23 August 2013

ಸಕ್ಕರೆಯೊಂದಿಗೊಂದಷ್ಟು ಅಕ್ಕರೆಯ ಸುತ್ತು

ಸಿನಿಮ ನಿರ್ದೇಶಕ ಪುತ್ರ, ನಟೀಮಣಿ ಸೊಸೆ ಪಡೆದ ನಮ್ಮ ಭಾಗ್ಯವನ್ನು ಕೊಂಡಾಡುವ ಬಹುತೇಕ ಮಂದಿಗೆ ಸಿನಿಮ ಎಂದರೆ ಗ್ಲಾಮರ್ ಮಾತ್ರ! ಅಂಥವರಿಗೆ ನನ್ನ ಶಿರೋಭೂಮಿಯಲ್ಲಿ ಸೋತು ಹಿಮ್ಮೆಟ್ಟುತ್ತ ದಿಕ್ಕೇಡಿಯಾದ ಕೇಶ ಶೃಂಗಾರ, ನೋಟಕರಲ್ಲಿ ಹಾಸ, ಹಾಸ್ಯ, ಭಯವನ್ನು ಏಕಕಾಲಕ್ಕೆ ಉದ್ದೀಪಿಸುವ ಪೊದರುಗಟ್ಟಿದ ಮೀಸೆ, ಒಮ್ಮೊಮ್ಮೆ ಕತ್ತು ಕೈಗಳ ಅಂಚಿನಲ್ಲಿ ನೂಲು ಕಿತ್ತ ದಗಳೆ ಜುಬ್ಬಾ, ಇಸ್ತ್ರಿಯಿಲ್ಲದ ಇಜಾರ ಕಂಡು ಅಪಾರ ಕನಿಕರ. (ಪುಣ್ಯಕ್ಕೆ ಯಾರೂ ಇದುವರೆಗೆ ನೇರ ನನ್ನಲ್ಲಿ ಕೇಳಿಲ್ಲ ಅಭಯ ಓಕೇ ನೀವು ಯಾಕೇ?”) ಯಾವುದೇ ಒಂದು ಮಾಮೂಲೀ ಮುಂಜಾನೆ ಅಭಯನ ಚರವಾಣಿ ಕರೆ ಬರಬಹುದು. “ಅಪ್ಪಾ ಈಗೊಂದು ಕತೆಯ ಹೊಳಹು ಮಿಂಚಂಚೆ ಕಳಿಸಿದ್ದೇನೆ. ನಿಮ್ಮಿಬ್ಬರ ಅಭಿಪ್ರಾಯ ಬೇಕು.” ನಾವೇನಾದರೂ ಹೇಳಲಿ, ಹೇಳದಿರಲಿ ಆತ ಮತ್ತೆಂದೋ ಹೀರೋಗೆಕತೆ ಹೇಳುತ್ತಾನೆ. ಎಲ್ಲೋ ಏನೋ ಕುದುರಿದರೆ, ನಿರ್ಮಾಪಕರೊಡನೆಚರ್ಚೆ ಮಾಡಿ,’ ಇತರ ಕಲಾವಿದ, ತಾಂತ್ರಿಕ ಬಳಗ, ಸ್ಥಳ, ಸಮಯ, ಕ್ರಿಯೆ ಎಲ್ಲವನ್ನೂ ನಿಶ್ಚಯವೋ ರಾಜಿಯೋ ಮಾಡಿಕೊಳ್ಳುತ್ತಾ ಹೋಗುತ್ತಾನೆ. ಹೀಗೆ ಬಸವನಹುಳಕ್ಕಿಂತಲೂ ನಿಧಾನವಾಗಿ ನಡೆಯುವ ಸಿನಿಮದಲ್ಲಿ ಸಾರ್ವಜನಿಕಕ್ಕೆ ಬೆಳ್ಳಿತೆರೆಯ ಮೇಲೆ ಸಿಗುವ ಪ್ರದರ್ಶನ ಒಂದೆರಡು ಗಂಟೆಯ ದೀರ್ಘ ಎಂದು ಕಂಡರೂ ವಾಸ್ತವದಲ್ಲಿ ಅದೊಂದು ಮಿಂಚು; ಕ್ಷಣಿಕ! ಈ ಸ್ಪಷ್ಟ ಅರಿವಿನೊಡನೆ ನಾವು ಅವರಿಬ್ಬರ ವೃತ್ತಿ ಕೌಶಲ್ಯದ ವಿಕಾಸವನ್ನಷ್ಟೇ ಪ್ರೀತಿಸುತ್ತೇವೆ; ಪ್ರಭಾವಳಿಯನ್ನಲ್ಲ. ಆಗ ಕಾಣುವ, ಕಾಡುವ ಚಿತ್ರಗಳೇ ಬೇರೆ.


ಅಪ್ಪಾ ಹಳೆಗಾಲದ ಹಂಚಿನ ಮನೆಯೊಂದು ಸ್ವಲ್ಪ ನೋಡಿ ಇಡ್ತೀರಾ?” ಅಭಯನ ಚರವಾಣಿಯುಲಿ. ಇದು ಬಾಡಿಗೆ ಮನೆ ಹುಡುಕಾಟದ ಕತೆಯಲ್ಲ. ಆತ ಹೊಸ ಚಿತ್ರ - ‘ಸಕ್ಕರೆ, ನಾಯಕ - ಗಣೇಶ್ಗೆ ಮಂಗಳೂರಿನ ಮಧ್ಯಮ ವರ್ಗದ ಮನೆ ಮತ್ತು ಅಂಥದ್ದೇ ವಠಾರ ತಗುಲಿಸುವ ಅಂದಾಜು ಹಾಕಿದ್ದ. ಗೆಳೆಯ ಮನೋಹರ ಉಪಾಧ್ಯರಿಗೆ (ಪಶುವೈದ್ಯ) ಮೊದಲು ಉಪದ್ರ ಕೊಟ್ಟೆ. ಅವರ ಶುಶ್ರೂಷೆ ಬಯಸುವವರು (ಜಾನುವಾರುಗಳು) ಸಾಮಾನ್ಯವಾಗಿ ಸಾಂಪ್ರದಾಯಿಕ ಮನೆಗಳ ಹಿತ್ತಲಲ್ಲೇ ಇರ್ತಾರೆ ಎಂಬ ಧೈರ್ಯ! ಮತ್ತೆ ಕ್ಯಾಮರಾ ಹಿಡಿದು, ಬೈಕೇರಿದೆ. ನಮ್ಮ ಹಿತ್ತಲಿನಿಂದಲೇ ತೊಡಗಿ ಕಂಬ್ಳ ಕ್ರಾಸ್ಗಳಲ್ಲಿ ಸುತ್ತಿ, ಕದ್ರಿ ಗಲ್ಲಿಗಳಲ್ಲಿ ಅಲೆದು, ಹಳೆವಾಸನೆಯಲ್ಲಿ ಕಲ್ಪಣೆ ರಸ್ತೆಯ ಕಡೆಂಗೋಡ್ಲು ಮನೆ, ‘ಹಾವಾಡಿಗಗೆಳೆಯ ಚಾರ್ಲ್ಸ್ ವಠಾರ ಜಾಲಾಡಿ, ಬಂಟರ ಹಾಸ್ಟೆಲ್ ಎದುರಿನ ಎರಡು ಹಾಳು ಸುರಿಯುವ ಮನೆಗಳವರೆಗೆ ಸುಮಾರು ಹದಿನೈದರ ಪಟ್ಟಿ ಮಾಡಿ ಸಜ್ಜಾದೆ.

ನಿರ್ಮಾಪಕ ಬಿ. ಸುರೇಶ್, ಸ್ಥಳ ಆಯ್ಕೆಗಾಗಿ ಅಭಯನನ್ನು ಮುಂದಿಟ್ಟುಕೊಂಡು ಬೆಂಗಳೂರು ಬಿಟ್ಟರು. ಸಿನೆಮಟಾಗ್ರಾಫರ್ (ಅಭಯನ ಸಹಪಾಠಿ ಗೆಳೆಯ) ವಿಕ್ರಮ್ ಶ್ರೀವಾಸ್ತವ್ ಮತ್ತು ಎರಡು ಸಹಾಯಕರೂ ಜತೆಗಿದ್ದರು. ಮಡಿಕೇರಿಯಲ್ಲೆರಡು ದಿನ ತಲಾಷಿ. ಮರು ಬೆಳಿಗ್ಗೆ ಮಂಗಳೂರು. ನಿರೀಕ್ಷಿತ ಪ್ರಶ್ನೆ ಪತ್ರಿಕೆ (ಕನ್ನಡದಲ್ಲಿ ಎಕ್ಸ್ಪೆಕ್ಟೆಡ್ ಕ್ವಶ್ಚನ್ ಪೇಪರ್ರೂ) ಇಟ್ಟುಕೊಂಡು ಪರೀಕ್ಷೆಗೆ ಸಜ್ಜಾದವನ ಸ್ಥಿತಿ ನನ್ನದು. ಪಾಸು-ಫೇಲೂ ಕೇಳಿದರೆ, ನಾನು ಡುಮ್ಕಿ. ಅವರಿಗೆ ಒಂದು ಮನೆ ಹಿಡಿಸಿತು; ಹದಿನೈದಕ್ಕೆ ಒಂದು ಅಂಕ! ಉಳಿದಂತೆ ಅವರದೇ ಅಳತೆಪಟ್ಟಿ ಹಿಡಿದು ಉಡುಪಿಯವರೆಗೂ ಧಾಂ ಧೂಂ ಮಾಡಲು ಹೊರಟರು, ನಾನು ಹೋಗಲಿಲ್ಲ. “ಸಂಜೆಯೊಳಗೆ ಹೇಗೂ ಮುಗ್ದೀತು. ಉಳಿದವರನ್ನು ಕಳಿಸಿ, ನಾನು ಮನೆಗೆ ಉಳಿಯುವಂತೆ ಬರುತ್ತೇನೆಎಂದಿದ್ದ ಅಭಯ. ಸಂಜೆ ಎಲ್ಲ ಬರುವುದೇನೋ ಬಂದರು, ಬರಿಯ ಕಾಫಿಗೆ. “ಬೆಂಗಳೂರು, ಮಡಿಕೇರಿಗಿರುವಂತೇ ಮಂಗಳೂರು ಪರಿಸರಕ್ಕೂ ಒಂದು ಭಿನ್ನ ಚಹರೆ ಇರಬೇಕಲ್ಲಾ ಅದು ಬೇಕುಎಂದಿತು ತಂಡ. “ಸಸ್ಯ ಸಮೃದ್ಧಿ, ಹವಾ ಸಾಮ್ಯತೆ ನೋಡಿದರೆ ಮಡಿಕೇರಿ ಮಂಗಳೂರು ವ್ಯತ್ಯಾಸ ಮಾಡುವುದು ಕಷ್ಟಾ. ನಮ್ಮ ಘಟ್ಟದ ಸೆರಗೇ ಬಿಟ್ಟು ಹೋದರಾದೀತುಎಂದೂ ಅವರೇ ಗೊಣಗಿಕೊಂಡರುಸಂಗೀತ ಶಾಲೆಯ ಬೋರ್ಡಿಗೊಂದು, ಡ್ರಂ ಗುದ್ದಲೊಂದು, ಗಾರ್ಡನ್ನಿಗೊಂದು ಬೇರೆ ಬೇರೇ ಮನೆಯಂತೆ. ಪ್ರೇಮ ನಿವೇದನೆಗೆ ಇನ್ನೆಲ್ಲೋ ಓಣಿ, ಗಿಟಾರ್ ಗಿಂಜಲು ಗಾರ್ಡನ್ನು, ಕರ್ನಾಟಕ ಸಂಗೀತದ ಸಪಸಕ್ಕೆ ಸಮುದ್ರದ ಸಪ್ಪಳ, ಹೊಡೆದಾಟಕ್ಕೆ ಮತ್ಯಾವುದೋ ಬಂದರ್ ಎಂದೇನೇನೇನೋ  ಹೊಂದಾಣಿಕೆಯ ಗೊಠಾಳೆಯಲ್ಲಿ ಅಭಯನೂ ಸೇರಿ ತಂಡ ರಾತ್ರಿಗೆ ಮಡಿಕೇರಿಗೇ ಮರಳಿಬಿಟ್ಟಿತು. ದಿನ ಎರಡು ಕಳೆಯುವುದರೊಳಗೆ, ತರಾತುರಿ ಮುಂದುವರಿದಂತೆಎರಡೇ ವಾರದಲ್ಲಿ ಚಿತ್ರೀಕರಣಎಂದೂ ತಿಳಿದು ಬಂತು.

ಅಭಯನ ಮೊದಲ ಕಥಾ ಚಿತ್ರ - ಗುಬ್ಬಚ್ಚಿಗಳು, ಕಡಿಮೆ ಬಂಡವಾಳದ್ದೆಂದೇ ತೊಡಗಿತ್ತು. ಮತ್ತೆ ಪರಿಸರ ಸಂದೇಶ ಪ್ರಧಾನವಾದ ಪ್ರಾಯೋಗಿಕ ಚಿತ್ರ ಎಂದೂ ಮಕ್ಕಳ ಚಿತ್ರ ಎಂದೂ ಬಿಂಬಿತವಾಗಿಮರ್ಯಾದಾವಲಯಗಳಲ್ಲೆ ನಡೆದುಹೋಯ್ತು. ಸಹಜವಾಗಿ ರಾಷ್ಠ್ರ ಪ್ರಶಸ್ತಿಯೇನೋ ಬಂತು. ಆದರೆ ಅಭಯನಿಗೆ ಸಿನಿಮಾ ರಂಗದ ಮುಖ್ಯವಾಹಿನಿಯಲ್ಲಿ ಈಜುವ ಬಯಕೆ ಬಾಕಿಯುಳಿಯಿತು. ನಿಜ ಅರ್ಥದಲ್ಲಿ ಸಾರ್ವಜನಿಕರನ್ನು ಥಿಯೇಟರಿಗೆ ಆಕರ್ಷಿಸುವ ಮಟ್ಟದಲ್ಲಿ ತನ್ನ ಚಿತ್ರವಿರಬೇಕೆಂದು ಅಭಯಶಿಕಾರಿಗೆ ಇಳಿದ. ಸ್ವಂತ ಕತೆ ಮತ್ತು ನಿರ್ದೇಶನದ ಯೋಗ್ಯತೆ ಏನಿದ್ದರೂ ಭಾರತೀಯ ಸಿನಿ-ಸಂಪ್ರದಾಯದಂತೆ ನಟ ಪ್ರಾಧಾನ್ಯವನ್ನಿವನು ಒಪ್ಪಿಕೊಂಡ. ಅದನ್ನನುಸರಿಸಿ ಹಣಹೂಡುವ ನಿರ್ಮಾಪಕರು ಮತ್ತು ಹಿಂದೆಗೆದು ಕೊಡುವ ವಿತರಕರ ಇತಿ, ಮಿತಿಗಳನ್ನೂ ಅಭಯ ನಿರಾಕರಿಸಲಿಲ್ಲ. ಇವನ ಪರಮಾಶ್ಚರ್ಯಕ್ಕೆ ಮಲಯಾಳ ಚಿತ್ರರಂಗದ ಸಾರ್ವಭೌಮ, ಇದುವರೆಗೆ ಕನ್ನಡದತ್ತ ಒಲವಿದ್ದರೂ ಮುಖ ಮಾಡಲಾಗದುಳಿದ ತ್ರಿಭಾಷಾ (ಮಲಯಾಳ, ತಮಿಳು ಮತ್ತು ತೆಲುಗು) ತಾರೆ - ಮಮ್ಮುಟ್ಟಿ ಒಲಿದರು. (ಇದರ ವಿವರಗಳನ್ನು ಅಭಯನ ಜಾಲತಾಣದಲ್ಲಿ ಅವನದೇ ನಿರೂಪಣೆಯಲ್ಲಿ ಓದಲು ಇಲ್ಲಿ ಚಿಟಿಕೆ ಹೊಡೆಯಬಹುದು) ಹಿಂಬಾಲಿಸಿದಂತೆ ನಿರ್ಮಾಪಕನಿಂದ (ಕೆ. ಮಂಜು) ತೊಡಗಿ ಎಲ್ಲ ಹೊಂದಿಕೆಗಳೊಡನೆ ಸಿನಿಮಾ ಮುಗಿದದ್ದೂ ಆಯ್ತು. ಏಕ ಕಾಲಕ್ಕೆ ಕನ್ನಡ ಹಾಗೂ ಮಲಯಾಳಗಳಲ್ಲಿ ಪ್ರತ್ಯೇಕವಾಗಿಯೇ ರೂಪುಗೊಂಡ ಕೃತಿಹಿಟ್ ದ ಸ್ಕ್ರೀನ್ಅಂತಾರಲ್ಲ ಹಾಗೆ ಬೆಳ್ಳಿ ತೆರೆಗೇನೋ ಹೆಟ್ಟಿತು! ಸುಮಾರು ಹದಿನೈದು ದಿನ ಮುಂಚಿತವಾಗಿಯೇ ಅದೇ ಚಿತ್ರದ ಮಲಯಾಳ ಆವೃತ್ತಿ ಕೇರಳದಲ್ಲೂ ಬಿಡುಗಡೆ ಕಂಡಿತ್ತು.

ಶಿಕಾರಿಯ ಕನ್ನಡ ಆವೃತ್ತಿ ಕರ್ನಾಟಕ ರಾಜ್ಯಾದ್ಯಂತ ಸುಮಾರು ಅರವತ್ತು ಥಿಯೇಟರ್ಗಳಲ್ಲಿ ಪ್ರದರ್ಶನಕ್ಕೆ ಬಂತು. ಖಾಸಾ ವಿಮರ್ಶೆಗಳು, ಪತ್ರಿಕಾ ವಿಮರ್ಶೆಗಳೂ ಹೀಗೇ ನೋಡಿದವರೂ ತುಂಬಾ ಮೆಚ್ಚುಗೆಯ ನುಡಿಗಳನ್ನೇ ಕೊಟ್ಟರು. ಆದರೆ ಥಿಯೇಟರ್ ಆಯುಷ್ಯ ವಾರ ಮೀರಲೇ ಇಲ್ಲ. ಸಿನಿ-ವಾಣಿಜ್ಯ ತಜ್ಞರು, “ನಿರ್ಮಾಣ ಕಾಲದಲ್ಲಿ ಮಾಧ್ಯಮಗಳ ಸಿನಿ-ಅಂಕಣದಲ್ಲಿ ಬರುವ ವರದಿಗಳ ಕಾವು ಚೆನ್ನಾಗಿತ್ತು. ಆದರೆ ಅದು ಆರಿದ ಮೇಲೆ, ಸ್ವತಃ ಯಾವುದೇ ಪ್ರಚಾರ ಮಾಡದೇ ತೆರೆಗಿಳಿಸಿದ್ದು ತಪ್ಪುಎಂದರು. “ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ತೊಡಗಿಕೊಂಡಿದ್ದ ಕಾಲದಲ್ಲೇ ಇದು ಬಿಡುಗಡೆಗೊಂಡದ್ದೂ ತಪ್ಪುಎಂದವರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವೀರರಸ ಎಂದರೆ ಕ್ರೌರ್ಯದ ವಿಜೃಂಭಣೆ, ಶೃಂಗಾರ ಎಂದರೆ ಅತಿ ಲೈಂಗಿಕತೆ, ಹಾಸ್ಯ ನೋಡಿದರೆ ಶುದ್ಧ ಮಂಗಾಟ, ಕೌಟುಂಬಿಕ ಎಂದರೆ ಅತಿಭಾವುಕತೆ, ವಾಚ್ಯವೆಲ್ಲಾ ಜನರಿಗಾಗಿ (ಮಾಸ್), ಸೂಚ್ಯವೆಲ್ಲಾ ಪ್ರಶಸ್ತಿಗಾಗಿ (ಕ್ಲಾಸ್) ಎಂದಿತ್ಯಾದಿ ಮೌಲ್ಯಗಳು ಮೌಢ್ಯಕ್ಕೆ ಬದಲುತ್ತ ಹೋದಂತೆ ಸಿನಿಮಾ ಎಂಬ ಕಲೆ ಕೊಲೆಯಾಗಿ, ಪ್ರೇಕ್ಷಕರ ದೌರ್ಬಲ್ಯದ ಪ್ರತಿನಿಧಿಯಾಗುತ್ತ ಹೋಗಿದೆ. ಸದಭಿರುಚಿಯ ರಸಿಕರು ಥಿಯೇಟರಿಗಳಿಂದಲೇ ದೂರ ಸರಿದರು, ಅನ್ಯ ಭಾಷೆ ಮತ್ತು ನಿರ್ಮಾಣಗಳಿಗೆ ಮೊರೆ ಹೋದರು. ಅವರನ್ನು ತಿರುಗಿ ತರುವ ಕೆಲಸ ಆಗಬೇಕು. ಇದು ಅಭಯನೊಬ್ಬನಿಂದ ಆಗುವ ಕೆಲಸ ಖಂಡಿತಾ ಅಲ್ಲ. ಆದರೆ ಸಿನಿಮ ನಿರ್ದೇಶನವನ್ನು ಗಂಭೀರ ವೃತ್ತಿಯಾಗಿಯೇ ಆಯ್ದುಕೊಂಡ ಅಭಯನೂ ಕಾರ್ಯಪ್ರವೃತ್ತನಾಗಬೇಕಾದ ವಿಚಾರ ಖಂಡಿತಾ ಹೌದು.

ಗೆಲುವಿಗೆ ಹತ್ತು ಅಪ್ಪಂದಿರು ಎಂದಂತೇ ಸೋಲಿಗೆ ನೂರು ಕಾರಣಗಳು! ಎರಡನ್ನೂ ಮೀರುವ ಛಲದಲ್ಲಿ ಮತ್ತೆ ಅಭಯ ಕಟ್ಟಿದ ಕತೆ - ಸಕ್ಕರೆ, ಹಿಡಿದ ನಟ - ಮುಂಗಾರು ಮಳೆ ಖ್ಯಾತಿಯ ಗಣೇಶ್. ಒದಗಿದ ನಿರ್ಮಾಪಕರು ಮೀಡಿಯಾ ಹೌಸಿನ ಬಿ. ಸುರೇಶ ಮತ್ತು ಶೈಲಜಾ ನಾಗ್; ಅಭಯನ ಚೊಚ್ಚಲ ಹೆರಿಗೆ - ಗುಬ್ಬಚ್ಚಿಗಳದೇ ಬಳಗಮುಂದೆ ಸೇರುತ್ತ ಬಂದ ಒಂದೊಂದು ಸಂಬಂಧವೂ (ದೇಶ, ಕಾಲ ಮತ್ತು ವ್ಯಕ್ತಿ) ಒಂದೊಂದು ಸವಾಲು. ದೊಡ್ಡ ಹರಹು, ನೂರೆಂಟು ವೃತ್ತಿಪರರ ತೊಡಗುವಿಕೆಗಳ ಸೂತ್ರಧಾರತ್ವಕ್ಕೆ ಅಗತ್ಯವಾದ ಸಮಯದ್ದೇ ಕೊರತೆ ಕಂಡರೂ ತಂಡ ಮಡಿಕೇರಿಗೆ ಚಿತ್ರೀಕರಣಕ್ಕಾಗಿಯೇ ಲಗ್ಗೆ ಹಾಕಿತ್ತು. ಅಲ್ಲಿನ ಮೊದಲ ಸುತ್ತಿನಲ್ಲಿ ಅನಂತನಾಗ್ ಮತ್ತು ವಿನಯಾಪ್ರಸಾದ್ ಮಾಯಾಪೆಟ್ಟಿಗೆಯೊಳಗೆ ಸೇರಿಕೊಂಡರು. ‘ಹಿರಿಯರಪ್ರೇಮದೊಳಗಿನ ಸಾಹಚರ್ಯದ ತುಡಿತ ಅತ್ತ ವ್ಯಂಗ್ಯವಾಗದೇ ಇತ್ತ ಕೊಳಕೂ ಆಗದೆ ಶುದ್ಧ ಭಾವಲಹರಿಯಾಗಿ, ಲಘು ಹಾಸದ ಕಾವ್ಯವಾಗಿ ಆ ಜೋಡಿ ನಡೆಸಿಕೊಟ್ಟದ್ದನ್ನು ಅಭಯನಿಗೆ ಹೇಳಿದಷ್ಟೂ ಸಾಲದು!
ತನ್ನ ಕಲೆಗಾರಿಕೆಯಲ್ಲಿ ವಿಶ್ವಾಸವಿರುವ ಯಾವುದೇ ಕಲಾವಿದ ಭಾಷೆ, ಪ್ರಾದೇಶಿಕತೆಗಳನ್ನು ಮೀರಿ ಲೋಕವನ್ನು ಮುಟ್ಟಬಲ್ಲ, ಯಾವುದೇ ಸ್ಪರ್ಧೆಯನ್ನು ಮೆಟ್ಟಿ ನಿಲ್ಲಬಲ್ಲ ಎನ್ನುವುದನ್ನು ಅನಂತನಾಗ್ ಹಿನ್ನೆಲೆ ಬಲ್ಲವರಿಗೆ ಪ್ರತ್ಯೇಕ ಹೇಳಬೇಕಿಲ್ಲ. ಮನೆಮಾತು ಕೊಂಕಣಿ, ಬಾಲ್ಯದ ಪರಿಸರ ಭಾಷೆ ಕನ್ನಡ ಮತ್ತು ಮಲಯಾಳವಾದರೂ ಮರಾಠೀ ಮತ್ತು ಹಿಂದಿ ರಂಗಭೂಮಿಯ ಪ್ರಾವೀಣ್ಯ, ಅಪಾರ ಓದು ಮತ್ತು ಲೋಕಾನುಭವದಿಂದ ಗಟ್ಟಿಯಾದ ಕುಳ ಈ ಅನಂತನಾಗ್. ಹಿಂದಿ ಚಿತ್ರರಂಗದಲ್ಲಿ ಬೆಳಗಿದ ಪ್ರಖರತೆಯಲ್ಲೇ ಕನ್ನಡ ಚಿತ್ರರಂಗದಲ್ಲೂ ತೊಡಗಿ, ಇಂದಿಗೂ ಚಾರಿತ್ರಿಕ ಪಾತ್ರಗಳಿಗೆ ಅದ್ವಿತೀಯನಾಗಿಯೇ ಉಳಿದ ಅನಂತನಾಗ್ಸಕ್ಕರೆಯ ಸಿಹಿ ಹೆಚ್ಚಿಸಿದ್ದು ನಿರೀಕ್ಷಿತವೇ ಇತ್ತು.

ಮಡಿಕೇರಿಯಿಂದ ಅಭಯನ ಚುಟುಕು ಸಂದೇಶ ಬಂತು - ಚಿತ್ರೀಕರಣದ ಸೈನ್ಯ ಮಂಗಳೂರ ದಾರಿಯಲ್ಲಿದೆ. ಹಿಂದೆ ಶಿಕಾರಿ ಚಿತ್ರೀಕರಣದ ದೊಡ್ಡ ಅಂಶ ತೀರ್ಥಳ್ಳಿಯ ಸಮೀಪದಲ್ಲಿ ನಡೆದಿತ್ತು. ಆಗ ನಮಗೆ ಅದನ್ನು ಹೋಗಿ ನೋಡುವ ಉತ್ಸಾಹ. ಆದರೆ ಅಭಯನಿಗೆಅಪ್ಪಮ್ಮರ ಎದುರು ನಾಯಕತ್ವ ಮೆರೆಯಲು (ಸಿನಿಮಾ ತಯಾರಿಯಲ್ಲಿ ನಿರ್ದೇಶಕನೇ ನಾಯಕ) ಸಂಕೋಚ.’ ನಮ್ಮ ಒತ್ತಾಯಕ್ಕೆ ಆತ, ಹಾಡಿನ ಚಿತ್ರೀಕರಣದ ದಿನಗಳಲ್ಲಿ ಬರುವಂತೆ ಸೂಚಿಸಿದ್ದ! (ಭೇಟಿಯ ವಿವರಗಳಿಗೆ ಇಲ್ಲೇ ಹಿಂದೆ - ತೀರ್ಥಯಾತ್ರೆ, ನೋಡಿ) ಹಾಡಿನ ಚಿತ್ರೀಕರಣಕ್ಕೂ ಬಹಳ ಮೊದಲೇ ನಿರ್ದೇಶಕನಾದವ ಹಾಡಿನ ಭಾವ, ಸಾಹಿತ್ಯದ ಸೂಚ್ಯ ಅಭಿವ್ಯಕ್ತಿ (ಪೂರ್ಣ ಅಭಿನಯ ಇಂದಿನ ಸಿನಿ-ಹಾಡುಗಳಿಗೆ ಮಡಿಯಾಗುತ್ತದೋ ಏನೋ!), ಕಥೆಯ ಪರಿಸರ, ಪಾತ್ರಗಳ ಮಿತಿಯನ್ನು ನೃತ್ಯ ನಿರ್ದೇಶಕರಿಗೆ (ಶಿಕಾರಿಗೆ ಮದನ್ ಹರಿಣಿ) ಕೊಟ್ಟು ಆರಾಮವಾಗಿರುವುದು ಕ್ರಮ.

ಈ ಸಲ ಅಭಯ ಇನ್ನಷ್ಟು ಬೆಳೆದದ್ದಕ್ಕೋ ಏನೋ ನಮಗೇನೂ ನಿರ್ಬಂಧ ವಿಧಿಸಲಿಲ್ಲ. ಮತ್ತೆ ಉದ್ದಕ್ಕೂ ಸಾಕ್ಷಿಯಾಗುವ ಉತ್ಸಾಹ ನಮಗೂ ಇರಲಿಲ್ಲಮಂಗಳೂರು ಚಿತ್ರೀಕರಣದಲ್ಲಿ  ಒಂದು ಬೆಳಗ್ಗೆ ಒಂದು ಮನೆಯ ಬಳಿ ಯಾವುದೇ ಚಿತ್ರೀಕರಣ ನೋಡುವ ಸಂತೆಯ ಭಾಗದಂತೇ ಹೋಗಿದ್ದೆವು. ದಾರಿ ಬದಿಯಲ್ಲೇ ಗುರ್ರೆನ್ನುತ್ತ ನಿಂತಿದ್ದ ಜನರೇಟರ್ ಬಸ್ಸಿನಿಂದ ಎಳೆದ ವಯರುಗಳ ಗುಂಟ ಹೋದೆವು. ಏನೇನೋ ಸಾಮಾನುಗಳನ್ನು ಸಣ್ಣಪುಟ್ಟ ಗುಂಪುಗಳು ಏನೇನೋ ಮಾಡಿಕೊಂಡಿದ್ದವು. ಮಾಸಿದ ಹಳೇ ಕಟ್ಟಡ ಕ್ಯಾಮರಾ ಕಣ್ಣಿಗಷ್ಟೇ ಜರ್ಬಾಗಿ ಕಾಣುವಂತೆ ಸಂಗೀತ ಶಾಲೆಯ ಬೋರ್ಡೇರಿಸಿ ಕೂತಿತ್ತು. ಮುಖಮಂಟಪದ ಕಟ್ಟೆಯ ಮೇಲೆ ನಾಯಕಿಗೆ (ದೀಪಾ ಸನ್ನಿಧಿ) ಗಿತಾರ್ ಪಾಠದ ಸಿದ್ಧತೆ ನಡೆದಿದ್ದರೆ, ಕೆಳ ಅಂಗಳದಲ್ಲಿ ಲಾಂಗೂಲೋನ್ನತಿಯಲ್ಲಿ ಕುಳಿತ ಹನುಮಂತನಂತೆ ಕ್ಯಾಮರಾಮ್ಯಾನ್ (ವಿಕ್ರಂ ಶ್ರೀವಾಸ್ತವ) ವಿರಾಜಮಾನನಾಗಿದ್ದ. ಆತ ಆ ಎತ್ತರದಿಂದಲೇ ಹಲೋ ಆಂಟೀ ಗುಡ್ಮಾರ್ನಿಂಗ್ ಅಂಕಲ್ಎಂದಾಗಲೇ ನಮ್ಮ ಇರವು ಜಾಹೀರಾದ್ದು! ಅಭಯನೇನೋ ನಿರ್ಯೋಚನೆಯಿಂದ ಕೆಲಸದಲ್ಲಿ ತಲ್ಲೀನನಾಗಿದ್ದ. ಆದರೆ ಉಳಿದವರು ನಮ್ಮನ್ನು ಹಾಗೆ ಬಿಡಲಿಲ್ಲ. ಅಲ್ಲೇ ಕೆಳಗೆ ಮಾನಿಟರ್ ಎದುರು ಕುಳಿತು ಉಸ್ತುವಾರೀ ನಿರ್ಮಾಪನ ನಡೆಸುತ್ತಿದ್ದ ಸುಬ್ರಹ್ಮಣ್ಯರಿಂದ ಹಿಡಿದು ಎಲ್ಲರೂ ನಮ್ಮನ್ನು ಉಪಚರಿಸುವವರೇ. ಮುಜುಗರ ತಪ್ಪಿಸಲು ಕಡೆಗೆ ನಾವೇ ಬೇಗ ಜಾಗ ಖಾಲಿ ಮಾಡಿದೆವು.ಇನ್ನೊಂದು ಸಂಜೆ, ಬೇರೊಂದು ಮನೆಯ ದಾರಿಬದಿಯಲ್ಲಿ, ಜಗುಲಿಯ ಹೊರೆಗೆಲ್ಲಾ ತಡೆಹಿಡಿದ ಸಿನಿ-ಕುತೂಹಲಿಗಳ ಗುಜುಗುಜು. ನಮಗೆ ಚಿತ್ರೀಕರಣದ ಎಲ್ಲಾ ಗುರುತಿನವರೇ ಆದದ್ದಕ್ಕೆ ತಡೆ ಬರಲಿಲ್ಲ. ಮುಖಮಂಟಪದ ನೂರೆಂಟು ವಯರು, ಪ್ರತಿಫಲಕ, ಕಟ್ಟೆ, ಕೊದಂಟಿ ಹುಶಾರಾಗಿ ದಾಟಿ ಒಳಸೇರಿದೆವು. ಒಂದು ಬಾಗಿಲಿನಂಚಿನಲ್ಲಿ ದಟ್ಟ ನೆರಳು ಬೆಳಕುಗಳ ಸಂಗಮದಲ್ಲಿ ಮೂರು ನಾಲ್ಕು ಪ್ರತಿಫಲಕಗಳ ಮುತ್ತಿಗೆಯಲ್ಲಿ ಏನೋಕರಾಮತ್ತುನಡೆಸಿದ್ದರು. ಯಾವಾಗಲೋ ಸುತ್ತಣ ಗದ್ದಲ ಮೀರಿ ಸೈಲೆನ್ಸ್, ಕ್ಯಾಮ್ರಾ, ರೋಲಿಂಗ್, ಯಾಕ್ಷನ್ಕೇಳುತ್ತಿದ್ದಂತೆ ನಾವು ಕತ್ತು ಕೊಕ್ಕರೆ ಮಾಡಿದ್ದೆವು. ನಿರ್ದೇಶಕ, ಸಹಾಯಕ, ಧ್ವನಿಗ್ರಾಹಕ, ಪ್ರಸಾದನದವ, ದಾಖಲೀಕರಣದವ, ದೀಪದವ, ಕ್ಯಾಮರಾದವ ಮತ್ತವನ ಸಹಾಯಕ, ಯಾವುದೋ ಸಿನಿಪತ್ರಕರ್ತ ಎಂದಿತ್ಯಾದಿ ಅನಿವಾರ್ಯ ಅಡ್ಡಿಗಳ ಸಂದುಗೊಂದಿನಲ್ಲಿ ಗಣೇಶ್ ಒಂದೆರಡು ಕ್ಷಣ ಡ್ರಮ್ ಚಚ್ಚುವುದು ನೋಡಿದೆವು. ಸಿಂಹ ಕೇಸರದಂತೆ ಕೂದಲು ಹಾರುವುದೇನು, ಸುದೀರ್ಘ ಸಾಧನೆಯ ಉತ್ತುಂಗ ಸಾರುವ ಬೆವರ ಹನಿಗಳ ಸಿಡಿತವೇನು, ಬಿಗಿದ ಮುಖ, ಮಿಂಚಿದ ಕೈ ಓ ಓ ಓ ಏನು ಭಾವಾವೇಶ! ಮುಂದೆ ಮಾತೋ ಹಾಡೋ ಎಂದು ಯೋಚಿಸುವುದರೊಳಗೇ ಅಷ್ಟೇ ಗಟ್ಟಿಯಾಗಿ ಕೇಳಿತು ಖಟ್!”

ಬೆಳ್ಳಾರೆಯ ಸೀತಜ್ಜಿ (ನನ್ನ ಚಿಕ್ಕಮ್ಮ) “ಇಷ್ಟೂ ಪಾಪದ ಪುಳ್ಳೀ (= ಮೊಮ್ಮಗ, ಅಭಯ) ಅಷ್ಟೂ ಮಂದಿಯನ್ನುಆಳಿಕೊಂಡುಸಿನಿಮಾ ಮಾಡುವುದು ಸುಳ್ಳುಎಂದೇ ನಂಬಿದ್ದಳು. ಬೆಳಿಗ್ಗೆ ಅಭಯ ಮನೆ ಬಿಡುವಾಗಲೇ ಚಿತ್ರೀಕರಣದ ಮನೆಯ ದಾರಿ ಹೇಳಿ ಹೋಗಿದ್ದ. ನಾವು ವಿರಾಮದಲ್ಲೇ ಸೀತೆ (ನನಗೆ ಚಿಕ್ಕಮ್ಮ) ಮತ್ತು ಪಕ್ಕದ್ಮನೆಯ ದೇವಕಿಯರನ್ನು (ನನಗೆ ಅತ್ತೆ) ಕರೆದುಕೊಂಡೇ ಸುರತ್ಕಲ್ ಸಮೀಪದ ಕಡಲ ಕಿನಾರೆಯ ಒಂದು ಮನೆಗೆ ಹೋದೆವು. ಅಷ್ಟಕ್ಕಷ್ಟೇ ಇದ್ದ ವಿಸ್ತಾರ ಅಂಗಳ, ಸಮುದ್ರಕ್ಕೆ ಮುಖ ಮಾಡಿದಂತಿದ್ದ ಹಳೆ ಶೈಲಿಯ ಮನೆ ಮತ್ತು ಮಾಮೂಲಿನಂತೆ ಸುತ್ತಲೂ ಹರಡಿಕೊಂಡಿದ್ದ ಸಿನಿಮಾ ಸಂಸಾರ. ಒಳಗಿನ ಡೈನಿಂಗ್ ರೂಮಿನ ಮಸಕು ಬೆಳಕನ್ನು ಸಿನಿ-ಬೆಳಕು ಮಾಡಿಕೊಂಡು ಎಲ್ಲರುಜಗಳ ನಿರ್ವಹಣೆಯಲ್ಲಿ ತಲ್ಲೀನರಾಗಿದ್ದರು. ಬೆಳಗ್ಗಿನ ಕಾಫಿಂಡಿಗೆ (ತಿಕಾರ ಲೋಪ ಸಂಧಿ!) ಕುಳಿತ ಅಪ್ಪ (ಕಲ್ಯಾಣ್ಕರ್) ಅಮ್ಮರ (ಜಯಲಕ್ಷ್ಮೀ ಪಾಟೀಲ್) ಶಿಸ್ತನ್ನು ಧಿಕ್ಕರಿಸಿ ಮಗಳು (ದೀಪಾ ಸನ್ನಿಧಿ) ಸಿಡಿಯುವ ಸನ್ನಿವೇಶ. ಸೀತಜ್ಜಿ ಭವ್ಯ ರಂಗಮಂಚದಲ್ಲಿ, ನಾಟಕೀಯ ಗಾಂಭೀರ್ಯದಲ್ಲಿಸಕ್ಕರೆಅರಳುವ ಅಂದಾಜು ಹಾಕಿದ್ದಿರಬೇಕು. ಆದರೆ ಅಲ್ಲಿ ಗ್ರಹಿಸಲಾಗದ ಪರಿಸರ ಮತ್ತು ಚಟುವಟಿಕೆಗಳ ನಡುವೆ, ಅನಿವಾರ್ಯವಾಗಿ ಕೋಣೆಯ ನಿಕೃಷ್ಟ ಮೂಲೆಯಲ್ಲಿ ಸಿಕ್ಕಿಹಾಕಿಕೊಂಡಂತೆ ನಿಂತು, ಪುಳ್ಳಿಯ ಸೈಲೆಂಸ್, ಸೌಂಡ್, ಕ್ಯಾಮ್ರಾ...” ಬೊಬ್ಬೆ ಕೇಳಿ ಅಜ್ಜಿಯ ದಮ್ಮಡಗಿ ಹೋಗಿತ್ತು! ಮಾಮೂಲಿನಂತಾಗಿದ್ದರೆ ಅಭಯನ ಮುಖಕ್ಕೆ ಕೈ ತಿರುವಿ, “ನಮಗಿದೆಲ್ಲಾ ಆಗ್ಲಿಕ್ಕಿಲ್ಲ, ಬರ್ತೇನೆ ಮಾರಾಯಾಎಂದು ಹೇಳುತ್ತಿದ್ದವಳು ಗುಟ್ಟಾಗಿ ನಮ್ಮನ್ನು ಹೊರಡಿಸಿಬಿಟ್ಟಳು! ಆದರೆ ಅಂಗಳಕ್ಕೆ ಬರುವಾಗ ಸೀತೆಗೆಅರೆ, ಎಲ್ಲೋ ನೋಡಿದ್ದೇನಲ್ಲಾಎನ್ನುವಷ್ಟು ಆಶ್ಚರ್ಯ

ಹಣೆ ಮೇಲೆ ಭರ್ಜರಿ ವಿಭೂತಿ ಪಟ್ಟೆ ಹೊಡೆದು, ನಡುವೆ ಕುಂಕುಮದ ಬೊಟ್ಟಿಟ್ಟ ಇವರೂ! ಇವರೂ? ಈಗ ತಾನೇ ಮೆಡ್ರಾಸ್ ಮೇಲಿನಲ್ಲಿ ಬಂದಿಳಿದಿರಬೇಕು, ಕರ್ನಾಟಕ ಸಂಗೀತ ಕುಲತಿಲಕ ವಿದ್ವಾನ್... ಯಾರಪ್ಪಾಎಂದೇ ಗುಸುಗುಸು ಮಾಡಿ ತಲೆ ಕೆರೆಯುತ್ತಿದ್ದಾಗಲೇ ಸಕ್ಕರೆಯಸಂಗೀತ ವಿದ್ವಾನ್ಪಾತ್ರಧಾರಿ ನವೀನ್ ಡಿ. ಪಡೀಲ್ ನಮ್ಮಿಬ್ಬರನ್ನು ಗುರುತಿಸಿದ್ದರು

ವಿವಿನಿಲಯ ಕಾಲೇಜಿನ ಅಂಗಳದಲ್ಲಿ ಇಂದು ಎಸ್.ಪಿ (ಬಾಲಸುಬ್ರಹ್ಮಣ್ಯಂ ಅಲ್ಲ ಮಾರ್ರೇ. ಪೋಲಿಸ್ ಇಲಾಖೆಯ ಸೂಪ್ರಿಂಟು, ಪಾತ್ರದಲ್ಲಿ ಚಂದ್ರಹಾಸ ಉಳ್ಳಾಲ್) ವಿಶೇಷ ಕವಾಯತು ನಡೆಸುತ್ತಾರೆ ಎಂದು ಅಭಯ ಬೆಳಗ್ಗೆ ಬೇಗನೇ ಓಡಿದ್ದ. ಒಂದು ಗಂಟೆ ತಡವಾಗಿ ನಾನೊಬ್ಬನೇ ಧಾವಿಸಿದ್ದೆ. ಆದರೆ ಅದೆಲ್ಲ ಮುಗಿದು ಕಾಲೇಜು ಹಿತ್ತಲಿನ ಅಂಗಳದಲ್ಲಿ ಹಾಕಿಕೊಟ್ಟ ಮೇಜು ಕುರ್ಚಿಯಲ್ಲಿ ಅಭಯ, ವಿಕ್ರಂ ಕುಳಿತು ನಿಜದ ತಿಂಡಿ ತಿನ್ನುತ್ತಾ ಇದ್ದರು. ದೀಪಾ ಸನ್ನಿಧಿ ಸಹಜ ಪಟ್ಟಾಂಗದಲ್ಲಿದ್ದಳು. ಸ್ವಲ್ಪ ಸಮಯ ಕಳೆದು ಆಕೆಗೆತರಗತಿಯ ನೆನಪಾಗಿರಬೇಕು. ‘ಕಾಲೇಜ್ ಚೀಲಹಿಡಿದುಹಂಪನಕಟ್ಟೆಕಡೆಯಿಂದ ಕಾಲೇಜ್ ಪ್ರವೇಶಿಸಿದಳು. ಅದೇ ಮೊದಲು ಕಾಲೇಜ್ ವಠಾರ ನೋಡಿದ ಬೆರಗು, ಅಳುಕು ತಡವರಿಸುವ ಹೆಜ್ಜೆಗಳಲ್ಲಿ ಕಾಣುತ್ತಿತ್ತು. ಆಕೆಗೂ ತುಸು ಮೊದಲುಸಹಜವಾಗಿ ನುಗ್ಗಿದಹಿರಿಯರೊಂದಿಗಿನ ಇತರವಿದ್ಯಾರ್ಥಿನಿಯರುಚದುರಿ, ಈಕೆ ಮುಖ್ಯವಾಗಿಒಳಬಂದದ್ದು ಖಾತ್ರಿಯಾಗುತ್ತಿದ್ದಂತೆ ಕಟ್ಟ್ಜೊತೆಗೇ ಟೇಕ್ಊ ಕೇಳಿತು.

ಫೈಟ್ ಎಲ್ಲ ಮಲ್ಪೆಯಲ್ಲಿ ಎಂದು ಮೊದಲೇ ನಿಗದಿಯಾಗಿತ್ತು. ಮಳೆಗಾಲದ ನಿರೀಕ್ಷೆಯಲ್ಲಿ ದೋಣಿಗಳೆಲ್ಲಾ ಬಂದರು ಕಟ್ಟೆಯೊಳಗೆ ಒತ್ತೊತ್ತಾಗಿ ತುಂಬಿ ನೀರೇ ಕಾಣುತ್ತಿರಲಿಲ್ಲ. ಆ ಸಂದಣಿಯಲ್ಲಿ ಹತ್ತು ದೋಣಿಯಾಚೆ ಚಿತ್ರೀಕರಣದ ಚಟುವಟಿಕೆಗಳು ನಡೆಯುತ್ತಿತ್ತು. ಅಲ್ಲೇ ಹೋಗುತ್ತಿದ್ದ ತಂಡದವನೊಬ್ಬನ ಗಮನ ಸೆಳೆದು ದಾರಿ ವಿಚಾರಿಸಿದೆ. “ಓ ನಮಸ್ಕಾರ ಸಾರ್ಎಂದು ಆತ ನಮ್ಮನ್ನು ಗುರುತು ಹಿಡಿದದ್ದಲ್ಲದೇ ಎಂದಿನಂತೆ ತತ್ಕಾಲೀನ ಉಪಚಾರದ ಅಂಗವಾಗಿ ಆ ಉರಿ ಸೆಕೆಗೆ ಅಪ್ಯಾಯಮಾನವಾಗಿ ಮಜ್ಜಿಗೆ ನೀರು ತರಿಸಿ ಕೊಟ್ಟ. “ದಾರಿ ಏನು ಕೇಳ್ತೀರಾ ಸಾರ್, ನಿಮಗನುಕೂಲವಾದ ದೋಣಿಗೆ ಹತ್ತಿ. ಮತ್ತೆ ಅನುಕೂಲವಾದ ಸರಣಿ ಆಯ್ಕೊಂಡು ಓಯ್ತಾಯಿರಿ ಸಾರ್. ಕಾಲ್ ಗೀಲ್ ಜಾರೀತು, ಹುಶಾರುಎಂದು ಬಿಟ್ಟ. ಅಲ್ಲಿ ನಡೆಯುತ್ತಿದ್ದದ್ದು ಹಾಗೇ! ಯಾವ್ದೋ ದೋಣೀ ಮೇಲೆಪೆಟ್ಟು


ಇನ್ಯಾವುದೋ ದೋಣೀ ಮೇಲೆ ಕ್ಯಾಮರಾ. ‘ಪೆಟ್ಟ್ತಿಂದವನು ಫುಟ್ ಬಾಲಿನಷ್ಟು ಸಲೀಸಾಗಿ ಮೂರನೇ ದೋಣಿಗೆಎತ್ತಂಗಡಿಯಾಗಿ ಕವುಚಿ ಬೀಳ್ತಾನೆ.’ ಹಾಗೆಬಿದ್ದರೂ’ “ಉಹುಹುಹುಇಲ್ಲ. ದೇಹ ಬಿಡಿ, ಅಂಗೀಲೂ ವಿಶೇಷ ಬದಲಾವಣೆ ಇಲ್ಲದಂತೆ, ಮೈಯಲ್ಲ ರಬ್ಬರ್ರು ಎನ್ನುವಂತೆಪುಟಿದು ಬರ್ತಾನೆ’, ನಾಲ್ಕನೇ ದೋಣೀಲಿ ಮತ್ತೆ ನಾಯಕನ ಮೇಲೆಕವುಚಿ ಬೀಳ್ತಾನೆ.’ ಒಂದು ಮರೆತೆ, ಅದೆಲ್ಲ ಚಿತ್ರೀಕರಣದ ಸಮಯದಲ್ಲಿ! ನಿಜ ಸಮಯದಲ್ಲಿ ಒಂದು ಪೆಟ್ಟಿಗೂ ಪ್ರತಿಕ್ರಿಯೆಗೂ ಕಾಲರ್ಧ ಗಂಟೆ ಅಂತರ. ಬೆಳಕತ್ತ, ಕ್ಯಾಮರಾ ಇತ್ತ, ಭಟ್ಟಿ ಇಲ್ಲಿ, ಹಗ್ಗ ಅಲ್ಲಿ, ಸಹಾಯಕರೂ ಅಯಾಚಿತ ವೀಕ್ಷಕರೂ ಕ್ಯಾಮರಾದ ಪ್ರತಿ ಕೋನ ಬದಲಾವಣೆಗೂ ಚಲ್ಲಾಪಿಲ್ಲಿ! ರಣಗುಡುವ ಬಿಸಿಲು, ವಾತಾವರಣದ ತೇವಾಂಶ, ಚಿತ್ರೀಕರಣಕ್ಕೆ ಸಹಕಾರಿಯಾಗಿ ಕೇಂದ್ರೀಕರಿಸುತ್ತಿದ್ದ ಬೆಳಕಿನ ಪ್ರಭಾವ ಎಲ್ಲಾ ಸೇರಿಫೈಟಿನ ನಾಲ್ಕು ತುಣುಕುಗಳು ಮುಗಿಯುವ ಮೊದಲೇ ನಾವಿಬ್ಬರು ಮೊದಲುಚಿತ್’, ಅನಂತರಪ್ಯಾಕಪ್’! (ಕುಸ್ತಿಯಲ್ಲಿ ಬೆನ್ನು ನೆಲಕ್ಕೆ ಸೋಂಕಿದ ಸೋಲಿಗೆ ಚಿತ್ ಎಂದೂ ಸಿನಿ ಭಾಷೆಯಲ್ಲಿ ಒಂದು ಅವಧಿಯ ಚಿತ್ರೀಕರಣದ ಮುಕ್ತಾಯಕ್ಕೆ ಪ್ಯಾಕಪ್ ಎಂದೂ ಹೇಳುತ್ತಾರೆ.) ಸಿನಿಮಾಗಳಲ್ಲಿ ನೃತ್ಯ ಸಂಯೋಜಕರಂತೇ ಫೈಟ್ ಸಂಯೋಜಕರೂ ಇದ್ದರು. ಸಕ್ಕರೆ (ಮೂಟೆಗೆ) ಪೂರ್ಣ ತಲೆ ಕೊಟ್ಟು ಲೂಸ್ ಮಾದ ಮತ್ತು ಸಹಾಯಕರು ದುಡಿಯುತ್ತಿದ್ದರು. ಅಲ್ಲಿ ಮುಖ್ಯ ನಿರ್ದೇಶಕನ ಗೈರುಹಾಜರಿ ಅಥವಾ ಲಘು ಪಾಲುಗೊಳ್ಳುವಿಕೆ ಯಾರೂ ಗಮನಿಸುವುದಿಲ್ಲ. ಆದರೆ ಅಭಯ ಸೂಕ್ಷ್ಮಗಳು ಕಳೆದು ಹೋಗದ ಎಚ್ಚರಕ್ಕೆ, ಇನ್ನೂ ಮುಖ್ಯವಾಗಿ ಒಟ್ಟು ತಯಾರಿಯ ನೈತಿಕ ಜವಾಬ್ದಾರಿ ತನ್ನದು ಎಂಬ ಕಾಳಜಿಗೆ ಉದ್ದಕ್ಕೂ ಅಲ್ಲಿ ಠಳಾಯಿಸಿದ್ದಕ್ಕೆ ಸುಟ್ಟಮೋರೆ ಹೊತ್ತುಕೊಂಡು, ಜ್ವರ ಹಿಡಿದು ಎರಡು ದಿನ ಮಲಗಿದ್ದ!


ಸಕ್ಕರೆಯ ಬಹುಪಾಲು ಚಿತ್ರೀಕರಣ ಮಡಿಕೇರಿಯ ಆಸುಪಾಸೇ ನಡೆದಿತ್ತು. ನನಗದು ತವರೂರು, ಸ್ವತಂತ್ರವಾಗಿ ನಿಂತು ನೋಡಲು ಬೇಕಾದ ಬಂಧುಗಳೂ ಇದ್ದರು. ಆದರೆ ಸಿನಿ-ತಂಡ ಎಲ್ಲಿನಿರ್ದೇಶಕನ ಸಂಬಂಧಿಗಳುಎಂದು ನಮ್ಮ ಹೊರೆಯನ್ನು ವಹಿಸಿಕೊಂಡು ಬಿಡುತ್ತದೋ ಎಂಬ ದಾಕ್ಷಿಣ್ಯಕ್ಕೆ ಅಂಜಿ ಹೋಗದೇ ಉಳಿದಿದ್ದೆವು. ಮಂಗಳೂರು, ಉಡುಪಿಯಾದ ಮೇಲೆ ಹಾಸನದ ಎಲ್ಲೋ ಮೂಲೆಯಲ್ಲಿ ಇನ್ನೊಂದಷ್ಟು ಚಿತ್ರೀಕರಣ ನಡೆಸಿದ್ದರು. ಕೊನೆಯಲ್ಲಿ ಬಾಕಿಯಾದವನ್ನು ಮತ್ತುಪ್ರಯೋಗಾಲಯದ ಹದಅರ್ಥಾತ್ ಲ್ಯಾಬೊರೇಟರಿ ಕಂಡೀಷನ್ಸಿನ ಕೆಲವು ಅಂಶಗಳನ್ನು ತಂಡ ಬೆಂಗಳೂರು ಕೇಂದ್ರವಾಗಿಟ್ಟುಕೊಂಡೇ ನಡೆಸಿತ್ತು. ಆ ಕಾಲದಲ್ಲಿ ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದ ನಾವು ಅಲ್ಲೂ ಒಂದೆರಡುದೃಶ್ಯ ಕದ್ದಿದ್ದೇವೆ’. ಬೆಂಗಳೂರಿನಲ್ಲಿ ಹಲವುಮನೆಗಳು ಸಿನಿಮ, ಇನ್ನೂ ಮುಖ್ಯವಾಗಿ ಟೀವೀ ಧಾರಾವಾಹಿಗಳಿಗಾಗಿ ಪೂರ್ಣಾವಧಿ ದುಡಿಯುತ್ತವೆ. ಅಂಥಾ ಒಂದು ಚಿತ್ರಮನೆಗೂ ಕಂಠೀರವ ಸ್ಟುಡಿಯೋಕ್ಕೂ ನಾವುಸಕ್ಕರೆಚಪ್ಪರಿಸಲು ಹೋದದ್ದಿತ್ತು

ಸ್ಟುಡಿಯೋದ ಒಳಗೆ ಒಂದು ನೃತ್ಯ ಸಂಯೋಜನೆಯ ಒಂದು ಭಾಗಕ್ಕೆ (ನೃತ್ಯ ಸಂಯೋಜಕ ಹರ್ಷ) ಅಸಂಖ್ಯ ಸೈಕಲ್ಲುಗಳನ್ನು ಬಳಸಿ ಕಲಾ ಸಂಯೋಜಕ ಶಶಿಧರ ಅಡಪ ಹಾಕಿಕೊಟ್ಟ ಹಿನ್ನೆಲೆಯಂತು ತುಂಬಾ ಆಕರ್ಷಕವಾಗಿತ್ತು.

ನಾವು ಅಲ್ಲಿಗೆ ಹೋಗುವ ಮೊದಲೇ ನಡೆಯುತ್ತಿದ್ದ ಆ ಹಾಡಿನ ಚಿತ್ರೀಕರಣ (ಹರಿಕೃಷ್ಣ ಸಂಗೀತ, ಯೋಗರಾಜ ಭಟ್ ಸಾಹಿತ್ಯ) ಅನಂತರವೂ ಎರಡು ದಿನ ನಡೆದಿರಬೇಕು! (ಚಿತ್ರದಲ್ಲಿ ಅದರದು ಐದಾರು ಮಿನಿಟಿನ ಬಾಳಿಕೆ ಮಾತ್ರ!!) ನಾವು ದಕ್ಕಿಸಿಕೊಂಡ ಸಣ್ಣ ಅವಧಿಯದ್ದನ್ನೇ ಕುರಿತು ಹೇಗಾಯ್ತು ಎಂದು ರಾತ್ರಿ ಮನೆಯಲ್ಲಿ ಅಭಯ ಕೇಳಿದ್ದ. ನಮ್ಮದು ಎರಡು ಮೂರು ಗಂಟೆಯ ಉಪಸ್ಥಿತಿಯಾದರೂ ಅಗುಳು ಹಿಸುಕಿ ಅಡುಗೆ ರುಚಿ ಕಂಡವರಂತೆ, ಪ್ರಾಮಾಣಿಕವಾಗಿ, ಆಕರ್ಷಕವಾಗಿತ್ತು ಎಂದೇ ಹೇಳಿದ್ದೆವು.

ಈಚೆಗೆ ಅಭಯನ ಮನೆಗೆ ಹೋದಾಗ ಸಕ್ಕರೆಯ ವಿವಿಧ ಹಂತಗಳಲ್ಲಿನ ದೃಶ್ಯ, ಧ್ವನಿ ಕೇಳಿದ್ದೇವೆ. ಆದರೆ ಕೃಷ್ಣ ರೂಪಿನೊಳಗಿರುವ ವಿಶ್ವರೂಪವನ್ನು ಗ್ರಹಿಸಲಾಗದೆ, ದೇಶಾವರಿ ನಗೆಬೀರಿ ಶುಭವಾಗಲಿ ಎಂದು ಹಾರೈಸಿ ಬಂದಿದ್ದೇವೆ! (‘ವಿಶ್ವರೂಪಕೇವಲ ನಮ್ಮಸಕ್ಕರೆಯನ್ನು ಕುರಿತು ಆಡಿದ ಮಾತಲ್ಲ. ಅತ್ಯಂತ ಯಶಸ್ವಿಯಿಂದ ಹಿಡಿದು ತೋಪಾದ ಸಿನಿಮಾದವರೆಗೂ ಸಾಮಾನ್ಯವಾಗಿ ಸಿನಿಮಾವೆಂದರೆ ಅಣುವಿನೊಳಗೆ ಬ್ರಹ್ಮಾಂಡವನ್ನು ತುಂಬುವ ಕ್ರಿಯೆಯೇ!) “ಆಗಸ್ಟ್ ಮೂರಕ್ಕೆ ಧ್ವನಿಮುದ್ರಿಕೆಗಳ ಬಿಡುಗಡೆ, ಎರಡೋ ಮೂರೋ ವಾರ ಕಳೆದು ಸಿನಿಮಾ ಬಿಡುಗಡೆಎಂಬ ಸುದ್ದಿ ಬಂದ ಮೇಲೆ ನನ್ನ ಬಾಲ್ಯದ ಕಾತರಗಳೆಲ್ಲಾ ಮರುಕಳಿಸಿದಂತಾಗಿದೆ. ವರ್ಷಕ್ಕೆ ಒಂದೋ ಎರಡೋ ಸಿನಿಮಾ (ನನಗೆ) ದಕ್ಕುತ್ತಿದ್ದ ಆ ಕಾಲದಲ್ಲಿ ಕೆಲವು ದಿನಗಳ ಮೊದಲೇ ಕಾರ್ಯಕ್ರಮ ನಿಶ್ಚಯವಾಗುತ್ತಿತ್ತು. ಆ ದಿನ, ಅಂದು ಮನೆ ಬಿಡುವ ವೇಳೆ ಬರುವವರೆಗೂ ಕಟ್ಟೆ ಕಟ್ಟಿದ್ದ ನಿರೀಕ್ಷೆಗಳೆಲ್ಲಾ ಒಮ್ಮೆಗೇ ಹುಸಿಯಾಗಿಬಿಟ್ಟರೆ ಎಂಬ ಆತಂಕ ಕಾಡುತ್ತಲೂ ಇರುತ್ತಿತ್ತು. ಸರದಿ ಸಾಲು, ಬ್ಲ್ಯಾಕಿನವರೊಡನೆ ಗುದ್ದಾಟ ಎಲ್ಲ ಲೆಕ್ಕ ಹಾಕಿ ಗಂಟೆ ಒಂದೆರಡು ಮೊದಲೇ ಹೊರಡುತ್ತಿದ್ದೆ. ಸಾಲದ್ದಕ್ಕೆ ಪ್ರದರ್ಶನಾಂಗಣವಾದ ಥಿಯೇಟರ್ರೋ ಟೆಂಟೋ ಹತ್ತಿರದಲ್ಲೂ ಇರುತ್ತಿತ್ತು. ಆದರೂ ಥಿಯೇಟರ್ ಹತ್ತಿರಾಗುತ್ತಿದ್ದಂತೆ ಟಿಕೆಟ್ ಸಿಗದೇ ಹೋದರೆ, ಪ್ರದರ್ಶನ ಮೊದಲೇ ಶುರುವಾಗಿದ್ದರೆ ಎಂದೆಲ್ಲಾ ಯೋಚನೆ ಬಂದು ನಡಿಗೆಗೆ ಓಟದ ಬೀಸು ಬರುತ್ತಿತ್ತು. ಸಕ್ಕರೆಯನ್ನು ವರ್ಷಕ್ಕೂ ಮಿಕ್ಕು ಕಾಲದಿಂದ ನಾವು ಮನಸ್ಸಿನ ಮೂಸೆಯಲ್ಲಿ ಕಾಯಿಸಿಟ್ಟಿದ್ದೆವು. ಈಗ ಎಂದು ಅದರ ಪೂರ್ಣ ಪರಿಷ್ಕೃತ ರಾಗ-ಪಾಕವನ್ನು ಸವಿಯುವ ಕಾಲ, ಕತ್ತಲ ಕೋಣೆಯೊಳಗೆ ಅದರ ವರ್ಣ ಜಾಲದಲ್ಲಿ ಮೀಯುವ ಕಾಲ ಎಂದು ಕೇಳಿದ ಮೇಲೆ ಕ್ಯಾಲೆಂಡರ್, ಗಡಿಯಾರ ನಿಧಾನಿಸುತ್ತಿರುವ ಗುಮಾನಿ ಬರುತ್ತಿದೆ. ದೈಹಿಕ ಬಾಧೆಗಳೇನೂ ಕೊಡದ ಈ ಸಕ್ಕರೆ ಚಪ್ಪರಿಸುವ ಕಾತರ ನಿಮಗೂ ಇಲ್ಲವೇ?)

11 comments:

 1. ಸಿ. ಎನ್. ರಾಮಚಂದ್ರನ್23 August, 2013 07:52

  ಪ್ರಿಯ ಅಶೋಕವರ್ಧನ ಅವರಿಗೆ: ನಮಸ್ಕಾರ. ನಿಮ್ಮ ’ಪೀಠಿಕಾ ಪ್ರಕರಣ’ ಮುಂದೆ ತೆರೆಯ ಮೇಲೆ ಬರಲಿರುವ ಅಭಯನ ’ಸಕ್ಕರೆ’ಯ ರುಚಿಯನ್ನು ನೋಡಲು ಕಾತರಿಸುವಂತೆ ಮಾಡುತ್ತದೆ. ಜನಪ್ರಿಯ ನಟ-ನಟಿಯರನ್ನೊಳಗೊಂಡ ಸಕ್ಕರೆ ಸವಿಯಾಗಿಯೇ ಇರುತ್ತದೆಂಬ ನಂಬಿಕೆ ನನಗಿದೆ; ಇದು ನಿಜವಾಗಲಿ ಎಂದು ಹಾರೈಸುತ್ತಾ, ಬೆಂಗಳೂರಿನಲ್ಲೂ ಈ ಚಿತ್ರವನ್ನು ನೋಡುವ ಭಾಗ್ಯ ನಮಗಿರಲೆಂದು ಹಾರೈಸುತ್ತಾ,
  ರಾಮಚಂದ್ರನ್

  ReplyDelete
 2. Khanditavagi nireekshisutteve... olleya chitravagali embudu namma manadalada haaraike...

  ReplyDelete
 3. ಅಶೋಕ್ ಸರ್, ಸಿನಿಮಾದ ಮೇಕಿಂಗ್ ಬಗ್ಗೆ ನೀವು ಬ್ಲಾಗ್ ಬರಿಬಹುದು ಅನ್ದುಕೊಂಡ್ದಿದೆ :).
  ಇನ್ನು ಸಕ್ಕರೆ ಸವಿಯುವುದು ಬಾಕಿ :).

  ReplyDelete
 4. ashokavardhana23 August, 2013 09:42

  akkareya sutthinalli sulidu sakkareya saviyannu saviyalu aathuradinda kaayutthiddeve.yaavudakkoo mangaloorige barabekashte.shubha haaraikegalondige hebbar vitla.

  ReplyDelete
 5. Chithreekaranakke mane hudukaatadinda hididu, { nammavaradondu sooktha maneyide endu nimage heluvavalidde.} sakkare chapparisuva offer varegu athyantha aakarshakavaagi saagida kathana khushi kottitu. Sakkare sihiyaage irali emba shubha haaraikeyodane,
  - Shyamala.

  ReplyDelete
 6. Sakkare namagellaa sihi tarali!
  Best wishes from
  Pejathaya S M

  ReplyDelete
 7. ಸಕ್ಕರೆ ಪಾಕದ ಸವಿಯನ್ನು ಚನ್ನಾಗಿ ವರ್ಣಿಸಿದ್ದೀರಿ. -----ನಾರಾಯಣ ಯಾಜಿ

  ReplyDelete
 8. ಬಾಯಿ ತೆರೆದುಕೊಂಡೇ ಕಾಯುತ್ತಿದ್ದೇವೆ.

  ReplyDelete
 9. ಡಾ| ಎಂ. ಪ್ರಭಾಕರ ಜೋಶಿ23 August, 2013 16:40

  ಅಭಯನಂಥವರ ಯತ್ನಗಳು ತುಂಬ ಅಭಿನಂದನಾರ್ಯ-ಸಾಹಸಗಳು ನಿಜ. ಆದರೇನು? ಸಿನೆಮ ತರದ ಹಣ, ನಿರ್ಲಜ್ಜ ಲೈಂಗಿಕತೆಯ ಪ್ರಚಾರ, ವ್ಯಕ್ತಿ ಕೇಂದ್ರಿತ ನಾಯಕನಟ ಕೇಂದ್ರಿತ ಸಿನಿಪುಟ ಬರಹಗಳ ಮಧ್ಯೆ ಇದೆಲ್ಲವು ಸಮುದ್ರಕ್ಕೆ ಒಂದು ಚಮಚ ಸಕ್ಕರೆ ಅಷ್ಟೆ.

  ReplyDelete
 10. Waiting eagerly to watch the movie.... :)
  Thanks for this wonderful presentation. Thank you.

  ReplyDelete
 11. ಮಂಜುನಾಥ ಭಟ್ ಎಚ್.
  ಅಭಯಸಿಂಹ ಸಿನಿಮಾ ನಿರ್ದೇಶಕನಾಗಿ ಬೆಳೆಯುತ್ತಿರುವ ಕ್ರಮ,ಹೆತ್ತವರಾಗಿ ಅಶೋಕವರ್ಧನ ದಂಪತಿಗಳು ಅದನ್ನು ಗಮನಿಸುತ್ತಿರುವ ರೀತಿ (ಸಕ್ಕರೆ ಸಿದ್ಧತೆ, ಚಿತ್ರೀಕರಣದ ಹಿನ್ನೆಲೆಯಲ್ಲಿ) ಇಷ್ಟವಾಯಿತು. ಮಚ್ಚು-ಲಾಂಗು ಚಿತ್ರಗಳು ವಾರ, ಎರಡು ವಾರದಲ್ಲಿ ಥಿಯೇಟರಿನಿಂದ ಓಡುತ್ತಿವೆ. ಮುಂದಿನ ದಿನಗಳು ಮಧ್ಯಮಮಾರ್ಗದ, ಸದಭಿರುಚಿಯ ಚಿತ್ರಗಳದ್ದು ಆಗಬಾರದೇಕೆ? ಅಲ್ಲಿ ಅಭಯನಿಗೂ ಜಾಗ ಇರಲಿ.

  ReplyDelete