೇ ಅರಸಿ ಒಳಬಂದರು. ಆಶ್ಚರ್ಯ, ಅವರು ಎನ್.ಸಿ. ಸುಬ್ಬಯ್ಯ, ಕೊಡಗಿನ ಒಬ್ಬ ಹಿರಿಯ ನಿವೃತ್ತ ಉಪಾಧ್ಯಾಯ. ಅವರ ಇಬ್ಬರು ಮಕ್ಕಳು ಹಿಂದೆ ಮಂಗಳೂರಿನಲ್ಲಿ ನನ್ನ ಶಿಷ್ಯರಾಗಿದ್ದರು. ಇವೆಲ್ಲ ಪೂರ್ವಸ್ಮರಣೆಗಳೂ ಆ ಕ್ಷಣ ನನ್ನ ಮನದಲ್ಲಿ ಮಿಂಚಿದುವು.

ಅಬ್ಬ! ಕೊನೆಗೂ ನೀವು ಸಿಕ್ಕಿದಿರಲ್ಲ ಸ್ವಾಮಿ, ನನ್ನ ಭಾಗ್ಯ ಎಂದು ನಿಡುಸುಯ್ದರು.
      ಸುಬ್ಬಯ್ಯನವರೇ! ನೀವೊಂದು ಕಾರ್ಡ್ ಹಾಕಿದ್ದರೆ ಅಥವಾ ಫೋನ್ ಮಾಡಿದ್ದರೆ ನಾನೇ ನಿಮ್ಮನ್ನು ಬಂದು ಭೇಟಿ ಆಗಿರುತ್ತಿದ್ದೆ ಎನ್ನುತ್ತ ಅವರಿಗೆ ಕಾಫಿ ತರಿಸಿಕೊಟ್ಟು, ನನ್ನಿಂದ ಏನಾಗಬೇಕಾಗಿದೆ? ಎಂದು ಕೇಳಿದೆ.
      ಸ್ವಲ್ಪ ಸುಧಾರಿಸಿಕೊಂಡು ಅವರೆಂದರು, ಕೊಡವರ ಆದಿಕಾವ್ಯ, ವೇದ ಅಥವಾ ಸಂಪ್ರದಾಯ ಗ್ರಂಥ ಎಂದೇ ಜನಜನಿತವಾಗಿದ್ದ ಸಮಸ್ತ ಹಾಡುಗಬ್ಬಗಳನ್ನೂ ನನ್ನ ತಂದೆ ನಡಿಕೇರಿಯಂಡ ಚಿಣ್ಣಪ್ಪನವರು ಸಂಗ್ರಹಿಸಿಪಟ್ಟೋಲೆ ಪಳಮೆ ಎಂಬ ಹೆಸರಿನ ಪುಸ್ತಕವಾಗಿ ಪ್ರಕಟಿಸಿದ್ದು ನಮ್ಮೂರಿನವರೇ ಆಗಿರುವ ನಿಮಗೆ ಗೊತ್ತಿರಬಹುದು. ಅದರ ಎಲ್ಲ ಪ್ರತಿಗಳೂ ಮುಗಿದು ಹೋಗಿ ಬಹಳ ವರ್ಷಗಳೇ ಸಂದಿವೆ. ಬೇಡಿಕೆಯಂತೂ ಏರುತ್ತಲೇ ಇದೆ. ಧೈರ್ಯ ಮಾಡಿ ನಾನೇ ಅದರ ಮರುಮುದ್ರಣ ಹಾಕಲು ಹಣ ಹೂಡಿದೆ. ಮಡಿಕೇರಿಯಲ್ಲೇ ನಮ್ಮೊಬ್ಬ ಬಂಧುವಿನ ಪ್ರೆಸ್ಸಿನಲ್ಲಿ ಈ ಕೆಲಸ ತೊಡಗಿದ್ದೂ ಆಯಿತು. ಆದರೆ ಅವನು ನನ್ನಿಂದ ಸಾಕಷ್ಟು ದುಡ್ಡು ಎಳೆದ, ಪುಸ್ತಕ ಮಾತ್ರ ಹೊರಬಂದಿಲ್ಲ. ಎಲ್ಲ ಫಾರ್ಮುಗಳೂ ಮುದ್ರಣವಾಗಿವೆ. ಇನ್ನು ಬೈಂಡ್ ಮಾಡಿ ಪುಸ್ತಕ ರೂಪ ಕೊಡಬೇಕಾದರೆ ಇನ್ನಷ್ಟು ಹಣ ಸುರಿಯಬೇಕೆಂದು ಹೇಳುತ್ತಿದ್ದಾನೆ. ನನಗೇನೋ ಸಂದೇಹವಿದೆ ಆತ ಸಾಚಾ ಅಲ್ಲವೆಂದು. ಏನು ಮಾಡಲಿ? ನನ್ನ ಸಂಕಷ್ಟವನ್ನು ಹತ್ತಿರದ ನೆಂಟರೊಬ್ಬರ ಜೊತೆ ಹಂಚಿಕೊಂಡಾಗ ಅವರುನಮ್ಮ ತಿಮ್ಮಪ್ಪಯ್ಯ ಸ್ವಾಮಿಯವರ ಮಗ ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭಾರೀ ಹುದ್ದೆಯಲ್ಲಿದ್ದಾರೆ. ಅವರನ್ನು ಕಂಡು ಮಾತಾಡಿ ನೋಡಿ ಎಂಬ ಸೂಚನೆ ನೀಡಿದರು. ಈಗ ನೀವೇ ದಾರಿ ತೋರಿಸಬೇಕು.
       ಹೀಗೆನ್ನುತ್ತಾ ಸುಬ್ಬಯ್ಯ ತಮ್ಮ ಚೀಲದಿಂದ ಮೊದಲ ಕೆಲವು ಫಾರ್ಮುಗಳನ್ನು ಹೊರ ತೆಗೆದು ನನಗೆ ಕೊಟ್ಟರು. ಇಡೀ ವ್ಯವಹಾರವನ್ನು ಮತ್ತೊಮ್ಮೆ ಪರಿಶೀಲಿಸಿ ಅವರ ಜೊತೆ ಚರ್ಚಿಸಿ ಒಂದು ನಿರ್ಧಾರ ತಳೆದು ಅವರನ್ನು ನಾಯಕರಲ್ಲಿಗೆ ಕರೆದುಕೊಂಡು ಹೋದೆ. ಸಾವಕಾಶವಾಗಿ ಎಲ್ಲವನ್ನೂ ವಿವರಿಸಿ, ಪಟ್ಟೋಲೆ ಪಳಮೆಯನ್ನು ನಮ್ಮ ಸಂಸ್ಥೆಯ ಒಂದು ಪ್ರತಿಷ್ಠಿತ ಕೃತಿಯಾಗಿ ಹೊರತರಬೇಕು. ಇದು ಸಮಸ್ತ ಕೊಡವ ಜನಾಂಗಕ್ಕೆ ವಿಶ್ವವಿದ್ಯಾನಿಲಯ ಸಲ್ಲಿಸಬಹುದಾದ ಗೌರವ ಗ್ರಂಥವಾಗುವುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ. ಇನ್ನು ವಾಣಿಜ್ಯ ದೃಷ್ಟಿಯಿಂದ ಇದು ಖಾತ್ರಿ ಯಶಸ್ವಿಯಾಗುತ್ತದೆ. ಆದರೆ ಇಲ್ಲೊಂದು ತೊಡಕಿದೆ: ಫಾರ್ಮುಗಳೆಲ್ಲವೂ ಮುದ್ರಣವಾಗಿ ಆ ವೆಚ್ಚವನ್ನು ಸುಬ್ಬಯ್ಯನವರೇ ಭರಿಸಿದ್ದಾರೆ. ಅದು ಸಾಕಷ್ಟು ದುಬಾರಿಯಾಗಿದೆ ಎಂಬುದು ನನ್ನ ಅರಿವಿಗೆ ಬಂದಿದೆ. ನಾವು ಅಷ್ಟು ಹಣವನ್ನು ಸುಬ್ಬಯ್ಯನವರಿಗೆ ಪಾವತಿಸುವುದು ಸಾಧ್ಯವಿಲ್ಲ. ಬದಲು ವಿಶ್ವವಿದ್ಯಾನಿಲಯ ಶಿಷ್ಟೀಕರಿಸಿರುವ ದರದಲ್ಲಿ ಎಣಿಸಿ ಇವರಿಗೆ ಆ ಮೊಬಲಗು ಕೊಟ್ಟು ಎಲ್ಲ ಫಾರ್ಮುಗಳನ್ನು ಖರೀದಿಸಿ ಮುಂದೆ ನಮ್ಮ ಕ್ರಮದಲ್ಲಿ ಬೈಂಡ್ ಮಾಡಿಸಿ ಮಾರಾಟಕ್ಕೆ ಅಣಿಗೊಳಿಸುವುದು ವ್ಯಾವಹಾರಿಕವಾಗಿ ಸಾಧು ಮತ್ತು ಸಾಹಿತ್ಯಕವಾಗಿ ಸಾರ್ಥಕ ಕೆಲಸ ಕೂಡ. ತಾತ್ತ್ವಿಕವಾಗಿ ನೀವಿದನ್ನು ಒಪ್ಪಿಕೊಂಡರೆ ಮುಂದಿನ ಎಲ್ಲ ವಿವರಗಳನ್ನೂ ನಾನು ಪೂರೈಸುತ್ತೇನೆ.

ನಮ್ಮಿಬ್ಬರ ಕಾಳಜಿ ಮತ್ತು ಈ ಕೆಲಸದ ಸಮರ್ಪಕತೆಯನ್ನು ತತ್ಕ್ಷಣವೇ ಗ್ರಹಿಸಿದ ನಾಯಕರು ಆಗಲೇ ಹಸುರು ಕಂದೀಲು ತೋರಿಸಿದರು. ಮುಂದಿನ ಒಂದು ವರ್ಷದಲ್ಲೇ - ಸುಬ್ಬಯ್ಯನವರು ಬದುಕಿದ್ದಾಗಲೇ - ಗ್ರಂಥ ಮೈಸೂರು ವಿಶ್ವವಿದ್ಯಾನಿಲಯದ ಒಂದು ಅಧಿಕೃತ ಪ್ರಕಟಣೆಯಾಗಿ ಬೆಳಕು ಕಂಡಿತು. ಕೇವಲ ಎರಡು ವರ್ಷಗಳಲ್ಲಿ ಅದರ ಎಲ್ಲ ಪ್ರತಿಗಳೂ ಮಾರಾಟವಾಗಿ ಹೋದುವು.

ಹಲವು ವರ್ಷಾನಂತರ ಶೇಷಗಿರಿರಾಯರ ಅಧ್ಯಕ್ಷತೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಾಗ ಅದರಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದುದು ಸರಿಯಷ್ಟೆ. ಆಗ ಕನ್ನದದ ಅಲಭ್ಯ ಆದರೆ ಸಾರ್ವಕಾಲಿಕ ಗ್ರಂಥಗಳ ಪುನರ್ಮುದ್ರಣ ಯೋಜನೆಯನ್ನು ಪ್ರಾಧಿಕಾರ ತೊಡಗಿತ್ತು. ನಮ್ಮಿಬ್ಬರ ಪ್ರೇರಣೆಯಿಂದಪಟ್ಟೋಲೆ ಪಳಮೆ ಪ್ರಾಧಿಕಾರದ ಮೂಲಕ ಮರುವುಟ್ಟು ಪಡೆಯಿತು. ಆರ್.ಎಲ್. ನರಸಿಂಹಯ್ಯನವರ ಅಭಿಜಾತ ಕೃತಿನಕ್ಷತ್ರ ದರ್ಶನವನ್ನೂ ಇದೇ ಯೋಜನೆಯ ಅಡಿಯಲ್ಲಿ ಪ್ರಕಟಿಸಿದೆವೆಂದು ಇಲ್ಲಿ ಹೇಳಬೇಕು.

ಅದೃಶ್ಯ ಲೋಕದ ಅನೂಹ್ಯ ರೂಪದ ಅನಂತ ಕಾಲದ ಯಾತ್ರಿಕ
      ೧೯೭೦ರ ದಶಕದ ಪೂರ್ವಾರ್ಧದ ಒಂದು ದಿನ ನನ್ನ ಕೊಠಡಿಗೊಬ್ಬ ಹಿರಿಯ ವ್ಯಕ್ತಿ ಬಂದರು. ಪ್ರಸಿದ್ಧ ಸಾಹಿತಿ ನಿರಂಜನ ಕೊಟ್ಟಿದ್ದ ಪರಿಚಯಪತ್ರವನ್ನು ನನಗೊಪ್ಪಿಸಿ ಕುಳಿತರು. ಇವರ ಹೆಸರು ಕೆ. ಮುರಳೀಧರರಾವ್, ಉತ್ತಮ ರೇಖಾಚಿತ್ರಕಾರ, ನನ್ನ ಜೊತೆಜ್ಞಾನಗಂಗೋತ್ರಿಯಲ್ಲಿ ದುಡಿದಿದ್ದಾರೆ. ಈಗ ಮೈಸೂರಿಗೆ ತಮ್ಮ ಬಿಡಾರವನ್ನು ವರ್ಗಾಯಿಸಿದ್ದಾರೆ. ವಿಶ್ವಕೋಶದಲ್ಲಿ ಇವರ ಸೇವೆಯನ್ನು ಧಾರಾಳವಾಗಿ ಬಳಸಿಕೊಳ್ಳಬಹುದು.

ದೃಢಕಾಯ, ಕಡೆದ ಶಿಲ್ಪದಂಥ ಮುಖಮುದ್ರೆ, ಮೌನಿಯೋ ಎನಿಸುವಷ್ಟು ತೀರ ಮಿತಭಾಷಿ. ಮಾದರಿ ಚಿತ್ರ ಕೆಲಸವನ್ನು ಅವರಿಗೆ ವಹಿಸಿದೆವು. ಮರುದಿನವೇ ಅವರು ಪೂರೈಸಿದ ಮಾಲು ಸಹಿತ ಹಾಜರು! ಆ ರೇಖೆಗಳ ದೃಢತೆ, ಅಕ್ಷರಗಳ ಸ್ಫುಟತೆ ಮತ್ತು ಚಿತ್ರಗಳ ಸುಂದರತೆ ಅತ್ಯಂತ ಆಕರ್ಷಕವಾಗಿದ್ದುವು. ದುಡ್ಡಿನ ಬಗ್ಗೆ ಚೌಕಾಸಿ ಇಲ್ಲ, ಆಸೆ ಆತುರವೂ ಇಲ್ಲ. ಕೆಲಸದ ಬಗ್ಗೆ ಸದಾ ಕಾಳಜಿ, ಅಸಾಧ್ಯವೆಂಬ ಮಾತೇ ಇಲ್ಲ. ಕಾಲಪ್ರಜ್ಞೆ ಸಾಕ್ಷಾತ್ ಸೂರ್ಯನಿಗೇ ಸವಾಲಾಗುವಂತೆ! ಹೀಗೆ ಆರಂಭದಿಂದಲೇ ರಾಯರು ನನ್ನ ಗೌರವಾದರಪಾತ್ರರಾದರೂ ಮೈತ್ರಿ ಮಾತ್ರ ಕುದುರಿರಲಿಲ್ಲ. ಚಿತ್ರಕಾರನ ಹಿಂದಿದ್ದ ಚೇತನ ಅಜ್ಞಾತ ಮತ್ತು ಅಗೋಚರವಾಗಿಯೇ ಉಳಿದಿತ್ತು. ಆದರೆ ನೇಸರಿಗೆ ನೀವು ದೀರ್ಘ ಕಾಲ ಕತ್ತಲೆಯ ಸಂಕೋಲೆ ತೊಡಿಸಿಡಲಾರಿರಿ.
      ಈ ಸಂಜೆ ಜಗನ್ಮೋಹನ ಅರಮನೆಯಲ್ಲಿ ಒಂದು ಕಾರ್ಯಕ್ರಮವಿದೆ. ಸ್ವಲ್ಪ ಅವಸರದಲ್ಲಿದ್ದೇನೆ ಎಂದರು ಒಂದು ಅಪರಾಹ್ಣ - ಪೂರೈಸಿದ ಚಿತ್ರಗಳನ್ನು ಕೊಡುತ್ತ, ಕೂರಲಿಲ್ಲ. ಒಂದು ಕಾಲು ಹೊರಗಿಟ್ಟರು.
      ಏನು ಅಂಥ ತುರ್ತು? ಮಾತಾಳಿಯಾದ ನನ್ನಅನಗತ್ಯ ಅಧಿಕಪ್ರಸಂಗ.
      ಒಂದು ನೃತ್ಯ ಪ್ರದರ್ಶನ.
      ಮುಂದಿನ ಸಂವಾದಕ್ಕೆ ಎಡೆ ಕೊಡದಂತೆ ಆಗಲೇ ಅವರು ಮಾಯವಾಗಿದ್ದರು. ಕಲಾಕ್ಷೇತ್ರದ ರುಕ್ಮಿಣೀದೇವಿ ಅರುಂಡೇಲ್ ಅವರ ಉಚ್ಛ್ರಾಯ ದಿನಗಳಂದೇ ನಾನು ಮದ್ರಾಸು ನಿವಾಸಿಯಾಗಿದ್ದರೂ (೧೯೪೪-೪೯) ಶುದ್ಧ ಸಾತ್ತ್ವಿಕ ಕರ್ನಾಟಕ ಸಂಗೀತದ ಕರ್ಮಠ ಭಕ್ತನಾಗಿದ್ದುದರಿಂದ ನೃತ್ಯ ಪ್ರಕಾರದತ್ತ ಲಕ್ಷ್ಯ ಹರಿಸಿಯೇ ಇರಲಿಲ್ಲ. ಏಕೆ? ಅಮೂರ್ತ ಅಜ್ಞಾತ ಮೌಲ್ಯಗಳಲ್ಲಿ ಆನಂದ ಅನ್ವೇಷಿಸುವವರು ಮೂರ್ತ ಜ್ಞಾತ ಘಟನೆಗಳ ಬಗ್ಗೆ ಅಂಧರಾಗಿರುವುದು ವಾಡಿಕೆ.

ಮುರಲೀಧರರಾಯರ ಒಗಟು ನನ್ನ ಮೆಲೆ ಸಮ್ಮೋಹಕಾಸ್ತ್ರ ಬೀರಿ ಕಣ್ಣು ತೆರೆಸಿತ್ತು. ಕಾಲಕ್ಕೆ ಮೊದಲೇ ಸಭಾಂಗಣಕ್ಕೆ ಹೋದೆ. ನಿರ್ಜೀವ ತೆರೆಯತ್ತ ನಿರ್ಭಾವ ದೃಷ್ಟಿ ಹರಿಸಿ ನಿಷ್ಟುರ ಗಡಿಯಾರ ನೋಡುತ್ತ ಕುಳಿತೆ. ಯುಕ್ತ ಮುಹೂರ್ತದಲ್ಲಿ ತೆರೆ ಸರಿಯಿತು. ಸಿಸೇಮೆ ತೆರೆಯಿತು. ವೇದಿಕೆಯ ಬಲ ಬದಿಯಲ್ಲಿ ಆಸೀನರಾಗಿದ್ದ ಸಂಗೀತ ಮೇಳದವರು ಗಣಪತಿ ಸ್ತುತಿ ಹಾಡತೊಡಗಿದರು. ಶುದ್ಧ ಕರ್ನಾಟಕ ಸಂಗೀತದ ಈ ವಾಮನ ರೂಪ ನನಗೆ ಪ್ರಿಯವಾಗಲಿಲ್ಲ. ಆದರೆ ಮೇಳದ ನಡುವೆ ತಾಳವ ತಟ್ಟುತ್ತ ಮಂಡಿಸಿರುವ ಇವರು ಯಾರು? ಹೌದು, ಸಾಕ್ಷಾತ್ ಚಿತ್ರಕಾರ ಮುರಲೀಧರರಾವ್ ತಾಳ ಹಿಡಿದು ಮೃದುವಾಗಿ ಮಿಡಿದು ಸಂಗೀತಕ್ಕೆ ಚಾಲನೆ ನೀಡುತ್ತಿದ್ದಾರೆ! ನಿಜ, ತಾಳಬೇಕು, ತಕ್ಕ ಮೇಳ ಬೇಕು. ಅಲ್ಲದೆ ಕಾಲ ಮಾಗಬೇಕು, ಮತ್ತು ಸಹನೆ ಬೇಕು.

ರಾಯರ ಈ (ನನ್ನ ಮಟ್ಟಿಗೆ) ಹೊಸ ಅವತಾರ ಕಂಡ ನಾನು ಪುಳಕಿತನಾಗಿ ಇಡೀ ಪ್ರದರ್ಶನ ನೋಡಿದೆ. ಇಲ್ಲ, ಅದರಲ್ಲೇ ಲೀನಗೊಂಡು ಹೊಸ ದೃಷ್ಟಿ ಗಳಿಸಿದೆ ಪ್ರಜ್ಞಾವಂತ ರಸಿಕನಾಗಿ. ಅಮೂರ್ತ ಸಂಗೀತದ ಮೂರ್ತಾಭಿನಯ ಭರತನಾಟ್ಯ. ಅಂತೆಯೇ, ಮೂರ್ತ ಭರತನಾಟ್ಯದ ಅಮೂರ್ತ ವಿಸ್ತರಣೆ ಅಭಿಜಾತ ಸಂಗೀತವೆಂಬ ಸೂಕ್ಷ್ಮ ಅರಿತೆ. ದಾಸ ಶ್ರೇಷ್ಠರು ಹಾಡಿ ಕುಣಿದರು, ಕುಣಿದು ಹಾಡಿದರು, ನೋಡಿ ಮುದ್ದಾಡಿ ಮಾತಾಡಿ ಸಂತೋಷಗೂಡಿ ಪಾಡಿ ಪೊಗಳಿದರು ಪರಮ ಪುರುಷ ಹರಿ.

ಹೀಗೆ ಚಿತ್ರಕಾರ ಮುರಲೀಧರರಾಯರ ನಾಟ್ಯಾಚಾರ್ಯ ಮುಖದ ಪರಿಚಯ ತೀರ ಅಕಸ್ಮಾತ್ತಾಗಿ, ಅನಿರೀಕ್ಷಿತವಾಗಿ, ಆದ್ದರಿಂದ ಅಧಿಕ ಸಂತೋಷಪ್ರದವಾಗಿ, ನನಗಾಯಿತು. ಜೀವವಿಂತಜ್ಞಾತ ಸೂತ್ರದಾಟದ ಬೊಂಬೆ, ಭಾವಿಸಾ ಸೂತ್ರಗಳ (ಡಿವಿಜಿ) ಅಲ್ಲವೇ? ನಮ್ಮ ಈ ಗಾಢ ಮೈತ್ರಿಯ ಪಕ್ವ ಫಲ ೧೯೯೮ರಲ್ಲಿ ಪ್ರಕಟವಾದನೃತ್ಯಲೋಕ. ೫೨೮ ಪುಟಗಳ ಈ ಸಚಿತ್ರ ಬೃಹದ್ಗ್ರಂಥದಲ್ಲಿ ಮುರಲೀಧರರಾಯರು ತಮ್ಮ ಸಂಶೋಧನೆ-ಪ್ರಯೋಗಗಳ ಸಾರವನ್ನು ತಿಳಿಗನ್ನಡದಲ್ಲಿ ನಿರೂಪಿಸಿದ್ದಾರೆ. [ನೃತ್ಯಲೋಕದ ಕೆಲವೇ ಕೆಲವು ಪ್ರತಿಗಳು ಉಳಿದಿವೆ. ಬೆಲೆ ಕೇವಲ ರೂ ಮುನ್ನೂರು ಮಾತ್ರ - .]

ಎಲ್ಲರಂಥವನಲ್ಲವೀ ನನ್ನ ಶರಣ!
      ಅವರು ಮೈಸೂರಿಗೆ ಹೊಸತಾಗಿ ಬಂದು ಹಿರಿ ಹೆಸರು ಮಾಡಿದ್ದ ವೈದ್ಯ ಶಿರೋಮಣಿ ಎಂಬ ಸಂಗತಿ ಗೊತ್ತಿದ್ದರೂ ಅವರ ಪರಿಚಯ ಲಾಭಕ್ಕಾಗಿ ನಾನು ಸ್ನೇಹಿತರ ಮೂಲಕ ಪ್ರಯತ್ನಿಸಿದ್ದರೂ ವಾಸ್ತವ ಭೇಟಿ ಸಂಭವಿಸಿದ್ದು ಮಾತ್ರ ನಂಜನಗೂಡಿನ ಒಂದು ಸಾರ್ವಜನಿಕ ಸಭಾಂಗಣದಲ್ಲಿ! ನಾವಿಬ್ಬರೂ ಅಲ್ಲಿ ಆಹ್ವಾನಿತ ಭಾಷಣಕಾರರು: ‘ನಕ್ಷತ್ರಗಳ ಅಜ್ಞಾತ ಪ್ರಪಂಚ ಕುರಿತು ಮೊದಲು ನಾನೂ ಬಳಿಕಮಾದಕ ಚಟಗಳ ಮಾರಕ ಪರಿಣಾಮಗಳು ಕುರಿತು ಅವರೂ ತಲಾ ಒಂದು ತಾಸು ಮಾತಾಡಿದೆವು. ನನ್ನ ನಿರರ್ಗಳ ವಾಗ್ಧಾರೆಗೆ ಪ್ರತಿಕ್ರಿಯೆ ದಿವ್ಯ ಮೌನ - ಕಾರಣ, ಅದು ಯಾರಿಗೂ ಅರ್ಥವಾಗಿರಲಿಲ್ಲ. ಆ ವಿಷಯವೇ ಹಾಗೆ, ಅನಂತ ದೇಶ - ಕಾಲವನ್ನು ನೀವು ೧ ಗಂಟೆಯ ಕೃಪಣತೆಯಲ್ಲಿ ಕುಂಚಿಸಲಾರಿರಿ! ಅವರಿಗೋ ದೊರೆತ ಮೆಚ್ಚುನುಡಿಗಳು ಮತ್ತು ಕೊನೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ ನೀಡಿದ ಅನೇಕ ವ್ಯಸನಿಗಳು ಒಂದು ಅಂಶವನ್ನು ನನಗೆ ಸ್ಪಷ್ಟಪಡಿಸಿದುವು. ಇಲ್ಲೊಂದು ರಸಲೋಕ ಕೈಬೀಸಿ ಕರೆಯುತಿದೆ. ಅವರ ಮಾತಿನ ಸಂಚು, ಭಾವದ ಮಿಂಚು, ಕಂಠದ ಕಂಚು ಮತ್ತು ಓಘದ ಹೊಂಚು ಒಂದು ಪೂರ್ಣ ಕಲಾಪ್ರಕಾರವೇ ಆಗಿತ್ತು. ಅವರ ಹೆಸರು ಡಾಕ್ಟರ್ ಸ.. ನಾಗಲೋಟಿಮಠ, ವೈದ್ಯಲೋಕದ ಗಾರುಡಿಗ, ಮೈಸೂರಿನಲ್ಲಿಯ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ.

ಉಪನ್ಯಾಸ ಮುಗಿದ ಬಳಿಕ, ಇದೇ ವಿಷಯದ ಮೇಲೆ ಲೇಖನ ಬರೆದು ಕೊಡಿ, ‘ಪುಸ್ತಕ ಪ್ರಪಂಚದಲ್ಲಿ ಮುದ್ರಿಸುವ ಸಲುವಾಗಿ ಎಂದು ಕೋರಿದೆ.
      ಈ ತನಕ ಆ ಕೆಲಸ ನಾನು ಮಾಡಿಲ್ಲ. ಕನ್ನಡದಲ್ಲಿ ಬರೆದು ರೂಢಿ ಇಲ್ಲ ಅವರ ಪ್ರಾಮಾಣಿಕ ಪ್ರತಿಕ್ರಿಯೆ.
      ಅನುಭವ ಸಾಚಾ ಆಗಿದ್ದರೆ, ಸಂವಹನ ತುಡಿತ ತೀವ್ರವಾಗಿದ್ದರೆ, ಮತ್ತು ಅದನ್ನು ಅರಿಯಲೇಬೇಕೆಂಬ ತವಕ ವಾಚಕರಲ್ಲಿ ಗಾಢವಾಗಿದ್ದರೆ ತಜ್ಜನ್ಯ ನಿರೂಪಣೋಲ್ಲಾಸವೇ ಭಾಷೆಯನ್ನು ಕಡೆದು ಕಂಡರಿಸುತ್ತದೆ. ಇದೀಗ ತಾನೇ ನೀವು ನೀಡಿದ ಅದ್ಭುತ ಭಾಷಣವೇ ಇದಕ್ಕೆ ನಿದರ್ಶನ.
      ಆದರೆ ಮಾತಿನ ಧಾಟಿ ಬೇರೆ, ಬರವಣಿಗೆಯ ಶಿಸ್ತು ಬೇರೆ. ವ್ಯಾಕರಣದೋಷ, ಲಿಪಿ ಸ್ಖಾಲಿತ್ಯ, ಪಾರಿಭಾಷಿಕ ಪದ ಬಳಕೆ ಕುರಿತ ಗೊಂದಲ, ಶೈಲಿಯಲ್ಲಿಯ ವಿಚ್ಛಿನ್ನತೆ ಮುಂತಾದವುಗಳಿಗೆ ನನ್ನಲ್ಲಿ ಪರಿಹಾರವಿಲ್ಲ.
      ಅವು ಚಿಲ್ಲರೆ ವಿಷಯಗಳು, ಕಲೆಗಾರಿಕೆ ಅಂದರೆ ಕುಸುರಿ ಕೆಲಸಕ್ಕೆ ಸಂಬಂಧಿಸಿದುವು. ಈ ವಿವರಗಳನ್ನು ನನಗೆ ಬಿಡಿ. ಶಿಲೆ ನಿಮ್ಮದು, ಕಲೆ, ‘ಪುಸ್ತಕ ಪ್ರಪಂಚದ್ದು. ಶಿಲೆಯಿದ್ದರಲ್ಲವೇ ಕಲೆ?

ಹೀಗೆ ಹನಿಯಲು ತೊಡಗಿದ ಕನ್ನಡದ ಕೆಲಸ ಇಂದು (೨೦೦೬) ಸಜನಾರನ್ನು ಕನ್ನಡ ನಾಡಿನ ಒಬ್ಬ ಮುಂಚೂಣಿ ಜನಪ್ರಿಯ ವಿಜ್ಞಾನಲೇಖಕರನ್ನಾಗಿಯೂ ಬಿಂಬಿಸಿದೆ. ವಿವರಗಳಿಗೆ ಅವರ ಆತ್ಮಕಥೆಬಿಚ್ಚಿದ ಜೋಳಿಗೆಯನ್ನು ಓದಬೇಕು. ಅದು ಹೇಗಿದೆ?
ಅನುಭವದಡುಗೆಯ ಮಾಡಿ, ಅದ
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ - ಪುರಂದರದಾಸರು

ನುಡಿದರ ಲಿಂಗ ಮೆಚ್ಚಿ ಅಹುದಹುದೆನಬೇಕು - ಬಸವಣ್ಣ

ಸೂಜಿಗಲ್ಲು ತಿರುಗುತ್ತಿತ್ತೋ ಹೊಳಿಮ್ಯಾಗ
ಸೂಜಿಯೊಂದು ತೇಲತಿತ್ತೋ ಹೊಳಿಯಾಗ - ಅಂಬಿಕಾತನಯದತ್ತ

ಉದಾಹರಣೆಗಳ ಯಾದಿಯನ್ನು ಲಂಬಿಸದೆ ಸಾರಾಂಶವಾಗಿ ಒಂದು ಮಾತು ಹೇಳಬಲ್ಲೆ: ಇತರರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಬೆಂಬಲಿಸಿ, ಪೋಷಿಸಿ, ಹರ್ಷಿಸುವ ಕೆಲಸವೊಂದೇ ವ್ಯಕ್ತಿಯ ಭೌತಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗಿರುವ ಮಾರ್ಗ. ಇದರಿಂದ ಸಮಾಜ ಬೆಳೆಯುತ್ತದೆ, ಜೊತೆಗೆ ವ್ಯಕ್ತಿಯೂ ಹೊಳೆಯುತ್ತಾನೆ. ಈ ಜೀವನ ತಥ್ಯ ಮತ್ತು ಸತ್ಯ ಮತ್ತೆ ಮತ್ತೆ ನನ್ನ ಅನುಭವಕ್ಕೆ ಬರುತ್ತಿವೆ. ‘ವಸುಧೈವ ಕುಟುಂಬಕಂ ಅದೆಂಥ ಅರ್ಥಪೂರ್ಣ ನುಡಿ!

(ಮುಂದುವರಿಯಲಿದೆ)

1 comment:

  1. Athyantha amulya endu erade shabdagalalli varnisa bahudaada lekhanavidu. Odi dhanyalaade.
    ----- Shyamala.

    ReplyDelete