27 September 2013

ಬೆಳ್ಳಿಧಾರೆಯಗುಂಟ ಇಳಿಯುವ ನಂಟೇ?

(ಕೊಡಚಾದ್ರಿಯ ಸುತ್ತ ಮುತ್ತ ಮೂರನೆಯ ತುಣುಕು - ಚಕ್ರವರ್ತಿಗಳು ಸುತ್ತು ಹನ್ನೆರಡು)
[೧೯೯೦ರಲ್ಲಿ ಪುಸ್ತಕ ರೂಪದಲ್ಲಿಪ್ರಕಟವಾಗಿದ್ದ ನನ್ನ ಪುಸ್ತಕ - ಚಕ್ರವರ್ತಿಗಳನ್ನು ವಿಸ್ತರಿಸಿ ಪರಿಷ್ಕರಿಸುತ್ತ ೩೧-೮-೨೦೧೨ರಿಂದ ಈ ಜಾಲತಾಣದಲ್ಲಿ ಧಾರಾವಾಹಿಯಾಗಿಸುತ್ತಿರುವುದು ನಿಮಗೆ ತಿಳಿದೇ ಇದೆ ಎಂದು ಭಾವಿಸುತ್ತೇನೆ. ಈಗಲೂ ಸರಣಿಯಲ್ಲೇ ಓದುವಾಸಕ್ತರು ಇಲ್ಲೇ ಎಡ ಮಗ್ಗುಲಲ್ಲಿರುವ ಚಕ್ರವರ್ತಿಗಳುವಿಭಾಗವನ್ನು ಆಯ್ದುಕೊಂಡು ಕ್ರಮವಾಗಿ ಹನ್ನೊಂದೂ ಸುತ್ತುಗಳನ್ನು ಮುಗಿಸಿ ಇಲ್ಲಿಗೆ ಬರಲೂಬಹುದು. ವಿಸೂ: ಲೇಖನಕ್ಕೆ ಸಂಬಂಧಿಸಿದಂತೆ ನನ್ನ ಹಳಗಾಲದ ಚಿತ್ರಗಳ ತೀವ್ರ ಕೊರತೆಗೆ ವಿಷಾದಿಸುತ್ತೇನೆ.]

“ಕೊಡಚಾದ್ರಿ - ಚಿತ್ರಮೂಲದ ತಪ್ಪಲೆಂದರೆ ಬೆಳಕಲ್ ತೀರ್ಥದ ತಳ. ಭಾರೀ ಚಂದ ಇತ್ ಕಾಣಿ” ಎಂದಿರಬೇಕು ಗೆಳೆಯ ಶಶಿಧರ ಹಾಲಾಡಿ (೧೯೮೦ರ ಆಸುಪಾಸಿನಲ್ಲಿ ಈತ ಕುಂದಾಪುರ  ಭಂಡಾರ್ಕಸ್ ಕಾಲೇಜಿನ ವಿದ್ಯಾರ್ಥಿ, ಹಾಗಾಗಿ ಪರ್ವತಾರೋಹಣದಲ್ಲಿ ಪರೋಕ್ಷವಾಗಿ ನನ್ನ ಶಿಷ್ಯ. ಸದ್ಯ ಮೈಸೂರು ಬ್ಯಾಂಕಿನ ಹಿರಿಯ ಮಣೆಗಾರರಲ್ಲೊಬ್ಬ!). ಹವನಗಳೆಲ್ಲ ವಿಶಿಷ್ಟ ಅಡುಗೆಗಳಿಗೆ ನೆಪ ಎಂದೆಲ್ಲೋ ಕೇಳಿದ್ದೆ. ಹಾಗೇ ನಾನು ಕಂಡಂತೆ ಪ್ರಾಕೃತಿಕ ತೀರ್ಥಗಳೆಲ್ಲಾ ಅದ್ಭುತ ಸ್ನಾನಕ್ಕೇ ಮೀಸಲು (ಸಾಬೂನು ಮುಂತಾದ ಮಾರ್ಜಕಗಳನ್ನು ಇಂಥಲ್ಲಿ ಬಳಸಲೇ ಬಾರದು). ಕೊಡಚಾದ್ರಿಯಿಂದ ಮರಳಿದಾಗ ಉಳಿದ ಕೊರಗಿಗೆ ಈಗ ಮೆರುಗು ಬಂದಿತ್ತು. ಶಶಿಧರ ಒದಗಿಸಿದ ಸೂಚನೆಗಳಂತೆ ಕೊಲ್ಲೂರಿಗೆ ಕುಂದಾಪುರ, ವಂಡ್ಸೆ ದಾರಿಯಲ್ಲಿ ಹೋಗುವಾಗ ಸಿಗುವ ಜಡ್ಕಲ್ ಎಂಬಲ್ಲಿಂದ ಸುಮಾರು ಹತ್ತು ಕಿಮೀ ದೂರದ ಮಟ್ಟಸ ದಾರಿಯ ಕೊನೆ ಬೆಳ್ಕಲ್ ತೀರ್ಥ.  ಅದರಲ್ಲೂ ನಡುವೆ ಸಿಗುವ “ನಮ್ಮ ಮೂದೂರಿಗೆ ಬಸ್ ಸಾರಿಗೆಯೂ ಇದೆ” ಎಂದೂ ಶಶಿಧರ ಸೇರಿಸಿದ್ದರು. ‘ಬೆಳ್‌ಕಲ್ ತೀರ್ಥದ ಸ್ನಾನ’ಕ್ಕೆ ನಾನು ಅವಸರದ ಕರೆ ಕೊಟ್ಟೆ.


ಮಟ್ಟಸ ದಾರಿಯಲ್ಲಿ ನಡೆದು, ಬರಿದೇ ಸ್ನಾನ ಮಾಡಿ, ಬುತ್ತಿಯೂಟ ಧ್ವಂಸ ಮಾಡುವುದು ನನಗೆ ಒಗ್ಗುತ್ತಿರಲಿಲ್ಲ. ಸರ್ವೇಕ್ಷಣಾ ಇಲಾಖೆಯ ನಕ್ಷೆ ಅಳೆದೂ ಸುರಿದೂ ಒಂದು ರಾತ್ರಿ, ಎರಡು ಹಗಲುಗಳ  ‘ಬೆಳ್‌ಕಲ್ ತೀರ್ಥದ ಮುಡಿಯಿಂದ ಅಡಿಗೆ’ ಯೋಜನೆ ಹಾಕಿದಾಗ ಸಹಜವಾಗಿ ಸಾಹಸಯಾನದ ಒತ್ತು ಬಂದಿತ್ತು. ದಿನ, ತಂಡವೇನೋ ಸಜ್ಜುಗೊಂಡಿತು. ಆದರೆ ನನಗೆ ಅಂಗಡಿಯಿಂದ ಕಳಚಿಕೊಳ್ಳಲು ಮುಹೂರ್ತ ಒದಗಲೇ ಇಲ್ಲ. [ಅಂಗಡಿ ಆಗ ಇನ್ನೂ ಆರಂಭಿಕ ದಿನಗಳಲ್ಲಿದ್ದುದರಿಂದ ವಾರದ ದಿನಗಳಲ್ಲಿ ರಜೆ ಮಾಡುವ ಆರ್ಥಿಕ ಧೈರ್ಯ ನನಗಿರಲಿಲ್ಲ.] ಆದರೇನು ನಮ್ಮ ಎರಡು ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪಳಗಿದ್ದ ಮಿತ್ರ ಜಯಂತ್ (ಏಗ್ನೆಸ್ ಕಾಲೇಜಿನ ರಸಾಯನ ಶಾಸ್ತ್ರಾಧ್ಯಾಪಕ) ಸದಸ್ಯರಾಗಿ ಹೆಸರು ಕೊಟ್ಟಿದ್ದರೂ ನಾಯಕನಾಗಿ ತಂಡವನ್ನು ವಹಿಸಿಕೊಂಡು ನಡೆಸಿಯೇ ಬಿಟ್ಟರು. ನನ್ನ ನೆನಪಿನಲ್ಲಿ ಕಾಣುವ ತಂಡದ ಇತರ ಸದಸ್ಯರಲ್ಲಿ ಮುಂಚೂಣಿಯ ಹೆಸರು ಕೊರೀಶ ಗ್ರಾಚಾರ್ ಎಂದೇ ಮಿತ್ರವೃಂದದಲ್ಲಿ ಸುಪ್ರಸಿದ್ಧರಾದ ಅಂದಿನ ಹರೀಶ ಆಚಾರ್ ಉರುಫ್ ಇಂದಿನ ಕವಿಪುಂಗವ ಹರೀಶ್ ಪೇಜಾವರ. ಗೆರಸೊಪ್ಪೆಯ ಬೆಟ್ಟ ಕಾಡುಗಳಲ್ಲಿ ಬಾಲ್ಯ ಕಳೆದು ಬಂದಿದ್ದ, ಅಂದಿನ ನನ್ನ ಅಂಗಡಿ ಸಹಾಯಕ ಪ್ರಕಾಶ್ ನಾಟೇಕರ್ ಇನ್ನೊಬ್ಬ ಸದಸ್ಯ. ಕೊನೆಯದಾಗಿ ಆಗಿನ್ನೂ ಕಾಲೇಜು ಕಳಚಿಕೊಂಡಿದ್ದರೂ ಪಡ್ಡೆತನ ಮಾಸದ, ಕರಾಟೆ ಹುಲಿ ಅರುಣ್ ನಾಯಕ್ - ಇಂದಿನ ಜೂಸ್ ಜಂಕ್ಷನ್, ಪಂಜಾಬೀ ಢಾಬಾದ ಮಾಲಿಕ.

ಬಸ್ಸುಗಳ ಮಜಲೋಟದಲ್ಲಿ ತಂಡ ಉಡ್ಪಿ, ಕುಂದಾಪ್ರ, ಕೊಲ್ಲೂರು ಸರಣಿಯಲ್ಲಿ ನಾಗೋಡಿಗೇ ಮುಟ್ಟಿತು. ನಡಿಗೆಯಲ್ಲಿ ಭಟ್ರ ಮನೆ ಮತ್ತು ವಾಸ. ಅಲ್ಲಿನ ಸ್ಥಳೀಯರಲ್ಲಿ ಇವರು ಚಿತ್ರಮೂಲದ ತಳಕ್ಕೆ ಜಾಡು ಕೇಳಿದರಂತೆ. “ಹುಚ್ಚೇ? ಮರಳಿ ಬಾರದೂರಿಗೆ ದಾರಿ ಹುಡುಕಬೇಡಿ” ಎಂಬ ಅಭಿಪ್ರಾಯಗಳಷ್ಟೇ ಸಿಕ್ಕವಂತೆ. ಆದರೆ ಇಂಥಾ ಮಾತುಗಳು ಬಹುತೇಕ ವಸ್ತುಸ್ಥಿತಿಯನ್ನು ಹೇಳುವುದಿಲ್ಲ, ಆಡುವವರ ಅಶಕ್ತತೆಗೆ ಗೌರವ ಗಳಿಸುವ ಪ್ರಯತ್ನಗಳಾಗಿರುತ್ತದೆ. ಸರ್ವೇಕ್ಷಣಾ ಇಲಾಖೆಯ ನಕ್ಷೆಗಳು ಕಾಲ್ಪನಿಕ ರೇಖೆಗಳಲ್ಲ. [ಇಂದಾದರೋ ಅಗಮ್ಯ ತಾಣಗಳನ್ನೂ ಕೇವಲ ಉಪಗ್ರಹಗಳ ದೃಷ್ಟಿಗೊಳಪಡಿಸಿ ಹವಾನಿಯಂತ್ರಿತ ಕೊಠಡಿಯೊಳಗೆ ಸುಖಾಸೀನದಲ್ಲಿ ಕುಳಿತೇ ನಿಖರ ಚಿತ್ರಗಳನ್ನು ಪಡೆಯುವುದಿರಬಹುದು.] ತಂಡ ಯೋಜನೆಯಂತೇ ಮುಂದುವರಿಯಿತು. ಮೊದಲು ಇವರು ಶಿಖರವಲಯದ ಕಿರುತೊರೆಯ ಪಾತ್ರೆ ಮತ್ತು ಚಿತ್ರಮೂಲದ ದಿಕ್ಕಿನ ಅಂದಾಜಿಗೆ ಜಾನುವಾರುಗಳ ಜಾಡು ಹಿಡಿದರು. ಅವೆಲ್ಲ ಮೇಯಲು ಬಿಟ್ಟ ಭಟ್ಟರ ಮನೆಯದ್ದೇ ದನ ಎಮ್ಮೆಗಳು ಮೂಡಿಸಿದ್ದಿರಬಹುದು. ಮತ್ತೆ, ಬಹುಬೇಗನೆ ಕೆಮ್ಮ, ಕಡವೆ, ಕಾಟಿ ಮುಂತಾದ ವನ್ಯ ಜಾನುವಾರುಗಳ ಜಾಡು ನೆಚ್ಚುವುದರೊಡನೆ ಆಯ್ಕೆಗಳು ವಿರಳವಾಗುತ್ತ ಹೋಯ್ತು. ತೀವ್ರ ಇಳುಕಲು ಮತ್ತು ಜಾರು ನೆಲವಾದರೂ ಆಧಾರಕ್ಕೆ ಗಿಡಗಂಟಿಗಳ ಸರಣಿಯನ್ನು ಆಯ್ದುಕೊಳ್ಳುತ್ತ ಮುಂದುವರಿದರು.

“ಓ ಇಲ್ಲೇ ಕೆಳಗಿನ ಗದ್ದೆ ತೋಟ ಕಾಣುತ್ತಲ್ಲಾ” ಎಂಬ ಕಣ್ಣಂದಾಜೇ ಇವರಿಗೆ ಭರವಸೆ. ಆದರೆ ಭೂಮಿಯ ಸಮತಳದಲ್ಲಿ ಸಿಗುವ ಅಂದಾಜುಗಳು ಆ ಎತ್ತರದಲ್ಲಿ ಭಿನ್ನವೇ ಆಗಿದ್ದವು. ಎದುರಿನ ಗುಲಾಬಿ ಗಿಡ, ಆಚಿನ ಗೇಟಿನ ಕುಂದ, ಪಕ್ಕದ ಮನೆ, ಅದರ ಹಿಂದಿಣುಕುವ ಬಹುಮಹಡಿ ವಸತಿ ಸಮುಚ್ಚಯ ಮುಂತಾದವುಗಳಿಂದ ಸಾಮಾನ್ಯವಾಗಿ ನಮ್ಮ ದೂರದ ಕಲ್ಪನೆಗಳು ನಿರ್ಧಾರವಾಗುತ್ತವೆ. ಆದರೆ ಬೆಟ್ಟದೆತ್ತರದಿಂದ ಕೊಳ್ಳದಾಳ ದಿಟ್ಟಿಸುವಲ್ಲಿ ಎಲ್ಲಕ್ಕು ಏಕರೂಪದ ಕುಬ್ಜತೆ ಬಂದಂತಾಗಿ ನಾವು ವಂಚನೆಗೊಳಗಾಗುತ್ತೇವೆ. ಜಯಂತರ ತಂಡ ಈ ಸತ್ಯವನ್ನು ದಿನ ಪೂರ್ತಿ ಶ್ರಮ ಮತ್ತು ಹತಾಶೆಯಿಂದ ಕಂಡುಕೊಳ್ಳುವಂತಾಯ್ತು! [ಜಯಂತರಿಗೆ ಮಾತು ಕಡಿಮೆ. ವಿವರಗಳಿಗೆ ಅಂದೇ ಮಾತು ಕೊಡದ ಅವರು ಇಂದು ಪ್ರತಿಕ್ರಿಯಾ ಅಂಕಣವನ್ನಾದರೂ ತುಂಬುತ್ತಾರೋ ಎಂದು ಕಾದಿದ್ದೇನೆ. :) ] ಗಂಟೆಗಿಷ್ಟು ಹೆಜ್ಜೆ, ಹೆಜ್ಜೆಗಳಂತರದಲ್ಲಿ ಕಳೆದುಕೊಳ್ಳುವ ಒಂದಷ್ಟು ಔನ್ನತ್ಯ, ಅವಕ್ಕೆ ಗರಿಷ್ಠ ರಿಯಾಯಿತಿಯ ಮಾಪನ ಎಲ್ಲ ಕೊಟ್ಟುಕೊಂಡರು. ಮತ್ತೆ, ಅಬ್ಬಬ್ಬಾ ಅಂದರೆ ಇನ್ನೂರು ಮುನ್ನೂರು ಮೀಟರ್ ಆಳದಲ್ಲಿದೆ ನೆಲ, ಒಂದೆರಡು ಗಂಟೆಯ ಅವಧಿಯಲ್ಲಿ ಇಳಿದು ಮುಗಿಸುತ್ತೇವೆ ಎಂದೇ ನಂಬಿದರು. ಆದರೆ ಇವರ ರಿಯಾಯಿತಿಗಳನ್ನು ಒಪ್ಪಿ ಪಾತಾಳದಲ್ಲಿ ಪೊದರಿನಂತಿದ್ದ ಮರಗಳು ಹಿಗ್ಗಲಿಲ್ಲ, ಬಂಡೆಗಳು ಉಬ್ಬಲಿಲ್ಲ! ಇವರಿಗೆ ತಪ್ಪಲು ಸಿಗುವುದಿರಲಿ, ಮಧ್ಯಾಹ್ನದ ಬುತ್ತಿಯೂಟಕ್ಕೆ ಒಂದೆಡೆ ಒಟ್ಟು ಕೂರಲೂ ಅವಕಾಶ ಸಿಗಲಿಲ್ಲವಂತೆ. ಹುಲ್ಲ ದಿಬ್ಬ, ಮುಳ್ಳಗಂಟು ಎಂದು ಎಲ್ಲೆಲ್ಲೋ ಚದರಿದಂತೆ ಆಧರಿಸಿಕೊಂಡು ಕುಳಿತುಕೊಳ್ಳುವಂತಾಗಿತ್ತು. ಸೂರ್ಯ ಯಾವ ತಡವರಿಕೆಯಿಲ್ಲದೆ ಜಾರುತ್ತಿದ್ದ. ಸೂರ್ಯಾಸ್ತದ ಆಸ್ವಾದನೆಗಿಂತ ಹಿಂಬಾಲಿಸುವ ಕಾವಳದ ಭಯ ಇವರನ್ನು ಕಾಡುತ್ತಿತ್ತು. ಮಂಗಳೂರು ಸೇರುವುದಿರಲಿ, ತಪ್ಪಲು ಮುಟ್ಟುವುದೂ ಅಸಾಧ್ಯ ಎನ್ನುವ ಸ್ಥಿತಿಯಲ್ಲಿ ರಾತ್ರಿಗೊಂದು ನೆಲೆ ಆಯ್ದುಕೊಳ್ಳಲೇಬೇಕಾಯಿತು. ಝರಿ ಪಾತ್ರೆ ಸಿಕ್ಕಿದ್ದರಿಂದ ನೀರ ಸಮಸ್ಯೆ ಏನೋ ಕಾಡಲಿಲ್ಲ. ಆದರೆ ಸಿಕ್ಕಿದ್ದ ಕಿಷ್ಕಿಂಧೆಯಲ್ಲಿ (ನೆನಪಿರಲಿ, ರಾಮಾಯಣದಲ್ಲೂ ಕಿಷ್ಕಿಂಧೆಯಲ್ಲಿದ್ದವರು ಮಂಗಗಳು!) ನಿದ್ರೆ ಬಿಡಿ, ಸರಿಯಾಗಿ ಕೈಕಾಲು ಚಾಚಿ ವಿಶ್ರಾಂತಿ ಪಡೆಯುವಷ್ಟೂ ಸಮತಳದ ನೆಲ ಇರಲಿಲ್ಲ. ಝರಿಯ ನಿರಂತರ ಆರ್ಭಟೆ, ಬೆಟ್ಟದ ಪಶ್ಚಿಮ ಮೈಯಾದ್ದರಿಂದ ಗಾಳಿಯ ಹುಯ್ಲು, ಚಳಿಯೋಡಿಸಲು ಒದಗಬೇಕಿದ್ದ ಶಿಬಿರಾಗ್ನಿಯ ಅಸ್ಥಿರತೆ ನೆನೆಸಿದರೆ ಹರೀಶರಿಗೆ ಇಂದಿಗೂ ಮೂಳೆಯಲ್ಲಿ ಚಳಿ ಹುಟ್ಟುತ್ತದೆ! ದಿನದ ಶ್ರಮದಿಂದ ನಿದ್ರೆ ಒತ್ತಿ ಬಂದಾಗೆಲ್ಲಾ ಇವರಿಗೆ ಕೊಳ್ಳಕ್ಕುರುಳಿದ್ದೇ ಕನಸು. ಅದು ನನಸೂ ಆಗದ ಎಚ್ಚರವನ್ನು ಪರಸ್ಪರ ವಿನಿಮಯಿಸಿಕೊಳ್ಳುತ್ತ ರಾತ್ರಿ ಕಳೆದದ್ದೇ ಸ್ವತಂತ್ರ ಸಾಹಸ.

ಹೊಸಹಗಲು ಇವರಿಗೆ ಆಶಾದಾಯಕವಾಗಿತ್ತು. ಝರಿಪಾತ್ರೆಯಲ್ಲಿ ಸಾಮಾನ್ಯವಾಗಿ ಭಾರೀ ಬಂಡೆಗುಂಡುಗಳೂ ಅಸ್ಥಿರವಾಗಿ ಒಟ್ಟೈಸಿರುತ್ತವೆ. ಅಲ್ಲಿ ಈ ನುಣ್ಣನೆ ಪಾದದವರು (ಯಾವ ಅದ್ಭುತ ಅಟ್ಟೆಯ ಬೂಟು ಹಾಕಿದರೂ ನಾಗರಿಕ ಜೀವನ ಶೈಲಿಗೆ ಒಗ್ಗಿದವರಿಗೆ ಈ ಕೊರಕಲು ಸ್ಥಿರ ಹೆಜ್ಜೆ ಕೊಡಲಾರದು!) ಹೆಚ್ಚು ಮುಂದುವರಿಯುವುದು ಅಸಾಧ್ಯವೇ ಇತ್ತು. ಹಾಗೂ ಅನುಸರಿಸಿದ್ದೇ ಆದರೆ ಅಲ್ಲಲ್ಲಿ ಈ ಝರಿ ಸಣ್ಣ ಪುಟ್ಟ ಜಲಪಾತವೇ ಆಗುತ್ತಿತ್ತು. ಆ ಬೀಳುಗಳ ಒಂದೆರಡೇ ಹಂತದಲ್ಲೆಲ್ಲೋ ಬೆಳ್ಕಲ್ ತೀರ್ಥದ ನೆತ್ತಿ ಸಿಗುವ ಸಾಧ್ಯತೆಯೂ ಧಾರಾಳ ಇತ್ತು. ಆದರೆ ಶಿಲಾರೋಹಣದ ಓನಾಮವಾಗಲೀ ಕನಿಷ್ಠ ರಕ್ಷಣೆ ಕಲ್ಪಿಸಲು ಒಂದು ಹಗ್ಗವಾಗಲೀ ಆ ತಂಡದಲ್ಲಿರಲಿಲ್ಲ. ಹಿಂದಿನ ರಾತ್ರಿ ವಿಶ್ರಾಂತಿಯ ಅಣಕದಲ್ಲಿದ್ದಾಗಲೇ ಎಲ್ಲ ಪರಸ್ಪರ ಅಣಕಿಸಿಕೊಂಡಿದ್ದರಂತೆ; ಸಾಹಸಕ್ಕೆಂದು ಬಂದು ಆತ್ಮಹತ್ಯೆಯಾಗದಿದ್ದರೆ ಸಾಕು! ಹಾಗಾಗಿ ಸಿಕ್ಕ ಮೊದಲ ಜಲಪಾತದ ಸೂಚನೆಯೊಡನೆಯೇ ತಂಡ ಮುಂದುವರಿದು, ಕೊಳ್ಳ ಇಣುಕಿ ನೋಡಿ, ಜಾಡು ಮಾಡುವ ‘ಸಾಧನೆ’ಯ ಹಂಬಲ ತೊರೆದರು. ‘ದುರಂತ’ದ ನಿವಾರಣೆಯ ಅನಿವಾರ್ಯತೆಯಲ್ಲಿ ಝರಿ ಪಾತ್ರೆಯ ಎಡದ ಏಣೊಂದನ್ನು ಬಹಳ ಕಷ್ಟದಿಂದಲೇ ದಾಟಿದ್ದರು. ಅದೃಷ್ಟವಶಾತ್ ಅಲ್ಲಿ ಮತ್ತೆ ತಪ್ಪಲಿನ ಹಳ್ಳಿಗರೋ (ಕಾಡುತ್ಪತ್ತಿ ಅರಸಿ) ವನ್ಯಜೀವಿಗಳೋ ಮಾಡಿದ ಸವಕಲು ಜಾಡು ಸಿಕ್ಕಿ (ಕೊನೆಗೂ) ತಪ್ಪಲು ಸೇರಿದ್ದರು.

ಯೋಜನೆಯಂತೆ ಕೊಡಚಾದ್ರಿ ಮುಡಿಯಿಂದ ಬೆಳ್ಕಲ್ ತೀರ್ಥದಡಿಗೆ ಇಳಿಯುವವರು ಎರಡು ಹಗಲು ಒಂದು ರಾತ್ರಿಯಲ್ಲಿ ಕಲಾಪ ಪೂರೈಸಿ ಮರಳಬೇಕಿತ್ತು. ಅಂದರೆ ಆದಿತ್ಯವಾರ ತಡ ರಾತ್ರಿಯಾದರೂ ಮಂಗಳೂರು ಸೇರಬೇಕಿತ್ತು. ಇಂದು, ಅಕಸ್ಮಾತ್ ಒಬ್ಬ ಆರೋಹಿ ಪ್ರಪಾತಕ್ಕೆ ಉರುಳುತ್ತಿದ್ದಾನೆ ಎಂದುಕೊಳ್ಳಿ. ಆತ ಕೊಳ್ಳದ ನೆಲ ತಟ್ಟುವುದರೊಳಗೆ ಆಪದ್ರಕ್ಷಣಾ ತಂಡ (ಅಗ್ನಿಶಾಮಕ ದಳ ಎನ್ನಿ) ಅಲ್ಲಿಗೆ ಧಾವಿಸಿ, ಬಲೆಯೊಡ್ಡಿ ಕಾಯ್ದುಕೊಳ್ಳುವಂತೆ ಸೂಚಿಸಲಾದರೂ ಒದಗುವಂತೆ ಚರವಾಣಿ ಜನಪ್ರಿಯ, ಜಾಲವೂ ವ್ಯಾಪಕ! ಆದರೆ ಆ ದಿನಗಳಲ್ಲಿ, ಬಡಪಾಯಿಗಳು ಬದುಕಿದೆಯಾ ಬಡಜೀವ ಎಂದು ಮಧ್ಯಾಹ್ನದ ಊಟದ ಸುಮಾರಿಗೆ ಯಾವುದೋ ಹಳ್ಳಿಹೋಟೆಲ್ ತಲಪುವವರೆಗೆ ಯಾವ ನಾಗರಿಕ ಸಂಪರ್ಕ ಮಾಧ್ಯಮವೂ ಇರಲೇ ಇಲ್ಲ. ಕೊಲ್ಲೂರು ಕುಂದಾಪುರಗಳಲ್ಲೇ ತಿಣುಕಿದರೂ ಸಿಗಬಹುದಾಗಿದ್ದ ತುರ್ತು ಸಾಧನ -  ಮಂಗಳೂರಿಗೆ ಅನಿಶ್ಚಿತ ಅವಧಿಯ ಟ್ರಂಕಾಲ್, ಟೆಲಿಗ್ರಾಂ! ಅಷ್ಟಕ್ಕೂ ಅವರು ಅಂಚೆ-ತಂತಿ ಕಛೇರಿಯ ರೀಪಿನ ಬೆಂಚುಗಳ ತಗಣೆಗಳಿಗೆ ಆಹಾರವಾಗುತ್ತ ಕಾಲ ಕಳೆಯಬೇಕಾಗುತ್ತಿತ್ತು. ಆ ಯೋಚನೆ ಬಿಟ್ಟು ತಂಡ ಮರುಪಯಣಕ್ಕೆ ಸಿಕ್ಕ ಮೊದಲ ಬಸ್ ಹಿಡಿದಿದ್ದರು. [ಹಿಂದೆ ಕುಮಾರಧಾರೆಯನ್ನು ಅನುಸರಿಸಿಕೊಂಡು ಹೋದ ನಮ್ಮ ತಂಡವೂ ಇಂಥದೇ ಸ್ಥಿತಿಯಲ್ಲಿತ್ತು ನೆನಪಿಸಿಕೊಳ್ಳಿ]

‘ಏನು, ಯಾರಿಂದಲೂ ಸುದ್ದಿಯಿಲ್ಲ’ ಅಂದುಕೊಂಡೇ ಆ ಸೋಮವಾರ ನಾನು ಎಂದಿನಂತೆ ಅಂಗಡಿ ತೆರೆದಿದ್ದೆ. ಹತ್ತು ಹನ್ನೊಂದು ಗಂಟೆಯಂದಾಜಿಗೆ ಅರುಣ್ ನಾಯಕ್ ಸೋದರಿ ದೂರವಾಣಿಸಿ ತುಸು ಆತಂಕದಲ್ಲೇ ವಿಚಾರಿಸಿಕೊಂಡರು. “ಬೆಟ್ಟ, ಕಾಡು ಮತ್ತೆ ಹಳ್ಳಿಮೂಲೆಗಳಲ್ಲಿ ವಿಳಂಬ ಕೆಲವೊಮ್ಮೆ ಅನಿವಾರ್ಯವಾಗಿಬಿಡುತ್ತದೆ. ಗಾಬರಿಯಾಗಬೇಡಿ, ಬಸ್ಸಿನಲ್ಲಿ ಬರುತ್ತಿರಬಹುದು” ಎಂದೇ ಸಮಾಧಾನಿಸಿದೆ. ಅಂಗಡಿಯನ್ನು ಊಟದ ಬಿಡುವಿಗೆ ನಾನು ಮುಚ್ಚಬೇಕೆನ್ನುವ ವೇಳೆಗೆ ಆಕೆ ಸ್ವತಃ ಬಂದು ‘ಇನ್ನೂ ಬರಲಿಲ್ಲ’ ತೋಡಿಕೊಂಡದ್ದೂ ನಾನು ನನ್ನ ಹೆದರಿಕೆಯನ್ನು ತೋರಿಸಿಕೊಳ್ಳದೆ ಸರ್ವಜ್ಞನಂತೆ ‘ಇದೆಲ್ಲ ಇದ್ದದ್ದೇ’ ಹೇಳಿದ್ದೂ ಆಯ್ತು. ಅಪರಾಹ್ನ ಮೂರರ ಸುಮಾರಿಗೆ ದೃಢಕಾಯದ ಹಿರಿಯ ಕೃಷಿಕ (ಬಂಟ್ವಾಳ ಸಮೀಪದಲ್ಲೆಲ್ಲೋ ಜಮೀನ್ದಾರ) - ಅರುಣ್ ನಾಯಕ್ ತಂದೆಯೇ (ಕ್ಷಮಿಸಿ, ಅವರ ಹೆಸರು ಮರೆತಿದ್ದೇನೆ) ಇದ್ದ ಕೆಲಸ ಬಿಟ್ಟು, ಕಾರು ಮಾಡಿ ನನ್ನಂಗಡಿಗೆ ಧಾವಿಸಿದ್ದರು. ಪ್ರಶ್ನೆ ಅದೇ “ಬೆಟ್ಟಕ್ಕೆ ಹೋದವರ ಸುದ್ದಿಯುಂಟೇ?” ನಾನು “ಇಲ್ಲ, ಕೊಲ್ಲೂರಿನ ನನ್ನ ಪರಿಚಿತರಿಗೆ ದೂರವಾಣಿಸಿ ವಿಚಾರಿಸಿಕೊಳ್ಳಲು ಪ್ರಯತ್ನ ನಡೆಸಿದ್ದೇನೆ. ಗೊತ್ತಲ್ಲಾ ನಿಮಗೆ ಟ್ರಂಕ್ ಕಾಲಿನ ವಿಳಂಬಾ...” ಎಂದು ಸಹಜ ಆತಂಕದಲ್ಲೇ ಉತ್ತರಿಸಿದೆ. ಅವರು ಹತಾಶೆಯಲ್ಲಿ “ಮಲೆ ಬಡಪ್ಪುನಗೆ! ಇಲ್ಲಿ ನಮ್ಮ ಹಳ್ಳಿಯ ಗುಡ್ಡಗಳು ಸಾಕಾಗ್ತಿರ್ಲಿಲ್ಲವಾ ಇವರಿಗೆ...” ಎಂದು ಗೊಣಗಿಕೊಂಡು ಅಂಗಡಿಯೊಳಗೆ ಒಂದೆರಡು ಮಿನಿಟು ಶತಪಥ ಹಾಕಿದರು. ಅರುಣ್ ಊರಿಗೆ ಕರಾಟೆ ಹುಲಿಯೇ ಆದರೂ ತಂದೆಗೆ ಇನ್ನೂ ‘ಬುದ್ಧಿ ಬೆಳೆಯದ, ಪರಾವಲಂಬಿ’; ಇಲಿ? ಅಷ್ಟು ‘ದೊಡ್ಡ ಅಂಗಡಿ’ಯ ರಕ್ಷಿತ ಆವರಣದೊಳಗೆ ತಣ್ಣಗೆ ಪಂಖದಡಿಯಲ್ಲಿ ಕುಳಿತು, ಆತಂಕ ಹಂಚಿಕೊಳ್ಳುವಲ್ಲಿ ವಿಶ್ವಸನೀಯವಾಗಿಯೂ ವರ್ತಿಸುತ್ತಿದ್ದ (ಪಂಕರುಹಾಸನಸ್ಥಿತ?) ನನ್ನನ್ನು ಕಂಡು ಅವರಿಗೇನನ್ನಿಸಿತೋ! ಒಮ್ಮೆಗೆ ನನ್ನೆದುರು ನಿಂತು ಕೇಳಿದರು “ಅಷ್ಟು ದೂರದ ಗೊತ್ತಿಲ್ಲದ ಕಾಡು, ಜಾಡಿಲ್ಲದ ಎತ್ತರದ ಬೆಟ್ಟ ನೋಡಬೇಕು, ಹತ್ತಬೇಕು ಎಂದೆಲ್ಲ ಯಾರು ಇವರ ಮಂಡೆಗೆ ಹಾಕಿದ್ದು?” ನನ್ನ ಬಣ್ಣಗೇಡಾಗುವ ಸಮಯ ಬಂದಿತ್ತು; ಒಪ್ಪಿಸಿಕೊಂಡೆ. “ಅಯ್ಯೋ ಎಲ್ಲ ಬಿಟ್ಟು ನಿಮ್ಮಲ್ಲೇ ಹೇಳಿಕೊಳ್ತೇನಲ್ಲಾ...” ಎಂದು ತಲೆಗೆ ಕೈ ಹೊತ್ತು ಬಿರಬಿರನೆ ಹೊರ ನಡೆದರು. ಬಹುಶಃ ಅದೇ ಸುಮಾರಿಗೆ ಅರುಣ್ (ಮತ್ತು ಎಲ್ಲರೂ) ಅವರವರ ಮನೆ ಸೇರಿರಬೇಕು. ಭಾಗಿಗಳ ಸಾಧನೆಯ ಬಗ್ಗೆ ಹೆಮ್ಮೆ ಹಂಚಿಕೊಳ್ಳಲು ಮಾತ್ರ ಯಾರೂ ನನ್ನ ಬಳಿ ಬರಲೇ ಇಲ್ಲ. ತಮ್ಮ ಮತವನ್ನು ಸಾರ್ವತ್ರೀಕರಿಸ ಬಯಸುವ ಮಠಾಧಿಪತಿಗಳು ಅನ್ಯಮತ ಪ್ರಯತ್ನವನ್ನು ಸಮಾಜದ್ರೋಹ ಎಂದೂ ತಮ್ಮ ಎಡವಟ್ಟುಗಳನ್ನು ಸಾಧನೆಗಳೆಂದು ಅಂಗೀಕರಿಸುವುದು ಇದ್ದದ್ದೇ. ಆದರೆ ಈ ಪ್ರಸಂಗದಲ್ಲಿ ‘ಅವರಿಗೆ’ ತಿಳಿದಿಲ್ಲ, ನನ್ನದು ಮಠವಲ್ಲ - ಜೀವನಶೈಲಿ.

ಬೆಳ್ಳಿಬರೆಯಿಂದ ಕೊಡಚಾದ್ರಿ ಮುಡಿಗೆ
(ಕೊಡಚಾದ್ರಿಯ ಸುತ್ತಮುತ್ತ - ನಾಲ್ಕನೆಯ ತುಣುಕು)

ಜಯಂತರ ತಂಡದಲ್ಲಿದ್ದ ಪ್ರಕಾಶ, “ಭಟ್ಟರ ಮನೆ ಹತ್ರ ಮ್ಯಾಟಡೋರ್ ಕಂಡೆ” ಎಂದಿದ್ದ. ಆಗ ಇನ್ನೂ ಸರ್ವೇ ಆಫ್ ಇಂಡಿಯಾದ ವಿವರವಾದ ನಕ್ಷೆ ನನ್ನಲ್ಲಿರಲಿಲ್ಲ. ಭೂವಿಜ್ಞಾನ ಇಲಾಖೆಯ ಎರವಲು ನಕ್ಷೆಯಲ್ಲಿ ಕೊಡಚಾದ್ರಿ ನೆತ್ತಿಗೆ ವಾಹನ ಚಲಾವಣೆಯ ಕಚ್ಚಾದಾರಿ ಇರುವುದನ್ನು ನೋಡುವವರೆಗೆ ನಾನು ಪ್ರಕಾಶನನ್ನು ನಂಬಲೇ ಇಲ್ಲ! ಸ್ವಲ್ಪ ಕಾಲಾನಂತರ ಸಾಲಿಗ್ರಾಮದ ಉಪಾಧ್ಯ ಸೋದರರು (ಮಂಜುನಾಥ ಮತ್ತು ವೆಂಕಟ್ರಮಣ) ಮತ್ತು ಅಲ್ಲಿನ ಗೆಳೆಯರು ಆ ದಾರಿಯನ್ನೇ ಬಳಸಿ ಸೈಕಲ್ ಕೊಡಚಾದ್ರಿ ನೆತ್ತಿಯನ್ನು ಮುಟ್ಟಿಸಿದ ಕತೆ ಹೇಳಿದರು. ಅಸಂಖ್ಯ ಹಿಮ್ಮುರಿ ತಿರುವುಗಳ ಏರು ದಾರಿಯ ಉದ್ದಕ್ಕೆ ಸೈಕಲ್ಲನ್ನು ನೂಕಿಯೇ ಹತ್ತಿಸಿದರಂತೆ. ಶಿಖರವಲಯದಲ್ಲಿ ದಾರಿಯಂಚಿನವರೆಗೂ ಆಳೆತ್ತರದ ಹುಲ್ಲಿನ ದಟ್ಟಣೆಯಲ್ಲಿ ಒಮ್ಮೆಲೇ ಕಾಟಿ ಹಿಂಡು ಕಂಡಾಗ ಇವರು ಕಂಗಾಲು. ‘ಅದೃಷ್ಟವಶಾತ್’ ಇವರು ಬೊಬ್ಬೆ ಹೊಡೆದದ್ದಕ್ಕೆ, ಅವು ಹೆದರಿ ಓಡಿದ್ದರಿಂದ ಇವರು ಬಚಾವಾದರಂತೆ. (ಇಂದು ನಮಗೆ ಸ್ಪಷ್ಟ ತಿಳಿದಿದೆ, ಅಲ್ಲೇನೂ ಅದೃಷ್ಟವಿರಲಿಲ್ಲ. ಸಾಮಾನ್ಯವಾಗಿ ಯಾವುದೇ ವನ್ಯಮೃಗ - ಆನೆಯನ್ನೂ ಸೇರಿಸಿದಂತೆ, ಸಕಾಲದಲ್ಲಿ ಮುನ್ಸೂಚನೆ ಸಿಕ್ಕಿದರೆ ಮನುಷ್ಯನ ಎದುರು ಕಾಣಿಸಿಕೊಳ್ಳಲು ಬಯಸುವುದಿಲ್ಲ. ಇನ್ನೂ ಸರಿಯಾಗಿ ಹೇಳಬೇಕಾದರೆ ತಲೆತಪ್ಪಿಸಲು ಪ್ರಯತ್ನಿಸುತ್ತದೆ.)

ವಾಪಾಸು ಬರುವಾಗಲೂ ಇವರಿಗೆ ಸವಾರಿಯೋಗವಿಲ್ಲ; ಅಷ್ಟೂ ತೀವ್ರ ಇಳುಕಲು. ಶಿಖರದ ಸೂರ್ಯಸ್ತ ದೃಶ್ಯವಂತೂ ಚಿಕ್ಕುಪಾಧ್ಯರನ್ನು ಮತ್ತೆ ಮೂರ್ನಾಲ್ಕು ಬಾರಿ (ನಡಿಗೆಯಲ್ಲಿ) ಕೊಡಚಾದ್ರಿ ಭೇಟಿ ಕೊಡುವಷ್ಟು ಕಾಡಿತ್ತಂತೆ. ನನಗೂ ಅಲ್ಲಿನ ಸೂರ್ಯಾಸ್ತ ಕಣ್ಣು ತುಂಬಿಕೊಳ್ಳಬೇಕು, ಆ ಮಾರ್ಗಾಯಾಸವನ್ನೂ ಅನುಭವಿಸಬೇಕು ಎಂದು ಕೊರಗಿನ ಮಾಲೆ ಬೆಳೆದೇ ಇತ್ತು. ಸಾಲದ್ದಕ್ಕೆ ಮತ್ತೆ ಮತ್ತೆ ತಲೆಯಲ್ಲಿ ಆವರ್ತನೆಗೊಳ್ಳುತ್ತಿದ್ದ ಹಾಲಾಡಿಯ ಶಶಿಧರರ ಮಾತು - “ನೀವು ಕಂಡ ಚಿತ್ರಮೂಲದ ತಳ ಎಂದರೆ ಬೆಳ್ಕಲ್ ತೀರ್ಥವೇ.” ಜಯಂತರ ತಂಡ ಅದರ ಪಾತ್ರೆಯನ್ನೇ ಅನುಸರಿಸಿದ್ದರೂ ಕೊನೆಯ ಹಂತದಲ್ಲಿ, ಅನಿವಾರ್ಯವಾಗಿ ಜಲಪಾತದ ದರ್ಶನ ತಪ್ಪಿಸಿಕೊಂಡಿದ್ದರು.

ಸಕಲಮಂಗಳ ಯೋಗ ಅದೊಂದು ಸೋಮವಾರ ಸಮನಿಸುವುದಿತ್ತು; ಎಂಥದೋ ಸಾರ್ವಜನಿಕ ರಜೆಯನ್ನು ಸಾಕಷ್ಟು ಮುಂಚಿತವಾಗಿಯೇ ಗುರುತಿಸಿದ್ದೆ! ಸಹಜವಾಗಿ ಅಂಗಡಿಗೆ (ಆದಿತ್ಯವಾರ ಸೇರಿ) ಎರಡು ದಿನದ ರಜಾ ಘೋಷಿಸಿ ಮಿತ್ರಮಂಡಳಿಯಲ್ಲಿ ಹೊಸ ಯೋಜನೆ ‘ಬೆಳ್ಳಿಬರೆಯಿಂದ ಕೊಡಚಾದ್ರಿ ಮುಡಿಗೆ’ ಘೋಷಿಸಿದೆ. ಸಾರ್ವಜನಿಕ ವಾಹನ ಹಿಡಿದು, ನಡೆದು ಎಲ್ಲಾ ಪೂರೈಸುವುದಲ್ಲ ಎಂಬ ಅರಿವಿತ್ತು. ಹಾಗಾಗಿ ನಮ್ಮ - ಆರು ಬೈಕು ಹದಿಮೂರು ಜನರ ತಂಡ, ಶನಿವಾರ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಕುಂದಾಪುರ ದಾರಿ ಹಿಡಿದಿತ್ತು. ನಿದ್ರೆ ತುಸು ಕಡಿಮೆಯಾದರೂ ನೀರಸ ಮಾರ್ಗಕ್ರಮಣದ ವೇಳೆಯನ್ನು ಉಳಿಸುವ ಜಾಣ್ಮೆಯಲ್ಲಿ ರಾತ್ರಿ ಬಹುತೇಕ ಪ್ರಯಾಣ ಮುಗಿಸಿ, ಕೋಟದಲ್ಲಿನ ಗೆಳೆಯ ಡಾ| ರಾಘವೇಂದ್ರ ಉರಾಳರ ಮನೆಯಲ್ಲಿ ನಿದ್ರಿಸುವ ಹಂಚಿಕೆ ನಮ್ಮದು. ನಮ್ಮ ತಂಡ ಸ್ವಲ್ಪ ವಿಚಿತ್ರವಾಗಿಯೇ ಇತ್ತು. ನನ್ನ ಯೆಜ್ಡಿಯಲ್ಲಿ ಹೆಂಡತಿ ದೇವಕಿಯಲ್ಲದೆ ಮಗ ಅಭಯನೂ (೫ ವರ್ಷ ಪ್ರಾಯ) ಇದ್ದ. ಅರವಿಂದರದ್ದು (ವರ್ತಮಾನ ಪ್ರಪಂಚದಲ್ಲಿ ‘ಕೇದಗೆ ಸಿಂಹ’ ಎಂದೇ ಖ್ಯಾತರಾದ ಅರವಿಂದರಾವ್) ಹಳೇ ಜಾವಾ, ಅದಕ್ಕೂ ಪುರಾತನವಾದ್ದು ಅದರ ಟಯರು! “ಮುದಿ ಜಾವಾ ಕಾಡು ಬೆಟ್ಟಕ್ಕೆ ಪೋವಾ (ಹೋದೀತೇ?)” ಎಂದು ಕೇಳುವುದು ಒಂದೇ ಅರವಿಂದರಿಗೆ ರಣವೀಳ್ಯ ಕೊಡುವುದೂ ಒಂದೇ! ಅರವಿಂದರ ಬಾಲ (ಸಹಯಾನಿ) - ಬಾಲ (ಬಾಲಕೃಷ್ಣ ಸೋಮಯಾಜಿ). ಇದಕ್ಕೆ ತದ್ವಿರುದ್ಧ ಯೆಜ್ದಿ, ರ‍್ಯಾಲೀಪಟು ಗಣೇಶರದ್ದು. ಅದಕ್ಕೋ ಪ್ರತಿ ಹನ್ನೆರಡು ಕಿಮೀಗೆ ಲೀಟರ್ ಪೆಟ್ರೊಲ್ ಕುಡಿಯುವ ರಣ ಹಸಿವು! ಆದರೆ ಸವಾರ ಗಟ್ಟಿ ಕುಳಿತು ಸಂಭಾಳಿಸಬಲ್ಲನಾದರೆ ದಾರಿ ಏಕೆ, ದರೆಯೇ ಎದುರಾಗಲಿ ಇದು ಏರಿಯೇ ಶುದ್ಧ. ಗಣೇಶ್ ಬೆನ್ನಿಗೆ ಅರವಿಂದ ಶೆಣೈ - ದರ್ಶನ್ ವಿಡಿಯೋದ ಮಾಲಿಕ. ವಿಡಿಯೋಗ್ರಫಿ ಆಗಿನ್ನೂ (೧೯೮೬) ಈ ವಲಯಗಳಲ್ಲಿ ಪುಟ್ಟ ಹೆಜ್ಜೆ ಇಡುತ್ತಿದ್ದ ದಿನಗಳು. ಅರವಿಂದ್‌ಗೆ ತನ್ನ ದೊಡ್ಡ ಕ್ಯಾಮರಾವನ್ನು ಹೊತ್ತು ಪ್ರಯೋಗಿಸುವ ಚಪಲ. ಹಾಗೆಂದು ಶೆಣೈ ದೃಶ್ಯಗಳನ್ನು ಸೆರೆಹಿಡಿಯಲು ನಿಂತರೆಂದ ಮಾತ್ರಕ್ಕೆ ತಂಡದ ಪ್ರಗತಿ ಕುಂಠಿತವಾಗದಂತೆ ನೋಡಿಕೊಳ್ಳುವ ತಾಕತ್ತು ಗಣೇಶ್‌ಗಿತ್ತು. ತಂಡದೊಡನೆ ಹೆಚ್ಚಿದ ಅಂತರವನ್ನು ಕ್ಷಣಾರ್ಧದಲ್ಲಿ ತುಂಬಿಕೊಡುವಲ್ಲಿ ಇವರ ಬೈಕ್ ಮಿಂಚಿನ ಸೆಳಕು, ದಾರಿಯದೇ ಬಳಕು! ಶರತ್ (ಬಿ.ಕೆ.ಶರತ್) ಕಡ ತಂದ ಮುದಿ ಯೆಜ್ದಿಯ ಸವಾರ. ಅವನ ಬೆನ್ನಿಗೆ ಬಾಲ್ಯಮಿತ್ರ ಸೂರ್ಯ (ಅಡ್ಡೂರು ಸೂರ್ಯನಾರಾಯಣ ರಾವ್. ಅವರೊಳಗಿನ ಆಪ್ತ ಭಾಷೆಯಲ್ಲಿ ಶರತ್ ಸೂರ್ಯನಿಗೆ ಅಜ್ಜೇರ್, ಸೂರ್ಯ - ಹ್ಯಾಪೆ!!). ಉಳಿದೆರಡು ರಾಜದೂತ್‌ಗಳಲ್ಲಿ ಎರಡು ದಂಪತಿಗಳು - ಚಾರ್ಲ್ಸ್, ಬ್ಯೂಲಾ ಮತ್ತು ಬಸವರಾಜ್, ಶಾಂತಾ. ಚಾರ್ಲ್ಸ್ ಬೈಕಿಗೆ ಡೀಕಾರ್ಬನ್ ಆಗದೇ ಶಕ್ತಿಯ ಕೊರತೆ. ಬಸವರಾಜ್ ಬಯಲು ಸೀಮೆಯವರು, ಚಾಲಾಕೀ ಸವಾರಿಗಳಲ್ಲಿ ಸಹಜವಾಗಿ ತುಂಬ ತಡವರಿಸುತ್ತಿದ್ದರು.

ದಾರಿ ತಪ್ಪದಂತೆಯೂ ಆಕಸ್ಮಿಕಗಳಲ್ಲಿ ಪರಸ್ಪರ ಒದಗುವ ಅನುಕೂಲಕ್ಕಾಗಿಯೂ ತುಸು ಅಂತರವುಳಿಸಿಕೊಂಡು ಒಂದು ಕಣ್ಣಳವಿಗೆ ಕನಿಷ್ಠ ಎರಡು ಮೂರಾದರೂ ಬೈಕ್ ಸಿಗುವಂತೆ ಸಾಗಿದ್ದೆವು. ರಾಷ್ಠ್ರೀಯ ಹೆದ್ದಾರಿಯೇ ಆದರೂ ಇಂದಿನ (೨೦೧೩) ಹರಹು, ಸುಸ್ಥಿತಿ ಮತ್ತು ಸಾರಿಗೆಯ ಶಿಸ್ತುಗಳ ದೊಡ್ಡ ಕೊರತೆಯಿತ್ತು. ಎಚ್ಚರದಲ್ಲೇ ಮುಂದುವರಿದಿದ್ದೆವು. ಪಡುಬಿದ್ರೆಯ ಬಳಿ ಚಾರ್ಲ್ಸ್ ಬೈಕಿಗೆ ‘ದಮ್ಮು’ ಕಟ್ಟತೊಡಗಿತು. ಕಾಯಿಲೆ ನಿರೀಕ್ಷಿತವೇ ಆದ್ದರಿಂದ ಮಸಿ ಹಿಡಿದ ಬಿಸಿ ಪ್ಲಗ್ಗನ್ನು ಶುದ್ಧಪಡಿಸುವ ಕಷ್ಟ ಬಿಟ್ಟು, ತಂದಿದ್ದ ಹೊಸ ಪ್ಲಗ್ ಹಾಕಿದ್ದರಿಂದ ಕೆಲವೇ ಮಿನಿಟುಗಳಲ್ಲಿ ನಮ್ಮ ‘ಮೆರವಣಿಗೆ’ ಮುಂದುವರಿಯಿತು. ಆದರೆ... 

ಕಟಪಾಡಿಯ ಬಳಿ ಅರವಿಂದರ ಕತೆ ಇಷ್ಟು ಸರಳವಾಗಲಿಲ್ಲ. ಅವರ ಮುಂದಿನ ಚಕ್ರ ನಿಟ್ಟುಸಿರು ಬಿಟ್ಟಿತು. ರ‍್ಯಾಲೀ ಅನುಭವಿ ಗಣೇಶ್ ಸರಿಯಾಗಿಯೇ ಸಜ್ಜಾಗಿದ್ದರು. ಅಲ್ಲೇ ಮಾರ್ಗದ ಬದಿಯಲ್ಲಿ, ಅರವಿಂದರ ಬೈಕಿನ ಚಕ್ರ ಕಳಚಿ, ಹರಕು ಟ್ಯೂಬ್ ಹೊರ ಹಾಕಿದರು. ಮತ್ತೆ ಅವರಲ್ಲಿದ್ದ ಹೆಚ್ಚುವರಿ ಟ್ಯೂಬ್ ಒಳಗೆ ಸೇರಿಸಿ, ಫುಟ್-ಪಂಪಿನಿಂದ ಅಥವಾ (ಗಾಳಿ ತುಂಬುವ ಸಾಧನ ತಿದಿ, ಅದನ್ನು ಕಾಲಿನಿಂದ ತುಳಿದು ಬಳಸುವುದರಿಂದ) ಕಾಲ್ತಿದಿಯಿಂದ ಗಾಳಿ ತುಂಬುವುದಷ್ಟೇ ಬಾಕಿ. ಆದರೆ ಅರವಿಂದರ ಮುದಿ ಟಯರು ಮೋಸ ಮಾಡಿತು! ಹೊಸದಾಗಿ ಹಾಕಿದ ಟ್ಯೂಬ್ ಗಾಳಿ ತುಂಬಿ ಹಿಗ್ಗುವಾಗ, ಪಕ್ಕೆ ಪಿಸಿದು ಮತ್ತೆ ಠುಸ್ಸ್ಸ್ಸ್! ಗಣೇಶ್ ಬದಲಿ ಟಯರ್ ಹೊತ್ತಿರಲಿಲ್ಲ. ಇನ್ನು ಸ್ಥಳೀಯ ಅಂಗಡಿ, ವರ್ಕ್‌ಶಾಪ್ ನೋಡೋಣವೆಂದರೆ ಗಂಟೆ ರಾತ್ರಿ ಹನ್ನೊಂದು. ಪೂರ್ಣ ಅಸಹಾಯಕತೆ ತಲೆದೋರುವ ಮೊದಲು ಅರವಿಂದರಿಗೆ ಅವರ ಉಡುಪಿ ಸಂಬಂಧಿಯೊಬ್ಬನನ್ನು ನೆನಪಿಸಿಕೊಂಡರು. ಅಲ್ಲಿಗೆ ಹೋಗಿ, ಆತನ ಯೆಜ್ದಿ ಬೈಕಿನ ಮುಂದಿನ ಚಕ್ರವನ್ನೇ ಎರಡು ದಿನಕ್ಕೆ ಕಡವಾಗಿ ತರುವುದೆಂದೇ ನಿಶ್ಚಯವಾಯಿತು. ಆದರೆ ಅರ್ಧ-ಒಂದು ಗಂಟೆಯ ಕೆಲಸ.

ಅರವಿಂದ (-ದಳಾಯತಾಕ್ಷ) ಲಡ್ಡು ಚಕ್ರಧಾರಿಯಾಗಿ ಶರತ್ ಬೆನ್ನೇರಿ ಉಡುಪಿಯತ್ತ ಹೋದರು. ಬೈಕ್ ಪಹರೆಗೆ ಉಳಿದ ಸೂರ್ಯ, ಬಾಲರೊಡನೆ, ಗಣೇಶ್ ಜೋಡಿಯೂ ಉಳಿಯಿತು. ನಮ್ಮ ರಾತ್ರಿಯ ಲಕ್ಷ್ಯ - ಕೋಟದ ಉರಾಳರ ಮನೆ, ಹೆದ್ದಾರಿಯಿಂದ ಸುಮಾರು ಅರ್ಧ ಕಿಮೀ ಒಳಗಿತ್ತು ಮತ್ತು ತಂಡದಲ್ಲಿ ದಾರಿ ನನಗೊಬ್ಬನಿಗೇ ತಿಳಿದಿತ್ತು. ಎಲ್ಲರೂ ಕಾಯುವುದರಲ್ಲಿ ಅರ್ಥವಿಲ್ಲೆಂದು ಉಳಿದ ಮೂರು ಬೈಕುಗಳನ್ನು ನಾನು ಕೋಟದತ್ತ ಮಾರ್ಗದರ್ಶಿಸಿದೆ. ಆ ಮನೆಯಲ್ಲಿ ಐವರನ್ನು ಮಲಗಲು ಬಿಟ್ಟು, ನಾನು ಮತ್ತು ಚಾರ್ಲ್ಸ್ ಹೆದ್ದಾರಿ ಅಂಚಿನಲ್ಲಿ ಬೀಡುಬಿಟ್ಟೆವು - ಶಬರಿ ರಾಮನನ್ನು ಕಾದಂತೆ, ಉಳಿದ ಮೂರು ಬೈಕಿನವರನ್ನು ಕಾಯುತ್ತಾಆಆ.

ಅರವಿಂದ ಹೇಳಿದ್ದು ಉಡುಪಿಯಾದರೂ ಗೆಳೆಯನ ಮನೆ ಇದ್ದದ್ದು ಮಣಿಪಾಲದಲ್ಲಿ (ಮತ್ತೆ ಸುಮಾರು ಐದು ಕಿಮೀ ದೂರ). ಕಟಪಾಡಿಯಿಂದ ಅಲ್ಲಿಗೆ ಹೋಗಿ, ಆತನ ನಿದ್ರೆ ಬಿರಿಸಿ, ಎರಡು ದಿನಕ್ಕೆ ಆತನ ಬೈಕ್ (ನಿರುಪಯೋಗಿಯಾಗುವಂತೆ) ಒಲಿಸಿ, ಚಕ್ರ ಕಳಚಿ, ಮತ್ತೆ ಕಟಪಾಡಿ, ಜೋಡಣೆ ಎಲ್ಲ ಮುಗೀತು ಅಂದರೆ ಪೂರ್ತಿ ಮುಗಿದಿರಲಿಲ್ಲ! ಜಾವಾ, ಯೆಜ್ದಿ ಕಂಪೆನಿ ಮತ್ತು ಬೈಕಿನ ಬಹುತೇಕ ರಚನೆ ಒಂದೇ. ಆದರೆ ಹೊಂದಾಣಿಕೆಯಲ್ಲಿ ತುಸು ವ್ಯತ್ಯಾಸ ಬಂದಿತ್ತು. ನೇರ ಒಟ್ಟಕ್ಕೆ ಅಡ್ಡಿಯಿಲ್ಲ, ತಿರುಗಾಸುಗಳಲ್ಲಿ ಚಕ್ರ ಫೋರ್ಕಿಗೆ ಉಜ್ಜುತ್ತಿತ್ತು, ಬೈಕಿನ ಒಲೆದಾಟ ಬೆದರಿಸುತ್ತಿತ್ತು. ಅದಕ್ಕೊಂದು ಯುಕ್ತ ವಾಶರ್ ಇದ್ದರೆ ಸಾಕು ಎಂದು ಕಂಡರೂ ಅವೇಳೆಯಲ್ಲಿ ಹುಡುಕುವುದೆಲ್ಲಿ? ಅನಿವಾರ್ಯವಾಗಿ ಅವರು ತಲಪದಿರುವುದಕ್ಕಿಂಥ ತಡವಾಗುವುದುತ್ತಮ ಎಂದು ನಿಧಾನಕ್ಕೇ ನಮ್ಮನ್ನು ಬಂದು ಸೇರುವಾಗ ನಡುರಾತ್ರಿ ಗಂಟೆ ಒಂದು.

ಸುಮಾರು ಏಳು ದಶಕಕ್ಕೊಮ್ಮೆ ನೋಡಸಿಗುವ ಬಾನ ಬಯಲಾಟದ ಅದ್ಭುತ ವೇಷ - ಹ್ಯಾಲೀ ಧೂಮಕೇತು. ಅದು ಬರುತ್ತಿದೆ, ಬರುತ್ತಿದೆ ಎಂಬ ಸೊಲ್ಲು ಏರುತ್ತಿದ್ದಾಗಲೇ ಸಾಲಿಗ್ರಾಮದ ಗೆಳೆಯ ವೆಂಕಟ್ರಮಣ ಉಪಾಧ್ಯರು - ಅದೇ ಕೊಡಚಾದ್ರಿಗೆ ಸೈಕಲ್ ಒಯ್ದ ಚಿಕ್ಕುಪಾಧ್ಯರು, “ನನಗೆ ಸಿಕ್ಕಿತು” ಎಂದು ಘೋಷಿಸಿದ್ದರು! ಆತ ಬಲು ಹಿಂದಿನಿಂದ ವಾರಗಟ್ಟಳೆ ಕೈಯಾರೆ ಗಾಜು ಮಸೆದು, ಪಾದರಸ ‘ತೊಡೆದು’ ನಿಮ್ನ ಮಸೂರ ರೂಪಿಸಿ, ವಿವಿಧ ಗಾತ್ರದ ಪಿವಿಸಿ ಕೊಳವೆಗಳಲ್ಲಿ ಕರಾರುವಾಕ್ಕಾಗಿ ಕೂರಿಸಿ, ಬಲು ಶಕ್ತ ಒಕ್ಕಣ್ಣ ದುರ್ಬೀನ್ ಮಾಡಿಕೊಂಡಿದ್ದರು. ಅದನ್ನು ಮುಗ್ಗಾಲಿಗೆ (ಟ್ರೈಪಾಡ್) ಬಿಗಿದು, ಗಗನಕಾಯದ ಮೇಲೆ ಕೀಲಿಸಿ ಛಾಯಾಚಿತ್ರ ಗ್ರಹಿಸುವವರೆಗೆ ಸ್ವಯಂಬ್ರಹ್ಮನಾಗಿ ಮೆರೆದಿದ್ದರು. ಮತ್ತೆ ತೀರಾ ಆಸಕ್ತರಿಗೆ (ಘನತೆವೆತ್ತ ವೇದಿಕೆ, ರಂಗುರಂಗಿನ ಪ್ರಚಾರಗಳಿಂದ ಈತ ಬಲುದೂರ) ತೋರಿಸಿ, ಸ್ವಾರಸ್ಯಕರವಾಗಿ ಪಾಠಮಾಡುವಲ್ಲೂ ಅದಮ್ಯ ಉತ್ಸಾಹಿ. ತಾನು ಹ್ಯಾಲೀ ಕಂಡದ್ದರ ವೈಜ್ಞಾನಿಕ ವರದಿಯನ್ನು ಛಾಯಾಚಿತ್ರ ಸಾಕ್ಷಿಯೊಡನೆ ಮುಂಬೈಯ ಸೂಕ್ತ ಇಲಾಖೆಗೆ ಮುಟ್ಟಿಸಿ ಉಪಾಧ್ಯರು ತಣ್ಣಗೆ ಕುಳಿತಿದ್ದರು. ಆದರೆ ಗೆಳೆಯರೂ ಸಮಾನ-ಮನಸ್ಕರೂ ಆದ ನಾವು ಅಪರಾತ್ರಿಯಲ್ಲೇ ಊರಿಗೆ ಬರುತ್ತಿದ್ದಾರೆಂದು ಉರಾಳರಿಂದ ತಿಳಿದಾಗ ಅವರಿಗೆ ಸುಮ್ಮನಿರಲಾಗಲಿಲ್ಲ. ಆದಿತ್ಯವಾರ ಬೆಳಿಗ್ಗೆ ನಾಲ್ಕು ಗಂಟೆಗೂ ಮೊದಲೇ ಎದ್ದು ಸಲಕರಣೆಗಳನ್ನೆಲ್ಲ ತನ್ನ ಮೊಪೆಡ್ಡಿಗೇರಿಸಿ ಉರಾಳರ ಮನೆಯಲ್ಲಿ ಹಾಜರಾಗಿದ್ದರು. “ಇವತ್ತ್ ಒಂದು ಗಂಟಿ ನಿದ್ದೆ ಕೆಟ್ಟ್ರ್ ಅಡ್ಡಿಲ್ಲ. ಹ್ಯಾಲೀ ಬಪ್ಪ ಸರ್ತಿ ಕಾಣ್ಕಾದ್ರೆ ಎಪ್ಪತ್ತೈದ್ ವರ್ಷ ಕಾಯ್ಕ್ ಗೊತ್ತಾ”ಂತ ಎಲ್ಲರನ್ನೂ ಎಬ್ಬಿಸಿಬಿಟ್ಟರು. ಮನೆಯ ದೀಪದ ಆವರಣದಿಂದ ದೂರ ಮುಕ್ಕಾಲಿ ಬಿಡಿಸಿ, ಮೇಲೆ ಒಂದೂವರೆ ಮೀಟರ್ ಉದ್ದದ ತಮ್ಮ ದುರ್ಬೀನು ಅಳವಡಿಸಿ, ಹ್ಯಾಲೀ ಅನುಸಂಧಾನ ಮಾಡಿ ಕೊಟ್ಟರು. ನಮ್ಮ ನಿದ್ರೆಯ ಕೊರತೆ, ಉಷಃಕಾಲದ ಮಂಜಿನ ಮುಸುಕು ಮತ್ತು ಮುಂದಿನ ದಾರಿಯ ಚಿಂತೆ ಮುಪ್ಪುರಿಗೊಂಡದ್ದು ಸಾಲದೆಂಬಂತೆ ಈ ಮಿತ್ರ-ಬಾಧೆ! ಉಪಾಧ್ಯ “ಕಂಡ್ತಾ”ಂದ್ರೂ ಹೌದು, “ಇಲ್ವಾ”ಂದ್ರೂ ಹೌದು ಎನ್ನುವ ಸ್ಥಿತಿ ನಮ್ಮದು. ಕುರುಡರು ಆನೆ ಕಂಡ ಹಾಗೆ ಏನೇನೋ ಬಡಬಡಿಸಿರಬೇಕು. ಸಂಶಯ ಬಂದು ಅವರೇ ಮತ್ತೊಮ್ಮೆ ಇಣುಕಿ “ಛೆ, ನೀವು ಕಂಡದ್ ಎಂಥ? ಅದ್ ಹ್ಯಾಲೀ ಅಲ್ಲಾ ಮಾರ್ರೇ, ಹುಳಕುಟ್ಟೆ ಎಡೇಲಿ ಮಿನ್ಗುವ ಬೀದಿ ದೀಪಲ್ದಾ” ಎಂದು ಅವರೇ ನಮಗೆ ವಂದನಾರ್ಪಣೆ ಮಾಡಿ ಮುಗಿಸಿದರು.

ಉರಾಳರ ಮನೆಯವರು ರಾತ್ರಿ ಹನ್ನೊಂದರವರೆಗೂ ಸಹಜವಾಗಿ ನಮ್ಮ ದಾರಿ ಕಾದರು. ಅನಂತರ ಕಂತಿನಲ್ಲಿ ಬಂದ ನಮ್ಮನ್ನು ಸುಧಾರಿಸಿ ನಿದ್ದೆಗೆಟ್ಟರು. ನಾನು ವಾರ ಮೊದಲೇ ಉರಾಳರಿಗೆ ಸ್ಪಷ್ಟ ಎರಡು ಮುನ್ಸೂಚನೆ ಕೊಟ್ಟಿದ್ದೆ: ನಾವು ಕೇವಲ ಮಲಗುವ ಸೌಕರ್ಯಕ್ಕೆ ಮಾತ್ರ ನಿಮ್ಮನೆ ಆಶ್ರಯಿಸುತ್ತೇವೆ. ಮತ್ತು ಮರು ಬೆಳಗ್ಗೆ ಉಪಾಹಾರಕ್ಕೆ ನಿಲ್ಲದೆ ಬೇಗನೆ ಮುಂದುವರಿಯುತ್ತೇವೆ. ಮನೆಯವರ ಕಷ್ಟವನ್ನು ಸರ್ವಥಾ ಹೆಚ್ಚಿಸುವುದಿಲ್ಲ. ಎಲ್ಲೋ ಮುಂದಿನೂರಿನ ಹೋಟೆಲಿನ ಸುಟ್ಟ ‘ದೋಷ’ವನ್ನೋ ಪಿಚಕಿಡ್ಲಿಯನ್ನೋ ಕಸಂಟಿದ ಚಟ್ನಿ ಮತ್ತು ಹಳಸಲು ಸಾಂಬಾರಿನೊಡನೆ ಮೋಕ್ಷ ಕಾಣಿಸಿ, ಅವಕ್ಕೂ ಹಿರಿದಾಗಿ ಸಂಭವಿಸುವ ‘ಖರ್ಚುಪಟ್ಟಿ’ಯಲ್ಲಿ ನಮ್ಮೆಲ್ಲ ಹಸಿವನ್ನು ಹಿಂಗಿಸಿಕೊಳ್ಳುತ್ತೇವೆ ಎಂದೇ ಸ್ಪಷ್ಟಪಡಿಸಿದ್ದೆ. ಆದರೆ ನಮ್ಮ ಯಾವ ಸವಿನಯ ಬೆದರಿಕೆಗಳಿಗೂ ಜಗ್ಗದೆ ಅವರ ಹೆಂಡತಿ ಮತ್ತು ಅತ್ತಿಗೆ ನಮ್ಮ ಸಮಯಕ್ಕೇ ಮೂರು ತಿನ್ನುವವಗೆ ಆರು ಹೇರುವಂತೆ ಬಿಸಿ ರೊಟ್ಟಿ, ಕಾಯಿಗೊಜ್ಜು, ತುಪ್ಪ ಜೇನು, ಸೇರಳತೆಯ ಲೋಟದಲ್ಲಿ ಕಾಫಿ ಕೊಟ್ಟು ಅತಿಥಿ ಸತ್ಕಾರ ಸಾಂಗವಾಗಿಯೇ (ನಮಗೆ ಅಪ್ಯಾಯಮಾನವಾಗಿಯೇ) ನಡೆಸಿಯೇಬಿಟ್ಟರು. ನಮ್ಮಲ್ಲಿ ನಾಚಿಕೆ, ಮರ್ಯಾದೆ, ದಾಕ್ಷಿಣ್ಯ ಮುಂತಾದ ಶಬ್ದಗಳೆಲ್ಲ ಅರ್ಥ ಕಳೆದುಕೊಂಡವು.

ಏತನ್ಮಧ್ಯೆ ಉಪಾಧ್ಯರು ಅರವಿಂದನ ಬೈಕಿನ ಕೊರತೆ ಅರಿತು, ಮೂರ್ನಾಲ್ಕು ಕಿಮೀ ದೂರದ ತಮ್ಮೂರಿಗೆ ಮರಳಿ, ಅಕಾಲದಲ್ಲಿ ತಮ್ಮ ಸಕಲಸರಂಜಾಮುಗಳ ಮಳಿಗೆ ಶೋಧಿಸಿ, ಯುಕ್ತ ವಾಶರ್ ಸಂಪಾದಿಸಿ ತಂದಿದ್ದರು. ಅದನ್ನು ಅಳವಡಿಸಿದ ಮೇಲೆ ನಮ್ಮ ನಿಶ್ಚಿಂತ ಓಟಕ್ಕೆ ಶುಭ ನಾಂದಿಯೇನೋ ಸಿಕ್ಕಿತು. ಆದರೆ ಅದು ಮುಂದಿನೂರಿನಲ್ಲಿ, ಅಂದರೆ ಸುಮಾರು ಹತ್ತು ಕಿಮೀ ಅಂತರದ ಕುಂದಾಪುರದಲ್ಲಿ ಬೆಂಬಲ ಸಿಗದೇ ಸೊರಗಿತು. ಮೊದಲನೆಯದಾಗಿ ಅದು ಬಹುತೇಕ ವೃತ್ತಿಪರರಿಗೆ ರಜಾದಿನ -ಆದಿತ್ಯವಾರ. ಅಲ್ಲದಿದ್ದರೂ ಅದುವರೆಗೆ ಎಂದೂ ಬಾರದ ನಮಗಾಗಿ ಅಂಗಡಿಯವರು ಎಂಟೊಂಬತ್ತು ಗಂಟೆಗೆ ಮುನ್ನವೇ ತೆರೆದು ಕೂರುವುದನ್ನು ನಿರೀಕ್ಷಿಸುವುದೂ ತಪ್ಪೇ ಆಗುತ್ತಿತ್ತು. ಅನಿವಾರ್ಯವಾಗಿ ಟಯರು ಟ್ಯೂಬ್ ಖರೀದಿ, ಹಾಳಾದದ್ದರ ರಿಪೇರಿಗಳಿಗಷ್ಟು ಸಮಯ ಕಳೆದಾಗುವಾಗ ನಾವು ರಾತ್ರಿಯೇ ಮಂಗಳೂರು ಬಿಟ್ಟ ‘ಬುದ್ಧಿವಂತಿಕೆ’ ಪೂರ್ತಿ ನೆಲಕಚ್ಚಿತ್ತು; ಗಂಟೆ ಒಂಬತ್ತು.

ನಾನು ಎಂದಿನಂತೆ ವಾರ ಮೊದಲೇ ನಮ್ಮ ಯೋಜನೆಯನ್ನು ಪೂರ್ತಿ ಕಾಗದದ ಮೇಲೆ ನಕ್ಷಾರೂಪವಾಗಿ ಮೂಡಿಸಿದ್ದೆ, ಮಿತ್ರರೊಡನೆ ಚರ್ಚಿಸಿಯೂ ಇದ್ದೆ. ಕೆಲವು ಆಸಕ್ತರು ನನ್ನ ನಕ್ಷೆಯ ಛಾಯಾ ನಕಲನ್ನೂ ಮಾಡಿಸಿಕೊಂಡು ತಮ್ಮ ಚೀಲಗಳ ಬೆಚ್ಚನೇ ತಳದಲ್ಲಿ ಕಾಯ್ದಿರಿಸಿಕೊಂಡಿದ್ದರು. ಕುಂದಾಪುರ ಬಿಡುವ ಮುನ್ನ, (ನಾನು ಮುಂದಾಗಿ ತಿಳಿದು, ನಕ್ಷೆಯಲ್ಲೂ ದಾಖಲಿಸಿದ್ದಂತೆ) ನಮ್ಮ ಮುಂದಿನ ದಾರಿಯಲ್ಲೆಲ್ಲೂ ಅಧಿಕೃತವಾಗಿ ಪೆಟ್ರೊಲ್ ವಿತರಣೆ ಇಲ್ಲವೆನ್ನುವುದನ್ನು ಎಚ್ಚರಿಸಿದೆ. ಸಹಜವಾಗಿ ‘ಕೊನೆ’ಯ ಬಂಕಿನೆದುರು ಒಬ್ಬೊಬ್ಬರೇ ಬೈಕುಗಳ ದಾಹ ಹಿಂಗಿಸಲು ನಿಂತೆವು. ಸರದಿಯಲ್ಲಿ ಮೊದಲಾಗಿ ಮುಗಿಸಿಕೊಂಡವರು ನಿಧಾನಕ್ಕೆ ಮುಂದುವರಿದಿದ್ದರು. ಯೋಜನೆಯ ನಕ್ಷೆ ಚೀಲದ ತಳದಲ್ಲಿತ್ತು, ವಿವರಗಳ ಚರ್ಚೆ ಮರೆತೇ ಹೋಗಿತ್ತು. ಕುಂದಾಪುರದಿಂದ ನಾಲ್ಕು ಕಿಮೀ ಮುಂದೆ - ತಲ್ಲೂರಿನಲ್ಲಿ ಹೆದ್ದಾರಿ ಬಿಟ್ಟು ಬಲದ ದಾರಿ ಹಿಡಿಯಬೇಕಿತ್ತು. ಆದರೆ ಇವರು ಹೆದ್ದಾರಿಯ ಮಝಾ, ಮುಂಜಾವಿನ ಮೋಜು ಅನುಭವಿಸುತ್ತ, ಕಪ್ಪಡಿ ಕಟ್ಟಿದ ಕುದುರೆಗಳಂತೆ (ಕತ್ತೆ?) ನೇರ ಓಡಿದ್ದರು. ಕೊನೆಯಲ್ಲಿ ಬಂದ ನನ್ನ ಮತ್ತು ಗಣೇಶ್ ಬೈಕ್ ತಲ್ಲೂರಿನಲ್ಲಿ ‘ಮತ್ತೆ ಕಿಲೋ ಕಲ್ಲು ಪೂಜೆ’ಗೆ ಪ್ರಾರ್ಥನೆ ಸಲ್ಲಿಸುವುದಷ್ಟೇ ಉಳಿಯಿತು: “ಮುಂದೋಡಿದವರಿಗೆ (ನಾಲ್ಕು ಬೈಕುಗಳು) ಬೇಗನೆ ಸದ್ಬುದ್ಧಿ ಬರಲಿ. ಮತ್ತಲ್ಲೇ ನಿಲ್ಲದೆ ನಮ್ಮಲ್ಲಿಗೆ ಮರಳುವಂತಾಗಲಿ.” ಆದರೆ ಮರಗುಳಿ ಮಹಾಶಯರೋ ಸುಮಾರು ಹತ್ತು ಕಿಮೀ ಕಳೆದು ಮರವಂತೆ ಮುಟ್ಟುವಲ್ಲಿಯವರೆಗೂ ಯೋಚಿಸಲೇ ಇಲ್ಲ. ಅಲ್ಲಿ “ಹೋ ಮರವಂತೇ! ಇದು ಅಶೋಕರ ನಕ್ಷೆಯಲ್ಲಿಲ್ಲ” ಎಂದು ಹೆಲ್ಮೇಟ್ (hell-mates?) ಎಡೆಯಲ್ಲಿ ತಲೆ ತುರಿಸುತ್ತಾ ಮರಳುವಾಗ ಮತ್ತೆ ಮುಕ್ಕಾಲು ಗಂಟೆ ವ್ಯರ್ಥವಾಗಿತ್ತು.

ತಲ್ಲೂರು ಕವಲು ಕಳೆದ ಮೇಲೆ ಸುಮಾರು ಮೂರು-ನಾಲ್ಕು ಕಿಮೀಯಲ್ಲಿ ಇನ್ನೊಂದು ಕವಲುತಾಣ - ನೇರಳಕಟ್ಟೆ; ಬಲದ ಕವಲು ಹೆಬ್ರಿಗಾದರೆ ನಮ್ಮದು ಎಡ - ವಂಡ್ಸೆ, ಜಡ್ಕಲ್, ಕೊಲ್ಲೂರು. ಈ ಪ್ರಕೃತಿ ಸಂಬಂಧಿ ಸ್ಥಳನಾಮಗಳ (ಮಾವಿನ ಕಟ್ಟೆ, ಧೂಪದ ಕಟ್ಟೆ, ಅರಳೀ ಕಟ್ಟೆ ಇತ್ಯಾದಿ) ಕುರಿತು ಇಲ್ಲೊಂದು ಉಪಕಥೆ ನಾನು ಹೇಳಲೇಬೇಕು. ಅನಂತರದ ದಿನಗಳಲ್ಲಿ ಈ ವಲಯಗಳಲ್ಲಿ ನಾನು ಹಲವು ಬಾರಿ ಸುತ್ತಾಡಿದ್ದೇನೆ. ಆದರೆ ಈ ನೇರಳ ಕಟ್ಟೆ ದಾಟಿದಾಗೆಲ್ಲಾ ನನಗೆ ೧೯೭೪-೭೫ರ ಬಿಸಿಲ ದಿನಗಳ ಆ ಒಂದು ದಿನದ ನೆನಪು ಅಣಕಿಸುತ್ತಲೇ ಇರುತ್ತದೆ. ಆಗ ನಾನು ಪುತ್ತೂರಿನ ಅಜ್ಜನ ಮನೆಯಲ್ಲಿ ಉಳಿದುಕೊಂಡು, ಮಂಗಳೂರಿನಲ್ಲಿ ಪುಸ್ತಕ ಮಳಿಗೆ ಹಾಕುವುದು ಮತ್ತು ಜಿಲ್ಲೆಯೊಳಗೆ ನನ್ನ ವ್ಯಾಪಾರೀ ಸಂಬಂಧಗಳನ್ನು ಕುದುರಿಸುವುದರಲ್ಲಿ ನಿರತನಾಗಿದ್ದೆ. ಅದು ನನ್ನ ಯಕ್ಷಗಾನದ ಹುಚ್ಚು ತಲೆಗೇರಿದ್ದ ಕಾಲವೂ ಹೌದು! ಅದರಲ್ಲೂ ಶಂಭುಹೆಗಡೆಯವರ ಇಡಗುಂಜಿ ಮೇಳ ಎಲ್ಲಿ ಹತ್ತಿರದಲ್ಲಿದ್ದರೂ ಎಲ್ಲ ಬಿಟ್ಟು ನೋಡಬೇಕೆಂಬ ತವಕ. ಪ್ರತಿ ದಿನ ಉದಯವಾಣಿ ಸಿಕ್ಕ ಕೂಡಲೇ ಮೊದಲ ನೋಟ ಹಿಂದಿನ ಪುಟದ ಎಡ ಉದ್ದ ಕಾಲಂ - ಅಂದಿನ ಯಕ್ಷಗಾನ ಮೇಳಗಳ ಠಿಕಾಣಿ ಮತ್ತು ಪ್ರಸಂಗ ತಿಳಿಯುವ ಕುತೂಹಲ. ಅದೊಂದು ದಿನ ನಾನು ಉಡುಪಿ, ಕುಂದಾಪುರಗಳ ಕಾಲೇಜು ಭೇಟಿ ನಿಗದಿಸಿಕೊಂಡಿದ್ದೆ. ಅಂದಿನ ಪತ್ರಿಕೆ ನೋಡಿದವನು, ಬೆಳಿಗ್ಗೆ ಮೊದಲ ಬಸ್ಸಿಗೇ ಪುತ್ತೂರು ಬಿಟ್ಟೆ. ಎಂದಿನಂತಲ್ಲದೆ ಮಿಂಚಿನ ಕಾರ್ಯಾಚರಣೆ ನಡೆಸಿ ಸಂಜೆ ತಡವಾದರೂ ಪುತ್ತೂರಿಗೆ ಮರಳಿದೆ. ಆದರೆ ವಿರಮಿಸಲು ಪುರುಸೊತ್ತಿಲ್ಲ; ಅವಸರದ ಊಟ ಮಾಡಿ, ಸಿಕ್ಕಿದ ಲಾರಿ ಹಿಡಿದು ಧಾವಿಸಿದ್ದು ನೇರಳಕಟ್ಟೆಗೆ; ಪುತ್ತೂರು-ಮಂಗಳೂರು ದಾರಿಯಲ್ಲಿ ಸುಮಾರು ಏಳೆಂಟು ಕಿಮೀ ದೂರದ ನಾಲ್ಕು ಮುರುಕು ಅಂಗಡಿ-ವಸತಿಗಳ ಹಳ್ಳಿಮೂಲೆ! ಗಂಟೆ ಎಂಟೂವರೆ ಒಂಬತ್ತಿರಬಹುದು. ನೇರಳಕಟ್ಟೆ ಮಿಣುಕು ದಾರಿದೀಪಗಳ ಕೃಪೆಯಲ್ಲಿ ತೂಕಡಿಸಿತ್ತು. ಉದಯವಾಣಿಯ ಜಾಹೀರಾತು ನಂಬಿ ಬಂದ ನನಗೆ ಅಲ್ಲಿ ಇಡಗುಂಜಿ ಮೇಳದ ಇರವಿನ ಯಾವ ಕುರುಹೂ ಕಾಣಿಸಲಿಲ್ಲ. ಒಂದೆರಡು ಕಡೆ ಕೆದಕಿ, ಬಿಡಿಸಿ ಕೇಳಿದ ಮೇಲೆ ತಿಳಿಯಿತು - ಅಲ್ಲಿ ಆಸುಪಾಸಿನಲ್ಲಿ ಎಲ್ಲೂ ಯಾವುದೇ ಆಟವಿಲ್ಲ. ಆದರೆ (ಅವಿಭಜಿತ ದಕ) ಜಿಲ್ಲೆಯೊಳಗೆ ನೇರಳ ಕಟ್ಟೆ ಪುತ್ತೂರಿನದ್ದೊಂದೇ ಅಲ್ಲ!

ತಲ್ಲೂರಿನಿಂದ ಮುಂದೆ ನಾನು ಶಿಸ್ತು ತಪ್ಪಿದ ಬಾಲರನ್ನು ಆಳುವ ಶಾಲಾ ಮಾಸ್ತರನಂತೆ ಎಲ್ಲರಿಗೂ ನನ್ನ ಹಿಂದೆ ಸಾಲು ಹಿಡಿಯುವ ಆದೇಶ ಕೊಟ್ಟಿದ್ದೆ. ಮತ್ತೆ ಯಾರೂ ತಂಡ ತಪ್ಪಿದ ಪುಂಡರಾಗಲಿಲ್ಲ.

ಮಂಗಳೂರು - ಕಾರವಾರಕ್ಕೋಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲ್ಲೂರು ಕಳೆದ ಮೇಲೂ ಮುಂದುವರಿದರೆ, ಬೈಂದೂರಿನಲ್ಲಿ ಸಿಗುವ ಬಲಗವಲೂ ಕೊಲ್ಲೂರಿಗೇ. ಅದು ಕೊಲ್ಲೂರಿಗೆ ಕಿರಿದಂತರದಲ್ಲಿ ನಾವು ಹಿಡಿದ ನೇರಳಕಟ್ಟೆ - ವಂಡ್ಸೆ ದಾರಿಯನ್ನು ಸೇರಿಯೇ ಮುಂದುವರಿಯುತ್ತದೆ. ಆದರೆ ನಮ್ಮ ದಾರಿಯಲ್ಲೇ ಆ ಸಂಧಿ ಸ್ಥಳಕ್ಕೂ ತುಸು ಮೊದಲೇ ಸಿಗುವ ಒಂದು ನಿರ್ಜನ, ಹೇಳಿಕೊಳ್ಳಲು ಯಾವ ವಿಶಿಷ್ಟ ಭೂ ಕುರುಹುಗಳಿಲ್ಲದ ಸ್ಥಳ ಜಡ್ಕಲ್. ಅಲ್ಲಿ ಬಲಕ್ಕೆ ಅರಿಶಿನ,  ಕುಂಕುಮಗಳ ಹುಡಿಯೇ ಹಾಸಿದಂತೊಂದು ಮಣ್ಣ ದಾರಿ, ನೇರ ಘಟ್ಟದತ್ತಲೇ ಸಾಗುತ್ತದೆ. ನಾವು ಎಚ್ಚರದಲ್ಲಿ ಅದನ್ನು ಅನುಸರಿಸಿದೆವು. ಅಲ್ಲಿ ಬಸ್ಸು ಸೇವೆಯೂ ಇದ್ದದ್ದಕ್ಕೋ ಏನೋ ಮಳೆಗಾಲದಲ್ಲಿ ರಾಡಿ-ರಸ್ತೆ ಗಟ್ಟಿ ಮಾಡಲು ಕೂರಿಸಿದ ಕಲ್ಲುಗಳು ಈಗ ಸ್ವತಂತ್ರವಾಗಿ ಪಿತೂರಿ ಮಾಡುವಂತೆ ಉರುಳುತ್ತಲೂ ನಮ್ಮ ಓಟವನ್ನೇ ಧಿಕ್ಕರಿಸಲು ಭೂಮಿ ಎಬ್ಬಿಸಿದ ಮೊಳಕೆಯಂತೆಯೂ ಕಾಡಿದವು. ಅವುಗಳೆಡೆಯಲ್ಲಿ ತುಂಬಿ ಏಕತೆಯನ್ನು ಸಾಧಿಸಬೇಕಿದ್ದ ಮಣ್ಣೋ ನುಣ್ಣನೆಯ ರಂಗಿನ ಹುಡಿಯೇ ಆಗಿ ಸರ್ವವ್ಯಾಪಿಯಾಗಿತ್ತು. ‘ಹಸುರಿದ್ದ ಗಿಡ ಮರ, ಬೆಳ್ಳಗಿದ್ದ ಮೈಲಿಕಲ್ಲು, ನೀಲಕ್ಕಿದ್ದ ಆಕಾಶ ಕೆಂಪಾದವೋ ಎಲ್ಲ ಕೆಂಪಾದವೋ’ ಎಂದು ಹಾಡಿಕೊಳ್ಳುವ ಸ್ಥಿತಿ. ಕಲ್ಲು ಕಲ್ಲಿಗೆ ಹೆಟ್ಟಾಡುತ್ತ, ಜಾರಿ ಅತ್ತಿತ್ತ ತೂರಾಡುತ್ತ ನಮ್ಮ ಬೈಕ್ ಓಡಿಸುವ ಪರಿ ಮೇಲೆ ಹೇಳಿದ ಗಾನದಷ್ಟೇ ಅಸಂಗತ ನಾಟ್ಯವಾಗಿತ್ತು! ಕಳೆದುಹೋದ ಕಾಲವನ್ನು ಗಳಿಸುವ ಅವಸರದಲ್ಲಿ ನಾವು ದೃಷ್ಟಿಯನ್ನು ಪೂರ್ತಿ ಎದುರು ಚಕ್ರದ ನೇರಕ್ಕೆ ಕೀಲಿಸಿ, ಆವರಿಸಿದ ಮಹಾ ಕಾಡನ್ನೂ ವಿರಳ ಕೃಷಿ - ಜನವಸತಿಗಳನ್ನೂ ಅನುಭವಿಸಲಾಗಲೇ ಇಲ್ಲ. ಬೈಕ್‌ಗಳು ಪರಸ್ಪರ ಕಣ್ಣಳವಿ ಮೀರದಷ್ಟು ಅಂತರವುಳಿಸಿಕೊಂಡು, ದೂಳು ತಿನ್ನುವ ಯೋಗ ಕಡಿಮೆ ಮಾಡಿಕೊಂಡೆವು. ಆದರೆ ಅಂತರ ಹೆಚ್ಚಿ, ಕಾಡೊಳಗೆ ಬರುವ ಅನಾಮಧೇಯ ಕವಲು ದಾರಿಗಳಲ್ಲಿ ಮತ್ತೆ ಹಂಚಿಹೋಗದ ಎಚ್ಚರವನ್ನೂ ಉಳಿಸಿಕೊಂಡೆವು. ಹೀಗೆ ಸುಮಾರು ಒಂಬತ್ತು ಕಿಮೀ ಸಾಗಿದಲ್ಲಿಗೆ ಬಸ್ಸು ಸಂಪರ್ಕದ ಕೊನೆಯ ತಾಣ - ಮೂದೂರಿ, ತಲಪಿದ್ದೆವು. ಅಂದಾಜುಗಳು ತುಸು ಎಡವಟ್ಟಾಗಿ, ನಮ್ಮ ಲಕ್ಷ್ಯವಾದ - ಬೆಳ್ಳಿಬರೆ ಅಥವಾ ಬೆಳ್ಕಲ್ ತೀರ್ಥಕ್ಕೆ ಮತ್ತೂ ಸುಮಾರು ಐದು ಕಿಮೀ ಮುಂದುವರಿಯುವುದಿತ್ತು.

ಎರಡನೇ ಹಂತದ್ದು ಬಹುತೇಕ ಗಾಡಿ ದಾರಿ  (ಪಟ್ಟೆ ಚಕ್ರದ್ದು, ಟಯರಿನದ್ದಲ್ಲ), ಅಪರೂಪಕ್ಕೆ ಲಾರಿಗಳು ಓಡಾಡಿದ್ದೂ ಇರಬಹುದು ಅಷ್ಟೆ. ಸಹಜವಾಗಿ ಇಲ್ಲಿ ಪ್ರಕೃತಿಯೇನೋ ತನ್ನ ತಾಜಾತನವನ್ನು ಉಳಿಸಿಕೊಂಡಿತ್ತು. ಆದರೆ ನಮ್ಮ ಓಟಕ್ಕೆ ಬೇರೆಯೇ ಸಮಸ್ಯೆ ಅಡರಿಕೊಂಡಿತು. ದಾರಿ ಎಂದರೆ ಆಚೀಚೆ ಎರಡು ಚರಂಡಿ, ನಡುವೆ ಎತ್ತರದ ದಿಬ್ಬ. ಆ ಚರಂಡಿಗಳಲ್ಲಿನ ಮಳೆಗಾಲದ ಮಡುಗಳು ಈಗ ಮರಳೋ ಹುಡಿಮಣ್ಣೋ ತುಂಬಿದ ತಗ್ಗುಗಳು, ಓಟದ ಸ್ಥಿರತೆ ತಪ್ಪಿಸುವ ಕರ್ಪುಗಳು. ಉದ್ದೇಶಪಡದೇ ರೂಪುಗೊಂಡಾ ಚರಂಡಿ ಬದುಗಳ ಎತ್ತರ ಮತ್ತು ಮುರಿಯದ ಏಣು ನಮ್ಮ ಓಟಕ್ಕೆ ಸುಲಭವಾಗಿ ಒಡ್ಡಿಕೊಳ್ಳುತ್ತಿರಲಿಲ್ಲ. ತಗ್ಗು ತಪ್ಪಿಸಲೋ ಸಮತೋಲನ ಹೊಂದಿಸಲೋ ಫಕ್ಕನೆ ನಡುವಣ ದಿಬ್ಬ ಬಳಸಲು ಹೊರಟರೆ ಪಲ್ಟಿ ಗ್ಯಾರಂಟಿ! ಅನಿವಾರ್ಯವಾದಲ್ಲಿ ನೆಲ ತುಳಿದು, ಕಾಲಿನ ಆಧಾರ ಕೊಟ್ಟು ದಿಬ್ಬ ಏರಿದರೂ ಹೆಚ್ಚಿನುದ್ದ ಸಾಧಿಸದಂತೆ ಹುಲ್ಲು, ಪೊದರು ಬೆಳೆದು ದಾರಿ ಕಟ್ಟುತ್ತಿತ್ತು. ಸರಿ ಸುಮಾರು ಇಂಥವನ್ನು ಉದ್ದೇಶಪೂರ್ವಕವಾಗಿಯೇ ಪಟ್ಟಣಗಳ ಮೈದಾನಗಳಲ್ಲಿ ರಚಿಸಿ ವಾಹನಗಳನ್ನು ಸ್ಪರ್ಧಾತ್ಮಕವಾಗಿ ಓಡಿಸುವುದು (ಮೋಟೋಕ್ರಾಸ್) ನಾನು ಕಂಡಿದ್ದೇನೆ. ಆಗೀಗ ಬೈಕ್ ನೆಲದಿಂದ ಪುಟಿದೇಳುವುದೂ ಹುಡಿಮಣ್ಣಲ್ಲಿ ಹೂತು ಓಲಾಡಿದರೂ ನೆಲಮೆಟ್ಟಿ ಮುಂದುವರಿಯುವುದಲ್ಲಿ ಆಟ; ನಮಗಿಲ್ಲಿ ಪ್ರಾಣ ಸಂಕಟ. ನಮ್ಮೀ ‘ಮೋಟೋಕ್ರಾಸಿನಲ್ಲಿ’ ಸವಾರಿ ಇಬ್ಬರದು ಮತ್ತೂ ಮುಖ್ಯವಾಗಿ ಸ್ಪರ್ಧಾತ್ಮಕವಲ್ಲದ್ದು ಎನ್ನುವುದನ್ನು ಮತ್ತೆ ಮತ್ತೆ ಮನವರಿಕೆ ಮಾಡಿಕೊಳ್ಳುತ್ತ, ಅವಸರಿಸದೆ ಸಾಗಿದ್ದರಿಂದ ಅವಘಡಗಳೇನೂ ಇಲ್ಲದೆ ಕೊನೆ ಮುಟ್ಟಿದೆವು. ಅದೊಂದು ರೈತಾಪಿ ಮನೆ. ಅಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಮೂಕಾಂಬಿಕಾ ಕಾಯ್ದಿರಿಸಿದ ಅರಣ್ಯದ (ಈಗ ಆ ಕಾಡು ಅದೇ ಹೆಸರಿನಲ್ಲಿ ವನಧಾಮದ ಪದೋನ್ನತಿ ಪಡೆದಿದೆ. ನಡನಡುವೆ ಕೆಲವು ಕೃಷಿಭೂಮಿಗಳಿವೆ.) ಆವರಣ ಸ್ವಲ್ಪ ಹರಿದಿತ್ತು. ಅನತಿ ದೂರದಲ್ಲೇ ಕೊಡಚಾದ್ರಿ ಶಿಖರದ ನೇರ ಪಾದ - ಬಿಳಿಕಲ್ಲ ಬರೆ - ಬೆಳ್ಳಿಬರೆ, ಕಾಣಿಸುತ್ತಿತ್ತು. ಅಲ್ಲಿನ ಒಕ್ಕಲು ಆ ಎಡೆಯಲ್ಲಿ ತುಸು ನೆಲ ಹಸನು ಮಾಡಿ ಗದ್ದೆ ತೋಟ ರೂಢಿಸಿದಂತಿತ್ತು.

ಬೈಕುಗಳಿಗಲ್ಲಿ ವಿರಾಮ ಹೇಳಿದೆವು. ಮನೆಯವರು ಕೊಟ್ಟ ನೀರಿನಲ್ಲಿ ಬೆವರು, ದೂಳು ಮತ್ತು ಆಯಾಸಗಳನ್ನು ಮೊದಲು ಕಳೆದುಕೊಂಡೆವು. ಮತ್ತೆ ಆವಶ್ಯಕ ಹೇರುಗಳನ್ನಷ್ಟೇ ನಮ್ಮ ಬೆನ್ನುಗಳಿಗೇರಿಸಿದೆವು, ಮನೆಯವರು ಕೊಟ್ಟ ಸೂಚನೆಯಂತೆ ಗದ್ದೆಯೇರಿಗುಂಟ ಬೆಳ್ಕಲ್ ತೀರ್ಥದತ್ತ ನಡೆದೆವು.

[ತೀರ್ಥ ಸ್ನಾನ ಹೇಗಾಯ್ತು? ಊಟಕ್ಕೇನು? ಕೊಡಚಾದ್ರಿ ಮುಡಿಗೇರಿದವೇ ಬೈಕ್ ಪಡೆ? ವನ್ಯರಾತ್ರಿಯ ಗಮ್ಮತ್ತೇನು? ಇತ್ಯಾದಿ ತಿಳಿಯಲು ಅಥವಾ ನಿಮಗಿಂತ ಉತ್ಸಾಹದಲ್ಲಿ ನನಗೆ ತಿಳಿಸಲು ಇನ್ನೊಂದು ವಾರ ಕಾಲಾವಕಾಶ ಕೊಡ್ತೀರಲ್ಲಾ? ಅಲ್ಲಿವರೆಗೆ ನಿಮ್ಮ ನುಡಿಸೇಸೆ ಮೇಲಿನ ಕಥನಕ್ಕೆ ತುಂಬಿ ಬರಲಿ ಎಂದು ಹಾರೈಸುತ್ತೇನೆ.]

(ಮುಂದುವರಿಯಲಿದೆ)

5 comments:

 1. ಹಿಂದಿನ ಸೀಟಿನ ಸಹವಾರ ಓದುಗನಾಗಿ ಜೊತೆಯಲ್ಲಿರುವೆ. ಜಯಂತರನ್ನು ನೋಡಿ ಎಷ್ಟೋ ವರ್ಷಗಳಾದವು. ಅವರ ಬಗ್ಗೆ ಓದಿ ಸಂತೋಷವಾಯಿತು.

  ReplyDelete
 2. ಅಶೋಕವರ್ಧನರೇ!
  ನಿಮ್ಮಲ್ಲಿ ಮಳೆಗಾಲ ಮುಗಿಯಿತೇ? ನಮ್ಮ ಬಾಳೆಹೊಳೆಯಲ್ಲಿ ಇನ್ನೂ ಮಳೆಬಿಟ್ಟಿಲ್ಲ.
  ಅಂದಹಾಗೆ, ತಾವು ಕೊಡಚಾದ್ರಿ ಕೊಳ್ಳದಲ್ಲಿ ಹಿರಿಯ ಬೇಟೆಗಾರರೊಬ್ಬರು ಕಂಡ ಸಂಕಪಾಳನನ್ನು ಕಂಡಿರೇ?
  - ಪೆಜತ್ತಾಯ ಎಸ್. ಎಮ್.

  ReplyDelete
  Replies
  1. ಅದೇ ತಾಳೆಮರದೆತ್ತರಕ್ಕೆ ನಿಲ್ಲುವ, ಫೂತ್ಕರಿಸುವಲ್ಲಿ ಚೀನಾದ ಡ್ರ್ಯಾಗನ್ನಿನ್ಗೆ ಕಡಿಮೆಯಿಲ್ಲದಂತೆ ವಿಷವನ್ನೇ ಉಗುಳುವ, ಬೆನ್ನಟ್ಟಿದರೆ ಗಗನಗಾಮಿಯಾಗಲು ಹೊರಟ ಜೆಟ್ ವಿಮಾನವನ್ನೇ ಸೋಲಿಸುವ ಸಂಕವಾಳ ಅಲ್ಲವೇ ಅವರು ಹೇಳಿದ್ದು - ಹೌದೌದು ನಾನು ಕಂಡಿದ್ದೇನೆ, ಭಯಂಕರ ಕನಸಿನಲ್ಲಿ, ವಾಸ್ತವವನ್ನು ತಿಳಿಯುವ ಧೈರ್ಯವಿಲ್ಲದವರ ಕಥನದಲ್ಲಿ, ಅಪಾರ ವಿಷಕಾರಿಯಾದರೂ ಅತ್ಯಂತ ನಾಚಿಕೆ ಸ್ವಭಾವದ ಕಾಳಿಂಗ ಸರ್ಪದ ಅವಹೇಳನದಲ್ಲಿ :-)

   Delete
 3. ಸುಮಾರು ೫ ದಿನಗಳ ಹಿಂದೆ ಓದಿದ ಚಕ್ರವರ್ತಿಗಳ ಕಥನಕ್ಕೆ ಮೌನವಾಗಿಯೇ ನನ್ನ
  ಅನಿಸಿಕೆಯನ್ನು ವ್ಯಕ್ತಪಡಿಸಲು ಸಂತೋಷವೆನಿಸುತ್ತದೆ. ಅಂಥ ಅನುಭವವನ್ನು ಮರಳಿ
  ನೆನಪಿಸಿದ, ಹಾಗೂ ಅಂಥ ಅನುಭವ ಪಡೆಯಲು ಅಂದು ಅನುವುಮಾಡಿಕೊಟ್ಟ ನಿಮ್ಮ ಬಗ್ಗೆ ವಿಶೇಷ
  ಗೌರವ ತಾಳುವುದೇ ಮುದನೀಡುವ ವಿಚಾರ. ಆ ದಿನಗಳ ಅನುಭವಗಳು ಇಂದಿಗೂ ಸ್ಪೂರ್ತಿಯನ್ನು
  ನೀಡಬಲ್ಲ ಸೆಲೆಗಳು ಎನ್ನುವುದು ಮರೆಯಬಾರದ, ಮರೆಯಲಾಗದ ಸತ್ವಗಳು.
  H JAYANTHA

  ReplyDelete
 4. ಅಲ್ಲೆಲ್ಲ ಸುತ್ತುವಷ್ಟು ಸಮಯವೋ ಸೌಕರ್ಯವೋ ಯಾವುದೂ ಇರದೆ ಆಸೆಗಳು ಹಾಗೆಯೇ ಉಳಿದವರಿಗೆ ಸುತ್ತಿದ ಅನುಭವವನ್ನಂತು ಸುತ್ತಿ ಸುತ್ತಿ ಕೊಟ್ಟಿದ್ದೀರಿ... ಜೊತೆಗಿರುವ ಚಿತ್ರಗಳು ಆ ಅನುಭವಕ್ಕೆ ಇಂಬುಕೊಡುತ್ತವೆ..

  ReplyDelete