08 November 2013

ಇದೇ ಮೊದಲು ಎನ್ನುವಂತೆ ವಿಶ್ವಾಸಾರ್ಹ ರಾಜ್ಯೋತ್ಸವ ಪ್ರಶಸ್ತಿಗಳು!

ಕನ್ನಡ ಗಣಕಲೋಕದ ಬ್ರಹ್ಮ, ಅಕ್ಷರ ಮಾಂತ್ರಿಕ ಇತ್ಯಾದಿ ಬಿರುದಾಂಕಿತ, ಸಿಂಹ ಕೇಸರ, ಎತ್ತರದ ನಿಲುವಿನ ಕೆಪಿ ರಾಯರನ್ನು ಮೊದಲು ಪರಿಚಯಿಸಿಕೊಳ್ಳುವವರು ಭಯೋತ್ಪಾದನೆಗೊಳಗಾದರೆ ಆಶ್ಚರ್ಯವಿಲ್ಲ. ಆದರೆ ಎಲ್ಲ ವಿಶೇಷಣಗಳಿಗೆ ಸಂಪೂರ್ಣ ಅನ್ವರ್ಥಕರಾಗಿದ್ದುಕೊಂಡೂ ಮೂಕನನ್ನು ಮಾತಾಡಿಸಿ, ಮೂಢನಿಗೆ ಇಷ್ಟು ಸುವಿಚಾರ ತಲೆ ತುಂಬಿ, ಎಂದೂ ಸರಳ ಸ್ನೇಹಶೀಲತೆಗೆ ಎರವಾಗದವರು ಈ ಕಿನ್ನಿಕಂಬಳದ ಪದ್ಮನಾಭರಾಯರು. ತನ್ನ ವಾಸ್ತವದ ಜೀವನಚಿತ್ರ ದಾಖಲೆಗೂ ಸಿದ್ಧರಿಲ್ಲದ ಈ ವಿನಯ ಮೂರ್ತಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೋಡಲ್ಲ. ಇನ್ನು ಹೆಚ್ಚಿನದು (ರಾಷ್ಟ್ರ ಮಟ್ಟದ್ದು) ಬಂದರೂ ಸಣ್ಣದೇ! ಮಂಗಳೂರಿನಲ್ಲಿ ಶತಾವಧಾನಿ ಗಣೇಶರ ಅಷ್ಠಾವಧಾನದ ಸಂಯೋಜನೆ ಮಾಡುವ ಕಾಲಕ್ಕೆ ಕುಶಿ ಹರಿದಾಸ ಭಟ್ಟರು ನನಗೆ ಮಧ್ಯವರ್ತಿಯಾಗಿ ಪರಿಚಯಿಸಿದ ಹೆಸರು ಕೆಪಿ ರಾವ್. ಆದರೆ ವಿಲೋಮವಾಗಿ ಕೆಪಿ ರಾಯರಿಗೆ ಪರಿಚಯವಿಲ್ಲದವರಿಲ್ಲ! ಅವರ ಪಟ್ಟಿಯಲ್ಲಿ ನಾನು ಎಂದೋ (ಪುಸ್ತಕವ್ಯಾಪಾರಿ ಮತ್ತೆ ಬೇಕಾದರೆ ಜಿಟಿನಾ ಮಗ ಎನ್ನುವುದೇ ಸಾಕಾಗಿರಬೇಕು) ದಾಖಲಾಗಿದ್ದೆ! ಆ ಆತ್ಮೀಯತೆಗೆ, ನಾನೊಂದು ಗಣಕ ಕೊಂಡ ಹೊಸದರಲ್ಲಿ ಆಗಿನ್ನೂ ರಾಯರು ರೂಪಿಸಿ, ಪರಿಷ್ಕರಿಸುತ್ತಿದ್ದ ಕನ್ನಡ ತಂತ್ರಾಂಶ ‘ಸೇಡಿಯಾಪು’ವನ್ನು ಒಂದು ಪುಟ್ಟ ಡಿಸ್ಕೆಟ್ಟಿನಲ್ಲಿ ತಂದು ಉಚಿತವಾಗಿ ನನಗೆ ಕೊಟ್ಟದ್ದು ಹೇಗೆ ಮರೆಯಲಿ.


ಕೆಪಿ ರಾಯರ ಪ್ರೀತಿಗೆ, ಮೆಲುದನಿಯ ಮಾತಿಗೆ ಸಮಯ ಸಂದರ್ಭದ ಆಯ್ಕೆಗಳೇನೂ ಇಲ್ಲ. ನನ್ನಂಗಡಿಯಲ್ಲಿ ಮಾತಾಡಿಸಿದ ಬಿಸುಪನ್ನೇ ರಾಜಾಂಗಣದ ಹೊರ ಅಂಚಿನಲ್ಲಿ ಅನಾಮಧೇಯನಂತೆ ನಾನು ಚಾ ಕುಡಿಯುತ್ತ ನಿಂತಿದ್ದರೂ ಇವರೇ ಗುರುತಿಸಿ ಬಂದು ಕೊಡುತ್ತಾರೆ. ಹಾಗೆಂದು ಬರಿದೇ ಹರಟುವ ಪೈಕಿಯೇ ಅಲ್ಲ. ಇವರು ಆಡುವ ಒಂದೊಂದು ಮಾತಿಗೂ ತೂಕ ಕಟ್ಟಿದವರಿಲ್ಲ. ಹಿಮಾಲಯದ ಧರ್ಮಶಾಲಾದಲ್ಲಿ ಇವರ ದಲೈಲಾಮಾ ಸಂದರ್ಶನದ ಮಾತುಗಳು ಇರಬಹುದು, ಉತ್ತರ ಭಾರತದ ಎಲ್ಲಿಂದಲೋ ಚಾರ್ಮಾಡಿಯ ಕೊಡೆಕಲ್ಲಿಗೂ ನಾಥಪಂಥದ ತಿರುಗೂಳಿತನದ ಜಾಡನ್ನು ಇವರು ಶೋಧಿಸಿ, ಅನುಸರಿಸಿದ ಕಥನವೂ ಬರಬಹುದು. ಗುರುಪುರದ ಐತಿಹಾಸಿಕ ಗಾಡಿಮೇಳ ನನಗಂತೂ ಅನಾವರಣಗೊಳಿಸಿದ್ದು ಈ ಪದ್ಮನಾಭ ರಾಯರೇ. ಶತಾವಧಾನಿ ಗಣೇಶರೊಡನೆ ಜಟಿಲ ವ್ಯಾಕರಣವನ್ನೋ ಭಾಷಾಶಾಸ್ತ್ರವನ್ನೋ ಚರ್ಚಿಸಿದಷ್ಟೇ ಗಹನವಾಗಿ ಇವರು ಜೋಡುಮಾರ್ಗದ ಸುಂದರರಾಯರ ಯಾವುದೋ ಯಃಕಶ್ಚಿತ್ ಮುದ್ರಣ ಸಮಸ್ಯೆಗೆ ತಲೆ ಕೊಡುತ್ತಾರೆ. ಕಿನ್ನಿಕಂಬಳದ ಯಾವುದೋ ಗೂಡಂಗಡಿಯ ತಿನಿಸು ಹುಡುಕಿ ಹೋಗಿ ಸವಿದಷ್ಟೇ ಗಂಭೀರವಾಗಿ ಇವರು ಮೂಡಬಿದ್ರೆಯ ಕೃಷಿಯ (ಉರುಫ್ ಡಾ|ಕೃಷ್ಣಮೋಹನ ಪ್ರಭು!) ಬಳಿ ಗಣಕದ ಯಾವುದೋ ಕಗ್ಗಂಟನ್ನು ಚಪ್ಪರಿಸಬಲ್ಲರು. ಕಾರಂತ, ಕಾರ್ನಾಡ, ಕಂಬಾರ ಮುಂತಾದವರ ನಿಕಟಪರಿಚಯ ಮಾತ್ರವಲ್ಲ, ಸಮಗ್ರ ಕೃತಿ (ಕಪಾಟಿನಲ್ಲಿ ಸಂಗ್ರಹವಲ್ಲ) ದರ್ಶನ ಇವರಿಗೆ ನಾಲಗೆ ತುದಿಯಲ್ಲಿರುತ್ತದೆ. “ಹಾಂ, ಎಷ್ಟಾದರೂ ಕನ್ನಡಿಗರಲ್ಲವೇ” ಎಂದೀರಿ. ಅಖಿಲ ಭಾರತ ಮಟ್ಟದ ಯಾರನ್ನೇ ಹೆಸರಿಸಿ, ವಿಶ್ವಸಾಹಿತ್ಯದ ಏನನ್ನೇ ಕೇಳಿ, ಯಾವುದೇ ಕಲಿಕಾ ಶಿಸ್ತಿನ ಬಗ್ಗೆ ಮಾತೆತ್ತಿ ಇವರಿಗೆ ಆತ್ಮೀಯ ಒಡನಾಟ, ತಳಸ್ಪರ್ಷೀ ತಿಳುವಳಿಕೆ ಎಲ್ಲಕ್ಕೂ ಮಿಗಿಲಾಗಿ ಪಾತ್ರಾಪಾತ್ರ ನೋಡದೆ ಮನಂಬುಗುವಂತೆ ವಿವರಿಸುವ ಉತ್ಸಾಹ ಬುದ್ಬುದಿಸುತ್ತಲೇ ಇರುತ್ತದೆ. ವಾಸ್ತವದಲ್ಲಿ ಇವರಿಗೆ ಎಂಥಾ ನಗಣ್ಯ ಸ್ಥಳದಲ್ಲೂ ಕುತೂಹಲಕಾರಿ ಸುಳಿವು, ಓದಿಗೆ ಮೇವು ಸಿಗುತ್ತಲೇ ಇರುತ್ತದೆ. ಆದರೂ ನನ್ನ ಪುಸ್ತಕ ಮಳಿಗೆ ಮುಚ್ಚುತ್ತದೆ ಎಂದಾಗ ಪ್ರೀತಿಯಲ್ಲೇ ಬಂದಿದ್ದರು. ಷ. ಶೆಟ್ಟರ್ ಕೂಡಾ (ಎಸ್ವೀಪಿ ಪ್ರಶಸ್ತಿ ಪಡೆಯಲು ಬಂದವರು, ಮುಂದಾಗಿ ನನ್ನ ಪುಸ್ತಕವೊಂದನ್ನು ಅಂಗಡಿಯಲ್ಲೇ ಅನೌಪಚಾರಿಕ ಲೋಕಾರ್ಪಣ ನಡೆಸುವವರಿದ್ದರು) ಬಂದಿರುತ್ತಾರೆ ಎಂದಾಗ ಊರಿಗೆ ಮೊದಲೇ ಬಂದು ರಾಯರು ಸಂಭ್ರಮಿಸಿದ್ದರು.

ಕೆಪಿ ರಾಯರು ತಮ್ಮ ಪರಮಗುರು ಇತಿಹಾಸಜ್ಞ ಡಿಡಿ ಕೊಸಾಂಬಿಯವರ  ಜನ್ಮ ಶತಾಬ್ದಿಯನ್ನು ಮಣಿಪಾಲದಲ್ಲಿ ನಡೆಸಿದ ಪರಿ, ಲಿಪಿಗಳು ರೂಪುಗೊಂಡ ಬಗ್ಗೆ ಅಂತರ್ಜಾಲಕ್ಕೂ ಕೊಟ್ಟ ವಿಡಿಯೋ ಮಾತು ಹೀಗೆ ನನ್ನ ಬಡ-ನೆನಪಿನ ದಾಸ್ತಾನಿಗೆ ಕೈ ಹಾಕಿದಷ್ಟು ಸಿಗುವ, ಹೇಳಿದಷ್ಟೂ ಮುಗಿಯದ ವಿಚಾರಗಳನ್ನು ನಾನು ವಿಸ್ತರಿಸಲು ಹೊರಟು ದುರ್ಬಲಗೊಳಿಸುವುದಿಲ್ಲ. ಕೆಪಿ ರಾಯರ ಬಗ್ಗೆ ಬಹುಶಃ ಸರ್ವಪ್ರಥಮವಾಗಿ ಬೆಂಗಳೂರಿನ ಉದಯಭಾನು ಸುವರ್ಣ ಪುಸ್ತಕಮಾಲೆ ಒಂದು ಜೀವನ ಚಿತ್ರವನ್ನು ದಾಖಲಿಸುವ ಅಲ್ಪ ಪ್ರಯತ್ನ ಮಾಡಿದೆ. (ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಗವಿಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಬೆಂಗಳೂರು ೫೬೦೦೧೯. ಬೆಲೆ ಕೇವಲ ರೂ ೪೫. ಪ್ರತಿಗಳಿಗೆ ಪುಸ್ತಕ ಮಳಿಗೆಗಳನ್ನೇ ಸಂಪರ್ಕಿಸಿ) ಅದರ ಲೇಖಕ ಟಿ.ಜಿ ಶ್ರೀನಿಧಿ ಸಾಂಪ್ರದಾಯಿಕ ಜೀವನಚಿತ್ರವನ್ನೇ ಕೊಡಲು ಹೊರಟದ್ದಿರಬಹುದು. ಆದರೆ ಪ್ರಚಾರದೂರರಾದ ರಾಯರು ಪಟ್ಟು ಹಿಡಿದು ಎಲ್ಲೂ ಅದು ‘ಹೊಗಳಿಕೆಯ ಹೊನ್ನಶೂಲ’ವಾಗದಂತೆ ನೋಡಿಕೊಂಡಿದ್ದಾರೆ. ಅದಕ್ಕೂ ಮಿಗಿಲಾಗಿ ಸಾರ್ವಜನಿಕರಿಗೆ ನಿಜ ಉಪಯೋಗಕ್ಕೆ ಬರುವ ತನ್ನ ಸಾಧನೆಗಳ ಪ್ರತಿನಿಧಿಯಾಗುವಂತೆ ರೂಪಿಸಿಬಿಟ್ಟದ್ದು ಓದಿದ ಯಾರಿಗೂ ಹೊಳೆಯದಿರದು.   

ಉದಯವಾಣಿಯ ಒಬ್ಬಾನೊಬ್ಬ ಪತ್ರಕರ್ತರಾಗಿದ್ದ ರಾಘವ ನಂಬಿಯಾರರ ಪರಿಚಯದ ಸುಳಿಗೆ ನಾನು ಕೇವಲ ‘ಯಕ್ಷಗಾನ ಆಸಕ್ತ’ ಎಂದಷ್ಟೇ ಸಿಲುಕಿಕೊಂಡೆ. ಅವರ ವೃತ್ತಿ ಕಟ್ಟುಪಾಡುಗಳು ಪ್ರವೃತ್ತಿಯನ್ನು ಪೋಷಿಸದ, ಹೆಚ್ಚೇಕೆ ನಿರುತ್ತೇಜನಗೊಳಿಸುವಂತೆ (ಕ್ರೀಡಾವರದಿಗಾರ, ಕೆಲವು ಕಾಲ ಮುಂಬೈ ವರದಿಗಾರನೂ ಹೌದು!) ನಡೆಸಿಕೊಂಡ ಕಾಲಕ್ಕೆ ನನ್ನ ಮೂಕ ಅನುತಾಪ ಅವರೊಡನೆಯೇ ಇತ್ತು. ಯಕ್ಷಗಾನದ ಅದರಲ್ಲೂ ತೆಂಕುತಿಟ್ಟಿಗೆ ತುಸು ಹೆಚ್ಚು ಚೂಪುಗೊಳ್ಳುತ್ತ ನಡೆದಿತ್ತು ನಂಬಿಯಾರರ ಅಧ್ಯಯನ, ಸಂಶೋಧನೆ ಮತ್ತು ಪ್ರಯೋಗ. ಹೊಟ್ಟೆಪಾಡು ಮತ್ತು ಒಲವುಗಳ ಇಬ್ಬಂದಿಯಲ್ಲಿ ಅವರು ಪತ್ರಕರ್ತತನದಿಂದ ಅಕಾಲಿಕ ಮುಕ್ತಿ (ಸ್ವಯಂ ನಿವೃತ್ತಿ) ಪಡೆದು ಉಡುಪಿಗೆ ಮರಳಿದಾಗ ಅವರಲ್ಲಿದ್ದದ್ದು ಕೇವಲ ಉತ್ಸಾಹವೆಂಬ ಸಂಪತ್ತು. ಕಟ್ಟಿಟ್ಟದ್ದೇನೂ ಇಲ್ಲದೇ ನಿಶ್ಚಿತ ಆದಾಯವನ್ನೂ ಕಳಚಿಕೊಂಡು, ಆರ್ಥಿಕವಾಗಿ ಅಷ್ಟೇನೂ ಬಲವಿಲ್ಲದ ಮಿತ್ರ ಸಂಪತ್ತನ್ನು ನಂಬಿಕೊಂಡು ಇವರೆಷ್ಟು ನಡೆದಾರೋ ಎನ್ನುವ ಆತಂಕವೂ ನನಗಾದದ್ದಿತ್ತು.

ಅದೊಂದು ದಿನ ನಂಬಿಯಾರ್ ತಮ್ಮ ದೀವಟಿಗೆ ಆಟದ ಪ್ರಯೋಗ ನೋಡಲು ಮೂಲ್ಕಿಗೆ ಕರೆದರು. ಆದರೆ ಹವ್ಯಾಸಿ ಬಳಗ ಸಮಯದ ಶಿಸ್ತು ಕಾಪಾಡಲಿಲ್ಲವೆಂದು ಮುನಿಸಿಕೊಂದು ಬಂದಿದ್ದೆ. ಮತ್ತೊಮ್ಮೆ ಮಂಗಳೂರು ವಿವಿನಿಲಯದ ವಠಾರದಲ್ಲಿ ಅದನ್ನೇ ಮತ್ತಷ್ಟು ಪರಿಷ್ಕರಿಸಿ ಪ್ರಯೋಗಿಸಿದರು. ಅವರ ಹವ್ಯಾಸಿತನ ಮತ್ತೆ ನನ್ನ ಸಹನೆ ಕಡಿದೀತು ಎಂದುಕೊಂಡೇ ಹೋದವನಿಗೆ ಎಲ್ಲ ವಿಕಲ್ಪಗಳೂ ಅಳಿಸಿಯೇ ಹೋದವು. ಆ ಕ್ಷಣದಲ್ಲೇ ಎನ್ನುವಂತೆ ನಂಬಿಯಾರರಿಗೆ ವೀಳ್ಯ ಕೊಟ್ಟು ಆರೇಳು ತಿಂಗಳೊಳಗೆ ನನ್ನ ಅಭಯಾರಣ್ಯದಲ್ಲಿ ದೀವಟಿಗೆ ಆಟವನ್ನು ನಡೆಸಿದೆ. (ವಿವರಗಳಿಗೆ ಮೂರು ಕಂತಿನ ಸರಣಿಯನ್ನು ಅವಶ್ಯ ಓದಿರಿ.)

ರಾಘವ ನಂಬಿಯಾರರ ಅನುಭವ ಸಿದ್ಧ ಸೂತ್ರಗಳು ವ್ಯರ್ಥವಾಗಬಾರದೆಂಬ ಹಠಕ್ಕೆ ನಾನವರನ್ನು ಒತ್ತಾಯಿಸಿ ‘ದೀವಟಿಗೆ’ ಎನ್ನುವ ಪುಸ್ತಕವನ್ನೂ ಬರೆಯಿಸಿ, ಪ್ರಕಟಿಸಿದೆ. (ಬೆಲೆ ರೂ ಅರುವತ್ತು. ಇಂದು ಮುಂಗಡ ಕೇವಲ ರೂ ಐವತ್ತು ಕಳಿಸಿದವರಿಗೆ ಉಚಿತ, ಮರು ಸಾದಾ ಟಪಾಲಿನಲ್ಲಿ ಪುಸ್ತಕ ಕಳಿಸಬಲ್ಲೆ. ವಿಳಾಸ ವಿವರಗಳಿಗೆ ಇಲ್ಲೇ ಪುಸ್ತಕ ವಿಭಾಗ ನೋಡಿ.) ಮುಂದೆ ಇವರ ಮಹಾಸಂಪ್ರಬಂಧ ಇನ್ನಷ್ಟು ವಿವರಗಳಲ್ಲಿ ‘ಹಿಮ್ಮೇಳ’ವೆಂಬ ಹೆಬ್ಬೊತ್ತಿಗೆಯ ರೂಪದಲ್ಲೂ ಪ್ರಕಟವಾಯ್ತು. (ಬೆಲೆ ರೂ ಏಳ್ನೂರು. ಸದ್ಯ ಪ್ರತಿಗಳು ಅಲಭ್ಯ) ನಂಬಿಯಾರರ ಹಿಂಗದ ಪ್ರಯೋಗಪಟುತ್ವಕ್ಕೆ ರಾಜ್ಯಪ್ರಶಸ್ತಿಯ ಮನ್ನಣೆಯಷ್ಟೇ ಜೊತೆಗೊಡುವ ಹಣ ಅರ್ಥಪೂರ್ಣ ವಿನಿಯೋಗ ಎಂದು ನನಗೆ ಅನಿಸುತ್ತದೆ.

ಪಡುಬಿದ್ರಿಯ ಮಹಮ್ಮದ್ ಅವರ ರೇಖೆಗಳಂತೇ ಮನಸ್ಸಿನಲ್ಲಿ ದೃಢವಾಗಿ ನಿಲ್ಲುವ ವ್ಯಕ್ತಿತ್ವ. ಬಹುಶಃ ‘ಮುಂಗಾರು’ ಪತ್ರಿಕೆಯಿಂದ ತೊಡಗಿದ ಇವರ ‘ವರ್ತಮಾನದ ವಿಮರ್ಶಾ ಯಾತ್ರೆ’ ಬೆಂಗಳೂರಿಗೇ ವಲಸೆ ಹೋಗಿ ಪ್ರಜಾವಾಣಿಯನ್ನು ಬಲಗೊಳಿಸುವವರೆಗೆ ಬೆಳೆಯಿತು. ಕೌಟುಂಬಿಕ ಬಿಕ್ಕಟ್ಟುಗಳು ಇವರನ್ನು ಅಲ್ಲಿ ಉಳಿಯಲು ಬಿಡದಿದ್ದರೂ ವಸ್ತುನಿಷ್ಠ ಪ್ರಜಾವಾಣಿ ಇವರಿಗೆ ಮಂಗಳೂರಿನ ಕಛೇರಿಯಲ್ಲಿ ಕುಳಿತು ಕ್ರಿಯಾಶೀಲವಾಗುಳಿಯಲು ಸಹಕರಿಸಿತ್ತು. ಆದರೆ ರಾಜಕೀಯ ಮೌಲ್ಯಗಳು ಪಲ್ಲಟಗೊಳ್ಳುವ ಕಾಲಕ್ಕೆ ಅದೇ ಪ್ರಜಾವಾಣಿ ಇವರಿಗೆ ಹಿತವಾಗದ್ದು ಖಾಯಂ ಓದುಗರಿಗಾದ ದೊಡ್ಡ ನಷ್ಟ. ಸಂತಸದ ಸಂಗತಿಯೆಂದರೆ ಇಂದಿಗೂ ಪ್ರಜಾವಾಣಿಯ ನಷ್ಟವನ್ನು ವಿಜಯಕರ್ನಾಟಕ ಲಾಭ ಮಾಡಿಕೊಳ್ಳುತ್ತಲೇ ಇದೆ.

ಪುಸ್ತಕ ವ್ಯಾಪಾರಿಯಾಗಿ ನಾನು ಕಂಡಂತೆ ಈ ‘ಸಾಯ್ಬ’ರಿಗೆ ಇನ್ನೊಬ್ಬ ಅಷ್ಟೇ ದೊಡ್ಡ ವಿಚಾರವಂತ ಮಂಜುನಾಥ ‘ಭಟ್ಟ’ರ ಆಪ್ತ ಗೆಳೆತನವಿತ್ತು. ಇಬ್ಬರೂ ಕುಚೇಲಗೋತ್ರದವರೇ ಆದರೂ ಓದಿನ ಮೋಹ, ವೈಚಾರಿಕ ದಾಹ ಅಪಾರದವರು. ಆ ಹಿನ್ನೆಲೆಯಲ್ಲಿ ಮಹಮ್ಮದರಿಂದ ಮೂಡುವುದು ಕೇವಲ ರೇಖೆಗಳ ಕೊಂಕಿನ ಚಿತ್ರ ಮಾತ್ರವಲ್ಲ, ಪರಿಸ್ಥಿತಿಯ ಒಟ್ಟು ಗ್ರಹಿಕೆಯಲ್ಲಿನ ವ್ಯಂಗ್ಯ. ಇಲ್ಲಿ ಅನಿವಾರ್ಯವಾಗಿ ಬರೆಯುವ ಎರಡೇ ಮಾತಾದರೂ ತೀರಾ ದುರ್ಬಲ, ಹೊರೆ ಎಂದೇ ಅನಿಸಿದರೆ ಆಶ್ಚರ್ಯವಿಲ್ಲ. ಇದಕ್ಕೆ ಉದಾಹರಣೆಯಾಗಿ ಮಹಮ್ಮದರೇ ಎಂದೋ ಸುಧಾದ ನೀವು ಕೇಳಿದಿರಿ ವಿಭಾಗಕ್ಕೆ ಬರೆದಿದ್ದ ಈ ಚಿತ್ರವನ್ನು ನನ್ನ ನೀರಿನ ಕುರಿತಾದ ಲೇಖನಕ್ಕೆ ಬಳಸಿಕೊಳ್ಳಲು ಕೊಟ್ಟದ್ದನ್ನು ನೀವಿಲ್ಲಿ ನೋಡಬಹುದು.

ಶಶಿಧರ ಅಡಪ ಮಂಗಳೂರಿನವರೇ. ಇಲ್ಲಿನ ಹೊಸ ಅಲೆಯ ರಂಗಭೂಮಿ ಮೊಳೆತು ವಿಕಸಿಸಿದಂದು (ನನ್ನಂಗಡಿ ಕೂಡಾ) ರಾಮು, ಮೋಚ ಎಂದಿತ್ಯಾದಿ ಕೇಳಿದಂತೇ ಅಡಪ ಎಂದೂ ನಾನು ಕೇಳಿದ್ದೆ. ಅಡಪ ನಮ್ಮ ಉರಗಮಿತ್ರ ಶರತ್‌ನ ಸಹಪಾಠಿ, ನನ್ನಂಗಡಿಗೂ ಬಂದು ಪರಿಚಯದ ಎಳೆ ಉಳಿಸಿಕೊಂಡವರು ಎಂದಿತ್ಯಾದಿ ತಿಳಿಯುವ ಕಾಲಕ್ಕೆ ಇವರು ಕನ್ನಡ ಸಿನಿಮಾ ವಲಯದಲ್ಲಿ ಬಹಳ ಪ್ರಭಾವಿಯಾಗಿ ಬೆಳೆದು ಬೆಂಗಳೂರು (ಸದ್ಯ ಇನ್ನೊಂದು ಕಾಲು ಮುಂಬೈಯಲ್ಲೂ ಉಂಟಂತೆ!) ವಲಸಿಗರೇ ಆಗಿದ್ದರು. (ನನ್ನ ಮಗ) ಅಭಯಸಿಂಹನ ನೆಪದಲ್ಲಿ ಈಗ ನಾನವರ ಹೆಚ್ಚಿನ ಯೋಗ್ಯತೆಯನ್ನು ಕಾಣುವಂತಾಗಿದೆ. ‘ಸಕ್ಕರೆ’ ಸಿನಿಮಾದ ಹಾಡುಗಳಿಗೆ ಇವರು ಕಟ್ಟಿಕೊಟ್ಟ ಸರಳ ಆದರೆ ವೈಭವದ ಹಿನ್ನೆಲೆ ದೃಶ್ಯಗಳು ನಿಜಕ್ಕೂ ಅರ್ಥಪೂರ್ಣ. ಈಚಿನ ದಿನಗಳಲ್ಲಿ ವೈಯಕ್ತಿಕವಾಗಿ ನಾನವರನ್ನು ಭೇಟಿಯಾದ್ದಿಲ್ಲವಾದರೂ ಅಭಯನ ಮಾತಿನ ಬಲದಲ್ಲಿ ಹೇಳುತ್ತೇನೆ - ಅಡಪ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನಿಸ್ಸಂದೇಹವಾಗಿ ಇನ್ನೊಂದು ಗೌರವ. 

ಎಸ್.ಎಲ್ ಭೈರಪ್ಪನವರ ಮಂದ್ರ ಕಾದಂಬರಿ ಸಾಹಿತ್ಯೇತರ ಕಾರಣಕ್ಕಾಗಿ ಭಾರೀ ಅಪಖ್ಯಾತಿಯನ್ನು ಗಳಿಸಿದ್ದ ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರಸಿದ್ಧಿಗೆ ಬಂದ ವಿಶಿಷ್ಟ ಕಾರ್ಯಕ್ರಮ ಮಂದ್ರ ಸಂಗೀತ ಅಥವಾ ಕಾದಂ ಸಂಗೀತ. ಆ ಕಾದಂಬರಿಯಲ್ಲಿ ಸಂಗೀತ ಹೇಗೆ ಅವಿನಾಭಾವದಿಂದ ಬೆಸೆಯಲ್ಪಟ್ಟಿದೆ ಎನ್ನುವುದನ್ನು ಮಾತಿನಲ್ಲಿ ಶತಾವಧಾನಿ ಗಣೇಶರು ವಿಸ್ತರಿಸುತ್ತಿದ್ದರೆ, ಹಿಮ್ಮೇಳ ಸಹಿತವಾಗಿ (ಹಿಂದೂಸ್ತಾನೀ) ಗಾಯನದಲ್ಲಿ ಅಷ್ಟೇ ಶಕ್ತಿಯುತವಾಗಿ ರಾಗವನ್ನು ತುಂಬಿಕೊಡುತ್ತಿದ್ದವರು ಫಯಾಸ್ ಖಾನ್. ಅತ್ರಿ ಬುಕ್ ಸೆಂಟರಿನ ಕೊನೆಯ ದಿನಗಳಲ್ಲಿ ಗೆಳೆಯ ಮಹಾಲಿಂಗ ಭಟ್ಟರು ಮತ್ತು ಬಳಗ ಈ ಕಾದಂ-ಸಂಗೀತ ಕೂಟವನ್ನು ಮಂಗಳೂರಿನಲ್ಲೂ ವ್ಯವಸ್ಥೆ ಮಾಡಿದ್ದರು. ಸ್ವತಂತ್ರ ಸಂಗೀತ ಕಛೇರಿಗಳಲ್ಲೇ ಆರ್ಥಿಕತೆಯೊಡನೆ ಮನೋಕಾಮನೆಯನ್ನೂ ಧಾರಾಳ ಭರಿಸಿಕೊಳ್ಳಬಹುದಾಗಿದ್ದ ಕಲಾವಿದ ಕಾದಂಬರಿಯೊಂದರ ವ್ಯಾಖ್ಯಾನಕ್ಕನುಗುಣವಾಗಿ (ಅಗತ್ಯಕ್ಕೆ ತಕ್ಕಂತೆ ಒಂದೆರಡು ಕಡೆ ಅಪ-ಸಂಗೀತವನ್ನು ಕೂಡಾ) ಮನೋಧರ್ಮೀಯನ್ನು ಹತ್ತಿಕ್ಕಿ ಸಹಕರಿಸಿದ ಪರಿ ಇಡಿಯ ಶ್ರೋತೃವೃಂದದ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಮೆಚ್ಚುಗೆಯೇ ಅವರನ್ನು (ಧಾರವಾಡ ಮೂಲವಾದರೂ ಬೆಂಗಳೂರಿನಲ್ಲಿ ನೆಲೆಸಿದ್ದರು) ಮತ್ತೊಮ್ಮೆ ಸ್ವತಂತ್ರ ಸಂಗೀತಕ್ಕಾಗಿಯೇ ಜಿಲ್ಲೆಯ ಕೆಲವು ಕಡೆಗಳಿಗೆ ಕರೆಸಿಕೊಂಡಿತ್ತು. ಹೀಗೆ ನಮ್ಮೊಳಗಿನ ಫಯಾಸ್ ಖಾನ್ ಸಂತೋಷದ ಕೊಡ ತುಂಬುತ್ತಿದ್ದ ಕಾಲದಲ್ಲೇ ಇವರೊಂದು ಅವಘಡಕ್ಕೆ ಸಿಲುಕಿಕೊಂಡು ಅಪಾರ ಹಿಂಸೆ, ನಷ್ಟವನ್ನು ಅನುಭವಿಸಿದರು. ಕಾಲದ ಮಾಸುವ ಶಕ್ತಿಯಲ್ಲಿ ಚೇತರಿಸಿಕೊಂಡು ಬಂದ ಫಯಾಸ್ ಖಾನರ ಸಂಗೀತಕ್ಕೆ ಹೇಗೋ ವೈಯಕ್ತಿಕ ಜೀವನಕ್ಕೂ ಯೋಗ್ಯ ಲೇಪ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.

ರಂಗಾಯಣದಲ್ಲಿ ಲೈಂಗಿಕ ಕಾರ್ಯಕರ್ತೆಯರ ಕೂಟದ ನಾಟಕ ಒಂದಕ್ಕೆ ನಾನು ವಿರಳ ಪ್ರೇಕ್ಷಾಂಗಣದಲ್ಲಿ ಕಾದು ಕುಳಿತಿದ್ದೆ. ಸಂಘಟಕರಿಗೆ ಸಮಯದ ಶಿಸ್ತೇನೂ ಇದ್ದಂತಿರಲಿಲ್ಲ. ನನ್ನ ಪಕ್ಕದಲ್ಲಿ ಕುಳಿತಿದ್ದ ಪ್ರಾಯಸ್ಥರೊಬ್ಬರು ಅಲ್ಲಿನ ಯಾರೋ ಕಾರ್ಯಕರ್ತರು ಕೊಟ್ಟ ಕರಪತ್ರವನ್ನು ಏಕಾಗ್ರಚಿತ್ತದಿಂದ ಓದುತ್ತಿದ್ದುದನ್ನು ಕಳ್ಳ ಕಣ್ಣುಗಳಲ್ಲಿ ಕಷ್ಟಪಟ್ಟು ಓದಿಕೊಳ್ಳುತ್ತಿದ್ದೆ. ಅವರು ನಾಲ್ಕೂ ಪುಟ ಮುಗಿಸಿದ ಮೇಲೆ ಒಮ್ಮೆಲೇ ನನಗದನ್ನು ಚಾಚಿ “ಈಗ ತಗೊಳಿ, ನೀವೂ ಓದಿ” ಎಂದರು. ನನಗೆರಡು ಮಿಂಚು ಹೊಡೆಯಿತು. ಒಂದು ನನ್ನ ಕಳ್ಳ ಕೆಲಸವನ್ನು ಅವರು ಗುರುತಿಸಿದ್ದರು! ಅದಕ್ಕೂ ಮಿಗಿಲಾಗಿ ‘ಓ ಇವರು ಅವರೇ’ ಎನ್ನುವ ಭಾವ!! ‘ಸರಸ್ವತೀಪುರದ ಮಧ್ಯದ ತೆಂಗಿನ ತೋಪಿ’ನ ಹೃಸ್ವ ರೂಪದಲ್ಲಿ, ಅಂದರೆ - ಸಮತೆಂತೋ ಹೆಸರಿನಲ್ಲಿ ೧೯೭೦ರ ದಶಕದ ಸುಮಾರಿಗೆ ನಾಟಕಗಳಲ್ಲಿ ಹೊಸತನವನ್ನು ತಂದ ಬಳಗದ ಬಹು ದೊಡ್ಡ ಹೆಸರು - ನ. ರತ್ನ. ಸುರುಚಿ ಪ್ರಕಾಶನದ ಸಿಂಧುವಳ್ಳಿ ಅನಂತಮೂರ್ತಿ ಸಮತೆಂತೋಕ್ಕೆ ಸಂಘಟನೆಯ ಬಲಕೊಟ್ಟವರಾದರೂ ಮಿರ್ಲೆ (ವಿಶ್ವನಾಥ ರಾವ್?) ಮುಂತಾದವರೊಡನೆ ಬೌದ್ಧಿಕ ಬಲಕೊಟ್ಟವರಲ್ಲಿ ರತ್ನ ಗಟ್ಟಿಗರು. ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ ನಿರ್ದೇಶಕರಾಗಿದ್ದುಕೊಂಡು ಹೀಗೊಂದು ಹುಚ್ಚನ್ನು ಕಟ್ಟಿಕೊಂಡು ಏಗುತ್ತಿದ್ದವರು ಇವರೇ. “ಎಲ್ಲಿಗೆ’ ಕೊಟ್ಟವರೂ ನೀವಲ್ಲವೇ?” ಎಂದು ತಮಾಷೆಯಾಗಿಯೇ ಕೇಳಿದೆ. (ಅವರು ಹಾಗೊಂದು ನಾಟಕ ಬರೆದಿದ್ದರು) ಕುಶಿಯಲ್ಲೇ ತಲೆಯಾಡಿಸಿದರು. ನನ್ನ ಪರಿಚಯ ಕೇಳಿದ ಕೂಡಲೇ ಆಶ್ಚರ್ಯ ಮತ್ತು ಹೆಚ್ಚಿನ ಸಂತೋಷಗಳೊಡನೆ “ಅಯ್ಯೋ ನಾಟಕ ನೋಡುವ ಶಿಸ್ತನ್ನೂ ನಮಗೆ ಕಲಿಸಿದ ಗುರುಗಳು ಜಿಟಿನಾ. ಎಲ್ಲಿಂದಲೂ ಏನಿದ್ದರೂ ಕಲಾಪಕ್ಕೆ ಐದು ಮಿನಿಟು ಮೊದಲೇ ಅವರು ನಡೆದು ಬಂದಿರೋರು. ನೋಡಿ, ಇಷ್ಟು ವಿಳಂಬ ಬಿಡಿ, ಐದು ಮಿನಿಟು ತಡವಾದರೂ ಜಿಟಿನಾ ವಾಚಿನ ಕೈ ಮುಂದೆ ಮಾಡಿಕೊಂಡು ಎದ್ದು ಗಟ್ಟಿ ಧ್ವನಿಯಲ್ಲಿ ಸಂಘಟಕರನ್ನು ಗದರೋರು. ಒಲಿಯಲಿಲ್ಲವೆಂದರೆ ಹೊರಗೆ ನಡೆದೇ ಬಿಡೋರು. . . .” ನನ್ನ ನೆನಪಿನಲ್ಲೇ ನಾಲ್ಕು ದಶಕಗಳ ಮೇಲೂ ನಾಟಕಗಳ ನೆನಪು, ಅದನ್ನು ನೋಡುವ ಪ್ರೀತಿ ಉಳಿಸಿಕೊಂಡೇ ಇರುವ ರತ್ನರ ಹೆಸರು ಇಂದು ಪ್ರಶಸ್ತಿ ಪಟ್ಟಿಯಲ್ಲಿ ಕಂಡಾಗ ಸಖೇದ ಸಂಭ್ರಮಿಸುವ ಸ್ಥಿತಿ ನನ್ನದು - ಇಷ್ಟು ತಡವಾಗಿಯಾದರೂ ಯೋಗ್ಯತೆಗೆ ಮನ್ನಣೆ ಸಿಕ್ಕಿತಲ್ಲಾ!

ದೀವಟಿಗೆ ಬೆಳಕಿನಲ್ಲಿ ಯಕ್ಷಗಾನ ಪಕ್ಕಾ ಹಳಗಾಲದ ಕತ್ತಲಿನಲ್ಲಿ ಆಟವಾಡಿಸಿ, ವಿಡಿಯೋ ದಾಖಲೀಕರಣ ಮಾಡುವ ಯೋಜನೆ ಗೆಳೆಯ ಮನೋಹರ ಉಪಾಧ್ಯರಿಗೆ ಬಂತು. ನನ್ನನ್ನವರು ಏಕೈಕ ಪಾಲುಗಾರನನ್ನಾಗಿಸಿಕೊಂಡರು. ಬಡಗು ತಿಟ್ಟಿನ ಕುರಿತು ನಮಗೆ ಎರಡನೇ ಯೋಚನೆಗೆ ಅವಕಾಶವಿಲ್ಲದಂತೆ ಮನಸ್ಸು ಆವರಿಸಿದ್ದರು ಬನ್ನಂಜೆ ಸಂಜೀವ ಸುವರ್ಣ ಮತ್ತವರ ಬಳಗ ಅರ್ಥಾತ್ ಯಕ್ಷಗಾನ ಕೇಂದ್ರ, ಉಡುಪಿ. (ವಿಡಿಯೋ ಪ್ರತಿಗಳಿಗೆ ಅವಶ್ಯ: ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ - ೨ ಇವರನ್ನು ಸಂಪರ್ಕಿಸಿ) ಆದರೆ ಹಾಗೊಂದು ಸಾಂಸ್ಥಿಕ ಬಲವಿಲ್ಲದ, ಹತ್ತು ಮೇಳಗಳಲ್ಲಿ ಹಂಚಿಹೋದ ಕಲಾವಿದರನ್ನು ಒಟ್ಟುಮಾಡಿದಲ್ಲೂ (ಮಳೆಗಾಲದ ಆಟಗಳಂತೆ) ಒಂದು ಶಿಸ್ತಿಗೆ ಒಳಪಡದ ತೆಂಕುತಿಟ್ಟಿಗೆ (ವಿಡಿಯೋ ಪ್ರತಿಗಳಿಗೆ ಅವಶ್ಯ: ಯಕ್ಷಗಾನ ಕಲಾರಂಗ (ರಿ), ರಥಬೀದಿ, ಉಡುಪಿ - ೧ ಇವರನ್ನು ಸಂಪರ್ಕಿಸಿ) ಏನೆಂದು ಯೋಚಿಸುವಾಗ ನಮಗೆ ಸುಲಭವಾಗಿ ಕಾಣಿಸಿದ್ದು ಪೃಥ್ವೀರಾಜ ಕವತ್ತಾರು. ಹಾಗೆ ದಕ್ಕಿದ ತಂಡಕ್ಕೆ ಸಮರ್ಥ ಹಾಸ್ಯಗಾರರಾಗಿ ಒದಗಿದವರು ಈ ನೆಲ್ಲಿಕಾರು ನಾರಾಯಣರು. ಅವರಿಗೊದಗಿದ ಪ್ರಶಸ್ತಿ ನಮ್ಮ ದಾಖಲೀಕರಣಕ್ಕೂ ಸಂದ ಗೌರವವೆಂದೇ ನಾನು ಭಾವಿಸುತ್ತೇನೆ.

ಹೀಗೇ ಹರೇಕಳದ ಹಾಜಬ್ಬರಾದಿಯಾಗಿ ಎಷ್ಟೋ ಹೆಸರುಗಳನ್ನು ನೋಡುತ್ತಿದ್ದಂತೆ ಇಷ್ಟು ವರ್ಷಗಳಲ್ಲಿ (ಸುಮಾರು ೫೮ ವರ್ಷ?) ಇದೇ ಮೊದಲು ಎನ್ನುವಂತೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ತುಂಬ ತೂಕ, ಮರ್ಯಾದೆ ಬಂದಂತಾಗಿದೆ. ಯಾವುದೇ ಪ್ರಶಸ್ತಿಗಳ ನಿರೀಕ್ಷೆಯೂ ಇಲ್ಲದ ನನಗೆ ಕಳೆದ ವರ್ಷದ ರಾಜ್ಯೋತ್ಸವದ ಸಂದರ್ಭದಲ್ಲಿ ಧಿಡೀರನೆ ಜಿಲ್ಲಾ (ಆಡಳಿತವಲ್ಲ, ಅಧಿಕೃತತೆ ಇಲ್ಲ) ಸಾಹಿತ್ಯ ಪರಿಷತ್ತು ‘ಪರಿಸರದ ಹೆಸರಿನಲ್ಲಿ ನಿಮ್ಮನ್ನು ಗುರುತಿಸಿದ್ದೇವೆ’ ಎಂದಾಗ ಗಟ್ಟಿಯಾಗಿ ಒಟ್ಟಾರೆ ಪ್ರಶಸ್ತಿಗಳನ್ನೇ ಗೇಲಿಮಾಡಿದ್ದೆ. ಅಂಥ ನನಗೆ ಈ ಬಾರಿಯ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ನೋಡಿ ನಿಜಕ್ಕೂ ಆನಂದವಾಗಿದೆ. ಪುರಸ್ಕೃತರೆಲ್ಲರಿಗೆ ಅಭಿನಂದನೆಗಳಂತೂ ಇದ್ದದ್ದೇ. ಅದಕ್ಕೂ ಮಿಗಿಲಾಗಿ ನವೆಂಬರ್ ಒಂದರ ಜಾತ್ರೆಯಲ್ಲಿ ಪ್ರಶಸ್ತಿಗಳು ಬಿಕರಿಗಿಟ್ಟ ಮಣಿ ಸರಕಲ್ಲ, ನಾಲ್ಕಾಣೆ ಒಗೆದರೆ ದಕ್ಕುವ ಬೆಂಡು ಬತ್ತಾಸಲ್ಲ ಎಂದು ಪ್ರಮಾಣೀಕರಿಸಿದ, ಗುಣಪಕ್ಷಪಾತಿಗಳಾದ ಆಯ್ಕಾ ಸಮಿತಿಯ ಎಲ್ಲ ಚೇತನಗಳಿಗೂ ಅನಂತಾನಂತ ಕೃತಜ್ಞತೆಗಳು.

19 comments:

 1. ಪ್ರಿಯರೇ, ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಈ ಸಲದ ಪ್ರಶಸ್ತಿಗಳಿಗೆ ಆಯ್ಕೆಯಾದವರ ಬಗ್ಗೆ ಒಡಕುಮಾತಿಗೆ ಎಡೆಯಾಗಿಲ್ಲ ಎನ್ನುವುದೇ ದೊಡ್ಡ ಸಂಗತಿ. ಪುರಸ್ಕೃತ ಮಹನೀಯರಲ್ಲಿ ಹಲವರ ಬಗೆಗೆ ತಮ್ಮಂಥ ಗುಣಗ್ರಾಹಿಗಳು ಅಲ್ಲಲ್ಲಿ ಬರೆದ ಒಳ್ಳೆಯ ಮಾತುಗಳಿಂದ ಸಂತೋಷವಾಗಿದೆ. ಪೋಷಕನಟ ಲೋಕನಾಥ್ ಅವರಿಗೆ ದೊರೆತ ಪ್ರಶಸ್ತಿಯ ಬಗೆಗೂ ಇವೇ ಮಾತುಗಳನ್ನು ಹೇಳಬೇಕಲ್ಲವೇ? ಅರ್ಹತೆಯನ್ನು ಗುರುತಿಸುತ್ತಿದ್ದಾರೆ ಎನ್ನುವುದೇ ಸಂತೋಷಕ್ಕೆ ಕಾರಣ ಎನ್ನುವುದರ ಹಿಂದೆ ವಿಷಾದವೂ ಇದೆಯಲ್ಲವೇ!- ಟಿ.ಎಸ್. ಗೋಪಾಲ್.

  ReplyDelete
 2. ಕೆಪಿ ರಾವ್ ಅವರು ಅಲ್ಪ ಸ್ವಲ್ಪ ಪರಿಚಯವಷ್ಟೇ. ಅಷ್ಟರಲ್ಲೇ ಅವರ ದೊಡ್ಡತನ ಮನಸ್ಸು ತುಂಬಿತ್ತು. ನಿಮ್ಮ ಬರಹ ಓದಿ ಮತ್ತಷ್ಟು ಆಪ್ತರಾದರು. ಈ ವರ್ಷ‍ ನೀಡಿರುವಂತೆ ಪ್ರಶಸ್ತಿ ನೀಡಿದರೆ ಸಂಭ್ರಮಿಸುವುದಕ್ಕೂ ಸಾಧ್ಯವಾಗುತ್ತದೆ.

  ReplyDelete
 3. ಕೆಲವೊಮ್ಮೆ ಇಂಥವರಿಗೆ ಸಿಗುವ ಮಾನ್ಯತೆಯಿಂದಾಗಿ ಪ್ರಶಸ್ತಿಗೆ ಗೌರವ ಪ್ರಾಪ್ತಿಯಾಗುತ್ತದೆ. ನನಗಂತೂ ನೆನಪಾಗಿದ್ದು ನಿಮ್ಮ ತಂದೆಯವರು ಈ ರಾಜ್ಯೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ರೀತಿಯೇ. ಅರ್ಜಿ ಸಲ್ಲಿಸುವುದು ಮಾತ್ರವಲ್ಲ, ಎಂಥೆಂಥವರ ಸಾಲಿನಲ್ಲಿ ತಾವೂ ನಿಲ್ಲಬೇಕಾಗುತ್ತದೆ ಎಂಬುದು ಕೂಡ ಇಂಥ ಪ್ರಶಸ್ತಿಗೆ ಭಾಜನರಾಗಲು ಮಾನವಂತರು ಹೆದರುವಂತಿರುತ್ತದೆ.

  ReplyDelete
 4. ಈ ಸಲದ ಪ್ರಶಸ್ತಿಯ ಪಟ್ಟಿಯನ್ನು ನೋಡುವಾಗ ನಿಮ್ಮ0ತೆ ಆಶ್ಚರ್ಯ ಆಯಿತು.ಇಲಾಖೆಗೆ ಅಭಿನ0ದನೆಗಳು. ನಿಮ್ಮ ಲೇಖನವೂ ಸಮಯೋಚಿತ.

  ReplyDelete
 5. At least this year Govt has recognized those who really deserve! that to without their application!! - Narayan Yaji

  ReplyDelete
 6. Laxminarayana Bhat P08 November, 2013 11:38

  Namaskaara.

  Your appreciation of the award-winners is apt and timely. I share your view wholeheartedly.

  ReplyDelete
 7. ಪ್ರಿಯ ಅಶೋಕ ವರ್ಧನರೇ,
  ನನ್ನ ಬಗೆಗಿನ ನಿಮ್ಮ ಮಾತುಗಳಿಗೆ ಧನ್ಯವಾದಗಳು. ನೀವು ಕಂಡುಕೊಂಡಂತೆ ಮಾಡಬೇಕಾದುದು ಬಹಳವಿದ್ದು ಮಾಡಲಾಗದೆ ಚಡಪಡಿಸುತ್ತಿರುವ ಅಸಂಖ್ಯ ಮಾನವರಲ್ಲಿ ನಾನೂ ಒಬ್ಬ ಅಷ್ಟೆ.
  (ಕ್ಷಮಿಸಿ, ಮಣಿಪಾಲದಲ್ಲಿ ನಾನು ಆಚರಿಸಿದ್ದು ನನ್ನ ಪರಮ ಗುರು ಡಿ. ಡಿ. ಕೊಸಾಂಬಿಯವರ ಜನ್ಮ ಶತಮಾನದ ನೆನಪು. ಡಾ. ರಂಗನಾಥರದೂ ನನ್ನದೂ ದೂರದ ಪರಿಚಯ)

  ನನ್ನ ಮಿತ್ರ ರಾಘವ ನಂಬಿಯಾರರ ಮತ್ತು ಮಹಮ್ಮದರ ಸುಂದರ ಪರಿಚಯಕ್ಕೂ ಅಭಿನಂದನೆಗಳು.

  ಇಂತಿ,
  ಕೆ.ಪಿ.ರಾವ್.

  ReplyDelete
  Replies
  1. ಕೊಸಾಂಬಿಯವರ ಹೆಸರಿಗೆ ರಂಗನಾಥರನ್ನು ತಂದ ನನ್ನ ಎಡವಟ್ಟನ್ನು ಕ್ಷಮಿಸಿ. ಲೇಖನದಲ್ಲೂ ತಿದ್ದುಪಡಿ ಮಾಡುತ್ತೇನೆ.

   Delete
 8. ನನಗೆ ಸೋದರ ಸಮಾನರಾದ ಪ್ರೊ. ಕೆ. ಪಿ. ರಾವ್ ಮತ್ತು ಪ್ರೊ. ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಇವರಿಬ್ಬರಿಗೂ ಕನ್ನಡ ರಾಜ್ಯ ಪ್ರಶಸ್ತಿಸಲ್ಲಲಿರುವ ವಿಚಾರ ತಿಳಿದೊಡನೇಯೇ ಇಬ್ಬರಿಗೂ ದೂರವಾಣಿ ಕರೆಮಾಡಿ, " ತಮಗೆ ಪ್ರಶಸ್ತಿ ಸಲ್ಲುವ ಸಂಗತಿ ಗೊತ್ತಾಗಿ, ಬಹಳ ಸಂತೋಷ ಆಯಿತು. "ನನ್ನ ಸಂತೋಷ ಎಷ್ಟು ಎಂದರೆ - ...... ಅದು ನಿಮಗಾಗಿರುವ ಸಂತೋಷಕ್ಕಿಂತಲೂ ದೊಡ್ಡದು!" ಅಂದು ಬಿಟ್ಟೆ! - ಬಲು ಬಾಲಿಶವಾಗಿ.
  ಸದ್ಗುಣಗಳ ಮೇರು ಪರ್ವತಗಳಾಗಿ ನಿಂತಿರುವ ಈ ದಿಗ್ಗಜರಿಬ್ಬರೂ ಹೊಗಳಿಕೆ ಮತ್ತು ಅಭಿನಂದನೆಗಳಿಂದ ದೂರ ಉಳಿಯುವ ಸ್ವಭಾವದವರು.
  ನಾನಿದ್ದಲ್ಲಿಂದಲೇ ಅವರಿಗೆ ಕೈಮುಗಿಯುವೆ,
  ವಂದನೆಗಳು.
  ಪೆಜತ್ತಾಯ ಎಸ್, ಎಮ್.

  ReplyDelete
 9. ರಾಜ್ಯೋತ್ಸವ ಪ್ರಶಸ್ತಿ ಎಂದರೆ ಬರೀ ರಾಜಕಾರಣ ಪ್ರೇರಿತ ಪ್ರಶಸ್ತಿ ಎಂದುಕೊಂಡ ನಂಬಿಕೆ ಹುಸಿಮಾಡಿದ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ ಎಲ್ಲ ದಿಗ್ಗಜರಿಗೂ ಅಭಿನಂದನೆಗಳು. ಈ ಮಾನ್ಯತೆಯಿಂದಾಗಿ ಪ್ರಶಸ್ತಿಗೆ ಗೌರವ ಮರಳಿಸಿದ ಎಲ್ಲರಿಗೂ ಕೃತಜ್ಞತೆಗಳು.

  ReplyDelete
 10. Really it was a good list. I thought many of them already awarded !

  ReplyDelete
 11. ಹೌದು.. ಹೆಚ್ಚು ಚರ್ಚೆಗೆ ಅವಕಾಶವಿಲ್ಲದಂತೆ ಈ ಬಾರಿ ರಾಜ್ಯ ಪ್ರಶಸ್ತಿಗಳು ಸುಯೋಗ್ಯರಿಗೆ ಅರ್ಹವಾಗಿಯೇ ಲಭಿಸಿವೆ. ಸರ್ವರಿಗೂ ಅಭಿನಂದನೆಗಳು.
  ಗಿರೀಶ್, ಬಜಪೆ

  ReplyDelete
 12. ನೀವು ಹೇಳಿರುವುದು ಹವ್ದೆ ಹವ್ದು. ನಿಮ್ಮ ಅಭಿಮತಕ್ಕೆ ನಾನೂ ದನಿಗೂಡಿಸುತ್ತಿದ್ದೇನೆ.
  ವೈದೇಹಿ

  ReplyDelete
 13. ನಿಜ. ಡಾ. ಕೆ. ಪಿ. ರಾಯರಿಗೆ ಬಹಳ ಹಿಂದೆಯೇ ಸಿಗಬೇಕಾಗಿದ್ದ ರಾಜ್ಯೊತ್ಸವ ಪ್ರಶಸ್ತಿ ಈಗಲಾದರು ಸಿಕ್ಕಿತ್ತಲ್ಲ ಎಂಬ ತ್ರಪ್ತಿ ಮತ್ತು ಸಂತೋಷ. ಅವರಿಗೆ ನನ್ನ ಹಾರ್ದಿಕ ಅಬಿನಂದನೆಗಳು
  ಎನ್.ಎ ಮಧ್ಯಸ್ಥ

  ReplyDelete
 14. Gunagraahiyaada ee salada aayke samithigu, prashasthige bhaajanaraadavarigu, mechi bareda Ashoka vardhanarigu abhinandanegalu.
  -- Shyamala.

  ReplyDelete
 15. ನನ್ನ ಅಜ್ಜ (ತಾಯಿಯ ತಂದೆ) ಬಾಗ್ಲೋಡಿಯವರು ಸ್ಥಾಪಿಸಿದ ಶಾಲೆ, ಕಿನ್ನಿಕಂಬಳದಲ್ಲಿ ಚಿ| ಕೆ.ಪಿ. ರಾವ್ ಕಲಿತವರು. ಇವರಿಗೆ ಪ್ರಶಸ್ತಿ ಸ್ಕ್ಕಿದ್ದು ತುಂಬಾ ಸಂತೋಷ. ಈ ಅಪ್ರತಿಮ ಮೇಧಾವಿಗೆ ಖಂಡಿತವಾಗಿಯೂ ರಾಷ್ಠ್ರಪ್ರಶಸ್ತಿಯೇ ಲಭಿಸುತ್ತದೆ. ಪ್ರೀತಿಯ ಅಶೋಕವರ್ಧನರೆ, ರಸಗ್ರಹಿಸುವ ನಿಮ್ಮ ಮನಸ್ಸಿನಲ್ಲಿ ನನ್ನ ಪ್ರೀತಿಯ , ಸಂತೋಷದ ರಸ ಸೇರಿಸಿರಿ. ಪ್ರಾಯದಲ್ಲಿ ಹಿರಿಯನಾದ (೮೩ ವರ್ಷ) ನನ್ನ ಆಶೀರ್ವಾದ ಅವರಿಗೂ ಮತ್ತು ನಿಮಗೆಲ್ಲರಿಗೂ
  - ಎಸ್. ದೇವೇಂದ್ರ ಪೆಜತ್ತಾಯ, ಉಡುಪಿ

  ReplyDelete
 16. influencege maniyade nija prashasthige aayke maaditha sarakarakke jai. idannu mathomme ee jaaladalli odalu typisida nimage danyavaadagalu

  ReplyDelete
 17. ನನಗೂ ಈ ಬಾರಿ ಆರಿಸಿದ ವ್ಯಕ್ತಿಗಳೆಲ್ಲರೂ 'ಪ್ರಶಸ್ತಿ ಯೋಗ್ಯರು' ಎಂದು ನೋಡಿ ಸಂತೋಷವೆನಿಸಿದೆ . ವಿವರಗಳನ್ನು ಓದಿ ಖುಷಿ ಪಟ್ಟಿದ್ದೇನೆ . ಧನ್ಯವಾದಗಳು ...

  ReplyDelete
 18. K.P.Rao haagoo ithara prashasthi vijetharannu parichyisiddakke thumbaa dhanyavadagalu......

  ReplyDelete